ಭಾರತವೂ ಸೇರಿದಂತೆ ನಾಲ್ಕು ಖಂಡಗಳಲ್ಲಿ ಅಲ್ಪ ಸ್ವಲ್ಪ ದಿನ ಜೀವಿಸಿ, ಮನುಷ್ಯರಲ್ಲಿ ಎಷ್ಟೊಂದು ಸಹಾಯ ಜೀವಿಗಳು ಇದ್ದಾರೆ ಎಂದು ಸಂತಸವಾಗುತ್ತದೆ. ಕೆನಡಾಗೆ ಬಂದು ಮೂರು ವರ್ಷಗಳಲ್ಲಿ ಮೂರು ಊರುಗಳನ್ನು ಸುತ್ತಾಡಿ ಈಗ ಬಂದಿರುವುದು ಬ್ರಾಂಪ್ಟನ್ ಎನ್ನುವ ಸುಂದರ ನಗರಕ್ಕೆ. ಈ ಊರನ್ನು ಹೂವುಗಳ ಊರು ಎಂದು ಕರೆಯುತ್ತಾರೆ, ಭಾರತೀಯರೇ ಹೆಚ್ಚಾಗಿರುವ ಈ ಊರಿನಲ್ಲಿ, ಕನ್ನಡಿಗರೂ ಹೆಚ್ಚಾಗಿದ್ದಾರೆ. ಕನ್ನಡದ ಜನ ಕೆನಡಾಗೆ ಬಂದಾಗ ಮೊದಲು ಹುಡುಕುವುದೆ ‘ಕನ್ನಡ ಸಂಘ’. ಬಹಳ ಹಳೆಯದಾದ ಕನ್ನಡ ಸಂಘ, ಟೊರೊಂಟೊದಲ್ಲಿ ಬ್ರಾಂಪ್ಟನ್ ಸೇರಿದಂತೆ ಟೊರೊಂಟೊದ ಸುತ್ತಮುತ್ತಲಿನ ಅನೇಕ ಊರಿನ ಜನರಿದ್ದಾರೆ.
ಪ್ರಶಾಂತ್‌ ಬೀಚಿ ಅಂಕಣ

 

ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಐನ್‌ಸ್ಟೇನ್, ವಿಶ್ವೇಶ್ವರಯ್ಯ ಇನ್ನೂ ಅನೇಕರು, ನಮಗಿಂತ ಒಂದೆರಡು ತಲೆಮಾರುಗಳ ಹಿಂದಿನವರಾದರೆ, ವಿಶ್ವನಾಥನ್ ಆನಂದ್, ಸಚಿನ್ ತೆಂಡೊಲ್ಕರ್, ಮೈಕಲ್ ಜಾಕ್ಸನ್, ಡಾ. ರಾಜ್ ಕುಮಾರ್, ಪಿ. ಟಿ. ಉಷಾ, ಅಬ್ದುಲ್ ಕಲಾಂ ಅಂಥವರು ಇತ್ತೀಚೆಗಿನ ತಲೆಮಾರಿನವರಾಗಿದ್ದು,ಅವರನ್ನು ಇತ್ತೀಚಿನ ತಲೆಮಾರಿನವರೂ ಕಂಡಿದ್ದಾರೆ. ಇವರನ್ನೆಲ್ಲಾ ನಾವು ಒಂದಲ್ಲಾ ಒಂದು ರೀತಿಯಲ್ಲಿ ಮಾದರಿಯಾಗಿ ಪರಿಗಣಿಸಿದ್ದೇವೆ ಕೂಡ. ನಾವು ಚಿಕ್ಕವರಿದ್ದಾಗ ಅನೇಕರ ಹೆಸರುಗಳನ್ನು ಹೇಳಿ, ಅವರ ಜೀವನ ಪಥವನ್ನು ತಿಳಿಸಿ ಅವರಂತೆ ಜೀವನ ರೂಪಿಸಿಕೊಳ್ಳಬೇಕು ಎಂದು ಹಿರಿಯರಿಂದ ತಿಳಿವಳಿಕೆ ಪಡೆದುಕೊಂಡಿದ್ದೇವೆ. ಈಗಿನ ಮಕ್ಕಳಿಗೆ ಮಹಾನ್ ವ್ಯಕ್ತಿಗಳ ಹೆಸರುಗಳು ಗೊತ್ತೇ ಹೊರತು ಅವರ ಜೀವನದ ದಾರಿಯ ಅರಿವಿಲ್ಲದಿರುವುದು ವಿಪರ್ಯಾಸ.

