ಅನಾಮದಾಸ ತುಂಬ ಹಿಂದಿನಿಂದ ಬರೆಯುತ್ತಾ ಬಂದಿದ್ದಾನೆ. ಆತನ ಕಡತದ ಒಂದು ಮನೋರಂಜಕ ಅಂಶ ರೈಕ್ವ ಆಖ್ಯಾನ. ಸುಮಾರು ನಲವತ್ತು ವರ್ಷಗಳ ಹಿಂದೆ ಆತ ಛಾಂದೋಗ್ಯ ಉಪನಿಷತ್ತಿನ ರೈಕ್ವ ಆಖ್ಯಾನದ ಮೇಲೆ ಒಂದು ಕಥೆ ಬರೆದಿದ್ದ. ಅದರ ಶೀರ್ಷಿಕೆ – ‘ಎಲ್ಲವೂ ಗಾಳಿ’ ಎಂದು. ಅದು ಎಲ್ಲೂ ಬೆಳಕು ಕಾಣಲಿಲ್ಲ. ಆತ ಕಥೆಯನ್ನು ತುಂಬ ಲಘು ಮನೋಭಾವದಿಂದ ಬರೆದಿದ್ದ. ಈಗ ಅದರ ಮತ್ತೊಂದು ರೂಪ ಅವನಿಗೆ ದೊರೆತಿದೆ. ತಾನು ಲಘುವಾದೆನಲ್ಲ ಎಂದು ಆತನಿಗೆ ಖೇದ. ಅದರ ಕೊನೆಗೆ ಆತ ಕೆಲವು ಹೊಸ ಪಂಕ್ತಿಗಳನ್ನು ಸೇರಿಸಿದನೆಂದು ಕಾಣುತ್ತದೆ.
ಡಾ. ಹಜಾರೀಪ್ರಸಾದ ದ್ವಿವೇದಿ ರಚಿಸಿರುವ “ಅನಾಮದಾಸನ ಕಡತ” ಕಾದಂಬರಿಯಯನ್ನು ಮ.ಸು. ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

 

