ರಸ್ತೆಗಳಲ್ಲಿ ಇಳಿಮುಖವಾಗಿ ಕಾರು ಚಲಿಸುತ್ತಿತ್ತು. ಸ್ವಲ್ಪ ದೂರ ಚಲಿಸಿದ ಮೇಲೆ ಒಂದು ಕಡಿದಾದ ತಿರುವು ದಾಟಿದ ತಕ್ಷಣ, ಕಣ್ಣ ಮುಂದೆ ಏನಿದೆ ಎಂದು ಅರ್ಥೈಸಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಒಂದು ಬಿಳಿಯ ಚಾದರ ಹಾಸಿದಂತೆ ಮೋಡಗಳು ಭಾಸವಾದವು. ಅದಕ್ಕಿಂತಲೂ ಎತ್ತರದ ಜಾಗದಲ್ಲಿ ನಾನು ಕಾರು ಓಡಿಸುತ್ತಿದ್ದರಿಂದ, ನಾವು ಮೋಡದ ಮೇಲೆ ಇರುವಂತೆ ಭಾಸವಾಯಿತು. ನನ್ನ ಪ್ರವಾಸದ ಅನುಭವಗಳಲ್ಲಿ ಅತ್ಯಂತ ಆಪ್ಯಾಯಮಾನವಾದ ದೃಶ್ಯ ಎಂದರೆ ಮೋಡದ ಸಾಲುಗಳ ಮೇಲಿಂದ ನಿಂತು ಮೋಡದ ಸಾಗರವನ್ನು ವೀಕ್ಷಿಸುವುದು.
“ದೂರದ ಹಸಿರು” ಸರಣಿಯಲ್ಲಿ ಲೆಚೆನ್ಸ್‌ಟೈನ್‌ ದೇಶದ ಪ್ರವಾಸದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

ಯುರೋಪ್ ಖಂಡದಲ್ಲಿ ಅಚ್ಚರಿ ಎನ್ನಿಸುವ ಹಲವಾರು ಸಣ್ಣ ದೇಶಗಳಿವೆ. ವಿಸ್ತೀರ್ಣದ ಪ್ರಕಾರವಾಗಿ, ಪ್ರಪಂಚದ ಟಾಪ್ ಹತ್ತು ಸಣ್ಣ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕು ದೇಶಗಳು ಯೂರೋಪಿನಲ್ಲಿವೆ. ಅದರಲ್ಲಿ ಆರನೇ ಸ್ಥಾನದಲ್ಲಿರುವುದು ಲೆಚೆನ್ಸ್‌ಟೈನ್‌ (Lichtenstein). ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ Lichtenstein ಮಧ್ಯ ಯೂರೋಪಿನ ಮೂಗುತಿ ಎಂದರೂ ತಪ್ಪಾಗಲಾರದು. ಈ ದೇಶ ಎಷ್ಟು ಪುಟ್ಟದೆಂದರೆ ಬೆಂಗಳೂರಿನ ಏಳನೇ ಒಂದು ಭಾಗದಷ್ಟು. ಕರ್ನಾಟಕದ ಇತರೆ ನಗರಗಳಾದ ಮೈಸೂರು, ಹುಬ್ಬಳ್ಳಿ, ಕಲ್ಬುರ್ಗಿ ಹಾಗೂ ಬೆಳಗಾವಿಗಿಂತಲೂ ಪುಟ್ಟದು. ಇಲ್ಲಿನ ಜನಸಂಖ್ಯೆ ಕೇವಲ 38,000! ಪ್ರತಿ ಕಿಲೋಮೀಟರ್ ವಿಸ್ತೀರ್ಣಕ್ಕೆ ಕೇವಲ 237 ಜನರಿದ್ದಾರೆ. ಈ ದೇಶದ ಅತಿ ಉದ್ದದ ರೈಲು ಮಾರ್ಗ 9.1 ಕಿ.ಮೀ! ಇಷ್ಟು ಚಿಕ್ಕ ಪ್ರಯಾಣದಲ್ಲಿ ಟಿಕೆಟ್ ಚೆಕ್ ಮಾಡುವ ಟಿಸಿ ಪುಣ್ಯವಂತ.

