”ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ. ಕೆಲವು ಛಾಯಾಚಿತ್ರಗ್ರಾಹಕರು ಕಾದು ಸೆರೆಹಿಡಿಯುವುದು ಅಂತಹ ಒಳಗಿನ ವ್ಯಕ್ತಿಯನ್ನು.ಮುಕುಂದರ ಛಾಯಾಚಿತ್ರಗಳು ಈ ಧಾಟಿಯವು. ಸುಪ್ತವಾಗಿರುವ ವ್ಯಕ್ತಿವಿಶಿಷ್ಟತೆಯನ್ನು ಅವು ಪ್ರಕಟ ಮಾಡುತ್ತಿರುತ್ತವೆ..”
ಛಾಯಾಗ್ರಾಹಕ ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕಕ್ಕೆ ಖ್ಯಾತ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದ ಪ್ರಸ್ತಾವನೆ.

ವೃತ್ತಿಯಿಂದ ಅಭಿಯಂತರರಾಗಿ ನಿವೃತ್ತಿ ಹೊಂದಿರುವ ಎ ಎನ್ ಮುಕುಂದ ಹಾಗೂ ನನ್ನದು ಸುಮಾರು ನಾಲ್ಕು ದಶಕಗಳ ಗೆಳೆತನ. ಈ ನಂಟಿಗೆ ಅಂಟು ಹಾಕಿದ್ದು ದೇಶದ, ವಿಶ್ವದ ಮೇರು ಸಿನಿಮಾ ಕೃತಿಗಳು. ಅದೆಷ್ಟೋ ವೇಳೆ  ನಮ್ಮ ನಡುವಿನ ಸಿನಿಮಾ ಕುರಿತ ಚರ್ಚೆ, ವಾಗ್ವಾದಗಳು ಸರಿರಾತ್ರಿಯವರೆಗೂ ಮುಂದುವರೆದು, ಜೊತೆಗಿರುತ್ತಿದ್ದ ಕೆಲವು ಸ್ನೇಹಿತರ ಅಸಹನೆಗೂ ಕಾರಣವಾಗಿದ್ದಿದೆ. ಎಂಭತ್ತರ ದಶಕದ ಸುಮಾರಿಗೆ ನಾವು ಕೆಲ ಗೆಳೆಯರು ಕೂಡಿ ಆರಂಭಿಸಿದ ‘ಮಂಥನ  ಚಿತ್ರಸಮಾಜ’ ನಮ್ಮ ಗೆಳೆತನವನ್ನು ಮತ್ತಷ್ಟು ಗಟ್ಟಿ ಮಾಡಿತು. ಪ್ರತಿ ಸಿನಿಮಾ ಪ್ರದರ್ಶನದ ಜೊತೆಗೂ ಆ ಸಿನಿಮಾ ಕುರಿತ ಲೇಖನಗಳು, ನಿರ್ದೇಶಕನ ಸಂದರ್ಶನ ಇತ್ಯಾದಿ ಸೇರಿಸಿ ಒಂದು ನೂರು ಪುಟಗಳ ಸೈಕ್ಲೊಸ್ಟೈಲ್ಡ್ ಪುಸ್ತಕ ಸಂಪಾದಿಸಿ, ವೀಕ್ಷಕರಿಗೆ ಕೊಡುತ್ತಿದ್ದೆವು. ಇಂಟರ್ನೆಟ್ ಇನ್ನೂ ಬಳಕೆಗೆ ಬಂದಿರದ ಆ ಕಾಲದಲ್ಲಿ ಸೂಕ್ತ ಮಾಹಿತಿಯನ್ನು ಹುಡುಕುವುದು ದೊಡ್ಡ ಸಾಹಸವೇ ಆಗಿತ್ತು. ಅದರ ಹೊಣೆ ಹೊತ್ತವರು ಒಬ್ಬೊಬ್ಬರೇ ಜವಾಬ್ದಾರಿಯಿಂದ ಕಳಚಿಕೊಂಡಾಗ ಮುಕುಂದ ಆ ಜವಾಬ್ದಾರಿಯನ್ನು ತಮ್ಮ ಮೈಮೇಲೆ ಎಳೆದುಕೊಂಡು ಪುಸ್ತಿಕೆಯನ್ನು ಸಿದ್ಧಪಡಿಸುತ್ತಿದ್ದರು. ಆಗ ಅರಿವಾದದ್ದು ಅವರ ಸಿನಿಮಾ ಪ್ರೇಮದ ಆಳ ಮತ್ತು ಅಗಲ.