ಕಡತವನ್ನು ಓದಿ ಮುಗಿಸಿದೆ. ವಿಚಿತ್ರವಾದ ಹರಟೆಮಲ್ಲ ಈ ಅನಾಮ. ಈತನ ಅನುಭವಕ್ಷೇತ್ರ ತುಂಬ ಸೀಮಿತವೆನ್ನಿಸುತ್ತದೆ. ಆದರೆ ಈತ ಆ ಎಲ್ಲೆಯಲ್ಲೇ ಸಾಕಷ್ಟು ಜಿಗಿದಾಟ ಮಾಡಬಲ್ಲ. ಕೆಲವೊಮ್ಮೆ ಎಷ್ಟೊಂದು ಜಿಗಿತ ವಾಡುತ್ತಾನೆಂದರೆ ‘ಅಂಗದನ ಜಿಗಿತ’, ನೆಗೆದೇ ಸುಮ್ಮನಾದಾನು. ಶ್ರೀರಾಮ ಲಂಕೆಯನ್ನು ಗೆದ್ದು ಮರಳಿದ ಮೇಲೆ ಮಾವನ ಮನೆಗೆ ಹೋದನಂತೆ. ಆತನ ಜೊತೆಯಲ್ಲೇ ಕಪಿಸೈನ್ಯವೂ ಹೋಗಿತ್ತಂತೆ. ಲೋಕವ್ಯವಹಾರ ತಿಳಿಯದ ಈ ಕಪಿಗಳು ಏನಾದರೂ ಆಭಾಸ ಮಾಡಿ ಎಲ್ಲಿ ಕೆಟ್ಟ ಹೆಸರು ತರುತ್ತವೋ ಎಂಬ ಅಳುಕು ಲಕ್ಷ್ಮಣನಿಗೆ. ಆದ್ದರಿಂದ ಯಾವಾಗಲೂ ಅವುಗಳಿಗೆ ಹೇಳಿಕೊಡುತ್ತಿದ್ದನಂತೆ, ‘ನನ್ನನ್ನು ನೋಡುತ್ತಿರಿ, ನಾನು ಸನ್ನೆ ಮಾಡಿ ತೋರಿಸಿದಂತೆ ಮಾಡಿ’ – ಎಂದು. ಪಾಪ ಆ ಕಪಿಗಳೂ ಕೂಡ ತುಂಬ ಎಚ್ಚರಿಕೆಯಿಂದಿದ್ದವು. ಲಕ್ಷ್ಮಣ ಏನು ಮಾಡುತ್ತಾನೆ ಎಂದು ಯಾವಾಗಲೂ ಗಮನಿಸುತ್ತಿದ್ದವು. ಊಟಕ್ಕೆ ಎಲ್ಲರೂ ಕುಳಿತಿದ್ದರು. ಲಕ್ಷ್ಮಣ ಅವುಗಳಿಗೆ ತುಂಬ ಎಚ್ಚರಿಕೆಯಿಂದಿರುವಂತೆ ಹೇಳಿದ್ದ. ‘ಅನ್ನ ಕಂಡ ಕೂಡಲೆ ಶುರುಮಾಡಿಬಿಡಬೇಡಿ. ನಾನು ಸೂಚನೆ ಕೊಟ್ಟಂತೆ ಮಾಡಿ. ಮಾವನ ಮನೆ ಕಣರಯ್ಯಾ! ಏನಾದರೂ ಗಲಿಬಿಲಿಯಾದೀತು ಜೋಕೆ!’ ರಾಮನ ಒಂದು ಪಕ್ಕದಲ್ಲಿ ಸುಗ್ರೀವ ಕುಳಿತುಕೊಂಡ. ಮತ್ತೊಂದು ಕಡೆ ಯುವರಾಜ ಅಂಗದ. ಲಕ್ಷ್ಮಣ ಮೂಲೆಯಲ್ಲಿ ಸುಗ್ರೀವನ ಪಕ್ಕದಲ್ಲಿ ಕುಳಿತಿದ್ದ. ಎಡ, ಬಲ ಮತ್ತು ಎದುರಿಗೆ ವಾನರ ಯೂಥಾಧಿಪತಿಗಳು! ಊಟಕ್ಕೆ ಬಡಿಸಿದರು. ಲಕ್ಷ್ಮಣ ಸನ್ನೆ ಮಾಡಿದ! ಸದ್ದುಗದ್ದಲವಿಲ್ಲ! ವಾನರರೆಲ್ಲ ಆತನ ಕಡೆ ನೆಟ್ಟ ದೃಷ್ಟಿಯುಳ್ಳವರಾಗಿ, ಕಾತರರಾಗಿ ನಿರೀಕ್ಷೆ ಮಾಡುತ್ತಿದ್ದರು. ಲಕ್ಷ್ಮಣ ಒಂದು ನಿಂಬೆಯ ಹೋಳನ್ನು ಎತ್ತಿಕೊಂಡು ಅದನ್ನು ಅದುಮಿದ. ಅದರಿಂದ ಒಂದು ಬೀಜ ಸಿಡಿದು ಮೇಲಕ್ಕೆ ಹಾರಿತು. ಕಪಿಗಳು ಅದೂ ಒಂದು ಸೂಚನೆ ಎಂದುಕೊಂಡವು. ಹತ್ತಿರವಿದ್ದ ಕೋತಿ ತಾನೂ ಕೊಂಚ ಹಾರಿತು. ಕ್ರಮಕ್ರಮೇಣ ಎಲ್ಲ ಕೋತಿಗಳೂ ಹಾರತೊಡಗಿದವು. ಇನ್ನೂ ಕೊಂಚ ಹೆಚ್ಚು ಎತ್ತರ ಹಾರಲು ಹುರುಡು ಕಟ್ಟಿಕೊಂಡವು. ರಾಮ ಲಕ್ಷ್ಮಣರು ಚಿಂತಿತರಾದರು! – ಇದೇನಾಗುತ್ತಿದೆ ಎಂದು. ಆದರೆ ಅಷ್ಟರಲ್ಲಿ ಅಂಗದನಂತೂ ಮೇಲುಛಾವಣಿಯನ್ನೇ ಹಾರಿಸಿಕೊಂಡು ಹಾರಿದ. ಇದನ್ನೇ ‘ಅಂಗದನ ಜಿಗಿತ’ ಎನ್ನುತ್ತಾರೆ. ಅನಾಮನೂ ಹೀಗೆಯೇ ಒಮ್ಮೊಮ್ಮೆ ಜಿಗಿದಾಡುವುದುಂಟು. ಆದರೆ ಆತ ಅಂಗದನಂತೆ ಮೇಲುಛಾವಣಿಯನ್ನು ಹಾರಿಸಿಕೊಂಡು ಹಾರಲಾರ. ಮೇಲುಛಾವಣಿಗೆ ಡಿಕ್ಕಿ ಹೊಡೆದು ಕೆಳಕ್ಕೇ ಬರುತ್ತಾನೆ. ಎಲ್ಲೆಕಟ್ಟು ಅವನು ಹೆಚ್ಚು ನೆಗೆಯದಂತೆ ತಡೆಯುತ್ತದೆ. ಅನಾಮನ ಒಳಗೆ ಒಬ್ಬ ಸುಪ್ತ ಕವಿಯೂ ಇದ್ದಾನೆ. ಅವನು ಇರಲಾರದೆ ಎದ್ದೆದ್ದು ಕುಳಿತುಕೊಳ್ಳುತ್ತಾನೆ. ಆದರೆ ಈ ಕವಿ ಆತನ ವ್ಯಕ್ತಿತ್ವವನ್ನು ಮಸುಳಿಸಲಾರ. ಅನಾಮನೂ ಅವನು ಹಾಗೆ ಮಾಡಗೊಡ. ಆ ಬಡಪಾಯಿ ನಿದ್ರಿಸುತ್ತಿರುವ ಕವಿ ಎಚ್ಚರಗೊಳ್ಳುತ್ತಾನೆ. ಮತ್ತೆ ಯಾವುದೋ ಕಣ್ಣಿಗೆ ಕಾಣದ ಚಾಟಿಯೇಟು ತಿಂದು ಪ್ರಜ್ಞಾಶೂನ್ಯನಾಗುತ್ತಾನೆ. ಸಾಯುವುದೂ ಇಲ್ಲ. ಜಿಗಿಯುವುದನ್ನೂ ಬಿಡುವುದಿಲ್ಲ. ಅನಾಮನೊಳಗಿನ ವಿಮರ್ಶಕ ಯಾವಾಗಲೂ ಗರ್ಜನೆ ತರ್ಜನೆಯ ಮೂಲಕ ಅವನು ಎಚ್ಚರ ತಪ್ಪುವಂತೆ ಮಾಡಿಬಿಡುತ್ತಾನೆ. ಆದರೆ ಈ ವಿಮರ್ಶಕನದು ಬರಿಯ ಗರ್ಜನೆ. ಆತ ಅಂಥ ಶಕ್ತಿಶಾಲಿಯೇನಲ್ಲ. ಕಾಳಿದಾಸ ತನ್ನ ವಿದೂಷಕನೊಬ್ಬನಿಂದ ಹೇಳಿಸಿದ್ದಾನೆ – ‘ಸರ್ಪಗಳಲ್ಲಿ ಡುಂಡುಭವಿರುವಂತೆ ಬ್ರಾಹ್ಮಣರಲ್ಲಿ ನಾನು.’ ಡುಂಡುಭವೆಂದರೆ ವಿಷವಿಲ್ಲದ ಸರ್ಪ, ಒಳ್ಳೆ. ಅನಾಮ ವಿಮರ್ಶಕರಲ್ಲಿ ಒಳ್ಳೆ. ಇದರ ಅರ್ಥ ಇಷ್ಟೆ. ಅನಾಮದಾಸನ ಕಡತದಿಂದ ಅನ್ನಿಸುವುದು ಇಷ್ಟೆ – ಅದರ ಲೇಖಕನ ಒಳಗಿನ ಕವಿ ನಿದ್ದೆ ಮಾಡುತ್ತಿದ್ದಾನೆ, ವಿಮರ್ಶಕ ದುರ್ಬಲನಾಗಿದ್ದಾನೆ. ಇಷ್ಟಾದರೂ ಮನಸ್ಸನ್ನು ಸೆಳೆಯುವ ಏನೋ ವಸ್ತು ಅದರಲ್ಲಿದೆ.

(ಡಾ. ಹಜಾರೀಪ್ರಸಾದ ದ್ವಿವೇದಿ)

