ಇಂಗ್ಲೀಷ್ ಭಾಷೆಯ ಅತಿ ಕ್ಲಿಷ್ಟ ಕಾದಂಬರಿ ಎಂದೇ ಹೆಸರುವಾಸಿಯಾಗಿರುವ ಜೇಮ್ಸ್ ಜಾಯ್ಸ್‌ರ ಯೂಲಿಸಿಸ್ ಬಗ್ಗೆ ಎಷ್ಟು ಬರೆದರೂ ಸಾಕಾಗದೇನೋ. ಹದಿನೆಂಟು ಖಂಡಗಳಲ್ಲಿ ಒಂದೊಂದು ಅಧ್ಯಾಯವನ್ನೂ ಒಂದೊಂದು ಶೈಲಿಯಲ್ಲಿ ಬರೆಯಲಾಗಿದೆ. ಒಂದು ಚಾಪ್ಟರ್ ಸ್ವಗತದ ಶೈಲಿಯಲ್ಲಿದ್ದರೆ ಇನ್ನೊಂದು ಪ್ರಶ್ನೋತ್ತರದ ಮಾದರಿಯಲ್ಲಿದೆ. ಮತ್ತೊಂದು ನಾಟಕದ ಶೈಲಿಯಲ್ಲಿದೆ ಎನ್ನುವ  ಕಾವ್ಯಾ ಕಡಮೆ , ಈ ಓದು ಸುಲಭಕ್ಕೆ ದಕ್ಕುವಂತಹುದಲ್ಲ ಎನ್ನುತ್ತಾರೆ 1922ನೇ ಇಸವಿಯಲ್ಲಿ ಪ್ಯಾರಿಸ್ಸಿನ ಶೇಕ್ಸ್‌ಪಿಯರ್ ಅಂಡ್ ಕಂಪನಿ ಪ್ರಕಾಶನದಿಂದ ಬೆಳಕು ಕಂಡ ಈ ದೀರ್ಘ ಕಾದಂಬರಿಯ ಮೊದಲ ಓದಿನ ಅನಿಸಿಕೆಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.

 

ಅಂದು ಬ್ಲೂಮ್ಸ್ ಡೇ. ಏಳುನೂರಕ್ಕೂ ಅಧಿಕ ಪುಟಗಳುಳ್ಳ ಜೇಮ್ಸ್ ಜಾಯ್ಸ್‌ರ ಕ್ಲಾಸಿಕ್ ಕಾದಂಬರಿ ಯೂಲಿಸಿಸ್ ನಡೆಯುವ ದಿನ. 1904ರ ಜೂನ್ ತಿಂಗಳ 16ನೇ ತಾರೀಖು ನಡೆಯುವ ಘಟನೆಗಳನ್ನು ಪೋಣಿಸಿ ಹೆಣೆಯಲಾದ ಈ ಕಾದಂಬರಿ ಐರ್ಲ್ಯಾಂಡ್ ದೇಶದ ಡಬ್ಲಿನ್ ನಗರದಲ್ಲಿ ತೆರೆದುಕೊಳ್ಳುತ್ತದೆ. ಜಾಯ್ಸ್‌ರ ಮೊದಲ ಕಾದಂಬರಿ ‘ಅ ಪೋಟ್ರೆಟ್ ಆಫ್ ದಿ ಆರ್ಟಿಸ್ಟ್ ಆಸ್ ಅ ಯಂಗ್ ಮ್ಯಾನ್’ರಲ್ಲಿ ಬರುವ ಸ್ಟೀಫನ್ ಡೆಡ್ಯುಲಸ್ ಈ ಕಾದಂಬರಿಯ ಒಂದು ಮುಖ್ಯ ಪಾತ್ರ. ಜೊತೆಗೆ ಡಬ್ಲಿನ್ ನಗರಕ್ಕೆ ಪ್ರೇಮಪತ್ರ ಬರೆದಂತಿರುವ ಜಾಯ್ಸ್‌ರ ಕಥಾ ಸಂಕಲನ ‘ಡಬ್ಲಿನರ್ಸ್’ ಸಂಕಲನದಲ್ಲಿ ಬರುವ ಒಂದು ಕಾಲದ ಯೂರೋಪ್ ಖಂಡದ ನಗರ ಜೀವನದ ವಿಶ್ಲೇಷಣೆಗಳು ಈ ಪುಸ್ತಕದಲ್ಲಿಯೂ ಮುಂದುವರೆದಿವೆ. “ಮುಂದೊಂದು ದಿನ ಡಬ್ಲಿನ್ ನಗರ ಧ್ವಂಸಗೊಂಡರೆ ಯೂಲಿಸಿಸ್ ಕಾದಂಬರಿಯ ಪುಟಗಳನ್ನಿಟ್ಟುಕೊಂಡು ಆ ನಗರವನ್ನು ಪುನರ್ನಿರ್ಮಾಣ ಮಾಡಬಹುದು” ಎಂದು ಸ್ವತಃ ಜಾಯ್ಸರೇ ಒಮ್ಮೆ ಹೇಳಿದ್ದರಂತೆ.