ಕೆ ವಿ ಸುಬ್ಬಣ್ಣನವರು ಎಂಭತ್ತರ ದಶಕದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಮುಕುಂದ ಅವರೊಂದಿಗಿನ ನನ್ನ ಗೆಳೆತನವನ್ನು ಮತ್ತಷ್ಟು ಬೆಸೆಯಿತು. ಸಾಹಿತ್ಯ, ಸಿನಿಮಾ, ಫೋಟೋಗ್ರಫಿ, ಒಟ್ಟಾರೆ ಜೀವನದ ಬಗೆಗಿನ ಅವರ ಚಿಂತನೆಗಳೆಷ್ಟು  ಗಹನ ಮತ್ತು ಸೂಕ್ಷ್ಮಗ್ರಹೀತ ಎಂದು ತಿಳಿದಿದ್ದು ಆಗಲೇ. ಟಿ ಪಿ ಅಶೋಕ, ಮುಕುಂದ, ನಾನು ಮತ್ತು ಹೆಗ್ಗೋಡಿನ ಕೆಲ ಗೆಳೆಯರು ಆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು. ನಾವು ನಾಲ್ಕು ತಂಡಗಳಾಗಿ, ಒಂದೊಂದು ತಂಡವೂ ಒಂದೊಂದು ಹಳ್ಳಿಗೆ ಹೋಗಿ, ನೀನಾಸಂ ಭಂಡಾರದಿಂದ ಒಯ್ದ ಉತ್ತಮ ಚಲನಚಿತ್ರಗಳನ್ನು ಅಲ್ಲಿನ ಸಮುದಾಯಕ್ಕೆ ತೋರಿಸಿ ಅವರೊಂದಿಗೆ ಸಂವಾದಿಸಿ, ಪ್ರತಿಕ್ರಿಯೆಗಳನ್ನು ದಾಖಲಿಸಿ, ಅವುಗಳನ್ನು ನೀನಾಸಂ ಚಿತ್ರಸಮಾಜಕ್ಕೆ ತಲುಪಿಸುವುದು ಈ ಕಾರ್ಯಕ್ರಮಗಳ ಉದ್ದೇಶ. ಈ ಪಟ್ಟಿಯಲ್ಲಿ ಚಾಪ್ಲಿನ್ನನ ಹಲವಾರು ಚಿತ್ರಗಳು, ಬೈಸಿಕಲ್ ಥೀವ್ಸ್, ಬ್ಯಾಟೆಲ್‌ಷಿಪ್ ಪೊಟೆಂಕಿನ್, ರಶೋಮೊನ್, ಪಥೇರ್ ಪಾಂಚಾಲಿ, ಘಟಶ್ರಾದ್ಧ ಮುಂತಾದ ಕೃತಿಗಳು ಸೇರಿರುತ್ತಿದ್ದವು. (ಆಗೆಲ್ಲ ಚಿತ್ರಸಮಾಜಗಳಿಗೆ ದುಬಾರಿಯಾದ ೧೬ ಎಮ್ ಎಮ್ ಪ್ರತಿಗಳು ಮಾತ್ರ ಸಿಗುತ್ತಿದ್ದವು.  ಹಾಗಾಗಿ ನೀನಾಸಂ ಭಂಡಾರದಲ್ಲಿ ಇದ್ದದ್ದು ಕೇವಲ ಹತ್ತು ಹದಿನೈದು ಚಿತ್ರಗಳು ಮಾತ್ರ. (ಈಗಿನಂತೆ ಡಿಜಿಟಲ್ ರೂಪದಲ್ಲಿ ಚಿತ್ರಗಳನ್ನು ತೋರಿಸುವುದಕ್ಕೆ ಆ ದಿನಗಳಲ್ಲಿ ಸಾಧ್ಯವಿದ್ದಿದ್ದರೆ ಜಗತ್ತಿನ ಎಷ್ಟೆಲ್ಲ ಮೇರು ಕೃತಿಗಳನ್ನು ತೋರಿಸುತ್ತಿದ್ದೆವೋ ಏನೋ!).

(ಕೆ.ಪಿ. ಪೂರ್ಣಚಂದ್ರ ತೇಜಸ್ವಿ)

ಈ ಚಿತ್ರಗಳನ್ನು ತೋರಿಸುತ್ತಿದ್ದುದು ಮಲ್ಪೆಯ ಮೀನುಗಾರರು, ಸಿರಸಿಯ ಸುತ್ತಲಿನ ಸಿದ್ಧಿಗಳು, ಕುಮಟಾ ಬಳಿಯ ಹಾಲಕ್ಕಿ ಒಕ್ಕಲಿಗರು, ಕೊಡಗಿನ ಕಾಫಿ ತೋಟಗಳ ಕೂಲಿ ಕಾರ್ಮಿಕರು, ಉತ್ತರ ಕರ್ನಾಟಕದ ಕೃಷಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿ ವೃಂದ- ಈ ರೀತಿಯ ಭಿನ್ನ ಭಿನ್ನ ಸಮುದಾಯಗಳಿಗೆ. ಹೀಗೆ ಹೆಚ್ಚುಕಡಿಮೆ ತಿಂಗಳಿಗೊಂದರಂತೆ ಸುಮಾರು ಎರಡು ವರುಷಗಳ ಕಾಲ ನಡೆದ ಈ ಕಾರ್ಯಕ್ರಮ ನನಗೆ ಮತ್ತು ಮುಕುಂದರಿಗೆ ತುಂಬಾ ಒಳ್ಳೆಯ ಅನುಭವಗಳನ್ನೇ ನೀಡಿತು. ಗಂಭೀರ ಚಲನಚಿತ್ರಗಳನ್ನು ನಗರದ ವಿದ್ಯಾವಂತ ಮಧ್ಯಮವರ್ಗ ಮಾತ್ರ ಅರ್ಥಮಾಡಿಕೊಳ್ಳಬಲ್ಲದು ಎಂಬುದಾಗಿ ಚಿತ್ರೋದ್ಯಮ ಮತ್ತು ಪ್ರಚಾರೋದ್ಯಮಗಳ ಹೆಚ್ಚಿನವರು ಹಬ್ಬಿಸಿದ್ದ  ಆರೋಪ ಹುರುಳಿಲ್ಲದ್ದು; ಹಳ್ಳಿಗರು, ಅವಿದ್ಯಾವಂತರು ಎಂದು ನಾವು ಕಡೆಗಣಿಸುವ ಗ್ರಾಮಸಮುದಾಯಗಳು ಇಂಥ ಚಿತ್ರಗಳನ್ನು ಕುತೂಹಲದಿಂದ ಮಾತ್ರವಲ್ಲ,  ಆಳವಾಗಿ, ಪ್ರಬುದ್ಧವಾಗಿ, ಸಹೃದಯತೆಯಿಂದ ಗ್ರಹಿಸಬಲ್ಲವು ಎಂಬ ಸುಬ್ಬಣ್ಣನವರ ನಂಬಿಕೆಯಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲವೆಂದು ನಾವು ಮನಗಂಡೆವು.

