ಧೋನಿಯಾಗಲು ಹೊರಟಿದ್ದ ತರುಣ ವಿಮಾನ ಪರಿಚಾರಕ ದಾರಿಯುದ್ದಕ್ಕೂ ಕಪ್ತಾನನ ಸಿಟ್ಟಿನ ಕಥೆಗಳನ್ನು ಹೇಳುತ್ತಾ ನನ್ನ ನಗಿಸಲು ನೋಡುತ್ತಿದ್ದ. ವಿಮಾನ ಬೆಂಗಳೂರಿಂದ ಹೊರಟು ಕೊಚ್ಚಿ ತಲುಪುವವರೆಗೆ ಬೇರೆ ಏನೂ ಕೆಲಸವಿಲ್ಲದ ವಿಮಾನದ ಹಿರಿಯ ಪರಿಚಾರಕ ಕಥೆಗಳನ್ನು ಆತನಿಗೆ ಹೇಳಿದನಂತೆ. ಹಿರಿಯ ಪರಿಚಾರಕನಿಗೆ ಮಣಿಪುರ ಮೂಲದ ಇನ್ನೊಬ್ಬ ಪರಿಚಾರಿಕೆ ಹಿಂದೆ ಹೇಳಿದ್ದಳಂತೆ. ಆಕೆಯೂ ಕಪ್ತಾನನ ಹೆಂಡತಿಯೂ ಹಿಂದೆ ಜೊತೆಗೆ ಪರಿಚಾರಿಕೆಯರಾಗಿ ಕೆಲಸ ಮಾಡುತ್ತಿದ್ದರಂತೆ. ತರುಣ ತನ್ನ ಕಪ್ತಾನನ ಸಂಸಾರದ ಗೋಳುಗಳನ್ನು ಹೇಳುತ್ತಾ ನನ್ನನ್ನು ಮನರಂಜಿಸಲು ನೋಡುತ್ತಿದ್ದ.
ಅಬ್ದುಲ್ ರಶೀದ್ ಬರೆದ ‘ಲಕ್ಷದ್ವೀಪ ಡೈರಿ’ಯ ಎರಡನೆಯ ಕಂತು

 

ಅನುಪಮ ಕನಸಿನಂತಹ ಪ್ರಣಯವೊಂದರ ಉಳಿದಿರುವ ಪಳೆಯುಳಿಕೆಯಂತೆ ಹಳೆಯ ಪಿಂಗಾಣಿ ಬಟ್ಟಲೊಂದರ ಜಾಡು ಹುಡುಕಿ ಹೊರಟಿರುವ ನಾನು! ಮಳೆಗೆ ಸಿಲುಕಿ ಮುದುಡಿಕೊಂಡು ಕುಳಿತಿರುವ ವಲಸೆ ಬೆಳ್ಳಕ್ಕಿಯಂತೆ ನಿಲ್ದಾಣದಲ್ಲೇ ಲಂಗರು ಹಾಕಿ ಲಕ್ಷದ್ವೀಪದ ಕಡೆಗೆ ಹಾರಲು ಕಪ್ತಾನನ ಆಜ್ಞೆಗೆ ಕಾಯುತ್ತಿರುವ ಈ ಪುಟ್ಟ ವಿಮಾನ. ಕಿಟಕಿಯ ಗಾಜಿಗೆ ಮೂಗು ಉಜ್ಜಿಕೊಂಡು ಅಸಾಧ್ಯ ನಿರಾಸೆಯಿಂದ ಮಳೆಯನ್ನೇ ನೋಡುತ್ತಾ ಅದ್ಯಾಕೋ ಮುಗುಳು ನಗುತ್ತಿದ್ದೆ. ಹಿಂದೆ ಬಿಟ್ಟು ಬಂದಿರುವ ಅಗಣಿತ ನೆನಪುಗಳು, ಮುಂದೆ ಕಾಣಬೇಕೆಂದುಕೊಂಡಿದ್ದ ಮಾಯಾಮಂತ್ರ ಜಾಲಗಳು, ಇವು ಯಾವುದನ್ನೂ ಲೆಕ್ಕಿಸದೆ ಸುರಿಯುತ್ತಿರುವ ಪ್ರಳಯದಂತಹ ಮಳೆ.

