ವರ್ಗ ಅಸಮಾನತೆಯ ಸಮಾಜದಲ್ಲಿ ಹಂಚುತತ್ವದ ಈ ಆಧ್ಯಾತ್ಮಿಕ ಮಿತ್‌ ಗಳಿಗೆ ಮಾರ್ಮಿಕವಾದ ಅರ್ಥವಿದೆ. ಇಲ್ಲಿ ಆಹಾರವು ಸಹಾನುಭೂತಿ ತೋರುವ ಹಾಗೂ ಮನುಷ್ಯ ಸಂಬಂಧ ಬೆಸೆವ ಸಾಧನವಾಗುತ್ತದೆ. ಆಹಾರದ ವಿಷಯದಲ್ಲಿ ದಲಿತರ ಜತೆ ಸಹಭೋಜನದ ಏರ್ಪಾಟನ್ನು ಮುದ್ದಾಮಾಗಿ ಮಾಡಿದವರು ಇಂಚಗೇರಿಯವರು. `ದಲಿತರ ಕೇರಿಯಲ್ಲಿ ಉಣ್ಣದ ಹೊರತು ಮುಕ್ತಿಯಿಲ್ಲ’ ಎಂಬ ವಾಚ್ಯ-ಆಧ್ಯಾತ್ಮಿಕ ಎರಡೂ ಅರ್ಥದಲ್ಲಿ ಸಲ್ಲುವ ತತ್ವಪದವೊಂದು ಅವರಲ್ಲಿದೆ.
ರಹಮತ್‌ ತರೀಕೆರೆ ಬರೆದ ಹೊಸ ಪುಸ್ತಕ ‘ಕರ್ನಾಟಕ ಗುರುಪಂಥʼ ದಿಂದ ಒಂದು ಲೇಖನ

ಗುರುಪಂಥ ಮತ್ತು ಆಹಾರತತ್ವ

ಜಾತಿ ಲಿಂಗ ಧರ್ಮ ಭಾಷೆ ಪ್ರದೇಶಗಳ ಆಧಾರದಲ್ಲಿ ಭೇದ ಮತ್ತು ದ್ವೇಷ ಸಾಧನೆ ಮಾಡುವ ಸಮಾಜಗಳಲ್ಲಿ, ಆಹಾರ-ಪಾನೀಯಗಳು ರುಚಿ-ಹಸಿವುಗಳಿಗೆ ಸಂಬಂಧಿಸಿದ ವ್ಯಕ್ತಿಗತ ಸಂಗತಿಗಳಷ್ಟೆ ಆಗಿರುವುದಿಲ್ಲ; ಅವು ವ್ಯಕ್ತಿಯನ್ನು ಗೌರವಿಸುವ- ಅಪಮಾನಿಸುವ ಸಾಮಾಜಿಕ ವಿಷಯಗಳೂ ಆಗಿರುತ್ತವೆ. ಇಲ್ಲಿನ ಸಮಸ್ಯೆ ಆಹಾರ ಸಾಮಗ್ರಿಯದಲ್ಲ, ತಯಾರಿಕೆ ಮತ್ತು ಹಂಚಿಕೆಯದು; ಯಾವ ಆಹಾರ, ಯಾರ ಜತೆ, ಯಾವ ಜಾಗ ಮತ್ತು ಹೊತ್ತಲ್ಲಿ ಸೇವಿಸಬೇಕು ಎಂಬುದು. ಈ ದೃಷ್ಟಿಯಿಂದ ಗುರುಪಂಥವು ತನ್ನದೇ ಆಹಾರ-ಪಾನೀಯ ತತ್ವವನ್ನು ಕಟ್ಟಿಕೊಂಡಿದೆ. ಈ ತತ್ವದಲ್ಲಿ ಸಾಮೂಹಿಕ ಭೋಜನದ, ಎಂಜಲು-ಮಡಿ ನಿರಾಕರಣೆಯ, ಆಹಾರ ಸ್ಥಳೀಯತೆಯ ಹಾಗೂ ಆಹಾರಭೇದದ ಮುಖಗಳಿವೆ. ಈ ಮುಖಗಳು ಆಯಾ ಗುರುಮಾರ್ಗಗಳ ಜೀವನದೃಷ್ಟಿಯ ಬೇರ್ಪಡಿಸದ ಭಾಗಗಳೂ ಆಗಿವೆ.

1. ಪಂಥದ ಕಾರ್ಯಕ್ರಮಗಳಲ್ಲಿ ತತ್ವಜಿಜ್ಞಾಸೆ ಹಾಗೂ ತತ್ವಗಾಯನಗಳಷ್ಟೇ ಪ್ರಮುಖವಾದುದು, ಸಾಮೂಹಿಕ ಆಹಾರ ತಯಾರಿಕೆ ಮತ್ತು ಸೇವನೆಯ ಆಚರಣೆ. ದಲಿತರೂ ಸವರ್ಣೀಯರೂ ಮುಸ್ಲಿಮರೂ ಒಟ್ಟಾಗಿ ಅಟ್ಟುಣ್ಣುವ ಈ ಸನ್ನಿವೇಶವು, ಗುಡಿಕಲ್ ಚಿಕ್ಕಮ್ಮನಹಳ್ಳಿ ಚಿಕ್ಕೇನಹಳ್ಳಿ ಕಡಕೋಳ ಮುಂತಾದೆಡೆ ಕಾಣಸಿಗುತ್ತದೆ. ಈ ಕೂಡು ತಯಾರಿಕೆ-ಸೇವನೆಯಲ್ಲಿ ಮೈಲಿಗೆ-ಎಂಜಲುಗಳ ಆತಂಕವಿಲ್ಲ. ಇದನ್ನು ಭಾರತೀಯ ಗುರುಪಂಥಕ್ಕೆ ಸೇರಿದ ಗುರುದ್ವಾರ ಹಾಗೂ ದರ್ಗಾಗಳಲ್ಲೂ ಕಾಣಬಹುದು. ಎಂತಲೇ ಗುರುಗದ್ದುಗೆಗಳ ಆಸುಪಾಸಲ್ಲಿ ಅಡುಗೆಮನೆಗಳಿರುತ್ತವೆ. ಗುರುವಿನ ಪುಣ್ಯತಿಥಿಯು ಮನೆಯ ಹಿರೀಕರ ಹಬ್ಬದಂತಿದ್ದು, ಅದು ಗುರುವಿನ ಕುಲದವರ ಕುಟುಂಬದ ಚೌಕಟ್ಟಿನಲ್ಲಿ ಏರ್ಪಡುತ್ತದೆ. ಕೆಲವೆಡೆ ಸಾಧಕರ ಮನೆಗಳಿಂದ ಬಂದ ದವಸ ಕಾಯಿಪಲ್ಲೆ ಕಾಳುಗಳಿಂದ ಅಡುಗೆ ಸಿದ್ಧಗೊಳ್ಳುವುದು. ಭಜನಾ ತಂಡಗಳು ಪಾಕಪ್ರವೀಣರನ್ನು ಕರೆತರುವುದೂ ಇದೆ. ಶಿವರಾತ್ರಿಯ ಅಥವಾ ಶವಸಂಸ್ಕಾರದ ಭಜನೆಯಲ್ಲಿ ಗಾಯಕರಿಗೂ ಶ್ರೋತೃಗಳಿಗೂ ಚಹಾತಿಂಡಿಯ ಸರಬರಾಯಿ ಕಡ್ಡಾಯ ವಾಗಿರುತ್ತದೆ. ಆರಾಧನೆಗಳಲ್ಲಿ ಹೊರಗಿಂದ ಬಂದವರು ತಮಗಾಗೇ ಅಟ್ಟಿಕೊಳ್ಳುವ ಅವಕಾಶವಿದೆಯಾದರೂ, ಸಾಮೂಹಿಕ ಆಹಾರ ತಯಾರಿಕೆ ಮತ್ತು ಸೇವನೆಯೇ ಪವಿತ್ರವೆಂದು ಪರಿಗಣಿತವಾಗಿದೆ.

