ಎಪ್ಪತ್ತೈದು ವರ್ಷಗಳ ಹಿಂದೆ ಲಂಡನ್ನಿನ ಕೇಂದ್ರಭಾಗದ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು, ಹಲ್ಲುಗಳ ನಡುವೆ ಸಿಗಾರ್ ಅದುಮಿ ಹಿಡಿದೇ ನಗೆ ಬೀರುತ್ತಾ ಬಲ ಕೈಯನ್ನು ತನಗಿಂತ ಮೇಲೆತ್ತಿ “ವಿಕ್ಟರಿ” ಸಂಕೇತವನ್ನು ಕೆಳಗೆ ನೆರೆದಿದ್ದ ಜನಸಮೂಹದತ್ತ ತೋರಿಸುತ್ತ ಪ್ರಧಾನಿ ಚರ್ಚಿಲ್ ನಿಂತಿದ್ದಾಗ ಕೇಳಿಬಂದ ಚಪ್ಪಾಳೆ ಕೇಕೆಗಳು ಈಗ ಕೇಳಿಸದಾದರೂ, ಮನೆಯಿಂದ ಹೊರಬರಲಾರದ ಆರೋಗ್ಯ ಸಂಕಟದ ವಿಷಮ ಪರಿಸ್ಥಿತಿಯಲ್ಲೂ ಇಲ್ಲಿನ ಜನರು ಸ್ವಯಂ ಪ್ರೇರಣೆಯಿಂದ ರಸ್ತೆಗಿಳಿದು ಆನಂದಿಸಿದರು. ಕಳೆದ ಶುಕ್ರವಾರದ ಕೆಲವು ಗಂಟೆಗಳು ರಸ್ತೆ ಬೀದಿಗಳಲ್ಲಿ ಊರುಕೇರಿಗಳಲ್ಲಿ ಈಗಿನ ಕೋವಿಡ್ ಕಾಲವನ್ನು ಮರೆಸಿದವು…
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ದೇಶ ದೇಶಗಳ ನಡುವೆ ಹಿಂದೆ ಆಗಿಹೋದ ಯುದ್ಧಗಳ ಸಂಪುಟವನ್ನು ಇಂದು ಬರೆಯಲು ಕೂತರೆ ಅಥವಾ ಎಂದೋ ಬರೆದಿಟ್ಟ ಪುಟಗಳ ಧೂಳು ಹೊಡೆದು ಈಗ ತಿರುವಿದರೆ ಅಲ್ಲಿ ಅತಿ ಹೆಚ್ಚುಸಲ ಕಾಣಿಸುವ ಹೆಸರು, ಕೇಳಿಸುವ ಶಬ್ದ “ಆಂಗ್ಲರು, “ಇಂಗ್ಲಿಷರು”, “ಇಂಗ್ಲೆಂಡ್” ಈ ತರಹದ್ದು ಯಾವುದೋ ಇರಬಹುದು. ಯುದ್ಧೋತ್ಸಾಹಿ, ಜಗಳಗಂಟ, ಸಮಯಸಾಧಕ, ವ್ಯಾಪಾರಸ್ಥ, ಕಪಟಿ, ತಂತ್ರಗಾರ ಎಂದೆಲ್ಲ ತಾನು ಭಾಗವಹಿಸಿದ ಯುದ್ಧಗಳ ಹಿನ್ನೆಲೆಯಲ್ಲಿ ಒಳಸೇರಿಸಿಕೊಂಡ ಸಾಮ್ರಾಜ್ಯಗಳ ಆಧಾರದಲ್ಲಿ ಇಂಗ್ಲಿಷರನ್ನು ಕರೆದವರಿದ್ದಾರೆ.

ಆಂಗ್ಲರ ಯುದ್ಧದ ನಂಟು ಜಗತ್ತಲ್ಲಿ ಎಲ್ಲೆಲ್ಲಿ ಹಬ್ಬಿದೆ ಎಂದು ಹುಡುಕುವ ಬದಲು ಅವರು ಯಾವ ಸೀಮೆಯೊಳಗೆ ರಾಜಕೀಯ ವ್ಯವಹಾರ ನಡೆಸಿಲ್ಲ, ಎಲ್ಲೆಲ್ಲಿ ಸೆಣಸಿಲ್ಲ ಎಂದು ಪಟ್ಟಿ ಮಾಡುವುದೇ ಸುಲಭ ಆದೀತು. ಯುದ್ಧ ಮಾಡುವುದು ಹಾಗು ಮಾಡಿಸುವುದು ಎರಡರಲ್ಲೂ ನಿಸ್ಸೀಮರು ನಿಷ್ಣಾತರು ಆಂಗ್ಲರು. ತಮ್ಮ ನೆರೆಯ ಪ್ರಾಂತ್ಯವಾದ ಸ್ಕಾಟ್ಲೆಂಡ್ ಇಂದ ಶುರುವಾಗಿ, ಸಮುದ್ರ ದಾಟಿ ಅಲ್ಲೇ ಹತ್ತಿರದ ಯುರೋಪನ್ನು ಕ್ರಮಿಸಿ ದೂರದ ಅರ್ಜೆಂಟೈನಾ ಅಮೆರಿಕಗಳವರೆಗೆ ಆಂಗ್ಲರ ತುಪಾಕಿ ಮದ್ದುಗುಂಡುಗಳ ಸ್ಫೋಟ ಅನುರಣಿಸಿದೆ; ಯುದ್ಧನೌಕೆ ಸೇನಾವಿಮಾನಗಳ ಸಾಗಾಟ ಹಾರಾಟ ಓಡಾಟ ದಾಳಿಗಳ ಹೆಸರಲ್ಲಿ ನೀರು ಗಾಳಿಗಳಲ್ಲಿ ಎಳೆದ ಗೆರೆಗಳು ಸವಿಸ್ತಾರವಾಗಿ ಜಗದಗಲ ಹರಡಿಕೊಂಡಿವೆ. ತನ್ನ ನೆರೆಯ ಫ್ರಾನ್ಸಿನ ಜೊತೆಗೆ ಸಾವಿರ ವರ್ಷಗಳ ಕಾಲ ಕಾದಾಟ ನಡೆಸಿದ ಕೀರ್ತಿ ಆಂಗ್ಲರಿಗಿದೆ.

