‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’, ಒಂದು ರೀತಿ ಯುದ್ಧದ ನೈತಿಕ ವ್ಯಂಗ್ಯದ ಕನ್ನಡಿ. ಯುದ್ಧ ಬರೀ ರಾಷ್ಟ್ರ, ರಾಷ್ಟ್ರವನ್ನು ಅತ್ಯಾಚಾರ ಮಾಡುವ ಕ್ರಮ ಮಾತ್ರವಲ್ಲ, ಬದಲು ರಾಷ್ಟ್ರವು ಪ್ರತೀ ಎದುರಾಳಿಯ ವಿರುದ್ಧ ಉಂಟುಮಾಡುವ, ಕೈಗೊಳ್ಳುವ ಸಂಗತಿಗಳೂ ಕೂಡಾ ನೈತಿಕವೇ ಆಗುತ್ತದೆ ಎನ್ನುವುದನ್ನೂ ಈ ಸಿನಿಮಾ ಸೂಚಿಸುತ್ತದೆ. ಈ ರೀತಿ ದುರಾಚಾರ ನಡೆಸಿದವರ ಮನೋ ದೃಷ್ಟಿಯನ್ನೂ ಈ ರೀತಿ ಅವಸ್ಥೆಗೆ ಒಳಪಟ್ಟವರ ನೆಲೆಯಿಂದಲೂ ಅತ್ಯಂತ ಖಚಿತವಾಗಿ ಹೇಳುತ್ತದೆ.
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದಿರುವ ಶುಕ್ರವಾರದ ಸಿನೆಮಾ ಪುಟ.

 

‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’ ಸುಮಾರು 1937ರಲ್ಲಿ ನಡೆದ ಚಾರಿತ್ರಿಕ ಘಟನೆ. ಇದೇ ಹೆಸರಿನಲ್ಲಿ ಬಂದ ಕಾದಂಬರಿ ಮತ್ತು ವಸ್ತುನಿಷ್ಠ ಘಟನೆಯನ್ನಾಧರಿಸಿ ಚೀನಾದ ನಿರ್ದೇಶಕ ಶ್ವಾನ್ ಲೂ 2009ರಲ್ಲಿ ಮಾಡಿದ ಸಿನಿಮಾ ‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’. 1936-37ರ ದ್ವಿತೀಯ ಸಿನ್ಹೋ-ಜಪಾನೀ (ಚೈನಾ-ಜಪಾನೀ) ಯುದ್ಧದ ನಂತರ, ವಿಶ್ವಯುದ್ಧದ ಭಾಗವಾಗಿ ನಡೆದ ಚಾರಿತ್ರಿಕ ಘಟನೆ ಅದು. ಜಪಾನಿನ ಇಂಪೀರಿಯಲ್ ಆರ್ಮಿಯು ಚೀನಾದ ರಾಜಧಾನಿ ನ್ಯಾನ್ ಜಿಂಗ್ ಅಥವಾ ನ್ಯಾನ್ ಕಿಂಗ್ ಅನ್ನು ದಾಳಿಗೆ ಈಡು ಮಾಡಿ ಕಬಳಿಸಿದ ಚಿತ್ರಣ; ಚಾರಿತ್ರಿಕವಾಗಿ ನಡೆದ ಸಾಂದರ್ಭಿಕ ಹಿಂಸೆ, ನರಮೇಧದ ಚಿತ್ರಾವಳಿ.ಚೈನಾದ ಸಾವಿರಾರು ಸಿಪಾಯಿಗಳನ್ನು ಮತ್ತು ನಾಗರಿಕರನ್ನು (ಮಹಿಳೆ-ಶಿಶುಗಳನ್ನೊಳಗೊಂಡಂತೆ) ಹಿಂಸಿಸಿ ಕೊಂದ ಕಥೆ. ಆರಂಭದಲ್ಲಿ ಚೈನಾದ ಸೈನ್ಯ ಪ್ರತಿರೋಧವನ್ನು ತೋರಿದರೂ ಕೂಡಾ, ಕೆಲವೇ ಕ್ಷಣಗಳಲ್ಲಿ ಜಪಾನೀ ಸೈನ್ಯಕ್ಕೆ ಸಂಪೂರ್ಣ ಶರಣಾಗುತ್ತದೆ. ಅದಾದ ಸ್ವಲ್ಪ ಸಮಯದಲ್ಲೇ ಜಪಾನೀ ಸೈನ್ಯ ಬರ್ಬರತೆಗೆ, ಮಾನವ ಜನಾಂಗವನ್ನೇ ನಾಚಿಸುವ ಹಿಂಸೆಗೆ, ಅತಿಕ್ರಮಣ, ದುರಾಚಾರಕ್ಕೆ ಶರಣಾಯಿತು. ಒಬ್ಬ ಸಾಮಾನ್ಯ ವಿಶ್ವ ನಾಗರಿಕನಿಗೆ, 1937ರ ಸಿನ್ಹೋ-ಜಪಾನೀ ಯುದ್ಧದ ಕುರಿತು ಓದದೆ ಇರುವಂತಹ ವ್ಯಕ್ತಿಗೆ ಅದುವರೆಗೂ ಜಪಾನಿನ ಬಗೆಗಿದ್ದ ಸಾಫ್ಟ್ ಕಾರ್ನರ್, ಜಪಾನ್ ಆದರ್ಶವೆನ್ನುವ ಭ್ರಮೆ ಕಳಚುವ ಶಕ್ತಿಯನ್ನು ಹೊಂದಿರುವುದೇ ‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’ಸಿನಿಮಾದ ಶಕ್ತಿ. ಜಪಾನಿಗರ ಶ್ರಮ, ಶಿಸ್ತು, ದುಡಿಮೆಯ ಮನೋಭಾವದಷ್ಟೇ ಪ್ರಸಿದ್ಧ ಜಪಾನೀಯರ ಈ ಅತ್ಯಾಚಾರ. ಅದು ಬರಿಯ ಚೈನಾದವರ ಮೇಲೆ ಎಸಗಿದ್ದಲ್ಲ, ಇಡೀ ಮಾನವತೆಯ ಮೇಲೆ.