ಇತಿಹಾಸದಿಂದಲೂ ಈ ದೇಶದಲ್ಲಿರುವುದು ರಾಜಪ್ರಭುತ್ವ. ಮೊದಲನೇ ವಿಶ್ವ ಯುದ್ಧದಲ್ಲಿ ಆಸ್ಟ್ರಿಯಾ-ಹಂಗೇರಿ ಜೊತೆಗೆ ಸೇರಿ ರಾಜ್ಯದ ಸಂಪತ್ತನ್ನೆಲ್ಲ ಕಳೆದುಕೊಂಡಿದ್ದ ಇಲ್ಲಿನ ರಾಜ, ಎರಡನೇ ವಿಶ್ವ ಯುದ್ಧದ ಹೊತ್ತಿದೆ ಬುದ್ಧಿವಂತನಾಗಿದ್ದ. ಸ್ವಿಟ್ಜರ್ಲ್ಯಾಂಡ್‌ನ ಸಲಹೆಯ ಮೇರೆಗೆ ತಟಸ್ಥ ನೀತಿಯ ದಾಳ ಉದುರಿಸಿ, ಸ್ವಿಟ್ಜರ್ಲ್ಯಾಂಡ್‌ನ ವಿಶ್ವಾಸ ಗಳಿಸಿದ. ಭಾರತಕ್ಕೆ ಐತಿಹಾಸಿಕವಾಗಿ, ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ನೇಪಾಳ ಹೇಗೆ ಸ್ವಾಭಾವಿಕ ಮಿತ್ರ ರಾಷ್ಟ್ರವೋ, ಹಾಗೆಯೇ ಸ್ವಿಟ್ಜರ್ಲ್ಯಾಂಡ್‌ಗೆ Lichtenstein ಆಪ್ಯಾಯಮಾನ. ವಿಶ್ವ ಮಹಾಯುದ್ಧಗಳ ಬಳಿಕ ನೆಲಸಿರುವ ಶಾಂತಿಯ ವಾತಾವರಣದಲ್ಲಿ ರಾಜನಿಗೇನು ಕೆಲಸ? ಹಾಗಾಗಿ ದೇಶದ ರಕ್ಷಣೆ, ವಿದೇಶಾಂಗ ಹಾಗೂ ಇತರೆ ಪ್ರಮುಖ ಜವಾಬ್ದಾರಿಗಳನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರಕ್ಕೆ ವಹಿಸಲಾಗಿದೆ. ಆದ್ದರಿಂದ ಸ್ವಾಭಾವಿಕವಾಗಿ ಸ್ವಿಟ್ಜರ್ಲ್ಯಾಂಡ್ ನಂತೆ ಲೆಚೆನ್ಸ್‌ಟೈನ್‌ ಕೂಡ ಐರೋಪ್ಯ ಒಕ್ಕೂಟದ ಭಾಗವಾಗಿಲ್ಲ. ಇಲ್ಲಿನ ಚಲಾವಣೆಯ ನಾಣ್ಯ ಕೂಡ ಸ್ವಿಸ್ ಫ್ರಾಂಕ್.

ಭೌಗೋಳಿಕವಾಗಿ ಶ್ರೀಮಂತವಾಗಿರುವ ಲೆಚೆನ್ಸ್‌ಟೈನ್‌ ದೇಶದ ಶೇಕಡಾ 70 % ಭಾಗ ಪರ್ವತ ಶ್ರೇಣಿಗಳು. ಲೆಚೆನ್ಸ್‌ಟೈನ್‌ ರಾಷ್ಟ್ರದ ರಾಜಧಾನಿ ವಾಡುಜ್. ಪರ್ವತ ಕಣಿವೆಗಳ ಮುಂದೆ ತಲೆ ಎತ್ತಿ ನಿಂತಿರುವ ಪುಟ್ಟ ನಗರ. ಬಹುತೇಕ ಯೂರೋಪಿನ ಆಲ್ಪ್ ಭಾಗದ ವಾತಾವರಣ ಇಲ್ಲಿಯೂ ಇರುತ್ತದೆ. ಚಳಿಗಾಲದಲ್ಲಿ ಹೇರಳವಾಗಿ ಸುರಿಯುವ ಹಿಮ, ಸ್ಕೀಯಿಂಗ್ ಪ್ರಿಯರಿಗೆ ಅಚ್ಚು ಮೆಚ್ಚು. ಬೇಸಿಗೆಯ ಹಿತವಾದ ವಾತಾವರಣ ಚಾರಣಿಗರಿಗೆ ಅತ್ಯಂತ ಪ್ರಿಯಕರ. ಯೂರೋಪಿನ ಪ್ರಮುಖ ನದಿಗಳಲ್ಲಿ ಒಂದಾದ ರೈನ್ ನದಿ ಇಲ್ಲಿ ಹರಿಯುತ್ತದೆ.