ಬ್ರಿಟನ್ ಹಾಗು ಫ್ರಾನ್ಸ್ ನಡುವಣದ ಸಾವಿರ ವರ್ಷಗಳ ಯುದ್ಧದ ಇತಿಹಾಸದಲ್ಲಿ ನಡೆದ ಒಂದು ಯುದ್ಧವಂತೂ ಒಂದು ನೂರು ವಷಗಳ ಕಾಲದ ಅವಿರತ ಸೆಣಸಾಟ ಎಂದೇ ಹೆಸರು ಪಡೆದಿದೆ. ಪಶ್ಚಿಮ ಯೂರೋಪಿನ ಪ್ರತಿಷ್ಠಿತ ಗದ್ದುಗೆಗೋಸ್ಕರ ಈ ಎರಡು ದೇಶಗಳ ರಾಜಮನೆತನಗಳ ನಡುವೆ ಐದು ತಲೆಮಾರುಗಳನ್ನು ಒಳಗೊಂಡು ಜರುಗಿದ ಸರಣಿ ಹಣಾಹಣಿ ಅದಾಗಿತ್ತಂತೆ. ಪಾಳೇಗಾರರಂತೆ ಸರದಾರರಂತೆ ತುಂಡು ರಾಜರಂತೆ ಇವರು ಹೋರಾಡಿದ ಹಲವು ದಾಖಲೆಗಳು ಇದ್ದರೂ ರಾಷ್ಟ್ರವಾಗಿ ತನ್ನ ಹೆಮ್ಮೆ ಹಾಗು ತ್ರಾಣಗಳನ್ನು ಪಣಕ್ಕಿಟ್ಟು ಸೆಣಸಿದ ಮತ್ತೆ ಅದೇ ಕಾರಣಕ್ಕೆ ತನ್ನ ದೇಶದ ಜನರ ಬದುಕು ಭಾವನೆಗಳ ಮೇಲೆ ಅಳಿಸಲಾಗದ ಆಳವಾದ ಪ್ರಭಾವ ಬೀರಿದ ಕಾದಾಟಗಳು ಮೊದಲ ಹಾಗು ಎರಡನೆಯ ಮಹಾಯುದ್ಧಗಳು (ವರ್ಲ್ಡ್ ವಾರ್). ಇವೆರಡು ಯುದ್ಧಗಳು ಘಟಿಸಿ ವರುಷಗಳು ಹಲವು ಸಂದರೂ ಇಲ್ಲಿನ ಊರೂರಿನಲ್ಲಿ ಆ ಯುದ್ಧಗಳ ನೆನಪು ಸ್ಮಾರಕಗಳು ಕತೆ ಕಟ್ಟುಕತೆ ದಂತಕತೆಗಳು ಜೀವತುಂಬಿಕೊಂಡು ಎದೆಯುಬ್ಬಿಸಿಕೊಂಡು ಓಡಾಡಿಕೊಂಡಿವೆ. ಅಂದೆಂದೋ ಯುದ್ಧದಲ್ಲಿ ಭಾಗವಹಿಸಿ ಧೀರೋದ್ಧಾತ್ತವಾಗಿ ಹಾರಾಡಿ ಹೋರಾಡಿದ ಅಳಿದುಳಿದ ದೇಸೀ ವಿಮಾನಗಳು ಈಗಲೂ ದೇಶದ ಮೂಲೆಮೂಲೆಯ ವಸ್ತುಸಂಗ್ರಹಾಲಯಗಳಲ್ಲಿ ವಿರಾಜಮಾನವಾಗಿವೆ, ಮತ್ತೆ ಈಗಲೂ ತಾವು ಹಾರಲು ಸಿದ್ಧ ಎಂದು ರೆಕ್ಕೆ ಪಟಪಟಗುಡಿಸುತ್ತಿವೆ.

ಸೇನಾ ವಿಮಾನಗಳ ಸೇನಾವೀರರ ಬಗೆಗಿನ ಸಚಿತ್ರ ವರದಿಗಳು, ಪುಸ್ತಕಗಳು, ಹಳ್ಳಿ ಪಟ್ಟಣಗಳ ಪುಸ್ತಕಾಲಯಗಳಲ್ಲಿ ಸಿಗುತ್ತವೆ. ಕೋವಿಡ್ ಪ್ರಕರಣದ ಈ ಕಾಲದಲ್ಲಿ ಇಲ್ಲಿನ ಆರೋಗ್ಯ ಸಂಸ್ಥೆಗಳಿಗೆ ಸಹಾಯಧನ ಒಟ್ಟುಮಾಡಲು ಥಾಮ್ಸನ್ ಮೂರ್, ನೂರನೆಯ ಹುಟ್ಟುಹಬ್ಬದ ಹೊಸ್ತಿಲಲ್ಲಿದ್ದ ನಿವೃತ್ತ ವೃದ್ಧ ಸೇನಾನಿ ಮನೆಯ ತೋಟದಲ್ಲಿ “ವಾಕರ್” ಹಿಡಿದು ನಡೆಯುವ ಸಾಹಸಕ್ಕೆ ಮುಂದಾದದ್ದರ ಬಗ್ಗೆ ನೀವು ಇತ್ತೀಚಿಗೆ ಓದಿರಬಹುದು. ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವ ಗುರಿಯಿಟ್ಟು ದಿಟ್ಟ ಉದಾತ್ತ ಕೆಲಸಕ್ಕೆ ಮನಮಾಡಿದ್ದ ಟಾಮ್ ಮೂರ್ ಗೆ ಹದಿನೈದು ಲಕ್ಷಕ್ಕೂ ಮಿಕ್ಕಿದ ಜನರಿಂದ ಹಣದ ಪ್ರವಾಹವೇ ಹರಿದು ಬಂತು ಮತ್ತು ಸುಮಾರು ಮುನ್ನೂರು ಕೋಟಿ ರೂಪಾಯಿಗಳ ದೇಣಿಗೆ ಸಂಗ್ರಹ ಮಾಡಲು ಸಾಧ್ಯ ಆಯಿತು.

