‘ಕೆಂಡಸಂಪಿಗೆ’ಯಲ್ಲಿ ಕಿರಂ ಕುರಿತು ಬರುತ್ತಿರುವುದು ಅತಿಯಾಯಿತು ಎಂದು ಹಲವು ಓದುಗರು ತಕರಾರು ಎತ್ತಿದ್ದಾರೆ.ಕಿರಂ ಕುರಿತು ರಹಮತ್ ಬರೆದ ಈ ಬರಹದ ನಂತರ ಇನ್ನು ಕೆಲವು ಸಮಯ ಕಿರಂ ಕುರಿತ ಲೇಖನಗಳಿಗೆ ವಿರಾಮವಿರುತ್ತದೆ ಎಂದು ನಾವು ನಮ್ರವಾಗಿ ಸೂಚಿಸುತ್ತಿದ್ದೇವೆ.ಕಿರಂ ಕುರಿತು ಇನ್ನೂ ಬರೆದು ಕಳುಹಿಸಿರುವ ಕನ್ನಡದ ಒಳ್ಳೆಯ ಮನಸ್ಸುಗಳು ನಮ್ಮನ್ನು ಕ್ಷಮಿಸಬೇಕು.

ಕನ್ನಡ ವಿಶ್ವವಿದ್ಯಾಲಯ ಆರಂಭವಾದ ಹೊಸತು. ನಾವೆಲ್ಲ ಸಿಕ್ಕಸಿಕ್ಕ ಮನೆಗಳನ್ನು ಹಿಡಿದು ಹೊಸಪೇಟೆಯಲ್ಲಿ ನೆಲೆಸಿದ್ದೆವು. ಒಂದು ದಿನ ನಾನು ನನ್ನ ಕೋಣೆಯಲ್ಲಿ ಕುಳಿತು ಏನೋ ಓದಿಕೊಂಡಿದ್ದೆ. ನನ್ನ ಮಡದಿ ಬಂದು `ಕಿರಂ ಮೇಷ್ಟರು ಬಂದಿದ್ದಾರೆ’ ಎಂದಳು. `ಎಲ್ಲಿದ್ದಾರೆ? ಒಳಗೆ ಕರಿ’ ಎಂದೆ. `ಅವರು ಬಂದು ಅರ್ಧಗಂಟೆಯಾಯಿತು. ಮಾವನ ಹತ್ರ ಮಾತಾಡ್ಕೊಂಡು ಹೊರಗೇ ಕೂತಿದ್ದಾರೆ. ಅಲ್ಲಿಗೇ ಎರಡು ಸಲ ಟೀ ಕೊಟ್ಟೆ’ ಎಂದಳು. `ಅರೆ! ನಮ್ಮ ನಾಡಿನ ಈ ದೊಡ್ಡ ವಿದ್ವಾಂಸನಿಗೆ ಹೆಬ್ಬೆಟ್ಟಿನ ಅಪ್ಪನ ಜತೆ ಅದೇನಪ್ಪಾ ಮಾತುಕತೆ?’ ಎಂದು ಚಕಿತನಾಗಿ ನಾನು, ಅವರಿಬ್ಬರೂ ಕುಳಿತಿದ್ದ ಕಟ್ಟೆಯ ಹಿಂದೆ ಮೆಲ್ಲಗೆ ಹೋಗಿ ಕದ್ದು ಕೇಳಿದೆ. ಇಬ್ಬರೂ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು. ಚರ್ಚೆಯ ವಿಷಯ: ಆರೋಗ್ಯಕ್ಕೆ ಯಾವ ಬ್ರಾಂಡಿನ ಬೀಡಿ ಒಳ್ಳೆಯದು ಎಂಬುದು. ಅಪ್ಪ ತನ್ನ ಸುದೀರ್ಘ ಅನುಭವದಿಂದ ಹೇಳುತ್ತಿದ್ದ: “ನೀವೇನೇ ಹೇಳಿ ಸ್ವಾಮಿ, ಗಣೇಶ್ ಬೀಡಿ ಒಂದು ದಂ ಎಳೆದರೆ ಒಳಗೆ ಕಟ್ಕೊಂಡ ಕಫಾಯೆಲ್ಲ ಒಡದು ಕಿತ್ಕೊಂಡು ಬರತ್ತೆ. ಬೇರೆ ಬೀಡಿ ಘಾಟು. ಕೆಮ್ಮು’. ಅದಕ್ಕೆ ಕಿರಂ `ಹಾಗಿಲ್ಲ ಸಾಹೇಬರೇ’ ಎಂದು ಇನ್ಯಾವುದೊ ಬೀಡಿಯನ್ನು ಅಪ್ಪನಿಂದ ಸೇದಿಸುತ್ತ, ಅದರ ಪರ ವಕಾಲತ್ತು ನಡೆಸಿದ್ದರು.