ನಮಗೆ ಅನೇಕರ ಜೀವನ ಮಾದರಿಯಾದರೂ, ಅವರ ಕಾಲಘಟ್ಟ ನಮ್ಮ ಕಾಲದ್ದಲ್ಲ ಎಂದು ಬಹಳ ಸುಲಭವಾಗಿ ಜಾರಿಕೊಳ್ಳುತ್ತೇವೆ. ಇನ್ನೂ ಅನೇಕ ಬಾರಿ, ಅವರು ನಡೆದ ರೀತಿ ಈಗಿನ ಕಾಲದಲ್ಲಿ ಅಸಾಧ್ಯ ಎಂದು ನುಣುಚಿಕೊಳ್ಳುತ್ತೇವೆ. ಆದರೆ ನೂರಾರು ಜನ ನಮ್ಮ ಮಧ್ಯೆಯಲ್ಲೆ ಈಗಲೂ ಮಾದರಿ ವ್ಯಕ್ತಿತ್ವವನ್ನು ಆಚರಿಸುತ್ತಾ ಬಂದಿರುವ ಅನೇಕರಿಂದ ಕಲಿಯದಿರುವುದು ನಮ್ಮದೇ ತಪ್ಪು. ಕೆಲವನ್ನು ತಂದೆ-ತಾಯಿಯಿಂದ, ಒಡಹುಟ್ಟಿದವರಿಂದ ಕಲಿಯಬಹುದಾದರೂ, ಸ್ನೇಹ ಸಂಬಂಧಿಕರಿಂದ, ನೆರೆ-ಹೊರೆಯವರಿಂದ, ಉಪಾಧ್ಯಾಯರು-ಪ್ರಾಧ್ಯಾಪಕರಿಂದ, ಊರಿನ ಜನರಿಂದ, ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡವರಿಂದ ಹೀಗೆ ಪ್ರತಿಯೊಬ್ಬರಿಂದಲೂ ಒಂದೊಂದನ್ನು ಕಲಿಯಬಹುದು, ಒಂದೊಂದು ವಿಷಯಕ್ಕೂ ಒಬ್ಬೊಬ್ಬರು ನಮಗೆ ಮಾದರಿಯಾಗಬಲ್ಲರು. ಹಾಲಿನಲ್ಲಿ ನೀರು ಬೆರೆಸಿದರೂ, ಹಂಸ ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೆ ಬಿಡುವ ರೀತಿ ಒಳಿತನ್ನು ಮಾತ್ರ ಕಲಿತು ಸಹ್ಯವಲ್ಲದ್ದನ್ನು ಬಿಡುವ ಶಕ್ತಿ ಪ್ರತಿಯೊಬ್ಬರಿಗಿದೆ.

