ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ, ವಶಿಷ್ಠನಿಂದ ತೊಡಗಿ ಗಧಾಯುದ್ಧದ ಕೌರವನವರೆಗೆ ಯಾವುದಾದರೂ ಆದೀತು. ಯಜಮಾನರ ಮಾನ ಉಳಿಸಬಲ್ಲ ಕಲಾವಿದ ಇದ್ದರೆ ಅದು ಹಡಿನಬಾಳರು ಮಾತ್ರ.
ಇತ್ತೀಚೆಗೆ ತೀರಿಕೊಂಡ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರೆದ ಲೇಖನ

 

ಒಮ್ಮೊಮ್ಮೆ ಕಾಲನ ಮೇಲೆ ಅಪರಿಮಿತ ಸಿಟ್ಟು. ಬದುಕಬೇಕಾದ ಜೀವಗಳನ್ನೆಲ್ಲ ನಿಷ್ಕರುಣೆಯಿಂದ ಸೆಳೆದೊಯ್ಯುವ ಕಾಲವನ್ನು ಕಂಡಾಗ ಕುವೆಂಪು ಅವರ “ಏಕೆ ಕುಣಿವೆ ತೂಕ ತಪ್ಪಿ ಸಾಕು ಕಾಲ ಭೈರವ” ಎನ್ನುವ ಹಾಡು ನೆನಪಿಗೆ ಬರುತ್ತದೆ. ಈ ವರ್ಷವಂತೂ ಇರಬೇಕಾದ ಜೀವಗಳೆಲ್ಲ ಕಾಲನ ಹೊಡೆತಕ್ಕೆ ನಲುಗಿಹೋಗಿಬಿಟ್ಟಿವೆ. ಯಕ್ಷಗಾನದ ಪ್ರಸಿದ್ಧ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರನ್ನು ಕಳಕೊಂಡಮೇಲೆ ನನ್ನೊಳಗಿನ ತಳಮಳ ಇನ್ನಷ್ಟು ಹೆಚ್ಚಾಗಿದೆ.

ಹೊನ್ನಾವರ ತಾಲೂಕಿನ ಶರಾವತಿಯ ದಂಡೆ ಅದರಲ್ಲೂ ಗೇರುಸೊಪ್ಪಾದಿಂದ ಹೊನ್ನಾವರದವರೆಗಿನ ಪ್ರದೇಶದ ಪ್ರತಿಯೊಂದು ಹಳ್ಳಿಯೂ ಯಕ್ಷಗಾನವನ್ನೇ ಉಸಿರಾಡಿಸುತ್ತಿದೆಯೋ ಏನೋ ಎಂದೆನಿಸದಿರದು. ಇಲ್ಲಿನ ಗಾಳಿ, ಶಾಂತವಾಗಿ ಹರಿಯುವ ಶರಾವತಿ, ಅಡಿಕೆ ತೆಂಗುಗಳ ಓಲಾಟ, ಹಿಂದಕ್ಕೆ ರಂಗಸ್ಥಳದ ಹಿಂದಿನ ಪರದೆಯಂತೆ ನಿಂತ ಗುಡ್ಡ ಬೆಟ್ಟಗಳ ಹಿನ್ನೆಲೆ ಇವೆಲ್ಲ ಇಡೀ ಈ ಪ್ರದೇಶವನ್ನೇ ಒಂದು ವಿಸ್ತಾರವಾದ ಬಯಲು ರಂಗಭೂಮಿಯನ್ನಾಗಿಸಿದೆಯೋ ಎಂದು ಎನ್ನಿಸದಿರದು.

ಲಾಗಾಯಿತಿನಿಂದಲೂ ಅದು ತೆಂಕು ಇರಲಿ ಬಡಗಿನ ಮೇಳವೇ ಆಗಿರಲಿ ಅಲ್ಲಿನ ಮೇಳಗಳ ಮುಖ್ಯ ಪಾತ್ರಗಳಿಗೆ ಪ್ರಮುಖವಾದ ಕಲಾವಿದರು ಯಾರು ಎಂದು ವಿವರ ನೋಡಿದರೆ ಅದರಲ್ಲಿ ಒಂದು ನಾಲ್ಕೈದಾದರೂ ಈ ಭಾಗದ ಹೆಸರೇ ಕಾಣಸಿಗುತ್ತದೆ. ಅಣ್ಣುಹಿತ್ತಲು ಸದಾನಂದ ಹೆಗಡೆ, ಮೂಡ್ಕಣಿ ನಾರಾಯಣ ಹೆಗಡೆ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರಿನ ಯಾಜಿ ಬಂಧುಗಳು, ಜಲವಳ್ಳಿ ವೆಂಕಟೇಶ ರಾವ್ ರಿಂದ ಹಿಡಿದು ಇಂದಿನ ಕೃಷ್ಣ ಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆಯವರವರೆಗೆ ಎಲ್ಲರೂ ಈ ಭಾಗದವರೆ. ಇಂದಿಗೂ ಯಕ್ಷಗಾನ ರಂಗದಲ್ಲಿ ಪ್ರಚಲಿತವಾದ ವ್ಯವಸಾಯಿ ಮೇಳದ ಮಾತೆಂದರೆ ಬಂಡವಾಳಕ್ಕೆ ದಕ್ಷಿಣ ಕನ್ನಡದವರು ಬೇಕು; ಮೇಳ ಯಶಸ್ವಿಯಾಗಿ ನಡೆಯಲು ಹೊನ್ನಾವರದ ಕಲಾವಿದರು ಬೇಕು ಎನ್ನುವದು. ಈ ಮಣ್ಣಿನಲ್ಲಿ ಈ ಎಲ್ಲ ಪ್ರಸಿದ್ಧ ಕಲಾವಿದರುಗಳ ನಡುವೆ ಮರೆಯದೇ ಹೆಸರಿಸಲೇ ಬೇಕಾದ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರು.

