ಬಿದ್ದಿದ್ದ ಜಡೆಗುಂಡು ರಿಬ್ಬನ್‌ ತಗಂಡು ನೀಲೇಶ್‌ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್‌ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್‌ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ. ತಾರಮ್ಮ ಅಡಸಲ ಬಡಸಲ ದುಬು ದುಬು ಅಂತ ಓಡಿ ಹೊರಹೋದಳು.
ಮುದಿರಾಜ್‌ ಬಾಣದ್‌ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ

ದಡದಡ ಅಂತ ಯಾರೋ ಓಡಿದ ಸದ್ದಿಗೆ ನೀಲೇಶ್ ಕಣ್ಣುಬಿಟ್ಟು ನೋಡಿದ. ಪಕ್ಕದಲ್ಲಿ ಮಲಗಿಕೊಂಡಿದ್ದ ಅವನ ಅಪ್ಪಕಾಣಲಿಲ್ಲ. ನೀಲೇಶನ ಅಜ್ಜಿ ಕಮಲಮ್ಮ ಏನೇನೋ ಗೊಣಗುತ್ತಿದ್ದಳು. ನೀಲೇಶ್ ಕಣ್ಣುಜ್ಜಿಕೊಳ್ಳುತ್ತ “ಅಜ್ಜಿ ಏನಾಯ್ತು ಯಾರು ಓಡಿ ಹೋಗಿದ್ದು” ಅಂದ. “ಸುಮ್ನೆ ಮಕ್ಕಾ ಬಂದಬಿಟ್ಟ ಇಲ್ಲಿ ನಮ್ದೆ ನಮಗಾಗ್ಯದ” ಅಂತ ಕಮಲಮ್ಮಜ್ಜಿ ಗದರಿದಳು. ಚಿಮಣಿ ಬೆಳಕಲ್ಲಿ ಮಬ್ಬುಮಬ್ಬಾಗಿ ಮೂಲೆಯಲ್ಲಿ ಮುದುರಿಕೊಂಡು ಕುಳಿತ ನೀಲೇಶನ ಅಕ್ಕ ಗಿರಿಜಾ ಬಿಕ್ಕಿ ಬಿಕ್ಕಿ ಅಳುತಿದ್ದಳು. ಕಮಲಮ್ಮಜ್ಜಿ ಗಿರಿಜಾಳ ಪಕ್ಕದಲ್ಲಿ ವಟಗುಟ್ಟುತ್ತಿದ್ದಳು. ತನ್ನ ತಂದೆ ತನ್ನ ಪಕ್ಕ ಮಲಗಿದ್ದವನು ಒಮ್ಮೇಲೆ ಕಾಣದಿದ್ದಕ್ಕೆ ಆ ಸರಿರಾತ್ರಿಯಲ್ಲಿ ಏನೂ ಗೊತ್ತಾಗದೆ ಆಶ್ಚರ್ಯಕ್ಕೊಳಗಾಗಿದ್ದ. ನೀಲೇಶನ ತಾಯಿ ತಾರಮ್ಮ ಯಾವುದೋ ತುರ್ತು ಕೆಲಸದ ಮೇಲೆ ಬೆಳಿಗ್ಗೆನೆ ಊರಿಗೆ ಹೋಗಿದ್ದಳು. ಇಂಥ ಸರಿ ರಾತ್ರಿಯಲ್ಲಿ ಏನಾಯ್ತು ಯಾಕೆ ಅಜ್ಜಿ ಏನು ಹೇಳ್ತಿಲ್ಲ? ಕಳ್ಳ ಏನಾದರೂ ಊರಲ್ಲಿ ಬಂದಿದ್ನಾ? ಈ ಅಕ್ಕ ಯಾಕೆ ಹೀಗೆ ಅಳ್ತಾ ಇದಾಳೆ, ದೆವ್ವಗಿವ್ವ ಏನಾದ್ರೂ ಮೈಯಲ್ಲಿ ಸೇರಿಕೊಳ್ತಾ ಹೇಗೆ? ಅಂತ ನೀಲೇಶ್‌ ತನ್ನ ಮನಸ್ಸಲ್ಲೇ ಏನೇನೋ ಕಲ್ಪಿಸಿಕೊಂಡು ಭಯವಾಗಿ ಅಜ್ಜಿ ಕಡೆ ನೋಡಿದ. ಅಜ್ಜಿ ಗಿರಿಜಾಳನ್ನು ತೊಡೆಮೇಲೆ ಮಲಗಿಸಿಕೊಂಡು ಸಮಾಧಾನಿಸುತ್ತಿದ್ದಳು. ತನ್ನ ತಂದೆ ಎಷ್ಟೊತ್ತಾದರೂ ಬಾರದೇ ಇದ್ದದ್ದು ಕಂಡು ನೀಲೇಶ್‌ ಕಾದು ಕಾದು ಹಾಗೆ ನಿದ್ದೆಹೋದ.

ಮೈಮುರಿಯುತ್ತ ಆಕಳಿಸುತ್ತ ಏಳಲೋ ಬೇಡವೊ ಅಂತ ಕಣ್ಣು ತಿಕ್ಕುತ್ತ ಎದ್ದ ನೀಲೇಶನ ಕಣ್ಣಿಗೆ ಎಂದಿನಂತೆ ಹೋಟೆಲ್‌ ತೆರೆದಿತ್ತು ಒಂದೆರಡು ಬೆಳಗಿನ ಗಿರಾಕಿಗಳು ಕಂಡರು. ಎದೆಮಟ್ಟದವರೆಗೂ ಇದ್ದ ಕಟ್ಟೆಯ ಮೇಲೆ ಢಣ ಢಣ ಉರಿಯುವ ಕಟ್ಟಿಗೆ ಒಲೆಯಲ್ಲಿ ತುರುಕಿ ಕಮಲಮ್ಮ ಬಿಸಿಬಿಸಿ ಪುರಿ ವಗ್ಗರಣೆ ಪುಗ್ಗಿ ಮಾಡುತ್ತಿದ್ದಳು. ಅವನ ತಂದೆ ಎಲ್ಲಿಯೂ ಕಾಣಿಸಲಿಲ್ಲ. ನೀಲೇಶ್‌ ಎದ್ದು ಮುಖ ತೊಳೆದುಕೊಂಡು ಆ ಇಬ್ಬರೂ ಗಿರಾಕಿಗಳು ಕುಡಿದು ಇಟ್ಟ ಗಾಜಿನ ಗ್ಲಾಸನ್ನು ತೊಳೆದಿಟ್ಟು ಗಲ್ಲಕ್ಕೆ ಕೈಇಟ್ಟುಕೊಂಡು ಸುಮ್ಮನೆ ಕುಳಿತ.

