ನನ್ನ ಬಾಲ್ಯದ ನೆನಪುಗಳಿಂದ ಈ ಸದ್ದುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಇವೆಲ್ಲ ಬೇರೆ ಬೇರೆ ಋತುಗಳಿಗೆ ಸಂಬಂಧಿಸಿದವು. ಅವು ತಣ್ಣಗೆ, ಬೆಚ್ಚಗೆ, ಬಿಸಿಯಾಗಿ ಇಲ್ಲವೇ ತಂಪಾಗಿರುತ್ತಿದ್ದ ಸದ್ದುಗಳು. ಖುಷಿಯ ಸದ್ದುಗಳು, ಒಂಟಿತನದ ಸದ್ದುಗಳು, ನೋವಿನ ಸದ್ದುಗಳು, ಭಯದ ಸದ್ದುಗಳು – ಹೀಗೆ ಅವುಗಳ ಹಿಂದೆ ಹಲವುಬಗೆಯ ಭಾವನೆಗಳ ಸಂದಣಿಯಿದೆ. ನಂಗೆ ಬೆಂಕಿ ಕಂಡರೆ ಆಗಲ್ಲ. ಹಾಗಾಗಿ ಅಗ್ನಿಶಾಮಕ ವಾಹನದ ಎಚ್ಚರಿಕೆಯ ಗಂಟೆಯ ಸದ್ದು, ಅಗ್ನಿಶಾಮಕದಳದವನ ಸದ್ದು, ಬೆಂಕಿ ಹೊತ್ತಿಕೊಂಡಲ್ಲಿ ಬಾರಿಸುತ್ತಿದ್ದ ಡೋಲಿನ ಸದ್ದುಗಳನ್ನು ಕೇಳಿದರೆ ಅಸಾಧ್ಯ ಭಯವಾಗುತ್ತಿತ್ತು
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಏಳನೆಯ ಅಧ್ಯಾಯ.

 

ತಾಯ್ಶೋ ಯುಗದ ಆರಂಭದಲ್ಲಿ ಅಂದರೆ 1912 ಹಾಗೂ ಆ ನಂತರದ ವರ್ಷಗಳಲ್ಲಿ ಕೂಡ ಮೆಜಿ ಯುಗದ ಕಂಪಿನ್ನೂ ಉಳಿದಿತ್ತು. ನಾವು ಪ್ರೈಮರಿ ಶಾಲೆಯಲ್ಲಿ ಹಾಡುತ್ತಿದ್ದ ಹುರಿದುಂಬಿಸುವಂತಹ ಹಾಡುಗಳಲ್ಲೂ ಈ ಪ್ರಭಾವವನ್ನು ಕಾಣಬಹುದಿತ್ತು. ಇವತ್ತಿಗೂ ನಂಗಿಷ್ಟವಾದ ಎರಡು ಹಾಡುಗಳು “The Battle of the Japan Sea”, “The Naval Barracks”. ಇವುಗಳ ಸಾಹಿತ್ಯ ಮುಕ್ತವಾಗಿತ್ತು, ರಾಗಗಳು ಸರಳವಾಗಿತ್ತು, ಘಟನೆಗಳನ್ನು ನೇರವಾಗಿ, ಸಂಗ್ರಹವಾಗಿ ನಿರೂಪಿಸಿರುತ್ತಿದ್ದರು. ಯಾವುದೇ ರೀತಿಯ ಅನಾವಶ್ಯಕ ಭಾವುಕತೆ ಈ ಹಾಡುಗಳಲ್ಲಿ ಇರಲಿಲ್ಲ. ನನ್ನ ಸಹ ನಿರ್ದೇಶಕರಿಗೆ ಸಿನೆಮಾದ ಶೂಟಿಂಗ್ ಸ್ಕ್ರಿಪ್ಟ್ ಹೀಗಿರಬೇಕು ಅಂತ ಈ ಹಾಡುಗಳ ಉದಾಹರಣೆ ನೀಡುತ್ತಿದ್ದೆ. ಈ ಹಾಡುಗಳನ್ನು ಮಾದರಿಯಾಗಿಟ್ಟುಕೊಂಡು ಬರವಣಿಗೆಯನ್ನ ಅಭ್ಯಾಸ ಮಾಡಿ ಅಂತ ಅವರನ್ನು ಹುರಿದುಂಬಿಸುತ್ತಿದ್ದೆ. ಈಗಲೂ ಇದು ಬಹಳ ಒಳ್ಳೆಯ ವಿಧಾನ ಅಂತನ್ನಿಸುತ್ತದೆ.

