ಚಿಕ್ಕಮ್ಮನ ಮನೆ ತಲುಪಿದ ಕೂಡಲೇ ನನಗೊಂದು ಮಹತ್ವದ ಸನ್ನಿವೇಶ ಎದುರಾಯಿತು. ಹತ್ತು ದಿನಗಳ ಹಿಂದಷ್ಟೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿಕೊಂಡಿದ್ದ ಮೇಘರಾಜ ಚಿಕ್ಕಪ್ಪ ಹೆಚ್ಚಿನ ಪಕ್ಷ ಹಾಸಿಗೆ ಬಿಟ್ಟು ಮೇಲೆದ್ದಿರಲಾರರು ಎಂದು ಎಣಿಸಿಕೊಂಡಿದ್ದೆ. ಆದರೆ, ಮನೆಯ ಮುಂದೆ ನಮ್ಮ ಕಾರು ನಿಂತು ಕಾಲಿಂಗ್ ಬೆಲ್ ಒತ್ತುವ ಮೊದಲು ಅವರು ಬಂದು ಬಾಗಿಲು ತೆರೆದಾಗ ನನ್ನೆಣಿಕೆಯಲ್ಲ ಸುಳ್ಳಾಗಿ ಹೋಯಿತು.  ಲವಲವಿಕೆಯಿಂದ ಪುಟಿಯುತ್ತಿದ್ದ ಅವರಿಗೆ ತೆರೆದ ಹೃದಯ ಚಿಕಿತ್ಸೆ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವ ಸಾಧ್ಯತೆ ಇರಲಿಲ್ಲ. ಇಂಥ ಅನೇಕ ಅಚ್ಚರಿಗಳು ಒಂದಾದಮೇಲೊಂದರಂತೆ ಎದುರಾಗುತ್ತ, ನನಗೆ ‘ಯುಕೆ’ ಪರಿಚಯವಾಗತೊಡಗಿತು.
ಸತೀಶ್ ಚಪ್ಪರಿಕೆ ಬರೆದ ಥೇಮ್ಸ್ ತಟದ ತವಕ ತಲ್ಲಣ ಕೃತಿಯು ಮರುಮುದ್ರಣಗೊಂಡಿದ್ದು, ಅದರ ಒಂದು ಅಧ್ಯಾಯ ಇಲ್ಲಿದೆ. 

 

ಬೆಳಿಗ್ಗೆ ಹನ್ನೊಂದರ ವೇಳೆ, ಅದು ಬ್ರಿಟನ್ ಕಾಲಮಾನ. ಕಾಲದ ಜೊತೆ ಹಾರಿ ಗುರಿ ತಲುಪುವುದಕ್ಕಿಂತ ಮೊದಲಿನ ಕ್ಷಣಗಳು. ‘ಇನ್ನು ಕೆಲವೇ ಕ್ಷಣಗಳಲ್ಲಿ ನಿಮ್ಮ ಏಮಾನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ನೀವು ಕೂತ ಆಸನವನ್ನು ನೆಟ್ಟಗೆ ಮಾಡಿಕೊಳ್ಳಿ, ಮುಂದಿರುವ ಟ್ರೇ ಮಡಚಿ. ಬೆಲ್ಟ್ ಕಟ್ಟಿಕೊಳ್ಳಿ’ ಗಗನಸಖಿ ಉಲಿದಾಗ, ಒಂಬತ್ತು ಗಂಟೆಯ ದೀರ್ಘ ಪಯಣ ಅಂತ್ಯವಾಗುತ್ತಿರುವುದಕ್ಕೆ ಖುಷಿಯಾಯಿತು. ಮೊದಲೇ ನಿಗದಿಯಾದ ವೇಳಾಪಟ್ಟಿಯ ಪ್ರಕಾರ ವಿಮಾನ ನಿಲ್ದಾಣಕ್ಕೆ ನನ್ನ ತಂಗಿ ಸಪ್ನಾ ಬಂದು ನನ್ನನ್ನು ಇಲ್ಲಿಯೇ ವೇಲ್ಸ್‌ನ ಕಾರ್ಡಿಫ್‌ಗೆ ಬಸ್ಸು ಹತ್ತಿಸಬೇಕಿತ್ತು. ಹೀಥ್ರೋದಿಂದ ಕಾರ್ಡಿಫ್‌ಗೆ ಮೂರು ಗಂಟೆಯ ಪಯಣ. ಅಷ್ಟರೊಳಗೆ ಚಿಕ್ಕಮ್ಮ ಕಾರ್ಡಿಫ್ ಬಸ್ ನಿಲ್ದಾಣಕ್ಕೆ ಬಂದು ನನಗಾಗಿ ಕಾದು ನಿಂತಿರುತ್ತಿದ್ದರು. ಕಾರ್ಡಿಫ್‌ನಿಂದ ಮರ್ಥ‌ರ್ ಟಿಡ್‍ಫಿಲ್‍ ಸುಮಾರು 30 ಮೈಲು ದೂರ. ಅರ್ಧ ಗಂಟೆಯ ಪ್ರಯಾಣ. ಈ ಸುಸಜ್ಜಿತ ವೇಳಾಪಟ್ಟಿ ನಾನು ಬೆಂಗಳೂರಿನಲ್ಲಿದ್ದಾಗಲೇ ಸಿದ್ಧವಾಗಿತ್ತು.

(ಸತೀಶ್‌ ಚಪ್ಪರಿಕೆ)