ನಾವು ನಾಲ್ಕು ತಂಡಗಳಾಗಿ, ಒಂದೊಂದು ತಂಡವೂ ಒಂದೊಂದು ಹಳ್ಳಿಗೆ ಹೋಗಿ, ನೀನಾಸಂ ಭಂಡಾರದಿಂದ ಒಯ್ದ ಉತ್ತಮ ಚಲನಚಿತ್ರಗಳನ್ನು ಅಲ್ಲಿನ ಸಮುದಾಯಕ್ಕೆ ತೋರಿಸಿ ಅವರೊಂದಿಗೆ ಸಂವಾದಿಸಿ, ಪ್ರತಿಕ್ರಿಯೆಗಳನ್ನು ದಾಖಲಿಸಿ, ಅವುಗಳನ್ನು ನೀನಾಸಂ ಚಿತ್ರಸಮಾಜಕ್ಕೆ ತಲುಪಿಸುವುದು ಈ ಕಾರ್ಯಕ್ರಮಗಳ ಉದ್ದೇಶ. ಈ ಪಟ್ಟಿಯಲ್ಲಿ ಚಾಪ್ಲಿನ್ನನ ಹಲವಾರು ಚಿತ್ರಗಳು, ಬೈಸಿಕಲ್ ಥೀವ್ಸ್, ಬ್ಯಾಟೆಲ್‌ಷಿಪ್ ಪೊಟೆಂಕಿನ್, ರಶೋಮೊನ್, ಪಥೇರ್ ಪಾಂಚಾಲಿ, ಘಟಶ್ರಾದ್ಧ ಮುಂತಾದ ಕೃತಿಗಳು ಸೇರಿರುತ್ತಿದ್ದವು.

ಜನಸ್ಪಂದನ ಕಾರ್ಯಕ್ರಮದಲ್ಲಿ ನಾವೆಷ್ಟು ತೊಡಗಿಸಿ ಕೊಂಡಿದ್ದೆವು ಎಂದರೆ ನಾನು, ನಾವು ಎನ್ನುವುದು ಮರೆಯಾಗಿ  ಸಿನಿಮಾ ಮಾತ್ರ ಕಾಣಿಸುತ್ತಿತ್ತು. ಒಮ್ಮೆ ನಾವಿಬ್ಬರೂ ಕುಮಟಾ ಬಳಿಯ ಹಳ್ಳಿಗೆ ಸಿನಿಮಾ ತೋರಿಸಲು ಸಂಜೆ ವೇಳೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಕಾರು ಕೆಟ್ಟುಹೋಯಿತು. ರಾತ್ರಿಯೊಳಗೆ ಚಿತ್ರ ಪ್ರದರ್ಶಿಸಬೇಕಾದ ಹಳ್ಳಿ ತಲುಪುತ್ತೇವೋ ಇಲ್ಲವೋ ಎಂದು ನಮಗೆ ಗಾಬರಿಯಾಗಿ ನಾವು ನಡೆದೇ ಹೊರೆಟೆವು. ಕಾಡಿನ ಮಧ್ಯೆ ನಿರ್ಜನ ರಸ್ತೆಯಲ್ಲಿ ೧೬ ಎಮ್‌ಎಮ್ ಪ್ರೊಜೆಕ್ಟರ್ ಹೊತ್ತು ನಡೆಯುತ್ತಿರುವ ಪ್ರೊಜೆಕ್ಷನಿಸ್ಟು, ಅವನ ಜೊತೆ ಎರಡೂ ಕೈಯಗಳಲ್ಲಿ ಫಿಲ್ಮ್ ಕ್ಯಾನುಗಳನ್ನು ಹೊತ್ತು ನಡೆಯುತ್ತಿರುವ ಮುಕುಂದ ಮತ್ತು ನಾನು- ಇದು ಲೂಯಿ ಬುನುವೆಲ್‌ನ ಸಿನಿಮಾದ ಸರ್ರಿಯಲಿಸ್ಟ್ ಇಮೇಜಿನಂತಿತ್ತು. ಆಗ ಪುಣ್ಯಕ್ಕೆ ಒಂದು ಕೆ ಇ ಬಿ ಜೀಪು ಬಂತು. ಕೈ ತೋರಿಸಿ ಆ ಊರಿಗೆ ಡ್ರಾಪ್ ಕೇಳಿದಾಗ ಜೀಪಿನಲ್ಲಿದ್ದ ಕೆ ಇ ಬಿ  ಲೈನ್ ಮ್ಯಾನ್ ‘ಆಯ್ತು, ಜೀಪಿನ ಹಿಂಭಾಗದಲ್ಲಿ ಕೂರಿ’ ಎಂದರು. ನಾವು ಪ್ರಯಾಣ ಮಾಡುತ್ತಿದ್ದ ಅರ್ಧ ಗಂಟೆಯಷ್ಟು ಹೊತ್ತು ಸಿನಿಮಾ ಕುರಿತೇ ಚರ್ಚೆ ಮಾಡುತ್ತಿದ್ದುದನ್ನು ಕಂಡು ಆ ಲೈನ್ ಮ್ಯಾನ್‌ಗೆ ಅನುಮಾನ ಬಂದು ‘ನೀವು ಎಷ್ಟೊತ್ತಿಂದ ಬರೀ ಸಿನಿಮಾದ ಬಗ್ಗೆನೇ ಮಾತಾಡ್ತಿದ್ದೀರ. ಯಾವ ಕೆಲಸದಲ್ಲಿ ಇದೀರಾ?’ ಎಂದು ಕುತೂಹಲದಿಂದ ಕೇಳಿದರು. ಮುಕುಂದ ನನ್ನನ್ನು ತೋರಿಸಿ ‘ಇವರು ಗಿರೀಶ್ ಕಾಸರವಳ್ಳಿ’ ಎಂದಾಗ ಅವರಿಗೆ ಆಶ್ಚರ್ಯ. ‘ನೀವು?’ ಎಂದು ಮುಕುಂದರನ್ನು ಕೇಳಿದಾಗ ನಾನು ಕೆ ಇ ಬಿ ಯಲ್ಲಿ ಇಂಜಿನೀಯರೆಂದರು. ಆ ವ್ಯಕ್ತಿಯ ಮುಖದಲ್ಲಿ ತಪ್ಪುಮಾಡಿದ ಭಾವನೆ. ತಾನು ಹಿಂದೆ ಕೂರಲು ಹೇಳಿದ ವ್ಯಕ್ತಿ ತನ್ನದೇ ಇಲಾಖೆಯಲ್ಲಿ ತನಗಿಂತ ಉನ್ನತ ಹುದ್ದೆಯಲ್ಲಿರುವವರು ಎಂದು ಗೊತ್ತಾದಾಗ ಮುಂದೆ ಕೂರಲು ಹೇಳಿ, ನಾವು ಇಳಿಯುವವರೆಗೂ ಸಾರಿ ಸರೆಂದು ಹತ್ತಾರು ಬಾರಿ ಹೇಳಿದರು. ಸಾರಿ ಹೇಳುವ ಅಗತ್ಯವಿಲ್ಲ. ನಾವು ತೋರಿಸುವ ಸಿನಿಮಾ ನೋಡಿ ಬನ್ನಿ ಎಂದು ಆಹ್ವಾನಿಸಿದೆವು.

