ಇದರ ಹಿಂದಿನ ರಾತ್ರಿ ಕೆಮ್ಮಣಗುಂಡಿಯ ಐ ಬಿ ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ರಾತ್ರಿ ಎಂಟುಗಂಟೆಯ ನಂತರ ಇಲ್ಲಿ ಊಟ ಸಿಗುವುದಿಲ್ಲವೆಂದು ಖಾತ್ರಿಯಾದ ಮೇಲೆ ಬೀರೂರಿಲ್ಲೇ ಊಟ ಮಾಡಿದೆವು. ಅದೂ ನಾವು ರಾತ್ರಿಯ ಕೊನೆಯ ಗಿರಾಕಿಗಳಾಗಿದ್ದರಿಂದ ಅಲ್ಲಿಯ ಮೆನು ನೋಡುವ ಗೋಜಿಗೆ ಹೋಗದೆ ಅಲ್ಲಿ ಉಳಿದಿದ್ದ ಅನ್ನ ರಸಂ ನಮ್ಮ ಪಾಲಿನ ಪಂಚಾಮೃತವೆಂದು ಭಾವಿಸಿ ಘಟ್ಟದ ದಾರಿ ಹಿಡಿದಿದ್ದೆವು. ಬಹುತೇಕ ಮಲೆನಾಡಿನ ಪ್ರದೇಶಗಳು ರಾತ್ರಿ ಎಂಟುಗಂಟೆಯ ನಂತರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮಾರ್ಕೆಟ್ಟಿನ ಬೀದಿಗಳು ಬಿಕೊ ಎನ್ನುತ್ತವೆ.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ಚಿಕ್ಕಮಗಳೂರು ಜಿಲ್ಲೆಯ ಸೀತಾಳಯ್ಯನ ಗಿರಿ ತಲುಪಿದಾಗ ಮಧ್ಯಾನ್ಹ ಹನ್ನೆರಡು ಗಂಟೆ, ಸಮುದ್ರಮಟ್ಟದಿಂದ ಸುಮಾರು ನಾಲ್ಕುಸಾವಿರದ ಅಡಿಯ ತುತ್ತ ತುದಿಯ ಮೇಲೆ ನಾವು ನಾಲ್ವರು ಸ್ನೇಹಿತರು ಬಿಟ್ಟೂ ಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯುತ್ತ ಆಸರೆಗೆಂದು ಪಕ್ಕದಲ್ಲಿ ಮಿರ್ಚಿ ಮಂಡಕ್ಕಿ ದುಕಾನಿನಲಿ ಚಹಾ ಕುಡಿಯತ್ತ ನಿಂತು ಮಳೆ ನಿಲ್ಲಲು ಕಾಯುತ್ತಿದ್ದೆವು. ಜೋರಾದ ಗಾಳಿಯು ನಮ್ಮ ಕಿವಿಗಳಿಗೆ ಬಡಿದು ಒಮ್ಮೊಮ್ಮೆ ತಲೆ ಸುತ್ತುವಂತೆ ಮಾಡುತ್ತಿತ್ತು. ಭಾನುವಾರವಾದುದರಿಂದ ಗಿರಿಯ ಮೇಲೆ ಸಂಚಾರ ದಟ್ಟಣೆ ತಪ್ಪಿಸಲು ವಾಹನಗಳನ್ನು ನಿಷೇಧಿಸಿದ್ದುದು ನಮಗೊಂದು ಚಾರಣ ಮಾಡಲು ಅವಕಾಶವನ್ನೇ ಕೊಟ್ಟಂತಾಗಿತ್ತು.

