ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು ಕಾಡಿನಿಂದ ಅವರನ್ನು ಹೊರನೂಕಿದರಂತೆ. ‘ಹೋಗಿ ಹೊಸಮನುಷ್ಯನಾಗಿ ಬಾಳು’ ಎಂದು ಆದೇಶಿಸಿದರಂತೆ. ಹಾಗಾದಾಗ ಅವರು ಹೆಚ್ಚುಕಡಿಮೆ ಸಾಯುವ ಸ್ಥಿತಿಯಲ್ಲಿದ್ದರು. ಅಲ್ಲಿಂದ ಮುಂದೆ ತಮ್ಮ ಜೀವನದ ಹಂತಹಂತದಲ್ಲೂ ಹೊಸ ಸವಾಲುಗಳನ್ನು ಅನುಭವಿಸಿದರೂ ಕಡೇಪಕ್ಷ ಒಂದು ‘ಶಾಲೆ ಮುಗಿಸಿದ ಸರ್ಟಿಫಿಕೇಟ್’ ಆದರೂ ಪಡೆಯಲೇಬೇಕು ಎನ್ನುವ ಛಲದಿಂದ ಕ್ರಮೇಣ ತಮ್ಮ ಜೀವನವನ್ನು ಬದಲಾಯಿಸಿಕೊಂಡರು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಮರೆತುಹೋದ ಆಸ್ಟ್ರೇಲಿಯನ್ನರು…. ವರ್ಷ ೨೦೦೯ರ ನವೆಂಬರ್ ತಿಂಗಳಿನ ಹದಿನಾರನೇ ತಾರೀಖಿನಂದು ಆಸ್ಟ್ರೇಲಿಯಾದ ಆಗಿನ ಪ್ರಧಾನ ಮಂತ್ರಿಯಾಗಿದ್ದ ಕೆವಿನ್ ರಡ್ ಸುಮಾರು ಅರ್ಧ ಮಿಲಿಯನ್ ಮರೆತುಹೋದ ಆಸ್ಟ್ರೇಲಿಯನ್ನರಿಗೆ ‘ದಯವಿಟ್ಟು ಕ್ಷಮಿಸಿ’ ಎಂದರು. ಕೆಲವರು ಕಣ್ಣೀರು ಸುರಿಸಿದರು. ಆ ರಾಷ್ಟ್ರೀಯ ಕ್ಷಮಾಪಣೆಯನ್ನು ಒಪ್ಪಿಕೊಂಡವರು, ಪಕ್ಕಕ್ಕೆ ಸರಿಸಿದವರು ಇದ್ದರು. ಒಪ್ಪಿಕೊಂಡವರಲ್ಲಿ ಅನೇಕ ಮಾತುಗಳೆದ್ದವು. ಬಹು ತಡವಾಯ್ತಲ್ಲ, ಈಗ ಬರೀ ಕ್ಷಮಾಪಣೆಯಿಂದೇನಾಗುತ್ತದೆ, ಆಗಿದ್ದನ್ನ ಮರೆಯಲಾಗುತ್ತದೆಯೇ, ಕಳೆದುಕೊಂಡದ್ದನ್ನ ವಾಪಸ್ ಪಡೆಯಲಾಗುತ್ತದೆಯೇ, ಆಳವಾದ ನೋವುಗಳನ್ನು ಗುಣಮಾಡುವುದಕ್ಕೆ ಸಾಧ್ಯವೇ ಇಲ್ಲ… ಹೀಗೆ ಅನೇಕ ಧ್ವನಿಗಳಿದ್ದವು.

