ಅಪರಾಧಿ ಬುಡಕಟ್ಟು ಎಂದು ಅಪಮಾನಕ್ಕೀಡಾದ ಯುವಕರಿಗೆ ಸಂಸ್ಕಾರ ನೀಡಿ ಸಭ್ಯ ಗೃಹಸ್ಥರನ್ನಾಗಿ ಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಅಪರಿಮಿತವಾದ ತಾಳ್ಮೆ ಬೇಕು. ‘ಅವರಲ್ಲೂ ಮನುಷ್ಯತ್ವ ಇದೆ’ ಎಂಬ ಅಚಲವಾದ ನಂಬಿಕೆ ಬೇಕು. ದೈನಂದಿನ ಬದುಕಿನ ಎಲ್ಲ ಹಂತಗಳಲ್ಲಿ ಅವರನ್ನು ನಿರೀಕ್ಷಿಸುವ ಮೂಲಕ ಅವರನ್ನು ತಿದ್ದುವುದು. ಅವರಲ್ಲಿ ಹೊಸ ಕನಸುಗಳ ಸೃಷ್ಟಿ ಮಾಡುವುದು. ತಮಗೂ ಬೇರೆಯರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸುವುದು. ಆ ಮೂಲಕ ಆತ್ಮಗೌರದ ಪಾಠ ಕಲಿಸುವುದು ಮುಂತಾದವುಗಳನ್ನು ಸಮರ್ಪಣಾಭಾವದಿಂದ ಮಾಡಬೇಕಾಗುತ್ತದೆ. ಒಬ್ಬ ಮಹಾಪುರುಷ ಮಾತ್ರ ಹೀಗೆಲ್ಲ ಮಾಡಲು ಸಾಧ್ಯ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 39ನೆಯ ಕಂತು ಇಲ್ಲಿದೆ.

ನಮ್ಮ ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲೆ, ಇದೇ ಶ್ರೀ ಸಿದ್ಧೇಶ್ವರ ಹೈಸ್ಕೂಲಿನ ತಳಮನೆಯಲ್ಲಿತ್ತು. ಅದು ‘ತೆಗ್ಗಿನ ಶಾಲೆ’ ಎಂದೇ ಪ್ರಸಿದ್ಧವಾಗಿತ್ತು. ವಿಶಾಲವಾದ ಮನಮೋಹಕ ಕಲ್ಲಿನ ಕಟ್ಟಡ ಈ ಹೈಸ್ಕೂಲು. ಎದುರಿಗೆ ದೊಡ್ಡ ಮೈದಾನ, ಪಕ್ಕದಲ್ಲೇ ಹಾಕಿ ಮತ್ತು ಫುಟ್‌ಬಾಲ್ ಮೈದಾನ. ಸುಂದರವಾದ ಹೂದೋಟ, ಅದಕ್ಕೆ ನೀರಿನ ವ್ಯವಸ್ಥೆಗಾಗಿ ಬಾವಿ, ಟೆನಿಸ್ ಕೋರ್ಟ್, ವಿಜ್ಞಾನ ಪ್ರಯೋಗಾಲಯ, ಕಟ್ಟಡದ ಮಧ್ಯೆ ಇನ್ನೊಂದು ವಿಶಾಲವಾದ ಪ್ರಯೋಗಾಲಯ, ಸಂಗೀತ ಮತ್ತು ಚಿತ್ರಕಲಾ ಶಿಕ್ಷಣದ ವ್ಯವಸ್ಥೆ, ಪ್ರತ್ಯೇಕ ಗ್ರಂಥಾಲಯ ಕಟ್ಟಡ, ಹೆಡ್ ಮಾಸ್ತರ ಕೋಣೆಯನ್ನೊಳಗೊಂಡ ಪ್ರತ್ಯೇಕ ಆಡಳಿತ ಕಚೇರಿ ಕಟ್ಟಡ, ಸಿಪಾಯಿಗಳಿಗೆ ವಾಸದ ವ್ಯವಸ್ಥೆ, ಬಯಲು ರಂಗಮಂದಿರ, ಎನ್.ಸಿ.ಸಿ. ಕಟ್ಟಡ, ಆ ಕಾಲದಲ್ಲಿನ ಅತ್ಯಾಧುನಿಕವಾದ ವ್ಯಾಯಾಮ ಶಾಲೆ. ವಿವಿಧ ಕಸರತ್ತಿಗೆ ಸಂಬಂಧಿಸಿದ ಉಪಕರಣಗಳು. ಎಲ್ಲ ರೀತಿಯ ಆಟದ ವಸ್ತುಗಳು ಮತ್ತು ಶಾರೀರಿಕ ಶಿಕ್ಷಣದ ವ್ಯವಸ್ಥೆ ಸೇರಿದಂತೆ ಆ ಕಾಲದಲ್ಲೇ ಒಂದು ಪರಿಪೂರ್ಣವಾದ ಶಿಕ್ಷಣ ಸಂಸ್ಥೆ ಅದಾಗಿತ್ತು.

