ಅಚ್ಚಕನ್ನಡದ ಲೇಖಕಿ ಉಮಾರಾವ್ ಈಗ ಅಮೇರಿಕಾದ ಚಿಕ್ಕ ನಗರಿ ಪಿವಾಕಿಯಲ್ಲಿ ರಜೆಯಲ್ಲಿದ್ದಾರೆ. ಅವರು ಅಲ್ಲಿಂದ ನಿಮಗಾಗಿ ಬರೆಯುವ ಓಲೆ ಹದಿನೈದು ದಿನಗಳಿಗೊಮ್ಮೆಇಲ್ಲಿ ಪ್ರಕಟವಾಗಲಿದೆ.

ನನ್ನ ಮಗನ ಮನೆಯಿರುವುದು ಮಿಲ್ ವಾಕಿ ಪಟ್ಟಣದಿಂದ ಸುಮಾರು ೨೦ ನಿಮಿಷಗಳಲ್ಲಿ ತಲುಪಬಹುದಾದ ಪಿವಾಕಿ ಎಂಬ ಪುಟ್ಟ ಊರಿನಲ್ಲಿ. ಇಲ್ಲಿನವರು ಇದನ್ನು ಪಿವಾಕಿ ವಿಲೇಜ್ ಎಂದು ಕರೆದರೂ ಭಾರತದಿಂದ ಬಂದವರಿಗೆ ಅದನ್ನು ಹಳ್ಳಿಯೆನ್ನುವ ಯಾವ ಕುರುಹುಗಳೂ ಕಾಣಬರುವದಿಲ್ಲ. ೧೫೦೦೦ಕ್ಕೂ ಕಡಿಮೆಯಿರುವ ಅದರ ಜನಸಂಖ್ಯೆಯೊಂದನ್ನು ಬಿಟ್ಟು!

ಈ ಊರಿಗೆ ಪಿವಾಕಿ ಎಂಬ ಹೆಸರು ಬಂದಿರುವುದು ಇಲ್ಲಿರುವ ಮನೋಹರ ಸರೋವರದಿಂದ. ಹಾಗೆ ನೋಡಿದರೆ ನೂರಾರು ವರ್ಷಗಳಿಂದ ಇಲ್ಲಿ  ಜನವಸತಿಗೆ ಆಸರೆ ಕೊಟ್ಟಿರುವುದೇ ಈ ಸರೋವರ. ಮೊದಲು ಮೂಲನಿವಾಸಿಗಳು, ನಂತರ ಇಲ್ಲಿಂದ ಅವರನ್ನು ತಳ್ಳಿ ಹಾಕಿ ತಳ ಊರಿದ ಯುರೋಪಿಯನ್ನರು, ಈಗಲೋ ಚೈನಾ, ಭಾರತ, ದಕ್ಷಿಣ ಅಮೆರಿಕಾ ಹೀಗೆ ಎಲ್ಲಾ ಕಡೆಯವರು. ಆದರೆ ಅಷ್ಟು ವರ್ಷಗಳ ಹಿಂದೆ ಇಂಥಾ ಕಾವ್ಯಮಯ ಹೆಸರಿಟ್ಟ ಮೂಲ ನಿವಾಸಿಯ ಒಂದು ಮುಖವೂ ಇಲ್ಲ. ಈಗ ಈ ಸರೋವರದ ಸುತ್ತ ದಟ್ಟ ಮರಗಳು. ಪುಟ್ಟ ಮನೆಗಳು.  ಪ್ರತಿ ಮನೆ ಮುಂದೆ ಕಟ್ಟಿ ಹಾಕಿಟ್ಟಿರುವ ದೋಣಿಗಳು ಈಜಲು ತವಕದಿಂದ ನೀಲ ನೀರಿಗೆ ಜಿಗಿಯಲು ತಯಾರಾಗಿರುವ ಮಕ್ಕಳಂತೆ ಕಾಣುತ್ತಿದ್ದವು…

ಪಿವಾಕಿ ಸರೋವರದ ಬಗ್ಗೆ ಹಲವಾರು ದಂತಕತೆಗಳಿವೆ. ಮೂಲನಿವಾಸಿಗಳ ಭಾಷೆಯಲ್ಲಿ “ಪಿವಾಕಿ” ಎಂದರೆ ಕಪ್ಪೆಚಿಪ್ಪುಗಳ ಸರೋವರ ಎಂದು ಅರ್ಥವಂತೆ. ಈಗಲೂ ಫಳಫಳ ಹೊಳೆಯುವ ಇದರ ಮರಳಿನ ದಂಡೆಯಲ್ಲಿ ಹಿಂದೊಮ್ಮೆ ಕಪ್ಪೆಚಿಪ್ಪುಗಳು ತುಂಬಿ ಹೋಗಿದ್ದುವಂತೆ. ಹಾಗಾಗಿ ಈ ಹೆಸರು ಬಿತ್ತಂತೆ.

ಇಂದಿಗೂ ಕೆಲ ಪರಿಸರ ಪ್ರಿಯರು, ಸಾಹಸಿಗಳು ಬಿಸಿಲು ಕಾಲದಲ್ಲಿ ಈ ಸರೋವರದ ತಳಕ್ಕೆ ಮುಳುಗಿ ಅಲ್ಲಿ ತಿರುಗಾಡಲು ಬರುವ ಜನ ಎಸೆದಿರಬಹುದಾದ ಕಸ, ಕೋಕ್ ಕ್ಯಾನ್ ಗಳು, ಮಕ್ಕಳ ಬೂಟುಗಳು, ಹರಿದ ಗಾಳಗಳು, ಖಾಲಿ ಬಿಯರ್ ಬಾಟಲುಗಳನ್ನು ತೆಗೆದು ಸ್ವಚ್ಚ ಮಾಡುತ್ತಾರೆ.

ಜೊತೆಗೇ ಪ್ರತಿವರ್ಷವೂ ನೂರಾರು ವರ್ಷಗಳ ಹಿಂದಿನ ಪಳೆಯುಳಿಕೆಗಳು ಅವರಿಗೆ ಸಿಗುವುದುಂಟು. ಒಬ್ಬನಿಗೆ ಸಿಕ್ಕ ಒಳಗಡೆ ಟ್ರೇನ್ ಟಿಕೆಟ್ ಇದ್ದ ೧೦೦ ವರ್ಷ ಹಿಂದಿನ ನೀಲಿ ಗಾಜಿನ ಬಾಟಲು ೮೦೦ ಡಾಲರಿಗೆ ಮಾರಾಟವಾಯಿತಂತೆ. ಪಿವಾಕಿ ಸರೋವರದ ಒಂದು ಅಂಚಿನಲ್ಲಿರುವ “ಸ್ಮೋಕೀಸ್”ಎಂಬ ಬೇಟ್ ಶಾಪಿನ ಮಾಲಿಕನಿಂದ ಇಂಥಾ ಕತೆಗಳು ಹಲವಾರು ಸಿಗುತ್ತವೆ. ಅವನು ಮೀನುಗಾರಿಕೆಗೆ ಬೇಕಾದ ಅಷ್ಟು ಪರಿಕರಗಳೂ, ದೊಡ್ಡ ಮೀನುಗಳನ್ನು ಗಾಳಕ್ಕೆ ಸೆಳೆಯುವ ಸಣ್ಣ ಮೀನುಗಳನ್ನೂ  ಮಾರಾಟ ಮಾಡುತ್ತಾನೆ. ಅವನು ನೂರು ವರ್ಷಗಳಿಗೆ ಹಿಂದೆ ಮುಳುಗಿದ ಸಣ್ಣ ಹಡಗೊಂದರ ಚಲಿಸುವ ನೆರಳು, ಅದು ಬಲಿ ತೆಗೆದುಕೊಂಡ ನಾವಿಕರ ಮಾತುಕತೆ, ಅವರ ಹಾಡುಗಳು ಕರಾಳ ರಾತ್ರಿಗಳಲ್ಲಿ ನಿಚ್ಚಳವಾಗಿ ಕಾಣುತ್ತದೆಯೆಂದು ಹೇಳುತ್ತಾನೆ.

