ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ.  ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು.  ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ ಎದ್ದುಕಾಣುತ್ತಿತ್ತು. ಇಷ್ಟೊಂದು ಆಪ್ತವಾಗಿದ್ದ ಅಪ್ಪು, ಇದ್ದಕ್ಕಿದ್ದ ಹಾಗೆಯೇ ಎದ್ದು ಹೋಗಿರುವುದನ್ನು ನಂಬಲು ಕನ್ನಡ ನಾಡಿಗೆ ಸಾಧ್ಯವಾಗುತ್ತಿಲ್ಲ. ಅವರೊಂದಿಗಿನ ಒಡನಾಟದ ನೆನಪುಗಳನ್ನು ಎನ್. ಸಂಧ್ಯಾರಾಣಿ ಇಲ್ಲಿ ಬರೆದಿದ್ದಾರೆ. 

 

2019 ರಲ್ಲಿ ಕಲರ್ಸ್ ಚಾನೆಲ್‌ನಲ್ಲಿ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ಶೂಟಿಂಗ್‌ಗೆ ಮೊದಲಿನ ಸಿದ್ಧತೆಗಳಾಗುತ್ತಿದ್ದವು. ಅದು ನನ್ನ ಎರಡನೆಯ ಸರಣಿ. ಮೊದಲ ಸಲ ರಮೇಶ್ ಅವರು ಅದನ್ನು ನಡೆಸಿಕೊಟ್ಟಿದ್ದರು. ಅದಕ್ಕೂ ಮೊದಲಿನ ಸರಣಿಗಳನ್ನು ನಡೆಸಿಕೊಟ್ಟಿದ್ದ ಪುನೀತ್ ರಾಜಕುಮಾರ್ ಅವರೇ ಈ ಸಲ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದರು. ಅಂದು ಒಂದು ಟ್ರಯಲ್ ರನ್ ಕಾರ್ಯಕ್ರಮ. ಆ ತಂಡದಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ತಂಡದ ಕೆಲವರೊಡನೆ ಕಲರ್ಸ್ ಆಫೀಸಿನ ಒಂದು ಕೊಠಡಿಯಲ್ಲಿ ಕುಳಿತು ಪುನೀತ್ ಅವರಿಗಾಗಿ ಕಾಯುತ್ತಿದ್ದೆ. ಪುನೀತ್ ಅವರನ್ನು ಅವರು ಮಾಸ್ಟರ್ ಲೋಹಿತ್ ಆಗಿದ್ದ ದಿನಗಳಿಂದಲೇ ನೋಡಿದ್ದವರು ನಾವು.

‘ಮಾಸ್ಟರ್ ಲೋಹಿತ್’ – ಕರ್ನಾಟಕದ ಮನೆಮಗನಾಗಿರುವ ಪುನೀತ್ ರಾಜಕುಮಾರ್ ನಮಗೆ ಪರಿಚಯವಾಗಿದ್ದು ಹೀಗೆ. ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಶ್ಯಾಮಲ ವರ್ಣದ, ಗುಂಗುರು ಕೂದಲಿನ, ಗುಂಡು ಗುಂಡು ಮಗುವಿನ ಕಣ್ಣುಗಳು ಫಳಫಳ ಹೊಳೆಯುವ ಕಪ್ಪು ನೇರಳೆ. ಸಣ್ಣ ಮಕ್ಕಳು ಆಟಿಕೆಗಳ ಜೊತೆಗೆ ಆಡುತ್ತಾ ಬೆಳೆದರೆ ಈ ಹುಡುಗ ಬೆಳೆದದ್ದು ಮಾತ್ರ ಚಿತ್ರರಂಗದ ಅಂಗಳದಲ್ಲಿ. ತಂದೆ ‘ಮಯೂರ’ ಚಿತ್ರದ ಶೂಟಿಂಗ್ ನಲ್ಲಿ ವ್ಯಸ್ತವಾಗಿದ್ದಾಗ ಹುಟ್ಟಿದ ಕೂಸು ಇದು. ಆಗಷ್ಟೇ ಪಾರ್ವತಮ್ಮ ರಾಜಕುಮಾರ್ ಅವರು ಚಿತ್ರೋದ್ಯಮದೊಳಕ್ಕೆ ಹೆಜ್ಜೆ ಇಟ್ಟಿದ್ದರು. ‘ಪ್ರೇಮದ ಕಾಣಿಕೆ’ ಬರುವಷ್ಟರಲ್ಲಿ ಪಾರ್ವತಮ್ಮ ಅವರು ‘ಚಂದ್ರಿಕಾ ಮೂವೀಸ್’ ಸ್ಥಾಪಿಸಿ ಆಗಿತ್ತು. ರಾಜಕುಮಾರ್ ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಅಸಲು ಗಿಟ್ಟುವುದಿಲ್ಲ ಎಂದು ಕುಹಕವಾಡುತ್ತಿದ್ದವರಿಗೆ ಸರಿಯಾಗಿ ಉತ್ತರ ಕೊಡಬೇಕು ಎಂದು ನಿರ್ಧರಿಸಿದ್ದ ಪಾರ್ವತಮ್ಮ ತಾವೇ ರಂಗಕ್ಕಿಳಿದಿದ್ದರು. ರಾಜಕುಮಾರ್ ಶಿವನಂತಿದ್ದರೆ, ನಿಜಕ್ಕೂ ಶಕ್ತಿರೂಪಿಯಾಗಿದ್ದವರು ಪಾರ್ವತಮ್ಮ. ಅಪ್ಪು ಅದನ್ನು ನೆನೆಸಿಕೊಳ್ಳುತ್ತಿದ್ದದ್ದು ಹೀಗೆ, ‘ನನಗೆ ಮೊದಲಿನ ನೆನಪುಗಳು ಅಂದರೆ ಅಮ್ಮ ಒಂದು ಕೈನಲ್ಲಿ ನನ್ನನ್ನು ಎತ್ತಿಕೊಂಡಿರುತ್ತಿದ್ದರು. ಇನ್ನೊಂದು ಕೈಯ್ಯಲ್ಲಿ ದೊಡ್ಡ ವ್ಯಾನಿಟಿ ಬ್ಯಾಗ್.’