*****

ತನ್ನ ತಂದೆಯ ಧ್ವನಿ ಮನೆಯ ಹೊರಗಡೆ ಕೇಳಿಸಿತು. ನೀಲೇಶ್‌ ಮೆಲ್ಲನೆ ಇಣುಕಿ ನೋಡಿದ. ನಾದಿರಿ ಕಿಷ್ಟಪ್ಪನ ಜೊತೆಗೆ ಮಾತನಾಡುತ್ತ ನಿಂತಿದ್ದ. ಕೈಯಲ್ಲಿ ಸಿಗರೇಟು ಸುಡುತ್ತಿತ್ತು. ಕುಡಿದಾಗ ಮಾತ್ರ ಸಿಗರೇಟು ಸೇದುತ್ತಿದ್ದ. “ಹೇ ನೀಲಾ ಅದ್ಯಾಕ ಹಂಗಾ ಅಣಕಿ ಆಕಿ ನೋಡ್ತೀ? ಗಲ್ಲೆಯಲ್ಲಿ ರೊಕ್ಕ ಇದ್ರೆ ಈಳಿಗೇರ ಚಂದಮ್ಮ ಅಂಗಡಿಗೆ ಹೋಗಿ ಒಂದು ನೈಂಟಿ ತಗೊಂಡು ಬಾ” ಅಂದ. ಮೆಲ್ಲನೆ ಗಲ್ಲೆ ತೆರೆದು ನೋಡಿದ ಇಪ್ಪತ್ತರ ಎರಡು, ನೂರರ ಒಂದು ನೋಟು, ಕೆಲವೊಂದಿಷ್ಟು ಚಿಲ್ಲರೆ ಹಣ ಇತ್ತು. ಈ ಅಪ್ಪ ಏನಾದ್ರೂ ನೋಡಿಲ್ಲ ಅಂದರೆ ಗೋಲಿಯಾಟ ಆಡುವುದಕ್ಕೆ ಹೋಗುತ್ತಿದ್ದೆ ಅಂತ ಮನಸ್ಸಲ್ಲೆ ಬೈದುಕೊಂಡು ಅಮ್ಮ ನಿನ್ನೆ ಊರಿಗೆ ಹೋಗಿರದಿದ್ದರೆ ಬೇಸಿತ್ತು ಅಂತ ಬೇಜಾರು ಮಾಡಿಕೊಂಡ. ಸಾಯಂಕಾಲದಷ್ಟೊತ್ತಿಗೆ ನೀಲೇಶನ ತಾಯಿ ತಾರಮ್ಮ ಸಂಜೆ ಐದರ ಬಸ್ಸಿಗೆ ಬಂದಳು. ನೀಲೇಶ್‌ ಶಾಲೆಯಿಂದ ಬರುವಷ್ಟೊತ್ತಿಗೆ ಒಳಮನೆಯಲ್ಲಿ ಗಂಡ ಹೆಂಡತಿ ಗುಸುಗುಸು ಅಂತ ಶುರುಮಾಡಿದ್ದರು. “ತಥ್‌ತ್ತೇರಿಕೆ ಇವರಿಗೇನಾಗಿದೆ? ನಿನ್ನೆಯಿಂದ ಏನ್‌ ಆಗ್ಯಾದ ಅಂತ ಕೇಳಿದರೆ ಯಾರೂ ಏನೂ ಹೇಳ್ತಿಲ್ಲ” ಅಂತ ನೀಲೇಶ್‌ ಬೇಜಾರಾಗಿ ಪಾಟಿಚೀಲ ಮೂಲಿಗೆ ಬಿಸಾಕಿ ಮುಖ ತೊಳೆಯುವುದಕ್ಕೆ ಬಚ್ಚಲಿಗೆ ಹೋದ. ಮುಖತೊಳೆದುಕೊಂಡು ಬಂದ ನೀಲೇಶ್ “ಗಿರಿಜಕ್ಕ ಆತ ಮಾಮ ನಿನಗಾ ಇದನ್ನು ಕೊಟ್ಟ” ಅಂತ ಕೈ ಮುಂದ ಚಾಚಿ ಜಡೆಗುಂಡು ರಿಬ್ಬನ್‌ ಹಿಡಿದು ಹಲ್ಲುಬಿಡುತ್ತಾ ನಿಂತ. ಗಿರಿಜಾ ನಿಂತಲ್ಲೆ ತರ ತರ ನಡುಗುತ್ತಾ “ಹೇ ನಿನಾ ಕೋಡಿ ಇದನ್ಯಾಕ ಇಸಕಂಡು ಬಂದಿ ಅಪ್ಪ ಏನಾದ್ರೂ ನೋಡಿದ್ರಾ ನನಗಾ ನೀನಗಾ ಸೇರಿ ಪೂಜೆ ಮಾಡ್ತಾರ. ಮೊದಲು ಇದನ್ನು ತಗೊಂಡು ಆತಗಾ ಕೊಟ್ಟು ಬಾ” ಅಂತ ಹೇಳಿ ಕಣ್ಣೀರು ಸುರಿಸುತ್ತ ಒಳಹೋದಳು. “ಹೇ ಅಕ್ಕ ಏನ್ಯಾಗಾದ ನಿನಗಾ, ಯಾಕ ವಲ್ಲೆ ಅಂತಿ” ಅಂತ ಹಿಂದೆ ಹಿಂದೆ ಹೋದ. “ಹೇ ಕೋಡಿ ನಿನಗಾ ಒಂದು ಸಾರಿ ಹೇಳಿದ್ರೆ ತಿಳಿಕಿಲ್ಲೆನು ಮೊದ್ಲು ತಗೊಂಡು ನಡೀ ಸುಮ್ನೆ” ಅಂತ ನೀಲೇಶನ ಕೈಯಿಂದ ಆ ಜಡೆಗುಂಡು ರಿಬ್ಬನ್‌ ಕಿತ್ತಕಂಡು ಸಿಟ್ಟಿನಿಂದ ಕೆಳಗೆ ಬಿಸಾಕಿದಳು.