ಇಷ್ಟು ಇತಿಹಾಸವಿರುವ ಈ ಚಂದದ ನೀಲಿ ಸರೋವರ ಅದಾವುದರ ನೆನಪೇ ಇಲ್ಲದಿರುವಂತೆ ಮುಗ್ಧವಾಗಿ ಇಂದಿಗೂ ಬೆಳಗು ಸಂಜೆ ಮುಗಿಲ ಕೆಂಪು ನೇರಳೆ ಬಣ್ಣಗಳನ್ನು ಪ್ರತಿಫಲಿಸುತ್ತಾ ಜನರಿಗೆ ಮೋಡಿ ಹಾಕುತ್ತಾ ಹೋಗುತ್ತಿದೆ. ಫಾಲ್ ನಲ್ಲಿ ಚಿನ್ನದೆಲೆಗಳ ಹೊತ್ತು ನಿಂತ ಮರಗಳ ಸೌಂದರ್ಯವನ್ನು ದ್ವಿಗುಣಗೊಳಿಸುತ್ತಾ, ವಸಂತದಲ್ಲಿ ಚಿಗುರಿ ನಿಂತ ರಾಶಿ ರಾಶಿ ಹಸಿರು, ಬಣ್ಣಬಣ್ಣದ ಹೂಗಳ ಸೊಬಗ ತನ್ನಲ್ಲಿ ಕಾಣುತ್ತಾ ಖುಷಿಯಾಗುತ್ತಿದೆ. ಇಲ್ಲಿನ ಕೊರೆಯುವ ಚಳಿಯಲ್ಲೋ ಪೂರ್ತಿ ಹೆಪ್ಪುಗಟ್ಟಿ ಬೆಳ್ಳಿಯ ತಗಡಿನಂತೆ ತಿಂಗಳ ಬೆಳಕಿನಲ್ಲಿ ಹೊಳೆಯುತ್ತಾ ಕ್ರೀಡಾಪ್ರೇಮಿಗಳನ್ನು ಕೆಣಕಿ ತನ್ನೆಡೆ ಸೆಳೆಯುತ್ತಿದೆ. ನೆಲದ ಐಸಿನಲ್ಲಿ ರಂಧ್ರ ಕೊರೆದು ಪುಟ್ಟ ಕ್ಯಾಬಿನ್ನುಗಳನ್ನು ಕಟ್ಟಿಕೊಂಡು, ಎಷ್ಟೋ ಅಡಿಗಳು ಕೆಳಗಿರುವ ನೀರಿನಲ್ಲಿ ಗಂಟೆಗಟ್ಟಳೆ ಮೀನು ಹಿಡಿಯುವವರು ಕೆಲವರು. ಸರೋವರದ ಮೇಲೆ ತಮ್ಮ ಜೀಪ್ ಚಲಾಯಿಸಿಕೊಂಡು ಸೀದ ಎದುರು ತೀರದಲ್ಲಿರುವ ಡೌನ್ ಟೌನ್ ಗೆ ಹೋಗುವವರು ಗಟ್ಟಿ ಎದೆಯವರು. ಐಸ್ ಕೆತ್ತಿ ಸುಂದರ ಪುತ್ತಳಿಗಳನ್ನು ನಿರ್ಮಿಸಿ ಖುಷಿ ಪಡುವ ಕಲಾವಿದರು. ಅಲ್ಲದೆ ಐಸ್ ಸ್ಕೇಟಿಂಗ್ ಮಾಡುತ್ತಾ ಮೋಜು ಮಾಡುವ ಯುವಕ ಯುವತಿಯರು.

ನಾವು ಈ ಸಲ ಇಲ್ಲಿಗೆ ಬಂದಾಗ ಆಗಲೇ ಸುತ್ತಾಮುತ್ತಾ ಊರೇ ವಸಂತನ ಆಗಮನಕ್ಕೆ ಸಂಭ್ರಮಿಸುತ್ತಿತ್ತು. ಸೂರ್ಯ ರಷ್ಮಿಯ ಮೊದಲ ಬಿಸುಪಿನ ಸ್ಪರ್ಶಕ್ಕೆ ಹೂ ಸುರಿಸಿದ ಚೆರ್ರಿ ಬ್ಲಾಸಮ್ ಮರಗಳು ಈಗ ಮೌನವಾಗಿ ಚಿಗುರುತ್ತಿದ್ದುವು.. ತಿಂಗಳುಗಟ್ಟಳೆ ನಿದ್ರಿಸಿದ್ದ ಹುಲ್ಲು ಹಾಸುಗಳು ಹೊರಳಿ ಮೈಮುರಿದು ಹಸಿರಾಗುತ್ತಿದ್ದವು.. ಬಣ್ಣಬಣ್ಣದ ಟ್ಯುಲಿಪ್ ಹೂಗಳು ಎಲ್ಲೆಲ್ಲೂ ಅರಳಿದ್ದುವು. ನೂರಾರು ಸ್ನೋ ಗೀಜ್ ಪಕ್ಷಿಗಳು ಕವಕವ ಮಾಡುತ್ತಾ ಜೊತೆಯಾಗಿ ದೂರದ ತಮ್ಮ ಊರಿಗೆ ಮರಳುತ್ತಿದ್ದುವು..

ಮಕ್ಕಳು ಭಾರದ ಜ್ಯಾಕೆಟ್ಟುಗಳ ಭಾರದಿಂದ ಮುಕ್ತರಾಗಿ ಹಗುರಾಗಿ ಸ್ಕೂಲು ಬಸ್ಸು ಹತ್ತುತ್ತಿದ್ದರು. ಪಾರ್ಕುಗಳಲ್ಲಿ ಜನ ಕಾಫಿ ಕುಡಿಯುತ್ತಾ ಬಿಸಿಲು ಕಾಸುತ್ತಿದ್ದರು.. ಕಲಾವಿದರು ಮಾಡಿಟ್ಟ ಐಸಿನ ಕಲಾಕೃತಿಗಳು ನಿಧಾನವಾಗಿ ಕರಗಿ ನೀರಾಗಿ ಮತ್ತೆ ಸರೋವರ ಸೇರುತ್ತಿದ್ದವು. ನಾವೆಲ್ಲ ಮನೆ ಹಿಂದಿನ ಹುಲ್ಲು ಹಾಸಿನ ಮೇಲೆ ಕೂತು ಸೂರ್ಯಾಸ್ತ ನೋಡುತ್ತಾ, ಬರಬಹುದಾದ ಮಿಂಚುಹುಳುಗಳ ದಂಡಿಗಾಗಿ ಕಾಯುತ್ತಿದ್ದೆವು.

ಆ ಸುಂದರ ಮೌನದ ವಾತಾವರಣದಲ್ಲಿ ಪಕ್ಕದ ಮನೆ ಕಾಂಪೌಂಡಿನಿಂದ ಬರುತ್ತಿದ್ದ ಟಪ್ ಟಪ್ ಶಬ್ದ ಏನೆಂದು ಅರ್ಥವಾಗದೆ ಸುತ್ತಮುತ್ತ ನೋಡಿದೆವು. ಸರ್ಕಾರೀ ಕೆಲಸದಲ್ಲಿರುವ ಅಪ್ಪ ತನ್ನ ಮಕ್ಕಳ ಜೊತೆ ಆಟವಾಡುತ್ತಿದ್ದ.. ಆರು ಮತ್ತು ಎಂಟು ವರ್ಷದ ಇಬ್ಬರು ಹುಡುಗರು. ಅವರ ಕೈಗಳಲ್ಲಿ ಏರ್ ಗನ್ ಕೊಟ್ಟು ಎದುರಿಗೆ ಬಿಯರ್ ಕ್ಯಾನ್ಗಳ ಚಿತ್ರವಿದ್ದ ದೊಡ್ಡ ರಟ್ಟಿನ ಕಾರ್ಟನ್ ಒಂದನ್ನಿಟ್ಟು, ಅದಕ್ಕೆ ಗುರಿ ಇಟ್ಟು ಹೊಡೆಯಲು ಹೇಳಿಕೊಡುತ್ತಿದ್ದ. ಮಕ್ಕಳು ಕೇಕೆ ಹಾಕುತ್ತಾ ಒಂದಾದ ಮೇಲೊಂದರಂತೆ ಶಾಟ್ ಹೊಡೆಯುತ್ತಿದ್ದರು.

ಆ ಕ್ಷಣದಲ್ಲಿ ಎಲ್ಲವೂ ಮಂಕಾಗಿತ್ತು. ಇಂದೂ ಮನೆ ಮುಂದಿನ ಮರಗಳಿಗೆ ಹಳದಿ ರಿಬ್ಬನ್ ಕಟ್ಟಿ ಇರಾಕ್ ಯುದ್ಧ ಭೂಮಿಗೆ ಹೋಗಿರುವ ಮಗನ ಬರವಿಗಾಗಿ ಕಾಯುತ್ತಿರುವ ಅಷ್ಟೊಂದು ತಾಯಿಯರ ನೆನಪಾಯಿತು.