ಸಾಧಕರು ತರಕಾರಿ ಹಚ್ಚುವ ಒಲೆಹೂಡುವ ಕಾರಕಡೆವ ಬೇಯಿಸುವ ಬಡಿಸುವ ಕಾರ್ಯದಲ್ಲಿ ಸ್ವಯಂ ಸೇವಕರಾಗುವರು. ಬಾಗೂರಿನ ಪರಪ್ಪಸ್ವಾಮಿ ಮಠದಲ್ಲಿ ಶಿವರಾತ್ರಿಯಂದು ಊರವರೆಲ್ಲ ಸೇರಿ ರೊಟ್ಟಿಪಲ್ಯ ತಯಾರಿಸುವರು; ಕಡಕೋಳ-ಅಂಕಲಿಮಠಗಳ ಜಾತ್ರೆಗಳಲ್ಲೂ ಈ ಪದ್ಧತಿಯಿದೆ. ಹಲವು ಮೂಲದಿಂದ ಬಂದ ಸಾಮಗ್ರಿ ಒಂದೇ ಪಾತ್ರೆಯಲ್ಲಿ ಬೇಯುವುದು, ಹಲವು ಹಿನ್ನೆಲೆಗಳಿಂದ ಬಂದವರು ಹಂಚುಣ್ಣುವುದು, ಒಬ್ಬ ಗುರುವಿನ ಕೇಂದ್ರದಲ್ಲಿ ಹಲವು ಅನುಯಾಯಿಗಳು ಒಗ್ಗೂಡುವುದು-ಇವು ಒಂದೇ ಸರಪಳಿಯ ಕೊಂಡಿಗಳು. ಹಂಚುಣ್ಣುವಿಕೆ ಮನುಷ್ಯರ ಮಧ್ಯೆ ಮಾತ್ರವಲ್ಲ, ಇತರೆ ಜೀವಿಗಳ ಜತೆಗೂ ಇರುವುದು. ನಾಯಿಗುಣಿಸಿದ ಬಳಿಕವೇ ಉಣ್ಣುತ್ತಿದ್ದ ವೆಂಕಟಗಿರಿಯಪ್ಪನವರಿಗೂ ಭಿಕ್ಷೆ ನೀಡಿದ ಮಹಿಳೆಗೂ, ನಡೆದ ಮಾತುಕತೆಯೊಂದು ಹೀಗಿದೆ:

“ಮೊದ್ಲು ನೀನ್ ತಿನ್ನು ಸಾಮಿ. ಆಮ್ಯಾಕ್ಕ ನಿನ್ ನಾಯ್ಗೆ ನಾನೆ ಆಕ್ತೀನಿ”

“ನಾನ್ ಬ್ಯಾರೆ ನೀನ್ ಬ್ಯಾರೆ ನಾಯಿ ಬ್ಯಾರೆ ಅಂತ ತಿಳ್ಕೊಂಡು ಕೆಟ್ಟೋಗ್ತೀಯೆ. ಒಂದೇ ಮರ್ದಾಗಿನ ಬ್ಯಾರೆಬ್ಯಾರೆ ಕೊಂಬೆಗಳ್ ನಾವು” (ಪದ್ಮಾಲಯ:2012: 55)

(ರಹಮತ್‌ ತರೀಕೆರೆ)

ಮರ ಮತ್ತು ಕೊಂಬೆಗಳ ರೂಪಕವು, ಪ್ರಾಣಿ ಮತ್ತು ಮನುಷ್ಯರನ್ನು ಜೈವಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಒಂದೇ ಚೌಕಟ್ಟಿನಲ್ಲಿಡುತ್ತಿದೆ. ಮುಕುಂದೂರು ಸ್ವಾಮಿಗಳ ಸ್ವಭಾವವೂ ಹೀಗೇಯಿತ್ತು: “ಒಮ್ಮೆ ಒಬ್ಬ ಮುದುಕಿ ಬಂದು ಜೋಳದರೊಟ್ಟಿ ಕೊಡುತ್ತಾಳೆ. ಅದನ್ನು ಇಸಿದುಕೊಂಡ ಸ್ವಾಮಿ, ಇವ್ನೊಳ್ಳೆ ಪಸಂದೈದಾನೆ. ಇವ್ನಿಗೊಬ್ಬ ಗೆಣೆಕಾರ ಸಿಕ್ಕರೆ ಇನ್ನಾ ಪಸಂದಾಗ್ತಾನೆ. ಇವ್ನಿಗೊಬ್ಬ ಗೆಣೆಕಾರನ್ನ ಕೊಡಮ್ಮ ಎಂದು ಮತ್ತೊಂದು ಮನೆಗೆ ಹೋಗುತ್ತಾರೆ. ಅಲ್ಲಿ ಚಟ್ನಿ ಹಾಕಿಸಿಕೊಂಡು ಬೀದಿಯುದ್ದಕ್ಕೂ ನಗುತ್ತಾ ಹಾಡುತ್ತಾ, ಹಿಂಬಾಲಿಸುತ್ತಿದ್ದ ಮಕ್ಕಳಿಗೂ ನಾಯಿಗಳಿಗೂ ಒಂದೊಂದು ಚೂರು ಕೊಡುತ್ತಾ, ನೀನೂ ತಗೊಳ್ಳೋ ಕಣ್‍ ಬಿಡಬೇಡ ಎಂದು ತಮ್ಮ ಬಾಯಿಗೂ ಒಂದಿಷ್ಟು ಹಾಕುತ್ತ ನಡೆದು ಬಿಡುತ್ತಾರೆ.” (ಕೃಷ್ಣಶಾಸ್ತ್ರಿ: 1993:25) ಸಾಧಕರಲ್ಲಿ ಸಾಮಾಜಿಕ ತರತಮದ ಗೋಡೆ ಏಳದಂತೆ, ಸಾಮಾಜಿಕ ಸಮಾನತೆ ಪಾಲಿಸುವ ಕೊಂಡಿಯಾಗಿ ಆಹಾರತತ್ವ ರೂಪುಗೊಂಡಿರುವುದನ್ನು, ಈ ಪ್ರಸಂಗಗಳು ಮನಗಾಣಿಸುತ್ತವೆ.

