ವಿಶ್ವದ ಶ್ರೇಷ್ಠ ಸಮಕಾಲೀನ ಬರಹಗಾರರಲ್ಲಿ ಪರಿಗಣಿಸಲ್ಪಡುವ ಓರ್ಹಾನ್ ಪಾಮುಖ್ ಟರ್ಕಿಯ ಬಹುಮಾನ್ಯ ಕಾದಂಬರಿಕಾರ. 2006ರಲ್ಲಿ ನೋಬೆಲ್ ಪ್ರಶಸ್ತಿಗೆ ಪಾತ್ರರಾದ ಪಾಮುಖ್ ಅವರ ಕೃತಿಗಳು ವಿಶ್ವದ ಅನೇಕಾನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಪಾಮುಖ್ 2020ರ ಏಪ್ರಿಲ್ನಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದ ಕುರಿತಾಗಿ ಬರೆದ ಬರಹ ಇದು. ಮಹಾಸಾಂಕ್ರಾಮಿಕದ ಕಾದಂಬರಿಗಳು ನಮಗೆ ಕಲಿಸುವ ಪಾಠವನ್ನು ವಿವರಿಸುವ ಈ ಲೇಖನ ಇಂದಿನ ಸಂದರ್ಭಕ್ಕೆ ಹೆಚ್ಚು ಸೂಕ್ತ. ಕಮಲಾಕರ ಕಡವೆ ಅವರು ಆ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ

ಕಳೆದ ನಾಲ್ಕು ವರ್ಷಗಳಿಂದ ನಾನು ಐತಿಹಾಸಿಕ ಕಾದಂಬರಿಯೊಂದನ್ನು ಬರೆಯುತ್ತಿದ್ದೇನೆ. ಇದು 1901ರ ಸುಮಾರಿಗೆ ಏಷಿಯಾದಲ್ಲಿ ಲಕ್ಷಾನುಲಕ್ಷ ಜನರನ್ನು ಆಹುತಿ ತೆಗೆದುಕೊಂಡ ಮೂರನೆಯ ಪ್ಲೇಗ್ ಮಹಾಸಾಂಕ್ರಾಮಿಕವೆಂದು ಕರೆಯಲಾಗುವ ಬ್ಯುಬೋನಿಕ್ ಪ್ಲೇಗಿನ ಹಿನ್ನೆಲೆಯನ್ನು ಹೊಂದಿರುವ ಕಾದಂಬರಿ. ಕಳೆದ ಎರಡು ತಿಂಗಳುಗಳಿಂದ ನನ್ನ ಈ ಬರಲಿರುವ “ನೈಟ್ಸ್ ಆಫ್ ಪ್ಲೇಗ್” (ಪ್ಲೇಗಿನ ರಾತ್ರಿಗಳು) ಕಾದಂಬರಿಯ ವಸ್ತುವಿನ ಬಗೆಗೆ ಗೊತ್ತಿರುವ ಸ್ನೇಹಿತರು, ಸಂಬಂಧಿಕರು, ಸಂಪಾದಕರು, ಪತ್ರಕರ್ತರು ನನಗೆ ಪುಂಖಾನುಪುಂಖ ಪ್ರಶ್ನೆ ಕೇಳುತ್ತಿದ್ದಾರೆ.

ಅವರಿಗೆ ಇರುವ ಕುತೂಹಲ ಏನೆಂದರೆ ಇತಿಹಾಸದಲ್ಲಿ ಆಗಿಹೋದ ಪ್ಲೇಗ್ ಮತ್ತು ಕಾಲರಾ ಮಹಾಸಾಂಕ್ರಾಮಿಕಗಳ ಮತ್ತು ಪ್ರಸ್ತುತ ಎರಗಿರುವ ಕೊರೊನಾ ವೈರಸ್ಸಿನ ಮಹಾಸಾಂಕ್ರಾಮಿಕದ ನಡುವಿರುವ ಸಾಮ್ಯತೆ. ಹಾಗೆ ನೋಡಿದರೆ, ಸಾಮ್ಯತೆಗಳಿಗೆ ಕಮ್ಮಿ ಇಲ್ಲ. ಸಾಹಿತ್ಯ ಮತ್ತು ಇತಿಹಾಸದುದ್ದಕ್ಕೂ ನಮಗೆ ತೋಚುವದೇನೆಂದರೆ, ಮಹಾಸಾಂಕ್ರಾಮಿಕಗಳ ನಡುವಿನ ಸಾಮ್ಯತೆ ಕೇವಲ ಅವುಗಳನ್ನು ಹುಟ್ಟುಹಾಕುವ ಮತ್ತು ಹರಡುವ ವೈರಸ್ಸುಗಳಿಗೆ ಸೀಮಿತವಲ್ಲ. ನಮ್ಮ ಆರಂಭಿಕ ಪ್ರತಿಕ್ರಿಯೆಯೂ ಕೂಡ ಯಾವಾಗಲೂ ಒಂದೇ ತರ ಇರುತ್ತವೆ – ಅದೆಂದರೆ ನಿರಾಕರಣೆ. ರಾಷ್ಟ್ರೀಯ ಮತ್ತು ಸ್ಥಳೀಯ ಸರಕಾರಗಳು ಯಾವಾಗಲೂ ಮಹಾಸಾಂಕ್ರಾಮಿಕಗಳಿಗೆ ತಡವಾಗಿ ಪ್ರತಿಸ್ಪಂದಿಸುತ್ತವೆ ಮಾತ್ರವಲ್ಲ, ವಾಸ್ತವವನ್ನು, ಅಂಕಿಸಂಖ್ಯೆಗಳನ್ನು ತಿರುಚಿ ರೋಗದ ಅಸ್ತಿತ್ವವನ್ನೇ ಅವು ನಿರಾಕರಿಸುತ್ತವೆ.

ಸಾಂಕ್ರಾಮಿಕ ಹಾಗೂ ಮಾನವ ವರ್ತನೆಯ ಕುರಿತು ಬಂದಿರುವ ಸಾಹಿತ್ಯದಲ್ಲಿ ಅಗ್ರಗಣ್ಯ ಕೃತಿಯಾದ “ಅ ಜರ್ನಲ್ ಆಫ್ ಪ್ಲೇಗ್ ಇಯರ್” ನ ಶುರುವಾತಿನ ಪುಟಗಳಲ್ಲಿ ಡೇನಿಯಲ್ ಡಿಫೋ ಹೇಳುತ್ತಾರೆ: 1964ರಲ್ಲಿ, ಲಂಡನ್ನಿನ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳು ಪ್ಲೇಗಿನಿಂದಾಗಿ ಸತ್ತವರ ಸಂಖ್ಯೆಯನ್ನು ಇರುವುದಕ್ಕಿಂತಲೂ ಕಡಿಮೆ ನಮೂದಿಸಲು, ಇತರ ಇರಬರದ ರೋಗಗಳಿಂದಾಗಿ ಸಾವುಂಟಾಗಿದೆ ಎಂದು ದಾಖಲೆಯಲ್ಲಿ ತೋರಿಸಲು ಪ್ರಯತ್ನಿಸಿದ್ದರು.