ಆಕಾಶವೇ ಕಳಚಿಬೀಳುವಂತಹ ಮಳೆ ನೋಡಲು ನಾನು ಪ್ರತಿವರ್ಷ ಜೂನ್ ಜುಲೈ ತಿಂಗಳಿನಲ್ಲಿ ಮಲೆನಾಡಿಗೆ ಹೋಗುವುದು ವಾಡಿಕೆ. ಈ ವರ್ಷ ಆಯ್ಕೆ ಮಾಡಿದ್ದು ಕೆಮ್ಮಣಗುಂಡಿ, ಮುಳ್ಳಯ್ಯನಗಿರಿ, ಮತ್ತು ಬಾಬಾಬುಡನ್ ಗಿರಿಯ ಧಾಮಗಳನ್ನು. ಅಸಲು ಈ ಎತ್ತರದ ಪ್ರದೇಶಗಳ ಮಳೆಯ ಅಂದಾಜು ಇರಲಿಲ್ಲವಾದುದರಿಂದ ಇದು ಇನ್ನೊಂದು ಧರ್ಮಸ್ಥಳ, ಶೃಂಗೇರಿ ಅಥವಾ ಆ ಇನ್ನೊಂದು ತರಹದ ಕಳಸದ ಘಟ್ಟದ ಮಳೆಯಂತೆ ಒಂದು ಗಂಟೆ ಸುರಿದು ಇನ್ನೊಂದು ತುಸು ಹೊತ್ತು ಬಿಟ್ಟು ಬಿಸಿಲು ಬರಬಹುದೆಂಬ ಅಂದಾಜಿನಲಿ ಇದ್ದೆವು. ಆದರೆ ಅಸಲು ಆದದ್ದೇ ಬೇರೆ, ಹಗಲು ಹನ್ನೆರಡರ ನಡುಬೆಳಗಿನಲ್ಲೂ ಕಾರಿನ ಹೆಡ್ ಲೈಟ್ ಹಾಕಿಕೊಂಡು ತಾಸಿಗೆ ಇಪ್ಪತ್ತರ ವೇಗದಲ್ಲಿ ಕಾರು ಚಲಿಸಿದ್ದು ನನ್ನ ಜೀವನದಲ್ಲಿ ಬಹುಶಃ ಇದೇ ಮೊದಲು.

ಇದರ ಹಿಂದಿನ ರಾತ್ರಿ ಕೆಮ್ಮಣಗುಂಡಿಯ ಐ ಬಿ ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ರಾತ್ರಿ ಎಂಟುಗಂಟೆಯ ನಂತರ ಇಲ್ಲಿ ಊಟ ಸಿಗುವುದಿಲ್ಲವೆಂದು ಖಾತ್ರಿಯಾದ ಮೇಲೆ ಬೀರೂರಿಲ್ಲೇ ಊಟ ಮಾಡಿದೆವು. ಅದೂ ನಾವು ರಾತ್ರಿಯ ಕೊನೆಯ ಗಿರಾಕಿಗಳಾಗಿದ್ದರಿಂದ ಅಲ್ಲಿಯ ಮೆನು ನೋಡುವ ಗೋಜಿಗೆ ಹೋಗದೆ ಅಲ್ಲಿ ಉಳಿದಿದ್ದ ಅನ್ನ ರಸಂ ನಮ್ಮ ಪಾಲಿನ ಪಂಚಾಮೃತವೆಂದು ಭಾವಿಸಿ ಘಟ್ಟದ ದಾರಿ ಹಿಡಿದಿದ್ದೆವು. ಬಹುತೇಕ ಮಲೆನಾಡಿನ ಪ್ರದೇಶಗಳು ರಾತ್ರಿ ಎಂಟುಗಂಟೆಯ ನಂತರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮಾರ್ಕೆಟ್ಟಿನ ಬೀದಿಗಳು ಬಿಕೊ ಎನ್ನುತ್ತವೆ.