ಬಿದ್ದಿದ್ದ ಜಡೆಗುಂಡು ರಿಬ್ಬನ್‌ ತಗಂಡು ನೀಲೇಶ್‌ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್‌ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್‌ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ. ತಾರಮ್ಮ ಅಡಸಲ ಬಡಸಲ ದುಬು ದುಬು ಅಂತ ಓಡಿ ಹೊರಹೋದಳು. ಅಕ್ಕ ತಮ್ಮನಿಗೆ ಹೋದ ಜೀವ ಬಂದಾಗಾಯಿತು, ಆದರೆ ಹೊರಗಾ ಯಾರು ಸಿಕ್ಕರು, ಅಪ್ಪ ಯಾಕ ಕರೆದಾ ಅಂತ ಇಬ್ಬರೂ ಹೊಸ್ತಿಲ ಬಳಿ ಬಂದು ನಿಂತರು.

ನೀಲೇಶ್‌ ಶಾಲೆಯಿಂದ ಬರುವಷ್ಟೊತ್ತಿಗೆ ಒಳಮನೆಯಲ್ಲಿ ಗಂಡ ಹೆಂಡತಿ ಗುಸುಗುಸು ಅಂತ ಶುರುಮಾಡಿದ್ದರು. “ತಥ್‌ತ್ತೇರಿಕೆ ಇವರಿಗೇನಾಗಿದೆ? ನಿನ್ನೆಯಿಂದ ಏನ್‌ ಆಗ್ಯಾದ ಅಂತ ಕೇಳಿದರೆ ಯಾರೂ ಏನೂ ಹೇಳ್ತಿಲ್ಲ” ಅಂತ ನೀಲೇಶ್‌ ಬೇಜಾರಾಗಿ ಪಾಟಿಚೀಲ ಮೂಲಿಗೆ ಬಿಸಾಕಿ ಮುಖ ತೊಳೆಯುವುದಕ್ಕೆ ಬಚ್ಚಲಿಗೆ ಹೋದ. ಮುಖತೊಳೆದುಕೊಂಡು ಬಂದ ನೀಲೇಶ್ “ಗಿರಿಜಕ್ಕ ಆತ ಮಾಮ ನಿನಗಾ ಇದನ್ನು ಕೊಟ್ಟ” ಅಂತ ಕೈ ಮುಂದ ಚಾಚಿ ಜಡೆಗುಂಡು ರಿಬ್ಬನ್‌ ಹಿಡಿದು ಹಲ್ಲುಬಿಡುತ್ತಾ ನಿಂತ.

ಸುಮಾರು ಆರು ತಿಂಗಳ ಹಿಂದೆ ಗಿರಿಜಾ ದೊಡ್ಡಾಕಿ ಆಗಿದ್ದಳು. ಆ ದಿನ ನೀಲೇಶ್‌ ಶಾಲೆಯಿಂದ ಬಂದು ಕೈಕಾಲು ಮುಖ ತೊಳೆದುಕೊಂಡು ಬಗರಿ ತಗೊಂಡು ಆಟಕ್ಕೆ ಹೋಗುವುದಕ್ಕೆ ನಿಂತಿದ್ದವನನ್ನು ನೀಲೇಶನ ಅಜ್ಜಿ ಕಮಲಮ್ಮ “ಹೆ ಮೊಮ್ಮಗನಾ ಹೋಗಿ ನಿಮ್ಮಕ್ಕಗ ಈ ಚಹ ಕೊಟ್ಟು ಬಾ ಅಂದಳು”. “ಅಕ್ಕಗ ಚಹ ಕೊಡಬೇಕಾ ಎಲ್ಲಿ ಇದ್ದಾಳಾ?” ಅಂತ ಕಮಲಜ್ಜಿ ಮುಖ ನೋಡುತ್ತ ನಿಂತ. ಅಷ್ಟರಲ್ಲಿ ತಾರಮ್ಮ ಬಂದು ನೀಲೇಶನ ಕೈಯಿಂದ ಬಗರಿ ಕಸಕಂಡು “ನೋಡಪ್ಪ ಮುದುಕ ನೀ ಮೊದ್ಲಿನಂಗಾ ಅಕ್ಕನ ಮುಟ್ಟಿ ಮಾತಾಡಿಸೋದು ಆಕೀ ಜೊತೆ ಕುಂದ್ರೊದು ಮಾಡಬಾರದು. ಆಕೀ ದೊಡ್ಡಾಕಿ ಆಗ್ಯಾಳಾ ಮೈಲಿಗೆ ಆಗ್ತಾದಾ.

