ಶಿಶು ಲೋಕದಲ್ಲಿ ಎಲ್ಲವೂ ಎಷ್ಟು ಸರಾಗ! ಮೂವರೂ ಮಕ್ಕಳು ಪುಣ್ಯಕೋಟಿಯ ಕಥೆಗೆ ಕಣ್ಣೀರುಗರೆದವರೇ. ಪಂಚತಂತ್ರ, ಜಾತಕ, ಅರೇಬಿಯನ್ ನೈಟ್ಸ್, ಈಸೋಪ, ಅಮರಚಿತ್ರ ಕಥಾ ಸರಣಿಗಳು-ಇವರ ಕುತೂಹಲ ತಣಿಸಲು ಕಥೆಗಳ ಕಣಜವೇ ಬೇಕು. ಸಹಜವಾಗಿಯೇ ಪುಸ್ತಕಗಳ ಒಲವು. ನಾನು ರಾತ್ರಿಯಿಡೀ ಪ್ರಯಾಣ ಮಾಡಿ ಮಗಳ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಧನ್ಯ ಮತ್ತು ಮಾನ್ಯ ಹೊಸದಾಗಿ ಕೊಂಡ ಪುಸ್ತಕಗಳ ರಾಶಿ ಮುಂದಿಟ್ಟು ನಮಗೆ ವಿವರಿಸಲಾರಂಭಿಸುವುದು ಕಂಡು ಮನದುಂಬಿ ಬರುವುದು. ಮೊಮ್ಮಕ್ಕಳ ಪಾಲನೆಯ ಖುಷಿ ಒಂದು ಹಿಡಿ ಮಿಗಿಲು ಎನ್ನುವ ಅನುಭವ ಕಥನ ಬರೆದ್ದಾರೆ 
ಕೆ.ಆರ್.ಉಮಾದೇವಿ ಉರಾಳ

ತಂದೆತಾಯಿಯರಾಗಿ ಮಕ್ಕಳನ್ನು ಬೆಳೆಸುವಾಗ ಮನದಲ್ಲಿ ಸದಾಕಾಲ ಒಂದೇ ಹಂಬಲ- ಈ ಮಕ್ಕಳು ಸಚ್ಚಾರಿತ್ರ್ಯವಂತರಾಗಿ ಸನ್ಮಾರ್ಗದಲ್ಲಿ ನಡೆಯುತ್ತಾ ಸಮಾಜಕ್ಕೊಂದು ವರವಾಗಿ ಬಾಳುವಂತಾಗಲಿ ಎಂದು. ಅವರ ಪ್ರಗತಿ ಈ ಹಂಬಲಕ್ಕೆ ಪೂರಕವಾಗುವಂತೆ ಎಷ್ಟೇ ಆಶಾದಾಯಕವಾಗಿದ್ದರೂ ಕೂಡ ಕಾಣದ ಭವಿಷ್ಯದಲ್ಲಿ ಏನು ಕಾದಿದೆಯೋ ಎಂಬ ಸಣ್ಣದೊಂದು ಆತಂಕದ ಎಳೆ ಉಳಿದುಕೊಂಡೇ ಬರುತ್ತದೆ. ಹೀಗಾಗಿ ತಾಯ್ತಂದೆಯರಿಗೆ ತಮ್ಮ ಮಕ್ಕಳ ಬೆಳವಣಿಗೆಯ ಅವಧಿ ಕಿಂಚಿತ್ ದುಗುಡ ದುಮ್ಮಾನದೊಂದಿಗೂ ಸಾಗಿ ಬರುತ್ತದೆಂದು ನನ್ನ ಅನಿಸಿಕೆ.

ಕಾಲಚಕ್ರ ಉರುಳುತ್ತಾ ಉರುಳುತ್ತಾ ಮುಗ್ಧತೆ ಸ್ನಿಗ್ಧತೆ ನಿಷ್ಕಲ್ಮಷತೆಯಿಂದಾಗಿ ಧರೆಗಿಳಿದ ದೇವತೆಗಳಂತಿದ್ದ ಅವೇ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಪ್ರೌಢರಾಗುತ್ತಾರೆ. ಯೌವನಿಗರಾಗಿ ವಿವಾಹಿತರಾಗುತ್ತಾರೆ. ಅವರೇ ತಾಯಿತಂದೆಯರಾಗುವ ಸಂದರ್ಭದಲ್ಲಿ ನಮಗೆ ಮೊಮ್ಮಕ್ಕಳ ಆಗಮನದ ನಿರೀಕ್ಷೆ. ನನ್ನ ಬದುಕಲ್ಲಿನ ಇಂತಹ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಮಿತ್ರರು ಹೇಳಿದರು, “ಮೇಡಂ, ಮೊಮ್ಮಕ್ಕಳ ಒಡನಾಟ ಇದೆಯಲ್ಲ, ಬದುಕಲ್ಲಿ ಅದೊಂದು ಸಂತೋಷದ ಪರ್ವ!” ಈ ಮಾತು ಹೇಳುವಾಗ ಎಳೆನಗೆಯಿಂದ ಬೆಳಗಿದ ಅವರ ಮುಖ, ಹೊಳೆವ ಕಣ್ಣು, ಆ ಧ್ವನಿಯ ದೃಢತೆ ಹೇಳಿದ ಮಾತಿನ ಅರ್ಥಕ್ಕೆ ಮೆರುಗೀಯುತ್ತಿತ್ತು. ನಿಜ, ಹೊಣೆಗಾರಿಕೆ ಹೊತ್ತು ಲಾಲನೆ ಪಾಲನೆ ಮಾಡಿ ಬೆಳೆಸಿದ್ದ ಮಕ್ಕಳು ಈಗ ತಾವೇ ತಾಯ್ತಂದೆಯರಾಗುವವರಿದ್ದಾಗ, ನಮ್ಮ ಮನದಲ್ಲಿನ ಅವರ ಬಾಲ್ಯದ ಆಟಪಾಠಗಳು ಮಸುಕಾಗುತ್ತಾ ಮನದ ಮೂಲೆಗೆ ಸರಿದಂತಹ ಸಂದರ್ಭದಲ್ಲಿ ಮೊಮ್ಮಕ್ಕಳೊಂದಿಗೆ ಮತ್ತೆ ಬಾಲಲೀಲೆಗಳ ಸಡಗರವನ್ನು ಸವಿಯುವಂತಹ ಸದವಕಾಶ. ಈಗ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ನಮ್ಮ ಮಕ್ಕಳ ಹೆಗಲೇರಿದೆ. ತಾಯ್ತಂದೆಯರಿಗೆ ಹಗುರ ಮನದಿಂದ ಮೊಮ್ಮಕ್ಕಳ ಒಡನಾಡುವ ಸದವಕಾಶ. ಹೌದು, ನಾನೂ ಮೊಮ್ಮಕ್ಕಳ ಒಡನಾಟಕ್ಕೆ ಸಜ್ಜಾಗುವವಳಿದ್ದೆ. ‘ಮೊಮ್ಮಕ್ಕಳ’ ಎಂಬ ಬಹುವಚನ ಏಕೆಂದರೆ, ಮಗಳಿಗೆ ಅವಳಿ ಮಕ್ಕಳಾಗುವುದಿತ್ತು. ನಾವಿಬ್ಬರು ಹೊಸ ಬಾಂಧವ್ಯವೊಂದಕ್ಕೆ ಮುಖಾಮಖಿಯಾಗುವುದರೊಂದಿಗೆ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಸ್ವಲ್ಪ ಹೆಚ್ಚಾಗಿಯೇ ಮಾಡಿಕೊಳ್ಳಬೇಕಾದ ಅಗತ್ಯವಿತ್ತು.

