‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು. ಹಾಗೆ ಅನ್ನಬಾರದಿತ್ತು ಅವಳು ನನಗೆ. ನಾನು ಎಷ್ಟು ಕ್ಲೋಸಾಗಿದ್ದೆ ಅವಳ ಹತ್ತಿರ. ನನ್ನ ಎಲ್ಲ ಪರ್ಸನಲ್ ವಿಷಯಗಳನ್ನು ಅವಳಿಗೆ ಮೊದಲು ಹೇಳುತ್ತಿದ್ದೆ.’ ಎಂದು ಬೇಸರಗೊಂಡನು.
ಎಚ್.ಆರ್.ರಮೇಶ  ಬರೆದ ಕತೆ ಈ ಭಾನುವಾರದ ನಿಮ್ಮ ಓದಿಗೆ

 

‘ಏ ಪಾಪ ಬಾರ ಇಲ್ಲಿ’ ಎಂದು ಮುವತ್ತೊಂಬತ್ತುವರೆ ವರ್ಷದ ಮಹದೇವನನ್ನು ಶಕುಂತ್ಲಜ್ಜಿ ಕರೆದಳು. ಅವಳು ಹಾಗೆ ಅವನನ್ನು ಕರೆಯುವುದಕ್ಕೂ ಮುಂಚೆ, ರಸ್ತೆಗೆ ಡಾಂಬರನ್ನು ತೇಪೆ ಹಾಕುತ್ತಿದ್ದುದನ್ನು ನೋಡುತ್ತಿದ್ದಳು ತನ್ನ ತೊಟ್ಟಿ ಮನೆಯ ಮುಂದಿನ ಅಂಗಳದಲ್ಲಿ ಕುಳಿತು. ಪಕ್ಕದಲ್ಲಿ ಮಧ್ಯಾಹ್ನ ಮಲ್ಲಿಗೆ ನಡು ಹಗಲಲ್ಲಿ ಅರಳಲು ತವಕಿಸುತ್ತಿತ್ತು. ಅವಳ ಮನಸ್ಸಿನಲ್ಲಿ ದೇಶದ ದೊರೆಗಳು, ಮಂತ್ರಿಗಳು ಬುಲ್ಡೋಜರ್ ಅಡಿಯಲ್ಲಿ ಚಪಾತಿ ಥರ ಅಪ್ಪಚ್ಚಿಯಾಗುತ್ತಿದ್ದವು. ರಸ್ತೆಯ ಡಾಂಬರು ಮತ್ತು ಈ ರಾಜಕೀಯ ವ್ಯಕ್ತಿಗಳು ಏಕಕಾಲದಲ್ಲಿ ಬುಲ್ಡೋಜರಿನ ಅಡಿಯಲ್ಲಿ ಚಪ್ಪಟೆಯಾಗುತ್ತಿದ್ದವು. ಅವರು ಥೇಟ್ ದಿನಪತ್ರಿಕೆಗಳಲ್ಲಿ ಬರುವ ಕ್ಯಾರಿಕೇಚರ್ ಚಿತ್ರಗಳಂತೆ ವಕ್ರವಕ್ರವಾಗಿ ವಿಕಾರವಾಗಿ ಸೊಟ್ಟ ಸೊಟ್ಟ ಮೂತಿಗಳಿಂದ ನೋಡಿದವರು ಥಟ್ಟನೆ ನಗುವಂತಿದ್ದವು. ಹೈಕಳುಗಳೇನಾದರು ನೋಡಿದರೆ ಕಿಲಕಿಲ ಅಂತ ನಗದೇ ಇರಲು ಸಾಧ್ಯವೇ ಇರಲಿಲ್ಲ. ಶಕುಂತ್ಲಜ್ಜಿ ಕಾಣುತ್ತಿದ್ದುದು ಹಗಲಲ್ಲಿ ಹಗಲಗನಸಲ್ಲ. ವಾಸ್ತವದಲ್ಲಿ ತನ್ನದೇ ದೇಶದ ರಾಜಕೀಯ ವ್ಯಕ್ತಿಗಳನ್ನು. ಅವಳ ಆ ಸಿಟ್ಟಿನಲ್ಲಿ ಪಕ್ಷಭೇಧವಿಲ್ಲದೆ ಎಲ್ಲರೂ ಸುಟ್ಟು ಹೋಗುತ್ತಿದ್ದರು.

ಕಳೆದ ಚುನಾವಣೆಯಲ್ಲಿ ಒಂದಿಬ್ಬರು ರಾಜಕಾರಣಿಗಳು ಓಟು ಕೇಳಲು ಅವಳ ಮನೆಗೆ ಬಂದಾಗ ಅವರ ಒಳ ಉಡುಪುಗಳೆಲ್ಲ ಬೆವರಲ್ಲಿ ನೆಂದು ಹೋಗುವಂತೆ ಛೀಮಾರಿ ಹಾಕಿ ಕಳುಹಿಸಿದ್ದಳು. ಬಂದು ಅವರು ಏನು ಮಾಡಿದರು ಅಂದರೆ, ಅವಳ ಕೈಯಿಗೆ ಅಚ್ಚ ಹೊಸದಾದ ಪಿಂಕ್ ನೋಟನ್ನು ಇಡಲು ಹೋದಾಗ, ಶಕುಂತ್ಲಜ್ಜಿ ಸರ್ರನೆ ಮನೆಯ ಒಳಗೆ ಹೋಗಿ, ಕತ್ತಲ ಕೋಣೆಯಲ್ಲಿ ಕೈಗಳನ್ನೇ ಕಣ್ಣುಮಾಡಿಕೊಂಡು ಯಾವುದೋ ಒಂದು ಮೂಲೆಯಿಂದ ಬೊಗಸೆತುಂಬ ಹಳೆಯ ಐನೂರು, ಸಾವಿರ ರುಪಾಯಿಗಳ ನೋಟುಗಳನ್ನು ತಂದು ಅವರ ತಲೆಮೇಲೆ ಸುರುವಿ, ‘ನನ್ನ ಗಂಡ ಕಷ್ಟಪಟ್ಟು ಬಾಳೆ ಬೆಳೆದು ಸಂಪಾದಿಸಿದ ದುಡ್ಡು, ಸಾಯುವಾಗ ಕಷ್ಟಕಾಲಕ್ಕೆ ಆಗುತ್ತೆ ಎಂದು ಇಟ್ಟಿದ್ದ ಇವನ್ನ, ಕಾಲಿ ಕಾಗದ ಮಾಡಿಬಿಟ್ರಲ್ಲೊ ಹಲ್ಕಟ್ ನನ್ ಮಕ್ಕಳಾ, ತಗಳ್ರೋ ಮುಂಡೆ ಮಕ್ಕಳಾ, ಎಷ್ಟು ಬೇಕು ಎಂದು ಬೈದಿದ್ದಲ್ಲದೆ, ಕುಡಿಯಕೆ ನಲ್ಲಿಯಲಿ ನೀರು ಬರದಿದ್ದರೂ ಹೋಗ್ಲಿ, ಅದೆಂತದೋ ಭಾರ್ತ ಮಾಡ್ತಿವಿಯಂತ ರೇಡಿಯೋದಲ್ಲಿ ಬರೀ ಪೂಸಿ ಬಿಡುತ್ತಿರೆನೋ , ಓಟು ಕೇಳಕೆ ಆದರೆ ನಾಯಿ ಬಾಲ ಅಳ್ಳಾಡಿಸಿಕೊಂಡು ಬರುವ ಹಂಗೆ ಬರುತ್ತೀರಾ ಅಮೇಲೇ ಕ್ಯಾರೆ ಅನ್ನಲ, ಕೇರಿ ಅಂಗಳ ಎತ್ತಕಡೆ ಐತೆ ಅಂತ ತಿರುಗಿ ನೋಡಲ್ಲ’ ಎಂದು ಬೈದು ಕಳುಹಿಸಿದ್ದಳು. ಅವರು ಹೋದ ದಾರಿಗೆ ಮಣ್ಣನ್ನು ತೂರುತ್ತ ‘ನನ್ನ ಗಂಡ ದುಡಿದ ದುಡ್ಡನ್ನು ಅನ್ಯಾಯವಾಗಿ ಬರಿ ಕಾಗದ ಮಾಡಿದ್ರಲ್ಲೋ ಮನೆಹಾಳ ನನ್ನ ಮಕ್ಕಳಾ’ ಎಂದು ಕಿರುಚಾಡಿದ್ದಳು.

ಅಲ್ಲಿಗೆ ಬಂದವರಲ್ಲಿ ಯಾರೋ ಒಬ್ಬ, ‘ಹೊಸ ನೋಟು ಕೊಡುತ್ತಾರ ಬ್ಯಾಂಕಲ್ಲಿ, ಇವುನ್ನ ಕೊಟ್ಟು ಅವುನ್ನ ಇಸಕ ಹೋಗಜ್ಜಿ’ ಎಂದದ್ದಕ್ಕೆ, ‘ಈಗಿರೋ ನಿನ್ನ ಹೆಂಡತಿನೂ ಸಂತೇಲಿ ಮಾರಿ ಬದಲಿಗೆ ಹೊಸಬಳನ್ನು ಕೊಂಡುಕೊ ಹೋಗೋ ಬಾಡ್ಕೋ, ಬೋಸುಡಿ ಮಗನೆ ಬಂದ ಹೇಳಕೆ’ ಎಂದು ತನ್ನ ದೇಹದ ಒಳಗಿನ ಮೂಲೆ ಮೂಲೆಯಲ್ಲಿ ಅಡಗಿದ್ದಂತಹ ಕ್ರೋಧವನ್ನೆಲ್ಲ ಕ್ರೂಢೀಕರಿಸಿಕೊಂಡು ಜೀವಮಾನ ವಿಡೀ ಇಟ್ಟುಕೊಂಡಿದ್ದ ಸಿಟ್ಟನ್ನು ಹೊರಗಡೆ ಚಿಮ್ಮಿ ಖಾಲಿ ಮಾಡುತ್ತಿದ್ದಳು. ಅಜ್ಜಿಗೆ, ಅಂದಾಜಲ್ಲ, ಸರಿಯಾಗಿಯೇ ತೊಬ್ಬಂತ್ತೈದು ವರ್ಷಗಳಾಗಿದ್ದವು. ಬೆಳಗಾವಿಗೆ ಗಾಂಧೀಜಿ ಬರುವುದಕ್ಕೂ ಐದು ವರ್ಷ ಮುಂಚೆ ಹುಟ್ಟಿದ್ದು ಎಂದು ಯಾವಾಗಲೂ ಹೇಳುತ್ತಿದ್ದಳು. ಮಹಾದೇವ ಕೆಮ್ಮುತ್ತ ಶಕುಂತ್ಲಜ್ಜಿ ಹತ್ತಿರ ಬಂದನು. ‘ಆಸ್ಪತ್ರೆಗೆ ತೋರಿಸುವುದಕ್ಕೆ ಆಗಲಿಲ್ಲವೇನೋ ಪಾಪ, ಯಾಕಿಂಗೆ ಒಂದೇ ಸಮ ಕೆಮ್ಮುತ್ತಿದ್ದೀಯ?’ ಎಂದು ಕೇಳಿದಳು. ‘ಹೋಗಿದ್ದೆ ಅಜ್ಜಿ, ಈಗ ಸ್ವಲ್ಪ ಕಡಿಮೆ ಆಗಿದೆ. ಇನ್ನೊಂದೆರೆಡುಮೂರು ದಿನದಲ್ಲಿ ಕಡಿಮೆ ಆಗುತ್ತೆ ಎಂದು ಡಾಕ್ಟರ್ ಹೇಳಿದರು’ ಎಂದ. ‘ವಸಿ ನಿಲ್ಲು ಬರುತ್ತೀನಿ’ ಎಂದು, ಒಳಗೆ ಹೋಗಿ, ಮಡಿಲಲ್ಲಿ ಒಣಗಿರುವ ಯಾವುದೋ ಸೊಪ್ಪನ್ನು ಅವನಿಗೆ ಕೊಟ್ಟು, ಒಂದು ಚಮಚ ಘಾಟು ಇರುವ ಜೇನುತುಪ್ಪದಲ್ಲಿ ಬಿಸಿನೀರಿಗೆ ಹಾಕಿ, ಲೋಟವನ್ನು ಒಂದು ಪ್ಲೇಟಲ್ಲಿ ಮುಚ್ಚಿ, ಐದು ನಿಮಿಷ ಆದಮೇಲೆ ಕುಡಿ ಪಾಪ, ಕೆಮ್ಮು ವೋಗುತ್ತೆ’ ಎಂದು ಹೇಳಿ, ಮತ್ತೆ ಮುಂದುವರೆಸಿ, ‘ಇನ್ನೊಂದು ಸತ್ತೋಯ್ತಂತೆ, ನಿಮ್ಮ ಅಮ್ಮ ಸಿಕ್ಕಿದ್ದಳು , ಹಂಗೆ ಹೇಳ್ತಿದ್ದಳು, ಹೋಗಲಿ ಬಿಡು ಪಾಪ, ತಲೆಗೆ ಹಾಕ್ಕೊಬೇಡ, ಒಳ್ಳೆ ಮಗ ಹುಟ್ಟಕೆ ಹಿಂಗೆಲ್ಲ ಆಗ್ತಿರಬಹುದು. ದೇವರು ಮನುಷ್ಯರ ಥರನೆ? ಭೇದ ಭಾವ ಮಾಡೋಕೆ? ಅವನಿಗೆ ಗೊತ್ತಿಲ್ಲವೇ, ಯಾರಿಗೆ ಏನೇನು ಕೊಡಬೇಕು, ಯಾರಿಗೆ ಏನೇನು ಬೇಡ ಅನ್ನೋದು?’ ಎಂದು ಸಮಾಧಾನದ ಮಾತನ್ನು ಹೇಳಿದಳು.