ಬಹುಶಃ ಇದು ಆತನ ಪ್ರಮಾಣಜ್ಞಾನವೆಂದು ಕಾಣುತ್ತದೆ. ಎಲ್ಲಿ ನಿಲ್ಲಬೇಕು, ಎಲ್ಲಿ ತಿರುಗಬೇಕು, ಎಲ್ಲಿ ಜೋರಾಗಿ ನಡೆಯಬೇಕು – ಎನ್ನುವುದು ಅನಾಮನಿಗೆ ಗೊತ್ತು. ಆದರೆ ಬರೆಯಬಾರದುದೆಷ್ಟು ಎಂಬುದು ಅವನಿಗೆ ಗೊತ್ತಿಲ್ಲ. ಗೊತ್ತಿದ್ದರೆ ಇಷ್ಟೊಂದು ಬರೆಯುತ್ತಿರಲಿಲ್ಲ, ಈಗಲೇ ಈ ಮಹಾರಾಯ ಒಂದು ದೊಡ್ಡ ಮಹಾಭಾರತ ಬರೆದುಹಾಕಿಬಿಟ್ಟಿದ್ದಾನೆ. ‘ಮಹಾಭಾರತ’ ಎಂದರೆ – ಅದರಲ್ಲಿ ದೊರೆಯುವುದು ಬೇರೆ ಕಡೆಯೂ ದೊರೆಯುತ್ತದೆ, ಅದರಲ್ಲಿ ದೊರೆಯದ್ದು ಬೇರೆಲ್ಲೂ ದೊರೆಯದು (ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ / ) ಎಂಬ ಕಾರಣದಿಂದಲ್ಲ. ಅದು ತುಂಬ ಭಾರವಾಗಿದೆ, ತುಂಬ ತೂಕ. ಆದ್ದರಿಂದ ಮಹಾಭಾರತದಲ್ಲೇ ಒಂದೆಡೆ ಹೀಗೆ ಹೇಳಿದೆ – ತಕ್ಕಡಿಯ ಒಂದು ತಟ್ಟೆಯಲ್ಲಿ ವೇದಗಳನ್ನೆಲ್ಲ ಇಡಲಾಯಿತಂತೆ. ಇನ್ನೊಂದರಲ್ಲಿ ಈ ಪಂಚಮವೇದವನ್ನು ಇರಿಸಿದರಂತೆ. ಕೊನೆಗೆ ಇದೇ ಹೆಚ್ಚು ಭಾರವೆಂದು ಕಂಡುಬಂದಿತಂತೆ. ಆದ್ದರಿಂದ ‘ಮಹತ್ತಾತ್ , ಭಾರವತ್ವಾತ್ ಚ ಮಹಾಭಾರತಮುಚ್ಯತೇ /’ ಮಹತ್ತು ಮತ್ತು ಭಾರದಿಂದ ಕೂಡಿದ್ದರಿಂದ ಈ ಗ್ರಂಥಕ್ಕೆ ಮಹಾಭಾರತವೆಂದು ಹೆಸರು ಬಂದಿತು. ಹಿಂದಿಯ ಥೀಸೀಸ್‌ಗಳಲ್ಲಿ ಅತ್ಯಂತ ಭಾರಿಯಾದ – ಒಂದಂತೂ ಹದಿನಾಲ್ಕು ಕಿಲೋ ಇತ್ತು – ಅದಕ್ಕಿಂತಲೂ ಇದು ತೂಕವಾದದ್ದು. ಆದ್ದರಿಂದ ಇದನ್ನು ‘ಮಹಾಭಾರತ’ವೆಂದೇ ಕರೆಯಬೇಕು. ಅರ್ಥಾತ್ ಮಹಾಭಾರವುಳ್ಳ ಕಡತ. ಇಂಥ ಭಾರವಾದ ಹೊತ್ತಿಗೆಯನ್ನು ಯಾವುದೇ ಓದುಗನ ತಲೆಯ ಮೇಲೆ ರಾಚುವ ಅಪರಾಧವನ್ನು ನಾನೆಸಗಲಾರೆ. ಆದ್ದರಿಂದ ನಾನು ಈ ಗ್ರಂಥದ ಕೆಲವು ಅಂಶಗಳನ್ನು ಮಾತ್ರ ಆಯ್ದುಕೊಂಡಿದ್ದೇನೆ. ಅವುಗಳನ್ನೇ ಪ್ರಕಟಿಸಿ ನನ್ನ ಕರ್ತವ್ಯವನ್ನು ಪಾಲಿಸಿದ್ದೇನೆ.

ಪ್ರತಿಯೊಂದು ತಪ್ಪಿಗೂ ಓದುಗರಿಂದ ಕ್ಷಮೆ ಬೇಡುವುದು ಹಿಂದಿಯ ಒಂದು ಪದ್ಧತಿ. ಯಾವುದೇ ಓದುಗ ಕ್ಷಮಿಸಿದ್ದೇನೆ ಎಂದು ಬರೆದದ್ದನ್ನು ನಾನು ಕೇಳಿಲ್ಲ. ಆದರೆ ಅದಕ್ಕೆ ವಿರುದ್ಧವಾದುದನ್ನೂ ಕೇಳಿಲ್ಲ. ಹಿಂದಿಯ ಪ್ರತಿಯೊಬ್ಬ ಓದುಗನೂ ಕ್ಷಮೆಯ ಸಾಗರ ಎಂದು ನಂಬಿಕೆ. ಕ್ಷಮೆ ಬೇಡಿದ್ದೇ ತಡ, ಆತ ಔದಾರ್ಯದಿಂದ ಮೌನವಾಗಿ ಕ್ಷಮಿಸಿಬಿಡುತ್ತಾನೆ. ಅನಾಮ ಇದನ್ನು ಬಲ್ಲ. ಕ್ಷಮಾಯಾಚನೆಯ ಅಗತ್ಯ ಅವನಿಗೆ ಕಂಡುಬಂದಿಲ್ಲ. ಅದು ಅನಾಯಾಸವಾಗಿ ದೊರೆಯುವ ಪದಾರ್ಥ, ಬೇಡದೆಯೇ ದೊರೆಯುವುದು. ಆದರೆ ನಾನು ಎಂಥ ಕಠಿಣ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ಎಂಬುದು ಎಲ್ಲರಿಗೂ ಅರ್ಥವಾಗುವುದಿಲ್ಲ. ನನ್ನ ಸಮಾನಧರ್ಮಿಯಾದ ಅನುಭವಿ ಎಲ್ಲೂ ದೊರೆಯಲಾರ. ಆದರೂ ನಾನು ಕ್ಷಮೆ ಬೇಡುತ್ತೇನೆ. ತಪ್ಪೇನು? ಹೆಚ್ಚೆಂದರೆ ಕ್ಷಮೆ ದೊರೆಯದಿರಬಹುದು. ದೊರೆತ ಮಾತ್ರಕ್ಕೆ ನಿಧಿ ಸಿಕ್ಕಿಬಿಟ್ಟಿತೇನು? ದೊರೆಯದಿದ್ದರೆ ಕೊಳ್ಳೆ ಹೋಗುವುದು ಅಷ್ಟರಲ್ಲೇ ಇದೆ.

