ಬದುಕಿನಿಂದ ಪಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಬದುಕಿನೊಡನೆ ಅದೇ ಬೆಳೆಯುತ್ತಿದ್ದ ಆರೋಗ್ಯವಂತ, ಸದೃಢವಾದ ಹೊಸ ಸಂಬಂಧದ ಸೂಚನೆಯಿಂದ ಮುಗಿಯುತ್ತದೆ. ಈ ಕೊನೆಯೇ ಗೌರೀಶ-ಡೊಲಿಯರ ನಡುವಿನ ಸಂಬಂಧದ ನೈತಿಕತೆಯನ್ನು ನಿಶ್ಚಯಿಸಬೇಕು. ನಿಜವಾಗಿ ನೋಡಿದರೆ, ಕಾದಂಬರಿಯ ಹೆಸರು ಮುಕ್ತಿ-ಕಾದಂಬರಿಯ ಆರಂಭದಲ್ಲಿ ತೋರುವ ಭೂತಕಾಲದಿಂದ ಪಡೆಯಲಿಚ್ಚಿಸುವ ಬಿಡುಗಡೆಗಿಂತ ಹೆಚ್ಚಾಗಿ ಗೌರೀಶನನ್ನು ಜೀವನಾಭಿಮುಖಿಯನ್ನಾಗಿ ಮಾಡಿದ ಈ ಹೊಸ ಸಂಬಂಧದಿಂದ ಸಾರ್ಥಕಗೊಳ್ಳುತ್ತದೆ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯ ಯಶವಂತ ಚಿತ್ತಾಲರ ಬರಹ ನಿಮ್ಮ ಓದಿಗೆ

ತನ್ನ ಬದುಕನ್ನು ತಾನೇ ಬದುಕಬೇಕು: ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನ ಉದ್ದಕ್ಕೂ ತಾನೇ ಹೊರಬೇಕು: ತನ್ನ ಜೀವನದ ನೀತಿ ನಿಯಮಗಳನ್ನು ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು ಪರರಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ Existentialist ಪ್ರಜ್ಞೆಯುಳ್ಳ ಬಹುಶಃ ಕನ್ನಡದ ಮೊತ್ತ ಮೊದಲಿನ ಕಾದಂಬರಿ.

