‘ಚಾಪ್ಸ್ ಅಂದ್ರೆನೇ ಅಂಗೆ.. ಬೋನ್ ಬಿಡಿಸಿಕೊಂಡು ತಿನ್ನಬೇಕೂ’ ಎನ್ನುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ತಾತ ಒಂದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನುವುದನ್ನು ಕಲಿಸುವಂತೆ ಆ ದಪ್ಪ ಚಾಪ್ಸ್ ಎತ್ತಿಕೊಂಡು ಬಿಡಿಸಿ ಬಿಡಿಸಿ ದವಡೆಯಲ್ಲಿಟ್ಟು ಗಸಗಸನೇ ಅಗಿದು ಮಸೆದು ನುಂಗಿ, ‘ಹೀಗೆ ತಿನ್ನಬೇಕು’ ಎಂದರು. ನಿಷ್ಕಲ್ಮಷವಾದ ಅವರ ಪ್ರೀತಿ, ಅಂತಃಕರಣ, ಸಜ್ಜನಿಕೆ, ಪ್ರಾಮಾಣಿಕತೆ ಬಹಳ ಅಪರೂಪವಾದುದು. ಡಾ. ಸಿದ್ಧಲಿಂಗಯ್ಯ ಅವರೊಂದಿಗಿನ ಒಡನಾಟದ ಕುರಿತು ಕಥೆಗಾರ ಮೊಗಳ್ಳಿ ಗಣೇಶ್ ಆಪ್ತ ಬರಹ.  

 

ನಾನು ಮೈಸೂರಿನ ಮಹರಾಜ ಕಾಲೇಜಿನಲ್ಲಿ ೧೯೮೪ರಲ್ಲಿ ಮೊದಲನೇ ವರ್ಷದ ಬಿ.ಎ. ವಿದ್ಯಾರ್ಥಿ. ಮಹರಾಜ ಹಾಸ್ಟೆಲಿನಲ್ಲಿದ್ದೆ. ಹಾಸ್ಟೆಲಿನ ಮುಂದೆಯೆ ಶತಮಾನೋತ್ಸವ ಭವನ ಇತ್ತು. ಸೀನಿಯರ್‌ ವಿದ್ಯಾರ್ಥಿಗಳು ದಲಿತ ಚಳವಳಿ, ಅಂಬೇಡ್ಕರ್‌, ದಲಿತ ಸಾಹಿತ್ಯದ ಬಗ್ಗೆ ಮಾತನಾಡುವುದ ಕೇಳಿಸಿಕೊಂಡಿದ್ದೆ. ಆಗ ನನಗೆ ಈ ಸಂಗತಿಗಳ ಬಗ್ಗೆ ಬಹಳ ಅಜ್ಞಾನವಿತ್ತು. ಗೆಳೆಯ ಬಂಜಗೆರೆ ನನ್ನ ಪಕ್ಕದ ರೂಮಲ್ಲೆ ಇದ್ದ. ಅದಾಗಲೆ ಈ ಬಗ್ಗೆ ಅವನಿಗೆ ಸಾಕಷ್ಟು ಪರಿಚಯವಿತ್ತು. ‘ಕಾರ್ಯಕ್ರಮವಿದೆ, ಬಾರೋ ಹೋಗೋಣ’ ಎಂದು ಶತಮಾನೋತ್ಸವ ಭವನಕ್ಕೆ ಕರೆದೊಯ್ದ. ಅಂಬೇಡ್ಕರ್‌ ಸ್ಮರಣೆಯ ನಿಮಿತ್ತ ಯಾರೋ ಸಿದ್ಧಲಿಂಗಯ್ಯ ಅವರನ್ನು ಕರೆಸಿದ್ದರು. ಅವರು ಉಪನ್ಯಾಸ ನೀಡುತ್ತಿದ್ದರು. ಹಿಂದೆ ಕೂತು ಕೇಳಿಸಿಕೊಳ್ಳುತ್ತಿದ್ದೆ. ಉಗ್ರ ಭಾಷಣಗಳಿಂದ ಬೇಸತ್ತಿದ್ದ ನನಗೆ ಸಿದ್ಧಲಿಂಗಯ್ಯ ಅವರ ತಣ್ಣನೆಯ ಮಾರ್ಮಿಕ ಮೊನಚಿನ ವಿಷಾದ ಹಾಸ್ಯ ವಿಡಂಬನೆಯ ಆವತ್ತಿನ ಮಾತುಗಳು ನನ್ನನ್ನು ಸೆರೆಹಿಡಿದಿದ್ದವು.