ಇಂಗ್ಲೀಷ್ ಭಾಷೆಯ ಈ ಪ್ರಮುಖ ಕಾದಂಬರಿ ಪ್ರಕಟವಾಗಿ ಇನ್ನೇನು ನೂರು ವರ್ಷಗಳಾಗುವ ಈ ಸಂದರ್ಭದಲ್ಲಿ ಮರವೊಂದನ್ನು ಇಡಿಯಾಗೊಮ್ಮೆ ಕಂಡು, ಬಳಿಸಾರಿ ಕಾಂಡವನ್ನಷ್ಟೇ ಮುಟ್ಟಿ ನೋಡಿದ ಅನುಭವವನ್ನು ಹಂಚಿಕೊಳ್ಳಲು ಈ ಬರಹ.

(ಜೇಮ್ಸ್ ಜಾಯ್ಸ್‌)

ಇಂಗ್ಲೀಷಿನ ಅತಿ ಕ್ಲಿಷ್ಟ ಕಾದಂಬರಿ ಎಂದೇ ಎಲ್ಲರೂ ಹೆದರಿಸಿ ಈ ಪುಸ್ತಕದಿಂದ ದೂರವೇ ಉಳಿವಂತೆ ಮಾಡಿದ್ದರೂ ಈ ಓದಿಗಾಗಿಯೇ ಪೂರ್ತಿ ತಿಂಗಳೊಂದನ್ನು ಮುಡಿಪಾಗಿಟ್ಟು ಓದಲು ಪ್ರಯತ್ನಿಸಿದೆ. ಈ ಪುಸ್ತಕದ ಮೊದಲನೆಯ ಅಧ್ಯಾಯವಾದ ‘ಟೆಲಮೆಕಸ್’ ಭಾಗವನ್ನು ನಾಲ್ಕಾರು ಬಾರಿ ಓದಬೇಕಾಯಿತು. ಕಾರಣ, ಓದುತ್ತಲೇ ಎಷ್ಟೊಂದು ವಿವರಗಳು ಒಂದಕ್ಕೊಂದು ತಾಳೆಯಾಗುತ್ತಲೇ ಇಲ್ಲವಲ್ಲ ಎಂದು ನಿರಾಸೆಯಾಗುತ್ತಿತ್ತು. ಅಲ್ಲಲ್ಲಿ ಬರುವ ಹಾಡುಗಳು ಇನ್ನಷ್ಟು ಸರಾಗ ಓದಿಗೆ ತೊಡರಿದಂತಾಗುತ್ತಿತು. ಸ್ಟೀಫನ್ ಡೆಡ್ಯುಲಸ್ (ಈತನ ಪರಿಚಯ ಜಾಯ್ಸ್‌ರ ಮೊದಲ ಕಾದಂಬರಿಯಲ್ಲೇ ಆಗಿತ್ತು) ಎಂಬ ವ್ಯಕ್ತಿಯ ತಾಯಿ ತೀರಿಕೊಂಡಿದ್ದು ಹೌದು. ಆದರೆ ಆತ ಬಕ್ ಮಲ್ಲಿಗನ್ ಎಂಬ ಸ್ನೇಹಿತನ ಜೊತೆಗೆ ಮಾತನಾಡುವಾಗ ಮಾಡುವ ಆರೋಪಣೆಗಳು ಗೆಳೆತನದ ಸದರದಲ್ಲಿ ಮಾಡಿದ್ದು ಎಂದು ಅರ್ಥವಾಗಲೇ ಸಮಯ ಹಿಡಿಯಿತು.

