ಮಾಂಟೋ

ಪ್ರತೀ ರಾತ್ರಿಯೂ ತನ್ನ ವಿಶಾಲವಾದ ತೇಗದ ಮರದ ಮಂಚವನ್ನು ಬೇರೆ ಬೇರೆ ಗಂಡಸಿನೊಡನೆ ಹಂಚಿಕೊಳ್ಳುತ್ತಿದ್ದಳು ಮತ್ತು ಅವರನ್ನೆಲ್ಲ ಹಿಡಿತದಲ್ಲಿಡುವ ಅನೇಕ ತಂತ್ರಗಳು ಅವಳಿಗೆ ಗೊತ್ತಿರಲೇಬೇಕಿತ್ತು. ಅವರ ಕೆಟ್ಟಾಕೊಳಕ ಆಸೆ ಮತ್ತು ಬೇಡಿಕೆಗಳನ್ನು ಒಪ್ಪಬಾರದೆಂದು ಅನೇಕ ಸಲ ಅವಳು ಪ್ರತಿಜ್ಞೆ ಮಾಡಿದ್ದರೂ, ಅವರನ್ನು ಉಪೇಕ್ಷಿಸಬೇಕೆಂದು ನಿರ್ಧರಿಸಿದ್ದರೂ, ಅಂಥ ಘಳಿಗೆಗಳು ಎದುರಾಗೇ ಬಿಟ್ಟಾಗ ಪ್ರತೀ ಬಾರಿಯೂ ಸೋತುಬಿಡುತ್ತಿದ್ದಳು. ಪ್ರೀತಿಸಲ್ಪಡಬೇಕು ಅನ್ನುವ ಆ ಕ್ಷಣದ ತೀವ್ರ ಬಯಕೆಯನ್ನು ಹತ್ತಿಕ್ಕಲಾಗುತ್ತಲೇ ಇರಲಿಲ್ಲ.
ಬಿ.ವಿ. ಭಾರತಿ ಅನುವಾದಿಸಿದ ಸಾದತ್ ಹಸನ್ ಮಾಂಟೋ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ದಣಿವಿನ ದಿನವೊಂದು ಮುಗಿದ ನಂತರ ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಅವಳು ನಿದ್ರೆಗೆ ಜಾರಿದಳು. ಅವಳು ‘ಬಾಸ್’ ಎಂದು ಕರೆಯುತ್ತಿದ್ದ ನೈರ್ಮಲ್ಯ ವಿಭಾಗದ ಸರಕಾರಿ ಅಧಿಕಾರಿಯೊಬ್ಬ ಆಗ ತಾನೇ ಅವಳೊಡನೆ ಸಂಭೋಗ ಮುಗಿಸಿ, ಕುಡಿದ ಅಮಲಿನಲ್ಲಿಯೇ ಮನೆಯ ಕಡೆಗೆ ಹೊರಟಿದ್ದ. ಅವನನ್ನು ತುಂಬ ಪ್ರೀತಿಸುವ ಅವನ ಕಾನೂನುಬದ್ಧ ಹೆಂಡತಿಯ ಪ್ರೇಮದ ಮೇಲಿನ ಅತೀವ ಕಾಳಜಿಯಿಂದ ತಾನು ಮನೆಗೆ ಹೊರಡಲೇಬೇಕೆಂದು ಹೊರಟಿದ್ದ. ಹಾಗಿಲ್ಲದಿದ್ದರೆ ಆ ರಾತ್ರಿ ಅವನು ಅಲ್ಲಿಯೇ ಉಳಿಯಲೂಬಹುದಿತ್ತು ಕೂಡಾ.

ಆ ಅಧಿಕಾರಿಗೆ ದೇಹ ಸುಖ ಕೊಟ್ಟಿದ್ದರ ಲೆಕ್ಕ ಚುಕ್ತಾ ಮಾಡಲು ಅವನು ಕೊಟ್ಟಿದ್ದ ದುಡ್ಡು ಎಂಜಲಿನಿಂದ ಒದ್ದೆಯಾಗಿದ್ದ ಅವಳ ಬಿಗಿಯಾದ ಬ್ರಾದಿಂದ ಹೊರ ಜಾರಲು ಹವಣಿಸುತ್ತಿತ್ತು. ಅವಳ ಉಸಿರಾಟದ ಲಯಕ್ಕನುಗುಣವಾಗಿ ಆ ನಾಣ್ಯಗಳು ಒಂದರೊಡನೊಂದು ಸೇರಿ ಮಾಡುವ ಸದ್ದು ಅವಳ ಹೃದಯದ ಅನಿಯಮಿತ ಬಡಿತದೊಡನೆ ವಿಲೀನವಾಗುತ್ತಿತ್ತು. ನಿಜಕ್ಕೂ ಹೇಳಬೇಕೆಂದರೆ ಆ ನಾಣ್ಯಗಳು ಕರಗಿ ಅವಳ ರಕ್ತದೊಡನೆ ಬೆರೆಯುತ್ತಿವೆಯೇನೋ ಎನ್ನಿಸುವಂತೆ ಭಾಸವಾಗುತ್ತಿತ್ತು! ಆ ಅಧಿಕಾರಿ ಬರುವಾಗ ತಂದಿದ್ದ ಬ್ರ್ಯಾಂಡಿಯ ಸಣ್ಣ ಬಾಟಲ್ ಮತ್ತು ಸೋಡಾ ಖಾಲಿಯಾದ ನಂತರ ನೀರಿನ ಜೊತೆ ಕುಡಿದ ಬಿಯೋರಾ ಎರಡೂ ಸೇರಿ ಅವಳ ಎದೆಯ ತುಂಬ ಕಾವು ಹರಡುತ್ತಿತ್ತು.

ಅವಳು ತನ್ನ ವಿಶಾಲವಾದ ತೇಗದ ಮರದ ಮಂಚದಲ್ಲಿ ಮುಖ ದಿಂಬಿಗಾನಿಸಿ ಮಲಗಿದ್ದಳು. ತೋಳುಗಳವರೆಗೂ ಬಟ್ಟೆಯಿಲ್ಲದೇ ಬೆತ್ತಲಾಗಿದ್ದ ಅವಳ ಕೈಗಳು, ಗಾಳಿಪಟದ ಬಿದಿರು ಕಮಾನಿನಂತೆ ಹರಡಿದ್ದವು. ಅವಳ ಸುಕ್ಕುಗಟ್ಟಿದ ಬಲ ಕಂಕುಳು ಪದೇ ಪದೇ ಶೇವ್ ಮಾಡುವುದರಿಂದ ನೀಲಿಗಟ್ಟಿತ್ತು. ಅದು ರೆಕ್ಕೆಪುಕ್ಕ ತರಿದ ಕೋಳಿಯ ಚರ್ಮವನ್ನು ಅವಳಿಗೆ ಕಸಿ ಮಾಡಿದ್ದಾರೇನೋ ಎನ್ನಿಸುವ ಹಾಗೆ ಕಾಣುತ್ತಿತ್ತು.

ಅವಳ ಸಣ್ಣ ಮತ್ತು ಅಸ್ತವ್ಯಸ್ತಗೊಂಡ ರೂಮಿನ ತುಂಬ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಡಿದ್ದವು. ಅವಳ ಹಾಸಿಗೆಯ ಕೆಳಗೆ ಅವಳ ಕಜ್ಜಿನಾಯಿಯು ಮೂರು ನಾಲ್ಕು ಜೊತೆ ಹಳೆಯ ಚಪ್ಪಲಿಗಳ ಮೇಲೆ ತಲೆ ಆನಿಸಿಕೊಂಡು ಮಲಗಿತ್ತು. ನಿದ್ರೆಯಲ್ಲಿಯೂ ಅದು ಯಾವುದೋ ವಸ್ತುವನ್ನು ಕಂಡು ಹಲ್ಲು ಮಸೆಯುತ್ತಿತ್ತು. ಆ ನಾಯಿಯ ಚರ್ಮ ಎಷ್ಟು ಕಲೆಗಳಿಂದ ಕೂಡಿತ್ತೆಂದರೆ, ದೂರದಿಂದ ನೋಡಿದರೆ ಅದೊಂದು ನೆಲ ಒರೆಸುವ ಮಡಿಕೆಗಳ ಗೋಣಿಚೀಲದ ತುಂಡಿನಂತೆ ಕಾಣುತ್ತಿತ್ತು.

ಅವಳ ಮೇಕಪ್ ಸಾಮಗ್ರಿಗಳು – ರೋಜು, ಲಿಪ್ ಸ್ಟಿಕ್, ಪೌಡರ್, ಒಂದು ಬಾಚಣಿಕೆ, ಕೂದಲಿನ ಗಂಟಿಗೆ ಹಾಕುವ ಹೇರ್ ಪಿನ್ ಗಳು ಗೋಡೆಯಲ್ಲಿದ್ದ ಒಂದು ಪುಟ್ಟ ಗೂಡಿನ ತುಂಬಾ ಹರಡಿದ್ದವು. ಅಲ್ಲೇ ತೂಗುಬಿಟ್ಟಿದ್ದ ಒಂದು ಪಂಜರದಲ್ಲಿ ಹಸಿರು ಗಿಣಿಯೊಂದು ತನ್ನ ರೆಕ್ಕೆಗಳಲ್ಲಿ ಮುಖ ಹುದುಗಿಸಿ ಮಲಗಿತ್ತು. ಪಂಜರದ ತುಂಬ ಒಣಕಲು ಸೀಬೆಹಣ್ಣಿನ ತುಂಡುಗಳು, ಕೊಳೆತ ಕಿತ್ತಳೆ ತುಂಡುಗಳು ಚೆಲ್ಲಾಡಿದ್ದವು ಮತ್ತು ಆ ದುರ್ಗಂಧ ಸೂಸುತ್ತಿದ್ದ ಹಣ್ಣುಗಳ ಮೇಲೆಲ್ಲ ನೊಣ ಮತ್ತು ನುಸಿಗಳು ಹಾರಾಡುತ್ತಿದ್ದವು. ಹಾಸಿಗೆಯ ಪಕ್ಕದಲ್ಲಿ ಮಣಕುಗಟ್ಟಿದ ಹಿಂಬದಿಯ ಬೆತ್ತದ ಕುರ್ಚಿಯೊಂದಿತ್ತು ಮತ್ತು ಆ ಕುರ್ಚಿಯ ಬಲಭಾಗದಲ್ಲಿದ್ದ ಸುಂದರ ಸ್ಟೂಲಿನ ಮೇಲೆ HMV ಕಂಪನಿಯವರು ತಯಾರಿಸಿದ ಪೋರ್ಟೆಬಲ್ ಗ್ರಾಮಾಫೋಮ್ ಇತ್ತು. ಆ ಗ್ರಾಮಫೋನಿಗೆ ಜಾಳುಜಾಳಾದ ಕರಿಯ ಬಟ್ಟೆಯೊಂದನ್ನು ಹೊದಿಸಲಾಗಿತ್ತು. ಸ್ಟೂಲಿನ ಮೇಲೆ ಮತ್ತು ರೂಮಿನ ಎಲ್ಲ ಕಡೆಯೂ ತುಕ್ಕು ಹಿಡಿದ ಸೂಜಿಗಳು ಬಿದ್ದಿದ್ದವು. ಸ್ಟೂಲಿನ ಹಿಂಭಾಗದ ಗೋಡೆಯ ಮೇಲೆ ನಾಲ್ಕು ಫೋಟೋ ಫ್ರೇಮ್ ಗಳನ್ನು ನೇತುಹಾಕಲಾಗಿತ್ತು ಮತ್ತು ನಾಲ್ಕು ಗಂಡಸರ ಫೋಟೋಗಳು ಆ ಫ್ರೇಮಿನೊಳಗೆ ಬಂಧಿಸಲ್ಪಟ್ಟಿದ್ದವು.

ಆ ಫೋಟೋಗಳಿಂದ ಅನತಿ ದೂರದಲ್ಲಿ – ಅಂದರೆ ರೂಮಿನೊಳಗೆ ಕಾಲಿಟ್ಟರೆ ಎಡಬದಿಯ ಮೂಲೆಯಲ್ಲಿ ಒಂದು ಗಾಢವರ್ಣದ ದೇವರ ಚಿತ್ರ – ಬಹುಶಃ ಬಟ್ಟೆಯನ್ನು ಸುತ್ತುವ ರಟ್ಟಿನ ಕೊಳವೆಯಿಂದ ಕತ್ತರಿಸಿ ಫ್ರೇಮ್ ಹಾಕಲ್ಪಟ್ಟಿದ್ದು – ನೇತು ಹಾಕಲ್ಪಟ್ಟಿತ್ತು ಮತ್ತು ಅದರ ಮೇಲೆ ಜೀರ್ಣವಾದ ಹಾಗೂ ತಾಜಾ ಹೂಗಳಿದ್ದವು. ಅಲ್ಲಿ ಎಣ್ಣೆ ಮಣಕುಗಟ್ಟಿದ ಗೂಡಿನಲ್ಲಿ ಎಣ್ಣೆಯ ಬಟ್ಟಲೊಂದಿತ್ತು ಮತ್ತು ಪಕ್ಕದಲ್ಲೇ ದೀಪವೊಂದು ಉರಿಯುತ್ತಿತ್ತು. ರೂಮಿನಲ್ಲಿ ಹೆಚ್ಚು ಗಾಳಿಯಾಡದ ಕಾರಣಕ್ಕಾಗಿ ಆ ದೀಪವು ಭಕ್ತನೊಬ್ಬನ ಹಣೆಯ ಮೇಲಿನ ನಾಮದಂತೆ ನಿಶ್ಚಲವಾಗಿ ಮತ್ತು ನೆಟ್ಟಗೆ ಉರಿಯುತ್ತಿತ್ತು. ಉರಿದು ನಂದಿದ ಗಂಧದಕಡ್ಡಿಯ ಹುಡಿ ಆ ಗೂಡನ್ನು ಮತ್ತಿಷ್ಟು ಗಲೀಜಾಗಿಸಿತ್ತು.

ದಿನದ ಮೊದಲ ಗಳಿಕೆಯನ್ನು ಅವಳು, ಕೈಯಲ್ಲಿ ಹಿಡಿದು, ದೇವರ ವಿಗ್ರಹಕ್ಕೆ ತಾಕಿಸಿ, ನಂತರ ಹಣೆಗೊಮ್ಮೆ ಸೋಕಿಸಿ ಆ ನಂತರ ಬ್ರಾ ಒಳಕ್ಕೆ ತುರುಕಿಕೊಳ್ಳುತ್ತಾಳೆ. ಅವಳ ಮೊಲೆಗಳು ದೊಡ್ಡ ಗಾತ್ರವಿರುವುದರಿಂದ ಹೊರಗೆ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಮಾಧೋ ಪುಣೆಯಿಂದ ರಜೆಗೆಂದು ಬಂದಾಗ ಮಾತ್ರ ಹಾಸಿಗೆಯಲ್ಲಿ ಕಾಲಿರಿಸಿಕೊಳ್ಳುವ ಜಾಗದ ಕೆಳಗೆ ಆ ಕಾರಣಕ್ಕೆಂದೇ ಗುಳಿ ಮಾಡಿಸಿದ ಸಣ್ಣ ಕಿಂಡಿಯಲ್ಲಿ ಸ್ವಲ್ಪ ಹಣ ಬಚ್ಚಿಡುತ್ತಾಳೆ. ಗಿರಾಕಿಗಳನ್ನೊದಗಿಸುವ ದಲ್ಲಾಳಿ ರಾಮ್ ಲಾಲ್ ಮಾಧೋನಿಗೆ ಹಣ ಸಿಗದಂತೆ ಬಚ್ಚಿಡಲು ಹೇಳಿಕೊಟ್ಟಿದ್ದ. ಮಾಧೋ ಅವಳೊಡನೆ ಮಲಗಲು ಪುಣೆಯಿಂದ ಬರುತ್ತಾನೆ ಅನ್ನುವ ವಿಷಯ ತಿಳಿದಾಗ ಅವನು ಹೇಳಿದ್ದ ‘ಯಾವಾಗಿನಿಂದ ಆ ಸೂ…ಮಗನ ಜೊತೆ ಇದೆಲ್ಲ ವ್ಯವಹಾರ ಶುರುವಾಗಿದ್ದು? ಎಂಥ ವಿಚಿತ್ರ ಪ್ರೇಮ ನಿಮ್ಮದು! ಆ ಹಲ್ಕ ಸೂ…ಮಗ ಒಂದು ಪೈಸೆ ಖರ್ಚು ಮಾಡದೇ ನಿನ್ನ ಜೊತೆ ಮಲಗುವುದಲ್ಲದೇ, ಹೋಗುವಾಗ ನಿನ್ನ ಹಣವನ್ನೇ ಕಬಳಿಸುತ್ತಾನೆ. ಈ ವಿಷಯದಲ್ಲಿ ಏನೋ ಸರಿಯಿಲ್ಲವೆನ್ನಿಸುತ್ತದೆ ನನಗೆ. ನಿನಗೆ ಅವನೆಂದರೆ ಯಾವುದೋ ಕಾರಣಕ್ಕೆ ಬಹಳ ಇಷ್ಟವಿರಬೇಕು. ಕಳೆದ ಏಳು ವರ್ಷಗಳಿಂದ ಈ ತಲೆಹಿಡುಕನ ಕೆಲಸ ಮಾಡ್ತಿದ್ದೇನಲ್ಲ, ಹಾಗಾಗಿ ಹುಡುಗಿಯರ ದೌರ್ಬಲ್ಯಗಳೆಲ್ಲ ನನಗೆ ಗೊತ್ತು’.

ರಾಮ್ ಲಾಲ್ ಇಡೀ ಮುಂಬಯಿಯ ಉದ್ದಗಲಕ್ಕೂ ಹತ್ತು ರೂಪಾಯಿಯಿಂದ ನೂರು ರೂಪಾಯಿ ಛಾರ್ಜ್ ಮಾಡುವ ಸುಮಾರು 120 ಸೂಳೆಯರಿಗೆ ಗಿರಾಕಿ ಒದಗಿಸುತ್ತಾನೆ. ಅವನು ಸೌಗಂಧಿಗೆ ಹೇಳುತ್ತಾನೆ ‘ನಾಯಿ, ಹಣವನ್ನು ಹಾಗೆ ದುಂದುಗಾರಿಕೆ ಮಾಡಬೇಡ. ನಿನಗೇ ಗೊತ್ತಿಲ್ಲದ ಹಾಗೆ ನಿನ್ನಲ್ಲಿರುವ ಬಟ್ಟೆಯೂ ಉಳಿಯದಂತೆ ಬೆತ್ತಲೆ ಮಾಡುತ್ತಾನೆ ಆ ತಾಯ್ಗಂಡ ಸೂಳೆಮಗ! ನಿನ್ನ ಹಾಸಿಗೆಯ ಕೆಳಗೆ ಒಂದು ಕಿಂಡಿ ಕೊರೆದು ನಿನ್ನ ಹಣವನ್ನೆಲ್ಲ ಅಲ್ಲಿ ಮುಚ್ಚಿಡು. ಅವನು ಬಂದಾಗ ಹೇಳು ‘ನಿನ್ನಾಣೆಗೂ ಮಾಧೋ, ಇಡೀ ದಿನ ಒಂದೇ ಒಂದು ಸಾಮಾನನ್ನೂ ಕಂಡಿಲ್ಲ! ಕೆಳಗಿನ ಅಂಗಡಿಯಿಂದ ನನಗಾಗಿ ಒಂದು ಕಪ್ ಚಹಾ ಮತ್ತು ಬಿಸ್ಕಿಟ್ ತರಿಸು, ಹೊಟ್ಟೆ ಹಸಿವಿನಿಂದ ಘರ್ಜಿಸುತ್ತಿದೆ’ ಎಂದು. ತಿಳಿಯಿತಾ? ಸಧ್ಯದ ಪರಿಸ್ಥಿತಿ ಸರಿಯಿಲ್ಲ. ಆಳುವ ಪಾರ್ಟಿಯ ಸೂ…ಮಕ್ಕಳು ಮದ್ಯಸಾರವನ್ನೂ ನಿಷೇಧಿಸಿದ್ದಾರೆ. ವ್ಯಾಪಾರ ತುಂಬ ಕಡಿಮೆಯಾಗಿಹೋಗಿದೆ. ಮದ್ಯವನ್ನೇನೋ ಹೇಗಾದರೂ ಮಾಡಿ ಹೊಂಚಬಹುದು. ದೇವರಾಣೆಗೂ ಹೇಳುತ್ತೇನೆ, ಖಾಲಿಯಾಗಿರುವ ಶೀಶೆಗಳನ್ನೆತ್ತಿ ಅದರಲ್ಲಿ ಉಳಿದಿರುವ ವೈನನ್ನು ಮೂಸಿ ನೋಡುವಾಗ ಮುಂದಿನ ಜನ್ಮದಲ್ಲಿಯೂ ಸೂಳೆಯಾಗಿಯೇ ಹುಟ್ಟಬೇಕು ಎಂದು ಪ್ರಾರ್ಥಿಸುವಂತಾಗುತ್ತದೆ.