ಭಾರತವೂ ಸೇರಿದಂತೆ ನಾಲ್ಕು ಖಂಡಗಳಲ್ಲಿ ಅಲ್ಪ ಸ್ವಲ್ಪ ದಿನ ಜೀವಿಸಿ, ಮನುಷ್ಯರಲ್ಲಿ ಎಷ್ಟೊಂದು ಸಹಾಯ ಜೀವಿಗಳು ಇದ್ದಾರೆ ಎಂದು ಸಂತಸವಾಗುತ್ತದೆ. ಕೆನಡಾಗೆ ಬಂದು ಮೂರು ವರ್ಷಗಳಲ್ಲಿ ಮೂರು ಊರುಗಳನ್ನು ಸುತ್ತಾಡಿ ಈಗ ಬಂದಿರುವುದು ಬ್ರಾಂಪ್ಟನ್ ಎನ್ನುವ ಸುಂದರ ನಗರಕ್ಕೆ. ಈ ಊರನ್ನು ಹೂವುಗಳ ಊರು ಎಂದು ಕರೆಯುತ್ತಾರೆ, ಭಾರತೀಯರೇ ಹೆಚ್ಚಾಗಿರುವ ಈ ಊರಿನಲ್ಲಿ, ಕನ್ನಡಿಗರೂ ಹೆಚ್ಚಾಗಿದ್ದಾರೆ. ಕನ್ನಡದ ಜನ ಕೆನಡಾಗೆ ಬಂದಾಗ ಮೊದಲು ಹುಡುಕುವುದೆ ‘ಕನ್ನಡ ಸಂಘ’. ಬಹಳ ಹಳೆಯದಾದ ಕನ್ನಡ ಸಂಘ, ಟೊರೊಂಟೊದಲ್ಲಿ ಬ್ರಾಂಪ್ಟನ್ ಸೇರಿದಂತೆ ಟೊರೊಂಟೊದ ಸುತ್ತಮುತ್ತಲಿನ ಅನೇಕ ಊರಿನ ಜನರಿದ್ದಾರೆ. ಕನ್ನಡಿಗರಿಗೆ ಅದರದ್ದೇ ಆದ ರೀತಿಯಲ್ಲಿ ಸಹಾಯವನ್ನು ಈ ಸಂಘ ನೀಡುತ್ತಾ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಗುಂಪುಗಳೂ ಅವರ ಸಾಮರ್ಥ್ಯಕ್ಕನುಸಾರವಾಗಿ ಸಹಾಯ ಮಾಡಲು ತಂತ್ರಜ್ಞಾನದ ಉಪಯೋಗವನ್ನು ಮಾಡಿಕೊಂಡಿದ್ದಾರೆ. ವಾಟ್ಸಪ್ ಗ್ರೂಪ್‌ಗಳನ್ನು ಮಾಡಿಕೊಂಡು ಹೊಸಬರಿಗೆ ಅನುಕೂಲವಾಗುವ ಮಾಹಿತಿಯನ್ನು, ಅವಶ್ಯಕ ಸಹಾಯವನ್ನು ಮಾಡುತ್ತಿವೆ.

ಬ್ರಾಂಪ್ಟನ್‌ನಲ್ಲಿ ಸಾಮಾಜಿಕವಾಗಿ ಕನ್ನಡಿಗರಿಗೆ ಸಹಾಯ ಮಾಡಲು ಅನೇಕರಿದ್ದಾರೆ. ಬೃಂದಾ ಮುರಳಿ, ಪ್ರಿಯಾ ಗೌಡ, ವೀಣಾ ದೇಸಾಯಿ ಹಾಗು ಅನೇಕ ಸಮಾನ ಮನಸ್ಕರು ಸೇರಿ ‘ಬ್ರಾಂಪ್ಟನ್ ಬಾಂಧವರು’ ಎನ್ನುವ ಒಂದು ಗುಂಪು ಮಾಡಿಕೊಂಡು, ಅದರಲ್ಲಿ ಅನೇಕ ವಿಚಾರ ವಿನಿಮಯ ಮಾಡಿಕೊಳ್ಳುವುದುರ ಜೊತೆಗೆ ಗುಂಪಿನ ಬಾಂಧವರಿಗೆ ಅವಶ್ಯಕ ನೆರವನ್ನು ನೀಡುತ್ತಾ, ಕನ್ನಡಿಗರಲ್ಲಿ ಉತ್ಸಾಹ ಹೆಚ್ಚಿಸುವ ಕೆಲಸ ಮಾಡುತ್ತಾರೆ.

ಕಾರ್ತಿಕ್ ಗೌಡ, ಮಧುಕರ್, ಸಂದೇಶ್ ಮತ್ತು ಅನೇಕ ಗೆಳೆಯರು ಸೇರಿ ಮೈಸೂರ್ ಸ್ಟೂಡಿಯೋಸ್ ಎನ್ನುವ ವಾಟ್ಸಪ್ ಗ್ರೂಪ್ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕನ್ನಡಿಗರನ್ನು ಒಟ್ಟುಗೂಡಿಸಿ, ಕನ್ನಡಿಗರಿಗೆ ಸಹಾಯ ಹಸ್ತ ಚಾಚುವ ಉತ್ತಮ ತಂಡ ಇದಾಗಿದೆ.

ನಾವು ಚಿಕ್ಕವರಿದ್ದಾಗ ಅನೇಕರ ಹೆಸರುಗಳನ್ನು ಹೇಳಿ, ಅವರ ಜೀವನ ಪಥವನ್ನು ತಿಳಿಸಿ ಅವರಂತೆ ಜೀವನ ರೂಪಿಸಿಕೊಳ್ಳಬೇಕು ಎಂದು ಹಿರಿಯರಿಂದ ತಿಳುವಳಿಕೆ ಪಡೆದುಕೊಂಡಿದ್ದೇವೆ. ಈಗಿನ ಮಕ್ಕಳಿಗೆ ಮಹಾನ್ ವ್ಯಕ್ತಿಗಳ ಹೆಸರುಗಳು ಗೊತ್ತೇ ಹೊರತು ಅವರ ಜೀವನದ ದಾರಿಯ ಅರಿವಿಲ್ಲದಿರುವುದು ವಿಪರ್ಯಾಸ.