ಯಾರೀ Forgotten Australians? ಪ್ರಧಾನ ಮಂತ್ರಿಯ ರಾಷ್ಟ್ರೀಯ ಕ್ಷಮಾಪಣೆಯನ್ನು ಕೇಳಿದಾಗಲೇ ನನಗೆ ಅಂಥದ್ದೊಂದು ವಿಷಯದ ಅಭಿವ್ಯಕ್ತಿಯಿದೆಂಬುದು ಗೊತ್ತಾಗಿದ್ದು. ಆಗ ತಿಳಿದುಬಂದಿದ್ದ ಒಂದಷ್ಟು ವಿಷಯಗಳೆಂದರೆ ಇಪ್ಪತ್ತನೇ ಶತಮಾನದಲ್ಲಿ ಬೇರೆಬೇರೆ ಕಾರಣಗಳಿಗಾಗಿ ಅನೇಕ ಆಸ್ಟ್ರೇಲಿಯನ್ ಮಕ್ಕಳು ಮತ್ತು ಬಾಲ ವಲಸಿಗರು (child migrants) ತಮ್ಮ ಹುಟ್ಟು ಕುಟುಂಬದಿಂದ ಬೇರ್ಪಡಿಸಲ್ಪಟ್ಟು ಸಮಾಜದ ಸಂಸ್ಥೆಗಳಲ್ಲಿ, ಸಾಂಸ್ಥಿಕ ಪದ್ಧತಿಯಲ್ಲಿ (ಉದಾಹರಣೆಗೆ ಸ್ಥಳೀಯ ಚರ್ಚುಗಳು ನಡೆಸುತ್ತಿದ್ದ ಅನಾಥಗೃಹಗಳು) ಮತ್ತು ಇತರೇ ಕುಟುಂಬಗಳಲ್ಲಿ (foster care) ಬೆಳೆದಿದ್ದರು. ಬೆಳೆಯುವಾಗ ವಿವಿಧ ರೀತಿಗಳಲ್ಲಿ ಹಿಂಸೆ, ಶೋಷಣೆ, ತಾರತಮ್ಯ ಮತ್ತು ಅನ್ಯಾಯಗಳನ್ನು ಅನುಭವಿಸಿದ್ದರು. ಬೆಳೆದು ದೊಡ್ಡವರಾದ ಮೇಲೂ ಅವರಲ್ಲಿ ಎಷ್ಟೋ ಜನರು ಸಮಾಜದಲ್ಲಿನ ಇತರರಂತೆ ಸಾಮಾನ್ಯ ಜೀವನವನ್ನು ನೆಮ್ಮದಿಯಿಂದ ನಡೆಸಲಾಗದೆ ಶಾಶ್ವತವಾಗಿ ಬಳಲುತ್ತಾ ನೋವನ್ನನುಭವಿಸುತ್ತಿದ್ದರು. ಸರಕಾರದ ಕಾನೂನುಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ನಿಯಮನೀತಿಗಳು ಪರೋಕ್ಷವಾಗಿ, ನೇರವಾಗಿ ಅವರನ್ನು ಅಂತಹ ಪರಿಸ್ಥಿತಿಗೆ ನೂಕಿದವು ಅನ್ನುವ ಹೊಸ ಅರಿವಿನಿಂದ ೨೦೦೯ರಲ್ಲಿ ರಾಷ್ಟ್ರೀಯ ಕ್ಷಮಾಪಣೆಯನ್ನು (National Apology) ಕೇಳಲಾಗಿತ್ತು.

ಅಂತಹ ಒಬ್ಬ Forgotten Australian ಗ್ರೆಗೊರಿ ಪೀಲ್ ಸ್ಮಿತ್ (Gregory Peel Smith). ಇತ್ತೀಚೆಗೆ ಇವರನ್ನು ವೆಬಿನಾರಿನಲ್ಲಿ ಭೇಟಿಯಾಗಿ ಅವರೊಡನೆ ಕಾರ್ಯಕ್ರಮ ಸಂಯೋಜಕರು ನಡೆಸಿದ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಕೋವಿಡ್ ಗಲಾಟೆಯಿಂದ ಮೇ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಪ್ರಕೃತಿ-ಆಧಾರಿತ ಥೆರಪಿ ಕಾನ್ಫರೆನ್ಸ್ ರದ್ದಾಗಿ ಮೂರು ದಿನಗಳ ಕಾನ್ಫರೆನ್ಸ್ ಬದಲಾಗಿ ಹಲವು ವೆಬಿನಾರುಗಳ ಗುಚ್ಛವಾಗಿತ್ತು. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಆರುನೂರು ಜನ ಬಹಳ ಆಸಕ್ತಿಪೂರ್ಣವಾಗಿದ್ದ ವಿವಿಧ ವೆಬಿನಾರುಗಳಲ್ಲಿ ಪಾಲ್ಗೊಂಡರು.