ಸೌಗಂಧಿ ತನ್ನ ದೇಹದ ಎಲ್ಲ ಅಂಗಾಂಗಕ್ಕಿಂತ ತನ್ನ ತೋರ ಮೊಲೆಗಳನ್ನು ತುಂಬ ಇಷ್ಟ ಪಡುತ್ತಾಳೆ. ಅವಳ ಗೆಳತಿ ಜಮುನಾ ‘ನಿನ್ನ ಸಿಡಿಮದ್ದಿನಂಥ ಮೊಲೆಗಳಿಗೆ ಸರಿಯಾದ ಬ್ರಾದ ಒತ್ತಾಸೆ ಒದಗಿಸಿದರೆ ಅವು ಯಾವತ್ತೂ ತಮ್ಮ ಪೆಡಸುತನವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಹುರಿದುಂಬಿಸುತ್ತಾಳೆ. ಆಗೆಲ್ಲ ಸೌಗಂಧಿ ನಗುತ್ತಾ ಹೇಳುತ್ತಾಳೆ. ‘ಎಲ್ಲರೂ ನಿನ್ನಂತೆಯೇ ಎಂದು ಭಾವಿಸಿರುವೆಯಾ ಜಮುನಾ? ಈ ಗಂಡಸರು ಹತ್ತು ರೂಪಾಯಿ ಬಿಸಾಕಿ ತಮಗೆ ಬೇಕಾದ ಹಾಗೆ ನಿನ್ನನ್ನು ಬಳಸಿಕೊಳ್ಳುವುದರಿಂದ, ನೀನು ಎಲ್ಲರೂ ಹಾಗೆಯೇ ಇರುತ್ತಾರೆ ಎಂದುಕೊಂಡಿರುವೆ. ನನಗೇನಾದರೂ ಹಾಗೆಲ್ಲ ಎಲ್ಲ ಕಡೆಗೂ ಕೈ ಹಾಕಬೇಕಂತೆ, ಆಗ ಅವನಿಗೊಂದು ಗತಿ ಕಾಣಿಸದಿದ್ದರೆ ಕೇಳು! ’ ಹೀಗೆ ಹೇಳುವಾಗಲೇ ಮತ್ತೇನೋ ನೆನಪಾಗುತ್ತದೆ. ‘ಓಹ್! ನೆನ್ನೆ ನೆನ್ನೆ ಏನಾಯಿತು ಗೊತ್ತಾ? ರಾಮ್ ಲಾಲ್ ನಡುರಾತ್ರಿ ಎರಡು ಘಂಟೆಗೆ ಪಂಜಾಬಿಯೊಬ್ಬನನ್ನು ಕರೆತಂದ. ರಾತ್ರಿಗೆ ಮೂವತ್ತು ರೂಪಾಯಿಯಂತೆ ವ್ಯವಹಾರ ಕುದುರಿತು. ರಾಮ್ ಲಾಲ್ ಹೊರಟ ನಂತರ, ನಾನು ದೀಪವಾರಿಸಿದ್ದೇ ತಡ, ಈ ಗಂಡಸು ಪೂರ್ತಿ ಹೆದರಿಬಿಟ್ಟ! ಜಮುನಾ ಕೇಳಿಸಿಕೊಳ್ಳುತ್ತಿರುವೆಯಾ? ನಿನ್ನಾಣೆಗೂ ಸತ್ಯ ಹೇಳುತ್ತಿದ್ದೇನೆ, ದೀಪವಾರಿಸಿದ ಕೂಡಲೇ ಗಡಗಡ ನಡುಗಲು ಪ್ರಾರಂಭಿಸಿಬಿಟ್ಟ! ಅವನಿಗೆ ಕತ್ತಲೆಂದರೆ ಭಯ ಜಮುನಾ!

ನಾನು ಕೇಳಿದೆ ‘ಯಾತಕ್ಕೋಸ್ಕರ ಕಾಯುತ್ತಿರುವೆ? ಆಗಲೇ ರಾತ್ರಿ ಮೂರಾಗುತ್ತಾ ಬಂದಿತು. ನಿನ್ನ ಗಡುವು ಮುಗಿಯುತ್ತ ಬರುತ್ತಿದೆ’.

ಅವನು ‘ಅದನ್ನು ಒತ್ತು, ಅದನ್ನು ಒತ್ತು’ ಎಂದ.

ನಾನು ‘ಏನು ನಿನ್ನ ಮಾತಿನ ಅರ್ಥ!’ ಎಂದೆ.

ಅವನೆಂದ ‘ಕರೆಂಟು! ಕರೆಂಟು!’.

ನಾನು ಅರ್ಥವಾಗದೇ ‘ಏನು ಕರೆಂಟು? ಏನು ಹಾಗೆಂದರೆ?’ ಎಂದೆ.

ಅವನು ‘ದೀಪ! ದೀಪ!’ ಎಂದ.

ಅವನ ಕೀರಲು ದನಿ ಕೇಳಿ ನನಗಂತೂ ನಗು ತಡೆಯಲಾಗಲಿಲ್ಲ.

ನಾನು ‘ಉಹುಂ, ಸಾಧ್ಯವೇ ಇಲ್ಲ’ ಎಂದು ಛೇಡಿಸುತ್ತ ಅವನ ದಪ್ಪ ತೊಡೆಗಳನ್ನು ಚಿವುಟಿದ್ದೇ ತಡ, ಅವನು ಹಾಸಿಗೆಯಿಂದ ಕೆಳಗೆ ಹಾರಿದವನೇ ದೀಪ ಬೆಳಗಿಸಿದ. ನಾನು ಮೈಮೇಲೆ ಬಟ್ಟೆ ಎಳೆದುಕೊಳ್ಳುತ್ತಾ ಹೇಳಿದೆ ‘ಅಯ್ಯೋ ನಿನಗೆ ಸ್ವಲ್ಪವಾದರೂ ನಾಚಿಕೆ ಇಲ್ಲವೇ ಸೂ…ಮಗನೇ?’. ಅವನು ಹಾಸಿಗೆಗೆ ಹಿಂತಿರುಗುವುದರಲ್ಲೇ ನಾನು ಹಾರಿಹೋಗಿ ದೀಪವಾರಿಸಿದೆ. ಆ ಕೂಡಲೇ ಮತ್ತೆ ಗಾಭರಿಗೊಂಡ ಅವನು! ಅಬ್ಬ, ಎಂಥ ತಮಾಷೆ ಎನ್ನುತ್ತೀ ಇಡೀ ರಾತ್ರಿ! ಒಮ್ಮೆ ಕತ್ತಲು, ಮತ್ತೊಮ್ಮೆ ಬೆಳಕು, ಮತ್ತೊಮ್ಮೆ ಬೆಳಕು, ಇದ್ದಕ್ಕಿದ್ದಂತೆ ಕತ್ತಲು…..! ಬೆಳಗಿನ ಜಾವದಲ್ಲಿ ಮೊದಲ ಟ್ರಾಮಿನ ಸದ್ದು ಕಿವಿಗೆ ಬಿದ್ದಿದ್ದೇ ತಡ, ಬೇಗ ಬೇಗ ಬಟ್ಟೆ ಹಾಕಿದವನೇ ಎದ್ದು ಬಿದ್ದು ಓಡಿಹೋದ. ಆ ಸೂ….ಮಗನಿಗೆ ಬೆಟ್ಟಿಂಗ್ ನಲ್ಲಿ ಬಿಟ್ಟಿ ಹಣವೇನಾದರೂ ಸಿಕ್ಕಿರಬೇಕು. ಇಲ್ಲದಿದ್ದರೆ ಯಾರು ಹಣವನ್ನು ಹೀಗೆ ಹಾಳು ಮಾಡುತ್ತಾರೆ ಹೇಳು? ಜಮುನಾ ನಾನು ಇಂಥ ಗಿರಾಕಿಗಳಿಗೋಸ್ಕರ ಎಂತೆಂಥ ಪಟ್ಟುಗಳನ್ನು ಕಲಿತಿದ್ದೇನೆ ಗೊತ್ತೇ?’

ರೂಮಿನಲ್ಲಿ ಹೆಚ್ಚು ಗಾಳಿಯಾಡದ ಕಾರಣಕ್ಕಾಗಿ ಆ ದೀಪವು ಭಕ್ತನೊಬ್ಬನ ಹಣೆಯ ಮೇಲಿನ ನಾಮದಂತೆ ನಿಶ್ಚಲವಾಗಿ ಮತ್ತು ನೆಟ್ಟಗೆ ಉರಿಯುತ್ತಿತ್ತು. ಉರಿದು ನಂದಿದ ಗಂಧದಕಡ್ಡಿಯ ಹುಡಿ ಆ ಗೂಡನ್ನು ಮತ್ತಿಷ್ಟು ಗಲೀಜಾಗಿಸಿತ್ತು.

ಸೌಗಂಧಿಗೆ ನಿಜಕ್ಕೂ ಈ ರೀತಿಯ ಪಟ್ಟುಗಳು ಅಥವಾ ತಂತ್ರಗಳು ತಿಳಿದಿದ್ದವು. ಅದನ್ನು ತನ್ನ ಒಂದೆರಡು ಗೆಳತಿಯರ ಜೊತೆ ಹಂಚಿಕೊಳ್ಳುತ್ತಾಳೆ ಕೂಡಾ. ಅವಳ ಉಪದೇಶ ಈ ರೀತಿ ಇರುತ್ತದೆ ಸಾಧಾರಣವಾಗಿ. ‘ಬಂದವನು ಒಳ್ಳೆಯವನಾಗಿದ್ದು, ಹೆಚ್ಚು ಮಾತು ಆಡಲು ಬರುವುದಿಲ್ಲವಾದರೆ, ಅವನನ್ನು ಚೆನ್ನಾಗಿ ಕೆಣಕಬೇಕು, ಕಚಗುಳಿ ಕೊಡಬೇಕು, ಅವನೊಡನೆ ಆಡಬೇಕು. ಅವನು ಗಡ್ಡ ಬಿಟ್ಟಿದ್ದರೆ ಅದರೊಳಗೆ ಬಾಚಣಿಕೆಯಂತೆ ಬೆರಳಾಡಿಸಿ ಒಂದಿಷ್ಟು ಕೂದಲುಗಳನ್ನು ತಿರುಚಬೇಕು. ಅವನಿಗೆ ದಪ್ಪ ಹೊಟ್ಟೆಯಿದ್ದರೆ, ಡೋಲಿನ ಹಾಗೆ ಬಡೆಯಬೇಕು. ಅವನು ಇಷ್ಟ ಬಂದಂತೆ ಮಾಡಲು ಅವಕಾಶವನ್ನೇ ನೀಡಬಾರದು. ಅವನು ಖುಷಿಯಲ್ಲಿ ಅಲ್ಲಿಂದ ಹೊರಡುತ್ತಾನೆ ಮತ್ತು ನೀವು ಬಚಾವಾಗುತ್ತೀರಿ. ಹೆಚ್ಚು ಮಾತನಾಡದ ಗಂಡಸರು ಅಪಾಯಕಾರಿಗಳು. ಅವಕಾಶ ಸಿಕ್ಕರೆ ತುಂಬ ನೋಯಿಸುತ್ತಾರೆ!’

ಆದರೆ ಸೌಗಂಧಿ ತಾನು ಅಂದುಕೊಂಡಷ್ಟು ಬುದ್ಧಿವಂತಳಾಗಿರಲಿಲ್ಲ ಮತ್ತು ಅವಳ ಬಳಿ ಬರುವ ಕೆಲವು ಖಾಯಂ ಗಿರಾಕಿಗಳಿದ್ದರು. ಅವಳು ತುಂಬ ಭಾವುಕಳಾಗಿದ್ದಳು, ಹಾಗಾಗಿ ನಿರ್ಧಾರದ ಘಳಿಗೆಗಳಲ್ಲಿ ಅವಳ ತಂತ್ರಗಳೆಲ್ಲ ನೆನಪಿಗೆ ಬಾರದಂತಾಗುತ್ತಿದ್ದವು. ಮಗುವಿಗೆ ಜನ್ಮ ಕೊಟ್ಟಾಗಿನಿಂದ ಹೊಟ್ಟೆಯ ಮೇಲಿದ್ದ ಚರ್ಮ ಸಡಿಲ ಬಿದ್ದ ಗುರುತುಗಳಿದ್ದವು ಮತ್ತು ಮೊದಲ ಬಾರಿಗೆ ಆ ಗುರುತುಗಳನ್ನು ಕಂಡಾಗ ಅವಳಿಗೆ ಹೆಣ್ಣು ನಾಯಿಯೊಂದು ಮನೆಯಲ್ಲಿದ್ದ ಮರಿಗಳ ನೆನಪಿನಲ್ಲಿ ಆತಂಕಗೊಳ್ಳುತ್ತಾ ಎದುರಾದ ತನ್ನ ಕಡೆಗೆ ದೃಷ್ಟಿಯನ್ನೂ ಹರಿಸದೇ ನಿರ್ಲಕ್ಷಿಸುತ್ತಾ ಹೊರಟುಹೋದ ಹತಾಶೆಯಲ್ಲಿ ಅವಳ ಕಜ್ಜಿನಾಯಿ ನೆಲಕೆರೆದು ಕೆರೆದು ಉಂಟಾಗುತ್ತಿದ್ದ ಗೆರೆಗಳು ನೆನಪಾಗಿದ್ದವು.

ಸೌಗಂಧಿ ಯಾವಾಗಲೂ ತನ್ನದೇ ಲೋಕದಲ್ಲಿ ವಿಹರಿಸುವಂಥವಳು, ಆದರೆ ಒಂದು ಕಕ್ಕುಲಾತಿಯ ಮಾತು ಅವಳ ದೇಹದಲ್ಲಿ ಸಂತೋಷದ ತರಂಗಗಳನ್ನು ಎಬ್ಬಿಸುವಷ್ಟು ಶಕ್ತವಾಗಿತ್ತು ಮತ್ತು ಸೆಕ್ಸ್ ಅನ್ನುವುದು ನಿಷ್ಪ್ರಯೋಜಕ ಎಂದು ನಂಬಿಸಿಕೊಳ್ಳುವುದರಲ್ಲೇ ದೇಹಕ್ಕೆ ಅದು ಇಷ್ಟವೆಂದು ಅರಿವಾಗಿ ಹೋಗುತ್ತಿತ್ತು! ಇಡೀ ದಿನ ದೇಹವು ದಣಿದು ಸುಸ್ತಾಗಿ ಹೋಗಿ ಗಾಢ ನಿದ್ರೆಯೊಂದು ತನ್ನನ್ನು ಆವರಿಸಿಕೊಳ್ಳುವ ಕನಸು ಕಾಣುತ್ತಿದ್ದಳು, ಆಹ್! ಎಂಥ ಸುಖ ನಿದ್ರೆಯದು! ದೇಹದ ಕೊನೆಯ ಶಕ್ತಿಯ ಹನಿಯೂ ಸೋರಿಹೋದಷ್ಟು ಆಯಾಸವಾದಾಗಿನ ಮೂರ್ಛಾವಸ್ಥೆಯ ಸ್ಥಿತಿಯು ಎಂಥಾ ಆನಂದದಾಯಕ!’ ಕೆಲವೊಮ್ಮೆ ಅವಳಿಗೆ ತನ್ನ ಇರುವಿಕೆಯ ಬಗ್ಗೆಯೇ ಅನುಮಾನ ಹುಟ್ಟಿಬಿಡುತ್ತಿತ್ತು ಮತ್ತು ಕೆಲವೊಮ್ಮೆ ಇರುವ, ಇಲ್ಲದ ಎರಡೂ ಸ್ಥಿತಿಗಳ ನಡುವೆ ತೂಗಾಡುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು, ಎತ್ತರದ ಆಕಾಶದಲ್ಲಿ ತೇಲುತ್ತಿರುವಾಗ ಗಾಳಿಯು ಅವಳನ್ನು ಸುತ್ತುವರೆದಾಗ – ಮೇಲಿಂದ ಬೀಸುವ ಗಾಳಿ, ಕೆಳಗಿನ ಗಾಳಿ, ಎಡದ ಗಾಳಿ, ಬಲದ ಗಾಳಿ – ಒಟ್ಟಿನಲ್ಲಿ ಎಲ್ಲೆಲ್ಲೂ ಬರೀ ಗಾಳಿಯೇ, ಉಸಿರುಗಟ್ಟಿಸುವಷ್ಟು ಗಾಳಿ, ಆದರೆ ಅದ್ಭುತವಾದ ಗಾಳಿ ಕೂಡಾ! ಸಣ್ಣವಳಿದ್ದಾಗ ಕಣ್ಣಾಮುಚ್ಚಾಲೆ ಆಟ ಆಡುವಾಗ, ಅವಳ ಅಮ್ಮನ ದೊಡ್ದದೊಂದು ಟ್ರಂಕ್ನೊಳಗೆ ಅವಳು ಬಚ್ಚಿಟ್ಟುಕೊಂಡು, ಸಿಕ್ಕಿಬೀಳುತ್ತೇನಾ ಅನ್ನುವ ನಿರೀಕ್ಷೆ ಮತ್ತು ಕಾತರದಲ್ಲಿರುವಾಗ, ಇದ್ದಕ್ಕಿದ್ದಂತೆ ಉಸಿರು ಕಟ್ಟುತ್ತಿದೆ ಅನ್ನಿಸಿ ಎದೆ ಬಡಿತ ಏರಿಬಿಡುತ್ತಿತ್ತು. ಆ ಭಾವನೆ ಎಷ್ಟು ಮಜವಾಗಿರುತ್ತಿತ್ತು!

ಸೌಗಂಧಿಗೆ ಇಡೀ ಜನ್ಮ ಜನರು ತನ್ನನ್ನು ಹುಡುಕುತ್ತಲೇ ಇರುವಾಗ, ಹಾಗೆ ಯಾರ ಕೈಗೂ ಸಿಕ್ಕದೇ ಹಾಗೆ ಟ್ರಂಕಿನೊಳಗೆ ಅಡಗಿಯೇ ಇದ್ದು, ಅಪರೂಪಕ್ಕೊಮ್ಮೆ ತಾನು ಅವರ ಕೈಲಿ ಸಿಕ್ಕಿಬಿದ್ದು, ಆ ನಂತರ ತಾನೂ ಆ ರೀತಿ ಯಾರನ್ನಾದರೂ ಹುಡುಕಬೇಕು ಎನ್ನಿಸುತ್ತದೆ. ಕಳೆದ ಐದು ವರ್ಷಗಳಿಂದ ಅವಳ ಬದುಕು ಥೇಟ್ ಕಣ್ಣಾಮುಚ್ಚಾಲೆ ಆಟದಂತೆಯೇ ಇದೆ: ಕೆಲವೊಮ್ಮೆ ಅವಳು ಯಾರದ್ದೋ ಹುಡುಕಾಟಕ್ಕೆ ಬಿದ್ದರೆ, ಮತ್ಯಾವುದೋ ಗಂಡಸು ಅವಳ ಹುಡುಕಾಟಕ್ಕೆ ಬೀಳುತ್ತಾನೆ. ಬದುಕು ಹೀಗೆಯೇ ಸಾಗುತ್ತಲಿದೆ. ಅವಳು ಸಂತೋಷವಾಗಿಯೇ ಇದ್ದಳು, ಏಕೆಂದರೆ ಅವಳು ಸಂತೋಷವಾಗಿಯೇ ಇರಬೇಕಾಗಿತ್ತು. ಪ್ರತೀ ರಾತ್ರಿಯೂ ತನ್ನ ವಿಶಾಲವಾದ ತೇಗದ ಮರದ ಮಂಚವನ್ನು ಬೇರೆ ಬೇರೆ ಗಂಡಸಿನೊಡನೆ ಹಂಚಿಕೊಳ್ಳುತ್ತಿದ್ದಳು ಮತ್ತು ಅವರನ್ನೆಲ್ಲ ಹಿಡಿತದಲ್ಲಿಡುವ ಅನೇಕ ತಂತ್ರಗಳು ಅವಳಿಗೆ ಗೊತ್ತಿರಲೇಬೇಕಿತ್ತು. ಅವರ ಕೆಟ್ಟಾಕೊಳಕ ಆಸೆ ಮತ್ತು ಬೇಡಿಕೆಗಳನ್ನು ಒಪ್ಪಬಾರದೆಂದು ಅನೇಕ ಸಲ ಅವಳು ಪ್ರತಿಜ್ಞೆ ಮಾಡಿದ್ದರೂ, ಅವರನ್ನು ಉಪೇಕ್ಷಿಸಬೇಕೆಂದು ನಿರ್ಧರಿಸಿದ್ದರೂ, ಅಂಥ ಘಳಿಗೆಗಳು ಎದುರಾಗೇ ಬಿಟ್ಟಾಗ ಪ್ರತೀ ಬಾರಿಯೂ ಸೋತುಬಿಡುತ್ತಿದ್ದಳು. ಪ್ರೀತಿಸಲ್ಪಡಬೇಕು ಅನ್ನುವ ಆ ಕ್ಷಣದ ತೀವ್ರ ಬಯಕೆಯನ್ನು ಹತ್ತಿಕ್ಕಲಾಗುತ್ತಲೇ ಇರಲಿಲ್ಲ.