ಜಪಾನೀ ನರಮೇಧವನ್ನು ಬಟ್ರಲೂಚಿಯ, ‘ದಿ ಲಾಸ್ಟ್ ಎಂಪೆರರ್’ ಸಿನಿಮಾ ಸ್ವಲ್ಪಮಟ್ಟಿಗೆ ಚಿತ್ರಿಸುತ್ತಾದರೂ ಕೂಡಾ, ಇಡಿಯಾಗಿ ಅಂತಹ ವಿಧ್ವಂಸಕ ಕೃತ್ಯವನ್ನು ನಮಗೆ ಮನದಟ್ಟು ಮಾಡಿಕೊಡುವುದು ‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’ ಸಿನಿಮಾ. ಈ ಸಿನಿಮಾ ಚರಿತ್ರೆಯ ಗತಿ ಇಷ್ಟು ಕ್ರೂರವಾಗಿ ಸಾಗಿ ಬಂದುದರ ಕುರಿತು ಚರಿತ್ರೆಯ ಕೃತಿಯೊಂದು ತಿಳಿಹೇಳುವುದಕ್ಕಿಂತ ಅದ್ಭುತವಾಗಿ ಚಿತ್ರಪಟಗಳೊಂದಿಗೆ ನಮ್ಮ ಮನಃಪಟಲವನ್ನು ನಾಟುತ್ತದೆ. ಜಪಾನ್ ಎಂಬ ದೇಶ ದ್ವಿತೀಯ ವಿಶ್ವಯುದ್ಧೋತ್ತರದಲ್ಲಿ ನಡೆದ ಹಿರೋಶಿಮಾ-ನಾಗಸಾಕಿ ಅಣುಬಾಂಬ್ ಅನುಭವದ ನಂತರವಂತೂ, ಜಾಗತಿಕ ರಾಷ್ಟ್ರ, ಸಮುದಾಯಗಳ ಕೃಪೆ, ಅನುಕಂಪವನ್ನು ಹೊಂದಿತ್ತು. ಇಡೀ ಅಮೇರಿಕಾವೆಂಬ ಕೈಗಾರೀಕೃತ, ಜ್ಞಾನ-ವಾಣಿಜ್ಯ ವಿಕ್ರಮದ ದೇಶದ ವಿರುದ್ಧ ಅವುಗಳೆಲ್ಲವೂ ನಿಡುಸುಯ್ದಿಯ್ದವು. ಮೆಕಾರ್ಥಿಯ ಆಡಳಿತ ಆರಂಭದಿಂದ ಪ್ರಗತಿಪರ, ಎಡ, ಜೀವಪರವಾದ ಜಗತ್ತಿನ ಜನ, ಸಮುದಾಯಗಳು ಜಪಾನ್ ಅನ್ನು ಸಹನೆ, ಶಾಂತಿ, ಸಹಬಾಳ್ವೆ, ಶಸ್ತ್ರತ್ಯಾಗವೇ ಮುಂತಾದ ಯುದ್ಧ ವಿರಹೀ ಅನುಭವಗಳ ನೀರಿನಲ್ಲೇ ಬೆಳೆಸಿದುವು. ಅದು ಸತ್ಯ ಕೂಡಾ; ಯಾಕೆಂದರೆ ಆ ಸಂದರ್ಭ ಹಾಗಿತ್ತು, ಆ ಸಂದರ್ಭದ ಪರಿಣಾಮವೂ ಕೂಡಾ ಹಾಗಿತ್ತು. ಅದು ಇಡೀ ಮಾನವನ ಚರಿತ್ರೆಯಲ್ಲಿ ಮೊತ್ತ ಮೊದಲು ಅಣುಬಾಂಬ್ ಎನ್ನುವ ಪರಮ ವಿಧ್ವಂಸಕ ಅಸ್ತ್ರವನ್ನು ಬಳಸಿದ ಮೊದಲ ಅನುಭವವಾಗಿತ್ತು. ಇಂತಹ ಚಾರಿತ್ರಿಕ ಸಂದರ್ಭ, ಅದರದೇ ಸರಣಿಯ ಇನ್ನೊಂದು ಕೊಂಡಿಯಂತಿರುವ 1937ರ ನ್ಯಾನ್ ಕಿಂಗ್ ನರಮೇಧವನ್ನು ಮರೆಮಾಚಿತು.

ಜಪಾನಿನ ಸೈನ್ಯದ ಒಂದು ತುಕಡಿಯನ್ನು ಸಾರ್ಜಂಟ್ ಮಸಾವೋ ಕಡೋಕಾವಾ ಮುನ್ನಡೆಸಿದ್ದ ಮತ್ತು ಚೈನಾದ ಸೈನ್ಯದ ಲು-ಜಿಯಾನ್-ಕ್ಸಿಯೊಂಗ್ ನ ತುಕಡಿಯನ್ನು ಸಂಪೂರ್ಣ ಸೋಲಿಸಿ, ಚೈನಾದ ಸೈನ್ಯದ ಯುದ್ಧ ಖೈದಿಗಳನ್ನು ತುಂಬಾ ಪ್ರದೇಶಗಳಿಗೆ ತಿರುಗಿಸಿ ಮಾರಣ ಹೋಮಗೈಯಲಾಗುತ್ತದೆ. ಈ ನಡುವೆ ಶುಂಜಿ ಮತ್ತು ಕ್ಸಿಯಾಡೌಜೀ ಎಂಬಿಬ್ಬರು ತಪ್ಪಿಸಿಕೊಂಡು, ನಾಝೀ ಪಕ್ಷದ ಸದಸ್ಯ, ಜರ್ಮನಿಯ ಉದ್ಯಮಿಯಾಗಿದ್ದ ಜಾನ್ ರೇಬ್ ಮತ್ತು ಉಳಿದ ಕೆಲವು ಯುರೋಪಿಯನ್ನರು ನಡೆಸುತ್ತಿದ್ದ ನ್ಯಾನ್ ಕಿಂಗ್ ಸೇಫ್ಟಿಝೋನ್ ಗೆ ಓಡಿಬಂದರು. ಇದು ಸೇಫ್ಟಿ ಝೋನ್ ಆಗಿದ್ದರೂ ಕೂಡಾ ಅನೇಕ ಬಾರಿ ಜಪಾನೀ ಸೈನಿಕ ಪಡೆ ದುರಾಕ್ರಮಣ ಮಾಡಿ ದುಷ್ಕೃತ್ಯಗಳನ್ನು ಎಸಗಿದ್ದ ಕಾರಣ ಅಲ್ಲಿನ ಮಹಿಳೆಯರು ಕೂದಲು ಕತ್ತರಿಸಿ, ಬಾಬ್ಕಟ್ ಮಾಡಿಸಿಕೊಂಡು ಪುರುಷರ ಹಾಗೆ ಕಾಣಿಸಿಕೊಳ್ಳುತ್ತಿದ್ದರೂ ಕೂಡಾ. ಆದರೆ ಈ ಸೇಫ್ಟಿ ಝೋನ್ ಅನ್ನು ಪ್ರವೇಶ ಮಾಡಿದ ಜಪಾನೀ ವೇಶ್ಯೆ ಕ್ಸಿಯಾವೋಝಿಯಾಂಗ್ ಮಾತ್ರ ಉದ್ದನೆಯ ಕೂದಲು ಕತ್ತರಿಸಲು ಒಪ್ಪುವುದಿಲ್ಲ. ಯಾಕೆಂದರೆ ಉದ್ದ ಕೂದಲಿದ್ದರೆ ಮಾತ್ರ ನಾನು ವೃತ್ತಿಯನ್ನು ಕೈಗೊಂಡು ಹೊಟ್ಟೆಪಾಡನ್ನು ಗಳಿಸುತ್ತೇನೆ ಎಂಬ ಕಾರಣದಿಂದ.