ಸಣ್ಣಗೆ ಉರಿಯುತ್ತಾ ಜ್ವಲಿಸುತ್ತಿದ್ದ ಬೆಂಕಿಯ ಮುಂದೆ ಕೂತು ಗ್ರೆಗೊರಿ ತಮ್ಮ ಜೀವನಕಥೆಯನ್ನು ಬಹು ಸೂಕ್ಮವಾಗಿ ಸಣ್ಣದಾಗಿ ಹೇಳಿ ಅದನ್ನು ಮುಂಚಿತವಾಗೇ ವಿಡಿಯೋ ರೆಕಾರ್ಡ್ ಮಾಡಿದ್ದರು. ನಾವೆಲ್ಲಾ ಅದನ್ನು ನೋಡಿ ಕೇಳಿದ ನಂತರ ವೆಬಿನಾರಿನಲ್ಲಿ ನೇರವಾಗಿ ಭಾಗವಹಿಸಿ ನಮ್ಮೊಂದಿಗೆ ಮಾತನಾಡಿದರು.

ವಿಡಿಯೋ ರೆಕಾರ್ಡಿನಲ್ಲಿ ಅವರು ಹೇಳಿದಂತೆ ಅವರು ಬಾಲ್ಯದಿಂದಲೂ ಕೌಟುಂಬಿಕ-ಕ್ರೌರ್ಯ ಮತ್ತು ತಾಯಿ ತನ್ನನ್ನು ಬಿಟ್ಟುಹೋದ ಅನಾಥಾಶ್ರಮದಲ್ಲಿನ ಕೌರ್ಯವನ್ನು ಎಳೆವಯಸ್ಸಿನಲ್ಲೇ ಅನುಭವಿಸಿದ್ದು ಅವರ ಮೇಲೆ ಶಾಶ್ವತ ಪರಿಣಾಮಗಳನ್ನು ಬೀರಿತ್ತು. ಅದಕ್ಕೆ ಕೈಜೋಡಿಸುವಂತೆ ಶಾಲೆಯಲ್ಲಿ ಅನುಭವಿಸಿದ ಕಿರುಕುಳ, ತನ್ನ ಸುತ್ತಮುತ್ತ ಇದ್ದ ಸಾಂಘಿಕ ಸಮುದಾಯ ವ್ಯವಸ್ಥೆಗೆ ಹೊಂದಿಕೊಳ್ಳಲು ವಿಫಲನಾಗಿದ್ದು, ಆಗಿದ್ದ ಕಠಿಣ ಮತ್ತು ಕ್ರೂರ ಕಾನೂನು ವ್ಯವಸ್ಥೆ ಎಲ್ಲವೂ ತನ್ನನ್ನು ಆಂತರಿಕವಾಗಿಯೂ ಸೋಲುವಂತೆ ಮಾಡಿತ್ತು ಎಂದು ಹೇಳಿಕೊಂಡಿದ್ದರು.

