“ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ.ಸುಮಾರು ನೂರನಲತ್ತೈದು ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.ಜಲಪಾತವು ಧುಮುಗುಡುತ್ತ ಬೀಳುತ್ತಿದ್ದರೆ ಯಾವುದೋ ದೇವಕನ್ಯೆಯು ಬಿಳಿ ವಸ್ತ್ರವ ಧರಿಸಿ ಗಾಳಿಯ ವೇಗಕ್ಕೆ ವಯ್ಯಾರ ಮಾಡುತ್ತ ಸ್ವರ್ಗದಿಂದ ಭೂಮಿಗೆ ಬಂದು ಮಾನವರ ಕಣ್ಮನಗಳನ್ನು ತಣಿಸಿದಂತೆ ಕಾಣುತ್ತದೆ.ಆ ಜಲಪಾತ ಬೀಳುವಾಗ ಅದರ ಭೋರ್ಗರೆತದ ಸದ್ದು ದೇವತೆಗಳು ಸಂಗೀತದ ಆಲಾಪನೆಯನ್ನು ಮಾಡುತ್ತಿರುವರೇನೋ ಎಂಬಂತಿರುತ್ತದೆ.”
ವೆಂಕಟರಂಗ ಬರೆದ ಪ್ರವಾಸ ಕಥನ.

 

ಮಾನಾ ಹೆಸರು ಕೇಳಿದರೇ ಮನಸ್ಸು ಆಹ್ಲಾದಗೊಂಡು ಮೈ ಪುಳಕಿತಗೊಳ್ಳುತ್ತದೆ. ಏಕೆಂದರೆ ಇದೇ ಜಾಗದಲ್ಲಿ ಪುರಾಣ ಪುಣ್ಯಪುರುಷರು ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ಪುಣ್ಯನದಿಯು ಹುಟ್ಟಿ ಮತ್ತೊಂದು ನದಿಗೆ ಸೇರುವ ಸಂಗಮಸ್ಥಳವಾಗಿದೆ. ಆ ಪುಣ್ಯಾತ್ಮರ ಜಾಗಕ್ಕೆ ಹೋಗಿಬಂದ ನಮ್ಮ ಕಥಾನಕವನ್ನು ನಿಮ್ಮ ಬಳಿ ಹೇಳಲಿಚ್ಚಿಸುತ್ತಿದ್ದೇನೆ.

ಮಾನಾ ಉತ್ತರಾಖಂಡದ ಚಮೋಲಿ ಜಿಲ್ಲೆಯ ಪವಿತ್ರ ಯಾತ್ರಾಸ್ಥಳವಾದ ಬದರೀನಾಥದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿ. ಈ ಹಳ್ಳಿಯು 3,200 ಮೀಟರ್ ಎತ್ತರದಲ್ಲಿದೆ. ಮಾನಾ ಹಳ್ಳಿಯು ಭಾರತದ ಕಟ್ಟ ಕಡೆಯ ಹಳ್ಳಿಯಾಗಿದ್ದು, ಇದರಿಂದ ಆಚೆ 24 ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಟಿಬೆಟ್/ಚೀನಾ ಗಡಿಯಿದೆ. ಮಾನಾದಲ್ಲಿ ವಾತಾವರಣ ಸರಿಸುಮಾರಿಗೆ ೧೫ ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಸಂಜೆಯಾಗುತ್ತಿದ್ದಂತೆಯೇ ವಾತಾವರಣದಲ್ಲಿ ಮತ್ತಷ್ಟು ಕಡಿಮೆಯಾಗಿ ೧೦ ಡಿಗ್ರಿಗೆ ಬಂದು ನಿಲ್ಲುತ್ತದೆ. ಥರ್ಮಲ್ಸ್ ಹಾಗು ಉಣ್ಣೆ ಉಡುಪುಗಳು ತಲೆಗೆ, ದೇಹಕ್ಕೆ, ಕೈಗೆ ಹಾಗು ಕಾಲಿಗೆ ಅಗತ್ಯವಾಗಿ ಬೇಕಾಗುತ್ತದೆ.

(ಮಾನಾಹಳ್ಳಿಯ ಪ್ರವೇಶದ್ವಾರ)

ಈ ಹಳ್ಳಿಯಲ್ಲಿ ಮಂಗೋಲಿಯ ಮೂಲಗಳನ್ನು ಹೊಂದಿರುವ ಭೋಟಿಯಾ ಬುಡಕಟ್ಟು ಸಮುದಾಯ ನೆಲೆಸಿದೆ. ಸುಮಾರು ನೂರೈವತ್ತಕ್ಕಿಂತ ಹೆಚ್ಚು ಕುಟುಂಬಗಳಿದ್ದು, ಛಳಿಗಾಲ ಶುರುವಾದೊಡನೆ ತಮ್ಮ ಮನೆಗಳನ್ನು ತೊರೆದು ಚಮೋಲಿ ಅಥವಾ ಜ್ಯೋತಿರ್ಮಠಕ್ಕೆ (ಜೋಶಿ ಮಠ) ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅಂದರೆ ಮೇ ತಿಂಗಳಿಂದ ಅಕ್ಟೋಬರ್/ನವೆಂಬರ್ ತಿಂಗಳವರೆಗೆ ಮಾನ ಹಳ್ಳಿಯಲ್ಲೇ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ. ನವೆಂಬರ್ ತಿಂಗಳಿಂದ ಮೇ/ಜೂನ್ ತಿಂಗಳವರೆಗೆ ಚಮೋಲಿ ಅಥವಾ ಜ್ಯೋತಿರ್ಮಠಕ್ಕೆ ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.

