ಮಾನವನ ವಿಕಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಪರಿಸರ ಪ್ರತಿಯೊಂದು ತಲೆಮಾರಿಗೂ ಒಂದೊಂದು ಹೊಸ ಪ್ರಶ್ನೆಪತ್ರಿಕೆಯಂತಹ ಸವಾಲೆಸುವುದು ನಮ್ಮ ಗಮನಕ್ಕೆ ಬರುತ್ತದೆ. ನಮ್ಮ ಮುಂದಿರುವ ಈ ಹೊಸ ಪೀಳಿಗೆಗೂ ಪೂರ್ಣ ಪ್ರಮಾಣದಲ್ಲಿ ಉಲ್ಬಣಗೊಂಡ ಕಾಯಿಲೆಯಂತಹ ಜಾಗತೀಕರಣ, ಖಾಸಗೀಕರಣ ಮತ್ತು ವ್ಯಾಪಾರೀಕರಣದ ಅತಿ ದೊಡ್ಡ ಸವಾಲು ಎದುರಿಗಿದೆ. ಮತ್ತು ಅದನ್ನು ಭಾರತೀಯ ಸಾಂಸ್ಕೃತಿಕ, ಕೌಟುಂಬಿಕ, ಸಾಮಾಜಿಕ ಮೌಲ್ಯಗಳೊಂದಿಗೆ ರಾಜಿಯಾಗದೆ ಅದನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆಯನ್ನು ನಮ್ಮ ಮಕ್ಕಳಿಗೆ ತುಂಬಲು ನಮ್ಮ ಶಿಕ್ಷಣ ಸಂಸ್ಥೆಗಳು, ಪರಿಸರ, ಕುಟುಂಬ ಸಿದ್ಧತೆಯಲ್ಲಿದ್ದರೂ ಇದಕ್ಕೆ ತೆರಬೇಕಾದ ಮೌಲ್ಯ ಎಷ್ಟು ದುಬಾರಿಯಾದುದು?
ಡಾ.ಲಕ್ಷ್ಮಣ ವಿ.ಎ. ಅಂಕಣ

 

ಹಿರಿಯ ವಿಜ್ಞಾನಿ ಐನ್ ಸ್ಟೈನ್ ಆಧುನಿಕ ಶಿಕ್ಷಣ ಹಾಗು ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಒರೆಗೆ ಹಚ್ಚುವ ವಿಧಾನವನ್ನು ಲೇವಡಿ ಮಾಡುತ್ತ ಒಂದು ವ್ಯಂಗ್ಯವಾದ ರೂಪಕವನ್ನು ಕೊಡುತ್ತ “ಮೀನಿಗೆ ಮರ ಹತ್ತುವ ಟಾಸ್ಕ್ ಕೊಟ್ಟು ಮರವನ್ನು ಹತ್ತಲಾಗದ ಮೀನಿಗೆ ತಾನು ಸಾಯುವವರೆಗೂ ನಿಷ್ಪ್ರಯೋಜಕ ಎನ್ನುವಂತಹ ಅಪಾರ ಪಾಪ ಪ್ರಜ್ಞೆಯಲ್ಲಿ ನರಳುವಂತೆ ಮಾಡುವ ವಿಧಾನ”ಎಂದು ಹೇಳುತ್ತಾರೆ. ಶತಮಾನಗಳು ಕಳೆದರೂ ನಮ್ಮ ಶಿಕ್ಷಣ ವ್ಯವಸ್ಥೆ ಅಂತಹ ಕ್ರಾಂತಿಕಾರಕ ಬದಲಾವಣೆಯೇನೂ ಕಾಣದ್ದು ಒಂದು ದುರಂತವೇ ಸರಿ.