ಆ ನಡುರಾತ್ರಿಯಲ್ಲಿ ದಾರಿ ಗೊಂದಲವಾದಾಗ, ದಾರಿ ಬದಿಯ ಗಣೇಶ ಮೂರ್ತಿಯ ಪೆಂಡಾಲಿನಲ್ಲಿ ಡ್ಯಾನ್ಸ್ ಮಾಡುತಿದ್ದ ಎಳೆಯ ಹುಡುಗರು ನಮಗೆ ಕೆಮ್ಮಣಗುಂಡಿಗೆ ಹೋಗುವ ದಾರಿ ತೋರುವ ಮಾರ್ಗದರ್ಶಕರಾದರು. ಕಾರಿನಲ್ಲಿ ಕೇಳಿ ಬರುತ್ತಿದ್ದ ಮುಕೇಶನ ಹಾಡು ಕೇಳುತ್ತಿದ್ದವರಿಗೆ ಅದೆಷ್ಟೊಂದು ಊರುಗಳನ್ನು ದಾಟಿದೆವೊ ನೆನಪಾಗುತ್ತಿಲ್ಲ. ಬಹುಶಃ ಲಿಂಗದಹಳ್ಳಿಯಿಂದ ಘಟ್ಟ ಶುರುವಾಯಿತೆನಿಸುತ್ತೆ. ಅಲ್ಲಿಂದ ಶುರುವಾದ ಮಳೆ… ಪಕ್ಕದಲ್ಲಿರುವ ಕಾಫಿ ಟೀ ಎಸ್ಟೇಟುಗಳು. ಕೇವಲ ಮಳೆಗಾಲಕ್ಕೆಂದೆ ಹುಟ್ಟಿ ಮಳೆಗಾಲಕ್ಕೆ ಮುಗಿದು ಹೋಗುವ ಸಣ್ಣ ಪುಟ್ಟ ಜಲಪಾತಗಳ ಸಣ್ಣ ಸೊಲ್ಲು ಕಿವಿಯಾಣಿಸಿ ಕೇಳಿದರೆ ಮಾತ್ರ ಕೇಳಿಸುವ ಜೀರುಂಡೆಯ ಸದ್ದು, ಗಾಳಿಯಲ್ಲಿ ಸೂಸಿ ಬರುವ ಆ ನಡುರಾತ್ರಿಯ ಕಾಡುಘಮ. ದಾರಿಯ ಯಾವುದೋ ತಿರುವಿನಲ್ಲಿ ಗೊತ್ತಾಗಿದ್ದು ನಾವು ಭದ್ರಾ ಅಭಯಾರಣ್ಯದ ಹುಲಿರಾಯನ ಕೃಪಾ ಕಟಾಕ್ಷದಲ್ಲಿ ಪಯಣಿಸುತ್ತಿರುವುದು ಎಂದು.. ಈ ಹಾಳು ಜಂಗಮರಿಗೆ ಒಂದು ಹುಲಿಮರಿಯಾದರೂ ದರ್ಶನ ನೀಡಿ ನಮ್ಮ ಯಾತ್ರೆ ಸಾರ್ಥಕಗೊಳಿಸಬಾರದೆ?

ರಾತ್ರಿ ಸುರಿವ ಮಳೆಯಲ್ಲಿ ಕೈ ಕಾಲುಗಳು ಚಳಿಗೆ ಥರಗುಡುತ್ತಿದ್ದವು. ಜಯಚಾಮರಾಜೇಂದ್ರ ಐ ಬಿ ಯ ರಾಜಭವನ ತಲುಪಿದ್ದೇ ತಡ ಬೆಚ್ಚನೆಯ ಉಲ್ಲನ್ ಬೆಡ್ಡುಶೀಟು ಹೊದ್ದು ಮಲಗಿದರೆ ರಾತ್ರಿಯ ಯಾವುದೋ ಒಂದು ಜಾವದಲ್ಲಿ ಹುಲಿಯೊಂದು ಬಂದು ಹೊದಿಕೆಯಾಚೆಗಿನ ನನ್ನ ಬೆತ್ತಲೆ ಪಾದಗಳನ್ನು ಮೂಸುತ್ತಿತ್ತು!

