ಕೊರೊನಾ ಸಂದರ್ಭದಲ್ಲಿ ಊರಿಗೆ ಹೋಗುವ ಧಾವಂತದಲ್ಲಿ ದುರಂತಕ್ಕೀಡಾದವರ ಪ್ರತಿಯೊಂದು ಘಟನೆಯೂ ಇಲ್ಲಿ ಕವಿತೆಗಳಾಗಿವೆ. ದಾರಿ ತಪ್ಪಬಾರದೆಂದು ರೈಲು ಹಳಿಯ ಹಿಡಿದು ಹೊರಟ ಮುಗ್ಧ ಜನಗಳು ದೇಶದೆಲ್ಲೆಡೆ ಸಾರ್ವಜನಿಕ ಸಮಚಾರ ನಿರ್ಬಂಧವಾಗಿರುವಾಗ ಈ ಹಳಿಯಮೇಲೆ ಒಂದಿಷ್ಟು ಹೊತ್ತು ವಿರಮಿಸೋಣವೆಂದು ಮಲಗಿರುತ್ತಾರೆ. ದುರಾದೃಷ್ಟವಶಾತ್ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದವರು ಶವಗಳಾಗುತ್ತಾರೆ. ಅವರ ಪಕ್ಕವೇ ಬಿದ್ದಿದ್ದ ರೊಟ್ಟಿ ಚೂರುಗಳು, ರಕ್ತಸಿಕ್ತ ಮಾಂಸದ ತುಂಡುಗಳಾದ ಅಮಾಯಕ ಹೆಂಗಸರು ಮಕ್ಕಳು ಇಡೀ ದೇಶವನ್ನು ಮರುಗುವಂತೆ ಮಾಡುತ್ತವೆ. ಇವಕ್ಕೆಲ್ಲ ಕಾರಣ ಯಾರು? ಅವರ ಜೀವಗಳಿಗೆ ಯಾರು ಹೊಣೆ?
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ “ಕೊರೊನಾ” ಕವನ ಸಂಕಲನದ ಕುರಿತ ಬರಹ ಇಲ್ಲಿದೆ

ಹೊಸದಾಗಿ ಬರೆಯುತ್ತಿರುವವರ ಕಾವ್ಯದ ಚರ್ಚೆ ಮಾಡುವ ಹೊತ್ತಿನಲ್ಲೇ ಕಾವ್ಯವನ್ನು ತನ್ನ ಬರಹದ ಮುಖ್ಯ ಮಾಧ್ಯಮವನ್ನಾಗಿಸಿಕೊಂಡವರ ಕಾವ್ಯವನ್ನೂ ಚರ್ಚಿಸಬೇಕು ಎನ್ನುವಾಗ ಕಣ್ಣಿಗೆ ಬಿದ್ದದ್ದು ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಕೊರೊನಾ ಕವಿತೆಗಳು’ ಸಂಕಲನ. ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವ ಈ ಸಂದರ್ಭದಲ್ಲಿ ಆ ನೆಪದಲ್ಲಾದರೂ ಅವರ ಹೊಸ ಕವಿತೆಗಳ ಕುರಿತು ಒಂದಿಷ್ಟು ಬರೆಯಬೇಕೆನಿಸಿತು. ಶಾಲಾ ದಿನಗಳಲ್ಲಿ ‘ನಾನೊಂದು ಮರವಾಗಿದ್ದರೆ’ ಕವಿತೆಯ ಮೂಲಕ ಇವರು ಆಗಲೇ ಪರಿಚಿತರಾಗಿ ಕಾವ್ಯದ ಕುರಿತ ಭರವಸೆಯನ್ನು ಮೂಡಿಸಿದ್ದರು. ಫ್ರೆಂಚ್ ಗಡ್ಡದಾರಿಯಾಗಿದ್ದ ಇವರನ್ನು ಒಮ್ಮೊಮ್ಮೆ ಪೇಪರಿನಲ್ಲಿ ಕಂಡರೆ ಖುಷಿಪಡುತ್ತಿದ್ದ ಇವರು ಹತ್ತಿರವಾದದದ್ದು ಇವರ ಗಂಭೀರ ಬರವಣಿಗೆಗಳ ಮೂಲಕ. ಕಾವ್ಯಕ್ಕೇ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು ಎಂದು ಹಲವಾರು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದರು. ಇವರ ಕಾವ್ಯದ ಫಲವತ್ತತೆಯ ಮಾದರಿಯಲ್ಲೇ ಇವರ ಗದ್ಯ ಬರವಣಿಗೆಗಳೂ ಗಮನಸೆಳೆಯುತ್ತವೆ. ಇವರ ಆಳವಾದ ಓದಿನ ಹರವು ಬೆರಗುಗೊಳಿಸುವುದಂತೂ ನಿಜ.