ಪ್ರತೀ ದಿನವೂ ಒಬ್ಬೊಬ್ಬ ಗಂಡಸು ಅವಳನ್ನು ಪ್ರೀತಿಸುತ್ತೇನೆಂದು ಸಾರುತ್ತಿದ್ದ. ಸೌಗಂಧಿಗೂ ಗೊತ್ತಿತ್ತು ಅವರು ಸುಳ್ಳಾಡುತ್ತಿದ್ದಾರೆನ್ನುವುದು, ಆದರೂ ಉಕ್ಕಿದ ಆ ನಿಮಿಷದ ಭಾವನೆಗಳಲ್ಲಿ ಮುಳುಗಿಹೋದ ಅವಳು, ನಿಜಕ್ಕೂ ಅವರು ತನ್ನನ್ನು ಪ್ರೀತಿಸುತ್ತಿದ್ದಾರೆಂದೇ ನಂಬುತ್ತಿದ್ದಳು. ‘ಪ್ರೀತಿ’. ಆಹ್ ಎಂಥ ಮಧುರವಾದ ಪದ! ಇಡೀ ದೇಹಕ್ಕೆ ಪ್ರೀತಿಯನ್ನು ಬಳಿದುಕೊಂಡು ಕಣಕಣದಲ್ಲೂ ಇಳಿಯುವಂತೆ ಮಸಾಜ್ ಮಾಡಿಕೊಳ್ಳಬೇಕು ಅನ್ನಿಸುತ್ತಿತ್ತು ಅವಳಿಗೆ. ತನ್ನನ್ನೇ ತಾನು ಪ್ರೀತಿಗೆ ಅರ್ಪಿಸಿಕೊಂಡು ಬಿಡಬೇಕು ಅನ್ನಿಸುತ್ತಿತ್ತು. ಪ್ರೀತಿ ಅನ್ನುವುದೇ ಒಂದು ಹೂಜಿಯೆಂದಿಟ್ಟುಕೊಳ್ಳಿ, ಅದರ ಬಾಯಿಯೊಳಗಿಂದ ಒಳಗಿಳಿದು ಅದರೊಳಗೆ ಮುದುಡಿ ಅಡಗಿ ಕುಳಿತು ಬಿರಟೆ ಜಡಿದು ಬಿಡುತ್ತಿದ್ದಳು. ಅವಳಿಗೆ ನಿಜಕ್ಕೂ ಪ್ರೇಮಿಸಬೇಕು ಎಂದು ಆಸೆಯಾದಾಗ, ಆ ಗಂಡಸು ಯಾರು ಅನ್ನುವುದನ್ನೂ ಲಕ್ಷಿಸುತ್ತಿರಲಿಲ್ಲ. ಆಗ ಬಂದ ಯಾವುದೇ ಗಂಡಸನ್ನೂ ಕರೆದುಕೊಂಡು, ಅವನ ತೊಡೆಯ ಮೇಲೆ ಕುಳ್ಳರಿಸಿಕೊಂಡು, ಅವನ ತಲೆದಡವಿ, ಜೋಗುಳ ಹಾಡಿ ಅವನನ್ನು ಮಲಗಿಸಬೇಕು ಅನ್ನಿಸುತ್ತಿತ್ತು.

ಅವಳಲ್ಲಿ ಅಗಾಧ ಪ್ರೇಮವಿರುತ್ತಿತ್ತೆಂದರೆ, ಆ ಕ್ಷಣದಲ್ಲಿ ಯಾವುದೇ ಗಿರಾಕಿಯನ್ನೂ ಅವಳು ಪ್ರೇಮಿಸಲು ಸಿದ್ಧವಿರುತ್ತಿದ್ದಳು ಮತ್ತು ಆ ಪ್ರೀತಿಯನ್ನು ಚಿರಕಾಲ ಜೀವಂತವಾಗಿಡಲು ಶಕ್ತಳಿದ್ದಳು. ಆಗಲೇ ಹೇಳಿದೆನಲ್ಲ, ಗೋಡೆಯ ಮೇಲಿದ್ದ ನಾಲ್ಕು ಫೋಟೋಗಳಲ್ಲಿನ ಗಂಡಸರು, ಅವರೆಲ್ಲ ಅವಳು ಪ್ರೇಮ ನಿವೇದನೆ ಮಾಡಿಕೊಂಡಂಥವರೇ. ಅವಳು ಒಳ್ಳೆಯವಳೇ ಇದ್ದಳು, ಆದರೆ ಆ ಗಂಡಸರೇಕೆ ಒಳ್ಳೆಯವರಾಗಿರಲಿಲ್ಲ? ಅವಳಿಗದು ಅರ್ಥವೇ ಆಗುತ್ತಿರಲಿಲ್ಲ, ಹಾಗಾಗಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವಾಗ ಅಯಾಚಿತವಾಗಿ ‘ಸೌಗಂಧಿ, ಕಾಲಕ್ಕೆ ನಿನ್ನ ಮೇಲೆ ಕರುಣೆಯಿಲ್ಲ’ ಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತಿದ್ದಳು.

ಅವಳು ಸೂಳೆಗಾರಿಕೆಯಲ್ಲಿ ಕಳೆದ ಸಮಯ – ಕಳೆದ ಐದು ವರ್ಷಗಳ ಎಲ್ಲ ದಿನಗಳು ಮತ್ತು ರಾತ್ರಿಗಳು – ಅವು ಮಾತ್ರ ಅವಳಿಗೆ ಮುಖ್ಯವೆನಿಸಿದ್ದವು. ಅವಳು ಕನಸು ಕಂಡಷ್ಟು ಸಂತೋಷವಾಗಿಲ್ಲದೇ ಹೋದರೂ ತೃಪ್ತಿಯಿಂದಿದ್ದಳು. ಅವಳು ಅರಮನೆ ಕಟ್ಟಬೇಕು ಎನ್ನುವಂಥ ಕನಸನ್ನೇನೂ ಕಂಡವಳಲ್ಲ. ಹಣವೆನ್ನುವುದು ನಿಜಕ್ಕೂ ಅಷ್ಟೊಂದು ದೊಡ್ಡ ವಿಷಯವೇ ಆಗಿರಲಿಲ್ಲ. ಅವಳು ಗಿರಾಕಿಗಳಿಂದ ಹತ್ತು ರೂಪಾಯಿ ಪಡೆಯುತ್ತಿದ್ದುದರಲ್ಲಿ, ಎರಡೂವರೆ ರೂಪಾಯಿ ರಾಮ್ ಲಾಲ್ ಗೆ ಸೇರುತ್ತಿತ್ತು ಮತ್ತು ಉಳಿದ ಏಳೂವರೆ ರೂಪಾಯಿ ಅವಳಿಗೆ ಬೇಕಾದಷ್ಟಾಗಿತ್ತು. ಮಾಧೋ ಪುಣೆಯಿಂದ ಅವಳಿಗೆ ‘ಚುಚ್ಚಲು’ ಬಂದಾಗ – ರಾಮ್ ಲಾಲ್ ಹಾಗೆಯೇ ಕರೆಯುತ್ತಾನೆ ಅದನ್ನು – ಅವನ ಕೈಗೆ ಹತ್ತೋ, ಹದಿನೈದೋ ರೂಪಾಯಿಗಳನ್ನಿಡುತ್ತಿದ್ದಳು. ಹಾಗೆ ಮಾಡುತ್ತಿದ್ದುದಾದರೂ ಅವಳಿಗೆ ಅವನ ಮೇಲಿದ್ದ ಮೋಹದ ಕಾರಣಕ್ಕೆ ಮಾತ್ರ. ರಾಮ್ ಲಾಲ್ ಹೇಳುವುದು ನಿಜ – ಮಾಧೋನಲ್ಲಿ ಅವಳನ್ನು ಆಕರ್ಷಿಸುವಂಥದ್ದೇನೋ ಇತ್ತು.

ನಾನು ಯಾಕೆ ಸುಮ್ಮನೇ ಇದ್ದುದನ್ನು ಇದ್ದಂತೆ ಹೇಳಿಬಿಡಬಾರದು?

ಸೌಗಂಧಿ ಮೊದಲಿಗೆ ಮಾಧೋನನ್ನು ಭೇಟಿಯಾದಾಗ ಅವನು ಹೇಳಿದ್ದ ‘ನಿನಗೆ ನಿಜಕ್ಕೂ ನಾಚಿಕೆಯಾಗುವುದಿಲ್ಲವೇ? ನೀನು ಏನನ್ನು ಬಿಕರಿಗಿಟ್ಟಿರುವೆ ಎನ್ನುವುದು ನಿನಗೆ ತಿಳಿದಿದೆಯೇ? ನಾನು ಏತಕ್ಕಾಗಿ ಬಂದಿರುವೆನೆಂದು ನೀನು ತಿಳಿದಿರುವೆ? ಛಿ ಛಿ ಛಿ. ಹತ್ತು ರೂಪಾಯಿಯಲ್ಲಿ ಎರಡೂವರೆ ರೂಪಾಯಿ ಆ ತಲೆಹಿಡುಕನಿಗೆ ಸೇರುತ್ತದೆ ಬೇರೆ. ಉಳಿದದ್ದೆಷ್ಟು, ಏಳೂವರೆ ರೂಪಾಯಿ, ಸರಿ ತಾನೇ … ಏಳೂವರೆ? ಆ ಏಳೂವರೆ ರೂಪಾಯಿಗೆ ನೀನು ನನಗೆ ಕೊಡಲಾಗದ್ದನ್ನು ಕೊಡುವೆ ಎಂದು ಪ್ರಮಾಣ ಮಾಡುತ್ತೀಯೆ ಮತ್ತು ನಾನು ತೆಗೆದುಕೊಳ್ಳಲಾರದ ಏನೋ ಒಂದಕ್ಕಾಗಿ ನಾನು ಇಲ್ಲಿಗೆ ಬಂದಿರುವೆ! ನನಗೇನೋ ಹೆಂಗಸು ಬೇಕು, ಆದರೆ ನಿನಗೆ ಗಂಡಸು ಬೇಕೇ? ನನಗೆ ಯಾವ ಹೆಣ್ಣಾದರೂ ಆದೀತು, ಆದರೆ ನಿನಗೆ ನಾನು ನಿಜಕ್ಕೂ ಇಷ್ಟವಾಗುತ್ತೇನಾ? ನಮ್ಮ ಸಂಬಂಧವೇನು? ಉಹುಂ, ಏನಿಲ್ಲ, ಏನೇನೂ ಇಲ್ಲ. ಬರೀ ಹತ್ತು ರೂಪಾಯಿಗಳು – ಆ ತಲೆಹಿಡುಕನಿಗೆ ಕೊಟ್ಟ ಬಳಿಕ ಉಳಿವ ನೀನು ಹುಡಿ ಹಾರಿಸುವ ಏಳೂವರೆ ರೂಪಾಯಿ – ಅದಷ್ಟೇ ನಮ್ಮಿಬ್ಬರನ್ನು ಬಂಧಿಸಿರುವ ತಂತು. ನೀನೂ ಅದರ ಮೇಲೆ ಕಣ್ಣಿರಿಸಿರುವೆ ಮತ್ತು ನಾನೂ ಸಹಾ. ನಿನ್ನ ಹೃದಯ ಏನೋ ಹೇಳುತ್ತದೆ, ನನ್ನ ಹೃದಯ ಮತ್ತೇನೋ ಹೇಳುತ್ತದೆ. ನಾವಿಬ್ಬರೂ ಏಕೆ ಒಂದಾಗಬಾರದು? ನಾನು ಪುಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದೇನೆ. ನಾನು ತಿಂಗಳಿಗೊಮ್ಮೆ ಮೂರ್ನಾಲ್ಕು ದಿನ ಇಲ್ಲಿಗೆ ಬರುತ್ತೇನೆ. ನಾನು ನಿನಗೆ ಬೇಕಾದ್ದೆಲ್ಲವನ್ನೂ ಕೊಡಿಸುತ್ತೇನೆ. ಅಂದಹಾಗೆ ಈ ಮನೆಗೆ ಬಾಡಿಗೆಯೆಷ್ಟು?

ಈ ರೀತಿಯಾಗಿ ಮಾಧೋ ಹೇಳಿದ್ದೆಲ್ಲವೂ ಕೇಳಿ ಕೇಳಿ ತಾನು ಹೆಡ್ ಕಾನ್ಸ್ ಟೇಬಲ್ಲನ ಹೆಂಡತಿಯೇನೋ ಅನ್ನುವ ಭ್ರಮೆ ಆವರಿಸಿತ್ತು. ಮಾಧೋ ಅವಳ ರೂಮನ್ನು ಒಪ್ಪ ಮಾಡಿ, ಅವಳ ಮಂಚದಲ್ಲಿ ತಲೆಯನ್ನಿಡುವ ಗೋಡೆಯಲ್ಲಿ ನೇತುಹಾಕಿದ್ದ ಕಾಮಶಾಸ್ತ್ರದ ಭಂಗಿಗಳ ಫೋಟೋಗಳನ್ನೆಲ್ಲ ಹರಿದು ಹಾಕಿದ್ದ. ಅವನು ಹೇಳಿದ್ದ ‘ಸೌಗಂಧಿ, ನೀನು ಆ ರೀತಿಯಾದ ಫೋಟೋಗಳನ್ನು ನೇತುಹಾಕಲು ನಾನು ಬಿಡುವುದಿಲ್ಲ. ಮತ್ತು ಈ ನೀರಿನ ಹೂಜಿ ನೋಡು, ಅದೆಷ್ಟು ಕೊಳಕಾಗಿದೆ! ಮತ್ತು ಈ ಚಿಂದಿ, ಈ ಚಿಂದಿಗಳು – ಅಬ್ಬ ಎಷ್ಟು ದುರ್ನಾತ ಬೀರುತ್ತಿವೆ! ಅವನ್ನು ಹೊರಕ್ಕೆಸಿ. ಮತ್ತು ನಿನ್ನ ಕೂದಲಿಗೆ ಅದೇನು ಮಾಡಿಕೊಂಡಿದ್ದೀಯ? ಮತ್ತು ….’ ಮಾಧೋ ಮತ್ತು ಸೌಗಂಧಿ ಮೂರು ಸುದೀರ್ಘ ಘಂಟೆಗಳ ಕಾಲ ಮಾತಾಡಿದ ನಂತರ ಸೌಗಂಧಿಗೆ ಅವನು ಎಷ್ಟೋ ವರ್ಷಗಳಿಂದ ಪರಿಚಯವಿರುವಂತೆ ಅನ್ನಿಸಿಬಿಟ್ಟಿತ್ತು. ಯಾರೂ ಅದುವರೆಗೆ ಆ ರೂಮಿನ ಗಬ್ಬುನಾತದ ಚಿಂದಿಗಳ ಬಗ್ಗೆ, ಕೊಳಕು ಹೂಜಿಯ ಬಗ್ಗೆ, ಉದ್ರೇಕಗೊಳಿಸುವ ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹಾಗೆ ನೋಡಿದರೆ ಅವಳ ರೂಮನ್ನು ಮನೆ ಎಂದು ಯಾರೂ ಪರಿಗಣಿಸಿಯೇ ಇರಲಿಲ್ಲ. ಗಂಡಸರು ಬರುತ್ತಿದ್ದರು, ಹೋಗುತ್ತಿದ್ದರು, ಯಾರೂ ಆ ಹಾಸಿಗೆಯ ಕೊಳಕನ್ನು ಸಹಾ ಗಮನಿಸುತ್ತಿರಲಿಲ್ಲ. ‘ನಿನ್ನ ಮೂಗು ನೋಡು ಅದೆಷ್ಟು ಕೆಂಪಗಾಗಿದೆ! ನೆಗಡಿಯಾಗದಿದ್ದರೆ ಸಾಕು. ಇರು ಹೋಗಿ ಏನಾದರೂ ಮಾತ್ರೆ ತರುತ್ತೇನೆ’ ಎಂದು ಯಾರೂ ಹೇಳಿರಲಿಲ್ಲ. ಮಾಧೋ ನಿಜಕ್ಕೂ ಒಳ್ಳೆಯ ಮನುಷ್ಯನಾಗಿದ್ದ. ಅವನು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಎಷ್ಟು ಖಡಾಖಂಡಿತವಾಗಿ ಅವಳನ್ನು ಬಯ್ದಿದ್ದ! ಅವಳಿಗೆ ನಿಜಕ್ಕೂ ಅವನ ಅವಶ್ಯಕತೆ ಅನ್ನಿಸಿತ್ತು ಮತ್ತು ಹಾಗೆ ಶುರುವಾಗಿತ್ತು ಅವರಿಬ್ಬರ ಸಂಬಂಧ.

ಮಾಧೋ ತಿಂಗಳಿಗೊಮ್ಮೆ ಪುಣೆಯಿಂದ ಬರುತ್ತಿದ್ದ ಮತ್ತು ಹಿಂತಿರುಗುವ ಮೊದಲು ಯಾವಾಗಲೂ ಹೇಳುತ್ತಿದ್ದ ‘ನೋಡು ಸುಗಂಧಿ, ಹೇಳುತ್ತೇನೆ ಕೇಳು, ನೀನೇನಾದರೂ ನಿನ್ನ ಈ ದಂಧೆಯನ್ನು ಮುಂದುವರೆಸಿದ್ದೇ ಆದರೆ ಅಲ್ಲಿಗೆ ನಮ್ಮ ಸಂಬಂಧ ಮುಗಿಯಿತೆಂದು ತಿಳಿ. ಒಬ್ಬನೇ ಒಬ್ಬ ಗಂಡಸನ್ನು ಇಲ್ಲಿಗೆ ಬಂದಿದ್ದ ಎಂದು ತಿಳಿಯಿತಾದರೆ, ನಿನ್ನ ಕೂದಲನ್ನು ಹಿಡಿದೆಳೆದು ಆಚೆ ದಬ್ಬುತ್ತೇನೆ. ನಾನು ಪುಣೆ ತಲುಪಿದ ಕೂಡಲೇ ನಿನ್ನ ಈ ತಿಂಗಳ ಖರ್ಚಿನ ಹಣವನ್ನು ಮನಿ ಆರ್ಡರ್ ಮಾಡುತ್ತೇನೆ. ನೆನಪಿಸು, ಅಂದಹಾಗೆ ಈ ರೂಮಿನ ಬಾಡಿಗೆ ಎಷ್ಟು?’

ಆದರೆ ಮಾಧೋ ಯಾವತ್ತೂ ಹಣವನ್ನು ಕಳಿಸಲೂ ಇಲ್ಲ ಮತ್ತು ಸೌಗಂಧಿ ಎಂದೂ ಅವಳ ದಂಧೆಯನ್ನು ನಿಲ್ಲಿಸಲೂ ಇಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಇಬ್ಬರಿಗೂ ತಿಳಿದಿತ್ತು. ಸೌಗಂಧಿ ಮಾಧೋನನ್ನು ‘ಅದೇನು ನೀನು ಕೊಚ್ಚಿಕೊಳ್ಳುವುದು? ಯಾವತ್ತು ನೀನು ನನಗೆಂದು ಏನಾದರೂ ಕೊಟ್ಟಿರುವೆ?’ ಎಂದು ಕೇಳಲಿಲ್ಲ ಮತ್ತು ಮಾಧೋ ಸೌಗಂಧಿಯನ್ನು ‘ಈ ಹಣ ಎಲ್ಲಿಂದ ಬಂತು? ನಾನಿದನ್ನು ನಿನಗೆ ಕೊಡಲಿಲ್ಲ ಅಲ್ಲವೇ’ ಎಂದು ಕೇಳಲಿಲ್ಲ. ಇಬ್ಬರೂ ಸುಳ್ಳಾಡುತ್ತಿದ್ದರು, ಇಬ್ಬರೂ ಮುಖವಾಡ ತೊಟ್ಟಿದ್ದರು. ಆದರೂ ಚಿನ್ನದ ಒಡವೆ ಕೊಳ್ಳುವ ಶಕ್ತಿಯಿಲ್ಲದವರು ಗಿಲೀಟು ಒಡವೆಯಲ್ಲೇ ತೃಪ್ತಿ ಪಡುವಂತೆ ಸೌಗಂಧಿಯೂ ಸಂಭ್ರಮ ಪಡುತ್ತಿದ್ದಳು.

ತುಂಬ ಸುಸ್ತಾಗಿದ್ದ ಸೌಗಂಧಿ ದೀಪವನ್ನೂ ಆರಿಸದೇ ಹಾಗೆಯೇ ಮಲಗಿಬಿಟ್ಟಿದ್ದಳು. ತಲೆಯ ಮೇಲೆ ತೂಗುಬಿದ್ದಿದ್ದ ದೀಪದ ಪ್ರಖರ ಬೆಳಕು ಸಹಾ ಅವಳನ್ನು ಎಚ್ಚರಗೊಳಿಸಲು ಶಕ್ಯವಾಗಿರಲಿಲ್ಲ.