ಹೀಗೆ ತೀರ ಸಣ್ಣ ಸಮಯದಲ್ಲಿ ನಿರೀಕ್ಷೆಗೂ ಮೀರಿದ ಜನಧನ ಬೆಂಬಲ ಪಡೆಯಲು ಕೆಲವು ಕಾರಣಗಳಿದ್ದರೂ ಅವುಗಳಲ್ಲಿ ಒಂದು, ಕರೆ ನೀಡಿದಾತ ವೃದ್ಧ ನಿವೃತ್ತ ಸೇನಾನಿ ಎನ್ನುವುದು. ನಾನು ವಾಸಿಸುವ ಬ್ರಿಸ್ಟಲ್ ಊರಿನಲ್ಲಿಯೂ, ಒಂದಾನೊಂದು ಕಾಲದಲ್ಲಿ ನಡೆದ ಮಹಾಯುದ್ಧದಲ್ಲಿ ಹಿಟ್ಲರ್ ನ ವಿಮಾನಗಳು ಬಾಂಬ್ ಉದುರಿಸಿ ಉಂಟಾದ ಪ್ರಪಾತವನ್ನು ನೋಡಲೆಂದು ಹೋಗುವವರು ಅಥವಾ ಅಂತಹ ಒಂದು ಕಂದಕವನ್ನೇ ಮುಚ್ಚಿ ತನ್ನ ಮನೆಯ ತಳಪಾಯ ಹಾಕಿರುವುದರ ಸುಳಿವು ಸಿಕ್ಕಿ ರೋಮಾಂಚಿತ ಆಗುವವರೂ ಇದ್ದಾರೆ.

ಯಾವ ದಿಕ್ಕಿನಿಂದ ನೋಡಿದರೂ ಆಂಗ್ಲರು ಯುದ್ಧಗಳೊಡನೆ ಅತ್ಯಂತ ಗಾಢ ಒಡನಾಟ ಹಾಗು ತೀಕ್ಷ್ಣ ನೆನಪುಗಳನ್ನು ಇಟ್ಟುಕೊಂಡವರು. ಅಂತಹ ಆಂಗ್ಲರ ದೇಶದಲ್ಲಿ ಮೊನ್ನೆ ಮೊನ್ನೆ ಮೇ ತಿಂಗಳ ಎಂಟರ ಶುಕ್ರವಾರ ಯುದ್ಧಾಂತ್ಯದ ನೆನಪೊಂದಕ್ಕೆ ಸಂಭ್ರಮೋಲ್ಲಾಸಗಳ ಉಡುಗೊರೆ ಸಿಕ್ಕಿತು.

ಎಪ್ಪತ್ತೈದು ವರ್ಷಗಳ ಹಿಂದೆ ಅಪಾರ ಸಾವು ನೋವು ಅಪರಿಮಿತ ವಿನಾಶಗಳನ್ನು ಸೃಷ್ಟಿಸಿದ ಎರಡನೆಯ ಮಹಾಯುದ್ಧ ಯುರೋಪಿನಲ್ಲಿ ಕೊನೆಗೊಂಡದ್ದು 1945ರ ಮೇ ತಿಂಗಳ ಎಂಟನೆಯ ತಾರೀಕಿನಂದು. ಇಂಗ್ಲೆಂಡ್ ರಷ್ಯಾ ಅಮೆರಿಕ ಫ್ರಾನ್ಸ್ ಇನ್ನೂ ಹತ್ತೂಹನ್ನೆರಡು ದೇಶಗಳ ಮೈತ್ರಿ ಕೂಟದ ಎದುರು ನಾಝಿಗಳ ಜರ್ಮನಿ ಬೇಷರತ್ ಆಗಿ ಶರಣಾಗತವಾದಾಗ “ಇಲ್ಲಿಗೆ ನಿಲ್ಲಿಸಬಹುದು” ಎನ್ನುವ ಘೋಷಣೆಯಾಯಿತು. ಯೂರೋಪಿನ ಹೊರಗೆ ಈ ಮಹಾಯುದ್ಧ ಇನ್ನೂ ಕೆಲ ಕಾಲ ಮುಂದುವರಿದರೂ ಯೂರೋಪಿನ ಮಟ್ಟಿಗೆ ಅಂದೇ ಮಹಾಯುದ್ಧದ ನಿಲುಗಡೆ. ಆ ದಿನವನ್ನು ಎರಡನೆಯ ಮಹಾಯುದ್ಧದ ಅಂತ್ಯವಾದ ಸ್ಮರಣೆಗೆ “ಯುರೋಪಿನಲ್ಲಿ ವಿಜಯದ ದಿನ” ಎಂದು ಪ್ರತಿವರ್ಷವೂ ಇಲ್ಲಿ ಆಚರಿಸುತ್ತಾರೆ (VE Day,ವಿಕ್ಟರಿ ಇನ್ ಯುರೋಪ್ ಡೇ).

