ಈ ದಾರುಣ ಸಾವಿನ ಪ್ರಕರಣದ ನಂತರ ಸುಮಾರು ದಿವಸ ನಮಗೆ ಇಡೀ ಪ್ರಪಂಚ ಖಾಲಿ ಖಾಲಿ ಅನಿಸಿತ್ತು. ಈ ಹುಡುಗರ ಸಂಪರ್ಕ ಹೆಚ್ಚಿದ್ದ ಮನೆಯವರ ಪಾಡು ಯಾರಿಗೂ ಬೇಡ. ಮಕ್ಕಳನ್ನು ಈ ದುಃಖದ ಮಡುವಿನಿಂದ ಆಚೆ ಸೆಳೆಯಲು ಕೆಲವರು ಅವರ ಮಕ್ಕಳು ಮತ್ತು ಅವರ ಸ್ನೇಹಿತರನ್ನು ದೂರದ ಊರಿಗೆ ಕಳಿಸಿದ್ದರು. ನನ್ನ ಗೆಳೆಯ ನಟರಾಜ, ಅವರ ತಂದೆ ಶ್ರೀ ಶಾಮಣ್ಣ ಅವರು ಇವರೆಲ್ಲರನ್ನೂ ತಮ್ಮ ನೆಂಟರ ಮನೆಗೆ ಕಳಿಸಿದ್ದು ಈಗಲೂ ನೆನೆಸಿಕೊಳ್ಳುತ್ತಾ ಇರುತ್ತಾನೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಾಲ್ಕನೇ ಕಂತು ನಿಮ್ಮ ಓದಿಗೆ

ಆಗ ಬೆಂಗಳೂರಿನಲ್ಲಿ ಸಾವಿರದ ಮೇಲೆ ಕೆರೆಗಳು ಇದ್ದವು ಎಂದು ಒಂದು ಸರ್ಕಾರೀ ಮಾಹಿತಿ, ಇದು ಲಕ್ಷ್ಮಣ ರಾವ್ ಅವರ ಸಮಿತಿ ನೀಡಿದ ವರದಿ. ಈಗ ಅದು ನೂರಕ್ಕೂ ಕಡಿಮೆ. ಸಾಣೆಗುರುವನ ಹಳ್ಳಿ ಕೆರೆ, ಶಿವನಹಳ್ಳಿ ಕೆರೆ ಎರಡೂ ಕೆರೆಗಳು ನಂತರ ಕಾಣದಂತೆ ಮಾಯವಾದವು, ಲ್ಯಾಂಡ್ ಮಾಫಿಯಾ ನುಂಗಿ ನೀರುಕುಡಿದವೋ. ಸಾಣೆಗುರುವನ ಹಳ್ಳಿಯ ಕೆರೆ ಅಥವಾ ಶಿವನಹಳ್ಳಿ ಕೆರೆ ಅಂದ ಕೂಡಲೇ ನನಗೆ ಒಂದು ದುರಂತ ಕಣ್ಣೆದುರು ಬಂದು ನಿಲ್ಲುತ್ತೆ. ಈಗಲೂ ಸಹ ಕಣ್ಣು ಮಂಜು ಆಗುತ್ತೆ. ಅದರ ಬಗ್ಗೆ ಹೇಳಬೇಕಾದರೆ ಕಣ್ಣು ಹನಿ ಗೂಡುತ್ತದೆ… ಅಂತ ನನ್ನ ಕತೆ ನಿಲ್ಲಿಸಿದೆ ಹದಿನೈದು ದಿವಸಗಳ ಹಿಂದೆ. ಈಗ ಆ ದುಃಖದ ಪ್ರಸಂಗ ಹಾಗೂ ಮುಂದಿನದು…

ನಾನು ಹೈಸ್ಕೂಲ್ ಓದುತ್ತಿದ್ದೆ. ನನ್ನ ಜತೆಯ ಕ್ಲಾಸಿನ ಹುಡುಗ ಅಶ್ವತ್ಥ, ಅವನ ಗೆಳೆಯ ಸಾಯಿಕುಮಾರ್, ಶಿವು ಮತ್ತು ಇನ್ನೂ ಕೆಲ ಹುಡುಗರು ಈಜಲು ಕೆರೆಗೆ ಇಳಿದರು. ಸ್ಕೂಲಿನ ಪರೀಕ್ಷೆ ಹತ್ತಿರ ಇತ್ತು. ಕೆಲವು ತರಗತಿಗಳಲ್ಲಿ ರಿವಿಷನ್ ಕ್ಲಾಸುಗಳು. ಈ ಕ್ಲಾಸುಗಳಿಗೆ ಎಂದು ಬಂದ ಈ ಹುಡುಗರು ಕೆರೆಯ ಹತ್ತಿರ ಆಡಲು ಹೋಗಿದ್ದರು. ಬೇಸಿಗೆ ಶುರು. ಮೈ ಸುಡುವ ಮಧ್ಯಾಹ್ನದ ಬಿಸಿಲು. ಕೆರೆಯಲ್ಲಿ ಆಗ ತಾನೇ ನೀರು ಬತ್ತಲು ಶುರುವಾಗಿತ್ತು. ಕೆಸರು ಕೆರೆಯ ಅಡಿಯಲ್ಲಿ ಮಡುಗಟ್ಟಿದ ಹಾಗೆ ಶೇಖರಗೊಂಡಿತ್ತು. ಕೆರೆಗೆ ಈಜಲು ಎಂದು ಈಜು ಬರದ ಹುಡುಗರು ಕೆರೆಗೆ ಇಳಿದರು.

ಕೆರೆಯಲ್ಲಿನ ನೀರಿನ ಸೆಳೆತಕ್ಕೆ ಸಿಕ್ಕ ಇಬ್ಬರನ್ನ ಅವರಲ್ಲೇ ಇಬ್ಬರು ಹುಡುಗರು ಹಿಡಿದು ಆಚೆ ಎಳೆದರು. ಮೂರು ಜನ ಪುಟ್ಟ ಹುಡುಗರು ಕೆಸರಿನಲ್ಲಿ ಕಾಲು ಹುದುಗಿ ಅದರಲ್ಲಿ ಮುಳುಗಿದರು. ಹುಡುಗರು ನೀರಿನಲ್ಲಿ ಮುಳುಗಿದ್ದಾರೆ ಎಂದು ಆಚೆ ಇದ್ದ ಹುಡುಗರು ಓಡಿ ಬಂದು ಹೇಳಿದರು. ಶಾಲೆಯಲ್ಲಿ ಇದ್ದವರು ದೊಡ್ಡ ಚಿಕ್ಕವರು ಅಲ್ಲಿಗೆ ಓಡಿದೆವು. ಅಷ್ಟರಲ್ಲಾಗಲೇ ಕೆಲವರು ಹುಡುಗರನ್ನು ಕೆರೆಯಿಂದ ಮೇಲೆ ತಂದು ಮಲಗಿಸಿದ್ದರು. ಯಾವ ಹುಡುಗನೂ ಉಸಿರಾಡದೆ, ಮಿಸುಕದೆ ನಿಶ್ಚಲವಾಗಿ ಬಿದ್ದಿದ್ದರು. ಶಾಲೆಗೆ ಹಾಕಿಕೊಂಡು ಬಂದಿದ್ದ ನಿಕ್ಕರು ಮೈಮೇಲಿತ್ತು, ಇನ್ನೂ ಒದ್ದೆ ಒದ್ದೆಯಾಗಿ. ಮೂರೂ ಹುಡುಗರ ಪ್ರಾಣ ಅದಾಗಲೇ ಹಾರಿ ಹೋಗಿತ್ತು. ತೀರಿಹೋದ ಹುಡುಗರಲ್ಲಿ ಅಶ್ವತ್ಥ ಅವರಮ್ಮನಿಗೆ ಒಬ್ಬನೇ ಮಗ, ತಂದೆ ಇರಲಿಲ್ಲ ಸಾಯಿಕುಮಾರ್ ಅಣ್ಣ ವೆಂಕಟ್ ನಮ್ಮ ಜತೆ ಓದುತ್ತಿದ್ದ. ಅವರ ತಂದೆ ವೈದ್ಯರು. ಮೂರನೇ ಹುಡುಗ (ಅವನ ಹೆಸರು ಶಿವು ಇರಬೇಕು) ನಮ್ಮ ಸ್ಕೂಲ್‌ನವನು ಅಲ್ಲ. ಈ ಸಾವು, ಕೆರೆ ಅಂಗಳದಲ್ಲಿ ಹೆಣವಾಗಿ ಬಿದ್ದಿದ್ದ ಮೂರು ಪುಟ್ಟ ಮಕ್ಕಳ ಚಿತ್ರ, ಸುತ್ತಲೂ ಮೌನವಾಗಿ ರೋಧಿಸುತ್ತಾ ನಿಂತಿದ್ದ ನಾವು, ಪಿಸು ಪಿಸು ಮಾತು ಆಡುತ್ತಿದ್ದ ನಮ್ಮ ಮೇಡಮ್ಮುಗಳು, ಪುಟ್ಟ ಮಕ್ಕಳು ಅನ್ಯಾಯವಾಗಿ ಪ್ರಾಣ ತೆಕ್ಕೊಂಡರು, ಕ್ಲಾಸಿಗೆ ಬಂದಿದ್ದರೆ ಹೀಗಾಗ್ತಾ ಇರಲಿಲ್ಲ ಎಂದು ಬಡ ಬಡಿ ಸುತ್ತಿದ್ದ ನಮ್ಮ ಸಾರ್ ಶಿಕ್ಷಕರು….

ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ, ನೆನೆದರೆ ಕಣ್ಣು ಒದ್ದೆ ಆದ ಹಾಗೆ. ನಮ್ಮ ವಯಸ್ಸಿನ ಹುಡುಗರ ದಾರುಣ ಸಾವು ಇದೇ ಮೊದಲು ನಾವು ನೋಡಿದ್ದು. ಬಹುಶಃ ಅದೇ ಕಾರಣಕ್ಕೆ ಅದಿನ್ನೂ ಮೆದುಳಿನ ಒಂದು ಮೂಲೆಯಲ್ಲಿ ಬಲವಾಗಿ ಇಷ್ಟು ವರ್ಷಗಳ ನಂತರವೂ ಕುಳಿತು ಬಿಟ್ಟಿದೆ.

ಈ ದಾರುಣ ಸಾವಿನ ಪ್ರಕರಣದ ನಂತರ ಸುಮಾರು ದಿವಸ ನಮಗೆ ಇಡೀ ಪ್ರಪಂಚ ಖಾಲಿ ಖಾಲಿ ಅನಿಸಿತ್ತು. ಈ ಹುಡುಗರ ಸಂಪರ್ಕ ಹೆಚ್ಚಿದ್ದ ಮನೆಯವರ ಪಾಡು ಯಾರಿಗೂ ಬೇಡ. ಮಕ್ಕಳನ್ನು ಈ ದುಃಖದ ಮಡುವಿನಿಂದ ಆಚೆ ಸೆಳೆಯಲು ಕೆಲವರು ಅವರ ಮಕ್ಕಳು ಮತ್ತು ಅವರ ಸ್ನೇಹಿತರನ್ನು ದೂರದ ಊರಿಗೆ ಕಳಿಸಿದ್ದರು. ನನ್ನ ಗೆಳೆಯ ನಟರಾಜ, ಅವರ ತಂದೆ ಶ್ರೀ ಶಾಮಣ್ಣ (ಖ್ಯಾತ ವಕೀಲರು, ಸಿನಿಮಾಟೋಗ್ರಫಿ ಕೇಸುಗಳಲ್ಲಿ ಪರಿಣತರು)ಅವರು ಇವರೆಲ್ಲರನ್ನೂ ತಮ್ಮ ನೆಂಟರ ಮನೆಗೆ ಕಳಿಸಿದ್ದು ಈಗಲೂ ನೆನೆಸಿಕೊಳ್ಳುತ್ತಾ ಇರುತ್ತಾನೆ.

ಎರಡೂ ಕೆರೆಗಳೂ ಕಾಲಾನಂತರದಲ್ಲಿ ಎಲ್ಲ ಕೆರೆಗಳ ಹಾಗೆ ಹೊಸ ಬಡಾವಣೆಗಳಾಗಿ ಪರಿವರ್ತನೆಗೊಂಡವು, ಇತಿಹಾಸ ಸೇರಿದವು. ಅವುಗಳ ಮೇಲೆ ಸೌಧಗಳು ಬಂದವು, ಸೌಧಗಳಲ್ಲಿ ಉಳ್ಳವರು ಬಂದು ಸೇರಿದರು.