ಮಹಾದೇವ ಮತ್ತು ಅವನ ಹೆಂಡತಿ ಲಲಿತ ಇದರ ಬಗ್ಗೆ ಅಷ್ಟೊಂದಾಗಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಈ ರೀತಿ ಅವಳಿಗೆ ಮೂರನೇ ಭಾರಿ ಆಗಿದ್ದುದರಿಂದ ಹಾಗೂ ಅದರ ಬಗ್ಗೆ ಯೋಚನೆ ಮಾಡಿ ಮಾಡಿ ಮನಸ್ಸು ಒಂದು ರೀತಿಯಲ್ಲಿ ಕಲ್ಲು ಆಗಿಬಿಟ್ಟಿತ್ತು. ಲಲಿತಳಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ತುಂಬಾ ಪ್ರಸಿದ್ಧರಾಗಿದ್ದರಲ್ಲದೆ ತುಂಬಾ ಮಾನವೀಯತೆ ಇರುವ ವ್ಯಕ್ತಿಯಾಗಿದ್ದರು. ಜೊತೆಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದ್ದುದರಿಂದ ತುಂಬಾ ಸಂವೇದನಾಶೀಲರಾಗಿದ್ದು ಈ ವೈದ್ಯರನ್ನು ಕಂಡರೆ ಬಡವರಿಗೆ ತುಂಬಾ ಇಷ್ಟವಾಗುತ್ತಿತ್ತು. ಅವರು ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಿರಲಿಲ್ಲ. ಅವರು ‘ಮುಂದಿನ ಬಾರಿ ಅಬೋರ್ಟ್ ಆಗುವುದಕ್ಕೆ ಚಾನ್ಸೇ ಇಲ್ಲ. ಇದನ್ನು ನನ್ನ ವೃತ್ತಿಯಲ್ಲಿನ ಒಂದು ಸವಾಲಾಗಿ ಸ್ವೀಕರಿಸಿರುವೆ’ ಎಂದು ಅವರಿಬ್ಬರನ್ನೂ ಕೂರಿಸಿಕೊಂಡು ಹೇಳಿ ಫರ್ಟಿಲಿಟಿ ಮತ್ತು ಎಗ್ ಮೆಚುರಿಟಿಯ ಕುರಿತು ಅಂತರರಾಷ್ಟ್ರೀಯ ಸಂಕಿರಣದಲ್ಲಿ ಭಾಗವಹಿಸುವ ಸಲುವಾಗಿ ಲಂಡನ್ ಗೆ ತೆರಳಿದ್ದರು. ಮಹಾದೇವ, ಶಕುಂತ್ಲಜ್ಜಿ ಕರೆಯುವುದಕ್ಕೂ ಮುಂಚೆ, ಕಾರನ್ನು ಒಂದು ಮರದ ನೆರಳಿನಡಿಯಲ್ಲಿ ನಿಲ್ಲಿಸಿ, ಸಿಗರೇಟ್ ಸೇದಲು ಒಂದು ಗೂಡಂಗಡಿಗೆ ಹೋಗಿದ್ದ. ಸಿಗರೇಟನ್ನು ಸೇದಿ ಹೊರಗೆ ಬರುವಾಗ ಶಕುಂತ್ಲಜ್ಜಿ ‘ಏ ಪಾಪ ಬಾರ ಇಲ್ಲಿ’ ಎಂದು ಕರೆದಿದ್ದಳು. ಶಕುಂತ್ಲಜ್ಜಿಗೆ ‘ಮತ್ತೆ ಸಿಗ್ತೀನಿ ಅಜ್ಜಿ, ಲಲಿತ ಅವಳ ಅಮ್ಮನ ಮನೆಯಲ್ಲಿದ್ದಾಳೆ. ಸ್ವಲ್ಪದಿನ ಅರಾಮಾಗಿರಲು ಹೋಗಿದ್ದಾಳೆ. ಹದಿನೈದು ದಿನಗಳಾದವು ಹೋಗಿ, ಕರೆದುಕೊಂಡು ಬರಲು ಹೋಗ್ತಾ ಇದಿನಿ’ ಎಂದು ಹೇಳಿ ತನ್ನ ಕಾರಿನ ಬಳಿ ಬಂದು, ಅದರ ಬಾಗಿಲನ್ನು ತೆರೆದು, ಒಳಗೆ ಕೂತು ಕಾರನ್ನು ಚಾಲು ಮಾಡಿಕೊಂಡು ಹಿರಿಯೂರಿನ ಕಡೆ ಹೊರಟನು.

ದುರ್ಗದಿಂದ ಹೊರಟ ಅವನ ಕಾರು ತುಸು ನಿಧಾನವಾಗಿಯೇ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯ ಮೇಲೆ ಚಲಿಸಿತು. ರಸ್ತೆಯ ಅಡಿಯಲ್ಲಿ ನೆಲಸಮಗೊಂಡ ಹಳ್ಳಿಗಳ ಉಸಿರು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಮತ್ತು ಹಳ್ಳಿಗಳು ಮತ್ತು ಅಲ್ಲಿಯ ಜನಗಳ ಉಸಿರು ಎಲ್ಲೂ ಕದಲದೇ ರಸ್ತೆ ಉದ್ದಕ್ಕೂ ಆವರಿಸಿಕೊಂಡಿತ್ತು. ಗಾಳಿಯಲ್ಲಿ ಅವರ ಉಸಿರೂ ಬೆರೆತು ಅವನ ಒಳಗೆ ಹೋಗ್ತಾ ಬರುತ್ತಾ ಇತ್ತು. ಇಲ್ಲಿಗೆ ಸರಿಯಾಗಿ ನಾಲ್ಕುತಿಂಗಳ ಹಿಂದೆ ಇದೇ ಹೊತ್ತಿನಲ್ಲಿ ಬೆಂಗಳೂರಿನಕಡೆಯಿಂದ ದುರ್ಗಕ್ಕೆ ತನ್ನ ಹೆಂಡತಿ ಲಲಿತಳ ಜೊತೆ ಬರುತ್ತಾ ಇದ್ದ. ಅವಳಿಗೆ ಆಗ ಮೂರು ಮೂರುವರೆ ತಿಂಗಳಾಗಿತ್ತು ಮುಟ್ಟು ನಿಂತು. ಬಿಳಿಯ ಮೋಡಗಳು ಅರಳಿರುವ ಹತ್ತಿ ಹೊಲಗಳಂತೆ ಆಕಾಶದಲ್ಲಿ ಕಂಗೊಳಿಸುತ್ತಿದ್ದವು. ಸೂರ್ಯಕಾಂತಿ ಹೂವುಗಳು ಸೀಮೆ ಎಣ್ಣೆ ಬುಡ್ಡಿಯ ಬೆಳಕು ಎಣ್ಣೆ ತೀರುತ್ತಿದ್ದುದರಿಂದ ಮಿಣುಕು ಮಿಣುಕು ಎನ್ನುತ್ತಿರುವಂತೆ ಸೊರಗುತ್ತಿದ್ದವು. ಮಳೆಯಿಲ್ಲದೆ ಆಕಾಶನೋಡಲು ತಲೆಯನ್ನು ಎತ್ತಲಾಗದೆ ಮತ್ತು ತಮಗೆ ಹೆಸರನ್ನು ನೀಡಿದ ಸೂರ್ಯದೇವನನ್ನು ನೇರವಾಗಿ ನೋಡಲು ಆಗದೆ ನಿತ್ರಾಣಗೊಂಡಿದ್ದವು. ಕೆಲವಂತೂ ‘ನಿನ್ನ ಹೆಸರನ್ನು ನಮಗೆ ಯಾಕೆ ಇಟ್ರೋ ಸೂರ್ಯದೇವ!’ ಎಂದು ಜೋಪುಮೋರೆ ಹಾಕಿಕೊಂಡು ಜ್ವರ ಬಂದಿರುವವರ ಥರ ಕೇಳ್ತಾ ಇದ್ದವು.
‘ಈ ಸಲ ಮಿಸ್ಸಾಗುವುದಕ್ಕೆ ಚಾನ್ಸೇ ಇಲ್ಲ ಅಲ್ವಾ?’

‘ಸಾರಿ ದೇವ್, ತುಂಬಾ ಹೋಪ್ಸ್ ಒಳ್ಳೇದಲ್ಲ’ ಸುಮ್ಮನಿದ್ದರೆ ನಮಗೂ ನೆಮ್ಮದಿ, ಹೋಪ್ಸ್ ಗಳಿಗೂ ಒಂದು ಮರ್ಯಾದೆಯನ್ನುವುದು ಇರುತ್ತೆ. ಅವುಗಳನ್ನ ಯಾಕೆ ಮುಜುಗರಕ್ಕೆಳೆದು ತರೋದು?’