ಅಷ್ಟಕ್ಕೂ ಇದೆಲ್ಲಾ ಬೇಕಿತ್ತಾ ಅಂತ ಹೆಜ್ಜೆ ಹೆಜ್ಜೆಗೂ ಅನಿಸಿದ್ದಿದೆ, ಈ ರೌದ್ರಾವತಾರ ತಾಳಿದ ಮಳೆಯಲ್ಲಿ ಗಾಳಿಯ ಮೈಯಲ್ಲಿ ಯಾವುದೋ ದೆವ್ವ ಹೊಕ್ಕ ಗಳಿಗೆಯಲ್ಲಿ ಇನ್ನೂ ಕಡಿಮೆಯೆಂದರೆ ಎರಡು ಸಾವಿರದಡಿ ಹೆಜ್ಜೆ ಮೇಲಿಟ್ಟರೆ ನಾವು ಗಿರಿ ಗೆದ್ದಂತೆ, ಬೆಟ್ಟ ನಮ್ಮ ಕಾಲಡಿಯಿದ್ದರೂ ಗುರಿ ನಮ್ಮ ಕಣ್ಣೆದುರಿಗೆ. ಎಷ್ಟೋ ಜನ ಯಾತ್ರಿಕರು ಇಲ್ಲಿಂದಲೆ ಗುರು ಮುಳ್ಳಪ್ಪನಿಗೆ ಕೈ ಮುಗಿದು ವಾಪಸಾಗುತ್ತಿದ್ದರು. ನಮ್ಮ ನಾಲ್ವರು ಸ್ನೇಹಿತರಲ್ಲೊಬ್ಬ “ಅಯ್ಯೋ ಇಷ್ಟ ಮೈ ನೂಸಗೊಂಡ ಹತ್ತಿ ಏನ ಮಾಡೂದರಿ? ನಮಗೆ ಆ ಮುಳ್ಳಯ್ಯನ ಗಿರಿ ಮುಳ್ಳಪ್ಪೇನ ಬಾಪ್ಪಾ ಇಲ್ಲಿ ಇಷ್ಟ ತ್ರಾಸ ತಗೊಂಡ ಏರಿದಿ ಅಂತ ತನ್ನ ತಲಿ ಮ್ಯಾಲೀನ ಚಿನ್ನದ ಕಿರೀಟನ ನಮ್ಮ ತಲೀ ಮ್ಯಾಲೆ ಇಡ್ತಾನೆನು?”

ಅಸಲು ನಮಗೆ ದಟ್ಟ ಮಂಜಿನಲ್ಲಿ ಬೆಟ್ಟ ಹತ್ತುವ ದಾರಿ ತಿಳಿಯಲು ಸ್ವಲ್ಪ ಸಮಯವೇ ಬೇಕಾಯಿತು. ದಾರಿ ಸವೆಸಿದಂತೆಲ್ಲಾ ಕಾಲು ದಾರಿ ನಿಚ್ಚಳವಾಗುತ್ತಾ ಹೋಯಿತು. ನಮ್ಮ ಜೊತೆ ಹಿಂದೆ ಮುಂದೆ ಬರುತ್ತಿದ್ದ ಚಾರಣಿಗರ ಗುಂಪು ಮೇಲಕ್ಕೆ ಹೋದಂತೆಲ್ಲಾ ವಿರಳವಾಗತೊಡಗಿತು. ನಾವು ಮೂವರಲ್ಲಿ ನಾನು ಇಬ್ಬರನ್ನು ಎಲ್ಲೊ ಹಿಂದೆ ಬಿಟ್ಟು ಬಂದಿದ್ದೆ. ಮಂಜಿನಲ್ಲಿ ಯಾವುದೂ ಸ್ಪಷ್ಟವಿಲ್ಲ, ಸಾವಿರದೈನೂರು ಅಡಿಯ ಆಸುಪಾಸಿನಲ್ಲೊಂದು ತಳ್ಳುವ ಗಾಡಿಯಲ್ಲಿ ಟೀ ಬಿಸ್ಕಿಟ್ಟು ಮಾರುತ್ತಿದ್ದ. ಅಷ್ಟರಲ್ಲಾಗಲೆ ರಾತ್ರಿ ಎಂಟುಗಂಟೆಯ ಕತ್ತಲಿನಂತೆ ಮಂಜು ಆವರಿಸಿ ಬೆಟ್ಟ ಹತ್ತಿ ಇಳಿದು ಅಲ್ಲೊಬ್ಬರು ಇಲ್ಲೊಬ್ಬರು ಗಡಗಡನೆ ನಡುಗುತ್ತ ಟೀ ಕುಡಿಯಲು ಬರುತ್ತಿದ್ದರು. ಒಂದು ಟಿ ಬಿಸ್ಕಿಟ್ ತಿಂದು,