ಈ ಪುಟ್ಟ ದೇಶದ ಆರ್ಥಿಕ ಅಂಕಿ ಅಂಶಗಳು ಎಂತಹ ಹಣಕಾಸು ತಜ್ಞರನ್ನೂ ಸಹ ನಿಬ್ಬೆರಗಾಗಿಸುತ್ತದೆ. ಆಗಲೇ ತಿಳಿಸಿದಂತೆ ಇಲ್ಲಿನ ಜನಸಂಖ್ಯೆ ಸುಮಾರು 38,000. ಆದರೆ ಈ ದೇಶದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಕಂಪೆನಿಗಳು 4,700. ಅಂದರೆ ಪ್ರತಿ ಎಂಟು ಜನಕ್ಕೆ ಒಂದು ಕಂಪನಿ! ಈ ರಾಷ್ಟ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ಸುಮಾರು 39,000! ನಾನು ತಿಳಿದುಕೊಂಡ ಮಟ್ಟಿಗೆ, ಪ್ರಪಂಚದಲ್ಲಿರುವ ರಾಷ್ಟ್ರಗಳಲ್ಲಿ ಜನಸಂಖ್ಯೆಗಿಂತಲೂ ಹೆಚ್ಚು ಉದ್ಯೋಗಾವಕಾಶವನ್ನು ಹೊಂದಿರುವ ಏಕೈಕ ರಾಷ್ಟ್ರ ಲೆಚೆನ್ಸ್‌ಟೈನ್‌ . ಪ್ರತಿ ನಿತ್ಯ ಕೆಲಸದ ನಿಮಿತ್ತ ಪಕ್ಕದ ದೇಶಗಳಿಂದ ಜನರು ಓಡಾಡುತ್ತಾರೆ. ಸ್ವಿಸ್ ಬ್ಯಾಂಕ್ ಎಂದ ಕೂಡಲೇ ನಿಮಗೆ ನೆನಪಾಗುವುದು ಕಪ್ಪು ಹಣದ ಸಂಗ್ರಹಣೆ. ಹೆಸರಿಗೆ ಮಾತ್ರ ಬೇರೆ ದೇಶವಾಗಿ ಗುರುತಿಸಿಕೊಂಡಿರುವ ಈ ಪುಟ್ಟ ರಾಷ್ಟ್ರದ ಆತ್ಮವೆಲ್ಲ ಸ್ವಿಟ್ಜರ್ಲ್ಯಾಂಡ್ ಆಗಿರುವುದರಿಂದ, ಇಲ್ಲಿ ಸಹ ಹದಿನೆಂಟು ಬ್ಯಾಂಕುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ಸ್ವಿಸ್ ಬ್ಯಾಂಕ್ ಎಂದಾಗಲೆಲ್ಲ ಈ ಪುಟ್ಟ ರಾಷ್ಟ್ರವನ್ನು ಸೇರಿಸಿ ಲೆಕ್ಕ ಹಾಕಿ. ಇದರ ಜೊತೆಗೆ ಪ್ರವಾಸೋದ್ಯಮ ಕೂಡ ಸ್ವಾಭಾವಿಕವಾಗಿ ಒಂದು ಬಹು ದೊಡ್ಡ ಪಾಲು ಹೊಂದಿದೆ. ಹಾಗಾಗಿ ಇಲ್ಲಿನ ರಾಜನಷ್ಟೇ ಅಲ್ಲದೆ ಪ್ರಜೆಗಳೂ ಸಹ ಶ್ರೀಮಂತರು.

