ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ, ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು. “ಅಯ್ಯೋ…” “ಏನ್ ಕತೇನಪ್ಪ ಇದು!” ಇತ್ಯಾದಿ ಉದ್ಘಾರ.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

 

ಹಾಸನ ಬಿಟ್ಟಾಗಲೇ ಪಡುವಣ ಆಕಾಶ ಕೆಂಪಾಗಿತ್ತು. ಗಸಗಸೆ ಪಾಯಸ ಕುಡಿದು ಮತ್ತೇರಿದಂತಿದ್ದ ಬಸ್ಸು, ಅರಕಲಗೂಡು, ರಾಮನಾಥಪುರ, ಕೊಣನೂರು… ಅಂತ ಒಂದೊಂದೇ ಪಟ್ಟಣವನ್ನು ಮೆತ್ತಗೆ ತಬ್ಬಿ ಮುದ್ದಾಡಿ, ಕೂಡಿಗೆ ತಲುಪುವುದರೊಳಗೆ ರಾತ್ರಿಯ ಎಂಟೂಮುಕ್ಕಾಲು. ಮೊದಲ ಸ್ಟಾಪಿನಲ್ಲಿ ನಾನೊಬ್ಬನೇ ಇಳಿದದ್ದು. ಬ್ಯಾಕ್‌ಪ್ಯಾಕ್ ನೆಟ್ಟಗೆ ಮಾಡಿಕೊಳ್ಳುತ್ತ ಸುತ್ತಲೂ ಕಣ್ಣಾಡಿಸಿದೆ. ಜನ ನಾಪತ್ತೆ. ಕಾಡಿನೊಳಗೆ ಅವಿತ ಕತ್ತಲು. ತುಸು ದೂರದಲ್ಲಿ ನೀರ ನಾದ. ಕತ್ತೆತ್ತಿ ನೋಡಿದರೆ ಕಪ್ಪು ಮೋಡಗಳ ಹಿಂಡು. ಸಣ್ಣ ಸದ್ದೂ ದೊಡ್ಡದಾಗಿ ಕೇಳಿಸುವಷ್ಟು ನೀರವ. ಪತ್ತೆದಾರಿ ಸಿನಿಮಾಗೆ ಹೇಳಿಮಾಡಿಸಿದ ಸನ್ನಿವೇಶ.

ಜೋರು ಹಸಿವು. ಅಲ್ಲಿಯೇ ಇದ್ದ ತಳ್ಳುಗಾಡಿಯಲ್ಲಿ ಎಗ್‌ರೈಸ್ ಬಾರಿಸಿದ್ದಾಯ್ತು. “ಇಲ್ಲಿ ಡಿಎಡ್ ಕಾಲೇಜು ಯಾವ ಕಡೆ ಉಂಟು?” ಕೇಳಿದೆ. ಹತ್ತಿರದಲ್ಲೇ ಇದ್ದ ದಿಬ್ಬದತ್ತ ಕೈ ತೋರಿದ ಅಂಗಡಿಯವ. ನನಗೂ ಆ ದಿಬ್ಬಕ್ಕೂ ಮಧ್ಯೆ ಯಾವುದೋ ಸೇತುವೆ. ಬಜಾಜ್ ಎಂ80ಯೊಂದರ ತಿಳಿಹಳದಿ ಬೆಳಕಿನಲ್ಲಿ ಕಂಡ ಆ ಸೇತುವೆ ಹಳ್ಳದ್ದೇ ಇರಬಹುದು ಅಂದುಕೊಂಡು ಸುಮ್ಮನಾದೆ. ಬೆಳಗ್ಗೆ ನೋಡಿಕೊಂಡರಾಯಿತು ಅನ್ನಿಸಿ, ದಿಬ್ಬದ ಕಡೆಗೊಮ್ಮೆ ನೋಟ ಹಾಯಿಸಿ, ಅಲ್ಲಿಯೇ ಇದ್ದ ಪುಟ್ಟ ಬಸ್ ತಂಗುದಾಣದತ್ತ ನಡೆದೆ.