ಅನಾಮದಾಸ ತುಂಬ ಹಿಂದಿನಿಂದ ಬರೆಯುತ್ತಾ ಬಂದಿದ್ದಾನೆ. ಆತನ ಕಡತದ ಒಂದು ಮನೋರಂಜಕ ಅಂಶ ರೈಕ್ವ ಆಖ್ಯಾನ. ಸುಮಾರು ನಲವತ್ತು ವರ್ಷಗಳ ಹಿಂದೆ ಆತ ಛಾಂದೋಗ್ಯ ಉಪನಿಷತ್ತಿನ ರೈಕ್ವ ಆಖ್ಯಾನದ ಮೇಲೆ ಒಂದು ಕಥೆ ಬರೆದಿದ್ದ. ಅದರ ಶೀರ್ಷಿಕೆ – ‘ಎಲ್ಲವೂ ಗಾಳಿ’ ಎಂದು. ಅದು ಎಲ್ಲೂ ಬೆಳಕು ಕಾಣಲಿಲ್ಲ. ಆತ ಕಥೆಯನ್ನು ತುಂಬ ಲಘು ಮನೋಭಾವದಿಂದ ಬರೆದಿದ್ದ. ಈಗ ಅದರ ಮತ್ತೊಂದು ರೂಪ ಅವನಿಗೆ ದೊರೆತಿದೆ. ತಾನು ಲಘುವಾದೆನಲ್ಲ ಎಂದು ಆತನಿಗೆ ಖೇದ. ಅದರ ಕೊನೆಗೆ ಆತ ಕೆಲವು ಹೊಸ ಪಂಕ್ತಿಗಳನ್ನು ಸೇರಿಸಿದನೆಂದು ಕಾಣುತ್ತದೆ. ಆರಂಭದಲ್ಲಿ ಕೆಂಪು ಶಾಯಿಯಿಂದ ಆತ ಬರೆದಿದ್ದಾನೆ – ನಾನು ಆಗ ಅತ್ಯಂತ ಅಪ್ರಬುದ್ಧನಾಗಿದ್ದೆ – ಎಂದು. ಏನಾದರೂ ಇರಲಿ, ಈ ಮುನ್ನುಡಿಯಲ್ಲಿ ಆ ಹಳೆಯ ಕಥೆಯನ್ನು ಕೊಡುತ್ತಿದ್ದೇನೆ. ಇದರಿಂದ ಓದುಗರಿಗೆ ಅನಾಮನ ವ್ಯಕ್ತಿತ್ವದ ವಿನೋದಮಯ ಮುಖದ ಸುಳಿವು ದೊರೆತೀತು, ಅನಂತರ ಬರೆದ ರೈಕ್ವ ಆಖ್ಯಾನವನ್ನೂ ಬೇರೆ ಕೊಟ್ಟಿದ್ದೇನೆ. ಎಲ್ಲವೂ ಗಾಳಿ!