ಮಿಲ್ವಾಕಿ ಓಲೆ-೨: ಸ್ವೀಟಿ ಪೈ ಎಂಬ ಆಮೆ ಮರಿ

ಗಾಳಿ, ನೀರು, ಆಹಾರಗಳು ಸಮೃದ್ಧವಾಗಿರುವ ಅಮೆರಿಕಾ ದೇಶದಲ್ಲಿ ಪಕ್ಷಿಗಳೂ, ಪ್ರಾಣಿಗಳೂ, ಗಿಡಗಂಟೆಗಳೂ, ಮನುಷ್ಯಜೀವಿಗಳೂ ಹುಲುಸಾಗಿ ಬೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸುತ್ತಮುತ್ತ ತಿರುಗಾಡ ಹೋದರೆ ಹಸಿರು ರಾಶಿಯ ಸಡುವೆ ಕಂದು ಬಣ್ಣದ ಗುಂಡುಗುಂಡು ಮೊಲಗಳು, ಬೆನ್ನ ಮೇಲೆ ಪಟ್ಟಿ ಇಲ್ಲದ ಅಳಿಲುಗಳು (“ಅಮ್ಮ, ಇಂಡಿಯಾದ ಅಳಿಲುಗಳಂತೆ ಇಲ್ಲಿನ ಅಳಿಲುಗಳಿಗೆ ಬೆನ್ನಮೇಲೆ ಪಟ್ಟಿಗಳೇಕಿಲ್ಲ?” ಎಂಬ ಮಗಳ ಪ್ರಶ್ನೆಗೆ ನನ್ನ ಗೆಳತಿ  “ಅಲ್ಲಿ ರಾಮ ಬಂದಿದ್ದನಲ್ಲ.. ಲಂಕೆಗೆ ಸೇತುವೆ ಕಟ್ಟಲು ತನಗೆ ಸಹಾಯ ಮಾಡಿದ್ದಕ್ಕಾಗಿ ಅವುಗಳ ಬೆನ್ನು ತಟ್ಟಿದ, ಇಲ್ಲಿ ರಾಮ ಬಂದಿರಲಿಲ್ಲ ಮರಿ..” ಎಂದು ಸಮಾಧಾನ ಮಾಡಿದ್ದು ನೋಡಿ ನಗು ಬಂದಿತ್ತು!), ಹೊಳೆಯುವ ಕಂದು ಮೈಯ್ಯ ಸುಂದರ ಜಿಂಕೆಗಳು, ನಮ್ಮಲ್ಲಿಗಿಂತ ಹೆಚ್ಚು ಕಪ್ಪಾಗಿರುವ ಹೆಚ್ಚು ಕರ್ಕಶವಾಗಿ ಕೂಗುವ ಕಾಗೆಗಳು, ಥರಥರಾ ಬಣ್ಣಬಣ್ಣದ ಪಕ್ಷಿಗಳು, ಮಿಂಚು ಹುಳುಗಳ ದಂಡುಗಳು,ಮರಿಗಳೊಡನೆ ಸರೋವರದಲ್ಲಿ ವಿಹರಿಸುವ ಬಾತುಗಳು ಬೇಸಗೆ ಬರುತ್ತಿದ್ದಂತೆ ಎಲ್ಲೆಲ್ಲೂ ಎದುರಾಗುತ್ತವೆ. ಮನಸ್ಸು ಅರಳುತ್ತದೆ.

ಕೆಲವು ದಿನಗಳ ಹಿಂದೆ ನನ್ನ ಮೊಮ್ಮಕ್ಕಳು ಧ್ರುವ, ಇಶಾನ್ ಮತ್ತು ನಮ್ಮ ಗ್ರೇ ಹೌಂಡ್ ತಳಿಯ ನಾಯಿ ಫಜಿಯೊಂದಿಗೆ ವಾಕ್ ಹೋಗುತ್ತಿದ್ದಾಗ ನಮ್ಮ ಭೇಟಿ ಪುಟಾಣಿ ಪ್ರಾಣಿಯೊಂದರೊಡನೆ ಆಯ್ತು. ನಮ್ಮ ದಾರಿಗಡ್ಡವಾಗಿ ರುಪಾಯಿ ಅಗಲ ಪ್ರಾಣಿಯೊಂದು ನಿಧಾನವಾಗಿ ಹರಿದು ಹೋಗುತ್ತಿತ್ತು. ಅದನ್ನು ಮೊದಲು ಕಂಡವನು ಇಶಾನ್. ನಿಧಾನವಾಗಿ ತೆವಳುತ್ತಿದ್ದ ಅದು ಯಾರದಾದರೂ ಕಾಲಿನ ಕೆಳಗೋ ವಾಹನದ ಕೆಳಗೋ ಸಿಕ್ಕಿಕೊಳ್ಳುವುದು ಖಂಡಿತವಾಗಿತ್ತು. ಅಷ್ಟರಲ್ಲಿ “ಇಟ್ಸ್ ಅ ಟರ್ಟಲ್”‘ ಎಂದು ಉದ್ಗರಿಸಿದ ಅವನು ಅದನ್ನು ಹಗುರಾಗಿ ಎತ್ತಿಕೊಂಡು ಅಂಗೈಯ್ಯಲ್ಲಿ ಕೂರಿಸಿ ಅದರ ಜೊತೆಗಾತಿಗಳಿಗಾಗಿ ಸುತ್ತಮುತ್ತ ಹುಡುಕತೊಡಗಿದ. ಸ್ವಲ್ಪ ಹೊತ್ತಿನಲ್ಲೇ ಅದು ಒಂಟಿಯಾಗಿರುವುದನ್ನು ಕಂಡು “ಅಪ್ಪ ಟರ್ಟಲ್, ಅಮ್ಮ ಟರ್ಟಲ್” ಮತ್ತು ತನ್ನ ಎಲ್ಲರಿಂದ ದೂರಾಗಿ ಬಂದಿರುವ ಈ ಮರಿಯನ್ನು ಮನೆಗೆ ತೆಗೆದುಕೊಂಡು ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದ. ಜೊತೆಗೆ ಆ ಕ್ಷಣದಲ್ಲೇ ಅದಕ್ಕೆ ಸ್ವೀಟಿಪೈ ಎಂಬ ಹೆಸರೂ ಕೊಟ್ಟುಬಿಟ್ಟಿದ್ದ.

ಮೊದಲು ನಮಗೆ ಆ ಆಮೆಮರಿ ಆಗಲೇ ಸುತ್ತಮುತ್ತ ಮೂಸು ನೋಡುತ್ತಿದ್ದ ಫಜಿಯ ಆಹಾರವಾಗುವುದರಿಂದ ತಪ್ಪಿಸಬೇಕಾಗಿತ್ತು. ನಮ್ಮ ಫಜಿಯೋ ಮಹಾ ಸಾಧು ಮನುಷ್ಯ. ಎರಡುವರೆ ವರ್ಷ ಗ್ರೇಹೌಂಡ್ ರೇಸುಗಳಲ್ಲಿ ಓಡಿ, ಗೆದ್ದು ಲೋಭಿ ಒಡೆಯನಿಗೆ ಜೇಬು ತುಂಬಿಸಿದ. ಅವನ ಕಾಲಿಗೆ ಏಟು ತಗುಲಿದ್ದರಿಂದ ಅವನ ಒಡೆಯ ರಿಟೈರ್ ಮಾಡಿಸಿ ಹೊರಗೆಸೆದಿದ್ದ. ಪ್ರಾಣಿದಯಾಸಂಘದವರು ಅವನನ್ನು ತಂದು ದತ್ತುಗೆ ಇಟ್ಟಿದ್ದರು. ಆಗ ನಮ್ಮ ಮನೆ ಸೇರಿ ಇದುವರೆಗೂ ಅಗಾಧ ಪ್ರೀತಿಯಿಂದಿರುವವನು ಫಜಿ.