ಟಾರ್ಚ್ ಹಾಕಿ ನೋಡಿದರೆ, ಒಂದು ತುಂಡು ಕಸವೂ ಇಲ್ಲ, ಧೂಳೂ ಇಲ್ಲ! ಪವಾಡ ಅಂಬೋದು ಇದೇ ಇರಬೇಕು ಅಂದುಕೊಂಡು ನಸುನಕ್ಕು, ನ್ಯೂಸ್ ಪೇಪರ್ ತೆಗೆದು ಚಂದ ಹಾಸಿಕೊಂಡು ಕಾಲು ಚಾಚಿದೆ. ಅದ್ಯಾವ ಮಾಯದಲ್ಲಿ ನಿದ್ದೆ ಕರೆದುಕೊಂಡಿತೋ ಕಾಣೆ. ಎಚ್ಚರಾದಾಗ ಆರೂಕಾಲು. ಹಕ್ಕಿಯ ಹಾಡೂ ಇಲ್ಲ, ಕೋಳಿಯ ಕೂಗೂ ಇಲ್ಲ. ಬದಲಿಗೆ, ಹತ್ತಿರದಲ್ಲೇ ಮನುಷ್ಯರ ಗುಸುಗುಸು. ಹಿನ್ನೆಲೆಯಲ್ಲಿ ಕಡಲಿನಂಥದ್ದೇನೋ ಅಬ್ಬರ. ಕಣ್ಣಗಲಿಸಿ ನೋಡಿದರೆ, ಸ್ಟ್ಯಾಂಡಿನ ಬಾಗಿಲಲ್ಲಿ ಇಬ್ಬರು ನಿಂತು ಮಾತನಾಡುತ್ತಿದ್ದರು. ಚಚ್ಚಿ ಬಾರಿಸುತ್ತಿದ್ದ ಮಳೆ, ಅವರಿಬ್ಬರ ಮಾತಿನ ಸದ್ದನ್ನೆಲ್ಲ ನುಂಗಿ ಅಬ್ಬರಿಸುತ್ತಿತ್ತು. ಆಕಳಿಸುತ್ತ ಎದ್ದು, ಮುಖಕ್ಕೆ ನೀರು ಎರಚಿಕೊಂಡು, ನ್ಯೂಸ್ ಪೇಪರ್ ಹಾಸಿಗೆಯನ್ನು ನೀಟಾಗಿ ಮಡಿಚಿ ಬ್ಯಾಗಿಗಿಳಿಸಿ, ಕೊಡೆ ಬಿಡಿಸಿ, ದಿಬ್ಬದತ್ತ ನಡೆಯತೊಡಗಿದೆ. ರಾತ್ರಿ ಪುಟ್ಟದಾಗಿ ಕಂಡಿದ್ದ ಸೇತುವೆ ಬೆಳಗಾಗುವಷ್ಟರಲ್ಲಿ ಅಷ್ಟುದ್ದಕ್ಕೆ ಚಾಚಿಕೊಂಡಿತ್ತು. ಅದರೊಳಗೆ ನದಿಯೊಂದು ಅವಸರದಲ್ಲಿತ್ತು.