ಪ್ಲೇಗಿನ ಕುರಿತಾಗಿ ಬಂದ ಕಾದಂಬರಿಗಳಲ್ಲೆಲ್ಲ ಅತ್ಯಂತ ವಾಸ್ತವವಾದಿ ಕಥಾನಕವೆನ್ನಬಹುದಾದ ಇಟಲಿಯ ಅಲೆಸಾಂಡ್ರೋ ಮಂಜೋನಿಯ 1827ರ ಕಾದಂಬರಿ “ದಿ ಬೆಟ್ರೋಥ್ಡ್” ಕೃತಿಯಲ್ಲಿ ಲೇಖಕ 1630ರ ಪ್ಲೇಗಿನ ಕಾಲದಲ್ಲಿ ಮಿಲಾನ್ ಶಹರದ ಸ್ಥಳೀಯರು ಹೇಗೆ ಅಧಿಕಾರಿಗಳ ಬಗ್ಗೆ ಕ್ರೋಧಿತರಾಗಿದ್ದರು ಎಂದು ದಾಖಲಿಸುತ್ತಾನೆ ಮತ್ತು ಪುಷ್ಟೀಕರಿಸುತ್ತಾನೆ. ಮಿಲಾನಿನ  ಪ್ರಾಂತ್ಯಾಧಿಪತಿ ಸಾಂಕ್ರಾಮಿಕ ಒಡ್ಡಿರುವ ಅಪಾಯವನ್ನು ದುರ್ಲಕ್ಷಿಸುತ್ತಾನೆ ಅಲ್ಲದೇ, ರಾಜಕುವರನ ಹುಟ್ಟುಹಬ್ಬದ ಆಚರಣೆಯನ್ನು ಸಹ ರದ್ದು ಮಾಡುವುದಿಲ್ಲ. ಸೂಕ್ತ ನಿರ್ಬಂಧನೆಗಳನ್ನು ಜಾರಿಮಾಡುವುದರಲ್ಲಿನ ಲೋಪ, ಅವುಗಳನ್ನು ನಾಗರಿಕರು ಪಾಲಿಸುವುದಕ್ಕೆ ತೋರಿದ ನಿರ್ಲಕ್ಷ್ಯಗಳು ಶಹರದಲ್ಲಿ ಪ್ಲೇಗ್ ಹರಡಲು ಕಾರಣವಾಯಿತೆಂಬುದನ್ನು ಮಂಜೋನಿ ತೊರಿಸಿಕೊಡುತ್ತಾನೆ.

ಪ್ಲೇಗ್ ಮತ್ತಿತರ ಸಾಂಕ್ರಾಮಿಕ ರೋಗಗಳ ಕುರಿತಾದ ಸಾಹಿತ್ಯದಲ್ಲಿ ಹೆಚ್ಚಿನವು ಅಧಿಕಾರದಲ್ಲಿರುವವರ ಅದಕ್ಷತೆ, ಸ್ವಾರ್ಥ ಮತ್ತು ಅಸಡ್ಡೆಗಳೇ ಜನಸಾಮಾನ್ಯರ ಆಕ್ರೋಶಕ್ಕೆ ಕಿಡಿ ಇಡುವ ಸಂಗತಿಯೆಂದು ವರ್ಣಿಸುತ್ತವೆ. ಆದರೆ, ಡಿಫೋ ಅಥವಾ ಕಾಮುಸ್ ಅವರಂತ ಮಹಾನ್ ಲೇಖಕರು ಜನರ ಕ್ರೋಧದ ಹಿಂದೆಯೂ ಹೋಗಿ, ರಾಜಕಾರಣವನ್ನು ಮೀರಿದ, ಮಾನವ ಸ್ವಭಾವದ ಆಂತರ್ಯದಲ್ಲಿರುವ ಅಂಶವನ್ನು ಓದುಗರು ಮನಗಾಣಲು ಅವಕಾಶ ಕಲ್ಪಿಸುತ್ತಾರೆ.

ಡಿಫೋ ತನ್ನ ಕಾದಂಬರಿಯಲ್ಲಿ ತೋರಿಸುವುದೇನೆಂದರೆ, ಕೊನೆಯಿರದ ಸಾರ್ವಜನಿಕ ಪ್ರತಿಭಟನೆಗಳ, ಮಿತಿಯಿರದ ಕ್ರೋಧದ ಹಿಂದೆ ವಿಧಿಯ ವಿರುದ್ಧವೂ ಇರುವ ಸಿಟ್ಟು: ಎಲ್ಲ ಸಾವು ನೋವುಗಳನ್ನು ನೋಡುತ್ತ, ಅವುಗಳನ್ನು ಆಗಗೊಡುವ ದೈವಿಕ ಇಛ್ಛಾಶಕ್ತಿ ಮತ್ತು ಇವಾವುದನ್ನೂ ಸ್ಪಷ್ಟವಾಗಿ ವಿವರಿಸಲಾಗದ ಧಾರ್ಮಿಕ ಸಂಸ್ಥೆಗಳ ವಿರುದ್ಧ ಕೂಡ ಅಪಾರ ಕೋಪ ವ್ಯಕ್ತವಾಗಿರುವುದನ್ನು ಡಿಫೋ ನಮೂದಿಸುತ್ತಾನೆ.

ಮಹಾಸಾಂಕ್ರಾಮಿಕಗಳಿಗೆ ಮಾನವರ ಇನ್ನೊಂದು ಅಪ್ರಚೋದಿತ ಮತ್ತು ಸಾರ್ವತ್ರಿಕ ಪ್ರತಿಕ್ರಿಯೆಯೆಂದರೆ ಗಾಳಿಸುದ್ದಿ ಮತ್ತು ಸುಳ್ಳು ಮಾಹಿತಿಗಳನ್ನು ಹಬ್ಬಿಸುವುದು. ಹಿಂದಿನ ಮಹಾಸಾಂಕ್ರಾಮಿಕಗಳ ಸಂಧರ್ಭದಲ್ಲಿ ಈ ಗಾಳಿಸುದ್ದಿಗಳ ಮೂಲ ಸುಳ್ಳು ಮಾಹಿತಿಯಾಗಿತ್ತು ಮತ್ತು ಒಟ್ಟಾರೆ ಏನಾಗುತ್ತಿದೆಯೆನ್ನುವುದನ್ನು ಅರಿಯುವಲ್ಲಿನ ಅಸಾಧ್ಯತೆಯಾಗಿತ್ತು.