ಬಾಗಿಲು ಬಡಿದ ಸದ್ದು ಕೇಳಿಸಿತು. ನಡುರಾತ್ರಿಯ ಎರಡು ಘಂಟೆಯಲ್ಲಿ ಯಾರು ಬಂದಿರಬಹುದು? ಆ ಬಾಗಿಲ ಬಡಿತವು ನೊಣದ ಗುಯ್ಗುಡುವ ಸದ್ದಿನಂತೆ, ಸಣ್ಣಗೆ ಸೌಗಂಧಿಯ ಕಿವಿಯನ್ನು ತಲುಪುತ್ತಿತ್ತು. ಬರಬರುತ್ತಾ ಆ ಬಡಿತ ಜೋರಾದಾಗ ಅವಳು ಎಚ್ಚರಗೊಂಡಳು. ಅವಳ ಬಾಯಿಯ ತುಂಬ ಹಿಂದಿನ ರಾತ್ರಿ ಕುಡಿದ ಸಾರಾಯಿ ಮತ್ತು ಹಲ್ಲಿನ ನಡುವೆ ಸಿಕ್ಕಿಕೊಂಡ ಮೀನಿನ ತುಂಡುಗಳಿಂದ ಉಂಟಾದ ಕಹಿ ಮತ್ತು ಅಂಟಾದ ಜೊಲ್ಲು ತುಂಬಿತ್ತು. ಲುಂಗಿಯ ಅಂಚಿನಿಂದ ಜೊಲ್ಲನ್ನು ತೊಡೆದು ಕಣ್ಣುಜ್ಜಿಕೊಂಡಳು. ಆಗ ಒಬ್ಬಳೇ ಇರುವುದು ಅರಿವಿಗೆ ಬಂತು. ಅವಳು ಮಂಚದಡಿ ಬಗ್ಗಿ ನೋಡಿದಳು, ಅವಳ ನಾಯಿ ಚಪ್ಪಲಿಗಳ ಮೇಲೊರಗಿ ಸುಖನಿದ್ರೆಯಲ್ಲಿತ್ತು. ಅವಳು ತಲೆಯೆತ್ತಿ ತನ್ನದೇ ರೆಕ್ಕೆಗಳ ನಡುವೆ ತಲೆ ಹುದುಗಿಸಿ ನಿದ್ರಿಸುತ್ತಿದ್ದ ಗಿಣಿಯಿದ್ದ ಪಂಜರವನ್ನು ನೋಡಿದಳು.

ಸೌಗಂಧಿಗೆ ಇಡೀ ಜನ್ಮ ಜನರು ತನ್ನನ್ನು ಹುಡುಕುತ್ತಲೇ ಇರುವಾಗ, ಹಾಗೆ ಯಾರ ಕೈಗೂ ಸಿಕ್ಕದೇ ಹಾಗೆ ಟ್ರಂಕ್ನೊಳಗೆ ಅಡಗಿಯೇ ಇದ್ದು, ಅಪರೂಪಕ್ಕೊಮ್ಮೆ ತಾನು ಅವರ ಕೈಲಿ ಸಿಕ್ಕಿಬಿದ್ದು, ಆ ನಂತರ ತಾನೂ ಆ ರೀತಿ ಯಾರನ್ನಾದರೂ ಹುಡುಕಬೇಕು ಎನ್ನಿಸುತ್ತದೆ.

ಯಾರೋ ಬಾಗಿಲು ಬಡಿಯುತ್ತಲೇ ಇದ್ದಾರೆ. ಮಿಡಿಯುತ್ತಿದ್ದ ತಲೆಯಲ್ಲಿಯೇ ಸೌಗಂಧಿ ಎದ್ದಳು. ಹೂಜಿಯಿಂದ ಒಂದು ಲೋಟದ ತುಂಬ ನೀರು ಮೊಗೆದು ಬಾಯಿ ಮುಕ್ಕಳಿಸಿದಳು. ಮತ್ತೊಂದು ಲೋಟದ ತುಂಬ ನೀರು ಮೊಗೆದು ಕುಡಿದು ಬಾಗಿಲನ್ನು ತೆರೆದಳು.

‘ರಾಮ್ ಲಾಲ್?’

ರಾಮ್ ಲಾಲ್ ಬಾಗಿಲು ಬಡಿದು ಬಡಿದು ಸುಸ್ತಾಗಿದ್ದವ ‘ನೀನು ಸತ್ತಿದ್ದೀಯೋ ಹೇಗೆ’ ಎಂದು ಸಿಟ್ಟಿನಿಂದ ‘ನಾನು ಈ ಸರಿರಾತ್ರಿಯಲ್ಲಿ ಮೂರ್ಖನಂತೆ ಬಾಗಿಲು ಬಡಿಯುತ್ತಲೇ ಇರುವಾಗ ನೀನು ಅದೆಲ್ಲಿ ಹಾಳಾಗಿ ಹೋಗಿದ್ದೆ?’ ಅಂದವನೇ ಮತ್ತೆ ದನಿ ತಗ್ಗಿಸಿ ‘ಯಾರಾದರೂ ಇದ್ದಾರಾ ಒಳಗೆ?’ ಎಂದು ಕೇಳಿದ.

ಸೌಗಂಧಿ ಇಲ್ಲವೆನ್ನುವಂತೆ ತಲೆಯಾಡಿಸುತ್ತಲೇ ರಾಮ್ ಲಾಲ್ ದನಿಯೆತ್ತರಿಸಿ ‘ಮತ್ತೆ ಬಾಗಿಲೇಕೆ ತೆಗೆಯಲಿಲ್ಲ? ಆಹ್! ಇದೆಲ್ಲ ಅತಿಯಾಯಿತು ಯಾಕೋ. ಅದೆಂಥ ನಿದ್ರೆ ನಿನ್ನದು? ಹೀಗೆ ಒಬ್ಬೊಬ್ಬಳನ್ನು ಎಬ್ಬಿಸಲೂ ಎರಡೆರಡು ಘಂಟೆಕಾಲ ತಲೆ ಚೆಚ್ಚಿಕೊಂಡು ಸಾಯುತ್ತಿದ್ದರೆ ನಾನು ವ್ಯವಹಾರ ನಡೆಸಿದಂತೆಯೇ ಇದೆ. ಅದೇನು ಹಾಗೆ ದುರುಗುಟ್ಟಿ ನೋಡುತ್ತಿರುವೆ? ಬೇಗ, ಆ ಲುಂಗಿಯನ್ನು ತೆಗೆದು ಹೂಗಳ ಡಿಸೈನಿನ ನಿನ್ನ ಸೀರೆಯನ್ನುಟ್ಟು, ಮುಖಕ್ಕೆ ಪೌಡರ್ ಹಚ್ಚಿ ಈ ಕೂಡಲೇ ನನ್ನೊಡನೆ ಹೊರಡು. ಒಬ್ಬ ಶ್ರೀಮಂತ ಕಾರಿನಲ್ಲಿ ನಿನಗಾಗಿ ಕಾಯುತ್ತಿದ್ದಾನೆ. ಬೇಗ!’

ಸೌಗಂಧಿ ಆರಾಮ ಕುರ್ಚಿಯಲ್ಲಿ ಕುಳಿತಳು ಮತ್ತು ರಾಮ್ ಲಾಲ್ ಒಳಗೆ ಬಂದವನೇ ಕನ್ನಡಿಯೆದುರು ನಿಂತು ತಲೆ ಬಾಚಿಕೊಳ್ಳಲಾರಂಭಿಸಿದ. ಸೌಗಂಧಿ ಸ್ಟೂಲಿನ ಹತ್ತಿರ ಹೋಗಿ, ಅಲ್ಲಿದ್ದ ಮುಲಾಮಿನ ಬಾಟಲನ್ನೆತ್ತಿಕೊಂಡು, ಮುಚ್ಚಳ ತೆರೆದು ‘ರಾಮ್ ಲಾಲ್, ನನಗೆ ಇವತ್ತು ಮನಸ್ಸಿಲ್ಲ’ ಎಂದಳು.

ರಾಮ್ ಲಾಲ್ ಬಾಚಣಿಕೆಯನ್ನು ಮತ್ತೆ ಗೂಡಿನಲ್ಲಿ ಇಡುತ್ತಾ, ಅವಳ ಕಡೆ ತಿರುಗಿ ‘ಹಾಗಂತ ಮೊದಲೇ ಹೇಳಲೇನಾಗಿತ್ತು?’ ಎಂದ.

ಸೌಗಂಧಿ ಹಣೆ ಮತ್ತು…. ಮುಲಾಮು ತಿಕ್ಕುತ್ತಾ ‘ಹಾಗಲ್ಲ ರಾಮ್ ಲಾಲ್, ನನಗೀಗ ಏನೋ ಸರಿಯಿಲ್ಲ. ತುಂಬ ಕುಡಿದುಬಿಟ್ಟೆ ಅನ್ನಿಸುತ್ತದೆ’.

ರಾಮ್ ಲಾಲ್ ಆಸೆಬುರುಕ ದನಿಯಲ್ಲಿ ‘ಇನ್ನೂ ಉಳಿದಿದೆಯಾ? ಇದ್ದರೆ ನನಗೆ ಬೇಕು’ ಎಂದ.
ಸೌಗಂಧಿ ಮುಲಾಮಿನ ಬಾಟಲನ್ನು ಕೆಳಗಿಡುತ್ತಾ ‘ಇದ್ದಬದ್ದದ್ದನ್ನೆಲ್ಲ ಕುಡಿಯದಿದ್ದರೆ ಈ ತಲೆನೋವು ಯಾಕೆ ಬರುತ್ತಿತ್ತು ನನಗೆ? ರಾಮ್ ಲಾಲ್, ಒಂದು ಕೆಲಸ ಮಾಡು, ಆ ಮನುಷ್ಯನನ್ನು ಇಲ್ಲಿಗೇ ಕರೆದುಕೊಂಡು ಬಾ’ ಎಂದಳು.

‘ಇಲ್ಲ, ಇಲ್ಲ, ಅವನಿಲ್ಲಿಗೆಲ್ಲ ಬರುವುದಿಲ್ಲ. ಅವನೊಬ್ಬ ತುಂಬ ಸಭ್ಯ ಮನುಷ್ಯ. ಈ ಓಣಿಯಲ್ಲಿ ಕಾರಿನಲ್ಲಿ ಬರಲೇ ಆತಂಕ ವ್ಯಕ್ತಪಡಿಸುತ್ತಿದ್ದ. ಸಿದ್ಧವಾಗಿ ಬಾ, ಆ ನಂತರ ಸರಿ ಹೋಗುತ್ತೀಯೆ’ ಎಂದ.

ಇಷ್ಟೆಲ್ಲ ಕಷ್ಟ ಬರೀ ಏಳೂವರೆ ರೂಪಾಯಿಗೆ? ಸೌಗಂಧಿಗೆ ತಲೆ ನೋವಿದ್ದಾಗ ಕೆಲಸ ಮಾಡಲು ಮನಸ್ಸೇ ಆಗುತ್ತಿರಲಿಲ್ಲ. ಆದರೆ ಈಗ ಅವಳಿಗೆ ತುರ್ತಾಗಿ ಹಣದ ಅವಶ್ಯಕತೆಯಿತ್ತು. ಪಕ್ಕದ ಮನೆಯ ಮದರಾಸಿ ಹೆಂಗಸಿನ ಗಂಡ ಕಾರು ಅಪಘಾತದಲ್ಲಿ ಸತ್ತುಹೋಗಿದ್ದ. ಈಗ ಆ ಹೆಂಗಸು, ತನ್ನ ಪುಟ್ಟ ಮಗಳೊಡನೆ ಮದರಾಸಿಗೆ ಹೋಗಬೇಕಿತ್ತು. ಆದರೆ ಪ್ರಯಾಣಕ್ಕೆ ಬೇಕಿದ್ದಷ್ಟು ಹಣ ಅವಳ ಬಳಿಯಿರಲಿಲ್ಲ. ಅವಳಿಗೆ ತುಂಬ ಗಾಭರಿಯಾಗಿತ್ತು. ಹಿಂದಿನ ದಿನ ತಾನೆ ಸೌಗಂಧಿ ಅವಳಿಗೆ ಆಶ್ವಾಸನೆ ನೀಡಿದ್ದಳು. ‘ಯೋಚಿಸಬೇಡ. ಪುಣೆಯಿಂದ ನನ್ನ ಬಾಯ್ ಫ಼್ರೆಂಡ್ ಬರುವವನಿದ್ದಾನೆ. ಅವನಿಂದ ಹಣ ಪಡೆದು ನಿನಗೆ ತಿಕೀಟು ಮಾಡಿಸುತ್ತೇನೆ’ ಮಾಧೋ ನಿಜಕ್ಕೂ ಬರುವವನಿದ್ದ, ಆದರೆ ಹಣದ ವ್ಯವಸ್ಥೆ ಸೌಗಂಧಿಯೇ ಮಾಡಿಕೊಳ್ಳಬೇಕಿತ್ತು. ಇದೆಲ್ಲ ಮನಸ್ಸಿನಲ್ಲಿ ಇದ್ದುದರಿಂದ, ಅವಳು ಎದ್ದು ಹೂಗಳ ಸೀರೆಯುಟ್ಟು ಸಿದ್ಧಳಾಗಿ ಕೆನ್ನೆಗಿಷ್ಟು ರೋಜು ಬಳಿದಳು. ಮತ್ತೊಂದು ಲೋಟ ನೀರು ಕುಡಿದು ರಾಮ್ ಲಾಲನ ಜೊತೆ ಹೊರಟಳು.

ಸಣ್ಣ ಊರಿನ ಲೆಕ್ಕಕ್ಕೆ ಸ್ವಲ್ಪ ದೊಡ್ಡದೇ ಅನ್ನಿಸುವಂತಿದ್ದ ಮಾರ್ಕೆಟ್ಟಿನ ಓಣಿ ಮೌನ ಹೊದ್ದು ಮಲಗಿತ್ತು. ಬೀದಿದೀಪದ ಬೆಳಕು ಕ್ಷೀಣವಾಗಿತ್ತು. ಓಣಿಯ ಆ ತುದಿಯಲ್ಲಿ ನಿಂತಿದ್ದ ಕಾರನ್ನು ಕಂಡಳು, ಆ ಕಡುಕಪ್ಪು ರಾತ್ರಿಯ ನಿಗೂಢ ಮೌನದಲ್ಲಿ ನಿಂತಿದ್ದ ಕಪ್ಪು ಕಾರು ಬರಿಯ ನೆರಳಿನಂತೆ ಭಾಸವಾಯಿತು. ಸೌಗಂಧಿಗೆ ಅವಳ ತಲೆನೋವು ಇಡಿಯ ವಾತಾವರಣವನ್ನೆಲ್ಲ ಆವರಿಸಿರುವ ಹಾಗೆ ಭಾಸವಾಗಿ, ಅಲ್ಲಿದ್ದ ಗಾಳಿಯೂ ಬ್ರಾಂಡಿ ಮತ್ತು ಚಂದ್ರನ ಬೆಳಕಿನಲ್ಲಿ ಗಾಳಿಯೂ ಮತ್ತೇರಿರುವ ಹಾಗೆ ಅನ್ನಿಸಿತು.

ರಾಮ್ ಲಾಲ್ ಮುಂದೆ ನಡೆದು ಕಾರಿನಲ್ಲಿದ್ದವರಿಗೆ ಏನೋ ಹೇಳಿದ. ಸೌಗಂಧಿಯೂ ಅಷ್ಟರಲ್ಲಿ ಕಾರನ್ನು ಸಮೀಪಿಸಿದ್ದಳು. ರಾಮ್ ಲಾಲ್ ತುಸು ಬದಿಗೆ ಸರಿದು, ‘ಇಗೋ ಇವಳೇ! ತುಂಬ ಒಳ್ಳೆಯವಳು. ಈಗ ತಾನೆ ದಂಧೆ ಶುರು ಮಾಡಿದ್ದಾಳೆ’ ಎಂದವನೇ ಸೌಗಂಧಿಯ ಕಡೆ ತಿರುಗಿ ‘ಸೌಗಂಧಿ, ಇಲ್ಲಿ ಬಾ. ಬಾಸ್ ನಿನ್ನನ್ನು ನೋಡಬೇಕಂತೆ’ ಎಂದ.

ಸೀರೆಯಲ್ಲಿ ಬೆರಳುಗಳಿಂದ ಸ್ವಲ್ಪ ಮೇಲಕ್ಕೆ ಎತ್ತಿಹಿಡಿದು, ಕಾರಿನ ಮನುಷ್ಯ ಅವಳೆಡೆಗೆ ಬಿಡುತ್ತಿದ್ದ ಟಾರ್ಚಿನ ಬೆಳಕಿನಲ್ಲಿ ಮುಖ ಕಾಣುವಂತೆ ನಿಂತಳು. ಸೌಗಂಧಿಯ ನಿದ್ರೆಯಿಂದ ತುಂಬಿದ ಕಣ್ಣುಗಳೆಡೆ ಬೆಳಕು ಬಿದ್ದಕೂಡಲೇ ಅಲ್ಲಿದ್ದ ದೀಪ ಸಣ್ಣದೊಂದು ಕ್ಲಿಕ್ ಸದ್ದಿನಿಂದ ಆರಿಹೋಗಿ, ಕಾರಿನಲ್ಲಿದ್ದ ಮನುಷ್ಯ ‘ಯಕ್!’ ಅಂದಿದ್ದೇ ತಡ, ಕಾರಿನ ಇಂಜಿನ್ ಮತ್ತೆ ಜನ್ಮ ಪಡೆದು, ಕಾರು ಓಣಿಯುದ್ದಕ್ಕೂ ಸಾಗಿ ಕಣ್ಮರೆಯಾಯಿತು.

ಸೌಗಂಧಿಗೆ ಪ್ರತಿಕ್ರಿಯೆ ತೋರಲೂ ಸಮಯವಿರಲಿಲ್ಲ. ಆ ಮನುಷ್ಯನ ಟಾರ್ಚಿನ ಬೆಳಕು ಇನ್ನೂ ಕಣ್ಣುಗಳಿಗೆ ಚುಚ್ಚುತ್ತಿದೆಯೇನೋ ಅನ್ನಿಸುತ್ತಿದ್ದು, ಆ ಮನುಷ್ಯನ ಮುಖವನ್ನೂ ನೋಡಿರಲಿಲ್ಲ. ಏನಾಗಿತ್ತು? ಅವಳ ಕಿವಿಗಳಲ್ಲಿ ಈಗಲೂ ಮೊರೆಯುತ್ತಿದ್ದ ಆ ‘ಯಕ್’ ನ ಅರ್ಥವೇನು?

‘ಅವನಿಗೆ ಬಹುಶಃ ನೀನು ಹಿಡಿಸಲಿಲ್ಲವೆನ್ನಿಸುತ್ತದೆ’ ರಾಮ್ ಲಾಲ್ ಹೇಳಿದ. ‘ಸರಿ, ನಾನಿನ್ನು ಹೊರಡುತ್ತೇನೆ. ಏನೂ ಉಪಯೋಗವಿಲ್ಲದೇ ಎರಡು ಘಂಟೆ ಕಾಲ ವ್ಯರ್ಥವಾಯಿತು’.

ಸೌಗಂಧಿಗೆ ಆ ಕ್ಷಣದಲ್ಲಿ ಏನಾದರೂ ತೀವ್ರವಾದದ್ದನ್ನು ಮಾಡಬೇಕು ಅನ್ನಿಸಿಬಿಟ್ಟಿತು. ಆ ಕಾರು ಎಲ್ಲಿ? ಆ ಮನುಷ್ಯ? ಓಹ್! ಆ ಯಕ್ ನ ಅರ್ಥ ನಾನು ಹಿಡಿಸಲಿಲ್ಲವೆಂದೇ? ಬಾಸ್ಟರ್ಡ್…

ಕಾರು ಹೊರಟುಹೋಗಿ ಆಗಿತ್ತು. ಹಿಂಬದಿಯ ಎರಡು ಕೆಂಪು ಪಾರ್ಕಿಂಗ್ ದೀಪಗಳು, ನಡುರಾತ್ರಿಯ ಖಾಲಿ ಮಾರ್ಕೆಟ್ಟಿನ ಓಣಿಯಲ್ಲಿ ಮಂಕಾಗುತ್ತಾ ಸಾಗುತ್ತಿತ್ತು. ಆದರೆ ಆ ಇರಿಯುವ ‘ಯಕ್’ ಉದ್ಗಾರ ಅವಳ ಎದೆಯನ್ನು ಸೀಳಿ ನುಗ್ಗುತ್ತಿತ್ತು. ಅವಳಿಗೆ ‘ಏಯ್, ಕಿತ್ತೋಗಿರೋ ನನ್ಮಗನೇ, ಕಾರು ನಿಲ್ಲಿಸು! ಒಂದೇ ಒಂದು ನಿಮಿಷ ಮತ್ತೆ ಬಾ’ ಎಂದು ಕೂಗಬೇಕು ಅನ್ನಿಸುತ್ತಿತ್ತು. ಅದರೆ ಆ ಕಾರು ತುಂಬ ದೂರ ಹೋಗಿಯಾಗಿತ್ತು.