ಈ ವೇಗದಲ್ಲಿ ಮುಂದುವರೆದರೆ ಈ ಪುಸ್ತಕವೊಂದನ್ನೇ ಎರಡು ವರ್ಷ ಓದಬೇಕಾದೀತು ಎಂದು ಸಂಕಟವಾಯಿತು. ನಂತರ, ಒಂದಕ್ಷರವನ್ನೂ ಬಿಡದೇ ಒಮ್ಮೆ ಓದಿಕೊಂಡು ಹೋಗುವುದು (ಆಮೇಲೆ ಮತ್ತೊಮ್ಮೆ ತಿರುಗಿ ಬರಬಹುದಲ್ಲ ಎಂಬ ಧೈರ್ಯದಿಂದ) ಎಂದು ನಿರ್ಧರಿಸಿ ಓದಲು ತೊಡಗಿದೆ. ಅಕ್ಷರಗಳ ಮೇಲೆ ಕಣ್ಣೋಡುತ್ತಿತ್ತು ನಿಜ, ಆದರೆ ಪೂರ್ತಿ ಅರ್ಥವಾಗುತ್ತಿರಲಿಲ್ಲ ಎಂಬ ಸಂಕೋಚ ಇದ್ದೇ ಇತ್ತು. ಈ ಕಾದಂಬರಿಯು, ಕ್ರಿಸ್ತಪೂರ್ವ ಎಂಟನೆಯ ಶತಮಾನದ ಗ್ರೀಕ್ ಕವಿ ಹೋಮರನ ಮಹಾಕಾವ್ಯ ಒಡಿಸ್ಸಿಯನ್ನು ಆಧರಿಸಿದೆ ಎಂದು ಗೊತ್ತಾದಮೇಲೆ ‘ಒಡಿಸ್ಸಿ’ ದೀರ್ಘ ಕವಿತೆಯನ್ನೂ ಅದೇ ಮಾದರಿಯಲ್ಲಿ ಓದಿದೆ. ಗ್ರೀಕ್ ಪುರಾಣದ ಕಥೆಯೇ ಇಪ್ಪತ್ತನೆಯ ಶತಮಾನದ ಕಥೆಗಿಂಥ ಆಪ್ತವೆನಿಸಿ ಇರುಸು ಮುರುಸಾಯಿತು.