ದೊಡಮ್ಮನ ಮನಿಗೆ ಹೋಗಿ ಈ ಚಹಾ ಕೊಟ್ಟು ಬಾ” ಅಂದಳು. ಈ ದೊಡ್ಡಾಕಿ ಆಗೋದು ಅಂದ್ರೇನು ಮೈಲಿಗೆ ಆಗೋದು ಅಂದ್ರೇನು ಅಂತ ಗೊತ್ತಾಗದೆ ನೀಲೇಶ್ ಸುಮ್ಮನೆ ಅವರು ಕಿಟ್ಲಿಲಿ ಹಾಕಿಕೊಟ್ಟ ಚಹಾವನ್ನು ತಗೊಂಡು ಅವರ ದೊಡಮ್ಮರ ಮನಿಗೆ ಹೋದ. ತಮ್ಮ ಹೋಟಲ್‌ಗೆ ಬರೋರು ಒಳ್ಳೆವರು ಇರ್ತಾರಾ ಕೆಟ್ಟವರು ಇರ್ತಾರ ಅಂತ ದೊಡ್ಡಕ್ಕಾದ ತನ್ನ ಮಗಳನ್ನು ತನ್ನ ಅಣ್ಣನ ಮನೆಲಿ ಕುಂದ್ರಿಸಿದ್ದರು. ಗಿರಿಜಾ ತಾರಮ್ಮಳ ಬೊರಮಳ ಸರ ಕೊರಳಲ್ಲಿ ಹಾಕಿಕೊಂಡು ದೊಡ್ಡದೊಂದು ಕರಿಮಸಿ ದವಡಗೆ ಹಚ್ಚಿಕೊಂಡು ಕುಂತಿದ್ದಳು. ಗಿರಿಜಾಳ ಪಕ್ಕದಲ್ಲಿ ಒಂದು ತಂಬಿಗೆ ಗಂಗಾಳ ಇತ್ತು. ಅಲ್ಲಿಗೆ ಬಂದ ನೀಲೇಶ್‌ ನಗುತ್ತಾ. “ಏನಕ್ಕಾ ಇದು, ಏನಾಯ್ತು ನಿನ್ಗಾ! ನೀ ದೊಡ್ಡಾಕಿ ಆಗಿದ್ದಂತ.. ಹಂಗದ್ರೆ ಏನೂ?” ಅಂತ ಗಿರೀಜಾಳ ಮುಂದೆ ಚಹದ ಕಿಟ್ಲಿ ಇಟ್ಟು ನಿಂತ. ಗಿರಿಜಾ ಏನೊಂದು ಮಾತಾಡದೆ ಸುಮ್ಮನೆ ಅವನು ತಂದ ಚಹಾ ಹಾಕಿಕೊಂಡು ಕುಡಿದಳು. ನೀಲೇಶ್‌ ತನ್ನ ಗಿರಿಜಕ್ಕನ ಮುಖದಲ್ಲಿ ಎಂದಿಗಿಂತ ಚೆಂದದ ಕಳೆ ಬಂದಿದ್ದು ನೋಡಿ ಖುಷಿಗೊಂಡ.

ಎಷ್ಟೋ ವರುಷದಿಂದ ಹಾಗೆ ಇದೆಯೇನೋ ಎಂಬಂತೆ ತನ್ನ ಅಕ್ಕನ ಮುಖದ ಮೇಲೆ ಇದ್ದ ನಾಚಿಕೆ ಕಂಡು ವಿಚಿತ್ರಗೊಂಡು ಹೊರಬಂದು ಜಗುಲಿಯಲ್ಲಿ ನಿಂತ. “ಏನಲೇ ಅಳಿದೇವ್ರು” ಅಂತ ಹಿಂದಿನಿಂದ ನೀಲೇಶನ ಹೆಗಲ ಮೇಲೆ ಒಂದು ಕೈ ಬಂತು. ತಿರುಗಿ ನೋಡಿದ. ತನ್ನ ಸೋದರ ಮಾವ ಚಂದ್ರಶೇಖರ ನಿಂತಿದ್ದ. “ಏನಲೇ ಅಳಿದೇರ್ವು ಹೆಂಗಿದಿ” ಅಂತ ನೀಲೇಶನ ಗಲ್ಲ ಹಿಂಡಿದ. ಈ ಚಂದ್ರಶೇಖರ ಪೇಟೆಯಲ್ಲಿ ಅದೇನೋ ಟೀಚರ್‌ ಕೋರ್ಸು ಕಲಿಯುತ್ತಿದ್ದ. ಅವಾಗವಾಗ ಊರಿಗೆ ಬಂದಾಗ ನೀಲೇಶನ ಮನೆಗೆ ಬಂದು ಅಪ್ಪ ಅಮ್ಮನ ಮಾತಾಡಿಸಿ ಹೋಗುತ್ತಿದ್ದ. ಐದನೇ ದಿನಕ್ಕೆ ಗಿರಿಜಾಳಿಗೆ ಹೊಸ ಸೀರೆ ಉಡಿಸಿ ಆರತಿಯೆಲ್ಲಾ ಮಾಡಿ ಓಣಿಮಂದಿನೆಲ್ಲ ಕರೆದು ಲಡ್ಡು ಬೂಂದಿ ಅನ್ನ ಸಾರು ಮಾಡಿಸಿ ಎಬ್ಬಿಸಿಕೊಂಡರು. ಎಲ್ಲರಿಗಿಂತ ಹೆಚ್ಚು ಸಂಭ್ರಮದಲ್ಲಿ ಆ ದಿನ ಈ ಚಂದ್ರಶೇಖರ ಓಡಾಡಿ ಬಂದವರಿಗೆಲ್ಲ ಇಂತೆಜಮೆ ಮಾಡುತ್ತಿದ್ದ. ಫಂಕ್ಷನ್‌ ಮುಗಿದ ಮಾರನೆ ದಿನ ಗಿರಿಜಾಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಒಂದು ರಾತ್ರಿ ನೀಲೇಶ್ ಉಚ್ಚೆ ಒಯ್ಯಲು ಎದ್ದಾಗ ತಂದೆ ತಾಯಿ ಮಾತನಾಡುತ್ತಿದ್ದದು ಕಿವಿಗೆ ಬಿತ್ತು. “ನಮ್ಮ ಹುಡುಗಿನ ಮದುವಿ ಮಾಡಿಕೊಳ್ಳುವುದಕ್ಕ ಅವ್ರು ಒಲ್ಲೆ ಅಂತ ಇದ್ದಾರ”. “ಯಾಕಂತೆ ನಮ್‌ ಹುಡುಗಿಗೆ ಏನ್‌ ಕಡಿಮೆ ಆಗ್ಯಾದ ಮಾದೇವಿ ಇದ್ದಾಂಗ ಇದಾಳ” ಅಂತ ಸ್ವಲ್ಪ ಗಂಭೀರವಾಗಿ ಹೇಳಿದ. “ನಮ್ಮ ಹುಡುಗಿ ರತಿದೇವಿ ಇದ್ದಾಂಗ ಇದಾಳ, ಆದರೆ ಕಪಾಳದಾಗ ಗಂಡುಮಲಿ ಆಗ್ಯದಲಾ ಅದ್ಕೆ ವಲ್ಲೆ ಅನಕತ್ಯಾರ” ಅಂತ ತಾರಮ್ಮ ಅಂದಳು.