ಇಂತಹ ಒಂದು ಚಾರಿತ್ರಿಕ ಘಟನೆಯ 75ನೆಯ ಆಚರಣೆಗೆ ವರುಷದ ಮೊದಲಿನಿಂದಲೇ ಬ್ರಿಟನ್ ಸಹಜವಾಗಿಯೇ ವಿಶೇಷ ತಯಾರಿ ನಡೆಸಿತ್ತು. ವರ್ಷವೂ ಮೇ ತಿಂಗಳ ಮೊದಲ ಸೋಮವಾರದಂದು ನೀಡಲಾಗುವ ರಾಷ್ಟ್ರೀಯ ರಜೆಯನ್ನು ಈ ಕಾರಣಕ್ಕೆ ಮೇ ತಿಂಗಳ ಎಂಟನೆಯ ತಾರೀಕಿನ ಶುಕ್ರವಾರಕ್ಕೆ ಬದಲಾಯಿಸಲಾಗಿತ್ತು. ಎಂತಹ ಆಚರಣೆ ಸಂಭ್ರಮಗಳಿಗಾಗಿ ಕಾತರಿಸುತ್ತಿರುವ ಘಳಿಗೆಗಳೇ ಆದರೂ ಈ ಕೋವಿಡ್ ಬಾಧಿತ ಕಾಲದಲ್ಲಿ ಮೌನ ತಲ್ಲಣಗಳ ಕ್ಷಣಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಔಪಚಾರಿಕವಾದ ಸಂಸ್ಮರಣಾ ಕಾರ್ಯಕ್ರಮ ಪೂರ್ವಯೋಜಿತವಾದ ರೀತಿಯಲ್ಲಿ ನಡೆಯಲಿಲ್ಲ. ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಗೈದ ತಮ್ಮ ಪೂರ್ವಜರ ಹಿರಿಯರ ಸ್ಮರಣೆ ಅಪೇಕ್ಷಿತ ರೀತಿಯಲ್ಲಿ ಮಾಡಲಾಗದೆ ನಿರಾಸೆಗೊಳಿಸಿದ್ದಕ್ಕೆ ಸಂಬಂಧಪಟ್ಟ ಆಯೋಜಕರು ಕ್ಷಮಾಪಣೆಯನ್ನು ಮೊದಲೇ ಕೇಳಿದ್ದರು.

ತಮ್ಮ ಬದುಕಿನ ಅತ್ಯಂತ ಆಪ್ತ ಭಾಗವಾಗಿರುವ ವಿಶ್ವ ಮಹಾಯುದ್ಧ ಮತ್ತು ಅದು ಕೊನೆಗೊಂಡದರ ವಿಶಿಷ್ಟ 75ರ ಆಚರಣೆಗೆ ಪೂರ್ವನಿರ್ಧರಿತ ಅಥವಾ ಸರಕಾರೀ ಮೇಜುವಾನಿಯ ಅಥಾವ ಇನ್ಯಾವುದೋ ಸಂಘ ಸಂಸ್ಥೆಗಳ ಆಶ್ರಯದ ವರ್ಣರಂಜಿತ ಕಾರ್ಯಕ್ರಮ ಸಮಾರಂಭಗಳು ನಡೆಯದೇ ಇದ್ದರೂ ಇಲ್ಲಿನ ಬೀದಿ ಬೀದಿಗಳಲ್ಲಿ ಅಲ್ಲಲ್ಲಿ ವಾಸಿಸುವ ಜನರು ಮನೆಯಿಂದ ಹೊರಬಂದು ಸಡಗರ ಉಲ್ಲಾಸಗಳ “ಸ್ಟ್ರೀಟ್ ಪಾರ್ಟಿ”ಯಲ್ಲಿ ತೊಡಗಿದರು. ತಮ್ಮ ತಮ್ಮ ಮನೆಯ ಹೊರಗೆ ತೋರಣ ಕಟ್ಟಿದರು, ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ಕುರ್ಚಿ ಮೇಜುಗಳನ್ನು ಹಾಕಿ ಪಾನೀಯ ತಿನಿಸುಗಳ ಸಾಂಗತ್ಯದಲ್ಲಿ ನೆರೆ ಹೊರೆಯವರ ಬಳಿ ಹರಟೆ ಹೊಡೆದರು. ಬೀದಿಯ ಉದ್ದಗಲಕ್ಕೆ ಮಕ್ಕಳು ಕುಣಿದು ಕುಪ್ಪಳಿಸಿದರು. ನಮ್ಮ ಬೀದಿಯ ಮನೆಯೊಂದು ಮಹಾಯುದ್ಧದ ಸಂಬಂಧಿ ರಸಪ್ರಶ್ನೆ ಆಯೋಜಿಸಿತು. ಒಬ್ಬರಿಗೊಬ್ಬರು ದೂರ ನಿಂತೇ ವ್ಯವಹರಿಸಬೇಕಾದ ಈ ಕಾಲದಲ್ಲಿ ತಮ್ಮ ಮನೆಯ ಅಂಗಳದಿಂದಲೇ ಮೆಗಾಫೋನ್ ಹಿಡಿದು ಆಚೀಚಿನ ಹತ್ತು ಮನೆಗಳಿಗೆ ಕೇಳುವಂತೆ ಕೂಗಿ ಪ್ರಶ್ನೆಗಳನ್ನು ಓದಿಹೇಳಿದರು. ಮತ್ತೆ ಭಾಗವಹಿಸುವ ಮನೆಗಳವರು ತಮ್ಮ ತಮ್ಮ ಮನೆಯ ಅಂಗಳದಲ್ಲೇ ಕುಳಿತು ಪೇಪರು ಪೆನ್ನು ಹಿಡಿದು ಉತ್ತರಗಳನ್ನು ಬರೆದರು. ನಡೆಯಲಾಗದ ನಡುಗುವ ವೃದ್ಧರೂ ತಮ್ಮ ವೀಲ್ ಚೇರನ್ನು ಮನೆಯ ಮುಂಬಾಗಿಲ ಹೊಸ್ತಿಲ ತುದಿಯಲ್ಲಿ ತಂದು ನಿಲ್ಲಿಸಿಕೊಂಡು ಕೈಯಲ್ಲಿ “ಯೂನಿಯನ್ ಜಾಕ್” (ರಾಷ್ಟ್ರ ಧ್ವಜ) ಹಿಡಿದು ಬೀದಿಯ ಹಬ್ಬಕ್ಕೆ ಮೂಕಾಸ್ವಾದನೆ ನೀಡಿದರು.