ಕಾದಂಬರಿಯ ಕೇಂದ್ರ ವ್ಯಕ್ತಿಯಾದ ಗೌರೀಶ ತನಗೆ ಬಂದ ಪ್ರಚಂಡ ಅನುಭವಗಳಿಂದ ರೂಪ, ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟದ ಕತೆ ಕಾದಂಬರಿಯ ವಸ್ತು. ಈ ಭೂತದಿಂದ ಪಾರಾಗುವ ಪ್ರಥಮೋಪಾಯವೆಂದರೆ ತನ್ನ ಅನುಭವಗಳ ಕರ್ಮಭೂಮಿಯಿಂದ ಪಲಾಯನ, ದೂರದ ಆಫ್ರಿಕೆಗೆ, ಮರೆವಿನ ಸಂಕೇತದಂತಿದ್ದ ಕತ್ತಲೆಯ ಖಂಡಕ್ಕೆ ಓಡಿ ಹೋಗುವ ನಿಶ್ಚಯದಿಂದ ಕತೆ ಆರಂಭವಾಗುತ್ತದೆ. ಈ ನಿಶ್ಚಯ ಮೂಡಿದ ದಿನ ಹಾಗೂ ತನ್ನನ್ನು ತನ್ನ ಮಾತೃಭೂಮಿಯಿಂದ ದೂರ ಒಯ್ಯಲಿರುವ ಹಡಗು ಹೊರಡಲಿರುವ ಮುಹೂರ್ತಗಳ ನಡುವಿನ ಇಪ್ಪತ್ತೆರಡು ದಿನಗಳ ಕಾಲದಲ್ಲಿ ಮಾಡಲು ಬೇರೆ ಏನೂ ಕೆಲಸವಿಲ್ಲದ್ದರಿಂದ ತನ್ನ ಇಷ್ಟು ದಿನಗಳ-ತಾನು ಪಾರಾಗ ಬಯಸುವ ಈ ನಿರಾಕಾರವಾದ ಅನುಭವಗಳಿಗೇ ಭಾಷೆಯಲ್ಲಿ ಒಂದು ಆಕಾರ ಕೊಡಬೇಕು ಎಂದು ಬಯಸಿದಾಗ ಹುಟ್ಟಿದ ಆಕೃತಿಬದ್ಧವಾದ ನೆನವರಿಕೆ ಕಾದಂಬರಿಯ ಹರಹು. ಒಂದರ್ಥದಲ್ಲಿ ಇದೇ ಅವನ ಮುಕ್ತಿಯ ದಾರಿ. ಸಂಪೂರ್ಣವಾಗಿ ವೈಯಕ್ತಿಕವಾದ ಈ ಅನುಭವಗಳಿಗೇ ವ್ಯಕ್ತ್ಯಾತೀತವಾದ ಕಲಾತ್ಮಕವಾದ ರೂಪ ಕೊಟ್ಟು ತನ್ನಿಂದ ದೂರ ಸರಿಸುವುದು. ಬದುಕು ಹಾಗೂ ಕಲೆಗಳ ನಡುವಿರುವ ಸಂಬಂಧವನ್ನು ಸೂಚಿಸುವ ಈ ದೃಷ್ಟಿಯೇ ಕಾದಂಬರಿಯ ತಂತ್ರವನ್ನು ನಿಶ್ಚಯಿಸಿದೆ. ಬರಿಯೆ ಭಾವನೆಗಳ, ಅರ್ಧ ಜಾಗೃತ ಪ್ರಜ್ಞೆಯ ಪಾತಳಿಯಲ್ಲಿ ಅನುಭವಿಸಿದ್ದನ್ನೆಲ್ಲ ಜಾಗೃತ ಪ್ರಜ್ಞೆಯ ವೈಚಾರಿಕ ಪಾತಳಿಯಲ್ಲಿ ಪುನರ್ವಿಮರ್ಶಿಸುವ ಮನೋವಿಶ್ಲೇಷಣಾತ್ಮಕ ತಂತ್ರ; ಗಾಸಿಗೊಳಿಸುತ್ತಿದ್ದ ಎಲ್ಲ ಭಾವನೆಗಳಿಂದ ಮುಕ್ತನಾಗಬೇಕಾದರೆ ಯಾವ ಒಂದು ಮುಚ್ಚು ಮರೆಯಿಲ್ಲದೇ ಅನುಭವಿಸಿದ್ದೆಲ್ಲ ಹೊರಗೆ ಬರಬೇಕು-ಮಾತಿನಲ್ಲಿ ಅಭಿವ್ಯಕ್ತಿ (Catharsis)) ಪಡೆಯಬೇಕು. ಕಾದಂಬರಿಯ ನಿರೂಪಣೆಯಲ್ಲಿ ವ್ಯಕ್ತವಾದ ಅಸಾಧಾರಣವಾದ ಪ್ರಾಮಾಣಿಕತೆ, ಧೈರ್ಯ ಈ ದೃಷ್ಟಿಯಿಂದ ಅರ್ಥಪೂರ್ಣವಾಗಿವೆ.

ತಾನು ಹಿಂದೆ ಅನುಭವಿಸಿದ್ದೆಲ್ಲವನ್ನೂ ಈಗ ಶಬ್ದದಲ್ಲಿ ಪುನರನುಭವಿಸುವಾಗ ನಡೆಯುವ ಒಂದೇ ಒಂದು ಮಹತ್ವದ ಘಟನೆಯೆಂದರೆ ಡೊಲಿಯೊಡನೆಯ ಸಂಪರ್ಕ, ಸಂಬಂಧ. ಒಂದು ರೀತಿಯಲ್ಲಿ ಇಡೀ ಕಾದಂಬರಿಯ ಉದ್ದೇಶ ಮೇಲು ನೋಟಕ್ಕೆ ಅನೈತಿಕವೆನ್ನಿಸಬಹುದಾದ ಈ ಸಂಬಂಧದ ನಿಜವಾದ ಅರ್ಥ ಮೌಲ್ಯಗಳನ್ನು ಅರಿಯುವುದೇ ಆಗಿದೆ. ಬಂದ ಅನುಭವಗಳಿಂದ ಹಿಂಡಿದ ಹಿಪ್ಪೆಯಾಗುತ್ತಿದ್ದಾಗ ಬರಿಯ ಸಹಾನುಭೂತಿ, ಸಂತೈಕೆ (ತನ್ನ ದೇಹವನ್ನು ಕೂಡ) ನೀಡಿದ ಹೆಣ್ಣಲ್ಲ ಡೊಲಿ. ತನ್ನ ಭೂತಕಾಲವನ್ನು ವಸ್ತುನಿಷ್ಠವಾಗಿ ನೋಡುವ ಕಣ್ಣು ಕೊಟ್ಟವಳೂ ಅವಳೇ.