‘ಸನಾದಿ ಅಪ್ಪಣ್ಣ’ ಬರುವ ವೇಳೆಗೆ ಒಂದು ವರ್ಷದ ಈ ಪೋರ ಪುಟ್ಟಪುಟ್ಟ ಹೆಜ್ಜೆಗಳನ್ನಿಡುತ್ತಾ, ತಲೆತುಂಬಾ ಗುಂಗುರು ಕೂದಲಿನೊಡನೆ ಬಂದರೆ ಚಿತ್ರಮಂದಿರದಲ್ಲಿ ಪರದೆಯ ಕಡೆಗೆ ಕೈಚಾಚಬೇಕು ಅನ್ನಿಸುತ್ತಿತ್ತು. ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಪುಟ್ಟಪುಟ್ಟ ಕೈಗಳಿಗೆ ಧರಿಸಿದ ಬಾಕ್ಸಿಂಗ್ ಗ್ಲೌಸ್ ಕಂಡರೂ ಮುದ್ದು ಉಕ್ಕುತ್ತಿತ್ತು. ನಂತರ ‘ವಸಂತ ಗೀತ’ ಚಿತ್ರದಲ್ಲಿ ಪುಟಾಣಿ ಶ್ಯಾಮ್… ’ಚಲಿಸುವ ಮೋಡಗಳು’ ಚಿತ್ರದಲ್ಲಿ ‘ಕಾಣದಂತೆ ಮಾಯವಾದನೋ ನಮ್ಮ ಶಿವ’ ಎಂದು ಹಾಡಿ ಕುಣಿದ ತುಂಟತನ, ‘ಎರಡು ನಕ್ಷತ್ರ’ದಲ್ಲಿ ‘ಕಲ್ಲುಸಕ್ಕರೆ ಬಾದಾಮಿ ಕುಟ್ಟಿಕುಟ್ಟಿ ತಿನ್ನುವೆ’ ಎನ್ನುವ ಮುಗ್ಧ ನಟನೆಯ ಮೂಲಕ ಈ ಹುಡುಗ ನೇರ ನಮ್ಮ ಹೃದಯಕ್ಕೇ ನಡೆದು ಬಂದಿದ್ದ.

‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ರಾಜಕುಮಾರ್ ಹಿರಣ್ಯ ಕಶಿಪು ಆಗಿ ಭೋರ್ಗರಿಸುತ್ತಿದ್ದಾಗ ಈ ಪುಟ್ಟ ಪ್ರಹ್ಲಾದ ಹೆದರುತ್ತಲೇ, ದೇವರನಾಮ ಹೇಳುತ್ತಿದ್ದರೆ ಮನಸ್ಸು ಕರಗಿಹೋಗುತ್ತಿತ್ತು. ಈತನ ಅಭಿನಯ ಇನ್ನೊಂದು ಮಜಲಿಗೆ ಹೋಗಿದ್ದು ‘ಭಾಗ್ಯವಂತ’ ಮತ್ತು ’ಬೆಟ್ಟದ ಹೂವು’ ಚಿತ್ರಗಳಲ್ಲಿ. ಕುವೆಂಪು ರಾಮಾಯಣ ಕೊಳ್ಳಲು ಕಾಸು ಸಂಪಾದಿಸಲು ಬೆಟ್ಟಗುಡ್ಡ ಅಲೆದಾಡಿ ಹೂ ತಂದು ಶೆರ್ಲಿ ಮೇಡಂಗೆ ಕೊಡುವ ರಾಮು, ದುಡ್ಡು ಸೇರಿದಾಗ ಕಾಣುವುದು ಇರುಳಿನಲ್ಲಿ ಚಳಿಗೆ ನಡುಗುವ ತಮ್ಮ ತಂಗಿಯರನ್ನು. ಪುಸ್ತಕ ಬಿಟ್ಟು, ಕಂಬಳಿ ಕೊಳ್ಳುವ ರಾಮು ಯಾಕೋ ‘ರಾಮಾಯಣ ದರ್ಶನಂ’ ಪುಸ್ತಕ ಕಂಡಾಗಲೆಲ್ಲಾ ಇಂದಿಗೂ ನೆನಪಾಗುತ್ತಾನೆ. ನಿಜಜೀವನವೇನೋ ಎನ್ನುವ ಹಾಗೆ ‘ಅಯ್ಯೋ ರಾಮುವಿಗೆ ಒಂದು ಕುವೆಂಪು ರಾಮಾಯಣ ಪುಸ್ತಕ ಕೊಡಿಸಬೇಕು’ ಅನ್ನಿಸಿಬಿಡುತ್ತದೆ. ತಂದೆ, ಅಣ್ಣಂದಿರೆಲ್ಲರಿಗಿಂತಾ ಮೊದಲು, ಬಾಲನಟನಾಗಿ ಈ ಚಿತ್ರಕ್ಕಾಗಿ ಅಪ್ಪುವಿಗೆ ರಾಷ್ಟ್ರಪ್ರಶಸ್ತಿ ಬಂತು. ‘ಭಾಗ್ಯವಂತ’ ಶೂಟಿಂಗ್ ನಡೆಯುವಾಗ ಅಶ್ವಥ್ ಮನೆಮಂದಿಯ ಮುಂದೆ ‘ಈ ಹುಡುಗ ಮುಂದೆ ಥೇಟ್ ಅಪ್ಪನಂತಾಗುತ್ತಾನೆ’ ಅಂದಿದ್ದರಂತೆ. ಬಾಲನಟನಾಗಿ ಅಷ್ಟು ಹೆಸರು ಮಾಡಿದ್ದರೂ ಬೆಳೆದು ದೊಡ್ಡವನಾದಾಗ ಅಪ್ಪುವಿನ ಮೊದಲ ಆಯ್ಕೆ ಚಿತ್ರರಂಗ ಆಗಿರಲಿಲ್ಲ. ಸ್ವಲ್ಪ ದಿನ ಪಾರ್ವತಮ್ಮನವರು ವಜ್ರೇಶ್ವರಿ ಕಚೇರಿ ನೋಡಿಕೋ ಎಂದು ಹೇಳಿದ್ದರು, ಹಲವಾರು ಬ್ಯುಸಿನೆಸ್ ಗಳಲ್ಲಿ ಅಪ್ಪು ಕೈ ಹಾಕಿದ್ದರು. ‘ಎಲ್ಲಾ ಕಡೆ ಫೈಲ್ಯೂರ್ ಆಗಿ ಸಿನಿಮಾಗೆ ಬಂದೆ’ ಎಂದು ಅವರು ತಮಾಷೆ ಮಾಡುತ್ತಿದ್ದರು. ಅಪ್ಪುವಿಗೆ ಬುದ್ಧಿ ತಿಳಿಯುವ ವೇಳೆಗೆ ರಾಜಕುಮಾರ್ ಕನ್ನಡ ಚಿತ್ರರಂಗದ ಧ್ರುವ ನಕ್ಷತ್ರವಾಗಿದ್ದರು. ಅವರ ರಥದ ಸಾರಥ್ಯ ಪಾರ್ವತಮ್ಮನವರ ಚಾಣಾಕ್ಷ ಹಸ್ತಗಳಲ್ಲಿತ್ತು. ರಾಜಕುಮಾರ್ ಅವರ ಹೋರಾಟದ ದಿನಗಳನ್ನು ಮಿಕ್ಕ ಮಕ್ಕಳು ನೋಡಿದ ಹಾಗೆ ಪೂರ್ಣಿಮಾ ಮತ್ತು ಅಪ್ಪು ನೋಡಲಿಲ್ಲ. ತಾರುಣ್ಯದಲ್ಲಿ ಅವರ ವಯೋಸಹಜ ನಡವಳಿಕೆಯನ್ನು ಕಂಡು ಕೆಲವರು, ಅಪ್ಪು ತುಂಬಾ ಜೋರಂತೆ ಎಂದು ಪಿಸುಗುಡುತ್ತಿದ್ದರು. ರಾಜಕುಮಾರ್ ಮಗ ಎನ್ನುವ ಹಮ್ಮು ಎನ್ನುತ್ತಿದ್ದರು. ಆದರೆ ಅದೇ ಜನ ಮುಂದೆ ತಮ್ಮಲ್ಲಿ ರಾಜಕುಮಾರ್ ಅವರನ್ನು ಕಾಣುವ ಹಾಗೆ ಅಪ್ಪು ಮಾಗಿದ್ದರು.

