‘ನನ್ನ ತೇಜಸ್ವಿ’ ಪುಸ್ತಕದಲ್ಲಿ ತೇಜಸ್ವಿ-ರಾಜೇಶ್ವರಿಯರ ನಡುವಿನ ಪ್ರೇಮನಿವೇದನೆಯ ಸನ್ನಿವೇಶ ಸುಂದರವಾಗಿ ಮೂಡಿಬಂದಿದೆ. ಸಿನೆಮಾದ ಸನ್ನಿವೇಶ ಎಂಬಂತೆ ಮೇಲ್ನೋಟಕ್ಕೆ ಕಾಣಬಂದರೂ, ಸಂವೇದನಾಶೀಲ ಓದುಗರಿಗೆ ಇದರಲ್ಲಿ ಕಂಡುಬರುವುದು ಆಕೆಯ ಸ್ಥೈರ್ಯ! ಸಾಂಪ್ರದಾಯಿಕವಾಗಿ ಪುರುಷನೇ ಪ್ರೇಮನಿವೇದನೆ ಮಾಡಿಕೊಳ್ಳುವುದನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ಆ ಕಾಲದಲ್ಲಿಯೇ ರಾಜೇಶ್ವರಿ ಅವರು ದಿಟ್ಟತನದಿಂದ, ತಮ್ಮ ಪ್ರೇಮನಿವೇದನೆ ಮಾಡಿಕೊಂಡಿದ್ದರು.  ರಾಜೇಶ್ವರಿ ತೇಜಸ್ವಿ ಬರೆದ ಪುಸ್ತಕದ ಓದು ಮತ್ತು ಅವರೊಂದಿಗಿನ ಮಾತುಕತೆಯ ಕುರಿತು ಸುಮತಿ ಮುದ್ದೇನಹಳ್ಳಿ ಬರೆದ ಬರಹವೊಂದು ಇಲ್ಲಿದೆ: 

 

ರಾಜೇಶ್ವರಿ ತೇಜಸ್ವಿಯವರ ನಿಧನದಿಂದ ಕನ್ನಡ ಸಾಹಿತ್ಯ ಲೋಕವು ಸಶಕ್ತ ಸ್ತ್ರೀ ಧ್ವನಿಯೊಂದನ್ನು ಕಳೆದುಕೊಂಡಿದೆ. ಅಂತಹ ಒಂದು ವಿಷಣ್ಣತೆಯು ಕಾಡುತ್ತಿರುವ ಈ ಸಂದರ್ಭದಲ್ಲಿ ಈ ಧೀ ಶಕ್ತಿಯ ಕುರಿತು ಕೆಲವು ಚಿಂತನೆಗಳು, ನೆನಪುಗಳು.

ರಾಜೇಶ್ವರಿಯವರದು ವಿಶಾಲವಾದ ಮನಸ್ಸು, ಅಚ್ಚರಿ ಮೂಡಿಸುವಷ್ಟು ಆತ್ಮವಿಶ್ವಾಸ ಮತ್ತು ತಾಳ್ಮೆ, ತಾನು ನಂಬಿಕೊ೦ಡ ವಿಚಾರಗಳೆಡೆಗೆ ನಿಷ್ಠೆ, ತನ್ನ ಭಾವನೆಗಳಿಗೆ ಮೋಸ ಮಾಡಿಕೊಳ್ಳದ ಬದುಕು. ಸಾರ್ಥಕ ಬದುಕು! ಇಂದು ರಾಜೇಶ್ವರಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಪುಸ್ತಕಗಳು ನಮ್ಮೊಂದಿಗೆ ಮಾತನಾಡುತ್ತವೆ. ರಾಜೇಶ್ವರಿಯವರ ಶಕ್ತಿಯ ಅರಿವು ಮೊದಲಬಾರಿಗೆ ಆಗಿದ್ದು “ನನ್ನ ತೇಜಸ್ವಿ” ಪುಸ್ತಕದ ಮುಖಾಂತರ ಎನ್ನಬಹುದು. ಹಿಂದೊಮ್ಮೆ ಓದಿದ್ದ ಪುಸ್ತಕವನ್ನು ನಾನು ಮತ್ತೆ ಕೈಗೆತ್ತಿಕೊಂಡಿದ್ದು ನಮ್ಮ ಬುಕ್ ಕ್ಲಬ್ ನಲ್ಲಿ ಓದುವ ಉದ್ದೇಶದಿಂದ. ಹೈಸ್ಕೂಲ್ ಗೆಳತಿಯರು ಸೃಷ್ಟಿಸಿಕೊಂಡ ಈ ನಮ್ಮ ಗುಂಪಿನಲ್ಲಿ ಈ ಪುಸ್ತಕ ಅನಾಯಾಸವಾಗಿ ಓದಿಸಿಕೊಂಡು ಹೋದೀತು, ನಮ್ಮ ಮಹಿಳಾ ಸದಸ್ಯರ ಓದಿನ ಒಲವು ಹೆಚ್ಚಿಸೀತು ಎ೦ಬ ಉದ್ದೇಶದಿಂದ.  ಆದರೆ  ನಮ್ಮ ಸದಸ್ಯರ ಸ್ಫೂರ್ತಿ ಹೆಚ್ಚಿಸುವುದರೊಂದಿಗೆ,   ನಾನೇ ಅವರ ಸೆಳೆತಕ್ಕೊಳಗಾಗಿಬಿಟ್ಟೆ.