*****

ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಕವನ ಸ್ಪರ್ಧೆಯಲ್ಲಿ ನನ್ನದೊಂದು ಕವಿತೆಗೆ ಬಹುಮಾನ ಬಂದಿತ್ತು. ಅದು ಮೊದಲ ಬಾರಿಯಾದ್ದರಿಂದ ಹುಚ್ಚು ಹೆಚ್ಚಾಗಿ, ಹಿಂದಿನ ದಿನದ ಸಂಜೆ ರೈಲಿಗೇ ಹೊರಟು, ರಾತ್ರಿ ಒಂಬತ್ತಕ್ಕೆಲ್ಲ ಮೆಜೆಸ್ಟಿಕ್ ಕಂಡಿದ್ದೆ. ಕಾರ್ಯಕ್ರಮ ಇದ್ದದ್ದು ಮರುದಿನ ಸಂಜೆ ನಾಲ್ಕಕ್ಕೆ! ಹ್ಯಾಪಮೋರೆ ಹಾಕಿಕೊಂಡು ಅಲ್ಲೇ ತಳ್ಳುಗಾಡಿಯೊಂದರಲ್ಲಿ ಚಂದದ ರೈಸ್‌ಬಾತೊಂದನ್ನು ಬಾರಿಸಿದೆ. ವಾಪಸು ಮೆಜೆಸ್ಟಿಕ್ ರೈಲು ನಿಲ್ದಾಣದ ಪಡಸಾಲೆಗೆ ಹೋಗಿ, ಕಂಬವೊಂದನ್ನು ಒರಗಿ ಕುಂತೆ. ಗಂಟೆ ಹನ್ನೊಂದು.

ಗಮನಿಸಿದರೆ, ಅಲ್ಲಿ ಮಲಗುವಷ್ಟೂ ಖಾಲಿ ಜಾಗ ಉಳಿದಿರಲಿಲ್ಲ. ಹಾಸ್ಟೆಲಿನ ಡಾರ್ಮೆಟರಿಯೇನೋ ಎಂಬಂತೆ, ಎಲ್ಲೆಂದರಲ್ಲಿ ಹೇಗೆಲ್ಲ ಸಾಧ್ಯವೋ ಹಾಗೆ ಜನ ಮಲಗಿದ್ದರು. ಅದೇ ನಿಲ್ದಾಣದಲ್ಲಿ ಹಗಲಿಡೀ ದುಡಿದ ಹಮಾಲಿಗಳು ಅದಾಗಲೇ ನಿದ್ದೆಗೆ ಶರಣಾಗಿದ್ದರು. ಅವರ ದೇಹದಡಿ, ಬೆನ್ನನ್ನು ಮಾತ್ರವೇ ಮುಚ್ಚುವಷ್ಟು ಉದ್ದದ ಕೆಂಪು ತೆಳೂ ಟವೆಲ್ಲು. ಇನ್ನಷ್ಟು ಮಂದಿ ಪ್ರವಾಸಿಗಳು. ಒಂದೂವರೆ ವರ್ಷದ ಪುಟ್ಟ ಮಗುವನ್ನು ಮಧ್ಯೆ ಮಲಗಿಸಿಕೊಂಡ ಜೋಡಿಯೊಂದು ನಿದ್ದೆಯಲ್ಲಿತ್ತು. ಕೆಲವರು ಊಟದ ಡಬ್ಬಿಯೊಳಗೆ ಮುಳುಗಿದ್ದರು. ಉಳಿದವರು ಭಿಕ್ಷುಕರು, ಪೊಲೀಸರು ಇತ್ಯಾದಿ ಮಂದಿ.

ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು.

 ಕಣ್ಣಗಲಿಸಿ ನೋಡಿದರೆ, ಸ್ಟ್ಯಾಂಡಿನ ಬಾಗಿಲಲ್ಲಿ ಇಬ್ಬರು ನಿಂತು ಮಾತನಾಡುತ್ತಿದ್ದರು. ಚಚ್ಚಿ ಬಾರಿಸುತ್ತಿದ್ದ ಮಳೆ, ಅವರಿಬ್ಬರ ಮಾತಿನ ಸದ್ದನ್ನೆಲ್ಲ ನುಂಗಿ ಅಬ್ಬರಿಸುತ್ತಿತ್ತು. ಆಕಳಿಸುತ್ತ ಎದ್ದು, ಮುಖಕ್ಕೆ ನೀರು ಎರಚಿಕೊಂಡು, ನ್ಯೂಸ್ ಪೇಪರ್ ಹಾಸಿಗೆಯನ್ನು ನೀಟಾಗಿ ಮಡಿಚಿ ಬ್ಯಾಗಿಗಿಳಿಸಿ, ಕೊಡೆ ಬಿಡಿಸಿ, ದಿಬ್ಬದತ್ತ ನಡೆಯತೊಡಗಿದೆ.