ಜಪಾನೀ ಸೈನ್ಯ ಬರ್ಬರತೆಗೆ, ಮಾನವ ಜನಾಂಗವನ್ನೇ ನಾಚಿಸುವ ಹಿಂಸೆಗೆ, ಅತಿಕ್ರಮಣ, ದುರಾಚಾರಕ್ಕೆ ಶರಣಾಯಿತು. ಒಬ್ಬ ಸಾಮಾನ್ಯ ವಿಶ್ವ ನಾಗರಿಕನಿಗೆ, 1937ರ ಸಿನ್ಹೋ-ಜಪಾನೀ ಯುದ್ಧದ ಕುರಿತು ಓದದೆ ಇರುವಂತಹ ವ್ಯಕ್ತಿಗೆ ಅದುವರೆಗೂ ಜಪಾನಿನ ಬಗೆಗಿದ್ದ ಸಾಫ್ಟ್ ಕಾರ್ನರ್, ಜಪಾನ್ ಆದರ್ಶವೆನ್ನುವ ಭ್ರಮೆ ಕಳಚುವ ಶಕ್ತಿಯನ್ನು ಹೊಂದಿರುವುದೇ ‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’ಸಿನಿಮಾದ ಶಕ್ತಿ. ಜಪಾನಿಗರ ಶ್ರಮ, ಶಿಸ್ತು, ದುಡಿಮೆಯ ಮನೋಭಾವದಷ್ಟೇ ಪ್ರಸಿದ್ಧ ಜಪಾನೀಯರ ಈ ಅತ್ಯಾಚಾರ. ಅದು ಬರಿಯ ಚೈನಾದವರ ಮೇಲೆ ಎಸಗಿದ್ದಲ್ಲ, ಇಡೀ ಮಾನವತೆಯ ಮೇಲೆ.

ಈತನ್ಮಧ್ಯೇ ಜಪಾನೀ ಸೈನಿಕ, ಸಾರ್ಜಂಟ್ ಮಸಾವೋ ಕಡೋಕಾವಾನು ಯೂರಿಕೋ ಎಂಬ, ಜಪಾನೀ ವೇಶ್ಯೆಯ ಮೇಲೆ ಮೃದುಭಾವನೆ ಮತ್ತು ಮೋಹವನ್ನು ಪ್ರಕಟಿಸುತ್ತಾನೆ. ಆದರೆ ಯಾವಾಗಲೂ ಕಾದಾಡುತ್ತಿದ್ದ ಪ್ರದೇಶ ಅದಾಗಿದ್ದರಿಂದ ಆತನಿಗೆ ಆಕೆಯ ಸಾನಿಧ್ಯದಲ್ಲೇ ಪ್ರತಿಷ್ಠಾಪಿತವಾಗಲು ಕಷ್ಟವಾಗುತ್ತದಾದರೂ ಕೂಡಾ ಅಂತಹ ಪರಕೀಯತೆ, ಪ್ರತ್ಯೇಕತೆಯ ನಡುವೆಯೂ ಕೂಡಾ ಸಾರ್ಜಂಟ್ ಕಡಕೋವಾ ಯೂರಿಕೋಗೆ ಕ್ಯಾಂಡಿ (ಚಾಕೋಲೇಟ್) ಮತ್ತು ಇತರ ಉಡುಗೊರೆಗಳನ್ನು ತನ್ನ ಭೇಟಿಯಲ್ಲಿ ನೀಡುತ್ತಿರುತ್ತಾನೆ. ಯುದ್ಧಾಂತ್ಯದ ನಂತರ ಆಕೆಯನ್ನು ಮದುವೆಯಾಗುವ ಇಂಗಿತವನ್ನೂ ಪ್ರಕಟಪಡಿಸುತ್ತಾನೆ. ಜಾನ್ ರೇಬ್ ನ ಸೆಕ್ರೆಟರಿ ತಾಂಗ್ ತಿಯಾನ್ ಕ್ಸಿಯಾಂಗ್ ಮತ್ತು ಜಿಯಾಂಗ್ ಶುಯುನ್ ಎನ್ನುವ ಟೀಚರ್ ಅತ್ಯಂತ ಯಶಸ್ವಿಯಾಗಿ ಈ ಸೇಫ್ಟಿ ಝೋನ್ ನ ಕಾರ್ಯ ಕಲಾಪಗಳನ್ನು ನಿರ್ವಹಿಸುತ್ತಿದ್ದರಾದರೂ ಕೂಡಾ ಸ್ವತ: ತಾಂಗ್ ತಿಯಾನ್ ಕ್ಸಿಯಾಂಗ್ ನ ಎಳೆಯ ಮಗಳನ್ನು ಜಪಾನೀ ಸೈನಿಕನೊಬ್ಬ ಹೊರ ಬಿಸಾಕಿದಾಗ ತಾನು ಅತ್ಯಂತ ಎತ್ತರದ ಘನ ಅಂತಸ್ತನ್ನು ಹೊಂದಿದ್ದರೂ ಕೂಡಾ ರಕ್ಷಿಸಲಾಗಲಿಲ್ಲ, ಆತನ ಕಣ್ಣೆದುರಲ್ಲೇ ಆತನ ಸಂಬಂಧಿ ಮಹಿಳೆಯನ್ನು ಅತ್ಯಾಚಾರಗೈಯಲಾಗುತ್ತದೆ. ಜಪಾನೀ ಸೈನ್ಯದ ಅಧಿಕಾರಿ ಸೆಕೆಂಡ್ ಲೆಫ್ಟಿನೆಂಟ್ ಇಡಾ ಒಸಾಮುವು ಜಾನ್ ರೇಬ್ ನಲ್ಲಿ 100 ಮಹಿಳೆಯರು ಅವರಿಗೆ ‘ಕಂಫರ್ಟ್ ವಿಮೆನ್’(ಲೈಂಗಿಕತೆಯನ್ನು ಪೂರೈಸುವ) ರೂಪದಲ್ಲಿ ನೀಡಬೇಕೆಂದಾಗ ರೇಬ್ ಮತ್ತು ಜಿಯಾಂಗ್ ನೀರದ್ದಿದ ಕಣ್ಣಿನಿಂದ ಸೇಫ್ಟಿ ಝೋನ್ನಲ್ಲಿ ಘೋಷಣೆ ಮಾಡುತ್ತಾರೆ, ನಿಮ್ಮ 100 ಜನರ ತ್ಯಾಗದಿಂದ ಉಳಿದವರ ಮಾನ-ಪ್ರಾಣವೂ ಉಳಿಯುತ್ತದೆಂಬ ಇಂಗಿತವನ್ನೂ ರೇಬ್ ಮತ್ತು ಜಿಯಾಂಗ್ ವ್ಯಕ್ತಪಡಿಸುತ್ತಾರೆ.