ಸುಮಾರು ಐದು ಅಡಿ ಆರು ಇಂಚಿನ ಎತ್ತರದ ಗೌರವ ವರ್ಣದ ತುಂಬು ಮುಖದ ಶ್ರೀಪಾದ ಹೆಗಡೆಯವರನ್ನು ಸಾದಾ ಇರುವಾಗ ನೋಡಿದರೆ ಅವರು ಓರ್ವ ಸಾಮಾನ್ಯ ವ್ಯಕ್ತಿಯಂತೆ ಅಪರಿಚಿತರಿಗೆ ಕಾಣಿಸುತ್ತಾರೆ. ಸಾಮಾನ್ಯವಾಗಿ ಸ್ವಲ್ಪ ನಿಧಾನ, ಮಾತು ಅಷ್ಟೇ ತುಂಬಾ ಮೆಲ್ಲಗೆ ಅದೇ ಹೊತ್ತಿನಲ್ಲಿ ಸಿಟ್ಟು ಬಂತೆಂದರೆ ತಟ್ಟನೆ ಸಿಡಿದೇಳುವ ಪ್ರಕೃತಿ, ಎದುರು ಯಾರೇ ಸಿಗಲಿ ಗೌರವದಿಂದ ಬಹುವಚನದಲ್ಲೇ ಮಾತನಾಡಿಸುವ ಅವರ ವ್ಯಕ್ತಿತ್ವ ಎಂತವರಲ್ಲಿಯೂ ಅತ್ಮೀಯರನ್ನಾಗಿಸಿಕೊಳ್ಳುವ ಗುಣ ಅವರಲ್ಲಿತ್ತು. ಸರಳ ಸ್ವಭಾವದ ಈ ವ್ಯಕ್ತಿ ಯಕ್ಷಗಾನದಲ್ಲಿ ವೇಷಹಾಕಿ ರಂಗಸ್ಥಳಕ್ಕೆ ಬಂದರೋ ತನ್ನ ಗಂಭೀರ ನಿಲುವು, ಸ್ವರ, ಗತ್ತುಗಾರಿಕೆಯಿಂದ ಇಡೀ ಸಭೆಯನ್ನೇ ಸೂಜಿಗಲ್ಲಿನಂತೆ ಸೆಳೆದುಬಿಡುತ್ತಾರೆ. ಈ ವ್ಯಕ್ತಿತ್ವದ ಬಣ್ಣಗಾರಿಕೆಯಲ್ಲಿ ಒಂದು ಸೆಳೆತವಿದೆ. ಇಲ್ಲಿ ಅಬ್ಬರವಿಲ್ಲ. ಲಯಗಾರಿಕೆಗೆ ಕೊರತೆ ಖಂಡಿತಾ ಇಲ್ಲ. ಮಾತಿನಲ್ಲಿ ಬೇಕಾದದ್ದೋ ಬೇಡವಾದದ್ದೋ ಹೇಳುವ ಕ್ರಮವಿಲ್ಲ. ಆದರೆ ಥಟ್ಟನೆ ಹೊರಡುವ ಬಾಣದಂತೆ ಉತ್ತರಗಳನ್ನು ಸಮಯಸ್ಪೂರ್ತಿಯಿಂದ ಕೊಡುವ ಪ್ರತಿಭೆಯಿದೆ.

ಯಕ್ಷಗಾನ ರಂಗಭೂಮಿಯಲ್ಲಿ ಮಹಾಬಲ ಹೆಗಡೆಯವರನ್ನು ನೆನಪಿಸಬಲ್ಲ ಕಲಾವಿದರ್ಯಾರಾದರೂ ಇದ್ದರೆ ಅದು ಹಡಿನಬಾಳ ಶ್ರೀಪಾದ ಹೆಗಡೆಯವರೆ ಸರಿ.