ನೀಟಾದ ಶಿಸ್ತುಗಾರರಂತೆ ದಿರಿಸು ಧರಿಸಿದ್ದ ವಿಮಾನದ ಇಬ್ಬರು ತರುಣ ಪುರುಷ ಪರಿಚಾರಕರು ಏನೋ ಅವಘಡ ಸಂಭವಿಸಿದಂತೆ ವಿಮಾನದ ಬಾಗಿಲ ಬಳಿ ಮಂಕಾಗಿ ನಿಂತುಕೊಂಡಿದ್ದರು. ಆ ದಿನದ ಕನ್ನಡ ದಿನ ಪತ್ರಿಕೆಯೊಂದು ಯಾರೂ ಓದದ ಕನ್ಯೆಯಂತೆ ಶಿಸ್ತಾಗಿ ಮಡಚಿಕೊಂಡು ಖಾಲಿ ಸೀಟಿನ ಎದುರಿನ ಚೀಲದಲ್ಲಿ ಮುಗುಮ್ಮಾಗಿ ಕುಳಿತುಕೊಂಡಿತ್ತು. ಬೆಂಗಳೂರಿನಿಂದ ಒಳ ಹೊಕ್ಕಿದ್ದ ಆ ಕನ್ನಡ ಪತ್ರಿಕೆ ವಿಮಾನದೊಳಗೆ ಕನ್ನಡಿಗರೇ ಇಲ್ಲದ ಕಾರಣ ತನ್ನ ರೂಪವನ್ನೂ ಯೌವನವನ್ನೂ ಹಾಗೇ ಉಳಿಸಿಕೊಂಡು ಆ ಕಾರಣಕ್ಕಾಗಿ ಸೊರಗಿ ಹೋಗಿರುವಂತೆ ಕಂಡಿತು. ಒಬ್ಬ ಕನ್ನಡಿಗನಾಗಿ ಆ ಪತ್ರಿಕೆಯ ಕನ್ಯಾಸೆರೆಯನ್ನು ಬಿಡಿಸುವುದು ನನ್ನ ಕರ್ತವ್ಯವೆಂದುಕೊಂಡು ಕಣ್ಣೆದುರು ಹಿಡಿದುಕೊಂಡು ಅದರ ಪರಿಮಳಕ್ಕೆ ಮೂಗು ತೆರೆದುಕೊಂಡೆ.

‘ನೀವೂ ಕನ್ನಡಿಗರಾ ಸಾರ್’ ತರುಣ ಪರಿಚಾರಕರಲ್ಲೊಬ್ಬ ನಗುತ್ತಾ ಹತ್ತಿರ ಬಂದು ನಿಂತುಕೊಂಡ. ‘ಒಂದು ರೀತಿಯಲ್ಲಿ ಹೌದು ಒಂದು ರೀತಿಯಲ್ಲಿ ಅಲ್ಲ’ ಎಂದು ಕೈಯಲ್ಲಿದ್ದ ಕನ್ಯಾಪತ್ರಿಕೆಯನ್ನು ಕೆಳಕ್ಕಿಟ್ಟು ಆತನ ಮುಖವನ್ನು ನೋಡಿದೆ. ಅತೀವ ತುಂಟತನವನ್ನು ಒಳಗಿಟ್ಟುಕೊಂಡು ಹೊರಗೆ ಪರಿಚಾರಕನ ಶಿಸ್ತನ್ನು ರೂಡಿಸಿಕೊಂಡಿರುವ ತರುಣನ ಕಣ್ಣುಗಳು ಆ ಹಾರಲಾರದ ನೈರಾಶ್ಯದಲ್ಲೂ ಲಕಲಕ ಹೊಳೆಯುತ್ತಿತ್ತು . ‘ನೀನೂ ಕನ್ನಡಿಗನಾ?’ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ‘ಒಂದು ರೀತಿಯಲ್ಲಿ ಹೌದು ಆದರೆ ಒಂದು ರೀತಿಯಲ್ಲಿ ಅಲ್ಲ’ ಎಂದು ಅವನೂ ನಕ್ಕ.