ಕಾರ್ಯಕ್ರಮ ಮುಗಿದಿತ್ತು. ಒಂದಷ್ಟು ವಿದ್ಯಾರ್ಥಿಗಳು ಅವರ ಸುತ್ತ ಮುತ್ತಿಕೊಂಡಿದ್ದರು. ನಾನೂ, ಬಂಜಗೆರೆ ಬೆಟ್ಟಿ ಆದೆವು. ‘ಸಾರ್‌ ನಮ್ಮ ಹಾಸ್ಟೆಲ್‌ ಇಲ್ಲೇ ಇದೆ. ಬನ್ನಿ ಸಾರ್‌ʼ ಎಂದು ಕೋರಿದೆವು. ಹಿಂದು ಮುಂದು ನೋಡದೆ ಬಂದೇಬಿಟ್ಟರು! ಸಡಗರದಲ್ಲಿ ಕರೆದುಕೊಂಡು ಹೋದೆವು. ರೂಮಲ್ಲಿ ಕೂರಿಸಿದೆವು. ನಮಗೆ ಏನೋ ಸಾರ್ಥಕ ಭಾವನೆ. ರೂಮಿನ ತುಂಬ ಹಾಸ್ಟೆಲ್‌ ವಿದ್ಯಾರ್ಥಿಗಳು. ಆಟೋಗ್ರಾಫ್‌ಗಾಗಿ ಮುಗಿಬಿದ್ದರು. ಎಲ್ಲರಿಗೂ ಸಹಿ ಮಾಡಿದರು. ಆ ಕಾಲಕ್ಕೆ ಸೆಲೆಬ್ರೆಟಿಗಳ ಸಹಿ ಪಡೆಯುವುದೇ ದೊಡ್ಡ ಸುಖವಾಗಿತ್ತು. ಇವತ್ತಿನವರು ಸೆಲ್ಫೀ ತೆಗೆದುಕೊಳ್ಳುತ್ತಾರೆ. ನಾನೂ ಸಹಿ ಮಾಡಿಸಿಕೊಂಡೆ.

‘ಏನು ನಿಮ್ಮ ಸಮಸ್ಯೆ? ಇಂತಹ ಮಹರಾಜ ಹಾಸ್ಟೆಲಿನಲ್ಲೂ ನಿಮಗೆ ಕಷ್ಟವೇ… ಅನ್ಯಾಯವೇ; ಅಸ್ಪೃಶ್ಯತೆಯೇ…?ʼ
ಉತ್ತರಿಸಲು ನಮಗೆ ಬಹಳ ಕಷ್ಟವಾಯಿತು. ‘ಹೇಳಿ, ನಾನೇನು ನಿಮಗೆ ಸಹಾಯ ಮಾಡಬಹುದು…ʼ ಆ ಕಾಲಕ್ಕೆ ಅದು ನಿಜಕ್ಕೂ ರಾಯಲ್‌ ಹಾಸ್ಟೆಲು. ‘ಹೆದರಬೇಡಿ ಹೇಳಿ; ನಿಮ್ಮ ಪರವಾಗಿ ನಾನಿದ್ದೇನೆ.ʼ

‘ಏನೂ ಕಷ್ಟ ಇಲ್ಲ ಸಾರ್‌, ನಮ್ಮೋರು ಅಂತ ಅಭಿಮಾನ ಸಾರ್. ನೀವು ಬಂದ್ರಿ ಅದೇ ಪುಣ್ಯ ಸಾರ್…ʼ

‘ಆಯ್ತು. ಚೆನ್ನಾಗಿ ಓದಿ ಮುಂದೆ ಬನ್ನಿ… ಯಾವುದೇ ಅನ್ಯಾಯವ ಸಹಿಸಬೇಡಿ. ಹೋರಾಟ ಮಾಡಿ.. ನಿಮ್ಮ ಜೊತೆ ನಾವಿದ್ದೀವಿ.ʼ