“ಅಜ್ಜಾರ ಇನ್ನ ಎಷ್ಟು ದೂರ ನಡೀಬೇಕ್ರಿ ಮುಂದ?”

ಅಸಲು ಈ ಎತ್ತರದ ಪ್ರದೇಶಗಳ ಮಳೆಯ ಅಂದಾಜು ಇರಲಿಲ್ಲವಾದುದರಿಂದ ಇದು ಇನ್ನೊಂದು ಧರ್ಮಸ್ಥಳ, ಶೃಂಗೇರಿ ಅಥವಾ ಆ ಇನ್ನೊಂದು ತರಹದ ಕಳಸದ ಘಟ್ಟದ ಮಳೆಯಂತೆ ಒಂದು ಗಂಟೆ ಸುರಿದು ಇನ್ನೊಂದು ತುಸು ಹೊತ್ತು ಬಿಟ್ಟು ಬಿಸಿಲು ಬರಬಹುದೆಂಬ ಅಂದಾಜಿನಲಿ ಇದ್ದೆವು.

“ಈ ಘಟ್ಟ ಇಳಿದು ಇನ್ನೊಂದು ಬೆಟ್ಟ ಹತ್ತಿದ್ರ ಅವನ ದರ್ಶನ ಆಕ್ಕೈತಿ ರಿ” ಅಂತ ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಳಿದಾಗ ಪರ್ವಾಗಿಲ್ಲಪ್ಪ ನಮ್ಮ ಬೆಳಗಾವ್ ಮಂದೀನೂ ಬಿಟ್ಟರೆ ಎಂಥಾ ಬೆಟ್ಟದ ಮ್ಯಾಲೂ ತಮ್ಮ ಹೊಟ್ಟೀಪಾಡು ನೋಡ್ಕೋತಾರಂತ
ಅನ್ನಿಸಿ ತುಸು ಸಮಾಧಾನ ಮಾಡಕೊಂಡ ಮ್ಯಾಲನೋಡಿದ್ರ……
ಮ್ಯಾಲೆ ಮೇಲೆನೂ ಇಲ್ಲ
ಕೆಳಗೆ ಕೆಳಗೂನೂ ಇಲ್ಲ
ಇಲ್ಲಿಗಿ ಹರ ಹರ ಇಲ್ಲಿಗಿ ಶಿವ ಶಿವ

ಅಂತ ನಮ್ಮ ಕಂಬಾರ ಗುರುಗಳು ನೆನಪಾದರು. ನನ್ನ ಎದೆ ಇದ್ದಕ್ಕಿದ್ದಂತೆ ಡವ ಡವ ಬಡಿಯಲು ಶುರು ಮಾಡಿತು. ಯಪ್ಪಾ ದೇವ್ರೆ ಮೊನ್ನೆ ತಾನೆ ಹೊಸ ಮನೆ ಕಟ್ಟಿಸಿ ತಿಂಗಳು ಕಳೆದಿಲ್ಲ, ಇಷ್ಟು ಬೇಗ ನಾನು ಸತ್ತೋದ್ರೆ ಹೇಗೆ? ಹಿಂದೆ ಬರುವ ಗೆಳೆಯರು ಕಣ್ಣಳತೆಗೆ ದಕ್ಕುತ್ತಿಲ್ಲ ಛೆ! ದೇವ್ರೆ ನನಗೇನಾದ್ರೂ ಹೆಚ್ಚು ಕಡಿಮೆಯಾದ್ರೆ ಊರಿಗೆ ಯಾರು ಸುದ್ದಿ ಮುಟ್ಟಿಸೋರು?