ಹೋಮರನ ಒಡಿಸ್ಸಿ ಒಂದು ವೀರಗಾಥೆ. ತನ್ನ ಸಂಗಡಿಗರೊಂದಿಗೆ ಸಮುದ್ರದಲ್ಲಿ ಕಳೆದು ಹೋದ ಒಡಿಸಿಯಸ್ ಇಪ್ಪತ್ತು ವರ್ಷಗಳ ನಂತರ ಮನೆಗೆ ಬಂದು ಶತ್ರುಗಳನ್ನು ಕೊಂದು ತನ್ನ (ಪತಿವ್ರತೆಯಾದ?) ಹೆಂಡತಿ ಪೆನಲಪಿಯನ್ನು ಸೇರುವ ಕತೆಯ ಹೂರಣ ಒಡಿಸ್ಸಿ ಮಹಾಕಾವ್ಯವನ್ನು ರೂಪಿಸಿದರೆ ಹಲವಾರು ಪ್ರಿಯಕರರನ್ನು ಹೊಂದಿದ ಹೆಂಡತಿ ಮಾಲಿಯನ್ನು ಹಗಲೆಲ್ಲ ಎಲ್ಲೆಲ್ಲೋ ಅಲೆದು ದಿನದ ಕೊನೆಗೆ ಸೇರುವ ಲಿಯಪೋಲ್ಡ್ ಬ್ಲೂಮನ ಕತೆ ಯೂಲಿಸಿಸ್. ಒಡಿಸ್ಸಿ ಕವಿತೆಯಲ್ಲಿ ಒಡಿಸಿಯಸ್ ಮತ್ತು ಪೆನಲಪಿಯ ಮಗನಾದ ಟೆಲಮೆಕಸ್‌ನನ್ನು ಪ್ರತಿನಿಧಿಸಲು ಇಲ್ಲಿ ಬ್ಲೂಮನ ಮಗನ ವಯಸ್ಸಿನವನಾಗಿರಬಹುದಾದ ಸ್ಟೀಫನ್ ಡೆಡ್ಯುಲಸ್‌ನಿದ್ದಾನೆ. ಒಡಿಸ್ಸಿಯಿಂದ ಸ್ಫೂರ್ತಿ ಪಡೆದಿದ್ದು ಎಂದು ಜಾಯ್ಸ್ ಹೇಳಿಕೊಂಡಿಲ್ಲದಿದ್ದರೆ ಯುಲಿಸಿಸ್ ಓದುವಾಗ ಒಡಿಸ್ಸಿಯ ನೆನಪೇ ಬಾರದಷ್ಟು ಎರಡೂ ಕೃತಿಗಳ ನಡುವೆ ವ್ಯತ್ಯಾಸವಿದೆ. ಆದರೆ ಒಡಿಸ್ಸಿಯ ಉಲ್ಲೇಖ ಯುಲಿಸಿಸ್ ಕಾದಂಬರಿಗೆ ಹೊಸದೇ ಆಯಾಮ ದೊರಕಿಸಿಕೊಡುವುದು ಆಸಕ್ತಿಕರವಾಗಿದೆ. (ಅಂದಹಾಗೆ ಯುಲಿಸಿಸ್ ಮತ್ತು ಒಡಿಸ್ಸಿ ಕೃತಿಗಳು ಅಂತರ್ಜಾಲದಲ್ಲಿ ಉಚಿತವಾಗಿ ಓದಲು ಲಭ್ಯವಿವೆ. ಗ್ರಂಥಾಲಯದಿಂದ ಕಡ ತಂದು ಓದಿದರೆ ಸುಲಭ.)

