ಬಸದಿಯೊಳಕ್ಕೆ ಕಾಲಿರಿಸುತ್ತಿದ್ದಂತೆ ವಿಶಾಲವಾದ ಜಗತಿಯ ಮೇಲೆ ನಿರ್ಮಿತವಾದ ಮಾನಸ್ತಂಭವು ಕಣ್ಸೆಳೆಯುತ್ತದೆ. ಐವತ್ತು ಅಡಿಗಳಷ್ಟು ಎತ್ತರದ ಈ ಭವ್ಯಸ್ತಂಭವನ್ನು ಭೈರರಸನ ಪತ್ನಿ ನಾಗಲಾದೇವಿ ಎಂಬಾಕೆಯು ನಿರ್ಮಾಣ ಮಾಡಿಸಿದಳಂತೆ. ಕಂಬದ ಬುಡದ ಚೌಕದಲ್ಲಿ ಸುತ್ತ ನಾಲ್ಕೂ ಕಡೆಗಳಲ್ಲಿ ಆಕರ್ಷಕ ಕಲಾವಿನ್ಯಾಸಗಳಿವೆ. ಮೇಲೆ ಹೋದಂತೆ ಕಂಬದ ಹೊರಮೈ ಅನೇಕ ಕೋನಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಮಾನಸ್ತಂಭದ ಮೇಲುಗಡೆ ಕಳಶಮಂಟಪ. ಜಿನದೇವತೆಗಳ ಶಿಲ್ಪಗಳಿರುವ ಈ ಮಂಟಪವು ಯಾಳಿಗಳು ಹೊತ್ತಿರುವಂತೆ ರೂಪುಗೊಂಡಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತೊಂದನೆಯ ಕಂತು

 

ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಮೂವತ್ತೈದು ಕಿಮೀ ಕ್ರಮಿಸಿದರೆ ಮೂಡಬಿದರೆಯನ್ನು ತಲುಪಬಹುದು. ದಕ್ಷಿಣ ಜೈನಕಾಶಿ ಎಂದು ಹೆಸರುಪಡೆದ ಮೂಡಬಿದರೆ ಬಸದಿಗಳ ಊರು. ಇಲ್ಲಿ ಹದಿನೆಂಟು ಜಿನಾಲಯಗಳಿದ್ದು ಇವುಗಳಲ್ಲಿ ಸಾವಿರಕಂಬದ ಬಸದಿ ಪ್ರಸಿದ್ಧವಾದುದು. ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದ ಸಾವಿರಕಂಬದ ಬಸದಿಯಲ್ಲಿ ಪೂಜೆ ಸಲ್ಲುತ್ತಿರುವ ಮೂರ್ತಿ ಚಂದ್ರನಾಥ ತೀರ್ಥಂಕರಸ್ವಾಮಿಯದು.

ಹದಿನೈದನೆಯ ಶತಮಾನದಲ್ಲಿ ಜೀವಿಸಿದ್ದ ಚಾರುಕೀರ್ತಿ ಭಟ್ಟಾರಕರೆಂಬ ಜೈನಯತಿವರ್ಯರ ಆಣತಿಯ ಮೇರೆಗೆ ವಿಜಯನಗರದ ಅರಸ ಎರಡನೆಯ ದೇವರಾಯನು ಈ ಬಸದಿಯ ನಿರ್ಮಾಣ ಮಾಡಿಸಿದನಂತೆ. ದೇವರಾಯನ ಸ್ಥಳೀಯ ಪ್ರತಿನಿಧಿಯಿಂದ ಭೂಮಿಯನ್ನು ಪಡೆದ ಸ್ಥಳೀಯರು ಕ್ರಿ.ಶ. 1430ರಲ್ಲಿ ಈ ಬಸದಿಯ ನಿರ್ಮಾಣವನ್ನು ಕೈಗೊಂಡರು.

ಬಸದಿಯೊಳಕ್ಕೆ ಕಾಲಿರಿಸುತ್ತಿದ್ದಂತೆ ವಿಶಾಲವಾದ ಜಗತಿಯ ಮೇಲೆ ನಿರ್ಮಿತವಾದ ಮಾನಸ್ತಂಭವು ಕಣ್ಸೆಳೆಯುತ್ತದೆ. ಐವತ್ತು ಅಡಿಗಳಷ್ಟು ಎತ್ತರದ ಈ ಭವ್ಯಸ್ತಂಭವನ್ನು ಭೈರರಸನ ಪತ್ನಿ ನಾಗಲಾದೇವಿ ಎಂಬಾಕೆಯು ನಿರ್ಮಾಣ ಮಾಡಿಸಿದಳಂತೆ. ಕಂಬದ ಬುಡದ ಚೌಕದಲ್ಲಿ ಸುತ್ತ ನಾಲ್ಕೂ ಕಡೆಗಳಲ್ಲಿ ಆಕರ್ಷಕ ಕಲಾವಿನ್ಯಾಸಗಳಿವೆ. ಮೇಲೆ ಹೋದಂತೆ ಕಂಬದ ಹೊರಮೈ ಅನೇಕ ಕೋನಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಮಾನಸ್ತಂಭದ ಮೇಲುಗಡೆ ಕಳಶಮಂಟಪ. ಜಿನದೇವತೆಗಳ ಶಿಲ್ಪಗಳಿರುವ ಈ ಮಂಟಪವು ಯಾಳಿಗಳು ಹೊತ್ತಿರುವಂತೆ ರೂಪುಗೊಂಡಿದೆ. ನಾಲ್ಕೂ ಕಡೆ ಅಂಚಿನಿಂದ ಇಳಿಬಿದ್ದ ಗಂಟೆಗಳು ಕಂಬದ ಶೋಭೆಯನ್ನು ಹೆಚ್ಚಿಸಿವೆ.