ಅವಳು ನಿರ್ಜನವಾಗಿದ್ದ ಆ ಮಾರ್ಕೆಟ್ಟಿನಲ್ಲಿ ನಿಂತೇ ಇದ್ದಳು. ಗಾಳಿಗೆ ಪಟಪಟಿಸುತ್ತಿದ್ದ ಅವಳ ಆ ಸೀರೆ ‘ಯಕ್! ಯಕ್!’ ಎಂದು ಹೇಳುತ್ತಿರುವ ಹಾಗೆ ಅನ್ನಿಸಿತು. ಆ ಉದ್ಗಾರವನ್ನು ಅವಳೆಷ್ಟು ದ್ವೇಷಿಸುತ್ತಿದ್ದಳು! ಉಟ್ಟ ಸೀರೆಯನ್ನು ತುಂಡುತುಂಡು ಮಾಡಿ ಗಾಳಿಗೆ ಹಾರಬಿಡಬೇಕು ಅನ್ನಿಸಲಾರಂಭಿಸಿತು.

ಸೌಗಂಧಿಯ ನಿದ್ರೆಯಿಂದ ತುಂಬಿದ ಕಣ್ಣುಗಳೆಡೆ ಬೆಳಕು ಬಿದ್ದಕೂಡಲೇ ಅಲ್ಲಿದ್ದ ದೀಪ ಸಣ್ಣದೊಂದು ಕ್ಲಿಕ್ ಸದ್ದಿನಿಂದ ಆರಿಹೋಗಿ, ಕಾರಿನಲ್ಲಿದ್ದ ಮನುಷ್ಯ ‘ಯಕ್!’ ಅಂದಿದ್ದೇ ತಡ, ಕಾರಿನ ಇಂಜಿನ್ ಮತ್ತೆ ಜನ್ಮ ಪಡೆದು, ಕಾರು ಓಣಿಯುದ್ದಕ್ಕೂ ಸಾಗಿ ಕಣ್ಮರೆಯಾಯಿತು.

ಇಲ್ಲಿಗೆ ಬರುವ ಮೊದಲು ಆಕರ್ಷಕವಾಗಿ ಕಾಣಲೆಂದೇ ಪೌಡರ್ ಮತ್ತು ಲಿಪ್ಸ್ಟಿಕ್ ಮೆತ್ತಿದ್ದು ನೆನಪಾಗಿ ಅವಮಾನವಾದಂತೆನಿ ಬೆವರಲಾರಂಭಿಸಿದಳು. ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವಂತೆ ‘ನಾನೇನೂ ಆ ಹಂದಿಗೋಸ್ಕರ ಅಲಂಕಾರ ಮಾಡಿಕೊಳ್ಳಲಿಲ್ಲ! ಇದು ನನ್ನ ಎಂದಿನ ಅಭ್ಯಾಸ, ನನ್ನೊಬ್ಬಳದ್ದೇ ಅಲ್ಲ, ಎಲ್ಲರದ್ದೂ ಇದೇ ಅಭ್ಯಾಸ. ಆದರೆ ಈ ನಡುರಾತ್ರಿಯ ಎರಡು ಘಂಟೆ, ರಾಮ್ ಲಾಲ್, ಈ ಮಾರ್ಕೆಟ್, ಆ ಕಾರು ಮತ್ತು ಆ ಟಾರ್ಚಿನ ಬೆಳಕು! ಮತ್ತೆ ಮತ್ತೆ ನೆನಪಾಗಿ ಸುತ್ತಲಿದ್ದ ಮಿಣುಕು ಬೀದಿದೀಪಗಳ ಬೆಳಕಿನಲ್ಲಿ ಮತ್ತೆ ಆ ಕಾರಿನ ಇಂಜಿನ್ನಿನ ರೊಯ್ ಸದ್ದು ಕಿವಿಯಲ್ಲಿ ಮೊರೆಯಿತು.

ಅವಳು ಬೆವರಲಾರಂಭಿಸಿದಳು ಮತ್ತು ಅವಳ ಹಣೆಗೆ ಮೆತ್ತಿದ್ದ ಮುಲಾಮು ಚರ್ಮದೊಳಗೆ ಇಳಿಯಲಾರಂಭಿಸಿತು. ಅವಳ ದೇಹವೇ ಅವಳಿಗೆ ಅಪರಿಚಿತ ಅನ್ನಿಸಿ, ಆ ಹಣೆ ತನಗೆ ಸೇರಿದ್ದಲ್ಲವೇ ಅಲ್ಲ ಎನ್ನಿಸಲಾರಂಭಿಸಿತು. ಬೆವರಿದ ಮುಖಕ್ಕೆ ತಣ್ಣನೆಯ ಗಾಳಿ ಬಂದು ರಾಚಿದ ಕೂಡಲೇ ಯಾರೋ ಸ್ಯಾಟಿನ್ ಬಟ್ಟೆಯ ತುಂಡೊಂದನ್ನು ಹಣೆಯ ಮೇಲೆ ಇರಿಸಿದಂತೆ ಅನ್ನಿಸಿತು ಸೌಗಂಧಿಗೆ. ಅವಳ ತಲೆ ಇನ್ನೂ ನೋವಿನಿಂದ ಮಿಡಿಯುತ್ತಿತ್ತು. ಆದರೆ ಅವಳ ಯೋಚನೆಗಳ ಗದ್ದಲವು ಈ ನೋವನ್ನು ಮರೆಮಾಚಿತ್ತು. ಸೌಗಂಧಿಗೆ ಆ ನೋವು ಇಡೀ ದೇಹವನ್ನೇ ಸುತ್ತುವರೆಯಲಿ ಎನ್ನಿಸಿತು – ತಲೆಯಲ್ಲಿ ನೋವು, ಕಾಲಿನಲ್ಲಿ ನೋವು, ಹೊಟ್ಟೆಯಲ್ಲಿ ನೋವು, ಕೈಗಳಲ್ಲಿ ನೋವು ಹರಡಿ ಯೋಚಿಸಲೂ ಅಸಾಧ್ಯವಾದ ಸ್ಥಿತಿ ತಲುಪಬೇಕು ಅನ್ನಿಸಿತು ಅವಳಿಗೆ. ಎದೆಯೊಳಗೆ ಏನೋ ವಿಚಿತ್ರವಾದ ತಳಮಳ ಆದಂತೆ ಅನ್ನಿಸಿತು. ಅದು ನೋವೇ ಇರಬಹುದೇ? ಹೃದಯ ಒಂದು ಸಲ ಕಿವುಚಿದಂತಾಗಿ ಮತ್ತೆ ಯಥಾಸ್ಥಿತಿ ತಲುಪಿತು. ಏನದು? ಥು! ಏನದು? ಆ ‘ಯಕ್’ ಅವಳ ಹೃದಯವನ್ನೇ ಅಲ್ಲಾಡಿಸಿಬಿಟ್ಟಿತ್ತು.

ಸೌಗಂಧಿ ಮನೆಯ ಕಡೆ ಹೆಜ್ಜೆ ಹಾಕಿದಳು. ಇದ್ದಕ್ಕಿದ್ದಂತೆ ಏನೋ ನೆನಪಾಗಿ ಅಲ್ಲೇ ನಿಂತಳು. ‘ರಾಮ್ ಲಾಲ್ ಏನು ಹೇಳಿದ್ದ? ನಾನು ಕುರೂಪಿ ಎಂದಲ್ಲವೇ? ಆದರೆ, ಉಹುಂ, ಇಲ್ಲ ರಾಮ್ ಲಾಲ್ ಹಾಗೆ ಹೇಳಿರಲಿಲ್ಲ. ಅವನು ‘ಬಹುಶಃ ಅವನಿಗೆ ನೀನು ಇಷ್ಟವಾಗಿರಲಿಕ್ಕಿಲ್ಲ’ ಎಂದಿದ್ದನಷ್ಟೇ. ಅಂದರೆ…. ಬಹುಶಃ ಅವನಿಗೆ ನನ್ನ…. ಅವನಿಗೆ ನನ್ನ…. ರೂಪ ಇಷ್ಟವಾಗಿರದೇ ಹೋಗಿರಬಹುದಾ? ಅವನಿಗೆ ನಾನು ಕುರೂಪಿ ಎನ್ನಿಸಿರಲಿಕ್ಕೂ ಸಾಕು, ಅದರಲ್ಲೇನು? ಎಷ್ಟೋ ಗಂಡಸರೂ ಕುರೂಪಿಗಳಾಗಿರುವುದಿಲ್ಲವೇ? ಹಿಂದಿನ ಹುಣ್ಣಿಮೆಯ ದಿನ ಬಂದಿದ್ದ ಅವನು ನಿಜಕ್ಕೂ ಕೆಟ್ಟದಾಗಿದ್ದ. ಆದರೆ ನಾನು ಅವನನ್ನು ಕಂಡು ಅಸಹ್ಯದಿಂದ ಮೂಗು ಮುರಿದಿರಲಿಲ್ಲ! ನನ್ನ ಮೇಲೇರಿದಾಗ ಮನಸ್ಸು ಪ್ರತಿಭಟಿಸಿತ್ತಲ್ಲವೇ? ನುಗ್ಗುತ್ತಿದ್ದ ವಾಕರಿಕೆಯನ್ನು ಬಲವಂತವಾಗಿ ಅದುಮಿಟ್ಟಿರಲಿಲ್ಲವೇ? ಆದರೆ ಸೌಗಂಧಿ, ನೀನು ಅವನನ್ನು ಕಂಡು ಒದ್ದಿರಲಿಲ್ಲ, ಕಿರುಚಿಕೊಂಡಿರಲಿಲ್ಲ. ಅವನು ಬೇಡವೆಂದು ವಾಪಸ್ ಕಳಿಸಿರಲಿಲ್ಲ. ಈ ಕಾರಿನಲ್ಲಿದ್ದ ಶ್ರೀಮಂತನ ಹಾಗೆ ಮುಖದೆದುರಿಗೇ ಉಗಿದಿರಲಿಲ್ಲ. ‘ಯಕ್!!’ ಏನಿರಬಹುದು ಆ ಯಕ್ ನ ಅರ್ಥ!

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

1) ಅಬ್ಬ ಎಂಥ ಕೆಟ್ಟ ಹಾಸ್ಯ! ಇವಳನ್ನು ಹುಟ್ಟಿಸಿದ ಅಮ್ಮನೂ ಇವಳನ್ನು ಅರೆಘಳಿಗೆ ನಿಂತು ನೋಡಿರಲಾರಳು.

2) ಈ ನಾಯಿ ನನ್ನ ಬೂಟು ತಿಕ್ಕಲು ಲಾಯಕ್ಕಷ್ಟೇ.

3) ರಾಮ್ ಲಾಲ್, ಈ ವಿಚಿತ್ರಪ್ರಾಣಿಯನ್ನು ಅದೆಲ್ಲಿಂದ ಹುಡುಕಿ ತಂದೆ?

4) ರಾಮ್ ಲಾಲ್, ಇವಳನ್ನೇನಾ ನೀನು ಎರ್ರಾ ಬಿರ್ರಿ ಹೊಗಳಿದ್ದು? ಇದಕ್ಕೆ ಹತ್ತು ರೂಪಾಯಿ ಕೊಡಬೇಕಾ?! ಇವಳ ಬದಲು ಯಾವುದೋ ಹಸುವಿನ ಮೇಲೆ ಹತ್ತುವುದು ವಾಸಿ.

ಸೌಗಂಧಿ ತಲೆಯಿಂದ ಕಾಲ್ಬೆರಳಿನವರೆಗೂ ಕುದಿಯುತ್ತಿದ್ದಳು. ತನ್ನ ಮೇಲೆ ತಾನು ಸಿಟ್ಟು ಮಾಡಿಕೊಳ್ಳುತ್ತಿದ್ದಳು, ರಾಮ್ ಲಾಲನ ಮೇಲೆ ಕ್ರೋಧಗೊಳ್ಳುತ್ತಿದ್ದಳು. ಕೊನೆಗೆ ಅದೆಲ್ಲವನ್ನೂ ಬದಿಗೆ ಸರಿಸಿ, ಆ ಮನುಷ್ಯನ ಬಗ್ಗೆ ಯೋಚಿಸಲಾರಂಭಿಸಿದಳು. ದೇಹದ ಕಣಕಣವೂ ಅವನನ್ನು ಒಂದು ಸಲ…. ಒಂದೇ ಒಂದು ಸಲ ಕಾಣಲು ಬಯಸುತ್ತಿತ್ತು. ನಡೆದ ಎಲ್ಲ ಘಟನೆಗಳನ್ನೂ ಒಮ್ಮೆ ಪುನರಾವರ್ತನೆಯಾಗಲೆಂದು ಬಯಸಿದಳು…. ಒಂದೇ ಒಂದು ಬಾರಿ! ಆಗ ಆ ಘಟನೆ ಹೀಗಿರುತ್ತದೆ – ಅವಳು ಕಾರಿನೆಡೆಗೆ ನಿಧಾನವಾಗಿ ನಡೆಯುತ್ತಾಳೆ. ಟಾರ್ಚ್ ಅನ್ನು ಬೆಳಗಿಸುತ್ತಾ ಕೈಯೊಂದು ಕಾರಿನಿಂದ ಹೊರಗೆ ಚಾಚುತ್ತದೆ ಮತ್ತು ಅವಳ ಮುಖದ ಮೇಲೆ ಆ ಬೆಳಕು ಬೀಳುತ್ತದೆ. ಆ ಕೂಡಲೇ ಅವಳ ಕಿವಿಗೆ ‘ಯಕ್’ ಅನ್ನುವ ಶಬ್ಧ ಬೀಳುತ್ತದೆ. ಆದರೆ ಈ ಬಾರಿ ಅವಳು ಕಾಡು ಬೆಕ್ಕಿನಂತೆ ಅವನ ಮೇಲೆರಗಿ ಮುಖವನ್ನು ಪರಚುತ್ತಾಳೆ. ಅವಳ ಉದ್ದುದ್ದ ಉಗುರುಗಳಿಂದ ಅವನ ಕೆನ್ನೆ ಬಗೆಯುತ್ತಾಳೆ. ಕೂದಲು ಹಿಡಿದು ಅವನನ್ನು ಕಾರಿನಿಂದ ಹೊರಕ್ಕೆಳೆದು ಕರುಣೆಯ ಸುಳಿವೂ ಇಲ್ಲದೇ ಅವನನ್ನು ಸಿಕ್ಕಸಿಕ್ಕಲ್ಲಿ ಗುದ್ದಿಡುತ್ತಾಳೆ. ಆ ನಂತರ ಆಯಾಸವಾಗಿ ಹೋಗಿ, ಅಲ್ಲೇ ಕುಸಿದು ಅಳುತ್ತಾಳೆ.

ಈ ಕಣ್ಣೀರಿನಲ್ಲಿ ಕೊನೆಗೊಳ್ಳುವ ಅಂತ್ಯವನ್ನು ಏಕೆ ಹಾಕಿದ್ದಳೆಂದರೆ ಈಗಾಗಲೇ ಅವಳ ಕಣ್ಣಲ್ಲಿ ಮೂರ್ನಾಲ್ಕು ಹನಿಗಳು ಮೂಡಿವೆ – ಅಷ್ಟು ಸಿಟ್ಟು ಮತ್ತು ಅಷ್ಟು ಅಸಹಾಯಕತೆ ಒಟ್ಟೊಟ್ಟಿಗೇ ಆವರಿಸಿದಂತೆನಿಸಿತು. ತನ್ನನ್ನೇ ತಾನು ಪ್ರಶ್ನಿಸಿಕೊಂಡಳು ‘ಯಾಕೆ ಅಳುತ್ತಿರುವುದು? ಏನಾಗಿದೆ ನಿನಗೆ?’ ಕಣ್ಣಿನಲ್ಲಿ ನೀರು ಇನ್ನೂ ಈಜುತ್ತಲೇ ಇತ್ತು. ಅವಳು ಕಣ್ಣು ಮಿಟುಕಿಸಿದ ಕೂಡಲೇ ರೆಪ್ಪೆಯೆಲ್ಲ ಒದ್ದೆಯಾಯಿತು ಮತ್ತು ತೇವವಾದ ಕಣ್ಣುಗಳಿಂದ ಸೌಗಂಧಿ ಆ ಕಾರು ಹೋದ ದಿಕ್ಕನ್ನೇ ನೋಡಿದಳು.

ಇದ್ದಕ್ಕಿದ್ದಂತೆ ಅಲ್ಲೊಂದು ಸದ್ದು – ಪರ್, ಪರ್, ಪರ್…. ಎಲ್ಲಿಂದ ಆ ಸದ್ದು ಬರುತ್ತಿದೆಯೆಂದು ನೋಡಿದವಳಿಗೆ ಯಾರೂ ಕಾಣಿಸಲಿಲ್ಲ. ಆಗ ಅವಳಿಗದು ತನ್ನ ಜೋರಾದ ಎದೆಬಡಿತ, ಆ ಕಾರಿನ ಸದ್ದಲ್ಲ ಎಂದು ಗೊತ್ತಾಯಿತು. ಏನಾಗುತ್ತಿದೆ? ಸರಾಗವಾಗಿ ಬಡಿದುಕೊಳ್ಳುತ್ತಿದ್ದ ಎದೆ ಇದ್ದಕ್ಕಿದ್ದ ಹಾಗೆ ಅಷ್ಟು ಭಾರವಾಗಿ ಯಾಕೆ ಬಡಿದುಕೊಳ್ಳಲು ಪ್ರಾರಂಭಿಸಿತು? ಗೀರು ಬಿದ್ದ ಗ್ರಾಮಫೋನ್ ರೆಕಾರ್ಡ್ ನ ಮೇಲೆ ಮುಳ್ಳು ಸಿಕ್ಕಿಕೊಂಡು ಹಾಡಿದ್ದೇ ಹಾಡು – ‘ನಾನು ನಕ್ಷತ್ರಗಳನ್ನೆಣಿಸುತ್ತಲಿರುವಾಗ ರಾತ್ರಿ ಕಳೆದೇ ಹೋಗಿತ್ತು’ ಎನ್ನುವ ಹಾಡಿನಲ್ಲಿ ಒಂದೇ ಕಡೆಗೆ ಸಿಕ್ಕಿಬಿದ್ದು ‘ನಕ್ಷತ್ರ, ನಕ್ಷತ್ರ, ನಕ್ಷತ್ರ….’ ಎಂದು ಪುನರಾವರ್ತನೆಯಾಗುವಂತೆ ಆಯಿತು.

ಆಕಾಶದ ತುಂಬ ಅಸಂಖ್ಯ ನಕ್ಷತ್ರಗಳಿದ್ದವು. ಸೌಗಂಧಿ ತಲೆಯೆತ್ತಿ ನೋಡಿ ಉದ್ಗರಿಸಿದಳು. ‘ಆಹ್! ಎಷ್ಟು ಚೆಂದ!’ ಎಂದು. ಬೇರೆಡೆಗೆ ಮನಸ್ಸು ಹೊರಳಿಸಿಕೊಂಡು ಮನಸ್ಸನ್ನು ಸಮಾಧಾನಗೊಳಿಸಲೆಂದು ನೋಡಿದರೆ, ಆ ನಕ್ಷತ್ರಗಳೇ ಅವಳಿಗೆ ಮರೆತಿದ್ದನ್ನು ನೆನಪಿಸುವಂತೆ ‘ನಕ್ಷತ್ರಗಳು ಸುಂದರ. ಆದರೆ ನೀನೇಷ್ಟು ಕುರೂಪಿ. ಆ ಮನುಷ್ಯ ನಿನ್ನನ್ನು ಅವಹೇಳನ ಮಾಡಿದ್ದು ಆಗಲೇ ಮರೆತೆಯಾ?’ ಎಂದು ಕೇಳಿದವು.