ಜಾತಿಸಮಾಜದಲ್ಲಿ ಆಹಾರವು ಪೋಷಕವೂ ಹಿಂಸ್ರಕವೂ ಆಗಿದೆ. ಊಟಕ್ಕೆ ಕೂತವರನ್ನು, ಜಾತಿ ಧರ್ಮ ವರ್ಗದ ಗುರುತು ಕೇಳಿ ಪಂಕ್ತಿಯಿಂದ ಎಬ್ಬಿಸಿಕಳಿಸುವ ಘಟನೆಗಳು ವರದಿಯಾಗುತ್ತಲೇ ಇವೆ. ಆಹಾರದ ಪ್ರಶ್ನೆಯು ವ್ಯಕ್ತಿಯ, ಧರ್ಮದ ಅಥವಾ ಪಂಥದ ಸಾಮಾಜಿಕ ನಿಲುಮೆಯನ್ನಳೆವ ಮಾನದಂಡವಾಗಿದೆ. ಎಂತಲೇ ಎಲ್ಲರ ಮನೆಯಿಂದ ಭಿಕ್ಷುಗಳು ಪಿಂಡಪಾತ ಸ್ವೀಕರಿಸಬೇಕೆಂದು ವಿಧಿಸುವ ಮೂಲಕ, ಬುದ್ಧನು ಜಾತಿಗೂ ಆಹಾರಕ್ಕೂ ಇದ್ದ ಎಳೆಯನ್ನು ಕತ್ತರಿಸಿದನು; ಭಕ್ತರ ಚೌಕಟ್ಟಿನೊಳಗೆ ಬಂದವರಲ್ಲಿ ಸಮಾನತೆ ತರುವ ತಂತ್ರವನ್ನಾಗಿ ಕೂಡೂಟದ ಆಚರಣೆಯನ್ನು ಶರಣರೂ ವಿಧಿಸಿದರು; ಲಿಂಗದೀಕ್ಷೆ ಪಡೆದವರ ಮನೆಯಲ್ಲಿ ಉಣ್ಣದೆ ಅಕ್ಕಿಪಡಿ ಕೊಂಡೊಯ್ಯುವವರ ಮೇಲೆ ಹರಿಹಾಯ್ದರು. ಆಹಾರ ಸೇವನೆಯು ಸಾಮಾಜಿಕ ಬಂಧುತ್ವ ಕಟ್ಟುವ ಪರಿಣಾಮಕಾರಿ ಉಪಾಯವಾಗಿದೆ. ಎಂತಲೇ ಗುರುಪಂಥದಲ್ಲಿ ಪಂಕ್ತಿಭೇದ ಮಾಡುವವರಿಗೆ ಗರ್ವಭಂಗವಾಗುವ ಮಿತ್‍ ಗಳಿವೆ.

ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಬಮ್ಮನಹಳ್ಳಿ ಭೀಮಾಶಂಕರರು ಅಬ್ರಾಹ್ಮಣ ಗುರುವಿನ ಶಿಷ್ಯನಾಗಿದ್ದರಿಂದ, ಅವರ ಭೋಜನ ನಿರಾಕರಿಸಿದ ದ್ವಿಜರಿಗೆ ಹೊಟ್ಟೆಬೇನೆ ಶುರುವಾಗುತ್ತದೆ. ಭೋಜನ ಸ್ವೀಕರಿಸಿದ ಬಳಿಕ ಅದು ನಿಲ್ಲುತ್ತದೆ. ಕೆಳಜಾತಿಯ ಸಾಧಕರನ್ನು ಪಂಕ್ತಿಯೂಟದಿಂದ ಎಬ್ಬಿಸಿದಾಗ ಅನ್ನ ಹುಳವಾಗುವ; ಕೊಳಕಾಗಿದ್ದಾರೆ ಎಂಬ ಕಾರಣಕ್ಕೆ ಭೋಜನಶಾಲೆಗೆ ಪ್ರವೇಶ ನಿರಾಕರಿಸಲ್ಪಟ್ಟ ಸಂತರು ಪವಾಡಗೈದು ಮತ್ತೊಮ್ಮೆ ಆಹ್ವಾನ ಪಡೆವ, ಕಥೆಗಳಿವೆ. ಫಕೀರರ ಪಂಕ್ತಿಯಲ್ಲಿ ಊಟಕ್ಕೆ ಕೂರಲು ಸಂಪ್ರದಾಯಸ್ಥ ದ್ವಿಜರು ನಿರಾಕರಿಸಿದಾಗ, ಸೂಫಿಸಂತನು ಸ್ವತಃ ಪ್ರತ್ಯಕ್ಷವಾಗಿ ಸಮಸ್ಯೆ ನಿವಾರಿಸುವ ಪ್ರಸಂಗವೊಂದು ವಡಬಾಳ ನಾಗನಾಥರ ಜೀವನದಲ್ಲಿದೆ. ಈಯೆಲ್ಲ ಪ್ರಕರಣಗಳು ಗುರುಪಂಥವು ಆಹಾರದ ನೆಪದಲ್ಲಿರುವ ಸಾಮಾಜಿಕ ಭೇದಭಾವಗಳಿಗೆ ಮಾಡಿರುವ ಮಾನವೀಯ ತಿದ್ದುಪಡಿಗಳಂತಿವೆ.

ಸದಾಶಿವಯೋಗಿಯವರು ತಮ್ಮ ಗುರುಗಳು “ಯೋಗ-ಧ್ಯಾನಗಳ ಜೊತೆ ಜಾತಿ ಪಂಗಡಗಳನ್ನು ಮರೆತು, ಸಮಾನ ಪಂಕ್ತಿಯಲ್ಲಿ ಉಣಬಡಿಸುತ್ತಾ ಸಮಾಜವಾದಿಯಾಗಿ ಮತ್ತು ಮಾನವಪ್ರೇಮಿಯಾಗಿ ಮೆರೆದರು” (2010:24) ಎಂದು ಬರೆಯುತ್ತಾರೆ. `ಸಮಾನಪಂಕ್ತಿ’ ಎಂಬುದು ಮೌಲ್ಯಮಾಪಕ ಪರಿಭಾಷೆಯಾಗಿದ್ದು, ಸಾಧನೆಯು ಸಾಮಾಜಿಕ ಪ್ರಜ್ಞೆಯಾಗಿ ಬದಲಾಗುವ ತಾರ್ಕಿಕ ಕೊನೆಯಾಗಿದೆ. ಅನೇಕ ಸಂತರು ಎಲ್ಲ ಜಾತಿಯವರ ಮನೆಯಿಂದ ಭಿಕ್ಷೆ ಸ್ವೀಕರಿಸುತ್ತಿದ್ದರು. ಕುಟುಂಬದ ಆಸರೆಯಿಲ್ಲದ ಅವರಿಗೆ ಸಾರ್ವಜನಿಕ ಉಣಿಸು ಅನಿವಾರ್ಯವೂ ಆಗಿತ್ತು. ಕೋಲಾರ ಸೀಮೆಯಲ್ಲಿ ಗುರುಮಾರ್ಗದಿಂದ ಪ್ರೇರಿತರಾದ ಸಾಮಾಜಿಕ ಕಾರ್ಯಕರ್ತರು, ಜಾತಿಪಾವಿತ್ರ್ಯ ಮುರಿಯಲು ದಲಿತರ ಜತೆ ಉಣ್ಣುವ ಕಾರ್ಯಕ್ರಮಗಳನ್ನೇ ಹಮ್ಮಿಕೊಂಡರು.