ಧನ್ಯತೆಯಿಂದ ಕರಗಿದ್ದೆ ನಾನು. ಅವತ್ತಿನ ಅನಾಮಿಕ ಬೆಟ್ಟಿ ಯಾವತ್ತೂ ನೆನಪಿನಲ್ಲಿ ಸೆರೆಯಾಗಿತ್ತು. ನಾನಾಗ ಎಸ್‌.ಎಫ್.ಐ ಸಂಘಟನೆಯಲ್ಲಿದ್ದೆ. ಮಾರ್ಕ್ಸ್‌ವಾದಿಗಳು ಸಿದ್ಧಲಿಂಗಯ್ಯ ಅವರನ್ನು ನಮ್ಮ ಕಾಮ್ರೇಡ್‌ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆಗ ಮೈಸೂರು ಅನೇಕ ಸಂಘಟನೆಗಳ ಹೋರಾಟಗಾರರ ಸಂಗಮವಾಗಿತ್ತು. ಎಲ್ಲರೂ ‘ನಮ್ಮ ಸಿದ್ಧಲಿಂಗಯ್ಯ, ನಮ್ಮ ಕವಿ’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಆಗ ನನಗೆ ಸಾಹಿತ್ಯದಲ್ಲಿ ಅಂತಹ ಆಸಕ್ತಿಯೆ ಇರಲಿಲ್ಲ. ಎಲ್ಲರೂ ಹೇಳುತ್ತಾರೆ, ‘ತಾಳು ಇವರು ಯಾವ ಕಾವ್ಯ ಬರೆದಿದ್ದಾರೆ’ ಎಂದು ಲೈಬ್ರರಿಯಲ್ಲಿ ಕೂತು ಮೊದಲಿಗೆ ಹೊಲೆ ಮಾದಿಗರ ಹಾಡು ಕವಿತೆಗಳನ್ನು ಓದಿದೆ. ನಿಟ್ಟುಸಿರು ಬಿಟ್ಟಿದ್ದೆ. ಅನಾದಿ ಕಾಲದ ನಮ್ಮವರೆಲ್ಲರ ಸಂಕಟವನ್ನು ಈ ಕವಿ ಎಷ್ಟು ಸರಳವಾಗಿ ಆದರೆ ಆಳವಾಗಿ ಎಲ್ಲರನ್ನೂ ಮುಟ್ಟಿಸಿಕೊಳ್ಳುವಂತೆ ಬರೆದಿದ್ದಾರಲ್ಲಾ… ಎಂದು ಯೋಚಿಸಿದೆ. ಆ ಹೊತ್ತಿಗೆ ನಾನು ವೋಲೆ ಸೋಯಿಂಕಾ ಸಂಪಾದಿಸಿದ್ದ ‘ಬ್ಲಾಕ್‌ ಪೊಯೆಟ್ರಿʼಯನ್ನು ಓದಿದ್ದೆ. ವಿಶ್ವಕಾವ್ಯದ ಜೊತೆಗೆ ನಿಲ್ಲಬಲ್ಲ ಸಾಮರ್ಥ್ಯ ಈ ಕವಿಗಳಿಗಿದೆ ಎನ್ನಿಸಿತ್ತು.

ಎಂ.ಎ. ಮಾಡಲು ಮಾನಸಗಂಗೋತ್ರಿಗೆ ಬಂದೆ. ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿತ್ತು. ಆಗ ಬರಗಾಲ. ಇಂತಹ ಕಷ್ಟಕಾಲದಲ್ಲಿ ಇದಾವ ವಿಶ್ವ ಕನ್ನಡ ಸಮ್ಮೇಳನವೋ ಎಂದು ನಾನು ಬಂಜಗೆರೆ ವಿಷಾದ ಪಟ್ಟಿದ್ದೆವು. ಅಷ್ಟೊತ್ತಿಗೆ ನಕ್ಸಲ್‌ವಾದಿ ಪ್ರೊ.ರಾಮಲಿಂಗಪ್ಪ, ವಿಚಾರವಾದಿ ಪ್ರೊ.ಕೆ. ರಾಮದಾಸ್‌ ಸಮ್ಮೇಳನದ ಔಚಿತ್ಯದ ಬಗ್ಗೆ ತಗಾದೆ ತೆಗೆದಿದ್ದರು. ನಾವು ಕ್ಯಾಂಪಸ್‌ನಲ್ಲಿ ದಂಗೆ ಎದ್ದೆವು. ನಮಗೆ ಅಷ್ಟು ಧೈರ್ಯ ಯಾಕೆ ಬಂದಿತ್ತು ಎಂದರೆ, ಅದಾಗಲೆ ನಾವು ವಿದ್ಯಾರ್ಥಿಗಳು ರಾಮದಾಸ್‌ ನೇತೃತ್ವದಲ್ಲಿ ಬರಪರಿಹಾರಕ್ಕೆಂದು ಮೈಸೂರಿನ ಬೀದಿಗಿಳಿದು ಬಡವರಿಗೆ ಸಹಾಯ ಮಾಡಿ ಎಂದು ದವಸ ಧಾನ್ಯ ಹಣ ಬಟ್ಟೆ ಸಂಗ್ರಹಿಸಿದ್ದೆವು. ನಮ್ಮ ಊಹೆಗೂ ನಿಲುಕಲಾರದಷ್ಟು ಜನ ನೀಡಿದ್ದರು.