‘ಅಮೇಜಾನ್ ನಲ್ಲಿ ಝೀರೋ ಟು ಸಿಕ್ಸ್ ನ ಒಂದು ಫ್ಲೋರಲ್ ಸ್ಕರ್ಟ್ ನೋಡಿದಿನಿ. ತುಂಬಾ ಬ್ಯೂಟಿಫುಲ್ ಆಗಿದೆ ಗೊತ್ತಾ!’

‘ಮತ್ತಿನ್ನೊಂದು ಗೊತ್ತಾ? ನಿನ್ನಂಥವರನ್ನು ನೋಡಿಯೇ ಆ ಗಾದೆಯನ್ನು ಮಾಡಿರುವುದು ಅನ್ನಿಸುತ್ತೆ.’

ಕಾರು ಐಮಂಗಲ ಸಮೀಪಿಸಿತ್ತು. ಅಕ್ಕ ಪಕ್ಕದ ಹೊಲಗಳಲ್ಲಿ ಕಾಣುತ್ತಿದ್ದ ಬೆಳೆಗಳೆಲ್ಲ ಮನೆಗೆ ಬೆಂಕಿ ಬಿದ್ದಾಗ ಒಳಗಿರುವ ಮನುಷ್ಯರೆಲ್ಲ ಅರೆಬೆಂದು ರೋಧಿಸುವ ಆಕೃತಿಗಳಂತೆ ಕಾಣುತ್ತಿದ್ದವು. ಮನಸ್ಸಿನಲ್ಲಿ ಲಲಿತ ಆಡಿದ ಮಾತುಗಳು ಮಾರ್ದನಿಸುತ್ತಿದ್ದವು ಮಹಾದೇವನ ಒಳಗೆ. ‘ದುಃಖ ಬಂದರೆ ಬದುಕಿನ ಚಾಪೆಯನ್ನು ಸುತ್ತಿಕೊಂಡು ಹೋಗುವುದಕ್ಕೆ ಆಗುತ್ತಾ? ಲೈಫಿನಲ್ಲಿ ಎಲ್ಲ ಥರದ ಬಣ್ಣಗಳ ಶೇಡ್ಸ್ ಗಳನ್ನು ನೋಡಬೇಕು. ಮೇಲಿರುವ ನಕ್ಷತ್ರಗಳು ಈ ಭೂಮಿ ಹುಟ್ಟಿದಾಗಿನಿಂದ ಆಗುತ್ತಿರುವ ಕೆಟ್ಟದ್ದು ಒಳ್ಳೇದು ಎನ್ನದೆ ಎಲ್ಲವನ್ನೂ ನೋಡ್ತಾ ಇಲ್ಲವಾ? ಅವುಗಳು ಮಿನುಗುವಲ್ಲಿಯೇನಾದ್ರೂ ವ್ಯತ್ಯಾಸವಾಗಿದೆಯಾ? ಜೀವ ಇರೋ ಮನುಷ್ಯರು ನಿರ್ಜೀವ ವಸ್ತುಗಳಿಂದ ಕಲಿಯೋದು ಬಾಳ ಇದೆ’
‘ಮಿನುಗುತ್ತಿರಬೇಕು. ಅವಳ ಮೂಗಿನ ವಜ್ರದ ನತ್ತಿನ ಥರ ಸದಾ. ಎಂದು ತನಗೆ ತಾನೇ ಮನದ ಭಾವನೆಯ ಗದ್ಯವನ್ನು ಪದ್ಯಮಾಡಿಕೊಂಡು ಎಂದುಕೊಂಡ’.

ಕಾರು ಮುಂದಕ್ಕೆ ಬಯಲನ್ನು ಸೀಳಿಕೊಂಡು ಹೋಗುತ್ತಿತ್ತು.

‘ನಿನ್ನ ತಂಗಿ ಈ ವಿಷಯದಲ್ಲಿ ಇಷ್ಟೊಂದು ಚೀಪಾಗಿ ವರ್ತಿಸಬಾರದಿತ್ತು. ನಾನಂತೂ ನಿರೀಕ್ಷೆನೇ ಮಾಡಿರಲಿಲ್ಲ. ಅವಳ ಬಗ್ಗೆ ನಿಮ್ಮ ಇಡೀ ಸಂಬಂಧಿಕರಲ್ಲೇ ಒಂದು ಗೌರವ ಭಾವನೆಯನ್ನು ಇಟ್ಟುಕೊಂಡಿದ್ದೆ’.

‘ಹೌದು. ನನಗೂ ಹಾಗೆ ಅನ್ನಿಸಿತು. ಅವಳು ನನಗೆ ಅವಳ ಜೀವನದಲ್ಲಿ ಒಂದು ವಿಶೇಷ ಸ್ಥಾನ ಕೊಟ್ಟಿದ್ದಾಳೆ ಎಂದುಕೊಂಡಿದ್ದೆ. ಆದರೆ, ನಾವು ಅಂದು ಕೊಳ್ಳುವುದೇ ಬೇರೆ, ಅದು ಇರುವುದೇ ಬೇರೆ. ಸಂಬಂಧಗಳ ನಿಜ ಮುಖ ದರ್ಶನವಾಗುವುದು ಇಂತಹ ಕ್ರೂಷಿಯಲ್ ಸಂದರ್ಭಗಳಲ್ಲಿಯೇ ಅನ್ನಿಸುತ್ತೆ. ಹೋಗಲಿ ಬಿಡು. ಅವರ ಸಹವಾಸ ನಮಗೆ ಯಾಕೆ ಇನ್ನು. ಅವಳು ಪ್ರಕಾಶಮಾಮನಿಗೆ ಹೆದರಿರಬೇಕು’.
‘ಹಾಗಾದರೆ, ಅತ್ತೆ ಹೇಳಿದ್ದರಲ್ಲಿ ಏನು ತಪ್ಪಿದೆ? ನೀನೊಂಥರ ದೇವ್! ಅದರೂ ಆಳದಲ್ಲಿ ಎಲ್ಲೋ ಸಮರ್ಥನೆ ಮಾಡಿಕೊಳ್ಳುತ್ತಿದ್ದೀಯೇನೋ ಅನ್ನಿಸುತ್ತೆ’.

‘ಇಲ್ಲ ಇಲ್ಲ, ನಿಜವಾಗಿಯೂ ಅವಳ ಈ ವರ್ತನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ, ಈ ಅವಮಾನವನ್ನು ನಾನು ಯಾವತ್ತೂ ಮರೆಯುವುದಕ್ಕೆ ಆಗುವುದಿಲ್ಲ. ಅಲ್ಲ, ನೀವೆಲ್ಲ ಒಂದೆ. ದೊಡ್ಡಮ್ಮ ಅಜ್ಜಿ, ನೀವೆಲ್ಲ ಒಂದೇ. ಸಂಬಂಧಗಳನ್ನು ಹಾಳುಮಾಡೋರು. ನಾನು ತಪ್ಪಾಯಿತು ಹೋಗಿದ್ದು ಅಂದದ್ದಕ್ಕೆ , ಹೌದು ತಪ್ಪೇ ಮತ್ತೆ. ಮಂಜುನ ನೋಡುವುದಕ್ಕಾಗಲಿ, ಮಾತನಾಡಿಸುವುದಕ್ಕಾಗಲಿ ಇನ್ನೆಂದು ಹೋಗಕೂಡದು’ ಎಂದಳು.
‘ಹೋಗಲಿ ಬಿಡು, ಅವಳ ಮಗ, ಅವಳು ಇಷ್ಟದಂತೆ ಬೆಳೆಸಲಿ’

‘ಯಾರು ಬೇಡ ಅಂದದ್ದು, ಬೆಳೆಸಲಿ, ನಾನು ಜಸ್ಟ್ ಹೋದದ್ದು ಅವನನ್ನು ನೋಡೋಕೆ. ಮತ್ತೆ, ಮಂಗಳಳ ಪರವಾಗಿಯೇ ಮಾತಾಡುವುದಕ್ಕೆ ಹೋಗಿದ್ದು. ಆದರೆ, ಅವಳು ಅಮ್ಮನನ್ನು ಹೀಗೆ ಅಂದಳಲ್ಲ ಅದು ತುಂಬಾ ಬೇಜಾರ ಮಾಡಿತು. ಅವಳನ್ನು ಎಂದೂ ನಾನು ಕಸಿನ್ ಎಂದು ಭಾವಿಸಿರಲಿಲ್ಲ. ಸ್ವಂತ ತಂಗಿ ಥರ ಎಂದುಕೊಂಡಿದ್ದೆ. ಅದೇ ಭಾವದಲ್ಲಿ ಹೋಗಿದ್ದು ಮಾತನಾಡಿಸುವುದಕ್ಕೆ.’
‘ಸದ್ಯ ನಾನು ಬರಲಿಲ್ಲ.’

‘ಅಮ್ಮನನ್ನು ಕರೆದುಕೊಂಡು ಹೋಗಬಾರದಿತ್ತು.’

ಕಾರು ಹೋಗುತ್ತಿದೆ. ಗುಡ್ಡಗಳಲ್ಲಿ ಹಾಕಿರುವ ಗಾಳಿ ಫ್ಯಾನುಗಳು ತಿರುಗುತ್ತಿದ್ದವು. ಇಬ್ಬರೂ ಕೆಲ ಕ್ಷಣ ಮೌನವಾದರು. ಮ್ಯೂಸಿಕ್ ಪ್ಲೇಯರ್ ನಲ್ಲಿ ಹಾಡುಗಳು ತಮ್ಮ ಪಾಡಿಗೆ ತಾವು ಹೊಮ್ಮುತ್ತಿದ್ದವು. ಫ್ಯಾನುಗಳು ತಿರುಗುತ್ತಿರುವುದನ್ನೇ ನೋಡುತ್ತಿದ್ದ ಲಲಿತಳ ಮನಸಿನಲ್ಲಿ ನೆನಪುಗಳು ಸುಳಿ ಸುಳಿಯಾಗಿ ತಿರುಗತೊಡಗಿದವು. ಸುತ್ತುತ್ತ ಸುತ್ತುತ್ತ ಅವಳ ಬಟ್ಟಲ ಕಣ್ಣುಗಳ ಮೂಲಕ ಚಿಟ್ಟೆಗಳಾಗಿ ಹೊರಗೆ ಹಾರಿಕೊಂಡು ಹೋದವು. ಅವೊತ್ತು ಮಂಗಳವಾರ. ಮಂಗಳಳ ಮಾವ ಹಣೆಗೆ ವಿಭೂತಿ ಕಟ್ಟನ್ನು ಧರಿಸಿ ಕಿವಿಯಲ್ಲಿ ಪುಟ್ಟ ಬಸವಿನ ಪಾದದ ಹೂವನ್ನು ಸಿಕ್ಕಿಸಿಕೊಂಡಿದ್ದರು. ಆಗಷ್ಟೇ ಪ್ರತಿವಾರದಂತೆ ಅವೋತ್ತು ಸಹ ದೇವಿ ಪುರಾಣದಲ್ಲಿ ಒಂದು ಅಧ್ಯಾಯವನ್ನು ಓದಿ ಮುಗಿಸಿದ್ದರು. ಎಲ್ಲರೂ ಊಟಕ್ಕೆ ಕೂತಿದ್ದರು. ಫೋನ್ ರಿಂಗಾಗಿತ್ತು. ಮಹಾದೇವ ಎಡಗೈಲಿ ಫೋನನ್ನು ಎತ್ತಿಕೊಂಡು ಕರೆಯನ್ನು ಸ್ವೀಕರಿಸಿದ.
‘ನಾನು ಫೋನ್ ಮಾಡಿದ್ದೆನಲ್ಲಾ, ಹ್ಞಾ, ನಿಜ, ನಿನ್ನ ಪರವಾಗಿ ಕೆಲವು ಮಾತುಗಳನ್ನು ಹೇಳಿದೆ.’