ಬ್ರಿಟನ್ ಹಾಗು ಫ್ರಾನ್ಸ್ ನಡುವಣದ ಸಾವಿರ ವರ್ಷಗಳ ಯುದ್ಧದ ಇತಿಹಾಸದಲ್ಲಿ ನಡೆದ ಒಂದು ಯುದ್ಧವಂತೂ ಒಂದು ನೂರು ವಷಗಳ ಕಾಲದ ಅವಿರತ ಸೆಣಸಾಟ ಎಂದೇ ಹೆಸರು ಪಡೆದಿದೆ. ಪಶ್ಚಿಮ ಯೂರೋಪಿನ ಪ್ರತಿಷ್ಠಿತ ಗದ್ದುಗೆಗೋಸ್ಕರ ಈ ಎರಡು ದೇಶಗಳ ರಾಜಮನೆತನಗಳ ನಡುವೆ ಐದು ತಲೆಮಾರುಗಳನ್ನು ಒಳಗೊಂಡು ಜರುಗಿದ ಸರಣಿ ಹಣಾಹಣಿ ಅದಾಗಿತ್ತಂತೆ.

ಎಪ್ಪತ್ತೈದು ವರ್ಷಗಳ ಹಿಂದೆ ಲಂಡನ್ನಿನ ಕೇಂದ್ರಭಾಗದ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು, ಹಲ್ಲುಗಳ ನಡುವೆ ಸಿಗಾರ್ ಅದುಮಿ ಹಿಡಿದೇ ನಗೆ ಬೀರುತ್ತಾ ಬಲ ಕೈಯನ್ನು ತನಗಿಂತ ಮೇಲೆತ್ತಿ “ವಿಕ್ಟರಿ” ಸಂಕೇತವನ್ನು ಕೆಳಗೆ ನೆರೆದಿದ್ದ ಜನಸಮೂಹದತ್ತ ತೋರಿಸುತ್ತ ಪ್ರಧಾನಿ ಚರ್ಚಿಲ್ ನಿಂತಿದ್ದಾಗ ಕೇಳಿಬಂದ ಚಪ್ಪಾಳೆ ಕೇಕೆಗಳು ಈಗ ಕೇಳಿಸದಾದರೂ, ಮನೆಯಿಂದ ಹೊರಬರಲಾರದ ಆರೋಗ್ಯ ಸಂಕಟದ ವಿಷಮ ಪರಿಸ್ಥಿತಿಯಲ್ಲೂ ಇಲ್ಲಿನ ಜನರು ಸ್ವಯಂ ಪ್ರೇರಣೆಯಿಂದ ರಸ್ತೆಗಿಳಿದು ಆನಂದಿಸಿದರು.

ಕಳೆದ ಶುಕ್ರವಾರದ ಕೆಲವು ಗಂಟೆಗಳು ರಸ್ತೆ ಬೀದಿಗಳಲ್ಲಿ ಊರುಕೇರಿಗಳಲ್ಲಿ ಈಗಿನ ಕೋವಿಡ್ ಕಾಲವನ್ನು ಮರೆಸಿದವು, ಆರು ವರ್ಷಗಳ ಕಾಲ ನಡೆದು ಇದು ಮುಗಿಯದ ಯುದ್ಧವೇನೋ ಎಂದು ಜನಸಾಮಾನ್ಯರಲ್ಲಿ ಭಯ ಚಿಂತೆಗಳನ್ನು ಬಿತ್ತಿದ್ದ ಭೀಕರ ಯುದ್ಧವೊಂದು ಮುಗಿದಾಗ ತಮ್ಮ ಮನೆಯ ಹಿರಿಯರಿಗೆ ಆಗಿದ್ದ ಸಮಾಧಾನ ಖುಷಿಗಳನ್ನು ಬೀದಿಹಬ್ಬದಲ್ಲಿ ಸಿಕ್ಕವರೊಡನೆ ಹಂಚಿಕೊಂಡರು.

ಮಹಾಯುದ್ಧವೊಂದು ಮುಗಿದು ಎಪ್ಪತೈದು ವರ್ಷಗಳು ಕಳೆದಿವೆ. ಹಲವು ವಿಧ್ವಂಸಕ ಪರಿಣಾಮಗಳೊಂದಿಗೆ ನಿರ್ನಾಮಗಳೊಂದಿಗೆ ಮುಕ್ತಾಯಗೊಂಡು, ಭಾಗವಹಿಸಿದ ದೇಶದವರಿಗೂ ಪಾಲ್ಗೊಳ್ಳದ ಪ್ರದೇಶದವರಿಗೂ ಮಹಾಪಾಠವನ್ನು ನೀಡಿದ ಯುದ್ಧದ ಸಮಾಪ್ತಿಯ ಆಚರಣೆಯ ಈ ಕಾಲದಲ್ಲಿ ನಮ್ಮ ತಲೆಮಾರಿಗೆ ಹೊಚ್ಚಹೊಸದು ಎನಿಸುವ ಹಾಗು ಯುದ್ಧವೊಂದಕ್ಕೆ ಹೋಲಿಸಬಹುದಾದ ವಿದ್ಯಮಾನ ಆರಂಭ ಆಗಿರುವುದು ಈ ಕಾಲದ ವೈರುಧ್ಯಗಳಲ್ಲೊಂದು ಇರಬಹುದು.

