ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’  ಸರಣಿಯ ಮೂರನೆಯ ಕಂತು

 

ಅತ್ತೆಯರಿಬ್ಬರೂ ದಿನದಿಂದ ದಿನಕ್ಕೆ ಸವೆಯುತ್ತಿದ್ದರು. ಅಕ್ಕಪಕ್ಕದ ಮನೆಯ ವಯಸ್ಸಾದ ಹೆಂಗಸರು ಅನುಕಂಪದಲ್ಲಿ ಅಯ್ಯೋ ಪಾಪೀಯ ಜನುಮವೇ ಎಂದು ಏನಾದರೊಂದು ಸಂತೈಸುವ ಮಾತಾಡುತ್ತಿದ್ದರು. ಅವರಿಗೆ ತಕ್ಕುದಾಗಿದೆ ಎಂದು ಅಪ್ಪ ನಿರ್ಲಕ್ಷಿಸಿದ್ದ. ತಾತ ಕುರುಡಿ ಬೆಳಬೆಳಿಗ್ಗೆಯೇ ವಾಂತಿ ಭೇದಿ ಮಾಡಿಕೊಂಡು ಬಂದು ಗುಡಿಸಲ ಮುಂದೆ ಬಿದ್ದುಕೊಂಡು ಜೀವ ಉಳಿಸಿ ಎಂದು ಬೇಡುತ್ತಿದ್ದ. ಅವರಿವರು ಬಂದರು. ಎತ್ತಿ ಕೂರಿಸಿದರು. ಅವನ ನಾಲ್ಕೂ ಹೆಣ್ಣು ಮಕ್ಕಳು ಅಸಹಾಯಕರಾಗಿದ್ದರು. ಅವರ ಬದುಕೇ ಅವರನ್ನು ಕಿತ್ತು ತಿನ್ನುತ್ತಿತ್ತು. ಅವರ ಕಣ್ಣೀರೆಲ್ಲ ಎಲ್ಲೆಲ್ಲೊ ಕರಗಿ ಹೋಗಿದ್ದವು. ಬೆದರು ಗೊಂಬೆಗಳಂತೆ ಒಬ್ಬರಿಗೊಬ್ಬರು ಅಂಟಿಕೊಂಡು ಗುಡಿಸಲ ಗೋಡೆಗೆ ಒರಗಿ ಕೂತಿದ್ದರು.

ಬಿಸಿ ನೀರಿನಿಂದ ಕುರುಡಿಯ ಮೈ ತೊಳೆದರು. ಒಂದೇ ಸಮನೆ ಕಕ್ಕುತ್ತಿದ್ದ. ಕಕ್ಕಿ ಕಕ್ಕಿ ಕುಡಿದಿದ್ದ ಎಂಡವೆಲ್ಲ ಹೊರಬಂದಿದ್ದರೂ ವಾಂತಿ ಬಿಕ್ಕಳಿಕೆಗಳು ನಿಂತಿರಲಿಲ್ಲ. ನನ್ನ ಹಿರಿ ತಾತ ಬಂದು ನೋಡಿ; ‘ಬ್ಯಾಡ ಕಲಾ; ಕದ್ದಿ ಎಂಡ ಕುಡೀ ಬ್ಯಾಡಾ ಅಂತಾ ಸಾವುರ್ಸಲಾ ಯೇಳಿದ್ದೆ. ನನ್ಮಾತ ಕೇಳುದ್ನೇ… ಅನ್ಬವುಸ್ಲಿ ಯೀಗಾ’ ಎಂದು ಹೇಳಿ ತನ್ನ ಹೋಟೇಲಿನ ಕೆಲಸಗಳತ್ತ ಹೊರಟು ಹೋಗಿದ್ದ. ಅಪ್ಪ ಬಂದು ನೋಡೇ ಇರಲಿಲ್ಲ. ಗಾಡಿಯಲ್ಲಿ ಹಾಕಿಕೊಂಡು ಅಕ್ಕೂರು ಹೊಸಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ಎಂದು ಕೆಲವರು ಮಾತಾಡುತ್ತಿದ್ದರು. ತಾತ ಕುರುಡಿ ಭಯಂಕರ ಎಂಡಗುಡುಕನಾಗಿದ್ದ. ತೆಂಗಿನ ಮರ ಏರಿ ಕದ್ದು ಕುಡಿಯುತ್ತಿದ್ದ. ಹೊಂಬಾಳೆಯ ತುದಿಯ ಕೊರೆದು ಕಟ್ಟಿ ಒಂದು ಸಾಧಾರಣ ಗಾತ್ರದ ಮಡಕೆಯನ್ನು ಅದಕ್ಕೆ ತಗುಲಿ ಹಾಕುತ್ತಿದ್ದರು. ತೊಟ ತೊಟ ತೊಟ್ಟಿಕ್ಕಿ ಬೆಳಿಗ್ಗೆಗೆ ಮಡಕೆ ‘ನೀರಾ’ದಿಂದ ತುಂಬಿರುತ್ತಿತ್ತು. ಅದನ್ನು ಎಂಡ ಕಟ್ಟುವವರು ಇಳಿಸಿಕೊಳ್ಳುವ ಮುಂಚೆಯೇ ತಾತ ಹೋಗಿ ಕುಡಿಯುತ್ತಿದ್ದ. ಹಲವು ಬಾರಿ ಸಿಕ್ಕಿಬಿದ್ದು ಹೊಡೆತ ತಿಂದಿದ್ದ. ತಾತನ ಕಾಟ ಸಾಕಾಗಿತ್ತು. ಒಂದು ದಿನ ಎಂಡದ ಬುಡುಕಿ (ಮಡಕೆ)ಗೆ ವಿಷ ಬೆರೆಸಿದ್ದರು. ತಾತ ಗಟಗಟನೆ ಕುಡಿದು ಮರ ಇಳಿದು ಹಿಂತಿರುಗುವ ದಾರಿಯಲ್ಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ. ಎಚ್ಚರವಾಗಿ ವಾಂತಿ ಮಾಡುತ್ತ ತೂರಾಡಿ ಬೀಳುತ್ತ ಏಳುತ್ತ ಹೇಗೋ ಬಂದು ಬದುಕಿ ಉಳಿಯುವ ಆಸೆಯಲ್ಲಿ ಕೈಮುಗಿಯುತ್ತಿದ್ದ. ಜನಕ್ಕೆ ಗೊತ್ತಾಗಿತ್ತು. ಕುರುಡಿಗೆ ಏನಾಗಿದೆ ಎಂದು. ಎತ್ತಿಕೊಂಡು ಬಂದು ಅದೇ ಗುಡಿಸಲ ಮುಂದಿನ ಗೋಡೆಗೆ ಒರಗಿಸಿದರು. ನಿಲುವಿಲ್ಲದೆ ಅತ್ತ ಇತ್ತ ಬಿದ್ದು ಹೋಗುತ್ತಿದ್ದ. ಅತ್ತೆಯರಿಬ್ಬರು ಎರಡೂ ಕಡೆ ಹಿಡಿದುಕೊಂಡರು. ನಂಜು ನೆತ್ತಿಗೇರಿತ್ತು. ಪೂರ್ಣ ನಿತ್ರಾಣನಾಗಿದ್ದ. ಕಣ್ಣುಗಳು ಮೇಲೆ ಮೇಲೆಯೇ ತೀವ್ರವಾಗಿ ತೇಲಾಡುತ್ತಿದ್ದವು. ಅಂತೂ ಯಾರೊ ಎತ್ತಿನ ಬಂಡಿ ನೀಡಿದ್ದರು. ಎತ್ತಿ ಗಾಡಿಯಲ್ಲಿ ಮಲಗಿಸಬೇಕು ಎನ್ನುವಷ್ಟರಲ್ಲಿ ಕುರುಡಿ ತಾತನ ಜೀವ ಪಕ್ಷಿ ಹಾರಿ ಹೋಗಿತ್ತು. ಯಾರೂ ಅಳಲಿಲ್ಲ. ಮಕ್ಕಳು ರೋಧಿಸಲಿಲ್ಲ. ಇದೆಲ್ಲ ಹೀಗೇ ಆಗುತ್ತದೆ ಎಂದು ಮೊದಲೇ ಮಾನಸಿಕವಾಗಿ ಸಿದ್ಧವಾಗಿದ್ದಂತಿದ್ದರು.