1999ರಲ್ಲಿ ಅಪ್ಪು ಮದುವೆಯಾದರು. 2002 ರಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ’ಅಪ್ಪು’ ಎನ್ನುವ ಹೆಸರಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಆ ವೇಳೆಗಾಗಲೇ ಅಣ್ಣ ಶಿವರಾಜಕುಮಾರ್ ತಮ್ಮ ಮೊದಲ ಮೂರು ಚಿತ್ರಗಳೂ ‘ಹ್ಯಾಟ್ರಿಕ್’ ಶತದಿನೋತ್ಸವ ಕಂಡು ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ತಂದೆಯಂತೂ ಸರಿಯೇ ಸರಿ, ಕನ್ನಡ ಚಿತ್ರರಂಗದ ನಟಸಾರ್ವಭೌಮ. ಎರಡೂ ದೊಡ್ಡ ಸವಾಲೇ. ಶಿವಣ್ಣ ಚಿತ್ರರಂಗಕ್ಕೆ ಬರುವ ಕಾಲಕ್ಕೆ ಅವರ ಚಿತ್ರಕಥೆಗಳನ್ನು ಕೇಳಲು, ಅನುಮೋದಿಸಲು, ಬದಲಿಸಲು ಚಿಕ್ಕಪ್ಪ ವರದಪ್ಪನವರಿದ್ದರು. ರಾಜಕುಮಾರ್ ಸಹ ಆ ಸೆಷನ್ ಗಳಲ್ಲಿ ಕೂರುತ್ತಿದ್ದರು. ಪಾರ್ವತಮ್ಮನವರ ಪ್ರಭಾವ ಬಲವಾಗಿತ್ತು. ಆದರೆ ಪುನೀತ್ ಬರುವಾಗ ಪರಿಸ್ಥಿತಿ ಬದಲಾಗಿತ್ತು. ಆದರೆ ಆ ಸನ್ನಿವೇಶದಲ್ಲೂ ಕೆಲವು ಸಲ ತಮ್ಮನ್ನು ಅದಕ್ಕೆ ಒಗ್ಗಿಸಿಕೊಳ್ಳುತ್ತಾ, ಮತ್ತೆ ಕೆಲವು ಸಲ ಸನ್ನಿವೇಶವನ್ನು ತಮಗೆ ಒಗ್ಗಿಸಿಕೊಳ್ಳುತ್ತಾ ಅಪ್ಪು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಲೇ ಹೋದರು.