ಸಮಾಜದ ಯಾವುದೇ ಸ್ತರದ ಜನರಿರಲಿ, ಸಮಾನ ಆಸಕ್ತಿಯ ವಿಷಯವೊಂದನ್ನು ಹುಡುಕಿ, ಅವರೊಡನೆ ಮಾತುಕತೆ ಮಾಡುವಂಥ ಕುಶಲತೆ ಪ್ರೊ. ಕಿರಂ ಅವರಲ್ಲಿತ್ತು. ಇದು ಸಾಧ್ಯವಾಗಿದ್ದು ಬಹುಶಃ ಅವರ ತಿರುಗಾಟದಿಂದ ಮತ್ತು ಮಾತುಗಾರಿಕೆಯಿಂದ. ತಿರುಗಾಟದಿಂದ ಲಭ್ಯವಾಗುವ ಜನಸಂಪರ್ಕ ಹೊಸ ಅನುಭವವನ್ನು ಧಾರೆಯುತ್ತದೆ. ಮಾತ್ರವಲ್ಲ, ಮಾತುಗಾರಿಕೆಯನ್ನೂ ಕೊಡುತ್ತದೆ. ಕನ್ನಡದಲ್ಲಿ ಶಿವರಾಮ ಕಾರಂತ ಮತ್ತು ಅನಕೃ ಬಿಟ್ಟರೆ ಅತಿ ಹೆಚ್ಚು ಕರ್ನಾಟಕವನ್ನು ಅಲೆದ ಸಾಹಿತ್ಯದ ವ್ಯಕ್ತಿಯೆಂದರೆ ಕಿರಂ ಅವರೇ ಇರಬೇಕು. ತಮ್ಮ ತಿರುಗಾಟಗಳಿಂದ ಎಲ್ಲ ಕಡೆ ಅವರು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಸಣ್ಣಪುಟ್ಟ ಊರುಗಳಿಗೆಲ್ಲ ಕಷ್ಟಪಟ್ಟು ಹೋಗಿ ತಮ್ಮ ತಿಳಿವನ್ನು ಮಾತಿನ ಮೂಲಕ ಹಂಚುತ್ತಿದ್ದರು- ಊರ ಮಕ್ಕಳಿಗೆಲ್ಲ ಮೊಲೆಯುಣಿಸಿಕೊಂಡು ತಿರುಗುವ ತಾಯಿಯಂತೆ. ಅವರ ಪ್ರೀತಿ ಮತ್ತು ಅರಿವಿನ ಹಾಲುಂಡವರಲ್ಲಿ ಎಲ್ಲ ಧರ್ಮದ ಎಲ್ಲ ಜಾತಿಯ ಎಲ್ಲ ಪ್ರದೇಶದವರಿದ್ದಾರೆ. ಅವರೊಬ್ಬ ಜಾತಿಮತಾತೀತವಾಗಿ ಸ್ವೀಕಾರ ಪಡೆದಿದ್ದ ಮೇಷ್ಟರು; ಗುರುಶಿಷ್ಯರ ನಡುವೆ ಸಾಮಾನ್ಯವಾಗಿ ಇರುವ ಕೃತಕ ಅಂತರವನ್ನು ಕಳೆದು ಸ್ನೇಹಿತನಾಗಿಬಿಡುತ್ತಿದ್ದ ಮೇಷ್ಟರು. ಕನ್ನಡದಲ್ಲಿ `ಮೇಷ್ಟರು’ ಎಂಬ ಶಬ್ದವೇ ಗುರು ಸ್ನೇಹಿತನಾಗಿ ರೂಪಾಂತರ ಪಡೆಯುವ ಪರಿಭಾಷೆಯೆನಿಸುತ್ತದೆ. ತರಗತಿಯ ಒಳಗೆ ಮೇಷ್ಟರಾಗಿರುವುದು ಸುಲಭ. ತರಗತಿಯಾಚೆ ಇರುವ ಜನಕ್ಕೆ ಮೇಷ್ಟರೆನಿಸಿಕೊಳ್ಳುವುದು ದೊಡ್ಡ ಸಂಗತಿ. ಕಿರಂ ಒಂದರ್ಥದಲ್ಲಿ ನಮ್ಮ ನಾಡೋಜರಾಗಿದ್ದರು. ಪಂಪ ಬರೆದು ನಾಡೋಜನಾದರೆ, ಕಿರಂ, ಪಂಪನಂತಹ ಕವಿಯನ್ನು ಜನಕ್ಕೆ ಪರಿಚಯಿಸಿ ನಾಡೋಜರಾದರು.