(ಮೂಡ್ನಾಕೂಡು ಚಿನ್ನಸ್ವಾಮಿ)

ಮೂಡ್ನಾಕೂಡು ಅವರೆಂದರೆ ಕೇವಲ ‘ನಾನೊಂದು ಮರವಾಗಿದ್ದರೆ’ ಬರೆದ ಕವಿ ಎಂದು ಗುರುತಿಸುವರೇ ಹೊರತು ಅವರ ಕಾವ್ಯದ ಒಳಗನ್ನು ಅರಿಯುವ ಪ್ರಯತ್ನವನ್ನು ಮಾಡದಿರುವುದು ಬೇಸರದ ಸಂಗತಿ. ಇರಲಿ, ಚಿನ್ನಸ್ವಾಮಿಯವರ ಈವರೆಗಿನ ಕಾವ್ಯ ‘ಗೆದ್ದಲುಹುಳುವಿಗೆ ಬಿದ್ದ ಮರದ ಕನಸು’ ಕೃತಿಯ ನಂತರ 2020ರಲ್ಲಿ ಕೊರಾನಾ ಕವಿತೆಗಳು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. 2019ರ ಅಂತ್ಯ ಮತ್ತು 2020ರ ಆರಂಭ ಭೂಮಿಯಲ್ಲಿ ಕಂಡೂ ಕೇಳರಿಯದ ‘ಹೊಸ ವೈರಸ್ಸು’ ತಲ್ಲಣ ಸೃಷ್ಟಿಸಿತು. ‘ಕೊರೊನಾ’ ಮಹಾಮಾರಿ ಎಷ್ಟೋ ಜನರನ್ನು ಬಲಿತೆಗೆದುಕೊಂಡಿತು. ಎಷ್ಟೋ ಜೀವಗಳನ್ನು ಅನಾಥರನ್ನಾಗಿಸಿತು. ಈ ಸ್ಥಿತಿ ಯುದ್ಧದ ಭೀಕರತೆಗಿಂತಲೂ ಹೆಚ್ಚು ಅಪಾಯಕಾರಿಯಾಗಿತ್ತು. ತುತ್ತು ಅನ್ನಕ್ಕೂ ತತ್ವಾರ ಆರಂಭವಾಗಿತ್ತು. ದೇವರುಗಳೂ ಕೆಲತಿಂಗಳು ಅನಾಥವಾಗಿದ್ದವು. ದೇವರು ಮತ್ತು ಧರ್ಮದ ಅಸ್ತಿತ್ವ ಕ್ರಮೇಣ ಕಡಿಮೆಯಾಗಬಹುದೇನೋ ಎಂದುಕೊಂಡರೂ ಕೊನೆಗೆ ಇವೇ ವಿಜೃಂಭಿಸಿದವು. ಪ್ರಾಣವನ್ನಾದರೂ ಬಿಟ್ಟೇವು ಧರ್ಮವನ್ನು ಬಿಡಲಾರೆವು ಎಂಬ ಮನಸ್ಥಿತಿ ರಾರಾಜಿಸಿತ್ತು. ‘ಲಾಕ್‍ಡೌನ್’ ಎಂಬ ಪರಿಕಲ್ಪನೆ ಕೊರೊನಾ ನಿಯಂತ್ರಿಸುವ ಜೊತೆಗೆ ಬದುಕನ್ನೂ ಕ್ವಾರೈಂಟೈನ್‌ಗೆ ತಳ್ಳಿತ್ತು. ಇಂಥ ವಿಷಮ ಸಮಯದಲ್ಲಿ ಕೆಲವರು ವಿಶ್ರಾಂತಿ ಪಡೆದು ಸುದೀರ್ಘ ಒತ್ತಡದ ಬದುಕಿಗೆ ವಿರಾಮ ಹಾಕಿದ್ದರು. ಇನ್ನು ಕೆಲವರು ಒಪ್ಪೊತ್ತಿನ ಊಟಕ್ಕೂ ತಲ್ಲಣಿಸುವಂತಾಗಿತ್ತು. ಒಟ್ಟಾರೆ ಬದುಕೇ ‘ಕ್ವಾರಣ್ಯವಾಸ’ ಅನುಭವಿಸಿತು.

