ಸಾಲು ಮರದ ತಿಮ್ಮಕ್ಕ ಮಕ್ಕಳಿಲ್ಲದ ಕಾರಣಕ್ಕೆ ಮರಗಳಿಗೆ ನೀರು ಹೊತ್ತೊಯ್ದಳು ಎಂಬಂತಹ ಸಾಮಾಜಿಕ ಸೇವೆ ಮಾಡಿರೆಂದು ಹೇರುತ್ತಿಲ್ಲ. ಇದೆಲ್ಲ ನಿಮಗಾಗಿ, ನಿಮ್ಮದೆ ಒಳಿತಿಗಾಗಿ, ನಿಮ್ಮ ಜೇಬಿನ ಹೊರೆ ಇಳಿಸಲಿಕ್ಕಾಗಿ. ಬಿಹಾರದ ಮಾಂಜಿ ಎಂಬುವವನ ಹೆಂಡತಿಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲಿಕ್ಕೆ ರಸ್ತೆಯಿರದೆ ಅವನ ಹೆಂಡತಿ ಅಸುನೀಗಿದಳಂತೆ. ಆಸ್ಪತ್ರೆಗೆ ಅವನು ಬೆಟ್ಟ ಸುತ್ತಿಕೊಂಡು/ಹತ್ತಿಕೊಂಡು ಹೋಗಬೇಕಿತ್ತಂತೆ. ಹಾಗಾಗಿ ಅವನು ಹೆಂಡತಿ ತೀರಿಕೊಂಡ ನಂತರ ಇತರ ಸಂಘಜೀವಿಗಳಿಗೆ ಅನುಕೂಲವಾಗಲೆಂದು ಬೆಟ್ಟ ಕಡಿದು ರಸ್ತೆ ಮಾಡಿದನಂತೆ. ಇದೆಲ್ಲ ಅಸಾಮಾನ್ಯನು ಮಾಡುವಂಥದು. ಇದಕ್ಕೆ ತಪಸ್ಸು ಬೇಕು. ಗಳಿಸಲಾಗದ್ದನ್ನು ಕಳೆದುಕೊಂಡಿರಬೇಕು. ನೀವು ಮಾಂಜಿ ತರಹ ಮಾಡಲಾಗದಿದ್ದರೂ ನಿಮ್ಮ ನಿಮ್ಮ ತನುವ ಮನವ ಸುಖವಾಗಿಡಬಲ್ಲಷ್ಟು ಮಾಡಲಾರಿರೇ?
ಮಧುಸೂದನ್ ವೈ.ಎನ್ ಅಂಕಣ

 

ಇಂದೆಲ್ಲ ದುಡಿವಿನ ದಣಿವಿನ ದಿನ. ದುಡಿದು ದಣಿದು ಮನೆಗೆ ಹೋಗುತ್ತೀರಿ. ಉಂಡು ಗಂಡ/ಹೆಂಡತಿ ಮಕ್ಕಳೊಡಗೂಡಿ ಆಟವಾಡಿ ಮಲಗುತ್ತೀರಿ. ಇವತ್ತಿನ ದಿನ ಎಲ್ಲವೂ ಸುಗಮ, ಕ್ಷೇಮ. ಮೈ ಕೈ ನೋವು. ಗಾಢ ನಿದ್ರೆ ಆವರಿಸುತ್ತದೆ. ನಸುನಸುಕಿನಲ್ಲೇ ಏನೋ ಸದ್ದು, ಕಿರಿಕಿರಿ, ನಿದ್ದೆಗೆ ಭಂಗ. ಠಣಾ ಠಣ ಠಣ. ಇಷ್ಟೊತ್ತಿಗೆ ಅಲರಾಂ ಅಂತೂ ಇಟ್ಟಿಲ್ಲವಲ್ಲ… ಒಲ್ಲದ ಮನಸ್ಸಿನಿಂದಲೆ ಎಚ್ಚರಗೊಂಡು ಬೆಡ್ ಶೀಟ್ ಸರಿಸಿ ಸುತ್ತ ಅವಲೋಕಿಸುತ್ತೀರಿ. ಕಿಟಕಿಗೆ ಏನೋ ಬಡಿಯುತ್ತಿದೆ. ತಾರಸಿ ಮೇಲೂ ಅದೇ ಸದ್ದು, ಠಪ್ ಠಪ್ ಠಪ್… ಏನೆಂದು ತಿಳಿಯುತ್ತಿಲ್ಲ. ಆಲಿಕಲ್ಲಿನ ಮಳೆಯಲ್ಲ ತಾನೆ. ಇದ್ದಿದ್ದರೆ ಕಿಟಕಿ ತೋಯುತ್ತಿತ್ತಲ್ಲ..