‘…’

‘ಮತ್ತೆ ಯಾಕೆ ರಿಸೀವ್ ಮಾಡಲಿಲ್ಲ?’

‘…’

‘ಹೌದೇನು!’

‘…’

‘ಇಲ್ಲ ಮಂಗಳ ನಿನ್ನ ಪರವಾಗಿಯೇ ಮಾತಾಡುವುದಕ್ಕೆ ಹೋಗಿದ್ದು. ಯಾವ ಉದ್ದೇಶವೂ ಇಲ್ಲ. ಅಲ್ಲ ಇಷ್ಟು ದಿನ ಇಲ್ಲದು ಈಗ ಯಾಕೆ?’

‘…

‘ಏನ್ ಮಂಗಳ ಹೀಗಂತಾ ಇದೀಯಾ?!’

‘…’

ಫ್ಯಾನುಗಳು ತಿರುಗುತ್ತಿರುವುದನ್ನೇ ನೋಡುತ್ತಿದ್ದ ಲಲಿತಳ ಮನಸಿನಲ್ಲಿ ನೆನಪುಗಳು ಸುಳಿ ಸುಳಿಯಾಗಿ ತಿರುಗತೊಡಗಿದವು. ಸುತ್ತುತ್ತ ಸುತ್ತುತ್ತ ಅವಳ ಬಟ್ಟಲ ಕಣ್ಣುಗಳ ಮೂಲಕ ಚಿಟ್ಟೆಗಳಾಗಿ ಹೊರಗೆ ಹಾರಿಕೊಂಡು ಹೋದವು.

‘ಚಿಕ್ಕ ಹುಡಗನಾಗಿದ್ದಾಗ ನಾನೂನು ಅವನನ್ನು ಎತ್ತಿ ಆಡಿಸಿದ್ದೇನೆ, ಸ್ಕೂಲಿಗೆ ಕರೆದುಕೊಂಡು ಹೋಗಿಬಿಟ್ಟು ಬಂದಿದೀನಿ. ಅವನ ಕಕ್ಕನೂ ತೊಳೆದಿದ್ದೇನೆ. ಅವನ ಸ್ಕೂಲಲ್ಲಿ ಡ್ಯಾನ್ಸ್ ಫಂಕ್ಷನ್ ಇದೆ ಅಂದರೆ ಎಷ್ಟು ದೂರದಿಂದ ಬರುತ್ತಿದ್ದೆ ಗೊತ್ತಾ? ಕೇವಲ ಒಂದು ಸಲಿಗೆಯಿಂದ ಹೋಗಿದ್ದು. ಈಗ ಗೊತ್ತಾಯ್ತು. ನಿಜವಾದ ಪ್ರೀತಿ ಯಾವುದು ಅಂಥ. ಆಯ್ತು ಬಿಡಮ್ಮ, ಸಾರಿ, ತಪ್ಪಾಯ್ತು. ಇನ್ನೆಂದು ಹೋಗುವುದಿಲ್ಲ. ಇಡೀ ಜೀವನದಲ್ಲಿಯೇ ನೋಡಲ್ಲ. ಸರಿನಾ? ಆದರೆ ಅವನಿಗೆ ಇಲ್ಲದ್ದನ್ನ ಹೇಳಿದ್ದೀಯಲ್ಲಾ? ಈಗ ಡಿಸ್ಟರ್ಬ್ ಮಾಡಿದ್ದು ನಾನಾ ನೀನಾ? ಒಂದೇ ಒಂದು ಮಾತು ಸಾಕಾಗಿತ್ತು. ಇನ್ಮುಂದೆ ಯಾವೊತ್ತೂ ಹೋಗಬೇಡಿ, ಪ್ರಕಾಶ ಅವರಿಗೆ ಗೊತ್ತಾದ್ರೆ ಬೇಜಾರಾಗ್ತಾರೆ ಬೇಡ ಅನ್ನಬಹುದಿತ್ತು.’‘…’

‘ಅರೆ, ನೀನೇ ಎಷ್ಟು ಸಲ ಅಮ್ಮನ ಹತ್ತಿರ, ನನ್ನ ಹತ್ತಿರ ಪ್ರಕಾಶಮಾಮ ಟಾರ್ಚರ್ ಕೊಡ್ತಾರೆ, ಇಲ್ಲ ಸಲ್ಲದಕ್ಕೆಲ್ಲ ಅನುಮಾನ ಪಡ್ತಾರೆ ಅಂತೆಲ್ಲ ಹೇಳ್ತಿದ್ದೆಯಲ್ಲಾ? ಅಮ್ಮ ಹಾಗೆಲ್ಲ ಹೇಳೇ ಇಲ್ಲ, ಇದೆಲ್ಲ ಶ್ರೀಪತಿದೇ ಕಿತಾಪತಿ. ಇಲ್ಲದ ಚಾಡಿ ಹೇಳಿದಾನೆ. ನಾನೇನು ದೊಡ್ಡ ಅಪರಾಧಮಾಡಿದ್ದೇನೆ ಎನ್ನುವ ಥರ ಕೆದಕಿ ಕೆದಕಿ ಕೇಳ್ತಾನೆ.’
‘…’

‘ನೋಡಿದಾ, ಕಳ್ಳ, ಕಾನ್ಫರೆನ್ಸ್ ಕಾಲ್ ಮಾಡಿ ಮಾತಾಡಿರುವುದನ್ನೆಲ್ಲ ಕೇಳಿಸಿದ್ದಾನೆ.’

‘…’

‘ಹೌದಾ!’

‘ನೀನೇ ಕೇಳಬಹುದಿತ್ತು, ಅಥವಾ ಹೇಳಬಹುದಿತ್ತು. ಅಷ್ಟಕ್ಕೂ ಅಮ್ಮ ಹೇಳಿದ್ದರಲ್ಲಿ ಏನು ತಪ್ಪಿದೆ? ನೀನು ಹಂಗೆಲ್ಲ ಮೊದಲು ಪ್ರಕಾಶಮಾಮನ ಬಗ್ಗೆ ಹೇಳಿದ್ದಕ್ಕೆ ಹಾಗೆ ಹೇಳಿರಬಹುದು. ಅಷ್ಟಕ್ಕೆ ಇಷ್ಟೆಲ್ಲ.’

‘…’

‘ನೀನು ಮೊದಲೇ ಇಷ್ಟೊಂದು ಗಂಡನನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದರೆ, ಒಂದೇ ಒಂದು ನೆಗೇಟಿವ್ ಮಾತನ್ನು ಯಾರು ಹೇಳ್ತಾ ಇರಲಿಲ್ಲ. ಸಲಿಗೆಯಿಂದ ಹೋಗಿದ್ದು. ಈಗ ಅದೂ ಇಲ್ಲ. ಆದರೆ, ಶ್ರೀಪತಿಗೆ ಹೇಳು ನೀವು ಯಾರನ್ನು ದ್ವೇಷಿಸುತ್ತಿದ್ದೀರೋ ಅದರಲ್ಲೂ ಪ್ರಕಾಶಮಾಮನಿಗೆ ಯಾರು ಆಗುವುದಿಲ್ಲವೋ ಅವರಿಂದನೇ ಹೆಲ್ಪ್ ಪಡೆದು, ಸೊಸೈಟಿಯಲ್ಲಿ ಕೆಲಸ ಪಡೆದಿರೋದು. ಅವರ ಸಹಾಯದಿಂದಾನೆ ಅವರಿಗೆ ಗೊತ್ತಿರುವವರ ಮನೆಯಲ್ಲಿ ಬಾಡಿಗೆ ಇರೋದು. ಅವನ ಕೆಲಸಕ್ಕೆ ಅಮ್ಮ ಮತ್ತು ಅಪ್ಪ ಸೊಸೈಟಿ ಪ್ರೆಸಿಡೆಂಟ್ ಹತ್ತಿರ ಹೋಗಿ ರಿಕ್ವೆಸ್ಟ್ ಮಾಡಿ ಶಿಫಾರಸು ಮಾಡಿದಾರೆ ಗೊತ್ತಾ? ಈಗ ಹೇಳ್ತಾನೆ ನಾನು ಯಾವನ್ನೇನು ಬೇಡಲ್ಲ, ಯಾರು ಮುಂದಕ್ಕೂ ಹೋಗಿ ಕೈ ಚಾಚಲ್ಲ. ನೀವು ಮಂಜನ್ನು ನೋಡೋಕೆ ಯಾಕೆ ಹೋದ್ರಿ ಅಂತ ಕೇಳ್ತಾನೆ.’
‘…’

‘ಹೌದು ಅದರಲ್ಲಿ ತಪ್ಪೇನಿದೆ? ನಾನು ಹೇಳಿದ್ದು ತಮಾಷೆಗೆ. ಮತ್ತು ಎಲ್ಲನೂ ಅವನನ್ನು ಕೇಳಿಯೇ ಮಾಡಬೇಕಿಲ್ಲ. ಅಷ್ಟೊಂದು ಸಲಿಗೆ ಅಧಿಕಾರ ಇಲ್ಲವಾ. ಇತ್ತು ಅನ್ನೋ ಕಾರಣಕ್ಕೇ ಹೋಗಿದ್ದು, ಈಗಿಲ್ಲ ಬಿಡು ನೀನು ಹಾಗೆ ಅಂದಮೇಲೆ.’

‘…’

‘ಆ ಮಾತೇ ಬಂದಿಲ್ಲ ಅಮ್ಮನ ಬಾಯಿಂದ. ಅವನಿಗೆ ಯಾಕೆ ಹೆದರುತ್ತೀಯೇ, ಅವನೇನು ಹುಲಿನಾ ಸಿಂಹನಾ. ನಿನ್ನ ಮಕ್ಕಳು ದೊಡ್ಡವರಾಗಿದ್ದಾರೆ. ಯಾಕೆ ಹೆದರುತ್ತೀಯಾ. ಅವನು ಅಂದು ಕೊಂಡಿರಬಹುದು ಅವನು ಸಂಬಳಕ್ಕಾಗಿ ದುಡ್ಡಿಗಾಗಿ ಇದ್ದಾರೆ ಅಂತಾ. ದುಡ್ಡಿಗಾಗಿ ಯಾರು ಜೀವನ ಮಾಡೋಕೆ ಅಗೊಲ್ಲ. ಅವನನ್ನು ಬಿಟ್ಟು ನೀನು ನಟರಾಜನ್ನ ಮದುವೆಯಾಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಕೂಲಿ ಮಾಡಿಯಾದರೂ ಚೆನ್ನಾಗಿ ಇರುತ್ತಿದ್ದೆ. ಅವನೇನೊ ಗೃಹಸ್ತ, ಒಳ್ಳೇಯವನು ಅಂತ ಯಾರು ವಿರೋಧ ಮಾಡಲಿಲ್ಲ. ನೀನು ಸಾಕಷ್ಟು ಸಹಿಸಿಕೊಂಡಿದಿಯಾ. ನಿನ್ನಿಂದನೇ ಅವನು ಇಷ್ಟೊಂದೆಲ್ಲ ಪಡೆದಿರೋದು. ಮನೆ ಮಕ್ಕಳು ಗಂಡ ಅಂತ ಎಲ್ಲರನ್ನೂ ತೊರೆದು ಬದುಕಿಲ್ಲವೇನೇ ನೀನು. ಇಷ್ಟು ಮಾತುಗಳನ್ನು ಅಮ್ಮ ಅಂದಿದ್ದು ನನಗೂ ಕೇಳಿಸಿತು. ಇದರಲ್ಲಿ ಏನು ತಪ್ಪು?’
‘…’

‘ಅಮ್ಮ ಆ ಅರ್ಥ ಬರುವ ಹಾಗೆ ಹೇಳೇ ಇಲ್ಲ.’