ಸಿದ್ರಾಮಪ್ಪ ಲಕ್ಷ್ಮೇಶ್ವರರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಮುಖ್ಯ ಕಲ್ಲಿನ ಕಟ್ಟಡದ ಹಿಂದೆ ಅಷ್ಟೇ ದೊಡ್ಡದಾದ ಮತ್ತು ಗಚ್ಚು ಬಳಸಿ ಕಟ್ಟಿದ ಕಟ್ಟಡವಿದೆ. ಸರ್ಕಾರ ಈ ಮುಖ್ಯ ಕಟ್ಟಡವನ್ನು “ಪಾರಂಪರಿಕ ಕಟ್ಟಡ”ಎಂದು ಗುರುತಿಸುವುದು ಅವಶ್ಯವಾಗಿದೆ.

(ಸಿದ್ರಾಮಪ್ಪ ಲಕ್ಷ್ಮೇಶ್ವರ ಮೂರ್ತಿ)

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ವಚನಪಿತಾಮಹ ಎಂದು ಹೆಸರಾದ ಡಾ. ಫ.ಗು. ಹಳಕಟ್ಟಿ ಅವರನ್ನು ನೋಡಿದ್ದೆ. ಆದರೆ ಹೆಡ್‌ಮಾಸ್ಟರ್ ಕಚೇರಿ ಮುಂದೆ ಇರುವ ಎದೆಮಟ್ಟದ ಮೂರ್ತಿ ಇರುವ ಸಿದ್ರಾಮಪ್ಪ ಲಕ್ಷ್ಮೇಶ್ವರ ಅವರು ನಾನು ಹುಟ್ಟುವ ಬಹಳ ವರ್ಷ ಮೊದಲೇ ತೀರಿಕೊಂಡಿದ್ದರಿಂದ ನೋಡುವ ಸಾಧ್ಯತೆ ಇರಲಿಲ್ಲ. ಇವರಿಬ್ಬರ ಕನಸಿನ ಕೂಸು ಈ ಸುಸಜ್ಜಿತ ಹೈಸ್ಕೂಲ್.

ರಾಜ್ಯದ ಯಾವುದೇ ಹೈಸ್ಕೂಲ್ ಇಷ್ಟು ವಿಶಾಲವಾಗಿ ಮತ್ತು ಸುಸಜ್ಜಿತವಾಗಿ ಇಲ್ಲ. ಒಂದು ವಿಶ್ವವಿದ್ಯಾಲಯಕ್ಕೆ ಇರುವ ಸೌಲಭ್ಯಗಳೆಲ್ಲ ಈ ಒಂದು ಹೈಸ್ಕೂಲಿನಲ್ಲಿ ಇವೆ ಎನ್ನುವುದೇ ಹೆಮ್ಮೆಯ ವಿಚಾರ.

ರಾವಸಾಹೇಬ ಸಿದ್ರಾಮಪ್ಪ ನೂರೊಂದಪ್ಪ ಲಕ್ಷ್ಮೇಶ್ವರ (1863-1937) ಅವರು ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಅನುಪಮ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಅದೇರೀತಿ ನಿವೃತ್ತಿ ನಂತರ ಶಿಕ್ಷಣ ಕ್ಷೇತ್ರದಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಹೆಗಲಿಗೆ ಹೆಗಲುಕೊಟ್ಟು ವಿಜಾಪುರದ ಬಿ.ಎಲ್.ಡಿ.ಇ. ಸಂಸ್ಥೆಗೆ ಸುಭದ್ರವಾದ ಅಡಿಪಾಯ ಹಾಕಿ ಅಖಂಡ ವಿಜಾಪುರ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ತನು ಮನ ಧನದಿಂದ ಶ್ರಮಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಿದ್ರಾಮಪ್ಪ ಅವರು ಕೂಡ ಡಾ. ಫ.ಗು. ಹಳಕಟ್ಟಿ ಅವರ ಹಾಗೆ 20ನೇ ಶತಮಾನದ ಶರಣರಾಗಿ ಬಾಳಿ ನಮಗೆಲ್ಲ ಮಾನವೀಯ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.