ಯಾರೋ ಅನ್ಯ ದೇಶದವನು ವಿಮಾನದಿಂದ ಕಲ್ಲುಮಳೆ, ಪಟಾಕಿ ಮಳೆ ಸುರುತ್ತಿಲ್ಲ ತಾನೇ… ಹೆದರುತ್ತೀರಿ. ತುಸು ಬೆವರೇ ಸರಿ, ಬೇಸಿಗೆ ಇರುಳು. ಮಂಚದಿಂದಿಳಿದು ಕೋಣೆಯ ಬಾಗಿಲು ತೆರೆದು ಅರೆಗಣ್ಣಿನಲ್ಲೇ ಮುಂಬಾಗಿಲ ಅಗುಣಿ ಇಳಿಸಿ ಅಂಗಳಕ್ಕಿಳಿದು ಗೇಟಿನ ಸರಳು ಬಿಚ್ಚುತ್ತೀರಿ… ಹೊರಗೂ ಠಣಾ ಠಣಾ ಠಣಾ…ಏನೆಂದು ಗೊಂದಲದಿಂದ ಕಡುಗಪ್ಪಿನ ಆಕಾಶಕ್ಕೆ ಮುಖ ಮಾಡಿದಾಗ.. ಬಿಲ್ಲೆಯೊಂದು ಥಪ್ಪನೆ ನಿಮ್ಮ ಮೂಗಿನ ಮೇಲೆ ಬಿದ್ದು ನೋಯಿಸಿ ದಂಗುಬಡಿಸುತ್ತದೆ. ರಸ್ತೆಗಿಳಿದಾಗ.. ಅಲ್ಲಿ, ರಸ್ತೆ ತುಂಬೆಲ್ಲ ಕಾಸು… ರುಪಾಯಿ ಕಾಯನ್ನುಗಳು…. ಆಕಾಶವು ದುಡ್ಡಿನ ಮಳೆ ಸುರಿಸುತ್ತಿದೆ !… ಎಂತಹ ಸುಂದರ ಕಲ್ಪನೆ!.

ಇದು ಕಲ್ಪನೆಯಲ್ಲ ಮನುಜರೇ ವಾಸ್ತವ. ನಾವು ಅರಿತಿಲ್ಲವಷ್ಟೆ. ಇವರನ್ನು ಈ ಮೂಲಕ ಭೇಟಿ ಮಾಡೋಣ ಬನ್ನಿ, ಶಿವಕುಮಾರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISC)ಯ ನಿವೃತ್ತ ವಿಜ್ಞಾನಿ. ವಿಜ್ಞಾನಿ ಎಂದಾಕ್ಷಣ ಇವರೇನೋ ಜನಸಾಮಾನ್ಯರ ಕೈಗೆಟುಕದ ಅಂತರಿಕ್ಷ ಯಾ ನ್ಯಾನೋ ತಂತ್ರಜ್ಞಾನ ಬಳಸಿ ಹೀಗೆ ಸುಖಾಸುಮ್ಮನೆ ಆಕಾಶದಿಂದುರುವ ಕಾಸನ್ನು ಕಲೆ ಹಾಕುತ್ತಿಲ್ಲ. ನಾವು ನೀವು ಮನಸಾರೆ ಮೋರಿಗೆ ಹರಿಬಿಡುತ್ತಿರುವ ಕಾಸನ್ನು ಉಪಾಯವಾಗಿ ಹಿಡಿದಿಡುತ್ತಿದ್ದಾರೆ. ಆ ಕಾಸಿನಲ್ಲೆ ಸ್ನಾನ ಮಾಡುತ್ತಿದ್ದಾರೆ. ಮಳೆಕೊಯ್ಲಿನ ಮೂಲಕ. ಸಂಗತಿ ಗೊತ್ತಾದರೆ ನೀವೂ ಆಶ್ಚರ್ಯಚಕಿತರಾಗುತ್ತೀರಿ, ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ, ಬರೋಬ್ಬರಿ ಇಪ್ಪತ್ನಾಲ್ಕು ವರ್ಷ…. ಇವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ; ಜಲಮಂಡಳಿಗೆಂದು ಒಂದು ರುಪಾಯಿ ಕಾಸು ಬಿಚ್ಚಿಲ್ಲ. ಇನ್ನೇನಿಲ್ಲ, ಬೆಂಗಳೂರಿನ ಮಟ್ಟಕ್ಕೆ ತೀರ ಸಾಮಾನ್ಯವೆನಿಸುವ ತನ್ನ ಥರ್ಟೀ ಫಾರ್ಟಿ ಜಾಗದ ಮನೆಯ ಮಾಳಿಗೆಯಿಂದ ವರ್ಷಂಪೂರ್ತಿ ತಾನು ತನ್ನ ಕುಟುಂಬಕ್ಕೆ ಸಾಕಾಗುವಷ್ಟು ಮಿತಿ ಮೀರುವಷ್ಟು ನೀರನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ, ಝೀರೋ ಜಲಕಂಟಕ ಬದುಕು ಸಾಗಿಸುತ್ತಿದ್ದಾರೆ.

ಹೇಗೆ? ತಿಳಿಯೋಣ ಬನ್ನಿ….

