ಉತ್ತರ ಕನ್ನಡದ ಕರ್ಕಿ ಯಕ್ಷಗಾನ ಮಂಡಳಿ  ಮರಾಠಿ ರಂಗಭೂಮಿಯ ಉದಯಕ್ಕೆ ಪ್ರೇರಣೆಯಾಗಿದೆ ಎಂದು ಮರಾಠಿ ರಂಗಭೂಮಿಯ  ಇತಿಹಾಸಕಾರರೇ  ಒಪ್ಪಿಕೊಂಡಿರುವಾಗ  ಕನ್ನಡದ ಹೆಮ್ಮೆಯ  ಕಲೆಯಾದ ಯಕ್ಷಗಾನದ ಇತಿಹಾಸದಲ್ಲಿ ಇದರ ಉಲ್ಲೇಖವಿಲ್ಲದಿರುವುದು ಬಲು ದೊಡ್ಡ ದೋಷ. ಯಕ್ಷಗಾನಕ್ಕೆ ದೊರೆತ ಪದ್ಮಶ್ರೀಯಂತಹ  ರಾಷ್ಟ್ರ ಮಟ್ಟದ ಉನ್ನತ  ಪ್ರಶಸ್ತಿಯ  ಕುರಿತು ಉಲ್ಲೇಖವೇ ಇಲ್ಲದಿರುವುದು ಮತ್ತೊಂದು ಕೊರತೆ.  ವೇಷ ಕ್ರಮದ ಕುರಿತು  ಪಠ್ಯದಲ್ಲಿ  ಮಾಹಿತಿಯನ್ನು  ನೀಡುವಾಗ ವಿವಿಧ ದೃಷ್ಟಿಕೋನದಿಂದ ಮಾಹಿತಿ ಸಂಗ್ರಹಿಸಿ ಸಮಗ್ರವಾಗಿ ಉಲ್ಲೇಖಿಸದಿದ್ದರೆ ಮಾಹಿತಿ ತಪ್ಪಾಗುತ್ತದೆ. ಯಕ್ಷಗಾನ ಪಠ್ಯಪುಸ್ತಕದಲ್ಲಿರುವ ಲೋಪಗಳ ಕುರಿತು ಬರೆದಿದ್ದಾರೆ ಕಡತೋಕಾ ಗೋಪಾಲಕೃಷ್ಣ ಭಾಗವತ

ಕನ್ನಡ ಸಾಂಸ್ಕೃತಿಕ ವಾಹಿನಿಯು ಶತಮಾನಗಳಲ್ಲಿ ಹುಟ್ಟುಹಾಕಿದ  ಒಂದು ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನವು. ಇಲ್ಲಿ  ಆಡುವ ಮಾತು ಕನ್ನಡದ್ದು, ಪ್ರದರ್ಶಿಸುವ ಕಾವ್ಯ ಕನ್ನಡದ್ದು. ಈ ಕಲೆಯು ಎಲ್ಲ ಪ್ರಾಚೀನ ಛಂದಃಪ್ರಕಾರಗಳನ್ನೂ ಒಳಗೊಳ್ಳುವಂತಹದ್ದು; ಇಲ್ಲಿ ಆಡುವ ಮಾತು ಸಮೃದ್ಧವಾದ ಅಚ್ಚ ಕನ್ನಡ. ಕೆಲವೇ ಜಿಲ್ಲೆಗಳಲ್ಲಿ ಜನಪ್ರಿಯವಾದರೂ ಇಡಿಯ ಕರ್ನಾಟಕದ ಪ್ರಾತಿನಿಧಿಕ ರಂಗಭೂಮಿಯಾಗುವ ಎಲ್ಲ ಲಕ್ಷಣವನ್ನೂ ಹೊಂದಿರುವುದನ್ನು ತಜ್ಞರು ಒಕ್ಕೊರಲಿನಿಂದ ಗುರುತಿಸಿದ್ದಾರೆ.

ಆದ್ದರಿಂದಲೇ  ಈ ಕಲೆಗೆ ಸಂಬಂಧಿಸಿದಂತೆ ಅಕಾಡೆಮಿಯೊಂದು ರೂಪುಗೊಂಡಿದ್ದಲ್ಲದೇ ಅನೇಕರು ಈ ಕ್ಷೇತ್ರದಲ್ಲಿ ಸಂಶೋಧನೆಗಳನ್ನು, ಅಧ್ಯಯನಗಳನ್ನು ಮಾಡುತ್ತಿದ್ದಾರೆ.  ಇತ್ತೀಚೆಗಿನ ವರ್ಷಗಳಲ್ಲಿ  ಕರ್ನಾಟಕ  ಪಠ್ಯಪುಸ್ತಕ  ಸಂಘವು  ಯಕ್ಷಗಾನ  ಶಿಕ್ಷಣ ಪಠ್ಯಪುಸ್ತಕ [ತೆಂಕುತಿಟ್ಟು ಮತ್ತು ಬಡಗುತಿಟ್ಟು] ಎಂಬ ಕಲಿಕಾ ಪಠ್ಯವನ್ನು ಸಿದ್ಧಪಡಿಸಿ ಬಿಡುಗಡೆಗೊಳಿಸಿದ್ದಾರೆ. ಇಂತಹ ಏಕರೂಪದ ಪಠ್ಯ ಬರಲಿ  ಮತ್ತು  ಬಂದರೆ  ಯಕ್ಷಗಾನಕ್ಕೆ ಒಳ್ಳೆಯದಾಗುತ್ತದೆ ಎಂದು, ಈ  ಹಿಂದೆ ಅನೇಕರು ನಂಬಿದ್ದರು. ಯಕ್ಷಗಾನವನ್ನು ಬಲ್ಲವರೆನ್ನುವ ಅನೇಕರು ಅದರಲ್ಲಿಯೂ ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರು ಈ ಪಠ್ಯದ ರಚನಾ ಸಮಿತಿಯಲ್ಲಿದ್ದಾರೆ ಎಂಬ ವಾರ್ತೆಯನ್ನು ಕೇಳಿ,  ಈ ಪಠ್ಯವು ಹೆಚ್ಚು ಅಧಿಕೃತವಾಗಿ ಮೂಡಿಬರಬಹುದು ಎಂಬ ನಿರೀಕ್ಷೆಯಿತ್ತು.  ಅದು ಬಿಡುಗಡೆಯಾದಾಗ ಅದಕ್ಕೆ ಕಾರಣರಾದವರೆನ್ನುವವರಿಗೆ  ಪ್ರಶಂಸೆಯ ಮಹಾಪೂರವೇ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದವು.

ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆ ಯಕ್ಷರಂಗದಲ್ಲಿ ಈ ಕುರಿತು ಮುಖಪುಟ ಲೇಖನಗಳನ್ನು ಪ್ರಕಟಿಸಿ ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆಗೆ ವೇದಿಕೆಯಾಯಿತು. ಇದೀಗ  ಈ ಪಠ್ಯದ ಗುಣ ದೋಷಗಳ ಕಡೆಗೆ ಗಮನ ಸೆಳೆಯುವುದು ಈ ಬರಹದ ಉದ್ದೇಶ. ಈ  ಪಠ್ಯದಲ್ಲಿ  ಕಂಡು  ಬರುವ  ವಿಸಂಗತಿಗಳನ್ನು ಯಾದಿಯ ರೂಪದಲ್ಲಿ ಕೊಡಲಾಗಿದೆ. ಈ ಅಂಶಗಳ ಕುರಿತು ಯಕ್ಷಗಾನ ಶಿಕ್ಷಕರ, ವಿದ್ಯಾರ್ಥಿಗಳ, ಸರ್ಕಾರೀ ಅಧಿಕಾರಿಗಳ ಹಾಗೂ ಸಾರ್ವಜನಿಕರ ಗಮನವನ್ನು ಸೆಳೆದು ಆರೋಗ್ಯಪೂರ್ಣವಾದ ಚರ್ಚೆ ಸ್ಫೂರ್ತಿಯಾಗುವುದು ಈ ಬರಹದ ಉದ್ದೇಶವಷ್ಟೇ.

ಮೊದಲನೆಯದಾಗಿ ಇಂತಹ ಪಠ್ಯವನ್ನು ಸರ್ಕಾರವು ರಚಿಸುವುದಕ್ಕಾಗಿ  ಒಂದು ಸಮಿತಿಯನ್ನು ನೇಮಿಸಿರುತ್ತದೆ. ಆ ಸಮಿತಿಯಲ್ಲಿರುವ  ಸದಸ್ಯರು ಮತ್ತು ಪದಾಧಿಕಾರಿಗಳ ಯಾದಿಯನ್ನು ಇದೇ ಪಠ್ಯದಲ್ಲಿ ಕೊಡಲಾಗಿದೆ.  ಅಧ್ಯಕ್ಷರು-ಹೊಸ್ತೋಟ ಮಂಜುನಾಥ ಭಾಗವತರು,  ಪರಿಶೀಲಕರು- ಪ್ರೊ.ಎಂ.ಎಲ್.ಸಾಮಗ, ಸದಸ್ಯರಾಗಿ ಕಲಾವಿದರಾದ ಕೆ.ಗೋವಿಂದ ಭಟ್ಟ , ತಾರಾನಾಥ ವರ್ಕಾಡಿ, ಗಣರಾಜ ಕುಂಬಳೆ , ಸುಜಯೀಂದ್ರ ಹಂದೆ ,  ಪ್ರಕಾಶ  ಮೂಡಿತ್ತಾಯ ಪಿ. ಸಹಕಾರ: ಕಲಾವಿದರು ಮಾಜಿ ಶಾಸಕರೂ ಆದ ಕುಂಬಳೆ ಸುಂದರ ರಾವ್ , ವಿದ್ವಾಂಸರಾದ ಡಾ.ಜಿ.ಎಸ್.ಭಟ್ ಸಾಗರ, ಕರ್ಗಲ್ಲು ವಿಶ್ವೇಶ್ವರ ಭಟ್  , ಸದಾನಂದ ಐತಾಳ , ರಾಧಾಕೃಷ್ಣ ಕಲ್ಚಾರ್ , ಜಾನಪದ ವಿದ್ವಾಂಸರಾದ ಡಾ.ಕಮಲಾಕ್ಷ . ಇದರ ಜೊತೆಯಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ಪದನಿಮಿತ್ತ ಪದಾಧಿಕಾರಿಗಳೂ ಇದ್ದು ಅವರುಗಳ ಯಕ್ಷಗಾನದ ವಲಯದವರಲ್.