ಸರಸ್ವತಿಪುರಂನ ಬಿ.ಎನ್‌. ಶ್ರೀರಾಮ್‌ ಅವರ ಮನೆಯಲ್ಲಿ ಎಲ್ಲವನ್ನು ಲೆಕ್ಕ ಮಾಡಿ, ಒಂದು ಲಾರಿಯಲ್ಲಿ ತುಂಬಿಕೊಂಡು ಹೋಗಿ ಚಾಮರಾಜನಗರದ ಡಿ.ಸಿ.ಗೆ ಸಲ್ಲಿಸಿ ಗದ್ದರ್‌ ಅವರ ಹಾಡುಗಳನ್ನು ಹಾಡುತ್ತ ಅದೇ ಲಾರಿಯಲ್ಲಿ ಬಂದಿದ್ದೊ. ಹಾಗಾಗಿ ವಿಶ್ವ ಕನ್ನಡ ಸಮ್ಮೇಳನವನ್ನೇ ವಿರೋಧಿಸಿ ಬೀದಿಗಿಳಿದಿದ್ದೆವು. ಆದರೆ ಕುವೆಂಪು ಅವರು ಕವಿಗೋಷ್ಠಿಯ ಅಧ್ಯಕ್ಷರಾಗಿದ್ದಲ್ಲಿ ಕವಿ ಸಿದ್ಧಲಿಂಗಯ್ಯ ‘ನನ್ನ ಜನಗಳುʼ ಕವಿತೆಯನ್ನು ವಾಚಿಸಿದ್ದರು. ಆರ್ದ್ರವಾದ ದನಿಯ ಸಿದ್ಧಲಿಂಗಯ್ಯ ಅವರ ಆ ಕವಿತೆ ಇಡೀ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನೇ ಸಾರ್ಥಕಗೊಳಿಸಿತ್ತು. ಕುವೆಂಪು ಮೆಚ್ಚಿದ್ದರು. ಅವೆಲ್ಲ ಅಮರ ಕ್ಷಣಗಳು. ಇಡೀ ಸಭಾಂಗಣ ಕಿಕ್ಕಿರಿದಿತ್ತಂತೆ. ಅವತ್ತು ನಾನಲ್ಲಿರಲಿಲ್ಲ ಅರಮನೆ ಮುಂದಿನ ಗೇಟಲ್ಲಿ ಸಮ್ಮೇಳನ ವಿರೋಧಿ ಕರಪತ್ರ ಹಂಚುತ್ತಿದ್ದೆ. ಕಲಾಭವನದ ಮುಂದೆ ಧಿಕ್ಕಾರ ಕೂಗಿದವರ ಬಂಧಿಸಿ ಜೈಲಿನಲ್ಲಿ ಕೂರಿಸಿದ್ದರು. ಜೆ.ಬಿ. ರಂಗಸ್ವಾಮಿ ಅವತ್ತಿನ ಪೋಲೀಸ್ ಅಧಿಕಾರಿ ಉಪಕರಿಸಿದ್ದರು. ಗೆಳೆಯರೆಲ್ಲ ಅಲ್ಲೇ ಒಂದು ಕವಿಗೋಷ್ಠಿ ಮಾಡಿದ್ದರು. ಅಲ್ಲಿ ವಾಚಿಸಿದ ಕವಿತೆಗಳನ್ನು ಮುಂದೆ ಚಂಪಾ ಅವರು ಸಂಕ್ರಮಣದಲ್ಲಿ ಪ್ರಕಟಿಸಿದ್ದರು.

ನಾನೂ, ಬಂಜಗೆರೆ ಬೆಟ್ಟಿ ಆದೆವು. ‘ಸಾರ್‌ ನಮ್ಮ ಹಾಸ್ಟೆಲ್‌ ಇಲ್ಲೇ ಇದೆ. ಬನ್ನಿ ಸಾರ್‌ʼ ಎಂದು ಕೋರಿದೆವು. ಹಿಂದು ಮುಂದು ನೋಡದೆ ಬಂದೇಬಿಟ್ಟರು! ಸಡಗರದಲ್ಲಿ ಕರೆದುಕೊಂಡು ಹೋದೆವು. ರೂಮಲ್ಲಿ ಕೂರಿಸಿದೆವು. ನಮಗೆ ಏನೋ ಸಾರ್ಥಕ ಭಾವನೆ.