ವೈದ್ಯೆ ಮಗಳು ಧೈರ್ಯವಾಗೇ ಇದ್ದಳು. ಎರಡು ಬಾರಿ ಎದುರಿಸಬೇಕಾದದ್ದು ಒಮ್ಮೆಲೇ ಆಗುತ್ತದಲ್ಲ ಎಂಬ ಸಂತೋಷದಲ್ಲೂ ಇದ್ದಳು. ಸ್ವತಃ ತಾವೇ ಅವಳಿಜವಳಿ ಮಕ್ಕಳನ್ನು ಹೆತ್ತು ಸಾಕಿ ಸಲಹಿ, ಹಲವಾರು ಬಾಣಂತನಗಳಲ್ಲಿ ಭಾಗಿಯಾಗಿದ್ದ ಹಿರಿಯೆ ಕಾವೇರಮ್ಮ, ಬಂದು ಇದ್ದು ಸಹಕರಿಸಲು ಒಪ್ಪಿಕೊಂಡಿದ್ದು ಅರ್ಧ ಹೊರೆ ಇಳಿದಂತಾಗಿತ್ತು. ಹಲವರು ಅವಳಿಜವಳಿ ಮಕ್ಕಳನ್ನು ನೋಡಿಕೊಳ್ಳುವುದು ಅದೆಷ್ಟು ಕಷ್ಟ ಎಂದೆಲ್ಲಾ ಉದಾಹರಣೆ ಸಮೇತ ಹೇಳುತ್ತಿದ್ದರು. ಅವ್ಯಾವುದಕ್ಕೂ ಅಷ್ಟಾಗಿ ಕಿವಿಗೊಡದ ನನಗೆ ಸಣ್ಣಗೆ ಬಾಧಿಸುತ್ತಿದ್ದ ಆತಂಕವೆಂದರೆ ಆ ಮಕ್ಕಳು ರಾತ್ರಿ ನಿದ್ದೆಗೆಡಿಸಿದರೆ ಎಂದು. ರಾತ್ರಿಯೂ ನಿದ್ದೆಗೆಟ್ಟು ಹಗಲಲ್ಲಿ ಬಾಣಂತಿ ಮಕ್ಕಳ ಆರೈಕೆ ನೋಡಿಕೊಳ್ಳುವ ತ್ರಾಣ ನನಗಿದ್ದೀತೆ ಎಂದು. ಈ ಆತಂಕಕ್ಕೂ ಒಂದು ಹಿನ್ನೆಲೆ ಇತ್ತು. ಸಧ್ಯದಲ್ಲೇ ಈ ಮಕ್ಕಳ ತಾಯಿಯಾಗಲಿರುವ ಇದೇ ನನ್ನ ಮಗಳು, ಹುಟ್ಟಿದಂದಿನಿಂದ ತನಗೆ ಮೂರು ವರ್ಷಗಳಾಗುವವರೆಗೂ ನಮಗೆ ರಾತ್ರೆ ಸಾಕಷ್ಟು ನಿದ್ದೆಗೆಡಿಸಿದ್ದಳು. ಮಧ್ಯರಾತ್ರಿಯಾಯಿತೆಂದರೆ ಇವಳು ಎಚ್ಚರಾಗುತ್ತಿದ್ದುದು ಹಠಕ್ಕಲ್ಲ, ಆಟಕ್ಕೆ. ಎದ್ದು ಗಂಟೆಗಟ್ಟಳೇ ಆಟ ಶುರುಮಾಡಿಬಿಡುತ್ತಿದ್ದಳು. ಮೂರುಗಂಟೆ ರಾತ್ರಿಯಲ್ಲಿ ರಸ್ತೆ ಮೇಲೆ ಇವಳ ಟ್ರೈಸಿಕಲ್ ಸವಾರಿ. ರಾತ್ರಿ ನಷ್ಟವಾದ ನಿದ್ದೆಯನ್ನು ಹಗಲಿನಲ್ಲಿ ಸರಿದೂಗಿಸಲಾಗದೆ ಅದರದ್ದೇ ಆದ ಪರಿಣಾಮಕ್ಕೆ ಸ್ವಲ್ಪಮಟ್ಟಿಗೆ ಒಳಗಾಗಿದ್ದೆ. ಅದೇನೇ ಇರಲಿ, ನವಮಾಸ ತುಂಬಿ ತಾಯಗರ್ಭದಿಂದ ದೇವಕನ್ನಿಕೆಯರಿಬ್ಬರೂ ಅವತರಿಸಿದರು. ಮೂರು ವರ್ಷಗಳ ನಂತರ ಮಗನಿಗೆ ಮಗ ಹುಟ್ಟಿದ. ಮೂರು ಮಾಣಿಕ್ಯದಂತಹ ಮೂವರು ಮೊಮ್ಮಕ್ಕಳು ಬದುಕಿಗೆ ಬಣ್ಣ ತುಂಬಲು ಅವತರಿಸಿದ್ದರು

ಕೈಯಿಂದ ನೇವರಿಸಿದರೆ ಮೈಯ್ಯಲ್ಲಿ ಗೀರು ಮೂಡೀತೋ ಎಂಬಷ್ಟು ಗುಲಾಬಿ ದಳದಂತೆ ಮೃದುವಾದ ಮಾಂಸದ ಮುದ್ದೆಯಂತಿದ್ದ ಮಕ್ಕಳು ದಿನೇದಿನೇ ತುಟಿ ಕಣ್ಣು ಮೂಗು ಗಲ್ಲ ಕೆನ್ನೆ ಎಂದು ಸ್ಪಷ್ಟಪಡಿಸಿಕೊಳ್ಳುತ್ತಾ ತಮ್ಮ ನಕ್ಷತ್ರದ ಬೆಳಕಿನ ಕಿರಣದಂತಹ ನೋಟ, ತೇವಭರಿತ ಕೆಂದುಟಿಗಳ ಬಿರಿದರಳುವ ಹೂನಗು, ತಮ್ಮದೇ ವಿಶಿಷ್ಟ ರಾಗಾಲಾಪನೆಯ ಅಳು ಎಂದೆಲ್ಲಾ ತಮ್ಮದೇ ಛಾಪು ಮೂಡಿಸುತ್ತಾ ದಿನದಿಂದ ದಿನಕ್ಕೆ ಒಂದೊಂದು ವಿಧದ ಬೆರಗು ಮೂಡಿಸುತ್ತಾ ಬೆಳೆಯುವ ಪರಿಗೆ ಹೃದಯ ಮಾರುಹೋಗುತ್ತದೆ. ತೊಟ್ಟಿಲಲ್ಲಿ ಮಲಗಿಯೇ ಕಾಲುಗಳನ್ನು ಎತ್ತೆತ್ತಿ ಪಟಪಟನೆ ಆಡಿಸುತ್ತಾ ಕತ್ತು ಹೊರಳಿಸಿ ನಗುವ ಆ ನಗು ಮನದಲ್ಲಿ ಉಂಟುಮಾಡುವ ಸಂಚಲನದ ವರ್ಣನಾತೀತ ಆನಂದ ಕೇವಲ ಅನುಭವ ವೇದ್ಯ.