ಶಿಬ ಅನಿವೈತಾನುವೊ ತನ್ನ ಬೆಟ್ಟಗಳ ಮೇಲಿನ ಮೋಡಗಳು ಅನ್ನೋ ಕಾದಂಬರಿಯಲ್ಲಿ ವರ್ಣಿಸಿರುವಂತೆಯೇ ಮೆಜಿ ಯುಗದ ಜನರಿದ್ದರು ಅಂತಲೇ ನಂಬುತ್ತೇನೆ. ಅವರ ಬದುಕಿನ ನೋಟ ಅವರು ಹತ್ತುತ್ತಿದ್ದ ಬೆಟ್ಟದ ಮೇಲಿನ ಮೋಡಗಳಲ್ಲೇ ನೆಟ್ಟಿರುತ್ತಿತ್ತು.

ಒಂದು ದಿನ ಪ್ರೈಮರಿ ಶಾಲೆಯಲ್ಲಿದ್ದಾಗ ನಮ್ಮಪ್ಪ ನನ್ನನ್ನೂ ನನ್ನಕ್ಕನನ್ನೂ ಟೊಯಾಮಾ ಆರ್ಮಿ ಅಕಾಡೆಮಿಗೆ ಕರೆದುಕೊಂಡು ಹೋದರು. ಅಲ್ಲಿನ ಬಟ್ಟಲಿನಾಕಾರದಲ್ಲಿದ್ದ ಬಯಲು ರಂಗಮಂದಿರದಲ್ಲಿ ಕೂತೆವು. ಅಲ್ಲಿ ಹುಲ್ಲು ಚಿಗುರಿದ್ದ ಮೆಟ್ಟಿಲುಗಳೇ ಬೆಂಚುಗಳು. ತಳದಲ್ಲಿ ನಿಂತ ಮಿಲಿಟರಿ ತಂಡ ಕಛೇರಿ ನಡೆಸಿಕೊಟ್ಟಿತು.

(ತಾಯ್ಶೋ )

ಈಗ ಹಿಂತಿರುಗಿ ನೋಡಿದಾಗ ಅದು ಮೆಜಿ ಯುಗದ ದೃಶ್ಯದಂತೆ ಕಾಣಿಸುತ್ತಿದೆ. ಆ ತಂಡದ ಸದಸ್ಯರು ಕೆಂಪು ಪ್ಯಾಂಟುಗಳನ್ನು ತೊಟ್ಟುಕೊಂಡಿದ್ದರು. ಅವರ ತಾಮ್ರದ ವಾದ್ಯಗಳು ಬಿಸಿಲಿನಲ್ಲಿ ಹೊಳೆಯುತ್ತಿತ್ತು. ಸುತ್ತಲಿದ್ದ ಉದ್ಯಾನದಲ್ಲಿ ಅರಳಿದ್ದ ಅಜೆಲಿಯಸ್ ಹೂಗಳು ಬಹಳ ಸುಂದರವಾಗಿದ್ದವು. ಹೆಂಗಸರು ಗಾಢ ಬಣ್ಣದ ಪುಟ್ಟ ಛತ್ರಿಗಳನ್ನು ಹಿಡಿದಿದ್ದರು. ಗಾಳಿವಾದ್ಯದ ನಿನಾದ ಅದೆಷ್ಟು ಸುಮಧುರವಾಗಿತ್ತೆಂದರೆ ಪಾದಗಳು ತಾಳಕ್ಕೆ ತಕ್ಕಂತೆ ತಟ್ಟುತ್ತಿದ್ದದ್ದನ್ನು ತಡೆಯಲು ಸಾಧ್ಯವೇ ಇರಲಿಲ್ಲ. ನಾನಾಗ ಪುಟ್ಟ ಹುಡುಗ. ಹಾಗಾಗಿ ಮಿಲಿಟರಿಯಿಸಂನ ಕರಾಳತೆ ಕಾಣಲಿಲ್ಲ. 1926, ತಾಯ್ಶೋ ಯುಗದ ಅಂತ್ಯದ ವೇಳೆಗೆ ಜನಪ್ರಿಯ ಹಾಡುಗಳ ತುಂಬೆಲ್ಲ ಹತಾಶೆಯ ವೈಭವೀಕರಣವೇ ಕಾಣುತ್ತಿತ್ತು. ಆ ಹಾಡುಗಳಲ್ಲಿ ಕೆಲವು – “I am But a Withered Pampas Grass in the Riverbed”, “Floating Downstream”, “When Evening Darkness Closes in”.