ಅವರು ಕಾನೂನಿನ ಪ್ರಕಾರ ಒಬ್ಬ ಅಪರಾಧಿಯಾಗಿ, ಕಳ್ಳನಾಗಿ, ಕುಡುಕನಾಗಿ ಮತ್ತು ಸಮಾಜವಿರೋಧಿಯಾಗಿ ಜೈಲುವಾಸ ಅನುಭವಿಸಿದ್ದರು. ಮಾನಸಿಕರೋಗಿಯಾಗಿ ಸಮಾಜವನ್ನು ತ್ಯಜಿಸಿ ಮನೆಮಠ ಇಲ್ಲದ ‘ಸೂರಿಲ್ಲದವನಾಗಿ’ (homeless) ಬದುಕಿದ್ದರು. ಮಾನಸಿಕ ಆರೋಗ್ಯ ತಜ್ಞರು ಮತ್ತು ವೈದ್ಯರು ಅವರನ್ನು sociopath ಎಂದು ಕರೆದಿದ್ದರು. ‘ಈತ ಈ ಗ್ರೆಗೊರಿ ಒಂದು ಸಾಧಾರಣ ಕಲಿಕೆ ಮಾಪನದ ಪ್ರಕಾರ ಕಲಿಕೆಗೆ ಬೇಕಿರುವ ಕನಿಷ್ಠ ಮಟ್ಟಕ್ಕಿಂತಲೂ ಅತ್ಯಂತ ಹಿಂದುಳಿದ ಮಂದಮತಿ’ ಎಂದು ಬರೆದಿದ್ದರು.

ಸಣ್ಣಗೆ ಉರಿಯುತ್ತಾ ಜ್ವಲಿಸುತ್ತಿದ್ದ ಬೆಂಕಿಯ ಮುಂದೆ ಕೂತು ಗ್ರೆಗೊರಿ ತಮ್ಮ ಜೀವನಕಥೆಯನ್ನು ಬಹು ಸೂಕ್ಮವಾಗಿ ಸಣ್ಣದಾಗಿ ಹೇಳಿ ಅದನ್ನು ಮುಂಚಿತವಾಗೇ ವಿಡಿಯೋ ರೆಕಾರ್ಡ್ ಮಾಡಿದ್ದರು. ನಾವೆಲ್ಲಾ ಅದನ್ನು ನೋಡಿ ಕೇಳಿದ ನಂತರ ವೆಬಿನಾರಿನಲ್ಲಿ ನೇರವಾಗಿ ಭಾಗವಹಿಸಿ ನಮ್ಮೊಂದಿಗೆ ಮಾತನಾಡಿದರು.

ಎಲ್ಲವನ್ನೂ ನೋಡಿ ಅನುಭವಿಸಿ ಸಾಕುಸಾಕಾಗಿ, ಆತ್ಮಹತ್ಯೆಗೂ ಪ್ರಯತ್ನಿಸಿ ಅಲ್ಲೂ ಕೂಡ ಗ್ರೆಗೋರಿ ಸೋತಿದ್ದರು. ನಲವತ್ತು ತುಂಬಿದಾಗ ಕಾರಣಗಳು ಹೆಚ್ಚುಹೆಚ್ಚಾಗಿ ಇನ್ನು ತಮ್ಮಿಂದ ಸಾಧ್ಯವಿಲ್ಲವೆಂದೆನಿಸಿ ನೇರ ನಡೆಯುತ್ತಾ, ಮುಂದಿದ್ದ ಪರ್ವತದ ಶಿಖರವನ್ನೇ ದೃಷ್ಟಿಸುತ್ತಾ ನಡೆಯುತ್ತಲೇ ಹೋದರು. ಹಾಗೇ ಹೋಗಿ ಹತ್ತು ವರ್ಷ ಕಾಡಿನೊಳಗೆ ಜೀವಿಸಿದ್ದರು. ಕಾಡಿನೊಳಗಿದ್ದರೂ ಕುಡಿತ ಮತ್ತು ಮಾದಕವಸ್ತುಗಳನ್ನು ಬಿಡಲಾರದೆ ಆಗಾಗ ಕಾಡಿನಿಂದ ಹೊರಬಂದು ತಮ್ಮ ಚಾಳಿಗಳನ್ನು ಮುಂದುವರೆಸಿ ಸಮಾಜದಲ್ಲಿರಲಾರದೆ ವಾಪಸ್ ಕಾಡಿನೊಳಗೆ ಸೇರಿಕೊಳ್ಳುತ್ತಿದ್ದರು.

ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು (Elders) ಕಾಡಿನಿಂದ ಅವರನ್ನು ಹೊರನೂಕಿದರಂತೆ. ‘ಹೋಗಿ ಹೊಸಮನುಷ್ಯನಾಗಿ ಬಾಳು’ ಎಂದು ಆದೇಶಿಸಿದರಂತೆ. ಹಾಗಾದಾಗ ಅವರು ಹೆಚ್ಚುಕಡಿಮೆ ಸಾಯುವ ಸ್ಥಿತಿಯಲ್ಲಿದ್ದರು. ಅಲ್ಲಿಂದ ಮುಂದೆ ತಮ್ಮ ಜೀವನದ ಹಂತಹಂತದಲ್ಲೂ ಹೊಸ ಸವಾಲುಗಳನ್ನು ಅನುಭವಿಸಿದರೂ ಕಡೇಪಕ್ಷ ಒಂದು ‘ಶಾಲೆ ಮುಗಿಸಿದ ಸರ್ಟಿಫಿಕೇಟ್’ ಆದರೂ ಪಡೆಯಲೇಬೇಕು ಎನ್ನುವ ಛಲದಿಂದ ಕ್ರಮೇಣ ತಮ್ಮ ಜೀವನವನ್ನು ಬದಲಾಯಿಸಿಕೊಂಡರು.

ಒಬ್ಬ ಹೋಂ ಲೆಸ್ ವ್ಯಕ್ತಿಯಾಗಿದ್ದುಕೊಂಡೇ ಬರಿಯ ಹೈಸ್ಕೂಲ್ ಸರ್ಟಿಫಿಕೇಟ್ ಪಡೆಯಲು ತಾನು ಮತ್ತೆ ಹೈಸ್ಕೂಲ್ ಪಠ್ಯವನ್ನು ಕಲಿತು ಪರೀಕ್ಷೆಗಳನ್ನ ಪಾಸ್ ಮಾಡುತ್ತೀನಿ ಎನ್ನುತ್ತಾ TAFE (ಪಾಲಿಟೆಕ್ನಿಕ್ ತರಹದ ಕಲಿಕಾಕೇಂದ್ರಗಳು) ಬಾಗಿಲು ತಟ್ಟಿದರು. ಅಲ್ಲಿನ ಸರ್ಟಿಫಿಕೇಟ್, ಡಿಪ್ಲೋಮಾ ಕೋರ್ಸುಗಳನ್ನ ಓದಿದರು. ವೈದ್ಯರು ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ತನಗೆ ಕಲಿಯುವುದರಲ್ಲಿ ಅಪಾರ ಆಸಕ್ತಿಯಿದೆ, ಇತರರಂತೆ ತನಗೆ ಕೂಡ ಓದಲು ಬರೆಯಲು ಕಲಿಯಲು ಸಾಧ್ಯವಿದೆ ಎನ್ನುವುದನ್ನು ತಮ್ಮ ಐವತ್ತರ ನಂತರ ಅವರು ಅರಿತರು.