ಆಕಡೆಯಿಂದ ಕರೆ ಕಟ್ ಆಗಿತ್ತು.

ಕಾರು ಮುಂದಕ್ಕೆ ಹೋಗುತ್ತಾ ಇತ್ತು. ಅಲ್ಪಕಾಲದ ಮೌನಕ್ಕೆ ‘ಹೇ..ಲಿಲ್’ ಎಂದು ಮಾತುಗಳನ್ನು ಮಹಾದೇವ್ ಬಿಸಾಕಿದ. ಲಲಿತ, ‘ಹೇ ಏನಿಲ್ಲ..’ ಎಂದು ಸಡನ್ನಾಗಿ ತಲೆಯನ್ನು ಕೊಡವಿಕೊಂಡು ಹೇಳಿದಳು. ಮತ್ತೆ ಮುಂದುವರೆಸಿ, ‘ಈಗ, ಹೋಗಿ ಮಾತನಾಡಿಸಿದ್ದಕ್ಕೆ ಏನಾಯತ್ತಂತೆ?’ ಎಂದು ಕೇಳಿದಳು.

‘ಯಾವನಿಗೊತ್ತು?’

‘ನೀವು ಹೋಗಿ ಅವನನ್ನು ಡಿಸ್ಟರ್ಬ್ ಮಾಡಬೇಡಿ ಎಂದು ಹೇಳೋಳು ಅವಳೆ, ಈಗ ಅವಳು ಮಾಡಿದ್ದೇನು. ಡಿಸ್ಟರ್ಬ್ ಅಲ್ಲವೇ? ಸಿಲ್ಲಿ ವಿಷ್ಯನ ದೊಡ್ಡದು ಮಾಡಿದ್ಲು. ಅವಳು ನನ್ಗಿಂಥ ಚಿಕ್ಕವಾಳಾಗಿದ್ದರೂ ನಾನೇ ಕ್ಷಮೆ ಕೇಳಿದೆ’

‘ಸಂಬಂಧಗಳು ಸಂಬಂಧಗಳು ಅಂಥ ಕೊಚ್ಚಿ ಕೊಳ್ತಾ ಇರುತ್ತೀಯಾ, ನೋಡು ನಿಮ್ಮ ಸಂಬಂಧ’ ಎಂದು ವ್ಯಂಗ್ಯದಿಂದ ನಕ್ಕಳು.

‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು. ಹಾಗೆ ಅನ್ನಬಾರದಿತ್ತು ಅವಳು ನನಗೆ. ನಾನು ಎಷ್ಟು ಕ್ಲೋಸಾಗಿದ್ದೆ ಅವಳ ಹತ್ತಿರ. ನನ್ನ ಎಲ್ಲ ಪರ್ಸನಲ್ ವಿಷಯಗಳನ್ನು ಅವಳಿಗೆ ಮೊದಲು ಹೇಳುತ್ತಿದ್ದೆ.’ ಎಂದು ಬೇಸರಗೊಂಡನು.

ಅಂದು ಗುರುವಾರ. ಶ್ರಾವಣಮಾಸ. ಜಟಿ ಜಟಿ ಮಳೆ. ಮಹಾದೇವ್ ಧಾರವಾಡದಿಂದ ನೇರ ಮಂಗಳಳ ಮದುವೆಗೆ ಹೋಗಿದ್ದ. ಧಾರವಾಡದಲ್ಲಿ ಓದುತ್ತಿದ್ದ. ಅವಳ ಮದುವೆ ವಿಷಯ ಗೊತ್ತಾಗಿ ತಕ್ಷಣಕ್ಕೆ ಅಲ್ಲಿಂದ ಹೊರಟಿದ್ದ. ಊರು ತಲುಪಿದಾಗ ಸಂಜೆ ಸುಮಾರು ಮೂರು ಗಂಟೆ. ಅಕ್ಕಪಕ್ಕದ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಶೇಂಗಾ ಹೊಲಗಳಲ್ಲಿ ಹೆಂಗಸರು ಕಳೆ ತೆಗೆಯುತ್ತಿದ್ದರು. ಬಸ್ ಸ್ಟ್ಯಾಂಡಿನಿಂದ ಮನೆ ಸ್ವಲ್ಪ ದೂರ ಇತ್ತು. ನಡೆದು ಹೋಗುವಾಗ, ಅವನ ಅದುರಿಗೆ ಮೈಕ್ ಸೆಟ್ಟಿನ ಹುಸೇನ ಸಾಬಿ ಸೈಕಲ್ಗೆ ಲೈಟಿನ ಸರ, ಸ್ಪೀಕರ್ ಬಕೆಟ್ ಇತ್ಯಾದಿಗಳನ್ನು ನೇತುಹಾಕಿಕೊಂಡು ಬರುತ್ತಿದ್ದ. ‘ಹುಸೇನಣ್ಣ ಮದುವೆ ಮುಗೀತಾ’ ಎಂದು ಕೇಳಿದ. ‘ಏನು ಮದುವೆನೋ ಏನೋ, ಗಲಾಟೆಯೋ ಗಲಾಟೆ. ಅವರು ಹೇಗಾದರು ಕಿತ್ತಾಡಿಕೊಳ್ಳಲಿ, ನಮಗೆ ಮಾತಿನ ಪ್ರಕಾರ ದುಡ್ಡು ಕೊಡ ಬೇಕೋ ಬೇಡವೋ ಹೇಳು ಮಾದೇವು. ಮುನ್ನೂರು ರುಪಾಯಿ ಕಡಿಮೆ ಕೊಟ್ಟರು. ‘ತಾರತಿಗಡಿ ಮಾಡುವ ಹಾಗಿದ್ದರೆ ಬರಲ್ಲ. ಮೊದಲೇ ಹೇಳಿ. ಮಾತಾಡಿದಷ್ಟು ಕೊಡಬೇಕು’ ಎಂದು ಮೊದಲೇ ಹೇಳಿದ್ದೆ ಎಂದ. ‘ಹೇಳೋದು ಒಂದು ಮಾಡೋದು ಒಂದು. ನಾಲಿಗೆ ಸರಿಯಿರಬೇಕು ಮನಷ್ಯಂದು’ ಎಂದು ಗೊಣಗಾಡುತ್ತ ಸೈಕಲನ್ನು ಮುಂದಕ್ಕೆ ತುಳಿದುಕೊಂಡು ಹೋದ. ನಂತರ ಪ್ರಕಾಶನ ತಂದೆ ಓಬಣ್ಣ ಎದುರಾದರು. ‘ಓಬ್ ಮಾಮ ಮದುವೆ ಮುಗೀತಾ ಆಗ್ಲೆ’ ಎಂದ ಮಹಾದೇವ.

‘ಗಲಾಟೆ ಆಯ್ತಂತೆ, ಯಾಕೆ, ಯಾರು ಮಾಡಿದ್ದು?’ ಎಂದೆಲ್ಲ ಕೇಳುವವನಿದ್ದ. ಆದರೆ ಕೇಳಲಿಲ್ಲ.’ಅಲ್ಲೇನು ಶಾಟ ಇದೆ ಅಂತ ಇರಲಿ. ಕಳ್ಳ ಸೂಳೆ ಮಗ. ನಿನ್ ತಂಗಿ ನಮಿಗೆಲ್ಲ ಮೋಸ ಮಾಡಿದ್ಲು ಕಣ್ಲ. ನನ್ನ ಪಾಲಿಗೆ ಅವನು ಸತ್ತಂಗೆ ಇನ್ನ’ ಎಂದು ಓಬಣ್ಣ ಸಿಟ್ಟಿನಿಂದ ಹೇಳಿದನು.

‘ಮತ್ತೆ ಮದುವೆಗೆ ಯಾಕೆ ಬಂದೆ?’ ಎಂದು ಕೇಳಬೇಕೆಂದುಕೊಂಡವನು, ಏನನ್ನೂ ಕೇಳದೆ ಮುನ್ನಡೆದ. ಎಲ್ಲರೂ ಊಟ ಮಾಡಿ, ಫೋಟೋಗಳನ್ನು ತೆಗಿಸಿಕೊಳ್ಳುತ್ತಿದ್ದರು. ಹೋದವನು ಅವರಿಗೆ ವಿಶ್ ಮಾಡಿದ. ಅವರ ಜೊತೆ ಇವನೂ ಫೋಟವನ್ನು ತೆಗೆಸಿಕೊಂಡ.