ಹುಡುಗನಾಗಿದ್ದಾಗ ಕೇಳುತ್ತಿದ್ದ ಸದ್ದುಗಳು ಈಗ ಕೇಳುತ್ತಿರುವ ಸದ್ದುಗಳಿಗಿಂತ ಸಂಪೂರ್ಣ ಬೇರೆ. ಮೊದಲಿಗೆ ಆ ಕಾಲದಲ್ಲಿ ಯಾವುದೇ ಬಗೆಯ ವಿದ್ಯುತ್ ಚಾಲಿತ ಸದ್ದಿರಲಿಲ್ಲ. ಫೋನೋಗ್ರಾಫ್ ಗಳು ಕೂಡ ವಿದ್ಯುತ್ ಚಾಲಿತವಾಗಿರಲಿಲ್ಲ. ಎಲ್ಲವೂ ನೈಸರ್ಗಿಕ ಸದ್ದುಗಳಾಗಿದ್ದವು. ಆ ಸದ್ದುಗಳಲ್ಲಿ ಹಲವು ಈಗ ಇಲ್ಲವೇ ಇಲ್ಲ. ಕೆಲವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮಧ್ಯಾಹ್ನದ ಹೊತ್ತಲ್ಲಿ ಕೇಳುತ್ತಿದ್ದ “ಪ್ರತಿಧ್ವನಿ”ಗಳು. ಅದು ಕುಡಾನ್ ಸುಶಿ ಏ ಫುಚಿಯ ಸೈನಿಕರ ಮನೆಗಳ ಹತ್ತಿರ ಮಧ್ಯಾಹ್ನದ ಹೊತ್ತು ಹಾರಿಸುತ್ತಿದ್ದ ತೋಪಿನ ಸದ್ದು.

ಶಿಬ ಅನಿವೈತಾನುವೊ ತನ್ನ ಬೆಟ್ಟಗಳ ಮೇಲಿನ ಮೋಡಗಳು ಅನ್ನೋ ಕಾದಂಬರಿಯಲ್ಲಿ ವರ್ಣಿಸಿರುವಂತೆಯೇ ಮೆಜಿ ಯುಗದ ಜನರಿದ್ದರು ಅಂತಲೇ ನಂಬುತ್ತೇನೆ. ಅವರ ಬದುಕಿನ ನೋಟ ಅವರು ಹತ್ತುತ್ತಿದ್ದ ಬೆಟ್ಟದ ಮೇಲಿನ ಮೋಡಗಳಲ್ಲೇ ನೆಟ್ಟಿರುತ್ತಿತ್ತು.