ಡಿಫೋ ಹಾಗೂ ಮಂಜೋನಿ ಜನ ಹೇಗೆ ಪರಸ್ಪರರಿಂದ ದೂರ ಇರುತ್ತಿದ್ದರು ಎಂಬ ವರ್ಣನೆ ಕೊಡುತ್ತಾರೆ ಮಾತ್ರವಲ್ಲ, ಪರಿಸ್ಥಿತಿಯ ವಿಶಾಲ ಚಿತ್ರವನ್ನು ಅರಿತುಕೊಳ್ಳಲಿಕ್ಕಾಗಿ ಜನರು ಹೇಗೆ ಪರಸ್ಪರರಿಂದ ಅವರವರ ಊರು, ನೆರೆಹೊರೆಯ ಸುದ್ದಿ, ಆಗುಹೋಗುಗಳ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಸಹ ವಿವರಿಸುತ್ತಾರೆ. ಇಂತಹ ವಿಸ್ತೃತ ದೃಷ್ಟಿಕೋನದಿಂದ ಮಾತ್ರ ಅವರು ಸಾವಿನಿಂದ ಪಾರಾಗಿ, ಸುರಕ್ಷ ಪ್ರದೇಶದಲ್ಲಿ  ಆಶ್ರಯ ಪಡೆಯಲು ಸಾಧ್ಯವಿತ್ತು.

(ಡೇನಿಯಲ್ ಡಿಫೋ)

ಸುದ್ದಿಪತ್ರಿಕೆಗಳು, ರೆಡಿಯೋ, ದೂರದರ್ಶನ, ಇಂಟರ್ನೆಟ್ ಇಲ್ಲದ ಆ ಜಗತ್ತಿನಲ್ಲಿ, ಅನಕ್ಷರಸ್ಥ ಜನಸ್ತೋಮಕ್ಕೆ ಅಪಾಯ ಎಲ್ಲಿದೆ, ಅದರ ತೀವ್ರತೆ ಏನು, ಅದೆಷ್ಟು ಹಾನಿ ತರಬಲ್ಲದು ಎಂಬೆಲ್ಲ ಲೆಕ್ಕಾಚಾರಕ್ಕೆ ತಮ್ಮ ಕಲ್ಪನಾಶಕ್ತಿಯೇ ಆಧಾರವಾಗಿತ್ತು. ವೈಯಕ್ತಿಕ ಕಲ್ಪನೆಯನ್ನು ಆಧರಿಸಬೇಕಾದ ಈ ಅವಶ್ಯಕತೆ ಪ್ರತಿಯೊಬ್ಬರ ಭೀತಿಗೂ ಒಂದು ಅನನ್ಯ ದನಿಯನ್ನು ಕೊಟ್ಟು, ಅದಕ್ಕೊಂದು ಕಾವ್ಯಾತ್ಮಕತೆಯನ್ನು ಸಹ ಕಲ್ಪಿಸಿತ್ತು – ಸ್ಥಳೀಯ, ಆಧ್ಯಾತ್ಮಿಕ, ಮತ್ತು ಪೌರಾಣಿಕ.

ಎಲ್ಲಿಂದ ಮತ್ತು ಯಾರಿಂದ ರೋಗ ಮೊದಲಾಯಿತು ಎನ್ನುವುದು ಪ್ಲೇಗ್ ರೋಗದ ಕಾಲದ ಅತ್ಯಂತ ಸಾಮಾನ್ಯ ಗಾಳಿಸುದ್ದಿಯಾಗಿತ್ತು. ಮಾರ್ಚ್ ಮಾಹೆಯ ನಡುವಲ್ಲಿ ಟರ್ಕಿಯಲ್ಲಿ ಭೀತಿ ಮತ್ತು ಆತಂಕ ಹಬ್ಬಲು ತೊಡಗಿದಾಗ, ಇಸ್ತಾನಬುಲ್ ಶಹರದ ಸಿಹಾಂಗೀರಿನಲ್ಲಿರುವ ನನ್ನ ಬ್ಯಾಂಕಿನ ಮ್ಯಾನೇಜರ್ ತನಗೆ ಬಹಳಷ್ಟು ಮಾಹಿತಿ ಇದೆ ಎಂಬ ಧಾಟಿಯಲ್ಲಿ ನನಗೆ ಹೇಳುತ್ತಿದ್ದ: “ಇದು ಅಮೇರಿಕಾ ಮತ್ತು ಇತರ ಜಗತ್ತಿಗೆ ಚೀನಾ ಎಸೆದಿರುವ ಆರ್ಥಿಕ ಸವಾಲು”.

ಪ್ಲೇಗನ್ನು ಯಾವಾಗಲೂ ಹೊರಗಿನಿಂದ ಬಂದ ಕೇಡು ಎಂದೇ ಚಿತ್ರಿಸಲಾಗಿದೆ. ಬೇರೆಲ್ಲೋ ಅದು ಎರಗಿರುತ್ತದೆ, ಅಲ್ಲಿ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲವೆನ್ನುವುದು ಮತ್ತೆ ಮತ್ತೆ ಹೇಳಲಾಗುವ ಮಾತು. ರೋಗ ಮೊದಲು ಎರಗಿದ್ದು ದೂರದ ಇಥಿಯೋಪಿಯಾದಲ್ಲಿಯೋ, ಇಜಿಪ್ಟಿನಲ್ಲಿಯೋ ಆಗಿದೆ ಎಂಬ ಸೂಚನೆಯ ಮೂಲಕವೇ ಅಥೆನ್ಸಿನಲ್ಲಿ ಪ್ಲೇಗ್ ಹಬ್ಬುತ್ತಿರುವ ಕುರಿತ ತನ್ನ ವರದಿಯನ್ನು ಶುರುಮಾಡುತ್ತಾನೆ ಥ್ಯೂಸಿಡೈಡ್ಸ್.

ರೋಗ ಅನ್ಯದೇಶದ್ದು, ಅದು ಹೊರಗಿನಿಂದ ಬಂದಿರುವುದು, ದುರುದ್ದೇಶದಿಂದ ಅದನ್ನು ತರಲಾಗಿದೆ ಎನ್ನುವ ಪೂರ್ವಗ್ರಹ ಸರ್ವೇಸಾಮಾನ್ಯ. ರೋಗವನ್ನು ಮೊಟ್ಟಮೊದಲು ತಂದವರ ಗುರುತಿನ ಕುರಿತಾದ ಗಾಳಿಸುದ್ದಿಗಳು ಯಾವಾಗಲೂ ಅತ್ಯಂತ ಜನಪ್ರಿಯವೂ, ವ್ಯಾಪಕವೂ ಆಗಿತ್ತು.