ಯುಲಿಸಿಸ್ ಕಾದಂಬರಿಯ ಬಗ್ಗೆ ಎಷ್ಟು ಬರೆದರೂ ಸಾಕಾಗದೇನೋ. ಹದಿನೆಂಟು ಖಂಡಗಳಲ್ಲಿ ಒಂದೊಂದು ಅಧ್ಯಾಯವನ್ನೂ ಒಂದೊಂದು ಶೈಲಿಯಲ್ಲಿ ಬರೆಯಲಾಗಿದೆ. ಒಂದು ಚಾಪ್ಟರ್ ಸ್ವಗತದ ಶೈಲಿಯಲ್ಲಿದ್ದರೆ ಇನ್ನೊಂದು ಪ್ರಶ್ನೋತ್ತರದ ಮಾದರಿಯಲ್ಲಿದೆ. ಒಂದು ನಾಟಕದ ಪಠ್ಯದ ಹಾಗಿದ್ದರೆ ಇನ್ನೊಂದು ಸಂಗೀತದ ಚಿಹ್ನೆಗಳನ್ನು ಬಳಸಿಕೊಳ್ಳುತ್ತದೆ. ಪ್ರತೀ ಅಧ್ಯಾಯವೂ ಒಂದೇ ದಿನದ ಒಂದೊಂದು ಘಂಟೆಯ ಅಂತರದಲ್ಲಿ ಜರುಗುವ ಘಟನೆಗಳನ್ನು ಒಳಗೊಂಡಿದೆ. ಕಥೆಗಿಂಥ ವಸ್ತುವೇ ಮುಖ್ಯ ಎಂಬ ದೃಷ್ಟಿ ಜಾಯ್ಸ್‌ರಿಗೆ ಇರಬಹುದೇನೋ ಅನ್ನಿಸುತ್ತದೆ.
‘ಯೂಲಿಸಿಸ್’ ಕುರಿತಾಗಿಯೇ ವಿಶೇಷ ಅಧ್ಯಯನಗಳೂ, ಶಿಬಿರಗಳು ಎಲ್ಲೆಡೆ ನಡೆಯುತ್ತಲೇ ಇರುತ್ತವೆ. ಜಾಯ್ಸ್‌ರ ವಿಚಾರಧಾರೆಯನ್ನು ಹೊಸ ಹೊಸ ಬೆಳಕಿನಲ್ಲಿ ಕಾಣಿಸುವ ನೂರಾರು ಪುಸ್ತಕಗಳೂ ಬಂದುಹೋಗಿವೆ. ಇದೊಂದು ಪುಸ್ತಕ ಮಾತ್ರವಾಗಿರದೇ ಒಂದು ಸಂಸ್ಕೃತಿಯಾಗಿ ರೂಪಗೊಂಡಿದ್ದು ಜಾಯ್ಸ್‌ರ ಹೆಗ್ಗಳಿಕೆಯೇ ಏನೋ.

ಈ ಪುಸ್ತಕದ ಮೊದಲನೆಯ ಅಧ್ಯಾಯವಾದ ‘ಟೆಲಮೆಕಸ್’ ಭಾಗವನ್ನು ನಾಲ್ಕಾರು ಬಾರಿ ಓದಬೇಕಾಯಿತು. ಕಾರಣ, ಓದುತ್ತಲೇ ಎಷ್ಟೊಂದು ವಿವರಗಳು ಒಂದಕ್ಕೊಂದು ತಾಳೆಯಾಗುತ್ತಲೇ ಇಲ್ಲವಲ್ಲ ಎಂದು ನಿರಾಸೆಯಾಗುತ್ತಿತ್ತು. ಅಲ್ಲಲ್ಲಿ ಬರುವ ಹಾಡುಗಳು ಇನ್ನಷ್ಟು ಸರಾಗ ಓದಿಗೆ ತೊಡರಿದಂತಾಗುತ್ತಿತು.

ಪುಟಗಳಲ್ಲೂ, ವಿಸ್ತಾರದಲ್ಲೂ, ಆಳದಲ್ಲೂ ಶ್ರೀಮಂತವಾದ ಈ ಕಾದಂಬರಿಯನ್ನು ಒಂದು ಮಹಾಕಾವ್ಯದಂತೆ ಎಲ್ಲಿಂದಲೂ ಓದಲು ಶುರು ಮಾಡಬಹುದು. ಒಂದು ಪಾಪ್ಯುಲರ್ ನಂಬಿಕೆಯಂತೆ ಈ ಪುಸ್ತಕವನ್ನು ನಾಲ್ಕನೆಯ ಅಧ್ಯಾಯದಿಂದ (ಅಂದರೆ ಲಿಯಪೋಲ್ಡ್ ಬ್ಲೂಮ್‌ನ ಕಥೆ ಶುರುವಾಗುತ್ತಲೇ) ಓದಲು ಶುರು ಮಾಡಿದರೆ ಓದುಗರಿಗೆ ಹೆಚ್ಚು ಸಹಕಾರಿಯಾದೀತು ಅಂತಿದೆ. ಈ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಮತ್ತು ಬೇರೆ ಬೇರೆ ದೃಷ್ಟಿಕೋನದಿಂದ ಈ ಹೊತ್ತಿಗೆಯನ್ನು ಓದಲು ಸಹಕರಿಸಲೇ ಎಷ್ಟೊಂದು ಸ್ಟಡೀ ಗ್ರೂಪ್‌ಗಳಿವೆ. ಈ ಗ್ರೂಪ್‌ಗಳಲ್ಲಿ ಒಬ್ಬ ಮಾರ್ಗದರ್ಶಕರು ಜಾಯ್ಸ್ ಹೇಳಿರುವ ಉಲ್ಲೇಖಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬ ಕುರಿತು ವಿವರಣೆ ನೀಡುತ್ತಾರೆ. ಇಂಥ ಒಂದು ಸ್ಟಡೀ ಗ್ರೂಪ್ ಇಲ್ಲದಿದ್ದರೆ ಜಾಯ್ಸ್‌ರ ಈ ಅಖಂಡ ಕಾದಂಬರಿಯ ಒಳಗಿಳಿಯಲೇ ಕಷ್ಟವಾಗಬಹುದು.