ಅವನು ಕಚ್ಚಿದ್ದಿರಲಿ, ಬೊಗಳಿದ್ದೆ ಕೇಳಿಲ್ಲ. ಆದರೆ ಅವನ ಪ್ರಕೃತಿದತ್ತವಾದ ಗುಣವನ್ನು ತೋರಿಸಿದರೆ ಗತಿ ಏನು? ಮನೆಗೆ ಬಂದ ತಕ್ಶಣ ಸ್ವೀಟಿಪೈ ಅನ್ನು ಎತ್ತರದಲ್ಲಿ ಫಜಿಗೆ ಸಿಗದಂತಿಟ್ಟು ಇಂಟರ್ನೆಟ್ ಗೆ ಹೋಗಿ ಅವನ ಬಗ್ಗೆ ರಿಸರ್ಚ್ ಪ್ರಾರಂಭಿಸಿದೆವು. ಮೈತುಂಬಾ ಹಳದಿ ಚಿತ್ತಾರ ಬರೆದುಕೊಂಡಿದ್ದ ಅವನಿಗೆ ಪುಟ್ಟ ಕಿತ್ತಳೆ ಬಣ್ಣದ ಹೊಟ್ಟೆಯಿತ್ತು. ಟರ್ಟಲ್, ಟಾರ್ಟಾಯ್ಸ್ ಎರಡಕ್ಕೂ ಆಮೆ ಎನ್ನುವ ನಾವು ನಮ್ಮ ಸ್ವೀಟಿ ಪೈ ಹೆಚ್ಚು ಕಾಲ ನೀರಲ್ಲಿ, ಸ್ವಲ್ಪಕಾಲ ನೆಲದಲ್ಲಿ ಕಳೆಯುವ, ಮನುಷ್ಯನಷ್ಟೇ ಆಯಸ್ಸು ಹೊಂದಿರುವ “ಟರ್ಟಲ್” ಎಂದು ಖಾತರಿ ಮಾಡಿಕೊಂಡೆವು. ಸರಿ. ತಕ್ಷಣ ಪೆಟ್ ಶಾಪಿಗೆ ಹೋಗಿ ಒಂದು ತೊಟ್ಟಿಯಲ್ಲಿ ನೀರು, ಮಣ್ಣು, ಪುಟ್ಟ ಕಲ್ಲುಗಳು ಎಲ್ಲಾ ಇರುವಂಥಾ ಆಮೆಗಳಿಗಾಗಿಯೇ ತಯಾರಿಸಿಟ್ಟಿದ್ದ ಒಂದು ಮನೆ ಕೊಂಡು ತಂದೆವು. ಅವನಿಗಾಗಿಯೇ ಇದ್ದ ಸ್ಪೆಶಲ್ ಆಹಾರ ಕೊಂಡೆವು.

ಹೀಗೆ ಸ್ವೀಟಿ ಪೈ ನಮ್ಮ ಮನೆಯ ಮಗುವಾಗಿ ಸೇರಿಕೊಂಡಿತು..

ಮೊನ್ನೆ ಬೆಳಿಗ್ಗೆ ಎದ್ದಾಗ ನನಗೊಂದು ಶಾಕ್ ಕಾದಿತ್ತು. ಸ್ವೀಟಿಪೈ ಅದೇಕೋ ಬೆನ್ನು ಕೆಳಗಾಗಿ ತನ್ನ ಮುದ್ದು ಕಿತ್ತಳೆ ಬಣ್ಣದ ಹೊಟ್ಟೆ ಮೇಲೆ ಮಾಡಿ ಮಲಗಿ ಬಿಟ್ಟಿತ್ತು. ಜಿರಲೆಗಳು ತಲೆಕೆಳಗಾದರೆ ಅರ್ಥವೇನೆಂದು ಗೊತ್ತಿದ್ದ ನನಗೆ ಗಾಬರಿಯಾಯಿತು. ಹಿಂದೆ ಬಂದು ನಿಂತ ಇಶಾನ್ ಕೂಡಾ ಅನುಮಾನದಿಂದ ನೋಡುತ್ತಾ. “ಯಾಕೆ ಸ್ವೀಟಿ ಪೈ ಅಲುಗಾಡುತ್ತಿಲ್ಲ?” ಎಂದು ಪ್ರಶ್ನಿಸಿದ. ನನ್ನ ದುಗುಡವನ್ನು ಹತ್ತಿಕ್ಕಿ “ಮಲಗಿದ್ದಾನೆ ಮರಿ ನಿದ್ದೆ ಮುಗಿದ ಮೇಲೆ ಏಳ್ತಾನೆ” ಎಂದೆ. ಸ್ವಲ್ಪ ಹೊತ್ತು ಇಬ್ಬರೂ ಮೌನ.

ಈ ಪುಟ್ಟ ಹುಡುಗನಿಗೆ ಸಾವಿನ ಬಗ್ಗೆ ಏನು ಹೇಳುವುದು? ದೇವರೇ, ಸ್ವೀಟಿ ಪೈಗೆ ಏನೂ ಆಗದಿರಲಿ.

ನಿಧಾನವಾಗಿ ಮತ್ತೆ ಇಶಾನ್ ಮೆಲುದನಿಯಲ್ಲಿ “ಅಜ್ಜಿ, ಈಸ್ ಇಟ್ ಡೆಡ್?” ಎಂದಾಗ ನನಗೆ ಅಚ್ಚರಿಯಾಯಿತು. ತಕ್ಷಣ ಹಿಂದೆಯೇ ಕೂತಿದ್ದ ಅವನಿಗಿಂತ ಒಂದೂವರೆ ವರ್ಷ ದೊಡ್ಡವನಾದ ಅವನ ಅಣ್ಣ ಧ್ರುವ ಜೋರಾಗಿ “ಡೆಡ್ ಈಸ್ ಅ ಬ್ಯಾಡ್ ವರ್ಡ್. ಡೋಂಟ್ ಸೇ ದಟ್.” ಎಂದು ತನ್ನ ಕೇಜಿಯಲ್ಲಿ ಕಲಿತ ತಿಳುವಳಿಕೆಯಿಂದ ತಮ್ಮನಿಗೆ ಬುದ್ಧಿವಾದ ಹೇಳಿದ.. ನಾನು ಮತ್ತೊಮ್ಮೆ “ಇಶಾನ್ ಅದು ನಿದ್ದೆ ಮಾಡ್ತಿದೆ, ಈಗ ಏಳುತ್ತೆ” ಎಂದು ಬೆನ್ನುತಟ್ಟಿ ಹೇಳಿ, ಅವನು ಬೇರೆ ಕಡೆ ತಿರುಗಿದಾಗ ಆಮೆಮರಿಯನ್ನು ಸರಿ ಮಾಡಿದೆ. ಆಗ ಅದು ಒಂಚೂರು ಕೈಕಾಲು ಅಲ್ಲಾಡಿಸಿದ್ದು ಕಂಡು ನನಗೆ ಕುಣಿಯುವಷ್ಟು ಖುಶಿಯಾಯಿತು.

ಇಲ್ಲಿ ಮಕ್ಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಲ್ಲೆ ಕಲಿಸಿರುವ ಪ್ರಕಾರ “ಡೆಡ್, ಅಟ್ಯಾಕ್, ಕಿಲ್, ಹೇಟ್” ಎಲ್ಲಾ ಬ್ಯಾಡ್ ವರ್ಡ್ಸ್ ಅಥವಾ ಮೀನ್ ವರ್ಡ್ಸ್.. “ಐ ಹೇಟ್ ಬ್ರೆಡ್” ಅನ್ನಬಾರದು. “ಐ ಡೋಂಟ್ ಲೈಕ್ ಬ್ರೆಡ್” ಅಂದರೆ ಸರಿ ಅಲ್ಲ? ಹಾಗಾಗಿ ನಾವು ಸಾಧಾರಣವಾಗಿ ಉಪಯೋಗಿಸುವ “ಡೆಡ್ ಸ್ಲೋ, ಐ ವಿಲ್ ಅಟ್ಯಾಕ್ ಫುಡ್, ಐ ಹೇಟ್ ಡ್ರೈವಿಂಗ್” ಯಾವುದು ಬಳಸಿದರೂ ಈ ಪುಟಾಣಿಗಳಿಂದ ಬುದ್ಧಿವಾದ ಕೇಳಿಸಿಕೊಳ್ಳಬೇಕಾಗುತ್ತದೆ.

ಕೂತು ಇಲ್ಲಿಯ ಭಾಷಾ ಹೈಜೀನ್ ಬಗ್ಗೆ ಯೋಚಿಸುತ್ತಾ ಮನ ತುಂಬಿ ಬಂದು ದೇವರೇ ಈ ಮಕ್ಕಳ ಮನಗಳಲ್ಲಿ ಈ ಮುಗ್ಧತೆಯನ್ನು ಹಾಗೇ ಕಾಪಾಡು ಎಂದು ಕೇಳಿ ಕೊಳ್ಳುತ್ತಿದ್ದೇನೆ.