2. ಬಾಯಿ ನಾಲಗೆ ಹಲ್ಲುಗಳು ಭಾಗವಹಿಸುವ ಆಹಾರ ಪಾನೀಯ ಮತ್ತು ಧೂಮಪಾನಗಳು, ಮೂಲತಃ ಎಂಜಲು ಸಂಬಂಧೀ ಕ್ರಿಯೆಗಳು. ಮೇಲ್ಜಾತಿಯವರು ಉಂಡೆಲೆಯ ಮೇಲೆ ಇತರ ಜಾತಿಯವರು ಉರುಳುವ ಆಚರಣೆಯಿರುವ ಸಮಾಜದಲ್ಲಿ, ಗುರುಪಂಥವು ಎಂಜಲನ್ನು ಜಾತಿಕಟ್ಟು ಮುರಿವ ತಂತ್ರವಾಗಿ ಬಳಸಿತು. ಕೆಲವು ಮಾರ್ಗ ಗಳಲ್ಲಿ ಗುರುಕುಡಿದು ಬಿಟ್ಟ ಹಾಲನ್ನು ಸೇವಿಸುವ ಮೂಲಕ ದೀಕ್ಷೆ ಶುರುವಾಗುತ್ತದೆ. ಇದು ಹೊಸಪಿತೃತ್ವ ಸ್ಥಾಪನೆಯ ಹಾಗೂ ಸಾಮಾಜಿಕ ಭೇದ ನಿರಾಕರಿಸುವ ಉಪಕ್ರಮ. ಮುಕುಂದೂರು ಸ್ವಾಮಿಯವರಿಗೆ ಜನ ತಿನ್ನಲು ಕೊಟ್ಟರೆ `ಆಕು ಆಕು, ಈ ಮುಸುರೆ ಈ ಬಾನಿ ಒಳಗೆ ಸೇರುತ್ತೆ’ ಎಂದು ಸ್ವೀಕರಿಸುತ್ತಿದ್ದರು. ಈಯೆಲ್ಲ ಆಚರಣೆ ಮತ್ತು ಸಮೀಕರಣಗಳಿಗೆ ತಕ್ಕನಾಗಿ ಮಡಿಯನ್ನು ಪ್ರಶ್ನಿಸುವ ತತ್ವಪದಗಳಿವೆ.

ಅಂಬಾಮಠದಲ್ಲಿ ಕೊಕಟನೂರು ಮೇಳದವರು `ಮೀಸಲ ಮೀಸಲೆಂದರ’ ಎಂಬ ಎಂಜಲಿನ ಕಲ್ಪನೆಯನ್ನು ಪ್ರಶ್ನಿಸುವ ಪದವನ್ನು ಹಾಡಿದರು. ಅದರಲ್ಲಿ `ಬೆಣ್ಣೆಯೆಂಬುದು ಕಡಗೋಲದೆಂಜಲು’, `ಕುಬುಸವು ಕತ್ತರಿಯೆಂಜಲು’, `ಬಂಗಾರೆಂಬುದು ಬೆಂಕಿಯೆಂಜಲು’ ಆಗುತ್ತದೆ. ಅಗ್ನಿಗೆ ಸರ್ವಭಕ್ಷಕ ಎಂಬ ಹೆಸರಿದ್ದು, ಅದು ಉಂಡುಳಿಸಿದ ಎಲ್ಲವೂ ಎಂಜಲಾಗುತ್ತದೆ. ಶರಣರಲ್ಲೂ ನೀರು ಮೀನೆಂಜಲಾಗುವ ಪುಷ್ಪವು ದುಂಬಿಯೆಂಜಲಾಗುವ ಚಿತ್ರಗಳಿವೆ. ಈ ಚಿತ್ರಗಳಲ್ಲಿ ಎಂಜಲು ಸೃಷ್ಟಿಸುತ್ತಿರುವ ಕಡೆಗೋಲು ಕತ್ತರಿ ಬೆಂಕಿ ದುಂಬಿಗಳು ಬೆಣ್ಣೆ ಕುಬುಸ ಚಿನ್ನ ಫಲದ ಉತ್ಪಾದನ ಪ್ರಕ್ರಿಯೆಯ ಭಾಗವಾಗಿದ್ದು, ಎಂಜಲು ಸೃಜನಶೀಲವೆಂದೂ ಧ್ವನಿಸುತ್ತಿವೆ. ಮತ್ತೊಬ್ಬರ ದೇಹಜನ್ಯ ರಸಗಳ ಸೇವನೆ ಎಂಜಲು ಎನ್ನುವುದಾದರೆ, ರತಿಕ್ರೀಡೆ ಮತ್ತು ಹುಟ್ಟುಗಳ ಹಿಂದೆಯೂ ಎಂಜಲಿದೆ. ಸಾಧಕರ ಸಾಮೂಹಿಕ ಭಂಗಿಸೇವನೆಯನ್ನು ಎಂಜಲಿಲ್ಲದೆ ಕಲ್ಪಿಸಿಕೊಳ್ಳಲಾಗದು. ಸಾಮೂಹಿಕ ಆಹಾರ-ಪಾನೀಯ-ಧೂಮ್ರ ಸೇವನೆಯ ಭಾಗವಾಗಿರುವ ಮೇಲ್ಕಾಣಿಸಿದ ಆಚರಣೆಗಳು, ಎಂಜಲನ್ನು ಸಾಮಾಜಿಕ ಅಭೇದತತ್ವದ ಉಪಕರಣವಾಗಿಸಿವೆ.