ಕೊರೊನಾ ಸಂದರ್ಭದಲ್ಲಿ ಮೂಡ್ನಾಕೂಡು ಅವರು ಫೇಸ್‌ಬುಕ್ ಮೂಲಕ ಬರೆಯುತ್ತಿದ್ದ ಕವಿತೆಗಳನ್ನು ಗಮನಿಸಿದ್ದೆ. ಅದು ದಾಖಲಾದರೆ ಒಳ್ಳೆಯದು ಎನ್ನುತ್ತಿದ್ದ ಹಲವರ ಆಶಯದಂತೆ ಪ್ರಕಟವೂ ಆಯಿತು. ಈ ಸಂಕಲನದ ಯಾವ ಕವಿತೆಗೂ ಶೀರ್ಷಿಕೆಯಿಲ್ಲ. ಒಟ್ಟು 53 ಬಿಡಿಬಿಡಿ ಪದ್ಯಗಳಿವೆ. ಪ್ರತಿ ಕವಿತೆಯಮೇಲೂ ಸಂಖ್ಯೆಯಿದೆ. ವಿಶೇಷವೆಂದರೆ ಸಂಕಲನದ ಅರ್ಪಣೆಯನ್ನು “ಕೊರೊನಾ ಕಾಲದಲ್ಲಿ ಅನೂಹ್ಯ ಸಂಕಟಗಳಿಗೀಡಾದ ಈ ದೇಶದ ಸಮಸ್ತ ವಲಸೆ ಕಾರ್ಮಿಕ ಬಂಧುಗಳಿಗೆ” ಮಾಡಿರುವುದು. ಅಷ್ಟೂ ಕವಿತೆಗಳ ವಿಷಯವೂ ಒಂದೇ ಅದು ‘ಕೊರೊನಾ’. 1 ಕವಿತೆಯಲ್ಲಿ ದುಡಿಮೆ ಮಾಡುವ ಅಮಾಯಕ ಜನರನ್ನು ಲಾಕ್ ಡೌನ್ ಹೆಸರಿನಲ್ಲಿ ಸಿಲುಕಿಸಿದ ವ್ಯವಸ್ಥೆಯ ಕುರಿತು ವಿಷಾದ ವ್ಯಕ್ತಪಡಿಸುತ್ತದೆ. ಲಾಕ್‌ಡೌನ್ ಹೇರಿದ್ದು ಜನರ ಕಾಳಜಿಯ ವಿಷಯವಾಗಿದ್ದರೂ ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನೂ ತಲುಪಿಸದ ವ್ಯವಸ್ಥೆಯ ಬಗ್ಗೆ ಹೇಸುತ್ತದೆ.

ಅಂದು ದುಡಿದು
ಅಂದೇ ತಿನ್ನಬೇಕಾದವರಿಗೆ

ದಿಡೀರ್ ಲಾಕ್ ಡೌನ್ ಮಾಡಿ
ಕೆಲಸ ಕಸಿದರು, ರೊಟ್ಟಿಯನ್ನೂ ಕಸಿದರು

ನಾಳೆಗೆ ಏನು? ಎಂದರಿಯದವರು
ಹೇರಿದ ನರಕ ಇದು.

ಸ್ಪಷ್ಟವಾಗಿ ನಮ್ಮನ್ನಾಳುವ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತಾರೆ. ಇಲ್ಲಿ ಕವಿಯ ಅಂತಃಕರಣ ‘ಹಸಿವಿನʼ ಕುರಿತು ಯೋಚಿಸಿದೆ. ನರಕದಂಥ ಬದುಕಿನ ವಿಷಮ ಸ್ಥಿತಿಯಲ್ಲಿ ಬದುಕು ಸಾಗಲೇಬೇಕಿರುವುದು ಅನಿವಾರ್ಯವೂ ಆಗಿದೆ.

ದಿಢೀರ್ ಲಾಕ್‍ಡೌನ್ ಮಾಡಿದಾಗ ತಮ್ಮ ತಮ್ಮ ಊರು ಸೇರಿಕೊಳ್ಳಲು ಹಾದಿಯನ್ನು ಕ್ರಮಿಸಬೇಕಾಯಿತು. ಸಾವಿರ ಸಾವಿರ ಮೈಲುಗಳನ್ನು ನಡೆದೇ ಸಾಗುವ ಅನಿವಾರ್ಯತೆ ಸೃಷ್ಟಿಯಾಯಿತು. ಜೀವ ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕಿಡುವ ಸನ್ನಿವೇಶ ಎದುರಾಯಿತು. ಸಾಗುವ ದಾರಿಯಲ್ಲೇ ಜೀವಬಿಟ್ಟ ಕಾಯಗಳೆಷ್ಟೋ ಲೆಕ್ಕವಿಲ್ಲ. ಕೆಲವರ ಚಪ್ಪಲಿಗಳಾದರೂ ಸವೆಯಿತು ಆದರೆ ಚಪ್ಪಲಿಯೇ ಇಲ್ಲದವರ ಕಾಲುಗಳೂ ನೆತ್ತರನ್ನು ರಸ್ತೆಗುಣಿಸಿದ್ದು ವಿಷಾದನೀಯ.
2ರ ಕವಿತೆಯಲ್ಲಿ
ಲಾಕ್ ಡೌನ್ ಆಯಿತು
ರೈಲು ಬಸ್ಸು ನಿಂತಲ್ಲೆ ನಿಂತವು
ಇಲ್ಲಿ ಇರಲಾಗದು ಅಲ್ಲಿಗೆ ಹೋಗಲಾಗದು
ಕಾಸಿಲ್ಲದ ಕೈಗಳು, ಹಸಿದ ಹೊಟ್ಟೆಗಳು