ಇವರು ಹಡಿನಬಾಳರೆಂದೇ ಪರಿಚಿತರಾದರೂ ಮೂಲ ಗುಣವಂತೆಯ ಸಮೀಪದ ಮಾಳ್ಕೋಡಿನವರು. ಈ ಮಾಳ್ಕೋಡು ಗೇರುಸೊಪ್ಪಾ ಸೀಮೆಯ ಹೆಗಡೆ ಮನೆತನದವರಿಗೆ ಮೂಲಸ್ಥಳ. ಇಲ್ಲಿನ ಕ್ಷೇತ್ರಪಾಲೇಶ್ವರ ದೇವರು ಇವರಿಗೆಲ್ಲಾ ಕುಲದೇವರು. ಯಾವ ಯಾವ ಕಾರಣಕ್ಕೋ ಇಲ್ಲಿಂದ ಅನೇಕ ಕುಟುಂಬ ಗುಣವಂತೆಯಿಂದ ಹಿಡಿದು ಬೇರೆ ಎಲ್ಲಾ ಕಡೆ ವಲಸೆ ಹೋಗಿರುತ್ತಾರೆ. ಕೆರೆಮನೆ ಕುಟುಂಬಕ್ಕೂ ಹಡಿನಬಾಳ ಶ್ರೀಪಾದ ಹೆಗಡೆಯವರು ದಾಯಾದಿಗಳು. ಮತ್ತು ಹವ್ಯಕರಿಗೆ ಸಹಜವಾಗಿರುವಂತೆ ಇವರಿಗೂ ಬಾಲ್ಯದಿಂದಲೇ ಸಹಜವಾಗಿ ಯಕ್ಷಗಾನದ ಕಡೆ ಆಸಕ್ತಿ ಇತ್ತು. ಹಡಿನಬಾಳದಲ್ಲಿ ತನ್ನ ಭಾವ ಸತ್ಯಹೆಗಡೆಯವರು ಗುಂಡಬಾಳಾ ಮೇಳವನ್ನು ನಡೆಸುತ್ತಿದ್ದದ್ದರಿಂದ ತನ್ನೂರಿನ ಸಮೀಪದಲ್ಲಿರುವ ಇಲ್ಲಿನ ಆಟವನ್ನು ನೊಡಲು ಇವರೂ ಹೋಗುತ್ತಿದ್ದರು. ಉತ್ತರ ಕನ್ನಡದ ಯಕ್ಷಗಾನ ದಿಗ್ಗಜರೆಲ್ಲಾ ಒಂದಲ್ಲಾ ಒಂದು ದಿನ ಇಲ್ಲಿ ಬಂದು ಸೇವೆ ಮಾಡಿ ಹೋಗುತ್ತಿದ್ದರು. ಹೆಚ್ಚಿನ ಎಲ್ಲಾ ಪ್ರಸಿದ್ಧ ಕಲಾವಿದರೂ ಇಲ್ಲಿಂದಲೇ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದಾರೆ.

ಹೀಗೆ ಪ್ರಾರಂಭವಾದ ಇವರ ಕಲಾ ಆಸಕ್ತಿಯ ಮೇಲೆ ಕೆರೆಮನೆ ಮಹಾಬಲ ಹೆಗಡೆಯವರ ಅಭಿನಯ ಅಪಾರ ಪ್ರಭಾವವನ್ನು ಬೀರಿತು. ಮಹಾಬಲ ಹೆಗಡೆಯವರೂ ಸಹ ತಮ್ಮಲ್ಲಿದ್ದ ವಿದ್ಯೆಯನ್ನು ಆಸಕ್ತಿತೋರಿದವರಿಗೆ ಪ್ರೀತಿಯಿಂದಲೇ ಧಾರೆ ಎರೆಯುತ್ತಿದ್ದರು. ಅವರ ವೇಷವಿರುವಲ್ಲಿ ಅವರೊಂದಿಗೆ ಚಿಕ್ಕ ಪುಟ್ಟ ವೇಷದಿಂದ ತೊಡಗಿ ಅವರ ಎದುರು ವೇಷಧಾರಿಯಾಗುವಷ್ಟು ಎತ್ತರಕ್ಕೆ ಬೆಳೆದಿದ್ದು ಹಡಿನಬಾಳ ಶ್ರೀಪಾದ ಹೆಗಡೆಯವರ ಸಾಧನೆ.

ಶ್ರೀಪಾದ ಹೆಗಡೆಯವರ ಅಭಿನಯ ಮುಖ್ಯವಾಗುವದು ಅವರಲ್ಲಿರುವ ರಂಗಪ್ರಜ್ಞೆಯಿಂದ. ರಂಗಸ್ಥಳವೆನ್ನುವದು ಲೋಕ ವ್ಯವಹಾರದ ಅನುಕರಣವಾದರೂ ಅದನ್ನು ರಂಗಭೂಮಿಯಮೇಲೆ ಒಂದು ಮರ್ಯಾದಿತವಾಗಿ ಆಡಿತೋರಿಸಬೇಕೆನ್ನುವದು ಅವರ ನಿಲುವಾಗಿದೆ. ಕಲೆಯ ಕೃತಕತೆ, ಲೋಕವ್ಯವಹಾರದ ಸಹಜತೆ ಎರಡೂ ಇವರ ಅಭಿನಯದಲ್ಲಿ ಮಿಳಿತವಾಗಿದ್ದವು. ಯಾವತ್ತಿಗೂ ಅವರ ವೇಷದ ಪ್ರವೇಶ ಒಂದು ಮಿಂಚನ್ನು ಸೃಷ್ಠಿಸುವ ಪ್ರವೇಶವಾಗಿರಲಿಲ್ಲ. ಬಂದತಕ್ಷಣ ಚಪ್ಪಾಳೆಯನ್ನು ಹೊಡೆಸಿಕೊಳ್ಳುವ ಜಾಯಮಾನದವರೂ ಅವರಾಗಿರಲಿಲ್ಲ. ಹಾಗಂತ ಅದು ನೀರಸವೂ ಅಲ್ಲ. ಅವರಲ್ಲಿ ಇಂತಹ ಹೊತ್ತಿನಲ್ಲಿ ತನ್ನ ಗುರು ಮಹಾಬಲ ಹೆಗಡೆಯರ ನೆನಪಾಗುತ್ತಿತ್ತು. ಹಾಗಾಗಿ ರಂಗ ಮರ್ಯಾದೆ ಮೀರದೇ ಗತ್ತಿನಲ್ಲಿ ಪ್ರವೇಶಿಸುತ್ತಿದ್ದರು. ಯಾವಾಗ ಅಭಿನಯದಲ್ಲಿ ತೊಡಗಿಕೊಂಡರೋ ತಾನು ಮಾಡುವ ಪಾತ್ರದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು. ಗತ್ತು, ದಿಟ್ಟ ನೋಟ, ಭವ್ಯವಾದ ಆಕಾರ, ಗಂಭೀರವಾದ ಸ್ವರದೊಂದಿಗೆ ಪಾತ್ರವೇ ತಾನಾಗಿ ಹೋಗುತ್ತಿದ್ದರು. ಇದನ್ನು ಅವರಿಗೆ ತುಂಬಾ ಇಷ್ಟವಾದ ಹನುಮಂತನ ಪಾತ್ರದಲ್ಲಿ ನೋಡಬಹುದಿತ್ತು.