ಪಾಲ್ಗೊಳ್ಳುವಿಕೆ, ಪ್ರಭಾವ, ಪರಿಣಾಮಗಳ ನಿಟ್ಟಿನಿಂದ ಬಹುತೇಕ ಇಡೀ ಜಗತ್ತನ್ನು ವ್ಯಾಪಿಸಿದ್ದ ಮಹಾಯುದ್ಧದಂತೆಯೇ ಇಂದು ಇಡೀ ಜಗತ್ತು ಕೊರೊನವನ್ನು ಎದುರಿಸುವ ಮಣಿಸುವ ಸೆಣಸಾಟದಲ್ಲಿದೆ. ಮೇಲುನೋಟಕ್ಕೆ ಕಣ್ಣಿಗೆ ಕಾಣದ ಕ್ಷುದ್ರ ಜಂತುವೊಂದರ ವಿರುದ್ಧದ ಆರೋಗ್ಯವನ್ನು ಆಯುಷ್ಯವನ್ನು ಕಾಪಾಡಿಕೊಳ್ಳುವ ನೇರಾನೇರ ಸಮರ ಎಂದು ಗುರುತಿಸಿಕೊಳ್ಳುವ ಈಗಿನ ಈ ಹೋರಾಟ ಎಪ್ಪತ್ತೈದು ವರ್ಷಗಳ ಹಿಂದೆ ಜಗತ್ತಿನ ಜನಜೀವನ ಅನುಭವಿಸಿದ ಗಂಭೀರ ಯುದ್ಧವೊಂದರ ಬಹುಮುಖಗಳನ್ನು ಅಥವಾ ಯುದ್ಧದೊಳಗಿನ ಯುದ್ಧಗಳನ್ನು ಕೆದುಕಿ ಎದುರು ತಂದಿದೆ.

ಕೋವಿಡ್ ನಿಂದ ಮುಕ್ತಿಪಡೆಯಲು ಸೆಣಸುತ್ತಿರುವ ಪ್ರತಿ ದೇಶದ ಸವಾಲು ಸಂದಿಗ್ಧತೆ ಹಾಗು ಪರಿಹಾರ ಮಾರ್ಗಗಳು ಅಲ್ಲಲ್ಲಿಗೆ ಹೊಂದುವಂತೆ ತುಸುಭಿನ್ನವಾದರೂ ವೈಯಕ್ತಿಕ ನೆಲೆಯಲ್ಲಿ ಕೊರೊನ ದಾಳಿಗೆ ಪ್ರತ್ಯಕ್ಷ ಒಳಗಾಗುವ, ಒಳಗಾಗದಿದ್ದರೂ ಇಂತಹ ಸಂದರ್ಭದ ಪರಿಣಾಮಗಳನ್ನು ಅನುಭವಿಸುವ ಎಲ್ಲರೂ ಯುದ್ಧದಲ್ಲಿ ಈಗ ಭಾಗಿಗಳೇ. ನಿತ್ಯವೂ ಒಂದಷ್ಟು ಹೋರಾಟ, ಕೆಲವು ಜಯ ಕೆಲವು ಸೋಲು.. ಮತ್ತೆ ಕೆಲವು ಸಾವುಗಳು.. ಅಂದೂ ಇಂದೂ. ಇಂದು ವೈರಾಣು ದಾಳಿಗೆ ಒಳಗಾದವರು, ಈಗಷ್ಟೇ ಆಸ್ಪತ್ರೆಯಲ್ಲಿ ದಾಖಲಾದವರು ನಾಳೆಗಳನ್ನು ಕಾಣದವರು ಮತ್ತೆ ಮುಂದೆ ಬಲಿಯಾಗುವವರ ಅಂದಾಜು ಎಲ್ಲವೂ ರಣರಂಗದಿಂದ ಕಣ್ಣಿಗೆಕಟ್ಟುವಂತೆ ಇಂದೂ ವರದಿಯಾಗುತ್ತಿದೆ. ಆಗಿನಂತೆ ಈಗಲೂ, ಸರಿಯೋ ತಪ್ಪೋ ಪ್ರಜ್ಞೆಯುಳ್ಳದ್ದೋ ಅವಿವೇಕದ್ದೋ ನಾಯಕರು ಹೊರಡಿಸುವ ಠರಾವು ನಿರ್ಣಯಗಳನ್ನು ಆಲಿಸಿ ನಂಬಿ ನಡೆಯಬೇಕಾಗಿದೆ.

ವೃದ್ಧರು ಯೌವನಸ್ಥರು ಮಕ್ಕಳು ಸಿರಿವಂತರು ಬಡವರು ಅಪಾರ ಸಂಖ್ಯೆಯಲ್ಲಿ ಇದೀಗ ಕೊರೊನವನ್ನು ಮುಖಾಮುಖಿಯಾಗಿ ಎದುರಿಸುತ್ತಿದ್ದಾರೆ. ಯುದ್ಧಗಳ ಬಗೆಗೆ ಆಸಕ್ತಿ ಉಳ್ಳವರು ಇಲ್ಲದವರು ನಿರ್ಲಿಪ್ತರು ಶಾಂತಿಪ್ರಿಯರು ಯಾರೇ ಆದರೂ ಈ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೆ ಪರೋಕ್ಷವಾಗಿ ಪಾಲ್ಗೊಳ್ಳುವುದು ಅನಿವಾರ್ಯ ಆಗಿದೆ. ಚಾರಿತ್ರಿಕ ಯುದ್ಧಗಳ ಪರಂಪರೆಗೆ ಸೇರಲ್ಪಡುತ್ತಿರುವ ತಾಜಾ ಸಮರ, ಕೊರೊನ ವೈರಾಣುವನ್ನು ಮಟ್ಟ ಹಾಕುವಲ್ಲಿ ಅಲ್ಲ, ಬದಲಿಗೆ ಅದರಿಂದ ಬಚಾವಾಗುವಲ್ಲಿ ನಡೆಯುತ್ತಿದೆ.