ಈ ಕಲಿಕಾ ಪಠ್ಯದಲ್ಲಿ ನಾಲ್ಕು ಅಧ್ಯಾಯಗಳಿವೆ.
1. ಯಕ್ಷಗಾನ ಸ್ವರೂಪ-ಇದರಲ್ಲಿ ಯಕ್ಷಗಾನದ ಪರಿಚಯ, ಅಂಗಗಳು, ಹಾಗೂ ಇತಿಹಾಸಕ್ಕೆ ಪ್ರತ್ಯೇಕ ವಿಭಾಗ ಮಾಡಲಾಗಿದೆ.
2. ಯಕ್ಷಗಾನ ರಂಗಸ್ಥಳ ಹಾಗೂ ವೇಷಭೂಷಣಗಳು-ಇದರಲ್ಲಿ ಚೌಕಿ ಮತ್ತು ರಂಗಸ್ಥಳ, ಬಣ್ಣಗಾರಿಕೆ ಹಾಗೂ ವೇಷಭೂಷಣಗಳು ಎಂಬ ಮೂರು ವಿಭಾಗಗಳು.
3ನೇಯ ಅಧ್ಯಾಯ ಯಕ್ಷಗಾನ ಪ್ರಸಂಗಗಳು ಹಾಗೂ ಅರ್ಥಗಾರಿಕೆ-ಇದರಲ್ಲಿ ಯಕ್ಷಗಾನ ಪ್ರಸಂಗಗಳು, ಅರ್ಥಗಾರಿಕೆ ಮತ್ತು ಸಂಭಾಷಣೆ, ಅಭ್ಯಾಸಕ್ಕಾಗಿ  ಕೆಲವು  ಪ್ರಸಂಗಗಳು ಎಂದು ಮತ್ತೆ ಮೂರು ಭಾಗ ಮಾಡಲಾಗಿದೆ.
4ನೇಯ ಅಧ್ಯಾಯ ಯಕ್ಷಗಾನ ಶಿಕ್ಷಣ -ಇದರಲ್ಲಿ  ಲಯ,  ಕಾಲ, ತಾಳಗಳ  ಪರಿಕಲ್ಪನೆ,  ತೆಂಕುತಿಟ್ಟಿನ  ತಾಳಗಳು ಮತ್ತು ಹೆಜ್ಜೆಗಾರಿಕೆ, ತೆಂಕುತಿಟ್ಟಿನ  ರಂಗಕ್ರಮಗಳು,  ಬಡಗುತಿಟ್ಟಿನ   ತಾಳಗಳು  ಮತ್ತು ಹೆಜ್ಜೆಗಾರಿಕೆ,  ಬಡಗುತಿಟ್ಟಿನ  ರಂಗಕ್ರಮಗಳು,  ಅಭಿನಯ ಮತ್ತು ರಂಗತಂತ್ರಗಳು ಹೀಗೆ ಆರು ವಿಭಾಗಗಳಿಗೆ.

ಈಗ ಒಂದೊಂದಾಗಿ ಅವಲೋಕಿಸೋಣ:

1. ಯಕ್ಷಗಾನದ  ಇತಿಹಾಸ ಈ ವಿಭಾಗದಲ್ಲಿ [ಪುಟ-10ರಿಂದ 12] ಕಲಿಯುವ ವಿದ್ಯಾರ್ಥಿಗಳಿಗೆ ಸಂಕೀರ್ಣವಾಗುವಂತೆ ಯಕ್ಷಗಾನದ ಉಗಮದ ಕುರಿತು ಒಂದು ಪುಟವನ್ನು ಕೊಡಲಾಗಿದ್ದು ಅದೂ ಸಮಗ್ರವಾಗಿಲ್ಲ. ಸುಮಾರು ಮೂರು ಶತಮಾನದ ಪ್ರಮುಖ ಘಟನೆಯ ಉಲ್ಲೇಖವೇ ಇಲ್ಲ.  ಉದಾಹರಣೆಗೆ  ಕೋಟ ಶಿವರಾಮ ಕಾರಂತರು  ನಡೆಸಿದ  ಪರಿಷ್ಕಾರದ ಕುರಿತು  ಏನನ್ನೂ  ಹೇಳದಿರುವುದು ಒಂದು ಲೋಪ. ಯಕ್ಷಗಾನದ ಇತಿಹಾಸ ಅದು ಎಷ್ಟೇ ಸಂಕ್ಷಿಪ್ತವಾದುದಾಗಿರಲಿ, ಸರಳವಾಗಿರಬೇಕಾದುದಾಗಿರಲಿ,  ಅಲ್ಲಿ ಶಿವರಾಮ ಕಾರಂತರ ಉಲ್ಲೇಖವಿಲ್ಲದೇ  ಅಧ್ಯಾಯ ಪರಿಪೂರ್ಣವಾಗಲಾರದು. ಇದರ ಕುರಿತು ಕಾರಂತರ ಶಿಷ್ಯರು ಮತ್ತು ಅನುಯಾಯಿಗಳು  ಏನೆನ್ನುತ್ತಾರೆ  ಎಂಬ  ಕುತೂಹಲ ಯಕ್ಷಗಾನ ಪ್ರಿಯರಿಗಿದೆ.