ಬೆಂಕಿ ಅಪಾಯವನ್ನು ಸೂಚಿಸುತ್ತಿದ್ದ ಗಂಟೆಯ ಸದ್ದು. ಅಗ್ನಿಶಾಮಕದ ಕಾವಲುಗಾರನ ಮರದ ಚಿಟಿಕೆಯ ಸದ್ದು. ನೆರೆಹೊರೆಯಲ್ಲಿ ಎಲ್ಲಾದರೂ ಬೆಂಕಿ ಅನಾಹುತ ಸಂಭವಿಸಿದರೆ ಡೋಲು ಬಾರಿಸುತ್ತಾ ಎಚ್ಚರಿಸುತ್ತಿದ್ದ ಆತನ ಧ್ವನಿ. ತೋಫು (ಸೋಯಾ ಹಾಲಿನಿಂದ ಮಾಡಿದ ತಿಂಡಿ) ಮಾರಲು ಬರುತ್ತಿದ್ದವನ ಪೀಪಿಯ ಸದ್ದು. ತಂಬಾಕು ಸೇದಲು ಬಳಸುತ್ತಿದ್ದ ಪೈಪು ರಿಪೇರಿ ಮಾಡಲು ಬರುತ್ತಿದ್ದವನ ಸಿಳ್ಳೆಯ ಸದ್ದು. ಗಾಳಿಗೆ ತೊನೆಯುತ್ತ ಸದ್ದುಮಾಡುತ್ತಿದ್ದ ಅಲಂಕಾರಿಕ ಗಂಟೆಗಳನ್ನು ಮಾರುತ್ತ ಬರುತ್ತಿದ್ದವನ ಸದ್ದು. ಮುರಿದ ಮರದ ಶೂಗಳ ರಿಪೇರಿ ಮಾಡಲು ಬರುತ್ತಿದ್ದವನು ಮಾಡುತ್ತಿದ್ದ ಚಿಟಿಕೆ ಸದ್ದು. ಸನ್ಯಾಸಿಗಳು ಸೂತ್ರಗಳನ್ನು ಹೇಳುತ್ತಾ ಬಾರಿಸುತ್ತಿದ್ದ ಗಂಟೆಗಳ ಸದ್ದು. ಮಿಠಾಯಿ ಮಾರುವವ ಮಾಡುತ್ತಿದ್ದ ಸದ್ದು. ಅಗ್ನಿಶಾಮಕ ವಾಹನದ ಗಂಟೆಯ ಸದ್ದು. ಸಿಂಹದ ಕುಣಿತದ ದೊಡ್ಡ ಡೋಲಿನ ಸದ್ದು. ಕೋತಿ ಕುಣಿಸುವವನ ಢಮರುವಿನ ಸದ್ದು. ದೇವಸ್ಥಾನದಲ್ಲಿ ಬಾರಿಸುತ್ತಿದ್ದ ಮದ್ದಳೆಯ ಸದ್ದು. ನೀರನ್ನು ಮಾರಲು ಬರುತ್ತಿದ್ದವನು ಮಾಡುತ್ತಿದ್ದ ಸದ್ದು. ಸೋಯಾಹುರುಳಿಯಿಂದ ಮಾಡಿದ್ದ ತಿಂಡಿ ಮಾರಲು ಬರುತ್ತಿದ್ದವನ ಸದ್ದು. ಕೆಂಪು ಮೆಣಸನ್ನು ಮಾರಲು ಬರುತ್ತಿದ್ದವನ ಸದ್ದು. ಮೀನು ಮಾರುತ್ತಿದ್ದವನ ಸದ್ದು. ಬಟ್ಟೆ ಒಣಗಿಸಲು ಬಳಸುತ್ತಿದ್ದ ಬಿದಿರಿನ ಗಳಗಳನ್ನು ಮಾರಲು ಬರುತ್ತಿದ್ದವನು ಮಾಡುತ್ತಿದ್ದ ಸದ್ದು. ಕಾಳುಗಳನ್ನು ಮಾರಲು ಬರುತ್ತಿದ್ದವನು ಮಾಡುತ್ತಿದ್ದ ಸದ್ದು. ರಾತ್ರಿ ಹೊತ್ತು ನೂಡಲ್ಸ್ ಗಳನ್ನು ಮಾರಲು ಬರುತ್ತಿದ್ದವನ ಸದ್ದು. ಒಡೆನ್ ತಿಂಡಿ ಮಾರಲು ಬರುತ್ತಿದ್ದವನ ಸದ್ದು. ಬೇಯಿಸಿದ ಗೆಣಸನ್ನು ಮಾರಲು ಬರುತ್ತಿದ್ದವನ ಸದ್ದು. ಚಾಕುಚೂರಿ ಹರಿತ ಮಾಡಲು ಬರುತ್ತಿದ್ದವನ ಸದ್ದು. ಕಲಾಯಿ ಹಾಕಲು ಬರುತ್ತಿದ್ದವನ ಸದ್ದು. ನೀಲಿ ಹೂಗಳ ಗಿಡಗಳನ್ನು ಮಾರಲು ಬರುತ್ತಿದ್ದವನ ಸದ್ದು. ಮೀನಿನ ತಿಂಡಿಗಳನ್ನು ಮಾರುತ್ತಿದ್ದವನ ಸದ್ದು. ಸಣ್ಣ ಮೀನುಗಳನ್ನು ಮಾರುತ್ತಿದ್ದವನ ಸದ್ದು. ಬೇಯಿಸಿದ ಹುರುಳಿ ಮಾರುತ್ತ ಬರುತ್ತಿದ್ದವನ ಸದ್ದು. ಕೀಟನಾಶಕಗಳನ್ನು ಮಾರುತ್ತಿದ್ದವನು ಕೂಗುತ್ತಿದ್ದ ಸದ್ದು : “ಜಿರಳೆ, ಸೊಳ್ಳೆ, ತಿಗಣೆಗಳಿಗೆ ರಾಮಬಾಣ”. ಗಾಳಿಪಟಗಳ ಸದ್ದು. ಶಟಲ್ ಕಾಕ್ ಆಡುವಾಗಿನ ಸದ್ದು. ಚೆಂಡಿನೊಂದಿಗೆ ಆಡುತ್ತ ಗುನುಗುತ್ತಿದ್ದ ಹಾಡುಗಳು. ಮಕ್ಕಳ ಹಾಡುಗಳು.