(ತ ಸು ಶಾಮರಾವ್)

ಇಂತಹ ಅನೇಕ ಲಘುವಿನೋದದ ಘಟನೆಗಳ ಮಧ್ಯೆಯೂ ನಮ್ಮ ಚರ್ಚೆಗಳು ನಮ್ಮಿಬ್ಬರ ಸಿನಿಮಾ ಗ್ರಹಿಕೆಯನ್ನು ಹಿಗ್ಗಿಸುತ್ತಿದ್ದವು. ಆ ಮೂಲಕ ಕಲೆಯ ಉದ್ದೇಶ, ಅದಕ್ಕೂ ಬದುಕಿಗೂ ಇರಬೇಕಾದ ನಂಟು, ಅನುಸಂಧಾನ ಮಾಡುವ ರೀತಿ ಇತ್ಯಾದಿಗಳನ್ನು ಕುರಿತ ನಮ್ಮ ನಿಲುವಿಗೆ ಖಚಿತತೆ ಬರುತ್ತಿತ್ತು. ಟಿಪಿ ಅಶೋಕರಂತಹ ಉತ್ತಮ ವಿದ್ವಾಂಸರು ಜೊತೆಗಿರುತ್ತಿದ್ದುದು ಆ ಚಿಂತನೆಗಳಿಗೆ ಗಹನತೆ ತಂದು ಕೊಡುತ್ತಿತ್ತು. ಹಗಲೆಲ್ಲಾ ಚರ್ಚೆ, ರಾತ್ರಿ ಸಿನೆಮಾ- ಹೀಗೆ ಎರಡು ವರ್ಷಗಳ ಒಡನಾಟದಲ್ಲಿ ನಾನು ಮುಕುಂದ ಅವರ ಕೆಲವು ಒಲವುಗಳನ್ನು ಅರ್ಥಮಾಡಿಕೊಂಡೆ. ನನ್ನಂತೆ ಅವರಿಗೂ ಜಪಾನಿನ ನಿರ್ದೇಶಕ ಯಾಸುಜಿರೊ ಓಜು ಚಿತ್ರಗಳೆಂದರೆ ಮೆಚ್ಚು. ಯಾವ ಕಾರಣಗಳಿಗಾಗಿ ಮುಕುಂದ ಇವರ ಚಿತ್ರಗಳನ್ನ ಮೆಚ್ಚುತ್ತಿದ್ದರು ಎನ್ನುವುದನ್ನು ಸಂಗ್ರಹವಾಗಿ ಹೇಳುವುದಾದರೆ:

* ಯಾವುದೇ ಅಲಂಕಾರಗಳನ್ನು ಬಳಸದೆ ಮಿತಭಾಷೆಯಲ್ಲಿ, ಮಿತವ್ಯಂಜಕಗಳಲ್ಲಿ ವಿಷಯವನ್ನು ಸಾದರ ಪಡಿಸುವ ಕ್ರಮ
* ಯಾವ ಕಾರಣಕ್ಕೂ ತಾಂತ್ರಿಕತೆಯನ್ನು ಮುನ್ನೆಲೆಗೆ ತರದಿರುವುದು
* ಕುತೂಹಲ ಹೆಚ್ಚಿಸುವುದಕ್ಕಾಗಿ ಅನಿರೀಕ್ಷಿತ ತಿರುವುಗಳನ್ನು ಸೇರ್ಪಡೆ ಮಾಡದಿರುವುದು
* ಮೆಲುದನಿಯ, ಸಂಯಮದ ನಿರೂಪಣೆಯಿಂದ ಪಾತ್ರ ಮತ್ತು ಘಟನೆಗಳನ್ನು ಪಾರದರ್ಶಕ ಮಾಡುವುದು
* ನೋಡುಗನ ಬುದ್ಧಿಮತ್ತೆಯನ್ನು ಅನುಮಾನಿಸಿ, ಅವಮಾನಿಸದಿರುವುದು