***

ಹಾಸನದಲ್ಲಿ ರೈಲು ಹತ್ತಿದಾಗ ಸೂರ್ಯನ ಬೆಳಕೆಲ್ಲ ಸೂರೆ. ಅರಸೀಕೆರೆ ಇಳಿದು ಶಿವಮೊಗ್ಗ ಗಾಡಿ ಹತ್ತುವ ಪ್ಲಾನು. ಅದ್ಯಾವುದೋ ಮಾಯದಲ್ಲಿ ಶಿವಮೊಗ್ಗ ಗಾಡಿ ಹೊರಟುಹೋಗಿತ್ತು. ಇನ್ನು ಮುಂಜಾನೆ ರೈಲು. ಹೆದ್ದಾರಿಗೆ ಹೋಗಿ ಗಡದ್ದಾಗಿ ಊಟ ಮಾಡಿಕೊಂಡು ಮತ್ತೆ ರೈಲು ನಿಲ್ದಾಣಕ್ಕೆ ಬಂದೆ. ಮೂರನೇ ಪ್ಲಾಟ್‌ಫಾರ್ಮಿನಲ್ಲಿ ಠಿಕಾಣಿ.

ಹನ್ನೊಂದು, ಹನ್ನೆರಡು, ಒಂದು, ಎರಡು… ಉಫ್… ಗಂಟೆಗಂಟೆಗೂ ಚಳಿ ಏರುತ್ತಲೇ ಇದೆ! ತಬ್ಬಿಕೊಂಡು ಕೂರಲು ಬ್ಯಾಗು ಕೂಡ ಇಲ್ಲ. ಕೈಯಲ್ಲಿದ್ದ ‘ಚಂದಮಾಮ’ ಮತ್ತು ‘ಚಂಪಕ’ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ತೆಳೂ ಪ್ಯಾಂಟು, ಪಾಲಿಯೆಸ್ಟರ್ ಶರ್ಟು ಲೆಕ್ಕಕ್ಕೇ ಇಲ್ಲವೇನೋ ಎಂಬಂತೆ ಥಂಡಿ ನನ್ನನ್ನು ತನ್ನೊಳಕ್ಕೆ ಎಳೆದು ಮುಳುಗಿಸಿಕೊಂಡಿತು. ಮನಸ್ಸಿನ ಗಟ್ಟಿತನದ ಜೊತೆಗೆ ದೇಹದ ಪೂರಾ ಶಕ್ತಿ ಹಾಕಿದರೂ ಹಲ್ಲು ಗಡಗಡ ನಡುಗುವುದು ನಿಲ್ಲಿಸಲೇ ಆಗುತ್ತಿಲ್ಲ.