ತಾತನ ತಿಥಿಯೂ ಮುಗಿದು ಹೋಗಿತ್ತು. ಅಂತಹ ಮಾಯಾವಿ ಹಾಗೆ ಯಕಶ್ಚಿತ್ ಆಗಿ ಸತ್ತು ಹೋದದ್ದು ಬಹಳ ಬೇಸರ ತರಿಸಿತ್ತು. ಅತ್ತೆಯರು ಶೋಚನೀಯ ಸ್ಥಿತಿಯಲ್ಲಿದ್ದರು. ಎಲ್ಲೊ ಆಳದಲ್ಲಿ ಅವರನ್ನು ಈಗಲಾದರು ಕಾಣಬೇಕು ಎಂಬ ಆಸೆ ಬಂದು ಕರಗಿ ಹೋಗುತ್ತಿತ್ತು. ನನಗೆ ನೂರೆಂಟು ಕಿರಿಕಿರಿಗಳಿದ್ದವು. ಹಳ್ಳಿಗೆ ಹೋಗಿ ಇಲ್ಲಸಲ್ಲದವರ ಜೊತೆ ಜಗಳಕ್ಕೆ ಇಳಿಯುವಂತಿರಲಿಲ್ಲ. ಅಲ್ಲಿ ನನ್ನ ಪರವಾಗಿ ಯಾರೂ ಇರಲಿಲ್ಲ. ಹುಟ್ಟಿದ ಮನೆಗೇ ನಾನು ಬೇಡವಾಗಿದ್ದೆ. ಬಾಲ್ಯದಿಂದಲೂ ಅನ್ಯನಾಗಿಯೆ ಬೆಳೆದಿದ್ದೆ. ಯಾರ ಜೊತೆಯೂ ಮಾತೇ ಆಡುತ್ತಿರಲಿಲ್ಲ. ಆದರೆ ಪ್ರತಿಯೊಬ್ಬರ ಮಾತುಕತೆಯನ್ನು ಆಳವಾಗಿ ತೆಗೆದುಕೊಳ್ಳುತ್ತಿದ್ದೆ. ಶಾಲೆಯಲ್ಲೂ ಅಷ್ಟೇ; ಗುಂಪು ಎಂದರೆ ಆಗುತ್ತಿರಲಿಲ್ಲ. ಯಾವತ್ತಿಗೂ ಮೌನ ನನ್ನ ಸುಖವಾಗಿತ್ತು. ಆ ಮೌನವನ್ನು ಮುರಿಯಲು ಬಹಳ ಕಾಲ ತೆಗೆದುಕೊಂಡಿದ್ದೆ. ಮೈಸೂರಿನ ಹೋರಾಟಗಳ ಮಾತಿನ ನಡುವೆ ನಾನು ‘ಧಿಕ್ಕಾರ’ ಎಂಬ ಘೋಷಣೆಯನ್ನು ಗಂಟಲು ಕಿತ್ತುಹೋಗುವಂತೆ ಕೂಗುತ್ತಿದ್ದೆ. ನಿಧಾನವಾಗಿ ಬೇರೆ ಬೇರೆ ಮಾತುಗಳನ್ನು ಕಲಿತಿದ್ದೆ. ಅಂತರಾಳದ ಕಿಚ್ಚನ್ನು ಬೆಳಕಾಗಿಸಲು ಪರಿತಪಿಸುತ್ತಿದ್ದೆ. ಮೂಕನಂತಿದ್ದವನು ಈಗ ಹೇಗೆ ಮಾತನಾಡುವನಲ್ಲಾ ಎಂದು ಕಂಡಿದ್ದವರು ಅಚ್ಚರಿ ಪಡುತ್ತಿದ್ದರು. ಹಳ್ಳಿಯ ಆ ನನ್ನ ಜನರ ಪಾಡಿಗೆ ನಾನು ಅದೇ ಮಡ್ಡ ತಬ್ಬಲಿಯಾಗಿದ್ದೆ. ಅಲ್ಲಿ ನನಗೆ ಯಾವ ಮಾನ್ಯತೆಯೂ ಇರಲಿಲ್ಲ. ಒಬ್ಬ ಸಂಬಂಧಿಯಂತೂ; ‘ಬೇವಿನ ಮರದ ಕೆಳಗೆ ಮಾವಿನ ಮರ ಹೇಗೆ ಹುಟ್ಟಿತು’ ಎಂದು ಊರ ಸರ್ಕಲ್ಲಿನಲ್ಲಿ ಗೇಲಿ ಮಾಡಿದ್ದ. ಅದಾವುದನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಕುರುಡಿ ತಾತ ಮಾರಿಗುಡಿಯ ಮುಂದೆ ನನ್ನ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ. ಅದನ್ನು ಕೇಳಿ ನಂಬುವುದೊ ಬೇಡವೊ ಎಂದು ಅನುಮಾನವಾಗುತ್ತಿತ್ತು.

ಸುಮ್ಮನೇ ಎಲ್ಲ ಕಠಿಣ ಪಥಗಳನ್ನೂ ದಾಟಿ ಬಂದು ಬಿಟ್ಟಿರುತ್ತೇವೆ. ವಯಸ್ಸಾಗುತ್ತಿದ್ದಂತೆ ಪ್ರತಿಯೊಂದಕ್ಕೂ ಗೊಣಗುತ್ತಿರುತ್ತೇವೆ. ಅಕ್ಕನ ಮನೆಗೆ ಹೆಂಡತಿ ಮಕ್ಕಳ ಕಟ್ಟಿಕೊಂಡು ಹೋದಾಗಲೆಲ್ಲ ಹುಟ್ಟೂರಿನ ಪ್ರತಿಯೊಂದು ವಿವರವನ್ನೂ ಕೇಳಿ ತಿಳಿಯುತ್ತಿದ್ದೆ. ‘ಅತ್ತೆಯರು ನನ್ನನ್ನು ಕೇಳಿದರೇ’ ಎಂದು ತಪ್ಪದೆ ವಿಚಾರಿಸುತ್ತಿದ್ದೆ. ‘ಕೇಳ್ದೆನೇ ಇರ್ತಾರೇನಪ್ಪಾ… ನೀನಲ್ಗೆ ವೋಗುದಿಲ್ಲಾ; ಅವುರ್ಗೆ ಇಲ್ಲಿಗೆ ಬರುಕಾಗುದಿಲ್ಲಾ’ ಎಂದು ವಿಷಾದದಲ್ಲಿ ಅಕ್ಕ ಅವರ ಬಗ್ಗೆ ಮಾತಾಡಲು ನಿರಾಸಕ್ತಿ ತೋರುತ್ತಿದ್ದಳು. ಅವರ ಪರಿಸ್ಥಿತಿ ಹಾಗಿತ್ತು. ಎಂತಹ ವಿಪರ್ಯಾಸ! ಆ ಊರಿಗೆ ಹೋಗಲು ಒಂದು ಪೈಸೆಯಷ್ಟು ಇಷ್ಟ ಇಲ್ಲದಿದ್ದರೂ ಅಕ್ಕನ ಮೂಲಕ ಅಲ್ಲಿನ ವರ್ತಮಾನ ತಿಳಿಯಲು ನನ್ನ ಜೀವ ಹಪಹಪಿಸುತ್ತಿತ್ತು.

