ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‌ಲಿಪಿ, ಮೈಲಾಂಗ್ ಎನ್ನುವ ಆ್ಯಪ್‌ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ.

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯವನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‌ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ (ಎರಡು ಭಾಗಗಳಲ್ಲಿ).

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರ ನೇರ ಪರಿಣಾಮವಿದು (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ).

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.

ತಂತ್ರಜ್ಞಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟುಕೊಟ್ಟವು.

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ.

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕವನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮ ಚಿಹ್ನೆಗಳ (ದುರು)ಪಯೋಗ:

ನಾವು ಬರೆಯುವಾಗ ಬಹಳಷ್ಟು ವಿರಾಮ ಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ, ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು.

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ.

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ.

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿʼ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…ʼ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನ್ನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಲಿಪ್ಸನ್ನು ತಿದ್ದುವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಕಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ.

(ಕನ್ನಡದ ಬಗ್ಗೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮುಂದಿನ ಅಂಕಣದಲ್ಲಿ ಬರೆಯುತ್ತೇನೆ).