ಇಲ್ಲಿನ ಬೋಟಿಯಾ ಬುಡಕಟ್ಟು ಜನರು ಸಾಂಸ್ಕೃತಿಕವಾಗಿ ಬದರೀನಾಥ ದೇವಸ್ಥಾನದ ಚಟುವಟಿಕೆಗಳು ಮತ್ತು ಮಾತಾ ಮೂರ್ತಿ ವಾರ್ಷಿಕ ಉತ್ಸವಗಳೊಂದಿಗೆ ನಿಕಟವಾದ ಹಾಗು ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಈ ದೇವಿ ದೇವಸ್ಥಾನವು ಮಾತಾ ಮೂರ್ತಿಗೆ (ನರ ಮತ್ತು ನಾರಾಯಣನ ತಾಯಿ, ಬದರೀನಾಥ) ಅರ್ಪಿತವಾಗಿದೆ. ಪ್ರತಿ ವರ್ಷ, ಶ್ರಾವಣ ದ್ವಾದಶಿಯ ಮುನ್ನಾ ದಿನದಂದು ಮಾತಾ ಮೂರ್ತಿಯನ್ನು ನೋಡಲು ಬದರೀನಾಥನು ಬರುವನೆಂದು ಪ್ರತೀತಿ ಇದೆ. ಹಾಗಾಗಿ ಆ ದಿನದಲ್ಲಿ ಮಾತಾ ಮೂರ್ತಿಯ ದೇವಸ್ಥಾನದಲ್ಲಿ ದೊಡ್ಡದಾಗಿ ಜಾತ್ರೆ ನಡೆದು ಇಡೀ ಮಾನಾ ಹಳ್ಳಿಯ ಜನರು ಜಾತ್ರೆಯ ಸಂಭ್ರವನ್ನನುಭವಿಸುತ್ತಾರೆ.

(ಮಾನಾಹಳ್ಳಿ)

ಮಾನಾಗೆ ಬದರಿನಾಥದಿಂದ ವಾಹನದಲ್ಲೂ ಇಲ್ಲವೇ ಚಾರಣವೂ ಮಾಡಬಹುದು. ಈ ಹಳ್ಳಿಯ ಸುತ್ತಲೂ ಕಾಣುವ ಹಿಮಚ್ಚಾದಿತ ಗಿರಿಪರ್ವತಗಳು, ಕುರುಚುಲು ಗಿಡಗಳಿಂದ ಕೂಡಿದ ಗುಡ್ಡಗಳು ಯಾರನ್ನಾದರೂ ಸಮ್ಮೋಹನಗೊಳಿಸುತ್ತದೆ. ಹಳ್ಳಿಯ ಪಕ್ಕದಲ್ಲೇ ಉತ್ತರದಿಕ್ಕಿನಿಂದ ಹರಿದುಬರುವ ಮಂದಾಕಿನಿ ಹಾಗು ಮಾನಾ ಹಳ್ಳಿಯಲ್ಲೆ ಹುಟ್ಟುವ ಸರಸ್ವತಿ ನದಿಗಳ ಝುಳ ಝುಳ ನಾದ ಸರಸ್ವತಿಯು ವೀಣೆಯನ್ನು ನುಡಿಸಿದಂತೆಯೂ ಹಾಗು ಮಂದಾಕಿನಿಯು ಬಂಡೆಗಲ್ಲಮೇಲೆ ಹರಿದು ಬರುವುದು ನೃತ್ಯಮಾಡುವಂತೆ ಕಾಣುತ್ತದೆ. ನೋಡುಗರಿಗೆ ಇಬ್ಬರ ಜುಗಲ್ಬಂದಿ ನಿಜಕ್ಕೂ ಅದ್ಭುತವಾಗಿ ಕಾಣುತ್ತದೆ. ಈ ಎರಡೂ ನದಿಗಳು ಮಾನಾದಲ್ಲಿರುವ ಕೇಶವಪ್ರಯಾಗದಲ್ಲಿ ಸಂಗಮವಾಗುತ್ತದೆ.

ಇಲ್ಲಿಂದ ಸರಸ್ವತಿಯು ಮಂದಾಕಿನಿಯಲ್ಲಿ ಅಂತರ್ಧಾನಳಾಗಿ ಮರಳಿ ಉತ್ತರಪ್ರದೇಶದ ಪ್ರಯಾಗದಲ್ಲಿ (ಇಂದಿನ ಅಲಹಾಬಾದ್) ತ್ರಿವೇಣಿಸಂಗಮದಲ್ಲಿ (ಗಂಗೆ, ಯುಮುನಾ ಹಾಗು ಸರಸ್ವತಿ) ಕಾಣಸಿಗುತ್ತಾಳೆ.