ಆದರೆ ಸೌಗಂಧಿ ಕುರೂಪಿಯಾಗಿರಲಿಲ್ಲ. ಇತ್ತೀಚೆಗೆ ಕನ್ನಡಿಯೆದುರು ನಿಂತ ಎಲ್ಲ ಸಂಧರ್ಭಗಳನ್ನೂ ಮೆಲುಕು ಹಾಕಿದಳು. ಐದು ವರ್ಷದ ಕೆಳಗೆ ತಂದೆ-ತಾಯಿಯ ಜೊತೆ ಚಿಂತೆಯಿಲ್ಲದೇ ಇದ್ದಂತೆ ಈಗ ಇಲ್ಲವಾದರೂ, ಕುರೂಪಿ ಎನ್ನುವಂತೆ ಖಂಡಿತಾ ಇರಲಿಲ್ಲ. ನಿಜಕ್ಕೂ ಹೇಳಬೇಕೆಂದರೆ, ಗಂಡಸರು ಎವೆಯಿಕ್ಕದೇ ನೋಡುವ ಹೆಂಗಸರ ಗುಂಪಿಗೆ ಅವಳನ್ನು ಸೇರಿಸಬಹುದಾಗಿತ್ತು. ಗಂಡಸರು ಜೊಲ್ಲು ಸುರಿಸುವ ಎಲ್ಲ ದೇಹ ಸೌಂದರ್ಯವೂ ಅವಳಿಗಿತ್ತು ಮತ್ತು ಅವಳು ಚಿಕ್ಕ ವಯಸ್ಸಿನವಳಾಗಿದ್ದಳು ಮತ್ತು ಒಳ್ಳೆಯ ಫಿಗರ್ ಇತ್ತು! ಕೆಲವೊಮ್ಮೆ ಸ್ನಾನ ಮಾಡುವಾಗ, ಅವಳು ಖುಷಿಯಿಂದ ತನ್ನ ದುಂಡಾದ ದೃಢಕಾಲುಗಳನ್ನೇ ನೋಡಿಕೊಳ್ಳುತ್ತಿದ್ದಳು. ಅವಳಲ್ಲಿ ವಿನಯವಿತ್ತು, ಅವಳು ಸ್ನೇಹಮಯಿಯಾಗಿದ್ದಳು. ಅವಳದ್ದು ಕಾರುಣ್ಯಭರಿತ ಹೃದಯವಾಗಿತ್ತು… ಹಾಗಾಗಿ ಅಲ್ಲಿಯವರೆಗೆ ಬಂದ ಯಾವುದೇ ಗಿರಾಕಿಯನ್ನು ಅವಳು ನಿರಾಶೆಗೊಳಿಸಿರಲಿಲ್ಲ.

ಹಿಂದಿನ ವರ್ಷ ಕ್ರಿಸ್ ಮಸ್ ಸಮಯದಲ್ಲಿ ಅವಳು ಗೋಲ್ ಪರ್ತಾದಲ್ಲಿದ್ದಾಗಿನ ದಿನಗಳನ್ನು ನೆನಪು ಮಾಡಿಕೊಂಡಳು. ಒಬ್ಬ ಸಣ್ಣ ವಯಸ್ಸಿನಾತ ಅಲ್ಲಿಯೇ ರಾತ್ರಿ ಕಳೆದು, ಮರುದಿನ ಹೊರಡುವ ಮುನ್ನ ಗೂಟಕ್ಕೆ ಸಿಕ್ಕಿಸಿದ್ದ ತನ್ನ ಕೋಟನ್ನು ತೆಗೆದುಕೊಳ್ಳಲು ಹೋದಾಗ ಅದರಲ್ಲಿದ್ದ ಪರ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಸೌಗಂಧಿಯ ಮನೆಯ ಕೆಲಸದವಳು ಅದನ್ನು ಹಾರಿಸಿದ್ದಳು. ಆ ಮನುಷ್ಯ ತುಂಬ ದುಃಖಕ್ಕೊಳಗಾಗಿದ್ದ. ಆತ ರಜೆಗೆಂದು ಹೈದರಾಬಾದಿನಿಂದ ಬಂದಿದ್ದ ಮತ್ತು ಈಗ ವಾಪಸ್ ಹೋಗಲು ಅವನ ಬಳಿ ಹಣವೇ ಇರಲಿಲ್ಲ. ಸೌಗಂಧಿಗೂ ತುಂಬ ಪಾಪ ಅನ್ನಿಸಿ ಅವನು ಕೊಟ್ಟ ಹತ್ತು ರೂಪಾಯಿಯನ್ನು ಹಿಂತಿರುಗಿಸಿಬಿಟ್ಟಿದ್ದಳು.

‘ನಾನು ಎಂದು, ಏನು ತಪ್ಪು ಮಾಡಿರುವೆ?’ ಸುತ್ತಲಿದ್ದ ಕತ್ತಲಾದ ಬೀದಿದೀಪಗಳನ್ನು, ಕಬ್ಬಿಣದ ವಿದ್ಯುತ್ ಕಂಬಗಳನ್ನು, ಫುಟ್ ಪಾತಿಗೆ ಹಾಕಿದ್ದ ಚೌಕಾಕಾರದ ಟೈಲ್ಸ್, ಜಲ್ಲಿಯ ರಸ್ತೆ ಎಲ್ಲವನ್ನೂ ಕೇಳಿದಳು. ಭೂಮಿಯ ಮೇಲಿರುವುದನ್ನೆಲ್ಲ ಕೇಳಿದ ನಂತರ ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನೆಲ್ಲ ಕೇಳಿದಳು, ಆದರೆ ಅಲ್ಲಿಂದಲೂ ಯಾವ ಉತ್ತರವೂ ಬರಲಿಲ್ಲ.

ಗೀರು ಬಿದ್ದ ಗ್ರಾಮಫೋನ್ ರೆಕಾರ್ಡ್ ನ ಮೇಲೆ ಮುಳ್ಳು ಸಿಕ್ಕಿಕೊಂಡು ಹಾಡಿದ್ದೇ ಹಾಡು – ‘ನಾನು ನಕ್ಷತ್ರಗಳನ್ನೆಣಿಸುತ್ತಲಿರುವಾಗ ರಾತ್ರಿ ಕಳೆದೇ ಹೋಗಿತ್ತು’ ಎನ್ನುವ ಹಾಡಿನಲ್ಲಿ ಒಂದೇ ಕಡೆಗೆ ಸಿಕ್ಕಿಬಿದ್ದು ‘ನಕ್ಷತ್ರ, ನಕ್ಷತ್ರ, ನಕ್ಷತ್ರ….’ ಎಂದು ಪುನರಾವರ್ತನೆಯಾಗುವಂತೆ ಆಯಿತು.

ಆ ಪ್ರಶ್ನೆಗೆ ಉತ್ತರ ಅವಳಿಗೇ ಗೊತ್ತಿತ್ತು. ಅವಳು ಕೆಟ್ಟದಾಗಿರುವುದಿರಲಿ, ನಿಜಕ್ಕೂ ಚೆಂದಕ್ಕೇ ಇದ್ದಳು. ಆದರೂ ಯಾರಾದರೂ ಅವಳನ್ನು ಹೊಗಳಲಿ ಅನ್ನಿಸಿತು, ಯಾವನಾದರೊಬ್ಬ ಅವಳ ಭುಜದ ಮೇಲೆ ಕೈಯಿರಿಸಿ ‘ಸೌಗಂಧಿ, ನೀನು ಚೆಂದವಿಲ್ಲವೆಂದು ಯಾರು ಹೇಳಿದರು? ಹೇಳಿದವರೇ ಚೆಂದವಿಲ್ಲದವರು!… ಇಲ್ಲ, ಅದೇನೂ ಅಗತ್ಯವಿಲ್ಲ. ‘ಸೌಗಂಧಿ ನೀನು ನಿಜಕ್ಕೂ ಚೆಂದವಿದ್ದೀಯ’ ಎಂದರೆ ಸಾಕು.

ಯಾರಾದರೊಬ್ಬರು ತನ್ನನ್ನು ಹೊಗಳಲಿ ಎಂದು ಈ ಹಿಂದೆ ಎಂದೂ ಬಯಸದವಳು, ಇಂದೇಕೆ ಬಯಸುತ್ತಿದ್ದೇನೆ ಅನ್ನಿಸಿತು ಅವಳಿಗೆ. ನಿರ್ಜೀವ ವಸ್ತುಗಳೆಲ್ಲ ತನ್ನ ಬೆಲೆ ಸಾಬೀತು ಪಡಿಸಲೆಂದು ಯಾಕೆ ಬಯಸುತ್ತಿದ್ದೇನೆ? ಜಗತ್ತನ್ನೆಲ್ಲ ತೊಡೆಯ ಮೇಲೆ ಮಲಗಿಸಬೇಕೆಂದು ಯಾಕೆ ಅನ್ನಿಸುತ್ತಿದೆ? ಯಾರಿಗಾದರೂ ಸಾಂತ್ವನ ನೀಡಬೇಕೆಂಬ ಉತ್ಕಟ ಆಸೆ ದೇಹದಲ್ಲೆಲ್ಲ ಹುಟ್ಟುತ್ತಿದೆ? ಬೀದಿದೀಪದ ಕೊರೆಯುವ ಕಬ್ಬಿಣದ ಕಂಬವನ್ನು ತಬ್ಬಿ ಕೆಂಡದಂತೆ ಸುಡುತ್ತಿರುವ ಕೆನ್ನೆಗಳನ್ನು ಒತ್ತಬೇಕು ಎಂದು ಅವಳಿಗೇಕೆ ಅನ್ನಿಸುತ್ತಿದೆ?

ಇದ್ದಕ್ಕಿದ್ದಂತೆ ಸುತ್ತಲಿನ ಎಲ್ಲವೂ ಅವಳನ್ನು ಕರುಣೆಯಿಂದ ನೋಡುತ್ತಿರುವಂತೆ ಅನ್ನಿಸಿಬಿಟ್ಟಿತು – ಬೀದಿ ದೀಪಗಳು, ಲೈಟು ಕಂಭಗಳು, ಫುಟ್ ಪಾತಿಗೆ ಹೊದೆಸಿದ್ದ ಕಲ್ಲುಗಳು, ಎಲ್ಲವೂ! ತಲೆಯ ಮೇಲೆ ಹರಡಿದ್ದ ನಕ್ಷತ್ರಗಳಿಂದ ತುಂಬಿದ, ದೀಪದ ಬೆಳಕಿನಲ್ಲಿ ಹಾಲಿನಂತೆ ಬೆಳಗುತ್ತಿದ್ದ ಆಕಾಶ ಕೂಡಾ ಅವಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆನಿಸಿತು ಮತ್ತು ಅದಕ್ಕೆ ಪ್ರತಿಯಾಗಿ ನಕ್ಷತ್ರಗಳ ಮಿನುಗು ಕೂಡಾ ತನಗೆ ಅರ್ಥವಾಗುತ್ತಿದೆ ಅನ್ನಿಸಿತು ಸೌಗಂಧಿಗೆ. ಆದರೆ ಒಳಗಿದ್ದ ಆ ಗೊಂದಲವೇನು? ಯಾಕೆ ಅಷ್ಟು ತಳಮಳಗೊಂಡಿದ್ದಾಳೆ? ಒಳಗಿನ ಕುದಿತದಿಂದ ಬಿಡುಗಡೆ ಹೊಂದಬೇಕು ಎಂದು ಮನಸ್ಸು ಬಯಸುತ್ತಿದೆ, ಆದರೆ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ.

ಸೌಗಂಧಿ ಓಣಿಯ ಮೂಲೆಯಲ್ಲಿದ್ದ ಕೆಂಪು ಪೋಸ್ಟ್ ಬಾಕ್ಸಿನ ಪಕ್ಕ ನಿಂತಿದ್ದಳು. ಕುಳಿರ್ಗಾಳಿ ಬೀಸಿದಾಗ ಅದರ ಬಾಯಿಯಲ್ಲಿದ್ದ ಕಬ್ಬಿಣದ ನಾಲಿಗೆಯಂತೆ ಹೊರಚಾಚಿದ ವಸ್ತು ದಡಬಡ ಸದ್ದು ಮಾಡಿತು. ಮತ್ತೆ ಆ ಕಾರು ಹೋದ ದಿಕ್ಕಿನತ್ತ ನೋಡಿದಳು ಸೌಗಂಧಿ. ಅಲ್ಲಿ ಏನೂ ಕಾಣಿಸಲಿಲ್ಲ. ಒಂದೇ ಒಂದು ಸಾರಿ ಆ ಕಾರು ಹಿಂದಿರುಗಿ ಬಂದು… ಬಂದು… ಆದರೆ ಅಷ್ಟರಲ್ಲೇ ಮತ್ತೆ ಹೇಳಿಕೊಂಡಳು ‘ಅದು ಬಾರದಿದ್ದರೆ ನನಗೆ ಯಾವ ತೊಂದರೆಯೂ ಇಲ್ಲ. ನಿಜಕ್ಕೂ ಹೇಳಬೇಕೆಂದರೆ ಅದು ಬಾರದಿದ್ದರೇನೇ ಒಳ್ಳೆಯದು. ನಾನ್ಯಾಕೆ ಅದರ ವಿಷಯವಾಗಿ ಈ ರೀತಿ ಚಿಂತೆಗೆ ಬಿದ್ದಿದ್ದೇನೆ? ನಾನು ಮನೆಗೆ ಹೋಗಿ, ಮಗುವಿನಂತೆ ನಿದ್ರಿಸುತ್ತೇನೆ. ಎಲ್ಲವೂ ಪುನರಾವರ್ತಿಸುವುದರಿಂದ ಏನು ಪ್ರಯೋಜನ? ಕಾರಣವೇ ಇಲ್ಲದೇ ನಾನೇಕೆ ಇಷ್ಟು ಚಿಂತಿಸುತ್ತಿದ್ದೇನೆ? ನಡೆ ಸೌಗಂಧಿ, ಮನೆಗೆ ಹೋಗುವಾ. ಒಂದು ಲೋಟ ತಣ್ಣೀರು ಕುಡಿದು, ಮುಲಾಮು ತಿಕ್ಕಿ, ಹಾಸಿಗೆಗೆ ಬೀಳು. ಒಳ್ಳೆಯ ನಿದ್ರೆ ಬಂದರೆ, ನಾಳೆಗೆ ನೀನು ಸರಿ ಹೋಗಿರುತ್ತೀಯೆ. ಸುಡುಗಾಡಿಗೆ ಹೋಗಲಿ ಅವನು ಮತ್ತು ಆ ಕಾರು!

ಈ ಯೋಚನೆಗಳು ಸೌಗಂಧಿಗೆ ತುಸು ನೆಮ್ಮದಿ ಕೊಟ್ಟವು. ತಣ್ಣೀರಿನ ಕೊಳದಲ್ಲಿ ಆಗತಾನೇ ಮಿಂದು ಎದ್ದು ಬಂದಂತೆ ಅನ್ನಿಸುತ್ತಿತ್ತು ಅವಳಿಗೆ. ಪ್ರಾರ್ಥನೆಯ ಬಳಿಕ ಹಗುರಾಗುವ ದೇಹದಂತೆ ಈಗಲೂ ಅನ್ನಿಸಿತ್ತು. ಮನೆಯತ್ತ ಹೆಜ್ಜೆ ಹಾಕುವಾಗ ಅವಳ ಉತ್ಸಾಹ ಸ್ವಲ್ಪ ಹೆಚ್ಚಿ, ಹೆಜ್ಜೆಗಳು ಹಗುರವೆನ್ನಿಸಿದವು.

ಅವಳ ಫ್ಲಾಟನ್ನು ತಲುಪುವುದರ ಒಳಗೆ ಮತ್ತೆ ಆ ಮನುಷ್ಯನ ನೆನಪು ಮರುಕಳಿಸಿದಂತಾಗಿ, ದೇಹದ ತುಂಬ ನೋವಿನ ಮಿಡಿತ ಹೆಚ್ಚಿತು. ಅವಳ ಹೆಜ್ಜೆಗಳು ಮತ್ತೆ ಭಾರವಾದವು, ಮತ್ತೆ ಆ ನೆನಪು ಮೊದಲಿನಿಂದ ಹೆಜ್ಜೆಹೆಜ್ಜೆಗೂ ಮರುಕಳಿಸಲು ಆರಂಭಿಸಿತು – ಮತ್ತೆ ರೂಮನ್ನು ಬಿಟ್ಟು ಮಾರ್ಕೆಟ್ಟಿನ ಓಣಿಗೆ ಕಾಲಿಟ್ಟಂತೆ, ಮುಖಕ್ಕೆ ಪ್ರಖರ ಬೆಳಕೊಂದು ಬಿಟ್ಟಂತೆ, ಮತ್ತೆ ಆ ಅವಮಾನವಾದಂತೆ. ಕುರಿ ಅಥವಾ ಮೇಕೆಯ ಚರ್ಮದಡಿ ಮಾಂಸವಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಬೆರಳಿನಿಂದ ರೋಮಭರಿತ ದೇಹವನ್ನು ಒತ್ತುವಂತೆ ಯಾರೋ ಅವಳ ಎದೆಗೂಡನ್ನು ಬೆರಳಿನಿಂದ ಗಟ್ಟಿಯಾಗಿ ಒತ್ತುತ್ತಿರುವಂತೆನಿಸಿತ್ತು ಅವಳಿಗೆ. ಆ ಶ್ರೀಮಂತ ಸೂಳೆಮಗ…! ಅವನಿಗೆ ಬಾಯಿಗೆ ಬಂದಂತೆ ಶಪಿಸಬೇಕೆನ್ನಿಸಿತು ಸೌಗಂಧಿಗೆ. ಆದರೆ ಅದರಿಂದೇನು ಸಿಗುತ್ತದೆ? ಅವಳೆಂದುಕೊಂಡಳು… ‘ಅವನ ಇಡೀ ದೇಹದ ಅಂಗುಲಂಗುಲವನ್ನೂ ತಿರಸ್ಕಾರದ ಮಾತುಗಳಿಂದ ತುಂಬಿಸಿದರೆ ಅದು ನಿಜವಾದ ಸುಖ ಮತ್ತು ನೆಮ್ಮದಿ. ಅವನು ಇಡೀ ಜನ್ಮ ನರಳುವಂತೆ ಏನಾದರೂ ಹೇಳಿದರೆ ಅದು ನಿಜವಾದ ಖುಷಿ. ಅಥವಾ ಅವನೆದುರು ತೊಟ್ಟ ಬಟ್ಟೆಯನ್ನು ಹರಿದು ಚಿಂದಿ ಮಾಡಿ ಕೇಳಬೇಕು ‘ನೀನು ಬಂದಿದ್ದು ಇದಕ್ಕಾಗೇ ತಾನೇ? ಇಗೋ ಬಿಟ್ಟಿಯಾಗಿ ಇದನ್ನು ತೆಗೆದುಕೋ – ಬಿಟ್ಟಿಯಾಗಿ! ಆದರೆ ನನ್ನೊಳಗಿರುವುದನ್ನು ಕೊಳ್ಳಲು ನಿನ್ನ ಅಪ್ಪನಿಂದಲೂ ಸಾಧ್ಯವಿಲ್ಲ!’

ಸೌಗಂಧಿ ಸೇಡು ತೀರಿಸಿಕೊಳ್ಳುವ ವಿವಿಧ ಮಾರ್ಗಗಳನ್ನು ಯೋಚಿಸುತ್ತಿದ್ದಳು. ಮತ್ತೆ ಒಂದೇ ಒಂದು ಸಲ ಅವನು ಸಿಕ್ಕಿಬಿಟ್ಟರೆ ಹೀಗೆ ಮಾಡುತ್ತೇನೆ… ಅಲ್ಲಲ್ಲ, ಹೀಗಲ್ಲ… ಹೇಗೆಂದರೆ…. ಇಷ್ಟು ಅಂದುಕೊಳ್ಳುವುದರಲ್ಲಿ ಅವನು ಮತ್ತೆಂದೂ ಸಿಗುವುದಿಲ್ಲ ಎನ್ನುವ ಸತ್ಯ ಸೌಗಂಧಿಗೆ ಅರಿವಾಗಿ, ಮತ್ತೆ ಉಸಿರು ಎಳೆದುಕೊಳ್ಳಲೂ ಸಮಯವಿಲ್ಲದಂತೆ ಅವನನ್ನು ಶಪಿಸಲು ಶುರು ಮಾಡುತ್ತಿದ್ದಳು. ತುಂಬ ಕೆಟ್ಟ ಪದದಿಂದೇನೂ ಅವನನ್ನು ಬಯ್ಯುವುದು ಅವಳಿಗೆ ಬೇಕಿರಲಿಲ್ಲ. ಮೂಗಿನ ಮೇಲೆ ನೊಣವೊಂದು ಅಂಟಿಕೊಂಡು ಶಾಶ್ವತವಾಗಿ ಕೂರುವಂಥ ಬಯ್ಗುಳವೊಂದನ್ನು ಅವನ ಕಡೆಗೆ ಉಗಿಯಬೇಕು ಅನ್ನಿಸುತ್ತಿತ್ತು.