ಪೂರ್ಣಚಂದ್ರ ತೇಜಸ್ವಿಯವರನ್ನು ಹೆಚ್ಚು ಅರಿತುಕೊಳ್ಳಲು ‘ನನ್ನ ತೇಜಸ್ವಿ; ಪುಸ್ತಕವನ್ನು  ಮೊದಲು ಕೈಗೆತ್ತಿಕೊ೦ಡವಳು ನಾನು. ಆದರೆ, ಓದುತ್ತಾ ಓದುತ್ತಾ ರಾಜೇಶ್ವರಿಯವರ ವ್ಯಕ್ತಿತ್ವದ ಬಗೆಗೇ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡೆ. ಈ ಪುಸ್ತಕದ ವಿಚಾರವಾಗಿ ನೋಟ್ಸ್ ಬರೆದುಕೊಳ್ಳುವ ಸಂದರ್ಭದಲ್ಲಿ, ರಾಜೇಶ್ವರಿಯವರನ್ನು ಮಾತನಾಡಿಸಿದರೆ, ವಿಷಯಕ್ಕೆ ಹೆಚ್ಚಿನ ಸ್ಪಷ್ಟತೆ ಸಿಕ್ಕೀತು ಎಂಬ ಕಾರಣಕ್ಕಾಗಿ, ಅಕ್ಟೋಬರ್ 1ನೇ ತಾರೀಕಿನಂದು ನಾನು ಅವರನ್ನು ಸಂಪರ್ಕಿಸಿದ್ದೆ. ಕರೆ ಮಾಡಿದ ಹತ್ತು ಸೆಕೆಂಡಿನೊಳಗಾಗಿ, ಅತ್ತಲಿಂದ ‘ಹಲ್ಲೋ ಯಾರು?’ ಕೇಳಿಸಿತ್ತು. ನನ್ನ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿ, ಯಾರೆಂದು ವಿವರವಾಗಿ ಅರಿತುಕೊಂಡರು. ಅವರ ತರ್ಕಬದ್ಧತೆ, ಸ್ಪಷ್ಟ ಆಲೋಚನೆಗಳು, ಯಾವುದೇ ಬಿಗುಮಾನವಿಲ್ಲದ ಮಾತುಗಳ ಕೇಳುತ್ತಾ, 83 ವರ್ಷದ ವ್ಯಕ್ತಿಯೊಬ್ಬರೊಡನೆ ಮಾತನಾಡುತ್ತಿದ್ದೇನೆ ಎಂದು ನಂಬಲು ಕೊಂಚ ಕಷ್ಟವಾಯಿತು. ಸ್ವಲ್ಪ ಸಮಯದ ನಂತರ, ‘ನೀವು ನನ್ನ ಮಗಳ ವಯಸ್ಸಿನವರೇ’ ಎಂದು ಉದ್ಗಾರ ತೆಗೆದರು. ಅವರು ಹಾಗಂದಾಗ ಮಾತುಕತೆ ಸ್ವಲ್ಪ ಸುಲಭವಾಯಿತು ಅನ್ನಿಸಿತು ನನಗೆ. ತಮ್ಮ ಮಕ್ಕಳ ವೃತ್ತಿ, ಜಾಣ್ಮೆಯ ಕುರಿತು ಮೆಚ್ಚುಗೆಯ ಮಾತಾಡಿದರು, ಅವರನ್ನೂ ಮಾತನಾಡಿಸಲು ಹೇಳಿದರು. ಕರೆ ಮುಗಿಸಿದ ನಂತರ ನಾನು, ಈ ಸಂಭಾಷಣೆ ಸಾಧ್ಯವಾಗಿಸಿದ ತಂತ್ರಜ್ಞಾನಕ್ಕೆ ನಮಿಸಿದೆ. ಅಮೆರಿಕಾದ ಪುಟ್ಟ ಊರೊಂದರಿಂದ ಚಿಕ್ಕಮಗಳೂರಿನ ಮೂಡಿಗೆರೆಗೆ ಭಾವತಂತು ಹರಿದಿತ್ತು. ದಿನವಿಡೀ ಮನಸ್ಸು ಅದೇ ಮಾತುಕತೆಯನ್ನೇ ಮೆಲುಕು ಹಾಕುತ್ತಿತ್ತು.