ಅದೇ ವೇಳೆಗೆ ಬೇಸಿಗೆ ರಜೆಯಲ್ಲಿ ಊರಲ್ಲಿದ್ದೆ. ನನ್ನಕ್ಕ ವಿಪರೀತ ದೇವರು ದಿಂಡರ ನಂಬಿಕೆಯವಳು. ಮನೆ ದೇವರಿಗೆ ಕಿರಿ ಮಗಳು ಸಿರಿಯ ತಲೆಗೂದಲ ಮುಡಿ ಕೊಡುವುದನ್ನು ಬಹಳ ದಿನಗಳಿಂದ ಉಳಿಸಿಕೊಂಡಿದ್ದೆ. ಅಂತವುಗಳ ಬಗ್ಗೆ ನನಗೆ ವಿಶ್ವಾಸ ಇರಲಿಲ್ಲ. ಅಕ್ಕ ಒತ್ತಾಯಿಸಿದಳು. ಹೌದಲ್ಲವೇ; ನಾನು ಹುಟ್ಟಿ ಬೆಳೆದ ಮನೆ, ಊರು-ಕೇರಿ ಮನದಲ್ಲಿ ಮೂಡಿಬಂತು. ಆಗ ತಾನೆ ಹೊಸದಾಗಿ ಒಳ್ಳೆಯ ಕ್ಯಾಮೆರಾ ತೆಗೆದುಕೊಂಡಿದ್ದೆ. ನನ್ನ ನೆಚ್ಚಿನ ಬಾಲ್ಯಕಾಲದ ಹಳ್ಳಿಯ ಚಿತ್ರಗಳನ್ನೆಲ್ಲಾ ಹೆಂಡತಿಯ ಮೂಲಕ ತೆಗೆಸಬಹುದಲ್ಲಾ! ಆ ಮೂಲಕ ಏನೊ ಸಮಾಧಾನವಾಗುತ್ತದಲ್ಲಾ ಎಂದು ಹೆಂಡತಿಗೆ ವಿವರಿಸಿದೆ. ‘ರೀ; ಅಷ್ಟೆಲ್ಲ ಆಗೋದಿಲ್ಲಾ. ಯಾರದಾದರೂ ಫೋಟೊ ತೆಗೆವೆ ಅಷ್ಟೇ’ ಎಂದಾಗ; ‘ಆಯ್ತು. ನಮ್ಮತ್ತೆಯರ ಫೋಟೊ ತೆಗೇ… ಅಲ್ಲಿನ ದೃಶ್ಯಗಳನ್ನು ಸುಮ್ಮನೆ ಕ್ಲಿಕ್ಕಿಸು’ ಎಂದು ಕೋರಿದೆ. ‘ಆಯ್ತು; ಅಲ್ಲಿನ ಪರಿಸ್ಥಿತಿ ಹೇಗಿರುತ್ತೋ; ನೋಡಿ ತೆಗೀತೀನಿ’ ಎಂದಳು. ಬಹಳ ಸಂತೋಷವಾಗಿತ್ತು. ನನ್ನೂರಿಗೆ ಹೋಗುವ ದಿನ ನಿಗದಿಯಾಗಿತ್ತು. ಅತ್ತೆಯರು ಊರಲ್ಲೆ ಇದ್ದಾರೆಂದು ತಿಳಿಯಿತು. ಮಗಳ ಮುಡಿಕೊಡುವುದಕ್ಕಿಂತ ಅತ್ತೆಯರ ಫೋಟೊ ಸಿಗುತ್ತವಲ್ಲಾ; ಅವರನ್ನು ಖುದ್ದು ಕಂಡು ಮಾತಾಡಿಸಿ ಬರುತ್ತಾರಲ್ಲಾ ಎಂಬುದೇ ದೊಡ್ಡದಾಗಿತ್ತು. ಊರಲ್ಲಿ ಇಂತಿಂತವರನ್ನು ಕಂಡು ಬರಬೇಕವ್ವಾ ಎಂದು ಅಕ್ಕನನ್ನು ವಿನಂತಿಸಿದ್ದೆ. ಮಕ್ಕಳಿಗೆ ಹೊಸ ಬಟ್ಟೆ ತಂದಿದ್ದೆ. ಅಕ್ಕ ತವರೂರಿಗೆ ಹೋಗುವಾಗ ಬರಿಗೈಯಲ್ಲಿ ಹೋಗುತ್ತಿರಲಿಲ್ಲ. ಮನೆಯಿಂದಲೇ ಏನೇನೊ ತಿಂಡಿ ಮಾಡಿಕೊಂಡು ಹೋಗಿ ನೆರೆಹೊರೆಯ ಅವತ್ತಿನವರಿಗೆಲ್ಲ ಕೊಡುತ್ತಿದ್ದಳು. ಅವಳಿಗೆ ಸಂಬಂಧಗಳು ಅಷ್ಟೊಂದು ಆತ್ಮೀಯವಾಗಿದ್ದವು.

ಮುಡಿ ಕೊಡಲು ಹೊರಟಿದ್ದರು. ಏನೊ ಸಡಗರ ನನ್ನಲ್ಲಿ. ಹತ್ತಾರು ಬಾರಿ ಹೇಳಿದ್ದೆ, ಹೇಗೆ ಚೆಂದ ಫೋಟೊ ತೆಗೆಯುವುದೆಂದು. ಸಾಕು ಬಿಡ್ರೀ ನಿಮ್ಮ ಸಲಹೆ ಎಂದಿದ್ದಳು. ಅಕ್ಕ ಸಿಹಿ ಉಂಡೆ, ಕಜ್ಜಾಯಗಳನ್ನು ಕವರ್‌ಗಳಲ್ಲಿ ತುಂಬಿಕೊಂಡಿದ್ದಳು. ಊರೇನು ದೂರ ಇರಲಿಲ್ಲ. ಅಲ್ಲಿ ತಲುಪಿ ಮನೆ ದೇವರಿಗೆ ಮಗಳ ಮುಡಿಕೊಟ್ಟಿದ್ದರು.