ಅವರ ಪುಣ್ಯ, TAFE ಅಧ್ಯಾಪಕರ ಉತ್ತೇಜನದಿಂದ Southern Cross ಯೂನಿವರ್ಸಿಟಿಗೆ ಸೇರಿ ಸಾಮಾಜಿಕ ವಿಜ್ಞಾನದಲ್ಲಿ ಆನರ್ಸ್ ಡಿಗ್ರಿ ಸಂಪಾದಿಸಿದರು. ಗ್ರೆಗೊರಿ ತಮ್ಮ ಡಿಗ್ರಿ ಓದಿನ ದಿನಗಳ ಹೊಸತರಲ್ಲಿ ತಮ್ಮ ಸೂರಿಲ್ಲದ ಬದುಕು, ಹುಟ್ಟುಕುಟುಂಬದಿಂದ ಬೇರ್ಪಟ್ಟ ಮಕ್ಕಳ ಜೀವನದಲ್ಲಿ ಜರುಗುವ ಸಾಂಸ್ಥಿಕ ಕ್ರೌರ್ಯ ಮತ್ತು ವ್ಯವಸ್ಥಿತವಾದ ಹಿಂಸೆಯ ಬಗ್ಗೆ ಮಾತನಾಡುತ್ತಿದ್ದದ್ದು ಅಧ್ಯಾಪಕರ ಗಮನ ಸೆಳೆದಿತ್ತು. ಆ ಕಾಲಘಟ್ಟದಲ್ಲೂ Forgotten Austrlalians ಬಗ್ಗೆ ಯಾರಿಗೂ ಹೆಚ್ಚಿನ ವಿಷಯ ತಿಳಿದಿರಲಿಲ್ಲ. ಅದೃಷ್ಟವೆಂಬಂತೆ ಅಲ್ಲಿ ಕಲಿಯುವಾಗ ಸಿಕ್ಕಿದ ಪ್ರಾಧ್ಯಾಪಕರುಗಳು ಅವರನ್ನು ಅರಿತು ಸರಿಯಾದ ಮಾರ್ಗದರ್ಶನ ಕೊಟ್ಟು ಅವರಿಗೆ ಪಿಎಚ್.ಡಿ ಅಧ್ಯಯನವನ್ನು ಕೈಗೊಳ್ಳುವಂತೆ ಅವರ ಕೈಹಿಡಿದು ನಡೆಸಿದರು.

ಪ್ರಧಾನ ಮತ್ರಿ ಕೆವಿನ್ ರಡ್ ೨೦೦೯ರಲ್ಲಿ ದೇಶಕ್ಕೆ ಒಪ್ಪಿಸಿದ ರಾಷ್ಟ್ರೀಯ ಕ್ಷಮಾಪಣೆಯನ್ನು ನೆನಪಿಸುತ್ತಾ ಯೂನಿವರ್ಸಿಟಿ ಪ್ರಾಧ್ಯಾಪಕರು Forgotten Australians ವಿಷಯವನ್ನು ಕೈಗೆತ್ತಿಕೊಂಡು ಅದರ ಬಗ್ಗೆ ವ್ಯಾಪಕ ಅಧ್ಯಯನವನ್ನು ನಡೆಸುವಂತೆ ಗ್ರೆಗೊರಿ ಅವರಿಗೆ ಪ್ರೇರೇಪಿಸಿದರು. ಗ್ರೆಗೊರಿ ೨೦೧೧ ನೇ ವರ್ಷದಲ್ಲಿ ತಮ್ಮ ಪಿ ಎಚ್ ಡಿ ಅಧ್ಯಯನವನ್ನು ಆರಂಭಿಸಿ ಅಂತಹ ಹಲವಾರು Forgotten Australians ರನ್ನು ಸಂದರ್ಶಿಸಿ ಅವರ ಜೀವನ ಕಥೆಗಳನ್ನು ಸಂಗ್ರಹಿಸಿದರು. ಆದರೆ ಈ ಪ್ರತಿಹಂತದಲ್ಲೂ ಗ್ರೆಗೊರಿಗೆ ಎದುರಾದ ವ್ಯಕ್ತಿಗತ, ಆಂತರಿಕ ಸವಾಲುಗಳು, ತಮ್ಮ ಹಿಂದಿನ ಜೀವನದ ನೋವು, ಆರೋಗ್ಯದ ಸಮಸ್ಯೆಗಳು ಇದ್ದೆ ಇದ್ದವು. ಅವನ್ನೆಲ್ಲಾ ಎದುರಿಸಿ, ಒದಗಿ ಬಂದ ಸಹಾಯಹಸ್ತಗಳಿಗೆ ವಂದಿಸುತ್ತಾ ಇದು ನಿಜವೇ, ತನ್ನ ಜೀವನದಲ್ಲಿ ಹೀಗೆಲ್ಲಾ ಆಗುತ್ತಿದೆಯೇ, ಇದನ್ನು ನಂಬಲೇ, ಇದಕ್ಕೆ ತಾನು ಯೋಗ್ಯನೇ, ಎಂದು ಪ್ರತಿದಿನವೂ ಪ್ರಶ್ನಿಸಿಕೊಳ್ಳುತ್ತಾ ತನ್ನನ್ನು ಕ್ರಮೇಣ ಸಾಮಾನ್ಯ ಜೀವನಕ್ಕೆ ಒಗ್ಗಿಸಿಕೊಳ್ಳುತ್ತ ಹೋದರು.