ಮುಂದೆ ಕಾಣುವ ಬಸದಿಯ ಕಟ್ಟಡವು ಕಗ್ಗಲ್ಲಿನ ನಿರ್ಮಿತಿ. ಕಟ್ಟಡದ ಮೇಲುಭಾಗ ಮರದಿಂದ ಮಾಡಲ್ಪಟ್ಟಿದ್ದು ಹೆಂಚು ಹೊದಿಸಿದೆ. ಕರಾವಳಿ ಪ್ರದೇಶದ ಬಿಸಿಲು, ಗಾಳಿ, ಮಳೆಗಳನ್ನು ತಡೆಯಲು ಸಮರ್ಥವಾಗುವಂತಹ ವಾಸ್ತುಶೈಲಿಯುಳ್ಳ ನಿರ್ಮಾಣ. ಹಲವು ಮಂಟಪಗಳನ್ನುಳ್ಳ ಬಸದಿಯ ಕಟ್ಟಡದತ್ತ ಸೋಪಾನವೇರಿ ಹೋದರೆ ಮೊದಲಿಗೆ ನಕ್ಷತ್ರಾಕಾರದ ಮಂಟಪವನ್ನು ಕಾಣುವಿರಿ. 1463ರಲ್ಲಿ ಭೈರಾದೇವಿ ಎಂಬಾಕೆಯು ಮುಖ್ಯಬಸದಿಗೆ ಹೊಂದಿಕೊಂಡಂತೆ ಕಟ್ಟಿಸಿದ ಈ ಭವ್ಯಮಂಟಪವು ಭೈರಾದೇವಿ ಮಂಟಪವೆಂಬ ಹೆಸರನ್ನೇ ಪಡೆಯಿತು. ಈ ಮಂಟಪದ ವಿನ್ಯಾಸವನ್ನೇ ಅನುಸರಿಸಿ ಕಟ್ಟಡದ ಮುಖಭಾಗ, ಕೆಳಸೂರು ಮೊದಲಾದವು ನಕ್ಷತ್ರಾಕಾರದಲ್ಲೇ ರೂಪುಗೊಂಡಿವೆ.

ಕೆಳಸೂರಿನ ಮೇಲಕ್ಕೆ ಕಟ್ಟಡದ ಗೋಡೆ ನಾಲ್ಕು ಅಡಿ ಎತ್ತರಕ್ಕೆ ವಿಸ್ತರಿಸಿದ್ದು ಮುಂದೆ ಹೆಂಚುಹೊದಿಸಿದ ಮೇಲುಛಾವಣಿಯವರೆಗೆ ಮರದ ಪಟ್ಟಿಗಳು. ಅವುಗಳ ಮುಂದಕ್ಕೆ ಕಟ್ಟಡದ ಸುತ್ತಲೂ ವಿವಿಧ ದೇವತೆಗಳ ಕಾಷ್ಠಶಿಲ್ಪಗಳನ್ನು ಇರಿಸಿದೆ. ನಡುಛಾವಣಿಯ ಲಲಾಟದಲ್ಲಿ ಇಕ್ಕೆಲದಲ್ಲಿ ಆನೆಗಳಿಂದ ಪೂಜಿತನಾದ ಜಿನದೇವರ ಬಿಂಬವಿದೆ. ಸೂರಿನವರೆಗೆ ಆಧಾರವಾಗಿರುವ ಮರದ ಕಂಬಗಳೂ ಸೇರಿ ಕಟ್ಟಡವನ್ನು ಮೆರೆಸಿರುವ ನೂರಾರು ಕಂಬಗಳು ಈ ಬಸದಿಗೆ ಸಾವಿರಕಂಬದ ಬಸದಿಯೆಂಬ ಪ್ರಸಿದ್ಧಿ ತಂದುಕೊಟ್ಟಿವೆ. ಪ್ರತಿ ಕಂಬದ ಕೆತ್ತನೆಯ ವಿನ್ಯಾಸವೂ ಒಂದಕ್ಕಿಂತ ಒಂದು ಭಿನ್ನವಾಗಿರುವುದು ವಿಶೇಷ.