ಆತನ ತಂದೆ ಆಂಧ್ರ ಮೂಲದವರು. ಬ್ಯಾಂಕಿನಲ್ಲಿ ಮೇನೇಜರಾಗಿ ಕನ್ನಡ ನಾಡಿನ ಎಲ್ಲೆಡೆ ಓಡಾಡಿದವರು. ಹಾಗಾಗಿ ಈತನೂ ಗೋಲಿಯಾಡುತ್ತಾ, ಲಗೋರಿಯಾಡುತ್ತಾ, ಆಮೇಲೆ ಕ್ರಿಕೆಟ್ ಆಡುತ್ತಾ ಕನ್ನಡ ನಾಡಿನೆಲ್ಲೆಡೆ ಓಡಾಡಿ ಬೆಳೆದವನು. ಈ ವಿಮಾನಯಾನದ ಕಂಪೆನಿ ದೇಶದ ಅತ್ಯುತ್ತಮ ಕ್ರಿಕೆಟ್ ತಂಡವೊಂದನ್ನು ಕಟ್ಟಬೇಕೆಂದು ಹೊರಟು ಸಣ್ಣದರಲ್ಲೇ ಬಹಳ ಒಳ್ಳೆಯ ವೇಗದ ಬೌಲರನಾಗಿದ್ದ ಈತನನ್ನು ಉದ್ಯೋಗಕ್ಕೆ ತೆಗೆದುಕೊಂಡು ಆಟವಾಡಿಕೊಂಡಿರಲು ಮೈದಾನಕ್ಕೆ ಕಳಿಸಿತ್ತು. ಆಟವಾಡಿಕೊಂಡಿರುವಾಗ ಈತನ ಬೆನ್ನೆಲುಬಿಗೆ ಪೆಟ್ಟಾಗಿ ಕೆಲವು ಕಾಲ ಆಸ್ಪತ್ರೆಯಲ್ಲಿ ಕಳೆದು, ಇನ್ನು ಕೆಲವು ಕಾಲ ವಿಶ್ರಾಂತಿಯಲ್ಲಿ ಕಳೆದು, ಪುನಃ ಆಟಕ್ಕೆ ಹೊರಟಾಗ ಈ ವಿಮಾನದ ಕಂಪೆನಿ ಆರ್ಥಿಕ ಹೊಡೆತಕ್ಕೆ ಸಿಲುಕಿ ಬರಬಾದಾಗಿ ಹೋಗಿ, ‘ಕ್ರಿಕೆಟ್ಟೂ ಬೇಡ, ಏನೂ ಬೇಡ. ಬಾ ಕೆಲಸ ಮಾಡಿ ಸಂಬಳ ಪಡೆದುಕೋ’ ಎಂದು ಆತನನ್ನು ಪರಿಚಾರಕನ ಕೆಲಸಕ್ಕೆ ತೆಗೆದುಕೊಂಡಿತ್ತು.

ನಾನು ವಿಮಾನ ಹತ್ತಿದ ಆಗಸ್ಟ್ ತಿಂಗಳ ಅದೇ ದಿನ ಆತನದೂ ವಿಮಾನ ಪರಿಚಾರಿಕೆಯ ಮೊದಲ ದಿನ. ಉತ್ಸಾಹದಲ್ಲಿ ಕೆಲಸದ ಮೊದಲ ದಿನವೇ ಕಡಲ ಮೇಲೆ ಹಾರುತ್ತೇನೆ ಎಂದು ಕುಣಿಯುತ್ತ ಮನೆಯಿಂದ ಬೆಳ್ಳಂಬೆಳಗ್ಗೆ ಹೊರಟವನ ಮುಖಕ್ಕೆ ಹೊಡೆದಂತೆ ಕೊಚ್ಚಿಯಲ್ಲಿ ಮಳೆ ಸುರಿಯುತ್ತಿತ್ತು.