ಸಿಟಿ ಆಫ್ ಲೈಫ್ ಆ್ಯಂಡ್ ಡೆತ್ ನ ಅತ್ಯಂತ ನಲುಗಿಸುವ ಕ್ಷಣಗಳಲ್ಲಿ, ಕಡಕೋವಾ ಮಸಾವೋ ಜಪಾನೀ ವೇಶ್ಯೆ ಕ್ಸಿಯಾಮೋಜಿಯಾಂಗ್ ಳನ್ನು ಭೇಟಿ ಮಾಡಿ ಅವಳಿಗೆ ಅನ್ನವನ್ನು ನೀಡುವ ಸಲುವಾಗಿ ಬರುವಾಗ ಕಾಣಿಸುವ ಬಿಂಬಗಳು. ಇಲ್ಲಿ ಇನ್ನೇನು ಕಡೋಕವಾ ಅವಳ ಹತ್ತಿರ ಸುಳಿಯಬೇಕು ಅನ್ನುವಂತಹ ಸಮಯದಲ್ಲಿ ಅವಳನ್ನು ಇನ್ನೊಬ್ಬ ಜಪಾನೀ ಸೈನಿಕ ಅತ್ಯಾಚಾರ ಮಾಡುತ್ತಿದ್ದ, ಆಕೆ ಅಕ್ಷರಶ: ಜೀವಚ್ಛವವಾಗಿದ್ದುದನ್ನೂ ಈತ ಕಾಣುತ್ತಾನೆ. ನಂತರ ಕ್ಸಿಯಾವೋ ಜಿಯಾಂಗ್ ಸೇರಿದಂತೆ ಅನೇಕ ಮಹಿಳೆಯರು (ಕಂಫರ್ಟ್ ವಿಮೆನ್) ರಾಕ್ಷಸೀಕ್ರಿಯೆಯಿಂದ ಸತ್ತು ಅವರ ದೇಹಗಳನ್ನು ಸಾಗಿಸುವುದನ್ನೂ ಕೂಡಾ ಈತ ಕಾಣುತ್ತಾನೆ. ಇನ್ನೂ ಮುಂದುವರಿದು ಜಪಾನೀ ಸಾರ್ಜಂಟ್ ಇಡಾ ಒಸಾಮು, ತಾಂಗ್ ತಿಯಾನ್ ಕ್ಸಿಯಾಂಗ್ ರ ನಾದಿನಿ ‘ಮೇ’ ಅನ್ನು ಗುಂಡಿಕ್ಕುವುದಕ್ಕೂ ಕೂಡಾ ಸಾಕ್ಷಿಯಾಗುತ್ತಾನೆ. ‘ಮೇ’ ನಂತರ ಹುಚ್ಚಿಯೂ ಆಗುತ್ತಾಳೆ.

ಇತ್ತ ರೇಬ್, ಜರ್ಮನಿಗೆ ವಾಪಾಸಾಗಬೇಕೆನ್ನುವ ಆದೇಶವನ್ನು ಪಡಿಯುತ್ತಾನೆ. ಜಪಾನ್-ಜರ್ಮನಿಯ ಮೈತ್ರಿ ಮತ್ತು ರಾಜತಾಂತ್ರಿಕ ಕಾರಣದಿಂದಾಗಿ. ಇವನ ಜತೆ ತಾಂಗ್ ಮತ್ತು ಆತನ ಪತ್ನಿ ಕೂಡಾ ನ್ಯಾನ್ ಕಿಂಗ್ನಿಂದ ಜರ್ಮನಿಗೆ ಹೊರಡಲು ಅವಕಾಶ ಸಿಗುತ್ತದೆ. ಆದರೆ ತಾಂಗ್ ತನ್ನ ನಾದಿನಿ ‘ಮೇ’ಯನ್ನು ಹುಡುಕಿ ಅವಳನ್ನು ಸಲಹುವ ಉದ್ದೇಶದಿಂದ, ರೇಬ್ ಮತ್ತು ತಾಂಗ್ ಪತ್ನಿ ಆ ಸ್ಥಳವನ್ನು ಬಿಟ್ಟ ಕೆಲವೇ ಕ್ಷಣಗಳಲ್ಲಿ ಸಾರ್ಜಂಟ್ ಇಡಾಮ ತಾಂಗ್ ನನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಇತ್ತ ಜಪಾನೀ ಸೈನಿಕರು ಸೇಫ್ಟಿ ಝೋನ್ ನಲ್ಲಿನ ಅನೇಕ ಚೈನಾ ಯೋಧರನ್ನು ಸಂಗ್ರಹಿಸಿ ದೂರದ ಜಾಗದಲ್ಲಿ ಮಾರಣ ಹೋಮ ನಡೆಸುತ್ತಾರೆ. ಈ ಮೊದಲು ತಪ್ಪಿಸಿಕೊಂಡು ಬಂದಿದ್ದ ಶುಂಝೀ ಎನ್ನುವ ವ್ಯಕ್ತಿಯನ್ನೂ ಕೂಡಾ ಟ್ರಕ್ ನಲ್ಲಿ ತುಂಬಲಾಗುತ್ತದೆ.