‘ನನ್ನ ತೇಜಸ್ವಿ’ ಕೃತಿಯಲ್ಲಿ ನನಗೆ ಬಹು ಮೆಚ್ಚುಗೆಯಾದ ಅಂಶವೆಂದರೆ, ನಾನು ಹುಡುಕುತ್ತಿದ್ದ ಆದರೆ ಸ್ಪಷ್ಟವಾಗಿ ಸ್ವರೂಪದ ಅರಿವಿರದ, ಸ್ತ್ರೀವಾದದ ಮಾದರಿಯೊಂದು ಅವರ ವ್ಯಕ್ತಿತ್ವದಲ್ಲಿ ಗೋಚರವಾಗಿದ್ದುದು. ಈ ಕುರಿತು ಅವರಲ್ಲಿ ಪ್ರಶ್ನಿಸಿದ್ದೆ ಕೂಡಾ. ವೈಪರೀತ್ಯಕ್ಕೆ ಹೋಗದ ಸ್ತ್ರೀವಾದ ತಮಗೆ ಒಪ್ಪಿತವೆಂದು ಅವರು ಅಭಿಪ್ರಾಯಪಟ್ಟಿದ್ದರು. ಒಬ್ಬ ಹೆಣ್ಣು ಪುರುಷನನ್ನು ತೀವ್ರವಾಗಿ ಪ್ರೀತಿಸುತ್ತಾ ಬಾಳಿದರೂ, ತನ್ನ ನೆಲೆಯನ್ನು, ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬಲ್ಲಳು ಎಂಬ ಭಾವ ನನ್ನ ಬಳಿ ವ್ಯಕ್ತಪಡಿಸಿದರು ಮತ್ತು ಹಾಗೆಯೇ ಬದುಕಿದರೂ ಕೂಡಾ, ಅಲ್ಲವೇ? ಹಾಗೆಯೇ ಈ ಪಾಯಿಂಟ್ ಸಾಬೀತು ಮಾಡಬೇಕು ಎಂಬ ಹಪಾಹಪಿ ಕೂಡಾ ಅವರ ಬರವಣಿಗೆಯಲ್ಲಿ ಕಾಣಲಿಲ್ಲ.  ನನಗೆ ತಿಳಿದಿರುವ ಮಟ್ಟಿಗೆ, ನನಗೆ ತಿಳಿದಿರುವ ವಿಚಾರಗಳನ್ನ, ಆದಷ್ಟು ಸತ್ಯನಿಷ್ಟಳಾಗಿ ದಾಖಲಿಸುತ್ತೇನೆ ಎಂಬ ಧೋರಣೆ ಅವರ ಬರವಣಿಗೆಯಲ್ಲಿ  ಧ್ವನಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಅರಿಕೆ ಮಾಡಿಕೊಳ್ಳುತ್ತಾರೆ: “ಪ್ರಿಯ ಓದುಗರಿಗೆ ಹೇಳಲು ಬಯಸುವುದೇನೆಂದರೆ ನನ್ನ ಬರವಣಿಗೆ ತೀರಾ ನೇರವಾಗಿ ಸರಳವಾಗಿ ಇದೆ. ನಾನೇನೂ ಬರಹಗಾರಳಲ್ಲ. ಇದು ನಮ್ಮ ಬಾಳಿನ ವಾಸ್ತವ ಸಂಗತಿ ಮತ್ತು ಎಲ್ಲೂ ಉತ್ಪ್ರೇಕ್ಷೆಯೂ ಇಲ್ಲ.” ಒಮ್ಮೆ, ತೇಜಸ್ವಿಯವರ ತಾಯಿ ಹೇಮಾವತಿಯವರು ಹೀಗೆ ಹೇಳಿದ್ದರಂತೆ: “ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟ ನಂತರ ನಮ್ಮ ಜವಾಬ್ದಾರಿ ಮುಗಿಯಿತೆಂದು ತಿಳಿಯುತ್ತಾರೆ. ನಾವು ಬದುಕಿರುವವರೆಗೂ ಅವರ ಜವಾಬ್ದಾರಿ ಇರುತ್ತದೆ.” ತಮ್ಮ ಅತ್ತೆಯವರ ಈ ಮಾತನ್ನು ದಾಖಲಿಸುವ ರಾಜೇಶ್ವರಿಯವರು ಆಕೆಯ ಹೃದಯ ವೈಶಾಲ್ಯತೆಯನ್ನು ಮೆಚ್ಚಿಕೊಂಡು ಬರೆದುದುಂಟು. ಅತ್ತೆ-ಸೊಸೆ ಸಂಬಂಧ ಹೀಗೂ ಇರಬಹುದೇ ಎಂಬ ಸಾಲುಗಳನ್ನು ಅವರು ಬರೆದಿದ್ದಾರೆ.

‘ನನ್ನ ತೇಜಸ್ವಿ’ ಪುಸ್ತಕದಲ್ಲಿನ ತೇಜಸ್ವಿ-ರಾಜೇಶ್ವರಿಯರ ನಡುವಿನ ಪ್ರೇಮನಿವೇದನೆಯ ಸನ್ನಿವೇಶ ಸುಂದರವಾಗಿ ಮೂಡಿಬಂದಿದೆ. ಸಿನೆಮಾದ ಸನ್ನಿವೇಶ ಎಂಬಂತೆ ಮೇಲ್ನೋಟಕ್ಕೆ ಕಾಣಬಂದರೂ, ಸಂವೇದನಾಶೀಲ ಓದುಗರಿಗೆ ಇದರಲ್ಲಿ ಕಂಡುಬರುವುದು ಆಕೆಯ ಸ್ಥೈರ್ಯ! ಸಾಂಪ್ರದಾಯಿಕವಾಗಿ ಪುರುಷನೇ ಪ್ರೇಮನಿವೇದನೆ ಮಾಡಿಕೊಳ್ಳುವುದನ್ನು ಹೆಚ್ಚಾಗಿ ಕಾಣುತ್ತೇವೆ.  1959 ಅಥವಾ 1960ರ ಕಾಲವದು. ಆಗಿನ್ನೂ ಸಾಂಪ್ರದಾಯಿಕತೆ  ಹೆಚ್ಚೇ ಚಾಲ್ತಿಯಲ್ಲಿತ್ತು. ಅದೂ ಅಲ್ಲದೆ, ವಯೋಮಾನದ ಅಂತರವೂ ಇತ್ತು.  ವಿವಾಹ ಸಂಬಂಧದಲ್ಲಿ ಪುರುಷ ಸ್ತ್ರೀಗಿಂತ ಕಡಿಮೆಯೆಂದರೂ ನಾಲ್ಕೈದು ವರುಷ ಹಿರಿಯನಾಗಿರ ಬೇಕು ಎಂಬ ನಂಬಿಕೆಯಿತ್ತು.