ಗಂಭೀರ ಚಲನಚಿತ್ರಗಳನ್ನು ನಗರದ ವಿದ್ಯಾವಂತ ಮಧ್ಯಮವರ್ಗ ಮಾತ್ರ ಅರ್ಥಮಾಡಿಕೊಳ್ಳಬಲ್ಲದು ಎಂಬುದಾಗಿ ಚಿತ್ರೋದ್ಯಮ ಮತ್ತು ಪ್ರಚಾರೋದ್ಯಮಗಳ ಹೆಚ್ಚಿನವರು ಹಬ್ಬಿಸಿದ್ದ  ಆರೋಪ ಹುರುಳಿಲ್ಲದ್ದು; ಹಳ್ಳಿಗರು, ಅವಿದ್ಯಾವಂತರು ಎಂದು ನಾವು ಕಡೆಗಣಿಸುವ ಗ್ರಾಮಸಮುದಾಯಗಳು ಇಂಥ ಚಿತ್ರಗಳನ್ನು ಕುತೂಹಲದಿಂದ ಮಾತ್ರವಲ್ಲ,  ಆಳವಾಗಿ, ಪ್ರಬುದ್ಧವಾಗಿ, ಸಹೃದಯತೆಯಿಂದ ಗ್ರಹಿಸಬಲ್ಲವು ಎಂಬ ಸುಬ್ಬಣ್ಣನವರ ನಂಬಿಕೆಯಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲವೆಂದು ನಾವು ಮನಗಂಡೆವು.

(ಎಂ ಕೆ ಇಂದಿರಾ)

ಇದಕ್ಕೆ ತದ್ವಿರುದ್ಧವಾಗಿ, ಅವರು ಅನೇಕ ಪ್ರಸಿದ್ಧ ಚಿತ್ರಗಳನ್ನು ಅವುಗಳ ವಸ್ತು ವಿಷಯಕ್ಕೆ ಮೆಚ್ಚಿದರೂ, ಅದನ್ನು ಸಾದರ ಪಡಿಸುವಾಗಿನ ಅಬ್ಬರ, ವೈಭವ, ಕುತೂಹಲ ಕೆರಳಿಸಲೆಂದೇ ಬೆಳೆಸಿದ ರೀತಿಯಿಂದಾಗಿ ಮೆಚ್ಚುತ್ತಿರಲಿಲ್ಲ. ಇದನ್ನು ಇಷ್ಟು ವಿವರವಾಗಿ ಯಾಕೆ ಹೇಳುತ್ತಿದ್ದೇನೆಂದರೆ ಮುಕುಂದ ಅವರ ಮುಖ್ಯ ಹವ್ಯಾಸವಾದ ಪೋರ್ಟ್ರೇಟ್ ಫೋಟೋಗ್ರಫಿಯಲ್ಲೂ ಓಜು ಹಾಗು ಸತ್ಯಜಿತ್‌ರೇ ಚಿತ್ರಗಳಲ್ಲಿ ಅವರು ಮೆಚ್ಚುವ ಕೆಲವು ಅಂಶಗಳ ಪ್ರತಿಫಲನವನ್ನೇ ಕಾಣಬಹುದು.

ಇಂದಿನ ಸೆಲ್ಫೀ ಯುಗದಲ್ಲಿ ಅತ್ಯಂತ ಅಸಡ್ಡೆಯಿಂದ ಬಳಕೆಯಾಗುತ್ತಿರುವ ಛಾಯಾಗ್ರಹಣದ ಪ್ರಕಾರ ಎಂದರೆ ಸ್ವಚಿತ್ರ. ದೃಶ್ಯ ಸಂಯೋಜನೆ, ಬೆಳಕಿನ ಲಾಸ್ಯ, ವಿಷುಯಲ್ ಡೈನಮಿಕ್ಸ್ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ಚಹರೆಯನ್ನು ಸೆರೆ ಹಿಡಿದುಕೊಳ್ಳುವುದಕ್ಕಷ್ಟೇ ಅವರ ಗಮನ ಇರುವುದರಿಂದ ಭಾವಚಿತ್ರ (ಪೋರ್ಟ್ರೇಟ್)ಕ್ಕಿರುವ ಎಲ್ಲ ಸಾಧ್ಯತೆಗಳನ್ನು ಮೊಟಕುಗೊಳಿಸಲಾಗುತ್ತಿದೆ. ಇಂತಹ ಫೋಟೋಗಳನ್ನು ಚಹರೆ ಚಿತ್ರ ಎಂದಷ್ಟೇ ಕರೆಯಬಹುದೇ ಹೊರತು ಪೋರ್ಟ್ರೇಟ್ (ಭಾವಚಿತ್ರ) ಎಂದು ಕರೆಯಲಾಗುವುದಿಲ್ಲ. ಕೇವಲ ದಾಖಲೆಯಾಗಿ ಮಾತ್ರ ಉಳಿಯಬಲ್ಲ ಈ ಸೆಲ್ಫಿಗಳ ವೀಕ್ಷಣೆ, ಮರುವೀಕ್ಷಣೆ ನಮ್ಮಲ್ಲಿ ಸುಪ್ತವಾಗಿರುವ ಸಧಭಿರುಚಿಯನ್ನು ಕ್ರಮೇಣ ಸಾಯಿಸುತ್ತವೆ.