ಮಂಗಳ, ದಿಂಡಾವರದ ಅವಳ ಅಜ್ಜಿ ಮನೆಯಲ್ಲಿ ಓದುತ್ತಿದ್ದಳು. ತುಂಬಾ ಸ್ಫುರದ್ರೂಪಿಯಾಗಿದ್ದ ಅವಳು ಓದಿನಲ್ಲೂ ಅಷ್ಟೇ ಜಾಣೆಯಾಗಿದ್ದಳು. ಅವಳ ಮೂರು ಜನ ದೊಡ್ಡ ಮಾವಂದಿರಿಗೆ ಮತ್ತು ಅವರ ಹೆಂಡಿತಿಯರಿಗೆ, ಚಿಕ್ಕ ಮಾಮ ನಟರಾಜನಿಗೆ ತುಂಬಾ ಅಚ್ಚುಮೆಚ್ಚಿನವಳಾಗಿದ್ದಳು. ಹತ್ತನೇ ಕ್ಲಾಸು ಓದುವಾಗ ಇದೆಲ್ಲ ನಡೆದದ್ದು. ಅವಳ ಚಿಕ್ಕ ಸೋದರ ಮಾವ ನಟರಾಜ ಅವಳನ್ನು ಮದುವೆಯಾಗಬೇಕಿತ್ತು. ಹಾಗಂತ ಇಡೀ ಮನೆಯಲ್ಲಿ ಅನಧೀಕೃತವಾದಂತಹ ಮಾತುಕತೆಯೂ ನಡೆದಿತ್ತು. ನಟರಾಜ ಐದನೇ ಕ್ಲಾಸಿಗೇ ಓದುವುದನ್ನು ನಿಲ್ಲಿಸಿ, ಯಾವ ಕೆಲಸವನ್ನೂ ಮಾಡದೆ, ನೀಟಾಗಿ ಬಟ್ಟೆ ಧರಿಸಿ ಹಿರಿಯೂರಿಗೂ ದಿಂಡಾವರಕ್ಕೂ ವಾರಕ್ಕೆ ಎರಡು ಮೂರು ಬಾರಿ ಅಡ್ಡಾಡಿಕೊಂಡು ಕಾಲ ಕಳೆಯುತ್ತಿದ್ದ. ಸಿನಿಮಾ ನೋಡುವುದು ಮತ್ತು ಇಸ್ಫೀಟಾಡುವುದನ್ನು ಹವ್ಯಾಸ ಮಾಡಿಕೊಂಡು, ಅದನ್ನೇ ವೃತ್ತಿಯಾಗಿ ಮಾಡುತ್ತಿದ್ದ. ಅದರ ಸಲುವಾಗಿ ಅವನ ಅಣ್ಣಂದಿರು ಅವನನ್ನು ಅನೇಕ ಬಾರಿ ಹೊಡಿದಿದ್ದು ಇದೆ. ನಟರಾಜನಿಗೆ ಇವಳ ಮೇಲೆ ತುಂಬಾ ಆಸೆಯೂ ಇತ್ತು. ಎಂದಿದ್ದರೂ ಅವಳನ್ನು ಅವನಿಗೇ ಕೊಟ್ಟು ಮದುವೆಮಾಡುವುದೆಂದು ಗೊತ್ತಿದ್ದುದರಿಂದ ಅವಳ ಬಳಿ ಇವನೇ ಹೋಗಿ, ಎಂದೂ ಮದುವೆ ಪ್ರಸ್ತಾಪ ಮಾಡಿರಲಿಲ್ಲ. ಮತ್ತು, ಎಂದೂ ಅವಳ ಹತ್ತಿರ ಸಲಿಗೆಯಿಂದ ನಡೆದುಕೊಂಡಿರಲಿಲ್ಲ. ಇವಳು ಯಾರಿಗೂ ಹೇಳದೆ ದೂರದ ಸಂಬಂಧಿ ಮತ್ತು ಆ ಸಂಬಂಧದ ಪ್ರಕಾರ ಮಾವ ಆಗಬೇಕಿದ್ದ ಪ್ರಕಾಶನನ್ನು ಪ್ರೀತಿಸುತ್ತಿದ್ದಳು. ಅವನೂ ಸಹ ಇವಳ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದ. ಇಡೀ ದಿಂಡಾವರದ ಗ್ರಾಮದಲ್ಲಿ ಇವನನ್ನು ಎಲ್ಲರೂ ಹೊಗಳುತ್ತಿದ್ದರು. ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಬಸ್ ಸ್ಟ್ಯಾಂಡಿನ ಅರಳಿಕಟ್ಟೆಮೇಲೆ ಇವನ ಓರಗೆಯವರ ಜೊತೆ ಕಾಡು ಹರಟೆಹೊಡೆಯುವುದಕ್ಕಾಗಲಿ ಮತ್ತಿತರೆ ಎಲ್ಲು ಊರಲ್ಲಿ ಅನಾವಶ್ಯಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಓದು, ಕ್ಲಾಸು, ಹೊಲ ಮತ್ತು ಮನೆ. ಇಷ್ಟೇ ಅವನಿಗೆ ಗೊತ್ತಿದ್ದ ಸಂಗತಿಗಳು. ಭಾನುವಾರ ಮತ್ತು ರಜಾದಿನಗಳಂದು ತನ್ನ ತಂದೆಯ ಜೊತೆ ಸೇರಿ ತಮ್ಮ ಮಾವಿನ ತೋಪಿನಲ್ಲಿ ಕೆಲಸ ಮಾಡುವುದು, ಬಡಗಿ ಕೆಲಸ ಮಾಡುವುದು, ಸೌದೆ ಕಡಿಯುವುದು ಮಾಡುತ್ತಿದ್ದ. ಒಮ್ಮೆ ತನ್ನ ಅಪ್ಪನ ಜೊತೆಸೇರಿ ಬಾವಿಯನ್ನೇ ತೋಡಿ ನೀರು ಬರಿಸಿ ಅದನ್ನು ತನ್ನ ಮಾವಿನ ತೋಟಕ್ಕೆ ಹಾಯಿಸಿದ್ದ. ಇದು ಇಡೀ ದಿಂಡಾವರದ ಊರಿನ ಜನರಿಗೆ ಇಷ್ಟ ಆಗಿ, ತಮ್ಮ ಬೆಳದುನಿಂತ ಮಕ್ಕಳಿಗೆ ‘ಇವನ ಉಚ್ಚೆ ಕುಡಿರೋ ಹೋಗಿ ಬುದ್ಧಿ ಬರುತ್ತೆ. ಆ ಹುಡುಗ ಓದೋದ್ರಲ್ಲೂ ಸೈ ಕೆಲಸದಲ್ಲೂ ಸೈ’ ಎಂದು ಅವನನ್ನು ಪ್ರಶಂಸಿಸುತ್ತ ಬೆಳೆದುನಿಂತ ತಮ್ಮ ಮಕ್ಕಳನ್ನು ಬೈಯುತ್ತಿದ್ದರು. ದುರ್ಗಕ್ಕೆ ಇಂಜಿನಿಯರಿಂಗ್ ಮಾಡಲು ಸೇರಿದ ಮೇಲಂತೂ ಇವನು ಊರಿಗೆ ಯಾವಾಗ ಬರುತ್ತಿದ್ದ ಮತ್ತು ಯಾವಾಗ ತೆರಳುತ್ತಿದ್ದ ಎಂಬುದು ಅಷ್ಟು ಸುಲಭದಲ್ಲಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ದುರ್ಗದಿಂದ ಬಂದವನು ಅದೇಗೋ ಗುಟ್ಟಾಗಿ ಮಂಗಳಳನ್ನು ಭೇಟಿ ಮಾಡುತ್ತಿದ್ದ. ಅವಳೂ ಇವನಿಗೆ ಪತ್ರಗಳನ್ನು ಬರೆದು ಕೊಡುತ್ತಿದ್ದಳು. ಈ ವಿಷಯ ಯಾರಿಗೂ ಗೊತ್ತಾಗದ ಹಾಗೆ ಗುಟ್ಟನ್ನು ಕಾಪಾಡಿಕೊಂಡಿದ್ದರು. ಇಂಜಿನಿಯರಿಂಗ್ ಅಂತಿಮವರ್ಷ ಇರುವಾಗಲೇ ಇವರ ಪ್ರೀತಿಯ ಗುಟ್ಟು ಇವನ ಅಪ್ಪನಿಂದ ರಟ್ಟಾಯಿತು. ಶ್ರಾವಣ ಶನಿವಾರದ ಒಂದು ದಿನ. ಓಬಣ್ಣ ಸ್ನಾನ ಮುಗಿಸಿ, ಶನಿಪುರಾಣ ಓದುವುದಕ್ಕೆಂದು ಶನಿಮಹಾತ್ಮೆ ಪುಸ್ತಕವನ್ನು ತೆಗೆಯುವಾಗ ಮಂಗಳಳ ಪತ್ರಗಳು ಸಿಕ್ಕು, ಅವನ್ನು ತೆಗೆದುಕೊಂಡು ಸೀದ ಮಂಗಳಳ ಅಜ್ಜಿ ಮನೆಗೆ ಹೋಗಿ ದೊಡ್ಡ ರಾದ್ಧಾಂತ ಮಾಡಿದ್ದ. ಕೊನೆಗೆ ಮಂಗಳಳ ಅಪ್ಪ ಅಮ್ಮರನ್ನು ಕರೆಸಿ ಪಂಚಾಯಿತಿ ಮಾಡಿ ‘ಇಬ್ಬರೂ ಒಬ್ಬರಿಗೊಬ್ಬರು ಇಷ್ಟ ಪಟ್ಟಿದ್ದಾರೆ ಮದುವೆ ಆಗಲಿ ಬಿಡು ಓಬಣ್ಣ ಎಂದು ಮನವೊಲಿಸಲು ಪ್ರಯತ್ನಪಟ್ಟಿದ್ದರು. ಆದರೂ ಓಬಣ್ಣ ವಿರೋಧವ್ಯಕ್ತಪಡಿಸಿ ಅಲ್ಲಿಂದ ಟವಲ್ಲನ್ನು ಕೊಡವಿಕೊಂಡು ಎದ್ದು ಹೋಗಿದ್ದ. ಮಂಗಳಳ ಅಜ್ಜಿ, ಮಾವಂದಿರು ಹೊರಗಡೆ ವಿರೋಧವ್ಯಕ್ತ ಪಡಿಸಿದರೂ ಒಳಗೊಳಗೆ ಒಂದುರೀತಿಯಲ್ಲಿ ಖುಷಿಯಾಗಿದ್ದರು. ಉಡಾಳ ನಟರಾಜನಿಗಿಂತ ಪ್ರಕಾಶ ಅವರೆಲ್ಲರಿಗೆ ಇಷ್ಟ ಆಗಿದ್ದ. ಹಾಗಾಗಿಯೇ ಅವರೆಲ್ಲರೂ ಮುಂದಿನಿಂತು ಮದುವೆ ಏರ್ಪಾಟನ್ನು ಮಾಡಿದ್ದರು.

‘ಮತ್ತೆ ಮದುವೆಗೆ ಯಾಕೆ ಬಂದೆ?’ ಎಂದು ಕೇಳಬೇಕೆಂದುಕೊಂಡವನು, ಏನನ್ನೂ ಕೇಳದೆ ಮುನ್ನಡೆದ. ಎಲ್ಲರೂ ಊಟ ಮಾಡಿ, ಫೋಟೋಗಳನ್ನು ತೆಗಿಸಿಕೊಳ್ಳುತ್ತಿದ್ದರು. ಹೋದವನು ಅವರಿಗೆ ವಿಶ್ ಮಾಡಿದ. ಅವರ ಜೊತೆ ಇವನೂ ಫೋಟವನ್ನು ತೆಗೆಸಿಕೊಂಡ.