ಬ್ರಿಟಿಷರ ನಾಡಲ್ಲಿ ಏರ್ ಇಂಡಿಯಾ ವಿಮಾನ ನೆಲ ಸ್ಪರ್ಶ ಮಾಡಿ ಹೀಥ್ರೋದ ನಾಲ್ಕನೇ ಟರ್ಮಿನಲ್‌ನಲ್ಲಿ ನೆಲೆನಿಂತಿತು. ದುರದೃಷ್ಟವೆಂದರೆ ವಿಮಾನದಲ್ಲಿ ನಿದ್ರಾದೇವಿಯನ್ನು ಬಿಟ್ಟು ನನಗೆ ಯಾರ ಬಳಿಯೂ ಸ್ನೇಹ ಸಂಪಾದನೆ ಮಾಡಲು ಸಾಧ್ಯವಾಗಿರಲಿಲ್ಲ. ಇದು ಸಾಧ್ಯವಾಗಿದ್ದಲ್ಲಿ ನಂತರ ಒಂದು ಕಾಲು ಗಂಟೆ ನನ್ನ ಪಾಲಿಗೆ ಹಗುರವಾಗಲಿತ್ತು. ಏಕೆಂದರೆ ನಾನು ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೊಂದಕ್ಕೆ ಅದೇ ಪ್ರಥಮ ಬಾರಿಗೆ ಕಾಲಿಟ್ಟಿದ್ದು, ಈ ಮೊದಲು ಭಾರತದಲ್ಲಿ ಹಲವಾರು ಹಾಗೂ ಶ್ರೀಲಂಕಾದ ಕೊಲಂಬೋ ಅಂತರಾಷ್ಟ್ರೀಯ ವಿಮಾನ ನೋಡಿದ್ದರೂ, ಹೀಥ್ರೋ ಮುಂದೆ ಅವುಗಳೇನೂ ಅಲ್ಲ. ಒಟ್ಟಾರೆ ಗಾತ್ರದ ದೃಷ್ಟಿಯಲ್ಲಿ ರಿಯಾದ್‌ನ ಕಿಂಗ್ ಖಾಲಿದ್ ಮತ್ತು ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಂತರ ಸ್ಥಾನ ಹೀಥ್ರೋದ್ದು, ಆದರೆ, ಜಗತ್ತಿನ ವಾಯುಯಾನದ ಕೇಂದ್ರ ಬಿಂದುವಾಗಿರುವ ಹೀಥ್ರೋ ವಿಮಾನ ನಿಲ್ದಾಣವನ್ನು ಪ್ರತಿ ವರ್ಷ 70000000 ಪ್ರಯಾಣಿಕರು ಬಳಸಿಕೊಳ್ಳುತ್ತಾರೆ. ಲಂಡನ್‌ನಲ್ಲಿ ಹೀಥ್ರೋ ಅಲ್ಲದೇ ಗ್ಯಾಟ್‍ವಿಕ್, ಸ್ಟ್ಯಾನ್‌ಸ್ಟೆಡ್, ಲ್ಯುಟೊನ್ ಮತ್ತು ಲಂಡನ್ ನಗರ ಮುಂತಾದ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳು ಇವೆ. ಆದರೆ, ಜಾಗತಿಕ ವಿಮಾನಯಾನ ಲೋಕದಲ್ಲಿ ಹೀಥ್ರೋ ಅಗ್ರಗಣ್ಯ. ಇದು ಪೂರ್ವ ಪಶ್ಚಿಮಗಳ ನಡುವಿನ ಕೊಂಡಿ. ದಿನವೊಂದಕ್ಕೆ ಈ ವಿಮಾನ ನಿಲ್ದಾಣವನ್ನು ಸುಮಾರು 2 ಲಕ್ಷ ಪ್ರಯಾಣಿಕರು ಬಳಸುತ್ತಾರೆ. ಅಂತಹ ಒಂದು ಬೃಹತ್ ವಿಮಾನ ನಿಲ್ದಾಣದಲ್ಲಿ ಕಾಲಿಡುವ ಅನುಭವ ಇದೇ ಮೊದಲಿನದ್ದು. ಏರೋಬ್ರಿಜ್‌ನಿಂದ ಹೊರಬಿದ್ದ ಮೇಲೆ ಒಂದು ಕ್ಷಣ ನಾನು ಕಳೆದೇ ಹೋದೆ! ಅಪ್ಪಟ ಸಸ್ಯಾಹಾರಿಯ ಜೀವ ಉಳಿಸುವ ದ್ರವ್ಯಗಳೆಲ್ಲವೂ ಇದ್ದುದು ವಿಮಾನದ ಹೊಟ್ಟೆಯಲ್ಲಿದ್ದ ಆ ದೊಡ್ಡ ನೀಲಿ ಸೂಟ್‌ಕೇಸ್‍ನಲ್ಲಿ. ಮುಂದಿನ ನಾಲ್ಕು ತಿಂಗಳ ಜೀವ ಅದರಲ್ಲಿತ್ತು. ಸುತ್ತಲಿನ ವಾತಾವರಣ ನೋಡಿದರೆ, ಬ್ಯಾಗೇಜ್ ಕ್ಲೇಮ್ ವಿಭಾಗ ಎಲ್ಲಿದೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಯಾರನ್ನಾದರೂ ಕೇಳೋಣ ಎಂದರೆ, ಅಲ್ಲಿ ಯಾರಿಗೂ ನನ್ನಂತೆ ನಿಂತುಕೊಳ್ಳುವ ವ್ಯವಧಾನ ಇರಲಿಲ್ಲ. ಎಲ್ಲರೂ ಒಂದೋ ಓಡುತ್ತಿದ್ದರು. ಇಲ್ಲವಾದಲ್ಲಿ ನೆಲದ ಮೇಲಿನ ಸಮತಟ್ಟಾದ ಎಸ್ಕಲೇಟರ್‍ನ ಮೇಲೆ ಝುಯ್ಯೆಂದು ಹಾದು ಹೋಗುತ್ತಿದ್ದರು, ಹೋಗಲಿ ಸ್ವಪ್ನಾ ಬಂದಿದ್ದಾಳಾ? ಎಂದು ತಿಳಿಯೋಣ ಎಂದರೆ ನನ್ನ ಬಳಿ ಮೊಬೈಲ್ ಇಲ್ಲ. “ಅರೈವಲ್‍ನ ಬಾಗಿಲ ಬಳಿ ಸಪ್ನಾ ಬಂದಿರುತ್ತಾಳೆ. ನೀನೇನೂ ಹೆದರೋದು ಬೇಡ. ಅಲ್ಲೇ ಪಕ್ಕದಲ್ಲೇ ಬಸ್‍ಸ್ಟ್ಯಾಂಡ್ ಇದೆ. ಅವಳೇ ಬಸ್ಸು ಹತ್ತುತ್ತಾಳೆ” ಎಂದು ಚಿಕ್ಕಮ್ಮ ಫೋನ್‌ನಲ್ಲಿ ಹೇಳಿದ್ದರು. ಆದರೆ, ನಾನು ಸಪ್ನಾ ಬಳಿ ಹೋಗಬೇಕೆಂದರೆ ಇಮಿಗ್ರೇಷನ್ ಕ್ಲಿಯರ್ ಆಗಬೇಕಿತ್ತು. ನಂತರ ಬ್ಯಾಗೇಜ್ ಕ್ಲೇಮ್ ಮಾಡಿಕೊಂಡು, ಕಸ್ಟಮ್ಸ್ ಅಧಿಕಾರಿಗಳ ಮುಂದೆ ನಿಂತು, ‘ಎಲ್ಲವೂ ಸರಿಯಾಗಿದೆ’ ಎಂಬ ಅನುಮತಿ ಪಡೆದುಕೊಳ್ಳಬೇಕು. ಇಮಿಗ್ರೇಷನ್ ಕೌಂಟರ್ ಮುಂದೆ ನಿಂತಾಗ ಅಲ್ಲಿರುವ ಅಧಿಕಾರಿ ನನ್ನ ವೀಸಾ, ಪಾಸ್‍ಪೋರ್ಟ್ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿ ಒಂದು ಸೀಲ್ ಹೊಡೆದರಷ್ಟೇ ನನಗೆ ಲಂಡನ್ ನಗರದಲ್ಲಿ ಕಾಲಿಡಲು ಅವಕಾಶ. ಇಲ್ಲವಾದಲ್ಲಿ ಮರಳಿ ತವರಿಗೆ. ಈ ತಪಾಸಣೆಯಲ್ಲಿ ಪಾಸಾದ ಮೇಲೆ ಎಂಟಿಆರ್ ಸಾಂಬಾರ್ ಪುಡಿಯಿದ್ದ ಆ ಬೃಹತ್ ಸೂಟ್ ಕೇಸನ್ನು ಕೈ ವಶ ಮಾಡಿಕೊಳ್ಳಬೇಕು, ಮೇಲೆ ಕಸ್ಟಮ್ ರಾಕ್ಷಸರ ಮುಂದೆ ಪೆರೇಡ್, ಅದೃಷ್ಟಕ್ಕೆ ಗ್ರಾಟಿಸ್‌ ವೀಸಾ ಇದ್ದ ಕಾರಣ ಇಮಿಗ್ರೇಷನ್ ಕೌಂಟರ್‍ನಲ್ಲಿ ತೊಂದರೆಯಾಗಲಿಲ್ಲ. ಪಾಸ್‌ಪೋರ್ಟ್‌ನಲ್ಲಿದ್ದ ವೀಸಾ ಸೀಲ್ ಮತ್ತು ನನ್ನ ಛಾಯಾಚಿತ್ರ ನೋಡಿದ ಅಲ್ಲಿನ ವೆಸ್ಟ್ ಇಂಡೀಸ್ ಮೂಲದ ಅಧಿಕಾರಿ ಒಮ್ಮೆ ನನ್ನ ಮುಖ ನೋಡಿದರು. ಕೈಯಲ್ಲಿದ್ದ ದಾಖಲೆ ಪತ್ರಗಳನ್ನು ಪರಿಶೀಲಿಸಿ, “ಓಹ್! ನೀವು ಇಂಡಿಯಾದಿಂದ ಬಂದ ಜರ್ನಲಿಸ್ಟ್. ವೆಲ್‌ಕಮ್ ಟು ಯುಕೆ” ಎಂದು ವೀಸಾ ಮೇಲೆ ಒಂದು ಸೀಲ್ ಗುದ್ದಿ ಬರಮಾಡಿಕೊಂಡರು. ಅದಾದ ಮೇಲೆ ಬಾಗೇಜ್ ಕ್ಲೇಮ್ ಏರಿಯಾಗೆ ಧಾವಿಸಬೇಕಿತ್ತು. ಎಲ್ಲಿದೆ ಅದು? ಪ್ರಶ್ನೆ ಮನದಲ್ಲಿ ಧುತ್ತೆಂದು ಪ್ರತ್ಯಕ್ಷವಾಯಿತು. ಕೊನೆಗೆ ನನ್ನ ಮಾಮೂಲಿ ಟ್ರಿಕ್‌ಗೆ ಮೊರೆಹೋದೆ, ನಮ್ಮದೆ ವಿಮಾನದಲ್ಲಿ ಬಂದಿದ್ದ ಸಹ ಪ್ರಯಾಣಿಕರ ಯಾವುದಾದರೂ ಒಂದು ಗುಂಪು ಅಲ್ಲಿದೆಯೇ ಎಂದು ಹುಡುಕಿದೆ. ಹಾ! ಸಿಖ್ ಕುಟುಂಬವೊಂದು ಕಣ್ಣಿಗೆ ಬಿತ್ತು. ಯಾರಿಗೂ ಅನುಮಾನ ಬರದಂತೆ ಅವರ ಹಿಂದೆ ಸುಮ್ಮನೇ ಹೆಜ್ಜೆ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ನಡೆದ ಮೇಲೆ 7 ಬ್ಯಾಗೇಜ್ ಕ್ಲೀನ್ ಬೆಲ್ಟ್‌ಗಳಿದ್ದ ದೊಡ್ಡ ಹಾಲ್‌ನಲ್ಲಿ ಹೋಗಿ ನಿಂತೆ. ದುರದೃಷ್ಟಕ್ಕೆ ನನ್ನ ಬೃಹತ್ ನೀಲಿ ಸೂಟ್‌ಕೇಸ್ ಕೊನೆಯದಾಗಿ ಪ್ರತ್ಯಕ್ಷವಾಯಿತು. ನಾನು ಅದನ್ನು ಟ್ರಾಲಿ ಮೇಲೆ ಹೇರುವಷ್ಟರಲ್ಲಿ ಮತ್ತೊಂದು ಆತಂಕ. “ಈಗಾಗಲೇ ಸುಮಾರು ಒಂದು ಗಂಟೆ ತಡವಾಗಿದೆ. ಎಲ್ಲಾದರೂ ಸಪ್ನಾ ವಾಪಸು ಹೋಗಿದ್ದರೆ?” ಏನೇ ಆಗಲಿ ಎಂದುಕೊಂಡು ಕಸ್ಟಮ್ಸ್ ಕೌಂಟರ್ ಕಡೆ ಧಾವಿಸಿದೆ. ಒಮ್ಮೆ ನನ್ನ ದಾಖಲೆಗಳನ್ನು ಪರಿಶೀಲಿಸಿದ ಅಲ್ಲಿದ್ದ ಅಧಿಕಾರಿ, ಪಕ್ಕಕ್ಕೆ ಸರಿದು ಅಲ್ಲಿಯೇ ಇದ್ದ ಎಕ್ಸ್‌ ರೇ ಯಂತ್ರದ ಹೊಟ್ಟೆಗೆ ನೀಲಿ ಸೂಟ್‌ಕೇಸ್‌ ಮತ್ತು ಕ್ಯಾಮರಾ ಬ್ಯಾಗ್ ಹಾಕುವಂತೆ ಹೇಳಿದರು. ಅವರ ಅನುಮಾನ ಪರಿಹಾರ ಮಾಡಿ ಹೊರಬರುವಷ್ಟರಲ್ಲಿ ಮತ್ತೆ ಅರ್ಧ ಗಂಟೆಯಾಯಿತು. ಅಂತೂ ಹೊರಗೆ ಬಂದ ಕೂಡಲೇ ಸಪ್ನಾ ಕಣ್ಣಿಗೆ ಬಿದ್ದಳು. “ಅಯ್ಯಪ್ಪ ಬದುಕಿಕೊಂಡೆ.”

ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ನನಗಾಗಿ ಕಾದು ನಿಂತಿದ್ದ ಸಪ್ನಾ, ಹತ್ತಿರ ಬಂದವಳೇ ನನ್ನನ್ನು ಅಪ್ಪಿಕೊಂಡು ಕೆನ್ನೆಗೆ ಸಿಹಿ ಮುತ್ತೊಂದು ನೀಡಿ, ಬ್ರಿಟಿಷ್ಕನ್ನಡದಲ್ಲಿ “ಜೆಟ್ ಲ್ಯಾಗ್ ಇನ್ನೂ ಹೋಗಿಲ್ಲವೇ?” ಎಂದು ವಿಚಾರಿಸಿದಳು. ಅಷ್ಟರಲ್ಲಿ ನನಗೆ ಚಳಿ ಹತ್ತಿಕೊಂಡಿತ್ತು. ಇಂಗ್ಲೆಂಡ್‌ನ ಅಕ್ಟೋಬರ್ ಚಳಿ! ಮೈಮೇಲೆ ಥರ್ಮಲ್ (ಚಳಿ ಪ್ರದೇಶದಲ್ಲಿ ಮೈಗಂಟಿಕೊಂಡಂತೆ ಇರುವ ಒಳ ಉಡುಪುಗಳು) ಇರಲಿಲ್ಲ. ವಾತಾವರಣದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಇದ್ದ ನಾನು ಥರ್ಮಲ್ ಉಡುಪುಗಳನ್ನು ನೀಲಿ ಸೂಟ್‌ಕೇಸ್‌ನಲ್ಲಿ ಹಾಕಿ, ಇಲ್ಲಿ ಭೂಸ್ಪರ್ಶ ಮಾಡಿದ್ದೆ. ಕೊನೆಗೆ ಚಳಿ ಹೋಗಲಾಡಿಸಿಕೊಳ್ಳಲು ಅಲ್ಲಿಯೇ ಇದ್ದ ಕೆಫೆಯೊಂದರಲ್ಲಿ ಇಬ್ಬರೂ ಕೂತು ಕಾಫಿ ಹೀರುತ್ತಿದ್ದ ಸಂದರ್ಭದಲ್ಲಿ ಸಪ್ನಾ ಮತ್ತು ನನ್ನ ನಡುವೆ ಉಭಯಕುಶಲೋಪರಿಯಾಯಿತು. ಮಾತಿನ ನಡುವೆ, “ಬಸ್‌ಸ್ಟ್ಯಾಂಡ್ ಎಷ್ಟು ದೂರ?” ಎಂದು ನಾನು ಕೇಳಿದೆ. “ಹಿಂದಕ್ಕೆ ತಿರುಗಿ ನೋಡು, ಅಲ್ಲಿ 10 ಮೀಟರ್ ದೂರದಲ್ಲಿ ಬಸ್‌ಸ್ಟ್ಯಾಂಡ್ ಇದೆ” ಎಂದು ಸಪ್ನಾ ಹೇಳಿದಾಗ ನಂಬಲಾಗಲಿಲ್ಲ. ಹಿಂತಿರುಗಿ ನಿಂತು ನೋಡಿದೆ. ಹೌದು! ಅಲ್ಲೇ ಟರ್ಮಿನಲ್‌-4ರ ಹೊರಭಾಗದಲ್ಲಿಯೇ ನ್ಯಾಷನಲ್ ಎಕ್ಸ್‍ಪ್ರೆಸ್ ಬಸ್‌ನಿಲ್ದಾಣ ಇತ್ತು. ಬೆಂಗಳೂರಿನಲ್ಲಾದರೆ ವಿಮಾನ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ತಲುಪಲು ಒಂದು ದಿನ ಪೂರ್ತಿ ಬೇಕಲ್ಲ? ಆದರಿಲ್ಲಿ, ಪಕ್ಕದಲ್ಲಿಯೇ ಬಸ್‌ ನಿಲ್ದಾಣ ನೆಲದಾಳದಲ್ಲಿ ಟ್ಯೂಬ್ (ಭೂಗತ ರೈಲು) ಸ್ಟೇಷನ್. ಹೀಥ್ರೋನಲ್ಲಿ ಇಳಿದ ಮರುಕ್ಷಣ ಭೂಗತ ದೊರೆಗಳಾಗಿ ಅಲ್ಲಿರುವ ರೈಲು ನಿಲ್ದಾಣಕ್ಕೆ ಹೋದರೆ, ನೇರವಾಗಿ ಲಂಡನ್ ನಗರದ ನಡುವಿನ ವಿಕ್ಟೋರಿಯಾ ತಲುಪಬಹುದು. ಅಲ್ಲಿಂದ ಗ್ರೇಟ್ ಬ್ರಿಟನ್‌ನ ಯಾವುದೇ ಮೂಲೆಗೆ ಪ್ರಯಾಣ ಬೆಳೆಸಬಹುದು. ಅದೇ ರೀತಿ ನ್ಯಾಷನಲ್ ಎಕ್ಸ್‌ಪ್ರೆಸ್ ಬಸ್ಸುಗಳ ಮೂಲಕ ಗ್ರೇಟ್ ಬ್ರಿಟನ್‌ನ ಯಾವುದೇ ಮೂಲೆಗೆ ಪ್ರಯಾಣ ಬೆಳೆಸಬಹುದು ಎಂದು ಸಪ್ನಾ ವಿವರ ನೀಡಿದಳು. ಕಾಫಿ ಹೀರಿ, ಮೈ ಬೆಚ್ಚಗೆ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಕಾಲಿಟ್ಟೆವು. ಕಾರ್ಡಿಫ್ ಬಸ್ ಸಿದ್ಧವಾಗಿ ನಿಂತಿತ್ತು. 24 ಪೌಂಡ್ ನೀಡಿ ಟಿಕೆಟ್ ಖರೀದಿಸಿ ಟ್ರಾಲಿ ಮೇಲಿದ್ದ ಸೂಟ್ ಕೇಸ್, ಬ್ಯಾಗ್ ಎಲ್ಲವನ್ನೂ ಲಗೇಜ್ ಕ್ಯಾರಿಯರ್‌ಗೆ ತುರುಕುವಷ್ಟರಲ್ಲಿ ಬಸ್ ಹೊರಟು ನಿಂತಿತ್ತು. ಸಪ್ನಾಗೆ ಸದ್ಯದ ಮಟ್ಟಿಗೆ ಬೈ ಹೇಳಿ, ಬಸ್ ಏರುವಷ್ಟರಲ್ಲಿ ನಾನು ಅಕ್ಷರಶಃ ಹೊಸಾಡು ದೈವದ ಮನೆ ಪಾತ್ರಿಯ ರೂಪ ತಳೆದು ಥರ-ಥರ ನಡುಗುತ್ತಿದ್ದೆ. ಆದರೊಮ್ಮೆ ಹವಾನಿಯಂತ್ರಿತ ಬಸ್ ಏರಿದ ಮೇಲೆ ಚಳಿ ನಿಯಂತ್ರಣಕ್ಕೆ ಬಂತು. ಈ ನಡುವೆ ಹನಿ ಹನಿಯಾಗಿ ಮಳೆ ಶುರುವಾಯಿತು. ಹೊಂಬಿಸಿಲು, ಬಸ್ಸು ಲಂಡನ್ ನಗರದ ಹೊರವಲಯದಲ್ಲಿದ್ದ ಮೋಟಾರ್ ವೇ-4 (ಎಂ-4) ಹಿಡಿದ ಮೇಲೆ ಎತ್ತ ನೋಡಿದರೂ ಹಸಿರೋ ಹಸಿರು, ಹನಿ- ಹನಿ ಮಳೆ ನಡುವೆ ಹಚ್ಚ ಹಸಿರಿನ ಪರದೆಯನ್ನು ಕಣ್ಣ ಮುಂದೆ ಎಳೆದುಕೊಂಡು ಹೋದಂತೆ, ರಿಡಿಂಗ್, ಸ್ವಿಂಡನ್, ನ್ಯೂಪೋರ್ಟ್ ಹಾದಿ ಮೂಲಕ ಎಂ-4ನಲ್ಲಿ ಕಾರ್ಡಿಫ್‌ನತ್ತ ಬಸ್ಸು ವೇಗವಾಗಿ ಸಾಗಿತ್ತು. ಕಣ್ಣು ಮುಚ್ಚಿ ಕುಳಿತವನ ಮನದ ಪರದೆಯ ಮೇಲೆ ನಾಗೂರಿನ ನಮ್ಮ ಹೊಟೇಲ್-ಮನೆ ಮುಂದಿದ್ದ ರಾಷ್ಟ್ರೀಯ ಹೆದ್ದಾರಿ-17ರ ಚಿತ್ರ ಧುತ್ತೆಂದು ಪ್ರತ್ಯಕ್ಷವಾಯಿತು.