ಮಂಜೋನಿ ತನ್ನ “ದಿ ಬೆಟ್ರೋಥ್ಡ್” ಕೃತಿಯಲ್ಲಿ ಮಧ್ಯಯುಗದ ಪ್ಲೇಗ್ ಪೀಡಿತ ಕಾಲದ ಜನಮಾನಸದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಒಂದು ರೂಪವನ್ನು ವರ್ಣಿಸುತ್ತಾನೆ: ಮನೆಮನೆಯ ಬಾಗಿಲಿಗೆ, ಕೊಳಗಳಿಗೆ ಪ್ಲೇಗ್-ಸೋಂಕಿನ ದ್ರವವನ್ನು ಲೇಪಿಸುತ್ತ ಹೋಗುವ ಒಂದು ದುಷ್ಟ, ರಾಕ್ಷಸ ರೂಪವೊಂದರ ಕುರಿತಂತಹ ವದಂತಿಯೊಂದು ಪ್ರತಿದಿನವೂ ಹಬ್ಬುತ್ತಿತ್ತು. ಅಥವಾ, ಚರ್ಚಿನ ಅಂಗಳದಲ್ಲಿ ಬಳಲಿ ಕೂತ ಮುದುಕನೊಬ್ಬನ ಕಂಡು, ಸೋಂಕು ಹಬ್ಬಿಸಲು ತನ್ನ ಬಟ್ಟೆಯನ್ನು ಬಳಸುತ್ತಿದ್ದಾನೆ ಎಂಬ ವದಂತಿ ಹಬ್ಬಿಸಲಾಗುತ್ತಿತ್ತು – ಕ್ಷಣಮಾತ್ರದಲ್ಲಿ ಗುಂಪೊಂದು ಸೇರಿ ಆತನನ್ನು ಚಚ್ಚಿ ಸಾಯಿಸುತ್ತಿತ್ತು.

ರೆನೆಸಾನ್ ಕಾಲದಿಂದ ಮುಂದೆ ಪ್ಲೇಗ್ ಸಾಂಕ್ರಾಮಿಕಗಳ ವರದಿಗಳಲ್ಲಿ ಈ ಬಗೆಯ ಅನಿರೀಕ್ಷಿತ ಮತ್ತು ಅನಿಯಂತ್ರಿತ ಹಿಂಸೆ, ವದಂತಿ, ಆತಂಕ ಮತ್ತು ಬಂಡಾಯ ಸಾಮಾನ್ಯವಾಗಿ ಕಂಡುಬರುತ್ತಿದ್ದ ಸಂಗತಿ. ರೋಮನ್ ಸಾಮ್ರಾಜ್ಯದಲ್ಲಿದ್ದ ಕ್ರಿಶ್ಚಿಯನ್ನರು ರೋಮನ್ ದೈವಗಳಿಗೆ ಸೂಕ್ತ ವಿಧಿಗಳನ್ನು ಆಚರಿಸಿ ಅವನ್ನು ತೃಪ್ತಿಪಡಿಸದಿರುವುದರಿಂದ ಆಂಟೋನಿನ್ ಸ್ಮಾಲ್ ಪಾಕ್ಸ್ ಸೋಂಕು ಹಬ್ಬುತ್ತಿದೆಯೆಂದು ವಾದಿಸಿದ್ದ ಮಾರ್ಕಸ್ ಆರೀಲಿಯಸ್. ತರುವಾಯದ ಕಾಲಮಾನದ ಒಟ್ಟೋಮನ್ ಸಾಮ್ರಾಜ್ಯ ಮತ್ತು ಕ್ರಿಶ್ಚಿಯನ್ ಯುರೋಪಿನಲ್ಲಿ ಪ್ಲೇಗ್ ಹಬ್ಬಿಸಲು ಯಹೂದಿಗಳು ಬಾವಿಗಳನ್ನು ವಿಷಪೂರಿತಗೊಳಿಸುತ್ತಿರುವರೆಂದು ಆಪಾದಿಸಲಾಗುತ್ತಿತ್ತು.

ಜನರ ಯಾತನೆಯ ತೀವ್ರತೆ, ಸಾವಿನ ಭಯ, ಪರಲೋಕದ ಕುರಿತಾದ ಭೀತಿ, ಮತ್ತು  ವಿಲಕ್ಷಣತೆಯ ಭಾವಗಳು ಅವರ ಕ್ರೋಧದ ಆಳ ಮತ್ತು ರಾಜಕೀಯ ಅಸಮಾಧಾನವನ್ನು ನಿರ್ಧರಿಸುತ್ತಿದ್ದವು ಎಂದು ಪ್ಲೇಗಿನ ಕುರಿತ ಇತಿಹಾಸ ಮತ್ತು ಸಾಹಿತ್ಯ ನಮಗೆ ತೋರಿಸುತ್ತವೆ.

ಪುರಾತನ ಪ್ಲೇಗ್ ಮಹಾಸಾಂಕ್ರಾಮಿಕದ ಕಾಲದಲ್ಲಾದಂತೆಯೇ, ಕರೋನಾ ವೈರಸ್ಸಿನ್ ಪಿಡುಗಿನ ಸಂಧರ್ಭದಲ್ಲಿಯೂ ಘಟನಾವಳಿಗಳು ಅನಾವರಣವಾಗುತ್ತಿರುವ ರೀತಿಯ ಮೇಲೆ ಗಣನೀಯ ಪ್ರಭಾವ ಬೀರಿರುವ ಸಂಗತಿಗಳೆಂದರೆ ಜನಾಂಗೀಯ ಮತ್ತು ಪ್ರಾದೇಶಿಕ ಅಸ್ಮಿತೆ ಹಾಗೂ ಬುಡವಿಲ್ಲದ ವದಂತಿಗಳು. ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಸುಳ್ಳು ಮಾಹಿತಿಯನ್ನು ಹಿಗ್ಗಿಸಿ ಹಬ್ಬಿಸುವ ಬಲಪಂಥೀಯರ ಪ್ರವೃತ್ತಿ ಕೂಡ ಈ ನಿಟ್ಟಿನಲ್ಲಿ ಪ್ರಭಾವ ಬೀರಿರುವ ಅಂಶಗಳು.