ಕೊರೊನ ವೈರಾಣು ಹೊಸೆದಿರುವುದು ಮಹಾಯುದ್ಧಗಳಂತಹ ಬಹುಮುಖಿ ಯುದ್ಧವನ್ನು. ಪ್ರತಿಯೊಬ್ಬರ ಆರೋಗ್ಯದ ಅರ್ಥದ ಮೇಲೂ ಹಾಗು ದೇಶ ವಿದೇಶಗಳ ಆರ್ಥಿಕತೆಯ ಆರೋಗ್ಯದ ಮೇಲೂ ಏಕಕಾಲಕ್ಕೆ ದಾಳಿಯಾಗಿದೆ. ಆರೋಗ್ಯ ಗಟ್ಟಿ ಇದ್ದರೆ ಹೇಗೋ ದುಡಿದು ವೈಯಕ್ತಿಕ ಅಥವಾ ಸಮೂಹದ ಆರ್ಥಿಕತೆಯನ್ನು ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು. ಮತ್ತು ಆರ್ಥಿಕ ಸ್ಥಿತಿ ಮಜಬೂತಿದ್ದರೆ ಎಲ್ಲಾದರೂ ಹೋಗಿ ಶುಶ್ರೂಷೆ ಪಡೆದು ಸುಧಾರಿಸಿಕೊಳ್ಳಬಹುದು. ಆರೋಗ್ಯ ಹಾಗು ಆರ್ಥಿಕತೆ ಎರಡರ ಮೇಲೂ ಒಮ್ಮೆಗೇ ಹಲ್ಲೆಯಾದರೆ? ಜೀವಗಳನ್ನು ನಾಶಮಾಡುವುದು ಹಾಗು ಅದಕ್ಕಿಂತ ಮಿಗಿಲಾಗಿ ಜನರು ನಂಬಿದ ಜೀವನವನ್ನು ಜೀವನಾಧಾರವನ್ನು ಮುರಿಯುವುದು ಎಲ್ಲ ಮಹಾಯುದ್ಧಗಳ ಲಕ್ಷಣ. ಇಂದು ನಡೆಯುತ್ತಿರುವ ಯುದ್ಧದ ತೀವ್ರತೆ ಗಂಭೀರತೆಗಳು ಹೆಚ್ಚಾಗುವುದು ಇದೇ ಕಾರಣಕ್ಕೆ ಹಾಗು ಇದು ಆರೋಗ್ಯ ಮತ್ತು ಆರ್ಥಿಕತೆಗಳ ಮೇಲೆ ಹೊರಗಿನಿಂದ ಆದ ಆಘಾತ ಅಷ್ಟೇ ಅಲ್ಲದೇ, ಆರೋಗ್ಯ ಹಾಗು ಆರ್ಥಿಕತೆಗಳೂ ಒಂದರೊಡನೊಂದು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ.

ಆರೋಗ್ಯ ಹಾಗು ಆರ್ಥಿಕತೆಗಳನ್ನು ಏಕಕಾಲಕ್ಕೆ ನಿಭಾಯಿಸಬೇಕಾದ ಸೂಕ್ಷ್ಮ ಸಮತೋಲನದ ಗುರುತರ ಜವಾಬ್ದಾರಿ ಕೊರೊನ ಹಬ್ಬಿರುವ ಎಲ್ಲ ದೇಶಗಳ ಮೇಲೂ ಇದೆ. ಆದಷ್ಟು ಹೆಚ್ಚು ಜನರ ಜೀವ ಉಳಿಸುವ ಅಥವಾ ಜೀವ ಉಳಿಸಿಕೊಂಡವರ ಆರ್ಥಿಕ ಭದ್ರತೆ ಕಾಪಾಡುವಲ್ಲಿ, ತುಸು ಕಡಿಮೆ ತ್ರಾಸದ ಆಯ್ಕೆಯಾದ ಆರ್ಥಿಕ ವ್ಯವಸ್ಥೆಯ ಪುನಶ್ಚೇತನದ ಕಡೆಗೆ ಹೆಚ್ಚು ನಿಗಾ ವಹಿಸಿದ ದೇಶಗಳಲ್ಲಿ ಬ್ರಿಟನ್ ಕೂಡ ಸೇರಿದೆ.

ಎರಡನೆಯ ಮಹಾಯುದ್ಧ ಮುಗಿದ ನಂತರ ವಿಕಸನಗೊಂಡ ಜಗತ್ತಿನಲ್ಲಿ “ಎಕನಾಮಿಕ್ಸ್” ಎನ್ನುವ ಶಬ್ದ ಹೆಚ್ಚು ಹೆಚ್ಚು ಅರ್ಥವನ್ನೂ ಅವಲಂಬನೆಯನ್ನೂ ಕಂಡುಕೊಂಡಿದೆ. ಮತ್ತೆ ಜಾಗತೀಕರಣದ ಗತಿ ಮಿತಿಗಳು ನಿತ್ಯವೂ ಹೆಚ್ಚಿ ಒಂದು ದೇಶದ ಜನರ ಆರೋಗ್ಯದ ಸವಾಲು ಆರ್ಥಿಕತೆಯ ಕುಸಿತ ಜಗತ್ತಿನ ಇನ್ನೊಂದು ಭಾಗದ ಮೇಲೂ ಕ್ಷಣಮಾತ್ರದಲ್ಲಿ ಪರಿಣಾಮ ಬೀರುವುದು ಸಾಮಾನ್ಯವಾಗಿದೆ. ಎಲ್ಲಿಯೋ ಆರಂಭವಾದ ಆರ್ಥಿಕ ಕುಸಿತ ಇನ್ನೆಲ್ಲಿಯೋ ಹುಟ್ಟಿದ ವೈರಾಣು ಕೆಲವೇ ಸಮಯದಲ್ಲಿ ಜಗತ್ತಿನ ಮೂಲೆ ಮೂಲೆಯ ಊರು ದೇಶಗಳ ಬದುಕನ್ನು ಬದಲಿಸಲಾರಂಭಿಸುತ್ತದೆ, ನಿಯಂತ್ರಿಸಲಾರಂಭಿಸುತ್ತದೆ.