೨೦೧೫ ನೇ ವರ್ಷದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿ ೨೦೧೬ನೇ ವರ್ಷದಲ್ಲಿ ಪಿಎಚ್.ಡಿ ಪದವಿ ಪಡೆದರು. ಕಾಡಿನಲ್ಲಿ ಅಗೋಚರನಾಗಿ, ನಿಗೂಢವಾಗಿ, ರಹಸ್ಯವಾಗಿ ದಂತಕಥೆಯಾಗಿ ಬದುಕಿದ್ದ ಮತ್ತು ಒಬ್ಬ ಹೋಂ ಲೆಸ್ ವ್ಯಕ್ತಿಯಾಗಿ ಬೀದಿಬೀದಿ ಸುತ್ತುತ್ತಾ ಕುಡುಕನಾಗಿ ಬಾಳಿದ್ದ ಮನುಷ್ಯ ಪಿಎಚ್.ಡಿ ಪಡೆದ ವಿಷಯ ಬಾಯಿಂದ ಬಾಯಿಗೆ ಹರಡಿ ದಂತಕಥೆಯಾಗಿತ್ತು.

ವೆಬಿನಾರಿನಲ್ಲಿ ನಮ್ಮೊಡನೆ ಮಾತನಾಡುತ್ತಾ ಗ್ರೆಗೊರಿ ತಾವು ಸಮಾಜಕ್ಕೆ ಬೆನ್ನು ತಿರುಗಿಸಿ ನಡೆದು ಕಾಡಿನೊಳಗೆ ಸೇರಿಕೊಂಡು ಬದುಕಿದ್ದು ಎಷ್ಟು ಕಷ್ಟವಾಗಿತ್ತೋ ಅದು ಅಷ್ಟೇ ಫಲಕೊಟ್ಟಿತ್ತು ಕೂಡ ಎಂದರು. ಪ್ರಕೃತಿ ಯಾರನ್ನೂ ಬೇಧಭಾವದಿಂದ ಕಾಣುವುದಿಲ್ಲ. ಸಮಾಜದಲ್ಲಿ ಮನುಷ್ಯರು ಸೃಷ್ಟಿಸಿಕೊಳ್ಳುವ ವರ್ಗ, ಅಂತರಗಳು, ಅಸಮಾನತೆ, ಹಿಂಸೆಗಳನ್ನು ನಿಸರ್ಗದಲ್ಲಿ ನಾವು ನೋಡುವುದಿಲ್ಲ. ಅಲ್ಲಿ ಬೇರೆಲ್ಲಾ ಜೀವಚರಗಳಂತೆ ನಾವು ಹುಲುಮಾನವರೂ ಕೂಡ, ಹೆಚ್ಚಿನ ಅಂತಸ್ತೇನೂ ಇಲ್ಲ ಎನ್ನುವ ನಿತ್ಯ ಸತ್ಯ ಕಠೋರವಾಗಿರುತ್ತದೆ. ಆದರೆ ಅದು ಮಾನಸಿಕವಾಗಿ ನಮ್ಮನ್ನು ಬಲಪಡಿಸುತ್ತದೆ. ತಾವೇನಾದರೂ ಕಾಡಿನೊಳಗೆ ಹೊಕ್ಕು ಅಲ್ಲಿ ಹತ್ತು ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವಿಸದೇ ಇರದಿದ್ದ ಪಕ್ಷದಲ್ಲಿ, ತಮ್ಮ ಅಂತರಾತ್ಮವನ್ನು ಬಲಪಡಿಸಿಕೊಳ್ಳದೆ ಇರದಿದ್ದ ಪ್ರಸಂಗವೇನಾದರೂ ಆಗಿದ್ದರೆ ಯಾವಾಗಲೋ ತಮ್ಮ ಸಾವು ಖಂಡಿತವಾಗಲೂ ಆಗಿರುತ್ತಿತ್ತು. ತಾನು ಉಳಿದುಕೊಂಡದ್ದೇ ಕಾಡಿನಿಂದ, ಅಲ್ಲಿಂದ ಹೊರಬಂದು ಇಂದು Dr Gregory Smith ಆಗಿ, ಒಬ್ಬ ಯೂನಿವರ್ಸಿಟಿ ಅಧ್ಯಾಪಕನಾಗಿ ನಿಮ್ಮೊಡನೆ ಮಾತನಾಡುತ್ತಿರುವುದೇ ಆ ಪ್ರಕೃತಿ ತನಗೆ ನೀಡಿದ ಅಂತಃಶಕ್ತಿಯಿಂದ, ಎಂದರು. ‘ನಿಸರ್ಗ ಮನುಷ್ಯರಿಗೆ ಜೀವನದರ್ಶನವನ್ನು ತೋರಿಸುತ್ತದೆ’ ಅಂದರು.