ಸ್ಥಳೀಯ ನಿವಾಸಿಗಳು ಪ್ರತಿ ನೂರು ಹೆಜ್ಜೆಗೊಂದರಂತೆ ಒಂದು ಚಹ ಅಂಗಡಿಯನ್ನು ತೆರೆದುಕೊಂಡು ವ್ಯಾಪಾರ ಮಾಡುತ್ತಾರೆ. ಅಲ್ಲಿ ಮಾರಾಟ ಮಾಡುವ ಅಂಗಡಿ ಮಾಲೀಕರು ಹಾಗು ಅವರಲ್ಲಿ ಕೆಲಸ ಮಾಡುವ ಕೆಲಸಗಾರರು ಆವೋ ಭಾಯ್ಸಾಬ್, ಬೆಹೆನ್, ಹಮಾರ ಚಾಯ್ ಕಾ ದುಖಾನ್ ಭಾರತ್ ಕಾ ಆಕ್ರಿ ಚಾಯ್ ದುಖಾನ್, ಆವೋ ಆವೋ ಇದರ್ ಆವೋ ಮಸಾಲಾ ಚಾಯ್ ಔರ್ ಚೌಮಿನ್ ಖಾವೊ, ಗರಮ್ ಗರಮ್ ಹೇ (ಅಣ್ಣಂದಿರೆ, ಅಕ್ಕಂದಿರೆ ಈ ನಮ್ಮ ಚಾಯ್ ಅಂಗಡಿ ಭಾರತದ ಕಟ್ಟಕಡೆಯ ಚಾಯ್ ಅಂಗಡಿ. ಬನ್ನಿ ಬಿಸಿ ಬಿಸಿ ಮಸಾಲಾ ಚಾಯ್ ಮತ್ತು ಚೌಮಿನ್ (ಮ್ಯಾಗಿ) ಅಂತ ಬೊಬ್ಬಿರಿದು ಗ್ರಾಹಕರನ್ನು ಸೆಳೆಯುತ್ತಿರುತ್ತಾರೆ. ಚೌಮಿನ್ ತಂದು ನಾವು ಕುಳಿತ ಮೇಜಿನ ಮೇಲಿಡುತ್ತಾರೆ. ಆ ಥಂಡಿಯ ವಾತಾವರಣದಲ್ಲಿ ಚೌಮಿನ್ ಬಾಯಿಗೆ ಬಿದ್ದಂತೆ ಅದರ ಮಸಾಲೆ ನಾಲಿಗೆಗೆ ಹತ್ತಿ ನಿಧಾನವಾಗಿ ಗಂಟಲಿನಿಂದ ಹೊಟ್ಟೆಗಿಳಿದು ಜಠರಾಗ್ನಿಯಲ್ಲಿ ಬೇಯುವಾಗ ಆಗುವ ಬಿಸಿಯ ಅನುಭವ ವರ್ಣಿಸಲಸಾದ್ಯ. ಅದನ್ನು ಮುಗಿಸುವ ಹೊತ್ತಿಗೆ ಬರುವ ಚಾಯ್ ಮತ್ತೊಂದು ಅದ್ಭುತ. ಅದನ್ನು ಆಸ್ವಾದಿಸಲು ಒಂದು ನಾಲಗೆ ಸಾಲದು. ಚೌಮಿನ್ ಹಾಗು ಬಿಸಿ ಬಿಸಿ ಹಬೆಯಾಡುವ ಚಾಯ್ ಆ ಸಮಯದಲ್ಲಿ ಅಮೃತವಾಗಿ ಕಾಣುತ್ತದೆ.

(ಮಾನಾಹಳ್ಳಿಯಿಂದ ಹಿಮಾಲಯದ ವಿಹಂಗಮನೋಟ)

ಮಾನಾ ಹಳ್ಳಿಯಲ್ಲಿ ಅವರು ಬದುಕು ನೆಚ್ಚಿಕೊಂಡಿರುವುದು ಮುಖ್ಯವಾಗಿ ಉಣ್ಣೆಯ ವಸ್ತುಗಳಿಂದ ತಯಾರಿಸುವ ಸ್ವೆಟರುಗಳು, ಮಫ್ಲರ್ರುಗಳು, ಕಾಲುಚೀಲಗಳು, ಕೈಚೀಲಗಳು, ಕಾರ್ಪೆಟ್ಟುಗಳು. ಮನೆ ಮನೆಯಲ್ಲೂ ಯಂತ್ರಗಳನ್ನು ಇಟ್ಟುಕೊಂಡು ಬೆಳಗ್ಗಿನಿಂದ ರಾತ್ರಿಯವರೆಗೆ ಉಣ್ಣೆಯ ವಸ್ತುಗಳನ್ನು ತಯಾರಿಸುತ್ತಿರುತ್ತಾರೆ. ಪ್ರತಿ ಕುಟುಂಬವೂ ಸುಂದರವಾದ, ವಿಶಾಲವಾದ ಬಿದಿರಿನ ಮತ್ತು ಮರದ ಮನೆಯನ್ನು ಹೊಂದಿದೆ.

(ಚಿತ್ರಗಳು: ಎಲ್. ವೆಂಕಟರಂಗ)