ಕೋಮಲ ಹೂ ದಳಗಳಂತೆ ಸ್ನಿಗ್ಧವಾದ ಕೆನ್ನೆಗಳಲ್ಲಿ ಮುಗ್ಧ ಭಾವದ ಹೊಂಪುಳಿಯ ಹೊನಲೇ ಹರಿಸುತ್ತಾ ಒಳಗಿನಿಂದ ಎದ್ದು ಬರುವ ಆ ಮೃದು ಮಧುರ ಮಂದಹಾಸ ಮನಮೋಹಕ. ನಿದ್ದೆಯಲ್ಲಿ ಯಾರೋ ನಗಿಸುತ್ತಿರುವರೋ ಎಂಬಂತೆ ನಗುವ ಆ ನಗು ಹೂ ಬಿರಿವ ಚೆಲುವಿಗೂ ಮಿಗಿಲೇನೋ. ಐರೋಪ್ಯ ಸಾಹಿತ್ಯದ ಮಧ್ಯಯುಗದ ಕವಿ ಗಿಯೋವನಿ ಬೊಕಾಕಿಯೋ ಹೂ ಬಿರಿವ ಬೆರಗನ್ನು ಸಾದ್ಯಂತ ಕಾಣಲು ಹೂವಿನ ಪೊದರ ಬಳಿ ರಾತ್ರಿಯಿಡೀ ರೆಪ್ಪೆಯಲುಗಿಸದೇ ಕುಳಿತಿರುತ್ತಿದ್ದನಂತೆ. ನಾವು ಕೂಡ ನಿದ್ದೆಹೋದ ಮಗುವಿನ ತೊಟ್ಟಿಲ ಬಳಿ ಹೂ ಬಿರಿದಂತೆ ಅರಳುವ ಆ ನಗುವಿಗಾಗಿ ಕಾದು ನಿಲ್ಲುತ್ತಿದ್ದುದಿತ್ತು. ಮಕ್ಕಳು ನಿದ್ರಿಸುವಾಗ ದೇವರುಗಳು ಸುತ್ತುವರಿದು ಮಾತನಾಡಿಸುತ್ತಾ ತಮಾಷೆ ಮಾಡಿ ನಗಿಸುತ್ತಿರುವ ನಗು ಅದು ಎಂದು ಅಮ್ಮ, ದೊಡ್ಡಮ್ಮ ಹೇಳುತ್ತಿದ್ದರು. ‘ಮರುಳು ನಗು’ ಎನ್ನುವ ಈ ನಗು ಮರುಳಾಗಿಸುವುದು ನೋಡುತ್ತಿರುವವರನ್ನು. ಅಕಾರಣವಾದ ಈ ನಿಷ್ಕಲ್ಮಷ ನಗು ಮನುಷ್ಯ ಮಾತ್ರರದಲ್ಲ ಎನಿಸುವಂತೆ ಮನಸ್ಸು ಮಾರುಹೋಗುತ್ತದೆ. “ನಿದ್ದೆ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು…” ಎಂಬ ಕವಿವಾಣಿ ಖಂಡಿತ ಉತ್ಪ್ರೇಕ್ಷೆಯದಲ್ಲ.

ಅವಳಿ ಮಕ್ಕಳ ಆರೈಕೆಗಾಗಿ ಬಿಡುವಿಲ್ಲದಂತೇ ಕೆಲಸಗಳಾಗುತ್ತಿದ್ದರೂ, “ನಾನು ಬಂದು ಮಕ್ಕಳನ್ನು ಕೈಗೆತ್ತಿಕೊಂಡ ಮೇಲೆ ನಾನು ಹೊರಡುವವರೆಗೂ ಅವು ನಿಮ್ಮ ಮಕ್ಕಳಲ್ಲ, ನನ್ನ ಮಕ್ಕಳು” ಎಂದು ಭಾವನಾತ್ಮಕವಾಗಿ ಹೇಳಿದಂತೆಯೇ ಭಾವಪೂರ್ಣರಾಗಿಯೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕಾವೇರಮ್ಮನಿಂದಾಗಿ ಕೆಲಸಗಳ ನಿಭಾವಣೆ ಎಷ್ಟೋ ಹಗುರವಾಯಿತು. ಮಕ್ಕಳಿಗೆ ಸ್ನಾನಕ್ಕೆ ಎಣ್ಣೆ ಹಚ್ಚಿ ಅಂಗಾಂಗಗಳನ್ನು ತಿದ್ದಿ ತೀಡಿ ಕೈ ಎತ್ತಿಸಿ ಕಾಲು ಮಡಿಚಿ ಬೆನ್ನು ನೀವಿ ಎಂದೆಲ್ಲಾ ವ್ಯಾಯಾಮ ಹದನಾಗಿ ಮಾಡಿಸುತ್ತಾ “ವಿದ್ಯಾ ಕೊಡು, ಬುದ್ಧಿ ಕೊಡು, ಆರೋಗ್ಯ ಕೊಡು, ಮುತ್ತಿನಂಥ ಗಂಡನ್ ಕೊಡು, ಮುನ್ನೂರ್ ವರ್ಷ ಆಯಸ್ಸ್ ಕೊಡು…” ಎಂದೆಲ್ಲಾ ಪದ ಹೇಳುತ್ತಾ ಹದ ಬಿಸಿ ನೀರಲ್ಲಿ ಎರೆದು ತಂದು ಪೌಡರ್ ಹಚ್ಚಿ ಹಣೆಗೆ ಕೆನ್ನೆಗೆ ಬೊಟ್ಟಿಟ್ಟು ಟೊಪ್ಪಿ ಹಾಕಿ ಮಗುವಿನ ಅಂದ ಚೆಂದ ಕಣ್ತುಂಬ ನೋಡಿ ಮನದುಂಬಿ ಸಂತಸಿಸುತ್ತಿದ್ದರು.

(ಸಾಂದರ್ಭಿಕ ಚಿತ್ರ)

ಹೊಣೆಗಾರಿಕೆ ಹೊತ್ತು ಲಾಲನೆ ಪಾಲನೆ ಮಾಡಿ ಬೆಳೆಸಿದ್ದ ಮಕ್ಕಳು ಈಗ ತಾವೇ ತಾಯ್ತಂದೆಯರಾಗುವವರಿದ್ದಾಗ, ನಮ್ಮ ಮನದಲ್ಲಿನ ಅವರ ಬಾಲ್ಯದ ಆಟಪಾಠಗಳು ಮಸುಕಾಗುತ್ತಾ ಮನದ ಮೂಲೆಗೆ ಸರಿದಂತಹ ಸಂದರ್ಭದಲ್ಲಿ ಮೊಮ್ಮಕ್ಕಳೊಂದಿಗೆ ಮತ್ತೆ ಬಾಲಲೀಲೆಗಳ ಸಡಗರವನ್ನು ಸವಿಯುವಂತಹ ಸದವಕಾಶ.

ನಿದ್ದೆಯಿಂದೆದ್ದಾಗ ಹೊರಡು ಹಾಸಿಗೆಯಲ್ಲಿ ಮಲಗಿಸಿಕೊಂಡು ಮುದ್ದು ಮಕ್ಕಳಿಬ್ಬರ ಸ್ವಭಾವ ವೈಶಿಷ್ಟ್ಯಗಳೇನೇನಿರುತ್ತವೆ ಮುಂದೆ ಎಂದು ತಾವೇ ಕಲ್ಪಿಸಿಕೊಂಡು ಹೇಳುತ್ತಾ ಆನಂದಿಸುತ್ತಿದ್ದರು. ಈ ಮಕ್ಕಳ ತಾಯಿ ನನ್ನ ಮಗಳಷ್ಟು ಸಹನಶೀಲೆಯನ್ನು ತಾನಿದುವರೆಗೆ ಕಂಡೇ ಇರಲಿಲ್ಲ, ಇಲ್ಲಿಯೇ ತನಗೆ ಕಣ್ತುಂಬ ನಿದ್ದೆ, ಇಲ್ಲಿಯೇ ತನಗೆ ಸುಖ ಎಂದು ಹೇಳುತ್ತಾ ಬೆರಗುಪಡುತ್ತಿದ್ದರು. ಸ್ವತಃ ವೈದ್ಯೆಯಾಗಿ ಸಾಂಪ್ರದಾಯಿಕ ಬಾಣಂತನದ ಕೆಲವೊಂದು ಸವಲತ್ತುಗಳನ್ನು ಮಗಳು ನಿರಾಕರಿಸುತ್ತಿದ್ದುದಲ್ಲದೆ, ಅವಳ ಸ್ವಾವಲಂಬಿ ಮನೋಭಾವ ಹಾಗೂ ಕಾವೇರಮ್ಮನ ಹಿರಿಯ ವಯಸ್ಸನ್ನು ಪರಿಗಣಿಸುವ ಸಹೃದಯತೆಯಿಂದಾಗಿ ಅವರಿಗೂ ಕೆಲಸ ಸಹನೀಯವಾಗಿತ್ತು. ರಾತ್ರಿ ಹೆಚ್ಚೇನೂ ಏಳದೆ, ನಾನು ಯಾವುದಕ್ಕಾಗಿ ಆತಂಕಪಟ್ಟಿದ್ದೆನೋ ಆ ಆತಂಕವನ್ನು ಹುಸಿಗೊಳಿಸಿ ನನ್ನನ್ನು ನಗೆಪಾಟಲಿಗೀಡಾಗಿಸಿದ್ದವು, ಈ ಮಕ್ಕಳು. ಆದರೆ ಆ ನನ್ನ ಆತಂಕ ಹುಸಿಯಾದದ್ದೇನಲ್ಲ ಎಂದು ಮುಂದೆ ಮೊಮ್ಮಗ ತೋರಿಸಿದ. ಇವನು ನನ್ನ ಸೊಸೆಗೆ ತನಗೆ ನಾಲ್ಕು ವರ್ಷಗಳು ತುಂಬುವವರೆಗೂ ರಾತ್ರಿ ಸರಿ ನಿದ್ದೆ ಮಾಡಲು ಬಿಡಲಿಲ್ಲ. ತಾಯಿ ಕಾಲಮೇಲೆ ಹಾಕಿಕೊಂಡು ನಿದ್ರೆ ಮಾಡಿಸಬೇಕು, ಅದೂ ಈಗ ಕಣ್ಮುಚ್ಚಿದರೆ ಇನ್ನರೆಗಳಿಗೆಗೆ ಕಣ್ದೆರೆವ ಕೋಳಿನಿದ್ದೆಗಾಗಿ ತಾಯಿ ರಾತ್ರಿಯಿಡೀ ಎದ್ದು ಕೂತು ಹಾಡಿ ತಟ್ಟಿ ಮಲಗಿಸುತ್ತಾ ಇರಬೇಕು ಎಂದು ವಿಧಿಸಿದ್ದ.

ಹಾಗೆಂದು ಮಕ್ಕಳಿಬ್ಬರು ಧನ್ಯ ಮಾನ್ಯ ಅತ್ತು ಹೆದರಿಸುವ ಸದವಕಾಶವನ್ನು ಕಳೆದುಕೊಂಡರೆಂದೇನಲ್ಲ. ಅದು ಅವರ ಸಂಜೆಯ ಕಾರ್ಯಕ್ರಮವಾಗಿತ್ತು. ಸಂಜೆಯಾಯಿತೆಂದರೆ ಜೋಡುಮೇಳದ ತಾರಕ ಸ್ವರದ ಓಲಗ ಆರಂಭವಾಯಿತೆಂದೇ ಲೆಕ್ಕ. ಆದಷ್ಟು ಸೊಳ್ಳೆ ಒಳಬಾರದ ವ್ಯವಸ್ಥೆ ಮಾಡಿದ್ದೆವು. ಅಜ್ಜ ಅಜ್ಜಿ ನಾವಿಬ್ಬರು ಮಕ್ಕಳನ್ನು ಎತ್ತಿಕೊಂಡು ಹೊರಗಡೆ ತಿರುಗಾಡಿಸುತ್ತೇವೆ, ಅದರಿಂದ ಗಾಳಿಸೋಂಕು ಆಗಿ ಹೀಗಾಗದೆ ಇನ್ನೇನಾಗುತ್ತದೆ ಎಂದು ಕಾವೇರಮ್ಮನ ಆಕ್ಷೇಪ. ಮಕ್ಕಳನ್ನೆತ್ತಿಕೊಂಡು ಹೊರಗಡೆ ತಿರುಗಾಡಿಸುವುದರಲ್ಲಿ ಅಜ್ಜನಿಗೂ ಉಮೇದೇ. ಸುಳಿವ ತಂಗಾಳಿ, ನಿರಭ್ರ ನೀಲಿ ಆಕಾಶ, ತೊನೆವ ಕೊಂಬೆ ರೆಂಬೆಗಳು, ಹಾರುವ ಹಕ್ಕಿಗಳು, ನಾಯಿ ಬೆಕ್ಕು ಹಸುಗಳು ಇವನ್ನೆಲ್ಲ ನೋಡುತ್ತಾ ಹಾಲಿನ ಬಟ್ಟಲಲ್ಲಿ ಕಪ್ಪು ದ್ರಾಕ್ಷಿ ತೇಲಿ ಬಿಟ್ಟಂತಹ ಆ ಕಂಗಳನ್ನು ಮತ್ತಷ್ಟು ಅರಳಿಸಿ, ಬಿಟ್ಟ ಬಾಯಿ ಬಿಟ್ಟಂತೆ ನೋಡುವ ಆ ಎಳೆಗೂಸುಗಳ ಬೆರಗು ನಮ್ಮ ಮನ ತಣಿಸುತ್ತಿರುತ್ತದೆ. ಪ್ರಾಣಿಪ್ರಿಯ ಅಚಿಂತ್ಯನಿಗಂತೂ ಜಾನುವಾರುಗಳ ವೀಕ್ಷಣೆಗಾಗಿ ರಸ್ತೆ ಬದಿಯಲ್ಲೇ ಅಡ್ಡಾಡಿಸಬೇಕಿತ್ತು. ನಾನಂತೂ ನನ್ನ ಮೊದಲ ಬಾಣಂತನದಲ್ಲೇ ಮಗಳು ಹುಟ್ಟಿ ನಾಲ್ಕಾರು ದಿನಗಳಲ್ಲೇ ತವರು ಮನೆಯ ಪಕ್ಕದ ವಿಶಾಲ ಕಣದಲ್ಲಿ ಎಲ್ಲರೂ ಬೇಡಬೇಡವೆಂದರೂ ಮಗುವನ್ನೆತ್ತಿಕೊಂಡು ಅಡ್ಡಾಡುತ್ತಿದ್ದವಳು. ಇನ್ನು ಈ ಮೊಮ್ಮಕ್ಕಳ ಕಾಲದಲ್ಲಿ ಅಂಥವನ್ನೆಲ್ಲ ನಾವು ನಂಬುತ್ತೇವೆಯೇ? ಇಲ್ಲಿನ ಎರಡನೇ ಸಾಹಿತ್ಯ ಸಮ್ಮೇಳನಕ್ಕೆ ನಿಕಟಪೂರ್ವ ಅಧ್ಯಕ್ಷರಾಗಿ ಬಂದಿದ್ದ ನನ್ನ ಮೆಚ್ಚಿನ ಗುರುಗಳು ವೈನತೇಯ – ವಿಹಾರಿ ಕಾವ್ಯನಾಮಗಳ ಶ್ರೀನಿವಾಸ ಉಡುಪರು ಪತ್ನಿಯೊಂದಿಗೆ ಸಂಜೆ ಅರ್ಧಗಂಟೆಗಾಗಿ ನಮ್ಮ ಮನೆಗೆ ಬಂದಿದ್ದರು. ಅವರಿದ್ದಷ್ಟು ಹೊತ್ತೂ ಈ ಎರಡೂ ಮಕ್ಕಳದೂ ತಾರಕ ಸ್ವರದ ಗಾಯನ ಕಚೇರಿ. ಮೊದಲೇ ಮೆದು ಮಾತಿನ ನನ್ನ ಗುರುಗಳಿಗೆ ಹೆಚ್ಚು ಮಾತಾಡಲೇ ಆಗಿರಲಿಲ್ಲ. ಒಂದೆರಡು ತಿಂಗಳಲ್ಲಿ ಈ ಗಾಯನ ಕಚೇರಿ ಸಾಕು ಎಂದೆನಿಸಿತೇನೋ ತಾವೇ ನಿಲ್ಲಿಸಿದವು.

ಅಂಬೆಗಾಲಿಡುತ್ತಾ ಇಂಚಿಂಚೇ ಮುಂದೆ ಸರಿವ ಸಡಗರ ನೋಡಲು ಕಣ್ಣೆರಡು ಸಾಲವು. ಗೆಜ್ಜೆ ಕಾಲಲ್ಲಿ ತೊದಲು ಹೆಜ್ಜೆ ಹಾಕುವಾಗ ಹೆಜ್ಜೆಹೆಜ್ಜೆಗೆ ಮುಗ್ಗರಿಸುತ್ತಾ ನಡೆಯುವುದನ್ನು ನೋಡುವಾಗ ನಮ್ಮ ಆನಂದದ ಬಟ್ಟಲು ತುಂಬಿ ತುಳುಕಿ ಉಕ್ಕಿ ಹರಿದಿರುತ್ತದೆ. ಚಂದ್ರನ ಮೇಲೆ ಮೊದಲು ಹೆಜ್ಜೆಯೂರಿದಾಗಿನ ಪ್ರಾಧಾನ್ಯತೆಗಿಂತ ಕಮ್ಮಿಯೆಂದೇನೂ ಅನಿಸದೆ ನಮ್ಮ ಹೃದಯದಂಗಳದಲ್ಲಿ ಆ ಪುಟ್ಟ ಹೆಜ್ಜೆಗಳು ಪ್ರತಿಷ್ಠಾಪಿತವಾಗಿಬಿಡುತ್ತವೆ. ಧನ್ಯ ಮಾನ್ಯ ಚಿಕ್ಕವರಿದ್ದಾಗ ಕುಡಿವ ಹಾಲಿನ ಪ್ರಮಾಣ ಜಾಸ್ತಿ. ತೊದಲು ನಡಿಗೆಯಲ್ಲಿ ಎದ್ದೆದ್ದು ಬೀಳುತ್ತಾ ತಾಯ ಬಳಿ ಬಂದು ‘ಅಮ್ಮಾ ಅಮ್ಮಾ ಹಾಪು, ಹಾಪು’ ಎನ್ನುತ್ತಾ ತಾಯಿ ತುಂಬಿಸಿ ಕೊಟ್ಟ ಹಾಲಿನ ಬಾಟಲು ಬಾಯಿಗಿಟ್ಟು ಹೊರಡುಹಾಸಿಗೆ ಮೇಲೆ ಮಲಗಿಕೊಂಡು ಕಾಲುಗಳನ್ನು ಪಟಪಟ ಬಡಿಯುತ್ತಾ ಅಮೃತಪಾನ ಮಾಡುವಾಗ ಎಲ್ಲರ ಮುಖದಲ್ಲಿ ಮುಗುಳ್ನಗು. ಅಚಿಂತ್ಯನೂ ಮೊದಲ ಹುಟ್ಟುಹಬ್ಬದಲ್ಲೇ ನಡಿಗೆಯೇಕೆ, ಓಡುನಡಿಗೆಯನ್ನೇ ಆರಂಭಿಸಿದವನು. ಮೂವರೂ ವರ್ಷದುಂಬುವಷ್ಟರಲ್ಲೇ ಮಾತು ಪ್ರಾರಂಭಿಸಿದವರು.

ಮಕ್ಕಳದೇ ವಿಭಿನ್ನ ಲೋಕ. ಅದರೊಳಗೆ ಹೊಕ್ಕ ನಮ್ಮ ಹಮ್ಮುಬಿಮ್ಮುಗಳು ದೊಡ್ಡಸ್ತಿಕೆಗಳೆಲ್ಲ ಹುಡಿಗಟ್ಟಿ ಹೋಗುತ್ತವೆ. ಮಕ್ಕಳೊಂದಿಗೆ ಮಕ್ಕಳಾಗಿ ಆಡುವುದೇ ಅವರ ಮನ ಗೆಲ್ಲುವ ಕೀಲಿಕೈ. ನಮ್ಮೊಳಗೆ ಜಡಗಟ್ಟಿರುವ ಮಗುತನವನ್ನು ಪುನರುದ್ದೀಪಿಸಲು ಮಕ್ಕಳ ಸಾನ್ನಿಧ್ಯದಿಂದ ಮಾತ್ರ ಸಾಧ್ಯ. ಇದರಿಂದಾಗಿಯೇ ಕುವೆಂಪುರವರು

“ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು!
ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜ ಪಶು”

ಎಂದಾಶಿಸಿದ್ದಾರೆ. ಅಡಗುವ ಆಟ, ಅಡಗಿಸಿಟ್ಟ ವಸ್ತುವನ್ನು ಹುಡುಕುವ ಆಟ, ಅವರ ಅಂಗಡಿಯ ಗಿರಾಕಿಯಾಗುವುದು, ಹೋಟೆಲ್‌ನ ಗ್ರಾಹಕರಾಗುವುದು, ಡಾಕ್ಟರ ಬಳಿಯ ರೋಗಿಯಾಗುವುದು, ಸ್ಕೂಲಲ್ಲಿ ಅವರ ಶಿಷ್ಯರಾಗುವುದು ಹೀಗೆ ನಮಗರಿವಿಲ್ಲದೇ ನಮ್ಮ ಬಾಲ್ಯದ ಲೋಕ ಪ್ರವೇಶಿಸಿರುತ್ತೇವೆ. ಅವಳಿ ಮಕ್ಕಳಿಗೆ ಆಟಕ್ಕೆ ನಿರಂತರ ಪರಸ್ಪರ ಸಾಂಗತ್ಯ. ಯಾರಾದರೂ ನಿನ್ನ ಹೆಸರೇನು ಎಂದು ಕೇಳಿದರೆ ಇಬ್ಬರೂ ಹೇಳುವುದು ತಮ್ಮಿಬ್ಬರ ಹೆಸರನ್ನೂ ಸೇರಿಸಿ ‘ಧನ್ನಮಾನ್ನ’ ಎಂದು. ಬಾಳೆಹಣ್ಣಿನ ವ್ಯಾಪಾರಿಗಳಾಗಿ ಹಣ್ಣಿನ ಬುಟ್ಟಿ ಮುಂದಿಟ್ಟುಕೊಂಡು ‘ಬಾನಣ್ಣು, ಬಾನಣ್ಣು, ಬನ್ನಿ ಬನ್ನಿ’ ಎಂದು ಕೂಗುತ್ತಾ ಓರೆಗಣ್ಣಲ್ಲಿ ನಮ್ಮನ್ನು ನೋಡುವಾಗ ಆ ನೋಟ ಕೊಳ್ಳದಿರಲು ಬಿಡುತ್ತದೆಯೇ. ಬಾನಣ್ಣು ವ್ಯಾಪಾರ ಮಾಡಿ ಎಷ್ಟಾಯ್ತು ಎಂದರೆ ಅಂಗೈ ಎತ್ತಿ ಕೈ ಬೆರಳುಗಳನ್ನು ಮಡಚಿ ಬಿಚ್ಚುತ್ತಾ ‘ಪಾಂಚ್ ಉಪೀ’ ಎನ್ನುವುದು. ದುಡ್ಡು ಕೊಟ್ಟಂತೆ ಮಾಡಿ, ಛೇಡಿಸಲು ‘ಚಿಲ್ರೆ ವಾಪಸ್ ಕೊಡ್ರೀ’ ಎಂದರೆ ತಮ್ಮ ಮನೆಯ ಸಹಾಯಕಿಯನ್ನನುಕರಿಸಿ ಬ್ಲೌಸ್ ಒಳಗೆ ಕೈ ಹಾಕಿ ಪರ್ಸ್ ತೆಗೆದು ಚಿಲ್ಲರೆ ಕೊಡುವಾಗ ಆ ಪಕ್ಕಾ ಅನುಕರಣೆಯ ಶೈಲಿಗೆ ಮೆಚ್ಚುಗೆಯೊಂದಿಗೆ ಗೊಳ್ಳನೆ ನಗು. ಇವರು ಡಾಕ್ಟರಾದರೆ ನಾವು ಹೊಟ್ಟೆನೋವು, ಜ್ವರವೆಂದು ತರಹೇವಾರಿ ರೋಗಿಗಳಾಗಿ ಹೋಗುತ್ತಿರಬೇಕು. ಡಾಕ್ಟರು ಕಣ್ಣು ನಾಲಗೆ ನಾಡಿ ಎಲ್ಲ ನೋಡಿ ಸ್ಟೆತಾಸ್ಕೋಪಿಟ್ಟು ಚುಚ್ಚಿ ಕೊಟ್ಟು ನಂತರ ಮಾತ್ರೆಗಳ ಬಗ್ಗೆ ಹೇಳ್ತಾರೆ. ಆ ಮಾತ್ರೆ ಅಂತಿಂಥದ್ದಲ್ಲ. ಅದು ಭೂಮಿಯಲ್ಲೆಲ್ಲೂ ಸಿಗದು. ಮಂಗಳ ಗ್ರಹದಲ್ಲಿ ಮಾತ್ರ ಸಿಗುತ್ತದೆ. ಅದನ್ನು ನಾವು ಕೂಡಲೇ ತಂದು ತಿನ್ನಲೇಬೇಕು. ಇಲ್ಲದಿದ್ದರೆ ಸತ್ತು ಹೋಗ್ತೀವಿ…ಹೀಗೇ ಕಲ್ಪನಾ ವಿಲಾಸ ಹರಿಬಿಡುತ್ತಾ ಡಾಕ್ಟರು ಸೂಚನೆ ಕೊಡ್ತಿರ್ತಾರೆ. ನಾವು ಮಾತ್ರೆ ತರಲು ತಡ ಮಾಡಿದೆವೆಂದೂ ಈಗ ಸಾಯಬೇಕೆಂದೂ ಡಾಕ್ಟರ ಆಜ್ಞೆಯಾದಾಗ ಎರಡೂ ಕಣ್ಣು ಮುಚ್ಚಿಕೊಂಡು ವಾಲಿಕೊಂಡರಾಯಿತು. ಸ್ವಲ್ಪ ಹೊತ್ತಿಗೇ ನಮಗಾಗಿ ತಾವೇ ತಂದರೆಂದೂ ಈಗ ಸತ್ತಿದ್ದು ಆಯ್ತೆಂದೂ ಎದ್ದು ಮಾತ್ರೆ ತಿನ್ನಬೇಕೆಂದೂ ಆಜ್ಞೆ ಹೊರಡುತ್ತದೆ. ಸಾವು ಬದುಕು ರೋಗ ನಿರೋಗ ಎಲ್ಲ ಚಿಟಿಕೆ ಚಪ್ಪರದಂತೆ ನಡೆದು ಹೋಗುತ್ತದೆ.

ಪ್ರಾಣಿ ಪ್ರೀತಿಯ ಮೊಮ್ಮಗನ ಬಳಿ ಪ್ರಾಣಿ ಬೊಂಬೆಗಳದೇ ದೊಡ್ಡ ಪಾಲು. ಅವುಗಳನ್ನು ತನ್ನದೇ ಕಲ್ಪನಾ ವಿಲಾಸದಲ್ಲಿ ಜೋಡಿಸುತ್ತಾ ಪ್ರಾಣಿಪ್ರಾಣಿಗಳ ನಡುವಿನ ಸಂವಾದ ಸ್ನೇಹ ಸಂಪರ್ಕ ಜಗಳ ಎಲ್ಲವನ್ನೂ ತಾನೇ ರೂಪಿಸುತ್ತಾನೆ. ಅವೇ ಬೊಂಬೆಗಳನ್ನೇ ಬಳಸಿ ಕುರುಕ್ಷೇತ್ರದ ಯುದ್ಧ ವ್ಯೂಹ ಬೇಕಾದರೂ ರಚಿಸಬಲ್ಲ. ಅಲ್ಲಿ ಸೇನಾಧಿಪತಿ ಭೀಷ್ಮ, ದ್ರೋಣ, ಸರದಿಗಾಗಿ ಕಾಯುತ್ತಿರುವ ಕರ್ಣ ಪಾಂಡವರು ಕೌರವರು ಧೃತರಾಷ್ಟ್ರ ಸಂಜಯ ಎಲ್ಲರನ್ನೂ ಪ್ರಾಣಿ ಬೊಂಬೆಗಳೇ ಸಂಕೇತಿಸಿರುತ್ತವೆ. ಪುಸ್ತಕಗಳಲ್ಲಿ, ಮೃಗಾಲಯಗಳಲ್ಲೂ ಪ್ರಾಣಿಗಳೆಡೆ ಅತೀವ ಆಸಕ್ತಿ. ಡಾಕ್ಟರಾಟದಲ್ಲಿ ಇವನು ರೋಗಿಯಾಗಿಸುವುದು ತನ್ನಪ್ಪನನ್ನು. ಡಾಕ್ಟರಾಂಟಿ ಚುಚ್ಚಿ ಕೊಡುತ್ತಾರಾದ್ದರಿಂದ ಅವರು ಬೇಡ, ಡಾಕ್ಟರ್ ಅಂಕಲ್ ಬಳಿ ಹೋಗೋಣ ಎಂದು ಕರೆತರುವುದಲ್ಲದೆ ಡಾಕ್ಟರಿಗೆ ‘ಬರೇ ಸ್ಟೆಥಾಸ್ಕೋಪಿಟ್ಟು ನೋಡಿ ಸಾಕು, ಚುಚ್ಚಿ ಬೇಡ’ ಎಂದು ಆದೇಶಿಸುತ್ತಾನೆ. ತಾನೇ ಅಪ್ಪನಾಗಿ, ಅಪ್ಪನನ್ನು ತಾನಾಗಿಸಿ ಆಡುವಾಗ ಕಂಪ್ಯೂಟರ್ ಮುಂದೆ ಕುಳಿತು ಮೀಟಿಂಗ್ ಮಾಡುವುದಾಗಲೀ, ತಾಯಿಯ ಬಳಿ ತಂದೆಯಂತೆ ಮಾತಾಡುವುದಾಗಲೀ ಅನುಕರಣ ಶಕ್ತಿಗೆ ಅಚ್ಚರಿ ಮೂಡಿಸುತ್ತಾ ನಗೆಯುಕ್ಕಿಸುತ್ತವೆ.