ಇಂತಹ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಮಕ್ಕಳು ಆತ್ಮಹತ್ಯೆಗೆ ಶರಣಾಗುವ ವರದಿಗಳೂ ಪ್ರತಿ ವರ್ಷ ಆತಂಕಕ್ಕೀಡುಮಾಡುವ ವಿದ್ಯಮಾನವಾಗಿ ಮತ್ತು ಅದನ್ನು ತೀರ ಸಹಜವೆನ್ನುವ ರೀತಿಯಲ್ಲಿ ಸಮಾಜ ಸ್ವೀಕರಿಸುತ್ತಿರುವುದೊಂದು ಅಪಾಯಕಾರಿ ಬೆಳವಣಿಗೆಯಾಗಿ ಗೋಚರಿಸುತ್ತಿದೆ.

****

ಎಲ್ ಕೆ ಜಿ ಅಥವಾ ಯುಕೆಜಿ ಓದುತ್ತಿರುವ ಮಗುವನ್ನೊಮ್ಮೆ ನೀವು ದೊಡ್ಡವನಾದ ಮೇಲೆ ಏನಾಗಲು ಬಯಸುತ್ತೀಯೆಂದು ಪ್ರಶ್ನಿಸಿ ನೋಡಿ.

ತೊದಲು ನುಡಿಯಿಂದ ಆ ಮಗು ನಾನು ” ಡಾಕ್ತರ್, ನಾನು ಇಂಜಿನೀರ್, ನಾನು ಪೈಲತ್….” ಎಂದು ನಾನಾ ನಮೂನೆಯ ಆ ವಯಸ್ಸಿಗೆ ಹೊರಲಾರದಂತಹ ಪದಪುಂಜಗಳನ್ನು ಉತ್ತರಿಸುವಾಗ ಮಗು ಎಷ್ಟೊಂದು ಆಪ್ಯಾಯಮಾನವಾಗಿ, ಆದರ್ಶದ ನುಡಿಗಳಂತೆ ಉತ್ತರಿಸುವುದನ್ನು ಕಂಡರೆ ನಿಮಗೆ ಅಚ್ಚರಿಯಾಗುತ್ತದೆ. ಆದರೆ ಆ ಆಗುವಿಕೆಯ ಹಿಂದಿನ ಕರಾಳ ದಿನಗಳನ್ನು ನೆನಪಿಸಿಕೊಂಡರೆ ಬೆಚ್ಚಿ ಬೀಳುವಂತಹ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ.

ಆಧುನಿಕ ಜಗತ್ತು ನಮ್ಮ ಮಕ್ಕಳಿಗೆ ಎಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಿದೆ, ಒದಗಿಸುತ್ತಲೇಯಿದೆ. ದೊಡ್ಡ ಹೆಸರಿನ ಕಾನ್ವೆಂಟ್ ಶಾಲೆಯಿದೆ, ಕ್ಯಾರಿಯರ್ ತುಂಬ ಊಟವಿದೆ, ಶಿಸ್ತಿನ ಯೂನಿಫಾರ್ಮು, ಕಾಲಿಗೆ ಬೂಟು, ಕೊರಳಿಗೆ ಟೈ, ಬೆನ್ನು ಬಾಗುವಷ್ಟು ಭಾರದ ಪುಸ್ತಕಗಳು, ಬಣ್ಣ ಬಣ್ಣಗಳ ಚಿತ್ರದ ಪುಸ್ತಕಗಳು. ಈ ಎಲ್ಲ ಬೇಕು ಬೇಡಗಳನ್ನು ಪೂರೈಸಲು ಹಗಲು ರಾತ್ರಿ ದುಡಿಯುವ ಪೋಷಕರು…. ಮತ್ತು ನಮ್ಮ ಮಗು ಇಂತಹದ್ದೇ ಬಿಳಿಕಾಲರಿನ ಕೆಲಸದಲ್ಲಿರಬೇಕೆಂಬ ಪೋಷಕರ ಒತ್ತಡಗಳು…. ಮತ್ತು ಮಕ್ಕಳ ಸುಪ್ತ ಮನಸ್ಸಿನಲ್ಲಿ ಅವನ್ನು ನಿಧಾನವಾಗಿ ಇಂಜೆಕ್ಟ್ ಮಾಡುತ್ತಿರುವ ಪರಿಗಳು…. ದುಬಾರಿ ಶಿಕ್ಷಣವೆಂಬ ಚಿನ್ನದ ಚೂರಿಯನ್ನು ನಾವು ಎಷ್ಟು ಬೆಲೆ ತೆತ್ತಾದರೂ ಕೊಳ್ಳಲು ಸಿದ್ಧರಿದ್ದೇವೆ ಮತ್ತು ಆ ಚೂರಿಯನ್ನು ನಿತ್ಯ ಹರಿತಗೊಳಿಸಲು ಮಾಡುವ ಸರ್ಕಸ್ಸುಗಳು ಒಂದೆ ಎರಡೇ?