ತನ್ನ ಬದುಕಿನ ‘ಅತಿಪ್ರಜ್ಞೆ’ (Super Ego) ಯಂತಿದ್ದ, ತನ್ನ ಬದುಕಿನ ಅರ್ಥಪೂರ್ಣತೆಯ, ಶಕ್ತಿಯ, ಸೆಲೆಯಂತಿದ್ದ, ಒಂದರ್ಥದಲ್ಲಿ ಇಲ್ಲಿಯವರೆಗೂ ಬಂದ ಅನುಭವಗಳೆಲ್ಲವನ್ನೂ ಇದಿರಿಸುವ ಧೈರ್ಯಕೊಟ್ಟ ಶ್ರೀಕಾಂತನ ಆತ್ಮಹತ್ಯೆಯಿಂದ ತನ್ನ ಬಾಳಿನ ಶೂನ್ಯತೆಯ ಅರಿವಾಗುತ್ತದೆ, ಗೌರೀಶನಿಗೆ. ಆಫ್ರಿಕೆಗೆ ಓಡಿ ಹೋಗಬೇಕು ಎಂಬ ನಿಶ್ಚಯದ ಹಿಂದಿನ ಬಹುದೊಡ್ಡ ಪ್ರೇರಣೆಯೆಂದರೆ ಶ್ರೀಕಾಂತನ ಸಾವು. ನಿಜವಾಗಿ ನೋಡಿದರೆ ತನ್ನ ನಿಜವಾದ ‘ಮುಕ್ತಿ’ ತಾನು ಬಿಡುವೆನೆಂದರೂ ತನ್ನನ್ನು ಬಿಡದ ಕುರುಡು ಶಕ್ತಿಯ (Id)) ಪ್ರತೀಕದಂತಿದ್ದ ಕಾಮಿನಿಯಿಂದ (ಇವಳು ಭೂತಕಾಲದ ಪ್ರತೀಕವೂ ಹೌದು) ಬಿಡುಗಡೆ ಹೊಂದುವುದರಲ್ಲೆಷ್ಟಿತ್ತೋ ಅಷ್ಟೇ ಅಧಿಕವಾಗಿ ತನ್ನ ಬದುಕಿನ ಸೂತ್ರಧಾರಕ ಶಕ್ತಿಯಂತಿದ್ದ ಶ್ರೀಕಾಂತನಿಂದ ಬಿಡುಗಡೆ ಹೊಂದುವುದರಲ್ಲಿತ್ತು ಎಂಬ ಸತ್ಯದ ಅರಿವು ಗೌರೀಶನಿಗೇ ಇರಲಿಲ್ಲ. ಶ್ರೀಕಾಂತನ ಪ್ರಭಾವಕ್ಕೆ ಒಳಗಾಗಿರುವವರೆಗೂ ತನ್ನ ಬದುಕನ್ನು ತಾನೇ ಬದುಕಲಾರ ಎಂಬುದನ್ನು ಅವನೇ ಅರಿತಿರಲಿಲ್ಲ. ಶ್ರೀಕಾಂತನ ಸಾವಿನಿಂದ ತಾನೂ ಸತ್ತೆ ಎಂದೆನಿಸುತ್ತಿರುವ ಗಳಿಗೆಯಲ್ಲೇ ಅವನಿಗೆ ಪುನರ್ಜನ್ಮವಿತ್ತ ಡೊಲಿಯ ಸಂಬಂಧ ಬೆಳೆಯುತ್ತದೆ. ಭೂತಕಾಲದ ಭೂತದಿಂದ ದೂರ ಸರಿದಷ್ಟೂ ‘ವರ್ತಮಾನ’ದ ಪ್ರತೀಕವಾಗಿದ್ದ ಡೊಲಿಗೆ ಹತ್ತಿರವಾಗುತ್ತಾನೆ; ಅಲ್ಲ, ಡೊಲಿಗೆ ಹತ್ತಿರವಾದಷ್ಟೂ ಭೂತದಿಂದ ದೂರ ಸರಿಯುತ್ತಾನೆ. ಸಂಪೂರ್ಣವಾಗಿ ಪಡೆದ ‘ಮುಕ್ತಿ’ ಗೇ ಡೊಲಿಯಲ್ಲಿ ಹುಟ್ಟಿದ ಪ್ರೀತಿ ಇನ್ನೊಂದು ಹೆಸರಾಗುತ್ತದೆ.