ಈ ರೀತಿಯ ಸ್ಥಿತಿಯಲ್ಲಿ, ಅವಳು ಎರಡನೆಯ ಮಹಡಿಯ ತನ್ನ ರೂಮನ್ನು ತಲುಪಿದ್ದಳು. ಬ್ರಾ ಒಳಗಿನಿಂದ ಕೀಲಿಯನ್ನು ತೆಗೆದು, ಬೀಗ ತೆಗೆಯಲು ನೋಡಿದರೆ ಅಲ್ಲಿದ್ದ ಬೀಗ ಕಾಣೆಯಾಗಿತ್ತು! ಸೌಗಂಧಿ ಬಾಗಿಲನ್ನು ತಳ್ಳಿದಾಗ ಒಂದು ಸಣ್ಣ ಕ್ರೀಂಚ್ ದನಿ ಹೊರಟಿತು. ಅಷ್ಟರಲ್ಲಿ ಯಾರೋ ಒಳಗಿನಿಂದ ಚೈನ್ ತೆರೆದರು ಮತ್ತು ಬಾಗಿಲು ತೆರೆದುಕೊಂಡಿತು. ಸೌಗಂಧಿ ಒಳಗೆ ಹೆಜ್ಜೆಯಿಟ್ಟಳು.

ಮಾಧೋ ಕಿಸಕಿಸ ನಗುತ್ತಾ ಬಾಗಿಲು ಮುಚ್ಚಿ ಸೌಗಂಧಿಗೆ ಹೇಳಿದ ‘ಅಂತೂ ಇವತ್ತು ನಾನು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡೆ ನೋಡು! ಬೆಳಗ್ಗಿನ ವಾಕಿಂಗ್ ಆರೋಗ್ಯಕ್ಕೆ ತುಂಬ ಒಳ್ಳೆಯದು! ಈ ರೀತಿ ದಿನವೂ ಎದ್ದು ನಸುಕಿನಲ್ಲೇ ವಾಕಿಂಗ್ ಮಾಡಿದರೆ ನಿನ್ನ ಜಡತ್ವವೆಲ್ಲ ಓಡಿಹೋಗುತ್ತದೆ, ಮತ್ತು ನಿನ್ನ ಸೊಂಟನೋವು ಸಹಾ. ಎಷ್ಟು ದಿನದಿಂದ ಆ ನೋವನ್ನು ಅನುಭವಿಸುತ್ತಲೇ ಬಂದಿದ್ದೀಯ. ವಿಕ್ಟೋರಿಯಾ ಗಾರ್ಡನ್ ವರೆಗೂ ನಡೆದು ವಾಪಸ್ಸಾಗಿರಬೇಕು, ಅಲ್ಲವೇ?’

ಸೌಗಂಧಿ ಉತ್ತರಿಸಲಿಲ್ಲ, ಮತ್ತು ಮಾಧೋ ಕೂಡಾ ಉತ್ತರಕ್ಕಾಗಿ ಬಲವಂತ ಪಡಿಸಲೂ ಇಲ್ಲ. ನಿಜಕ್ಕು ಹೇಳಬೇಕೆಂದರೆ, ಅವಳು ತನ್ನ ಪ್ರಶ್ನೆಗಳಿಗೆ ಉತ್ತರಿಸಲೇಬೇಕೆಂದು ಅವನು ಎಂದೂ ನಿರೀಕ್ಷಿಸುತ್ತಲೂ ಇರಲಿಲ್ಲ. ನಿಜಕ್ಕು ಹೇಳಬೇಕೆಂದರೆ, ಅವಳು ತನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕೆಂದು ಅವನು ಎಂದೂ ನಿರೀಕ್ಷಿಸುತ್ತಲೂ ಇರಲಿಲ್ಲ, ಏನಾದರೂ ಮಾತಾಡಬೇಕಲ್ಲ ಎಂದು ಮಾತಾಡುತ್ತಿದ್ದನಷ್ಟೇ.

ಮಾಧೋ ಮಣಕುಗಟ್ಟಿದ ಬೆತ್ತದ ಕುರ್ಚಿಯ ಮೇಲೆ ಕುಳಿತು , ಕಾಲಮೇಲೆ ಕಾಲು ಹಾಕಿ, ಮೀಸೆ ಹುರಿಮಾಡಿಕೊಂಡ.

ಸೌಗಂಧಿ ಹಾಸಿಗೆಯ ಮೇಲೆ ಕುಳಿತು ‘ನಾನು ನಿನ್ನನ್ನೇ ನಿರೀಕ್ಷಿಸುತ್ತಿದ್ದೆ’ ಎಂದಳು.

ಮಾಧೋ ಆಶ್ಚರ್ಯ ಚಕಿತನಾದ! ‘ನನ್ನನ್ನು ನಿರೀಕ್ಷಿಸುತ್ತಿದ್ದೆಯಾ? ನಿನಗೆ ಹೇಗೆ ಗೊತ್ತಿತ್ತು ನಾನು ಬರುತ್ತೇನೆನ್ನುವುದು?’. ಸೌಗಂಧಿ ತೆಳುವಾದ ನಗೆ ಬೀರುತ್ತಾ ‘ನೀನು ಕನಸಲ್ಲಿ ಬಂದಿದ್ದೆ. ಆಗ ಎಚ್ಚರವಾಗಿಬಿಟ್ಟಿತು. ಎದ್ದು ನೋಡಿದರೆ ಯಾರೂ ಇರಲಿಲ್ಲ. ಹೇಗೂ ಎದ್ದಿದ್ದೇನಲ್ಲ ಎಂದು ವಾಕಿಂಗ್ ಹೊರಟುಬಿಟ್ಟೆ’

ಮಾಧೋಗೆ ಇದು ಖುಷಿ ಕೊಟ್ಟಿತು. ‘ಮತ್ತು ನಾನು ಬಂದೇಬಿಟ್ಟೆ! ಪ್ರೀತಿಸುವವರ ಹೃದಯಗಳು ಒಂದರೊಡನೊಂದು ಕೂಡಿಕೊಂಡಿರುತ್ತವೆ ಅನ್ನುವುದು ಎಷ್ಟು ಸತ್ಯ! ಕನಸು ಬಿದ್ದಿದ್ದು ಯಾವಾಗ?’

‘ಸುಮಾರು ನಾಲ್ಕು ಘಂಟೆಯ ಸಮಯದಲ್ಲಿ’

ಮಾಧೋ ಕುರ್ಚಿಯಿಂದೆದ್ದು ಸೌಗಂಧಿಯ ಪಕ್ಕ ಕುಳಿತು ಹೇಳಿದ ‘ನನಗೆ ನೀನು ಸರಿಯಾಗಿ ಎರಡು ಘಂಟೆಗೆ ಬಿದ್ದ ಕನಸಲ್ಲಿ ಬಂದಿದ್ದೆ. ನೀನು ಇದೇ ಸೀರೆಯುಟ್ಟು ನನ್ನ ಪಕ್ಕ ನಿಂತಿದ್ದೆ. ಏನನ್ನು ಹಿಡಿದಿದ್ದೆ – ಏನದು … ಓಹ್! ನೆನಪಾಯಿತು, ನೀನು ಹಣದ ಚೀಲವೊಂದನ್ನು ಕೈಯಲ್ಲಿ ಹಿಡಿದು ನಿಂತಿದ್ದೆ. ನೀನು ಆ ಚೀಲವನ್ನು ನನ್ನ ಕೈಗಿಡುತ್ತಾ ‘‘ಮಾಧೋ ಅದೇನು ದೊಡ್ಡ ಚಿಂತೆ ನಿನ್ನದು? ತೆಗೆದುಕೋ ಈ ಚೀಲವನ್ನು. ನನ್ನ ಹಣ ನಿನ್ನದೂ ಅಲ್ಲವೇ?” ಎಂದೆ. ಸೌಗಂಧಿ, ಆಣೆ ಮಾಡಿ ಹೇಳುತ್ತೇನೆ, ಆ ಕೂಡಲೇ ಎದ್ದೆ, ಟಿಕೀಟು ಮಾಡಿಸಿದೆ ಮತ್ತು ಇಲ್ಲಿಗೆ ಬಂದೇಬಿಟ್ಟೆ. ಏನು ಹೇಳಲಿ? ನಾನೀಗ ತುಂಬ ತೊಂದರೆಯಲ್ಲಿದ್ದೇನೆ. ಅದ್ಯಾರು ಎಲ್ಲಿದ್ದರೋ ತಿಳಿದಿಲ್ಲ, ಇದ್ದಕ್ಕಿದ್ದಂತೆ ನನ್ನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಆ ಇನ್ಸ್‌ಪೆಕ್ಟರ್‌ಗೆ ಇಪ್ಪತ್ತು ರೂಪಾಯಿ ಕೊಟ್ಟುಬಿಟ್ಟರೆ ಅವನು ನನ್ನನ್ನು ಬಿಟ್ಟು ಬಿಡುತ್ತಾನೆ … ನಿನಗೆ ಸುಸ್ತಾಗಿಲ್ಲವೇ? ಬಾ ಮಲಗು, ನಾನು ನಿನ್ನ ಪಾದಗಳನ್ನು ಮಸಾಜ್ ಮಾಡುತ್ತೇನೆ. ವಾಕಿಂಗ್ ಮಾಡಿ ಅಭ್ಯಾಸವಿಲ್ಲದಿದ್ದರೆ, ಸುಸ್ತಾಗುವುದು ಖಂಡಿತ. ಬಾ ಇಲ್ಲಿ, ನನ್ನ ಕಡೆಗೆ ಕಾಲನ್ನಿಟ್ಟು ಮಲಗಿಕೋ’

ಸೌಗಂಧಿ ಅಲ್ಲಿಯೇ ಮಲಗಿದಳು. ಕೈಗಳನ್ನು ಮಡಚಿ ತಲೆಯಡಿ ದಿಂಬಿನಂತೆ ಇಟ್ಟುಕೊಂಡು, ಜಿಗುಪ್ಸೆ ತುಂಬಿದ ಸನಿಯಲ್ಲಿ ಹೇಳಿದಳು ‘ಮಾಧೋ, ಯಾವ ಸೂಳೆಮಗ ನಿನ್ನ ವಿರುದ್ದ ರಿಪೋರ್ಟು ಮಾಡಿದ? ನೀನು ಜೈಲಿಗೆ ಹೋಗಬಹುದೆನ್ನುವ ಸಣ್ಣ ಸಾಧ್ಯತೆಯಿದ್ದರೂ ನನಗೆ ಸತ್ಯ ಹೇಳು. ಆತನಿಗೆ ಇಪ್ಪತ್ತೋ ಮೂವತ್ತೋ ರೂಪಾಯಿ ಕೊಡು – ಉಹು, ಐವತ್ತಾಗಲಿ, ನೂರಾದರೂ ಸರಿಯೇ – ನೀನು ಆ ಬಗ್ಗೆ ಎಂದೂ ಪಶ್ಚಾತ್ತಾಪ ಪಡುವುದಿಲ್ಲ. ನೀನು ಇದರಿಂದ ಬಿಡಿಸಿಕೊಂಡರೆ, ಅದೇ ದೊಡ್ಡ ಅದೃಷ್ಟ. ಸರಿ, ಸಾಕು ಒತ್ತಿದ್ದು ನಿಲ್ಲಿಸು, ನನಗೆ ಅಷ್ಟೇನೂ ದಣಿವಾಗಿಲ್ಲ. ಅದನ್ನು ನಿಲ್ಲಿಸಿ ನನಗೆ ಎಲ್ಲವನ್ನೂ ಪೂರ್ತಿಯಾಗಿ ಹೇಳು. “ಪೋಲಿಸ್ ರಿಪೋರ್ಟ್” ಅನ್ನುವ ಮಾತು ಕೇಳಿಯೇ ನನ್ನ ಎದೆ ಹೊಡೆದುಕೊಳ್ಳುತ್ತಿದೆ. ನೀನು ಯಾವಾಗ ಹಿಂತಿರುಗುವೆ?’

ಮಾಧೋಗೆ ಸೌಗಂಧಿಯ ಉಸಿರಿನಲ್ಲಿ ಸಾರಾಯಿ ವಾಸನೆ ಬರುತ್ತಿತ್ತು. ಅವನು ಇದೇ ಸರಿಯಾದ ಸಮಯ ಎಂದು ಆಲೋಚಿಸಿ, ಆತುರದಲ್ಲಿ “ನಾನು ಮಧ್ಯಾಹ್ನದ ರೈಲಿಗೆ ವಾಪಸ್ ಹೊರಡಬೇಕು. ಸಂಜೆಯೊಳಗೆ ಆ ಸಬ್ ಇನ್ಸ್‌ಪೆಕ್ಟರ್‌ಗೆ ಸಂಜೆಯೊಳಗೆ ಐವತ್ತೋ ನೂರೋ ಕೊಡದಿದ್ದರೆ, ಆಮೇಲೆ …. ನನಗನ್ನಿಸುತ್ತದೆ ಅವನಿಗೆ ತೀರಾ ಹೆಚ್ಚೇನೂ ಕೊಡಬೇಕಿಲ್ಲ ಎಂದು. ಬಹುಶಃ ಐವತ್ತು ಸಾಕಾಗಬಹುದು”

‘ಐವತ್ತು!’ ಸೌಗಂಧಿ ಜೋರಾಗಿ ಉದ್ಗರಿಸಿದಳು.

ನಂತರ ನಿಧಾನವಾಗಿ ಎದ್ದು, ಗೋಡೆಯ ಮೇಲೆ ತೂಗುಹಾಕಿದ್ದ ನಾಲ್ಕು ಫೋಟೋಗಳ ಎದುರು ಹೋಗಿ ನಿಂತಳು. ಆ ಫೋಟೋಗಳಲ್ಲಿ ಮಾಧೋನದ್ದು ಎಡದಿಂದ ಮೂರನೆಯದಾಗಿತ್ತು ; ಅವನು ಕುರ್ಚಿಯೊಂದರ ಮೇಲೆ ಕುಳಿತಿದ್ದ, ಹಿಂದೆ ಹೂಗಳ ಡಿಜ಼ೈನ್ ಇರುವ ಪರದೆ ಇಳಿ ಬಿಟ್ಟಿತ್ತು. ತೊಡೇಯ ಮೇಲೆ ಕೈಗಳನ್ನಿಟ್ಟು ಕುಳಿತು, ಒಂದು ಕೈನಲ್ಲಿ ಗುಲಾಬಿಯೊಂದನ್ನು ಹಿಡಿದಿದ್ದ. ಅವನ ಪಕ್ಕ ಇದ್ದ ಸ್ಟೂಲ್ ಒಂದರ ಮೇಲೆ ಎರಡು ದಪ್ಪ ಪುಸ್ತಕಗಳಿದ್ದವು. ಫೋಟೋದಲ್ಲಿ ಇದ್ದುದೆಲ್ಲವೂ ಎಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು ಎಂದರೆ, ಎಲ್ಲವೂ “ನಮ್ಮ ಫೋಟೋ ತೆಗೆಸಿಕೊಳ್ಳುತ್ತಿದ್ದೇವೆ! ನಾವು ಚಿತ್ರ ತೆಗೆಸಿಕೊಳ್ಳುತ್ತಿದ್ದೇವೆ!” ಎಂದು ಸಾರಿ ಹೇಳುತ್ತಿರುವಂತೆ ಇದೆ. ಫೋಟೊದಲ್ಲಿದ್ದ ಮಾಧೋನ ಕಣ್ಣುಗಳು ಅಗಲವಾಗಿ ಅರಳಿದ್ದವು, ಮತ್ತು ಆ ಇಡೀ ಸನ್ನಿವೇಶವೇ ಅವನಿಗೆ ಮುಜುಗರ ತರಿಸುತ್ತಿರುವಂತೆ ಭಾಸವಾಗುತ್ತಿತ್ತು.

ಸೌಗಂಧಿ ಕೀರಲು ದನಿಯಲ್ಲಿ ನಕ್ಕಳು, ಆ ನಗು ಮಾಧೋನನ್ನು ಸೂಜಿಗಳಿಂದ ಚುಚ್ಚುತ್ತಿರುವಂತೆ ಅನ್ನಿಸಿತು. ಅವನು ಮಲಗ್ಗಿದ್ದಲ್ಲಿಂದ ಎದ್ದು, ಅವಳ ಬಳಿ ಹೋಗಿ, ‘ಯಾರ ಫೋಟೋ ನೋಡಿ ನಗುತ್ತಿರುವೆ?’ ಎಂದು ಕೇಳಿದ.

ಸೌಗಂಧಿ ಎಡದಿಂದ ಮೊದಲು ಇದ್ದ ನೈರ್ಮಲ್ಯ ಇಲಾಖೆಯ ಅಧಿಕಾರಿಯ ಫೋಟೋ ಕಡೆ ಬೆರಳು ಮಾಡಿ, ‘ಇವನು – ಈ ಮನುಷ್ಯನದ್ದು’ ಎಂದಳು ‘ಅವನ ಮೂತಿ ನೋಡು. ಅವನು “ಒಬ್ಬಳು ರಾಣಿ ತನ್ನೊಡನೆ ಒಮ್ಮೆ ಪ್ರೇಮದಲ್ಲಿ ಬಿದ್ದಿದ್ದಳು” ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ವ್ಯಾಕ್! ರಾಣಿಯೊಬ್ಬಳು ಪ್ರೇಮದಲ್ಲಿ ಬೀಳುವ ಮೂತಿಯೇ ಇದು?’

ಸೌಗಂಧಿ ಆ ಫೋಟೋವನ್ನು ಎಷ್ಟು ರಭಸದಿಂದ ಕಿತ್ತಳೆಂದರೆ, ತೂಗುಬಿಟ್ಟಿದ್ದ ಮೊಳೆ, ಪ್ಲ್ಯಾಸ್ಟರಿನ ಜೊತೆಯಲ್ಲಿ ಅದು ಕಿತ್ತು ಬಂದಿತು. ಮಾಧೋ ಆಘಾತಕ್ಕೆ ಒಳಗಾದ ಮತ್ತು ಅವನು ಚೇತರಿಸಿಕೊಳ್ಳುವ ಮುನ್ನವೇ, ಸೌಗಂಧಿ ಅದನ್ನು ಕಿಟಕಿಯಾಚೆ ಎಸೆದಳು. ಎರಡು ಮಹಡಿಗಳಿಂದ ನೆಲಕ್ಕೆ ಬಿದ್ದು, ಅದರ ಗಾಜು ಪುಡಿಪುಡಿಯಾದ ಸದ್ದು ಕೇಳಿಸಿತು.

‘ಕಸ ಒಯ್ಯುವ ರಾಣಿ ಕಸ ಬಾಚಲು ಬರುತ್ತಾಳಲ್ಲ, ಆಗ ಇವನನ್ನು ಜೊತೆಗೆ ಕೊಂಡೊಯ್ದು ತನ್ನದಾಗಿಸಿಕೊಳ್ಳಲಿ’ ಎಂದು ವ್ಯಂಗ್ಯದಿಂದ ಹೇಳಿದಳು. ಹಾಗೆ ಹೇಳಿದ ಸೌಗಂಧಿ, ದೊಡ್ಡ ಕಹಿ ನಗೆ ನಕ್ಕಳು. ಎರಡು ಬೆಣಚು ಕಲ್ಲುಗಳನ್ನು ಒಂದರೊಂಡನೊಂದು ತಿಕ್ಕಿದಾಗ ಉದುರುವ ಕಿಡಿಗಳಂತಿತ್ತು ಅವಳ ತುಟಿಗಳಿಂದ ಹೊರಬಿದ್ದ ಆ ನಗು.

ಮಧೋ ತಾನೂ ಬಲವಂತದ ನಗೆಯೊಂದನ್ನು ಬೀರಿದ.

ಸೌಗಂಧಿ ಎರಡನೆಯ ಫೊಟೋವನ್ನು ಗೋಡೆಯಿಂದ ರಭಸದಿಂದ ಕಿತ್ತು, ಕಿಟಕಿಯಾಚೆ ಎಸೆದಳು.

‘ಈ ಸ್ಥಳವನ್ನು ಏನಂದುಕೊಂಡಿದ್ದಾನೆ ಆ ಸೂಳೆಮಗ?’ ಕೇಳುತ್ತಾಳೆ ‘ಇವತ್ತಿನಿಂದ ಕುರೂಪಿ ಗಂಡಸರಿಗೆ ಇಲ್ಲಿಗೆ ಪ್ರವೇಶವಿಲ್ಲ – ಸರಿಯಲ್ಲವೇ ಮಾಧೋ?’

ಮಾಧೋ ಮತ್ತೆ ಬಲವಂತದ ನಗು ನಗುತ್ತಾನೆ.

ಒಂದು ಕೈಯಿಂದ ಪೇಟಾ ಸುತ್ತಿದ್ದ ಗಂಡಸಿನ ಆ ಫೋಟೋವನ್ನು ಕೀಳುತ್ತಾ, ಮತ್ತೊಂದು ಕೈಯನ್ನು ಮಾಧೋನ ಫೋಟೋದೆಡೆಗೆ ಚಾಚುತ್ತಾಳೆ. ಮಾಧೋ ಅವಳು ತನ್ನನ್ನೇ ಕೀಳಲು ತೊಡಗಿದ್ದಾಳೋ ಅನ್ನುವಂತೆ ಹಿಂದಕ್ಕೆ ಅಡಿಯಿಡುತ್ತಾನೆ. ಸೌಗಂಧಿ ಆ ಎರಡೂ ಫೋಟೋಗಳನ್ನು ಮೊಳೆ ಮತ್ತು ಪ್ಲ್ಯಾಸ್ಟರಿನ ಸಮೇತ ಕಿತ್ತುಹಾಕುತ್ತಾಳೆ.