(20th century Fox studios open set)

ನನ್ನ ಬಾಲ್ಯದ ನೆನಪುಗಳಿಂದ ಈ ಸದ್ದುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಇವೆಲ್ಲ ಬೇರೆ ಬೇರೆ ಋತುಗಳಿಗೆ ಸಂಬಂಧಿಸಿದವು. ಅವು ತಣ್ಣಗೆ, ಬೆಚ್ಚಗೆ, ಬಿಸಿಯಾಗಿ ಇಲ್ಲವೇ ತಂಪಾಗಿರುತ್ತಿದ್ದ ಸದ್ದುಗಳು. ಖುಷಿಯ ಸದ್ದುಗಳು, ಒಂಟಿತನದ ಸದ್ದುಗಳು, ನೋವಿನ ಸದ್ದುಗಳು, ಭಯದ ಸದ್ದುಗಳು – ಹೀಗೆ ಅವುಗಳ ಹಿಂದೆ ಹಲವುಬಗೆಯ ಭಾವನೆಗಳ ಸಂದಣಿಯಿದೆ. ನಂಗೆ ಬೆಂಕಿ ಕಂಡರೆ ಆಗಲ್ಲ. ಹಾಗಾಗಿ ಅಗ್ನಿಶಾಮಕ ವಾಹನದ ಎಚ್ಚರಿಕೆಯ ಗಂಟೆಯ ಸದ್ದು, ಅಗ್ನಿಶಾಮಕದಳದವನ ಸದ್ದು, ಬೆಂಕಿ ಹೊತ್ತಿಕೊಂಡಲ್ಲಿ ಬಾರಿಸುತ್ತಿದ್ದ ಡೋಲಿನ ಸದ್ದುಗಳನ್ನು ಕೇಳಿದರೆ ಅಸಾಧ್ಯ ಭಯವಾಗುತ್ತಿತ್ತು. “ಢಂ, ಢಂ!! ಕಂದಾ ಜಿಲ್ಲೆಯ ಜೀನ್ಬೊಚೊನಲ್ಲಿ ಬೆಂಕಿ!!” ಈ ತರಹದ ಸದ್ದುಗಳು ಕೇಳಿಸಿದರೆ ಸಾಕು ಎಲ್ಲಾದರೂ ಬಚ್ಚಿಟ್ಟುಕೊಂಡುಬಿಡುತ್ತಿದ್ದೆ.