ಸಿಪಿಸಿ, ಹನುಮಾನ್, ಮಂಜುನಾಥ ಬಸ್ಸುಗಳ ಗಾಢ ನೆನಪು. ಹುಟ್ಟಿದ್ದೇ ಹೋಟೆಲ್-ಮನೆ ಇದ್ದ ನಾಗಯ್ಯ ಶೆಟ್ಟರ ಬೃಹತ್ ಕಟ್ಟಡದಲ್ಲಿ ಆ ಕಟ್ಟಡದ ಎದುರು ನಿಂತರೆ ಎಡಬದಿಯಲ್ಲಿ ನಮ್ಮ ಹೋಟೇಲ್-ಮನೆ, ಪಕ್ಕದಲ್ಲಿಯೇ ಹಮೀದ್ ಸಾಹೇಬರ ಬೀಡಿ ಡಿಪೊ- ದುಖಾನ್. ಅದಾದ ಮೇಲೆ ಉಪ್ಪರಿಗೆಗೆ ಹೋಗುವ ಮೆಟ್ಟಿಲು. ಬದಿಯಲ್ಲಿಯೇ ಒಂದು ಬಳೆ ಅಂಗಡಿ, ಕೊನೆಗೆ ಶೆಟ್ಟರ ಖಾಸಾ ಅಂಗಡಿ ಆದರೆ ಬಾಗಿಲು ಯಾವಾಗಲೂ ಬಂದ್! ಮುಂದಿದ್ದ ಹೆದ್ದಾರಿ-17 (ಎನ್‌ಎಚ್-17) ಕ್ಕೂ ನಾಗಯ್ಯ ಶೆಟ್ಟರ ಕಟ್ಟಡಕ್ಕೂ ನಡುವೆ ಒಂದು ವಿಶಾಲವಾದ ಮೈದಾನ. ಆ ಮೈದಾನದಲ್ಲಿ ನಮ್ಮ ಬಾಲಕರ ಪಡೆಯ ಕ್ರಿಕೆಟ್. ನಮ್ಮ ಪೈಕಿ ಯಾರಾದರೂ ಒಬ್ಬರು ಚೆಂಡನ್ನು ಬಲವಾಗಿ ಹೊಡೆದರೆ ಚೆಂಡು ರಾಷ್ಟ್ರೀಯ ಹೆದ್ದಾರಿ ಆಚೆ ಬದಿ ಹೋಗಿ ಬಿದ್ದು ಬಿಡುತ್ತಿತ್ತು. ಆಗ ಯಾರಾದರೂ ಒಬ್ಬರು ಬಹಳ ಎಚ್ಚರದಿಂದ ರಸ್ತೆ ದಾಟಿ ಚೆಂಡನ್ನು ಹೆಕ್ಕಿ ತರಬೇಕಾಗುತ್ತಿತ್ತು. ಭರ್ರೆಂದು ಹಾದು ಹೋಗುವ ಮುಂಬೈ ಲಕ್ಷುರಿ ಬಸ್‌ಗಳು, ಒಂದರ ಹಿಂದೊಂದರಂತೆ ಮುನ್ನುಗ್ಗುವ ನೂರಾರು ಲಾರಿಗಳು, ಕೆಲವೊಮ್ಮೆ ಹೊಸ ಬಸ್‌ -ಲಾರಿ ಚಾಸಿಗಳ ಸಾಲು ಮೆರವಣಿಗೆ, ದಿನಕ್ಕೆ ಐದಾರು ಬಾರಿ ಸಿಪಿಸಿ ಹನುಮಾನ್ ಬಸ್ಸುಗಳ ಹರಿದಾಟ. ಎಷ್ಟೋ ರಾತ್ರಿ ನಮ್ಮ ಕಟ್ಟಡದ ಬಲಬದಿಯಲ್ಲಿದ್ದ ಜಗಲಿಯ ಮೇಲೆ ಮಕಾಡೆ ಮಲಗಿ ರಸ್ತೆಯ ಮೇಲೆ ಹಾದು ಹೋಗುತ್ತಿದ್ದ ವಾಹನಗಳನ್ನು ಎಣಿಸುತ್ತಿದ್ದೆ. ಇನ್ನು ಬೆಳದಿಂಗಳು ತುಂಬಿದ ರಾತ್ರಿ ವಾಹನ ಸಂಚಾರ ಕಡಿಮೆಯಿದ್ದಾಗ ಆ ಕಪ್ಪು ರಸ್ತೆಯ ಮೇಲೆ ಮಲಗಿ ನಕ್ಷತ್ರಗಳನ್ನು ಎಣಿಸುತ್ತಿದೆ. ಹಾಗೆ ಹಾಲು ಬೆಳದಿಂಗಳ ನಡುವೆ ಉದ್ದಕ್ಕೆ ಚಾಚಿ ನಿಂತಿರುತ್ತಿದ್ದ ಕಪ್ಪು ರಸ್ತೆ ಮೇಲೆ ಮಲಗಿ, ಅದರ ಉದ್ದಕ್ಕೂ ಕಣ್ಣು ಹಾಯಿಸಿದಾಗ… ಇದೇ ರಸ್ತೆಯ ಮೇಲೆ ನೇರವಾಗಿ ಸಾಗಿದಲ್ಲಿ ತುದಿಯಲ್ಲಿ ಮಿನುಗುತ್ತಿರುತ್ತಿದ್ದ ನಕ್ಷತ್ರ ಪುಂಜಗಳ ಊರನ್ನು ತಲುಪಬಹುದೇ? ಎಂದು ಹಲವು ಬಾರಿ ಕನಸು ಕಂಡಿದ್ದನ್ನು ನೆನಪಿಸಿಕೊಂಡಾಗ ನಗು ತಡೆಯಲಾಗಲಿಲ್ಲ. ಪಕ್ಕದಲ್ಲಿಯೇ ಕೂತಿದ್ದ ಒಬ್ಬ ಬ್ರಿಟಿಷ್ ಪ್ರಯಾಣಿಕ “ವ್ಹಾಟ್ ಹ್ಯಾಪನ್ಸ್?” ಎಂದು ನನ್ನ ನಗುವಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದಾಗ, “ನಥಿಂಗ್. ಐ ರಿಮೆಂಬರ್ಡ್ ಸಮ್ ಫನ್ನಿ ಇನ್ಸಿಡೆಂಟ್ ಆಫ್ ಮೈ ಚೈಲ್ಡ್ ಹುಡ್ ಡೇಸ್” ಎಂದು ಉತ್ತರಿಸಿದೆ. ಆತ ಕೂಡ ಒಂದು ಕಿರುನಗೆ ಸೂಸಿ ಓದುತ್ತಿದ್ದ ಪುಸ್ತಕದಲ್ಲಿ ಮುಳುಗಿ ಹೋದ. ಓಡುತ್ತಿದ್ದ ಬಸ್‌ನ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದೆ.