ಈ ದೇಶದಲ್ಲಿ ದೊಡ್ಡ ದೊಡ್ಡ ಋಷಿಮುನಿಗಳು ಆಗಿಹೋಗಿದ್ದಾರೆ. ಅವರ ತಪಸ್ಸು ಮತ್ತು ಮನನ, ಚಿಂತನದ ಪ್ರಭಾವ ಇಂದೂ ನಮ್ಮ ಮೇಲಿದೆ. ಇಂಥದೇ ಒಬ್ಬ ಋಷಿ ರೈಕ್ವ. ಉಪನಿಷತ್ತಿನಲ್ಲಿ ಈತನ ಚರ್ಚೆ ಬರುತ್ತದೆ. ನಮಗೆ ತಿಳಿದಿರುವ ಪ್ರಕಾರ ಆತ ಒಂದು ರಥದಡಿಯಲ್ಲಿ ಕುಳಿತು ಮೈಯನ್ನು (ಬಹುಶಃ ಬೆನ್ನನ್ನು) ಕೆರೆದುಕೊಳ್ಳುತ್ತಿದ್ದ. ಅದೇ ವೇಳೆಗೆ ರಾಜ ಜಾನಶ್ರುತಿ ತತ್ತ್ವಜ್ಞಾನದ ಭಿಕ್ಷೆ ಬೇಡಲು ಆತನ ಬಳಿಗೆ ಬಂದ. ರೈಕ್ವ ಎಲ್ಲ ಬಿಟ್ಟು ಆ ರಥದ ಅಡಿಯಲ್ಲೇ ಏಕೆ ಕುಳಿತಿದ್ದ ಎಂಬುದು ಯಾರಿಗೂ ತಿಳಿಯದು. ಆತ ಸ್ವತಃ ರಥವನ್ನು ನಿರ್ಮಿಸುವ ಇಲ್ಲವೆ ನಡೆಸುವ ಕಾಯಕ ಮಾಡುತ್ತಿರಬಹುದೆಂದು ಕೆಲವರ ಊಹೆ, ಅಥವಾ ಉಪನಿಷತ್ತಿನಲ್ಲಿ ಚರ್ಚಿಸಿರುವ ಈ ಪ್ರಸಂಗದಲ್ಲಿ ಸಂಯೋಗವಶಾತ್ ಆತ ರಥದ ನೆರಳಿನಲ್ಲಿ ಕುಳಿತಿದ್ದಿರಲೂ ಬಹುದು. ಆದರೆ ಎರಡೂ ಊಹೆಗಳು ಅಸಂಗತವೆನ್ನಿಸುತ್ತವೆ. ಏಕೆಂದರೆ ಆತ ರಥಚಾಲಕನಲ್ಲ, ಶುದ್ಧ ತತ್ತ್ವಚಿಂತಕನಾದ ಋಷಿ. ಸಂಯೋಗದ ಮಾತೂ ಸರಿಯಲ್ಲ. ಮೊದಲ ಸಲ ರಾಜನ ದೂತ ಅವನನ್ನು ಪತ್ತೆ ಹಚ್ಚಲು ಅವನ ಬಳಿಗೆ ಹೋದಾಗಲೂ ಆತ ರಥದ ನೆರಳಿನಲ್ಲೇ ಕುಳಿತು ಬೆನ್ನು ಕೆರೆದುಕೊಳ್ಳುತ್ತಿದ್ದ, ಮತ್ತೆ ಎರಡನೆಯ ಸಾರಿ ರಾಜನೇ ಬಂದಾಗಲೂ ಅದೇ ಸ್ಥಿತಿ! ಮೂರನೆಯ ಸಲ ರಾಜ ಹೋದಾಗಲೂ ಅದೇ ಪಾಡು! ಆ ಬಡಪಾಯಿಗೆ ಅದರಿಂದ ಎಷ್ಟು ನೆಳಲು ದೊರೆಯುತ್ತಿತ್ತೋ ಕಾಣೆ. ನೆರಳಿಗಿಂತ ರಥದ ಮೇಲೆ ಆತನಿಗೆ ಹೆಚ್ಚು ಪ್ರೀತಿಯಿದ್ದಿರಬೇಕು. ಸಾಧ್ಯವಾದಷ್ಟೂ ಆತ ತನ್ನ ರಥದಿಂದ ದೂರ ಸರಿಯಬಯಸುತ್ತಿರಲಿಲ್ಲವೆಂದು ಊಹಿಸಬಹುದೋ ಏನೋ. ಆದರೆ ಇದಕ್ಕಿಂತಲೂ ಕಠಿಣ ಪ್ರಶ್ನೆಯೆಂದರೆ ಆತ ಬೆನ್ನನ್ನೇಕೆ ಕೆರೆದುಕೊಳ್ಳುತ್ತಿದ್ದ ಎಂಬುದು. ಒಂದು ಕಾರಣ ಹೀಗಿರಬಹುದು – ಆತನಿಗೆ ಸ್ನಾನದ ಅಭ್ಯಾಸವೇ ಇದ್ದಿಲ್ಲದಿರಬಹುದು, ಅದರ ಫಲವಾಗಿ ದೇಹದಲ್ಲಿ ಕೊಳೆ ಕಟ್ಟಿಕೊಂಡಿದ್ದಿರಬೇಕು. ಆದರೆ ಋಷಿಮುನಿಗಳ ಬಗೆಗೆ ಇಂಥ ಮಾತನ್ನು ಹೇಗೆ ಹೇಳುವುದು? ಋಷಿಮುನಿಗಳು ಬೇರೆ ಏನನ್ನು ಮಾಡದಿದ್ದರೂ ಬೆಳಗೆದ್ದು ಸ್ನಾನ ಮಾತ್ರ ಖಂಡಿತ ಮಾಡುತ್ತಿದ್ದರು. ಭಾರತದ ಪ್ರಾಚೀನ ಸಾಹಿತ್ಯದಿಂದ ಇಷ್ಟು ಮಾತ್ರವಾದರೂ ತಿಳಿದುಬರುತ್ತದೆ. ಎಲ್ಲ ಋಷಿಗಳೂ ಸ್ನಾನ ಮಾಡುತ್ತಿದ್ದರೆ ರೈಕ್ವನೂ ಸ್ನಾನ ಮಾಡುತ್ತಿದ್ದಿರಬೇಕು. ಆದ್ದರಿಂದ ಆತನ ಕೆರೆತದ ಕಾರಣ ಮೈಯಲ್ಲಿ ಕಟ್ಟಿದ್ದ ಕೊಳೆಯಿರಲಾರದು. ಋಷಿಮುನಿಗಳು ಸ್ನಾನವನ್ನೇನೋ ಖಂಡಿತ ಮಾಡುತ್ತಿದ್ದರು. ಆದರೆ ಮೈ ಒರೆಸಿಕೊಳ್ಳುತ್ತಿದ್ದರೋ ಇಲ್ಲವೋ ಎಂಬ ಸಂದೇಹ ಉಳಿದುಕೊಳ್ಳುತ್ತದೆ. ಆ ಬಡಪಾಯಿಗಳ ಹತ್ತಿರ ಬಟ್ಟೆಯೆಲ್ಲಿರುತ್ತಿತ್ತು? ಬರಿಯ ವಲ್ಕಲವಿರುತ್ತಿತ್ತು. ಅದರಿಂದ ಮೈ ಒರೆಸಿಕೊಳ್ಳುವ ಕೆಲಸ ಕೊಂಚ ಕಠಿಣವೇ ಇರಬಹುದು. ಇದನ್ನೇ ಛಾಂದೋಗ್ಯದಲ್ಲಿ ಹೇಳಿರುವಂತೆ ಕಾಣುತ್ತದೆ. ನಿರಂತರ ನೆನೆದಿದ್ದರಿಂದಲೋ ಏನೋ ರೈಕ್ವ ಮುನಿಗೆ ಕೊಂಚ ಹುಳುಕಡ್ಡಿ ರೋಗ ತಗುಲಿದ್ದಿರಬೇಕು ಎಂದು. ಋಷಿಗಳು ರೋಗಗ್ರಸ್ತರಾಗಿದ್ದರೆಂಬ ವಿಷಯ ಕೂಡ ಬಹಳ ಕಡಿಮೆ ಕೇಳಿಬಂದಿದೆಯೆಂದರೂ ಹುಳುಕಡ್ಡಿಯಂಥ ರೋಗ ಆತನಿಗೆ ಖಂಡಿತ ತಗುಲಿದ್ದಿರಲಾರದು. ಹುಳುಕಡ್ಡಿಯ ರೋಗ ನಾಗರಿಕತೆಯ ಕೊಡುಗೆಯಂತೆ. ಜನ ಹೆಚ್ಚು ಬಟ್ಟೆ ತೊಡತೊಡಗಿದರು. ಸರಿ, ಹುಳುಕಡ್ಡಿಯ ರೋಗ ಬಂದು ಅಮರಿಕೊಂಡಿತು. ಆದ್ದರಿಂದ ರೈಕ್ವ ಮುನಿಗೆ ಹುಳುಕಡ್ಡಿಯಿದ್ದಿರಲಾರದು. ಮೈ ಕೆರೆದುಕೊಳ್ಳುವುದು ಆತನಿಗೆ ಒಂದು ಅಭ್ಯಾಸವಾಗಿ ಹೋಗಿರಬೇಕು. ಋಷಿಗಳು ತಮ್ಮ ಮೇಲೆ ನಿಯಂತ್ರಣವಿಟ್ಟುಕೊಳ್ಳುತ್ತಿದ್ದರು. ಕಡಿತವಾದರೂ ಅದನ್ನು ಕೆರೆದುಕೊಳ್ಳುವ ಅಗತ್ಯ ಬೀಳುತ್ತಿರಲಿಲ್ಲ. ಭಗವಾನ್ ಮಹಾವೀರ ೧೩ ವರ್ಷಗಳ ತನಕ ಘೋರ ತಪಸ್ಸು ಮಾಡಿದಾಗ ಆತ ತನ್ನ ಮೈಯನ್ನು ಕೆರೆದುಕೊಳ್ಳಲೂ ಇಲ್ಲವಂತೆ. ಇದರಿಂದ ಒಂದು ಮಾತಂತೂ ನಿಶ್ಚಿತ. ಋಷಿಮುನಿಗಳಿಗೂ ಕಡಿತವುಂಟಾಗುತ್ತಿದ್ದುದು ನಿಜ. ಆದರೆ ಅತ್ಯಧಿಕ ಸಂಯಮದಿಂದಾಗಿ ಅವರು ಅದನ್ನು ಕೆರೆದುಕೊಳ್ಳುತ್ತಿರಲಿಲ್ಲ. ಆದರೆ ರೈಕ್ವ ಮುನಿ ಕೆರೆದುಕೊಳ್ಳುತ್ತಿದ್ದ. ಕೆಲವು ಕೆಲಸಗಳನ್ನು ಮನುಷ್ಯ ತಿಳಿದು ಮಾಡುವುದಿಲ್ಲ. ಯಾವುದೇ ಪ್ರಯೋಜನದಿಂದಲೂ ಮಾಡುವುದಿಲ್ಲ. ಅದು ಒಂದು ಬಗೆಯ ಚಟವೆನ್ನಬೇಕು. ರೈಕ್ವ ಮುನಿ ಕೂಡ ಯಾವುದೇ ಪ್ರಯೋಜನದಿಂದಲ್ಲ, ಅಭ್ಯಾಸಬಲದಿಂದ ಹೀಗೆ ಮಾಡುತ್ತಿದ್ದಿರಬಹುದು. ಏನಾದರೂ ಆಗಲಿ, ಆತನ ಕೆರೆತದ ಉಲ್ಲೇಖವಂತೂ ಉಪನಿಷತ್ತುಗಳಲ್ಲಿ ದೊರೆಯುತ್ತದೆ. ಆತ ಗಾಡಿಯ ನೆರಳಿನಲ್ಲಿ ಕುಳಿತು ಮೈ ಕೆರೆದುಕೊಳ್ಳುತ್ತಿದ್ದ.