ಸ್ವತಃ ಜಾಯ್ಸ್‌ರಿಗೂ ಈ ಬಗ್ಗೆ ಅರಿವಿತ್ತೇನೋ. “ಈ ಪುಸ್ತಕ ಪ್ರಕಟವಾಗಿ ವರ್ಷಗಳ ನಂತರವೂ ಕೆಲವು ಪುಟಗಳಲ್ಲಿ ನಾನು ಏನನ್ನು ಹೇಳ ಹೊರಟಿದ್ದೇನೆ ಎಂದು ವಿಮರ್ಶಕರು ತಲೆ ಕೆಡಿಸಿಕೊಳ್ಳುತ್ತಲೇ ಇರುತ್ತಾರೇನೋ” ಎಂದಿದ್ದರಂತೆ ಒಮ್ಮೆ ಅವರು. Open to interpretations ಎನ್ನುವ ಹಾಗೆ ಈ ಪುಸ್ತಕದಲ್ಲಿ ಹಲವಾರು ಫಟನಾವಳಿಗಳಿವೆ. ಉದಾಹರಣೆಗೆ ಸರ್ಕಾ ಎಂಬ ಅಧ್ಯಾಯದಲ್ಲಿ ಸಮಯ ಎಂಬ ಪರಿಕಲ್ಪನೆಯನ್ನೇ ಮುರುಟಿ, ಹಿಗ್ಗಿಸಿ ನೋಡಲಾಗಿದೆ. ಲಿಯಪೋಲ್ಡ್ ಬ್ಲೂಮನ ಉಭಯಲಿಂಗಿತನವನ್ನು (ಗಂಡಿನೊಳಗಿನ ಹೆಣ್ಣಿಗತನ ಎನ್ನಬಹುದೇನೋ) ವಿಮರ್ಶಿಸಲಾಗಿದೆ. What kind of perfume does your wife use? ಎನ್ನುವ ಹೇಳಿಕೆಗೆ ಎಷ್ಟು ಅರ್ಥ ಹಚ್ಚಬಹುದು!