ಭಕ್ತಿ ರಸದಲ್ಲಿ ರಾಮನನ್ನು ಭಜಿಸುತ್ತಾ ತನ್ನೊಳಗೆ ಹನುಮಂತನ ಆವೇಶವಾಗಿಬಿಡುತ್ತಿತ್ತು. ಹಿಂದೆ ಅನೇಕ ಕಲಾವಿದರು ಹನುಮಂತನ ವೇಶಹಾಕಿಕೊಂಡು ಮರ ಹತ್ತುವದು, ಲಾಗಹಾಕುವದು ಎಲ್ಲ ಮಾಡೀ ನಿಜವಾಗಿಯೂ ಮರ್ಕಟನಂತೇ ವರ್ತಿಸುತ್ತಿದ್ದಂತೆ. ಇವರು ಅನುಕರಿಸುತ್ತಿರಲಿಲ್ಲ. ಇಲ್ಲಿ ಅಭಿನಯ ಎನ್ನುವದರ ಅರ್ಥವಾದ ಪಾತ್ರಧಾರಿ ತಾನು ಎನ್ನುವ ಪ್ರಜ್ಞೆಯನ್ನು ಕಾಪಿಟ್ಟುಕೊಂಡೇ ಭಕ್ತಿರಸವನ್ನು ನಿರೂಪಿಸುತ್ತಿದ್ದರು. ಇಂತಹ ಅಭಿನಯವನ್ನು ತೋರಿಸಲು ಪಾತ್ರಧಾರಿಗೆ ಬಹು ಕಠಿಣವಾದ ಪರಿಶ್ರಮ ಮತ್ತು ಕಲೆಯ ಕುರಿತಾದ ನಿರ್ವಚನದ ಅರಿವಿರಬೇಕಾಗುತ್ತದೆ. ಹಾಗಾಗಿ ಲಂಕಾ ದಹನದಲ್ಲಿ ಜಾಂಭವ

“ನೀನೆ ಕಲಿ ಹನುಮ ನಮ್ಮವರಲಿ
ನೀನೆ ಕಲಿ ಹನುಮ. . . .”

ಎಂದು ಹನುಮನೊಳಗಿನ ಹನುಮತ್ವವನ್ನು ಜಾಗ್ರತಗೊಳಿಸುವ ಸಂದರ್ಭದಲ್ಲಿ ಎದ್ದುನಿಲ್ಲುವ ಸನ್ನಿವೇಶದಲ್ಲಿ ಶ್ರೀಪಾದ ಹೆಗಡೆಯವರ ಅಭಿನಯ ತುಂಬಾ ಅರ್ಥಪೂರ್ಣವಾಗಿರುತ್ತಿತ್ತು. ಈ ಪಾತ್ರಕ್ಕೆ ಕೆರೆಮನೆ ಶಂಭು ಹೆಗಡೆಯವರು ಹೊಸ ದಾರಿ ಹಾಕಿಕೊಟ್ಟಿದ್ದಾರೆ. ಅವರ ಹನುಮಂತ ಎದ್ದು ನಿಂತು ಮಹೇಂದ್ರ ಪರ್ವತವನ್ನು ಮೆಟ್ಟಿ ಲಂಕೆಗೆ ಹಾರುವ ಅಭಿನಯ ಮೋಡಿಮಾಡುವಂತಹದ್ದು. ಆ ಮಟ್ಟವನ್ನು ಮೀರಿ ಮತ್ತೊಬ್ಬರು ಅಭಿನಯ ತೋರುವದು ಕಷ್ಟವೇ ಸರಿ. ಇಲ್ಲಿ ಹಡಿನಬಾಳರು ಅವರದೇ ರೀತಿಯಲ್ಲಿ ಅಭಿನಯಿಸಿ ತೋರಿಸುತ್ತಿದ್ದರೂ ಅವರಷ್ಟು ವೈವಿಧ್ಯಮಯವಾಗಿ ಕುಣಿಯಲು ಹೋಗುತ್ತಿರಲಿಲ್ಲ. ತನ್ನ ಮಿತಿಯ ಅರಿವಿದ್ದ ಕಲಾವಿದ ಆಯ್ದುಕೊಳ್ಳುವ ಮಾರ್ಗ ಇದು. ಅದೇ ರೀತಿ ಮಾಡಿದರೆ ಅದು ಕಾರ್ಬನ್ ಪ್ರತಿ ಆಗುವ ಅಪಾಯವಿರುವದರಿಂದ ಆ ಮಾರ್ಗದಲ್ಲಿ ಪ್ರಾರಂಭಿಸಿದರೂ ನಂತರ ತನ್ನದೇ ಆದ ಮಾರ್ಗದಲ್ಲಿ ಆತ ಸಾಗಬೇಕಾಗುತ್ತದೆ. ಹಾಗಾಗಿ ಇಲ್ಲಿ ಶ್ರೀಪಾದ ಹೆಗಡೆಯವರು ವಾಚಿಕದಲ್ಲಿ ರಾಮನ ಭಜನೆ ಮತ್ತು ತನ್ನ ಕೈಂಕರ್ಯದ ಕುರಿತಾದ ಹೊಣೆಯನ್ನು ತೋರಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದು ವಾಚಿಕವಾಗಿರುತ್ತಿತ್ತೇ ಹೊರತು ವಾಚಾಳಿತನವಾಗದಂತೆ ಜಾಗ್ರತೆ ವಹಿಸುತ್ತಿದ್ದರು.