ಹಿಂದಿನ ಕಾಲದ ಮಹಾಸಾಂಕ್ರಾಮಿಕಗಳನ್ನು ಎದುರಿಸಿದ ಜನರಿಗೆ ಲಭ್ಯವಿದ್ದ ಮಾಹಿತಿಗಿಂತ ಅಧಿಕ ಮತ್ತು ವಿಶ್ವಾಸಾರ್ಹ ಮಾಹಿತಿ ನಾವೀಗ ಎದುರಿಸುತ್ತಿರುವ ಮಹಾಸಾಂಕ್ರಾಮಿಕದ ಕುರಿತಾಗಿ ನಮಗಿಂದು ಲಭ್ಯವಿದೆ. ಆದುದರಿಂದಲೇ, ನಮ್ಮ ಅನುಭವಕ್ಕೆ ಬಂದಿರುವ ತೀವ್ರ ಭಯ ಸಮರ್ಥನೀಯವಾಗಿದ್ದರೂ, ತೀರಾ ಭಿನ್ನ ಬಗೆಯದಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ, ನಮ್ಮ ಭೀತಿ ಸುಳ್ಳುಸುದ್ದಿಗಳಿಂದ ಪ್ರಚೋದನೆಗೆ ಒಳಗಾದುದಲ್ಲ; ಬದಲಿಗೆ ನಮ್ಮ ಭೀತಿಯ ಮೂಲ ಇರುವುದು ಕರಾರುವಾಕ್ಕು ಮಾಹಿತಿಯ ಮೇಲೆ.

ದೇಶದ ಮತ್ತು ಜಗತ್ತಿನ ನಕಾಶೆಯ ಮೇಲೆ ಕೆಂಪು ಬಿಂದುಗಳು ವೃದ್ಧಿಸುತ್ತಲೇ ಇರುವುದನ್ನು ಕಂಡಂತೆ, ಪಾರಾಗಲೆಂದು ಓಡಿಹೋಗಲು ಅವಕಾಶವೇ ಉಳಿದಿಲ್ಲವೆನ್ನುವುದು ನಮಗೆ ಮನದಟ್ಟಾಗುತ್ತಿದೆ. ನಮಗೀಗ, ಅತೀವ ಕೆಡುಕಿನ ದಿನಗಳ ಕುರಿತಾಗಿ ಭಯಪಡಲು ಕಲ್ಪನಾಶಕ್ತಿಯ ಆಧಾರವೂ ಬೇಕಾಗಿಲ್ಲ. ಇಟಲಿಯ ಪೇಟೆಗಳಲ್ಲಿ ಸಾಲುಸಾಲಾಗಿ ಸೇನೆಯ ದೊಡ್ಡ ಕಪ್ಪು ಟ್ರಕ್ಕುಗಳು ಹೆಣಗಳನ್ನು ಸಾಗಿಸುತ್ತಿರುವ ದೃಶ್ಯವನ್ನು ನಾವು ನಮ್ಮದೇ ಅಂತ್ಯಸಂಸ್ಕಾರವನ್ನು ನೋಡುತ್ತಿದ್ದೇವೆಯೋ ಎಂಬಂತೆ ವೀಕ್ಷಿಸುತ್ತಿರುತ್ತೇವೆ.

ನಾವು ಎದುರಿಸುತ್ತಿರುವ ಆಪತ್ತು ಕಲ್ಪನೆಯನ್ನೂ, ವ್ಯಕ್ತಿಗತ ಅನನ್ಯತೆಯನ್ನೂ ಹೊರತುಪಡಿಸಿರುವುದೇ ಅಲ್ಲದೆ, ನಮ್ಮ ಜೀವನದ ದುರ್ಬಲತೆ ಮತ್ತು ಇತರ ಮಾನವರೊಂದಿಗೆ ನಾವು ಹೊಂದಿರುವ ಸಾಮ್ಯತೆ ಎಷ್ಟು ಅನಿರೀಕ್ಷಿತವಾಗಿ ಒಂದೇ ತರಹದ್ದು ಎನ್ನುವುದನ್ನು ಸಹ ಅದು ತೋರಿಸುತ್ತದೆ. ಸಾವಿನ ಕುರಿತಾದ ಚಿಂತೆಯಂತೆಯೇ, ಭಯ ನಮ್ಮನ್ನು ಏಕಾಕಿಯಾಗಿಸುತ್ತದೆ, ಆದರೆ ನಾವೆಲ್ಲರೂ ಒಂದೇ ಬಗೆಯ ಆಪತ್ತಿನಲ್ಲಿದ್ದೇವೆ ಎನ್ನುವುದರ ಅರಿವು ನಮ್ಮನ್ನು ಈ ಏಕಾಂತದಿಂದ ಹೊರತರುತ್ತದೆ.

ವಿಶ್ವದ ದೊಡ್ಡ ದೊಡ್ಡ ಆಸ್ಪತ್ರೆಗಳ ಹೊರಗೆ ಕಾಯುತ್ತಿರುವ ಜನರ ಬಿಂಬಗಳನ್ನು ಟಿವಿಯಲ್ಲಿ ವೀಕ್ಷಿಸುವಾಗ, ಇಡೀ ಮಾನವ ಕುಲದ ಜೊತೆ ನಾನು ನನ್ನ ಭೀತಿಯನ್ನು ಹಂಚಿಕೊಂಡ ಅನುಭವವಾಗಿ, ನನ್ನಲ್ಲಿ ಒಂಟಿತನದ ಭಾವ ಕಡಿಮೆಯಾಗುತ್ತದೆ. ಕ್ರಮೇಣ, ನನ್ನ ಭಯದ ಕುರಿತ ನಾಚಿಕೆಯೂ ಕ್ಷೀಣಿಸುತ್ತದೆ.

ಮುಖಗವಸು ಎಲ್ಲಿ ಮತ್ತು ಹೇಗೆ ಬಳಸುವುದೆಂಬ, ಕೊಂಡುತಂದ ಆಹಾರ ಪದಾರ್ಥವನ್ನು ಸುರಕ್ಷತೆಯೊಂದಿಗೆ ಬಳಸುವುದು ಹೇಗೆಂಬ, ಸ್ವತಃ ಕ್ವಾರಂಟೈನ್ ಆಗಬೇಕಾ ಎಂಬ ಆತಂಕಗಳನ್ನು ಥೈಲ್ಯಾಂಡಿನಿಂದ ನ್ಯೂಯಾರ್ಕವರೆಗೆ ಒಟ್ಟಾರೆ ಮಾನವ ಕುಲ ಎದುರಿಸುತ್ತಿದೆಯೆಂಬ ತಿಳಿವು ನಾವು ಈ ಸಂಕಟದಲ್ಲಿ ಒಂಟಿಯಲ್ಲವೆನ್ನುವುದನ್ನು ಸತತ ನೆನಪಿಸುತ್ತದೆ. ಇದುವೇ ನಮ್ಮಲ್ಲಿ ಐಕಮತ್ಯದ ಭಾವವನ್ನು ಸಹ ಹುಟ್ಟುಹಾಕುತ್ತದೆ. ಹಾಗಾಗಿಯೇ ನಾವು ಭಯದಿಂದ ತತ್ತರಿಸುತ್ತಿಲ್ಲ; ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಮೂಲಕ ಇದು ನಮ್ಮಲ್ಲಿ ಒಂದು ಬಗೆಯ ವಿನಯವನ್ನು ಸ್ಫುರಿಸುತ್ತಿದೆ.