ಗ್ರಂಥಾಲಯವೊಂದರಲ್ಲಿ ನಡೆಯುವ ಮಾತುಕತೆಯಲ್ಲಿ ಶೇಕ್ಸ್‌ಪಿಯರನ ಹ್ಯಾಮ್ಲೆಟ್ ನಾಟಕದ ವಿಶ್ಲೇಷಣೆಯೂ ಬಂದು ಹೋಗುತ್ತದೆ. ಮಾತಿನ ಭರದಲ್ಲಿ ಯೂರೋಪ್ ಖಂಡದ ರಾಷ್ಟ್ರಗಳ ನಡುವಿರುವ ಹಗೆತನದ ನಡುವೆ ಫ್ರೆಂಚರು set of dancing masters, ಆಗಿಯೂ, ಜರ್ಮನ್ನರು sausage eating bastards ಅಂತಲೂ ಜರಿಸಿಕೊಳ್ಳುತ್ತಾರೆ. ಹೆರಿಗೆ ನೋವನ್ನು ಹೇಗೆ ಹೇಗೆ ನಿವಾರಿಸಿಕೊಳ್ಳಬಹುದು ಎಂಬ ಬಗ್ಗೆ ಅಂತಃಕರಣದ ಸ್ವಗತವಿದೆ. ‘ವಾಂಡರಿಂಗ್ ರಾಕ್ಸ್’ ಎಂಬ ಅಧ್ಯಾಯದಲ್ಲಿ ಒಂದಕ್ಕೊಂದು ಸಂಬಂಧಪಡದ ನಗರ ಜೀವನದ ವಿವರಣೆಗಳನ್ನು ಒಟ್ಟಾಗಿ ಇರಿಸಿ ನೋಡಲಾಗಿದೆ. ಸಮುದ್ರ ತೀರವೂ, ವೇಶ್ಯಾಗೃಹವೂ ಒಂದೊಂದು ಪಾತ್ರವಾಗಿ ಬಂದು ಹೋಗುತ್ತದೆ. ಎಲ್ಲಕ್ಕಿಂಥ ಹೆಚ್ಚಾಗಿ ಜಾಯ್ಸ್ ಜನಪ್ರಿಯಗೊಳಿಸಿದ ‘stream of conciousness’ ತಂತ್ರದಲ್ಲಿ ಬ್ಲೂಮ್ ಮತ್ತು ಮಾಲಿಯರ ಮನಸ್ಸಿನ ಓಘದಲ್ಲಿ ಓದುಗರೂ ಭಾಗಿಯಾಗಲು ಸಾಧ್ಯವಾಗುತ್ತದೆ.

ಕಾದಂಬರಿಯ ಕಡೆಯ ಅಧ್ಯಾಯ ಪೆನಲಪಿ ನನಗೆ ಅತಿ ಇಷ್ಟವಾದ ಕಾಂಡ. ಇಡೀ ಊರು ಸುತ್ತಾಡಿ ಬಂದು ಪಕ್ಕದಲ್ಲಿ ಮಲಗಿದ ಗಂಡನನ್ನು ಹದಿನಾರು ವರ್ಷಗಳ ಹಿಂದೆ ಏಕೆ ವರಿಸಿದೆ ಎಂದು ಮಾಲಿ ಸ್ವಗತದಲ್ಲಿ ಕೇಳಿಕೊಳ್ಳುತ್ತಾಳೆ. ಗಂಡಿನ ಬಗ್ಗೆ, ವಿವಾಹದ ಬಗ್ಗೆ, ಆಗ ತರುಣಿಯಾಗಿದ್ದ ತನ್ನ ಬಗ್ಗೆ ಕೊನೆಮೊದಲಿಲ್ಲದ ಮಾತುಕತೆ ಅವಳ ಮನಸ್ಸಿನಲ್ಲಿ ಮೂಡಿ ಹೋಗುತ್ತವೆ. ಒಂದೂ ಲೇಖನ ಚಿಹ್ನೆಯನ್ನು (punctuation marks) ಬಳಸದೇ ಬರೆದಿರುವ ಈ ಪಠ್ಯವನ್ನು ಎಲ್ಲಿ ಬೇಕಿದ್ದರೂ ನಿಲ್ಲಿಸಿ, ಸೇರಿಸಿ ಓದಿಕೊಳ್ಳಬಹುದು. ಹೆಣ್ಣಿನ ಮನಸ್ಸಿನ ಓಘವನ್ನು ಯಾವುದೇ ನಿಯಮಗಳಲ್ಲಿ ಬಂಧಿಸಿಡಲು ಸಾಧ್ಯವಿಲ್ಲ ಎಂಬುದನ್ನು ಜಾಯ್ಸರ ಈ ಸೃಷ್ಟಿ ಬೆರಳು ಮಾಡಿ ತೋರಿಸುತ್ತಿರಬಹುದೇ ಅನ್ನುವಂತಿದೆ. Yes I said yes I will yes ಎಂಬ ಶಬ್ದಗಳಿಂದ ಈ ಅಧ್ಯಾಯವೂ, ಕಾದಂಬರಿಯೂ ಮುಕ್ತಾಯವಾಗುತ್ತದೆ.