ಪವರ್ ಹೌಸ್‌ನಿಂದ ಮುಂದೆ ಹೋದರೆ ಎರಡನೇ ಬ್ಲಾಕ್ ಮುಗಿದು ಮೊದಲನೇ ಬ್ಲಾಕ್. ಹಾಗೇ ಮುಂದೆ ಹೋಗಿ, ಅಲ್ಲಿ ಜಗದ್ವಿಖ್ಯಾತ ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ ಕಾರ್ಖಾನೆ. ಅದರಲ್ಲೇ ಸ್ಯಾಂಡಲ್ ಸೋಪ್ ತಯಾರಾಗುವುದು. ಇದು ಅಂದರೆ ಸೋಪು ಕಾರ್ಖಾನೆ ವಿಶ್ವೇಶ್ವರಯ್ಯ ಅವರ ಯೋಜನೆ, ಕನಸಿನ ಕೂಸು ಅಂತ ಕೇಳಿದ್ದೆ. ಶಾಸ್ತ್ರಿ ಎನ್ನುವ ತಜ್ಞರು ಆಗಲೇ ಹೊರದೇಶಕ್ಕೆ ಹೋಗಿ ಗಂಧದ ಸೋಪು ತಯಾರಿಕೆ ಅರಿತುಕೊಂಡು ಬಂದಿದ್ದರು. ಅದನ್ನು ಇಲ್ಲಿ ಪ್ರಯೋಗ ಮಾಡಲು ಎಂದೇ ಸರ್ಕಾರ ಅವರನ್ನು ವಿದೇಶಕ್ಕೆ ಕಳಿಸಿತ್ತಂತೆ. ಇಲ್ಲಿ ಬರೀ ಸ್ಯಾಂಡಲ್ ಸೋಪು ಮಾತ್ರ ತಯಾರಿಸುತ್ತಾರೆ ಎಂದು ತಿಳಿದಿದ್ದೆ. ಆದರೆ ಅಲ್ಲಿ ಬೇರೆ ಬೇರೆ ಹೆಸರಿನ ಅಂತರ್ರಾಷ್ಟ್ರೀಯ ಖ್ಯಾತಿಯ ಹಲವು ವಿಭಿನ್ನ ಸೋಪುಗಳು ತಯಾರಾಗುತ್ತದೆ ಎಂದು ನಂತರ ಗೊತ್ತಾಯಿತು. ನಂತರ ಇಲ್ಲಿ ಗಂಧದ ಸಾಬೂನು ತಯಾರಿಕೆಗೆ ಬೇಕಾದ ಗಂಧದ ಎಣ್ಣೆಯನ್ನು ಸರ್ಕಾರ ಕೊಡುತ್ತಿಲ್ಲ ಎಂದು ಕೇಳಿದ್ದೆ. ಸಮಸ್ಯೆ ಪರಿಹಾರ ಆಯಿತೋ ಇಲ್ಲವೋ, ಆದರೆ ಸರ್ಕಾರಿ ಹಿರಿಯ ಅಧಿಕಾರಿಗಳ ವೈಮನಸ್ಯ ಹೇಗೆ ಒಂದು ವ್ಯವಸ್ಥೆಯನ್ನು ಹಾಳು ಗೆಡವಬಹುದು ಎಂದು ಅಸಹ್ಯ ಅನಿಸಿತ್ತು. ಈಗ ಅಂಗಡಿಗಳಲ್ಲಿ ಪೇರಿಸಿರುವ ಸ್ಯಾಂಡಲ್ ಸೋಪು ನೋಡಿದಾಗ ನಮ್ಮ ಅಂದಿನ ಪಾಕೆಟ್ ಮನಿ ನೆನಪು ಒದ್ದುಕೊಂಡು ಬರುತ್ತೆ. ಈ ಫ್ಯಾಕ್ಟರಿ ನಮ್ಮ ಕಾಲೇಜು ವಿದ್ಯಾಭ್ಯಾಸದ ಜತೆ ಒಂದು ರೀತಿಯಲ್ಲಿ ತಳುಕು ಹಾಕಿಕೊಂಡಿದೆ. ಕರ್ನಾಟಕ ಸರ್ಕಾರ ಒಂದು ಯೋಜನೆ ಶುರು ಮಾಡಿತು. Earn while you learn ಕಲಿಕೆ ಜತೆ ದುಡಿತ ಎಂದು ಈ ಯೋಜನೆ ಹೆಸರು! ಇದರಂತೆ ವಿದ್ಯಾರ್ಥಿಗಳಿಗೆ ಕಾಲೇಜು ಮುಗಿದ ನಂತರ ಹಣ ಗಳಿಕೆಗೆ ಒಂದು ಯೋಜನೆ ರೂಪಿತವಾಗಿತ್ತು. ಬಹುಶಃ ಇದು ಆಗಿನ ನಮ್ಮ ರಾಜ್ಯದ ಈ ಯೋಜನೆ ದೇಶದಲ್ಲೇ ಪ್ರಪ್ರಥಮ ಇರಬಹುದು. ಅದರಂತೆ ಸೋಪ್ ಫ್ಯಾಕ್ಟರಿಯಲ್ಲಿ ಕೆಲಸ. ಕೆಲಸ ಏನು ಅಂದರೆ ಸೋಪುಗಳನ್ನು ಜೆಲ್ಲಿ ಕಾಗದದಲ್ಲಿ ಸುತ್ತಿ ಅದನ್ನು ಕಾಗದದ ಡಬ್ಬದಲ್ಲಿ ಇರಿಸುವುದು. ಸೋಪುಗಳನ್ನು ಸುತ್ತಿ ಸುತ್ತಿ ಇಡುತ್ತಿದ್ದರಿಂದ ಅದರ ಸುವಾಸನೆ ಇಡೀ ದೇಹಕ್ಕೆ ಅಡರುತ್ತಿತ್ತು.

ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ, ನೆನೆದರೆ ಕಣ್ಣು ಒದ್ದೆ ಆದ ಹಾಗೆ. ನಮ್ಮ ವಯಸ್ಸಿನ ಹುಡುಗರ ದಾರುಣ ಸಾವು ಇದೇ ಮೊದಲು ನಾವು ನೋಡಿದ್ದು. ಬಹುಶಃ ಅದೇ ಕಾರಣಕ್ಕೆ ಅದಿನ್ನೂ ಮೆದುಳಿನ ಒಂದು ಮೂಲೆಯಲ್ಲಿ ಬಲವಾಗಿ ಇಷ್ಟು ವರ್ಷಗಳ ನಂತರವೂ ಕುಳಿತು ಬಿಟ್ಟಿದೆ.

ರಸ್ತೆಯಲ್ಲಿ ನಡೆಯಬೇಕಾದರೆ ಜನ ತಿರುಗಿ ತಿರುಗಿ ನೋಡುತ್ತಿದ್ದರು, ಹಾಗಿತ್ತು ಸುಗಂಧ. ಫ್ಯಾಕ್ಟರಿಯ ಹೊರಗೆ ಸಹ ಇದರ ಸುಗಂಧವೋ ಸುಗಂಧ. (ಒಂದು ಸಲ ಇಂಡಸ್ಟ್ರಿಯಲ್ ಟೌನ್ ಬಳಿ ಹೋಗುತ್ತಿದ್ದೆ. ನನ್ನ ಮುಂದೆ ಸರಿದು ಹೋದ ಹೆಂಗಸರಿಂದ ಇಂಗಿನ ವಾಸನೆ ಅಂದರೆ ವಾಸನೆ. ಅವರು ಇಂಗು ಪ್ಯಾಕಿಂಗ್ ಕಾರ್ಖಾನೆಯಿಂದ ಆಚೆ ಬಂದಿದ್ದರು). ಸೋಪ್ ಫ್ಯಾಕ್ಟರಿಯ ಈ ಕೆಲಸ ದುಡ್ಡು ಕೊಡುತ್ತಿತ್ತು, ನಮಗೆ ಪಾಕೆಟ್ ಮನಿ ಆಗುತ್ತಿತ್ತು..! ಮೆಜೆಸ್ಟಿಕ್ ಸುತ್ತ ಮುತ್ತಲಿನ ಥಿಯೇಟರುಗಳ ಮಾರ್ನಿಂಗ್ ಶೋ ಗಳಿಗೆ, ವಿಠ್ಠಲ್ ವಿಹಾರ್‌ನಲ್ಲಿ ತಿಂಡಿ ಕಾಫಿಗೆ, ವಿಷ್ಣು ಭವನದಲ್ಲಿ ಬ್ರೆಡ್ ಟೋಸ್ಟ್‌ಗೆ ಇವು ವೆಚ್ಚ ಆಗುತ್ತಿತ್ತು. ಈ ಸೋಪ್ ಫ್ಯಾಕ್ಟರಿ ಮುಂದಿನ ಸರ್ಕಲ್‌ನಲ್ಲಿ ರಾಜಾಜಿನಗರ ಉದ್ಘಾಟನೆಗೊಂಡ ಶಿಲಾ ಫಲಕ, ಈಗಲೂ ಇದೆ. ಅದರ ಜತೆಗೆ ರಾಣಿ ಅಬ್ಬಕ್ಕ ಪ್ರತಿಮೆ ಸಹ ಇದೆ. ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ ಹೋರಾಡಿದ ತುಳುವರ ವೀರ ರಾಣಿ. ಆಕೆಯ ಪ್ರತಿಮೆ ತಯಾರಾದ ನಂತರ ಅದನ್ನು ಎಲ್ಲಿ ಪ್ರತಿಷ್ಠಾಪಿಸಬೇಕು ಎಂದು ವಿಪುಲ ಚರ್ಚೆ ನಡೆದು ಕೊನೆಗೆ ಈ ಸ್ಥಳ ಆಯ್ಕೆ ಆಯಿತು! ತುಳುಕೂಟದ ಅಧ್ಯಕ್ಷರಾಗಿದ್ದ ನನ್ನ ಗೆಳೆಯ ದಿವಂಗತ ಆನಂದ ಶೆಟ್ಟಿ ಅವರು ಅಬ್ಬಕ್ಕನ ಪ್ರತಿಮೆ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಅಬ್ಬಕ್ಕ ಕುರಿತ ಪುಸ್ತಕ ಸಹ ಅವರು ಬರೆದರು. ಮತ್ತೂ ಎರಡು ಪ್ರತಿಮೆಗಳು ಮುಸುಕು ತೊಟ್ಟು ಅಲ್ಲಿ ನಿಂತಿವೆ. ಅನಾವರಣಕ್ಕೆ ಬಹುಶಃ ಸಮಯ ಇನ್ನೂ ಕೂಡಿ ಬಂದಿಲ್ಲ!