ಲಂಕಾದಹನದ ಹನುಮಂತನ ಪಾತ್ರವನ್ನು ಕೊಂಡದಕುಳಿ ಲಕ್ಷ್ಮಣ ಹೆಗಡೆಯವರು ತುಂಬಾ ಚನ್ನಾಗಿ ಮಾಡುತ್ತಿದ್ದರಂತೆ. ಆ ಹನುಮಂತನನ್ನು ಹಡಿನಬಾಳರು ನೆನಪಿಸುತ್ತಿದ್ದರೆಂದು ಹಿರಿಯರು ಹೇಳುವದನ್ನು ಕೇಳಿದ್ದೇನೆ. ರಾವಣನ ಎದುರು ಕುಳಿತುಕೊಳ್ಳುವ ಸಂದರ್ಭದಲ್ಲಿಯಾಗಲೀ ಅವನೊಟ್ಟಿಗೆ ಚೇಷ್ಟೆ ಮಾತುಗಳನ್ನು ಆಡುವ ಹೊತ್ತಿನಲ್ಲಾಗಲೀ ಹಿತಮಿತವಾಗಿ ಮಾತನಾಡುತ್ತಿದ್ದರೇ ಹೊರತು ಅಲ್ಲಿ ಚರ್ಚೆಯೆನ್ನುವದು ಇರುತ್ತಿರಲಿಲ್ಲ. ಆದರೆ ಸೀತೆಯನ್ನು ಅಶೋಕವನದಲ್ಲಿ ಕಂಡಮೇಲೆ ರಾಮನ ವಿಷಯವನ್ನು ಹೇಳುವ ಹೊತ್ತಿನಲ್ಲಿ ಅಮ್ಮನನ್ನು ಕಳಕೊಂಡ ಚಿಕ್ಕ ಮಗುವಿಗೆ ಆ ಅಮ್ಮ ಸಿಕ್ಕಮೇಲೆ ಹೇಗೆ ಲಲ್ಲೆಗರೆಯುವದೋ; ಗುಡ್ಡದಲ್ಲಿ ಮೇದು ಮನೆಗೆ ಬಂದ ಆಕಳನ್ನು ನೋಡಿ ಕರು ಹೇಗೆ ಜಿಗಿದಾಡುವದೋ ಆ ರೀತಿಯ ಭಾವವನ್ನು ವ್ಯಕ್ತಪಡಿಸುತ್ತಿದ್ದರು. ಅವರ ಹನುಮಂತ ಒಂದೇ ಅಲ್ಲ, ಮಾರುತಿ ಪ್ರತಾಪದ ಹನುಮಂತ, ವೀರಮಣಿಕಾಳಗದ ಹನುಮಂತ ಹೀಗೆ ವರ್ತಮಾನ ರಂಗಭೂಮಿಯಲ್ಲಿ ಹನುಮಂತನೆಂದರೆ ಅದಕ್ಕೆ ಶ್ರೀಪಾದ ಹೆಗಡೆಯವರೇ ಆಗಬೇಕೆನ್ನುವಷ್ಟರ ಮಟ್ಟಿಗೆ ಅವರು ಪ್ರಸಿದ್ಧರಾಗಿದ್ದರು. ಭಕ್ತಿ ಪ್ರಧಾನ ಪಾತ್ರಗಳಾದ ವಿದುರ, ಅಕ್ರೂರ ಮುಂತಾದ ಪಾತ್ರಗಳೂ ಸಹ ಹೀಗೆಯೇ ಸಾಗುತ್ತಿತ್ತು. ಇಷ್ಟು ಸಹಜವಾಗಿ ರಂಗಸ್ಥಳದಮೇಲೆ ಭಕ್ತಿಭಾವವನ್ನು ತೋರುವವರು ವಿರಳ.

ಸ್ವಲ್ಪ ನಿಧಾನ, ಮಾತು ಅಷ್ಟೇ ತುಂಬಾ ಮೆಲ್ಲಗೆ ಅದೇ ಹೊತ್ತಿನಲ್ಲಿ ಸಿಟ್ಟು ಬಂತೆಂದರೆ ತಟ್ಟನೆ ಸಿಡಿದೇಳುವ ಪ್ರಕೃತಿ, ಎದುರು ಯಾರೇ ಸಿಗಲಿ ಗೌರವದಿಂದ ಬಹುವಚನದಲ್ಲೇ ಮಾತನಾಡಿಸುವ ಅವರ ವ್ಯಕ್ತಿತ್ವ ಎಂತವರಲ್ಲಿಯೂ ಅತ್ಮೀಯರನ್ನಾಗಿಸಿಕೊಳ್ಳುವ ಗುಣ ಅವರಲ್ಲಿತ್ತು.