‘ಸರ್ ನಿಮ್ಮದೂ ಮೊದಲ ದಿನ ನನ್ನದೂ ಮೊದಲ ದಿನ, ನೀವೂ ಕನ್ನಡಿಗ ನಾನೂ ಕನ್ನಡಿಗ. ಆದರೆ ನೋಡಿ ಕನ್ನಡಿಗರಿಗೆ ಎಲ್ಲಿ ಹೋದರೂ ಈಗೀಗ ಹೀಗೆ ನಿರಾಶೆಯೇ ಆಗುತ್ತದಲ್ಲ’ ಎಂದೂ ಸೇರಿಸಿದ. ನನ್ನಲ್ಲಿ ಸ್ವಮರುಕ ಹುಟ್ಟಿಸಲು ಪ್ರಯತ್ನಿಸುವ ಕನ್ನಡದ ಹಲವು ಎಳೆಯರಲ್ಲಿ ಇವನೂ ಒಬ್ಬ ಎಂದೆನಿಸಿತು. ಆದರೆ ಇವನಿಗೆ ನನ್ನ ನೈರಾಶ್ಯಗಳು ಹೇಗೆ ಗೊತ್ತಾದವು ಎಂಬ ಅಚ್ಚರಿಯೂ ಆಯಿತು.

‘ನನಗೇನೋ ಆಯಿತು, ಆದರೆ ನಿನಗೆ ಅಂತದ್ದೇನಾಯಿತು’ ಎಂದು ಕೇಳಿದೆ.

‘ಮೊದಲನೆಯದಾಗಿ ಬೆನ್ನೆಲುಬಿನಿಂದಾಗಿ ನನ್ನ ಕ್ರಿಕೆಟ್ಟು ಹೋಯಿತು. ಎರಡನೆಯದಾಗಿ ಮಳೆಯಿಂದಾಗಿ ಕೆಲಸದ ಮೊದಲ ದಿನವೇ ವಿಮಾನ ಅರ್ಧದಲ್ಲೇ ನಿಂತುಕೊಂಡಿತು. ಮೂರನೆಯದಾಗಿ ವಿಮಾನದ ಕಪ್ತಾನ ಬಹಳ ಒಳ್ಳೆಯವನು, ಆದರೆ ಕೆಟ್ಟ ಸಿಟ್ಟಿನವನು. ಆಗಾಗ ಕ್ಯಾಬಿನ್ನಿನೊಳಗೆ ಕರೆದು ಸಣ್ಣಸಣ್ಣದಕ್ಕೂ ಉಗಿಯುತ್ತಿರುತ್ತಾನೆ. ಒಂದೇ ದಿನಕ್ಕೆ ಈತನ ಸಾವಾಸ ಸಾಯುವಷ್ಟು ಸಾಕುಬೇಕಾಯಿತು. ತನ್ನದಲ್ಲದ ಎಲ್ಲದಕ್ಕೂ ಮೂಗು ತೂರಿಸುತ್ತಾನೆ’ ಎಂದು ನಗುತ್ತಾ ನಿಟ್ಟುಸಿರಿಟ್ಟ.

ಹೊಸದಾಗಿ ವಿಮಾನ ಹತ್ತಿದ ವಯಸ್ಕರೊಬ್ಬರು ವಿಮಾನದ ಸಂಡಾಸು ಬಳಸುವುದು ಗೊತ್ತಿಲ್ಲದೆ ಅದರ ಸೀಟಿನ ಮೇಲೆಲ್ಲ ಹೇಸಿಗೆ ಮಾಡಿಕೊಂಡಿದ್ದರು. ನಿಂತ ವಿಮಾನದಲ್ಲಿ ಮಾಡಲು ಬೇರೇನೂ ಕೆಲಸವಿಲ್ಲದ ಆ ಕಪ್ತಾನ ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸುತ್ತಾ ಹಾಗೇ ಸಂಡಾಸಿನ ಒಳಕ್ಕೂ ಮೂಗು ತೂರಿಸಿದವನು ಮೂಗು ಸಿಂಡರಿಸುತ್ತಾ ಹೊರಬಂದು, ‘ಶುಚಿತ್ವ ಗೊತ್ತಿಲ್ಲದ ಬುರ್ನಾಸುಗಳು’ ಎಂದು ಇವನನ್ನೂ ಸೇರಿಸಿ ಬೈದು ಹೋಗಿದ್ದನು.