ಇದಾದ ಕೆಲ ವರ್ಷಗಳ ನಂತರ ನಾನು ಕಥೆಗಾರ ಎಂದು ಪ್ರಜಾವಣಿ ದೀಪಾವಳಿ ಸ್ಪರ್ಧೆಗಳಿಂದ ಸಾಬೀತಾಗಿದ್ದೆ. ಅದು ಕೂಡ ಒಂದು ಆಕಸ್ಮಿಕ. ನನ್ನ ದುಃಖ ನೀಗಿಕೊಳ್ಳಲು ಬರೆದದ್ದು ಕಥೆಯಾಗಿಬಿಟ್ಟಿತ್ತು. ಸಿದ್ಧಲಿಂಗಯ್ಯ ಟೆಲಿಗ್ರಾಂ ಕಳುಹಿಸಿ ಕರೆಸಿಕೊಂಡಿದ್ದರು. ಹೋಗಿದ್ದೆ. ಆಗ ಅವರು ಎಂ.ಎಲ್.ಸಿ. ತುಂಬು ಬ್ಯುಸಿ ವ್ಯಕ್ತಿ. ಕರೆಸಿದವರು ಮನೆಯಲ್ಲೇ ಇಲ್ಲಾ. ಆ ವಿಧಾನಸೌಧಕ್ಕೆ ನಾನು ಹೋಗುವುದಿಲ್ಲ ಎಂದು ಹಿಂತಿರುಗಿದ್ದೆ. ಆಗತಾನೆ ಆರಂಭವಾಗಿದ್ದ ಹಂಪಿ ಕನ್ನಡ ವಿದ್ಯಾಲಯದಲ್ಲಿ ನನಗೆ ಕೆಲಸ ಕೊಡಿಸಬೇಕು ಎಂಬ ಇರಾದೆ ಅವರಿಗಿತ್ತು. ಆಗ ಇಲ್ಲಿಗೆ ಅವರು ಸಿಂಡಿಕೇಟ್ ಸದಸ್ಯರಾಗಿದ್ದರು. ನನಗೆ ಆಸಕ್ತಿ ಇರಲಿಲ್ಲ.

ಅಷ್ಟರಲ್ಲಿ ‘ಬುಗುರಿ’ ಕಥಾ ಸಂಕಲನವನ್ನು ಲಂಕೇಶರು ಪ್ರಕಟಿಸಿದ್ದರು. ನಾನು ಸರ್ವಾಧಿಕಾರಿಯಂತೆ ವರ್ತಿಸಲು ಇನ್ನಾವ ಪರ್ಮಿಷನ್‌ ಬೇಕಾಗಿತ್ತು… ಆಗ ಆಲನಹಳ್ಳಿ ಕೃಷ್ಣ ಅವರನ್ನು ಹತ್ತಿರದಿಂದ ಕಂಡಿದ್ದೆ. ಅವರ ಪುಂಡುತನ ಬಂದುಬಿಟ್ಟಿತ್ತು. ಆದರೆ ಸಿದ್ಧಲಿಂಗಯ್ಯ ಸದಾ ಕಿವಿಯೊಳಗೇ ಕುಳಿತಿದ್ದ ಕವಿ. ಯಾವ ಹೋರಾಟದ ಹಾದಿಗೇ ಹೋದರೂ ಅವರದೇ ಕ್ರಾಂತಿಗೀತೆಗಳು! ಈ ಕವಿಯ ಪ್ರಭಾವ ನನಗೆ ಬೇಡ ಎಂದು ಪ್ರಜ್ಞಾಪೂರ್ವಕವಾದ ಅಂತರ ಕಾಯ್ದುಕೊಂಡೆ. ನಾನು ನಾನಾಗಿಯೇ ಬೆಳೆಯಬೇಕಿತ್ತು.

ಹೀಗಿರುವಾಗ ಒಮ್ಮೆ ಲಂಕೇಶ್ ಪತ್ರಿಕೆಯಲ್ಲಿದ್ದಾಗ ಸಿದ್ಧಲಿಂಗಯ್ಯನವರು ಬಂದರು. ಅಭಿಮಾನದಿಂದ ತಬ್ಬಿಕೊಂಡರು. ಬಂದಿದ್ದ ಕೆಲಸ ಮುಗಿದಿತ್ತು. ‘ಬನ್ನಿ, ಮನೆಗೆ ಹೋಗುವ’ ಎಂದು ಕರೆದೊಯ್ದರು. ಇನ್ನೂ ಐದಾರು ಜನ ಊಟದ ಹೊತ್ತಿಗೆ ಬಂದರು. ಗುಂಡಿನ ಸಮಾರಾಧನೆ ಆರಂಭವಾಯಿತು. ಚೆನ್ನಾಗಿ ಹಿಗ್ಗಿದೆವು. ತೂರಾಡುತ್ತಿದ್ದೆವು. ಕವಿಗಳು ತಮ್ಮ ಕಾಲದ ಎಷ್ಟೋ ರಸ ಪ್ರಸಂಗಗಳಿಗೆ ಬಣ್ಣ ತುಂಬಿ ಹೇಳುತ್ತಿದ್ದರು. ತರಾವರಿ ಊಟ. ಅದರಲ್ಲಿ ಒಂದು ವಿಶೇಷ ಐಟಂ. ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಇಂತಹ ಅಡುಗೆ ಮಾಡಲೆಂದೇ ಅವರ ಮನೆಯಲ್ಲಿ ಯಾರೋ ಒಬ್ಬ ‘ಎಕ್ಸ್ ಪರ್ಟ್ ಕುಕ್’ ಇದ್ದಂತಿತ್ತು.