ಇವರು 1995 ರಲ್ಲಿ ಮನೆ ಕಟ್ಟುವಾಗ ಇದರ ಬಗ್ಗೆ ಕೂಲಂಕುಶವಾಗಿ ಯೋಚಿಸಿ ಮಾಹಿತಿ ಸಂಗ್ರಹಿಸಿದರು. ಇಬ್ಬರಿಗೆ ಇಬ್ಬರು ಎನ್ನುವಂತೆ ನಾಲ್ಕು ಮಂದಿಯ ಸಮತೋಲನ ಸಂಸಾರ ಇವರದ್ದು. ಒಟ್ಟಾರೆ ವರ್ಷಕ್ಕೆ 1.8 ಲಕ್ಷ ಲೀಟರಿನ ನೀರಿನ ಅಗತ್ಯ ಕುಟುಂಬಕ್ಕೆ. ಕಳೆದ ನೂರು ವರ್ಷಗಳಲ್ಲಿ ಬೆಂಗಳೂರಿನಲ್ಲಾಗಿರುವ ಮಳೆಯ ಪ್ರಮಾಣವನ್ನು ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿ ಲೆಕ್ಕ ಹಾಕಿದಾಗ ತಿಳಿದು ಬಂದದ್ದು ಇರುವ ಥರ್ಟೀ ಫಾರ್ಟೀ ಜಾಗದಲ್ಲಿ ಇವರು ವರ್ಷಕ್ಕೆ 2 ಲಕ್ಷ ಲೀಟರು ನೀರು ಕಲೆ ಹಾಕಬಹುದೆಂದು. ಇಲ್ಲಿ ನಿಮಗೆ ಸಂದೇಹ ಹುಟ್ಟಬಹುದು, ತಿಂಗಳಾನುಗಟ್ಟಲೆ ಕೊಳೆತ ನೀರನ್ನು ಸಂಗ್ರಹಿಸಿ ಬಳಸಬೇಕೇ? ಬೆಂಗಳೂರಿನ ಮಳೆಯ ಋತುಮಾನ ಅವಲೋಕಿಸಿದರೆ ಹನ್ನೆರಡು ತಿಂಗಳಲ್ಲಿ ಎಂಟು ತಿಂಗಳು ಅಂದರೆ ಏಪ್ರಿಲ್ ನಿಂದ ನವೆಂಬರ್ ವರೆಗೆ ಈ ನಗರದ ಆಕಾಶವು ಅಗತ್ಯ ಮೀರಿ ಹನಿಸುತ್ತದೆ.

ಈ ಡೇಟಾ ನೀವು ಗಮನಿಸಿದರೆ(http://bengaluru.citizenmatters.in/some-lessons-for-bengaluru-from-100-years-of-rain-data-8013) ಬೆಂಗಳೂರಲ್ಲಿ ವರ್ಷಂಪೂರ್ತಿ ಮಳೆಯುಂಟು. ಜನವರಿಯಲ್ಲಿ ಮಾತ್ರ ತುಸು ಕಡಿಮೆ. ಇಲ್ಲೇನು ನೀವು ಗದ್ದೆ ಗೇಯಬೇಕಿಲ್ಲ ತಾನೆ. ಕುಡಿಲಿಕ್ಕೆ, ಅಡಿಗೆಗೆ, ಹಲ್ಲುಜ್ಜಲು, ಮುಖ ತೊಳೆಯಲು, ಅಂಡು ತೊಳೆಯಲು… ಹೆಚ್ಚೆಂದರೆ…. ಕಾರು ತೊಳೆಯಲು ಮತ್ತು ಗಿಡಗಳಿಗೆ ನೀರುಣಿಸಲು ನೀರು ಬೇಕು. ಬೆಂಗಳೂರಿನ ಮಟ್ಟಿಗೆ ಪ್ರಕೃತಿ ಮಾತೆಯು ಧಾರಾಳಿ. ಇಲ್ಲಿನ ಆಕಾಶ ಅಕ್ಷಯ ಪಾತ್ರೆ. ಶಿವಕುಮಾರ್ ಅವರ ಮಾಹಿತಿ ಸಂಗ್ರಹಣೆ ಪ್ರಕಾರ ಬೆಂಗಳೂರಲ್ಲಿ ಎರಡು ಉತ್ತಮ ಮಳೆಗಳ ನಡುವಿರುವ ಗರಿಷ್ಠ ಅಂತರ ನೂರು ದಿವಸಗಳು! ಬರಗಾಲ ಅಂತಿಟ್ಟುಕೊಳ್ಳೋಣ, ನೂರು ದಿವಸ ಒಂದು ಹನಿಯೂ ಉದುರೋದಿಲ್ಲ, ಶಿವಕುಮಾರ್ ಈ ನೂರು ದಿನಗಳಿಗೆ ಬೇಕಾದ ನೀರು ಲೆಕ್ಕ ಹಾಕಿ 45 ಸಾವಿರ ಲೀಟರ್ ಕೆಪಾಸಿಟಿಯ ಸಂಪುಗಳನ್ನು ಕಟ್ಟಿಸಿದ್ದಾರೆ. ದುಡ್ಡು ತೆತ್ತು ಕುಡಿವ ಪ್ಯಾಕೇಜ್ಡ್ ನೀರು ಎಷ್ಟೋ ಸಲ ಇದಕ್ಕಿಂತ ಹೆಚ್ಚು ದಿವಸ ಬಾಟಲಿಯಲ್ಲಿ ಬಂಧಿಯಾಗಿರುತ್ತದೆ.. ಅಂತದರಲ್ಲಿ ನೆಲ ಒರೆಸಲು.. ಟಾಯ್ಲೆಟ್ ಫ್ಲಶ್ ಮಾಡಲೂ…