ಮಾತಿಗೆ ಜನ ಬೇಕು. ಕಿರಂ ಏಕಾಂತದಲ್ಲಿ ಒಂಟಿಯಾಗಿ ಇದ್ದುದನ್ನು ನಾನು ಕಂಡೇಯಿಲ್ಲ. ಅವರ ಸುತ್ತ ಯಾವಾಗಲೂ ಒಂದು ಹಿಂಡು ಮುಕುರಿಕೊಂಡಿರುತ್ತಿತ್ತು. ಅವರಲ್ಲಿ ಹೆಚ್ಚಿನವರು. ಹಿರಿಯರಲ್ಲ, ಸಮಕಾಲೀನರೂ ಅಲ್ಲ. ಸಾಹಿತ್ಯ ಸಂಸ್ಕೃತಿ ಚಳುವಳಿಗಳಲ್ಲಿ ಆಸಕ್ತಿಯಿರುವ ತರುಣಿ-ತರುಣರು. ಅವರನ್ನು ಯಾವ ಮೋಡಿಹಾಕಿ ಕಿರಂ ವಶಪಡಿಸಿಕೊಳ್ಳುತ್ತಿದ್ದರೊ ತಿಳಿಯದು. ಒಮ್ಮೆ ಅವರ ಮಾತು ಮತ್ತು ಪ್ರೀತಿಯ ಮಾಯೆಗೆ ಸಿಲುಕಿದವರು ಬಿಡಿಸಿಕೊಳ್ಳಲು ಬಯಸುತ್ತಿರಲಿಲ್ಲ. ಮಂಟೆಸ್ವಾಮಿ ಕಾವ್ಯದಲ್ಲಿ  ಮಂಟೆಸ್ವಾಮಿಯು ಶಿಷ್ಯರನ್ನು ಪಡೆಯಲು ಭಂಗಿಸೇದಿದ ಹೊಗೆಯನ್ನು ಅವರ ಮೇಲೆ ಬಿಟ್ಟು ಸಮ್ಮೋಹನಗೊಳಿಸಿ ವಶಮಾಡಿಕೊಳ್ಳುವ ಪ್ರಸಂಗವು ಇಲ್ಲಿ ನೆನಪಾಗುತ್ತದೆ. ಅವರ ಸಮ್ಮೋಹನಕ್ಕೆ ಸಿಲುಗಿದ ಅಭಿಮಾನಿಗಳೊ ಅವರನ್ನು ದೇವರಂತೆ ಆರಾಧಿಸುತ್ತಿದ್ದರು. ಒಮ್ಮೊಮ್ಮೆ ಈ ಅಭಿಮಾನಿಗಳ ನಿಷ್ಠೆ ಅನ್ಯದೈವಗಳನ್ನೊಲ್ಲದ ಉಗ್ರತೆಯನ್ನೂ ಪಡೆದಿರುತ್ತಿತ್ತು.

ಕಿರಂ ಮಾತನ್ನು ಮೋಡಿಯಂತೆ ಬಳಸುತ್ತಿದ್ದ ನಮ್ಮ ಕಾಲದ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಕನ್ನಡದಲ್ಲಿ ಎಸ್.ವಿ. ಪರಮೇಶ್ವರಭಟ್ಟರೇ ಮೊದಲಾಗಿ ವಾಗ್ಮಿತೆ ಮುಖ್ಯವಾದ ಜನಪ್ರಿಯ ಪ್ರಾಧ್ಯಾಪಕರ ಧಾರೆಯಿದೆ; ಬಿಎಂಶ್ರೀ, ವೆಂಕಣ್ಣಯ್ಯ; ತೀನಂಶ್ರೀ ಡಿಎಲ್ಎನ್; ಜಿ.ಎಸ್.ಶಿವರುದ್ರಪ್ಪ, ಎಂ.ಎಂ. ಕಲಬುರ್ಗಿ -ಮುಂತಾಗಿ ವಿದ್ವತ್ತು ಮುಖ್ಯವಾದ ಧಾರೆಯೂ ಇದೆ. ಕಿರಂ ಈ ಎರಡೂ ಧಾರೆಗಳು ಹದವಾಗಿ ಬೆರೆತ ಪರಂಪರೆಗೆ ಸೇರಿದವರು. ಅವರಲ್ಲಿ ಅಪಾರ ಓದಿನಿಂದ ಬಂದ ವಿದ್ವತ್ತಿತ್ತು. ಅದನ್ನು ಚಿಂತನೆಯನ್ನಾಗಿ ಬದಲಿಸಿ ಹೇಳುವ ವಾಗ್ಮಿತೆಯೂ ಇತ್ತು. ಈಗ ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚಾಗಿವೆ. ಅಧ್ಯಾಪಕರಿಗೆ ಸೌಲಭ್ಯಗಳೂ ಹೆಚ್ಚಾಗಿವೆ. ಆದರೆ ವಿದ್ವತ್ ಪರಂಪರೆಯ ಪ್ರಾಧ್ಯಾಪಕರ ಸಂತತಿ ಮಾತ್ರ ನಶಿಸುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ಸಂಭವಿಸಿರುವ ಕಿರಂ ಅವರ ಸಾವು ಕೇವಲ ಭೌತಿಕ ಕಣ್ಮರೆಯಾಗಿಲ್ಲ. ಕಿರಂ ವಿದ್ವತ್ತಿನ ವಿಶೇಷತೆಯೆಂದರೆ, ಅದು ಕನ್ನಡ ಪಠ್ಯಗಳ ಅನುಸಂಧಾನದ ಮೂಲಕ ರೂಪುಗೊಂಡಿದ್ದು; ಜತೆಗೆ ಜಗತ್ತಿನ ಅತ್ಯುತ್ತಮ ತಿಳಿವಳಿಕೆಯ ಸಹವಾಸವನ್ನೂ ಪಡೆದಿದ್ದು; ಕನ್ನಡದಲ್ಲಿ ಸೃಜನಶೀಲ ಸಾಹಿತ್ಯದ ಸಹವಾಸವೇ ಇಲ್ಲದಂತೆ ಬೆಳೆದಿರುವ ಶುಷ್ಕಪಾಂಡಿತ್ಯದ ಮಾದರಿಗಳಿವೆ. ಆದರೆ ಕಿರಂ ವಿದ್ವತ್ತು ಕನ್ನಡದ ಅತ್ಯುತ್ತಮ ಮನಸ್ಸುಗಳು ಸೃಷ್ಟಿಸಿದ ಕಾವ್ಯ ಪರಂಪರೆಯಿಂದ ಶಕ್ತಿಯನ್ನು ಆವಾಹಿಸಿಕೊಂಡಿತ್ತು; ಅದು ನಾಡಿನ ಉರಿಯುವ ವರ್ತಮಾನದ ಸಮಸ್ಯೆಗಳ ಜತೆ ಲಗತ್ತನ್ನೂ ಪಡೆದಿತ್ತು. ಆದ್ದರಿಂದಲೇ ಕಿರಂ ಕನ್ನಡ ಸಾಹಿತ್ಯದ ಮೇಲೆ ಮಾತ್ರವಲ್ಲ, ಭಾಷೆ, ಸಂಸ್ಕೃತಿ, ರಾಜಕಾರಣಗಳ ಮೇಲೂ ಮಾತಾಡಬಲ್ಲ ಕೆಲವೇ ಪ್ರಾಜ್ಞರಲ್ಲಿ ಒಬ್ಬರಾಗಿದ್ದರು.

ಕಿರಂ ಅವರ ಕಾವ್ಯಪ್ರೀತಿ ಜನಜನಿತ. ಅವರ ಹೆಗಲಚೀಲದಲ್ಲಿ ಸದಾ ಅವರ ಇಷ್ಟದ ಕಾವ್ಯಗಳಿರುತ್ತಿದ್ದವು. ಪಂಪ, ಅಲ್ಲಮ, ಕುಮಾರವ್ಯಾಸ, ಬೇಂದ್ರೆ ಅಡಿಗ ಶರೀಫ ಅವರ ಪ್ರಿಯವಾದ ಕವಿಗಳು. ಅದರಲ್ಲೂ ಹೇಳು-ಕೇಳು ಪರಂಪರೆಗೆ ಸೇರಿದ ಬೇಂದ್ರೆ-ಕುಮಾರವ್ಯಾಸ ಅವರಿಗೆ ಇಷ್ಟವಾಗಿದ್ದುದು ಸಹಜವಾಗಿತ್ತು. ಅಕ್ಷರಸ್ಥ ಕವಿಗಳನ್ನು ಅವರು ತಮ್ಮ ಮಾತಿನ ಮೂಲಕ ಅನುವಾದಿಸಿ, ಹೊಸ ಜಾನಪದವನ್ನು ಸೃಷ್ಟಿಸುತ್ತಿದ್ದರು. ಕಿರಂ ಬಾಯಲ್ಲಿ ಕನ್ನಡದ ಅತ್ಯುತ್ತಮ ಕಾವ್ಯ ಕೇಳಿದವರು ಕಾವ್ಯದ ಹುಚ್ಚನ್ನು  ಹತ್ತಿಸಿಕೊಳ್ಳುತ್ತಿದ್ದರು. ಕಿರಂ ಕಟ್ಟಿದ ಸಂಸ್ಥೆಯ ಹೆಸರೂ ಕಾವ್ಯಮಂಡಲ! ಕನ್ನಡಿಗರಲ್ಲಿ  ಕಾವ್ಯಪ್ರೀತಿ ಹುಟ್ಟಿಸಲೆಂದೇ ಬಂದ ದೂತನಂತಿದ್ದ ಅವರು ಜೀವನವಿಡೀ ಮಾತಾಡಿದರು. ಅವರ ಮೇಷ್ಟರಾಗಿದ್ದ ಲಂಕೇಶ್ ತೀರಿಕೊಂಡಾಗ ಹಾಸುಗೆಯಲ್ಲಿ ಅರೆಓದಿದ ಪುಸ್ತಕವಿದ್ದರೆ,  ಇಂತಹ ಮೇಷ್ಟರ ಶಿಷ್ಯರಾಗಿದ್ದ ಕಿರಂ ಸಾವಿನ ತನಕ ಮಾತು ಜತೆಯಲ್ಲಿತ್ತು. ಗುರುವಿಗೆ ಮಾತನ್ನು ಆಡುವುದಕ್ಕೆ ವಿಪರೀತ ಹಿಂಜರಿಕೆ ಅಥವಾ ಆಡುವ ಮಾತು ಸೂತಕವಾದೀತು ಎಂದು ಆತಂಕ. ಆದರೆ ಶಿಷ್ಯನಿಗೆ ಮಾತೇ ಮಾಧ್ಯಮ. ಅದುವೇ ಬದುಕು ಮತ್ತು ಸರ್ವಸ್ವ. ಮಾತಿನ ಪರಂಪರೆಗೆ ವಿಚಿತ್ರವಾದ ಚಲನಶೀಲತೆ ಇರುತ್ತದೆ. ಮಾತುಗಾರ ಇಂದಾಡಿದ ಮಾತನ್ನು ನಾಳೆ ಪುನರುಕ್ತಿಸಬೇಕಿಲ್ಲ. ನಾಳೆಯ ಮಾತು ಹೊಸತೇ ಆಗಬಹುದು. ಮಾತು ಮಲಿನವಾಗದಂತೆ ಕಿರಂ ನಿರಂತರ ಬದಲಿಕೆ ಮಾಡುತ್ತಿದ್ದರು. ಈ ಬದಲಿಕೆ ಅವರ ಚಿಂತನೆಗೊಂದು ಚಲನಶೀಲತೆ ತರುತ್ತಿತ್ತು; ಜತೆಗೆ ಚಂಚಲತೆಯನ್ನೂ ಕೆಲಮಟ್ಟಿನ ಅರಾಜಕತೆಯನ್ನೂ ತರುತ್ತಿತ್ತು. ಅಕ್ಷರದ ಮೂಲಕ ಮೂಡುವ ಚಿಂತನೆ ಸ್ಥಾವರಗೊಳ್ಳಬಹುದು; ಮಾತಿನ ಮೂಲಕ ಮೂಡುವ ಚಿಂತನೆಗೆ ಇದರ ಭಯ ಕಡಿಮೆ. ಕಿರಂ ಮಾತಿನ ಮೂಲಕ ಚಿಂತನೆಯನ್ನು ಜಂಗಮವಾಗಿಸಿದ್ದರು.

ಭಾವಾವೇಶವು ಕಿರಂ ವ್ಯಕ್ತಿತ್ವದ ಬೇರ್ಪಡಿಸಲಾಗದ ಅಂಶ. ಅವರು ಭಾಗವಹಿಸುತ್ತಿದ್ದ ಸಭೆ-ಗೋಷ್ಠಿಗಳಲ್ಲಿ ತನ್ಮಯತೆ- ಧ್ಯಾನಗಳಿರುವಂತೆ, ಜಗಳ-ಜೋರುಗಳ ಸಂಚಲನೆಗಳೂ ಇರುತ್ತಿದ್ದವು. ಕೆಲವೊಮ್ಮೆ ಸಭಾತ್ಯಾಗದಂತಹ ನಾಟಕೀಯ ಘಟನೆಗಳು ನಡೆಯುತ್ತಿದ್ದವು. ತೀವ್ರವಾದ ಬೇಕು-ಬೇಡಗಳಿದ್ದ ಕಿರಂ, ತಮಗೆ ಒಪ್ಪಿಗೆಯಾಗದ ಅಥವಾ ಅಸಂಬದ್ಧ ಎನಿಸಿದ ಮಾತನ್ನು ಯಾರಾದರೂ ಆಡುತ್ತಿದ್ದರೆ, ಅವರ ಮೇಲೆ ಎರಗಿ ಹೋಗುತ್ತಿದ್ದರು. ಅನೇಕ ಹಿರಿಯ ವಿದ್ವಾಂಸರೇ ಕಿರಂ ಅವರಿಗೆ ಸಹಮತವಿಲ್ಲದ ಮಾತುಗಳನ್ನಾಡಿ ನಿಷ್ಕಾರಣವಾಗಿ ಲಾಠಿಚಾರ್ಜಿಗೆ ಒಳಗಾಗಿರುವುದುಂಟು. ಅವರ ಅಭಿಮಾನಿಗಳಿಗೊ ಮೇಷ್ಟರು ಎದುರಾಳಿಗಳ ಮೇಲೆ ಮಾಡುತ್ತಿದ್ದ `ಆಕ್ರಮಣ’ ಕಂಡು ಖುಷಿ. ಕೆಲವೊಮ್ಮೆ ಸೆಮಿನಾರುಗಳಲ್ಲಿ ಪ್ರಬಂಧಕಾರರು, ಕಿರಂ ಮೂಡನ್ನು ಗಮನಿಸಿ, ಜಾಣ್ಮೆಯಿಂದ ತಮ್ಮ ಧೋರಣೆಯನ್ನು ಬದಲಿಸಿ ಮಾತನಾಡುವುದೂ ಇರುತ್ತಿತ್ತು. ಕೆಟ್ಟ ಪ್ರಶ್ನೆಗಾರರಿಂದ ಭಾಷಣಕಾರರನ್ನು ಉಳಿಸಬೇಕು ಅನಿಸಿದರೂ ಅಷ್ಟೆ, ಕಿರಂ ಈದ ಹುಲಿಯಂತೆ ರಕ್ಷಣೆಗೆ ಧಾವಿಸುತ್ತಿದ್ದರು. ಈ ಭಾವಾವೇಶದ ಇಷ್ಟಾನಿಷ್ಟಗಳ ಕತ್ತಿವರಸೆಯಿಂದ ಸಭೆಗಳಲ್ಲಿ ಭಿನ್ನಮತಗಳ ವಿನಿಮಯಕ್ಕೆ ಬೇಕಾದ ಸಹನೆಯ ವಾತಾವರಣವೂ ಕ್ಷೀಣವಾಗುತ್ತಿತ್ತು. ಕಿರಂ ತಾವು ಮಾಡಿದ ಜಗಳ ಮರೆಯುತ್ತಿದ್ದರು. ಬೈಸಿಕೊಂಡವರೂ ಮರೆಯುತ್ತಿದ್ದರು. ಆದರೆ ಕೆಲವರಲ್ಲಿ ಕಹಿಯ ಪಸೆ ಉಳಿದುಬಿಡುತ್ತಿತ್ತು.

ಒಮ್ಮೆ ಹೀಗಾಯಿತು. ಅದು ಕೂಡಲಸಂಗಮದಲ್ಲಿ ನಡೆದ ಬಸವಣ್ಣನನ್ನು ಕುರಿತು ವಿಚಾರ ಸಂಕಿರಣ. ಕಿರಂ ಅವರ ಪ್ರಿಯ ಶಿಷ್ಯೆ ಆಶಾದೇವಿ ಬಸವಣ್ಣನ ಮೇಲೆ ಸ್ತ್ರೀಸಂವೇದನೆಯ ಹಿನ್ನೆಲೆಯಲ್ಲಿ ಕೆಲವು ನಿಷ್ಠುರವಾದ ಕಾಮೆಂಟುಗಳನ್ನು ಮಾಡಿದರು. ಕಿರಂ ತಮ್ಮ ಶಿಷ್ಯೆಯೆಂಬ ಮಮಕಾರವನ್ನೂ ಬಿಟ್ಟು ಅವರ ಮೇಲೆ ಹರಿಹಾಯ್ದರು. ಇದರಿಂದ ನೊಂದುಕೊಂಡ ಆಶಾದೇವಿ, ಎಲ್ಲಿ ಜಲಪ್ರವೇಶ ಮಾಡುವರೊ ಎಂದು ನಾನು ಹೆದರಿ ಹೊಳೆಯ ದಿಕ್ಕಿಗೆ ಅವರು ಹೋಗದಂತೆ ಕಾವಲು ಕಾಯಬೇಕಾಯಿತು. ಇನ್ನೊಂದು ಸಭೆಯಲ್ಲಿ ನೋಡುತ್ತಿದ್ದೇನೆ. ವೇದಿಕೆಯ ಮೇಲೆ ಕುಳಿತಿದ್ದ ತಮ್ಮ ಶಿಷ್ಯೆಗೆ ಕಿರಂ ಮೆಲ್ಲಗೆ ಬಂದು ಪೊಟ್ಟಣವೊಂದನ್ನು ಮುಚ್ಚಿಟ್ಟುಕೊಂಡು ಬಂದು ಕೊಡುತ್ತಿದ್ದಾರೆ. ಆಶಾದೇವಿಯವರ ಪಕ್ಕದಲ್ಲಿದ್ದ ನಾನು ಏನೆಂದು ವಿಚಾರಿಸಿದೆ. `ಯಾವುದೊ ಅಗತ್ಯ ಔಷಧಿ ಬೇಕಿತ್ತು. ಮೇಷ್ಟರು ಮೆಡಿಕಲ್ ಶಾಪಿಗೆ ಹೋಗಿದ್ದರು’ ಎಂದು ಉತ್ತರ ಬಂದಿತು. ಕಿರಂ, ಒಂದು ಕೈಯಲಿ ಓಜುಗಟ್ಟಿಗೆ ಇನ್ನೊಂದು ಕೈಯಲಿ ಹಾಲಬಟ್ಟಲು ಹಿಡಿದು, ಬಡಿದು ಕುಡಿಸುವ ತಂದೆ. ಬಡಿತದ ಗಾಯವೂ ಹಾಲಿನ ಮುಲಾಮೂ ಒಟ್ಟಿಗೆ ಇರುತ್ತಿದ್ದವು.