ಈ ಹಳ್ಳಿಗರು ಮನೆಬಳಕೆಗಾಗಿ ಸಾವಯವವಾಗಿ ಬೆಳೆದ ತರಕಾರಿಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಅಲ್ಲಿ ಬೆಳೆಯುವ ತರಕಾರಿಗಳೆಂದರೆ ಹೂಕೋಸು, ಕೋಸು ಮತ್ತು ಆಲುಗೆಡ್ಡೆ. ಈ ಮೂರು ತರಕಾರಿಗಳನ್ನು ಅವರ ದಿನದ ಅಡುಗೆಗೆ ಹೆಚ್ಚು ಬಳಸುವರು. ಬೇರೆ ತರಕಾರಿಗಳು ಹತ್ತಿರದ ಚಮೋಲಿಯಿಂದಲೋ ಅಥವಾ ಜ್ಯೋತಿರ್ಮಠದಿಂದಲೋ ತರಿಸಿಕೊಳ್ಳಬೇಕು ಹಾಗು ಅದು ದುಬಾರಿಯಾದ್ದರಿಂದ ಅವರು ಬೆಳೆಯುವ ತರಕಾರಿಗಳನ್ನೆ ಹೆಚ್ಚು ಉಪಯೋಗಿಸುತ್ತಾರೆ. ಸ್ಥಳೀಯ ಸಂಸ್ಥೆಗಳು ಹಾಗು ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಿಂದ ಸಾರ್ವಜನಿಕ ಶಾಲೆ, ಶೌಚಾಲಯಗಳು, ನೀರಿನ ಸಂರಕ್ಷಣೆ ಇತ್ಯಾದಿಗಳನ್ನು ಅಲ್ಲಿನ ಸ್ಥಳೀಯ ಸಮುದಾಯದ ಮೂಲಕ ನಿರ್ವಹಿಸುತ್ತದೆ.

ಬೋಟಿಯಾ ಬುಡಕಟ್ಟು ಜನರ ಮತ್ತೊಂದು ಕಾಯಕ ಡೋಲಿ ಸೇವೆ. ಇವರು ಮಾನಾ ಹಳ್ಳಿಯಿಂದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಡೋಲಿಯ ಸಹಾಯದಿಂದ ಪ್ರವಾಸಿಗರನ್ನು ಹೊತ್ತೊಯ್ಯುತ್ತಾರೆ. ಇವರು ಶ್ರಮಜೀವಿಗಳಾಗಿದ್ದು ಪ್ರವಾಸಿಗರನ್ನು ಸುಮಾರು ಎರಡರಿಂದ ಮೂರು ಕಿಲೋಮೀಟರ್ ಹೊತ್ತೊಯ್ಯುತ್ತಾರೆ. ನೂರು ಮೀಟರ್ ಎತ್ತರ ಏರಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿಕೊಂಡು ಮತ್ತೆ ನೂರು ಮೀಟರ್ ಇಳಿದು ಮಾನಾ ಹಳ್ಳಯಲ್ಲಿಳಿಸುತ್ತಾರೆ.

(ಮಾನಾ ಹಳ್ಳಿಯ ಜೀವನ ಶೈಲಿ)

ಇನ್ನು ಮಾನಾ ಹಳ್ಳಿಯು ಪೌರಾಣಿಕವಾಗಿಯೂ ಪ್ರಾಮುಖ್ಯತೆಯನ್ನು ಹೊಂದಿದೆ. ಇದೇ ಹಳ್ಳಿಯಲ್ಲಿ ವ್ಯಾಸ್ ಗುಫಾ (ವ್ಯಾಸರಿದ್ದ ಗುಹೆ) ಇರುವುದು. ಇದೇ ಜಾಗದಲ್ಲಿ ವ್ಯಾಸರು ನಾಲ್ಕು ವೇದಗಳನ್ನು ವಿಂಗಡಿಸಿದ್ದರು ಎಂದು ಹೇಳುತ್ತಾರೆ. ಅವರು ವಾಸಿಸುತ್ತಿದ್ದ ಗುಹೆಯಲ್ಲಿ ಅವರದೊಂದು ಸಣ್ಣ ದೇವಾಲಯವಿದೆ. ಇದು 5000+ ವರ್ಷ ಹಳೆಯದು. ಇದನ್ನು ವ್ಯಾಸ್ ಪೋಥಿ ಎಂದು ಕರೆಯುತ್ತಾರೆ. ಈ ಗುಹೆಯ ವೈಶಿಷ್ಟ್ಯವೆಂದರೆ, ಗುಹೆಯು ನೋಡಲಿಕ್ಕೆ ವೇದವ್ಯಾಸರು ಬರೆದ ಪವಿತ್ರಪುಸ್ತಕಗಳ ಸಂಗ್ರಹಣೆಯ ಪುಟಗಳನ್ನು ಹೋಲುತ್ತದೆ.