(ಯಶವಂತ ಚಿತ್ತಾಲ)

ಬದುಕಿನಿಂದ ಪಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಬದುಕಿನೊಡನೆ ಅದೇ ಬೆಳೆಯುತ್ತಿದ್ದ ಆರೋಗ್ಯವಂತ, ಸದೃಢವಾದ ಹೊಸ ಸಂಬಂಧದ (ಡೊಲಿಯ ಹೊಟ್ಟೆಯೊಳಗಿನ ಜೀವ ಪಿಂಡ ಇದರ ಸಂಕೇತ) ಸೂಚನೆಯಿಂದ ಮುಗಿಯುತ್ತದೆ. ಈ ಕೊನೆಯೇ ಗೌರೀಶ-ಡೊಲಿಯರ ನಡುವಿನ ಸಂಬಂಧದ ನೈತಿಕತೆಯನ್ನು ನಿಶ್ಚಯಿಸಬೇಕು. ನಿಜವಾಗಿ ನೋಡಿದರೆ, ಕಾದಂಬರಿಯ ಹೆಸರು ಮುಕ್ತಿ-ಕಾದಂಬರಿಯ ಆರಂಭದಲ್ಲಿ ತೋರುವ ಭೂತಕಾಲದಿಂದ ಪಡೆಯಲಿಚ್ಚಿಸುವ ಬಿಡುಗಡೆಗಿಂತ ಹೆಚ್ಚಾಗಿ ಗೌರೀಶನನ್ನು ಜೀವನಾಭಿಮುಖಿಯನ್ನಾಗಿ ಮಾಡಿದ ಈ ಹೊಸ ಸಂಬಂಧದಿಂದ ಸಾರ್ಥಕಗೊಳ್ಳುತ್ತದೆ.

ಅನುಭವವನ್ನು ನೋಡುವ ದೃಷ್ಟಿಯಲ್ಲಿಯಂತೆ ಅದನ್ನು ಭಾಷೆಯಲ್ಲಿ ಸಾಕಾರಗೊಳಿಸುವಲ್ಲಿ ವ್ಯಕ್ತಪಡಿಸಿದ ದಿಟ್ಟತನ, ಪ್ರಾಮಾಣಿಕತೆ, ಉಪಯೋಗಿಸಿದ ತಂತ್ರದಲ್ಲಿಯ ನಾವೀನ್ಯ ಈ ಕಾದಂಬರಿಯ ಮಹತ್ವದ ಗುಣಗಳಾಗಿವೆ.

ಆದರೆ ಈ ತಂತ್ರವೇ ಅಲ್ಲಿಯ ಪಾತ್ರಸೃಷ್ಟಿಯ ಅಪೂರ್ಣತೆಗೆ ಕಾರಣವಾಗಿದೆಯೇನೋ ಅನಿಸುತ್ತದೆ. ಡೊಲಿ, ಶ್ರೀಕಾಂತರ ಪಾತ್ರಗಳು ನಾವು ಮೆಚ್ಚುವಂತಹವುಗಳಾದರೂ ಸಂಪೂರ್ಣ ತೃಪ್ತಿ ಕೊಡುವಂತಹದಲ್ಲ. ಡೊಲಿ, ಶ್ರೀಕಾಂತ, ಕಾಮಿನಿ ಇವರ ಬಗ್ಗೆ ಕಾದಂಬರಿಯಿಂದ ತಿಳಿಯುವ ಸತ್ಯ-ಇವರೆಲ್ಲ ನಿಜವಾಗಿಯೂ ಹೇಗೆ ‘ಇದ್ದರು’ ಎನ್ನುವುದಲ್ಲ; ಇವರೆಲ್ಲ ಗೌರೀಶನಿಗೆ ಹೇಗೆ ‘ಕಂಡರು’ ಎನ್ನುವುದು. ನಮಗೆ ಸಿಗುವುದು ಈ ಪಾತ್ರಗಳ ಸರ್ಟಾಂಗ ಪರಿಚಯವಲ್ಲ; ಗೌರೀಶನಿಗೆ ಕಂಡ, ಅವನು ಅರ್ಥಮಾಡಿಕೊಂಡ ಪಾರ್ಶ್ವದ ಪರಿಚಯ ಮಾತ್ರ. ಅಥವಾ ಜೀವಂತ ಪಾತ್ರಸೃಷ್ಟಿ ಈ ಕಾದಂಬರಿಯ ಮುಖ್ಯ ಗುರಿಯೇ ಅಲ್ಲವೇನೋ.

(ಕೃಪೆ: ಸಂಕ್ರಮಣ-8, ಅಕ್ಟೋಬರ್ 1965, ಸಂಪುಟ 2, ಸಂಚಿಕೆ 2)