‘ಅಪ್ಪು’ ಚಿತ್ರದ ನಂತರ ಬಂದದ್ದು ‘ಅಭಿ’, ‘ವೀರ ಕನ್ನಡಿಗ’, ‘ಮೌರ್ಯ’ ಇತ್ಯಾದಿ ಚಿತ್ರಗಳು. ಎಲ್ಲವೂ ಮಾಸ್ ಚಿತ್ರಗಳು. ‘ಆಕಾಶ್’ ಮತ್ತು ‘ಅಜಯ್’ ಚಿತ್ರಗಳೂ ಸಹ ಮಾಸ್ ಚಿತ್ರಗಳೇ ಆದರೂ ಅಷ್ಟರಲ್ಲಾಗಲೇ ಅವರ ಅಭಿನಯ ಮಾಗಲಾರಂಭಿಸಿತ್ತು. ಅವರ ನಟನೆಗೆ ಒಂದು ಸಟಲ್ ಸ್ಪರ್ಶ ಸಿಕ್ಕಿದ್ದು ‘ಮಿಲನ’ ಚಿತ್ರ ಬಂದಾಗ. ಒಂದಿಷ್ಟೂ ಅಬ್ಬರವಿಲ್ಲದೆ ಅಪ್ಪು ಲೀಲಾಜಾಲವಾಗಿ ಭಾವನೆಗಳನ್ನು ದಾಟಿಸುತ್ತಿದ್ದರೆ ‘ವಸಂತಗೀತ’ದ ರಾಜಕುಮಾರ್ ನೆನಪಾಗಿದ್ದರು. ಒಂದು ರೀತಿಯಲ್ಲಿ ‘ಮಿಲನ’ ಅವರ ಅಭಿನಯದ ಚಿತ್ರಗಳ ಪಟ್ಟಿಯಲ್ಲಿ ಒಂದು ಮುಖ್ಯವಾದ ತಿರುವು. ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಜ್ಯಪ್ರಶಸ್ತಿ ಸಹ ಸಿಕ್ಕಿತ್ತು. ಹೀಗೆ ಅಭಿನಯದಲ್ಲಿ ಮೆಟ್ಟಿಲುಗಳನ್ನೇರಿದಂತೆಲ್ಲಾ ಅಪ್ಪು ಎಂದೂ ಕಳೆದುಕೊಳ್ಳದೆ ಇದ್ದದ್ದು ಅವರ ಮುಗ್ಧತೆ. ಅವರ ಕಣ್ಣುಗಳು ಎಂದಿಗೂ ಆ ಮುಗ್ಧತೆಯನ್ನು ಕಳೆದುಕೊಳ್ಳಲಿಲ್ಲ. ಅವರು ನಕ್ಕರೆ ನಗು ಅವರ ಕಣ್ಣುಗಳನ್ನಷ್ಟೇ ಅಲ್ಲ ಎದುರಿಗಿದ್ದವರ ಹೃದಯವನ್ನೂ ತುಂಬುತ್ತಿತ್ತು.

‘ಜಾಕಿ’ ಚಿತ್ರದಲ್ಲಿ ಆ ಮುಗ್ಧತೆ ಮತ್ತು ತುಂಟತನದ ಹದವಾದ ಪಾಕ ಇತ್ತು. ಇವೆಲ್ಲಾ ಚಿತ್ರಗಳ ನಡುವೆ ಅಪ್ಪು ಎಲ್ಲರಿಗೂ ಅತ್ಯಂತ ಹತ್ತಿರವಾದದ್ದು ‘ಪರಮಾತ್ಮ’ ಚಿತ್ರದ ಮೂಲಕ. ಇಂದಿಗೂ ಈ ಚಿತ್ರವನ್ನು ಮತ್ತೆಮತ್ತೆ ನೋಡುತ್ತೇನೆ. ಶಂಖವನ್ನು ಕಿವಿಯ ಹತ್ತಿರ ಇಟ್ಟುಕೊಂಡು ಭೂಮಿಗೆ ಸೇರಿಲ್ಲದ ಯಾವುದೋ ಅಲೌಕಿಕ ನಾದಕ್ಕೆ ತಲೆದೂಗುತ್ತಿದ್ದ ಅಪ್ಪುವಿನ ಮುಖದಲ್ಲಿ, ನಟನೆಯಲ್ಲಿ ಮಾಯಕದ ಕನಸೊಂದರ ಸ್ಪರ್ಶವಿತ್ತು. ಆ ಇಡೀ ಚಿತ್ರದಲ್ಲಿ ಅವರ ಅಭಿನಯ ಅತ್ಯಂತ ಸಹಜವಾಗಿದ್ದು ಸ್ಪಾಂಟೇನಿಟಿಗೆ ಅತ್ಯುತ್ತಮ ಉದಾಹರಣೆ ಆಗಿತ್ತು. ಅದೇ ಸಮಯದಲ್ಲಿ ಬಂದ ‘ಪೃಥ್ವಿ’ ಚಿತ್ರದಲ್ಲಿ ಇದಕ್ಕೆ ಸಂಪೂರ್ಣ ಬೇರೆಯದೇ ರೀತಿಯಲ್ಲಿ ಐಎಎಸ್ ಅಧಿಕಾರಿಯಾಗಿ ಅವರ ಅಭಿನಯ ಅತ್ಯಂತ ಸಂಯಮ ಪೂರ್ಣವಾಗಿ ಬಂದಿತ್ತು.

ವಿಭಿನ್ನ ಪಾತ್ರಗಳನ್ನು ಅವರು ಆರಿಸಿಕೊಳ್ಳುತ್ತಿದ್ದ, ಅದನ್ನು ನಿಭಾಯಿಸುತ್ತಿದ್ದ ರೀತಿ ಗಮನಾರ್ಹ. ಹಾಗೆ ನೋಡಿದರೆ ಅವರ ಸುಮಾರು ಚಿತ್ರಗಳು ತೆಲುಗು ಹಿಟ್ ಚಿತ್ರಗಳ ರೀಮೇಕ್, ಆದರೆ ಅಪ್ಪು ಅದನ್ನು ತಮ್ಮದೇ ರೀತಿಯಲ್ಲಿ ಕನ್ನಡದ್ದಾಗಿಸಿಬಿಡುತ್ತಿದ್ದರು. ಅವರ ನಿಜಜೀವನದಲ್ಲಿ ಇರುವ ಹಾಗೆಯೇ ಬಹುಮಟ್ಟಿಗೆ ಕಾಣಿಸಿಕೊಂಡ ಚಿತ್ರ, ಬಿ ಎಂ ಗಿರಿರಾಜ್ ಅವರ ‘ಮೈತ್ರಿ’. ಅದರಲ್ಲಿ ಅವರು ಒಬ್ಬ ಕ್ವಿಜ್ ಮಾಸ್ಟರ್ ಜೊತೆಜೊತೆಯಲ್ಲಿ ಬಂಗಾರದಂತಹ ಮನುಷ್ಯನಾಗಿಯೂ ಕಾಣಿಸಿಕೊಂಡಿದ್ದರು.