ಆದರೆ ಆ ಚಿನ್ನದ ಚೂರಿ ನಮ್ಮ ಮಕ್ಕಳ ಅಮೂಲ್ಯವಾದ ಬಾಲ್ಯವನ್ನು ಇಂಚಿಂಚಾಗಿ ಕತ್ತರಿಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆಯೆ?

ಮೂರನೇ ತರಗತಿಯಲ್ಲಿ ಓದುತ್ತಿರುವ ಬಾಲಕನ ಪೋಷಕರೊಬ್ಬರ ತಮ್ಮ ಮಗನ ಬಗ್ಗೆ ಹೀಗೆ ದೂರುತ್ತಿದ್ದರು. “ಮೇಲಿನ ಎಲ್ಲ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯುತ್ತಿದ್ದರೂ, ಮರದೊಳಡಗಿದ ಕಿಚ್ಚಿನಂತಹ ಅಸಹನೆಯಿಂದ ಒಳಗೊಳಗೆ ಬೇಯುತ್ತಿರುವಂತೆ ತೋರುತ್ತಾನೆ. ವಾರ್ಷಿಕ ಪರೀಕ್ಷೆಗಳು ಹತ್ತಿರವಾದಂತೆ ಮಂಕಾಗುತ್ತಾನೆ, ಶಾಲಾ ಆರಂಭದ ದಿನಗಳಲ್ಲಿದ್ದ ಲವಲವಿಕೆ ಕೊನೆ ಕೊನೆಯಲ್ಲಿ ಕಾಣೆಯಾಗುತ್ತದೆ. ಓದಲು ಬರೆಯಲು ನಾನಾ ತರಹದ ಕಳ್ಳಾಟ ಹೂಡಿ ವಿನಾಕಾರಣ ಹಠ ಮಾಡುತ್ತಾನೆ. ಪರೀಕ್ಷೆಯ ಹಿಂದಿನ ದಿನವಂತೂ ನಾನು ಇನ್ನು ಓದಲಾರೆ ಎಂದು ಇವನು. ಇದನ್ನು ಓದಿಯೇ ಮುಗಿಸಬೇಕೆಂಬ ಹಠ ಇವನ ಅಮ್ಮನದು. ಮನೆಯೆಂಬುದು ಅಕ್ಷರಷಃ ರಣರಂಗ. ಯುದ್ಧ ಕಾಲೇನ ಶಸ್ತ್ರಾಭ್ಯಾಸ.