ಮಾಲ್ಬನ್ (Malbun)

ಆಗಲೇ ತಿಳಿಸಿದಂತೆ ಈ ಪುಟ್ಟ ದೇಶದ ಶೇಕಡಾ ೭೦% ರಷ್ಟು ಭೂ ಭಾಗ ಪರ್ವತಗಳು. ಹೀಗಿದ್ದ ಮೇಲೆ ಪರ್ವತದ ಮೇಲೊಂದು ಪ್ರವಾಸಿ ತಾಣವಿರಬೇಕಲ್ಲವೆ? ಸರ್ವ ಋತುಗಳಲ್ಲೂ ಪ್ರವಾಸಿಗರಿಂದ ಕೂಡಿರುವ ಗಿರಿಧಾಮ ಮಾಲ್ಬನ್. ಈ ಹಳ್ಳಿಯಲ್ಲಿ ವಾಸಿಸುವ ಜನರಿಗಿಂತ ಪ್ರವಾಸಿಗರ ಸಂಖ್ಯೆ ಹೆಚ್ಚು. ಚಳಿಗಾಲದಲ್ಲಿ ಶ್ವೇತ ಗುಲಾಬಿಯಂತೆ ಕಂಗೊಳಿಸುವ ಈ ಪ್ರದೇಶದಲ್ಲಿ ಸ್ಕೀಯಿಂಗ್ ಮಾಡುವವರ ಸಂಖ್ಯೆ ಹೆಚ್ಚು. ಸಣ್ಣ ವಯಸ್ಸಿನಲ್ಲಿಯೇ ಕಲಿಸುವುದರಿಂದ ಅಂಜಿಕೆ ಎನ್ನುವುದು ಮೂರೂ ಮೈಲಿ ದೂರದಲ್ಲಿರುತ್ತದೆ. ಪುಟಾಣಿಗಳು ಕಾಲಿಗೆ ಉದ್ದನೆಯ ಸ್ಕೀಯಿಂಗ್ ಬೂಟು ಕಟ್ಟಿಕೊಂಡು ಅನಾಯಾಸವಾಗಿ ಬೆಟ್ಟದ ಮೇಲಿಂದ ಕೆಳಗೆ ಜಾರುವುದನ್ನು ನೋಡಿ ನಾವು ನಾಚಿಕೊಳ್ಳಬೇಕು. ಚಳಿಗಾಲದಲ್ಲಿಯೇ ಎರಡು ಬಾರಿ ಭೇಟಿ ನೀಡಿದ್ದೀನಿ. ಅದ್ಭುತ ದೃಶ್ಯ ವೈಭವ.


ಒಂದು ತೆರೆದಿರುವ ಕೇಬಲ್ ಚೇರ್ ಹತ್ತಿ ಅತ್ತಿತ್ತ ನೋಡಿ ಆನಂದಿಸುವ ಹೊತ್ತಿಗೆ ಬೆಟ್ಟದ ತುತ್ತ ತುದಿ ತಲುಪಿರುತ್ತೇವೆ. ತೆರೆದಿರುವ ಚಾರಿ ಕಾರ್ ಆಗಿರುವುದರಿಂದ ತಣ್ಣನೆಯ ಗಾಳಿಯಲ್ಲಿ ತೇಲಾಡುತ್ತಾ ಸಾಗಬಹುದು. ಚಳಿಗಾಲದಲ್ಲಿ ಅಪರೂಪಕ್ಕೆ ಬಿಸಿಲಿರುವ ದಿನದಲ್ಲಿ ಇಲ್ಲಿಗೆ ಭೇಟಿಕೊಟ್ಟರೆ, ಕಣ್ಣಿಗೆ ಕಾಣಿಸುವಷ್ಟು ದೂರಕ್ಕೂ ಬೆಟ್ಟಗಳ ಸಾಲು ಕಾಣುತ್ತದೆ. ಅಲ್ಲಿರುವ ಹೋಟೆಲ್‌ನಲ್ಲಿ ಒಂದು ಕಾಫಿಯೋ ಅಥವಾ ಸ್ವಿಸ್ ಹಾಟ್ ಚಾಕಲೇಟ್ ಕುಡಿಯುತ್ತಾ ಕೆಳಗೆ ಕಣ್ಣು ಹಾಯಿಸಿದರೆ ಪುಟ್ಟ ಬೆಂಕಿ ಪೊಟ್ಟಣಗಳಂತೆ ಕಾಣುವ ಮರದ ಹೋಂ ಸ್ಟೇ ಗಳು ಕಾಣುತ್ತವೆ. ಇರುವೆಗಳು ವಾಲಾಡುತ್ತಾ ಜಾರುತ್ತಿವೆಯೇನೋ ಎಂಬಂತೆ ಕಾಣುವ ಸ್ಕಿ ಪ್ರಿಯರು.