ಕಲರ್ಸ್ ಚಾನೆಲ್ ನ ಆಫೀಸಿನಲ್ಲಿ ನಾನು ಪುನೀತ್ ಅವರಿಗಾಗಿ ಕಾಯುತ್ತಾ ಕುಳಿತಿದ್ದಾಗ ನನ್ನ ಮನಸ್ಸಿನಲ್ಲಿ ಇದೆಲ್ಲವೂ ಇತ್ತು. ಆ ಹೊತ್ತಿಗೆ ಕನ್ನಡದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿದ್ದ ಪುನೀತ್ ಅವರಿಗಾಗಿ ಕಾಯುತ್ತಿದ್ದಾಗ, ಆ ಸ್ಥಾನಕ್ಕೆ ತಕ್ಕ ಹಾಗೆ ಹಿಂದೆ ಮುಂದೆ ಜನ, ಅವರನ್ನು ರಕ್ಷಿಸುವ ಬಾಡಿಗಾರ್ಡ್ ಗಳು ಎಲ್ಲರನ್ನೂ ನಾನು ನಿರೀಕ್ಷಿಸುತ್ತಿದ್ದೆ. ಅಷ್ಟರಲ್ಲಿ ಬಾಗಿಲು ಒಂದಿಷ್ಟು ತೆರೆದುಕೊಂಡಿತು. ಯಾರೋ ತಲೆ ಮಾತ್ರ ಹಣಕಿ ಹಾಕಿ ನೋಡುತ್ತಿದ್ದರು. ನೋಡಿದರೆ ಮುಖದಲ್ಲಿ ಕಾಲಕ್ಕೊಂದು ರಿವೈಂಡ್ ಬಟನ್ ಒತ್ತಿದರೆ ಕಾಣುವಂತಹ ಅದೇ ನಗು… ಅವರು ‘ಪುನೀತ್ ರಾಜಕುಮಾರ್’ ಆಗಿರಲೆ ಇಲ್ಲ, ಅಲ್ಲಿದ್ದದ್ದು ಅದೇ ಅಪ್ಪು… ಕೋಣೆಯೊಳಗೆ ನಮ್ಮದೇ ಮನೆಮಗನಂತೆ ನಡೆದು ಬಂದಿದ್ದ ಅಪ್ಪು ಅದೆಷ್ಟು ಸರಳವಾಗಿ ಎಲ್ಲರ ಕೈಕುಲುಕಿದ್ದರು, ನಗುನಗುತ್ತಾ ಮಾತನಾಡಿದ್ದರು. ಅಂದು ಅಲ್ಲಿದ್ದ ಸ್ವಲ್ಪ ಸಮಯದಲ್ಲಿ ಎಲ್ಲರ ಹೃದಯವನ್ನೂ ಗೆದ್ದುಬಿಟ್ಟಿದ್ದರು. He was a true star and a charmer.

ಆ ಕಾರ್ಯಕ್ರಮಕ್ಕಾಗಿ ಕೆಲಸ ಮಾಡುವಾಗ ಶೂಟಿಂಗ್ ಇದ್ದಷ್ಟು ದಿನಗಳೂ ಅವರ ಜೊತೆಯಲ್ಲಿ ಒಡನಾಟ ಇರುತ್ತಿತ್ತು. ರಾಜಕುಮಾರ್ ಎಷ್ಟು ಸರಳ ವ್ಯಕ್ತಿ ಎನ್ನುವ ಬಗ್ಗೆ ಹಲವಾರು ದಂತಕಥೆಗಳನ್ನು ನಾನು ಓದಿದ್ದೆ, ಕೇಳಿದ್ದೆ. ಆದರೆ ನಾನು ಅದೇ ಸರಳತೆ ನೋಡಿದ್ದು ಅಪ್ಪುವಿನಲ್ಲಿ. ಅವರ ವ್ಯಕ್ತಿತ್ವಕ್ಕಿದ್ದ ಬಿಸುಪಿನ ಪ್ರಭಾವಳಿ ವಿಶಿಷ್ಟವಾದದ್ದು. ಇಡೀ ಯೂನಿಟ್ ಪಾಲಿಗೆ ಅವರು ‘ಅಪ್ಪು ಸರ್’! ಎಲ್ಲರೊಡನೆಯೂ ಅವರದ್ದು ಹೃದಯದ ಸಂಬಂಧ. ಎಲ್ಲರಿಗೂ ಅವರನ್ನು ಕಂಡರೆ ಅದೇನೋ ಅವರ್ಣನೀಯ ಕರುಳಸಂಬಂಧ. ಕಾರ್ಯಕ್ರಮದ ಪ್ರಶ್ನೆಗಳಿಗೆ ಅವರು ಅದೇ ಕುತೂಹಲ ತೋರಿಸುತ್ತಿದ್ದರು, ಎಲ್ಲರೊಡನೆಯೂ ಪ್ರೀತಿಯಿಂದ ಬೆರೆಯುತ್ತಿದ್ದರು. ಅಪ್ಪು ಎಂದಿಗೂ ಯಾವುದೇ ಎಲೀಟ್ ಎನ್ನುವ ಸೊಫೆಸ್ಟಿಕೇಶನ್ ಕೋಟ್ ಧರಿಸಲೇ ಇಲ್ಲ. ಗಾಜನೂರಿನ ಅದೇ ಸಹಜ ಮಣ್ಣಿನ ಗುಣ ಅವರ ಇರುವಿಕೆಯ ಅವಿಭಾಜ್ಯ ಅಂಗವಾಗಿತ್ತು.