ಸೇಫ್ಟಿ ಝೋನ್ ನಲ್ಲಿದ್ದ ಮಿನ್ನೀ ವಾಟ್ರಿನ್ ಮತ್ತು ಇತರರು ವ್ಯಾಪಕ ವಾಗ್ಯುದ್ಧ ನಡೆಸಿ, ಜಪಾನೀಯರ ಸಮೂಹ ನರಮೇಧವನ್ನು ಖಂಡಿಸಿದ ನಂತರ ಜಪಾನೀ ಸೈನ್ಯವು ಟ್ರಕ್ಗೆ ಈಗಾಗಲೇ ತುಂಬಿದ್ದ ಚೈನಾದ ಖೈದಿಗಳಲ್ಲಿ ಒಬ್ಬರು ಯುರೋಪಿಯನ್ನರಿಗೆ ಒಬ್ಬರು ಚೈನೀಯ ಖೈದಿಯನ್ನು ರಕ್ಷಿಸುವ ಅವಕಾಶವನ್ನು ನೀಡಲಾಗುತ್ತೆ. ಇದನ್ನು ಬಳಸಿಕೊಂಡು ಜಿಯಾಂಗ್ ಶಯುನ್ ಒಬ್ಬ ಗಂಡಸನ್ನು ತನ್ನ ಗಂಡನೆನ್ನುತ್ತಾ ಟ್ರಕ್ ನಿಂದ ರಕ್ಷಿಸಿ, ನಿಧಾನವಾಗಿ ಯಾವ ಜಪಾನೀ ಸೈನಿಕನಿಗೂ ಗೊತ್ತಾಗದ ಹಾಗೆ ಶುಂಝಿಯನ್ನು ರಕ್ಷಿಸಲು ತೆರಳುತ್ತಾಳೆ. ಆದರೆ ಇದನ್ನು ಗಮನಿಸುತ್ತಿದ್ದ ಜಪಾನೀ ಸೈನಿಕನೊಬ್ಬ ಸಾರ್ಜಂಟ್ ಇಡಾನಿಗೆ ವರದಿ ಮಾಡುತ್ತಾನೆ. ಶುಝನ್ ಮತ್ತು ಶುಂಝಿಯಿಬ್ಬರನ್ನೂ ಬಂಧಿಸಲಾಗುತ್ತೆ. ಶುಝನ್ ಗೆ ತಾನು ಸದ್ಯದಲ್ಲೇ ರೇಪ್ ಗೆ ಒಳಗಾಗುತ್ತೇನೆಂಬ ಅರಿವಿದ್ದ ಕಾರಣ ಆಕೆ ಕಡೋಕವಾನಿಗೆ ತನ್ನನ್ನೂ ಶೂಟ್ ಮಾಡುವಂತೆ ಕೇಳಿಕೊಂಡಾಗ ಆಕೆಯನ್ನು ಶೂಟ್ ಮಾಡುತ್ತಾನೆ ಆತ. ಕಡೋಕವಾ ಇತ್ತ ಯುರಿಕೊಳನ್ನು ಹುಡುಕುತ್ತಾ ಹೋದಂತೆ, ಅವಳು ಸತ್ತ ವಿಷಯ ತಿಳಿದು ಅವಳಿಗೋಸ್ಕರ ಸಮರ್ಪಕ ಅಂತ್ಯೇಷ್ಠಿಯ ಕ್ರಿಯಾವಿಧಿಯನ್ನು ನಡೆಸುತ್ತಾನೆ.

ಜಪಾನೀ ಸೈನಿಕರು ಒಟ್ಟಾಗಿ ವಿಜಯನೃತ್ಯವನ್ನು ಕೈಗೊಳ್ಳುತ್ತಾರೆ. ಆದರೆ ಕಡೋಕವಾ ಮಾತ್ರ ವಿನೀತಭಾವನೆಯಿಂದ, ತನ್ನ ತಪ್ಪಿನ ಆತ್ಮ ನಿರೀಕ್ಷೆಯನ್ನು ಮಾಡತೊಡಗುತ್ತಾನೆ. ಕಡೋಕವಾ ಶುಂಝೀ ಮತ್ತು ಆತನ ಗೆಳೆಯನನ್ನು ವಧಾ ಪ್ರದೇಶದಿಂದ ತಪ್ಪಿಸಿಕೊಂಡು ಓಡಿ ಹೋಗಲು ಹೇಳುತ್ತಾನೆ. ಅವರು ಓಡುತ್ತಾರೆ. ಕಡೋಕವಾ ‘ಲೈಫ್ ಈಸ್ ಮೋರ್ ಡಿಫಿಕಲ್ಟ್ ದ್ಯಾನ್ ಡೆತ್’ ಎಂದು ಹೇಳಿ ಸ್ವತ: ಶೂಟ್ ಮಾಡಿಕೊಂಡು ಸಾಯುವುದೇ ಸಿನಿಮಾದ ಕೊನೆಯ ದೃಶ್ಯ.

‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’, ಒಂದು ರೀತಿ ಯುದ್ಧದ ನೈತಿಕ ವ್ಯಂಗ್ಯದ ಕನ್ನಡಿ. ಯುದ್ಧ ಬರೀ ರಾಷ್ಟ್ರ, ರಾಷ್ಟ್ರವನ್ನು ಅತ್ಯಾಚಾರ ಮಾಡುವ ಕ್ರಮ ಮಾತ್ರವಲ್ಲ, ಬದಲು ರಾಷ್ಟ್ರವು ಪ್ರತೀ ಎದುರಾಳಿಯ ವಿರುದ್ಧ ಉಂಟುಮಾಡುವ, ಕೈಗೊಳ್ಳುವ ಸಂಗತಿಗಳೂ ಕೂಡಾ ನೈತಿಕ ವ್ಯಂಗ್ಯ (ಮಾರಲ್ ಐರನಿ)ವೇ ಆಗುತ್ತದೆ ಎನ್ನುವ ನೇರ ಮತ್ತು ಇಂಟ್ರಿನ್ ಸಿಕ್ ಆದಂತಹ ದನಿಯನ್ನು ಈ ಸಿನಿಮಾ ಸೂಚಿಸುತ್ತದೆ. ನೀತಿ, ನೈತಿಕತೆ, ಅದರ ಗೆರೆಗಳನ್ನು ಕಣ್ಣಿಗೆ ಕಟ್ಟಲು ನಿರ್ಬಿಢೆಯಿಂದ ಇಮೇಜ್ ಗಳನ್ನು ಬಳಸಿಕೊಂಡಿರುವುದೇ ಈ ಸಿನಿಮಾ ಮತ್ತು ಶ್ವಾನ್ ಲೂ’ ನ ವೈಶಿಷ್ಠ್ಯ. ಜಪಾನ್ ಎಂಬ ರಾಷ್ಟ್ರ ಚೈನಾದ ಮೇಲೆ ನಡೆಸಿದಂತಹ ದುರಾಚಾರ, ಅತ್ಯಾಚಾರವನ್ನು ಅತಿಯಾದ ಸಾಂಸ್ಥಿಕ ಮತ್ತು ಔಪಚಾರಿಕವಲ್ಲದ ರೀತಿಯಲ್ಲಿ ಮತ್ತು ವ್ಯಕ್ತಿಶಃ ದೃಷ್ಟಿಯಲ್ಲಿ ಕಾಣಿಸುತ್ತದೆ. ಒಂದು ಕಡೆ ಈ ರೀತಿ ದುರಾಚಾರ ನಡೆಸಿದವರ ಮನೋ-ದೃಷ್ಟಿಯನ್ನೂ, ಇನ್ನೊಂದು ಕಡೆಯಲ್ಲಿ ಈ ರೀತಿ ಅವಸ್ಥೆಗೆ ಒಳಪಟ್ಟವರ ನೆಲೆಯಿಂದಲೂ ಅತ್ಯಂತ ಖಚಿತವಾಗಿ ನೋವು, ದುಃಖ, ಸಂವೇದನೆ, ವೇದನೆಗಳನ್ನೂ ಕೂಡಾ ಕಥಿಸಿದೆ. ಈ ನೆಲೆಯಲ್ಲಿಯೇ ಈ ಉಭಯ ಕೋನೀಯ ಕಥನ, ಮತ್ತದು ಚಿತ್ರಿಸಿಕೊಡುವ ಚಿತ್ರ ನಿಯಂತ್ರಣವಿಲ್ಲದೇ ಹರಡುವ (ಡೈಲ್ಯೂಟ್) ಭೀತಿಯಿಂದ ಎನ್ನುವ ಹಾಗೆ ಕಪ್ಪು ಬಿಳುಪಿನಲ್ಲಿ ನಮ್ಮನ್ನು ಎದುರುಗೊಂಡಿದೆ. ಬರೀ ತಂತ್ರ, ತಂತ್ರಜ್ಞಾನದ ಬಣ್ಣವಷ್ಟೇ ಅಲ್ಲದೇ ತಾತ್ವಿಕವಾಗಿ ಕೂಡಾ ಈ ನರಮೇಧ ಕಪ್ಪು-ಬಿಳುಪಿನ ಆಟ. ಜಪಾನಿಯರು ಕರಾಳ ಕಪ್ಪು, ಕಪ್ಪು ಚಿತ್ರಸರಣಿಗಳನ್ನು ನಿರ್ಮಿಸಿದರೆ, ಜೀವ, ಜೀವನ, ದೈನ್ಯ, ದು:ಖ, ದುಮ್ಮಾನ, ಅಸ್ತಿತ್ವ ಮುಂತಾದವುಗಳ ಮೇಲೆ ಚೈನೀಯರ ಬಿಳಿಚಿಕೊಂಡ ಬಿಳುಪು ಕೂಡಾ ನಮ್ಮನ್ನೂ ಪ್ರತೀಕವಾಗಿ ಆಕ್ರಮಿಸುತ್ತದೆ. ಅಂತಹ ಬಣ್ಣಗಳು ಎರಡೇ ಆಗಿ ಈ ನ್ಯಾನ್ ಕಿಂಗ್ ಸಿಟಿ ಲೈಫ್ ಮತ್ತು ಡೆತ್ ಎನ್ನುವ ದಾರುಣ ದ್ವಂದ್ವವನ್ನೂ ಯಾವುದೇ ಅಸ್ಪಷ್ಟತೆಯಿಲ್ಲದೇ ಮುಖಕ್ಕೆ ರಾಚಿಸುತ್ತದೆ. ಇಲ್ಲಿ ಇವೆರಡರ ನಡುವಿನ ಸ್ಥಿತಿ, ಸ್ಥಿತ್ಯಂತರವಿಲ್ಲ, ಅದಿದ್ದರೂ ಕೂಡಾ ಸಾಪೇಕ್ಷ ಮತ್ತು ಅಸಂಗತವಾಗಿ ನಮಗೆ ಕಾಣಿಸುತ್ತದೆ. ಕಡೋಕವಾ ಮಾಡುವ ಆತನ ಅಂತಃಸಾಕ್ಷಿಯ ಜತೆಗಿನ ಸಂವಾದ ಮತ್ತು ಅದು ಒದಗಿಸುವ ದೈನ್ಯವೂ ಕೂಡಾ ಹೆಚ್ಚು ಸಮಯ ಈ ದ್ವಂದ್ವಕ್ಕಿಂತ ಬೇರೆಯದಾದ ಸ್ಥಿತಿಯನ್ನುಂಟುಮಾಡಲೂ ಬಿಡುವುದಿಲ್ಲ.

ಆದರೆ ಇದನ್ನು ಗಮನಿಸುತ್ತಿದ್ದ ಜಪಾನೀ ಸೈನಿಕನೊಬ್ಬ ಸಾರ್ಜಂಟ್ ಇಡಾನಿಗೆ ವರದಿ ಮಾಡುತ್ತಾನೆ. ಶುಝನ್ ಮತ್ತು ಶುಂಝಿಯಿಬ್ಬರನ್ನೂ ಬಂಧಿಸಲಾಗುತ್ತೆ. ಶುಝನ್ ಗೆ ತಾನು ಸದ್ಯದಲ್ಲೇ ರೇಪ್ ಗೆ ಒಳಗಾಗುತ್ತೇನೆಂಬ ಅರಿವಿದ್ದ ಕಾರಣ ಆಕೆ ಕಡೋಕವಾನಿಗೆ ತನ್ನನ್ನೂ ಶೂಟ್ ಮಾಡುವಂತೆ ಕೇಳಿಕೊಂಡಾಗ ಆಕೆಯನ್ನು ಶೂಟ್ ಮಾಡುತ್ತಾನೆ ಆತ. ಕಡೋಕವಾ ಇತ್ತ ಯುರಿಕೊಳನ್ನು ಹುಡುಕುತ್ತಾ ಹೋದಂತೆ, ಅವಳು ಸತ್ತ ವಿಷಯ ತಿಳಿದು ಅವಳಿಗೋಸ್ಕರ ಸಮರ್ಪಕ ಅಂತ್ಯೇಷ್ಠಿಯ ಕ್ರಿಯಾವಿಧಿಯನ್ನು ನಡೆಸುತ್ತಾನೆ.

‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’, ತಾತ್ವಿಕವಾಗಿ ಬಹಳ ಮುಖ್ಯವಾದ ಸಿನಿಮಾ ಎನಿಸುತ್ತದೆ. ನಿರ್ದೇಶಕ ಶ್ವಾನ್ ಲೂ ಅತ್ಯಂತ ಮನೋಜ್ಞವಾಗಿ ಏಷ್ಯಾದ, ಸಂದರ್ಭದಲ್ಲಿ ಒಂದು ರಾಜಕೀಯ, ಸಾಮಾಜಿಕ ಮತ್ತು ಚಾರಿತ್ರಿಕ ಪ್ರಶ್ನೆಯನ್ನು ಎತ್ತಿದ್ದಾನೆ. ಆ ಪ್ರಶ್ನೆಯು ಮುಖ್ಯವಾಗಿ ನರಮೇಧವನ್ನು ಕುರಿತಾದುದು. ಎರಡು ಪ್ರಮುಖ ಸಂಗತಿಗಳನ್ನು ನರಮೇಧದ ಚರ್ಚೆಯ ಸಂದರ್ಭದಲ್ಲಿ ಅದು ಚರ್ಚೆಗೆ ಒದಗಿಸುತ್ತದೆ. ಒಂದು: ನರಮೇಧವನ್ನು ಹೊಸದಾಗಿ, ಪರ್ಯಾಯವಾಗಿ ದಾಖಲು ಮಾಡುವ, ವ್ಯಾಖ್ಯಾನಿಸುವ ಅಗತ್ಯದ ಚರ್ಚೆ, ಎರಡನೆಯದು: ವ್ಯಾಖ್ಯಾನ ಮಾಡುತ್ತಾ, ನರಮೇಧವನ್ನು ಲಕ್ಷಣೀಕರಿಸುತ್ತಾ ಚರಿತ್ರೆಯಲ್ಲಿ ಇದುವರೆಗೆ ದಾಖಲಾದ ನರಮೇಧದ ಚರಿತ್ರೆಯನ್ನು ನಿರಾಕರಿಸುವ ಪ್ರಯತ್ನದ ಫಲವಾಗಿಯೂ ನೋಡಬಹುದು. ನರಮೇಧದ ಚರಿತ್ರೆ, ದಾಖಲು, ವರ್ತಮಾನದ ಅದರ ಕಥನವೇ ಯುರೋಪ್ ಮತ್ತು ಅಮೇರಿಕಾ ಕೇಂದ್ರಿತವಾಗಿರುವುದೆಂದೂ, ಬದಲಿಗೆ ಇವೆರಡು ಕೇಂದ್ರಗಳನ್ನು (ಕೋರ್) ಹೊರತುಪಡಿಸಿದ ಪರಿಧೀಯ, ಅಂದರೆ ಸಾಮಾನ್ಯವಾಗಿ ಥರ್ಡ್ ವರ್ಲ್ಡ್ ಎನ್ನಬಹುದಾದ (ಈ ಥರ್ಡ್ ವರ್ಲ್ಡ್ ಎನ್ನುವ ಪದವೇ ಅತ್ಯಂತ ಚರ್ಚೆಗೆ ಒಳಗಾಗಬೇಕಿದೆ) ನರಮೇಧ, ಹಿಂಸೆಯ ದಾಖಲು ಮತ್ತು ಕಥನವನ್ನು ಈ ಸಿನಿಮಾ ಆಗ್ರಹಿಸುತ್ತದೆ. ಯುರೋಪ್ ಮತ್ತು ಅಮೇರಿಕಾ ಈ ರೀತಿಯ ತೃತೀಯ ಜಗತ್ತು ಎನ್ನಬಹುದಾದ ವಿಶ್ವದ ಹಿಂಸೆ, ಗೊಂದಲ, ನರಮೇಧವನ್ನು ವಜ್ಯ್ರವಾಗಿ ಕಾಣುತ್ತಾ ಅಸ್ಪ್ರಶ್ಯವಾಗಿಟ್ಟಿದೆ. ಕನಿಷ್ಠ ಪಕ್ಷ ಪರಿಹಾರಕ್ಕಿಂತಲೂ ದಾಖಲಾಗುವ ಕ್ರಮವೇ ತುರ್ತು, ಅಗತ್ಯ, ಆಶಾದಾಯಕ ಎನ್ನುವುದನ್ನು ಆಗ್ರಹಿಸುತ್ತದೆ.

ಇಡೀ ಜಾಗತಿಕ ಸಾಹಿತ್ಯ, ಸಿನಿಮಾ ಮತ್ತು ನರಮೇಧದ ಕಥನದಲ್ಲಿ ಸರಿಸುಮಾರು 90% ತುಂಬಿರುವುದು ಹಿಟ್ಲರ್ ನಡೆಸಿರುವ ಹೊಲೋಕಾಸ್ಟ್. ಜಗತ್ತಿನಲ್ಲಿ ನಾಝೀ ಹೋಲೋಕಾಸ್ಟ್ ಬಗ್ಗೆ ಸಾವಿರಾರು ಕೃತಿಗಳು, ಸ್ಟೀವನ್ ಸ್ಫೀಲ್ ಬರ್ಗ್ ನ ‘ಶಿಂಡ್ಲರ್ಸ್ ಲಿಸ್ಟ್’, ಕ್ಲಾಡ್ ಲಾಂಝ್ ಮ್ಯಾನ್ ನ ‘ಶೋಹ್’, ಕ್ವಿಂಟನ್ ಟರಾಂಟಿನೋನ ‘ಇಂಗ್ಲೋರಿಯಸ್ ಬಾಸ್ಟರ್ಡ್ಸ್ ಮತ್ತು ಆಲ್ ಫ್ರೆಡ್ ಹಿಚ್ ಕಾಕ್ ನ ಹೊಲೋಕಾಸ್ಟ್ ಮೇಲಿನ ಡಾಕ್ಯುಮೆಂಟರಿ ಸೇರಿದಂತೆ ಸಿಂಹಪಾಲು ನಿರ್ಮಾಣಗಳು ನಾಝೀ ಹೋಲೋಕಾಸ್ಟ್ ಮೇಲೆ ಮೂಡಿದವುಗಳು. ರಾಜಕೀಯ, ಸಾಮಾಜಿಕ ಮತ್ತು ವಿಶ್ವದ ಚಾರಿತ್ರಿಕ ಕೃತಿಗಳು ಕೂಡಾ ರುವಾಂಡಾದಲ್ಲಿ, ಸೂಡಾನ್ ನಲ್ಲಿ, ಆಗ್ನೇಯ ಏಷ್ಯಾ ಮತ್ತು ಏಷ್ಯಾದ ಚರಿತ್ರೆ ಮತ್ತು ವರ್ತಮಾನಗಳೂ ಕೂಡಾ ಹಿಂಸೆ, ನರಮೇಧವನ್ನು ಹೊಂದಿಯೇ ಇಲ್ಲವೆನ್ನುವ ಹಾಗೆ ಯುರೋಪ್-ಅಮೆರಿಕಾ ಕೇಂದ್ರವನ್ನು ಕಥಿಸುತ್ತವೆ. ಶ್ವಾನ್ ಲೂ, ಇದಕ್ಕೆ ಪರ್ಯಾಯವಾದ ಒಂದು ಜಗತ್ತಿನ ಇಂತಹ ಅನುಭವದ ಕಥನ, ಪ್ರತಿನಿಧೀಕರಣ, ಚರ್ಚೆ, ಸಂವಾದದ ಆಗ್ರಹ ಮತ್ತು ಜಾಹೀರನ್ನು ಈ ಸಿನಿಮಾದ ಮೂಲಕ ಗೈಯ್ಯುತ್ತಾನೆ. ಶ್ವಾನ್ ಲೂಗೆ ಅದು ತುಂಬಾ ಮುಖ್ಯವಾಗುತ್ತದೆ. ಈ ಯುರೋಪ್-ಅಮೇರಿಕಾ ಜಗತ್ತು ಉಳಿದ ಜಗತ್ತಿನ ಬಗೆಗೆ ಎಷ್ಟು ನಿರ್ಲಕ್ಷ ತೋರಿದೆಯೆಂದರೆ, 1994ರಲ್ಲಿ ಫ್ರಾನ್ಸಿನ ಅಧ್ಯಕ್ಷನಾಗಿದ್ದ ಫ್ರಾಂಕೋಯ್ಸ್ ಮಿತಾರಾಂದ್, ರುವಾಂಡದ ನರಮೇಧದ ಬಗ್ಗೆ, “ಅಂತಹ ದೇಶಗಳಲ್ಲಿ, ನರಮೇಧ ಅಷ್ಟು ಮುಖ್ಯವಾದ ಸಂಗತಿಯೇನೂ ಅಲ್ಲ” ಎನ್ನುತ್ತಾನೆ. ಇದೇ ಯುರೋಪ್ ಮತ್ತು ಅಮೇರಿಕಾ ನಿರ್ವಚಿಸಿದ ಕ್ರಮದಲ್ಲಿಯೇ ನರಮೇಧವನ್ನು ಅರ್ಥೈಸಿದರೆ: ರಾಷ್ಟ್ರೀಯ, ಜನಾಂಗೀಯ, ಧಾರ್ಮಿಕ ಅಥವಾ ಕುಲಸಂಬಂಧಿ ಸಮುದಾಯಗಳನ್ನು, ಅವು ಪ್ರಸ್ತುತ ಇರುವ ಸ್ಥಿತಿಯಲ್ಲಿ, ಭಾಗಶ: ಅಥವಾ ಸಂಪೂರ್ಣ ನಿರ್ನಾಮ ಮಾಡುವ ಉದ್ದೇಶವಿಟ್ಟುಕೊಂಡು ಎಸಗಲಾಗುವ ಕೃತ್ಯ” ಎನ್ನಲಾಗುತ್ತದೆ.