ನನ್ನ “ಕೊನ್ಬೆಟೊ – ಸ್ಯಾನ್” ಅವಧಿಯಲ್ಲಿ ಒಮ್ಮೆ ನನ್ನಕ್ಕ ಮಧ್ಯರಾತ್ರಿಯಲ್ಲಿ “ಅಕಿರಾ, ಬೆಂಕಿಹೊತ್ತಿಕೊಂಡಿದೆ. ಬೇಗ ಎದ್ದೇಳು. ಬಟ್ಟೆಹಾಕಿಕೋ” ಅಂತ ಎಬ್ಬಿಸಿದ್ದಳು. ಪ್ಯಾಂಟನ್ನು ಎಳೆದುಕೊಳ್ಳುತ್ತಲೇ ಮುಂಬಾಗಿಲಿನ ಕಡೆ ಓಡಿದೆ. ನಮ್ಮ ಮನೆಯ ಗೇಟಿನ ಎದುರಿಗೆ ಮನೆಯೊಂದು ಹೊತ್ತಿಉರಿಯುತ್ತಿತ್ತು. ಅಷ್ಟೇ, ಆಮೇಲೆನಾಯಿತೋ ಗೊತ್ತಿಲ್ಲ.

ನನ್ನ ಬಾಲ್ಯದ ನೆನಪುಗಳಿಂದ ಈ ಸದ್ದುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಇವೆಲ್ಲ ಬೇರೆ ಬೇರೆ ಋತುಗಳಿಗೆ ಸಂಬಂಧಿಸಿದವು. ಅವು ತಣ್ಣಗೆ, ಬೆಚ್ಚಗೆ, ಬಿಸಿಯಾಗಿ ಇಲ್ಲವೇ ತಂಪಾಗಿರುತ್ತಿದ್ದ ಸದ್ದುಗಳು. ಖುಷಿಯ ಸದ್ದುಗಳು, ಒಂಟಿತನದ ಸದ್ದುಗಳು, ನೋವಿನ ಸದ್ದುಗಳು, ಭಯದ ಸದ್ದುಗಳು – ಹೀಗೆ ಅವುಗಳ ಹಿಂದೆ ಹಲವುಬಗೆಯ ಭಾವನೆಗಳ ಸಂದಣಿಯಿದೆ.

ಎಚ್ಚರವಾದಾಗ ಕಗುರಜಕ ಬೆಟ್ಟದಲ್ಲಿ ಒಬ್ಬನೇ ಹೋಗುತ್ತಿದ್ದೆ. ತಕ್ಷಣ ಮನೆಗೆ ಓಡಿಬಂದೆ. ಬೆಂಕಿ ಆರಿತ್ತು. ಆದರೆ ಬೆಂಕಿಹೊತ್ತಿದ್ದ ಪ್ರದೇಶದ ಹತ್ತಿರ ಹೋಗಲು ಯಾರನ್ನೂ ಬಿಡದೆ ಕಾವಲು ಕಾಯುತ್ತಿದ್ದ ಪೋಲಿಸರು ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. “ನಮ್ಮನೆ ಅಲ್ಲಿದೆ” ಅಂತ ಆ ದಿಕ್ಕಿನತ್ತ ಕೈಮಾಡಿ ತೋರಿಸಿದೆ. ಅವನು ನನ್ನತ್ತ ಆಶ್ಚರ್ಯದಿಂದ ನೋಡಿ ಹೋಗಲು ಬಿಟ್ಟ.