ಬೈರಾದೇವಿ ಮಂಟಪದ ಕಂಬಗಳಂತೂ ತಮ್ಮ ವಿಶಿಷ್ಟ ಕೆತ್ತನೆ, ಹೂಬಳ್ಳಿ, ಪ್ರಾಣಿಪಕ್ಷಿಗಳ ಬೆಡಗಿನ ಚಿತ್ತಾರಗಳಿಂದ ಕಂಗೊಳಿಸುತ್ತವೆ. ಮುಂದೆ ಎರಡು ಮಂಟಪಗಳಿದ್ದು ಗರ್ಭಗುಡಿಯಲ್ಲಿ ಚಂದ್ರನಾಥಸ್ವಾಮಿಯ ಪಂಚಲೋಹದ ಮಿರುಗುವ ಪುತ್ಥಳಿಯನ್ನು ದರ್ಶಿಸಬಹುದು. ಪಂಚಲೋಹದ ಈ ವಿಗ್ರಹವು 21.3 ಸೆಂಟಿಮೀಟರ್ (9 ಅಡಿ) ಎತ್ತರವಿದ್ದು ದಕ್ಷಿಣಭಾರತದಲ್ಲಿ ಕಂಡುಬರುವ ಚಂದ್ರನಾಥ ಮೂರ್ತಿಯ ವಿಗ್ರಹಗಳಲ್ಲೇ ಅತಿದೊಡ್ಡದೆಂದು ಹೇಳಲಾಗಿದೆ. ಚಂದ್ರಪ್ರಭಸ್ವಾಮಿಯ ಮೂರ್ತಿ ಅಪೂರ್ವತೇಜಸ್ಸಿನಿಂದ ಬೆಳಗುವಂತಿದೆ. ಸುತ್ತಲಿನ ಪ್ರಭಾವಳಿ ಶಿಲ್ಪದ ಸೊಬಗನ್ನು ಇಮ್ಮಡಿಗೊಳಿಸಿದೆ.

ಕಟ್ಟಡದ ಎಲ್ಲ ಮಂಟಪಗಳನ್ನೂ ಒಟ್ಟಾಗಿ ಸುತ್ತುವರೆದ ಪ್ರದಕ್ಷಿಣಾಪಥ. ಇಲ್ಲೂ ಎರಡೂ ಬದಿಗಳಲ್ಲಿ ಕಂಬಗಳ ಸಾಲು. ಇಲ್ಲಿನ ಕಂಬಗಳೂ ಹೊರಗೋಡೆಗಳೂ ಯಾವುದೇ ಅಲಂಕರಣವಿಲ್ಲದಿದ್ದರೂ ಕಟ್ಟಡದ ಒಟ್ಟಂದವನ್ನು ಮಿಗಿಲುಗೊಳಿಸಿವೆ.

ಬಸದಿಯ ಹೊರಬಾಗಿಲ ಅಂದವನ್ನು ವರ್ಣಿಸದಿದ್ದರೆ ಈ ವಿವರ ಪೂರ್ಣವಾಗದು. ಮರದ ಬಾಗಿಲ ಚೌಕಟ್ಟುಗಳೊಳಗೆ ಅಪೂರ್ವಚಿತ್ರಗಳನ್ನು ಮೂಡಿಸಿರುವ ಕಾಷ್ಠಶಿಲ್ಪಿಯ ಕೌಶಲವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಇಲ್ಲಿ ಅನಂತಶಯನ ವಿಷ್ಣುವಿದ್ದಾನೆ ಎಂದರಷ್ಟೇ ಸಾಲದು; ಕ್ಷೀರಸಮುದ್ರದ ಅಲೆಗಳನ್ನೂ ಇಲ್ಲಿ ಮೂಡಿಸಿದೆ . ಹಲವು ನಾರೀಮಣಿಯರನ್ನು ಗಜವಿನ್ಯಾಸದಲ್ಲೂ ಅಶ್ವವಿನ್ಯಾಸದಲ್ಲೂ ಚಿತ್ರಿಸಿರುವುದೊಂದು ವಿಶೇಷ. ಈ ನಾರೀಗಜದ ಮೇಲೆ ಹೂಬಾಣಹೂಡಿ ನಿಂತ ಮನ್ಮಥ, ಸಪರಿವಾರ ಶಿವಪಾರ್ವತಿಯರು, ಹೂಬಳ್ಳಿಗಳು, ಗಜಮುಖವುಳ್ಳ ಕಾಲ್ಪನಿಕ ಪಕ್ಷಿಗಳು ಮೊದಲಾದವು ಇಲ್ಲಿ ಆಕರ್ಷಕವಾಗಿ ಚಿತ್ರಿತವಾಗಿವೆ.

ಮೂಡಬಿದಿರೆಗೆ ಬರುವವರು ಆರು ಕಿಮೀ ದೂರದಲ್ಲಿರುವ ಕೊಡ್ಯಡ್ಕದ ಅನ್ನಪೂರ್ಣೇಶ್ವರಿಯ ದರ್ಶನವನ್ನೂ ಪಡೆದುಕೊಳ್ಳಿ. ಹದಿನೆಂಟು ಕಿಮೀ ಸಾಗಿದರೆ ಕಾರ್ಕಳದ ಬಾಹುಬಲಿ, ಚತುರ್ಮುಖ ಬಸದಿಗಳನ್ನೂ ನೋಡಲು ಅವಕಾಶವಿದೆ.