ಡ್ರೀಮ್ಸ್ ಮೀಡಿಯ ಎನ್ನುವ ಮತ್ತೊಂದು ಗುಂಪು ಕಿರಣ್ ಬರ್ತೂರ್, ಪ್ರಭಾಕರ್ ರಾಯಪ್ಪ ಹಾಗು ಗೆಳೆಯರ ತಂಡದಿಂದ ಶುರುವಾಗಿದೆ. ಕನ್ನಡಿಗರನ್ನೆಲ್ಲಾ ಒಗ್ಗೂಡಿಸಿ ಸಮಾಜಮುಖಿ ಕೆಲಸದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.

ಹೀಗೆ ಅನೇಕ ಗುಂಪುಗಳು ಮತ್ತು ಕನ್ನಡ ಸಂಘಗಳು ಕನ್ನಡಿಗರ ಜೊತೆಗೆ ಇರುವುದಲ್ಲದೆ, ಕನ್ನಡಿಗರ ಯಾವುದೇ ಕೆಲಸಕ್ಕೆ ಪ್ರೋತ್ಸಾಹ ನೀಡಿ ಮುನ್ನಡೆಸಲು ಅನುವಾಗುತ್ತಾರೆ. ಹಾಗೆ ನೋಡಿದರೆ ಸಮಾಜಮುಖಿಯಾಗಿ ಕೆಲಸ ಮಾಡುವ ಮತ್ತು ಸಹಾಯ ಹಸ್ತ ನೀಡುವ ಪ್ರತಿಯೊಬ್ಬರೂ ಮಾದರಿ ಮನುಷ್ಯರೆ.

ಉದಾಹರಣೆಯಾಗಿ ಒಂದು ಸಂಗತಿಯನ್ನು ತಿಳಿಸುತ್ತೇನೆ: ತೊಂಬತ್ತರ ದಶಕದಲ್ಲಿ ಕೆನಡಾಗೆ ಬಂದ ದೇವದಾಸ್ ಬಂಗೇರ ಎನ್ನುವ ಮಂಗಳೂರಿನ ಹತ್ತಿರದ ಪರಂಗಿಪೇಟೆಯವರು. ಎರಡು ದಶಕಗಳನ್ನು ಕೆನಡಾದಲ್ಲಿ ಕಳೆದಿರುವ ಅಪ್ಪಟ ಕನ್ನಡಿಗ. ಎಲ್ಲರಿಗೂ ಸಹಾಯ ಮಾಡುವ ಮನಸಿರುವ ದೇವದಾಸ್ ಅವರಿಗೆ ಕನ್ನಡಿಗರೆಂದರೆ ಒಂದು ಕೈ ಜಾಸ್ತಿ. ದೇವದಾಸ್ ಕೆನಡಾದಲ್ಲಿ ಪರಿಚಿತರಾಗಿರುವುದು ದೇವ್ ಎಂದು. ಅನೇಕರ ಜೊತೆಗೆ ಮಾತನಾಡುವ ದೇವ್‌ಗೆ, ಯಾವುದೊ ಒಂದು ಪ್ರಸಂಗದಲ್ಲಿ ಒಬ್ಬರು ಕನ್ನಡಿಗರು ಪರಿಚಯವಾದರು, ಆ ವ್ಯಕ್ತಿ ಹೊಸದಾಗಿ ಬಂದಿರುವುದು ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ತೆಗೆದುಕೊಳ್ಳಲು ವಿಚಾರಿಸುತ್ತಿದ್ದ ವಿಷಯ ತಿಳಿಯಿತು. ಕಾರಿನ ಬಗ್ಗೆ ಒಳ್ಳೆ ಅರಿವಿದ್ದ ದೇವ್ ಯಾವ ರೀತಿಯ ಕಾರ್ ತೆಗೆದುಕೊಂಡರೆ ಉತ್ತಮ, ಯಾವ ರೀತಿಯ ಕಾರ್ ತೆಗೆದುಕೊಳ್ಳಬೇಕು ಮತ್ತು ಯಾರ ಹತ್ತಿರ ತೆಗೆದುಕೊಳ್ಳಬಾರದು ಎಂಬೆಲ್ಲಾ ತಿಳಿವಳಿಕೆಯನ್ನು ಕೊಟ್ಟರು. ಇಷ್ಟೆ ಆಗಿದ್ದರೆ ಅವರ ಬಗ್ಗೆ ಹೆಮ್ಮೆ ಆನ್ನಿಸುತ್ತಿರಲಿಲ್ಲ.