ಸಿದ್ರಾಮಪ್ಪ ಅವರ ತಂದೆ ನೂರಂದಪ್ಪ (ನೂರೊಂದಪ್ಪ) ಸಿದವೀರಪ್ಪ ಲಕ್ಷ್ಮೇಶ್ವರ ಅವರು ಮೂಲತಃ ವಿಜಾಪುರದವರಾಗಿದ್ದಾರೆ. ಅವರು ಮೊದಲಿಗೆ ವಿಜಾಪುರದಿಂದ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಯಮನೂರಿಗೆ ಬಂದರು. ನಂತರ ಲಕ್ಷ್ಮೇಶ್ವರಕ್ಕೆ ಬಂದು ನೆಲೆಸಿದರು. ಆಗ ಇವರ ಅಡ್ಡಹೆಸರು ಲಕ್ಷ್ಮೇಶ್ವರ ಎಂದಾಯಿತು. 19ನೇ ಶತಮಾನದಲ್ಲಿ ಈ ಭಾಗದಲ್ಲಿ ಕಾನೂನು ಶಿಕ್ಷಣ ವ್ಯವಸ್ಥೆ ಇಲ್ಲದ ಕಾರಣ 1870ರ ದಶಕದಲ್ಲಿ ಪೂನಾಗೆ ಹೋಗಿ ಕಾನೂನು ಪದವೀಧರರಾದ ನಂತರ ವಕೀಲ ವೃತ್ತಿಗಾಗಿ ಧಾರವಾಡಕ್ಕೆ ಬಂದರು. ಇದೆಲ್ಲ ನೂರು ವರ್ಷಗಳಿಗಿಂತಲೂ ಹಿಂದಿನ ಘಟನೆ. ಆಗಿನ ಕಾಲದಲ್ಲಿ ವಕೀಲರು ನ್ಯಾಯ ಗೆದ್ದಾಗ ರೈತಾಪಿ ಜನರು ಹಣದ ಬದಲಿಗೆ ಭೂಮಿಯನ್ನು ಕೊಡುತ್ತಿದ್ದರು. ಹೀಗೆ ವಕೀಲ ವೃತ್ತಿಯಲ್ಲೇ ನೂರೊಂದಪ್ಪನವರು ಸಾಕಷ್ಟು ಜಮೀನು ಗಳಿಸಿದರು.

(ಮುಖ್ಯ ಆಟದ ಮೈದಾನ)

ನೂರೊಂದಪ್ಪನವರ ಏಕೈಕ ಪುತ್ರ ಸಿದ್ರಾಮಪ್ಪ. ಧಾರವಾಡದಲ್ಲಿ ಶಾಲೆ ಮುಗಿಸಿ ಬೆಳಗಾವಿಯಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಬರೆದರು. ಸ್ವಲ್ಪದಿನ ಧಾರವಾಡದ ಮಾರಡಗಿಯಲ್ಲಿ ಒಕ್ಕಲುತನ ಮಾಡಿದರು. ನಂತರ ನೇರವಾಗಿ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡರು. ಧಾರವಾಡದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ವಿಜಾಪುರಕ್ಕೆ ವರ್ಗಾವಣೆ ಮಾಡಿತು. ಅವರ ದಕ್ಷತೆ ಮತ್ತು ಸಾಮಾಜಿಕ ಕಾಳಜಿಯ ಕಾರಣದಿಂದಲೇ ಈ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿತು. ಇದು ಅವರ ಜೀವನದ ಗತಿಯನ್ನೇ ಬದಲಿಸಿ ಅವರನ್ನು ಪುಣ್ಯಪುರುಷನನ್ನಾಗಿ ಮಾಡಿತು.

ಡಕಾಯತರ ಹಾವಳಿ: ವಿಜಾಪುರದಲ್ಲಿ ಬ್ರಿಟಿಷ್ ಕಾಲದಲ್ಲಿ ಡಕಾಯತರ ಹಾವಳಿ ಬಹಳವಾಗಿತ್ತು. ಅವರನ್ನು ನಿಯಂತ್ರಿಸಲು ಸರ್ಕಾರ ದಕ್ಷ ಅಧಿಕಾರಿಯಾಗಿದ್ದ ಸಿದ್ರಾಮಪ್ಪ ಅವರನ್ನು ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಬಡ್ತಿ ನೀಡಿ ವಿಶೇಷ ಕರ್ತವ್ಯದ ಮೇಲೆ 1910ರಲ್ಲಿ ವಿಜಾಪುರಕ್ಕೆ ಕಳುಹಿಸಿತು. ಅವರು ನಿವೃತ್ತಿಯಾಗುವವರೆಗೆ ಬ್ರಿಟಿಷ್ ಸರ್ಕಾರ ಅವರನ್ನು ವಿಜಾಪುರದಲ್ಲೇ ಉಳಿಸಿತು. ಇದು ಅವರ ದಕ್ಷತೆಗೆ ಸಾಕ್ಷಿಯಾಗಿದೆ.

ಹರಣಶಿಕಾರಿ: ಹಿಂದುಳಿದ ಹರಣಶಿಕಾರಿ ಜನಾಂಗದವರು ಹೊಟ್ಟೆಪಾಡಿಗಾಗಿ ಡಕಾಯತಿ ಮಾಡುತ್ತಿದ್ದರು. ಆಗ ಒಟ್ಟಾರೆ ಇಂಥವರ ಉಪಟಳ ಬಹಳವಾಗಿತ್ತು. ಡಕಾಯತರ ತಂಡಗಳು ