ಅಗಲಿಕೆ

ವಾರಕ್ಕೆ ಎರಡು ಸಂಜೆ
ಕೈ ಹಿಡಿದು, ಪಕ್ಕದಲಿ ಕೂತು
ಕುಶಲ ಕೇಳುತ್ತ, ಸುಕ್ಕುಗಟ್ಟಿದ
ಮುಖದಲಿ ನಗೆಯ ಮೂಡಿಸುತ್ತಿದ್ದವ,
ಕಿಟಕಿಯಾಚೆಯ ಅಂಗಳದಲಿ;
ಸುರಿವ ಮಳೆಯಲಿ ನಿಂತು
ಕೈ ಬೀಸುತ್ತಿರುವದು ಯಾಕೆಂದು
ಆಕೆಗೆ ತಿಳಿಯಲಿಲ್ಲ.

ಮಳೆ ಬಂದು ನಿಂತ ಮೇಲೆ
ಆಗಸವೆಲ್ಲ ನೀಲಿಯಾಗಿ,
ಹಸಿರಾದ ಹುಲ್ಲಿನ ಅಂಗಳದ
ಬದಿಯ ಹೂಗಳ ಪಕ್ಕ
ನಗುನಗುತ ನಿಂತು
ಕೈ ಬೀಸಲೂ ಅವನು
ಬರಲಿಲ್ಲ ಯಾಕೆ ಎಂದು
ಆಕೆಗೆ ತಿಳಿಯಲಿಲ್ಲ

ಕೂಡಿಟ್ಟ ನೆನಪುಗಳ
ಮಡಕೆ ಒಡೆದು ಚೂರಾದರೂ
ಮನದ ಅಡಿಯ ನಗುವಿನಲಿ
ಅರಳುತ್ತಿದ್ದ ಆ ಅಮ್ಮನ ಸುಕ್ಕುಗಳಿಗೆ,
ಆ ಕೇರ್-ಹೋಮಿನ ಅಂಗಳಕೆ
ಆ ಮಗ ಮತ್ತೆಂದೂ ಬರಲಾರ
ಎನ್ನುವ ವ್ಯಥೆ, ಬಹುಶಃ
ತಿಳಿಯುವದೇ ಇಲ್ಲ.

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.