ಕುವೆಂಪು ಅವರ ‘ರಾಮಾಯಣ ದರ್ಶನಂ’ ಕೊಳ್ಳಲು ಕಾಸು ಸಂಪಾದಿಸಲು ಬೆಟ್ಟಗುಡ್ಡ ಅಲೆದಾಡಿ ಹೂ ತಂದು ಶೆರ್ಲಿ ಮೇಡಂಗೆ ಕೊಡುವ ರಾಮು, ದುಡ್ಡು ಸೇರಿದಾಗ ಕಾಣುವುದು ಇರುಳಿನಲ್ಲಿ ಚಳಿಗೆ ನಡುಗುವ ತಮ್ಮ ತಂಗಿಯರನ್ನು. ಪುಸ್ತಕ ಬಿಟ್ಟು, ಕಂಬಳಿ ಕೊಳ್ಳುವ ರಾಮು ಯಾಕೋ ‘ರಾಮಾಯಣ ದರ್ಶನಂ’ ಪುಸ್ತಕ ಕಂಡಾಗಲೆಲ್ಲಾ ಇಂದಿಗೂ ನೆನಪಾಗುತ್ತಾನೆ.

ಕೋಟ್ಯಧಿಪತಿ ತಂಡದವರ ಬಳಿ ಅವರನ್ನು ಕುರಿತಾದ ಹಲವು ದಂತಕತೆಗಳಿದ್ದವು. ಎಷ್ಟೋ ಸಲ ನಿಜಕ್ಕೂ ಕಷ್ಟದಲ್ಲಿದ್ದವರು ಬಹುಮಾನದ ಹಣ ಗೆಲ್ಲದಿದ್ದಾಗ, ಅಥವಾ ಕಡಿಮೆ ಹಣ ಗೆದ್ದಾಗ ಅಪ್ಪು ಯಾರಿಗೂ ಕಾಣದಂತೆ ಅವರನ್ನು ಕರೆಸಿ ಅವರಿಗೆ ಹಣ ಸಹಾಯ ಮಾಡಿದ ಹಲವಾರು ಉದಾಹರಣೆಗಳಿದ್ದವು. ಹಾಟ್ ಸೀಟಿನಲ್ಲಿ ಕುಳಿತವರು ಯಾವುದೋ ಜೋಶ್ ನಲ್ಲಿ ಹಣವನ್ನು ಅಲ್ಲಿ ಅಷ್ಟು ದಾನ ಮಾಡುತ್ತೇನೆ, ಇಲ್ಲಿ ಇದಕ್ಕೆ ಕೊಡುಗೆಯಾಗಿ ಕೊಡುತ್ತೇನೆ ಎಂದು ಭಾವಾವೇಶದ ಮಾತನಾಡಿದಾಗ, ನೆಲಕ್ಕೆ ಸಹಜವಾದ ಕಾಮನ್ ಸೆನ್ಸ್ ನಲ್ಲಿ ‘ಮಾಡಿ, ಒಳ್ಳೆಯದೇ, ಆದರೆ ಕುಟುಂಬದ ಕಡೆಗೂ ಗಮನ ಕೊಡುವುದು ನಿಮ್ಮ ಜವಾಬ್ದಾರಿ’ ಎಂದು ವಾಸ್ತವದ ಕಡೆ ಗಮನ ಸೆಳೆಯುತ್ತಿದ್ದರು. ಎಷ್ಟೋ ಸಲ ಹಣದ ಅಗತ್ಯ ಇದ್ದವರು ತಪ್ಪು ಉತ್ತರ ಹೇಳುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗಿಬಿಟ್ಟರೆ ಅಲ್ಲಿದ್ದ ನಮಗೆಲ್ಲಾ ಗೊತ್ತಾಗುವ ಹಾಗೆ ಅವರು ಪರಿತಪಿಸಿಬಿಡುತ್ತಿದ್ದರು. ಅದೊಂದು ವಿಷಯದಲ್ಲಿ ಕ್ವಿಜ್ ಮಾಸ್ಟರ್ ಗೆ ಬೇಕಾದ ನಿರ್ಮಮಕಾರದ ಗುಣ ಅವರಿಗೆ ಎಂದೂ ಸಾಧ್ಯವಾಗಲೇ ಇಲ್ಲ. ಸ್ಪರ್ಧಿಗಳು ತಮ್ಮ ಊರಿನ ವಿಷಯ ಹೇಳುವಾಗ ಸುಮಾರು ಸಲ ಅಲ್ಲಿನ ತಿಂಡಿಗಳ ವಿಶೇಷ ಹೇಳುತ್ತಿದ್ದರು. ಬಿರ್ಯಾನಿ ಮತ್ತು ಮಟನ್ ಸಾರು, ಹುರಳಿ ಕಟ್ಟಿನ ಸಾರಿನ ಬಗ್ಗೆ ಅತ್ಯಂತ ಪ್ರೀತಿಯಿಂದ ಬಾಯಿ ಚಪ್ಪರಿಸಿಕೊಂಡು ಮಾತನಾಡುತ್ತಿದ್ದರು. ಒಳ್ಳೆ ಊಟ ತಿಂಡಿಯ ಬಗ್ಗೆ ಅವರಿಗಿದ್ದ ಪ್ರೀತಿ ನೋಡುವಾಗಲೇ ಗೊತ್ತಾಗುತ್ತಿತ್ತು. ಅಪ್ಪನ ತರಹ ಅವರೂ ಒಳ್ಳೆಯ ಊಟವನ್ನು ಆಸ್ವಾದಿಸುವ ರಸಿಕರು.