ಮತ್ತೆ ಮುಂದುವರೆದು ಸ್ವಲ್ಪ ನಿರಾಶೆಯ ಧ್ವನಿಯಲ್ಲಿ “ಗಂಡುಮಲಿ ಇದ್ದ ಹೆಣ್ಮಕ್ಕಳಿಗೆ ಮಕ್ಕಳಾಗಲ್ಲಂತ, ಅದ್ಕ ಅವರು ಹಿಂದೆ ಸರಿದಾರ ಅನಿಸುತ್ತೆ”. ನಿಮಗಾ ನೆನಪೈತೆನು ನಾವು ದುಡಿಯುವುದಕ್ಕೆ ಬೆಂಗಳೂರು ಹೋದಾಗ ನಮ್‌ ಹುಡುಗಿಗೆ ಆಗ ನಾಲ್ಕು ವರ್ಷ. ಕಪಾಳದಲ್ಲಿ ಗಡ್ಡೆ ಆಗಿ ಅದು ಬಾತಿತ್ತು. ಎಷ್ಟು ತೋರಿಸಿದರೂ ಕಡಿಮೆ ಆಗಲಿಲ್ಲ ಕೊನೆಗೆ ಒಬ್ಬ ಖಾನಿಗಿ ಡಾಕ್ಟ್ರು ಗಡ್ಡೆಯಲ್ಲಿ ಇದ್ದ ಕಿವು ತೆಗೆದು ಸಾಪು ಮಾಡಿ ಔಷಧ ಕೊಟ್ಟು ಕಳಿಸಿದ್ದರು. ಬರೀ ಒಂದು ವಾರಕ್ಕೆ ಮಗಳ ಗಂಡುಮಲಿ ಗುಣವಾಗಿತ್ತು. ಆದರೆ ದೇವ್ರು ಅದರ ಕಲೀನ ಹಂಗೆ ಉಳಿಸಿ ಬಂಗಾರದಂತ ಮಗಳನ್ನು ಅಪಾದಕ್ಕ ಈಡುಮಾಡ್ಯಾನ. ನಮ್‌ ಹುಡುಗಿ ಹಣೆಬರಹನೆ ಚೋಲೋ ಇಲ್ಲ. ಆ ಹುಡುಗ ಮದುವೆ ಆದರೆ ನಮ್ ಹುಡುಗಿನೆ ಅಂತ ಹಠ ಹಿಡದಾನಂತಾ. ಆದರೆ ಅವರ ಅಮ್ಮ ಬ್ಯಾಡ ಅನ್ನಕತ್ತಳಂತ…” ಹೀಗೆ ಸಾಗಿದ್ದ ಅವರ ಮಾತುಕತೆಯನ್ನು ನೀಲೇಶ ಕೇಳಿಸಿಕೊಂಡು ಹಾಗೆ ನಿದ್ದಗಣ್ಣಲ್ಲೆ ಹೋಗಿ ಮಲಗಿಕೊಂಡಿದ್ದ. ಒಂದೆರಡು ವಾರ ಮನೆಲಿ ಇದ್ದ ಗಿರಿಜಾ ಆಮೇಲೆ ಹಳ್ಳಕ್ಕೆ ಬಟ್ಟೆ ಒಗೆಯುವುದಕ್ಕೆ ಇರಬಹುದು, ತನ್ನ ಗೆಳತಿರ ಮನೆಗೆ ಹೋದಾಗ, ಮಿಷನ್‌ ಕಲಿಯುವುದಕ್ಕೆ, ಬಾವಿ ನೀರು ತರಲು ಬಿಂದಿಗೆ ತಗೊಂಡು ಹೋದರೆ ನೀಲೇಶ ಆಕೆಯ ಜೊತೆ ಬಾಡಿಗಾರ್ಡ್ ತರಹ ಅವಳ ಜೊತೆಗೆ ಹೋಗಬೇಕೆಂದು ತಾರಮ್ಮ ಒತ್ತಿ ಹೇಳಿದ್ದಳು.