ಮನೆಯೊಳಗೆ ಬರುತ್ತಿದ್ದ ಹಾಗೆ ನಮ್ಮಪ್ಪ ನನ್ನ ಮೇಲೆ ಉರಿದುಬಿದ್ದರು. ನಾನೇನು ಮಾಡಿದೆ ಅಂತ ಅರ್ಥವಾಗದೆ ನನ್ನಕ್ಕನನ್ನು ಕೇಳಿದೆ. ನನ್ನಕ್ಕ “ಅಕಿರಾ! ಅಕಿರಾ!” ಅಂತ ಕೂಗುತ್ತಿದ್ದರೂ ಕೇಳಿಸಿಕೊಳ್ಳದೆ ಬೆಂಕಿ ಕಂಡ ತಕ್ಷಣ ಗೇಟಿನಿಂದಾಚೆ ಓಡಿ ಕತ್ತಲಲ್ಲಿ ಕರಗಿ ಹೋಗಿದ್ದೆ.

ಬೆಂಕಿಗೆ ಸಂಬಂಧಿಸಿದ ಮತ್ತೊಂದು ವಿಷಯ ನೆನಪಿದೆ: ಆಗೆಲ್ಲ ಈ ಅಗ್ನಿಶಾಮಕ ಸಾಧನಗಳನ್ನು ಕುದುರೆಗಾಡಿಗಳಲ್ಲಿ ಎಳೆದುಕೊಂಡು ಹೋಗುತ್ತಿದ್ದರು. ಆ ಗಾಡಿಗಳನ್ನು ಎಳೆಯುತ್ತಿದ್ದ ಕುದುರೆಗಳು ಬಹಳ ಸುಂದರವಾಗಿ ಇರುತ್ತಿದ್ದವು. ಆ ಗಾಡಿಗಳು, ಅವುಗಳಲ್ಲಿದ್ದ ಸಾಮಾನುಗಳನ್ನು ನೋಡಲು ಬಹಳ ಸೊಗಸಾಗಿರುತ್ತಿತ್ತು. ನಂಗೆ ಬೆಂಕಿ ಕಂಡರೆ ಆಗಲ್ಲ. ಆದರೆ ಆ ಗಾಡಿಗಳನ್ನ ಮತ್ತೆ ನೋಡಬೇಕು ಅಂತ ಬಹಳ ಆಸೆ ಇತ್ತು. ಈ ಆಸೆ ಸುಮಾರು ವರ್ಷಗಳ ನಂತರ ಈಡೇರಿತು. 20th century Fox studios open set ನಲ್ಲಿ ಇದನ್ನ ನೋಡಿದೆ. ಆ ಸೆಟ್ ಹಳೆಯ ನ್ಯೂಯಾರ್ಕ್ ನಗರವನ್ನ ಹೋಲುತ್ತಿತ್ತು. ಅಗ್ನಿಶಾಮಕ ಗಾಡಿಯನ್ನ ಚರ್ಚಿನ ಮುಂದೆ ಎಳೆದು ತರಲಾಯಿತು. ಅಲ್ಲಿ ಗುಂಪುಗುಂಪಾಗಿ ಲೈಲಾಕ್ ಹೂಗಳು ಅರಳಿದ್ದವು.