ನನಗಿವನ ಮನಸ್ಥಿತಿ ಸೂಕ್ಷ್ಮವಾಗಿ ಅರಿವಿಗೆ ಬರುತ್ತಿದ್ದರೂ ನನಗೇನೂ ಮಾಡಲಾಗದ ಅಸಹಾಯಕತೆಯಿದೆ. ವೈದ್ಯನಾಗಿರುವದರ ಒಂದು ಲಾಭವೇನೆಂದರೆ ಇಂತಹ ಸಮಸ್ಯೆಗಳನ್ನು ಅನೇಕ ಪೋಷಕರು ನನ್ನೆದುರು ಹೇಳುವುದರಿಂದ ಈ ಸಮಸ್ಯೆಯು ಎಷ್ಟು ಸಾಮಾನ್ಯ ಎಷ್ಟು ಸಾರ್ವತ್ರಿಕ ಎಂಬುದು ನನಗೆ ಗೊತ್ತು. ತಂದೆ ಮತ್ತು ಮಗು ಇಬ್ಬರೂ ಇಲ್ಲಿ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿ ಧೈರ್ಯ ತುಂಬಬೇಕಾದ ಅನಿವಾರ್ಯವಿದೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಮಕ್ಕಳು ಆತ್ಮಹತ್ಯೆಗೆ ಶರಣಾಗುವ ವರದಿಗಳೂ ಪ್ರತಿ ವರ್ಷ ಆತಂಕಕ್ಕೀಡುಮಾಡುವ ವಿದ್ಯಮಾನವಾಗಿ ಮತ್ತು ಅದನ್ನು ತೀರ ಸಹಜವೆನ್ನುವ ರೀತಿಯಲ್ಲಿ ಸಮಾಜ ಸ್ವೀಕರಿಸುತ್ತಿರುವುದೊಂದು ಅಪಾಯಕಾರಿ ಬೆಳವಣಿಗೆಯಾಗಿ ಗೋಚರಿಸುತ್ತಿದೆ.

ಸುಮಾರು ಇಪ್ಪತ್ತು ವರುಷಗಳ ಹಿಂದೆ ನಾನು ಓದುವಾಗ ಈ ಒತ್ತಡಗಳಿರಲಿಲ್ಲ. ಶಾಲೆಗೆ ಹೋಗುವುದೆಂದರೆ ನಮಗೆ ಹಬ್ಬದ ಹರುಷ. ಪಾಠಗಳೂ ಅಷ್ಟೇ ನಿಮಿತ್ಯ ಮಾತ್ರಕ್ಕೆ…

ತುಂಬ ಜಾಣರಾಗಬೇಕು, ತುಂಬಾ ದುಡ್ಡು ಮಾಡಬೇಕು ಅನ್ನೋ ಅಧಿಕಾರ ಧನಾಕಾಂಕ್ಷೆಯ ಹುಚ್ಚಿನ ನಾಗರೀಕ ಸೋಂಕು ನಮಗೆ ತಗುಲಿರಲಿಲ್ಲ. ಶಾಲೆ, ಓದೆಂದರೆ ನಮಗೆ ಪ್ರಶಾಂತವಾಗಿ ಹರಿಯುವ ನದಿಯಂತೆ. ಆ ನದಿಯಲ್ಲಿ ಮನಸೋ ಇಚ್ಛೆ ಈಜಿ, ಹಸಿವಾದಾಗ ಹೊಳೆದಂಡೆಯ ಹಣ್ಣು-ಹಂಪಲು ತಿಂದು, ಅದೇ ಮರದ ಮೇಲೆ ಮರಕೋತಿಯಾಟಯಾಡುವಾಗ ತರಚಿಕೊಂಡ ಗಾಯಗಳು ಮನೆಗೆ ಬರುವಷ್ಟರಲ್ಲಿ ಮರೆತೇ ಹೋಗಿ, ಊಟ ಮಾಡಿ ಮಲಗಿದರೆ ಕಣ್ಣ ತುಂಬ ನಿದ್ದೆ…. ಮತ್ತೆ ನೀನು ಓದಬೇಕು ದೊಡ್ಡವನಾಗಬೇಕೆಂಬ steriotypic ಮಾತುಗಳು ನಮ್ಮ ಕಿವಿಗೆ ಬೀಳುತ್ತಲೇಯಿರಲಿಲ್ಲ. ಮತ್ತು ಹಾಗೆ ಹೇಳಲು ಪೋಷಕರೇನು ಶಾಲೆ ಕಲಿತವರೆ? ನನ್ನ ಮಗ ಶಾಲೆಗೆ ಹೋಗ್ತಿದ್ದಾನೆ ಅನ್ನುವುದೊಂದೇ ಅವರ ಹೆಮ್ಮೆ .