ಒಮ್ಮೆ ಬಟ್ಟೆ ಒಗೆಯುವುದಕ್ಕೆ ಗಿರಿಜಾ ನೀಲೇಶ್‌ ಜೊತೆ ಬಾವಿಗೆ ಹೋಗಿದ್ದಾಗ ಅದೆಲ್ಲಿಂದನೋ ಈ ಚಂದ್ರಶೇಖರ ಪ್ರತ್ಯಕ್ಷವಾಗಿ ನೀಲೇಶನ ಕೈಯಲ್ಲಿ ಚಾಕಲೇಟ್ ಕೊಟ್ಟು ಗೆಳೆಯರ ಜೊತೆ ಆಟ ಆಡಿ ಚಾಕಲೇಟ್‌ ತಿಂದು ಬಾ ಅಂದ. ನೀಲೇಶ್‌ ಕೈಯಲ್ಲಿ ಚಾಕಲೇಟ್ ಹಿಡಿದು ಗಿರಿಜಾಳ ಕಡೆಗೆ ನೋಡಿದ. “ಚಂದ್ರು ಮಾಮ ನನ್ನ ಜೊತೆ ಬರ್ತಾರೆ ನೀನು ಚಾಕಲೇಟ್‌ ತಿಂದು ಆಟ ಆಡಿ ಬೇಗ ಬಾ” ಅಂದಳು. ಚಂದ್ರಶೇಖರ ಬಾವಿಯಿಂದ ನೀರು ತಂದು ಕೊಡುತ್ತಿದ್ದ ಗಿರಿಜಾ ಬಟ್ಟೆ ತೊಳೆಯುವುದರ ಜೊತೆ ಅವನ ಜೊತೆ ಮಾತಾಡುತ್ತ ನಗುತ್ತಾ ನಾಚುತ್ತ ಬಟ್ಟೆಯೆಲ್ಲ ಒಗೆದು ದೂರದಲ್ಲಿ ಒಣಗಿ ಹಾಕಿ ಬಂದು ಅವನ ಪಕ್ಕದಲ್ಲಿ ಕುಳಿತಳು. ಕಾಲಲ್ಲಿ ಕಟ್ಟಿಕೊಂಡ ಬೆಳ್ಳಿ ಗೆಜ್ಜೆಗಳನ್ನು ಅಲ್ಲಾಡಿಸುತ್ತಾ ಅವನ ಕಣ್ಣಲ್ಲಿ ಕಣ್ಣಿಟ್ಟು ಇಡೀ ಲೋಕ ಮರೆತು ಇಬ್ಬರೂ ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತರು. ನೀಲೇಶ್ ದೂರದಲ್ಲಿ ತಮ್ಮ ಕಡೆಗೆ ಓಡೋಡಿ ಬರೋದು ನೋಡಿ ಇಬ್ಬರೂ ಒಮ್ಮೆಲೆ ದಿಗ್ಗನೆ ಎದ್ದು ನಿಂತರು. ಗಿರಿಜಾ ಒಗೆದು ಒಣಹಾಕಿದ ಬಟ್ಟೆಯೆಲ್ಲ ಮಡಚಿಕೊಂಡು ಬಕೀಟಿಗೆ ಸುರುವಿಕೊಂಡು ನೀಲೇಶನನ್ನು ಮುಂದು ಮಾಡಿಕೊಂಡು, ಇಲ್ಲಿ ನಡೆದಿದ್ದೆಲ್ಲ ಅಮ್ಮನಿಗೆ ಹೇಳಬೇಡ ಅಂತ ಮೆತ್ತಗೆ ಹೇಳಿದಳು. ನೀಲೇಶ್‌ ಆಯ್ತು ಅನ್ನುತ್ತಾ ಮುಂದೆ ಮುಂದೆ ನಡೆಯುತ್ತಿದ್ದ. ಗಿರಿಜಾ ಆಗಾಗ ಚಂದ್ರಶೇಖರನ ಕಡೆಗೆ ತಿರುಗಿ ತಿರುಗಿ ನೋಡುತ್ತಾ ಮನೆದಾರಿ ಹಿಡಿದಳು.

*****

ಗಿರಿಜಾಳಿಗೆ ಇನ್ನೂ ಹದಿಮೂರು ತುಂಬಿರಲಿಲ್ಲ. ಆಗಲೇ ವರಗಳು ಹುಡುಕಿಕೊಂಡು ಬರತೊಡಗಿದವು. ಗಿರಿಜಾಳ ತಂದೆ ತಾಯಿ ಮೈನೆರೆತ ಹುಡುಗಿನ ಮನೇಲಿ ಬಾಳಾ ದಿನಾ ಇಟ್ಟುಕೊಳ್ಳುದು ಬ್ಯಾಡ ಅಂತ ಮಾತನಾಡುತ್ತಿದ್ದರು. ಗಿರಿಜಾ ಗಂಡನ ಮನೆಗೆ ನಮ್ಮನ್ನು ಬಿಟ್ಟು ಹೋದರೆ ತಾನು ಒಂಟಿಯಾಗುತೀನಲ್ಲ ಅಂತ ನೀಲೇಶ್ ಒಮ್ಮೊಮ್ಮೆ ದುಃಖಿಸುತ್ತಿದ್ದ. ಐದಾರು ತಿಂಗಳು ಕಳೆಯುವಷ್ಟರಲ್ಲಿ ಗಿರಿಜಾಳಿಗೆ ಒಂದು ವರ ಗೊತ್ತು ಮಾಡಿದರು. ನೀಲೇಶನಿಗೆ ಬಹಳ ಬೇಜಾರಾಯಿತು. ಆ ಚಂದ್ರಶೇಖರ ಮಾವನಿಗೆ ಅಕ್ಕನ ಕೊಟ್ಟಿದ್ದರ ಬೇಸಿತ್ತು. ಅಕ್ಕ ಇದೆ ಊರಲ್ಲಿ ನಮ್ಮ ಕಣ್ಣೆದುರಿಗೆ ಇರುತ್ತಿದ್ದಳು. ಆದರೆ ಆ ಹಾಳಾದ ಗಂಡುಮಲಿಯಿಂದಾಗಿ ಅಕ್ಕ ನಮ್ಮಿಂದ ಬೇರೆ ಊರಿಗೆ ಹೋಗುವಂತಾಯಿತು ಅಂತ ಹಳಹಳಿಸಿದ್ದ. ಒಮ್ಮೆ ಅದನ್ನು ಬಾಯಿಬಿಟ್ಟು ಗಿರಿಜಾಳಿಗೂ ಹೋಗಿ ಹೇಳಿದ. ಆಗ ಗಿರಿಜಾಳ ಮುಖ ಸಪ್ಪಗಾಗಿ ನೀಲೇಶನ ಬೈಯೋ ತರಹ ಮಾಡಿ ಆಮೇಲೆ ಮರಿಗೆ ಹೋಗಿ ಅತ್ತಿದ್ದಳು. ಅಷ್ಟರಲ್ಲಿ ಅಚಾನಕ್ಕಾಗಿ ಈ ಘಟನೆ ನಡೆದಿತ್ತು. ಯಾವುದೋ ಕೆಲಸದ ನಿಮಿತ್ತ ತಾರಮ್ಮ ಊರಿಗೆ ಹೋಗಿದ್ದು ನೋಡಿ ರಾತ್ರಿ ಗಿರಿಜಾಳ ಮನೆಗೆ ಈ ಚಂದ್ರಶೇಖರ ಬಂದಿದ್ದ. ಗಿರಿಜಾ ಅಂದುಕೊಂಡು ಆಕೆಯ ತಂದೆಯ ಪಕ್ಕ ಕುಳಿತು ಮೆಲ್ಲಗೆ ಬಾಯಿ ಮುಚ್ಚಿದಾಗ ಆತನ ಮೀಸೆ ಚುಚ್ಚಿ ಅಲೆಲೆ ಇದು ತಪ್ಪಾಯಿತು ಅಂದುಕಂಡು ಎದ್ದವನೆ ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದ. ತನ್ನ ಬಾಯಿ ಯಾರು ಮುಚ್ಚಿದ್ದು ಇಷ್ಟೊತ್ತಲಿ ಅಂತ ಸಂಶಯ ಬಂದು ಗಿರಿಜಾಳ ತಂದೆ ಕತ್ತಲಲ್ಲೆ ಕಣ್ಣು ಹೊಂದಿಸಿಕೊಂಡು ಲೈಟು ಹಚ್ಚಿ ನೋಡಿದಾಗ ಯಾರೂ ಕಾಣಲಿಲ್ಲ. ಮೆಲ್ಲಗೆ ಕತ್ತಲಲ್ಲಿ ಕಣ್ಣು ಹೊಂದಿಸಿಕೊಂಡು ಸುತ್ತ ನೋಡಿದಾಗ ಲೈಟಿನ ಬೆಳಕಲ್ಲಿ ಮೂಲೆಯಲ್ಲಿ ಮಸುಕು ಮಸುಕಾಗಿ ಕಂಡ ಇವನನ್ನು ಹಿಡಿಯಲು ಮುಂದಾದಾಗ ಚಂದ್ರಶೇಖರ ತಪ್ಪಿಸಿಕೊಂಡು ಓಡಿಹೋಗಿದ್ದ. ಅಷ್ಟರಲ್ಲಿ ಎಚ್ಚರವಾದ ನೀಲೇಶನನ್ನು ಕಮಲಮ್ಮ ಗದರಿಸಿ ಮಲಗಿಸಿದ್ದಳು.

*****

ಊರಿಂದ ಬಂದ ತಾರಮ್ಮಗೆ ಇದನ್ನೆಲ್ಲ ತನ್ನ ಗಂಡ ಕತೆ ಮಾಡಿ ಹೇಳಿದಾಗ, ಮೈಗೆ ಮೈ ಬೆಂಕಿಯಾಗಿ ಸಾಯಂಕಾಲದವರೆಗೆ ಗಂಡ ಹೆಂಡತಿ ಅವನಿಗಾಗಿ ಕಾದು ಕುಳಿತಿದ್ದರು. ಒಳಮನೆಯಲ್ಲಿ ಗಿರಿಜಾ ಮತ್ತು ನೀಲೇಶನ ಜಗಳ ಕೇಳಿ ತಾರಮ್ಮ ಒಳ ಬಂದಾಗ, ಹೊರಗಡೆ ಮನೆ ಮುಂದೆ ಹೋಗುತ್ತಿದ್ದ ಚಂದ್ರಶೇಖರ ನೀಲೇಶನ ತಂದೆಯ ಕೈಯಲ್ಲಿ ಸಿಕ್ಕಿದ್ದ. ತಾರಮ್ಮಳನ್ನು ಅವನು ಕೂಗಿ ಕರೆದಾಗ ಅಡಸಲ ಬಡಸಲ ಬಂದ ತಾರಮ್ಮ ಚಂದ್ರಶೇಖರನ ಕೊಳ್ಳುಪಟ್ಟಿಗೆ ಕೈಹಾಕಿ ಮುಖ ಮುಖ ಹೊಡೆಯುವುದಕ್ಕೆ ಪ್ರಾರಂಭಿಸಿದಳು.ಆದರೆ ಚಂದ್ರಶೇಖರ ತಾರಮ್ಮಳ ಹೊಡೆತದಿಂದ ತಪ್ಪಿಸಿಕೊಳ್ಳದೆ ಪ್ರತಿರೋದ ತೋರದೆ ಸುಮ್ಮನೆ ಹಾಗೇ ಕಲ್ಲುಬಂಡೆಯಂತೆ ನಿಂತಿದ್ದ. ಊರಲ್ಲಿನ ಜನ ಸಕ್ಕರೆಗೆ ಮುತ್ತಿಕೊಂಡ ಇರುವೆಯಂತೆ ಗುಂಪುಗುಂಪಾಗಿ ಮುತ್ತಿಕೊಂಡು ಅಲ್ಲಿನ ಸನ್ನಿವೇಶವನ್ನು ಬಿಟ್ಟೀ ಸಿನೇಮಾ ನೋಡುವಂತೆ ಕೈಕಟ್ಟಿಕೊಂಡು ನೋಡತೊಡಗಿದರು. ಮನೆಯ ಹೊಸ್ತಿಲಲ್ಲಿ ಗಿರಿಜಾ ಮತ್ತು ನೀಲೇಶ ಎಳೆಗರು ಬೆದರಿದಂತೆ ನಿಂತುಕೊಂಡಿದ್ದರು. ತಾರಮ್ಮ, ಚಂದ್ರಶೇಖರನ ಅಂಗಿ ಹಿಡಿದು ಎಳೆದಾಡಿದ ರಭಸಕ್ಕೆ ಅವನ ಅಂಗಿ ಗುಂಡಿಗಳು ಕಿತ್ತು ಅಂಗಿಯೆಲ್ಲ ಹರಿದು ಹೋಗಿತ್ತು. ಅಲ್ಲಿ ನಿಂತವರಲ್ಲಿ ಯಾರೋ ಒಬ್ಬರು “ಇರ್ಲಿ ಬಿಡಂಗೆ ಪಾಪಾ ನಿಮ್ಮ ಸಂಬಂಧಿಕನೆ ಅದಾನ, ಏನೋ ಹುಡುಗಿನ ಇಷ್ಟ ಪಟ್ಟನಂತ ಅದ್ಕ ಬಂದಾನ ಅಷ್ಟೇ?” ಅಂತ ಅಂದಾಗ. “ಯಾವನ್ಲೋ ಅವ್ನು ಬಾಡಕಾವ್‌ ಬಸ್ಯಾ? ನಿನ್ನ ಮನಿಗೆ ಹಿಂಗೆ ಸವತ್ತಿನಲ್ಲಿ ಬಂದು ನಿನ್ನ ಮಗಳನ್ನು ಮುಟ್ಟಿ ಹೋಗಿದ್ರೆ ಸುಮ್ನೆ ಇರ್ತಿದ್ರಾ? ಬಂದು ಬಿಟ್ರು ಇಲ್ಲಿ ಹೇಳೋದಕ್ಕೆ” ಅಂತ ಕ್ಯಾಕರಿಸಿ ನೆಲಕ್ಕೆ ಉಗಿದು ಕುಂತಳು.