2. ಮರಾಠಿ ರಂಗಭೂಮಿಯ ಉದಯಕ್ಕೆ ಪ್ರೇರಣೆಯಾದದ್ದು ಉತ್ತರ ಕನ್ನಡದ ಕರ್ಕಿ ಯಕ್ಷಗಾನ ಮಂಡಳಿ  ಎಂದು ಮರಾಠಿ ರಂಗಭೂಮಿಯ  ಇತಿಹಾಸಕಾರರೇ  ಒಪ್ಪಿಕೊಂಡಿರುವಾಗ  ಕನ್ನಡದ ಹೆಮ್ಮೆಯ  ಕಲೆಯಾದ ಯಕ್ಷಗಾನದ ಇತಿಹಾಸದಲ್ಲಿ ಇದರ ಉಲ್ಲೇಖವಿಲ್ಲದಿರುವುದು ಬಲು ದೊಡ್ಡ ದೋಷ. ಯಕ್ಷಗಾನಕ್ಕೆ ದೊರೆತ ಪದ್ಮಶ್ರೀ ಯಂತಹ  ರಾಷ್ಟ್ರ ಮಟ್ಟದ ಉನ್ನತ  ಪ್ರಶಸ್ತಿಯ  ಕುರಿತು ಉಲ್ಲೇಖವೇ ಇಲ್ಲದಿರುವುದು ಮತ್ತೊಂದು ಕೊರತೆ.

3. ಎರಡೂ ತಿಟ್ಟಿನ ವೇಷಭೂಷಣಗಳ ಭಾವಚಿತ್ರಗಳ ಸಂದರ್ಭದಲ್ಲಿ ಯಕ್ಷಗಾನದ್ದಲ್ಲದ ನಾಟಕೀಯ ಪರಿಕರಗಳನ್ನೂ ಯಕ್ಷಗಾನದ್ದೆಂಬಂತೆ ಕೊಟ್ಟಿರುವುದರಿಂದ ವಿದ್ಯಾರ್ಥಿಗಳು ಅಯಕ್ಷಗಾನೀಯವಾದದ್ದನ್ನೇ ಯಕ್ಷಗಾನವೆಂದು ತಪ್ಪಾಗಿ ಗ್ರಹಿಸಲು ಪಠ್ಯವೇ ಪ್ರೇರೇಪಿಸಿದಂತಾಗುತ್ತದೆ. ಇದು ಅಪಾಯ. ಉದಾಹರಣೆಗೆ ಹನುಮಂತನ ಕಿರೀಟವನ್ನು ನಾಟಕದ ಕಿರೀಟವೆಂದು ತೋರಿಸಲಾಗಿದೆ. ವಾಸ್ತವವಾಗಿ ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ  ಹನುಮಂತನಿಗೆ  ಸಾಂಪ್ರದಾಯಿಕ  ಕಿರೀಟವಿದೆ ಮತ್ತು ಅವುಗಳ ಭಾವಚಿತ್ರಗಳು ಸಾಕಷ್ಟು ಲಭ್ಯವಿಲ್ಲದಿದ್ದರೂ ಹನುಮಂತನ ಕಿರೀಟವೆಂದು ನಾಟಕದ ಕಿರೀಟವನ್ನು ತೋರಿಸಿರುವುದರ ಔಚಿತ್ಯ ಅರ್ಥವಾಗುವುದಿಲ್ಲ.  ನಾಟಕೀಯ  ವೇಷಭೂಷಣವೆಂದು  ಒಂದು ವೇಷವನ್ನು  ತೋರಿಸಲಾಗಿದೆ.  ಇದರಿಂದ ಅಯಕ್ಷಗಾನೀಯ ವೇಷ ಕ್ರಮವನ್ನು ಪಠ್ಯವು ಸಕ್ರಮಗೊಳಿಸುತ್ತದೆ. ಇದು ಎಷ್ಟು ಸಮಂಜಸ?

4. ಬಡಗುತಿಟ್ಟಿನ  ವೇಷಗಳ  ಭಾವಚಿತ್ರಗಳನ್ನು ಕೊಡಲಾಗಿದೆಯಾದರೂ ಇಂದು ಪ್ರಚಲಿತದಲ್ಲಿರುವ ಬಡಗಿನ ವೇಷಭೂಷಣಗಳಿಗೂ ಇಲ್ಲಿ  ಕೊಟ್ಟಿರುವುದಕ್ಕೂ  ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು  ವಿವರಿಸಬಹುದಾಗಿತ್ತು.  ವೃತ್ತಾಕಾರದ ಎದೆಹಾರವನ್ನೂ, ಉತ್ತರ  ಕನ್ನಡ ತಿಟ್ಟಿನ ಭುಜಕೀರ್ತಿಯ ಭಾವಚಿತ್ರ ಕೊಡುವುದರಿಂದ ಯಾವ ತೊಂದರೆಯೂ ಇರಲಿಲ್ಲ. ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ.

5. ಕಲಿಕಾ  ಪಠ್ಯವು  ಸಹಜವಾಗಿಯೇ  ಪ್ರಯೋಗಕ್ಕೆ  ಸಹಾಯವಾಗುವ ಥಿಯರಿಗೆ  ಮಹತ್ವವನ್ನು  ಕೊಡಬೇಕಾಗಿತ್ತು.  ಆದರೆ  ಇಲ್ಲಿ  ಪ್ರಾಯೋಗಿಕವಾಗಿ  ಕಲಿಯಬೇಕಾದ ಹೆಜ್ಜೆಗಾರಿಕೆಯನ್ನು ಕೋಷ್ಟಕವನ್ನು ಕೊಟ್ಟು ವರ್ಣಿಸುವ ವ್ಯರ್ಥ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದ ಗೊಂದಲವೇ ಹೆಚ್ಚು ಹೊರತೂ ಕಲಿಕೆಗೆ ಅನುಕೂಲವಾಗಲಾರದು.

6. ಅಭಿನಯ  ಮತ್ತು  ರಂಗ  ತಂತ್ರಗಳು ಎಂಬ ಕೊನೆಯ ಘಟಕದಲ್ಲಿ ಆಂಗಿಕಾಭಿನಯದ ಕುರಿತು ಅತ್ಯಂತ ಬಾಲಿಶವಾಗಿ ವಿವರಿಸಲಾಗಿದೆ. ಯಕ್ಷಗಾನದಲ್ಲಿ ಲಾಗಾಯ್ತಿನಿಂದಲೂ  ಮುದ್ರೆಗಳಿಗೆ ಮಹತ್ವವಿದೆ.  ಡಾ.ಜಿ.ಎಸ್.ಹೆಗಡೆ ಅವರು ಈ  ಅಂಶದ  ಮೇಲೆ ಪ್ರೌಢವಾದ ಸಂಶೋಧನೆಯನ್ನು  ಕೂಡ ಮಾಡಿದ್ದಾರೆ.  ಆದರೆ  ಇಲ್ಲಿ  ಕೊಟ್ಟ ವಿವರಗಳು ಹಾಸ್ಯಾಸ್ಪದವಾಗಿವೆ. ಉದಾಹರಣೆಗೆ ‘ಶಿಶುತನದಲಿ ಶಂಬರನೆಂಬಸುರನ ಅಸುಗೊಳ್ಳನೆ ಸ್ಮರನು ‘ [ಪುಟ-176]

‘ಈ ಪದ್ಯಕ್ಕೆ ಶಿಶುತನದಲಿ ಎಂಬಾಗ ಮಗುವಿನ ಅಭಿನಯ ಮಾಡುವುದು. ಶಂಬರನೆಂಬಸುರನ ಎಂಬಾಗ ಅಸುರನನ್ನು ಸೂಚಿಸುವ ಅಭಿನಯ ಮಾಡುವುದು. ಅಸುಗೊಳ್ಳನೇ ಶಬ್ದಕ್ಕೆ ಕೊಲ್ಲುವ  ಅಭಿನಯವನ್ನು  ಪ್ರಕಟಿಸಬೇಕು.  ಸ್ಮರನು  ಎಂಬುದನ್ನು ಶೂನ್ಯದೆಡೆಗೆ  ಕೈತೋರಿಸಿ  ಅಭಿನಯಿಸಬೇಕು.’  ಹೀಗೆ ಆಂಗಿಕವನ್ನು  ವಿವರಿಸುವ ಪಾರಿಭಾಷಿಕ ದಾರಿದ್ರ್ಯ ಯಕ್ಷಗಾನದ ಆಂಗಿಕಾಭಿನಯ ಪರಂಪರೆಗೆ ಇಲ್ಲ. ಇಷ್ಟನ್ನು ಹೇಳಲು ಪಠ್ಯವೇ ಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದರ ಹೊರತಾಗಿಯೂ ಸೂಕ್ಷ್ಮವಾಗಿ ನೋಡಿದರೆ ತಜ್ಞರು ಇನ್ನೂ ಹೆಚ್ಚು ದೋಷಗಳನ್ನು ಹುಡುಕಬಹುದು.

ಇಡಿಯ ಪಠ್ಯದಲ್ಲಿ ಸಭಾಲಕ್ಷಣದ ಅಥವಾ ಪೂರ್ವರಂಗದ ಉಲ್ಲೇಖವೇ ಇಲ್ಲ. ಇದನ್ನು ಸಣ್ಣ ದೋಷವೆಂದು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ.

ಯಕ್ಷಗಾನದ  ಪರಿಚಯ ವಿಭಾಗದಲ್ಲಿ [ಪುಟ-3]ರಲ್ಲಿ ಬಡಗುತಿಟ್ಟನ್ನು ವರ್ಣಿಸುವಾಗ ವಿಶಾಲವಾದ ಉತ್ತರ ಕನ್ನಡದ ಪ್ರತ್ಯೇಕ ತಿಟ್ಟಿನ ಅಂದರೆ ಬಡಾಬಡಗು ತಿಟ್ಟಿನ ಉಲ್ಲೇಖವನ್ನೇ ಮಾಡದಿರುವುದು ಸರಿಯಲ್ಲ. ಈ ಕುರಿತು ಹೆಚ್ಚಿನ ಚರ್ಚೆಯಾಗಬೇಕಿದೆ.