ಒಡಿಸ್ಸಿ ಮಹಾಕಾವ್ಯದಲ್ಲಿಯೂ ಕೊನೆಗೆ ನಾಯಕ ಒಡಿಸಿಯಸ್‌ನ ಮಡದಿ ಪೆನಲಪಿ ದೀರ್ಘವಾಗಿ ನಿದ್ರಿಸುವ ಉಲ್ಲೇಖವಿದೆ. ಒಡಿಸಿಯಸ್ ತನ್ನ ಮನೆಯವರಿಗೆ ಕಿರುಕುಳ ಕೊಡುತ್ತಿದ್ದ ‘ಸೂಟರ್’ಗಳನ್ನೆಲ್ಲ ಹತ ಮಾಡುವಾಗ ಪೆನಲಪಿಯ ಕಣ್ಣಿನಲ್ಲಿ ದೇವತೆಯಾದ ಇಥಿನಾ ಸಿಹಿ ನಿದ್ರೆಯನ್ನು ಸುರಿದಳು ಎಂಬ ವಿವರಣೆಯಿದೆ. ಆದರೆ ಪೆನಲಪಿಯ ಮನಸ್ಸಿನಲ್ಲೇನು ನಡೆದಿರಬಹುದು ಎಂಬ ಕುರಿತು ಈ ವೀರಗಾಥೆಯಲ್ಲಿ ವ್ಯಾಖ್ಯಾನವಿಲ್ಲ. ಆ ಅಂಶವನ್ನೆತ್ತಿಕೊಂಡು ಬರೆದ ಯೂಲಿಸಸ್ ಕಾದಂಬರಿಯ ಕೊನೆಯ ಅಧ್ಯಾಯದ ಮಾತುಗಳು ಮಾಲಿಯ ಮಾತುಗಳಷ್ಟೇ ಆಗಲ್ಲದೇ ಪೆನಲಪಿಯ ಮನದ ಮಾತುಗಳಾಗಿಯೂ ಕೇಳುತ್ತವೆ.

ಪ್ರತಿ ವರ್ಷ ಜೂನ್ ಹದಿನಾರರಂದು ಐರ್ಲ್ಯಾಂಡಿನ ಡಬ್ಲಿನ್ ನಗರದಲ್ಲಿ ‘ಬ್ಲೂಮ್ಸ್ ಡೇ’ ಆಚರಿಸಲಾಗುತ್ತದೆ. ಯೂಲಿಸಿಸ್ ಕಾದಂಬರಿಯ ಕಡುಮೋಹಿಗಳೆಲ್ಲ ಈ ಕಾದಂಬರಿಯ ಪಾತ್ರಗಳಂತೆ ಅಲಂಕಾರ ಮಾಡಿಕೊಂಡು ಡಬ್ಲಿನ್ನಿನ ರಸ್ತೆಗಳ ಮೇಲೆ ನಡೆಯುತ್ತ ಈ ಪುಟಗಳ ಪಠನ ಮಾಡುತ್ತಾರಂತೆ. ಜಾಯ್ಸ್ ಬರೆದು ಮುಗಿಸಿ ನೂರು ವರ್ಷಗಳ ನಂತರವೂ ಚರ್ಚೆಯಾಗುತ್ತಲೇ ಇರುವ ಈ ಕಾದಂಬರಿಯನ್ನು ಓದುವಾಗ ಹೇಳಲಾಗದ ಧನ್ಯತೆಯೊಂದು ಮನಸ್ಸಿನಲ್ಲಿ ಮೂಡುವುದು ಸುಳ್ಳಲ್ಲ.