ಒಮ್ಮೆ ಸಂಜೆಯ ಸೂರ್ಯಾಸ್ಥದವರೆಗೂ ಅಲ್ಲಿ ಸಮಯ ಕಳೆಯೋಣ ಎಂದು ಹೋಗಿದ್ದೆವು. ಆದರೆ ಮೋಡಗಳ ಆಟದ ಮಧ್ಯೆ ಸೂರ್ಯ ಕಳೆದುಹೋದ. ಸಮಾಧಾನವಿಲ್ಲದ ಅರೆ ಮನಸ್ಸಿನಲ್ಲಿ ಚೈ ಕಾರ್‌ನಲ್ಲಿ ಬೆಟ್ಟದಿಂದ ಇಳಿದು, ಹರಟುತ್ತಾ ಸಮಯ ಕಳೆದೆವು. ನಂತರ ಕಾರು ಹತ್ತಿ ಮನೆ ಕಡೆಗೆ ವಾಪಸ್ ಹೊರೆಟೆವು. ತಿರುವಿನ ರಸ್ತೆಗಳಲ್ಲಿ ಇಳಿಮುಖವಾಗಿ ಕಾರು ಚಲಿಸುತ್ತಿತ್ತು. ಸ್ವಲ್ಪ ದೂರ ಚಲಿಸಿದ ಮೇಲೆ ಒಂದು ಕಡಿದಾದ ತಿರುವು ದಾಟಿದ ತಕ್ಷಣ, ಕಣ್ಣ ಮುಂದೆ ಏನಿದೆ ಎಂದು ಅರ್ಥೈಸಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಒಂದು ಬಿಳಿಯ ಚಾದರ ಹಾಸಿದಂತೆ ಮೋಡಗಳು ಭಾಸವಾದವು. ಅದಕ್ಕಿಂತಲೂ ಎತ್ತರದ ಜಾಗದಲ್ಲಿ ನಾನು ಕಾರು ಓಡಿಸುತ್ತಿದ್ದರಿಂದ, ನಾವು ಮೋಡದ ಮೇಲೆ ಇರುವಂತೆ ಭಾಸವಾಯಿತು. ನನ್ನ ಪ್ರವಾಸದ ಅನುಭವಗಳಲ್ಲಿ ಅತ್ಯಂತ ಆಪ್ಯಾಯಮಾನವಾದ ದೃಶ್ಯ ಎಂದರೆ ಮೋಡದ ಸಾಲುಗಳ ಮೇಲಿಂದ ನಿಂತು ಮೋಡದ ಸಾಗರವನ್ನು ವೀಕ್ಷಿಸುವುದು. ಈ ಬಾರಿ ನಿಸರ್ಗ ನನಗೆ ಮೋಸ ಮಾಡಲಿಲ್ಲ. ಬೆಳಕು ಕಳೆಯುವವರೆಗೂ ಅಲ್ಲಿಯೇ ಇದ್ದು, ಫೋಟೋ – ಸೆಲ್ಫಿ ಎಲ್ಲ ತೆಗೆದುಕೊಂಡು ಮೋಡಗಳ ಅಲೆಗಳನ್ನು ಅನುಭವಿಸಿದ ಕ್ಷಣಗಳು ಇಂದಿಗೂ ಅವಿಸ್ಮರಣೀಯ!

ಬಹುತೇಕ ಯೂರೋಪಿನ ಆಲ್ಪ್ ಭಾಗದ ವಾತಾವರಣ ಇಲ್ಲಿಯೂ ಇರುತ್ತದೆ. ಚಳಿಗಾಲದಲ್ಲಿ ಹೇರಳವಾಗಿ ಸುರಿಯುವ ಹಿಮ, ಸ್ಕೀಯಿಂಗ್ ಪ್ರಿಯರಿಗೆ ಅಚ್ಚು ಮೆಚ್ಚು. ಬೇಸಿಗೆಯ ಹಿತವಾದ ವಾತಾವರಣ ಚಾರಣಿಗರಿಗೆ ಅತ್ಯಂತ ಪ್ರಿಯಕರ. ಯೂರೋಪಿನ ಪ್ರಮುಖ ನದಿಗಳಲ್ಲಿ ಒಂದಾದ ರೈನ್ ನದಿ ಇಲ್ಲಿ ಹರಿಯುತ್ತದೆ.