ವಿಶ್ವದ ದೊಡ್ಡ ದೊಡ್ಡ ಆಸ್ಪತ್ರೆಗಳ ಹೊರಗೆ ಕಾಯುತ್ತಿರುವ ಜನರ ಬಿಂಬಗಳನ್ನು ಟಿವಿಯಲ್ಲಿ ವೀಕ್ಷಿಸುವಾಗ, ಇಡೀ ಮಾನವ ಕುಲದ ಜೊತೆ ನಾನು ನನ್ನ ಭೀತಿಯನ್ನು ಹಂಚಿಕೊಂಡ ಅನುಭವವಾಗಿ, ನನ್ನಲ್ಲಿ ಒಂಟಿತನದ ಭಾವ ಕಡಿಮೆಯಾಗುತ್ತದೆ. ಕ್ರಮೇಣ, ನನ್ನ ಭಯದ ಕುರಿತ ನಾಚಿಕೆಯೂ ಕ್ಷೀಣಿಸುತ್ತದೆ, ಹಾಗೂ ನಾನು ಅದನ್ನು ಒಂದು ಅರ್ಥಪೂರ್ಣ ಪ್ರತಿಕ್ರಿಯೆ ಎಂದು ಮನಗಾಣುತ್ತೇನೆ. ಪ್ಲೇಗು ಮತ್ತಿತರ ಮಹಾಸಾಂಕ್ರಾಮಿಕಗಳ ಬಗೆಗಿರುವ ಗಾದೆ ನೆನಪಾಗುತ್ತದೆ: ಯಾರು ಹೆದರುವರೋ ಅವರೇ ದೀರ್ಘಾಯುಷಿಗಳಾಗುತ್ತಾರೆ.

ಅಂತಿಮವಾಗಿ, ನನ್ನ ಅರಿವಿಗೆ ಬಂದ ಸಂಗತಿಯೆಂದರೆ ಭೀತಿ ನನ್ನೊಳಗೆ ಇಬ್ಬಗೆಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಪ್ರಾಯಶಃ ನಮ್ಮೆಲ್ಲರಲ್ಲಿಯೂ. ಕೆಲಸಲ, ಅದು ನನ್ನನ್ನು ಅಂತರ್ಮುಖಿಯಾಗಿಸಿ, ಮೌನ ಮತ್ತು ಏಕಾಂತದಲ್ಲಿ ನಾನು ಬಚ್ಚಿಡುವಂತೆ ಪ್ರೇರೇಪಿಸುತ್ತದೆ. ಇನ್ನು ಕೆಲಸಲ, ಅದು ನನ್ನಲ್ಲಿ ವಿನಯವನ್ನು ಸ್ಫುರಿಸಿ, ಐಕಮತ್ಯದಿಂದಿರುವುದನ್ನು ಕಲಿಸುತ್ತದೆ.

ಪ್ಲೇಗ್ ಕುರಿತು ಕಾದಂಬರಿ ಬರೆಯಬೇಕೆಂದು ನಾನು ಕನಸು ಕಾಣತೊಡಗಿದ್ದು ಮೂವತ್ತು ವರುಷಗಳ ಹಿಂದೆ. ಆಗಲೂ, ನನ್ನ ಮನಸಿನಲ್ಲಿ ಈ ಕಾದಂಬರಿಯ ಕೇಂದ್ರ ವಿಷಯ ಸಾವಿನ ಕುರಿತಾದ ಭಯವೇ ಆಗಿತ್ತು. ಸಮ್ರಾಟ ಸುಲೇಮನ್ ಅವರ ಒಟ್ಟೋಮನ್ ಒಡ್ಡೋಲಗದಲ್ಲಿ ಹ್ಯಾಪ್ಸಬರ್ಗ್ ಸಾಮ್ರಾಜ್ಯದ ರಾಯಭಾರಿಯಾಗಿದ್ದ ಓಜಿಯರ್ ಘಿಸ್ಲಿನ್ ಡಿ ಬಸ್ಬೆಕ್ ಎಂಬ ಬರಹಗಾರ, 1561ರಲ್ಲಿ ಹಬ್ಬಿದ ಪ್ಲೇಗ್ ಪಿಡುಗಿನ ಸಂಧರ್ಭದಲ್ಲಿ ಇಸ್ತಾನಬುಲ್ ಶಹರದಿಂದ ಆರು ತಾಸು ದೂರದಲ್ಲಿದ್ದ ಮರ್ಮಾರಾ ಸಮುದ್ರದ ಪ್ರಿನ್ಕಿಪೋ ಎಂಬ ದ್ವೀಪದಲ್ಲಿ ಶರಣು ಪಡೆಯುತ್ತಾನೆ. ಇಸ್ತಾನಬುಲ್ ಶಹರದಲ್ಲಿ ಅವಶ್ಯಕತೆಗಿಂತ ಕಡಿಮೆ ಮುಂಜಾಗ್ರತಾ ಕ್ರಮಗಳನ್ನು ಜಾರಿಮಾಡಲಾಗಿತ್ತು ಎಂದು ಸೂಚಿಸಿರುವ ಈ ಬರಹಗಾರ, ಅದನ್ನು ತುರ್ಕಿಯರು ತಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ವಿಧಿವಾದಿಗಳಾಗಿರುವುದಕ್ಕೆ ಜೋಡಿಸುತ್ತಾನೆ.