ನಾಮನೊಳಗಿನ ವಿಮರ್ಶಕ ಯಾವಾಗಲೂ ಗರ್ಜನೆ ತರ್ಜನೆಯ ಮೂಲಕ ಅವನು ಎಚ್ಚರ ತಪ್ಪುವಂತೆ ಮಾಡಿಬಿಡುತ್ತಾನೆ. ಆದರೆ ಈ ವಿಮರ್ಶಕನದು ಬರಿಯ ಗರ್ಜನೆ. ಆತ ಅಂಥ ಶಕ್ತಿಶಾಲಿಯೇನಲ್ಲ. ಕಾಳಿದಾಸ ತನ್ನ ವಿದೂಷಕನೊಬ್ಬನಿಂದ ಹೇಳಿಸಿದ್ದಾನೆ – ‘ಸರ್ಪಗಳಲ್ಲಿ ಡುಂಡುಭವಿರುವಂತೆ ಬ್ರಾಹ್ಮಣರಲ್ಲಿ ನಾನು.’ ಡುಂಡುಭವೆಂದರೆ ವಿಷವಿಲ್ಲದ ಸರ್ಪ, ಒಳ್ಳೆ. ಅನಾಮ ವಿಮರ್ಶಕರಲ್ಲಿ ಒಳ್ಳೆ.

ಇಂಥ ಹೊತ್ತಿನಲ್ಲೇ ರಾಜ ಜಾನಶ್ರುತಿ ಆತನ ಬಳಿಗೆ ಬಂದ. ಆ ರಾಜ ಅಂಥ ದೊಡ್ಡ ಕುಳವಲ್ಲವೆಂದು ಕಾಣುತ್ತದೆ. ರಾಜ ಎಂದರೆ ಈಗಿನ ಕಾಲದಲ್ಲಿ ನಾವು ಧನ, ಧಾನ್ಯ, ವೈಭವಾಡಂಬರಗಳನ್ನು ಊಹಿಸುವೆವಲ್ಲವೆ? ಆದರೆ ಆಗ ಏನಿದ್ದೀತು? ರಾಜ ಎಂದರೆ ಯಾವುದೋ ಸಣ್ಣಪುಟ್ಟ ಹಳ್ಳಿಯ ತಿನ್ನಲು ಉಣ್ಣಲು ಚೆನ್ನಾಗಿದ್ದ ಮುಖಂಡನಿದ್ದಿರಬೇಕು. ಜನ ಆತನನ್ನು ರಾಜನೆಂದು ಕರೆಯುತ್ತಿದ್ದರು. ಉಪನಿಷತ್ತಿನಲ್ಲೂ ಆತ ರಾಜನೆಂದೇ ಹೇಳಿದೆ. ಆತನ ಬಗೆಗೆ ಮತ್ತೇನೂ ವಿಶೇಷ ಹೇಳಿಲ್ಲ. ಅವನು ರಾಜ ಎಂದು ಹೇಳಿ ಆತ ಉಳಿದ ಹತ್ತು ಜನರಿಗಿಂತ ಹೆಚ್ಚು ಸಿರಿವಂತನಾಗಿದ್ದ, ಆತನ ಬಳಿ ದಾಸದಾಸಿಯರು, ಚಿನ್ನ ಬೆಳ್ಳಿ, ದನಕರುಗಳು ಖಂಡಿತ ಇದ್ದವು ಎಂದು ಹೇಳಿದೆ. ಆತ ಜ್ಞಾನಪಿಪಾಸು. ಆದರೆ ಅವನಿಗೆ ಅದು ದೊರೆಯುತ್ತಿರಲಿಲ್ಲ.

ಜ್ಞಾನಾನ್ವೇಷಣೆಯಲ್ಲಿ ಆತ ಯಾರ ಯಾರ ಬಳಿ ಮಾತುಕತೆ ನಡೆಸಿದ ಮೊದಲಾದವುಗಳ ಬಗೆಗೆ ವಿವರ ದೊರೆಯುವುದಿಲ್ಲ. ನಮಗೆ ಗೊತ್ತಿರುವುದು ಇಷ್ಟೆ. ಆತ ಜ್ಞಾನಪ್ರಾಪ್ತಿಗಾಗಿ ರೈಕ್ವ ಮುನಿಯ ಬಳಿಗೆ ಹೋದ, ರೈಕ್ವ ಮುನಿಯೋ ಮೈ ಕೆರೆದುಕೊಳ್ಳುತ್ತಿದ್ದ, ಗಾಡಿಯ ನೆರಳಿನಲ್ಲಿ ಕುಳಿತುಕೊಂಡು. ಆತ ಕೊಂಚ ಜ್ಞಾನ ತೋರಿದ ಗಿರಾಕಿ, ಉದ್ದಂಡ! ರಾಜ ಬಂದರೆ ಜನ ಒಂದಲ್ಲ ಒಂದು ರೀತಿಯಲ್ಲಿ ಗೌರವ ತೋರಿಸಿಯೇ ತೋರಿಸುತ್ತಾರೆ ಮತ್ತು ತೋರಿಸಲೂ ಬೇಕು. ಆದರೆ ರೈಕ್ವ ಮುನಿಯ ಮೇಲೆ ರಾಜನ ಆಗಮನ ಯಾವ ಪರಿಣಾಮವನ್ನೂ ಬೀರಲಿಲ್ಲವೆಂದು ಕಾಣುತ್ತದೆ. ಆತ ಎದ್ದು ನಿಲ್ಲಲೂ ಇಲ್ಲ. ಬೇರಾವ ರೀತಿಯ ಗೌರವವನ್ನೂ ತೋರಿಸಲಿಲ್ಲ. ಕೂತು ಕೂತ ಹಾಗೆಯೇ ಇದ್ದ.

ಏನಾದರೂ ಆಗಲಿ, ರಾಜ ಜಾನಶ್ರುತಿ ಅಂಥಿಂಥ ಸಾಧಾರಣ ಮನುಷ್ಯನಾಗಿರಲಿಲ್ಲ. ಆತನಿಗೆ ಅನೇಕ ಭಾಷೆಗಳ ಜ್ಞಾನವಿದ್ದಂತೆ ಕಾಣುತ್ತದೆ ಎಂಬುದರಲ್ಲಿ ಸಂದೇಹಕ್ಕೆ ಎಡೆಯೇ ಇಲ್ಲ. ಈಗಿನ ಕಾಲದಲ್ಲಿ ಭಾಷಾಜ್ಞಾನವೆಂದರೆ ‘ಇಂಗ್ಲಿಷ್’ ಭಾಷಾಜ್ಞಾನ. ಇಂಗ್ಲಿಷ್ ಬಲ್ಲವನಾಗಿದ್ದು ಅದನ್ನು ಒಬ್ಬ ಧಾರಾವಾಹಿಯಾಗಿ ಮಾತನಾಡಿದರೆ ಸಾಕು, ಅವನು ಚತುರ. ಇಂಗ್ಲೀಷು ತಿಳಿವಳಿಕೆಯುಳ್ಳವರ ಭಾಷೆ. ಅದನ್ನು ಬಲ್ಲವರು ತಿಳಿವಳಿಕೆಯುಳ್ಳವರು ಎಂದು ಜನ ಭಾವಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಜಾನಶ್ರುತಿಗೆ ಇಂಗ್ಲೀಷಂತೂ ಬರುತ್ತಿರಲಿಲ್ಲ. ಆದರೆ ಹಂಸಗಳ ಭಾಷೆ ಆತನಿಗೆ ತಿಳಿದಿತ್ತು. ಮನುಷ್ಯರಲ್ಲಿ ಇಂಗ್ಲೀಷರು ಹೇಗೋ ಹಾಗೆ ಪಕ್ಷಿಗಳಲ್ಲಿ ಹಂಸ. ಹಂಸಗಳ ಭಾಷೆಯನ್ನು ತಿಳಿಯಬಲ್ಲಾತ ಆಗಿನ ಕಾಲದಲ್ಲಿ ನಿಜಕ್ಕೂ ತಿಳಿವಳಿಕೆಯುಳ್ಳಾತ ಎಂದು ಜನ ತಿಳಿದಿದ್ದಿರಬೇಕು. ರಾಜ ಜಾನಶ್ರುತಿ ಆ ಭಾಷೆಯನ್ನು ಬಲ್ಲವನಾಗಿದ್ದ. ಆದರೆ ಭಾಷೆಯನ್ನು ಬಲ್ಲಮಾತ್ರಕ್ಕೆ ತಾನು ಜ್ಞಾನಿ ಎಂದು ಆತ ತಿಳಿದುಕೊಳ್ಳಲಿಲ್ಲ. ಬಹಳ ಮಂದಿ ಹಾಗೆಯೇ ತಿಳಿದುಕೊಳ್ಳುತ್ತಾರೆ.