ಕಾರ್ತಿವೀರ್ಯಾರ್ಜುನದ ರಾವಣ ಪಾತ್ರ ಅವರಿಗೆ ತುಂಬಾ ಹೆಸರು ಕೊಟ್ಟ ಪಾತ್ರಗಳಲ್ಲೊಂದು. ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಾದ ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ, ಕೊಂಡದ ಕುಳಿ ರಾಮಚಂದ್ರ ಹೆಗಡೆಯವರಿಂದ ತೊಡಗಿ ಕೆರೆಮನೆ ಶಿವಾನಂದ ಹೆಗಡೆಯವರೆಲ್ಲರ ಎದುರು ಅವರು ರಾವಣನ ವೇಷಹಾಕಿದ್ದಾರೆ. ರಾವಣನ ಪ್ರವೇಶದಿಂದಲೇ ಅವರ ದರ್ಪ, ಧೀರದತ್ತತನ ರಂಗವನ್ನು ಆಳುತ್ತಿತ್ತು. ನಿಜ ಬದುಕಿನಲ್ಲಿಯೂ ದಷ್ಟ ಪುಷ್ಟವಾಗಿ ಇರುವ ಇವರಿಗೆ ರಾವಣನಂತಹ ಪಾತ್ರ ತುಂಬಾ ಚನ್ನಾಗಿ ಒಪ್ಪುತ್ತಿತ್ತು. ರಾವಣನ ಓಲಗದಲ್ಲಿ ಆಜಾನುಬಾಹುವಾಗಿ ಇಡೀ ರಂಗಸ್ಥಳವನ್ನು ಆವರಿಸಿಬಿಡುತ್ತಿದ್ದರು. ಅದು ತನಕ ಪ್ರೇಕ್ಷಕರು ಕಾರ್ತವೀರ್ಯಾರ್ಜುನನ ಶೃಂಗಾರದ ಪದ್ಯವನ್ನು ನೋಡಿ ಮೈ ಮರೆತಿರುವ ಹೊತ್ತಿನಲ್ಲಿ ಅಬ್ಬರದೊಂದಿಗೆ ರಾವಣನ ಪೌರುಷವನ್ನು ಆತನ ಲಂಕಾ ಸಾಮ್ರಾಜ್ಯದ ವೈಭವವನ್ನು ತೋರಿಸುವ ಗತ್ತಿನಲ್ಲಿ ಪ್ರೇಕ್ಷಕ ಹಿಂದಿನ ಎಲ್ಲ ರಸಗಳನ್ನು ಮರೆತು ಲೋಕ ರಾವಣನೊಟ್ಟಿಗೆ ಸಾಗಿಬಿಡುತ್ತಿದ್ದ. ಎಲ್ಲಿಯೂ ಅವರ ಮಾತುಗಳು ಸಭ್ಯತೆಯ ಮೇರೆಯ ಗಡಿ ದಾಟುವದಿಲ್ಲ. ಎದುರಾಳಿಯನ್ನು ಸುಖಾ ಸುಮ್ಮನೇ ನೋಯಿಸುವದಿಲ್ಲ. ಹಾಗಂತ ತಾನು ವಹಿಸಿದ ಪಾತ್ರ ಕಳೆಗುಂದಬಾರದೆನ್ನುವದನ್ನು ಎಚ್ಚರವಹಿಸಿ ಹದನಾಗಿ ತನ್ನ ಪಾತ್ರವನ್ನು ಬೆಳೆಸುತ್ತಿದ್ದರು.

ಒಮ್ಮೆ ಪ್ರಸಿದ್ಧ ಕಲಾವಿದರ ಕಾರ್ತವೀರ್ಯನ ಎದುರು ಇವರು ರಾವಣ. ಅವರೋ ಆ ಪಾತ್ರಕ್ಕೆ ಸಾಟಿಯಿಲ್ಲದಂತೇ ಮೆರೆದವರು. ಇವರು ಆಗ ತಾನೇ ಪ್ರವರ್ಧಮಾನದಲ್ಲಿ ಬರುತ್ತಿರುವ ನಟ. ರಾವಣನೊಡನೆ ಮುಖಾ ಮುಖಿಯಾಗಿ ಅವರದ್ದು ಮತ್ತು ರಾವಣರ ನಡುವೆ ಜೋಡಿ ಪದ್ಯಗಳ ಕುಣಿತ ಜೋರಾಗಿ ಸಾಗಿತ್ತು. ರಾವಣ ತನ್ನ ಪರಾಕ್ರಮವನ್ನು ವಿವರಿಸುವ ಭಾಗ ಶ್ರೀಪಾದ ಹೆಗಡೆಯವರು ಚನ್ನಾಗಿಯೇ ನಿರ್ವಹಿಸುತ್ತಿದ್ದರು. ಇಂತಹ ಹೊತ್ತಿನಲ್ಲಿ ಕಾರ್ತಿವೀರ್ಯಾರ್ಜುನ ರಾವಣ ಬಲಿಯ ಹತ್ತಿರ ಸೋತ ಪದ್ಯವನ್ನು ಹೇಳುತ್ತಾ ನಾನಾ ವಿಧದ ಅಭಿನಯವನ್ನು ಮಾಡುತ್ತಾ ಸುಮಾರು ಹೊತ್ತು ಕುಣಿದರು. ಅರ್ಥಗಾರಿಕೆಯ ಒಂದು ಹಂತದಲ್ಲಿ ಎಲ್ಲೆ ಮೀರಿ ಇವರನ್ನು ನಿಂದಿಸಿದರು. ಅವರೇನೂ ಮಾತುಗಾರರಾಗಿರಲಿಲ್ಲ. ಆಗ ಶ್ರೀಪಾದ ಹೆಗಡೆಯವರು “ಹಿಮಾಲಯದಲ್ಲಿ ಹುಟ್ಟಿ ಸಾಗರವನ್ನು ಸೇರುವ ಗಂಗಾನದಿ ಬಹು ಪ್ರಸಿದ್ಧಿ. ಹಾಗಂತ ಅದು ತನಗೆ ಎದುರಾದ ಎಲ್ಲವನ್ನು ಕೊಚ್ಚಿಕೊಂಡು ಸಾಗಲಿಲ್ಲ. ಗಡಸು ಬಂಡೆಯನ್ನು ಬಳಸಿಕೊಂಡು ತಗ್ಗಿರುವಲ್ಲಿ ಹಾರುತ್ತಾ, ಬಯಲಲ್ಲಿ ನಿಧಾನವಾಗಿ ಹರಿಯುತ್ತಾ ಸಾಗರವನ್ನು ಸೇರುವಂತೆ ತನ್ನ ಬದುಕು” ಎನ್ನುವ ಉತ್ತರ ಕೊಟ್ಟರು.