ಇದಾದ ಮೇಲೆ ಕವಿಗಳ ಜೊತೆಗೆ ನಾನು ನೂರಾರು ಬಾರಿ ಗುಂಡು ಹಾಕಿದ್ದೇನೆ. ಅವೆಲ್ಲ ಅಮರ ನೆನಪುಗಳು. ಒಮ್ಮೆ ಕಲಾಸಿ ಪಾಳ್ಯಂನ ಅವರ ಇಷ್ಟದ ನಾನ್ ವೆಜ್ ಹೋಟೆಲ್ ಗೆ ಕರೆದೊಯ್ದರು. “ಸಾರ್, ನಾನು ಸ್ವಲ್ಪನೇ ತಿನ್ನೋದು. ಹೆಚ್ಚು ಏನೇನೋ ಆರ್ಡರ್ ಮಾಡಬೇಡಿ’ ಎಂದೆ. ‘ಇಲ್ಲಿ ತುಂಬ ಒಳ್ಳೇ ಚಾಪ್ಸ್ ಮಾಡ್ತಾರೆ. ಅದನ್ನೇ ತಿನ್ನೋಣ’ ಎಂದರು.

ಗಟ್ಟಿ ಮೂಳೆಯ ಆ ಚಾಪ್ಸ್ ಅನ್ನು ಬಿಡಿಸಿ ಹೇಗೆ ತಿನ್ನಬೇಕೋ ಎಂಬ ಅರಿವಿರಲಿಲ್ಲ. ತಟ್ಟೆಯಲ್ಲೇ ಬಿಟ್ಟೆ. ‘ಅದನ್ನು ತಿನ್ನೀ’ ಎಂದಾಗ, ‘ತುಂಬಾ ಗಟ್ಟಿ ಸಾರ್..’ ಎಂದೆ.

‘ಚಾಪ್ಸ್ ಅಂದ್ರೆನೇ ಅಂಗೆ.. ಬೋನ್ ಬಿಡಿಸಿಕೊಂಡು ತಿನ್ನಬೇಕೂ’ ಎನ್ನುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ತಾತ ಒಂದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನುವುದನ್ನು ಕಲಿಸುವಂತೆ ಆ ದಪ್ಪ ಚಾಪ್ಸ್ ಎತ್ತಿಕೊಂಡು ಬಿಡಿಸಿ ಬಿಡಿಸಿ ದವಡೆಯಲ್ಲಿಟ್ಟು ಗಸಗಸನೇ ಅಗಿದು ಮಸೆದು ನುಂಗಿ, ‘ಹೀಗೆ ತಿನ್ನಬೇಕು’ ಎಂದರು.

ನಿಷ್ಕಲ್ಮಷವಾದ ಅವರ ಪ್ರೀತಿ, ಅಂತಃಕರಣ, ಸಜ್ಜನಿಕೆ, ಪ್ರಾಮಾಣಿಕತೆ ಬಹಳ ಅಪರೂಪ. ವಿನಯಶೀಲ ನಡವಳಿಕೆ. ಆತ್ಮೀಯರನ್ನಷ್ಟೇ ಅಲ್ಲ, ತಮ್ಮ ವಿರೋಧಿಗಳನ್ನೂ ಕೂಡ ಸಿದ್ಧಲಿಂಗಯ್ಯ ಅವರು ಪ್ರಾಂಜಲವಾಗಿಯೇ ಪ್ರೀತಿಸುತ್ತಿದ್ದರು. ತಮ್ಮ ರಾಜರಾಜೇಶ್ವರಿ ನಗರದ ಮನೆಗೆ ಒಂದು ಒಳ್ಳೆಯ ಹೆಸರು ಸೂಚಿಸಿ ಎಂದು ಹೇಳಿದರು. ಅಲ್ಲೇ ಹೊಳೆದ ಹೆಸರು- ‘ಕಳಿಂಗ’ ಎಂದು ಹೇಳಿದೆ. ಮೆಲ್ಲಗೆ ನೆಗಾಡಿದರು. ‘ಅಶೋಕ ಕಳಿಂಗ ಯುದ್ಧದಿಂದಲೇ ತಾನೇ ಬೌದ್ಧ ಧರ್ಮಕ್ಕೆ ಪರಿವರ್ತನೆ ಆದದ್ದೂ.. ಅದೇ ಸೂಕ್ತ ಹೆಸರು ಸಾರ್’ ಎಂದು ಸಮರ್ಥಿಸಿಕೊಂಡೆ. ಎಲ್ಲಾ ಎಣ್ಣೆ ಮಹಿಮೆ. ‘ಹಾಗಲ್ಲಾ.. ನಮ್ಮ ಜನರಿಗೆ ಕಳಿಂಗ ಎಂದರೆ ಏನು ಗೊತ್ತೂ. ಅವರಿಗೆ ಕಾಳಿಂಗ ಸರ್ಪ ಗೊತ್ತು. ಯಾರಪ್ಪಾ ಇವನು ಕಾಳಿಂಗ ಅಂತಾ ಎದುರ್ಕೊಂಡು ಮುಂದೆ ಹೋಯ್ತರೆ. ಆಗದವರು, ಕಳ್ ಸಿದ್ಲಿಂಗ ಅಂತ ಆಡ್ಕೋತಾರೆ. ಬೇರೆ ಹೆಸರು ಹೇಳಿ’ ಎಂದು ತಮಾಷೆ ಮಾಡಿದರು. ಸಲಹೆ ನೀಡುವ ಮೂರ್ಖ ಸಾಹಸ ನಿಲ್ಲಿಸಿದೆ.