3. ಆಹಾರವಿಲ್ಲದ ಹೊತ್ತಲ್ಲಿ ಅತಿಥಿ ಬರುವ, ಇರುವುದರಲ್ಲೇ ಹಂಚಿಕೊಂಡು ತಿನ್ನುವ, ಎಷ್ಟು ತಿಂದರೂ ಖಾಲಿಯಾಗದ ಹಾಗೂ ಅಡುಗೆ ಮಿಗುವ ಕಥೆಗಳು ಗುರುಮಾರ್ಗಗಳಲ್ಲಿ ಚಾಲ್ತಿಯಲ್ಲಿವೆ. `ಸಿದ್ಧಾರೂಢರ ಸಾರು ಉಂಡವರೆಲ್ಲ ಪಾರು’, `ಸಿದ್ಧಾರೂಢರ ಜೋಳೀಗೆ ಊರಿಗೆಲ್ಲ ಹೋಳಿಗೆ’ ಇತ್ಯಾದಿ ಉಕ್ತಿಗಳಲ್ಲಿ, ಸಂತರನ್ನು ಆಹಾರ ಸಂಸ್ಕೃತಿಯ ಜತೆಗೆ ಜೋಡಿಸಲಾಗುತ್ತಿದೆ. ಮುಕುಂದೂರುಸ್ವಾಮಿ ಅವರು, ಹಸಿದವರಿಗೆ ಬಾಳೆಹಣ್ಣನ್ನು ಕೊಡುವ `ಪವಾಡ’ ಮಾಡುತ್ತಿದ್ದರು; ಬರಗಾಲದಲ್ಲಿ ಕೆಂಚಾವಧೂತರು ದಲಿತರ ಮನೆಯಿಂದ ತಂದ ರೊಟ್ಟಿಭಿಕ್ಷೆ ಎಲ್ಲರಿಗೆ ಹಂಚಿದರೂ ಉಳಿಯುತ್ತಿತ್ತಂತೆ. ಇಂಚಗೇರಿ ಪರಂಪರೆಯ ಗುರುಮಲ್ಲೇಶ ಮಹಾರಾಜರು, ತಮ್ಮ ಶಿಷ್ಯರಾದ ಸಂಗಯ್ಯಪ್ಪನವರು ದಲಿತರ ಮನೆಯಿಂದ ತಂದ ಹೋಳಿಗೆಯನ್ನು, ಸವರ್ಣೀಯರ ವಿರೋಧ ಲೆಕ್ಕಿಸದೆಯೇ ಪರಮಾಯಿಶಿಯಿಂದ ತಿನ್ನುವ ಪ್ರಸಂಗವಿದೆ. ಈ ಪ್ರಕರಣಗಳಲ್ಲಿರುವ ಹಸಿವಿನ ಪ್ರಶ್ನೆಗೆ ಸಾಮಾಜಿಕ ಪ್ರಜ್ಞೆಯ ಆಯಾಮವಿದೆ. ಅದರಲ್ಲೂ ಸಾಮಾಜಿಕ ಸಮಾನತೆಯ ಕ್ಷಾಮವನ್ನು ಬಾಳಿಡೀ ಉಣ್ಣುವ ದಲಿತರ ಮನೆಯ ರೊಟ್ಟಿಯು, ಬರಗಾಲದಲ್ಲಿ ನೆರವಾಗುತ್ತಿರುವುದು ಧ್ವನಿಪೂರ್ಣವಾಗಿದೆ.

ಭಕ್ತರ ಚೌಕಟ್ಟಿನೊಳಗೆ ಬಂದವರಲ್ಲಿ ಸಮಾನತೆ ತರುವ ತಂತ್ರವನ್ನಾಗಿ ಕೂಡೂಟದ ಆಚರಣೆಯನ್ನು ಶರಣರೂ ವಿಧಿಸಿದರು; ಲಿಂಗದೀಕ್ಷೆ ಪಡೆದವರ ಮನೆಯಲ್ಲಿ ಉಣ್ಣದೆ ಅಕ್ಕಿಪಡಿ ಕೊಂಡೊಯ್ಯುವವರ ಮೇಲೆ ಹರಿಹಾಯ್ದರು.

ವರ್ಗ ಅಸಮಾನತೆಯ ಸಮಾಜದಲ್ಲಿ ಹಂಚುತತ್ವದ ಈ ಆಧ್ಯಾತ್ಮಿಕ ಮಿತ್‌ ಗಳಿಗೆ ಮಾರ್ಮಿಕವಾದ ಅರ್ಥವಿದೆ. ಇಲ್ಲಿ ಆಹಾರವು ಸಹಾನುಭೂತಿ ತೋರುವ ಹಾಗೂ ಮನುಷ್ಯ ಸಂಬಂಧ ಬೆಸೆವ ಸಾಧನವಾಗುತ್ತದೆ. ಆಹಾರದ ವಿಷಯದಲ್ಲಿ ದಲಿತರ ಜತೆ ಸಹಭೋಜನದ ಏರ್ಪಾಟನ್ನು ಮುದ್ದಾಮಾಗಿ ಮಾಡಿದವರು ಇಂಚಗೇರಿಯವರು. `ದಲಿತರ ಕೇರಿಯಲ್ಲಿ ಉಣ್ಣದ ಹೊರತು ಮುಕ್ತಿಯಿಲ್ಲ’ ಎಂಬ ವಾಚ್ಯ-ಆಧ್ಯಾತ್ಮಿಕ ಎರಡೂ ಅರ್ಥದಲ್ಲಿ ಸಲ್ಲುವ ತತ್ವಪದವೊಂದು ಅವರಲ್ಲಿದೆ. ಇಂಚಗೇರಿಯ ಮಹದೇವಪ್ಪನವರು ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮದ ಭಾಗವಾಗಿ ಕೂಡೂಟದ ಪದ್ಧತಿಯನ್ನು ಆಶ್ರಮದಲ್ಲೂ ಜಾರಿತಂದರು. ಈಗಲೂ ಈ ಪರಂಪರೆಯ ಗುರುಗಳು ಹಿಪ್ಪರಗಿಯಲ್ಲಿ ದಲಿತರ ಕೇರಿಯಲ್ಲಿ ಸಹಭೋಜನ ಮಾಡುವರು. ಬ್ರಾಹ್ಮಣ ಹಿನ್ನೆಲೆ ಯಿಂದ ಬಂದ ಸಿಂದಗಿ ಭೀಮಾಶಂಕರ ಪರಂಪರೆಯವರು, ಹಿಂದೆ ದಲಿತ ಕೇರಿಯಲ್ಲಿ ಪ್ರಥಮ ಭಿಕ್ಷೆ ಸ್ವೀಕರಿಸುವ ಸಂಪ್ರದಾಯವಿತ್ತು. ಆಹಾರದ ಮೂಲಕ ನಿರ್ಜಾತೀಕರಣ ಗೊಳ್ಳುವ ಶರಣರು ಆರಂಭಿಸಿದ ಜಾಡಿನಲ್ಲಿ ಗುರುಪಂಥದ ಬಹಳಷ್ಟು ಮಾರ್ಗಗಳು ನಡೆದವು. ಹಾಗೆ ನಡೆವುದು ಅವಕ್ಕೆ ಅನಿವಾರ್ಯವೂ ಆಗಿತ್ತು.