ಚಂದ್ರಶೇಖರ ಒಮ್ಮೆ ಸೂಕ್ಷ್ಮವಾಗಿ ಸುತ್ತಲೂ ನೋಡಿ ತಾರಮ್ಮನಿಗೆ ನಡುಗುವ ತನ್ನ ಧ್ವನಿಯಲ್ಲಿ ಮುಖ ಕೆಳಗೆ ಹಾಕಿಕೊಂಡು ಹೇಳತೊಡಗಿದ “ಅತ್ತೆ ನಿಮ್ಮ ಮಗಳಂದ್ರೆ ನಂಗೆ ಇಷ್ಟ. ನಿಮ್ಮ ಕೈ ಮುಗಿತೀನಿ. ನಿಮ್ಮ ಮಗಳನ್ನು ಬೇರೆಯವರಿಗೆ ಕೊಟ್ಟು ಮದುವಿ ಮಾಡ್ಬೇಡಿ. ನಾವಿಬ್ರೂ ತುಂಬಾ ಇಷ್ಟಪಟ್ಟೀವಿ. ನಮ್ಮನ್ನು ಒಂದು ಆಗಾಕ ಬಿಡಿ” ಎಂದು ಗದ್ಗಿತವಾಗಿ ನುಡಿದು ಕಣ್ಣೀರನ್ನು ಒರಸಿಕೊಳ್ಳುತ್ತ ನಿಂತ. ಅವನ ಧೃಡವಾದ ಮಾತುಗಳಿಗೆ ತಾರಮ್ಮ ಅಲ್ಲಿವರೆಗೂ ಇದ್ದ ರೋಷ ವೇಷ ಆರ್ಭಟ ಒಮ್ಮೆಲೇ ಜರ್ರನೆ ಇಳಿದು ತನ್ನ ಗಂಡನ ಕಡೆಗೆ ನೋಡಿದಳು. ಗಂಡ ಹೆಂಡತಿಯ ನೋಟಗಳು ಪ್ರಶ್ನಾರ್ಥಕವಾಗಿ ಎದುರುಗೊಂಡವು.

(ಗಂಡುಮಲಿ ಅರ್ಥ: ಗಂಡುಮಲಿ ಇದೊಂದು ಬಗೆಯ ಹುಣ್ಣು. ಗಂಡುಮಲಿ ಹಾಗೂ ಹೆಣ್ಣುಮಲಿ ಅಂತ ಎರಡೂ ಬಗೆಯ ಹುಣ್ಣುಗಳು ಇದರಲ್ಲಿ. ಗಂಡುಮಲಿ ಇರಬಹುದು ಇಲ್ಲ ಹೆಣ್ಣುಮಲಿ ಇರಬಹುದು ಸಾಮಾನ್ಯವಾಗಿ ಕಪಾಳದ ಎಡಭಾಗದಲ್ಲಿ ಗಡ್ಡೆಯಂತೆ ಆಗಿ ಮಾಗಿ ಕೀವು ಆಗಿ ಸೋರಿ ಕೊನೆಗೆ ಅದು ಗುಣವಾದಗ ಚರ್ಮದ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳಂತೆ ಎದ್ದಿರುತ್ತವೆ. ಈ ಗಂಡುಮಲಿ ಹೆಣ್ಣುಮಕ್ಕಳಿಗೆ ಹೆಣ್ಣುಮಲಿ ಗಂಡುಮಕ್ಕಳಿಗೆ ಬರಬಾರದು ಅಂತ ಅಂತಾರೆ. ಒಂದುವೇಳೆ ಗಂಡುಮಲಿ ಹೆಣ್ಣುಮಲಿ ಬಂದವರಿಗೆ ಮಕ್ಕಳು ಆಗಲ್ಲ ಅಂತ ಒಂದು ಮೂಢನಂಬಿಕೆ ಜನರಲ್ಲಿ ಆಗ ಇತ್ತು. ಆದರೆ ಗಂಡುಮಲಿ ಮತ್ತು ಹೆಣ್ಣುಮಲಿ ಬಂದ ಎಷ್ಟೋ ಜನರು ಮಕ್ಕಳನ್ನು ಹಡೆದು ಸುಖಸಂಸಾರ ಮಾಡಿದ ಎಷ್ಟೋ ಉದಾಹರಣೆಗಳಿವೆ.)