ನಮ್ಮ ಊರಿನಲ್ಲಿ ಒಬ್ಬರು ಪಂಡಿತರಿದ್ದರು. ಅವರಿಗೆ ಕಾಗೆಗಳ ಭಾಷೆ ಗೊತ್ತಿತ್ತು. ಅವರ ಅಭಿಪ್ರಾಯದಲ್ಲಿ ಕಾಗೆ ಸರ್ವಜ್ಞ. ಅದು ವಿಧವಿಧವಾಗಿ ಕೂಗಿ ಅಜ್ಞ ಮಾನವನನ್ನು ಎಚ್ಚರಿಸುತ್ತಿರುತ್ತದೆ. ಈಗ ಏನು ಘಟಿಸುತ್ತದೆ ಎಂಬುದನ್ನು ಅದು ಹೇಳುತ್ತಿರುತ್ತದೆ. ಆದರೆ ಮನುಷ್ಯನಿಗೆ ಅದು ತಿಳಿದರೆ ತಾನೆ? ನಮ್ಮ ಊರಿನ ಈ ಪಂಡಿತರು ಕಾಗೆಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದುದೇ ಅಲ್ಲ, ಜನರಿಗೆ ಅದರ ಅರ್ಥವನ್ನೂ ತಿಳಿಯ ಹೇಳುತ್ತಿದ್ದರು. ಅವರ ಮನೆಯ ಮುಂದೆ ಯಾವಾಗಲೂ ಜನ ಕಿಕ್ಕಿರಿದಿರುತ್ತಿತ್ತು. ಆಶ್ಚರ್ಯವೆಂದರೆ ಬಹುಪಾಲು ಜನ ಅವರು ಕಾಗೆಗಳ ಭಾಷೆಯನ್ನು ಸರಿಯಾಗಿ ಹೇಳಿಬಿಡುತ್ತಾರೆ ಎಂದು ನಂಬಿತ್ತು. ಪಂಡಿತರು ಹೇಳಿದ್ದೇನಾದರೂ ತಪ್ಪಾದರೆ ಕಾಗೆ ಸರಿಯಾಗೇ ಹೇಳಿರಬೇಕು, ಪಂಡಿತರಿಗೆ ಸರಿಯಾಗಿ ಅರ್ಥವಾಗಿಲ್ಲದಿರಬೇಕು ಎಂದು ಜನ ಸಮಾಧಾನ ತಂದುಕೊಳ್ಳುತ್ತಿದ್ದರು. ತಪ್ಪು ಮಾಡುವುದು ಮನುಷ್ಯಸಹಜ! ಕಾಗೆಗಳ ಮಾತೇ ಇಷ್ಟು ಕರಾರುವಾಕ್ಕಾದರೆ ಇನ್ನು ಹಂಸಗಳ ಮಾತನ್ನು ಕೇಳಲೇಬೇಕಿಲ್ಲ.

(ಮ.ಸು. ಕೃಷ್ಣಮೂರ್ತಿ)

ಹಂಸ ವಿವೇಕಶಾಲಿಯಾದ ಪಕ್ಷಿ. ಅದು ಹಾಲು, ನೀರನ್ನು ಬೇರೆ ಮಾಡಬಲ್ಲದು. ಅದು ನಿಜವಾಗಿಯೂ ಬೆರೆಸಿದ ಹಾಲಿನಿಂದ ಹಾಲನ್ನು ಮಾತ್ರ ಗ್ರಹಿಸಿ ನೀರನ್ನು ಬಿಟ್ಟುಬಿಡುತ್ತದೆಯೇ ಇಲ್ಲವೆ ಎಂಬ ಅಂಶವನ್ನು ಇದುವರೆಗೂ ಯಾರೂ ಪರೀಕ್ಷಿಸಿ ನೋಡಿಲ್ಲ. ಬಂಗಾಳದ ಒಬ್ಬ ಪಕ್ಷಿಪ್ರೇಮಿ ಅನೇಕ ವಿಧವಾದ ಪ್ರಯೋಗಗಳನ್ನು ನಡೆಸಿ ಇದು ನಿಜವಲ್ಲ ಎಂಬ ನಿಷ್ಕರ್ಷಕ್ಕೆ ಬಂದಿದ್ದ. ವಾಸ್ತವಾಂಶವೆಂದರೆ ಹಂಸಕ್ಕೆ ಹಾಲು ಕುಡಿಸಿದಾಗ ಅದರ ದವಡೆಯಿಂದ ಒಂದು ವಿಧವಾದ ರಸ ಒಸರುತ್ತದೆ. ಇದೇ ಒಸರಿದ ಲಾಲಾರಸವನ್ನು ಜನ ನೀರು ಎಂದುಕೊಳ್ಳುತ್ತಾರೆ. ಆದರೆ ಬಂಗಾಳೀ ಪಂಡಿತರ ಈ ಸಂಶೋಧನೆಯ ತರುವಾಯ ಜನಗಳ ಈ ನಂಬಿಕೆ ಬದಲಾಗಿದೆಯೆಂದೇನೂ ಹೇಳುವಂತಿಲ್ಲ. ಆ ಪಂಡಿತರು ಯಾವ ಪಕ್ಷಿಗಳ ಮೇಲೆ ಪ್ರಯೋಗ ನಡೆಸಿದರೋ ಅವು ನಿಜವಾದ ಮಾನಸರೋವರದ ಹಂಸಗಳಲ್ಲ ಎಂದು ನನಗೆ ಬೇರೊಬ್ಬ ಬಂಗಾಳೀ ವಿದ್ವಾಂಸರು ತಿಳಿಸಿದ್ದರು. ಆದ್ದರಿಂದ ಹಂಸಗಳ ಗೌರವ ಇನ್ನೂ ಉಳಿದುಕೊಂಡಿದೆ. ಅವು ಎಷ್ಟೊಂದು ವಿವೇಕಶಾಲಿಗಳೆಂದು ಜನ ತಿಳಿದಿದ್ದರೆಂದರೆ ಮಹಾಜ್ಞಾನಿಗಳಾದ ಸಾಧುಸಂತರನ್ನು ಇಂದಿಗೂ ‘ಪರಮಹಂಸ’ರೆಂದು ಕರೆಯುತ್ತಾರೆ. ಜಾನಶ್ರುತಿ ರಾಜನ ಕಾಲದಲ್ಲಿ ಹಂಸಗಳ ಮಹಿಮೆ ಇನ್ನೂ ಹೆಚ್ಚಾಗಿತ್ತು, ಆತನಿಗೆ ಹಂಸಗಳ ಭಾಷೆ ಅರ್ಥವಾಗುತ್ತಿತ್ತು. ಇದು ಸಾಧಾರಣ ಸಂಗತಿಯೇನೂ ಅಲ್ಲ.