ಮಾನವನ ವಿಕಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಪರಿಸರ ಪ್ರತಿಯೊಂದು ತಲೆಮಾರಿಗೂ ಒಂದೊಂದು ಹೊಸ ಪ್ರಶ್ನೆಪತ್ರಿಕೆಯಂತಹ ಸವಾಲೆಸುವುದು ನಮ್ಮ ಗಮನಕ್ಕೆ ಬರುತ್ತದೆ. ನಮ್ಮ ಮುಂದಿರುವ ಈ ಹೊಸ ಪೀಳಿಗೆಗೂ ಪೂರ್ಣ ಪ್ರಮಾಣದಲ್ಲಿ ಉಲ್ಬಣಗೊಂಡ ಕಾಯಿಲೆಯಂತಹ ಜಾಗತೀಕರಣ, ಖಾಸಗೀಕರಣ ಮತ್ತು ವ್ಯಾಪಾರೀಕರಣದ ಅತಿ ದೊಡ್ಡ ಸವಾಲು ಎದುರಿಗಿದೆ. ಮತ್ತು ಅದನ್ನು ಭಾರತೀಯ ಸಾಂಸ್ಕೃತಿಕ, ಕೌಟುಂಬಿಕ, ಸಾಮಾಜಿಕ ಮೌಲ್ಯಗಳೊಂದಿಗೆ ರಾಜಿಯಾಗದೆ ಅದನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆಯನ್ನು ನಮ್ಮ ಮಕ್ಕಳಿಗೆ ತುಂಬಲು ನಮ್ಮ ಶಿಕ್ಷಣ ಸಂಸ್ಥೆಗಳು, ಪರಿಸರ, ಕುಟುಂಬ ಸಿದ್ಧತೆಯಲ್ಲಿದ್ದರೂ ಇದಕ್ಕೆ ತೆರಬೇಕಾದ ಮೌಲ್ಯ ಎಷ್ಟು ದುಬಾರಿಯಾದುದು?

ಇತ್ತೀಚಿಗೆ ದೆಹಲಿಯ ಪ್ರತಿಷ್ಠಿತ ರಯಾನ್ ಶಾಲೆಯ ಆರು ವರ್ಷದ ಬಾಲಕನನ್ನು ಹನ್ನೊಂದನೇ ತರಗತಿಯಲ್ಲಿರುವ ಹಿರಿಯ ವಿದ್ಯಾರ್ಥಿ ಕತ್ತು ಸೀಳಿ ಕೊಲೆ ಮಾಡಲು ಕಾರಣವೇನೆಂದರೆ, ಹೇಗಾದರೂ ಮಾಡಿ ಸದ್ಯ ನಡೆಯಲಿರುವ ವಾರ್ಷಿಕ ಪರೀಕ್ಷೆಗಳನ್ನು ಹಾಗು ಪೋಷಕ- ಶಿಕ್ಷಕರ ಮೀಟಿಂಗನ್ನು ಮುಂದೂಡಬೇಕಿತ್ತು. ಕೇಳಲು ಕ್ಷುಲ್ಲಕವೆನಿಸುವಂತ ವಿಚಾರವಾಗಿದ್ದರೂ ಇಂತಹ ಮಕ್ಕಳ ಕೃತ್ಯದ ಹಿಂದಿನ ಮಾನಸಿಕತೆಯನ್ನು ನಾವು ವಿಶ್ಲೇಷಿಸಬೇಕಿದೆ.

ಲ್ಯಾನ್ಸೆಟ್ ಎಂಬ ಅಧ್ಯಯನದ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ಒಂದು ಗಂಟೆಗೊಂದು ಶೈಕ್ಷಣಿಕ ಒತ್ತಡಗಳಿಂದಾದ ಆತ್ಮಹತ್ಯೆಗಳು ಸಂಭವಿಸುತ್ತಿವೆ. ವಿಶ್ವದಲ್ಲಿ ಅತಿ ಹೆಚ್ಚಿನ ಆತ್ಮಹತ್ಯೆಗಳು ಸರಾಸರಿ ೧೫ ರಿಂದ ೨೯ ನೇಯ ವಯೋಮಾನದ ಭಾರತೀಯ ಮಕ್ಕಳಲ್ಲಿ ಘಟಿಸುತ್ತಿವೆ.

