ಬೊಗಸೆ ತುಂಬುವ ಬುತ್ತಿ

ಕಾಲದ ಹಾದಿಯ ನಿರಂತರ ನಡಿಗೆಯಲ್ಲಿ
ನೆತ್ತಿಯ ಮೇಲೆ ಹೊಳೆದದ್ದು ಅದೆಷ್ಟೋ ತಾರೆ.
ಬಿರು ಗಾಳಿಗೆ ಸುಡು ಬಿಸಿಲಿಗೆ
ಕಣ್ಣು ಕತ್ತಲು ಕವಿದಂತಾಗಿ
ನಡೆಯಲಾಗದೆ ನಿಂತ ಕ್ಷಣಗಳಲ್ಲಿ,
ಕುಸಿಯಲು ಎಂದೂ ಬಿಟ್ಟಿಲ್ಲ ನಂಬಿ ನಿಂತ ನೆಲದೂರು.

ಏರಿದ ಏರಿಗೆ ಕೈಹಿಡಿದು
ಜಾರಿದ ಮಣ್ಣಿಗೂ ಕೈಕೊಟ್ಟವರಿಂದಲೇ
ನೆಲದ ಹಸಿರು ಇನ್ನೂ ನಳನಳಿಸುತ್ತಿದೆ.
ಬೇಸರಿಲ್ಲದ ಹಾಗೆ ಎದ್ದು ನಿಂತು
ಮತ್ತೆ ಮತ್ತೆ ನಡೆಯುವಷ್ಟು ಕಸುವೂ
ಹಾಗೆಯೇ ಉಳಿದುಕೊಂಡಿದೆ.

ಭೂಮಿ ಆಕಾಶ ಸಂಧಿಸದೇ ಉಳಿದಲ್ಲಿ
ಸದಾ ಕಣ್ಮಿಟುಕಿಸಿ ಕರೆಯುವ ಬಯಲು.
ಚಲಿಸುವ ಚಕ್ರಗಳು ಮುರಿದ ಕಡೆಯಲ್ಲೆಲ್ಲಾ
ಹಾರುವ ಬಣ್ಣಬಣ್ಣದ ಚಿಟ್ಟೆಗಳ ನೆರಳು
ಹಿಡಿ ಹಿಡಿ ಎಂದು ಸವಾಲೆಸೆದು
ಮುಟ್ಟದಂತೆ ಮುಟ್ಟಿ
ಹತ್ತಿರವಾದಂತೆ ದೂರ ಸರಿದು
ಸದಾ ಸೆಳೆಯುವ ಸಂತಸದ ಹೊನಲು.

ಯಾವುದು ನಿಜ? ಯಾವುದು ಸುಳ್ಳು?
ಯಾವುದದು ಸಿಕ್ಕಿದರೆ ಸಾಕೆನ್ನಿಸುವ ಕೆಳೆಕೂಟ?
ಇಲ್ಲಿಂದಲ್ಲಿ: ಅಲ್ಲಿಂದಿಲ್ಲಿ.
ಯಾವುದದು ಮತ್ತೆ ಮರಳುವ ಹಂಬಲವನ್ನೇ
ಮರೆಸುವ ನೋಟ?

ಚಿಟ್ಟೆಯಾಗುವ ಬೆಳಕಿನಲ್ಲಿ
ಹಾದಿಯ ತುಂಬಾ
ಕೋಶವಾಗಿಯೇ ಕಾಯುವ
ನೂರು ಕನಸ ತತ್ತಿ.
ನೆಲಮುಗಿಲ ನೆನಪಳಿದು
ನಿಂತಾಗ ಸುಮ್ಮನೆ,
ಬದುಕು ನಿರಂತರ
ಬೊಗಸೆ ತುಂಬುವ ಬುತ್ತಿ.