ರಾಜೇಶ್ವರಿಯವರು ಪುಸ್ತಕದಲ್ಲಿ ಬರೆದಿರುವಂತೆ, ತೇಜಸ್ವಿ ಅವರೊಡನೆ ತಾವೇ ಮೊದಲು ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ. ‘ನಾನೇ ಮೊದಲು ಪ್ರೇಮ ವ್ಯಕ್ತಪಡಿಸುವುದರಲ್ಲಿ ಯಾವುದೇ ವಿಶೇಷ ಕಾಣಲಿಲ್ಲ’ ನನಗೆ ಎಂದು ಸರಳವಾಗಿ ಹೇಳುತ್ತಾರೆ. ಹಾಗೆಯೇ ವಯಸ್ಸಿನಲ್ಲಿ ಕೂಡಾ ತಾವೇ ಒಂಬತ್ತು ತಿಂಗಳು ದೊಡ್ಡವರಿದ್ದದನ್ನೂ ಯಾವುದೇ ಬಿಢೆಯಿಲ್ಲದೇ ಪುಸ್ತಕದಲ್ಲಿ ಬರೆದಿದ್ದಾರೆ. ರಾಜೇಶ್ವರಿಯವರು ಸೂಚ್ಯವಾಗಿ ಬರೆದುಕೊಂಡಿರುವಂತೆ, ಸಾಮಾಜಿಕ ಮತ್ತು ಆರ್ಥಿಕ ಸ್ಥರದಲ್ಲಿ ತೇಜಸ್ವಿಯವರು ಕೊಂಚ ಉನ್ನತಮಟ್ಟದಲ್ಲಿದ್ದರು. ಓದುತ್ತಾ, ಜೇನ್ ಆಸ್ಟನ್ನಳ “ಪ್ರೈಡ್ ಅಂಡ್ ಪ್ರೆಜುಡೀಸ್” ಆಯಾಚಿತವಾಗಿ ನೆನಪಾಯ್ತು ನನಗೆ. ಆಸ್ಟನ್ ಕೂಡಾ ಸರಿಸುಮಾರಾಗಿ ಇಂತಹದ್ದೇ ಜೋಡಿಯನ್ನ ‘ಡಾರ್ಸಿ-ಎಲಿಜಬೆತ್’ ರಲ್ಲಿ ಸೃಷ್ಟಿಸುತ್ತಾಳೆ. ಎಲ್ಲವನ್ನೂ ನಗುನಗುತ್ತಾ ಪ್ರೀತಿಯಿಂದ ಸ್ವೀಕರಿಸಿದ ತೇಜಸ್ವಿಯವರ ಪ್ರೇಮಮಯ ಉದಾರತೆ ಕೂಡಾ ಮೆಚ್ಚುವಂತಾದ್ದು. ರಾಜೇಶ್ವರಿ ಮತ್ತು ತೇಜಸ್ವಿಯವರ ನಡುವಿನ ಅನೇಕ ವೈರುಧ್ಯಗಳನ್ನು ಅವರ ಪ್ರೀತಿ ಗೆದ್ದಿರಬಹುದು.

ಅರವತ್ತರಿಂದ ಎಪ್ಪತ್ತರ ದಶಕದವರೆಗೂ ವಿಸ್ತರಿಸಿ ಮುಂದೆ ಮರವಾಗಿ ಬೆಳೆದ ಈ ಪ್ರೇಮಕಥೆಯಲ್ಲಿ, ತಮ್ಮ ಪರಿಸ್ಥಿತಿ ವಿವಾಹಕ್ಕೆ ಪೂರಕವಾಗಿಲ್ಲದ್ದರಿಂದ, ತಾವಿಬ್ಬರೂ ಐದಾರು ವರ್ಷಗಳ ಕಾಲ ವಿವಾಹವಿಲ್ಲದೇ ಕಳೆಯಬೇಕಾಯ್ತು ಎಂಬುದನ್ನು ಪತ್ರಗಳ ಮುಖಾಂತರ ಮತ್ತು ಹಲವಾರು ಪ್ರಸಂಗಗಳ ಮುಖಾಂತರ ಲೇಖಕಿ ಚಿತ್ರಿಸುತ್ತಾರೆ. ಆ ಎಪ್ಪತ್ತರ ದಶಕದಲ್ಲಿ, ಒಂದು ಯುವ ಜೋಡಿ, ವಿವಾಹಕ್ಕೆ ಮುನ್ನ, ಐದಾರು ವರ್ಷಗಳ ಕಾಲ ಭೇಟಿ ಮಾಡುತ್ತಾ  ಜೀವನ ಸಾಗಿಸುವುದು ಸಮಾಜದ ಕೊಂಕಿಗೆ ಹೆದರದೇ ಪ್ರೇಮಿಸುವುದು, ಆಗಿನ ಕಾಲಕ್ಕೆ ನಿಜಕ್ಕೂ ಕ್ರಾಂತಿಕಾರಿ ಎನ್ನಬಹುದು. ಈ ಈರ್ವರ ಕುರಿತು ಹಲವಾರು ಕೊಂಕು ನುಡಿಗಳು ಸಂಬಂಧಿಕರಲ್ಲಿ ಮತ್ತು ಸ್ನೇಹಿತವರ್ಗದಲ್ಲಿ ಬಂದು ಹೋದವು ಎನ್ನುವುದನ್ನು ರಾಜೇಶ್ವರಿಯವರು ದಾಖಲಿಸಿದ್ದಾರೆ.

ಇಂತಹ ಒಂದು ಪ್ರಸಂಗದ ಕುರಿತು ತೇಜಸ್ವಿಯವರಿಗೆ  ಬರೆದ ಪತ್ರ  ಹೀಗಿದೆ: ‘ಮನೆಗೆ ಯಾರ್ಯಾರೋ ನೆಂಟರು ಬಂದಿದಾರೆ, ಏನೋ ಬೇಜಾರು. ಇಲ್ಲಿ ಇವರದ್ದೆಲ್ಲಾ ನಮ್ಮ ಬಗ್ಗೆ ಏನೇನೋ ಮಾತು. ನಾನು ಇಲ್ಲಿ ಎಲ್ಲೋ ಒಂದು ಕಡೆ ಇರೋದು ಯಾವ ತಪ್ಪಿಗೋಸ್ಕರ ತಿಳಿಯದು. ಇವರೆಲ್ಲಾ ‘ಯಾವಾಗ್ಲೊ ಏನೋ ಮದುವೆ ಅಂತೆಲ್ಲಾ ಅಂತಾರೆ. ಇವರಿಗೆಲ್ಲಾ ಹೇಗೆಂದು ಉತ್ತರ ಕೊಡಬೇಕೋ ಗೊತ್ತಾಗುತ್ತಿಲ್ಲ.” (೮-೯-೬೧ ಭೂತನಕಾಡು). ಇದನ್ನೆಲ್ಲಾ ಎದುರಿಸಿ ನಿಂತ ರಾಜೇಶ್ವರಿಯವರ ಆತ್ಮಸ್ಥೈರ್ಯ ಎಂತದ್ದಿರಬಹುದು ಮತ್ತು ತೇಜಸ್ವಿಯವರು ಅವರಲ್ಲಿ ಹುಟ್ಟಿಸಿರುವ ನಂಬಿಕೆ ಎಷ್ಟು ಭದ್ರವಾಗಿರುವುದು ಎನ್ನುವುದು ನಮಗೆ ಅರಿವಾಗುತ್ತದೆ.

ಒಬ್ಬ ಹೆಣ್ಣು ಪುರುಷನನ್ನು ತೀವ್ರವಾಗಿ ಪ್ರೀತಿಸುತ್ತಾ ಬಾಳಿದರೂ, ತನ್ನ ನೆಲೆಯನ್ನು, ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬಲ್ಲಳು ಎಂಬ ಭಾವ ನನ್ನ ಬಳಿ ವ್ಯಕ್ತಪಡಿಸಿದರು ಮತ್ತು ಹಾಗೆಯೇ ಬದುಕಿದರೂ ಕೂಡಾ, ಅಲ್ಲವೇ? ಹಾಗೆಯೇ ಈ ಪಾಯಿಂಟ್ ಪ್ರೂವ್ ಮಾಡಬೇಕು ಎಂಬ ಹಪಾಹಪಿ ಕೂಡಾ ಕಾಣಲಿಲ್ಲ ಅವರ ಬರವಣಿಗೆಯಲ್ಲಿ.

ತೇಜಸ್ವಿಯವರು ಜೀನಿಯಸ್ ಎಂಬ ಅಭಿಪ್ರಾಯಕ್ಕೆ ತಲೆದೂಗುವವರು ನಾವೆಲ್ಲಾ. ಆದರೆ, ಬಹುಶಃ ನಾವು ಅಷ್ಟಾಗಿ ಕ್ರೆಡಿಟ್ ಕೊಡದ ಸಂಗತಿಯೆಂದರೆ, ಅಷ್ಟೊಂದು ಉತ್ಕಟವಾಗಿ ಅನ್ವೇಷಿಸಿದ, ಅಧ್ಯಯನ ಮಾಡಿದ, ಬದುಕಿದ, ತೇಜಸ್ವಿಯವರಿಗೆ ಸರಿಯಾದ ಜೋಡಿಯಾಗಿ ರಾಜೇಶ್ವರಿಯವರು ನಿಂತದ್ದು. ತೇಜಸ್ವಿಯವರನ್ನು ಪ್ರೋತ್ಸಾಹಿಸಿದ , ಸಮಾಧಾನಿಸಿದ, ಅವಿರತವಾಗಿ ಪ್ರೀತಿಸಿದ ವ್ಯಕ್ತಿಯಾಗಿ ರಾಜೇಶ್ವರಿಯವರು  ಸದೃಢವಾಗಿ ನಿಲ್ಲುತ್ತಾರೆ.  ಇದನ್ನು ತೇಜಸ್ವಿಯವರೇ ಅವರ ಪತ್ರಗಳಲ್ಲಿ ವ್ಯಕ್ತಪಡಿಸಿದ್ದಾರೆ.