ನಡೆದೆವು ನಡೆದೇ ನಡೆದೆವು ಗಾವುದ ದೂರ
ಹಸಿವು ರಣಬಿಸಿಲು ಬಾಯಾರಿಗೆ
ಝಳಕ್ಕೆ ಟಾರು ಕನಿತು ಕರಗುತ್ತಿವೆ
ಚಪ್ಪಲಿಗಳು ಸವೆದಿವೆ.

ಭಾರತದಂತಹ ರಾಷ್ಟ್ರದಲ್ಲಿ ಹಸಿವು ಕೊರೊನಾ ಸಂದರ್ಭದಲ್ಲಿ ಮಾತ್ರವೇ ಬೆಳಕಿಗೆ ಬಂದಿತ್ತು. ಮಧ್ಯಮಗಳೂ ತನ್ನ ನೈತಿಕತೆಯನ್ನು ಕಳೆದುಕೊಂಡು ಟಿ.ಆರ್.ಪಿ. ಗೋಸ್ಕರವೇ ಹಸಿವು, ಬಾಯಾರಿಕೆ, ಬಡತನವನ್ನು ಮುನ್ನೆಲೆಗೆ ತಂದು ತೋರಿಸಿದವು. ಆದರೆ ಭಾರತದ ನಿತ್ಯದ ಸ್ಥಿತಿ ಇದು ಎಂದು ಕೊರೊನಾ ಬರುವುದಕ್ಕೆ ಮುಂಚೆ ಮತ್ತು ಕೊರೊನಾ ನಂತರ ಸೊಲ್ಲೆತ್ತುತ್ತಿಲ್ಲ. ಏಕೆಂದರೆ ಇವು ಮಾಧ್ಯಮಗಳಿಗೆ ಗಂಭೀರ ವಿಷಯಗಳಾಗಿ ಕಾಣುವುದೇ ಇಲ್ಲ. ಮಾಧ್ಯಮದವರನ್ನು ತಣ್ಣಗೆ ಪ್ರಶ್ನಿಸುವ ಕವಿಯ ಮಾತು ಕಾಡುತ್ತವೆ.

ನಡೆದೂ ನಡೆದು ಬಿರುಕು ಬಿಟ್ಟ
ಪಾದಗಳಲ್ಲಿ ಒಸರುವ
ರಕ್ತ ಅಂಟಿ ಮುಟ್ಟಾದ ರಸ್ತೆಗಳು
ಕಾಣುವುದಿಲ್ಲ ಅವರಿಗೆ

ಕೊರೊನಾ ಸಂದರ್ಭದಲ್ಲಿ ಊರಿಗೆ ಹೋಗುವ ಧಾವಂತದಲ್ಲಿ ದುರಂತಕ್ಕೀಡಾದವರ ಪ್ರತಿಯೊಂದು ಘಟನೆಯೂ ಇಲ್ಲಿ ಕವಿತೆಗಳಾಗಿವೆ. ದಾರಿ ತಪ್ಪಬಾರದೆಂದು ರೈಲು ಹಳಿಯ ಹಿಡಿದು ಹೊರಟ ಮುಗ್ಧ ಜನಗಳು ದೇಶದೆಲ್ಲೆಡೆ ಸಾರ್ವಜನಿಕ ಸಮಚಾರ ನಿರ್ಬಂಧವಾಗಿರುವಾಗ ಈ ಹಳಿಯಮೇಲೆ ಒಂದಿಷ್ಟು ಹೊತ್ತು ವಿರಮಿಸೋಣವೆಂದು ಮಲಗಿರುತ್ತಾರೆ. ದುರಾದೃಷ್ಟವಶಾತ್ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದವರು ಶವಗಳಾಗುತ್ತಾರೆ. ಅವರ ಪಕ್ಕವೇ ಬಿದ್ದಿದ್ದ ರೊಟ್ಟಿ ಚೂರುಗಳು, ರಕ್ತಸಿಕ್ತ ಮಾಂಸದ ತುಂಡುಗಳಾದ ಅಮಾಯಕ ಹೆಂಗಸರು ಮಕ್ಕಳು ಇಡೀ ದೇಶವನ್ನು ಮರುಗುವಂತೆ ಮಾಡುತ್ತವೆ. ಇವಕ್ಕೆಲ್ಲ ಕಾರಣ ಯಾರು? ಅವರ ಜೀವಗಳಿಗೆ ಯಾರು ಹೊಣೆ? ಇಲ್ಲಿ ಪ್ರಭುತ್ವ ತುಟಿ ಬಿಚ್ಚುವುದಿಲ್ಲ.