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು. ನನ್ನಕ್ಕನ ಮುಂದೆ ಅವರ ಬೇಳೆ ಬೇಯುತ್ತಿರಲಿಲ್ಲ. ಆ ರಂಪಗಳೆಲ್ಲ ಕೆಳಮಟ್ಟದಲ್ಲಿದ್ದವು. ಅವರು ಮನೆಯ ಒಳಕ್ಕೂ ಕರೆಯುತ್ತಿರಲಿಲ್ಲ. ನಮ್ಮಕ್ಕ ಹಿತ್ತಿಲಲ್ಲಿ ಅವನು ಚಿಕ್ಕಪ್ಪನ ಲೆವೆಲ್ಲಿಗೆ ತಕ್ಕುದಾದ್ದನ್ನು ಕುಡಿಸಿದ್ದಳು. ಮಗನ ವಿರುದ್ಧವೇ ಎದುರಾಗಿದ್ದನು. ‘ಲೇ; ಯೀಗ ಮೊದ್ಲಿನಂಗಿಲ್ಲ ಕಲಾ; ಯೆಣ್ಮಕ್ಕುಳ್ಗೂ ಆಸ್ತಿ ಪಾಸ್ತಿ ಮನೇಲಿ ಪಾಲದೆ ಕಲಾ… ನೀನು ನಿಮಪ್ಪುನ್ಗೆ ಮೂರ್ನೆ ಯೆಡ್ತಿ ಮಗ! ನಿನಗೆ ಯಾವ ಅದಿಕಾರನು ಇಲ್ಲ ಕಲಾ’ ಎಂದು ಕೆಂಡ ಕಾರಿದ್ದಳು. ಅವರಪ್ಪ ಮಧ್ಯೆ ಬಾಯಾಕಿ; ‘ಸುಮ್ನಿರವ್ವಾ ಅವುನ್ಗೇನ್ ತಿಳ್ದದೂ ಲೋಪರ್ ಬಡ್ಡೆತುತ್ಕೆ’ ಎಂದ ಕೂಡಲೆ ಅವನ ಹೆಂಡತಿ ಮಗ ಮೇಲೆ ಬಿದ್ದು ತದುಕಿದ್ದರು. ಅದೇ ಕಾಳಮ್ಮ ಮಂಚಮ್ಮ ಬಿಡಿಸಿದ್ದರು.

‘ಅಮ್ಮಾ; ಮುಡಿಕೊಟ್ಟಾಯ್ತಲ್ಲಾ, ನಡೀ ನಮ್ಮೂರಿಗೆ ಹೋಗುವಾ’ ಎಂದು ನನ್ನ ಹೆಂಡತಿ ರೇಗಿದ್ದಳು. ನನ್ನ ಮಕ್ಕಳು ಅಲ್ಲಿ ಏನನ್ನೂ ನೋಡಲು ಆಗಿರಲಿಲ್ಲ. ಸದ್ಯ ಪಡಸಾಲೆಯಲ್ಲಿ ಕೂರಿಸಿ ಮಕ್ಕಳ ಫೋಟೊ ತೆಗೆದಿದ್ದಳು. ಹಿತ್ತಿಲಿಗೆ ಹೋಗಿ ಆ ನನ್ನ ಹೊಂಗೆ ಮರವನ್ನೂ ಸೆರೆಹಿಡಿದಿದ್ದಳು. ರಗಳೆ ಸುಮ್ಮನಾಗಿತ್ತು. ಎಲ್ಲಿ ಅವರು ಪಾಲಿಗೆ ಬರುವರೊ ಎಂಬ ಭಯ ಹಾಗೆ ಆಡಿಸಿತ್ತು. ನನ್ನಕ್ಕನಿಗೆ ಮಾತ್ರ ಪಾಲು ಬಿಡಬಾರದು ಎಂಬ ಹಠವಿತ್ತು. ಎಲ್ಲ ಹರಕೆ ಮುಗಿಸಿದ್ದರು. ಪೂಜಾರಿ ಪಂಚಾಮೃತ ಮಾಡಿದ್ದ. ಕಾಳವ್ವ ಮಂಚವ್ವರು ಯಾವತ್ತೂ ವಿನೀತರಾಗಿದ್ದರು. ಅವರ ಗುಡಿಸಲುಗಳು ಬದಲಾಗಿರುವುದಿಲ್ಲ. ಹಳೆಯದನ್ನೆಲ್ಲಾ ಮಾತಾಡಿದರು. ನನ್ನ ಮಕ್ಕಳಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಮನಸ್ಸಿರಲಿಲ್ಲ. ಹಿಂತಿರುಗಲು ಒತ್ತಾಯಿಸುತ್ತಿದ್ದರು. ಮಧ್ಯಾಹ್ನದ ಹೊತ್ತಿನ ಊಟದ ಪದ್ಧತಿ ಇರಲಿಲ್ಲವಾಗಿ ಯಾರೂ ಊಟಕ್ಕೆ ಕರೆದಿರಲಿಲ್ಲ. ಅಕ್ಕ ತಾನು ಮಾಡಿಕೊಂಡು ಬಂದಿದ್ದ ಸಿಹಿ ತಿಂಡಿಗಳ ಮಕ್ಕಳಿಗೆ ತಿನಿಸಿ ಅವರಿವರಿಗೆ ಕೊಟ್ಟಿದ್ದಳು. ಮೂರು ಗಂಟೆಗೆ ಪೇಟೆಗೆ ಹೋಗುವ ಬಸ್ಸು ಬರುವುದಿತ್ತು. ಅದನ್ನೇರಿ ಮನೆ ತಲುಪಬೇಕಿತ್ತು.

ನನ್ನತ್ತೆಯರ ನೆನಪಾಗಿ ಅವರು ಎಲ್ಲಿದ್ದಾರೆ ಎಂದು ನನ್ನ ಹೆಂಡತಿ ಕ್ಯಾಮರಾ ಹಿಡಿದು ಕೇಳಿದ್ದಳು.

‘ಅಯ್ಯೋ ಆ ಪಾಪಿಗಳ ಯಾಕೆ ನೋಡ್ತಿಯೆ ಬಿಡವ್ವಾ’
‘ಇಲ್ಲಾ; ನಾನವರ ನೋಡ್ಲೇ ಬೇಕೂ’
‘ಯಾಕವ್ವಾ… ನೋಡುಕಾದದೆ ಅವರಾ…?’
‘ನಂತಮ್ಮ ನೋಡ್ಕ ಬಾ… ಮಾತಾಡ್ಸಿ ಫೋಟೊ ತಕಬಾ ಅಂತ ಯೇಳವ್ನೆ ಕನಮ್ಮಾ’
‘ಅಯ್ಯೋ; ನೋಡು ಸಕ್ತಿ ಇದ್ದದೇ… ಕಿತ್ತಿಟ್ಟ ಯೆಣಿನಂಗವರೇ…’
‘ಅಂಗೆಂಗಾಯ್ತಮ್ಮಾ…’
‘ಯೇಡ್ಸ್ ಬಂದ್ಬುಡ್ತು ಕನವ್ವಾ… ಯಾರ್ಗು ಗೊತ್ತಿಲ್ಲ… ಸವ್ಕಂದು ಸಾಯ್ತಾವ್ರೆ…’
‘ಅಂಗಾರೆ ಮುಗಿತೂsss’
‘ಯಾವತ್ತೋ ಮುಗುದೋಯ್ತು… ಮೂಳೆ ಚಕಳ ಸುಮ್ನೆ ಅಲ್ಲಿ ಬಿದ್ದದೆ ಅಷ್ಟೇ’
‘ಅಂಗಾರೆ ಫೋಟೊ ತಕೋಕಾಗುದಿಲುವೇ’
‘ತಕವ್ವಾ; ಅತ್ತೆ ಅತ್ತೇ ಅಂತಾ ಅವರ ಬಾಲ್ದಂಗೆ ಇದ್ದೋನ್ಗೆ ಇದೂ ಗೊತ್ತಾಗ್ಲೀ’