ಇದಿಷ್ಟೂ ಇದು ಸಾಧ್ಯವೇ ಎಂಬುವವರಿಗೆ ಮಾಹಿತಿ. ಇನ್ನು ಈ ವಿಜ್ಞಾನಿ ಕೈಲಾಗುವುದು ತಮ್ಮ ಕೈಲಾದೀತೇ ಎಂಬ ಪ್ರಶ್ನೆಗೆ ಬರೋಣ. ಇತ್ತೀಚೆಗೆ ನಾನು ನನ್ನ ಕುಟುಂಬವು ಪರಿಚಯಸ್ಥರ ಹೊಸ ಮನೆ ಕಾಮಗಾರಿ ವೀಕ್ಷಿಸಲು ಹೋಗಿದ್ದೆವು. ಇಬ್ಬರು ಸ್ನೇಹಿತರು ಅಕ್ಕ ಪಕ್ಕ ಸೈಟು ಕೊಂಡುಕೊಂಡು ಒಳ ಒಡಂಬಡಿಕೆ ಮಾಡಿಕೊಂಡು ಎರಡೂ ಮನೆಗಳ ನಡುವೆ ಬಿಡಬೇಕಾದ ಜಾಗವನ್ನು ಸರ್ಕಾರದ ನಿಯಮ ತೂರಿ ಆಕ್ರಮಿಸಿ ಭವ್ಯ ಬಂಗಲೆ ಕಟ್ಟುತ್ತಿದ್ದಾರೆ. ಮೂರತಂಸ್ತಿನವು. ಒಂದೊಂದೂ ಥರ್ಟೀ ಫಾರ್ಟೀಗಿಂತ ಹೆಚ್ಚು. ಎಷ್ಟೆಂದು ನೆನಪಿಲ್ಲ. ಅವರೂ ನೀರಿನ ಗುಂಡಿ ಮಾಡಿಸಿದ್ದಾರೆ. ಅದಕ್ಕೆ ಅಗತ್ಯವಿರುವ ಫಿಲ್ಟರುಗಳನ್ನು ಲಗತ್ತಿಸಿದ್ದಾರೆ. ಮನೆಯ ಪ್ರವಾಸ ಮಾಡಿಸುತ್ತ ಅವರು ನಮಗೆ ಏನೆಲ್ಲ ಮಾಡಿಸಿದ್ದೇವೆಂದು ವರ್ಣಿಸುತ್ತಿದ್ದರು. ನೀರಿನ ಗುಂಡಿ ವಿವರಿಸುವಾಗ ಇದು ನೆಪ ಮಾತ್ರಕ್ಕೆ ಎಂದು ನಗೆಯಾಡುತ್ತ ಹೇಳಿದರು. ಜಲಮಂಡಳಿ ಒದಗಿಸುವ ನೀರೇ ನಮಗೆ ಸಾಕಾಗುತ್ತದೆ ಎನ್ನುತ್ತ ಮಳೆಕೊಯ್ಲಿನ ವ್ಯವಸ್ಥೆಯನ್ನು ಸರ್ಕಾರದ ನಿಯಮಾನುಸಾರ ಹಾಕಿಸಿ ಅದನ್ನು ಹೇಗೆ ಉಪಯೋಗಕ್ಕೆ ಬಾರದಂತೆ ಬಂದ್ ಮಾಡಿಬಿಟ್ಟಿದ್ದೇವೆಂದು ಹೆಮ್ಮೆಯಿಂದ ಕೊಚ್ಚಿಕೊಂಡರು. ನಮಗೋ ಬೇಸರ. ಪ್ರಶ್ನಿಸಿ ವಿವರಿಸಿ ಸಹಾಯ ಮಾಡಲು ಮುಂದಾದೆವು. ಅವರಿಗೆ ತಮ್ಮ ಭವ್ಯ ಬಂಗಲೆಯ ಪ್ರವಾಸ ಮಾರ್ಗದರ್ಶಿಯಾಗಿದ್ದ ಹುಮ್ಮಸ್ಸು. ಅದಕ್ಕೆ ಕಿವಿಗೊಡಲೇ ಇಲ್ಲ. ಹಾಗಿದ್ದರೆ ನಮ್ಮ ನಿವೃತ್ತ ವಿಜ್ಞಾನಿ ಶಿವಕುಮಾರ್ ಇವರಿಗಿಂತ ಭಿನ್ನವಾಗಿ ಏನು ಮಾಡಿದ್ದರು? ಎಷ್ಟು ತ್ರಾಸು ತಗೊಂಡಿದ್ದರೂ…? ಸೊನ್ನೆ.

ವಿಜ್ಞಾನಿ ಎಂದಾಕ್ಷಣ ಇವರೇನೋ ಜನಸಾಮಾನ್ಯರ ಕೈಗೆಟುಕದ ಅಂತರಿಕ್ಷ ಯಾ ನ್ಯಾನೋ ತಂತ್ರಜ್ಞಾನ ಬಳಸಿ ಹೀಗೆ ಸುಖಾಸುಮ್ಮನೆ ಆಕಾಶದಿಂದುರುವ ಕಾಸನ್ನು ಕಲೆ ಹಾಕುತ್ತಿಲ್ಲ. ನಾವು ನೀವು ಮನಸಾರೆ ಮೋರಿಗೆ ಹರಿಬಿಡುತ್ತಿರುವ ಕಾಸನ್ನು ಉಪಾಯವಾಗಿ ಹಿಡಿದಿಡುತ್ತಿದ್ದಾರೆ. ಆ ಕಾಸಿನಲ್ಲೆ ಸ್ನಾನ ಮಾಡುತ್ತಿದ್ದಾರೆ. ಮಳೆಕೊಯ್ಲಿನ ಮೂಲಕ.