ಇಲ್ಲಿ ಎದುರಿನ ಪಾತ್ರಧಾರಿಯನ್ನು ನಿಂದಿಸುವ ಯಾವ ಉತ್ತರವೂ ಇದಾಗಿರಲಿಲ್ಲ. ಹಾಗಂತ ರಾವಣ ರಂಗದಲ್ಲಿ ತನ್ನ ಘನತೆಯನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಎರಡು ಸಾಲಿನಲ್ಲಿ ಕಾವ್ಯಮಯವಾಗಿ ಎದುರು ಕಲಾವಿದನ ಗೌರವಕ್ಕೆ ಕೊರತೆಯುಂಟಾಗದಂತೆ ಹೇಳಿದ ಉತ್ತರ ರಾವಣನ ಪಾತ್ರವನ್ನು ಎತ್ತರಕ್ಕೇರಿಸಿತ್ತು. ಅದೇ ರೀತಿ ಸಂಧಾನದ ಕೌರವ, ಬಲರಾಮ, ಶೂರ್ಪನಖಿ, ವಾಲೀ, ಸುಗ್ರೀವ, ಸುಮಾರು ಎಲ್ಲಾ ಪ್ರಸಿದ್ಧ ಪ್ರಸಂಗದ ಅರ್ಜುನ; ಈ ಸಾಲಿನಲ್ಲಿ ಯಾವ ಪಾತ್ರಮಾಡಿಲ್ಲ ಎನ್ನುವದನ್ನು ಹುಡುಕುವದು ಕಷ್ಟ.

ಯಕ್ಷಗಾನದಲ್ಲಿ ಒಂದೊಂದು ಪಾತ್ರವೂ ನಟಕೇಂದ್ರೀಕೃತ. ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ, ವಶಿಷ್ಠನಿಂದ ತೊಡಗಿ ಗಧಾಯುದ್ಧದ ಕೌರವನವರೆಗೆ ಯಾವುದಾದರೂ ಆದೀತು. ಯಜಮಾನರ ಮಾನ ಉಳಿಸಬಲ್ಲ ಕಲಾವಿದ ಇದ್ದರೆ ಅದು ಹಡಿನಬಾಳರು ಮಾತ್ರ. ಆ ದಿನ ಪ್ರೇಕ್ಷಕನನ್ನು ಹೀಗೂ ಈ ಪಾತ್ರಗಳನ್ನು ಮಾಡಿ ಯಶಸ್ಸು ಗಳಿಸಬಹುದು ಎನ್ನುವದನ್ನು ತೋರಿಸುತ್ತಿದ್ದರು. ಮಾರನೇ ದಿನ ಮುಖ್ಯ ನಟ ಬಂದಮೇಲೆ ಯಜಮಾನರಿಗೆ ಇವರು ಮರೆತು ಹೋಗಿಬಿಡುತ್ತಿದ್ದರು. ಮೊದಲನೆಯ ದಿನ ರಾವಣನ ಪಾತ್ರದಲ್ಲಿ ವಿಜೃಂಭಿಸಿದ ಇವರು ಮಾರನೇಯ ದಿನ ವಿಭೀಷಣನ ಪಾತ್ರವನ್ನು ಮಾಡಬೇಕಾದ ಪ್ರಸಂಗ ಸಹ ಬರುತ್ತಿತ್ತು. ಅಲ್ಲೂ ಸಹ ಬೇಸರಿಸದೇ ಇವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಸುಮಾರು ಮೂವತ್ತು ವರ್ಷಗಳ ಹಿಂದೆ ಹೊಳ್ಳಾಕುಳಿಯಲ್ಲಿ ಪೆರ್ಡೂರು ಮೇಳದ ದೇವಿಮಹಾತ್ಮೆ ಆಟದಲ್ಲಿ ನಮ್ಮ ಶ್ರೀಪಾದಣ್ಣ ಚಂಡ ಮುಂಡನ ಪಾತ್ರಗಳಲ್ಲಿ ಚಂಡಾಸುರನಾಗಿ ಧೂಳುಗೇರಿದ್ದರು.