ದಾರಿ ತಪ್ಪಬಾರದೆಂದು
ರೈಲು ಹಳಿಯ ಜಾಡು ಹಿಡಿದರು
ರಾತ್ರಿಯಾದಾಗ ಅಲ್ಲೆ ಮಲಗಿದರು
ರೈಲುಗಳ ಓಡಾಟ ಇಲ್ಲವೆಂಬ ಖಾತ್ರಿ ಅವರಿಗೆ
ಕನಸಿನಲ್ಲಿ ಗೂಡ್ಸ್ ರೈಲು ಬಂದು
ಪ್ರಾಣ ಪಕ್ಷಿಗಳನ್ನು ತುಂಬಿಕೊಂಡು ಹೋಯಿತು

ಕೊನೆಗೂ ಆ ತಿರುಕರ
ಮುರುಕು ರೊಟ್ಟಿ, ಹರುಕು ಚಪ್ಪಲಿ
ಚೂರುಪಾರು ಕನಸುಗಳು
ಅನಾಥವಾಗಿ ಬಿದ್ದಿದ್ದವು.

ಇಂಥ ಸಾವಿರ ಸಾವಿರ ಘಟನೆಗಳು ನಡೆದುಹೋದವು. ಸುದ್ದಿ ಆದದ್ದು ಕೆಲವು. ಸುದ್ದಿಯಾಗದೇ ಉಳಿದವು ಹಲವು ಇದ್ದವು. ಕೊರೊನಾ ಸೃಷ್ಟಿಸಿದ ಅವಾಂತರಗಳು ಕೆಲವೊಮ್ಮೆ ನಿದ್ದೆಗೆಡಿಸುತ್ತವೆ. ಬದುಕು ಇಷ್ಟೊಂದು ಕ್ರೂರಿಯೇ ಎಂದು. ಬದುಕಿನ ಹಾದಿಯಲ್ಲಿ ಎದುರಾಗುವ ಸೋಜಿಗಗಳನ್ನು ಊಹಿಸಬಲ್ಲವರಾರು ಎಂದು ಬರೆಯುವ ಕವಿಗೆ ಇಂಥ ಘಟನೆಗಳು ತಲ್ಲಣವನ್ನುಂಟುಮಾಡಿವೆ.

ಜಾಮ್ಲೋ ಬಾಲಕಿಯೊಬ್ಬಳ ಬದುಕುವ ಛಲ ಇನ್ನೇನು ಬೆರಗುಹುಟ್ಟಿಸಿತು ಎನ್ನುವಾಗ ಆಕೆ ಅಸುನೀಗುತ್ತಾಳೆ. ಅವಳ ಮುಗ್ಧತೆ, ಬದುಕಿನ ಕುರಿತ ಪ್ರೀತಿ, ಛಲ, ಗಟ್ಟಿತನ ಆಕೆ ಇಲ್ಲದಿದ್ದರೂ ಬದುಕುವವರಿಗೆ ಕಸುವನ್ನು ನೀಡುತ್ತವೆ.

ಜಾಮ್ಲೋ ಎಂಬ
ಹನ್ನೆರಡು ವರ್ಷದ ಬಾಲಕಿ
ಚತ್ತೀಸಗಡದಿಂದ ತೆಲಂಗಾಣಕ್ಕೆ
ಮೆಣಸಿನ ಕಾಯಿ ಕುಯ್ಲಿಗೆ
ಪಾಲಕರೊಂದಿಗೆ ಬರುತ್ತಾಳೆ.