ದಿನವೊಂದಕ್ಕೆ ಈ ವಿಮಾನ ನಿಲ್ದಾಣವನ್ನು ಸುಮಾರು 2 ಲಕ್ಷ ಪ್ರಯಾಣಿಕರು ಬಳಸುತ್ತಾರೆ. ಅಂತಹ ಒಂದು ಬೃಹತ್ ವಿಮಾನ ನಿಲ್ದಾಣದಲ್ಲಿ ಕಾಲಿಡುವ ಅನುಭವ ಇದೇ ಮೊದಲಿನದ್ದು. ಏರೋಬ್ರಿಜ್‌ನಿಂದ ಹೊರಬಿದ್ದ ಮೇಲೆ ಒಂದು ಕ್ಷಣ ನಾನು ಕಳೆದೇ ಹೋದೆ!‌

ಎನ್‌ಎಚ್-17 ಮತ್ತು ಎಂ-4 ನಡುವೆ ಅದೆಷ್ಟು ಅಂತರ! ನನ್ನ ಕಣ್ಣ ಮುಂದೆಯೇ ಸಿಂಗಲ್ ರೋಡ್ ಆಗಿದ್ದ ಎನ್ ಎಚ್-17 ಡಬಲ್ ರೋಡ್ ಆಗಿ ಪರಿವರ್ತನೆಗೊಂಡಿತ್ತು. ಅದಕ್ಕೆ ಬರೋಬ್ಬರಿ 15 ವರ್ಷ ತೆಗೆದುಕೊಂಡಿತ್ತು. ಆದರಿಲ್ಲಿ ಇದರ ನಾಲ್ಕು ಪಟ್ಟು ದೊಡ್ಡದಾದ ಮೋಟಾರು ವೇ. ಏಕಕಾಲಕ್ಕೆ ಎಂಟು ವಾಹನಗಳು ಚಲಿಸಬಹುದಾದ ರಸ್ತೆ, ಒಂದು ಬದಿಯ ಏಕಮುಖ ರಸ್ತೆಯಲ್ಲಿ ನಾಲ್ಕು ವಾಹನಗಳು ಒಟ್ಟಾಗಿ ಚಲಿಸುವಂತಹ ವ್ಯವಸ್ಥೆ, ಜೊತೆಗೆ ಎರಡು ಬದಿಯ ಏಕಮುಖ ರಸ್ತೆಗಳ ನಡುವೆ ಯಾವುದೇ ಸಂಪರ್ಕ ಇಲ್ಲ. ರಸ್ತೆಯ ನಡುವೆ ಹಾಗೂ ಎರಡು ಬದಿಗೆ ಬಲವಾದ ಲೋಹದ ಅಡ್ಡಗಟ್ಟೆಗಳು ಯಾವುದೇ ಕಾರಣಕ್ಕೂ ಯಾರೂ ಮೋಟಾರು ವೇಗಳಲ್ಲಿ ನಡೆದು ಹೋಗುವ ಹಾಗಿಲ್ಲ. ಪ್ರತಿ ಸಂದರ್ಭದಲ್ಲಿ ಈ ಮೋಟಾರ್ ವೇ ಪಟ್ಟಣ, ನಗರ ಹಾಗೂ “ಬೃಹತ್ ನಗರದ ಹೊರವಲಯದಲ್ಲಿನ ಬೈಪಾಸ್‌ಗಳಲ್ಲಿಯೇ ಹಾದು ಹೋಗುತ್ತಿತ್ತು ಆಯಾ ಪಟ್ಟಣ, ನಗರ ಅಥವಾ ಬೃಹತ್ ಪಟ್ಟಣ ಪ್ರವೇಶಿಸಬೇಕಿದ್ದವರು ರಸ್ತೆ ಕೊನೆಯ ಲೇನ್ ಮೂಲಕ ಅಡ್ಡ ದಾರಿ ಹಿಡಿದು, ಫ್ಲೈ ಓವರ್ ಹತ್ತಿಯೋ ಮೋಟಾರ್ ವೇ ಸಂಪರ್ಕ ಕಡಿದುಕೊಳ್ಳಬಹುದಿತ್ತು. ಒಟ್ಟಾರೆ ದೂರ ಪ್ರಯಾಣ ಮಾಡುವವರಿಗೆ ಯಾವುದೇ ಅಡೆತಡೆಯಿಲ್ಲದೇ ವೇಗವಾಗಿ ಧಾವಿಸಲು ಹೇಳಿ ಮಾಡಿಸಿದಂತಹ ರಸ್ತೆಯಂತೆ ಮೋಟಾರ್ ವೇ ಕಣ್ಣಿಗೆ ಬಿತ್ತು. ಅದರ ಪರಿಣಾಮ ನಮ್ಮ ಬಸ್ಸು ಹಾಗೂ ಮತ್ತಿತರ ವಾಹನಗಳು ಗಂಟೆಗೆ 80 ಮೈಲುಗಳಷ್ಟು ವೇಗವಾಗಿ ಎಂ-4ನಲ್ಲಿ ಮುನ್ನುಗ್ಗುತ್ತಿದ್ದವು. ಎಲ್ಲಾದರೂ, ಎನ್‌ಎಚ್-17ರಂತೆ ಇಲ್ಲಿ ಕೂಡ ದನ-ಎಮ್ಮೆಗಳು ರಸ್ತೆಗೆ ನುಗ್ಗಿ ಬಿಟ್ಟರೆ!?
“ಅಲ್ಲಾ, ಎಲ್ಲಾದರೂ ಇದ್ದಕ್ಕಿದ್ದಂತೆ ದನ-ಎಮ್ಮೆ ನುಗ್ಗಿದ್ರೆ ನಮ್ಮ ಗತಿ ಏನು?” ಡ್ರೈವರ್ ಸೀಟಿನಲ್ಲಿದ್ದ ಚಿಕ್ಕಮ್ಮ ಸುನಂದ ಬಳಿ ಕೇಳಿದಾಗ ಅವರು ಬಿದ್ದು ಬಿದ್ದು ನಕ್ಕು ಬಿಟ್ಟರು. ಕಾರ್ಡಿಫ್‌ನಲ್ಲಿ ನಾನು ಬಸ್ಸಿಳಿಯುವ ಮೊದಲೇ ಅವರು ಅರೈವಲ್ ಪ್ಲಾಟ್ ಫಾರ್ಮ್ ಬಳಿ ನಿಂತಿದ್ದರು. ಅಲ್ಲಿಂದ ಮರ್ಥರ್ ಟಿಡ್‌ಫಿಲ್‌ನಲ್ಲಿದ್ದ ಅವರ ಮನೆಯ ಕಡೆ ನಮ್ಮ ಪಯಣ ಮುಂದುವರಿಯಿತು. ಕಾರ್ಡಿಫ್ ನಗರ ದಾಟಿ ಎಕ್ಸ್‌ಪ್ರೆಸ್‌ ವೇಗೆ ಕಾರು ಪ್ರವೇಶಿಸಿದ ಕೂಡಲೇ ಸುನಂದ ಚಿಕ್ಕಮ್ಮ ಕಾರಿನ ವೇಗವನ್ನು ಇಮ್ಮಡಿಗೊಳಿಸಿದಾಗ ಚಳಿ ಹೆಚ್ಚಾಯಿತು. ಒಬ್ಬ ಪರಿಣಿತ ಡ್ರೈವರ್ ರೀತಿಯಲ್ಲಿ ಅವರು ಕಾರನ್ನು ಗಂಟೆಗೆ 80 ಮೈಲು ವೇಗವಾಗಿ ಚಲಾಯಿಸಲು ಆರಂಭಿಸಿದಾಗ ಮೇಲಿನ ಪ್ರಶ್ನೆ ಹಾಕಿದೆ. “ಇಲ್ಲ ಕಣೋ, ಇಲ್ಲಿ ಹಾಗೆಲ್ಲ ಯಾವುದೇ ಸಾಕುಪ್ರಾಣಿಗಳು ರಸ್ತೆಗೆ ನುಗ್ಗೊಲ್ಲ. ನಾವೀಗ ಹೋಗ್ತಾ ಇರೋದು ಎಕ್ಸ್‌ಪ್ರೆಸ್‌ ವೇನಲ್ಲಿ. ಇದು ನಮ್ಮೂರಿನ ರಾಜ್ಯ ಹೆದ್ದಾರಿಗಳ ತರಹ. ಇಂತಹ ಎಕ್ಸ್ಪ್ರೆಸ್ ವೇ ಮತ್ತು ಮೋಟಾರ್ ವೇನಲ್ಲಿ ಪ್ರಾಣಿ ಅಥವಾ ಮನುಷ್ಯರು ನಡೆದು ಹೋಗುವ ಸಾಧ್ಯತೆಯೇ ಇಲ್ಲ. ಆದರೂ ಕೆಲವೊಮ್ಮೆ ಅತಿಯಾದ ವೇಗದ ಪರಿಣಾಮವಾಗಿ ಆಕ್ಸಿಡೆಂಟ್ ಆಗುತ್ತೆ. ಹಾಗಾದಾಗ ಒಂದು ಅಥವಾ ಎರಡು ವಾಹನಗಳಿಗೆ ಹಾನಿಯಾಗೊಲ್ಲ. ಒಂದರ ಹಿಂದೆ ಮತ್ತೊಂದರಂತೆ ಕನಿಷ್ಠ ಪಕ್ಷ 5 ರಿಂದ 10 ವಾಹನಗಳು ಒಂದಕ್ಕೊಂದು ಹೊಡೆದುಕೊಂಡು ರಸ್ತೆ ಸ್ವಲ್ಪ ಹೊತ್ತು ಬ್ಲಾಕ್ ಆಗಿ ಬಿಡುತ್ತೆ” ಎಂದು ಎಕ್ಸ್ಪ್ರೆಸ್ ಮತ್ತು ಮೋಟಾರ್ ವೇ ಮಹಿಮೆಯ ವಿವರ ನೀಡಿ, ‘ಆಡಿ ಕಾರನ್ನು ಮಕ್ಕಳಾಡಿಸುವಂತೆ ಮುನ್ನುಗ್ಗಿಸಿದರು. ಮೂವ್ವತ್ತು ಮೈಲಿ ದೂರವನ್ನು ಮೂವ್ವತ್ತು ನಿಮಿಷಗಳಲ್ಲಿ ಕ್ರಮಿಸಿದ ನಾವು ಮರ್ಥರ್ ಟಿಡ್ ಫಿಲ್ ಪಟ್ಟಣ ಪ್ರವೇಶಿಸಿದಾಗ ಮಧ್ಯಾಹ್ನ ಮೂರೂವರೆ ಗಂಟೆ. ರಸ್ತೆಯ ಮೇಲೆ ಒಂದು ನರಪಿಳ್ಳೆಯೂ ಇಲ್ಲ. ಖಾಲಿಯಾಗಿದ್ದ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ನಿಲ್ಲಿಸಿದ ಚಿಕ್ಕಮ್ಮ, ನನ್ನತ್ತ ತಿರುಗಿ ನೋಡಿ ನಕ್ಕರು. ಏಕೆಂದರೆ, ನಾಲ್ಕು ರಸ್ತೆಗಳು ಸೇರುತ್ತಿದ್ದ ಆ ಸಿಗ್ನಲ್‌ನಲ್ಲಿ ಬೇರೆ ಒಂದೇ ಒಂದು ವಾಹನ ಇರಲಿಲ್ಲ. ನಮ್ಮ ಮುಂದೆ ಕೆಂಪು ದೀಪ ಇದ್ದ ಕಾರಣ, ಅವರು ಮುನ್ನುಗ್ಗಲಿಲ್ಲ, ಹಸಿರು ದೀಪ ಬರುವುದನ್ನು ಕಾದು ಕೂತರು. ಅಕಸ್ಮಾತ್ ಇದೇ ಸನ್ನಿವೇಶ ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ಎದುರಾಗಿದ್ದರೆ?