ಮೂಲಭೂತವಾಗಿ ಎಲ್ಲ ಕಲೆಗಳ ಸಮಾವೇಶವಾದ ಯಕ್ಷಗಾನದಂತಹ  ಕಲೆಯನ್ನು  ಕೇವಲ  ಪಠ್ಯದಲ್ಲಿ ವರ್ಣಿಸುವುದರ  ಮೂಲಕ  ಕಲಿಯುವುದು  ಅಥವಾ ಕಲಿಸುವುದು ಸಮಂಜಸವೇ? ಸಾಧ್ಯವೇ ? ಎಂಬ ಪ್ರಶ್ನೆ ಮೊದಲು ಚರ್ಚೆಯಾಗಬೇಕಿದೆ.

ಈ ಕಲೆಯು ಎಲ್ಲ ಪ್ರಾಚೀನ ಛಂದಃಪ್ರಕಾರಗಳನ್ನೂ ಒಳಗೊಳ್ಳುವಂತಹದ್ದು; ಇಲ್ಲಿ ಆಡುವ ಮಾತು ಸಮೃದ್ಧವಾದ ಅಚ್ಚ ಕನ್ನಡ. ಕೆಲವೇ ಜಿಲ್ಲೆಗಳಲ್ಲಿ ಜನಪ್ರಿಯವಾದರೂ ಇಡಿಯ ಕರ್ನಾಟಕದ ಪ್ರಾತಿನಿಧಿಕ ರಂಗಭೂಮಿಯಾಗುವ ಎಲ್ಲ ಲಕ್ಷಣವನ್ನೂ ಹೊಂದಿರುವುದನ್ನು ತಜ್ಞರು ಒಕ್ಕೊರಲಿನಿಂದ ಗುರುತಿಸಿದ್ದಾರೆ.

ಸಾಮಾಜಿಕ  ಜಾಲತಾಣದಲ್ಲಿ  ವೈರಲ್  ಆಗಿ ಯಕ್ಷಗಾನ  ಪಠ್ಯದ  ಕುರಿತು  ಸಂಚಲನೆ  ಮೂಡಿಸಿದ ಯಕ್ಷಗಾನಕ್ಕೆ  ಮೀಸಲಾದ ‘ಯಕ್ಷರಂಗ’ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿ ಖ್ಯಾತ ಯಕ್ಷಗಾನ ತಜ್ಞ ಡಾ.ಕೆ.ಎಂ.ರಾಘವ ನಂಬಿಯಾರ್ ಒಂದು ನ್ಯಾಯೋಚಿತವಾದ ಸಲಹೆಯನ್ನು ನೀಡಿದ್ದಾರೆ.  ಇಂತಹ ಪಠ್ಯಗಳು ಬರುವುದಕ್ಕಿಂತ ಮೊದಲು ಪಠ್ಯಕ್ಕೆ ಆಕರವಾಗಿ ಒಂದು ಸಂಪುಟವನ್ನು ತಜ್ಞರ ಸಹಕಾರ ಮತ್ತು ಶ್ರಮದಿಂದ ಹೊರತಬೇಕಾಗಿದೆ. ಈ ಸಂಪುಟದಲ್ಲಿ ಯಕ್ಷಗಾನದ ಒಟ್ಟಾರೆ ಸ್ವರೂಪದ ಕುರಿತು ಪ್ರಾದೇಶಿಕ ಪದ್ಧತಿ ಸಂಪ್ರದಾಯಗಳ ಕುರಿತು ಸಮಗ್ರವಾದ ಮಾಹಿತಿ ಇರಬೇಕು. ಉದಾಹರಣೆಗೆ -ಉತ್ತರ ಕನ್ನಡದಲ್ಲಿ ಕೃಷ್ಣನ ವೇಷವನ್ನು ಮಾಡುವ ಪದ್ಧತಿ ಹಿಂದೆ ಕರ್ಕಿ ನಾರಾಯಣ ಹಾಸ್ಯಗಾರರು ಮಾಡುವಂತೆಯೇ ಇತ್ತು ಮತ್ತು ಬಲು ಹಿಂದೆ ಮೂಡ್ಕಣಿ ನಾರಾಯಣ ಹೆಗಡೆಯವರೂ ಅದೇ ರೀತಿಯಲ್ಲಿ ಮಾಡುತ್ತಿದ್ದರು- ಅಂದರೆ ಚೌಕುಳಿ ಕಸೆ ಸೀರೆ ಇರಲಿಲ್ಲ ಮತ್ತು ಪೊಗಡೆಯ ವಿನ್ಯಾಸದಲ್ಲಿಯೂ ವ್ಯತ್ಯಾಸವಿತ್ತು. ಇನ್ನು ಪ್ರವೇಶದ ಪದ್ಯ, ನರ್ತನ ಇವೆಲ್ಲ ಬೇರೆ ಅಂಶಗಳು.