ಧೋನಿಯಂತಾಗಬೇಕೆಂದುಕೊಂಡು ಕೆಲಸಕ್ಕೆ ಸೇರಿಕೊಂಡಿದ್ದ ಈತ. ಯಾರೋ ಸಂಡಾಸಿನಲ್ಲಿ ಮಾಡಿದ ಹೇಸಿಗೆಗೆ ತಾನೂ ಬಯ್ಯಿಸಿಕೊಳ್ಳಬೇಕಾಯಿತಲ್ಲಾ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದ.

‘ಬೇಜಾರು ಬೇಡ ಮರೀ, ದೇಶದ ಆರ್ಥಿಕತೆ ಚೇತರಿಸಿಕೊಂಡರೆ ನೀನು ಇನ್ನೊಂದು ವಿಮಾನ ಕಂಪೆನಿಗೆ ಸೇರಿಕೊಂಡು ಆ ದೋನಿಯೇನು ಮಹಾ ಅದಕ್ಕಿಂತ ದೊಡ್ಡ ದೋನಿಯಾಗಬಹುದು’ ಎಂದು ಸಂತೈಸಬೇಕೆಂದುಕೊಳ್ಳುವುದರಲ್ಲಿ ಆ ಖಾಲಿ ವಿಮಾನದೊಳಗೆ ಇನ್ನೊಂದು ಕೋಲಾಹಲ ಶುರುವಾಯಿತು. ಖಾಲಿ ವಿಮಾನದ ಧ್ವನಿವರ್ದಕದಲ್ಲಿ ಆ ಕಪ್ತಾನ ರೇಗುವ ಧ್ವನಿ ದೊಡ್ಡದಾಗಿಯೇ ಕೇಳುತ್ತಿತ್ತು. ಸುರಿಯುವ ಮಳೆಯಲ್ಲಿ ವಿಮಾನದ ಬ್ಯಾಗೇಜನ್ನು ಇಳಿಸುವ ಭರದಲ್ಲಿ ಯಾರೋ ಕರ್ಮಚಾರಿಗಳು ಲಗೇಜು ಕೊಠಡಿಯ ಬಾಗಿಲನ್ನು ಸರಿಯಾಗಿ ಹಾಕದೆ ಹೊರಟು ಹೋಗಿದ್ದರು. ಲಗೇಜು ಮೇಲ್ವಿಚಾರಕ ಬಂದು ಬೇಶರತ್ ಕ್ಷಮೆ ಕೇಳದಿದ್ದರೆ ಮಳೆ ನಿಂತರೂ ತಾನು ಲಕ್ಷದ್ವೀಪಕ್ಕೆ ವಿಮಾನ ಹಾರಿಸುವುದಿಲ್ಲವೆಂದು ರೇಗುತ್ತಾ ಕ್ಯಾಬಿನಿನೊಳಗಿಂದ ಹೊರಬಂದ ಆತನ ಕೆಂಪು ಕೆಂಪಾಗಿದ್ದ ಮುಖ ಸಿಟ್ಟಲ್ಲಿ ಇನ್ನಷ್ಟು ಕೆಂಪಾಗಿತ್ತು.

ನೀಟಾದ ಶಿಸ್ತುಗಾರರಂತೆ ದಿರಿಸು ಧರಿಸಿದ್ದ ವಿಮಾನದ ಇಬ್ಬರು ತರುಣ ಪುರುಷ ಪರಿಚಾರಕರು ಏನೋ ಅವಘಡ ಸಂಭವಿಸಿದಂತೆ ವಿಮಾನದ ಬಾಗಿಲ ಬಳಿ ಮಂಕಾಗಿ ನಿಂತುಕೊಂಡಿದ್ದರು. ಆ ದಿನದ ಕನ್ನಡ ದಿನ ಪತ್ರಿಕೆಯೊಂದು ಯಾರೂ ಓದದ ಕನ್ಯೆಯಂತೆ ಶಿಸ್ತಾಗಿ ಮಡಚಿಕೊಂಡು ಖಾಲಿ ಸೀಟಿನ ಎದುರಿನ ಚೀಲದಲ್ಲಿ ಮುಗುಮ್ಮಾಗಿ ಕುಳಿತುಕೊಂಡಿತ್ತು.