ಶಿವಕುಮಾರ್ ನನ್ನ ಸ್ನೇಹಿತರಿಗಿಂತ ಏನನ್ನೂ ಹೊಸದಾಗಿ ಮಾಡಿಲ್ಲ. ಅವರು ಬಂದ್ ಮಾಡಿದ್ದನ್ನು ಇವರು ಓಪನ್ ಮಾಡಿದ್ದರಷ್ಟೇ… ಅವರಿಗಿಂತ ಇವರು ಒಂದು ಹೆಚ್ಚುವರಿ ಸಂಪ್ ಮಾಡಿಸಿದ್ದರಷ್ಟೆ. ಅದು ಮಾಡಿಸಿರದಿದ್ದಲ್ಲಿ ವರ್ಷವಲ್ಲದೆ ಆರು ತಿಂಗಳಿಗೆ ನೀರು ಸಂಗ್ರಹವಾಗುತ್ತಿತ್ತಷ್ಟೆ. ಮತ್ಯಾಕೆ ನಾವು ಇರುವ ವ್ಯವಸ್ಥೆಯನ್ನು, ಕಾಸು ಕೊಟ್ಟು ಹಾಕಿಸಿಕೊಂಡ ವ್ಯವಸ್ಥೆಯನ್ನು ತಲೆಬಾಗಿಲಿಗೆ ಕುಂಬಳಕಾಯಿ ಕಟ್ಟಿದಂತೆ ಹಾಕಿ ವ್ಯರ್ಥ ಬಿಡುವುದು? ನಮ್ಮ ಪ್ರಶ್ನೆಗೆ ಸ್ನೇಹಿತರ ಉತ್ತರ, ಜಲಮಂಡಳಿ ಬಿಡುವ ನೀರೇ ನಮಗೆ ಸಾಕಾಗುತ್ತದೆ, ಮತ್ತು ಈ ಮಳೆ ನೀರು ಏನೋ ಎಂತೋ…

ಮನೆಯಲ್ಲಿ ಕಕ್ಕಸುಗುಂಡಿ ಯಾವ ಮೂಲೆಯಲ್ಲಿರಬೇಕೆಂದು ಎಷ್ಟು ಜನರನ್ನು ವಿಚಾರಿಸುತ್ತೇವೆ, ಎಷ್ಟು ಹಣ ತೆತ್ತು ವಾಸ್ತು ಬರೆಸುತ್ತೇವೆ, ಹಾಗೆಯೆ ಮಳೆ ನೀರು ಏನೋ ಎಂತೋ ಎಂಬ ಸರಳ ಪ್ರಶ್ನೆಗೆ ವಿಚಾರಿಸಿ ತಿಳಿದುಕೊಳ್ಳುವುದು (ಅದೂ ಉಚಿತವಾಗಿ, ವಾಸ್ತುತಜ್ಞರಿಗೆ ತೆತ್ತಂತೆ ಹಣ ತೆರಬೇಕಾಗಿಲ್ಲ) ಅಷ್ಟು ಕಷ್ಟವಾ?

ನಾನು ಬಾಡಿಗೆ ಮನೆಯಲ್ಲಿರುವವನು ತಿಂಗಳಿಗೆ ಮುನ್ನೂರರಿಂದ(ಮಳೆಗಾಲ) ಎಂಟುನೂರರವೆರೆಗ(ಬೇಸಿಗೆಕಾಲ) ನೀರಿಗೆ ವ್ಯಯಿಸುತ್ತೇನೆ, ಕುಡಿಯುವ ನೀರಿನ ಹೊರತಾಗಿ. ವರ್ಷಕ್ಕೆ ಏನಿಲ್ಲಾಂದರೂ ಏಳೆಂಟು ಸಾವಿರ ರುಪಾಯಿಯ ಖರ್ಚು. ಇದನ್ನು ಮೀರಿ ಕಾರು ತೊಳೆಯಲಿಕ್ಕೆ ಹೊರಗಡೆ ಕೊಟ್ಟು ಅಲ್ಲಿ ತಗುಲುವ ವ್ಯಚ್ಚ ಇದಕ್ಕೆ ಹೊರತು. ಏನಪ್ಪ ರುಪಾಯಿ ಖರ್ಚಿಲ್ಲದೆ ಇದು ಸಾಧ್ಯ ಎಂದು ನೀನು ಹೇಳುವುದಾದರೆ ಜಗತ್ತೇ ಹೀಗಿರಬೇಕಿತ್ತಲ್ಲ ಯಾರೂ ಯಾಕೆ ಇದನ್ನು ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ… ನಿಮ್ಮ ಪ್ರಶ್ನೆ. ನನ್ನ ಉತ್ತರ.. ಅಜ್ಞಾನ, ಸೋಮಾರಿತನ. ಇದಕ್ಕೂ ಮೀರಿ ಇನ್ನೇನಿರಬಹುದು, ಹಣ ಉಳಿಸು ಅರ್ಥಾತ್ ಗಳಿಸು ಅಂತಿದ್ದರೂ ಜನ ಯಾಕೀ ಮೆಥೆಡ್ಡಿಗೆ ಮೊರೆ ಹೋಗುತ್ತಿಲ್ಲ? ನೀವು ಇಂಕಮ್ ಟ್ಯಾಕ್ಸ್ ಕಟ್ಟುತ್ತಿರುವ ಮಂದಿಯಾಗಿದ್ದರೆ, ತುಸುವೇ ಸಮಯ ಶ್ರಮ ವ್ಯಯಿಸಿದ್ದಲ್ಲಿ ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಸಾವಿರ ಉಳಿಸಬಲ್ಲಿರಿ. ಮಂದಿ ಅದನ್ನು ಮಾಡುವುದಿಲ್ಲ. ಸರ್ಕಾರ ಕಿತ್ತುಕೊಂಡಷ್ಟು ಕೊಟ್ಟು ಸುಮ್ಮನಾಗುತ್ತಾರೆ, ಬಂದದ್ದೇ ಸಾಕೆಂದು. ಮಳೆಕೊಯ್ಲೂ ಹಾಗೆಯೆ. ಆಗಾಗ್ಗೆ ಮಾಳಿಗೆಯನ್ನು ಗುಡಿಸುವುದು, ಫಿಲ್ಟರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಥವಾ ಹಾಳಾದಾಗ ಬದಲಾಯಿಸುವುದು(ಇದು ಕುಡಿವ ನೀರಿನ ಫಿಲ್ಟರುಗಳಂತೆ ದುಬಾರಿಯಲ್ಲ ಮತ್ತೆ).. ಇದಷ್ಟೇ ನಿಮ್ಮ ಕೆಲಸ.