ತಮ್ಮಲ್ಲಿ ಈ ಶಕ್ತಿ ಹೇಗೆ ಬಂದಿತೆಂದು ರಾಜೇಶ್ವರಿಯವರಲ್ಲಿ ನಾನು ಅಚ್ಚರಿಯಿಂದ ಪ್ರಶ್ನಿಸಿದ್ದೆ. ಒಬ್ಬ ವ್ಯಕ್ತಿಯಲ್ಲಿ  ಪ್ರತಿಭೆ, ಬುದ್ಧಿವಂತಿಕೆಯಿದ್ದೂ, ಅವರು ಇನ್ನೊಬ್ಬರಿಗೆ ತೆರೆಮರೆಯಲ್ಲಿ ಒತ್ತಾಸೆಯಾಗಿ ನಿಲ್ಲುವುದು ಸುಲಭದ ಮಾತಲ್ಲ. ಅದಕ್ಕವರು ಅಷ್ಟೇ ಸರಳವೆಂಬಂತೆ ಉತ್ತರಿಸಿದ್ದರು.: ‘ನಾನು ಹೆಚ್ಚು ಯೋಚಿಸುತ್ತಿರಲಿಲ್ಲ, ಮನಸ್ಸಿನ ಮಾತು ಕೇಳಿದೆ, ಜೀವನದಲ್ಲಿ ತೃಪ್ತಿಯಿದೆ’ ಎಂದು ಹೇಳಿದ್ದರು. ಸರಳ, ಸುಂದರ ಸೂತ್ರ ಅನ್ನಿಸಿಬಿಟ್ಟಿತು ನನಗೆ. ‘ನನ್ನ ತೇಜಸ್ವಿ’ಯಲ್ಲಿ ಲೇಖಕಿ ಬರೆಯುತ್ತಾರೆ, ‘ನಮ್ಮದು ಅಂತರ್ಜಾತೀಯ ಸಂಬಂಧ. ನಮ್ಮ ಮದುವೆಗೆ ಯಾರ ವಿರೋಧವಿಲ್ಲ, ಯಾರ ಅಡ್ಡಿಯಿಲ್ಲ. ಮೊದಲಾಗಿ ನಾವು ಸಮಾಜದ ರೀತಿನೀತಿಗಳನ್ನು ಲೆಕ್ಕಿಸಿದರೆ ತಾನೆ ಅದೆಲ್ಲ. ಎಲ್ಲೋ ಒಂದು ಕಡೆ ಇದೆಲ್ಲದರ ಆಚೆಗೆ ಎನ್ನುವ ಮನೋಧರ್ಮ-ತತ್ವ ನಮ್ಮದು’ ಎಂದು ಅವರು ವಿವರಿಸುವಾಗ, ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’  ಎಂಬ ಕವಿಸಾಲು ನೆನಪಾಯಿತು.

ಈ ಪುಸ್ತಕ ಓದಲು ಸಿಕ್ಕ ಆರಂಭದಲ್ಲಿ ‘ನನ್ನ ತೇಜಸ್ವಿ’ಯನ್ನು ಇಂದಿರಾ ಲಂಕೇಶರ ‘ಹುಳಿ ಮಾವಿನ ಮರ’ದೊಂದಿಗೆ ಹೋಲಿಸಿ ಕೆಲವು ಲೇಖಕರು ವಿಮರ್ಶಿಸಿದ್ದು ನನ್ನ ಕಿವಿಗೂ ಬಿದ್ದಿತ್ತು. ಈ ಲೇಖಕರು, ರಾಜೇಶ್ವರಿಯವರು ಸಹಾ ಇಂದಿರಾರಂತೆ ತಮ್ಮ ಪತಿಯ ಲೋಪ-ದೋಷಗಳ ಕುರಿತೂ ಬರೆಯಬೇಕಾಗಿತ್ತು ಎನ್ನುತ್ತಿದ್ದರು. ಬಹುಶಃ ತಮ್ಮ ಹಾಡನ್ನು ರಾಜೇಶ್ವರಿಯವರು ಎಷ್ಟು ಗಟ್ಟಿಯಾಗಿ ಹಾಡಿಕೊಂಡಿರಬಹುದೆಂದರೆ, ಸಣ್ಣ ಅಪಸ್ವರ ಕೇಳಿಸಿದರೂ ಗಮನವಿಲ್ಲದೇ ಹಾಡಿಕೊಳ್ಳುತ್ತಾ ಹೋಗಿರಬಹುದು. ಆಕೆಯದು ಅಂತಹ ಅವಿರತವಾದ ಪ್ರೇಮ ಎಂಬುದನ್ನು ಪುಸ್ತಕದ ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತದೆ.

ನವೆಂಬರ್ ಹತ್ತರಂದು ಮತ್ತೆ ರಾಜೇಶ್ವರಿಯವರಲ್ಲಿ ಮಾತನಾಡುವ ಅವಕಾಶ  ನನಗೆ ಒದಗಿತು.  ಅವರ ಮಾತುಗಳನ್ನು ಮತ್ತೆ ನೆನಪಿಸಿಕೊಂಡರೆ, ಅವರು ಎಂತಹ ಚಟುವಟಿಕೆಯ ವ್ಯಕ್ತಿ ಅನ್ನಿಸುತ್ತದೆ. ನನ್ನ ಹೆಸರು, ಪರಿಚಯ ಹೇಳಿಕೊಂಡು, ‘ಗೊತ್ತಾಯಿತಾ ಮೇಡಂ’ ಅ೦ತ ಕೇಳಿದೆ. ‘ನೀವ್ಯಾರೋ ಗೊತ್ತಾಗಲಿಲ್ಲ ಕಂಡ್ರಿ’ ಅತ್ತಲಿಂದ ಬಂದ ಜವಾಬು. ನನ್ನೆದೆ ಧಸಕ್ಕೆಂದಿತು. ಇನ್ನು ಮಾತು ಮುಂದುವರಿಸಲು ಅವಕಾಶವಿದೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ಸಾವರಿಸಿಕೊಂಡು, ‘ಪರವಾಗಿಲ್ಲ ಬಿಡಿ ಮೇಡಂ, ಯಾಕೆ ಕಾಲ್ ಮಾಡಿದೆನೆಂದರೆ …’ ಎಂದು ವಿವರಿಸತೊಡಗಿದೆ. ಅಷ್ಟರಲ್ಲಿ ನೆನಪಾದಂತೆ, ‘ಓ ಗೊತ್ತಾಯಿತು’ ಎಂದು ನನ್ನ ಕ್ಷೇಮ ವಿಚಾರಿಸಿದರು. ನಿಮ್ಮನ್ನು ಭೇಟಿ ಮಾಡಲು ಬರಲಿರುವೆ ಮುಂದಿನ ವರ್ಷ ಎಂದು ಒಂದು ಅಂದಾಜು ತಿಂಗಳನ್ನು ಹೇಳಿ ನಿಮಗೇನನ್ನು ತರಲಿ ಎಂದು ಪ್ರಶ್ನಿಸಿದೆ. ‘ಓ ನೀವು ಬನ್ರಿ… ಸಾಕು’ ಎಂದು ನಕ್ಕರು. ನಾನಾಗಿಯೇ, ‘ನಿಮಗೆ ಮಲ್ಲಿಗೆ ಇಷ್ಟವೆಂದು ನನಗೆ ಗೊತ್ತು. ಅದನ್ನಂತೂ ತಂದೇ ತರುವೆ’ ಎಂದೆ. ಸಂಕೋಚದ ನಗು ಕೇಳಿ ಬಂತು; ಏನನ್ನೂ ಹೇಳಲಿಲ್ಲ.