ಒಂದೂವರೆ ಶತಮಾನಗಳ ತರುವಾಯ ಬರೆದ ಲಂಡನ್ ಶಹರದ ಹಿನ್ನೆಲೆಯ ತನ್ನ ಪ್ಲೇಗ್ ಕಾದಂಬರಿಯಲ್ಲಿ ಡಿಫೋ ಕೂಡ ತುರ್ಕಿಯರು ಮತ್ತು ಮುಸಲ್ಮಾನರಲ್ಲಿ ಕಂಡುಬರುವ ಸರ್ವವೂ ಪೂರ್ವನಿರ್ಧರಿತವಾಗಿರುವುದೆಂಬ ನಂಬಿಕೆಯ ನಮೂದು ಮಾಡುತ್ತಾನೆ. ನಾನು ಈಗ ಬರೆಯುತ್ತಿರುವ ಪ್ಲೇಗ್ ಕಾದಂಬರಿಯ ಮೂಲಕ ಮುಸ್ಲಿಮರ ಈ “ವಿಧಿವಾದ”ವನ್ನು ನಾನು ಸೆಕ್ಯುಲರಿಸ್ಂ ಮತ್ತು ಆಧುನಿಕತೆಯ ಹಿನ್ನೆಲೆಯಲ್ಲಿ ಅರ್ಥೈಸುವ ಪ್ರಯತ್ನ ಮಾಡಲಿದ್ದೇನೆ.

ವಿಧಿವಾದವೋ, ಅಲ್ಲವೋ, ಅಂತೂ ಒಟ್ಟೊಮನ್ ಸಾಮ್ರಾಜ್ಯದಲ್ಲಿ, ಕ್ವಾರಂಟೈನ್ ಕ್ರಮಗಳನ್ನು ಪಾಲಿಸಲು ಮುಸ್ಲಿಮರನ್ನು ಒಪ್ಪಿಸುವುದು, ಕ್ರಿಶ್ಚಿಯನ್ನರನ್ನು ಒಪ್ಪಿಸುವುದಕ್ಕಿಂತ ಹೆಚ್ಚು ಕಷ್ಟಸಾಧ್ಯವಾಗಿತ್ತು. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲು ಎಲ್ಲ ಮತಗಳ ವ್ಯವಹಾರಸ್ಥರು, ಗ್ರಾಮೀಣ ಜನತೆ ತೋರುವ ಪ್ರತಿಭಟನೆ, ಮುಸ್ಲಿಮರಲ್ಲಿ ಇನ್ನೂ ಹೆಚ್ಚಿನ ಬಲ ಪಡೆದು ಕೊಳ್ಳಲು ಕಾರಣ ಅವರಲ್ಲಿ ತಮ್ಮ ಹೆಣ್ಣುಮಕ್ಕಳ ಗೌರವದ ಕುರಿತು ಮತ್ತು ಕೌಟುಂಬಿಕ ಖಾಸಗಿತನದ ಕುರಿತಾಗಿದ್ದ ಆತಂಕಗಳು. ಹತ್ತೊಂಬತ್ತನೇ ಶತಮಾನದ ಆದಿಯ ಒಟ್ಟೋಮನ್ ಸಾಮ್ರಾಜ್ಯದಲ್ಲಿ ವೈದ್ಯರು ಸಾಮಾನ್ಯವಾಗಿ ಕ್ರಿಸ್ಚಿಯನ್ ಮತದವರಾಗಿರುತ್ತಿದ್ದುದರಿಂದ, ಮುಸ್ಲಿಂ ಸಮುದಾಯಗಳು “ಮುಸ್ಲಿಂ ವೈದ್ಯ”ರುಗಳ ಸೇವೆಗಾಗಿ ಒತ್ತಾಯ ಮಾಡುತ್ತಿದ್ದರು.

(ಓರ್ಹಾನ್ ಪಾಮುಖ್)

ಸ್ಟೀಮಬೋಟುಗಳ ಆಗಮನದಿಂದ 1850ರ ಸುಮಾರಿನಿಂದ ಪ್ರಯಾಣ ಕೈಗೊಳ್ಳುವುದು ಅಗ್ಗವಾದಂತೆ, ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾಗಳಿಗೆ ಹೋಗುತ್ತಿದ್ದ ಯಾತ್ರಿಗಳು ಸಾಂಕ್ರಾಮಿಕ ರೋಗಗಳ ದೊಡ್ಡ ಪ್ರಮಾಣದ ಸಾಗಣಿಕೆ ಮತ್ತು ಹರಡುವಿಕೆಗೆ ಕಾರಣರಾದರು. ಇಪ್ಪತ್ತನೇ ಶತಮಾನ ಮೊದಲಾಗುತ್ತಿದ್ದಂತೆ, ಬ್ರಿಟೀಷರು ಮೆಕ್ಕಾ ಮತ್ತು ಮದೀನಾಗೆ ಬಂದು, ಸ್ವದೇಶಗಳಿಗೆ ಮರಳುವ, ಯಾತ್ರಿಗಳ ಪ್ರವಾಹವನ್ನು ಹತೋಟಿಯಲ್ಲಿಡಲು ಇಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲಿ ವಿಶ್ವದ ಪ್ರಮುಖ ಕ್ವಾರಂಟೈನ್ ಆಫೀಸನ್ನು ತೆರೆದಿದ್ದರು.

ಈ ಐತಿಹಾಸಿಕ ಬೆಳವಣಿಗೆಗಳು ಪೂರ್ವಾಗ್ರಹದಿಂದ ಕೂಡಿದ “ಮುಸ್ಲಿಮರು ವಿಧಿವಾದಿಗಳು” ಎಂಬ, ಮಾತ್ರವಲ್ಲದೇ, ಮುಸ್ಲಿಮರು ಮತ್ತು ಒಟ್ಟಾರೆ ಏಶಿಯಾದ ಜನರೇ ಸಾಂಕ್ರಾಮಿಕ ರೋಗಗಳ ಮೂಲ ಮತ್ತು ಅವುಗಳ ಹಬ್ಬುವಿಕೆಗೆ ಪ್ರಮುಖ ಕಾರಣವೆಂಬ ಕಲ್ಪನೆಗಳನ್ನು ಹುಟ್ಟುಹಾಕಿದ್ದವು.

ಫ್ಯೂಡೋರ್ ದಾಸ್ತೋಯೆವ್ಸ್ಕಿಯ “ಕ್ರೈಮ್ ಅಂಡ್ ಪನಿಶ್ಮೆಂಟ್” ಕಾದಂಬರಿಯ ಅಂತ್ಯದಲ್ಲಿ, ಕಾದಂಬರಿಯ ಮುಖ್ಯ ಪಾತ್ರವಾದ ರಸ್ಕೊಲ್ನಿಕೋವ್ ಕನಸೊಂದ ಕಾಣುತ್ತಾನೆ. ಪ್ಲೇಗ್ ಬಗೆಗಿನ ಆ ಕನಸಿನಲ್ಲಿ ಇದೇ ಪೂರ್ವಗ್ರಹ ಪೀಡಿತ ಕಲ್ಪನೆಯ ಹಿನ್ನೆಲೆಯಲ್ಲಿಯೇ ಅವನು ಹೇಳುತ್ತಾನೆ: “ಅವನು ಕಂಡ ಕನಸಿನಲ್ಲಿ ಇಡೀ ವಿಶ್ವವೇ ಏಷಿಯಾದ ಆಳದಿಂದ ಯುರೋಪಿಗೆ ಬಂದ ಒಂದು ಭಯಂಕರ ಹೊಸ ಪ್ಲೇಗಿಗೆ ತುತ್ತಾಗಿತ್ತು.”