ಶಿವಕುಮಾರ್ ಮಳೆಕೊಯ್ಲು ಮಾಡೋದಷ್ಟೇ ಅಲ್ಲದೆ ಕೊಯ್ಲು ಮಾಡಿದ ನೀರನ್ನು ಬಳಸಿ ಅದನ್ನು ಮತ್ತೆ ಶುದ್ಧೀಕರಿಸಿ ಪುನಃ ಬಳಸುತ್ತಾರೆ, ಅಂದಮಾತ್ರಕ್ಕೆ ನೀವು ಅವರಿಗೆ ಮಳೆ ನೀರು ಸಾಕಾಗಲಿಲ್ಲವೇನೋ ಎಂದು ಭಾವಿಸಬೇಕಿಲ್ಲ… ಅವರು ವಿಜ್ಞಾನಿ, ಸಮಾಜಕ್ಕೆ ಮಾದರಿಯಾಗುವ ಇರಾದೆ, ಪಾಠ ತಿಳಿಸುವ ಹುಮ್ಮಸ್ಸು ಹಾಗಾಗಿ ಇದನ್ನೆಲ್ಲ ಮಾಡುತ್ತಾರೆ. ನೀವು ಮಳೆ ನೀರು ಕೊಯ್ಲು ಮಾಡಿದರೆ ಅದಷ್ಟೇ ಸಾಕು, ನಿಮ್ಮದೇ ಅನುಕೂಲಕ್ಕೆ. ಇವರು ಕೇವಲ ಮನೆಗಷ್ಟೆ ಉಪಕಾರಿಯಾಗಿರದೆ ಹಲವಾರು ಪರೋಪಕಾರಿ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರಿನ ಜಯನಗರ ಪಾರ್ಕಿನಲ್ಲಿ ಮಳೆಕೊಯ್ಲಿನ ಇವರ ಶ್ರಮ ಕಾಣಬಹುದು. ಬೆಂಗಳೂರಿನ ಜಲಮಂಡಳಿ ಮೇಲೆ ತಿಳಿಸಿದ ಸ್ನೇಹಿತರ ಮನೆಯಲ್ಲಿ ಮಳೆಕೊಯ್ಲಿನ ಗುಂಡಿ ಮಾಡಿಸುವ ಕಾನೂನು ತರಲಿಕ್ಕೆ ಇದೇ ಶಿವಕುಮಾರ್ ಅವರ ಕಾಣಿಕೆಯಿದೆ. ಏನ್ಮಾಡೋದು, ಬರೀ ಕಾನೂನೇ ಎಲ್ಲದಕ್ಕೂ ಪರಿಹಾರ ಅಂತಿದ್ದರೆ ನಾವ್ಯಾಕೆ ಸಿಗ್ನಲ್ಲಲ್ಲಿ ಏರೋಪ್ಲೇನ್ ಮಟ್ಟಿಗೆ ಬೈಕ್ ಹಾರಿಸುತ್ತಿದ್ದೆವು, ಅಲ್ಲವಾ? ಈ ರೀತಿ ಕಾನೂನು ಮಾಡಿದಾಗ್ಯೂ ಜನ ಪಾಲಿಸುತ್ತಿಲ್ಲವೆಂದಾದರೆ… ಜಲಮಂಡಳಿ ಅದಕ್ಕೆ ಫೈನ್ ಹಾಕುವ ಇನ್ನೊಂದು ಕಾನೂನು ತಂದಿದೆ. ಕಾನೂನು ಪಾಲಿಸದಿದ್ದಲ್ಲಿ ಎರಡು ಮೂರು ಕೋಟಿ ತನಕ ಫೈನ್ ಕಟ್ಟಬೇಕಾಗುತ್ತದೆ. ಜನ ನನ್ನ ಸ್ನೇಹಿತರಂತೆ ಅತಿ ಜಾಣರಾಗಿದ್ದರೆ? ಹಾಗಾಗಿ ಶಿವಕುಮಾರ್ ಹೇಳುತ್ತಾರೆ… ಫೈನ್ ಕಟ್ಟಿಸಿಕೊಂಡು ಏನೂ ಪ್ರಯೋಜನವಿಲ್ಲ, ಜನರ ಮನಃಪರಿವರ್ತನೆ ಮುಖ್ಯ ಅಂತ.