ಮಾತು ಇತರ ವಿಷಯಗಳೆಡೆಗೆ ಹೊರಳಿದಾಗ, ತಮ್ಮ ಆರೋಗ್ಯ ಚನ್ನಾಗಿದೆಯೆಂದರು, ಇರುವಷ್ಟು ದಿನ ಚನ್ನಾಗಿದ್ದರೆ ಸಾಕು ಎಂದರು. ಚನ್ನಾಗಿಯೇ ಇರುವಿರಿ ಯೋಚಿಸಬೇಡಿ ಎಂದೆ. “ನನಗೂ ಅಷ್ಟೇ ರೀ ಒಳ್ಳೆಯ ಅಲೋಚನೆಗಳೇ ಬರಲಿ ಅಂತ  ಹೇಳ್ಕೊಳ್ತಾ ಇರ್ತೀನಿ. ಇನ್ನೂ ಕೆಲವು ವರ್ಷಗಳು ಆರೋಗ್ಯದಿಂದಿರಲು ಇಷ್ಟವಿದೆ’ ಎಂದೆಲ್ಲ ಮಾತಾಡಿದರು. ಖಂಡಿತಾ ಇರುವಿರಿ ಎಂದು ನಾನು ಉತ್ಸಾಹ ತುಂಬುವ ಪ್ರಯತ್ನ ಮಾಡಿದೆ.

‘ನನಗೆ ಎಂಬತ್ನಾಲ್ಕು ವರ್ಷ ಕಂಡ್ರೀ’ ಅಂದರು ನಗುತ್ತಾ. ನಾನು, ಎಂಬತ್ನಾಲ್ಕು ಆಗುವುದಕ್ಕೆ ಇನ್ನೂ ಒಂದು ತಿಂಗಳ ಸಮಯವಿದೆ ಅಂತ ನಗುನಗುತ್ತಾ ನೆನಪಿಸಿದೆ. ಅಷ್ಟು ಕರಾರುವಕ್ಕಾಗಿ ನೆನಪಿಟ್ಟುಕೊಂಡಿದ್ದೇನೆ ಎನ್ನುವ ಕಾರಣಕ್ಕೋ ಏನೋ ಅತ್ತಲಿಂದ ಜೋರು ನಗು ಕೇಳಿಸಿತು, ಸ್ನೇಹಪೂರ್ಣ ನಗು ಎನ್ನಿಸಿತು. ‘ಇತ್ತೀಚೆಗೆ ಕಾಫಿಹೌಸ್ ನಲ್ಲಿ ಮಾತನಾಡಲು ಕರೆದಿದ್ದರು’ ಎಂದರು. ‘ಎಲ್ಲಿ ಮೇಡಂ? ಕ್ಲಬ್ ಹೌಸ್ ಬಗ್ಗೆ ಹೇಳ್ತಾ ಇದ್ದೀರಾ?’ ಅಂದೆ ಸ್ವಲ್ಪ ಕನ್ಫ್ಯೂಶನ್ ನಲ್ಲಿ.

‘ಹೌದ್ರೀ ಕ್ಲಬ್ ಹೌಸ್ … ತುಂಬಾ ಮಾತಾಡಿಬಿಟ್ಟೆ … ಎರಡು ಗಂಟೆ ಮೇಲೆ’ ಅಂತ ನಕ್ಕರು. ‘ಯಾಕಷ್ಟೊಂದು ಮಾತಾಡಿದೆ ಅಂತ ನಮ್ಮ ಮಕ್ಕಳು ಬೈದರು’ ಎಂದು ಮಕ್ಕಳ ಪ್ರೀತಿಯ ಆಕ್ಷೇಪಣೆಯ ಬಗ್ಗೆ ಹೇಳಿದರು. ‘ಹೌದಲ್ವಾ… ಆಯಾಸವಾಗಬಹುದು ನಿಮಗೆ’ ಎಂದೆ .