ಸೌಗಂಧಿ ಗಟ್ಟಿಯಾಗಿ ನಗುತ್ತಾ, ಕಿರುಚುತ್ತಾಳೆ. ‘ಯಕ್‌ಕ್‌ಕ್!’

ಎರಡೂ ಫ್ರೇಮ್‌ಗಳನ್ನು ಕಿಟಕಿಯಾಚೆ ಎಸೆಯುತ್ತಾಳೆ, ಮತ್ತು ಕ್ಷಣಕಾಲದಲ್ಲೇ ಗಾಜುಗಳು ಫಳ್ಳೆಂದು ಪುಡಿಪುಡಿಯಾದ ಸದ್ದು ಕಿವಿಗೆ ಬೀಳುತ್ತದೆ. ಮಾಧೋಗೆ ತನ್ನೊಳಗೇ ಏನೋ ಪುಡಿಪುಡಿಯಾದ ಭಾವನೆ. ಬಲವಂತವಾಗಿ ನಗಲು ಪ್ರಯತ್ನಿಸುತ್ತಾನೆ.

‘ಹು, ಒಳ್ಳೆಯ ಕೆಲಸ ಮಾಡಿದೆ’ ಹೇಳುತ್ತಾನೆ ‘ನನಗೂ ಆ ಫೋಟೋ ಇಷ್ಟವಿರಲಿಲ್ಲ’

ಸೌಗಂಧಿ ನಿಧಾನವಾಗಿ ಅವನೆಡೆಗೆ ಬರುತ್ತಾಳೆ. ‘ನಿನಗೂ ಇಷ್ಟವಿರಲಿಲ್ಲವೇ ಆ ಫೋಟೋ?’ ಮತ್ತೆ ಮತ್ತೆ ಹೇಳುತ್ತಾಳೆ ‘ನಿನಗಾದರೂ ಅದು ಹೇಗೆ ಸಾಧ್ಯವಾದೀತು – ನಿನ್ನಲ್ಲಿ ಇಷ್ಟ ಪಡುವಂಥದ್ದು ಏನಾದರೂ ಇದೆಯೇ? ನೀನೋ ನಿನ್ನ ಜೋಕರ್ ಮೂಗೋ, ನೀನೋ ನಿನ್ನ ಕೂದಲಿನ ಹಣೆಯೋ, ನೀನೋ ನಿನ್ನ ಕತ್ತೆಯಂಥ ಹೊಳ್ಳೆಯೋ, ನೀನೋ ನಿನ್ನ ತಿರುಚಿದ ಕಿವಿಯೋ, ನೀನೋ ನಿನ್ನ ಬಾಯಿಯ ದುರ್ವಾಸನೆಯೋ, ನೀನೋ ನಿನ್ನ ದುರ್ಗಂಧದ ದೇಹವೋ? ನಿನಗೂ ಆ ಫೋಟೋ ಇಷ್ಟವಾಗಲಿಲ್ಲ ಅಲ್ಲವೇ? ಯಕ್‌ಕ್‌ಕ್! ಅದು ನಿನ್ನ ದೋಷಗಳನ್ನೆಲ್ಲ ಮರೆಮಾಡಿಟ್ಟುಕೊಂಡಿತ್ತು. ನಿನಗೆ ಗೊತ್ತಾ, ಈಗೀಗ ನೀನು ನಿನ್ನ ಕುಂದುಕೊರತೆಗಳ ಬಗ್ಗೆಯೂ ಹೆಮ್ಮೆ ಪಡಬೇಕು!’

ಮಾಧೋ ಮತ್ತಿಷ್ಟು ಹಿಂಜರಿಯುತ್ತಾನೆ. ಗೋಡೆಗೆ ಒತ್ತರಿಸಿಕೊಳ್ಳುತ್ತ ಕಿರುಚುತ್ತಾನೆ, ‘ನೋಡು, ಸೌಗಂಧಿ, ನೀನು ಮತ್ತೆ ನಿನ್ನ ದಂಧೆಯನ್ನು ಪ್ರಾರಂಭಿಸಿದ್ದೀಯ ಎನ್ನಿಸುತ್ತಿದೆ ನನಗೆ. ಇದು ನಾನು ನಿನಗೆ ಕಡೆಯ ಬಾರಿಗೆ ಹೇಳುತ್ತಿದ್ದೇನೆ ……’

ಸೌಗಂಧಿ ಅವನನ್ನು ನಡುವಲ್ಲೇ ತಡೆಯುತ್ತಾಳೆ. ‘ನೀನು ಮತ್ತೆ ದಂಧೆ ಶುರು ಮಾಡಿದರೆ’ ಅವನನ್ನೇ ಅಣಕಿಸುವ ದನಿಯಲ್ಲಿ. ‘ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು. ನಿನ್ನ ಜೊತೆ ಯಾವುದೇ ಗಂಡಸಾದರೂ ಮಲಗಿದ ಎಂದರೆ, ನಿನ್ನ ಕೂದಲನ್ನು ಹಿಡಿದೆಳೆಯುತ್ತೇನೆ ಮತ್ತು ಆಚೆಗಟ್ಟುತ್ತೇನೆ. ತಿಳಿಯಿತೇ? ನಾನು ಪುಣೆ ಸೇರಿದ ಕೂಡಲೆ ಈ ತಿಂಗಳ ಖರ್ಚಿನ ಹಣವನ್ನು ಕೂಡಲೇ ಮನಿ ಆರ್ಡರ್ ಮಾಡುತ್ತೇನೆ. ಈ ರೂಮಿನ ಬಾಡಿಗೆಯೆಷ್ಟು?’

ಮಾಧೋ ದಿಗ್ಭ್ರಮೆಗೊಳ್ಳುತ್ತಾನೆ.

‘ಇಲ್ಲಿ ಕೇಳು’, ತನಗೇ ಎನ್ನುವಂತೆ ಹೇಳಿಕೊಳ್ಳುತ್ತಾಳೆ, ‘ಹದಿನೈದು ರೂಪಾಯಿ. ಹದಿನೈದು ಮತ್ತು ನಾನು ಹತ್ತು ರೂಪಾಯಿ ತೆಗೆದುಕೊಳ್ಳುತ್ತೇನೆ ಒಬ್ಬನಿಂದ. ಮತ್ತು, ನಿನಗೇ ತಿಳಿದಿರುವಂತೆ, ಅದರಲ್ಲಿ ಎರಡೂವರೆ ಆ ತಲೆಹಿಡುಕನಿಗೆ ಹೋಗುತ್ತದೆ. ಉಳಿದ ಏಳೂವರೆ – ಏಳೂವರೆ ತಾನೇ? – ಅದು ನನಗೆ ಸೇರುತ್ತದೆ. ಮತ್ತು ಆ ಏಳೂವರೆ ರೂಪಾಯಿಗಳಿಗೆ, ನಾನು ನಿನಗೆ ಕೊಡಲಾಗದ್ದನ್ನೆಲ್ಲ ಕೊಡುತ್ತೇನೆಂದು ಆಣೆ ಮಾಡಿದೆ, ಮತ್ತು ನೀನು ತೆಗೆದುಕೊಳ್ಳಲಾಗದ ಎಲ್ಲದಕ್ಕಾಗಿ ಇಲ್ಲಿಗೆ ಬಂದೆ. ನಮ್ಮ ಸಂಬಂಧವೇನಿತ್ತು? ಏನೇನೂ ಇಲ್ಲ – ಆ ಹತ್ತು ರೂಪಾಯಿಗಳಷ್ಟೇ. ಅಷ್ಟಕ್ಕಾಗಿ ನಾವು “ನನಗೆ ನೀನು ಬೇಕು, ನಿನಗೆ ನಾನು ಬೇಕು” ಎಂದೆಲ್ಲ ಸುಳ್ಳು ಹೇಳಿಕೊಂಡೆವು. ಮೊದಲಿಗೆ ಅದು ಹತ್ತು ರೂಪಾಯಿ ಇತ್ತು, ಈಗ ಅದು ಐವತ್ತಕ್ಕೆ ಬಂದು ನಿಂತಿದೆ. ನಿನಗೂ ಅದರ ಮೇಲೆ ಕಣ್ಣು ಮತ್ತು ನನಗೂ ಕೂಡಾ. ಅದೇನು ನಿನ್ನ ಕೂದಲಿಗೆ ಏನು ಮಾಡಿಕೊಂಡೆ?’

ಒಂದು ಬೆರಳಿನಿಂದ ಮಾಧೋನ ಟೊಪ್ಪಿಗೆಯನ್ನು ಎಗರಿಸುತ್ತಾಳೆ. ಮಾಧೋಗೆ ಅದು ಸ್ವಲ್ಪವೂ ಇಷ್ಟವಾಗುವುದಿಲ್ಲ.

‘ಸೌಗಂಧಿ!’

ಸೌಗಂಧಿ ಮಾಧೋನ ಜೇಬಿನಿಂದ ಕರ್ಚೀಫನ್ನು ಹೊರಗೆಳೆದು, ಅದನ್ನು ಮೂಸಿ, ನೆಲಕ್ಕೆ ಬಿಸುಡುತ್ತಾಳೆ. ‘ಇದೊಂದು ಚಿಂದಿ ಬಟ್ಟೆ, ಒಂದು ಚಿಂದಿ! ಕೆಟ್ಟ ದುರ್ನಾತ ಬರುತ್ತಿದೆ, ತೆಗೆದು ಅದನ್ನು ಹೊರಗೆಸೆ’

‘ಸೌಗಂಧಿ!’

‘ಥು – ನಿಲ್ಲಿಸು ನಿನ್ನ “ಸೌಗಂಧಿ ಇದು, ಸೌಗಂಧಿ ಅದು” ಎಲ್ಲವನ್ನೂ! ನಿನಗೆ ಬೇಕಾದ ಐವತ್ತು ರೂಪಾಯಿಗಳನ್ನು ಕೊಡಲು ನಿನ್ನಮ್ಮ ಕಾದು ನಿಂತಿದ್ದಾಳೆಯೇ? ಅಥವಾ ನೀನೇನು ಸಣ್ಣ ವಯಸ್ಸಿನ, ಸುಂದರಾಂಗ ಪುರುಷ ಕುದುರೆಯೋ ನೋಡಿದೊಡನೆ ನಿನ್ನೊಡನೆ ಪ್ರೇಮಕ್ಕೆ ಬೀಳಲು? ಸೂಳೆಮಗನೇ! ನನ್ನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೀಯಾ? ನಾನೇನು ಇಲ್ಲಿ ಕಾದು ಬಿದ್ದಿರುವವಳಾ? ನೀನೊಬ್ಬ ಕಿತ್ತೋದವನು! ನಿನ್ನನ್ನು ನೀನು ಏನೆಂದು ತಿಳಿದಿರುವೆ? ನಾನು ನಿನ್ನನ್ನೇ ಕೇಳುತ್ತಿರುವುದು “ನೀನ್ಯಾವನೋ? ಕಿತ್ತುಹೋದ ಕಳ್ಳ?ಈ ಸರಿರಾತ್ರಿಯಲ್ಲಿ ನೀನು ಇಲ್ಲಿಗೇಕೆ ಬಂದಿರುವೆ? ಪೊಲೀಸರನ್ನು ಕರೆಯಲೇನು? ಪುಣೆಯಲ್ಲಿ ನಿನ್ನ ಮೇಲೊಂದು ಪೊಲೀಸ್ ರಿಪೋರ್ಟ್ ನಿಜವಾಗಿಯೂ ಇತ್ತು ಅಂತಲೇ ಇಟ್ಟುಕೊಂಡರೂ, ಅದಕ್ಕೆ ನಾನೇಕೆ ಚಿಂತಿಸಬೇಕು – ನಾನು ಇಲ್ಲಿಯೇ ನಿನ್ನ ಮೇಲೊಂದು ಕೇಸ್ ಹಾಕುತ್ತೇನೆ”

ಮಾಧೋ ಗಾಭರಿಗೊಂಡ. ‘ಸೌಗಂಧಿ, ಏನಾಗಿದೆ ನಿನಗೆ?’

‘ಹೋಗಲೋ ನಿನ್ನಮ್ಮನ್! ನೀನ್ಯಾವನು ಅದನ್ನೆಲ್ಲ ಕೇಳಲು? ಮೊದಲು ಇಲ್ಲಿಂದ ತೊಲಗು-ಇಲ್ಲವಾದರೆ!’

ಸೌಗಂಧಿಯ ಕೊಳಕು ನಾಯಿ ಅವಳ ಕಿರುಚಾಟವನ್ನು ಕೇಳಿ, ಮಂಚದಡಿಯಿಂದ ಆಕ್ರಮಣಕಾರಿಯಾಗಿ ಎದ್ದು ಬಂದು, ಮಾಧೋನೆಡೆಗೆ ತಿರುಗಿ, ಬೊಗಳಲು ಶುರು ಮಾಡುತ್ತದೆ. ಸೌಗಂಧಿ ಗಟ್ಟಿಯಾಗಿ ನಗುತ್ತಾಳೆ, ಮಾಧೋಗೆ ಗಾಭರಿಯಾಗುತ್ತದೆ. ಅವನು ತನ್ನ ಟೋಪಿಯನ್ನು ತೆಗೆದುಕೊಳ್ಳಲು ಬಾಗುತ್ತಾನೆ, ಆದರೆ ಸೌಗಂಧಿ ಕಿರುಚುತ್ತಾಳೆ, ‘ಅದನ್ನು ಮುಟ್ಟಬೇಡ – ಮೊದಲು ಇಲ್ಲಿಂದ ತೊಲಗು. ನೀನು ತಲುಪಿದ ಕೂಡಲೆ ನಿನ್ನ ಕಿತ್ತೋದ ಟೋಪಿಯನ್ನು ಪಾರ್ಸೆಲ್ ಕಳಿಸುತ್ತೇನೆ’

ಮತ್ತಿಷ್ಟು ಗಟ್ಟಿಯಾಗಿ ನಗುತ್ತಾಳೆ. ಬೆತ್ತದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ ಮತ್ತು ಅವಳ ನಾಯಿಯು ಮಾಧೋನನ್ನು ರೂಮಿನಿಂದಾಚೆಗೆ ತಳ್ಳಿಕೊಂಡು ಓಡಿಸುತ್ತದೆ ಮತ್ತು ಮೆಟ್ಟಿಲಿಳಿದು ಹೋಗಲು ಹೇಳುವಂತೆ ಬೊಗಳುತ್ತದೆ.

ವಾಪಸ್ಸು ಬಂದಾಗ, ಬಾಲವನ್ನು ರಭಸವಾಗಿ ಅಲ್ಲಾಡಿಸುತ್ತಿರುತ್ತಾನೆ. ಸೌಗಂಧಿಯ ಪಾದಗಳ ಬಳಿ ಕುಳಿತು, ತಲೆ ಅಲ್ಲಾಡಿಸುತ್ತಾ, ಕೆನ್ನೆಯಡಿ ಕಿವಿ ಮಡಚಿ ಮಲಗುತ್ತಾನೆ. ಸೌಗಂಧಿಗೆ ಆಗ ಇದ್ದಕ್ಕಿದ್ದಂತೆ ತನ್ನನ್ನು ಸುತ್ತುವರೆದ ಗಾಭರಿಗೊಳಿಸುವ ಗಾಢಮೌನ, ಆವರೆಗೆ ಎಂದೂ ಅನುಭವಿಸಿಲ್ಲದ ಗಾಢಮೌನ ಅರಿವಿಗೆ ಬರುತ್ತದೆ. ಜನಭರಿತ ರೈಲೊಂದು ಎಲ್ಲ ಸ್ಟೇಷನ್‌ಗಳಲ್ಲೂ ಪ್ರಯಾಣಿಕರನ್ನು ಇಳಿಸಿ ಇಳಿಸಿ, ಕೊನೆಗೆ ಖಾಲಿಯಾಗಿ ನಿರ್ಜನವಾದ ತಗಡಿನ ಚಾವಣಿಯಡಿ ನಿಂತಿರುವಂತೆ ಭಾಸವಾಗುತ್ತದೆ. ಅತ್ಯಂತ ನೋವು ಕೊಡುವ ಶೂನ್ಯಭಾವ. ಸೌಗಂಧಿ ಆ ಭಾವವನ್ನು ತೊಡೆದು ಹಾಕಲು ಪ್ರಯತ್ನಿಸಿ ಸೋಲುತ್ತಾಳೆ. ಇದ್ದಕ್ಕಿದ್ದಂತೆ ಮನಸ್ಸಿನ ತುಂಬ ಏನೇನೋ ಆಲೋಚನೆಗಳು, ಆದರೆ ಮನಸ್ಸು ಜರಡಿಯಂತಾಗಿಯೂ, ಸಾವಿರಾರು ಯೋಚನೆಗಳನ್ನು ಅದರಲ್ಲಿ ಹಾಕಿದಂತೆಯೂ ಕುರ್ಚಿಯಲ್ಲಿಯೇ ಕುಳಿತಿರುತ್ತಾಳೆ, ಆದರೆ ಯೋಚನೆಗಳು ಮುಗಿದ ನಂತರವೂ, ಅವಳಿಗೆ ತನ್ನನ್ನು ತಾನು ಸಂತೈಸಿಕೊಳ್ಳುವ ಮಾರ್ಗ ಹೊಳೆಯುವುದಿಲ್ಲ. ಅವಳು ತನ್ನ ಕೊಳಕು ನಾಯಿಯನ್ನು ಎತ್ತಿಕೊಂಡು, ತನ್ನ ವಿಶಾಲವಾದ ತೇಗದ ಮರದ ಮಂಚದ ಮೇಲೆ ಒಂದು ತುದಿಗೆ ಮಲಗಿಸಿ, ಅವನ ಪಕ್ಕ ಮಲಗುತ್ತಾಳೆ ಮತ್ತು ಕೂಡಲೇ ಗಾಢನಿದ್ರೆ ಆವರಿಸುತ್ತದೆ….

 

ಸಾದತ್ ಹಸನ್ ಮಾಂಟೋ 1912 ರಲ್ಲಿ ಲೂಧಿಯಾನ ಹತ್ತಿರದ ಒಂದು ಹಳ್ಳಿಯಲ್ಲಿ ಜನಿಸಿದರು. ಆ ನಂತರ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸುವ ಮೊದಲು, 1936 ರಿಂದ 48ರವರೆಗಿನ ಒಂದಿಷ್ಟು ವರ್ಷಗಳು ಬಾಂಬೆಯಲ್ಲಿ ವಾಸವಾಗಿದ್ದರು. ಓದಿನಲ್ಲಿ ತೀರಾ ಸಾಧಾರಣವಾಗಿದ್ದರೂ ಬಾಂಬೆ ಅವರನ್ನು ಸ್ವಾಗತಿಸಿದ ಬಗೆಯಿಂದಾಗಿ, ಅವರಿಗೆ ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಯಿತು. ಅವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ ನಂತರವೂ ಮಾಂಟೋತಮ್ಮ ಬಾಂಬೆ ದಿನಗಳ ಬಗ್ಗೆ nostalgic ಆಗುತ್ತಿದ್ದರು . ಬಾಂಬೆಯ ಸಿನೆಮಾಗಳಲ್ಲಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದ ಮಾಂಟೋ ಹಣದ ಮುಗ್ಗಟ್ಟಿನಿಂದ ಬಾಂಬೆಯ ಅತ್ಯಂತ ಚಿಕ್ಕ ಚಿಕ್ಕ ಮನೆಗಳಲ್ಲಿ, ವಠಾರಗಳಲ್ಲಿ ವಾಸಿಸಿದರು. ಬದುಕಿನ ನಿರ್ವಹಣೆಗಾಗಿ ಕಷ್ಟ ಪಡುವ ಎಷ್ಟೋ ಹೆಂಗಸರು ವೇಶ್ಯಾವೃತ್ತಿಗಿಳಿದ ಘಟನೆಗಳನ್ನು ಹತ್ತಿರದಿಂದ ಬಲ್ಲ ಮಾಂಟೋ ಬಾಂಬೆಯ ಕೆಳಸ್ತರದ ಬದುಕಿನ ಬಗ್ಗೆ ಅನೇಕ ಕತೆಗಳನ್ನು ಬರೆದರು.
ಅವುಗಳಲ್ಲಿ ಹಲವು ಆ ನಂತರ ಇಂಗ್ಲಿಷ್‌ ಗೆ ಅನುವಾದಗೊಂಡವು. ಹಾಗೆ ಅನುವಾದಗೊಂಡ ಕತೆಗಳ ಒಂದು ಸಂಕಲನವೇ Bombay Stories. ‘ಯಕ್!’ ಈ ಸಂಕಲನದಲ್ಲಿರುವ The Insult ಎಂಬ ಕತೆಯ ಅನುವಾದ.