ವಾಡುಜ್ (Vaduz)

ಈ ಪುಟ್ಟ ರಾಷ್ಟ್ರದ ರಾಜಧಾನಿ ವಾಡುಜ್. ಈ ನಗರದ ನೆತ್ತಿಯ ಮೇಲೆ ಇರುವ ಬೆಟ್ಟದಲ್ಲಿರುವ ಅರಮನೆಯಲ್ಲಿ ರಾಜನ ವಾಸಸ್ಥಾನ. ವಾಡುಜ್ ನಾಗದಿಂದ ಚಾರಣದ ಮುಖಾಂತರ ಕೂಡ ಇಲ್ಲಿಗೆ ಬರಬಹುದು. ಕಾರಿನಲ್ಲಿ ಬಂದರೆ ಇಲ್ಲಿ ನಿಲುಗಡೆಯ ವ್ಯವಸ್ಥೆಯಿದೆ. ಮೊದಲ ಬಾರಿ ಹೋದಾಗ, ಇಲ್ಲಿ ಈಗಲೂ ರಾಜ ಮನೆತನದ ವಾಸ್ತವ್ಯವಿದೆ ಎನ್ನುವುದು ತಿಳಿಯದೆ, ಒಳಗೆ ಹೋಗುವುದು ಹೇಗೆ ಎಂದೆಲ್ಲ ವಿಚಾರಿಸಿದೆ. ವಿ ಐ ಪಿ ಪಾಸ್ ಇಲ್ಲದೆ ಒಳಗೆ ಪ್ರವೇಶವಿಲ್ಲ. ಹಾಗಾಗಿ ಈ ಅರಮನೆ ಹೊರಗಿನಿಂದ ಮಾತ್ರ ಒಂದು ಪ್ರವಾಸಿ ಆಕರ್ಷಣೆ.

ವಾಡುಜ್ ಕೇಂದ್ರ ಸ್ಥಾನದಲ್ಲಿ ಒಂದು ಮುಖ್ಯ ಬೀದಿಯಿದೆ. ಆ ಬೀದಿಯಲ್ಲಿ ಕಾರು-ವಾಹನಗಳಿಗೆ ಪ್ರವೇಶವಿಲ್ಲ. ನಡೆದಾಡಲು ಮಾತ್ರ ಅವಕಾಶ. ಅಲ್ಲಿ ನಡೆಯುವಾಗ ಕಂಡ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರ ಕಣ್ಣಿಗೆ ಬಿತ್ತು. ಅಲ್ಲಿ ಏನಿದೆ ಎಂದು ನೋಡಲು ಒಳಹೊಕ್ಕಾಗ ಒಂದು ವಿಶೇಷ ಕಾಣಿಸಿತು. ಇಲ್ಲಿ ಬರುವ ಪ್ರವಾಸಿಗರ ಪಾಸ್ಪೋರ್ಟ್ ಒಳಗೆ, ಈ ದೇಶದ ಅಧಿಕೃತ ಠಸ್ಸೆ ಒತ್ತಿ ಕೊಡುವುದು ಒಂದು ನೆನಪಿನ ಕಾಣಿಕೆಯಿದ್ದಂತೆ. ಅದಕ್ಕೆ ಮೂರೂ ಸ್ವಿಸ್ ಫ್ರಾಂಕ್ ಪಡೆಯುತ್ತಾರೆ. ಇಲ್ಲಿ ಬಂದ ನೆನಪಿಗಾಗಿ ಹಲವಾರು ಪ್ರವಾಸಿಗರ ಪಾಸ್ಪೋರ್ಟ್ Lichtenstein ಅಧಿಕೃತ ಮುದ್ರೆಯೊಂದಿಗೆ ಹಿಂದಿರುಗುತ್ತದೆ.