ನನ್ನ ಹೆಂಡತಿ ಫೋಟೊ ತೆಗೆಯಲು ಹಿಂಜರಿದಿದ್ದಳು. ನನ್ನಕ್ಕ ಕಿಲಾಡಿ. ಕೊಡು ಮೊಗಾ… ಇಂಗೇ ತಾನೆ ಕ್ಲಿಕ್ ಅಂತಾ ಬಟನ್ ಒತ್ತೋದು ಎಂದು ಅತ್ತೆಯರು ಆ ಮೂಲೆಯಲ್ಲಿ ಬಿದ್ದಿದ್ದನ್ನು ಗಮನಿಸಿ ಹತ್ತಿರ ಹೋಗುತ್ತಿದ್ದಂತೆಯೆ ತೆಂಗಿನ ಗರಿಗಳ ಮರೆಗೆ ಹೊಕ್ಕಿಕೊಂಡರು. ಅಷ್ಟು ಧೈರ್ಯದ ನನ್ನ ಅಕ್ಕನೇ ಹೆದರಿದ್ದಳು. ನನ್ನನ್ನು ಪ್ರೀತಿಸಿದಂತೆಯೇ ನನ್ನಕ್ಕನನ್ನೂ ಅವರು ಭಾವಿಸುತ್ತಿದ್ದರು. ಅಕ್ಕನಿಗೆ ಕೆಲ ಕ್ಷಣ ಮಾತೇ ಹೊರಡಿರಲಿಲ್ಲಾ… ಅವಳ ಕಣ್ಣಿಂದ ನೀರು ಬಟ್ಟಾಡಿದವು. ಬಟ್ಟಲಿಗೆ ತುಂಬಿಕೊಟ್ಟಿದ್ದ ಪಂಚಾಮೃತವ ಅವರು ತಿನ್ನಲಿ ಎಂದು ಕಾಳಮ್ಮನ ಕೈಲಿ ಕೊಟ್ಟಿದ್ದಳು. ನಾವು ಹೊರಟ ನಂತರ ಕೊಡೂ; ತಕೊ ಈ ಇನ್ನೂರು ರೂಪಾಯಿಯನ್ನೂ ಕೊಟ್ಟುಬಿಡೂ… ಈ ಕಜ್ಜಾಯಗಳನ್ನೂ ನೀಡು… ಸಾಯುವ ಕೊನೆ ಗಳಿಗೆಯಲ್ಲಿ ತಿನ್ನಲಿ ಎಂದು ಮನಸನ್ನೆಲ್ಲ ಕಿವುಚಿಕೊಂಡಿದ್ದಳು. ಇನ್ನಿಬ್ಬರು ಅತ್ತೆಯರು ಪೇಟೆಯಿಂದ ಬಂದಿರಲಿಲ್ಲ. ಒಂದು ಕ್ಷಣವೂ ಅಲ್ಲಿ ನಿಲ್ಲಲಾರದೆ ಬಸ್ಸಿಗಾಗಿ ಸರ್ಕಲ್ಲಿಗೆ ಬಂದು ಬಿಟ್ಟಿದ್ದರು.

(ಇಲ್ಲಸ್ಟ್ರೆಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ತಾತ ಕುರುಡಿ ಭಯಂಕರ ಎಂಡಗುಡುಕನಾಗಿದ್ದ. ತೆಂಗಿನ ಮರ ಏರಿ ಕದ್ದು ಕುಡಿಯುತ್ತಿದ್ದ. ಹೊಂಬಾಳೆಯ ತುದಿಯ ಕೊರೆದು ಕಟ್ಟಿ ಒಂದು ಸಾಧಾರಣ ಗಾತ್ರದ ಮಡಕೆಯನ್ನು ಅದಕ್ಕೆ ತಗುಲಿ ಹಾಕುತ್ತಿದ್ದರು. ತೊಟ ತೊಟ ತೊಟ್ಟಿಕ್ಕಿ ಬೆಳಿಗ್ಗೆಗೆ ಮಡಕೆ ‘ನೀರಾ’ದಿಂದ ತುಂಬಿರುತ್ತಿತ್ತು. ಅದನ್ನು ಎಂಡ ಕಟ್ಟುವವರು ಇಳಿಸಿಕೊಳ್ಳುವ ಮುಂಚೆಯೇ ತಾತ ಹೋಗಿ ಕುಡಿಯುತ್ತಿದ್ದ.

ಸಂಜೆಗೆ ಹಿಂತಿರುಗಿದ್ದರು. ನಿಡಘಟ್ಟದ ಸಂತೆಯ ಕಡ್ಲೆಪುರಿ ತಂದಿರುತ್ತಾರೆ; ಅದಕ್ಕೆ ಕಾರಾಸೇವು ಬೆರೆಸಿ ತಿಂದರೆ ಮಜಾ ಎಂದು ಬ್ಯಾಗನ್ನು ಹುಡುಕಾಡಿದೆ. ಏನನ್ನೂ ತಂದಿರಲಿಲ್ಲ. ಅವರ ಮುಖದಲ್ಲಿ ಬೇಸರ ತಾಂಡವವಾಡುತ್ತಿತ್ತು. ಕೈಕಾಲು ಮುಖ ತೊಳೆದು ಬಟ್ಟೆ ಬದಲಿಸಿದರು. ಕ್ಯಾಮರಾ ಎಲ್ಲಿ ಎಂದೆ. ಅದೊಂದು ನಿರುಪಯುಕ್ತ ವಸ್ತು ಎಂಬಂತೆ ಗೋಡೆಗೆ ನೇತು ಹಾಕಿದ್ದನ್ನು ಹೆಂಡತಿ ತೋರಿದ್ದಳು. ಅರೇ; ಅಷ್ಟು ಕಾಸ್ಟ್ಲೀ ಕ್ಯಾಮರಾನಾ ಹಾಗೆ ನಿರ್ಲಕ್ಷಿಸಿದ್ದಾರಲ್ಲಾ ಎಂದು ಸಿಟ್ಟಾಯಿತು. ಅತ್ತೆಯರ ಪೋಟೊ ತೆಗೆದೆಯಾ ಎಂದು ದಿಟ್ಟಿಸಿ ಕೇಳಿದೆ.

‘ಅಲ್ಲಿ ಹೆಣಗಳಿದ್ದವು! ಅವುಗಳ ಫೋಟೊ ತೆಗೆಯಲು ನನ್ನಿಂದಾಗಲಿಲ್ಲಾ’
‘ಸರ್ಯಾಗಿ ಮಾತಾಡೂ, ಯಾವ ಹೆಣಗಳೂ?’
‘ನಿಮ್ಮತ್ತೆಯರ ಹೆಣಗಳೂ… ಗುಂಡಿಯಿಂದ ಕಿತ್ತಿಟ್ಟಿದ್ದರು!’
‘ನಿನಗೋಸ್ಕರ ನೋಡ್ಲಿ ಅಂತಾ ಇಟ್ಟಿದ್ರಾ?’
‘ಇಲ್ಲಾ; ನಿನ್ನ ಫೋಟೋಗ್ರಫಿಗಾಗಿ ಪ್ರದರ್ಶನಕ್ಕಿಟ್ಟಿದ್ರೂ’
‘ಏನಾಯ್ತು ಅಂತಾ ಸರ್ಯಾಗಿ ಹೇಳೇ’ ಎಂದು ಗದರಿದೆ. ಅಕ್ಕ ಬಂದು ಹೇಳಿದಳು…