ಇಲ್ಲಿ ಯಾರು ಪರಿಚಿತರು ಯಾರು ಅಪರಿಚಿತರು ಇಲ್ಲ, ಎಲ್ಲರಿಗೂ ತಮ್ಮ ತಮ್ಮ ಶಿಲುಬೆಗಳೇ ಭಾರವಾಗಿವೆ. ಪರಿಚಿತ ಮುಖಗಳೂ ಅಪರಿಚಿತವೆನಿಸುವ ಮಂಜು. ಎದೆ ಡವ ಡವ ಅಂತ ಅಂದೆನಲ್ಲಾ ಅದು ನಾವು ಎತ್ತರದ ಪ್ರದೇಶಗಳಿಗೆ ಹೋದಾಗ ಆಗುವ ತಾತ್ಕಾಲಿಕ ದೈಹಿಕತೊಂದರೆ. ಇದ್ದಕ್ಕಿದ್ದಂತೆ ಮನುಷ್ಯ high altitude ಪ್ರದೇಶಗಳಿಗೆ ಹೋದಾಗ ಮಿದುಳಿಗೆ ಆಮ್ಲಜನಕದ ಕೊರತೆಯಾಗುತ್ತದೆ, ಹೀಗಾದಾಗ ಮನುಷ್ಯನಿಗೆ ತಾತ್ಕಾಲಿಕ ಗೊಂದಲ, ಮಾನಸಿಕ ಕ್ಷೋಭೆ, ತಲೆನೋವು, ತಲೆಸುತ್ತು ಉಂಟಾಗುತ್ತದೆ. ಮುಳ್ಳಯ್ಯನಗಿರಿ ಅಂದಾಜು ಆರುಸಾವಿರದ ಚಿಲ್ಲರೆ ಅಡಿ ಎತ್ತರದ ಪ್ರದೇಶ. ಅದಕ್ಕೆಂದೇ ಹಿಮಾಲಯದ ಚಾರಣಿಗರಿಗೆ ಅಲ್ಲಿ ಗಡಿಕಾಯುವ ಯೋಧರನ್ನು ದೇವರ ದರ್ಶನಕ್ಕೆಂದು ಹೋಗುವ ಭಕ್ತಾದಿಗಳಿಗೆ ಒಮ್ಮೆಲೆ ಮೇಲೆರಲು ಬಿಡದೆ ಅಲ್ಲಲ್ಲಿ ಕ್ಯಾಂಪುಗಳಲ್ಲಿ ದೇಹ ಹೊಂದಾಣಿಕೆಗಾಗಿ ಎರಡು ಮೂರು ದಿನ ಉಳಿಸಿಕೊಂಡು ಮುಂದೆ ಕಳುಹಿಸುತ್ತಾರೆ. ಇದನ್ನು acclimatization ಎನ್ನುತ್ತಾರೆ. ಇದೆಲ್ಲರ ಅರಿವಿದ್ದರೂ ನಾವು ಸಾಕಷ್ಟು ಪೂರ್ವತಯಾರಿಯಿಲ್ಲದೆ ಹತ್ತಿದ್ದೆವು.