ಎಲ್ಲರಿಗೂ ಅರಿವಿರುವಂತೆ, ನಾವು ಸದಾಕಾಲವೂ ಅನೇಕ ವ್ಯಕ್ತಿತ್ವದಲ್ಲಿ, ಅನೇಕ ಮುಖಗಳನ್ನಿಟ್ಟುಕೊಂಡು ಬದುಕುತ್ತಿರುತ್ತೇವೆ. ಅವುಗಳಲ್ಲಿ ಯಾವ ವ್ಯಕ್ತಿತ್ವವನ್ನು ಸೆರೆಹಿಡಿಯಲು ಅಪೇಕ್ಷಿಸುತ್ತೇವೆನ್ನುವುದು ಛಾಯಾಚಿತ್ರದ ರೂಪವನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾವಚಿತ್ರದ ಮೂರು ಮುಖ್ಯ ಮಾದರಿಗಳನ್ನು ಸ್ಥೂಲವಾಗಿ ಇಲ್ಲಿ ಗಮನಿಸಬಹುದು:

(ಯಶವಂತ ಚಿತ್ತಾಲ)

ನಾವು ಪ್ರಯಾಣ ಮಾಡುತ್ತಿದ್ದ ಅರ್ಧ ಗಂಟೆಯಷ್ಟು ಹೊತ್ತು ಸಿನಿಮಾ ಕುರಿತೇ ಚರ್ಚೆ ಮಾಡುತ್ತಿದ್ದುದನ್ನು ಕಂಡು ಆ ಲೈನ್ ಮ್ಯಾನ್‌ಗೆ ಅನುಮಾನ ಬಂದು ‘ನೀವು ಎಷ್ಟೊತ್ತಿಂದ ಬರೀ ಸಿನಿಮಾದ ಬಗ್ಗೆನೇ ಮಾತಾಡ್ತಿದ್ದೀರ. ಯಾವ ಕೆಲಸದಲ್ಲಿ ಇದೀರಾ?’ ಎಂದು ಕುತೂಹಲದಿಂದ ಕೇಳಿದರು. ಮುಕುಂದ ನನ್ನನ್ನು ತೋರಿಸಿ ‘ಇವರು ಗಿರೀಶ್ ಕಾಸರವಳ್ಳಿ’ ಎಂದಾಗ ಅವರಿಗೆ ಆಶ್ಚರ್ಯ. ‘ನೀವು?’ ಎಂದು ಮುಕುಂದರನ್ನು ಕೇಳಿದಾಗ ನಾನು ಕೆ ಇ ಬಿ ಯಲ್ಲಿ ಇಂಜಿನೀಯರೆಂದರು. ಆ ವ್ಯಕ್ತಿಯ ಮುಖದಲ್ಲಿ ತಪ್ಪುಮಾಡಿದ ಭಾವನೆ. ತಾನು ಹಿಂದೆ ಕೂರಲು ಹೇಳಿದ ವ್ಯಕ್ತಿ ತನ್ನದೇ ಇಲಾಖೆಯಲ್ಲಿ ತನಗಿಂತ ಉನ್ನತ ಹುದ್ದೆಯಲ್ಲಿರುವವರು ಎಂದು ಗೊತ್ತಾದಾಗ ಮುಂದೆ ಕೂರಲು ಹೇಳಿ, ನಾವು ಇಳಿಯುವವರೆಗೂ ಸಾರಿ ಸರೆಂದು ಹತ್ತಾರು ಬಾರಿ ಹೇಳಿದರು.

೧. ಎದುರಿಗೆ ಇರುವವರನ್ನು ಮೆಚ್ಚಿಸುವುದಕ್ಕಾಗಿ, ಸಮುದಾಯದ ಎದುರು ಪ್ರದರ್ಶಿಸುವುದಕ್ಕಾಗಿ ನಾವು ಒಂದು ಮುಖ/ಮುಖವಾಡ ಇಟ್ಟುಕೊಂಡಿರುತ್ತೇವೆ. ಹೆಚ್ಚಿನ ಛಾಯಾಚಿತ್ರಗಳಲ್ಲಿ ಅನಾವರಣಗೊಳ್ಳುವುದು ಈ ವ್ಯಕ್ತಿತ್ವ. ನಮ್ಮ ಹೆಚ್ಚಿನ ರಾಜಕಾರಣಿಗಳು, ನಟನಟಿಯರು, ಕ್ರೀಡಾಪಟುಗಳು, ತಮ್ಮ ಇಮೇಜ್ ಬಗ್ಗೆ ಯಾವತ್ತೂ ಕಾನ್ಶಸ್ ಆಗಿರುವವರು ನೀಡುವ ಪೋಸ್ಡ್ ಭಾವಚಿತ್ರಗಳು ಈ ಮಾದರಿಯವು. ಇಲ್ಲಿ ಆ ವ್ಯಕ್ತಿಯ ಬಾಹ್ಯರೂಪ ಆಕರ್ಷಕವಾಗಿ ಮೂಡಿ ಬರಬೇಕೆಂಬುದರತ್ತಲೇ ವ್ಯಕ್ತಿ ಹಾಗೂ ಛಾಯಾಗ್ರಾಹಕ ಇಬ್ಬರ ಗಮನವೂ ಇರುತ್ತದೆ. ಹಾಗಾಗಿ ಯಾವ ಛಾಯಾಚಿತ್ರದಲ್ಲಿ ವ್ಯಕ್ತಿ ಚೆಂದ ಕಾಣಿಸುತ್ತಾನೋ ಅದನ್ನೇ ಒಳ್ಳೆಯ ಚಿತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ.  ಆದರೆ ಇಂಥ ಚಿತ್ರಗಳನ್ನು ಉತ್ತಮ ಭಾವಚಿತ್ರಗಳೆಂದು ಕರೆಯುವುದು ಸ್ವಲ್ಪ ಕಷ್ಟ.