‘ಅವರು ಚನ್ನಾಗಿ ಮಾತಾಡಿಸಿದರು . ತುಂಬಾ ಚನ್ನಾಗಿತ್ತು ಕಾರ್ಯಕ್ರಮ. ಟೈಮ್ ಹೋಗಿದ್ದೇ ಗೊತ್ತಾಗಲಿಲ್ಲ’ ಎಂದು ನಕ್ಕರು. ನಾನು ನಗುತ್ತಾ ಶುಭರಾತ್ರಿ ಎಂದು ಹೇಳಿ ಫೋನಿಟ್ಟೆ. ಯಾರಿಗೆ ಗೊತ್ತಿತ್ತು ಅದೇ ಕಡೆಯ ಬಾರಿ ಅವರ ಧ್ವನಿ ಕೇಳುವುದೆಂದು.

ಪ್ರತೀ ಕೆಲಸವನ್ನೂ ಆಸ್ಥೆಯಿಂದ ಒಂದು ಕ್ರಮಾನುಸಾರವಾಗಿ ಮಾಡುವುದು ರಾಜೇಶ್ವರಿಯವರ ಸ್ವಭಾವ ಎಂದು ಕೇಳಿಬಲ್ಲೆ. ನಾನು ಅವರ ಪುಸ್ತಕದ ಕುರಿತಾಗಿ ಬರೆದ ಪುಟ್ಟ ವಿಮರ್ಶೆಯನ್ನು ಹಂಚಿಕೊಳ್ಳಲು ಆಗಲೇ ಇಲ್ಲ! ಹೇಗೆ ಪ್ರತಿಕ್ರಿಯಿಸುವರೋ ಎಂಬ ಕುತೂಹಲ ಹಾಗೆಯೇ ಉಳಿದುಬಿಟ್ಟಿತು. ‘ಇನ್ನೂ ಸಮಯವಿದೆಯಲ್ಲ’ ಎಂದುಕೊಂಡು ನನ್ನ ಕೆಲಸ-ಕಾರ್ಯಗಳಲ್ಲಿ ಮಗ್ನಳಾಗಿಬಿಟ್ಟೆ. ಸಮಯ ಯಾರನ್ನೂ ಕಾಯದು.

ನನ್ನ ಬರಹಗಾರ ಮಿತ್ರರೊಬ್ಬರು, ರಾಜೇಶ್ವರಿಯವರ ನಿಧನದ ನಂತರ, ಆಕೆಯ ಬಗ್ಗೆ ಮೆಚ್ಚುಗೆ ಮಾತಾಡುತ್ತಾ, ‘ಅವರು ತೇಜಸ್ವಿಯವರಷ್ಟೇ ಬುದ್ಧಿವಂತರು’ ಎಂದು ಅಭಿಪ್ರಾಯಪಟ್ಟರು. ಆಕೆಯ ಬರಹ, ಪ್ರಕಟಣೆ ಕುರಿತಾಗಿ ಸಾಕಷ್ಟು ಕೆಲಸ ಮಾಡಿರುವ, ಒಡನಾಡಿರುವ, ನೇರ ಮಾತಿನ ಈ ನನ್ನ ಮಿತ್ರರ ಅಭಿಪ್ರಾಯವನ್ನು ನಾನೂ ಅನುಮೋದಿಸುವೆ.  ಆಕೆ ಮಾತನಾಡುವಾಗ, ಮಾತಿಗೆ ಉದ್ದೇಶವಿರುತ್ತಿತ್ತು, ತರ್ಕವಿರುತ್ತಿತ್ತು. ಎಷ್ಟಾದರೂ ತತ್ವಶಾಸ್ತ್ರ ಓದಿದವರಲ್ಲವೆ? ತೇಜಸ್ವಿಯವರಿಗಿಂತ ಕೊಂಚ ಭಿನ್ನ, ಬಹುಶಃ ಹೆಚ್ಚಿನ ವ್ಯಾವಹಾರಿಕಪ್ರಜ್ಞೆಯುಳ್ಳವರು. ಪುಸ್ತಕದಲ್ಲಿ ಹಲವಾರು ಕಡೆ ತೇಜಸ್ವಿಯವರ ಕೆಲವು ವ್ಯಾವಹಾರಿಕ ನಿರ್ಧಾರಗಳನ್ನು ಇವರು ಪ್ರಶ್ನಿಸುವ ಹಾಗೂ ಚರ್ಚಿಸುವ ಪ್ರಸಂಗಗಳು ಬರುತ್ತವೆ.

‘ನನ್ನ ತೇಜಸ್ವಿ’ ಪುಸ್ತಕದಲ್ಲಿ ರಾಜೇಶ್ವರಿಯವರು ತಮ್ಮ ಪತಿಯ ಕೊನೆಯ ದಿನಗಳವರೆಗಿನ ಕೆಲವು ಆಯ್ದ ಘಟನೆಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಅವರ ಸಾವಿನ ಪ್ರಕರಣ ದಾಖಲಿಸಿದ ನಂತರದ ಸಾಲುಗಳು ಹೀಗಿವೆ: ‘ನನ್ನ ತೇಜಸ್ವಿ ಕಾಡಿನ ಉಸಿರಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಲ್ಲಿದೆ, ನನಗೆ ಅವರು ಬೇಕು.’ ಈ ಸಾಲುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ತಾ ಇರುವೆ. ಮನಸ್ಸು ‘ಇದಲ್ಲವಾ ಪ್ರೀತಿ’ ಅಂತ ಹೇಳುತ್ತಾ ಇರುತ್ತದೆ. ಅವರು ತಮ್ಮ ತೇಜಸ್ವಿಯವರನ್ನು ಹುಡುಕಿಕೊಂಡು ಹೊರಟೇಬಿಟ್ಟರೇನೋ!