ಶ್ರೀಪಾದ ಹೆಗಡೆಯವರು ಹಾಸ್ಯಪಾತ್ರಗಳನ್ನೂ ಚನ್ನಾಗಿ ನಿರ್ವಹಿಸುತ್ತಿದ್ದರು. ಇವರ ಮಂಥರೆಯನ್ನು ನಾನು ನೋಡಿದ್ದೇನೆ. ಇಂಗ್ಲೀಷಿನಲ್ಲಿ ಬರುವ wit ತುಂಟತನವನ್ನು ಚನ್ನಾಗಿ ಅಭಿನಯಿಸಿದ್ದರು. ಇಲ್ಲಿ ಅವರು ಮಂಥರೆ ತಾನು ಬೇರೆಯವರಿಗೆ ಚಾಳಿ ಹೇಳಿದ್ದುಂಟೋ ಎಂದು ಊರ ತುಂಬಾ ತಿರುಗುತ್ತಾ ಸುದ್ದಿಯನ್ನು ಕೈಕೇಯಿಗೆಮಾತ್ರ ವರದಿ ಒಪ್ಪಿಸುವದು ತನ್ನ ಮುಖ್ಯ ಉದ್ದೇಶ ಎಂಬ ಮಾತಿನಿಂದ ಜನರನ್ನು ಸೆಳೆಯುತ್ತಿದ್ದರು. ಈ ಕಾರಣಕ್ಕೆ ತನ್ನ ದೊಣ್ಣೆಯ ಸದ್ದಾಗಬಾರದೆಂದು ಅದರ ತುದಿಗೆ ಬಟ್ಟೆಯನ್ನು ಸುತ್ತಿಕೊಂಡು ಯಾರಿಗೂ ತನ್ನ ಬರುವಿಕೆ ಗೊತ್ತಾಗದಂತೆ ನೋಡಿಕೊಳ್ಳುವದಾಗಿ ವಿವರಿಸುತ್ತಿದ್ದರು.

ತಾಳಮದ್ದಳೆಯಲ್ಲೂ ಇವರು ಪರಿಣಾಮಕಾರಿಯಾಗಿ ಅರ್ಥ ಹೇಳುತ್ತಿದ್ದರು. ತೆಂಕಿನ ಪ್ರಸಿದ್ಧ ಅರ್ಥದಾರಿ ಬರೆ ಕೇಶವ ಭಟ್ಟರ “ಶ್ರೀರಾಮ ಪರಂಧಾಮದ” ರಾಮನಿಗೆ ಇವರು ಲಕ್ಷ್ಮಣನ ಅರ್ಥ ಹೇಳಿ ಆ ಪ್ರಸಂಗ ಮುಗಿದ ತಕ್ಷಣ ಬರೆ ಕೇಶವ ಭಟ್ಟರು ಎದ್ದು ಬಂದು ಇವರನ್ನು ಅಪ್ಪಿಕೊಂಡು “ವ್ಹಾ, ನಿಜವಾದ ಲಕ್ಷ್ಮಣನನ್ನು ನೋಡಿದಂತಾಯಿತು” ಎಂದು ಆನಂದಭಾಷ್ಪ ಸುರಿಸಿದ್ದರು.

ಮೇಳದಲ್ಲಿ ಇರುವಾಗ ಹಡಿನಬಾಳರಿಗೆ ಯಕ್ಷಗಾನವೆನ್ನುವದು ಅವರ ಹೊಟ್ಟೆಪಾಡಾಗಿರಲಿಲ್ಲ. ತಮ್ಮ ಬಡತನಕ್ಕೊಂದು ಪರಿಹಾರಕಂಡುಕೊಳ್ಳುವ ಉಪಾಯವೂ ಆಗಿರಲಿಲ್ಲ. ಹಾಗಂತ ಇದೆಲ್ಲ ಅವರಿಗೆ ಅತ್ಯಂತ ಅಗತ್ಯವಿತ್ತು. ಅಂತಹ ಹೊತ್ತಿನಲ್ಲಿಯೂ ಕಲೆಯನ್ನು ಆಸ್ವಾದಿಸುವ ವ್ಯಕ್ತಿತ್ವ ಇವರದಾಗಿತ್ತು. ವೈಕ್ತಿಕ ಬದುಕಿನಲ್ಲಿ ಇವರಿಗೆ ದೇವರು ಗುರುಗಳ ಮೇಲಿನ ಭಕ್ತಿ ಕಲೆಗಿಂತಲೂ ಮೇಲ್ಪಟ್ಟದಲ್ಲಿತ್ತು. ತಾನಿರುವ ಸಂಗ ಶುಚಿಯಾಗಿರಬೇಕು ಎನ್ನುವದು ಇವರ ಬಯಕೆ. ಅಟವನ್ನಾದರೂ ಬಿಟ್ಟಾರು, ಎಲ್ಲೇ ಸನಿಹದಲ್ಲಿ ಗುರುಗಳು ಯಾರಾದರೂ ಬಂದರೆ ಅದನ್ನು ಖಂಡಿತಾ ತಪ್ಪಿಸಲಾರರು. ಅವರಲ್ಲಿ ಹೋಗಿ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲೇನಾದರೂ ಆಟವೇನಾದರೂ ಇದ್ದರೆ ಅಲ್ಲೊಂದು ಸೇವೆ ಮಾಡಿ ಕೃತಾರ್ಥಭಾವದಲ್ಲಿ ಬರುತ್ತಿದ್ದರು.

ಮೇಘದ ಒಡಲಲ್ಲಿ ಇರುವ ನೀರೆಲ್ಲಾ ಮಳೆಯಾಗುವ ಭಾಗ್ಯ ಪಡೆಯುವದಿಲ್ಲ. ಎಲ್ಲಾ ಇದ್ದೂ ಸಹ ಶ್ರೀಪಾದ ಹೆಗಡೆಯವರ ಕಲೆಯ ಧಾರೆಯೂ ಸಿಗಬೇಕಾದಷ್ಟು ಸಿಗಲಿಲ್ಲ. ಬಡತನದಲ್ಲೇ ಹುಟ್ಟಿ, ಶುದ್ಧ ಯಕ್ಷಗಾನವನ್ನು ಆರಾಧಿಸಿ ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಶ್ರೀಶ ಮತ್ತು ಜಗದೀಶರನ್ನು ತೊರೆದು ಹೊರಟೇ ಬಿಟ್ಟರು.