ಮಿಲ್ವಾಕಿ ಓಲೆ: ಸ್ಯಾಂಡ್ರಾಸಿಸ್ನರೋಸ್ ಎಂಬ ಗಟ್ಟಿಗಿತ್ತಿ

ನನ್ನ ಅಜ್ಜಿ ಬಿದ್ದು ಹೋದ ಅಂಗಿ ಬಟನ್ ಗಳನ್ನು ಒಂದು ಬಾಟಲಿಯಲ್ಲಿ ಕಲೆ ಹಾಕಿ ಇಡುತ್ತಿದ್ದಳು. ದಾರಿ ತಪ್ಪಿ ಹರಿದು ಹೋದ ಆ ಬಟನ್ ಗಳು ಮುಂದೆಂದೋ ಯಾವುದಾದರೋ ಚಳಿಗಾಲದ ಕೋಟಿನದೋ, ಪಾರ್ಟಿ ಫ್ರಾಕಿನದೋ ಬಟನ್ ಬಿದ್ದು ಹೋದಾಗ ಉಪಯೋಗಕ್ಕೆ ಬರಬಹುದೆಂಬುದು ಅವಳ ಲೆಕ್ಕ. ಅವಳ ಬೀರು ತೆಗೆದು ನೋಡಿದಾಗ ಒಂದು ಜಾಡಿಯಲ್ಲೋ ಬಿಸ್ಕತ್ತಿನ ಟಿನ್ನಿನಲ್ಲೋ ತುಂಬಿ ಇಟ್ಟಿರುತ್ತಿದ್ದ ಅವುಗಳು ಕಣ್ಣಿಗೆ ಬೀಳುತ್ತಿದ್ದವು.. ಅದರ ತುಂಬಾ ಎಷ್ಟೊಂದು ಬಣ್ಣಬಣ್ಣದ ಬೇರೆ ಬೇರೆ ಆಕಾರಗಳ ಏನೆಲ್ಲಾ ಸೈಜಿನ ಚಂದದ ಬಟನ್ ಗಳು ಸುಮ್ಮನೆ ಕಾಯುತ್ತಾ ಕೂತಿರುತ್ತಿದ್ದುವು….

ಬರೆಯುವ ಕಾಯಕ ಕೂಡಾ ಒಂದು ಅಂಗಿ ಹೊಲೆದಂತೆಯೇ. ಎಷ್ಟೋ ಸಲ ನಾನು ಒಂದು ಅಂಗಿ ಹೊಲೆಯಲು ಶುರು ಮಾಡುವ ಮೊದಲೇ, ಅದು ಹೇಗೆ ಕಾಣಬೇಕೆಂದು ಮನಸ್ಸಿನಲ್ಲಿ ಯೋಚನೆ ಮಾಡಿಕೊಳ್ಳುವ ಮೊದಲೇ ಬಟನ್ ಗಳನ್ನು ಸಿದ್ಧ ಮಾಡಿ ಇಟ್ಟುಕೊಂಡಿರುತ್ತೇನೆ. ಒಂದಾದ ಮೇಲೆ ಒಂದು ಘಟನೆಗಳು ಹೀಗೇ ಬರಬೇಕೆಂದು ಯೋಚಿಸದೇ, ನಾನು ಎತ್ತ ಹೋಗುತ್ತಿದ್ದೇನೆಂದು ತಲೆ ಕೆಡಿಸಿಕೊಳ್ಳದೆ  ಸುಮ್ಮನೆ ಬರೆದಾಗ ನನ್ನ ಬರವಣಿಗೆ ಮುಕ್ತವಾಗಿ ಹರಿಯುವುದು ಸಾಧ್ಯವಾಗುತ್ತದೆ. ತಿಕ್ಕಲು ವಿಚಾರಗಳನ್ನು, ತಮಾಷೆಯ ಪ್ರತಿಮೆಗಳನ್ನು, ಮಾತುಕತೆಯ ಚೂರುಪಾರುಗಳನ್ನು, ಗಾಢವಾಗಿ ಕಾಡುವ ವಿಷಾದದ ನೆನಪುಗಳನ್ನು, ಒಂದು ಕಡೆ ಕಲೆ ಹಾಕಿಟ್ಟಾಗ ಎಂದಾದರೂ ಬೇಕೆನ್ನಿಸಿದರೆ ಬಳಸುವುದು ಸಾಧ್ಯವಾಗುತ್ತದೆ. ಒಂದೊಂದು ಸಲ ಒಂದು ಕತೆಗೋ, ಕವಿತೆಗೋ ಏನೋ ಇನ್ನೂ ಒಂಚೂರು ಬೇಕೆನಿಸುತ್ತದೆ. ಅದನ್ನು ಹೇಗೆ ಕಟ್ಟಿ ನಿಲ್ಲಿಸಬೇಕೆಂದು ತಿಳಿಯದಿದ್ದಾಗ ನಾನು ನನ್ನ ಬಟನ್ ಜಾಡಿಗಳಲ್ಲಿ ಹುಡುಕಾಡುತ್ತೇನೆ. ಆಗ ಎಲ್ಲಿಂದಲೋ “ಇದೋ, ನಾನಿಲ್ಲಿದ್ದೇನೆ” ಎಂಬ ಕೂಗು ಕೇಳಿಸುತ್ತದೆ. ತನಗೆ ತಕ್ಕ ಸ್ಥಳ ಸಿಕ್ಕಲು ಒಂದೊಂದು ಸಲ ಒಂದು ಬಟನ್ ಎಷ್ಟೋ ಕಾಲ ಕಾಯ ಬೇಕಾಗುತ್ತದೆ….. ಅಜ್ಜಿಯರಿಗೆ ಗೊತ್ತು. ಏನನ್ನೂ ಎಸೆಯುವುದು ಒಳ್ಳೆಯದಲ್ಲ. ಎಂದೋ ಒಂದು ದಿನ ನಮಗದು ಬೇಕಾಗಬಹುದು ಎಂದು.”

ತನ್ನ ಬರವಣಿಗೆಯ ಬಗ್ಗೆ ಹೇಳಿರುವ ಈ ಮಾತುಗಳು ಖ್ಯಾತ ಮೆಕ್ಸಿಕನ್ ಅಮೆರಿಕನ್ ಲೇಖಕಿ ಸ್ಯಾಂಡ್ರಾ ಸಿಸ್ನೆರೋಸ್ ದು.
ಜಗತ್ತಿನಲ್ಲೆಲ್ಲ ಪ್ರಸಿದ್ಧಿ ಪಡೆದು ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕವಾಗಿ, ಹಲವಾರು ಭಾಷೆಗಳಿಗೆ ಅನುವಾದವಾಗಿರುವ ಅವಳ “ದ ಹೌಸ್ ಆನ್ ಮ್ಯಾಂಗೋ ಸ್ಟ್ರೀಟ್” ಮೆಕ್ಸಿಕೋದಿಂದ ವಲಸೆ ಬಂದು ಶಿಕಾಗೋದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳ ನಡುವೆ ಬೆಳೆದು ದೊಡ್ಡವಳಾಗುತ್ತಿರುವ ಹುಡುಗಿಯೊಬ್ಬಳ ಕಥನವಾಗಿದೆ. ಇದರಲ್ಲಿ ಲೇಖಕಿ ಇಂದಿನ ಅಮೆರಿಕಾದ ಲ್ಯಾಂಡ್ ಸ್ಕೇಪ್ ಅನ್ನು ಹೊಚ್ಚ ಹೊಸ ಶೈಲಿಯಲ್ಲಿ ದಿಟ್ಟವಾಗಿ ತೆರೆದಿಟ್ಟಿದ್ದಾಳೆ.

ಕಡು ಬಡತನದಲ್ಲಿ ಹುಟ್ಟಿ, ಮುರುಕುಮನೆಗಳಲ್ಲಿ ಬೆಳೆದ ಸ್ಯಾಂಡ್ರಾ ಚಿಕ್ಕಂದಿನಿಂದ ತನ್ನ ಬಣ್ಣ, ವರ್ಗ ಮತ್ತು ಲಿಂಗಗಳ ಕಾರಣದಿಂದ ಆಗುವ ಶೋಷಣೆ, ಅವಮಾನಗಳನ್ನು ಎದುರಿಸುತ್ತಾ, ತಾನು ಬೇರೆಯೇ ಎನ್ನುವುದನ್ನು ಕಂಡುಕೊಳ್ಳುತ್ತಾ ಬಂದವಳು. “ನನ್ನ ಅಪ್ಪ ನಮ್ಮನ್ನು ಪರಿಚಯಿಸಬೇಕಾದಾಗ `ನನಗೆ ೭ ಮಕ್ಕಳು ಎಂದು ಎಂದೂ ಹೇಳುತ್ತಿರಲಿಲ್ಲ. ನನಗೆ ೬ ಗಂಡು ಮಕ್ಕಳು, ಒಬ್ಬ ಮಗಳು’ ಎಂದೇ ಹೇಳುತ್ತಿದ್ದ” ಇದು ಅವಳನ್ನು ಇಂದಿಗೂ ಕಾಡುತ್ತಿರುವ ಬಾಲ್ಯದ ಒಂದು ನೆನಪು. ತನ್ನ “ಬೇರೆತನ”ವನ್ನು ಹಂತಹಂತದಲ್ಲಿ ಗುರುತಿಸಿಕೊಳ್ಳುತ್ತಾ ಕೊನೆಗೆ ಬರವಣಿಗೆಯಿಂದ “ಮುಕ್ತಿ-ಶಕ್ತಿ” ಪಡೆದು “ತನ್ನತನ”ವನ್ನು ಕಂಡುಕೊಂಡ ಅಸಾಧಾರಣ ವ್ಯಕ್ತಿ ಸ್ಯಾಂಡ್ರಾ.