ಲಾಕ್ ಡೌನ್ ಆಗುತ್ತದೆ
ಮರಳಿ ಊರಿಗೆ ಕಾಲ್ನಡಿಗೆಯಲ್ಲಿ
ಸತತ ಮೂರುದಿನ ದಾರಿ ಸವೆಸುತ್ತಾಳೆ
ಅವಳ ಎಳೆಯ ಸ್ನಾಯುಗಳು
ಸವೆಯುತ್ತವೆ

ಇನ್ನೇನು ಮನೆ ತಲುಪಲು
ಹನ್ನೊಂದು ಕಿ.ಮೀ ಇದೆ
ಅನ್ನುವಾಗ ಕುಸಿದುಬಿದ್ದು
ಸಾಯುತ್ತಾಳೆ

ಇಂಡಿಯಾ ದೇಶದಲ್ಲಿ
“All is well” ಎಲ್ಲಾ ಸರಿಯಿದೆ
ಎಂದು ಯಾರಾದರೂ ಹೇಳಿದರೆ
ಅವನಂಥ ಅಸೂಕ್ಷ್ಮಮತಿ
ಮತ್ತೊಬ್ಬನಿಲ್ಲ ಎಂದೇ ತಿಳಿಯಬೇಕು

ಇಂಥ ಘಟನೆಗಳು ಮನುಷ್ಯನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಕಂಡು ಮರುಗುವಂತೆ ಮಾಡುತ್ತವೆ. ಸಾಮಾಜಿಕ ಕಳಂಕವಾಗಿರುವ ಅಸ್ಪೃಶ್ಯತೆಯನ್ನು ಪೋಷಿಸಲು ಪಟ್ಟಭದ್ರ ಹಿತಾಸಕ್ತಿಗಳು ಕೊರೊನಾವನ್ನು ಬಳಸಿಕೊಂಡದ್ದೂ ಸುದ್ದಿಯಾಯಿತು. ಇಲ್ಲೂ ಜಾತಿಯೇ ಮೇಲುಗೈ ಸಾಧಿಸಿತು.

ಮುಟ್ಟಿಸಿಕೊಳ್ಳದಿರುವುದು
ಸಾಮಾಜಿಕ ಕಳಂಕವಾಗಿತ್ತು
ಕೊರೊನಾ ಕಾರಣ ಅದನ್ನು
ಸಾಮಾಜಿಕ ಅಂತರ ಎಂದು ಪರಿವರ್ತಿಸಲು
ಪಟ್ಟಭದ್ರರು ಪ್ರಯತ್ನಿಸಿದರು

ಒಂದು ಕೆಟ್ಟ ಅಮಾನವೀಯ
ಜಾತಿ ಮನೋ ವಿಕಾರವನ್ನು
ಸತ್ಸಂಪ್ರದಾಯ ಎಂದು ಕರೆದು
ನಮ್ಮ ಗಾಯಗಳ ಮೇಲೆ
ಬರೆ ಎಳೆದರು

ಜಾತಿಯಿಂದ ನಲುಗಿರುವ ಮನಸ್ಸುಗಳನ್ನು ಮತ್ತಷ್ಟು ದೂರವಿಟ್ಟು ಗಾಯದ ಮೇಲೆ ಬರೆ ಎಳೆದರು ಎನ್ನುವ ಕವಿಯ ಕಣ್ಣುಗಳಲ್ಲಿ ಜಾತಿಯ ಕುರಿತು ಸಾಗರದಷ್ಟು ನೋವಿನ ಹನಿಗಳಿವೆ. ‘ಗಡ್ಡಧಾರಿ ವಕೀಲರೊಬ್ಬರನ್ನು ಚೆನ್ನಾಗಿ ಥಳಿಸಿದ ಮೇಲೆ ಮುಸ್ಲಿಮನೆಂದು ತಿಳಿದು ಹೊಡೆದುಬಿಟ್ಟೆವು ಎಂದು ತಪ್ಪೊಪ್ಪಿಕೊಳ್ಳಲಿಲ್ಲವೆ ಪೋಲಿಸರು’ ಎಂದು ಬರೆಯುವ ಕವಿ ಧರ್ಮದ ಕುರುಹಿನಿಂದ ಗುರುತಿಸುವ ಪೋಲಿಸ್ ವ್ಯವಸ್ಥೆಯ ಕರಾಳಮುಖವನ್ನೂ ಪರಿಚಯಿಸುತ್ತಾರೆ. ಇಡೀ ಕವನಸಂಕಲನದುದ್ದಕ್ಕೂ ಪೊಲೀಸ್ ವ್ಯವಸ್ಥೆಯನ್ನು ಕಂಡು ಹೇಸುವ ಮತ್ತು ಕಿಡಿಕಾರುವ ಕವಿಗೆ ಅವರ ಬಗ್ಗೆ ಅಸಹನೆ ಇದೆ. ಕರ್ತವ್ಯದ ಪ್ರಶ್ನೆ ಬಂದಾಗಲೂ ಮಾನವೀಯತೆಯಿಂದಲೇ ವರ್ತಿಸಬೇಕು ಎಂಬ ಆಶಯ ಕವಿಯದ್ದು.

ಅಟ್ಟಾ ತರಲು
ಅಂಗಡಿಗೆ ಹೊರಟಿದ್ದ ಶ್ರಮಿಕನೊಬ್ಬನಿಗೆ ಪೇದೆ
ಲಾಠಿಯಿಂದ ಹೊಡೆದ

ಹಿಂದಿರುಗುವಾಗ ಅವನ
ಕೈ ಚೀಲದಲ್ಲಿ ಗೋಧಿ ಹಿಟ್ಟು
ಸೊಪ್ಪು ತರಕಾರಿಗಳಿದ್ದವು

ಅರ್ಧ ತಾಸು ಕಳೆದ ಮೇಲೆ
ಆತ ರೊಟ್ಟಿ ಪುಂಡಿ ಪಲ್ಲೆ ತಂದು
ತಗೋ, ತಿನ್ನು ಬೆಳಗಿನಿಂದಲೂ
ಕಾಯುತ್ತಿದ್ದೀಯ ಅಂದ

ಪೇದೆಯ ಕಣ್ಣಲ್ಲಿ ನೀರು ಜಿನುಗಿತು.

ಹೀಗೆ ಪೊಲೀಸರು ಕರ್ತವ್ಯದ ಹೆಸರಿಲ್ಲಿ ನಡೆಸಿದ ಕ್ರೌರ್ಯದ ಕುರಿತ ಅನೇಕ ಕವಿತೆಗಳಿವೆ. ‘ತನುವಿನೊಳಗನುದಿನವಿದ್ದು ನಿನ್ನ ಮನಕ್ಕೊಂದು ಮಾತು ಹೇಳದೆ ಹೋದೆ ಹಂಸ’ ಎಂಬ ತತ್ವಪದವನ್ನು ನೆನಪಿಸುವ ಕವಿತೆಯಲ್ಲಿ ಅಮಾಯಕ ತಾಯಿ ಮಗುವಿನ ದಾರುಣ ಚಿತ್ರಣವಿದೆ.

ರೈಲು ನಿಲ್ದಾಣದಲ್ಲಿ
ಕೂಸನ್ನು ಮಡಿಲೊಳಗಿಟ್ಟುಕೊಂಡು
ಮಲಗಿದಳು ತಾಯಿ
ಅದೆಷ್ಟು ದಿನದಿಂದ ನಡೆದು ನಡೆದು
ದಣಿದಿದ್ದಳೋ, ಉಂಡಿದ್ದಳೋ
ಇಲ್ಲವೋ ನಿದ್ದೆಗೆ ಜಾರಿದಳು

ಬೆಳಗಾಯಿತು ಎಚ್ಚರಗೊಂಡು ಇದ್ದ ಕೂಸು
ಅವ್ವಳ ಎಬ್ಬಿಸಲು
ಮುಖದ ಮೇಲಿನ ಹೊದಿಕೆಯ ಹಿಡಿದೆಳೆದು
ಗುಮ್ಮನ ಆಟವಾಡುತ್ತಿತ್ತು

ಪಾಪ ಅನುದಿನವೂ
ಮಡಿಲೊಳಗಿದ್ದ ಕಂದಮ್ಮನಿಗೆ
ಒಂದು ಮಾತ ಹೇಳದೆ
ಆ ತಾಯಿ ಜೀವದ ಹಂಸೆ
ಹಾರಿಹೋಗಿತ್ತು.