ಅದಕ್ಕಿಂತ ಒಂದು ಮಹತ್ವದ ಸನ್ನಿವೇಶ ಎದುರಾಯಿತು. ಹತ್ತು ದಿನಗಳ ಹಿಂದಷ್ಟೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿಕೊಂಡಿದ್ದ ಮೇಘರಾಜ ಚಿಕ್ಕಪ್ಪ ಹೆಚ್ಚಿನ ಪಕ್ಷ ಹಾಸಿಗೆ ಬಿಟ್ಟು ಮೇಲೆದ್ದಿರಲಾರರು’ ಎಂದು ಎಣಿಸಿಕೊಂಡಿದ್ದೆ. ಆದರೆ, ಮನೆಯ ಮುಂದೆ ನಮ್ಮ ಕಾರು ನಿಂತು ಕಾಲಿಂಗ್ ಬೆಲ್ ಒತ್ತುವ ಮೊದಲು ಅವರು ಬಂದು ಬಾಗಿಲು ತೆರೆದಾಗ ನನ್ನೆಣಿಕೆಯಲ್ಲ ಸುಳ್ಳಾಗಿ ಹೋಯಿತು.

ಲವಲವಿಕೆಯಿಂದ ಪುಟಿಯುತ್ತಿದ್ದ ಅವರಿಗೆ ತೆರೆದ ಹೃದಯ ಚಿಕಿತ್ಸೆ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವ ಸಾಧ್ಯತೆ ಇರಲಿಲ್ಲ. ಮೂಲತಃ ವೈದ್ಯರೇ ಆಗಿರುವ ಅವರು ಮರ್ಥರ್‍ಗೆ ಬಂತು ನೆಲೆಸಿ ಮೂರು ದಶಕಗಳೇ ಆಗಿ ಹೋಗಿದ್ದವು. ಆ ಪುಟ್ಟ ಊರಿನಲ್ಲಿ ತಮ್ಮ ವೃತ್ತಿ ಜೀವನ ಕಟ್ಟಿದ ಮೇಘರಾಜ್ -ಸುನಂದಾ ದಂಪತಿ ಪಾಲಿಗೆ ಮರ್ಥರ್ ತವರೂರಾಗಿ ಹೋಗಿತ್ತು. ಇರುವ ಮೂರು ಮಕ್ಕಳ ಪೈಕಿ ದೊಡ್ಡವಳು ರಜನಿ ಮದುವೆಯಾಗಿ ಲಂಡನ್‌ನಲ್ಲಿ ಸೆಟಲ್ ಆಗಿದ್ದಳು, ಎರಡನೆಯವಳು ಸಮ್ಮ ಕಾನೂನು ವ್ಯಾಸಂಗ ಮಾಡಲು ಲಂಡನ್ ಸೇರಿ ಹಾಸ್ಟೆಲ್‌ನಲ್ಲಿದ್ದಳು. ಮೂರನೆಯವ ಆದರ್ಶ್ ಮರ್ಥ‌ರ್‍ನಲ್ಲಿಯೇ ಹೈಸ್ಕೂಲ್‌ನಲ್ಲಿ ಓದುತ್ತಿದ್ದ. ಒಟ್ಟಾರೆ ಐದು ಮಂದಿಯ ಸಂಸಾರ ಈಗ ಮೂರಕ್ಕೆ ಇಳಿದಿದೆ. ಬಹಳ ವರ್ಷಗಳ ನಂತರ ಹೃದಯ ಚಿಕಿತ್ಸೆಗೆ ದೀರ್ಘ ರಜೆ ಪಡೆದಿದ್ದ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಬ್ಬರಿಗೂ ಇಂತಹ ಸಂದರ್ಭದಲ್ಲಿ ನಮ್ಮವರು ಯಾರೂ ಹತ್ತಿರವಿಲ್ಲವಲ್ಲ ಎಂಬ ಕೊರಗು ಕಾಡುತ್ತಿದ್ದಾಗಲೇ ನಾನು ಅಲ್ಲಿಗೆ ಹೋಗುವ ಅವಕಾಶ ಒದಗಿ ಬಂದಿದ್ದು, ಅಂತಹ ಬಹು ನಿರೀಕ್ಷಿತ ವಾತಾವರಣದ ನಡುವೆ ಆ ಮನೆಗೆ ಕಾಲಿಟ್ಟ ನನಗೆ ಯುನೈಟೆಡ್ ಕಿಂಗ್‌ಡಮ್ ಆಫ್ ಬ್ರಿಟನ್‌ನ (ಯುಕೆ) ರೀತಿ-ರಿವಾಜುಗಳನ್ನು ಅರಿಯಲು ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸದವಕಾಶ ದೊರಕಿದಂತಾಯಿತು.