ಹದಿನೇಳನೇ ಮತ್ತು ಹದಿನೆಂಟನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯದ ರಾಜಕೀಯ ಗಡಿಯ ಕೊನೆ ಮತ್ತು ಪಾಶ್ಚಾತ್ಯ ವಿಶ್ವ ಮೊದಲಾಗುವ ಸರಹದ್ದನ್ನು ದನ್ಯೂಬ್ ನದಿಯಿಂದ ಗುರುತಿಸಲಾಗುತ್ತಿತ್ತು. ಆದರೆ, ಈ ಎರಡು ವಿಶ್ವಗಳ ನಡುವಿನ ಸಾಂಸ್ಕೃತಿಕ ಮತ್ತು ಜನಾಂಗೀಯ ಸರಹದ್ದನ್ನು ಪ್ಲೇಗ್ ಪಿಡುಗಿನಿಂದ ಗುರುತಿಸಲಾಗುತ್ತಿತ್ತು. ದನ್ಯೂಬ್ ನದಿಯಿಂದ ಪೂರ್ವದಲ್ಲಿ ಪ್ಲೇಗ್ ಪಿಡುಗು ತಾಕುವ ಸಾಧ್ಯತೆ ಹೆಚ್ಚು ಎಂದು ಭಾವಿಸಲಾಗುತ್ತಿತ್ತು. ಇವೆಲ್ಲವೂ ಕೂಡ ಪೂರ್ವ ದೇಶಗಳ ಸಮಾಜಕ್ಕೆ ಆರೋಪಿಸಲಾಗುತ್ತಿದ್ದ ವಿಧಿವಾದವನ್ನು ಮಾತ್ರವಲ್ಲ, ಪ್ಲೇಗು ಮತ್ತಿತರ ಪಿಡುಗುಗಳು ಯಾವಾಗಲೂ ಪೂರ್ವದ ಆಳ ಅಂಧಕಾರದಿಂದ ಹೊರಹೊಮ್ಮುವ ರೊಗಗಳು ಎಂಬ ಪೂರ್ವಗ್ರಹವನ್ನು ಕೂಡ ಬಲಪಡಿಸಿದವು.

ಅಸಂಖ್ಯ ಸ್ಥಳೀಯ ಐತಿಹಾಸಿಕ ವರದಿಗಳ ಆಧಾರದ ಮೇಲೆ ನಮಗೆ ದೊರಕುವ ಮಾಹಿತಿ ಎಂದರೆ, ಮಹಾಸಾಂಕ್ರಾಮಿಕಗಳ ಸಂಧರ್ಭದಲ್ಲಿಯೂ, ಇಸ್ತಾನಬುಲ್ ಶಹರದ ಮಸೀದಿಗಳು ಶವಸಂಸ್ಕಾರ ನಡೆಸುತ್ತಿದ್ದವು, ಶೋಕತಪ್ತರು ಸಂತಾಪ ಸೂಚಿಸಲು ಮತ್ತು ದುಖಃದಲ್ಲಿ ಆಲಿಂಗಿಸಲು ಪರಸ್ಪರರ ಭೇಟಿ ನಡೆಸುತ್ತಿದ್ದರು, ಮತ್ತು ರೋಗ ಎಲ್ಲಿಂದ ಬಂತು, ಹೇಗೆ ಹರಡುತ್ತಿತ್ತು ಎನ್ನುವುದರ ಕುರಿತಾಗಿ ಚಿಂತಿಸುವ ಬದಲು ಜನರು ಅಂತ್ಯಸಂಸ್ಕಾರಗಳ ತಯಾರಿಗೆ ಹೆಚ್ಚು ಗಮನ ಕೊಡುತ್ತಿದ್ದರು.

ಆದರೂ, ಪ್ರಸಕ್ತ ಕರೋನಾ ವೈರಸ್ ಮಹಾಸಾಂಕ್ರಾಮಿಕದ ಸಂಧರ್ಭದಲ್ಲಿ ಟರ್ಕಿಯ ಸರಕಾರವು ಸೆಕ್ಯುಲರ್ ಕ್ರಮಗಳನ್ನು ಜಾರಿ ಮಾಡಿ, ಕರೋನಾದಿಂದ ಮೃತರಾದವರ ಶವಸಂಸ್ಕಾರವನ್ನು ರದ್ದುಮಾಡಿದೆ, ವಾರದ ಪ್ರಾರ್ಥನೆಗಾಗಿ ಜನ ಒಟ್ಟಿಗೆ ಬರುವ ಶುಕ್ರವಾರದ ದಿನವೂ ಮಸೀದಿಗಳನ್ನು ಮುಚ್ಚಿಡುವಂತೆ ಆಜ್ಞೆ ಮಾಡಿದೆ. ತುರ್ಕೀಯರು ಈ ಕ್ರಮಗಳನ್ನು ವಿರೋಧಿಸಿಲ್ಲ. ನಮ್ಮ ಭೀಕರ ಭಯದಂತೆಯೇ, ಈ ಕ್ರಮಗಳು ಪ್ರಾಯಶಃ ಸೂಕ್ತವೂ ಹೌದು, ಸಹ್ಯವೂ ಹೌದು.

ಈ ಮಹಾಸಾಂಕ್ರಾಮಿಕ ಅಂತ್ಯವಾದ ತರುವಾಯ, ನಮ್ಮ ಈ ಜಗತ್ತು ಒಳ್ಳೆಯದಾಗಿರಬೇಕಾದರೆ, ಈ ಪ್ರಸಕ್ತ ಸಂಕಟ ನಮ್ಮಲ್ಲಿ ಮೂಡಿಸಿರುವ ವಿನಯ ಮತ್ತು ಐಕಮತ್ಯವನ್ನು ನಾವು ಅಪ್ಪಿಕೊಳ್ಳಬೇಕು ಮತ್ತು ಪೋಷಿಸಬೇಕು. ಅದುವೇ ನಮಗಿರುವ ದಾರಿ, ಬೇರಿಲ್ಲ.

#tellkamalakar@gmail.com