ವ್ಯಾಸ್ ಗುಫಾ ಹತ್ತಿರದಲ್ಲಿ ಗಣೇಶ್ ಗುಫಾ (ಗಣೇಶ ಗುಹೆ) ಇರುವುದು. ಇಲ್ಲಿ ಗಣೇಶನು ವೇದವ್ಯಾಸರು ಮಹಾಭಾರತವನ್ನು ಹೇಳುತ್ತಿದ್ದರೆ ಈ ಜಾಗದಲ್ಲಿ ಕುಳಿತು ಬರೆಯುತ್ತಿದ್ದನು. ಗಣೇಶನು ಒಂದು ಶರತ್ತನ್ನು ಮುಂದಿಟ್ಟನು. ವ್ಯಾಸರು ನಿಲ್ಲಿಸದೇ ನಿರಂತರವಾಗಿ ಹೇಳುತ್ತಿರಬೇಕು. ಸ್ವಲ್ಪ ವಿರಾಮ ಕೊಟ್ಟರೂ ಎಷ್ಟು ಬರೆದಿರುತ್ತೇನೋ ಅಷ್ಟಕ್ಕೆ ನಿಲ್ಲಿಸಿ ಹೊರಟುಹೋಗುತ್ತೇನೆಂದನು. ಅದಕ್ಕೆ ವ್ಯಾಸರು ಕೂಡ ಒಂದು ಶರತ್ತನ್ನು ಹಾಕಿದರು. “ತಾವು ಹೇಳುವ ಪದಗಳನ್ನುಅರ್ಥಮಾಡಿಕೊಂಡು ಬರೆಯಬೇಕು. ಕೆಲವು ಸಲ ಬಹಳ ಕ್ಲಿಷ್ಟ ಪದಗಳು ಬರುತ್ತವೆ. ಅದನ್ನು ಅರ್ಥಮಾಡಿಕೊಂಡು ಬರೆಯಬೇಕು. ನಾನು ಒಂದೇ ಸಾರಿ ಹೇಳುತ್ತೇನೆ. ಮತ್ತೆ ಪುನರಾವರ್ತಿಸುವುದಿಲ್ಲ” ಎಂದರು. ಗಣೇಶನು ಶರತ್ತನ್ನು ಒಪ್ಪಿದನು. ವ್ಯಾಸರು ಕ್ಲಿಷ್ಟಪದಗಳನ್ನು ಹೇಳಿದರೆ ಅದನ್ನು ಗಣೇಶನು ಅರ್ಥಮಾಡಿಕೊಂಡು ಬರೆಯುವಷ್ಟರಲ್ಲಿ ಕಥೆಯನ್ನು ಮುಂದುವರೆಸಿಕೊಂಡು ಸುಮಾರು ಹೇಳಿರುತ್ತಿದ್ದರು. ಗಣೇಶನು ಅದೆಲ್ಲವನ್ನೂ ಗಮನವಿಟ್ಟು ಕೇಳಿ ಯಾವುದನ್ನೂ ಬಿಡದೇ ಬರೆಯುತ್ತಿದ್ದನು. ಹತ್ತಿರದಲ್ಲಿದ್ದರೆ ಬೇಗ ಕೇಳಿಸಿಕೊಂಡು ಗಣೇಶ ಬರೆದುಬಿಡುವನೆಂದು ವ್ಯಾಸರು ವ್ಯಾಸ್ ಗುಫಾನಲ್ಲಿ ಮಹಾಭಾರತವನ್ನು ಹೇಳಿದರೆ ಗಣೇಶನು ಗಣೇಶ್ ಗುಫಾನಲ್ಲಿ ಕುಳಿತು ಬರೆದನು. ವ್ಯಾಸ್ ಗುಫಾ ಮತ್ತು ಗಣೇಶ್ ಗುಫಾ ಮಧ್ಯೆ ಸುಮಾರು 600 ಮೀಟರುಗಳಷ್ಟು ದೂರವಿದೆ.

(ಡೋಲಿಸೇವೆ ಸಲ್ಲಿಸುತ್ತಿರು ವಭೋಟಿಯಾ ಬುಡಕಟ್ಟು ಸಮುದಾಯ)

ಮಾನಾ ಹಳ್ಳಿಯಲ್ಲಿ ಸ್ವಲ್ಪ ದೂರ ನಡೆದರೆ ಸಿಗುವುದು ಭೀಮ್ ಪೂಲ್. ಈ ಸ್ಥಳವು ಕೂಡ ಪೌರಾಣಿಕ ಪ್ರಾಮುಖ್ಯತೆ ಹೊಂದಿದೆ. ಪಾಂಡವರು ಮಹಾಪ್ರಸ್ಥಾನಕ್ಕೆ ಹೋಗಲು ಇದೇ ಮಾರ್ಗದಲ್ಲಿ ಪ್ರಯಾಣ ಮಾಡಿದರು. ಹೋಗುವ ದಾರಿಯಲ್ಲಿ ಅಡ್ಡವಾಗಿ ಸರಸ್ವತಿ ನದಿಯು ಭೋರ್ಗರೆದು ಹರಿಯುತ್ತಿದ್ದಳು.ಅದನ್ನು ಕಂಡು ದ್ರೌಪದಿಯು ಆ ನದಿಯನ್ನು ದಾಟಲು ಹೆದರಿದಳು. ಆಗ ಅಲ್ಲೇ ಇದ್ದ ಭೀಮನು ಒಂದು ದೊಡ್ಡ ಬಂಡೆಕಲ್ಲನ್ನೆತ್ತಿಕೊಂಡು ನದಿಗೆ ಅಡ್ಡಲಾಗಿಟ್ಟನು. ಅದು ಸೇತುವೆಯ ತರಹ ಕಾಣುತ್ತಿತ್ತು. ನಂತರ ಎಲ್ಲರೂ ಆ ಬಂಡೆ ಕಲ್ಲನ್ನು ಹತ್ತಿ ಆ ಕಡೆಯ ದಡವನ್ನು ಸೇರಿದರು. ಹಾಗೆ ಇಟ್ಟ ಆ ಬಂಡೆ ಕಲ್ಲಿಗೆ ಭೀಮ್ ಫೂಲ್ (ಸೇತುವೆ) ಎಂದು ಹೆಸರು ಬಂದಿತು.