ನನಗಿವಳು ಎದುರಾದದ್ದು ಅಂತರ್ಜಾಲದಲ್ಲಿ. ಅಮೆರಿಕಾದ ಅರಿಜೋನಾ ರಾಜ್ಯ ಮೆಕ್ಸಿಕೋದಿಂದ ವಲಸೆ ಬರುವವರನ್ನು ಹಿಮ್ಮೆಟ್ಟಿಸಲು ಅನೇಕ ಕಟುವಾದ ಕಾನೂನುಗಳನ್ನು ರೂಪಿಸಿದ ವಿಷಯ ಓದುತ್ತಿದ್ದೆ. ಇತ್ತೀಚೆಗೆ ಸರ್ಕಾರ ಹೊರಡಿಸಿದ ಮತ್ತೆ ಒಂದು ಸುತ್ತೋಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಸ್ಪ್ಯಾನಿಷ್ ಉಚ್ಚಾರಣೆಯಿಂದ ಮಾತಾಡುವ ಶಾಲಾ ಶಿಕ್ಷಕಿಯರನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ವ್ಯಕ್ತಪಡಿಸಿತ್ತು. “ಹಾಗಾದರೆ ಸ್ಪ್ಯಾನಿಷ್ ಭಾಷೆಯನ್ನು ಇಂಗ್ಲಿಷ್ ಉಚ್ಚಾರಣೆಯಿಂದ ಮಾತಾಡುವ ಶಿಕ್ಷಕಿಯರನ್ನೂ ಕೆಲಸದಿಂದ ತೆಗೆದು ಹಾಕುತ್ತೀರಾ?” ಎಂದು ದಿಟ್ಟ ದನಿಯಲ್ಲಿ ಪ್ರಶ್ನಿಸಿದ ಸ್ಯಾಂಡ್ರಾ ಆ ದಿಕ್ಕಿನಲ್ಲಿ ಒಂದು ಚಳುವಳಿಯನ್ನೇ ಹುಟ್ಟು ಹಾಕಿದ್ದಳು. ಇದು ಅವಳ ಅನೇಕ ಹೋರಾಟಗಳಲ್ಲಿ ಒಂದು ಉದಾಹರಣೆಯಷ್ಟೆ.

ತಕ್ಷಣ ಲೈಬ್ರರಿಗೆ ಹೋಗಿ “ದ ಹೌಸ್ ಆನ್ ಮ್ಯಾಂಗೋ ಸ್ಟ್ರೀಟ್” ಕಾದಂಬರಿ ತಂದು ಓದಿದೆ. ನಮಗೆ ಪರಿಚಯವಿಲ್ಲದ ಒಂದು ಹೊಸ ಜಗತ್ತನ್ನು ಅದು ತೆರೆದಿಟ್ಟ ರೀತಿ ವಿಶಿಷ್ಟವಾಗಿತ್ತು.
* *  *

“ದ ಹೌಸ್ ಆನ್ ಮ್ಯಾಂಗೋ ಸ್ಟ್ರೀಟ್”ನ ಒಂದು ತುಣುಕು

ಕತ್ತಲಲ್ಲಿ ದಣಿದು ಎದ್ದ ಅಪ್ಪ

ನಿಮ್ಮ ಅಜ್ಜ ತೀರಿಕೊಂಡ… ಒಂದು ಬೆಳಗಿನ ಜಾವ ಪಪ್ಪ ನನಗೆ ಹೇಳಿದ. ಸತ್ತು ಹೋದ.. ಅಂದವನೇ ಆ ಸುದ್ದಿ ಅದೇ ಕೇಳಿದವನಂತೆ ಒಂದು ಹಳೆಯ ಕೋಟಿನಂತೆ ಮುದುರಿ ಅಳತೊಡಗಿದ. ಯಾವುದಕ್ಕೂ ಹೆದರದ ನನ್ನ ಪಪ್ಪ. ನಾನೆಂದೂ ಪಪ್ಪ ಅತ್ತಿದ್ದು ನೋಡಿರಲಿಲ್ಲ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ.

ಅವನು ಇನ್ನು ಹೊರಡಬೇಕೆಂದು ನನಗೆ ಗೊತ್ತು. ಮೆಕ್ಸಿಕೋಗೆ ಪ್ಲೇನ್ ಹತ್ತಿ ಹೊರಡಬೇಕು, ಎಲ್ಲಾ ಚಿಕ್ಕಪ್ಪ ಚಿಕ್ಕಮ್ಮಂದಿರು ಅಲ್ಲಿರುತ್ತಾರೆ. ಗೋರಿಯೆದುರು ಬಿಳಿ ಹೂದಾನಿಗಳಲ್ಲಿ ಜೋಡಿಸಿಟ್ಟ ರಾಶಿ ರಾಶಿ ಹೂಗುಚ್ಚಗಳ ನಡುವೆ ಅವರೆಲ್ಲಾ ಒಂದು ಕಪ್ಪು ಬಿಳುಪು ಫೋಟೊ ತೆಗೆಸಿಕೊಳ್ಳುತ್ತಾರೆ. ಸತ್ತು ಹೋದವರನ್ನು ಆ ದೇಶದಲ್ಲಿ ಕಳಿಸಿ ಕೊಡುವುದೇ ಹಾಗೆ.

ನಾನು ಎಲ್ಲರಿಗಿಂತ ದೊಡ್ಡವಳಾದ್ದರಿಂದ ನನ್ನ ಪಪ್ಪ ಮೊದಲು ನನಗೆ ವಿಷಯ ತಿಳಿಸಿದ್ದ. ಈಗ ಬೇರೆಲ್ಲರಿಗೂ ಹೇಳುವ ಕೆಲಸ ನನ್ನದು. ಯಾಕೆ ಆಟ ಆಡುವ ಹಾಗಿಲ್ಲ ಎಂದು ಅವರಿಗೆ ತಿಳಿಸಿ ಹೇಳಬೇಕು. ಇವತ್ತು ಗಲಾಟೆ ಮಾಡದೆ ಸುಮ್ಮನಿರಬೇಕೆಂದು ಅವರಿಗೆ ಒಪ್ಪಿಸಬೇಕು.

ಒರಟು ಕೈಗಳು, ಒರಟು ಬೂಟುಗಳ ನನ್ನ ಪಪ್ಪ, ಕತ್ತಲಲ್ಲಿ ದಣಿವಿನಲ್ಲೇ ಎದ್ದು ತಲೆಗೂದಲನ್ನು ನೀರು ಹಚ್ಚಿ ಬಾಚಿಕೊಂಡು ಕಾಫಿ ಕುಡಿದು ನಾವು ಏಳುವ ಮೊದಲೇ ದಿನಾ ಕೆಲಸಕ್ಕೆ ಹೋಗುವ ನನ್ನ ಪಪ್ಪ ಇವತ್ತು ನನ್ನ ಹಾಸಿಗೆಯ ಮೇಲೆ ಕೂತಿದ್ದಾನೆ.

ನಾನು ನನ್ನ ಪಪ್ಪನೇ ಸತ್ತು ಹೋದರೆ ಏನು ಮಾಡುತ್ತೇನೆ ಎಂದು ಯೋಚಿಸುತ್ತಿದ್ದೇನೆ. ನನ್ನ ತೋಳುಗಳನ್ನು ಪಪ್ಪನ ಸುತ್ತ ಗಟ್ಟಿಯಾಗಿ ಬಳಸಿ ಅವನನ್ನು ಕಟ್ಟಿಕೊಂಡಿದ್ದೇನೆ… ಹಾಗೇ  ಕಟ್ಟಿಕೊಂಡೇ ಇದ್ದೇನೆ.