ಸಿದ್ಧಲಿಂಗಯ್ಯ ಅವರ ಜೊತೆ ಬಹಳ ಸಲುಗೆಯಿಂದಿದ್ದೆ. ಅವರು ನನಗೆ ದೂರದ ಸಂಬಂಧಿ. ನಾನಾಗ ಐದನೆ ತರಗತಿಯ ಹುಡುಗ. ಬೆಂಗಳೂರಿನಲ್ಲಿ ಆರ್. ಗೋಪಾಲ ಸ್ವಾಮಿ ಅಯ್ಯರ್ ಅವರ ಮೂಲಕ ಎರಡು ಹಾಸ್ಟೆಲ್ ಗಳು ಬೆಂಗಳೂರಲ್ಲಿದ್ದವು. ಅದರ ಒಂದು ಹಾಸ್ಟೆಲ್ ಇವತ್ತಿನ ಮಲ್ಲೇಶ್ವರಂ ರಸ್ತೆಯ ಸ್ಲಂ ಬೋರ್ಡ್ ನ ಪಕ್ಕದಲ್ಲಿತ್ತು. ನಾನಲ್ಲಿದ್ದೆ. ಆ ನಗರ ಜೀವನ ಶಾಲೆ ಒಂಚೂರೂ ಇಷ್ಟ ಇರಲಿಲ್ಲ. ಅದೇ ಹಾಸ್ಟೆಲಲ್ಲಿ ಜನಾರ್ದನ್ ಎಂಬಾತ ಹತ್ತನೇ ತರಗತಿಯವನಿದ್ದ. ಆಗಾಗ ನನ್ನ ಸಮಾಧಾನ ಮಾಡುತ್ತಿದ್ದ. ನನ್ನ ಊರು ಕೇರಿ ವಿಚಾರಿಸಿದ್ದ. ಹೇಳಿದ್ದೆ. ‘ಅರೇ ಲೇ ನೀ ನಮ್ ಸಂಬಂಧಿಕ ಕಣೋ’ ಎಂದು ಕಥೆ ಹೇಳಿದ್ದ. ಆದರೂ ಅದು ಸತ್ಯವಾಗಿತ್ತು. ಊರಿಂದ ಊರಿಗೆ ಹೆಣ್ಣು ಕೊಟ್ಟ ಸಂಬಂಧ ಆಗಿರುತ್ತವಲ್ಲಾ ಹಾಗೆ ಆಗಿತ್ತು. ಜೆನ್ನಿ ಹೇಳಿದ್ದನ್ನು ಸಿದ್ಧಲಿಂಗಯ್ಯ ಅವರಿಗೆ ಹೇಳಿದ್ದೆ. ಅಭಿಮಾನ ಪಟ್ಟಿದ್ದರು. ಮುಂದುವರೆದು ಒಂದು ಕಾಲಕ್ಕೆ ಅವರ ಆಟೋಗ್ರಾಫ್ ಸಹಿ ತೋರಿದ್ದೆ. ಅವರಿಗೆ ಮುಜುಗರ ಎನಿಸಿತ್ತು.