(ವಸುಧಾರಾ ಜಲಪಾತ)

ಭೀಮ್ ಫೂಲ್ ಪಕ್ಕದಲ್ಲೇ ಸರಸ್ವತಿ ನದಿಯ ಉಗಮ ಸ್ಥಾನವೂ ಕೂಡ. ಆಗಲೆ ಹೇಳಿದಂತೆ ಸರಸ್ವತಿಯು ಅಲಕಾನಂದ ನದಿಯ ಉಪನದಿಯಾಗಿದೆ. ಸರಸ್ವತಿ ನದಿಯು ಹುಟ್ಟುವ ಸ್ಥಳದಲ್ಲಿ ಭೋರ್ಗರೆದು ರಭಸದಿಂದ ಸಾಗುತ್ತದೆ. ಆದರೆ 800 ಮೀಟರು ಹರಿಯುವಷ್ಟರಲ್ಲೇ ಪ್ರಶಾಂತಳಾಗಿ ಗುಪ್ತಗಾಮಿನಿಯಾಗುತ್ತಾಳೆ. ಮೇಲೆ ಹೇಳಿದ ಹಾಗೆ ವ್ಯಾಸರು ಮಹಾಭಾರತವನ್ನು ಹೇಳುತ್ತಿದ್ದಾಗ, ಸರಸ್ವತಿ ನದಿಯ ಭೋರ್ಗರೆತ ಅವರಿಗೆ ತೊಂದರೆ ಕೊಡುತ್ತಿತ್ತು. ವ್ಯಾಸರು ಸರಸ್ವತಿ ನದಿಗೆ ಶಾಂತವಾಗಿ ಹರಿದುಕೊಂಡು ಹೋಗು. ನನಗೆ ತೊಂದರೆ ಆಗುತ್ತಿದೆ ಎಂದರೂ, ಸರಸ್ವತಿಯು ವ್ಯಾಸರ ಮಾತನ್ನು ಕೇಳಲಿಲ್ಲ. ಇದರಿಂದ ಕುಪಿತಗೊಂಡ ವ್ಯಾಸರು ಸರಸ್ವತಿಗೆ ಅಂತರ್ಗಾಮಿಯಾಗೆಂದು ಶಾಪವನ್ನು ಕೊಟ್ಟರು. ಸರಸ್ವತಿಗೆ ತನ್ನ ತಪ್ಪು ಅರಿವಾಗಿ ಅವರ ಕ್ಷಮೆ ಕೇಳಿದಳು. ವ್ಯಾಸರು ಮುಂದೆ ಗಂಗಾ ಮತ್ತು ಯಮುನಾ ಸೇರುವ ಸ್ಥಳದಲ್ಲಿ ನಿನ್ನ ಸಂಗಮ ಅವರಿಬ್ಬರ ಜೊತೆಯಾಗುತ್ತದೆ. ಅದು ಪ್ರಸಿದ್ಧ ಯಾತ್ರಾ ಸ್ಥಳವಾಗುತ್ತದೆ ಎಂದರು. ಅದೇ ಪ್ರಯಾಗ (ಅಲಹಾಬಾದ್).

ಇದೇ ಸ್ಥಳದಲ್ಲೊಂದು ಬಂಡೆಯ ಮಧ್ಯದಲ್ಲಿ ಝರಿಯು ಹರಿಯುತ್ತದೆ. ಅದು ನೇರ ಸರಸ್ವತಿ ನದಿಯನ್ನು ಸೇರುತ್ತದೆ. ಅಲ್ಲಿಯ ಜನರು ಹೇಳುವ ಪ್ರಕಾರ ಮಾನಸ ಸರೋವರ ಮಾನಾ ಹಳ್ಳಿಯಿಂದ 64 ಕಿಲೋಮೀಟರುಗಳು ಮತ್ತು ಆ ಝರಿಯು ಮಾನಸ ಸರೋವರದಿಂದ ಬರುತ್ತಿರುವ ನೀರು. ಏನಾದರೂ ಇರಲಿ ಆ ನೀರು ಕ್ರಿಸ್ಟಲ್ ಕ್ಲಿಯರ್ ನಂತಿದೆ. ತಣ್ಣಗಿನ ನೀರು ತುಂಬಾ ಚೆನ್ನಾಗಿರುತ್ತದೆ. ಆ ನೀರು ಕುಡಿದ ತಕ್ಷಣ ಹೊಸ ಹುರುಪು ಬರುತ್ತದೆ. ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತದೆ. ಮತ್ತಷ್ಟು ಜಾಗಗಳನ್ನು ನೋಡಲೇಬೇಕೆಂಬ ತುಡಿತ ಹೆಚ್ಚಾಗುತ್ತದೆ.