ದಿಢೀರನೆ ಎಲ್ಲಿಯೋ ಹೊಗೆ ಕಂಡಂತೆ ಭಾಸ. ದಿಟ್ಟಿಸಿದರೆ, ಸ್ವಲ್ಪ ದೂರದಲ್ಲಿ ಯಾರೋ ಬೆಂಕಿ ಹಾಕಿದ್ದರು. ಓಡಿ ಜ್ವಾಲೆಯ ತಬ್ಬುವುದೊಂದು ಬಾಕಿ. ಬಟ್ಟೆಯನ್ನು ಎಲ್ಲೆಂದರಲ್ಲಿ ಹರಿದುಕೊಂಡ ಭಿಕ್ಷುಕನೊಬ್ಬ ತರಗೆಲೆ ಸೇರಿಸಿ ಬೆಂಕಿ ಹಚ್ಚಿದ್ದ. ಅದರ ಬೆಳಕಲ್ಲಿ ಅನ್ನ ಮೆಲ್ಲುತ್ತ ಕುಂತಿದ್ದ. ಜಾಗ ಖಾಲಿ ಮಾಡುವ ಅನ್ನಿಸಿದರೂ ಥಂಡಿಗೆ ಬೆದರಿ ಸುಮ್ಮನಾದೆ. ಅಂವ ಮಾತು ಶುರುಮಾಡಿದ: “ಯಾವೂರು ನಿಂದು? ಯಾವ ಟ್ರೇನಿಗೆ ಕಾಯ್ತಿದ್ದಿಯ?” ಜನರಿಂದ ಆಗಷ್ಟೇ ಒದೆ ತಿಂದ ಪೊಲೀಸಿನವರ ದನಿ ಇದ್ದಂತಿತ್ತು. ನಾನಂದೆ, “ಶಿವಮೊಗ್ಗ ಟ್ರೇನು.” ಶಿವಮೊಗ್ಗ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ, ಆಸಾಮಿಯ ದನಿ ಪೂರಾ ಬದಲಾಗಿಹೋಯ್ತು. ಎತ್ತರಿಸಿದ ಗಂಟಲಲ್ಲಿ ಯಡಿಯೂರಪ್ಪಂಗೆ ಹಿಗ್ಗಾಮುಗ್ಗಾ ಬಯ್ಯೋಕೆ ಶುರುಮಾಡಿದ. ಸ್ವಲ್ಪೇ ಹೊತ್ತಿನಲ್ಲಿ ಕುಮಾರಸ್ವಾಮಿ, ಸಿದ್ರಾಮಯ್ಯನ್ನೂ ಬಾಯಿಗೆ ಸೇರಿಸಿಕೊಂಡ. ಮೇಲಿನಿಂದ ಇಬ್ಬನಿ. ಎದುರಿಗೆ ಬೆಂಕಿ. ಜೊತೆಗೆ ಅದ್ಭುತ ಬೈಗುಳ ಸರಣಿ. ಥಂಡಿ ಗಾಯಬ್. ಮುಂಜಾನೆ ನಾಲ್ಕೂವರೆ ಆದದ್ದು ಗೊತ್ತಾಗೋಕೆ ಸ್ವತಃ ರೈಲೇ ಬರಬೇಕಾಯಿತು!

ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಯಾರೋ ಕಿಡಿಗೇಡಿಗಳು ನನ್ನ ಹೆಸರು ಸೇರಿಸಿಬಿಟ್ಟಿದ್ದರು. ನನಗೆ ಗೊತ್ತಾದದ್ದೇ ಕಾರ್ಯಕ್ರಮದ ಹಿಂದಿನ ದಿನ. ಅದೂ, ಗೆಳೆಯನೊಬ್ಬ ಕರೆ ಮಾಡಿ ಹೇಳಿದ ನಂತರ! ಕೊಪ್ಪ-ಬಾಳೆಹೊನ್ನೂರು ನಡುವಿನ ಹೆರೂರು ತಲುಪಬೇಕಿತ್ತು. ಮರುದಿನ ಬೆಳಗಾಗುತ್ತಲೇ, ತಿರುಗಾಟದ ಹುಕಿಯಲ್ಲಿ ಹಿಂದೆ-ಮುಂದೆ ಯೋಚಿಸದೆ ಹೊಂಟೆ. ತರೀಕೆರೆಯಿಂದ ಕೊಪ್ಪಕ್ಕೆ ಸಾರಿಗೆ ಬಸ್ಸು. ಕೊಪ್ಪದಿಂದಲೂ ಅದೇ ಸಾರಿಗೆ. ಪುಟಾಣಿ ಸೇತುವೆಗಳನ್ನೆಲ್ಲ ಲೀಲಾಜಾಲವಾಗಿ ದಾಟಿಕೊಂಡು ಸಾಗಿದ ಬಸ್ಸು, ಕಾಫಿ ತೋಟಗಳು ಮತ್ತು ಭತ್ತದ ಗದ್ದೆಗಳ ಜೋಡಿಯಾಟದ ಬಿಡುವೊಂದರಲ್ಲಿದ್ದ ಆ ಊರು ಕಾಣಿಸಿದಾಗ ಸೂರ್ಯ ನೆತ್ತಿಯಲ್ಲಿತ್ತು.