ನಂತರ ಶಂಭು ಹೆಗಡೆಯವರ ಮೂಲಕ ಉಡುಪಿ ತಿಟ್ಟಿನ ಕಸೆ ಕೇದಗೆ ಮುಂದಲೆಯಂತೆ ಕೃಷ್ಣನನ್ನು ಮಾಡುವ ಮಾದರಿ ಜನಪ್ರಿಯವಾಯಿತು. ಇಂದು ಬಡಗು ತಿಟ್ಟು ಅಂತ ಜನಸಾಮಾನ್ಯರು ಗುರುತಿಸುವ ಮುಖ್ಯ ವಾಹಿನಿಯ ಮೇಳಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ತೊಡುವ ಕೃಷ್ಣನ ವೇಷಭೂಷಣ ಇದೇ ಮಾದರಿಯಾಗಿದೆ. ಇದು ನಿಜ ಅರ್ಥದಲ್ಲಿ  ಉತ್ತರ ಕನ್ನಡದ ತಿಟ್ಟಿನದೂ ಅಲ್ಲ ಉಡುಪಿ ತಿಟ್ಟಿನದೂ ಅಲ್ಲ ಹಾಗೆಂದು ಅಯಕ್ಷಗಾನೀಯವೆಂದು ತಿರಸ್ಕರಿಸುವಂತೆಯೂ ಇಲ್ಲ-ಕಲಾತ್ಮಕವಾದುದೇ ಇದೆ.  ಉಡುಪಿಯ ನಡು ತಿಟ್ಟಿನಲ್ಲಿ ಕೃಷ್ಣನ ವೇಷಕ್ಕೆ ಸ್ತ್ರೀ ವೇಷದಲ್ಲಿ ನಡುವಿನ ಕೆಳಗೆ ಸೀರೆ ತೊಟ್ಟು ಮಾಡುವುದು ಕ್ರಮ. ಆದರೆ ಈ ಕ್ರಮವು ಮೇಳಗಳಲ್ಲಿ ಇಲ್ಲ. ಹಾಗಾಗಿ ಈ ವೇಷದ ಕ್ರಮದ ಕುರಿತು  ಪಠ್ಯದಲ್ಲಿ  ಮಾಹಿತಿಯನ್ನು  ನೀಡುವಾಗ ಈ ಎಲ್ಲ ಅಂಶಗಳನ್ನು ಉಲ್ಲೇಖಿಸದಿದ್ದರೆ ಮಾಹಿತಿ ತಪ್ಪಾಗುತ್ತದೆ.

ಇನ್ನೊಂದು ಉದಾಹರಣೆ- ಹನುಮಂತನಿಗೆ ತೆಂಕು-ಬಡಗು ಮತ್ತು ಉತ್ತರ ಕನ್ನಡದ ಬಡಾ ಬಡಗುತಿಟ್ಟಿನಲ್ಲಿ ವಿಶಿಷ್ಟವಾದ ಕಿರೀಟವಿದೆ. ಇಂದು ಮೇಳಗಳಲ್ಲಿ ಕಾಣುವ ಹನುಮಂತನ ಕಿರೀಟವು ನಾಟಕದ ಕಿರೀಟವೇ ಹೊರತೂ ಯಕ್ಷಗಾನದ್ದಲ್ಲ. ಆದರೆ ವಿವಾದಾಸ್ಪದ ಪಠ್ಯದಲ್ಲಿ ನಾಟಕದ ಕಿರೀಟವನ್ನೇ ಹನುಮಂತನ ಕಿರೀಟವೆಂದು ಕೊಡಲಾಗಿದ್ದು ಇದು ಗುರುತರವಾದ ಪ್ರಮಾದವಾಗಿದೆ. ಇದರಿಂದ ನಾಟಕೀಯ ವೇಷಭೂಷಣಕ್ಕೆ ಸಂಪ್ರದಾಯದ ಮನ್ನಣೆ ದೊರೆತಂತಾಗಿದೆ. ಹನುಮಂತನ ಕಿರೀಟದ ಇಂತಹ ಗೊಂದಲವನ್ನು ನಂಬಿಯಾರರು ಹೇಳುವಂತೆ ಮೂಲ ಆಕರ ಸಂಪುಟದಲ್ಲಿ ವಿವರವಾಗಿ ಚರ್ಚಿಸಬೇಕು ಮತ್ತು ಪಠ್ಯದಲ್ಲಿ ಸಂಕ್ಷಿಪ್ತವಾಗಿ ಮೂರೂ ತಿಟ್ಟುಗಳ ಕಿರೀಟದ ಭಾವಚಿತ್ರದೊಂದಿಗೆ ಸರಳವಾಗಿ ವಿವರಿಸಬೇಕು. ಡಾ.ನಂಬಿಯಾರರ ಈ ಸಲಹೆ ಅತ್ಯಂತ ಸಮಂಜಸವಾಗಿದೆ. ಸರ್ಕಾರವಾಗಲೀ. ಅಕಾಡೆಮಿಯಾಗಲೀ ಇಂತಹ ತಜ್ಞರ ಸಹಾಯದಿಂದ ಮೂಲ ಆಕರ ಸಂಪುಟವನ್ನು ರಚಿಸಿಕೊಂಡು ಮುಂದುವರಿಯಬೇಕು.