ಅವರ ಆವರೆಗಿನ ಕವಿತೆಗಳ ಸಂಕಲನಕ್ಕೆ ಡಿ.ಆರ್. ನಾಗರಾಜ್ ಒಂದು ಉನ್ನತ ಮುನ್ನುಡಿ ಬರೆದಿದ್ದರು. ಅದರ ಪುನರ್ ಮುದ್ರಣ ಆವೃತ್ತಿಗೆ ಕವಿಗಳು ನನ್ನಿಂದ ಇನ್ನೊಂದು ಮುನ್ನುಡಿ ಬರೆಸಿದರು. ಏನೋ ಅನಿಸಿದ್ದನ್ನು ಬರೆದಿದ್ದೆ. ಬಹಳ ಸಂತೋಷವಾಗಿತ್ತು ಕವಿಗಳಿಗೆ. ಬಹುರೂಪಿಯಾದ ಪ್ರತಿಭಾವಂತ ಲೇಖಕ ಎಂದು ಬೆನ್ನು ತಟ್ಟಿದ್ದರು. ಬಹಳ ದೊಡ್ಡ ಅವಾರ್ಡ್ ಸಿಕ್ಕಂತಾಗಿತ್ತು. ಕೊನೆ ತನಕ ಅವರ ಅಭಿಮಾನಿಯಾಗಿದ್ದೆ.

ಒಮ್ಮೆ ನಾನು ಬೆಂಗಳೂರಿನ ಹಾಸ್ಟೆಲ್ ನಲ್ಲಿದ್ದಾಗ, ಜೆನ್ನಿ.. ಜನಾರ್ದನ್, ಸಿದ್ಧಲಿಂಗಯ್ಯ ಅವರ ಆಪ್ತಬಂಧುವಾಗಿದ್ದ ಕೊಂಡಿ ಸಂಬಂಧ ಹೇಳಿದೆ. ಒಂದು ಕಾಲಕ್ಕೆ ನಮ್ಮ ಹಳ್ಳಿಗೆ ಗ್ರಾಮದೇವತೆಗಳ ಅಧ್ಯಯನದ ಕ್ಷೇತ್ರ ಕಾರ್ಯಕ್ಕೆ ಕವಿಗಳು ಬಂದಿದ್ದರು. ಪುಟ್ಟ ಬಾಲಕ ನಾನಾಗ. ಸಿದ್ಧಲಿಂಗಯ್ಯ ಅವರ ಕುಟುಂಬದ ಮೂಲಕ ನಮ್ಮ ಹತ್ತಿರದ ಸಂಬಂಧಿಕರಿಗೆ ಮದುವೆ ಆಗಿತ್ತು. ಅಲ್ಲೊಂದು ಹೋಟೆಲ್ ನಲ್ಲಿ ಇದ್ದ ಹಲವಾರು ಜನರಿಂದ ಮಾಹಿತಿ ಸಂಗ್ರಹಿಸುತ್ತಿದ್ದರು. ಹಳೆ ಚಡ್ಡಿಯ ಅವತ್ತಿನ ನಾನು ಅವರಿಗೆ ಚಹಾ ನೀಡಿದ್ದೆ. ಜನ್ನಿ ಹಳೆಯ ಆ ಎಲ್ಲ ವಿವರ ಹೇಳಿದ್ದ. ಅವರ ಹುಟ್ಟೂರು ಮಂಚನಬೆಲೆಗೂ ನಮ್ಮೂರಿಗೂ ನಿಕಟ ಸಂಬಂಧವಿತ್ತು. ಈ ವಿವರ ಹೇಳಿದಾಗ ಕವಿಗಳಿಗೆ ಅಚ್ಚರಿ ಆಗಿತ್ತು.

ಹೀಗೆ ಅವರ ಕುರಿತು ನನ್ನಲ್ಲಿ ತಕ್ಷಣಕ್ಕೆ ಮೂಡಿದ ನೆನಪುಗಳನ್ನು ಇಲ್ಲಿ ಬರೆದೆ. ಅವರ ಕಾವ್ಯದ ಬಗ್ಗೆ ತುಂಬ ವಿವರವಾಗಿ ಹಲವಾರು ಲೇಖನ ಬರೆದಿರುವೆ. ಗಮನಕ್ಕೆ ಬರಲಿಲ್ಲ. ಸಿದ್ಧಲಿಂಗಯ್ಯ ತೀರಿಹೋದರು ಎಂದು ಹಲವರು ಹೇಳಿದರು. ನಾನು ‘ಇಲ್ಲಾ’ ಎಂದೆ. ಯಾಕೆಂದರೆ ಜನತೆಯ ಸ್ಮರಣೆಯ ಕವಿ ಹೇಗೆ ಸತ್ತಾನೂ…

ಕುವೆಂಪು, ಬೇಂದ್ರೆ, ಪುತಿನಾ ಸತ್ತೇ ಇಲ್ಲವಲ್ಲಾ.. ಹಾಗೇ ಕವಿಗಳಿಗೆ ಸಾವಿಲ್ಲ.