ಅಂತಹ ಮೊದಲ ಅನುಭವವಾಗಿದ್ದು ನಾನು ಹೋದ ಮರುದಿನ, ಥರಗುಟ್ಟುವ ಚಳಿಯ ನಡುವೆ ಎದ್ದು, ಮೊದಲ ಮಹಡಿಯ ನನ್ನ ಕೋಣೆಯಿಂದ ಕೆಳಗಿದ್ದ ಅಡುಗೆ ಮನೆಗೆ ಬಂದವನೇ ಅಲ್ಲಿದ್ದ ಚಿಕ್ಕಮ್ಮನ ಬಳಿ, “ನ್ಯೂಸ್ ಪೇಪರ್ ಬಂದಿದೆಯಾ?” ಎಂದು ಕೇಳಿದೆ. ಬೆಂಗಳೂರಿನ ನನ್ನ ತೋಟದ ಮನೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ನಾನು ಮಾಡುತ್ತಿದ್ದ ಮೊದಲ ಕೆಲಸ ಬಾಗಿಲು ತೆಗೆದು, ಅಲ್ಲಿ ಬಿದ್ದಿರುತ್ತಿದ್ದ ನ್ಯೂಸ್ ಪೇಪರ್ ಎತ್ತಿಕೊಳ್ಳುವುದು. ಆದರಿಲ್ಲಿ… ಚಿಕ್ಕಮ್ಮನೇ ಗತಿ. “ಇಲ್ಲ ನಾವು ಪ್ರತಿ ದಿನ ನ್ಯೂಸ್ ಪೇಪರ್ ತರಿಸೊಲ್ಲ. ಬದಲಾಗಿ ಶನಿವಾರ ಮತ್ತು ಭಾನುವಾರ ಮಾತ್ರ ಅಗತ್ಯ ಬಿದ್ದಲ್ಲಿ ನ್ಯೂಸ್ ಸ್ಟಾಂಡ್‌ನಿಂದ ಪೇಪರ್ ತರುತ್ತೇವೆ’ ಎಂದಾಗ ಏನು ಹೇಳಬೇಕೆಂದು ಅರಿಯಲಿಲ್ಲ. ನನ್ನ ದಿನಚರಿಯ ಅರಿವಿದ್ದ ಅವರು “ಇಲ್ಲಿ ಎಲ್ಲರೂ ಅಷ್ಟೇ, ಅಗತ್ಯವಿದ್ದಾಗ ಮಾತ್ರ ನೂಸ್ ಪೇಪರ್ ಮನೆಗೆ ತರುತ್ತಾರೆ” ಎಂದಾಗ ವಾಸ್ತವದ ಅರಿವಾಯಿತು. ಹೀಗೆ ಪ್ರತಿ ಕ್ಷಣ, ಪ್ರತಿ ದಿನ ಅಲ್ಲಿನ ಜೀವನದ ಪರಿಚಯ ಆರಂಭವಾಯಿತು.

ಬೆಂಗಳೂರಿನ ಮನೆಯಿಂದ ನೇರವಾಗಿ ಬಂದು ಲಂಡನ್‌ನ್ನ ಹೃದಯ ಭಾಗದಲ್ಲಿರುವ ಗೂಜ್ ಸ್ಟ್ರೀಟ್‌ನ ಸ್ಕಾಲಾ ಹೌಸ್ ಸೇರಿದ್ದರೆ ನನ್ನ ಜೀವನ ಇಷ್ಟು ಸುಲಭವಾಗುತ್ತಿರಲಿಲ್ಲ. ಬದಲಾಗಿ ನಮ್ಮದೇ ಮನೆಯೊಳಗೆ ಕಾಲಿಟ್ಟ ಕಾರಣ, ಹೋಮ್ ಸಿಕ್‌ನೆಸ್ ಕಾಡಲಿಲ್ಲ. ಜೊತೆಗೆ ಚಿಕ್ಕಮ್ಮ-ಚಿಕ್ಕಪ್ಪನಿಂದ ದಿನನಿತ್ಯದ ಜೀವನ ಪಾಠಗಳು. ಬೆಳಗಿನ ಉಪಹಾರದ ನಂತರ ಪ್ರತಿ ದಿನ ನಾನು ಸುನಂದಾ ಚಿಕ್ಕಮ್ಮ ಒಂದು ಸುತ್ತು ಹೊರಗೆ ಹೋಗಿ ಶಾಪಿಂಗ್, ಸೈಟ್ ಸೀಯಿಂಗ್ ಮಾಡಿಕೊಂಡು ಬರುತ್ತಿದ್ದೆವು.

ಇತಿಹಾಸ ಮತ್ತು ಪ್ರಕೃತಿ ಪ್ರಿಯರ ಪಾಲಿಗೆ ಮರ್ಥರ್ ಟಿಡ್ ಫಿಲ್ ಬೃಹತ್ ಭಂಡಾರ, ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಪುಟ್ಟ ಪಟ್ಟಣ ಹಲವು ಏಳು ಬೀಳುಗಳಿಗೆ ಸಾಕ್ಷಿಯಾಗಿ ನಿಂತ ಐತಿಹಾಸಿಕ ನೆಲೆ, ಸುಮಾರು ಎರಡು ಶತಮಾನಗಳ ಹಿಂದೆ, ನಮ್ಮ ಈಗಿನ ಬಳ್ಳಾರಿ ಯಂತೆ ಜಾಗತಿಕ ನೆಲೆಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಅತ್ಯಂತ ಪ್ರಸಿದ್ದವಾದ ಮರ್ಥರ್ ಟೆಡ್ ಫಿಲ್ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿತ್ತು. 1851 ರಲ್ಲಿ 46,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದ ಈ ಪಟ್ಟಣ ನಂತರ ಕಾರ್ಮಿಕ ಸಂಘಟನೆಗಳ ಹೋರಾಟಗಳ ನೆಲೆಯಾಯಿತು. ಇಲ್ಲಿ ಗಣಿ ಹಾಗೂ ಕಬ್ಬಿಣ ಸಂಸ್ಕರಣಾ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ಶೋಷಣೆಗೆ ಅವರದ್ದೇ ಆದ ವಿನೂತನ ಮಾದರಿಯನ್ನು ಅಳವಡಿಸಿಕೊಂಡಿದ್ದರು. ಕಾರ್ಖಾನೆ ಹಾಗೂ ಗಣಿ ಧಣಿಗಳದ್ದೇ ‘ಟ್ರಕ್ ಶಾಪ್’ (ಅಂಗಡಿಗಳು) ಈ ಪಟ್ಟಣದ ತುಂಬಾ ಹರಡಿದ್ದವು. ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ಆಗ ಚಾಲ್ತಿಯಲ್ಲಿದ್ದ ನೋಟುಗಳನ್ನು ನೀಡುತ್ತಿರಲಿಲ್ಲ. ಬದಲಾಗಿ ವಿಶೇಷವಾದ ಸಾಲದ ನಾಣ್ಯ ಅಥವಾ ಸಾಲದ ಚೀಟಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿತ್ತು. ಆ ನಾಣ್ಯ ಅಥವಾ ಚೀಟಿ ಹಿಡಿದು ಅವರು `ಟ್ರಕ್ ಶಾಪ್ʼ ಗೆ ಹೋಗಿ ಬೇಕಾದ ಸಾಮಾನು-ಸರಂಜಾಮನ್ನು ಪಡೆದುಕೊಳ್ಳಬೇಕಾಗಿತ್ತು. ಈಗ ಕಾರ್ಪೋರೇಟ್ ಸಂಸ್ಥೆಗಳ ಕಚೇರಿ ಯಲ್ಲಿ ಕೆಲಸ ಮಾಡುವವರಿಗೆ “ಸುಡೆಕ್ಸೋ’ ಫುಡ್ ಕೂಪನ್ ನೀಡಿದಂತೆ! ‘ಟ್ರಕ್ ಶಾಪ್ʼ ಗಳಲ್ಲಿ ಉಳಿದ ಮಾಮೂಲಿ ಅಂಗಡಿಗಳಿಗಿಂತ ಬೆಲೆ ದುಪ್ಪಟ್ಟಾಗುತ್ತಿತ್ತು. ಅದು ಸಾಲದು ಎನ್ನುವಂತೆ ಇದ್ದಕ್ಕಿದ್ದಂತೆ ಕಾರ್ಮಿಕರ ಸಂಬಳ ಕಡಿತಗೊಳಿಸಲಾಗುತ್ತಿತ್ತು. ಇಂತಹ ಶೋಷಣೆಯ ವಿರುದ್ಧ ಕ್ರಮೇಣ ಕಾರ್ಮಿಕರು ಸಂಘಟಿತರಾಗಿ ದನಿಯೆತ್ತಲಾರಂಭಿಸಿದರು. ಕಾರ್ಮಿಕ ಚಳುವಳಿ ಒಮ್ಮೆ ತಾರಕಕ್ಕೇರಿದ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಪ್ರತಿಭಟನಾಕಾರರು ಇಡೀ ಮರ್ಥರ್ ಪಟ್ಟಣವನ್ನು ಕೈವಶ ಮಾಡಿಕೊಂಡಿದ್ದರು. ಕೈಯಲ್ಲಿ ಕೆಂಪು ಧ್ವಜ ಹಿಡಿದು ಪಟ್ಟಣದಾದ್ಯಂತ ಪ್ರತಿಭಟನೆ ನಡೆಸಿದ ಚಳವಳಿಗಾರರು ಅಲ್ಲಿನ ಕ್ಯಾಸಲ್ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಮ್ಯಾಜಿಸ್ಟ್ರೇಟರ್, ಗಣಿಧಣಿಗಳು ಮತ್ತು ಕಾರ್ಖಾನೆ ಮಾಲೀಕರನ್ನು ಅಕ್ಷರಶಃ ಗೃಹಬಂಧನದಲ್ಲಿ ಇರಿಸಿದರು, ಬೈಕನ್‌ನಿಂದ ಬಂದ ಸೇನೆ ಮತ್ತು ಕಾರ್ಮಿಕರ ನಡುವೆ ನಡೆದ ದೀರ್ಘ ಸಂಘರ್ಷದ ನಂತರ ಚಳವಳಿಯನ್ನು ಹತ್ತಿಕ್ಕಲಾಯಿತು. ಚಳವಳಿಯ ಮುಂದಾಳುಗಳ ಪೈಕಿ ಹಲವರನ್ನು ಬಂಧಿಸಿ, ಆಸ್ಟ್ರೇಲಿಯಾದ ಜೈಲುಗಳಿಗೆ ಸಾಗಹಾಕಲಾಯಿತು. ಡೊನಾಲ್ಡ್ ಬ್ಲಾಕ್ ಎಂಬ ಸೈನಿಕನಿಗೆ ಇರಿದ ಆರೋಪದ ಮೇಲೆ ರಿಚರ್ಡ್ ಲೂಯಿಸ್ ಎಂಬ ಕಾರ್ಮಿಕನನ್ನು ಗಲ್ಲಿಗೇರಿಸಲಾಯಿತು. ರಿಚರ್ಡ್ ಲೂಯಿಸ್ ಆ ಮೂಲಕ ಹುತಾತ್ಮ ಪಟ್ಟಕ್ಕೇರಿದ. ಹೀಗೆ ಚಳವಳಿಗಳ ಕೇಂದ್ರವಾದ ಮರ್ಥರ್ ಟಿಡ್ ಫಿಲ್ ಜನಸಂಖ್ಯೆ 1910ರ ಆಸುಪಾಸು ಸುಮಾರು 81,000ಕ್ಕೇರಿತು. ಕಬ್ಬಿಣದ ಗಣಿಗಳ ಜೊತೆ ಕಲ್ಲಿದ್ದಲು ಗಣಿಗಳು ಕೂಡ ಕಾರ್ಯಾರಂಭ ಮಾಡಲಾರಂಭಿಸಿದ್ದು ಇದಕ್ಕೆ ಮುಖ್ಯ ಕಾರಣ. ಒಟ್ಟಾರೆ ಗಣಿಗಾರಿಕೆಯ ಕೇಂದ್ರವಾದ ಮರ್ಥರ್ ನಮ್ಮ ಬಳ್ಳಾರಿಯಂತೆ ಈಗ ಗಿಜಿಗುಡುತ್ತಿತ್ತು. ಬಳ್ಳಾರಿಯಂತೆಯೇ ಅಲ್ಲಿ ಕೂಡ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಬಹಳ ಇತ್ತು. ಒಂದನೇ ಮಹಾಯುದ್ಧ ಮುಗಿಯುವವರೆಗೆ ಇದೇ ರೀತಿ ‘ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗಿದ ಮರ್ಥರ್ ನಂತರ ಆರ್ಥಿಕ ಅವನತಿಯತ್ತ ದಾಪುಗಾಲಿಟ್ಟಿದೆ. ಮಹಾಯುದ್ಧದ ನಂತರ ಒಂದು ದಶಕದಲ್ಲಿ ಇಲ್ಲಿಂದ ಸುಮಾರು ಮೂವತ್ತು ಸಾವಿರ ಜನರು ವಲಸೆ ಹೋದರು. ಕ್ರಮೇಣ ಮರ್ಥ‌ರ್ ಟಿಡ್ ಫಿಲ್ ‘ಭೂತಗಳ’ ನಗರವಾಗಿ ಪರಿವರ್ತನೆಗೊಂಡಿತು.