ಈಗ ಗಿರಿ ನನ್ನೆದುರಿಗೆ ಕೇವಲ ಐನೂರು ಮೆಟ್ಟಿಲುಗಳ ದೂರದಲ್ಲಿದ್ದಿತ್ತಾದರೂ ಮೆಟ್ಟಿಲುಗಳ ದಾರಿ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ, ದೇಹ ಸಾಕಷ್ಟು ಆಯಾಸಗೊಂಡಿತ್ತು. ಯಥಾಪ್ರಕಾರದ ಕುಳಿರ್ಗಾಳಿ ಎರಡೂ ಕಿವಿಗಳಿಗೆ ಜೋರಾಗಿ ಹೊಡೆಯುತ್ತಿತ್ತು. ಜೊತೆಗೆ ಜೋರು ಮಳೆ, ಒಮ್ಮೆ ಹಿಂತಿರುಗಿ ನೋಡಿದೆ, ತುಂಬ ದೂರದವರೆಗೆ ಇವರ್ಯಾರೂ ಕಾಣಿಸಲಿಲ್ಲ. ಮುಂದೆ ಯಾವ ಯಾತ್ರಿಕರ ಸುಳಿವೂ ಸಿಗಲಿಲ್ಲ. ಆದದ್ದಾಗಲಿ ಎಂದು ಆತಂಕದಲ್ಲೆ ಮೆಟ್ಟಿಲು ಹತ್ತತೊಡಗಿದೆ.

ಸರಿ ಸುಮಾರು ನೂರು ಮೆಟ್ಟಿಲು ಹತ್ತಿದ ಮೇಲೆ ಒಂದು ಕ್ಷಣ ಸಾವರಿಸಿಕೊಳ್ಳಲು ಪಕ್ಕದ ಬಂಡೆಯ ಮೇಲೆ ಕುಳಿತೆ. ಗಾಳಿ ಮಳೆ ಇನ್ನೂ ಜೋರಾಯಿತು. ಯಾಕೋ ಅಪಾಯ ಮೈ ಮೇಲೆ ಎಳೆದುಕೊಳ್ಳುತ್ತಿರುವಂತೆ ಅನಿಸಿ ವಾಪಸ್ಸು ಬೆಟ್ಟ ಇಳಿದುಹೋಗಬೇಕೆನಿಸಿತು. ಆದರೆ ಒಳ ಮನಸ್ಸು ನನ್ನನ್ನ ಚುಚ್ಚಿದಂತಾಯಿತು. ನನ್ನ ಅಸಾಯಕತೆಗೆ ಬೆಟ್ಟ ಗಹಗಹಿಸಿ ನಕ್ಕಂತಾಯಿತು, ಮಳೆಯಲ್ಲಿ ತೊಯ್ದ ಮನಸಿನ ಆ ಇಬ್ಬಂದಿತನ ಬಹುಹೊತ್ತಿನವರೆಗೆ ಕಾಡಿತು. ಅಷ್ಟರಲ್ಲಾಗಲೆ ಮಳೆ ತುಸು ನಿಂತಂತಾಯಿತು, ರಸ್ತೆ ನಿಧಾನವಾಗಿ ನಿಚ್ಚಳವಾಗತೊಡಗಿದಂತೆಲ್ಲ ಧೈರ್ಯ ಬಂದಿತು. ಬಂದದ್ದು ಬರಲಿ ಎಂಬ ಹುಂಬ ಧೈರ್ಯದೊಂದಿಗೆ ಬೆಟ್ಟವ ಮಣಿಸಲು ಹೊರಟಿದ್ದೆ. ಕಡಲ ಹಕ್ಕಿಗೆ ಒಂದೊಂದು ಸಲ ಕಡಲಿನ ಅಗಾಧತೆಯಿಂದ ದಿಕ್ಕು ತಪ್ಪುತ್ತದಲ್ಲ ಹಾಗಾಗಿತ್ತು ನನ್ನ ಪರಿಸ್ಥಿತಿ.

ಅಂತೂ ಇಂತೂ ಕಾಲೆಳೆದುಕೊಂಡು ಬಂದವನಿಗೆ ಮುಳ್ಳಯ್ಯನ ಗಿರಿಯ ಮೇಲೆ ಹತ್ತಿದವನಿಗೆ ಹಿಮಾಲಯವ ಹತ್ತಿದ ಖುಷಿ ಮತ್ತು ರೋಮಾಂಚನ.