ಐರೋಪ್ಯನಂತಿರುವ ಬಿಳಿಯ ಕಪ್ತಾನ!

ಮುಚ್ಚಿಹೋಗಿರುವ ಯುರೋಪಿನ ವಿಮಾನ ಕಂಪೆನಿಯ ಕಪ್ತಾನರು ಭಾರತದ ವಿಮಾನಗಳನ್ನು ಓಡಿಸುವುದನ್ನು ಕಂಡಿದ್ದೆ. ಆದರೆ ಅವರು ಇಷ್ಟು ಸಿಟ್ಟಿನವರು ಎಂದು ಗೊತ್ತಿರಲಿಲ್ಲ, ಈತನ ಸಿಟ್ಟು ಇಳಿಸಲು ಈ ವಿಮಾನದಲ್ಲಿ ಇರುವುದು ನಾನೊಬ್ಬನೇ ಎಂದುಕೊಂಡು ಕೈಕಟ್ಟಿ ನಿಂತಿದ್ದ ಆತನ ಬಳಿ ಹೋಗಿ ವಂದಿಸಿದೆ.

ಆತ ನಗಲಿಲ್ಲ.

‘ಬಹುಶಃ ನೀವು ಐರಿಷ್ ದೇಶದವರಿರಬೇಕೆಂದು ಊಹಿಸಲೇ’ ಎಂದು ಇಂಗ್ಲಿಷಿನಲ್ಲಿ ಕೇಳಿದೆ.

ಐರಿಷ್ ಜನರೂ ಕನ್ನಡಿಗರ ಹಾಗೆ ಒಳ್ಳೆಯವರೂ ಹಾಗೂ ಆಗಾಗ ಸಿಟ್ಟು ಮಾಡಿಕೊಳ್ಳುವವರೂ ಮತ್ತು ಬಹಳ ಬೇಗ ತಣಿಯುವವರೂ ಆಗಿರುವುದರಿಂದ ಈತ ಐರಿಷ್ ಆಗಿರಬಹುದೆಂದು ನನ್ನ ಊಹೆಯಾಗಿತ್ತು. ಆದರೆ ಅವನು ಇನ್ನಷ್ಟು ಸಿಟ್ಟಲ್ಲಿ ನನ್ನನ್ನೂ ಬೈದ. ‘ನಿನಗೆ ಶಿಷ್ಟಾಚಾರಗಳು ಗೊತ್ತಿಲ್ಲವೇ’ ಎಂದು ಹಂಗಿಸಿದ. ‘ಒಂದು ವೇಳೆ ನಾನು ನಿನ್ನನ್ನು ಬಿಹಾರಿಯೆಂದೂ, ಬಂಗಾಳಿಯೆಂದೂ, ಪಾಕಿಸ್ತಾನಿ ಅಥವಾ ಬಾಂಗ್ಲಾದೇಶಿಯೆಂದು ಕರೆದರೆ ನಿನಗೆ ಅವಮಾನವಾಗುವುದಿಲ್ಲವೇ’ ಎಂದು ತಿರುಗಿ ಕೇಳಿದ.

‘ಐರಿಷ್ ಜನರು ಕುಡುಕರು ಮತ್ತು ಸೋಮಾರಿಗಳು ಅವರಿಗೆ ನನ್ನನ್ನು ಹೋಲಿಸಬೇಡ’ ಎಂದು ಕ್ಯಾಬಿನ್ನಿನ ಒಳಹೊಕ್ಕ. ಹೋಗುವ ಮೊದಲು ತರುಣ ಪರಿಚಾರಕನನ್ನು ಕರೆದು ಲಗೇಜಿನವರು ಬೇಷರತ್ ಕ್ಷಮೆ ಯಾಚಿಸದಿದ್ದರೆ ವಿಮಾನ ಲಕ್ಷದ್ವೀಪಕ್ಕೆ ಹಾರುವುದು ಸಾಧ್ಯವೇ ಇಲ್ಲ ಎಂದು ರೇಗಿ ಬಾಗಿಲು ಹಾಕಿಕೊಂಡ.