ಹಳೆಯ ಗಣಿಗಳು, ಕಾರ್ಖಾನೆಗಳು, ವೈಭವದ ದಿನಗಳು… ಎಲ್ಲ ನೆನಪಾಗಿ ಉಳಿದುಬಿಟ್ಟವು. 228 ವರ್ಷಗಳ ಇತಿಹಾಸವಿದ್ದ ಡೊವ್ಲಾಯ್ ಐರನ್‌ವರ್ಕ್‌ಗೆ 30 ವರ್ಷಗಳ ಹಿಂದೆ ಬೀಗ ಬಿತ್ತು. 1950ರ ನಂತರ ಮತ್ತೆ ವೈಭವದ ದಿನಗಳತ್ತ ಹೊರಟಿರುವ ಮರ್ಥರ್‍ನ ಈಗಿನ ಜನಸಂಖ್ಯೆ 55,000. ಬೆಟ್ಟಗುಡ್ಡಗಳ ಸಾಲಿನ ನಡುವೆ ಅಡಗಿರುವ ಈ ಪುಟ್ಟ ಪಟ್ಟಣದಲ್ಲಿ ಟೆಸ್ಕೋ ಸೂಪರ್ ಮಾರ್ಕೆಟ್ ಒಂದಿದ್ದು, ಜನಜಂಗುಳಿ ನೋಡಬೇಕೆಂದರೆ ಅಲ್ಲಿ ಮಾತ್ರ ಸಾಧ್ಯ. ಉಳಿದಂತೆ ಸಿಟಿ ಸೆಂಟರ್‌ನಲ್ಲಿ ಸಂಜೆಯ ಹೊತ್ತು ಒಂದಿಷ್ಟು ಜನ ಓಡಾಡುತ್ತಿರುವುದನ್ನು ಕಾಣಬಹುದಿತ್ತು. ಒಟ್ಟಾರೆ ನಗರ ಜೀವನದ ಯಾವುದೇ ತರಾತುರಿಗಳ ಜಂಜಾಟ ಗಳಿಲ್ಲದೆ ಆರಾಮ ಜೀವನಕ್ಕೆ ಹೇಳಿ ಮಾಡಿಸಿದ ಪುಟ್ಟ ಪಟ್ಟಣವಾಗಿ ಮರ್ಥರ್ ಪರಿವರ್ತನೆಗೊಂಡಿತ್ತು. ಬೆನ್ನಲ್ಲಿ ಹಾಳು ಬಿದ್ದ ಗಣಿಗಳು, ಕಣ್ಣ ಮುಂದೆ ಬ್ರೆಕನ್ ಬೀಕನ್ ಹೆಬ್ಬಾಗಿಲು ಇತಿಹಾಸ- ಪ್ರಕೃತಿ ಸೌಂದರ್ಯದ ಕೊಂಡಿಯಾಗಿ ನಿಂತಿದೆ ಮರ್ಥರ್, ಅಂತಹ ಕೊಂಡಿಯ ಮಡಿಲಲ್ಲಿ ಕೂತು ಇತಿಹಾಸ ಬಗೆಯುತ್ತ. ಪ್ರಕೃತಿ ಸೌಂದರ್ಯ ಸವಿಯುತ್ತ ಕಾಲ ಕಳೆಯಲಾರಂಭಿಸಿದೆ.

ಮೊದಲ ಒಂದೆರಡು ದಿನ ನಾನು ಚಿಕ್ಕಪ್ಪನನ್ನು ಬಿಟ್ಟು ಹೋಗುವುದು ಬೇಡ ಎಂದು ಒತ್ತಾಯಿಸಿದರೂ, ನಂತರ ಅವರು ಹೊರ ಹೋಗಿ ಬನ್ನಿ ಎಂದು ಕಳುಹಿಸಿಲಾರಂಭಿಸಿದರು: ಅರ್ಧದಿನ ಊರೆಲ್ಲ ಸುತ್ತಿ ಕೊಂಡು ಬಂದ ಮೇಲೆ ಮಧ್ಯಾಹ್ನದ ಊಟ. ಆಮೇಲೆ ಮೂರು ಜನ ಕೂತು ಪಟ್ಟಾಂಗ, ವೃತ್ತಿಯಲ್ಲಿ ವೈದ್ಯರಾದರೂ ಅಲ್ಲಿನ ಜನಜೀವನ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅಪಾರ ತಿಳಿವಳಿಕೆಯಿದ್ದ ಚಿಕ್ಕಪ್ಪ ನನ್ನ ಪಾಲಿನ ಮೇಷ್ಟಾದರು. ಅವರ ಪಾಠಗಳನ್ನು ಕಲಿಯುತ್ತ, ಬ್ರೇಕನ್ ಬೀಕನ್ ರಾಷ್ಟ್ರೀಯ ಉದ್ಯಾನವನದಲ್ಲಿ ಓಡಾಡುತ್ತ ಸುತ್ತಮುತ್ತಲಿನ ಪುರಾತನ ಕೋಟೆ-ಕೊತ್ತಲ ಸೊಬಗು ಸವಿಯುತ್ತಾ… ದಿನ ದೂಡುತ್ತಿದ್ದಾಗಲೇ… ಒಂದು ರಾತ್ರಿ ಮರ್ಥರ್ ಟಿಡ್ ಫಿಲ್ ಪೇಟೆಯಲ್ಲಿ ಕಗ್ಗತ್ತಲ ನಡುವೆ ಕಳೆದುಹೋದೆ!

(ಕೃತಿ: ಥೇಮ್ಸ್‌ ತಟದ ತವಕ ತಲ್ಲಣ, ಲೇಖಕರು: ಸತೀಶ್ ಚಪ್ಪರಿಕೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 130/-)