ಮನೆಯ ಕಿರಿಮಗನಾಗಿದ್ದ ಅಪ್ಪು ಎಲ್ಲರಿಗೂ ಅಚ್ಚುಮೆಚ್ಚು. ಮನೆಯ ಎಲ್ಲರ ಬಗೆಗೂ ಅಪ್ಪುವಿಗೆ ಅದೆ ಪ್ರೀತಿ. ಆದರೆ ಅಪ್ಪುವಿನಲ್ಲಿ ಒಂದು ವಿಶೇಷ ದೈವಿಕ ಗುಣವಿತ್ತು. ಅವರು ಅಜಾತಶತ್ರು. ಮನೆಯಲ್ಲಿ, ಸಂಬಂಧದಲ್ಲಿ, ಚಿತ್ರರಂಗದಲ್ಲಿ, ಕೆಲಸ ಮಾಡುವ ಯೂನಿಟ್ ನಲ್ಲಿ ಎಲ್ಲೆಡೆಯೂ ಅವರು ಅಜಾತಶತ್ರು. ಯಾರೆಂದರೆ ಯಾರಬಗ್ಗೆಯೂ ಅವರಿಗೆ ಸಿಟ್ಟಿಲ್ಲ, ಯಾರಿಗೂ ಅವರನ್ನು ಕುರಿತ ಕಹಿ ನೆನಪಿಲ್ಲ. ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಕಲಾವಿದರೊಂದಿಗೂ ಅವರದು ಅತ್ಯಂತ ಸೌಹಾರ್ದದ ಸ್ನೇಹ ಸಂಬಂಧ.

ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹ ಹಾಡುತ್ತಿದ್ದರು, ಆದರೆ ಹಾಡುಗಾರಿಕೆಯಲ್ಲಿ ನಟನೆಗೆ ಸಮಾನಾಂತರವಾಗಿ ಕೆಲಸ ಮಾಡಿದವರು ಪುನೀತ್. ಮೊದಮೊದಲು ಅವರು ಹಾಡುವ ಹಾಡುಗಳ ಬಗ್ಗೆ ತುಂಬಾ ಚೂಸಿಯಾಗಿದ್ದರಂತೆ. ಆಗ ಪಾರ್ವತಮ್ಮನವರು ಒಮ್ಮೆ ‘ಅದೊಂದು ಕಾಯಕ ಕಂದಾ, ಅದನ್ನು ಕಾಯಕವನ್ನಾಗಿಯೇ ನೋಡು. ಚೆನ್ನಾಗಿ ಹಾಡುವುದು ಮಾತ್ರ ನಿನ್ನ ಕರ್ತವ್ಯ’ ಎಂದು ಹೇಳಿದ ಕಿವಿಮಾತನ್ನು ಕೇಳಿ ಗಾಯನವನ್ನೂ ವೃತ್ತಿಯಾಗಿಯೇ ತೆಗೆದುಕೊಂಡರಂತೆ.

ಆರೋಗ್ಯದ ಬಗ್ಗೆ, ದೈಹಿಕ ಫಿಟ್ನೆಸ್ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದದ್ದು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಂತೂ ಅವರ ವ್ಯಾಯಾಮದ ವೀಡಿಯೋಗಳು ಅವರ ಇನ್ ಸ್ಟಗ್ರಾಂ ಅಕೌಂಟಿನಲ್ಲಿ ಪದೆ ಪದೇ ಅಪ್ಡೇಟ್ ಆಗುತ್ತಿದ್ದವು. 20-25ರ ಹುಡುಗರ ಮಟ್ಟಕ್ಕೆ 45 ರ ಅಪ್ಪು ವ್ಯಾಯಾಮ ಮಾಡುತ್ತಿದ್ದರು. ಸೈಕ್ಲಿಂಗ್ ಅವರ ಅತ್ಯಂತ ಪ್ರೀತಿಯ ಹವ್ಯಾಸ. ಇಷ್ಟೆಲ್ಲಾ ಕಾಳಜಿ ವಹಿಸುತ್ತಿದ್ದ ಅಪ್ಪುವಿನ ಹೃದಯ ಹೀಗೆ ಹಠಾತ್ತಾಗಿ ಕೈಚೆಲ್ಲಿ ಕುಳಿತು ಬಿಡುತ್ತದೆ ಎಂದು ಹೇಗೆ ನಂಬಲಿ? ನಿನ್ನೆ ರಾತ್ರಿ ಸ್ವಲ್ಪ ವ್ಯತ್ಯಯ ಆದಾಗ ತಕ್ಷಣ ಅವರು ಆಸ್ಪತ್ರೆಗೆ ಹೋಗಬೇಕಿತ್ತೆ? ‘ಉಹೂ ಅವರು ನಮ್ಮೊಂದಿಗೆ ಊಟ ಮಾಡಿದರು, ಆಗ ಆರಾಮಾಗೇ ಇದ್ದರು’ ಎಂದು ಗುರುಕಿರಣ್ ಹೇಳುತ್ತಾರೆ. ಬೆಳಗ್ಗೆ ಏನಾದರೂ ಸೂಚನೆ ಸಿಕ್ಕಿತ್ತೆ? ಎದ್ದು ಮತ್ತೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡಬಾರದಾಗಿತ್ತೆ? ಇಷ್ಟು ಚೆನ್ನಾಗಿ ವ್ಯಾಯಾಮ ಮಾಡಿಕೊಳ್ಳುವ ನನಗೆ ಏನು ತಾನೆ ಆಗಲು ಸಾಧ್ಯ ಎಂದು ಅವರು ಏಮಾರಿಬಿಟ್ಟರೆ? ವಿಧಿ ಇದೆಂತಹ ಮರಾಮೋಸ ಮಾಡಿಬಿಟ್ಟಿತು? ಬೆಳಗ್ಗೆ ಬೆಳಗ್ಗೆ ಗಾಜನೂರನ್ನು ನೆನೆಪಿಸಿಕೊಂಡು ಇವತ್ತೇ ಅಲ್ಲಿಗೆ ಹೋಗಬೇಕು ಎಂದಿದ್ದರಂತೆ. ಅದ್ಯಾವ ಮಣ್ಣಿನ ಕಣ್ಣು ಕರೆಯುತ್ತಿತ್ತೋ ಅವರನ್ನು?