ನಾವೇ ಸೃಷ್ಟಿಸಿದ ಧರ್ಮಗಳು ಯಾವುದೂ ಅದನ್ನು ಮಾಡಲು ಸಾಧ್ಯವಿಲ್ಲ. ಪ್ರಕೃತಿ ನಮ್ಮಲ್ಲಿ ಶಾಂತ ಮನೋಭಾವವನ್ನೂ, ಅಂತಃ ಸ್ಥೈರ್ಯವನ್ನು, ಪರಸ್ಪರ ಗೌರವವನ್ನು, ಪ್ರತಿಯೊಂದು ಜೀವಿಗೂ ಇರುವ ಅದರದೇ ಪ್ರಾಮುಖ್ಯತೆಯನ್ನು ಬಿಚ್ಚಿಡುತ್ತದೆ. ಇವೆಲ್ಲದರಲ್ಲಿ ನಿನ್ನ ಸ್ಥಾನವೇನು, ಎಂದು ನಮ್ಮನ್ನು ಪ್ರಶ್ನಿಸುತ್ತದೆ. ಏನೂ ಅಲ್ಲ ಎನ್ನುವ ಸತ್ಯ ನನಗೆ ಕಾಡಿನೊಳಗಿದ್ದಾಗ ಮನದಟ್ಟಾಯಿತು. ಆಗ ನನ್ನನ್ನು ನಾನೇ ಗುದ್ದಿಕೊಳ್ಳುವುದು, ನನ್ನಿಂದ ನಾನೇ ಓಡಿಹೋಗುವುದು, ನನ್ನಲ್ಲಿ ನಾನೇ ಯುದ್ಧಮಾಡಿಕೊಳ್ಳುತ್ತಿದ್ದದ್ದು ಎಲ್ಲವೂ ಶಾಂತವಾಯಿತು. ಹೊರಾಂಗಣದಲ್ಲಿ ಕೂತು ಹೀಗೆ ಚಿಕ್ಕದೊಂದು ಕ್ಯಾಂಪ್ ಫೈರ್ ಮಾಡಿಕೊಂಡು ಒಬ್ಬರಿಗೊಬ್ಬರು ನಮ್ಮನಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾ ಹೋದರೆ ಅಂತರಗಳು, ಅಸಮಾನತೆಗಳು ಕಡಿಮೆಯಾಗುತ್ತವೆ, ಎಂದರು.

(ಮುಂದಿನ ಕಂತಿನಲ್ಲಿ ಗ್ರೆಗೊರಿ ಯವರ ‘Out of the Forest’ ಪುಸ್ತಕದ ಬಗ್ಗೆ ಬರೆಯುತ್ತೀನಿ)