(ಜಿ. ಆರ್. ವಿಶ್ವನಾಥ್)

ರಾಜಾಜಿನಗರದ ಖ್ಯಾತರು

ರಾಜಾಜಿನಗರದ ನಿವಾಸಿಯಾಗಿದ್ದ ಖ್ಯಾತರುಗಳ ಬಗ್ಗೆ ನೋಡೋಣ. ಕ್ರಿಕೆಟ್ ತಾರೆ ಜಿ. ಆರ್. ವಿಶ್ವನಾಥ್ ಇಲ್ಲಿಯವರು. ಇ ಎಸ್ ಐ ರಸ್ತೆಗೆ ಸಮಾನಾಂತರವಾಗಿದ್ದ ರಸ್ತೆಯಲ್ಲಿ ಅವರು ಇದ್ದದ್ದು. ಅವರ ಸಂಗಡ ಆಟ ಆಡಿರುವ ಸುಮಾರು ಹಿರಿಯರು (ಆಗಿನ ಕಿರಿಯರು) ಈಗಲೂ ಅದನ್ನು ಖುಷಿಯಿಂದ ನೆನೆಸಿಕೊಳ್ಳುತ್ತಾರೆ. ಅಂಥವರಲ್ಲಿ ಶ್ರೀ ಶಿವನಂಜಪ್ಪ ಒಬ್ಬರು. ಇವರ ತಮ್ಮ ಶ್ರೀ ವೈದ್ಯನಾಥ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕ. ಹಲವು ಉತ್ತಮ ಸಿನಿಮಾಗಳು ಈತನ ನಿರ್ಮಾಣ. ತಲಾಖ್ ಎನ್ನುವ ಒಂದು ಸಂವೇದನಾ ಚಿತ್ರ ಈಚೆಗೆ ತೆಗೆದರು. ಅದಕ್ಕೆ ಅಂತರ್ರಾಷ್ಟ್ರೀಯ ಮನ್ನಣೆ ಸಹಾ ದೊರೆಯಿತು. ವಿಶೇಷ ಅಂದರೆ ಅವರ ಮಕ್ಕಳಿಬ್ಬರೂ ಈ ಚಿತ್ರದಲ್ಲಿ ನಟಿಸಿರುವುದು.

(ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್)

ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಮೊದಲನೇ ಬ್ಲಾಕ್ ನಿವಾಸಿ. ಪ್ರೊ. ಅ.ರಾ.ಮಿತ್ರಾ ಮತ್ತು ಪ್ರೊ ಎಂ ಎಚ್. ಕೃಷ್ಣಯ್ಯ ಮೊದಲನೇ ಬ್ಲಾಕ್‌ನಲ್ಲಿದ್ದರು. ಬಸವೇಶ್ವರ ಶಾಲೆಯ ಹತ್ತಿರ ಹರಿಹರಪ್ರಿಯ ಅವರಿದ್ದರು ಮತ್ತು ಅವರ ಮನೆ ಹೆಸರು ಪುಸ್ತಕ ಮನೆ. ಇಲ್ಲಿ ಅವರ ಅಪೂರ್ವ ಪುಸ್ತಕ ಸಂಗ್ರಹ ಇತ್ತು. ನಿಯಮಿತವಾಗಿ ಖ್ಯಾತ ಸಾಹಿತಿಗಳೊಬ್ಬರ ಪುಸ್ತಕ ಪ್ರದರ್ಶನ ಇರುತ್ತಿತ್ತು. ಸಂಬಂಧ ಪಟ್ಟ ಸಾಹಿತಿಗಳ ಕುರಿತಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಶತಾವಧಾನಿ ಗಣೇಶ್ ಐದನೇ ಬ್ಲಾಕ್‌ನಲ್ಲಿ ಇದ್ದ ನೆನಪು. ಸುಮಾರು ಸಾಹಿತಿಗಳು ನಂತರ ಇಲ್ಲೇ ಬಂದು ನೆಲೆಸಿದರು. ಖ್ಯಾತ ವರ್ಣಚಿತ್ರ ಕಲಾವಿದ ರುಮಾಲೆ ಚನ್ನಬಸಪ್ಪ ಅವರ ಕಲಾ ಗ್ಯಾಲರಿ ಮೂರನೇ ಬ್ಲಾಕ್‌ನಲ್ಲಿತ್ತು. ಗ್ಯಾಲರಿ ವೀಕ್ಷಿಸಲು ಹಲವಾರು ಗಣ್ಯರು ಭೇಟಿ ನೀಡುತ್ತಿದ್ದರು. ಅಂತಹ ಗಣ್ಯರನ್ನು ಹತ್ತಿರದಿಂದ ಕಂಡು ಕಣ್ಣ ತುಂಬಿಕೊಳ್ಳುತ್ತಿದ್ದೆವು. ಅವರು ಕಾಯಕಲ್ಪ ಚಿಕಿತ್ಸೆ ಪಡೆದದ್ದು ಆಗ್ಗೆ ನೂತನ ಚಿಕಿತ್ಸೆ ಅನಿಸಿದ್ದು, ಒಂದು ಸುದ್ದಿಯಾಗಿತ್ತು. ಮುದುಕರು ಹುಡುಗರು ಆಗ್ತಾರಂತೆ….. ಅಂತ ನಾವು ಮಾತಾಡಿಕೊಂಡೆವು! ಸಮಯ ಸಿಕ್ಕಾಗಲೆಲ್ಲಾ ಅವರ ಮನೆ ಮುಂದೆ ಹೋಗಿ ನಿಂತು ಅವರು ಹುಡುಗ ಹೇಗೆ ಆಗಿದ್ದಾರೆ ಎಂದು ಕುತೂಹಲದಿಂದ ನೋಡುತ್ತಾ ನಿಲ್ಲುತ್ತಿದ್ದೆವು. ನಮಗೆ ಏನೂ ಹೊಸತು ಕಾಣುತ್ತಾ ಇರಲಿಲ್ಲ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ಕಂಠೀರಾವ್ ಅವರು ಮೊದಲನೇ ಬ್ಲಾಕ್‌ನಲ್ಲಿದ್ದರು ಎಂದು ಕೇಳಿದ್ದೆ. ಖ್ಯಾತ ನೃತ್ಯ ಕಲಾವಿದೆ ಉಷಾ ದಾತಾರ್ ಪ್ರಕಾಶ ನಗರದಲ್ಲಿ ಇದ್ದರು. ಇವರು ಆಗ bel ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಆಗಾಗ್ಗೆ ಅವರ ಹೆಸರು ಪತ್ರಿಕೆಗಳಲ್ಲಿ ಬರಲು ಶುರು ಆಗಿತ್ತು.

(ಮುಂದುವರೆಯುವುದು…)