ಬಹಳ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಪ್ರವಾಸ ಎಂದರೆ ಅಪ್ಪುಗಿದ್ದ ಅದಮ್ಯ ಪ್ರೀತಿ. ಆಗಷ್ಟೇ ಮಾಚುಪಿಚು ಪ್ರವಾಸ ಮುಗಿಸಿ ಬಂದಿದ್ದ ಅವರಲ್ಲಿ ಅಲ್ಲಿನ ಬಗ್ಗೆ ನೂರು ಕಥೆಗಳಿದ್ದವು. ಅವರು ಆಗ ಹೇಳಿದ ಪ್ರಕಾರ ಹಿಮಾಲಯದ ಚಾರಣ ಅವರ ಒಂದು ಕನಸು. ಮನೇಲಿ ಒಪ್ಪಿಗೆ ಕೊಡೋಲ್ಲ, ಆದರೂ ಹೋಗೇಹೋಗ್ತೀನಿ ಅಂದಿದ್ದರು. ಚಿತ್ರೋದ್ಯಮದ ಇನ್ನೊಂದು ಮಗ್ಗುಲಿನಲ್ಲೂ ಕೆಲಸ ಮಾಡಲೆಂದು ಇವರು ಸ್ಥಾಪಿಸಿದ್ದು ‘ಪಿ ಆರ್ ಕೆ ಬ್ಯಾನರ್’. ಭಿನ್ನ ಧ್ವನಿಯ ಚಿತ್ರಗಳಿಗೆ ಅಲ್ಲಿ ತಾವಿತ್ತು. ಅನೇಕ ಹಾಡುಗಳು ಅಲ್ಲಿ ಬಿಡುಗಡೆಯಾಗಿದ್ದವು. ಮೊನೆಮೊನ್ನೆ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ರಾಜಕುಮಾರ್ ಅವರ ಸ್ಮರಣೆಯ ವಿಗ್ರಹಗಳ ಬಗ್ಗೆ ವಿಶೇಷವಾದ ಕಿರುಚಿತ್ರವೊಂದು ಅದೇ ಬ್ಯಾನರ್ ನಲ್ಲಿ ತಯಾರಾಗಿತ್ತು. ಅದರಲ್ಲೂ ಕೆಲಸ ಮಾಡಿದ್ದ ನಾನು ಈ ಸಲ ಮತ್ತೆ ‘ಕೋಟ್ಯಧಿಪತಿ’ ಶೂಟಿಂಗ್ ಶುರುವಾದಾಗ ಅವರಿಗೆ ಅದನ್ನು ನೆನಪಿಸಬೇಕೆಂದಿದ್ದೆ. ಆದರೆ ಅದನ್ನು ಕೇಳಲು ನೀವೇ ಇಲ್ಲವಲ್ಲ? ಮತ್ತೆಂದೂ ಆ ಕುರ್ಚಿಯಲ್ಲಿ ನೀವು ಕೂರುವುದಿಲ್ಲ, ಪ್ರಶ್ನೆಗೆ ಉತ್ತರ ಗೊತ್ತಿದ್ದಾಗ ನಿಮ್ಮ ಮುಖದಲ್ಲಿ ತಡೆಹಿಡಿಯಲಾಗದಂತೆ ಉಕ್ಕುತ್ತಿದ್ದ ಆ ತುಂಟನಗುವನ್ನು ನೋಡಲಾಗುವುದಿಲ್ಲ ಎನ್ನುವುದನ್ನು ಹೇಗೆ ಒಪ್ಪಿಕೊಳ್ಳಲಿ?

ಕಾರ್ಯಕ್ರಮದ ಕಡೆಯ ದಿನ ಎಲ್ಲರೂ ಎಲ್ಲರಿಗೂ ವಿದಾಯ ಹೇಳುತ್ತಿದ್ದರು. ಮತ್ತೆ ಸಿಗೋಣ ಎಂದು ಹೇಳುತ್ತಾ ಕೈಕುಲುಕುತ್ತಿದ್ದೆವು. ಹಿಂಜರಿಯುತ್ತಲೇ ಮೊಬೈಲ್ ಮುಂದೆ ಚಾಚಿ, ‘ಒಂದು ಫೋಟೋ?’ ಎಂದು ಕೇಳಿದ್ದೆ, ‘ಅಯ್ಯೋ ಅದಕ್ಕೇನು, ಬನ್ನಿ ಮೇಡಂ’ ಎಂದವರೇ ಅದೇ ಮನದಾಳದ ನಗುವಿನೊಂದಿಗೆ ಪಕ್ಕದಲ್ಲಿ ನಿಂತು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದರು. ಅವರೊಂದಿಗೆ ಕೈಕುಲುಕಿದ ನಂತರ ಅಂಗೈನಲ್ಲಿ ಅದೇ ಬಿಸುಪು ಉಳಿದಿತ್ತು. ಅವರ ಇಷ್ಟಗಲ ನಗು, ಅಪ್ಪನ ಮೂಗು ಇದ್ದ ಆ ಫೋಟೋ ನೋಡಿದಾಗೆಲ್ಲಾ ಸಂತಸ ತುಂಬಿ ಬರುತ್ತಿತ್ತು. ಇನ್ನು ಮುಂದೆ ಎಂದೆಂದಿಗೂ ಈ ಫೋಟೋ ನನ್ನಲ್ಲಿ ಒಂದು ದುಃಖದ ನೆನಪಾಗಿಯೇ ಉಳಿದುಬಿಡುತ್ತದೆ. ಇಲ್ಲ ಅಪ್ಪು ನಿಮಗೆ ವಿದಾಯ ಹೇಳಲಾಗುತ್ತಿಲ್ಲ, ಇದನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುತ್ತಿದ್ದೇವೆ ನಿಮ್ಮ ನೆನಪಾಗಿ. ಉಹೂ, ನೀವು ಹೀಗೆ ಹೋಗಬಾರದಿತ್ತು ಅಪ್ಪು…