ಇವೆಲ್ಲ ನಿಜವಾಗಿ ನಡೆದ ಘಟನೆಗಳು. ಒಂದೊಂದು ಕವಿತೆಯೂ ಕೊರೊನಾ ಸಂದರ್ಭದ ಕರಾಳ ದಿನಗಳನ್ನು ನೆನಪಿಸುತ್ತವೆ. ಜಾಗಟೆ ಬಾರಿಸಿ ಎಂದ, ಕರೆಂಟು ಸ್ಥಗಿತಗೊಳಿಸಿ ದೀಪ ಹಚ್ಚಿ ಎಂದು ಜನರನ್ನು ದಿಕ್ಕೆಡಿಸಿದ ಪ್ರಭುತ್ವದ ಕುರಿತು ವ್ಯಂಗ್ಯ ಮಾಡುವ ಕವಿಗೆ ಹಸಿವು, ಬಾಯಾರಿಕೆ, ಸೂರು ಮತ್ತು ಮೂಲಭೂತ ಸೌಕರ್ಯಗಳಷ್ಟೇ ಮುಖ್ಯವಾಗಿವೆ. ಉದ್ಯೋಗ ಸೃಷ್ಟಿಸದ ವ್ಯವಸ್ಥೆಯ ಬಗ್ಗೆಯೂ ಅಸಹನೆಯಿದೆ. ‘ಕ್ಯಾಶ್ ಲೆಸ್’ ದೇಶವಾಗುತ್ತಿರುವ ದೇಶ ‘ಕ್ಯಾಸ್ಟ್ ಲೆಸ್’ ಭಾರತವಾಗುವುದು ಯಾವಾಗಲೆಂದು ಒಮ್ಮೆ ಪ್ರಶ್ನಿಸಿದ್ದರು. ‘ದೇವರ ಬಗೆಗಿನ ಅಭಿಪ್ರಾಯವನ್ನು ಮನುಷ್ಯ ಕೊಂಚವಾದರೂ ಬದಲಾಯಿಸಿಕೊಳ್ಳದಿರುವುದು ನನ್ನಲ್ಲಿ ನಿರಾಶೆ ಹುಟ್ಟಿಸಿದೆ..!’ ಎನ್ನುವ ಕವಿಗೆ ಕೊರೊನಾ ಸೃಷ್ಟಿಸಿದ ಇಂಥ ಮಿಥ್‌ಗಳ ಕುರಿತೂ ಸಾಕಷ್ಟು ಅಸಹನೆಯಿದೆ. ಮತ್ತು ಆಶ್ಚರ್ಯವೂ ಆಗಿದೆ. ಕೊರೊನಾ ಸಂದರ್ಭದ ಅನೇಕ ಪಾರಿಭಾಷಿಕ ಪದಗಳಿಗೆ ಕನ್ನಡದ ಪದಗಳನ್ನು ಜೋಡಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎನಿಸಿತು. ಲಾಕ್‌ಡೌನ್ – ಬೀಗಜಡಿತ, ಕ್ವಾರಂಟೈನ್ – ಕ್ವಾರಣ್ಯವಾಸ, ಪಿ.ಪಿ.ಇ ಕಿಟ್ – ಸುರಕ್ಷಾ ಪೋಷಾಕು, ಎಸ್ಕಲೇಟರ್ – ಚರಮೆಟ್ಟಿಲು ಇತ್ಯಾದಿ. ಇವರ ಸಮಗ್ರ ಕಾವ್ಯವನ್ನು ಓದಿದಮೇಲೆ ಇತ್ತೀಚಿನ ಈ ಕವಿತೆಗಳನ್ನು ಓದಿದವರಿಗೆ ಸಪ್ಪೆ ಎನಿಸಿದರೂ ಕೊರೊನಾ ಸಂದರ್ಭದ ತಲ್ಲಣಗಳು, ಆತಂಕಗಳು, ಬದುಕಿನ ಕುರಿತ ನಶ್ವರತೆಗಳ ಬಗ್ಗೆ ಕವಿಯೊಬ್ಬನ ಮನಸ್ಸಿನಲ್ಲಾಗುವ ನಿರಂತರ ತೊಳಲಾಟಗಳನ್ನು ಇಂಥ ಕಾವ್ಯದ ಮೂಲಕ ಪ್ರಕಟಿಸಿದ್ದು ಅಭಿನಂದನರ್ಹವೇ. ಕಾವ್ಯ ಸರಳವಾದಷ್ಟೂ ಸತ್ವ ಕಡಿಮೆ, ಕ್ಲಿಷ್ಟವಾದಷ್ಟೂ ಸತ್ವ ಹೆಚ್ಚು ಎಂದು ಭಾವಿಸಬೇಕಿಲ್ಲ. ಇಂಥ ಹಂಗುಗಳನ್ನು ಮೀರಿದರೆ ಅದೇ ಕಾವ್ಯ. ಮೂಡ್ನಾಕೂಡು ಅವರಂಥ ಸೂಕ್ಷ್ಮಮತಿ ಕವಿ ನಮ್ಮೊಂದಿಗಿದ್ದು ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುತ್ತಿರುವುದು ಕಾವ್ಯಪ್ರೇಮಿಗಳ ಕಾವ್ಯಪ್ರೀತಿಯನ್ನು ಉದ್ದೀಪಿಸುತ್ತಿರುವುದರಲ್ಲಿ ಸಂಶಯವಿಲ್ಲ. ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅವರಿಗೆ ಅಭಿನಂದನೆಗಳು.