ಸುಮಾರು 180 ಪುಟಗಳ ಬಹುವರ್ಣದ ದೊಡ್ಡ ಪುಸ್ತಕದ 5000 ಪ್ರತಿಯನ್ನು ಮುದ್ರಿಸಲಾಗಿದೆಯೆಂದು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ. ಅಂದರೆ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ಇದಕ್ಕೆ ವ್ಯರ್ಥವಾಗಿ ವಿನಯೋಗವಾಗಿರುವುಕ್ಕೆ ಯಾರೆಲ್ಲ ಹೊಣೆ? ಇಂತಹವುಗಳನ್ನು ಯಾರೂ ಯಾಕೆ ಪ್ರಶ್ನಿಸುವುದಿಲ್ಲ? ಎಂಬೆಲ್ಲ ಸಂಶಯಗಳಿಗೆ ಉತ್ತರವನ್ನು ಯಕ್ಷಗಾನ ರಂಗಭೂಮಿಯ ಹಿತಾಸಕ್ತಿಯ ಕುರಿತು ಕಳಕಳಿಯಿರುವವರು ಕಂಡುಕೊಳ್ಳಬೇಕಿದೆ.

ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ; ಫಲಾನುಭವಿಗಳು ಯಾರೋ ಇರುತ್ತಾರೆ. ಅನ್ಯಾಯಕ್ಕೊಳಗಾವುದು ಮಾತ್ರ ವಿಶಾಲ ಸಮುದಾಯವು ಬೆಳೆಸಿಕೊಂಡು ಬಂದ ಸಾಸ್ಕೃತಿಕ ವಾಹಿನಿ ಎಂಬುದನ್ನು ನಾವು ಮರೆಯಬಾರದು.

ಯಕ್ವಗಾನದ ಕಲಿಕೆಯ ಪಠ್ಯವು ಸರಳವಾಗಿರಬೇಕು ಮತ್ತು  ಅಲ್ಲಿ  ಎಲ್ಲ  ಪ್ರಾದೇಶಿಕ ವೈವಿಧ್ಯತೆಯನ್ನೂ ವರ್ಣಿಸಲಿಕ್ಕೆ ಸಾಧ್ಯವಿಲ್ಲವೆಂಬುದು ಸರಿಯೇ.  ಎಂದಷ್ಟಕ್ಕೆ  ದೀರ್ಘ  ಕಾಲದಿಂದ ಅಸ್ತಿತ್ವದಲ್ಲಿದ್ದು  ವರ್ತಮಾನಕಾಲದಲ್ಲಿ ಪ್ರಚಲಿತದಲ್ಲಿರುವ ವೈವಿಧ್ಯಗಳ ಕುರಿತು ಯಾವ ವಿವರಣೆಯನ್ನೂ ಕೊಡದೇ ಇರುವುದು ಸಾಸ್ಕೃತಿಕ ಅನ್ಯಾಯಕ್ಕೆ ಹಾದಿ ಮಾಡಿಕೊಡುತ್ತದೆ. ಮುಗ್ಧರಾದ  ವಿದ್ಯಾರ್ಥಿಗಳಿಗೆ  ಈ ಪಠ್ಯವು ಕೊಡುವ ಸಂದೇಶಗಳು ಅಪಾಯಕಾರಿಯಾಗಿವೆ.

ಸಮಿತಿಯ ಅಧ್ಯಕ್ಷರಾದ ಹೊಸ್ತೋಟರೇನೋ ಇದರಲ್ಲಿ ದೋಷಗಳಿರಬಹುದೆಂದು ಮೊದಲೇ ಹೇಳಿಬಿಟ್ಟಿದ್ದಾರೆ. ದೋಷಗಳಿದ್ದರೆ ಅದಕ್ಕೆ ಹೊಣೆ ಯಾರು?  ಅದನ್ನು  ತಿದ್ದುವುದು  ಹೇಗೆ? ಮೊದಲಾದ ಪ್ರಶ್ನೆಗಳಿಗೆ ಸಮಿತಿಯಲ್ಲಿ ಇನ್ನೂ ಬದುಕಿರುವ ತಜ್ಞರು ಉತ್ತರದಾಯಿಯಾಗಿರುತ್ತಾರೆ.  ಈ ಕುರಿತು ಇಲ್ಲಿ ಬರೆದ ಬರಹಗಳು ಆತ್ಯಂತಿಕವೆಂದು ನಾವು ಹೇಳುತ್ತಿಲ್ಲ. ಈ ಕುರಿತು ಸಾರ್ವಜನಿಕ ಚರ್ಚೆಯಾಗಲಿ ಮತ್ತು ದೋಷಪೂರ್ಣವಾದ ಪಠ್ಯವನ್ನು  ಅನುಸರಿಸುವ  ವಿದ್ಯಾರ್ಥಿಗಳಿಗೆ  ಇದರಲ್ಲಿ ಇರುವುದೆಲ್ಲ  ಸರಿಯಾದುದಲ್ಲ  ಎಂಬ  ಕನಿಷ್ಠ ಮಾಹಿತಿಯಾದರೂ ದೊರೆತರೆ ಆಗ ಪಠ್ಯದಿಂದುಂಟಾಗುವ ಅಪಾಯ  ಕೆಲಮಟ್ಟಿಗದರೂ  ಕಡಿಮೆಯಾಗಬಹುದು.

*

ಯಕ್ಷಗಾನ ಪಠ್ಯಪುಸ್ತಕದ ಕುರಿತು ನಾರಾಯಣ ಯಾಜಿ ಬರೆದ ಲೇಖನ  ಇಲ್ಲಿದೆ:
ಯಕ್ಷಗಾನ ಪಠ್ಯ: ಕಲೆಗೆ ತೊಡಕುಂಟು ಮಾಡುವ ಪ್ರಮಾದಗಳು