ತಮಾಷೆ ಅಂದರೆ, ನಾ ಇನ್ನೇನು ಸಮ್ಮೇಳನದ ಜಾಗ ತಲುಪಬೇಕು; “ಮುಂದಿನ ಸರದಿ…” ಅಂತ ನನ್ನ ಹೆಸರು ಕೇಳಿಸಿತು! ಹೆಂಗೋ ಸಾವರಿಸಿಕೊಂಡು ಓಡಿ, ಸ್ಟೇಜು ಹತ್ತಿ, ಮೊಬೈಲಿನೊಳಗಿದ್ದ ಕವಿತೆಯೊಂದನ್ನು ಬಿಸಾಕಿ, ಮೆತ್ತಗೆ ಅಲ್ಲಿಂದ ತಪ್ಪಿಸಿಕೊಂಡು, ಮನಸಾರೆ ಗದ್ದೆ ಬಯಲು ಸುತ್ತಿದೆ. ಸಂಜೆ ಅದ್ಭುತವಾದ ಸ್ನಾಕ್ಸು, ರಾತ್ರಿಗೆ ಮಸ್ತ್ ಊಟ, ಮೇಲೊಂದು ಮಸಾಲಾ ಮಜ್ಜಿಗೆ. ಹೊರಟಿದ್ದಾಯ್ತು. ಮತ್ತದೇ ಸಾರಿಗೆ ಬಸ್ಸು.

ಕೊಪ್ಪ ಬಸ್ ಸ್ಟ್ಯಾಂಡಿನ ಬಳಿ ಇಳಿದಾಗ ರಾತ್ರಿ ಹತ್ತೂವರೆ. ಸ್ಟ್ಯಾಂಡಿನೊಳಗೆ ನಾಲ್ಕು ನಾಯಿಗಳನ್ನು ಬಿಟ್ಟರೆ ಯಾರೆಂದರಾರೂ ಇಲ್ಲ. ಯಾರನ್ನಾದರೂ ಕೇಳಬೇಕು ಅಂತ ಇಟ್ಟುಕೊಂಡಿದ್ದ, “ಬಸ್ಸು ಎಷ್ಟೊತ್ತಿಗೆ?” ಅನ್ನೋ ಕೇಳ್ವಿಯ ಕುತ್ತಿಗೆ ಹಿಡಿದು ಕಾಲಡಿ ಹಾಕಿ ಹೊಸಕಿ, ಬೆಪ್ಪನಂತೆ ಆಕಾಶ ನೋಡಿದೆ. ನಕ್ಷತ್ರಗಳು ನಗುತ್ತಿದ್ದವು. ಸೂಡರಿನ ಕಾಲ. ಕಪಾಲ ಮುಟ್ಟಿದರೆ ಹಿಮದ ಇಳಿಜಾರಿನ ಫೀಲು. ಅಂಗಾಲಿನ ಕತೆ ಕೇಳಲೇಬೇಡಿ.