೨. ಇನ್ನೊಂದು ರೀತಿಯ ವ್ಯಕ್ತಿಚಿತ್ರ ಇರುತ್ತದೆ. ಇಲ್ಲಿ ಛಾಯಾಗ್ರಾಹಕರು ವ್ಯಕ್ತಿಯನ್ನು ಪೋಸ್  ಮಾಡಲು ಹೇಳುವುದಿಲ್ಲ. ಬದಲಿಗೆ ತನ್ನ ಕೆಲಸದಲ್ಲಿಸಂಪೂರ್ಣವಾಗಿ ಮಗ್ನವಾಗಿದ್ದಾಗ ಹೊರ ಹೊಮ್ಮುವ ಆ ವ್ಯಕ್ತಿಯ ಸಹಜ ವ್ಯಕ್ತಿತ್ವವನ್ನು ಸೆರೆ ಹಿಡಿಯುವುದರಲ್ಲಿ ಅವರ ಗಮನ ಇರುತ್ತದೆ. ಕುಲುಮೆಯೂದುವ ಕಮ್ಮಾರ, ನೇಜಿ ನೆಡುವ ಹೆಂಗಸು, ಲೆಕ್ಕ ಬರೆಯುತ್ತಿರುವ ಗುಮಾಸ್ತ, ಆಫೀಸಿನ ಜಂಜಾಟದಲ್ಲಿ ಮುಳುಗಿರುವ  ಆಫೀಸರ್ -ಹೀಗೆ ಅವರವರ ವೃತ್ತಿ ತಂದೊಡ್ಡುವ ಸವಾಲಿಗೆ, ಸಂತೋಷಕ್ಕೆ ಪ್ರತಿಕ್ರಿಯಿಸುತ್ತಿರುವ ಕ್ರಮದಲ್ಲಿ ಆ ವ್ಯಕ್ತಿಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಅಂತಹ ಮುಖಗಳನ್ನು ಸೆರೆ ಹಿಡಿಯುವ ಛಾಯಾಚಿತ್ರಗಳನ್ನು ಭಾವಚಿತ್ರ ಎಂದು ಹೆಸರಿಸುವ ಬದಲು ಸ್ವಭಾವಚಿತ್ರ ಎನ್ನಬಹುದೇನೋ! ನಾಲ್ಕು ದಶಕಗಳ ದೀರ್ಘ ಒಡನಾಟದಿಂದ ನಿಮಾಯ್ ಘೋಷ್ ಅವರು ಸೆರೆ ಹಿಡಿಯುತ್ತಿದ್ದ ಸತ್ಯಜಿತ್ ರಾಯ್ ಅವರ ಚಿತ್ರಗಳಿಗೆ ಆ ಗುಣ ಇದೆ. ಹಾಗೆಯೇ ಟಿ ಎಸ್ ಸತ್ಯನ್‌ರ ಅನೇಕ ಸುಂದರ ಛಾಯಾಚಿತ್ರಗಳೂ ಈ ತಕ್ಷಣ ನೆನಪಾಗುತ್ತಿವೆ. ಫ್ರಾನ್ಸ್‌ನ ಹೆನ್ರಿ ಕಾರ್ಟಿಯರ್ ಬ್ರೆಸ್ಸೊನ್ ಇಂಥ ಚಿತ್ರಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದವರು.

(ಎಸ್ ವಿ ಪರಮೇಶ್ವರ ಭಟ್ಟ)

೩. ಮೂರನೆಯ ರೀತಿಯ ವ್ಯಕ್ತಿಚಿತ್ರಕ್ಕಿರುವ ವಿಶಿಷ್ಟತೆ ಬೇರೆ ಬಗೆಯದು. ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ. ಕೆಲವು ಛಾಯಾಚಿತ್ರಗ್ರಾಹಕರು ಕಾದು ಸೆರೆಹಿಡಿಯುವುದು ಅಂತಹಒಳಗಿನ ವ್ಯಕ್ತಿಯನ್ನು ಮುಕುಂದರ ಛಾಯಾಚಿತ್ರಗಳು ಈ ಧಾಟಿಯವು. ತಾವು ಸೆರೆಹಿಡಿಯಬೇಕೆಂದಿರುವ ಸಬ್ಜೆಕ್ಟೆದುರು ಗಂಟೆಗಟ್ಟಲೇ ಕುಳಿತು, ಅವರನ್ನು ಅವರ ಪಾಡಿಗೆ ಕೆಲಸ ಮಾಡಲು ಬಿಟ್ಟು ಯಾವುದೋ ಒಂದು ಮಾಂತ್ರಿಕ ಘಳಿಗೆಯಲ್ಲಿ ಕ್ಲಿಕ್ಕಿಸುವ ಈ ಚಿತ್ರಗಳ ಸೌಂದರ್ಯವೇ ಬೇರೆ ರೀತಿಯದು. ಸುಪ್ತವಾಗಿರುವ ವ್ಯಕ್ತಿವಿಶಿಷ್ಟತೆಯನ್ನು ಅವು ಪ್ರಕಟ ಮಾಡುತ್ತಿರುತ್ತವೆ.