ದೇವ್ ಕೆಲವು ಕಾರನ್ನು ಹುಡುಕಿ, ಇದು ಸೂಕ್ತ ಎಂದು ಆ ವ್ಯಕ್ತಿಗೆ ತಿಳಿಸುತ್ತಿದ್ದರು. ಒಮ್ಮೆ ಆ ವ್ಯಕ್ತಿ ಕೆಲವು ಕಾರ್ ಗಳನ್ನು ಪಟ್ಟಿಮಾಡಿ ಇವುಗಳನ್ನು ನೋಡಿಬರಬೇಕು, ಆದರೆ ಒಂದೊಂದು ಕಾರು ಒಂದೊಂದು ದಿಕ್ಕಿನಲ್ಲಿದೆ ಮತ್ತು ಸುಮಾರು ಐವತ್ತು ಕಿಲೋ ಮೀಟರ್ ದೂರದಲ್ಲಿದೆ ಎಂದು ತನ್ನ ವ್ಯಥೆಯನ್ನು ಹೇಳಿಕೊಂಡ. ಟ್ಯಾಕ್ಸಿ ಮಾಡಿಕೊಂಡು ಹೋದರೂ ನೂರಾರು ಡಾಲರ್ ಗಳ ಖರ್ಚು, ಕಾರಿನ ಜ್ಞಾನವಿಲ್ಲದಿದ್ದರೆ ಮೋಸಹೋಗುವ ಸಾಧ್ಯತೆ ಜಾಸ್ತಿ. ಇದನ್ನೆಲ್ಲಾ ಅರಿತ ದೇವ್, ತಮ್ಮದೇ ಕಾರಿನಲ್ಲಿ ಅವರನ್ನು ಅನೇಕ ಕಡೆಗೆ ಕರೆದುಕೊಂಡು ಎಲ್ಲಾ ಕಾರುಗಳನ್ನು ತೋರಿಸಿಕೊಂಡು ಬಂದರು. ಯಾವ ಕಾರು ಒಳ್ಳೆಯದು, ಬೇರೆಯವರಿಂದ ಕಾರು ತೆಗೆದುಕೊಳ್ಳುವಾಗ ಏನೇನು ನೋಡಬೇಕು, ಏನೇನು ಕಾಗದ ಪತ್ರಗಳನ್ನು ಪರಿಶೀಲಿಸಬೇಕು, ಕಾರಿನ ವರ್ಗಾವಣೆ ಹೇಗೆ ಮಾಡಬೇಕು ಎಂಬುದನ್ನೆಲ್ಲಾ ತಾವೆ ಜೊತೆಗಿದ್ದು ಮುಗಿಸಿಕೊಟ್ಟರು.

ಸಮಯವಿದ್ದರೂ ಸಬೂಬು ಹೇಳಿ ದೂರ ಹೋಗುವ ಜನರನ್ನು ನೋಡಿರುವ ಈ ಜಗತ್ತು, ಸಹಾಯ ಹಸ್ತ ಚಾಚುವ ದೇವ್ ರಂತವರನ್ನು ನಿಜವಾಗಿಯೂ ಮಾದರಿ ವ್ಯಕ್ತಿಯನ್ನಾಗಿ ಮಾಡುತ್ತದೆ.

ಸಹಾಯ ಮಾಡುವ ಕೈಗಳು ನೂರಾರಿವೆ, ಕಣ್ಣೆದುರಿಗಿರುವ ಒಳ್ಳೆಯ ಮನಸ್ಸುಗಳನ್ನೆಲ್ಲಾ ಮಾದರಿಯನ್ನಾಗಿಸಿಕೊಂಡು ನಾವೂ ಒಳ್ಳೆಯವರಾಗೋಣ. ಅವಶ್ಯವಿರುವರಿಗೆ ಸಹಾಯವಾಗಿ ಸಾರ್ಥಕವಾಗೋಣ.