4. ಮಾಂಸಾಹಾರವನ್ನು ತಾಮಸವೆಂದೂ ಅದನ್ನುಂಡವರು ದುಷ್ಟ ಸ್ವಭಾವ ದವರೆಂದೂ ಹೀನೈಸುವ ಮನೋಭಾವವು ಸಮಾಜದಲ್ಲಿದೆ. ಈ ಹಿನ್ನೆಲೆಯಲ್ಲಿ ಗುರುಪಂಥದ ಆಚರಣೆಗಳಲ್ಲಿರುವ ಮಾಂಸಾಹಾರದ ಪ್ರಶ್ನೆಯನ್ನು ಗಮನಿಸಬೇಕು. ಇಲ್ಲಿನ `ಕಾರ್ಯ’ಗಳಲ್ಲಿ ಸಸ್ಯಾಹಾರವು ಸಾಮಾನ್ಯವಾಗಿದೆ. ಶಾಕ್ತ-ಅವಧೂತ ಹಿನ್ನೆಲೆಯ ತಿಪ್ಪಾವಧೂತರ ನಗರಗೆರೆ, ಕೆಂಚಾವಧೂತರ ಕೊಳಹಾಳು, ಗಂಗಾವಧೂತರ ಬುದ್ಧಿನ್ನಿ ಮುಂತಾದೆಡೆ ಎರಡೂ ಆಹಾರಗಳಿವೆ. ಗೋವಿಂದಭಟ್ಟ-ಶರೀಫರು ಶಾಕ್ತ ಹಿನ್ನೆಲೆಯವ ರಾಗಿದ್ದಕ್ಕೂ ಅವರ ಮದ್ಯಸೇವನ ಕಥೆಗಳಿಗೂ ಸಂಬಂಧ ಏರ್ಪಟ್ಟಿರಬಹುದು. ಕೆಲವರು ಸಸ್ಯ-ಮಾಂಸ ಭೇದವಿಲ್ಲದೆ ಆಹಾರ ಸ್ವೀಕರಿಸುತ್ತಿದ್ದರು. ಉಪಾಸಕರು ಭಿಕ್ಷುವಿಗಾಗಿಯೇ ಪ್ರಾಣಿವಧೆ ನಡೆಸಿರದಿದ್ದರೆ ಅಥವಾ ತಮಗಾಗಿ ಮಾಡಿಕೊಂಡ ಮಾಂಸಾಹಾರ ನೀಡಿದರೆ, ಸ್ವೀಕರಿಸಬೇಕೆಂದು ಹೇಳುವ ಮೂಲಕ ಬೌದ್ಧವು ಸಮತೋಲನದ ನಿಲುವನ್ನು ತಳೆಯಿತು. ಆದರೂ ಮಾಂಸಾಹಾರವು ಚರಿತ್ರೆಯುದ್ದಕ್ಕೂ ಪ್ರತಿಕೂಲ ಸನ್ನಿವೇಶವನ್ನು ಎದುರಿಸುತ್ತಲೇ ಬಂದಿದೆ. ಇದರ ಪರಿಣಾಮವೇ ಸಂತರು ತಮಗೆ ಬಡಿಸಲಾದ ಮಾಂಸ-ಮದ್ಯಗಳನ್ನು ಹೂವು-ಹಾಲಾಗಿ ಬದಲಾಯಿಸುವ ಮಿತ್ ಸೃಷ್ಟಿಯಾದವು.

ಗರುಡಚೇಡರು ಕೆರೆಯಲ್ಲಿ ಮಿಂದು ಮೀನು ತರುವಾಗ ಹೂವಾಗುತ್ತಿದ್ದವಂತೆ; ಕೆಂಚಾವಧೂತರು ಹೆಂಡ ಕುಡಿಯುತ್ತಿದ್ದ ಬಗ್ಗೆ ದೂರು ಸಲ್ಲಿಕೆಯಾದಾಗ, ತಾವು ಕುಡಿವುದು `ಸಸ್ಯಜನ್ಯಕ್ಷೀರ’ ಅಲ್ಲವೆಂದೂ ಸ್ತನಜನ್ಯ ಹಾಲೆಂದೂ ವಾದಿಸಿ, ಹೆಪ್ಪುಹಾಕಿ ಕಡೆದು ಬೆಣ್ಣೆ ತೆಗೆದು ತೋರಿಸಿದರಂತೆ.

ಸೋಜಿಗವೆಂದರೆ, ಇಂತಹ ಪವಾಡಗಳು ಕೆಳಸ್ತರದಿಂದ ಬಂದ ಮಾರ್ತಾಂಡಪ್ಪನವರ ಬಾಳಲ್ಲೂ ಇರುವುದು. ಈ ಮಿತ್‍ ಗಳಿಗೆ ಜೀವಕರುಣೆಯ ಆಯಾಮವೂ ಇದೆ. ಆಹಾರ-ಪಾನೀಯ ಸಂಸ್ಕೃತಿಯ ರಕ್ಷಣೆಗಾಗಿ ಸಮುದಾಯಗಳು ಸೃಷ್ಟಿಸಿಕೊಂಡಿರುವ ಸಾಧ್ಯತೆಯೂ ಇದೆ. ಅದರಲ್ಲೂ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಹಾಗೂ ಸಸ್ಯಾಹಾರಿ ಸಮುದಾಯಗಳ ನಡುವೆ ಬದುಕಬೇಕಾದ ಸಂತರ ಜೀವನದಲ್ಲಿ, ಇಂತಹ ಕಥೆಗಳು ವಿಶೇಷವಾಗಿವೆ.

ಸಿರಗಾಪುರದ ಬಂಡೆಪ್ಪ ಹಾಗೂ ದಲಿತ ಹಿನ್ನೆಲೆಯ ಜಂಬಗಿ ಶರಣ ಮಾಂಸಾಹಾರ ಸಾಧಕರಿಗೆ ಸಲ್ಲವು ಎಂದು ಕಟುವಾಗಿ ಹೇಳುತ್ತಾರೆ. ದಲಿತ ಹಿನ್ನೆಲೆಯಿಂದ ಬಂದ ತಂಬೂರಿ ಜವರಯ್ಯನವರೂ ಬೋಧ ಪಡೆದ ಮೇಲೆ ಮಾಂಸಬಿಟ್ಟರೆಂದು ತಿಳಿದುಬರುತ್ತದೆ. ಮಾಂಸಾಹಾರವು ಸವರ್ಣೀಯರ ಕಣ್ಣಲ್ಲಿ ತಮನ್ನು ನಿಕೃಷ್ಟಗೊಳಿಸ ಬಹುದು ಎಂಬ ಆತಂಕವಿಲ್ಲಿ ಕೆಲಸ ಮಾಡಿರುವ ಸಾಧ್ಯತೆಯಿದೆ. ಗುರುಮಾರ್ಗಗಳಲ್ಲಿ ದಲಿತರ ಮುಸ್ಲಿಮರ ಕೆಳಜಾತಿಯವರ ಸಂಖ್ಯೆ ಅಪಾರವಾಗಿದೆ. ಆದರೂ ಆಹಾರದ ಸಾಂಪ್ರದಾಯಿಕ ಸಮೀಕರಣ ಬದಲಾಗಲಿಲ್ಲ. ಶಿಷ್ಟೀಕರಣದಿಂದ ಸಸ್ಯಾಹಾರವಾದವು ಆಹಾರ ತರತಮದ ಭಾಗವಾಗಿ ಉಳಿದುಕೊಂಡಿತು.