(ಮೀಯ್ ಜೀ ಅವಧಿಯ ಚಿತ್ರಣ)

ತಾಯ್ಶೋ ಯುಗದ ಸದ್ದುಗಳ ನೆನಪಿಗೆ ಹಿಂತಿರುಗುತ್ತೇನೆ. ಅವುಗಳೊಂದಿಗೆ ನನ್ನ ನೆನಪುಗಳು ಬೆಸೆದುಕೊಂಡಿವೆ. ನೀರನ್ನು ಮಾರಲು ಬರುತ್ತಿದ್ದವನ ಕ್ಷೀಣ ದನಿ ಕೇಳಿದಾಗ, ಅವನ ಪುಟ್ಟ ಮಗುವನ್ನು ನೋಡಿದಾಗ ಬದುಕಿನಲ್ಲಿ ನಾನೆಷ್ಟು ಅದೃಷ್ಟವಂತ ಅನ್ನಿಸುತ್ತಿತ್ತು. ಬೇಸಿಗೆಯ ಮಧ್ಯಾಹ್ನಗಳಲ್ಲಿ ಕೆಂಪುಮೆಣಸನ್ನು ಮಾರುವವನು ಬರೋಹೊತ್ತಿಗೆ ಸಿಕಾಡ ಕೀಟಗಳನ್ನು ಹಿಡಿಯಲು ಬಿದಿರಿನ ಕೋಲು ಹಿಡಿದು, ಓಕ್ ಮರದ ಮೇಲೆ ಹಾರುತ್ತಿದ್ದ ಅವುಗಳ ಚಲನೆಯನ್ನ ಗಮನಿಸುತ್ತ ನಿಂತಿರುತ್ತಿದ್ದೆ. ಗಾಳಿಪಟಗಳ ದನಿ ಕೇಳುವ ಹೊತ್ತಿಗೆ ನಕನೊಹಶಿ ಸೇತುವೆಯ ಮೇಲೆ ಚಳಿಗಾಲದ ಬಿರುಸು ಗಾಳಿಯ ನಡುವೆ ಗಾಳಿಪಟ ಹಾರಿಸುತ್ತಾ ನಿಂತಿರುವುದು ಕಾಣುತ್ತಿದೆ. ನನ್ನ ಗಾಳಿಪಟವನ್ನು ಹಾರಿಸಿಕೊಂಡು ದೂರಕ್ಕೊಯ್ಯುವಷ್ಟು ಗಾಳಿ ಬಿರುಸಾಗಿ ಬೀಸುತ್ತಿದೆ.

ಹೀಗೆ ಚಿಕ್ಕಂದಿನಲ್ಲಿ ದುಃಖ ಉಂಟುಮಾಡುತ್ತಿದ್ದ ಸದ್ದುಗಳನ್ನು ನೆನಪಿಸಿಕೊಳ್ಳುತ್ತಾ ಕೂತರೆ ಅದಕ್ಕೆ ಕೊನೆಯೇ ಇಲ್ಲ. ಆದರೆ ಈಗ ಇಲ್ಲಿ ಕೂತು ಆ ಸದ್ದುಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುತ್ತಿರುವಾಗ ನನ್ನ ಕಿವಿಗೆ ಬೀಳುತ್ತಿರುವುದು ಟಿವಿ, ಹೀಟರ್, ಹಳೇ ಪೇಪರ್ ತೊಗೊಂಡು ಟಾಯ್ಲೆಟ್ ಪೇಪರ್ ಕೊಡ್ತಿನಿ ಅನ್ನುವವರ ಸದ್ದುಗಳು. ಇವೆಲ್ಲ ವಿದ್ಯುತ್ಚಾಲಿತ ಸದ್ದುಗಳು. ಬಹುಶಃ ಈಗಿನ ಮಕ್ಕಳು ಇಂತಹ ಸದ್ದುಗಳ ಬಗ್ಗೆ ಚೆಂದದ ನೆನಪುಗಳನ್ನು ಹೊಂದಲು ಸಾಧ್ಯವಿಲ್ಲ. ಆ ನೀರು ಮಾರಲು ಬರುತ್ತಿದ್ದವನ ಮಗುವಿಗಿಂತ ಈ ಮಕ್ಕಳ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನಿಸುತ್ತೆ.