 

ಮಿಲ್ ವಾಕಿ ಓಲೆ: ಚಿಟ್ಟೆಯಂಥ ಮಕ್ಕಳು ಹಾರುವ ಬೆರಗು

ಒಳ್ಳೆ ಬೇಸಗೆ ಕಾಲದ ನಡುವೆ ಮೊನ್ನೆ ಇದ್ದಕ್ಕಿದ್ದಂತೆ ಕಾರ್ಮೋಡ ಕಟ್ಟಿ ಕೆಲವೇ ಗಂಟೆಗಳಲ್ಲಿ ಧೋ ಎಂದು ೭-೮ ಇಂಚು ಮಳೆ ಸುರಿಯಿತು. ಜೊತೆಗೆ ಮಿಂಚು, ಗುಡುಗು, ಸಿಡಿಲುಗಳ ಆರ್ಭಟ. ಮಿಲ್ವಾಕಿಯ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿದು, ಕಾರುಗಳು ದಾರಿಗಡ್ಡ ಕೆಟ್ಟು ನಿಂತು, ಮನೆಗಳ ಬೇಸ್ಮೆಂಟ್ ಗಳಲ್ಲೆಲ್ಲಾ ನೀರು ತುಂಬಿಕೊಂಡು, ಗಂಟೆಗಟ್ಟಳೆ ಪವರ್ ಹೋಗಿ, ಕೆಲವು ಕಡೆ ಟಾರ್ರ್ನೆಡೊ ವಾರ್ನಿಂಗ್ ಬಂದು ಸೈರನ್ ಗಳು ಕಿರುಚಿ ಜನರ ಬದುಕನ್ನು ತಿರುವುಮುರುವು ಮಾಡಿತು.

ಆದರೆ ಮಾರನೆಯ ದಿನ ಬೆಳಗ್ಗೆದ್ದು ನೋಡಿದರೆ ಎಲ್ಲ ಸರಿಯಿದೆಯೇ ಎಂದು ಖಾತರಿ ಮಾಡಿಕೊಳ್ಳಲು ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಬೇರೆ ಬೇರೆ ವಿಭಾಗಗಳ ಸರ್ಕಾರಿ ವಾಹನಗಳ ಬಿಟ್ಟು ಹಿಂದಿನ ದಿನದ ಆರ್ಭಟದ ಕುರುಹೂ ಇರಲಿಲ್ಲ. ಫಳಿಚ್ ಅಂತಿದ್ದ ಬಿಸಿಲು. ನೀಲಿ ನೀಲಿ ಆಕಾಶ. ಚಿಲಿಪಿಲಿ ಗುಟ್ಟುತ್ತಾ ಸಣ್ಣ ಹುಳುಗಳನ್ನು ಹೆಕ್ಕಿ ತಿನ್ನುವುದರಲ್ಲಿ ನಿರತರಾಗಿದ್ದ  ಹಕ್ಕಿಗಳು.

ಅಂದು ನಾವು ಇಲ್ಲಿಂದ ಸುಮಾರು ೬೦ ಮೈಲು ದೂರದಲ್ಲಿರುವ ಮ್ಯಾಡಿಸನ್ ಗೆ ತಿರುಗಾಡಲು ಹೊರಟೆವು. ಕಾರು ಸಾಗಿದಂತೆ ಎರಡೂ ಬದಿಯಲ್ಲಿ ಹಚ್ಚ ಹಸಿರಿನ ನಡುವೆ ನೇರ ರಸ್ತೆ ಓಡುತ್ತಿತ್ತು. ನಡುನಡುವೆ ಚಿಕ್ಕ ಚಿಕ್ಕ ಊರುಗಳು. ಅವುಗಳಿಗೆ ಎಂದೋ ಇಲ್ಲಿದ್ದು ಈಗ ಹೆಸರಿಲ್ಲದ ಜನರು ಇಟ್ಟ ಹೆಸರುಗಳು. ಪ್ರತಿ ಊರಿನಲ್ಲಿ ಮೆಕ್ಡೊನಾಲ್ಡ್ ಗಳು, ಟ್ಯಾಕೋ ಬೆಲ್ ಗಳು, ಪೀಜಾ ಹಟ್ ಗಳು, ಪಿಕ್ ಎನ್ ಸೇವ್ ಗಳು.

ಮ್ಯಾಡಿಸನ್ ಒಂದು ಚೆಂದಾದ ಯೂನಿವೆರ್ಸಿಟಿ ಟೌನ್. ಎಲ್ಲೆಲ್ಲೂ ಸ್ಕೇಟ್ ಮಾಡುತ್ತಾ, ಸೈಕಲ್ ಹೊಡೆಯುತ್ತಾ ತಿರುಗಾಡುವ ಯುವಕ ಯುವತಿಯರು ಇದಕ್ಕೆ ವಿಸ್ಕಾನ್ಸಿನ್ನಿನ ಬೈಕಿಂಗ್ ಕ್ಯಾಪಿಟಲ್ ಎಂಬ ಬಿರುದನ್ನೂ ತಂದು ಕೊಟ್ಟಿದ್ದಾರೆ… ಊರು ತುಂಬಾ ಚೊಕ್ಕ ಚೌಕ ಬಡಾವಣೆಗಳು. ಸುತ್ತ ಹೂತೋಟ ಹುಲ್ಲು ಹಾಸು ಹೊಂದಿದ ಚಂದದ ಮನೆಗಳು. ಅವುಗಳಿಂದ ಹೊರಬರುವ ಹಸುವಿನಂಥಾ ನಾಯಿಗಳು. ಅವುಗಳು ರಸ್ತೆಗೆ ಬರದಂತೆ ಹಾಕಿರುವ ಕಣ್ಣಿಗೆ ಕಾಣದ ಬೇಲಿಗಳು. ಉಗುರಿಲ್ಲದ ಬೆಕ್ಕುಗಳು. ಪುಕ್ಕ ಕತ್ತರಿಸಿದ ಗಿಣಿಗಳು. ಅವು ಕುಕ್ಕಿ ಕುಕ್ಕಿ ಕೊಕ್ಕು ಹರಿತ ಮಾಡಿಕೊಳ್ಳುತ್ತಾ ಬದುಕು ಸವೆಸಲು ಚಚ್ಚೌಕದ ಮರದ ತುಂಡುಗಳು. ಐಸ್ ಕ್ರೀಮ್ ಅಂಗಡಿಗಳಲ್ಲಿ ಆನೆಯಂಥಾ ಜನ. ಹಚ್ಚೆಯಂಗಡಿಗಳಲ್ಲಿ ಉದ್ದ ಕೂದಲಿನವರ ಕ್ಯೂ. ಭೂತಾಕಾರದ ಬೈಕುಗಳ ಮೇಲೆ ಕಪ್ಪು ಲೆದರ್ ಜ್ಯಾಕೆಟ್ಟಿನ ಧಾಂಡಿಗರ ಮೆರವಣಿಗೆ. ಸರೋವರದ ಮುಂದೆ ಈಜುಡುಗೆಯ ಚೆಲುವೆಯರ ಸಂತೆ. ನಮ್ಮೂರಿನಲ್ಲಿ ಮಕ್ಕಳು ಓಡಿಸುವ ಸ್ಕೂಟರುಗಳ ದೊಡ್ಡ ರೂಪಗಳಂತೆ ಕಾಣುವ ಸೆಗ್ವೇಗಳ ಮೇಲೆ ಮತ್ತೊಂದು ಜಾತ್ರೆ. ಎಲ್ಲೆಲ್ಲೂ ಬೇಸಗೆಯನ್ನು ಸಂಭ್ರಮಿಸುವ ಜನ. ಹಿಮವರ್ಷ ವಿದಾಯ ಹೇಳುವುದನ್ನೇ ಕಾದಿದ್ದು ಈಗ ಮನೆ ರಿಪೇರಿ, ಮರಗೆಲಸ, ಪೇಂಟಿಂಗ್, ಲಾನ್ ಮೋಯಿಂಗ್ ಗಳಲ್ಲಿ ನಿರತರಾಗಿರುವ ಕುಟುಂಬಗಳು.