‘ಮೊಗಾ… ಯೇಡ್ಸ್ ಅಂತಾರಲ್ಲಪ್ಪಾ; ಆ ಕಾಯ್ಲೆಗೆ ಬಲಿಯಾಗಿದ್ರು. ಬರೀ ಮೂಳೆ ಚಕ್ಕಳ. ತೆವ್ಕ ತೆವ್ಕಂದು ಗರಿ ಮರೆಗೆ ವೋಗಿ ಅವುತ್ಕಂದ್ರು. ಯೀ ಸ್ಥಿತೀಲಿ ಮುಖಾ ತೋರಿಸ್ಬಾರ್ದು ಅಂತಾ ಮರೆಯಾದ್ರು. ಕ್ಯಾಮ್ರ ತಕಂಡು ನಾನೇ ಅತ್ರುಕೇ ವೋಗಿದ್ದೆ. ಆಗ್ಲಿಲ್ಲ ಕನಪಾ. ಅಂಗಿರುವಾಗ ಫೋಟೊ ತಗೀಬಾರ್ದು ಅನಿಸ್ತು… ನೋಡ್ಲೂಬಾರ್ದು. ಎಂಗಿದ್ದೋರು ಎಂಗಾಗಿದ್ರು ಅನ್ನುದಾ ಯೇಳುಕೆ ಆಗುದಿಲ್ಲ ಕನಪಾ… ಆ ವಿಸ್ಯನೆಲ್ಲ ಬಿಡಪಾ… ಆ ಕರ್ಮಿಗಳ್ನೆಲ್ಲ ಯಾಕಪ್ಪ ತಲೆಗೆ ಇಷ್ಟಾಕಂದಿಯೇ; ವೋಯ್ತು ಅದೆಲ್ಲಾ. ಮುಂದುಕ್ಕೆ ಬಂದ್ಬುಡಬೇಕೂ! ಅಲ್ಲೇ ಇದ್ರೆ ಚಂದವೇ’

ಅಕ್ಕನ ಮಾತು ಎಚ್ಚರಿಸಿತ್ತು. ಕಲ್ಪಿಸಿಕೊಂಡೆ; ಭಯಾನಕ ಎನಿಸಿತು. ನಿನ್ನ ಅತ್ತೆಯರು ಯಾವ ಮಟ್ಟದವರು ನೋಡು ಎಂದು ಹೆಂಡತಿ ಸಿಡಿಮಿಡಿಗೊಂಡಳು. ನನ್ನಲ್ಲಿ ಮರು ಮಾತಿರಲಿಲ್ಲ. ನಾನು ಬೆಳೆದು ಬಂದ ದಾರಿಯೇ ಅಂತಾದ್ದು. ಮಾನವಂತರ ಮಾರ್ಗವೇ ನನಗೆ ಗೊತ್ತಿರಲಿಲ್ಲ. ನನ್ನ ಮಟ್ಟವೇ ಅಂತಾದ್ದು ಎಂದು ಸುಮ್ಮನೆ ಮೂಲೆಯ ಒಂಟಿ ಕೊಠಡಿಯಲ್ಲಿ ಕೂತು ಬಿಟ್ಟಿದ್ದೆ. ಅತ್ತೆಯರ ನೆನಪು ಬೇಡ ಎಂದರೂ ಬರುತ್ತಲೇ ಇತ್ತು. ಎಂತಹ ಒಳ್ಳೆಯ ಊರಲ್ಲಿ ಕೆಟ್ಟು ಬಂದೆನೊ ಅಥವಾ ಅಂತಹ ಕೆಟ್ಟ ಊರಿಂದ ಹುಟ್ಟಿಬಂದೆನೊ ಎಂಬುದೇ ತಿಳಿಯದೆ ಊಟದ ಬಗ್ಗೆ ಆಸಕ್ತಿಯೆ ಬರಲಿಲ್ಲ. ಅತ್ತೆಯರನ್ನು ತಿಂದು ಬಿಟ್ಟಿತೇ ಆ ಊರು, ಪೇಟೆ, ವ್ಯವಸ್ಥೆ ಎಂದು ಯೋಚಿಸುತ್ತಿದ್ದಂತೆಯೇ,
‘ಯಾಕೂಟ ಮಾಡಲ್ವಾ, ಟೈಂ ಎಷ್ಟಾಯ್ತು ಗೊತ್ತಿಲ್ವಾ?’

‘ಇವತ್ತು ಉಪವಾಸ ಮಾಡ್ತೀನಿ’
‘ನಿಮ್ಮತ್ತೇರ್ಗಾಗಿಯಾ’
‘ಹೂಂ; ಅವರಿಗಾಗಿ ಮರುಗೋರು ಯಾರಿದ್ದಾರೆ?’
‘ಸಾಕು ಬಿಡ್ರೀ ರೀ, ನಿಮ್ದೆಲ್ಲಾ ಅತಿಯಾಯ್ತು’
‘ತಮಾಷೆ ಮಾಡ್ದೆ ಕಣೇ… ಮನೆ ಒಳಗೆ ಜನಾ ಜಾಸ್ತಿ. ಇಲ್ಲೇ ಮಲಿಕೊ… ನಮ್ಮತ್ತೇರ ಕಥೆ ಹೇಳ್ತೀನಿ’
‘ಅದೆಲ್ಲ ಬೇಡ. ಬರಕೊ; ಯಾರಾದ್ರು ಪಬ್ಲಿಷ್ ಮಾಡ್ತರೆ, ಜನ ಒದ್ತಾರೆ’

ಮುಂದೆ ಮಾತು ಹೊರಡಲಿಲ್ಲ. ಬೇಸಿಗೆ ರಜೆ ಮುಗಿಸಿ ನನ್ನ ಯೂನಿವರ್ಸಿಟಿಗೆ ಹಿಂತಿರುಗಿದ್ದೆ. ಅದೇ ಪಾಠ ಪ್ರವಚನ ಸಂಶೋಧನೆ. ಎಷ್ಟು ಹೇಳಿದರೂ ಅಷ್ಟೇ… ಎದೆಯಾಳದ ಸಂವೇದನೆಯ ಮಾತು ಮುಟ್ಟೀತೆ? ಪರಿವರ್ತನೆಗೆ ದಾರಿ ತೋರೀತೇ? ಹಾಗಾದರೆ ಯಾವುದು ಸಂಶೋಧನೆ ಎಂದು ಏನೋ ಟಿಪ್ಪಣಿ ಬರೆಯುತ್ತಿದ್ದೆ. ಅತ್ತೆಯರ ಘಟನೆಯಾಗಿ ಹಲವು ವರ್ಷಗಳೆ ಕಳೆದಿದ್ದವು. ನಾನೂ ಮರೆತಿದ್ದೆ. ಮುಗಿಯಿತು ಎಂದ ಮೇಲೆ ಮುಗಿಯಿತು ಅಷ್ಟೇ ಎಂದು ಮನಸ್ಸು ಕಲ್ಲಾಗಿತ್ತು. ನಾನು ಬೆಳೆದಿದ್ದ ಆ ಬೀದಿಯೇ ಪಾಳಾಗಿತ್ತು. ಹಲವರ ಮಣ್ಣಿನ ಮನೆಗಳು ಬಿದ್ದು ಗೆದ್ದಲಿಡಿದಿದ್ದವು. ಸಂಸಾರದ ಜಂಜಾಟಗಳಲ್ಲಿ ಸಿಲುಕಿದ್ದೆ. ‘ಇನ್ನೂ ಬಾಡಿಗೆ ಮನೆಯಲ್ಲಿದ್ದೀಯಾ’ ಎಂದು ಕೇಳುವುದರಲ್ಲೇ ಹತ್ತಾರು ಅರ್ಥಗಳು ಧ್ವನಿತವಾಗುತ್ತಿದ್ದವು. ‘ನೋಡಪ್ಪಾ; ಮೂರು ಹೆಣ್ಣು ಮಕ್ಕಳು ನಿನಗೆ; ಎಷ್ಟು ಜೋಪಾನ ಮಾಡಿದರೂ, ಉಳಿಸಿದರೂ ಕಡಿಮೆಯೇ; ಒಬ್ಬಂಟಿ ನೀನು… ಬಿದ್ದು ಹೋದರೆ ಯಾರೂ ಇರೋದಿಲ್ಲ’ ಎಂದು ಕನಿಕರದ ಮಾತಾಡುವಾಗ ನಾನೇನೊ ತಪ್ಪಿತಸ್ತ ಎಂಬಂತೆ ಬಿಂಬಿತನಾಗುತ್ತಿದ್ದೆ. ಏನೋ ಹತಾಶೆ ಬೇಸರ. ಕಾರಣವೇ ತಿಳಿಯದ ಸಿಟ್ಟು ಸೆಡವು… ಆಸ್ಫೋಟಿಸುವ ಮೌನ. ಛೇ ಜೀವನ ಎಂದರೆ ಇಷ್ಟೆಯಾ? ಅದೇ ಹೆಂಡತಿ ಮಕ್ಕಳು, ಒಂದು ರೋಟಿನ್ ಉದ್ಯೋಗ… ಚಿಲ್ಲರೇ ಬರಹ, ಲಯವಾಗುವ ಹೆಸರು, ಖ್ಯಾತಿ… ಮೆಲ್ಲಗೆ ಬಂದು ಕೈ ಹಿಡಿಯುವ ಮುಪ್ಪು… ಇದಿಷ್ಟಕ್ಕಾಗಿ ಎಷ್ಟೊಂದು ನಾಟಕ! ಜೀವನೋತ್ಸಾಹದ ವಿಕಟ ಸಾಹಸ!