ಮಂಗಳಳ ದೊಡ್ಡ ಮಾಮ ನಿಜಗುಣಅವರು ಮಂಗಳ ಮತ್ತು ಪ್ರಕಾಶ ಇಬ್ಬರನ್ನೂ ಹಿರಿಯೂರಿಗೆ ಕರೆದುಕೊಂಡು ಹೋಗಿ ಬಟ್ಟೆ ಬಂಗಾರ ಕೊಡಿಸಿದ್ದರು. ತಾಳಿ ಕೊಡಿಸುವಾಗ ‘ಎಂತದಾದ್ರು ತಗಳ್ರಿ ಸದ್ಯಕ್ಕೆ. ಮುಂದೆ ಅವರು ಬೇಕಾದರೆ ಮುರೆಕುಟ್ಟಿಸಿ ಹೊಸದು ಮಾಡಿಸಿಕೊಳ್ತಾರೆ’ ಎಂದಿದ್ದ. ಅದೇ ದಿನ ಬಂಗಾರದ ಅಂಗಡಿಯಿಂದ ಹೊರಗಡೆ ಬರುವಾಗ ಪ್ರಕಾಶನ ಅಮ್ಮನ ಕಡೆಯ ಸಂಬಂಧಿ ನಾಗರಾಜ ತನ್ನ ಮಗಳನ್ನು ಪ್ರಕಾಶನಿಗೆ ಮದುಮೆ ಮಾಡಿಕೊಳ್ಳುವುದಾಗಿ ಪ್ರಕಾಶನ ಅಮ್ಮ ಮತ್ತು ಅಪ್ಪ ಇಬ್ಬರು ಮಾತುಕೊಟ್ಟಿದ್ದರು. ಈಗ ಕುದಿವ ಸಿಟ್ಟಿನಿಂದ ‘ಮೋಸ ಮಾಡ್ತ ಇದೀಯೇನೊ ಬಾಡ್ಕೋ. ಅದೆಂಗೆ ಮದುವೆ ಮಾಡಿಕೊಳ್ಳುತ್ತೀಯ ನಾವು ನೋಡುತ್ತೀವಿ’ ಎಂದು ಬೈದಿದ್ದಲ್ಲದೆ ತನ್ನ ಜೇಬಿನಲ್ಲಿ ಕುಡಿದು ಕಾಲಿ ಮಾಡಿದ್ದ ಓಲ್ಡ್ ಮಾಂಕ್ ಬಾಟಲನ್ನು ಪಕ್ಕದ ಕರೆಂಟಿನ ಕಂಬಕ್ಕೆ ಹೊಡೆದು ಅದರಿಂದ ಅವನನ್ನು ತಿವಿಯಲು ಮುಂದಾಗಿದ್ದ. ಅದನ್ನು ತಡೆಯಲು ಹೋದ ಮಂಗಳಳ ಎರಡನೇ ಮಾಮ ನಿಜಗುಣನ ತಮ್ಮ ಸತೀಶನ ಎಡ ಅಂಗೈಗೆ ತಗುಲಿತ್ತು. ಅದರ ಗುರುತು ಗಾಯವಾಸಿಯಾದರೂ ಅವನ ಕೈಯಲ್ಲಿ ಕಾಯಂಆಗಿ ಉಳಿಯಿತು. ಪ್ರಕಾಶ ಮದುವೆಯಾಗಿ ಕೆಲಸ ಸಿಗುವ ತನಕ ಒಂದು ವರ್ಷ ದಿಂಡಾವರದಲ್ಲಿಯೇ ಇದ್ದು ಬೆಂಗಳೂರಿನ ಯಾವುದೋ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಂದಲೇ ದಿಂಡಾವರಕ್ಕೆ ವಾರಕ್ಕೊಮ್ಮೆ ಓಡಾಡಿಕೊಂಡಿದ್ದ. ಆಗ ಪ್ರಕಾಶ ಮತ್ತು ಮಂಗಳ ಅವರಿಗೆ ಸುನನಯನ ಜನಿಸಿದಳು. ನಂತರ ಒಂದು ವರ್ಷದಲ್ಲಿ ಗುಲ್ಬರ್ಗದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಅಲ್ಲಿಯೇ ಪಿ.ಎಚ್.ಡಿ ಪದವಿಯನ್ನು ಪಡೆದು, ಪ್ರೊಫೆಸರ್ ಆಗಿ ಬಡ್ತಿ ಹೊಂದಿದ. ಅವನ ತಂದೆ ಓಬಣ್ಣ ಆಗೊಮ್ಮೆ ಈಗೊಮ್ಮೆ ಗುಲ್ಬರ್ಗಕ್ಕೆ ದುಡ್ಡು ಕಾಸಿಗೆ ಅವನ ಬಳಿ ಹೋಗಿ ಬರುತ್ತಿದ್ದ. ಓಬಣ್ಣ ಎಲೆ ಅಡಿಕೆಹಾಕಿ ಎಲ್ಲಿ ಅಂದರೆ ಅಲ್ಲಿ ಉಗುಳುವುದು, ಮಾಸಲು ಬಟ್ಟೆಯಲ್ಲಿ ಇರುವುದು ಮಂಗಳಳಿಗೆ ಇಷ್ಟ ಆಗುತ್ತಿರಲಿಲ್ಲ. ಆದರೂ ಅವನನ್ನು ಚೆನ್ನಾಗಿಯೇ ಊಟ ಉಪಚಾರ ಮಾಡಿ ಕಳುಹಿಸುತ್ತಿದ್ದಳು.

ಓಬಣ್ಣ ಮತ್ತು ಅವನ ಮಗ ಪ್ರಕಾಶ ಮಾತಾಡುತ್ತಿದ್ದದ್ದು ಒಂದೇ ಮಾತು. ಅದು ಊರಿಗೆ ವಾಪಸ್ಸು ಹೋಗುವಾಗ. ದುಡ್ಡನ್ನು ಮಂಗಳಳ ಕೈಲಿ ಕೊಟ್ಟು ಕಾಲೇಜಿಗೆ ಹೋಗುತ್ತಿದ್ದ. ಅದನ್ನು ಇಸಕೊಂಡು ಓಬಣ್ಣ ದಿಂಡಾವರಕ್ಕೆ ಬರುತ್ತಿದ್ದ. ಹೋಗೋದಿನ ‘ಊರಿಗೆ ಹೋಗ್ತೀನಿ ಕಣಯ್ಯ’ ಎಂದಷ್ಟೇ ಹೇಳುತ್ತಿದ್ದ. ಅದನ್ನು ಪ್ರಕಾಶ ಕೇಳಿಸಿಯೂ ಕೇಳಿಸಿಕೊಳ್ಳದೆ ತನ್ನ ಕಾಲೇಜಿಗೆ ಕಾರನ್ನು ಚಾಲುಮಾಡಿಕೊಂಡು ಹೋಗುತ್ತಿದ್ದ. ಪ್ರಕಾಶ ಗುಲ್ಬರ್ಗಕ್ಕೆ ಹೋದ ಎರಡು ವರ್ಷ ಕಳೆದ ಮೇಲೆ ಮಂಜು ಹುಟ್ಟಿದ. ಬಾಲ್ಯದಿಂದಲೂ ತುಂಬಾ ಚೂಟಿಯಿದ್ದ ಇವನನ್ನು ಯಾವ ಕಷ್ಟ ಸೋಂಕದೆ ಬೆಳೆಸಿದ್ದರು. ಒಂದು ದಿನಕ್ಕೂ ತನ್ನ ಊರು ದಿಂಡಾವರಕ್ಕೆ ಆಗಲಿ ಹೆಂಡತಿ ಊರು ಪಿಟ್ಲಾಲಿಗಾಗಲಿ ಕಳಿಸಿರಲಿಲ್ಲ. ತನ್ನ ಹೆಂಡತಿಯ ಕಡೆಯವರು ಬಂದರೂ ಅಷ್ಟಕ್ಕಷ್ಟೇ ಅವನು ಅವರ ಹತ್ತಿರ ಮಾತಾಡುತ್ತಿದ್ದುದು. ಊ, ಹ್ಞಾ ಅಷ್ಟೆ ಎನ್ನುವ ಅರೆ ಬರೆ ಪದಗಳು. ಅವಳ ದೊಡ್ಡಮ್ಮನ ಮಗ ಮಹಾದೇವ ಆಗಿಂದಾಗ್ಗೆ ಹೋಗ್ತಾ ಇದ್ದ. ಮಂಗಳ ಮತ್ತು ಅವಳ ಮಕ್ಕಳಾದ ಸುನಯನ ಮತ್ತು ಮಂಜು ಜೊತೆಗೆ ತುಂಬಾ ಸಲಿಗೆಯಿಂದ ಇದ್ದವನೆಂದರೆ ಇವನೊಬ್ಬನೆ. ಅವರೂ ಸಹ ತುಂಬಾ ಹಚ್ಚಿಕೊಂಡಿದ್ದರು ಇವನನ್ನು. ಕ್ರಮೇಣ ಇವನೂ ಹೋಗುವುದನ್ನು ನಿಲ್ಲಿಸಿದ. ಅಷ್ಟೊತ್ತಿಗಾಗಲೇ ಪ್ರಕಾಶ ಯಾವ ನೆಂಟರನ್ನು ಸರಿಯಾಗಿ ಮುಖಕೊಟ್ಟು ಮಾತಾಡಿಸುತ್ತಿರಲಿಲ್ಲ. ಇದು ಹೋದವರಿಗೆಲ್ಲ ಕಿರಿಕಿರಿಯಾಗುತ್ತಿತ್ತು. ಮಂಗಳ ಏನಾದರೂ ಅಪ್ಪಿ ತಪ್ಪಿ ತನ್ನ ಅಜ್ಜಿ, ಮಾವಂದಿರ ಹೆಸರನ್ನು ಎತ್ತಿದರೆ ಸಿಡಿಮಿಡಿಗೊಳ್ಳುತ್ತಿದ್ದ ಮತ್ತು ಅಷ್ಟೇ ಅಲ್ಲದೆ, ತಿಂಗಳುಗಟ್ಟಲೆ ಇಬ್ಬರು ಮಾತನ್ನು ಬಿಡುತ್ತಿದ್ದರು. ಇದನ್ನೆಲ್ಲ ಸಾವಿರ ಸಲ ಫೋನ್ ಮಾಡಿ ತನ್ನ ದೊಡ್ಡಮ್ಮ ಮಹಾದೇವನ ತಾಯಿಯ ಬಳಿ ಹೇಳಿಕೊಂಡು ಅತ್ತಿದ್ದಿದೆ. ತನ್ನ ಮಾವರಬಗ್ಗೆ ಮಾತಾಡಿದರೆ ‘ಈಗಲೂ ನಿನಗೆ ನಿನ್ನ ಮಾವ ನಟರಾಜನ ಮೇಲೆ ಮನಸ್ಸಿದೆ’ ಎಂದೆಲ್ಲ ವ್ಯಂಗ್ಯ ಮಾಡುತ್ತಿದ್ದ. ಜೊತೆಗೆ ನಿನ್ನ ಮಾವ ನಿಜಗುಣ ಅವೊತ್ತು ಹಿರಿಯೂರಿನಲ್ಲಿ ತಾಳಿ ಎಂತಾದಾದ್ರು ತಗಳ್ರಿ’ ಎಂದು ಹೇಳಿದರಲ್ಲ ಎಂದು ಪದೇ ಪದೇ ರೇಗಿಸುತ್ತಿದ್ದ. ಇದು ಅವಳ ಮನಸ್ಸಿಗೆ ತುಂಬಾ ಘಾಸಿ ಆಗ್ತಾ ಇತ್ತು.

ಆದರೆ ಅವಳ ಮಗ ಮಂಜುನನ್ನು ನೋಡಲು ಮಹಾದೇವ ಅವನ ಅಮ್ಮನನ್ನು ಕರೆದುಕೊಂಡು ಹೋಗಿದ್ದ ಸಂಗತಿಯನ್ನು ದೊಡ್ಡ ರಾದ್ಧಂತ ಮಾಡಿದ್ದಳು. ಇತ್ತೀಚೆಗೆ ಗುಲ್ಬರ್ಗಕ್ಕೆ ಅವರ ಮನೆಗೆ ಮಂಗಳಳ ಅಪ್ಪ, ಅಮ್ಮ, ತಮ್ಮಂದಿರು ಮತ್ತು ಪ್ರಕಾಶನ ಅಪ್ಪ ಓಬಣ್ಣನನ್ನು ಹೊರತು ಪಡಿಸಿದರೆ ಬೇರೆ ಯಾರು ಹೋಗುತ್ತಿರಲಿಲ್ಲ. ಮಹಾದೇವನಿಗೆ ಸಂಪೂರ್ಣವಾಗಿ ಫೋನ್ ಮಾಡುವುದನ್ನು ನಿಲ್ಲಿಸಿದ್ದಳು.
ಕಾರು ಮುಂದೆ ಹೋಗ್ತಾ ಇತ್ತು. ತಕ್ಷಣಕ್ಕೆ ಅಲ್ಲಿ ಒಂದು ವಿಚಿತ್ರ ಸನ್ನಿವೇಶ ಜರುಗಿತು.