ಮೇಲಿನ ಘಟನೆಗಳೆಲ್ಲಾ ಶ್ರೀಮಂತ ಭಾರತದ ಕತೆಯಾದರೆ ಬಡಭಾರತದ ಕತೆಯೇ ಬೇರೆಯಿದೆ. ನಗರೀಕರಣ ವಲಸೆ ಪ್ರಮಾಣವನ್ನೂ ಹೆಚ್ಚಿಸುವುದರಿಂದ ಕಟ್ಟಡ ಕಾರ್ಮಿಕರ ಮಕ್ಕಳು, ಶಾಲೆಯಿಂದ ವಂಚಿತರಾಗಿ ತಮ್ಮ ಬಾಲ್ಯಗಳನ್ನು ಬಹುಮಹಡಿ ಕಟ್ಟಡಗಳಿಗಾಗಿ ಕಟ್ಟಲ್ಪಟ್ಟ ಶೆಡ್ಡುಗಳಲ್ಲಿ ಇಟ್ಟಿಗೆ ಹೊರುತ್ತ ದರ್ಶಿನಿ ಹೋಟೆಲುಗಳ ಹಿಂಬದಿಯ ಕತ್ತಲೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಕೊಡೆ, ವಾಚು, ಮೊಬೈಲು ಕವರು ಮಾರುತ್ತ ಕಳೆಯುತ್ತಿದ್ದಾರೆ.

ಇನ್ನು ಕನ್ನಡ -ಕಾನ್ವೆಂಟ್-ರೆಸಿಡೆಂಟ್ ಎಂಬ ಶ್ರೇಣೀಕೃತ ಶಾಲೆಗಳು ನವ ಅಸ್ಪೃಶ್ಯತೆಯನ್ನು ಹುಟ್ಟು ಹಾಕುತ್ತಿರುವುದನ್ನು ಯು. ಆರ್. ಅನಂತಮೂರ್ತಿಯವರು ಸರಿಯಾಗಿಯೇ ಗುರುತಿಸಿದ್ದರು.

ಜಾಗತೀಕರಣವೆಂಬ ಮಾಯಾವಿ ನಮ್ಮ ನಿಮ್ಮೆಲ್ಲರ ಮನೆಯ ಮೆಟ್ಟಿಲು ತುಳಿದು ಬಹಳ ಕಾಲವೇ ಆಗಿದೆ. ತತ್ಪರಿಣಾಮವಾಗಿ ಬಡವ -ಬಲ್ಲಿದನೆಂಬ ಬಿರುಕುಗಳು ದೊಡ್ಡದಾಗುತ್ತಲೇ ಸಾಗಿವೆ. ಇದೊಂದು ಹುಚ್ಚು ಕುದುರೆಯ ನಾಗಾಲೋಟ. ಅದರ ಹಿಂದೆ ಈ ಟೆಂಪಲ್ ರನ್ ಗೇಮಿನ ತರಹ ಓಡುತ್ತಿರುವ ನಾವು ನೀವೆಲ್ಲ ಮುಂದೆ ಕಂದಕದಲ್ಲಿ ಬೀಳಲಾರದಂತೆಯೂ, ನಮ್ಮ ಬೆನ್ನ ಹಿಂದಿರುವ ಭೂತದ ಬಾಯಿಗೆ ಸಿಗಲಾರದಂತೆಯೂ ಎಚ್ಚರಿಕೆ ವಹಿಸಬೇಕಾಗಿದೆ.

ಮೀನಿಗೆ ನೀರಿನಲ್ಲಿ ಮಾತ್ರ ಈಜಲು ಬರುತ್ತದೆ ಎಂಬ ಅರಿವು ಪೋಷಕರಿಗೂ ಮತ್ತು ಬೆಳೆದ ಮಕ್ಕಳಿಗೂ ಇರಬೇಕಾದ ಸಾಮಾನ್ಯ ಪ್ರಜ್ಞೆ.