ಇಲ್ಲಿರುವ ಓಲ್ ಬ್ರಿಚ್ ಬೊಟ್ಯಾನಿಕಲ್ ಗಾರ್ಡನ್ಸ್ ಉತ್ತರ ಅಮೆರಿಕಾದಲ್ಲಿ ಹತ್ತು ಅತ್ಯಂತ ಸ್ಫೂರ್ತಿದಾಯಕ ತೋಟಗಳಲ್ಲಿ ಒಂದೆಂದು ಹೆಸರು ಪಡೆದಿದೆ. ೧೬ ಎಕರೆಗಳಷ್ಟು ಹರಡಿರುವ ಈ ತೋಟ ಕಾಡು ಹೂಗಳು, ಅಲಂಕಾರಿಕ ಹೂಗಳು, ಚೆರ್ರಿ ಗಿಡಗಳ ತೋಪು, ಕಲ್ಲು ಬಂಡೆಗಳ ಕಲಾತ್ಮಕ ಉದ್ಯಾನವನ, ಔಷಧೀಯ ಸಸ್ಯಗಳು, ಗುಲಾಬಿ ಗಿಡಗಳು, ಬಟರ್ ಫ್ಲೈ ಗಾರ್ಡನ್… ಹೀಗೆ ಬೇರೆಬೇರೆ ರೀತಿಯ ಹಲವಾರು ವಿಭಾಗಗಳನ್ನು ಹೊಂದಿವೆ. ಇದರಲ್ಲಿ ಎದ್ದು ಕಾಣುವುದು ಥಾಯ್ ಪೆವಿಲಿಯನ್ ಮತ್ತು ಅದನ್ನು ಸುತ್ತುವರಿದಿರುವ ಥಾಯ್ ಶೈಲಿಯ ತೋಟ. ಅಮೆರಿಕಾದಲ್ಲಿ ಈ ರೀತಿಯ ಏಕೈಕ ತೋಟವಾಗಿರುವ ಇದು, ಥಾಯ್ ಸರ್ಕಾರ ಇಲ್ಲಿನವರಿಗೆ ಕೊಟ್ಟಿರುವ ಕೊಡುಗೆ.

ಇಲ್ಲಿ ಹಣ್ಣುಹಣ್ಣು ಮುದುಕರಿಂದ ಪುಟಾಣಿ ಮಕ್ಕಳವರೆಗೂ ಎಲ್ಲರು ತುಂಬಿದ್ದರೂ ಎಲ್ಲೆಲ್ಲೂ ಒಂದು ಶಿಸ್ತು , ಶಾಂತಿ ಆವರಿಸಿತ್ತು. ಮಕ್ಕಳನ್ನು ಹೆಚ್ಚು ಆಕರ್ಷಿಸಿದ್ದು ಬಟರ್ ಫ್ಲಯ್ ಪಾರ್ಕ್. ಟ್ರಾಪಿಕಲ್ ಶೈಲಿ ಗಿಡಮರಗಳನ್ನು ದೊಡ್ಡ ಗಾಜಿನ ಡೋಮ್ ಒಂದರಲ್ಲಿ ಬೆಳೆಸಿ ಅದರಲ್ಲಿ ತರಹೆವಾರಿ ಚಿಟ್ಟೆಗಳನ್ನೂ ಸಾಕಿದ್ದರು. ಎಲ್ಲೆಲ್ಲೂ ತಮ್ಮ ಬಣ್ಣಬಣ್ಣ ಪ್ರದರ್ಶಿಸುತ್ತಾ, ಕೈ ಮೈ ಮೇಲೆ ಕೂಡುತ್ತಾ, ಮಕ್ಕಳನ್ನು ಆಟವಾಡಿಸುತ್ತಿದ್ದ ಚಿಟ್ಟೆಗಳನ್ನು ಕಂಡ ನಮ್ಮ ಪುಟಾಣಿಗಳೂ ಮೈ ಮರೆತರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆಲ್ಲಾ ವಾಲಂಟಿಯರ್ ಗಳು ಸಮಾಧಾನವಾಗಿ ಉತ್ತರಿಸುತ್ತಿದ್ದರು. ನಮಗೋ ಎಷ್ಟೊ ದಿನಗಳ ನಂತರ ಅಲ್ಲಿ ಇದ್ದಕ್ಕಿದ್ದಂತೆ ಎದುರಾದ ಶುಂಠಿ, ಏಲಕ್ಕಿ, ಬಾಳೆ, ದಾಸವಾಳದ ಗಿಡಗಳೂ, ಸುತ್ತುವರಿದ ಮಲ್ಲಿಗೆ ಹೂವಿನಗಂಧ ನಮ್ಮನ್ನು ಆ ಕ್ಷಣ ನಮ್ಮ ಮಣ್ಣಿಗೆ ಸೆಳೆದು ಹೋಮ್ ಸಿಕ್ ನೆಸ್ ತುಂಬಿತು.

ಸುತ್ತಾಡಿ ಹೊರಗೆ ಬಂದು ಕಾಫಿ ಕುಡಿಯುತ್ತಾ ಕುಳಿತೆವು. ಇಲ್ಲಿ ಮಕ್ಕಳು ಹಾಯಾಗಿ, ಖುಶಿಯಾಗಿ ಬೆಳೆಯುವ ರೀತಿಯೇ ಹೀಗೆ. ಇಷ್ಟವಾದ ಕ್ರೀಡೆ, ಮನಸ್ಸಿಗೆ ಹೊಂದುವ ವಿಷಯಗಳ ಅಭ್ಯಾಸ, ಸಂಗೀತ, ನೃತ್ಯ,ಕಲೆ, ನಿಸರ್ಗದಲ್ಲಿ ಒಂದಾಗಿರಲು ಸಾಕಷ್ಟು ಸಮಯ… ಇನ್ನೇನು ಬೇಕು. ನಮ್ಮಲ್ಲೋ, ನರ್ಸರಿಯಿಂದ ಸೀಟಿಗಾಗಿ ಕ್ಯೂ ನಿಂತು, ಡೊನೇಶನ್ ಕೊಟ್ಟು, ಕಾಲೇಜುಗಳಿಗೆ ಕ್ಯೂ ನಿಂತು ಡೊನೇಷನ್ ಕೊಟ್ಟು. ಮತ್ತೆ ಪ್ರೊಫೆಶನಲ್ ಕೋರ್ಸುಗಳಿಗಾಗಿ ಕ್ಯೂ ನಿಂತು, ಸಾಲ ಮಾಡಿ ಡೊನೇಶನ್ ಕೊಟ್ಟು ಸಿಇಟಿಯಲ್ಲಿ ಬ್ಲಡ್ ಪ್ರೆಶರ್ ಹೆಚ್ಚು ಮಾಡಿಕೊಂಡು… ಕೊನೆಗೂ ಆರ್ಟ್ಸ್ ತೆಗೆದುಕೊಳ್ಳಲು ಹಂಬಲಿಸುತ್ತಿರುವ ಮಗಳಿಗೆ “ನಿನಗೆ ಆಮೇಲೆ ಕೆಲಸ ಯಾರು ಕೊಡುತ್ತಾರೆ” ಎಂದು ಜಬರಿಸಿ ಇಂಜಿನಿಯರಿಂಗ್ ಗೆ ತಳ್ಳಿ… ಎಷ್ಟೆಲ್ಲಾ ವಿಷಯಗಳು ಒಮ್ಮೆಗೇ ಕಾಡಿದವು. ಇಲ್ಲಿ ಮಕ್ಕಳು ಎಷ್ಟು ಅದೃಷ್ಟವಂತರು….

ಆಗ ಕೆಲವೇ ದಿನಗಳ ಹಿಂದೆ ನಡೆದ ಘಟನೆಯೊಂದು ನೆನಪಾಗಿ ನಗುವೂ ಬಂತು. ಅಂದು ನನ್ನ ೬ ವರ್ಷದ ಮೊಮ್ಮಗ ಧ್ರುವ ಸ್ಕೂಲ್ ಬಸ್ಸಿನಿಂದ ಇಳಿಯುತ್ತಲೇ ಓಡಿಬಂದು ತನಗೆ ಅಂದು ಸಿಕ್ಕಿದ್ದ ಸ್ಪೆಶಲ್ ಸರ್ಟಿಫಿಕೇಟ್ ತೋರಿಸಿದ. ಇಡೀ ಸ್ಕೂಲಿಗೆ ಈ ಪುಟಾಣಿ ಅಮೆರಿಕನ್ ಬಾವುಟಕ್ಕೆ ತಮ್ಮ ನಿಷ್ಠೆಯ ಪ್ಲೆಜ್ ಹೇಳಿಸುವುದರಲ್ಲಿ ಮುಂದಾಳಾಗಿದ್ದ.

ಟೀಚರ್ ಗಳು “ವಿ ಆರ್ ಪ್ರೌಡ್ ಆಫ್ ಯು” ಎಂದು ಬೆನ್ನು ತಟ್ಟಿ ಸರ್ಟಿಫಿಕೇಟ್ ಕೊಟ್ಟು ಕಳಿಸಿದ್ದರು. ಆ ಕ್ಷಣ ನನ್ನೊಳಗೆ ಹಾದು ಹೋದ ವಿಚಿತ್ರ ನೋವನ್ನು ಮರೆಮಾಚುತ್ತಲೇ ನಾನೂ ಅವನ ಬೆನ್ನು ತಟ್ಟಿದ್ದೆ.