ಇದು ಯುರೋಪ್-ಅಮೇರಿಕಾ ಮತ್ತು ವಿಶ್ವಸಂಸ್ಥೆಯ ಪರಿಗ್ರಹಿತ, ನಿರ್ವಚಿತ ಕ್ರಮ ಕೂಡಾ ಹೌದು. ಆದ್ದಾಗ್ಯೂ ಕೂಡಾ ಜಾಗತಿಕವಾಗಿ ಅಕಾಡಮಿಕ್, ನಾನ್ ಅಕಾಡಮಿಕ್ ನ್ಯಾಯಿಕ ಮತ್ತು ಅನ್ವಯಿಕ ನ್ಯಾಯ ವ್ಯವಸ್ಥೆಯ ಸಂದರ್ಭದಲ್ಲಿ ನಡೆಯುವ ಚರ್ಚೆಗಳು, ಮಾನವಹಕ್ಕುಗಳೆಂಬ ಛತ್ರಚ್ಚಾಯೆಯಡಿಯಲ್ಲಿ ನಡೆಯುವ ಸಂವಾದಗಳು ಇಂಡೋ-ಚೈನಾ ನರಮೇಧದ ಚರಿತ್ರೆಯಂತಹ ಅನೇಕ ಚಾರಿತ್ರಿಕ ಪ್ರಸಂಗಗಳನ್ನು ಮತ್ತು ಮೊನ್ನೆ ಮೊನ್ನೆ ನಡೆದ ಟರ್ಕಿ-ಅರ್ಮೇನಿಯಾ ಹಿಂಸೆ, ಗ್ವಾಟೆಮಾಲ, ಬಾಂಗ್ಲಾದೇಶ, ಟಿಬೆಟ್, ಬೋಸ್ನಿಯಾ-ಹರ್ಝೆಗೋವಿನಾ, ಕಾಂಬೋಡಿಯಾ ಹತ್ಯಾಕಾಂಡ, ಸೋವಿಯತ್ ಯೂನಿಯನ್ ನಲ್ಲಿ ತೀವ್ರಗಾಮೀ ಕಮ್ಯುನಿಸ್ಟರು ನಡೆಸಿದ ಸಾಮೂಹಿಕ ಕೊಲೆ, ಸರ್ಬಿಯಾದ ಎತ್ನಿಕ್ ಕ್ಲೀನ್ಸಿಂಗ್, ರುವಾಂಡಾದ ಹತ್ಯಾಕಾಂಡ, ಕೊಸೋವ್ ನ ಹತ್ಯಾಕಾಂಡಗಳಂತ ಅನೇಕ ಹತ್ಯಾಕಾಂಡಗಳನ್ನು, ನರಮೇಧಗಳನ್ನು ನರಮೇಧಗಳೆಂದು ಗುರುತಿಸದೇ ಇರುವಂತಹ ರಾಜಕೀಯ ಇಚ್ಚಾಶಕ್ತಿಯನ್ನು, ಅದರ ಹಿಂದಿರುವ ರಾಜಕಾರಣವನ್ನು ಕೂಡಾ ಗುರುತಿಸುತ್ತದೆ. ಇಡೀ ಸಿನಿಮಾ ನೋಡುತ್ತಿದ್ದಂತೆ ಜಪಾನ್ ಕೂಡಾ ಹೀಗೆ ಮಾಡಿದೆಯಾ? ಚರಿತ್ರೆ, ಮಾನವನ ಚರಿತ್ರೆಯಲ್ಲಿ ಇಂತದ್ದೊಂದು ಅಧ್ಯಾಯ ಇದೆಯೇ? ಎನ್ನುವ ರೀತಿ ಯೋಚನೆಗೀಡು ಮಾಡುತ್ತದೆ. ಹಾಗಿದ್ದರೆ ಅಂತಹ ಪ್ರಜ್ಞಾಪೂರ್ವಕ ಕ್ರಿಯೆಯೇ ಚರಿತ್ರೆಯ ತಿರುಳೇ? ಎಂಬ ಸಂಗತಿಯನ್ನು ಪ್ರಶ್ನೆಯ ರೂಪದಲ್ಲಿ ಇಡುತ್ತದೆ. ಸಿನಿಮಾದಲ್ಲಿ ಪ್ರಕಟವಾಗಿರುವ ಹಿಂಸೆ ಕೂಡಾ ಅತ್ಯಂತ ಚರ್ಚೆಗೀಡಾದ ಒಂದು ಸಂಗತಿ. ಆದರೆ ದಮನಿತ ಸಮುದಾಯ, ಚರಿತ್ರೆ, ಅನುಭವ ಯಾವಾಗಲೂ ಕೂಡಾ ತೀವ್ರ ತುರೀಯ ಮಾಧ್ಯಮ, ಅವಸ್ಥೆಯಲ್ಲೋ ಪ್ರಕಟಗೊಳ್ಳುತ್ತದೆ. ಅಂತಹ ಒಂದು ಪ್ರಕಟಣೆಯ ಮಾಧ್ಯಮವೇ ಈ ಹಿಂಸೆ ಎಂದು ನನ್ನ ತಿಳುವಳಿಕೆ.