ಶಿಷ್ಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಾಹಿತ್ಯ ಅಭಿರುಚಿ ಹುಟ್ಟಿಸಲು ಜೀವಮಾನವಿಡೀ ಮಾತನ್ನು ಬಳಸಿದ ಕಿರಂ ಅವರಿಗೆ ಹಣ ಮತ್ತು ಅಧಿಕಾರದ ವ್ಯಾಮೋಹವಿರಲಿಲ್ಲ. ಇದು ಅವರ ವ್ಯಕಿತ್ವಕ್ಕೆ ದೊಡ್ಡ ನೈತಿಕತೆಯನ್ನು ಕೊಟ್ಟಿತ್ತು. ಅವರು ವ್ಯವಸ್ಥೆಯ ವಿರುದ್ಧದ ಚಳುವಳಿಗಳಲ್ಲಿ ಪರಿಣಾಮ ಲೆಕ್ಕಿಸದೆ ಭಾಗವಹಿಸುತ್ತಿದ್ದರು. ಕಳೆದ 30-40 ವರ್ಷಗಳ ಕರ್ನಾಟಕದ ಸಾಂಸ್ಕೃತಿಕ ಚಳುವಳಿಗಳಲ್ಲಿ ಕಿರಂ ಪಾತ್ರವು ನೆಲದ ಮರೆಯ ನಿದಾನದಂತಿದೆ. ಈ ಪಾತ್ರವು ತಮ್ಮ ಶಿಷ್ಯ ಸಿದ್ದಲಿಂಗಯ್ಯನವರ `ಹೊಲೆಮಾದಿಗರ ಹಾಡು’ ಸಂಕಲನಕ್ಕೆ ಹಿನ್ನುಡಿ ಮಾತು ಬರೆದು ಪ್ರಕಟಿಸುವುದರಿಂದ ಶುರುವಾಯಿತು. ಈ ಸಂಕಲನದಲ್ಲಿ ಕಾವ್ಯವನ್ನು ಮೌನವಾಗಿ ಓದಿಕೊಳ್ಳುವ ಪದ್ಧತಿಗೆ ಬದಲಾಗಿ, ಗಟ್ಟಿಯಾಗಿ ಹಾಡಿಕೊಳ್ಳಬೇಕು ಎಂದು ಸೂಚನೆಯಿದೆ. ಇದು ಕಿರಂ ಅವರಿಗೆ ಹತ್ತಿರವಾದ ಮೌಖಿಕ ಸಂಪ್ರದಾಯದ ಲಕ್ಷಣವೆನ್ನುವುದು ಮಾರ್ಮಿಕವಾಗಿದೆ.