ಕಷ್ಟಕಾಲದಲ್ಲಿ ಮನುಷ್ಯನನ್ನು ಸ್ವಂತ ಜನನಾಂಗವೇ ಹಾವಾಗಿ ಕಚ್ಚುತ್ತದೆ ಎಂದು ನಮಗೆ ಬಾಲ್ಯದಲ್ಲಿ ಅರಬಿ ಕಲಿಸಿದ ಮಹಾನುಭಾವರು ಎಚ್ಚರಿಸಿದ್ದರು. ಈಗ ಮಹಾನುಭಾವರ ಮೂಲವನ್ನೂ, ಅವರ ಪಿಂಗಾಣಿ ಬಟ್ಟಲಿನ ರಹಸ್ಯವನ್ನೂ ಹುಡುಕಿಕೊಂಡು ಲಕ್ಷದ್ವೀಪದ ಕಡೆಗೆ ಹೊರಟರೆ ಅದು ಬಹಳ ಸತ್ಯದ ಮಾತು ಎನ್ನುವುದಕ್ಕೆ ಸಾಕ್ಷಾತ್ ಸಾಕ್ಷಿ ಎಂಬಂತೆ ಪುಟ್ಟ ವಿಮಾನದ ಬಿಳಿಯ ಕಪ್ತಾನ ಸಣ್ಣ ಸಣ್ಣದಕ್ಕೂ ಉರಿದು ಬೀಳುತ್ತಿದ್ದ.

‘ಈತ ಐರೋಪ್ಯನ್ನನ್ನೂ ಅಲ್ಲಾ ಸಾರ್, ಇಂಗ್ಲಿಷಿನವನೂ ಅಲ್ಲ. ಈತ ಬೆಂಗಳೂರಿನಲ್ಲಿರುವ ಆಂಗ್ಲೋ ಇಂಡಿಯನ್. ಮಣಿಪುರದ ಹೆಂಗಸನ್ನು ಮದುವೆಯಾಗಿದ್ದಾನೆ. ಆಕೆ ಇವನಿಗಿಂತಲೂ ಸಿಟ್ಟಿನವಳು. ಸಿಟ್ಟು ಬಂದರೆ ಕೈಯಲ್ಲಿ ಸಿಕ್ಕಿದ ಕಟ್ಟಿಗೆಯಿಂದ ಇವನನ್ನು ಹೊಡೆಯುತ್ತಾಳಂತೆ. ಆ ಮಣಿಪುರದವಳ ಮೇಲಿನ ಸಿಟ್ಟನ್ನು ನನ್ನಂತಹ ಕನ್ನಡಿಗನ ಮೇಲೆ ತೀರಿಸಿಕೊಳ್ಳುತ್ತಾನೆ. ಪಾಪ. ನಿಜವಾಗಿ ನೋಡಿದರೆ ಬಹಳ ಒಳ್ಳೆಯವನು.’

(ಫೋಟೋಗಳು: ಲೇಖಕರದು)

ಧೋನಿಯಾಗಲು ಹೊರಟಿದ್ದ ಆ ತರುಣ ವಿಮಾನ ಪರಿಚಾರಕ ದಾರಿಯುದ್ದಕ್ಕೂ ಆ ಕಪ್ತಾನನ ಸಿಟ್ಟಿನ ಕಥೆಗಳನ್ನು ಹೇಳುತ್ತಾ ನನ್ನ ನಗಿಸಲು ನೋಡುತ್ತಿದ್ದ. ವಿಮಾನ ಬೆಂಗಳೂರಿಂದ ಹೊರಟು ಕೊಚ್ಚಿ ತಲುಪುವವರೆಗೆ ಬೇರೆ ಏನೂ ಕೆಲಸವಿಲ್ಲದ ಆ ವಿಮಾನದ ಹಿರಿಯ ಪರಿಚಾರಕ ಈ ಕಥೆಗಳನ್ನು ಆತನಿಗೆ ಹೇಳಿದನಂತೆ. ಆ ಹಿರಿಯ ಪರಿಚಾರಕನಿಗೆ ಮಣಿಪುರ ಮೂಲದ ಇನ್ನೊಬ್ಬ ಪರಿಚಾರಿಕೆ ಹಿಂದೆ ಹೇಳಿದ್ದಳಂತೆ. ಆಕೆಯೂ ಈ ಕಪ್ತಾನನ ಹೆಂಡತಿಯೂ ಹಿಂದೆ ಜೊತೆಗೆ ಪರಿಚಾರಿಕೆಯರಾಗಿ ಕೆಲಸ ಮಾಡುತ್ತಿದ್ದರಂತೆ.