ಎಪ್ಪತ್ತೈದು ವರ್ಷಗಳ ಹಿಂದೆ ಮುಗಿದುಹೋದರೂ ಇಂದಿಗೂ ಆಂಗ್ಲರ ಮತ್ತುಳಿದ ಭಾಗೀದಾರ ದೇಶಗಳ ಮನಸ್ಸಿನಲ್ಲಿ ಆಪ್ತ ಜಾಗ ಪಡೆದ, ಸೇನೆ ಮದ್ದುಗುಂಡು ವಿಮಾನಗಳ ಸದ್ದುಗದ್ದಲದ ಮಹಾಯುದ್ದವಿರಲಿ, ಈಗಷ್ಟೇ ಶುರುವಾಗಿ ಜಗತ್ತಿನ ಎಲ್ಲ ಆಗುಹೋಗುಗಳ ಕೇಂದ್ರಸ್ಥಾನದಲ್ಲಿ ನಿಂತು ನಿರ್ದೇಶಿಸುತ್ತಿರುವ ಕೋವಿಡ್ ಬಿಕ್ಕಟ್ಟೇ ಆಗಲಿ ಯುದ್ಧಕ್ಕೂ ವೈರಾಣುವಿಗೂ ಸ್ವಲ್ಪವೂ ಸಂಬಂಧ ಇರದವರನ್ನು ಅಸಾಹಾಯಕರನ್ನು ಅಮಾಯಕರನ್ನು ಕಾಡುವುದೇ ಹೆಚ್ಚು, ಮಹಾಯುದ್ಧ ನಡೆದಾಗಿನ ಮುಗಿದ ನಂತರದ ಪರಿಣಾಮಗಳು ಆ ಯುದ್ಧ ಬೇಕೋ ಬೇಡವೋ ಹೇಗಿರಬೇಕು ಹೇಗಿರಬಾರದು ಎನ್ನುವ ಯಾವ ನಿರ್ಧಾರದಲ್ಲೂ ಪಾಲುದಾರರಲ್ಲದ ಜನಸಾಮಾನ್ಯರನ್ನು ಕಾಡಿಸಿ ಕಂಗೆಡಿಸಿದಂತೆ.

“ವರ್ಲ್ಡೋಮೀಟರ್ ” ಅಂತರ್ಜಾಲ ಪುಟದ “ಕೊರೊನ” ಶೀರ್ಷಿಕೆಯ ಅಡಿ ಅಥವಾ ಎರಡನೆಯ ಮಹಾಯುದ್ಧದ ಇತಿಹಾಸದ ಪುಸ್ತಕಗಳಲ್ಲಿ ಮಡಿದವರ ಲೆಕ್ಕ ಕರಾರುವಕ್ಕಾಗಿ ಸಿಗಬಹುದು ಆದರೆ ಅಂದಿನ ಮಹಾಯುದ್ಧಕ್ಕೆ ಅಥವಾ ಈಗಿನ ವಿಶ್ವವ್ಯಾಪಿ ಬಿಕ್ಕಟ್ಟಿಗೆ ದೂರದೂರದಿಂದಲೂ ಸಂಬಂಧ ಇಲ್ಲದೆಯೂ ಪೀಡಿತರಾದವರ ಆಗುವವರ ಅಥವಾ ಪರೋಕ್ಷ ಕಾರಣಗಳಿಗೆ ಬದುಕು ಬರಡಾಗುವವರ, ನಶಿಸಿ ಹೋಗುವವರ ಗಣತಿ ಎಲ್ಲೂ ಸಿಗಲಿಕ್ಕಿಲ್ಲ. ಭಾಷಾ ನಿಘಂಟುಗಳ ವ್ಯಾಖ್ಯಾನದ ಯುದ್ಧಗಳು ಅಥವಾ ಯುದ್ಧಗಳನ್ನು ನೆನಪಿಸುವ ದಾಳಿ ಹೋರಾಟ ಅಥವಾ ಅಂತಹ ವಿದ್ಯಮಾನ ಯಾವ ಕಾಲದಲ್ಲಿ ಯಾವ ನೆಲೆಯಲ್ಲಿ ಆದರೂ ಹುಟ್ಟಿಸುವ ಪರಿಣಾಮಗಳು ಸರಿಸುಮಾರು ಒಂದೇ ರೀತಿಯದ್ದಾಗಿರುತ್ತವೆ. ಮುಗಿದ ಸಂಗ್ರಾಮ ಅದರ ಅಕ್ಕಪಕ್ಕದ ವಿಚಾರಗಳು ಆಚರಣೆಯ ನೆಪದಲ್ಲಿ ಈಗಷ್ಟೇ ಶುರುವಾದ ಇನ್ನೊಂದು ಸಮರ ಮತ್ತದರ ಆಸುಪಾಸಿನ ಕ್ಷೋಭೆಗಳನ್ನು ಭೇಟಿಯಾಗುತ್ತಿದೆ, ಎಪ್ಪತ್ತೈದು ವರುಷಗಳ ತರುವಾಯ.