ಆಹಾರದ ವಿಷಯದಲ್ಲಿ ಮಠಸ್ಥ ಯೋಗಿಗಳು ತುಸು ಜಿಗುಟು. ನಿಜಗುಣರಲ್ಲಿ ಮಾಂಸಾಹಾರ ಪಾನೀಯಗಳನ್ನು ವಿಷಯಾಸಕ್ತಿಗೆ ಹೋಲಿಸುವ, ವಿರಕ್ತಿಯನ್ನು ಹಾಲು ಮಧುರಾನ್ನಕ್ಕೆ ಹೋಲಿಸುವ ತತ್ವಪದಗಳಿವೆ. ಘನಮಠದಾರ್ಯರು `ಮದ್ಯ ಮಾಂಸವನಮೇಧ್ಯವ ಭುಂಜಿಪ ಹದ್ದುಕಾಗೆ ವಿಂಡಲ್ಲಾ ಹಿರಿಯರ್’ ಎಂದು ತಾತ್ಸಾರಿ ಸುವರು. ಇಂತಹ ವರ್ಣನೆಗಳು ಆಹಾರದ ಬಗ್ಗೆ ನೇತ್ಯಾತ್ಮಕ ಮನೋಭಾವ ರೂಪಿಸುತ್ತವೆ. ಇಂತಹ ಪೂರ್ವಗ್ರಹಿತ ರಚನೆಗಳನ್ನು ಕೆಳಸ್ತರದ ಸಮುದಾಯಗಳಿಂದ ಬಂದವರು ಹಾಡಿಕೆಗೆ ಸಾಮಾನ್ಯವಾಗಿ ಎತ್ತಿಕೊಳ್ಳುವುದಿಲ್ಲ. ಕೆಲವು ಕಡೆ ಆರಾಧನೆಯಲ್ಲಿ ಆಹಾರ ತಾರತಮ್ಯ ಅನುಭವಿಸಿದ್ದನ್ನು ಕೆಳಜಾತಿಯಿಂದ ಬಂದ ಸಾಧಕರು ತೋಡಿಕೊಳ್ಳು ವುದುಂಟು. ಒಂದೇ ಗುರುಮಾರ್ಗಕ್ಕೆ ಸೇರಿದ್ದರೂ, ಒಂದೇ ಊರಲ್ಲಿ ಜಾತಿ ನೆಲೆಯಲ್ಲಿ ಆರಾಧನೆಗಳು ಪ್ರತ್ಯೇಕ ನಡೆದ ನಿದರ್ಶನಗಳಿವೆ.
5. ಕೆಲವು ಮಾರ್ಗಗಳಲ್ಲಿ ಮದ್ಯದ ಜತೆ ಭಂಗಿಯ ಅನುಮತಿಯಿದೆ.

ಬಬಲಾದಿ ಚಿಕ್ಕಪ್ಪಯ್ಯನವರ ಮಠದಲ್ಲಿ ಮದ್ಯವನ್ನು ತೀರ್ಥವಾಗಿ ಕೊಡುವ ಪದ್ಧತಿಯಿತ್ತು; ಕೆಲವು ಗುರುಮಠಗಳಲ್ಲಿ ಸಾಧುಗಳಿಗೆ ಮಾತ್ರ `ಆನಂದ’ದ ವಿತರಣೆಯಿದೆ; ಅಂಬಾಮಠದ ಜಾತ್ರೆಯಲ್ಲಿ ಸಾಧುಗಳಿಗೆ ಮದ್ಯವನ್ನೂ ಭಂಗಿಸೊಪ್ಪನ್ನೂ ಜನ ಕಾಣಿಕೆಯಾಗಿ ಅರ್ಪಿಸುವ ರಿವಾಜಿದೆ. ದರವೇಶಿ ಫಕೀರರಲ್ಲೂ ನಾಥರಲ್ಲೂ ಭಂಗಿಯು ಸಾಮಾನ್ಯ. ಬೆಟಗೇರಿ ರಂಗಪ್ಪಜ್ಜ ಹಾಗೂ ಶ್ರೀರಾಂಪುರ ಪರಪ್ಪಸ್ವಾಮಿ ಅವರ ಚಿತ್ರಪಟ/ಮೂರ್ತಿಗಳು ಚಿಲಿಮೆಧಾರಿ ಭಂಗಿಯಲ್ಲಿವೆ. ಸಾಧಕರು ಗುರುಗಳ ಪಾದುಕೆ-ಬೆತ್ತಗಳ ಜತೆ ಚಿಲಿಮೆ ಯನ್ನೂ ಪವಿತ್ರವಸ್ತುವಾಗಿ ಕಾದಿರಿಸಿರುವರು. ಅಸದುಲ್ಲಾ ಶಾಖಾದ್ರಿ ಶಿವಯೋಗಿಯವರು ರಾತ್ರಿ ಅನುಷ್ಠಾನಕ್ಕೆ ಮೊದಲು ಗಾಂಜಾ ಸಾರಾಯಿ ಬೀಡಿ ಚಹ ಸೇವಿಸುತ್ತಿದ್ದ ಬಗ್ಗೆ ಶಿವಪ್ರಕಾಶ್ ದಾಖಲಿಸುತ್ತಾರೆ. ಅಮಲಿನ ಪದಾರ್ಥಗಳಿಗೆ ಜಾತಿ ಮತ್ತು ಲಿಂಗಭೇದ ಇಲ್ಲವಾದರೂ, ಮದ್ಯಪಾನ-ಮಾಂಸಾಹಾರ ಇರುವಲ್ಲಿ ಕೆಳಜಾತಿಯ ಶಿಷ್ಯಮಕ್ಕಳು ಹೆಚ್ಚಾಗಿ ಕಾಣುವರು.