ಹೋಟೆಲ್ ಎದುರಿನ ಕಟ್ಟೆ ಚಂದ ಕಂಡಿತು. ನ್ಯೂಸ್ ಪೇಪರ್ ಹಾಸಿ, ಇನ್ನೇನು ಕಾಲು ಚಾಚಬೇಕು; ಜೀಪೊಂದು ಬಂದು ನಿಂತ ಸದ್ದು. ದಿಟ್ಟಿಸಿದರೆ, ಪೊಲೀಸ್. ಕೇಳಿದರೆ ಏನು ಹೇಳುವುದು? ಹೇಳಿದರೂ ನಂಬಿಯಾರೇ? ನಕ್ಸಲ್ ಅಂತ ಹಿಡಿದುಕೊಂಡು ಹೋದರೆಂತ ಕತೆ? ಇತ್ಯಾದಿ ಆಲೋಚನೆಗಳ ಸರಣಿ. ಕೊನೆಗೆ, ನಾನೇ ಹೋಗಿ ಮಾತಾಡಿಬಿಡುವುದು ವಾಸಿ ಅನ್ನಿಸಿ ಎದ್ದೆ. ಅತ್ತ ನಡೆಯಬೇಕು ಎನ್ನುವಷ್ಟರಲ್ಲಿ, ನೂರು ಮೀಟರಿನಷ್ಟು ದೂರ ನಿಂತಿದ್ದ ಆ ಲಡಕಾಸಿ ಜೀಪು, ಬೆಟ್ಟವೇ ತನ್ನ ಮೇಲೆ ಕುಸಿದುಬಿತ್ತೇನೋ ಅನ್ನುವಂತೆ ರೋದಿಸುತ್ತ ಕದಲತೊಡಗಿತು. ನೋಡನೋಡುತ್ತಲೇ ಸ್ಟ್ಯಾಂಡಿನಾಚೆಗೆ ಸರಿದು ಮಾಯ. ನಿಟ್ಟುಸಿರು ಬಿಟ್ಟು ಮಲಗಿದೆ. ‘ಈಗ ನಕ್ಸಲರು ಬಂದರೆಂತ ಮಾಡೂದು?’ ಅಂತ ಯೋಚನೆ ಶುರುವಾಯ್ತು!

ಥರಗುಟ್ಟಿಸುತ್ತಿದ್ದ ಥಂಡಿ, ಪೊಲೀಸರು ಮತ್ತು ನಕ್ಸಲರ ಕಲ್ಪನೆಯ ಕಾಟದಲ್ಲಿ ಹೊತ್ತು ಸರಿದು, ಎರಡು ಗಂಟೆ ಸುಮಾರಿಗೆ ಅದರಷ್ಟಕ್ಕೇ ಜೊಂಪು. ಒಂದು ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಜೋರು ಸದ್ದಾಗಿ ದಿಢೀರನೆ ಎಚ್ಚರಾಯ್ತು. ನೋಡಿದರೆ, ಮಾರುತಿ ಓಮ್ನಿಯೊಂದು ಕಿಡ್ನಾಪಿಂಗ್ ಸ್ಟೈಲಿನಲ್ಲಿ ಸೀದಾ ಸ್ಟ್ಯಾಂಡಿನೊಳಕ್ಕೆ ನುಗ್ಗಿ ಬಂದು ಗಕ್ಕನೆ ನಿಂತಿತು. ಯಾರೂ ಇಳಿಯುತ್ತಲೇ ಇಲ್ಲವಲ್ಲ ಅಂತ ನಾನು. ಹತ್ತು ಸೆಕೆಂಡಿನ ನಿಶ್ಬಬ್ದದ ನಂತರ, ಗಾಡಿಯೊಳಗಿಂದ ಮೂರು ಬಂಡಲ್ ಪೇಪರ್ ಆಚೆ ಬಿದ್ದವು. ನಕ್ಕು, ನನ್ನ ಕಲ್ಪನೆಗಳಿಗೆಲ್ಲ ತಟ್ಟಿ ಸುಮ್ಮನಿರಿಸಿ, ಬಂಡಲ್‌ಗಳ ಬಳಿ ಹೋಗಿ, ಕವರ್ ಹರಿದು, ನ್ಯೂಸ್ ಪೇಪರ್ ಎಳೆದುಕೊಂಡು ಬಂದು ಕುಂತು ಓದತೊಡಗಿದೆ. ಒಂದೊಂದೇ ಸುದ್ದಿಗಳನ್ನು ಹೆಕ್ಕಿ ಹಿಂದಕ್ಕೆ ಬಿಸಾಕಿದಂತೆಲ್ಲ, ಬೆಳಗು ಚೂರು-ಚೂರೇ ಹತ್ತಿರಾಗತೊಡಗಿತ್ತು.