ಇದೆಲ್ಲ ಯಾಕೆ ಬೇಕು? ನಾವು ಓಟ್ ಹಾಕಿದ್ದೇವೆ, ಸರ್ಕಾರ ಆಯ್ಕೆ ಮಾಡಿದ್ದೇವೆ. ಟ್ಯಾಕ್ಸ್ ಕಟ್ಟುತ್ತೇವೆ, ಇನ್ನು ನಮ್ಮ ಸುಖಾನುಕೂಲಗಳ ಚಿಂತೆ ಸರ್ಕಾರಕ್ಕೆ ಬಿಟ್ಟಿದ್ದು, ಅಲ್ಲವೇ.

ನಾನಿಲ್ಲಿ ಕತೆ ಕಟ್ಟುತ್ತಿಲ್ಲ, ಅವಾಸ್ತವಿಕ ನೆಲೆ ಸೃಷ್ಟಿಸುತ್ತಿಲ್ಲ. ಸಾಲು ಮರದ ತಿಮ್ಮಕ್ಕ ಮಕ್ಕಳಿಲ್ಲದ ಕಾರಣಕ್ಕೆ ಮರಗಳಿಗೆ ನೀರು ಹೊತ್ತೊಯ್ದಳು ಎಂಬಂತಹ ಸಾಮಾಜಿಕ ಸೇವೆ ಮಾಡಿರೆಂದು ಹೇರುತ್ತಿಲ್ಲ. ಇದೆಲ್ಲ ನಿಮಗಾಗಿ, ನಿಮ್ಮದೆ ಒಳಿತಿಗಾಗಿ, ನಿಮ್ಮ ಜೇಬಿನ ಹೊರೆ ಇಳಿಸಲಿಕ್ಕಾಗಿ. ಬಿಹಾರದ ಮಾಂಜಿ ಎಂಬುವವನ ಹೆಂಡತಿಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲಿಕ್ಕೆ ರಸ್ತೆಯಿರದೆ ಅವನ ಹೆಂಡತಿ ಅಸುನೀಗಿದಳಂತೆ. ಆಸ್ಪತ್ರೆಗೆ ಅವನು ಬೆಟ್ಟ ಸುತ್ತಿಕೊಂಡು/ಹತ್ತಿಕೊಂಡು ಹೋಗಬೇಕಿತ್ತಂತೆ. ಹಾಗಾಗಿ ಅವನು ಹೆಂಡತಿ ತೀರಿಕೊಂಡ ನಂತರ ಇತರ ಸಂಘಜೀವಿಗಳಿಗೆ ಅನುಕೂಲವಾಗಲೆಂದು ಬೆಟ್ಟ ಕಡಿದು ರಸ್ತೆ ಮಾಡಿದನಂತೆ. ಇದೆಲ್ಲ ಅಸಾಮಾನ್ಯನು ಮಾಡುವಂಥದು. ಇದಕ್ಕೆ ತಪಸ್ಸು ಬೇಕು. ಗಳಿಸಲಾಗದ್ದನ್ನು ಕಳೆದುಕೊಂಡಿರಬೇಕು. ನೀವು ಮಾಂಜಿ ತರಹ ಮಾಡಲಾಗದಿದ್ದರೂ ನಿಮ್ಮ ನಿಮ್ಮ ತನುವ ಮನವ ಸುಖವಾಗಿಡಬಲ್ಲಷ್ಟು ಮಾಡಲಾರಿರೇ? ನೀವು ಹಿಡಿದ ನೀರು ನಿಮ್ಮ ಅಡಿಗೆಗೆ, ಮೈ ತೊಳೆಯಲಿಕ್ಕೆ, ಕಮೋಡು ಸ್ವಚ್ಛ ಮಾಡಲಿಕ್ಕೆ, ಗಿಡಗಳಿಗೆ ನೀರುಣಿಸಲಿಕ್ಕೆ, ಕಾರು ತೊಳೆಯಲಿಕ್ಕೆ ಆದರೂ ಸಾಕಲ್ಲವೇ?