‘ನನಗೆ ಈ ರಿಂಗ್ ಬೇಡ’ ಎಂದಳು ಲಲಿತ.
‘ಯಾವ ರಿಂಗ್?’
‘ಅದೇ, ಗೌರಿ ಹಬ್ಬಕ್ಕೆ ಎರಡು ವರ್ಷಗಳ ಹಿಂದೆ ನಿನ್ನ ತಂಗಿ ಕೊಟ್ಟಿದ್ದಳಲ್ಲ ಅದು’
‘ಅರೆ, ಅದೇನು ನಿನ್ನನ್ನು ಏನು ಮಾಡೊಲ್ಲ ಬಿಡು.’
‘ಥೂ ನಿನಗೆ ಅವಮಾನ ಅನ್ನೋದು ಆಗೋದಿಲ್ಲವೆ?’
‘ವಸ್ತುಗಳು ಏನು ಮಾಡುತ್ತವೆ?’
‘ನಿರ್ಜೀವ ವಸ್ತುಗಳೇ ಕಾಡುವುದು ಜೀವ ಇರುವವನ್ನು.’
‘ಹೋಗಲಿ ಬಿಡು ಅದನ್ನು ಮಾರಿ ಅದರ ಬದಲಿಗೆ ಇನ್ನೊಂದನ್ನು ಕೊಂಡು ಕೊಂಡರೆ ಆಯ್ತು.’

ಲಲಿತ ತನ್ನ ಬೆರಳಿನಿಂದ ಉಂಗುರವನ್ನು ಬಿಚ್ಚಿ, ಕಾರಿನ ಕಿಟಕಿಯಿಂದಾಚೆ ಎಸಿದಳು. ಅವರ ಕಾರಿನ ಹಿಂದೆ ಚೈನಾವಾಲಿನ ಥರ ಒಂದು ಉದ್ದನೆಯ ಧಡೂತಿ ಲಾರಿ ಬರುತ್ತಿತ್ತು. ‘ಏಯ್ ಕೈಯನ್ನು ಹಾಗೆಲ್ಲ ಹೊರಗೆ ಹಾಕಬೇಡ. ಹಿಂದೆ ಲಾರಿ ಬರುತ್ತಿಲ್ಲವಾ? ಏನ್ ಮಾಡ್ತಾ ಇದೀಯಾ? ಹ್ಞಾ! ಉಂಗುರ ಎಲ್ಲೆ?’ ಎನ್ನುವುದರೊಳಗೆ ಅದು ಹೊರಗೆ ಬಿದ್ದಾಗಿತ್ತು. ರಸ್ತೆಯಾಚೆಯ ಕಮರಿಯೊಳಗೆ ಬಿತ್ತೋ ಅಥವಾ ಲಾರಿಯ ಟೈರಿನಡಿಯಲ್ಲಿ ಸಿಕ್ಕಿ ಹಾಕಿಕೊಂಡು ಅಪ್ಪಚ್ಚಿ ಆಯಿತೋ ಗೊತ್ತಾಗಲಿಲ್ಲ.

‘ಹೋಗಲಿ ಬಿಡು, ಡ್ರೈವ್ ಮಾಡುವಾಗ ಯಾಕೆ ಟೆನ್ಷನ್ ಆಗೋದು. ಮನೆಗೆ ಹೋಗಿ ಕೂತು ಮಾತಾಡಿದರೆ ಆಯ್ತು’ ಎಂದ. ಮತ್ತೆ ತನ್ನ ಮಾತನ್ನ ಮುಂದುವರೆಸಿ, ‘ಲಿಲ್ ಆ ವಿಚಾರವೇ ಬೇಡ. ಬಿಟ್ಟಾಕಿಬಿಡು’ ಎಂದ.

ಸಂಜೆ ಐದು ಗಂಟೆಯಾಗಿತ್ತು. ಲಲಿತಳನ್ನು ಕರೆದು ‘ರೆಡಿಯಾಗು, ಹೊರಗಡೆ ಹೋಗಿ ಬರೋಣ. ಮೊನ್ನೆ ಶಕುಂತ್ಲಜ್ಜಿ ಸಿಕ್ಕು ಲಲಿತಳನ್ನು ಕರೆದುಕೊಂಡು ಬಾ, ನೋಡ್ಹಂಗೆ ಆಗಿದೆ ಎಂದಿದ್ದಳು’ ಎಂದ. ಇಬ್ಬರೂ ತಮ್ಮ ಬಿಳಿಯ ಕಾರಿನಲ್ಲಿ ಶಕುಂತ್ಲಜ್ಜಿಯ ಮನೆಯ ಕಡೆ ಹೊರಟರು. ಮನೆಯ ಮುಂದೆ ಜನ ತುಂಬಿ ತುಳುಕುತ್ತಿತ್ತು. ಜನರನ್ನು ಸರಿಸಿ ದಾರಿ ಮಾಡಿಕೊಂಡು ಹೋಗಿ ನೋಡುತ್ತಾರೆ, ಶಕುಂತ್ಲಜ್ಜಿ ಹೆಣವಾಗಿ ಬಿದ್ದಿದ್ದಾಳೆ. ಅಲ್ಲಿ ನೆರೆದಿದ್ದವರೊಬ್ಬರನ್ನು ವಿಚಾರಿಸಿದಾಗ ಅಜ್ಜಿಯ ಸಂಬಂಧಿಕರೊಬ್ಬರು ಆಸ್ತಿ ವಿಷಯಕ್ಕಾಗಿ ಅವಳನ್ನು ಸಾಯಿಸಿರುವುದಾಗಿ ಹೇಳಿದರು. ಆ ಅಜ್ಜಿಯ ಹಣೆಗೆ ಇಬ್ಬರೂ ಹೋಗಿ ಮುತ್ತನ್ನು ಕೊಟ್ಟರು. ಕೆನ್ನೆಗಳನ್ನು ಸವರಿದರು. ಕಣ್ಣಲ್ಲಿ ನೀರು ಜಿನುಗುತ್ತಿತ್ತು. ತುಂಬಾ ಬೇಸರದಿಂದ ಮನೆಗೆ ಮರಳಿದರು. ಅಂದು ಶನಿವಾರ. ಬೆಳದಿಂಗಳು ಸುರಿಯುತ್ತಿತ್ತು. ತನ್ನ ಮನೆಯ ಅಂಗಳದಲ್ಲಿ ಒಬ್ಬನೇ ಹೋಗಿ ಚೇರನ್ನು ಹಾಕಿಕೊಂಡು ಕಾಲನ್ನು ಚಾಚಿಕೊಂಡು ಕುಳಿತ. ಬೆಳದಿಂಗಳು ಇವನನ್ನು ಎಳೆದು ಕೊಳ್ಳುತ್ತಿತ್ತು. ಬೆಳದಿಂಗಳನ್ನೇ ದಿಟ್ಟಿಸಿ ನೋಡುತ್ತ ಕುಳಿತ. ಯಾರೂ ಇವನನ್ನು ಮಾತನಾಡಿಸುವುದಕ್ಕೆ ಬರಲಿಲ್ಲ. ಒಮ್ಮೆ ಲಲಿತ ಬಂದು ಹೊರಗಡೆ ನೋಡಿ, ಇವನಿಗೆ ಕಾಣಿಸಿಕೊಳ್ಳದೇ ಒಳ ಹೋದಳು. ಬೆಳದಿಂಗಳು ನದಿಯಾಗಿ ಹರಿಯುತ್ತಿರುವುದನ್ನು ನೋಡುತ್ತಲೇ ಹೋದ. ರಾತ್ರಿ ತನ್ನ ಉತ್ಕಟತೆಯ ಮಟ್ಟವನ್ನು ತಲುಪುತ್ತಿದ್ದರೂ ಬೆಳದಿಂಗಳ ಬೆಳಕಿನ ಕಾರಣದಿಂದಾಗಿ ಕತ್ತಲು ಸಂಪೂರ್ಣಕತ್ತಲಾಗಲು ಸಾಧ್ಯವಾಗುತ್ತಿರಲಿಲ್ಲ.

ದೂರದಲ್ಲಿ ಗೂಬೆಯ ಕೂಗು ಅಸ್ಪಷ್ಟವಾಗಿ ಕೇಳುತ್ತಿತ್ತು. ಬೆಳದಿಂಗಳಲ್ಲಿ ಬೆಳ್ಳಕ್ಕಿಗಳು ಹಾರಿ ಹೋಗುತ್ತಿದ್ದವು. ನಂತರ ಕಾಲಿ ಆಕಾಶ. ಮೋಡದ ತುಣುಕೂ ಇಲ್ಲ. ಚುಕ್ಕಿಗಳು ಬೆಳದಿಂಗಳನ್ನು ಬೆಳಗಲು ಬಿಟ್ಟು ಪ್ರಖರತೆಯಿಲ್ಲದೆ ಮಂದವಾಗಿ ತಮ್ಮ ಪಾಡಿಗೆ ತಾವು ಸುಮ್ಮನಿದ್ದವು. ಹಳೆಯ ಒಂದು ರುಪಾಯಿ ಅಗಲದ ಕುಂಕುಮ ಹಣೆಯ ಮೇಲೆ. ಕಣ್ಣುಗಳಲ್ಲಿ ಹೊಳಪು. ಸುಕ್ಕುಗಟ್ಟಿದ ಮುಖವಾದರೂ ಜೀವಕಳೆಯಿಂದ ತುಂಬಿಕೊಂಡಿರುವ ಆಕೃತಿಯೊಂದು ಬೆಳದಿಂಗಳನದಿಯಿಂದ ಎದ್ದು ಇವನು ಕುಳಿತಿರುವ ದಿಕ್ಕಿನ ಕಡೆ ಬರತೊಡಗಿತು. ಆಕೃತಿ ಒಂದು ಹೆಣ್ಣಿನ ರೂಪವಾಗಿ ಸ್ಪಷ್ಟವಾಗಿ ಗೋಚರಿಸತೊಡಗಿತು. ಇವನ ಕಡೆಯೇ ಬರುತ್ತಿದ್ದಾಳೆ. ಬಂದು ಬೆಳದಿಂಗಳ ಬಯಲಿಗೆ ಇವನನ್ನು ಕರೆದುಕೊಂಡು ಹೋದಳು. ಹೋಗಿ ನದಿಯ ದಡದಲ್ಲಿ ಕುಳಿತು ಕೊಂಡಿದ್ದಾರೆ. ನದಿ ಬೆಳದಿಂಗಳೇ ಆಗಿದೆ. ಶಕುಂತ್ಲಜ್ಜಿ ಅವನ ಜೊತೆ ಮಾತಾಡುತ್ತಿದ್ದಾಳೆ. ‘ಏ ಪಾಪ .. ಈ ಬದುಕು ಬದುಕಲ್ಲ. ಈ ಸಂಬಂಧಗಳು ಸಂಬಂಧವಲ್ಲ, ಇದು ಗೊತ್ತಾದವರು ಇರೋಲ್ಲ, ಇದ್ದೋರಿಗೆ ಗೊತ್ತಾಗೊಲ್ಲ. ಬೇಡವಾದ್ದನ್ನು ಕಿತ್ತಾಡಿಕೊಂಡು ಪಡೀತಾರೆ, ಬೇಕಿರುವುದನ್ನು ಕಾಲಲ್ಲಿ ತುಳಕೊಂಡು ಓಡಾಡ್ತಾರೆ. ಏ ಪಾಪ ನಿನಗೆ ಏನೋ ಹೇಳಬೇಕು ಕಣ.’