ಎಲ್ಲ ಪ್ರವಾಸಿ ತಾಣಗಳಲ್ಲಿಯೂ ಒಳ್ಳೆಯ ಅನುಭವಗಳೇ ಆಗುತ್ತವೆ ಎನ್ನುವುದು ಸುಳ್ಳು. ಹಲವಾರು ಬಾರಿ ಮನಸ್ಸಿಗೆ ನೋವಾಗುವಂಥಹ ಘಟನೆಗಳು ನಡೆಯುತ್ತವೆ. ಇಲ್ಲಿ ನಮಗೂ ಈ ರೀತಿಯ ಒಂದು ಅನುಭವವಾಯಿತು. ವಾಡುಜ್ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕ್ಯಾಥೆಡ್ರೆಲ್ ನೋಡಲು ಬಹಳ ಸುಂದರವಾಗಿದೆ. ಒಳ ಹೊಕ್ಕು ಅತ್ತಿತ್ತ ನೋಡಿ, ಅದರ ವಾಸ್ತು ಶಿಲ್ಪವನ್ನು ಆನಂದಿಸುತ್ತಿದ್ದೆವು. ಒಂದು ಭಾಗದಲ್ಲಿ ಕಾಣಿಕೆ ಡಬ್ಬಿ ಮತ್ತು ಕೆಲವು ಪುಟ್ಟ ಭಿತ್ತಿ ಪತ್ರಗಳು ಕಂಡು ಬಂದವು. ಅದರಲ್ಲಿ ಒಂದು ಹಸಿ ಸುಳ್ಳುಗಳಿಂದ ಭಾರತದ ಮರ್ಯಾದೆ ತೆಗೆಯುವ ಹಾಗಿತ್ತು. ಕೇರಳದಲ್ಲಿ ಬಡ ಜನರ ಮೇಲೆ ಹೇಗೆಲ್ಲಾ ದೌರ್ಜನ್ಯ ನಡೆಯುತ್ತಿದೆ, ಅಲ್ಲಿ ಕ್ರೈಸ್ತರನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಪುಟಗಟ್ಟಲೆ ವಿವರಿಸಲಾಗಿತ್ತು. ಕೊನೆಯಲ್ಲಿ ಈ ಜನರಿಗೆ ನೆರವಾಗಲು ತೆರೆದ ಮನಸ್ಸಿನಿಂದ ಧನ ಸಹಾಯ ಮಾಡಲು ಕೋರಲಾಗಿತ್ತು. ಈ ಭಿತ್ತಿ ಪತ್ರವನ್ನು ಓದಿದವರಿಗೆ ಕೇರಳ ಪಾಪಿಗಳ ಲೋಕವಾಗಿ ಕಾಣುತ್ತಿತ್ತು. “ಗಾಡ್ಸ್ ಓನ್ ಕಂಟ್ರಿ” ಎನ್ನುವ ಕೇರಳದ ಸೌಂದರ್ಯ ಇವರಿಗೇನು ಗೊತ್ತು? ಈ ರೀತಿ ಸಂಗ್ರಹಿಸಿದ ಹಣವನ್ನು ಹೇಗೆ, ಏಕೆ ವ್ಯಯಿಸಲಾಗುತ್ತದೆ ಎನ್ನುವುದು ಭಾರತದಲ್ಲಿರುವ ಎಲ್ಲರಿಗೂ ಗೊತ್ತಿರುವ ವಿಚಾರ!

ನುರಿತ ಅಕ್ಕಸಾಲಿಗನ ಕೈಚಳಕದಲ್ಲಿ ಮೂಡಿಬರುವ ಆಕರ್ಷಕ ಮೂಗುತಿಯಂತೆ ನನಗೆ Lichtenstein ಭಾಸವಾಗುತ್ತದೆ. ಮೂಗುತಿ ಚಿಕ್ಕದಾಗಿದ್ದರೂ, ಅದರ ಸೌಂದರ್ಯದಿಂದಲೇ ಎದ್ದು ಕಾಣುವ ಸಾಮರ್ಥ್ಯವಿರುವ ಒಂದು ಆಭರಣ. ಅಂತೆಯೇ Lichtenstein ಸಹ ಪುಟ್ಟ ರಾಷ್ಟ್ರವಾದರೂ, ಪ್ರಕೃತಿ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತದೆ. ಇದನ್ನು ಯೂರೋಪಿನ ಮೂಗುತಿ ಎಂದರು ತಪ್ಪಾಗಲಾರದು. ನೀವು ಸ್ವಿಟ್ಜರ್ಲ್ಯಾಂಡ್ ಪ್ರವಾಸ ಕೈಗೊಂಡರೆ, ಒಂದು ದಿನ ಈ ಪುಟ್ಟ ರಾಷ್ಟ್ರದ ಸುತ್ತಾಟಕ್ಕಾಗಿ ಕಾದಿರಿಕೊಳ್ಳಿ.