ಇನ್ನು ಮಾನಾ ಹಳ್ಳಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವುದೇ ವಸುಧಾರ ಜಲಪಾತ. ಮಾನಾ ಹಳ್ಳಿಯಿಂದ ಚಾರಣ ಆರಂಭಿಸಬೇಕಾಗುತ್ತದೆ. ಬೆಳಗ್ಗೆ ಬೇಗನೆದ್ದು ಹೊರಟರೆ ಮಧ್ಯಾಹ್ನದೊತ್ತಿಗೆ ಬಂದು ಮಾನಾ ತಲುಪಬಹುದು. ಸರಿಸುಮಾರು ನಾಲ್ಕರಿಂದ ಐದು ಘಂಟೆಯ ಸಮಯ ಹೋಗಲು ಹಾಗು ಬರಲು ಬೇಕಾಗುತ್ತದೆ. ಸರಸ್ವತಿ ನದಿ ಹುಟ್ಟುವ ಜಾಗದಲ್ಲಿ ಸರಸ್ವತಿ ಮಂದಿರವಿದೆ. ಅದನ್ನು ದಾಟಿ ಹೊರಟರೆ ನಂತರದಲ್ಲಿ ತುಂಬಾ ಕಡಿದಾದ ಕಲ್ಲುಗಳಿಂದಾವೃತವಾದ ಪ್ರದೇಶ. ವಸುಧಾರ ಜಲಪಾತಕ್ಕೆ ಹೋಗುವ ಮಾರ್ಗವು ಹುಲ್ಲು ಪೊದೆಗಳನ್ನು ಬದಿಯಲ್ಲಿ ಹೊಂದಿದ. ಆ ಎತ್ತರದ ಚಾರಣದ ಸಮಯದಲ್ಲಿ ಪ್ರಖರವಾದ ಸೂರ್ಯನ ತಾಪವಿದ್ದರೂ ತಂಪಾದ ಹಾಗು ಆಹ್ಲಾದಕರವಾದ ಗಾಳಿಯು ಬೀಸುತ್ತಿರುತ್ತದೆ. ದಾರಿಯಲ್ಲಿ ನಡೆಯಬೇಕಾದರೆ ಸಿಗುವ ಕಡಿದಾದ ಬಂಡೆಗಳು, ನುಣುಪಿನ ಸಣ್ಣ ಕಲ್ಲುಗಳು ಕೆಲವೊಮ್ಮೆ ನಡೆಯಲು ತ್ರಾಸು ಮಾಡುತ್ತದೆ. ವಸುಧಾರ ಸುಮಾರು ಎರಡು ಕಿಲೋಮೀಟರ್ ದೂರದಿಂದಲೇ ರಮಣೀಯವಾಗಿ ಕಾಣುತ್ತದೆ.

ವಸುಧಾರ ಜಲಪಾತ ಒಂದು ಅಧ್ಬುತ ಲೋಕ. ಪ್ರಕೃತಿಯ ಆನಂದದ ತುತ್ತತುದಿಯನ್ನೇರುವ ಅನುಭವ. ಸುಮಾರು 145 ಮೀ ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತವು ಧುಮುಗುಡುತ್ತ ಬೀಳುತ್ತಿದ್ದರೆ ಯಾವುದೋ ದೇವಕನ್ಯೆಯು ಬಿಳಿ ವಸ್ತ್ರವ ಧರಿಸಿ ಗಾಳಿಯ ವೇಗಕ್ಕೆ ವಯ್ಯಾರ ಮಾಡುತ್ತ ಸ್ವರ್ಗದಿಂದ ಭೂಮಿಗೆ ಬಂದು ಮಾನವರ ಕಣ್ಮನಗಳನ್ನು ತಣಿಸಿದಂತೆ ಕಾಣುತ್ತದೆ. ಆ ಜಲಪಾತ ಬೀಳುವಾಗ ಅದರ ಭೋರ್ಗರೆತದ ಸದ್ದು ದೇವತೆಗಳು ಸಂಗೀತದ ಆಲಾಪನೆಯನ್ನು ಮಾಡುತ್ತಿರುವರೇನೋ ಎಂಬಂತಿರುತ್ತದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ ನಾರದ ಮಹರ್ಷಿಗಳು ಈ ಜಾಗದಲ್ಲಿ ತಪಸ್ಸು ಮಾಡಿದ್ದರು. ಆ ತಪಸ್ಸಿನ ಪ್ರಭಾವದಿಂದ ಹುಟ್ಟಿದ್ದೇ ವಸುಧಾರ ಜಲಪಾತ. ನಾವೇನಾದರೂ ಸ್ವಲ್ಪ ಪುಣ್ಯಮಾಡಿದ್ದರೆ, ದುಮ್ಮಿಕ್ಕುವ ಜಲಪಾತದ ನೀರಿನ ಹನಿಗಳು ನಮ್ಮ ಮೇಲೆ ಸಿಂಪಡಿಸುತ್ತದೆ. ಇಲ್ಲವೆ ಜಲಪಾತದ ನೀರು ನಮ್ಮ ವಿರುದ್ಧ ದಿಕ್ಕಿಗೆ ಸರಿಯುತ್ತದೆ. ಏನೇ ಹೇಳಿ ಅದು ಒಂದು ಅಧ್ಬುತವಾದ ಅನುಭವ. ಎಷ್ಟೇ ದೂರ ನೋಡಿದರೂ ದೊಡ್ಡ ಕಲ್ಲುಗಳೂ, ಕುರುಚುಲು ಗಿಡಗಳು. ಆಗಾಗ್ಯೆ ಗುಡುಗಿನ ಘರ್ಜನೆ ಕೇಳಿಸುತ್ತಿರುತ್ತದೆ. ಆ ಘರ್ಜನೆ ಕೆಲವೊಮ್ಮೆ ಭಯವೂ ಮತ್ತೊಮ್ಮೆ ಆಶ್ಚರ್ಯವನ್ನೂ ಉಂಟು ಮಾಡುತ್ತಿರುತ್ತದೆ. ಹತ್ತಿರದ ಪರ್ವತಗಳು ಚೌಖಂಬಾ, ನೀಲಕಂಠ, ಬಾಲಕುನ್ ಇತ್ಯಾದಿ.