ಶಿಶು ಲೋಕದಲ್ಲಿ ಎಲ್ಲವೂ ಎಷ್ಟು ಸರಾಗ! ಮೂವರೂ ಪುಣ್ಯಕೋಟಿಯ ಕಥೆಗೆ ಕಣ್ಣೀರುಗರೆದವರೇ. ಪಂಚತಂತ್ರ, ಜಾತಕ, ಅರೇಬಿಯನ್ ನೈಟ್ಸ್, ಈಸೋಪ, ಅಮರಚಿತ್ರ ಕಥಾ ಸರಣಿಗಳು-ಇವರ ಕುತೂಹಲ ತಣಿಸಲು ಕಥೆಗಳ ಕಣಜವೇ ಬೇಕು. ಸಹಜವಾಗಿಯೇ ಪುಸ್ತಕಗಳ ಒಲವು. ರಾತ್ರಿಯಿಡೀ ಪ್ರಯಾಣ ಮಾಡಿ ಮಗಳ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಧನ್ಯ ಮಾನ್ಯ ಹೊಸದಾಗಿ ಕೊಂಡ ಪುಸ್ತಕಗಳ ರಾಶಿ ಮುಂದಿಟ್ಟು ನಮಗೆ ವಿವರಿಸಲಾರಂಭಿಸುವುದು. ಅಚಿಂತ್ಯನಿಗೆ ಕೈಯ್ಯಲ್ಲೊಂದು ಪುಸ್ತಕವಿದ್ದರೆ ಪುಟ ಮಗುಚುತ್ತಾ ತನ್ಮಯನಾಗಿ ಅದರಲ್ಲೇ ಮಗ್ನನಾಗುವುದು ನೋಡುವಾಗ ಗಂಭೀರ ಅಧ್ಯಯನ ನಿರತನೇನೋ ಎನ್ನಬೇಕು. ಎರಡು ಮೂರನೇ ತರಗತಿಗೆ ಬಂದಾಗ ವಿಜ್ಞಾನಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಕಥೆಯಂತೆ ಮಾಡಿ ಹೇಳುವುದನ್ನೂ ಮನವಿಟ್ಟು ಕೇಳುವಾಗ ಕತೆ ಕೇಳುವುದು ಹೇಳುವುದು ಪುಸ್ತಕ ಪ್ರೀತಿ ಮೈಗೂಡಿದೆಯಲ್ಲ ಎಂಬ ಸಂತಸ. ಮೂವರೂ ಒಟ್ಟಾದಾಗ ಪುಟಾಣಿ ಅಚಿಂತ್ಯನ ಬಾಲಲೀಲೆಗಳ ಬಗ್ಗೆ ಧನ್ಯಮಾನ್ಯರದು ಅಮ್ಮನ ಹೃದಯದ ಸಹನೆ. ಆಟದ ನಿಯಮಗಳೆಲ್ಲ ಚಿಕ್ಕವನು ಹೇಳಿದಂತೆ ಎಂಬ ವಿನಾಯಿತಿ. ಅವನಿಗೂ ಧನ್ಯಕ್ಕ ಮಾನ್ಯಕ್ಕ ಇದ್ದರೆ ಬೆನ್ನಿಗೆ ರೆಕ್ಕೆ ಮೂಡಿದಂತೆ. ಮೂವರಿಗೂ ಅಜ್ಜನ ಮನೆ ತೀರ್ಥಹಳ್ಳಿಯ ಪ್ರಶಾಂತ ಪರಿಸರ ಬಲು ಮೆಚ್ಚು. ಮನೆಯ ಹಿಂದುಮುಂದಿನ ಜಾಗಗಳಲ್ಲಿ ಗಿಡ ನೆಡುವುದೇನು, ಹೂ ಕೊಯ್ಯುವುದೇನು, ಮರ ಹತ್ತುವುದೇನು, ಹತ್ತಿರದ ಪಾರ್ಕು ಹೊಳೆದಡ ಎಂದು ಬಲು ಅಚ್ಚುಮೆಚ್ಚು. ತಾವು ದೊಡ್ಡವರಾದ ಮೇಲೆ ಇಲ್ಲಿಯೇ ಕೆಲಸ ಮಾಡೋಣ, ಎಲ್ಲರೂ ಒಟ್ಟಾಗಿ ಇಲ್ಲಿಯೇ ಇರೋಣ ಎನ್ನುವಾಗ ನಮಗೂ ಕಣ್ಣಮುಂದೆ ನಂದನವನವೊಂದು ತೆರೆದುಕೊಂಡಂತಾಗುವುದು.

ಮನೆಗೆ ಬಂದ ಮೊಮ್ಮಕ್ಕಳು ನಾವು ನಿಮಗೆ ಕೆಲಸದಲ್ಲಿ ಹೆಲ್ಪ್ ಮಾಡ್ತೀವಿ ಎನ್ನುತ್ತಾ ಊಟಕ್ಕೆ ತಟ್ಟೆ ಇಡುವುದು ನೀರಿಡುವುದು ಗಿಡಗಳಿಗೆ ನೀರು ಹಾಕುವುದು ಮುಂತಾಗಿ ಮಾಡುವಾಗ ಮನಸ್ಸು ತಂಪಾಗುತ್ತದೆ. “ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ…..” ಎಂಬ ಜಾನಪದ ಅಭಿವ್ಯಕ್ತಿ ಅದೆಷ್ಟು ಅರ್ಥಪೂರ್ಣವೆನ್ನಿಸುತ್ತದೆ. ಮನದ ದುಗುಡ ದುಮ್ಮಾನ ಖಿನ್ನತೆಗಳಿಗೆ ಮೊಮ್ಮಕ್ಕಳಿರುವಲ್ಲಿ ಎಡೆಯಿಲ್ಲ. ಅಲ್ಲೇನಿದ್ದರೂ ನಗು…ನಗು..ನಗು. ಅಜ್ಜ ಅಜ್ಜಿ ನಾವಾಗಲೀ ಮನೆಮನೆಗಳ ಮೊಮ್ಮಕ್ಕಳ ತಾಯ್ತಂದೆಯರಾಗಲೀ ಒಂದು ಕಾಲದಲ್ಲಿ ಇವರಂತೆಯೇ ಬಾಲ್ಯವನ್ನನುಭವಿಸಿದವರೇ ತಾನೇ. ಕಾಲ ಚಕ್ರದ ಉರುಳುವಿಕೆಯೊಂದಿಗೇ ಸರಿಯುತ್ತಾ ಸಾಗುವ ಜೀವನ ಚಕ್ರದಲ್ಲಿ ಇಂದಿನ ಮಕ್ಕಳ ಬಾಲ್ಯಕ್ಕೂ ಹಿಂದಿನವರದಕ್ಕೂ ಅಜಗಜಾಂತರ. ಇಂದಿನ ಮಕ್ಕಳ ಮುಂದಿರುವುದು ವೇಗದ ಓಟದ ಬದುಕು. ಮಾಧ್ಯಮಗಳು, ಆಧುನಿಕ ತಂತ್ರಜ್ಞಾನ ಅವರ ಬುದ್ಧಿಶಕ್ತಿಗೆ ಸಾಣೆಹಿಡಿದು ಪ್ರಖರವಾಗಿಸಿದೆ. ಇಂದು ತಲೆಮಾರುಗಳ ಅಂತರ ಕೂಡ ಬೇಗಬೇಗನೇ ಸಂಭವಿಸುತ್ತದೆ. ಆದರೆ ಬಾಂಧವ್ಯಗಳು, ಅಂತರಂಗದಾಳದ ಭಾವನೆಗಳು, ಜೀವನಮೌಲ್ಯಗಳು, ಸಂವೇದನೆಗಳು ಮಾತ್ರ ಎಂದೆಂದಿಗೂ ಒಂದೇ. ಈ ವೇಗದ ಓಟದ ಬದುಕಿನಲ್ಲಿ ಅಂತರಂಗದ ಮಾತುಗಳಿಗೆ ಕಿವಿಗೊಡುವ, ಬಾಂಧವ್ಯಗಳನ್ನು ಗೌರವಿಸುವ ಮಾನವೀಯ ಸ್ಪಂದನ ನಮ್ಮೆಲ್ಲರ ಮೊಮ್ಮಕ್ಕಳಲ್ಲಿರಲಿ. ಕವಿ ಕಣವಿಯವರು ಮಗುವನ್ನು ‘ದೀಪಧಾರಿ’ ಎಂದು ಕರೆದಿರುವಂತೆ ಮನೆಮನೆಯ ಮಗುವೂ ಜ್ಞಾನದ, ಪ್ರೀತಿಯ, ಮಾನವೀಯತೆಯ ದೀಪಧಾರಿಯಾಗಿ ತಾನು ಬೆಳೆದಂತೆ ಸುಸಂಸ್ಕೃತ ಸಮಾಜದ ಬೆಳಕಿನ ಗೋಲವೇ ತಾನಾಗಲಿ!