ರಾಜ ಜಾನಶ್ರುತಿ ಎಲ್ಲೋ ಕಾಡಿನಲ್ಲಿ ಓಡಾಡುತ್ತಿದ್ದ. ಏಕೆ ಓಡಾಡುತ್ತಿದ್ದನೆಂಬುದು ಸರಿಯಾಗಿ ತಿಳಿಯದು. ಅನ್ವೇಷಕನಾಗಿದ್ದರಿಂದ ಆತ ಏನನ್ನೋ ಹುಡುಕಲು ಹೊರಟಿರಬೇಕು, ಅಥವಾ ಆರೋಗ್ಯ ಲಾಭಕ್ಕಾಗಿ ಕಾಡಿನ ಗಾಳಿ ಸೇವಿಸುತ್ತಿದ್ದಿರಬಹುದು. ಹಾದಿಯಲ್ಲಿ ಒಂದು ಹಂಸ ಮಿಥುನ ಆತನ ಕಣ್ಣಿಗೆ ಬಿತ್ತು. ಅರಸರಿಗೆ ಬೇಟೆಯ ಗೀಳು. ಆತ ಬಯಸಿದ್ದರೆ ಆ ಹಂಸಗಳನ್ನು ಕೊಂದು ಮನೆಗೆ ಕೊಂಡೊಯ್ಯಬಹುದಾಗಿತ್ತು. ಆ ದಿನ ರಾತ್ರಿಯೂಟದಲ್ಲಿ ಒಳ್ಳೆಯ ರುಚಿಯಾದ ಮಾಂಸವನ್ನು ತಿಂದು ತಣಿಯಬಹುದಾಗಿತ್ತು. ಆದರೆ ಆತನದು ಇತರರಿಗಿಂತ ಕೊಂಚ ಭಿನ್ನ ಪ್ರಕೃತಿ. ಆತ ಹಂಸಗಳನ್ನು ಬೇಟೆಯಾಡಲಿಲ್ಲ, ಸುಮ್ಮನೆ ನಿಂತು ಅವುಗಳ ಮಾತುಕತೆಯನ್ನು ಆಲಿಸತೊಡಗಿದ. ಅವುಗಳ ಭಾಷೆಯಂತೂ ಆತನಿಗೆ ತಿಳಿದೇ ಇತ್ತು, ಅವು ಏನು ಮಾತನಾಡುತ್ತಿವೆ ಎನ್ನುವುದು ಆತನಿಗೆ ಗೊತ್ತಾಯಿತು. ಅವು ಹೀಗೆ ಮಾತನಾಡಿಕೊಳ್ಳುತ್ತಿದ್ದವು.

ಪಗಡೆಯಾಟದಲ್ಲಿ ಕೆಳಗಿನ ಗರಗಳೆಲ್ಲ ಮೇಲಿನ ಗರಗಳ ಬಳಿಗೆ ಬರುವಂತೆ ಮನುಷ್ಯರು ಏನೇ ಪುಣ್ಯಕಾರ್ಯ ಮಾಡಲಿ, ಅವೆಲ್ಲವೂ ಸರ್ವರಥಿಯೂ, ತತ್ತ್ವಜ್ಞಾನಿಯೂ ಆದ ರೈಕ್ವಮುನಿಯ ಬಳಿಗೆ ಬರುತ್ತವೆ. ಆಗಿನ ಕಾಲದಲ್ಲಿ ಪಗಡೆಯಾಟ ಹೇಗೆ ನಡೆಯುತ್ತಿತ್ತು, ಎಂಬುದು ಪಂಡಿತರ ಊಹೆಯ ವಿಷಯ. ಆದರೆ ಹಂಸಗಳ ಮಾತಿನ ತಾತ್ಪರ್ಯ ಇಷ್ಟೆ, ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲ ಜನರ ಧರ್ಮಕರ್ಮ, ಜ್ಞಾನ ಪುಣ್ಯಗಳೇನೇ ಇರಲಿ ಅವು ಸರ್ವರಥಿ ರೈಕ್ವನನ್ನು ಮುಟ್ಟುತ್ತವೆ. ರಾಜನ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಎಲ್ಲ ಜನರ ತಪಸ್ಸು, ಸ್ವಾಧ್ಯಾಯ, ಮನನ-ಚಿಂತನ ಇವೆಲ್ಲವೂ ಈತನ ಬಳಿಗೆ ಹೋಗುತ್ತವಲ್ಲ, ಹಾಗಾದರೆ ಇಂಥ ಪ್ರತಾಪಶಾಲಿ ರೈಕ್ವ ಯಾರು? ಆತ ನಿಶ್ಚಯವಾಗಿಯೂ ಮಹಾತತ್ತ್ವದರ್ಶಿಯಾಗಿರಬೇಕು, ಆತನನ್ನು ಪತ್ತೆಹಚ್ಚಬೇಕು. ಹಂಸಗಳೂ ಹೊಗಳುವಂತಹ ಆತ ಖಂಡಿತ ಒಬ್ಬ ದೊಡ್ಡ ತತ್ತ್ವಜ್ಞಾನಿಯಾಗಿರಬೇಕು. ಈಗಿನ ಕಾಲದಲ್ಲಿ ಬಿಳಿಯರು ಯಾರನ್ನಾದರೂ ಹೊಗಳಿದರೆ ಆತ ಮಹಾತತ್ತ್ವಜ್ಞಾನಿ ಎಂದು ಇಂದೂ ಜನ ಭಾವಿಸುವುದಿಲ್ಲವೆ? ಹಾಗಾಯಿತು ಈ ಸಂಗತಿ.

(ಕೃತಿ: ಅನಾಮದಾಸನ ಕಡತ, ಮೂಲ: ಡಾ. ಹಜಾರೀಪ್ರಸಾದ ದ್ವಿವೇದಿ, ಅನುವಾದ: ಮ.ಸು. ಕೃಷ್ಣಮೂರ್ತಿ, ಪ್ರಕಾಶಕರು: ಬಹುವಚನ ಪ್ರಕಾಶನ, ಬೆಲೆ: 450/-)