ಉದಾಹರಣೆಯಾಗಿ ಪ್ರಸ್ತುತ ಮಾಲಿಕೆಯಲ್ಲಿನ ಎರಡು ಛಾಯಾಚಿತ್ರಗಳನ್ನು ಆಯ್ದು ಅವುಗಳಲ್ಲಿ ಆ ವ್ಯಕ್ತಿಗಳ ಅಮೂಲ್ಯ ವ್ಯಕ್ತಿತ್ವ ಹೇಗೆ ಪ್ರಕಟವಾಗಿದೆಯೆಂದು ಹೇಳಲಿಚ್ಚಿಸುತ್ತೇನೆ. ಜಿ ಬಿ ಜೋಶಿಯವರನ್ನು ನಾನು ಭೇಟಿಯಾದದ್ದು ಕೆಲವೇ ಸಲ. ಅದರಲ್ಲೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲೇ ಹೆಚ್ಚು ಬಾರಿ. ಆದರೆ ಪ್ರತಿ ಭೇಟಿಯಲ್ಲೂ ಅವರು ನನ್ನನ್ನಾಗಲೀ, ನನ್ನ ನಾಟಕದ ಗೆಳೆಯರನ್ನಾಗಲೀ ಮಾತನಾಡಿಸುವ ರೀತಿಯಲ್ಲಿ ಆತ್ಮೀಯ ಸಲಿಗೆ ಎದ್ದುಕಾಣುತ್ತಿತ್ತು. ನಗುವಿನಲ್ಲಿ ಸಹಜತೆ ಇರುತ್ತಿತ್ತು. ವಿಸ್ಮಯ ಅವರ ಒಂದು ಸಹಜ ಪ್ರಕೃತಿ ಎನಿಸುತ್ತಿತ್ತು. ಅದರಲ್ಲಿ ಮಗುವಿನ ಮುಗ್ಧತೆ ಕಾಣುತ್ತಿತ್ತು. ಮುಕುಂದರ ಛಾಯಾಚಿತ್ರ ಜೋಶಿಯವರ ಬಾಹ್ಯ ಚಹರೆಯ ವಿವರಗಳ ಜೊತೆಗೇ ಅವರ ಅಂತರಂಗದ ಈ ವ್ಯಕ್ತಿತ್ವವನ್ನೂ ಮುನ್ನೆಲೆಗೆ ತರುತ್ತದೆ.

(ಡಿ. ಆರ್. ನಾಗರಾಜ್)

ಡಿ ಆರ್ ನಾಗರಾಜ್ ನನ್ನ ಸರೀಕರಲ್ಲೇ ನಾನು ಕಂಡ ಅತ್ಯಂತ ಧೀಮಂತ ವ್ಯಕ್ತಿ. ಯಾವುದೇ ವಿಷಯವನ್ನಾಗಲೀ, ಘಟನೆಯನ್ನಾಗಲೀ ಅದರ ಮೇಲ್ಪದರ ಛೇದಿಸಿ ಒಳಗೆ ಅಡಕವಾಗಿದ್ದ ರೂಪ ರಚನೆಯನ್ನು ಗಮನಿಸಿ, ಅದರ ರಾಜಕೀಯತೆಯನ್ನು  ಗ್ರಹಿಸಬಲ್ಲವರಾಗಿದ್ದರು. ಸ್ಥಾಪಿತ ಸತ್ಯಗಳನ್ನು ಪ್ರಶ್ನಿಸಿ ನಮ್ಮ ಗ್ರಹಿಕೆಗಳನ್ನು ಅಲುಗಾಡಿಸಬಲ್ಲವರಾಗಿದ್ದರು. ಮುಕುಂದ ಅವರ ಛಾಯಾಗ್ರಹಣ ಡಿ ಆರ್ ಅವರ ಈ ಗುಣವನ್ನು ಸೂಕ್ತವಾಗಿ ಕಾಣಿಸಿದೆ. ನೇರವಾಗಿ, ತೀಕ್ಷ್ಣವಾಗಿ ಕ್ಯಾಮೆರಾವನ್ನೇ ನೋಡುತ್ತಿರುವ ಅವರ ಕಣ್ಣುಗಳು ನಮ್ಮನ್ನೇ ಪ್ರಶ್ನಿಸುವಂತಿವೆ.

ಈ ಪುಸ್ತಕದಲ್ಲಿರುವ ಪ್ರತೀ ಛಾಯಾಚಿತ್ರದಲ್ಲೂ ಮುಕುಂದ ಕತ್ತಲೆ ಬೆಳಕಿನ ಲಾಸ್ಯವನ್ನು ಮಾರ್ಮಿಕವಾಗಿ ಸೆರೆ ಹಿಡಿದಿದ್ದಾರೆ. ಛಾಯಾಚಿತ್ರಗಳ ಅಂದ ಇದರಿಂದ ದ್ವಿಗುಣಗೊಂಡಿದೆ. ಈ ಚಿತ್ರಗಳನ್ನು ನೋಡುತ್ತಿರುವಾಗ ಯೂಸುಫ್ ಕಾರ್ಷ್ ಹಾಗು ನಮ್ಮವರೇ ಆದ ಕೆ ಜಿ ಸೋಮಶೇಖರ್ ಅವರ ಛಾಯಾಚಿತ್ರಗಳು ನೆನಪಾಗುತ್ತವೆ. ಮುಕುಂದ ತೆಗೆದಿರುವ ಚಿತ್ರಗಳು ಈ ಮೇಲಿನ ಛಾಯಾಚಿತ್ರಗಾರರ ಶೈಲಿಯ ಅನುಕರಣೆ ಖಂಡಿತಾ ಅಲ್ಲ. ಆದರೆ ಅವುಗಳೊಂದಿಗೆ ಒಂದು ಸಕೀಲ ಸಂಬಂಧವನ್ನಿಟ್ಟುಕೊಂಡ ಅವರದ್ದೇ ಆದ ಅನನ್ಯ ಶೈಲಿ.

 

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದ ಆಯ್ದ ಕೆಲವು ಭಾಗಗಳು ಇನ್ನು ಮುಂದೆ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳಲಿವೆ)

(ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ mup@manipal.edu ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)