(ನೀಲಕಂಠಪರ್ವತದ ಸೂರ್ಯೋದಯ ನೋಟ)

ಹಾ ಹೇಳೋದು ಮರೆತಿದ್ದೆ. ಒಂದು ಸಾರಿ ಮಾನಾ ಹಳ್ಳಿಯನ್ನು ಬಿಟ್ಟಮೇಲೆ ಮಾರ್ಗದಲ್ಲಿ ಯಾವುದೇ ಆಹಾರ ಅಥವಾ ನೀರು ದೊರೆಯುವುದಿಲ್ಲ. ನಾವು ಸ್ವತಃ ನೀರಿನ ಬಾಟಲಿ ಮತ್ತು ಲಘು ಆಹಾರ, ತಿಂಡಿಗಳನ್ನು ಒಯ್ದರೆ ಒಳ್ಳೆಯದು. ವಸುಧಾರ ಜಲಪಾತ ನೋಡಬೇಕೆಂದರೆ ಬರೀ ನಾಲ್ಕರಿಂದ ಐದು ಘಂಟೆ ಸಾಕಾಗುತ್ತದೆ. ಇದಲ್ಲದೆ ಮುಂದೆ ಸಿಗುವ ಸ್ವರ್ಗಾರೋಹಿಣಿ (ಪಾಂಡವರು ಇಲ್ಲಿಂದಲೇ ಭೂಮಿ ಬಿಟ್ಟು ಸ್ವರ್ಗದ ಕಡೆಗೆ ಪ್ರಯಾಣ ಬೆಳೆಸಿದರೆಂದು ಕಥೆ) ಮತ್ತೊಂದು ಚಂದವಾದ ಪ್ರಕೃತಿಯ ಮಡಿಲು. ಅಲ್ಲದೆ ಹಲವಾರು ಟ್ರೆಕ್ಕಿಂಗ್ ತಾಣಗಳಿವೆ. ಮಾನಾ-ಮಾನಾ ಪಾಸ್, ಮಾನಾ- ಸಾತೋಪಂತ್ ಲೇಕ್ ಮತ್ತು ಮಾನಾ-ಚರಣಪಾದುಕ ಹೀಗೆ ಅನೇಕ ಮಾರ್ಗಗಳನ್ನು ಅನ್ವೇಷಿಸಬಹುದು. ಸಾತೋಪಂತ್ ಗ್ಲೇಶಿಯರ್, ಭಗೀರಥ್ ಗ್ಲೇಶಿಯರ್ ಮುಂತಾದ ಜಾಗಗಳನ್ನು ಚಾರಣದ ಮೂಲಕ ಹೋಗಬೇಕು. ಆದರೆ ಅದಕ್ಕೆ ಸರಿಯಾಗಿ ಪೂರ್ವ ಸಿದ್ಧತೆ, ಪರಿಕರಗಳನ್ನೂ, ಊಟದ ವ್ಯವಸ್ಥೆ ಎಲ್ಲಾ ಮಾಡಿಕೊಂಡು ಹೋಗಬೇಕು. ಯಾಕೆಂದರೆ ಆ ಜಾಗಗಳನ್ನೆಲ್ಲ ತಲುಪೋಕೆ ಕನಿಷ್ಟ ಎರಡರಿಂದ ಮೂರು ದಿನಗಳು ಬೇಕಾಗುವುದು. ಹಾಗಾಗಿ ಮಾರ್ಗಮಧ್ಯೆ ಗುಡಾರಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲೆಲ್ಲಾ ಓಡಾಡಲು ಗೈಡ್ ಅವಶ್ಯಕವಾಗಿ ಬೇಕೇಬೇಕು. ಒಬ್ಬೊಬ್ಬರೇ ಗೊತ್ತಿಲ್ಲದ ಜಾಗಕ್ಕೆ ಹೋಗಿ ಅವಸ್ಥೆ ಪಡುವುದಕ್ಕಿಂತ ನಿಯಮಿತವಾಗಿ ಚಾರಣ ಸಂಘಟಿಸುವ ಕ್ಲಬ್ ಅಂದರೆ ಯೂತ್ ಹಾಸ್ಟಲ್ ಅಥವಾ ಯಾವುದೇ ಅಂಥ ಗುಂಪಿನೊಟ್ಟಿಗೆ ಹೋಗುವುದು ಒಳಿತು.


ಅಲ್ಲಿನ ಹವಾಮಾನ ಹಾಗು ವಾತಾವರಣ ಅನಿರೀಕ್ಷಿತ. ಭೂಕುಸಿತ ಯಾವ ಸಮಯದಲ್ಲಿ ಬೇಕಾದರೂ ಆಗಬಹುದು. ಮೇಲೆ ಹೇಳಿದಂತೆ ಅಷ್ಟೆಲ್ಲಾ ಅನಾನುಕೂಲವಿದ್ದರೂ ಅಲ್ಲಿನ ನಿವಾಸಿಗಳು ಶ್ರಮಜೀವಿಗಳು, ನಿಸ್ಪ್ರುಹರು, ಸುಸಂಸ್ಕೃತರು ಮತ್ತು ಅತ್ಯಂತ ಕಠಿಣ ಜೀವನಶೈಲಿಯಲ್ಲಿ ಬದುಕು ಸಾಗಿಸುತ್ತಿರುವವರು. ಹಾಗಾಗಿ ಮನಪೂರ್ವಕವಾಗಿ ಅವರಿಗೆ ಅಭಿನಂದಿಸಿ, ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ, ಅನುಭವಿಸುತ್ತಾ ಹಚ್ಚ ಹಸಿರಿನ ನೆನಪಿನೊಂದಿಗೆ ಮಾನಾ ಹಳ್ಳಿಯಿಂದ ಬದರೀನಾಥದ ಕಡೆಗೆ ಮುಖ ಮಾಡಿದೆವು.