ಕಿರಂ ಅವರಿಗೆ ಈಚೆಗೆ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಬಂದಾಗ ಕೆಲವರು `ಅವರೇನು ಬರೆದಿದ್ದಾರೆ’ ಎಂಬ ಪ್ರಶ್ನೆ ಎತ್ತಿದ್ದುಂಟು. ಸಾಹಿತ್ಯದಲ್ಲಿ ಸಾಧನೆಯೆಂದರೆ ಬರವಣಿಗೆ ಮಾತ್ರ ಎಂಬ ಅಕ್ಷರನಿಷ್ಠೆಯಿಂದ ಹುಟ್ಟಿದ ಪ್ರಶ್ನೆಯಿದು; ಜ್ಞಾನವು ಬರೆಹದಾಚೆಗೂ ಇದೆ, ಸಾಹಿತ್ಯವು ಹೇಳು-ಕೇಳು ಸಂಸ್ಕೃತಿಯಲ್ಲೂ ಪ್ರಕಟವಾಗುತ್ತದೆ ಎಂಬ ನೆದರಿಲ್ಲದವರು ಮಾಡುವ ಆಕ್ಷೇಪವಿದು. ಕಿರಂ ಕರ್ನಾಟಕ ಸಂಸ್ಕೃತಿ ಸೃಷ್ಟಿಸಿದ ಮಾತಿನ ಅಪೂರ್ವ ಪ್ರತಿಭೆ. ಅವರು ಬರೆದ ಪುಸ್ತಕಗಳು ಕಡಿಮೆ. ಅವರ ಕೆಲವು ಲೇಖನಗಳು ಅಮೂರ್ತತೆ ಕ್ಲಿಷ್ಟತೆಗಳಿಂದ ಕೂಡಿರುವುದೂ ನಿಜ. ಇದಕ್ಕೆ ಕಾರಣ, ಅವರ ಮಾಧ್ಯಮ ಬರೆಹವಲ್ಲ, ಮಾತಾಗಿದ್ದುದು. ಕಿರಂ ಅವರಿಗೆ ಬರೆಯಲು ಒತ್ತಾಯಿಸುವುದು, ಹಾರುಹಕ್ಕಿಗೆ ನಡೆಯಲು ಒತ್ತಾಯಿಸಿದಂತೆ ಆಗಿರುತ್ತಿತ್ತು.

ಮಾತಾಡಿಗಳು ತಾವು ಇರುವಲ್ಲಿಗೇ ಜನರನ್ನು ಸೆಳೆದು ಮಾತಾಡುವುದಿದೆ ಅಥವಾ ಕೇಳುವ ಜನರಿದ್ದಲ್ಲಿಗೆ ಅವರೇ ಹೋಗಿ ಮಾತಾಡುವುದೂ ಇದೆ. ಕಿರಂ ಅವರಿಗೆ ಈ ಎರಡೂ ಗುಣಗಳಿದ್ದವು. ನಾಡ ತುಂಬ ಓಡಾಗಿ ಅವರು ಮಾಡಿರುವ ಉಪನ್ಯಾಸಗಳನ್ನೆಲ್ಲ ಧ್ವನಿಮುದ್ರಿಸಿ ಬರೆಹ ರೂಪಕ್ಕೆ ತಂದಿದ್ದರೆ 50 ಸಂಪುಗಳಷ್ಟು ಸಾಹಿತ್ಯ ಆಗುತ್ತಿತ್ತೊ ಏನೊ? ಆದರೆ ಅವರು ತಮ್ಮ ಮಾತು ದಾಖಲೆಯಾಗಬೇಕೆಂದು ಬಯಸಿದವರಲ್ಲ; ತಮ್ಮ ಮಾತಿನೊಳಗಿದ್ದ ಚಿಂತನೆ ಒಳನೋಟಗಳಿಗೆ ಹಕ್ಕುದಾರಿಕೆಯನ್ನೂ ನಿರೀಕ್ಷಿಸದವರಲ್ಲ. ಮಾತು ಅಕ್ಷರದಂತೆ ದಾಖಲೆಯಾಗಿ ಉಳಿಯದೇ ಇರಬಹುದು. ಆದರದು ಕೇಳುಗರಲ್ಲಿ ಹಾದು ಅವರ ತಿಳಿವಳಿಕೆಯ ಭಾಗವಾಗಿ ಮುಂದುವರೆಯುತ್ತದೆ. ಬರೆಹವೇ ಪ್ರಮಾಣವಾಗಿರುವ ಆಧುನಿಕ ಕಾಲದಲ್ಲಿ ಮಾತೂ ಪ್ರಮಾಣವಾಗಬಹುದು ಎಂದು ತೋರಿಸಿದ ಕಿರಂ ಒಂದು ನವಮೌಖಿಕತೆಯ ರೂಪಕವಾಗಿದ್ದಾರೆ. ತೀರಿಕೊಳ್ಳುವ ಮುನ್ನ ಅವರು ತಮ್ಮ ಭಾಷಣವನ್ನು ದಾಖಲಿಸುವುದಕ್ಕೆ ಅಡ್ಡಿಮಾಡಿದರು ಎಂಬ ಸಂಗತಿಯಾದರೂ ಇದೇ ಸತ್ಯವನ್ನು ಸೂಚಿಸುತ್ತದೆ. ಅಕ್ಷರ ಬಾರದ ನನ್ನ ಅಪ್ಪನ ಜತೆ ಅವರು ಕುದುರಿಸಿದ ಮಾತುಕತೆಯ ಸಂಬಂಧ ಕೂಡ ಈ ಸತ್ಯದ ಭಾಗವಾಗಿಯೇ ಇದೆ.

(ಲೇಖಕರು ‘ಪ್ರಜಾವಾಣಿ’ಗೆ ಬರೆದ ಲೇಖನ)