ಆ ತರುಣ ತನ್ನ ಕಪ್ತಾನನ ಸಂಸಾರದ ಗೋಳುಗಳನ್ನು ಹೇಳುತ್ತಾ ನನ್ನನ್ನು ಮನರಂಜಿಸಲು ನೋಡುತ್ತಿದ್ದ.

ನಾನಾದರೋ ಮೇಲೆ ಹಾರುತ್ತಿರುವ ಆ ಪುಟ್ಟ ವಿಮಾನದ ಕಿಟಕಿಯಿಂದ ಕೆಳಗಿನ ಕಡಲನ್ನು ನೋಡಲು ಇಣುಕುತ್ತಿದ್ದೆ. ಏನೂ ಕಾಣಿಸದಂತೆ ವಾಯುವ್ಯ ದಿಕ್ಕಿನಿಂದ ತೇಲಿ ಬರುತ್ತಿರುವ ಮುಂಗಾರಿನ ಮೋಡಗಳು ಕಡಲು ಮತ್ತು ಆಕಾಶದ ನಡುವೆ ತೆರೆಯ ಪರದೆಯಂತೆ ಹಾದು ಹೋಗುತ್ತಿತ್ತು.

ಓದುಗರು ಕ್ಷಮಿಸಬೇಕು, ಇದೀಗ ಈ ಸಾಲುಗಳನ್ನು ಲಕ್ಷದ್ವೀಪದಿಂದ ಬರೆಯುತ್ತಿರುವೆ. ಅದೂ ಆ ಪಿಂಗಾಣಿ ಬಟ್ಟಲಿನ ಮೂಲ ಬಟ್ಟಲು ಇರುವ ಪುರಾತನ ಸೂಫಿ ದೇಗುಲಕ್ಕೆ ಹೋಗಿ ಅಲ್ಲಿ ಮುನ್ನೂರು ವರ್ಷಗಳಿಂದ ಮಲಗಿರುವ ಸೂಫಿ ಸಂತರೊಬ್ಬರ ಸಮಾಧಿಗೆ ನಮಸ್ಕರಿಸಿ, ಅವರ ಮನೆತನದ ಈಗಿನ ಮುಖ್ಯಸ್ಥರಾದ ಮೂಪರ ಕೈಯಿಂದ ಅಪರಿಮಿತ ಪರಿಮಳದ ಅತ್ತರನ್ನು ಅಂಗೈಗೆ ಪೂಸಿಸಿಕೊಂಡು, ಅಲ್ಲಿನ ಪುರಾತನ ಬಾವಿಯ ಸಿಹಿನೀರನ್ನು ಪ್ರಸಾದದ ಹಾಗೆ ಸೇವಿಸಿ ಬಂದು ಮಿಂದು ಮಡಿಯುಟ್ಟು ಬರೆದಿರುವೆ. ಪಿಂಗಾಣಿ ಬಟ್ಟಲಿನ ಕಥೆಯನ್ನು ಕೇಳಲು ಗುರುವಾರ ಚಂದ್ರೋದಯದ ನಂತರ ಅಲ್ಲಿಗೆ ಮತ್ತೆ ಹೋಗುತ್ತಿರುವೆ.

(ಮುಂದುವರಿಯುವುದು)

(ಮುಂದಿನ ವಾರ: ತೆಂಗು ತೋಪಿನ ಅಡಿಯ ಮನುಷ್ಯ ವ್ಯಾಪಾರಗಳು)

(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಪರಿಷ್ಕೃತ ರೂಪ)