ಏನೇನೊ ಚಿಂತೆಗಳಲ್ಲಿ ಜಾರ್ಜ್ ಆರ್ವೆಲ್‌ನ 1984 ಕಾದಂಬರಿಯನ್ನು ಓದುತ್ತ ಕೂತಿದ್ದೆ. ಹಿ.ಚಿ ಬೋರಲಿಂಗಯ್ಯ ಅವರಿಂದ ಪತ್ರ ಬಂದಿತ್ತು. ಓದಿ ಒಂದು ಕ್ಷಣ ನಿರ್ಲಕ್ಷಿಸಿದ್ದೆ. ಇಂತಹ ವಿಷಯಗಳನ್ನೆಲ್ಲ ಮಾತನಾಡಲು ನನ್ನಂತವರೇ ಇವರಿಗೆ ಬೇಕೇ ಎನಿಸಿತು. ಈ ವಿಷಯದ ಕುರಿತು ಮಾತನಾಡಲಾರೆ ಸಾರ್ ಎಂದೆ. ‘ಹಾಗನ್ಬೇಡೀ; ನೀವು ಮಾತನಾಡಿದರೇ ಅದಕ್ಕೊಂದು ಘನತೆ’ ಎಂದರು. ಹೌದಲ್ಲವೇ; ಆ ಜನಗಳ ಬಗ್ಗೆ ಮಾತನಾಡಲು ನನಗೆ ಸಂಬಂಧ ಇದೆ ಎಂದು ಒಪ್ಪಿದೆ. ಅದೇನು ಘನ ಘೋರ ವಿದ್ವಾಂಸರ ಮಲ್ಲ ಯುದ್ಧವಾಗಿರಲಿಲ್ಲ. ಒಣ ಸಾಹಿತ್ಯದ ಪಾಂಡಿತ್ಯ ಪ್ರದರ್ಶನವಾಗಿರಲಿಲ್ಲ. ಅದು ಎಚ್.ಐ.ವಿ. ಪೀಡಿತ ಸಂತ್ರಸ್ತೆಯರ ಸಮಾವೇಶವಾಗಿತ್ತು. ನಾನಲ್ಲಿ ಮುಖ್ಯ ಅಥಿತಿಯಾಗಿ ಮಾತಾಡಬೇಕಿತ್ತು. ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತ್ರ ಅಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯವಿತ್ತು. ಲೀಲಾ ಸಂಪಿಗೆ ಎಂಬುವರು ಸಂತ್ರಸ್ತೆಯರ ಬಗ್ಗೆ ಅಧ್ಯಯನ ಮಾಡಿದ್ದರು. ಆ ಬಗೆಯ ಪೀಡಿತ ಹೆಂಗಸರನ್ನು ಗುರುತಿಸಿ ಕರೆತಂದಿದ್ದರು. ನಾನಲ್ಲಿ ಹೇಗೆ ಮಾತನಾಡಬೇಕೆಂದು ತಾಲೀಮು ಮಾಡಿದಂತೆಲ್ಲ ಸೋಲುತ್ತಿದ್ದೆ. ಅದು ಉಡಾಫೆಯ ವಿಷಯವಾಗಿರಲಿಲ್ಲ. ಎಲ್ಲಿಂದ ಆರಂಭಿಸಿ ಹೇಗೆ ನನ್ನ ಅತ್ತೆಯರ ಜೊತೆಗೆ ಸಂಬಂಧ ಜೋಡಿಸಿ ಮಾತನಾಡಬೇಕು ಎಂಬುದು ಪ್ರತಿಭೆಯ ಸಂಗತಿ ಆಗಿರಲಿಲ್ಲ. ನನ್ನ ಬದುಕಿನ ಎಷ್ಟೋ ಅಪಮಾನಗಳನ್ನು ಅಲಂಕರಿಸಿ ಜೀವನವನ್ನು ಪಣಕ್ಕಿಟ್ಟು ಅಂತರಾಳವನ್ನು ತೋಡಿಕೊಳ್ಳಬೇಕಿತ್ತು. ಎಲ್ಲ ಮಾತುಗಳೂ ಸುಳ್ಳು ಎನಿಸುತ್ತಿದ್ದವು. ಅಕಸ್ಮಾತ್ ನಾನು ಹೇಳೋದನ್ನೆ ಕಟ್ಟು ಕಥೆ ಎಂದು ಭಾವಿಸಿದರೆ… ಯಾಕೆಂದರೆ ಜನರ ದೃಷ್ಠಿಯಲ್ಲಿ ನಾನೆಂದೂ ಇಂತವನು ಎಂದು ಕಂಡೆ ಇಲ್ಲವಲ್ಲಾ… ಮರ್ಯಾದೆಯ ಕವಚಗಳಲ್ಲಿ ನಾನು ಎಷ್ಟು ಕಳೆದುಕೊಂಡೆನೊ; ಪಡೆದುಕೊಂಡೆನೊ; ಗೊತ್ತೇ ಆಗಲಿಲ್ಲ.