ಕೆಲವು ಸಾಧಕರು, ಭಂಗಿಯಿಂದ ರಕ್ತ ಸುಡುತ್ತೆ. ರಕ್ತ ಸುಟ್ಟರೆ ಕಾಮವೂ ಸುಡುತ್ತೆ ಎಂದು ಅಭಿಪ್ರಾಯಿಸುವರು. ಭಗ್ನಸಂಸಾರಗಳಿಂದ ಬಂದವರಲ್ಲಿ ನಶೆಯು ವ್ಯಥೆ ಮರೆಯಲು ನೆರವಾಗಿರುವ ಸಾಧ್ಯತೆಯಿದೆ. ಮನಸ್ಸನ್ನು ತಹಬಂದಿಗೆ ತರುವ ತರಬೇತಿಯ ಹೊತ್ತಲ್ಲಿ ಸಾಧಕರಿಗೆ ಮಾದಕ ವಸ್ತು ಕೊಡುವ ಪದ್ಧತಿ ಕೆಲವರಲ್ಲಿತ್ತು. ತತ್ವಸಾಹಿತ್ಯವು ನಶೆ ಪದಾರ್ಥಗಳ ಸೇವನೆಯನ್ನು ವಿಧಿಸುವುದಿಲ್ಲ. ಬದಲಿಗೆ ಗುರುಬೋಧದ ಪರಿಣಾಮವನ್ನು ನಿರೂಪಿಸುವ ರೂಪಕವಾಗಿ ನಿರ್ವಚಿಸುತ್ತದೆ:

`ವಿಷಯನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ತಂಬಾಕದ ಬತ್ತಿಸೇದಿದೆ’

`ತಾ ಎಂಬ ತಂಬಾಕು ಹಾಯಿಕೊಳ್ಳಿರೊ ತನುವೆಂಬ ಚಿಲಮಿ ತುಂಬಿಕೊಳ್ಳಿರೊ

ಗುರುಮಂತ್ರ ಬೆಂಕಿ ಇಟ್ಟುಕೊಳ್ಳಿರೊ ಜ್ಞಾನ ಎಂಬ ಹೊಗೆಸೊಪ್ಪು ಸೇದಿಕೊಳ್ಳಿರೊ’

ಇವು ಕ್ರಮವಾಗಿ ಶರೀಫ ಹಾಗೂ ಮಾಣಿಕ್ಯಪ್ರಭು ಅವರ ರಚನೆಗಳು. ಇಲ್ಲಿನ ಭಾಷಿಕ ವಿನ್ಯಾಸವು, ಚಿಲಿಮೆ ಸೇದುವ ಕ್ರಿಯೆಯನ್ನು ವರ್ಣಿಸುತ್ತಿದೆ; ಆದರೆ ಚಿಲಿಮೆ ತಂಬಾಕು ಬೆಂಕಿ ಹೊಗೆ ಸೇದುಗರನ್ನು ರೂಪಕಗಳಾಗಿ ಪಲ್ಲಟಗೊಳಿಸುತ್ತಿದೆ. ಪ್ರತಿಯೊಬ್ಬ ಕವಿಯೂ ನಶಾ ಸಾಮಗ್ರಿಗಳಿಗೆ ಕಲ್ಪಿಸಿರುವ ಅರ್ಥವು ವಿಭಿನ್ನವಾಗಿದೆ. ಚಿಲಿಮೆ ಸೇವನೆಯಲ್ಲಿ ನಿರ್ದಿಷ್ಟ ವಸ್ತುವಿನ ನಾಶದ ಸಂತೋಷವಿದೆ. ಶರೀಫರಲ್ಲಿದು ವಿಷಯ ವ್ಯಸನಗಳ ಸುಡುಗೆಲಸ; ಚಿದಾನಂದರಲ್ಲಿದು ಶ್ವಾಸೋಚ್ಛ್ವಾಸಕ್ಕೆ ಸಂಬಂಧಿಸಿದ್ದು. ಸುಡುಗೆಲಸದಲ್ಲಿ ಪಾತ್ರವಹಿಸುವ ಬೆಂಕಿಯು ಅರಿವಿನ ಪ್ರತೀಕ; ನಶೆಯು ಸಾಧಕರ ಸಮಾಧಿ ಅವಸ್ಥೆಯ ಆನಂದಾನುಭವದ ಪ್ರತೀಕ. ಈ ಪ್ರತೀಕಗಳಾಚೆ ವಾಸ್ತವಿಕವಾಗಿ ಕೆಲವು ಗುರುಮಠಗಳಲ್ಲಿ ಭಂಗಿಸೇವನೆಯಿದೆ. ಭಂಗಿಮಠವೆಂದೂ ಅವು ಹೆಸರಾಗಿವೆ. ಆಧ್ಯಾತ್ಮಿಕ ಸಾಧನೆಯಿಲ್ಲದೆ ಚಟದ ದಾಸರಾಗಿರುವವರೂ ಇಲ್ಲದಿಲ್ಲ. ನಶೆ ಪದಾರ್ಥಗಳು ಸಾಧಕರನ್ನು ಗೀಳಿಗೆ ದೂಡಿ ಬಾಳು ಮೂರಾಬಟ್ಟೆ ಆಗಿದ್ದನ್ನು ತತ್ವಕವಿಗಳು ಕಂಡಿರಬೇಕು. ಎಂತಲೇ ಮಾದಕತೆಯ ವ್ಯಸನವನ್ನು ಅವರು ಖಂಡಿಸಿದರು.

ಗುರುಪಂಥದಲ್ಲಿ ಆಹಾರ-ಪಾನೀಯಗಳು ರೂಪಕಾತ್ಮಕ ಪರಿಭಾಷೆಗಳು. ಶರಣರು ಅನುಭಾವಿಯನ್ನು `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂದು ವರ್ಣಿಸುವರಷ್ಟೆ. ಗುರುತತ್ವ ಸಾಹಿತ್ಯದಲ್ಲೂ ಸಾಧಕರ ವಿಶಿಷ್ಟಾನುಭವವು ಅಮೃತಪಾನ ಹಾಗೂ ಉಣ್ಣುವ ಚಿತ್ರಗಳಲ್ಲಿ ನಿರೂಪಿತವಾಗುತ್ತದೆ; `ಕಂಡವರಿಲ್ಲ ಉಂಡವ ಬಲ್ಲ ಮಂಡೆಯೊಳಗೆಲ್ಲ ತುಂಬಿ ತುಳುಕ್ಯಾಡುತಾದೆ’ ಎಂದೊ; ಈ ವಿಶಿಷ್ಟ ಅನುಭವಕ್ಕೆ ಕಾರಣನಾದ ಗುರುವನ್ನು `ಉಣ್ಣದೂಟವ ಉಣಿಸಿದನು ಗುರು ತನ್ನ ಶಿಷ್ಯರ ಗುಣವ ನೋಡದೆ’ ಎಂದೊ ನಿವೇದನೆಗೊಳ್ಳುತ್ತದೆ. ಲೌಕಿಕ-ಅಲೌಕಿಕತೆಗಳನ್ನು ಒಗ್ಗೂಡಿಸುತ್ತಿರುವ ಆಹಾರ-ಪಾನೀಯ ತತ್ವದ ಈ ಪರಿಯು ಗುರುಮಾರ್ಗಗಳಲ್ಲಿ ಸಾಂಕೇತಿಕವಾಗಿದೆ.

 

(ಕೃತಿ: ಕರ್ನಾಟಕ ಗುರುಪಂಥ, ಲೇಖಕರು: ರಹಮತ್‌ ತರೀಕೆರೆ, ಪ್ರಕಟಣೆ: ಕನ್ನಡ ವಿವಿ ಹಂಪಿ, ಬೆಲೆ‌: 300/-)