ಇದನ್ನು ನೀವು ಮಾಡದೇ ಹೋದರೆ, ನಿಮ್ಮದೇ ಹಣದಲ್ಲಿ ಕಟ್ಟಿದ ಮೋರಿ, ರಸ್ತೆ, ಒಳಚರಂಡಿ ಕುಸಿದುಬಿದ್ದು ಮತ್ತೂ ಹಣ ಪೋಲಾಗುತ್ತದೆ. ಯೋಚಿಸಿ ನೋಡಿ. ಹಂಚಿಕೊಳ್ಳಲು ಇನ್ನಷ್ಟು ಅಂಕಿ ಅಂಶಗಳಿವೆ, ಅದು ನಿಮ್ಮನ್ನು ಗಾಬರಿಪಡಿಸಬಾರದೆಂದು ನಾನಿಲ್ಲಿ ಹಾಕಿಲ್ಲ. ಸ್ಯಾಂಪಲ್ಲಿಗೆ, ನೀವು ಮಳೆನೀರನ್ನು ಹಿಡಿಯದೇ ಹೋದರೆ.. ಇನ್ನು ಇಪ್ಪತ್ತು ಮೂವತ್ತು ವರುಷಗಳಲ್ಲಿ ಬೆಂಗಳೂರು ನೀರಿಲ್ಲದೆ ಬಣ ಬಣ ಅಂತಿರುತ್ತದೆ. ಆಗ ಎಕರೆಗಟ್ಟಲೆ ಭೂಮಿಯನ್ನು ಲೀಸಿಗೆ ಕೊಂಡು ನಿಮ್ಮ ಕಾರು ಬೈಕುಗಳಿಗೆ ಪಾರ್ಕಿಂಗ್ ಜಾಗ ಒದಗಿಸಿ ದುಡ್ಡು ಪೀಕುವ ದಲ್ಲಾಳಿಗಳು ಅಂಥದೇ ಜಾಗವನ್ನು ಲೀಸಿಗೆ ಕೊಂಡು ಅಲ್ಲಿ ಬೀಳುವ ನೀರನ್ನು ಹಿಡಿದು ಶುದ್ಧೀಕರಿಸಿ ನಿಮಗೇ ಮಾರುತ್ತಾರೆ. ಪಾರ್ಕಿಂಗಿನ ಮೊತ್ತಕ್ಕಿಂತ ಹೆಚ್ಚುವರಿಯಾಗಿ. ನಿಮಗೆಲ್ಲ ತಿಳಿದಿರುವಂಥದೇ, ನೀವು ಅಥವಾ ನಿಮ್ಮ ಸ್ನೇಹಿತ ಅಥವಾ ಬಂಧುವರ್ಗ ಈ ದುರಾಸೆ ಕೆಲಸ ಮಾಡಿದ್ದಿದೆ; ಏನಂದರೆ ಇರುವ ಜಾಗಕ್ಕಿಂತ ಹೊರತಾಗಿ ಕಟ್ಟಿದ ಮನೆಯನ್ನು ಬಾಲ್ಕನಿ ರೂಪದಲ್ಲಿ ಗಾಳಿಯಲ್ಲೆ ಕಬಳಿಸಿರುವುದು. ಇದನ್ನೆ ಮುಂದುವರೆಸಿ ಯೋಚಿಸಿ, ಅಕಸ್ಮಾತ್ ನಸುನಸುಕಿನಲ್ಲೆ ನಗರ ತುಂಬೆಲ್ಲ ಠಣ ಠಣ ಠಣ ಉದುರುವ ಕಿಟಕಿ ಬಡಿಯುವ ಕಾಯನ್ನುಗಳು ಉದುರುವಂತಾದರೆ ನೀವೂ ಸಹ ಬೀದಿಗಿಳಿದು ಆಯುತ್ತೀರಲ್ಲವೇ? ಸಭ್ಯತೆಯ ಸೋಗಿದ್ದಲ್ಲಿ ಬೀದಿಯ ಕಾಯನ್ನನ್ನು ಚಿಂದಿ ಆಯುವವರಿಗೆ ಬಿಟ್ಟುಕೊಟ್ಟು ನಿಮ್ಮ ನಿಮ್ಮ ಮಾಳಿಗೆಗೆ.. ನಿಯಮ ಮೀರಿ ಬಲೆ ಹಾಕಿ ವಿಸ್ತರಿಸುತ್ತೀರಲ್ಲವೇ? ಮನೆಯ ಕಟ್ಟಡ ಆಯಸ್ಸು ತೀರಿಸಿ ಉರುಳೋವರೆಗೂ ಬೀಳುವ ಕಾಯನ್ನು ಮಳೆ. ಯಾರಿಗುಂಟು ಯಾರಿಗಿಲ್ಲ.

ಇದು ಭಾರತೀಯ ವಿಜ್ಞಾನ ಸಂಸ್ಥೆಯ ಮಾಸ ಪತ್ರಿಕೆಯಲ್ಲಿ ನೀಲಿಮ ಬಸವರಾಜು ಬರೆದ ಅಂಕಣದ ಸಂಕ್ಷಿಪ್ತ ನಿರೂಪಣೆ. ವಿಷಯವನ್ನು ವಿಸ್ತಾರವಾಗಿ ತಿಳಿದುಕೊಳ್ಳಲು ಕೆಳಗಿನ ಕೊಂಡಿಯನ್ನು ಸಂಪರ್ಕಿಸಿ, ಶಿವಕುಮಾರ್ ಎಂಬ ವಿಜ್ಞಾನಿಯೊಂದಿಗೆ ಮಾತಾಡಿ. ಹೊಸ ಮನೆ ಕಟ್ಟುತ್ತಿರುವವರು, ಹಳೆ ಮನೆಯಲ್ಲಿ ಮಳೆಕುಯ್ಲು ಮಾಡುವ ಆಸಕ್ತಿಯಿರುವವರು ಗಂಭೀರವಾಗಿ ಪರಿಗಣಿಸಿ.

ಧನ್ಯವಾದಗಳು: ಶಿವಕುಮಾರ್, ನಿವೃತ್ತ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.
ಮೂಲ ಬರಹದ ಕೊಂಡಿ: https://connect.iisc.ac.in/2019/09/why-drain-the-rivers-when-you-can-catch-the-rain/?fbclid=IwAR1d6TswrGwf3SlEr4i-GhbMWk98ABH8xjRcI77lqKP7yL9udPE4DWDEx1g