ಸಭೆ ಆರಂಭವಾಗಿತ್ತು. ತಳಮಳಿಸಿತು ಮನ. ಎದುರಿಗೆ ಕೂತಿದ್ದವರು ಎಚ್.ಐ.ವಿ. ಪೀಡಿತ ಮಹಿಳೆಯರು. ಬೆವರುತ್ತಿದ್ದೆ. ನಾನೆಂದೂ ಅಂತಹ ಸಭೆಯನ್ನೆ ಕಂಡಿರಲಿಲ್ಲ. ಒಬ್ಬೊಬ್ಬರ ಮುಖ ನೋಡುತ್ತಿದ್ದೆ. ವಯಸ್ಸಾದವರು. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ಸಾವಿನ ಬಂಡಿಯಲ್ಲಿ ಕೂತಿದ್ದೇವೆಂಬ ಮನವರಿಕೆಯಲ್ಲೂ ಅವರು ಧೃತಿಗೆಟ್ಟಿದ್ದಾರೆ ಎನಿಸುತ್ತಿರಲಿಲ್ಲ. ಎಲ್ಲರೂ ಹೋಗೋದು ಅದೇ ಬಂಡಿಯಲ್ಲಿ ಎಂಬ ಸಮಾಧಾನ ಅವರಲ್ಲಿತ್ತು. ಎಲ್ಲರಂತೆಯೇ ನಗಾಡುತ್ತಿದ್ದರು. ಏನೊ ಹೊಸ ಮಾತ ಕೇಳಲು ಉತ್ಸುಕರಾಗಿದ್ದರು. ಕೆಲವರ ರೂಪದಲ್ಲಿ ನನ್ನತ್ತೆಯರು ಸುಳಿಯುತ್ತಿದ್ದರು. ಬಾಲ್ಯದಿಂದಿಡಿದು ಆ ಮಂಡ್ಯ ಬಸ್ ನಿಲ್ದಾಣದವರೆಗಿನ ಅತ್ತೆಯರ ಚಿತ್ರಗಳು ಹಾದು ಹೋಗುತ್ತಿದ್ದವು. ನನ್ನ ಸರದಿ ಬಂತು ಟಿಪ್ಪಣಿಗಳನ್ನೆಲ್ಲ ಅತ್ತ ಇಟ್ಟೆ. ನನ್ನ ಅತ್ತೆಯರ ಒಂದು ಕಾಲದ ಸುಂದರ ಲೋಕವನ್ನು ಭಾವುಕನಾಗದೇ ವಿವರಿಸಿದೆ. ವಿಶ್ವವಿದ್ಯಾಲಯದಲ್ಲಿ ಇಂತಹ ಒಬ್ಬ ನಮ್ಮ ವ್ಯಕ್ತಿ ಇದ್ದಾನೆಯೇ ಎಂಬ ಹೆಮ್ಮೆ ಅವರ ಕಣ್ಣುಗಳಲ್ಲಿ ತುಳುಕಿದ್ದನ್ನು ಕಂಡೆ.

‘ಮನುಷ್ಯನಾದ ಈ ಪುರುಷ ಮೃಗಕ್ಕೆ ಹೀಗೆ ಹೀನವಾಗಿ ಅಮಾನುಷವಾಗಿ ಹೆಣ್ಣನ್ನು ಕಿತ್ತು ತಿನ್ನುವ ರೋಗ ಯಾವಾಗಿನಿಂದ ಬಂತು? ಯಾಕೆ ನಾಗರೀಕತೆ ಬೆಳದಂತೆಲ್ಲ ಈ ರೋಗ ಬೇರೆ ಬೇರೆ ರೂಪಗಳಲ್ಲಿ ಉಲ್ಬಣಗೊಳ್ಳುತ್ತಿದೆ? ಯಾಕೆ ಈ ವ್ಯಸನದ ರೋಗಕ್ಕೆ ಮದ್ದು ಕಂಡುಕೊಳ್ಳಲು ಆಗುತ್ತಲೇ ಇಲ್ಲಾ… ಎಚ್.ಐ.ವಿ. ರೋಗಕ್ಕೆಲ್ಲ ನಾವು ಔಷಧ ಹುಡುಕಬೇಕಾದದ್ದು, ಅದರ ಮೂಲ ಎಲ್ಲಿದೆ? ಆ ಮೂಲವನ್ನು ಬುಡಸಮೇತ ಕಿತ್ತು ಹಾಕಲು ಗೊತ್ತಿದ್ದು ಮುಂದಾಗಿಲ್ಲವಲ್ಲಾ… ಈ ಬಗೆಯ ರೋಗಗಳು ಒಂದೇ ಎರಡೇ? ಎಷ್ಟೊಂದು ರೋಗಗಳನ್ನು ಮನುಷ್ಯ ಸಾಕಿಕೊಂಡಿದ್ದಾನಲ್ಲಾ… ಅಂತಹ ರೋಗಗಳನ್ನು ಸನಾತನ ಕಾಲದಿಂದಲೂ ಸಾಂಕ್ರಮಿಕವಾಗಿ ಬಿತ್ತಿ ಬೆಳೆಯುತ್ತಲೇ ಕೆಲವರು ಬಂದಿದ್ದಾರಲ್ಲಾ… ಅವರಿಗೆ ಯಾವ ಶಿಕ್ಷೆಯೂ ಇಲ್ಲವೇ? ನರಳುವ ಸಂತ್ರಸ್ತರಿಗೆ ಸುಮ್ಮನೆ ಸಾಂತ್ವನ ಹೇಳುವುದೂ ಕೂಡ ನಾಟಕ ಅಲ್ಲವೇ… ಹಿಂಸೆ, ಅಸಮಾನತೆ, ಅನ್ಯಾಯಗಳಂತ ಭೀಕರ ರೋಗಗಳಿಂದ ದಮನಿತ ಸಮಾಜಗಳು ಎಷ್ಟೊಂದು ನಲುಗಿವೆ ಎಂದರೆ; ಅವು ಸಾವನ್ನೂ ದಿಕ್ಕರಿಸಿ ಬದುಕುಳಿಯುವ ಸಹನೆಯ ಜೀವನ ಕ್ರಮಗಳನ್ನು ನೂರಾರು ರೀತಿಯಲ್ಲಿ ಅಳವಡಿಸಿಕೊಂಡಿವೆ. ಅವೇ ನಾವು ಕಂಡುಕೊಂಡಿರುವ ರೋಗ ನಿರೋಧಕ ಶಕ್ತಿ. ರೋಗಿಗಿಂತಲು ನನ್ನ ಪ್ರಕಾರ ರೋಗಾಣುವೆ ಅತ್ಯಂತ ದುರ್ಬಲ. ನಮ್ಮ ದೇಶ ಅನೇಕ ರೋಗಾಣುಗಳ ತವರು ಮನೆ; ಆದರೆ ಇವೆಲ್ಲ ಲಯವಾಗಲೆಂದೇ ಹುಟ್ಟಿವೆ. ನನ್ನ ಅತ್ತೆಯರು ಈಗ ಇಲ್ಲ; ಆದರೆ ಅವರ ಜೀವನ ಪ್ರೀತಿ ನನ್ನೊಳಗೆ ಈಗಲೂ ದೀಪದಂತೆ ಬೆಳಗುತ್ತಿದೆ. ನಿಮ್ಮಲ್ಲೂ ಅದೇ ವಿಶ್ವಾಸವಿದೆ. ನಿಮಗೆಲ್ಲ ಒಳಿತಾಗಲಿ.’

ಇಷ್ಟು ಹೇಳಿ ಮಾತು ಮುಗಿಸಿದ್ದೆ. ಅಲ್ಲಿದ್ದ ಅನೇಕ ಸಂತ್ರಸ್ತೆಯರು ಇವನು ನಮ್ಮ ಅಣ್ಣನೊ ತಮ್ಮನೊ ಎಂದು ಪರಿಚಯ ಮಾಡಿಕೊಂಡು ಹೊಗಳಿದರು. ನನಗೆ ಸಮಾಧಾನವಾಗಿರಲಿಲ್ಲ. ಸುಸ್ತಾಗಿ ಮನೆಗೆ ಬಂದಿದ್ದೆ. ಆ ಕಾರ್ಯಕ್ರಮದ ಇನ್ವಿಟೇಷನ್ ಮನೆಯವರ ಗಮನಕ್ಕೆ ಬಾರದಿರಲಿ ಎಂದು ಎಲ್ಲೊ ಬಚ್ಚಿಟ್ಟೆ.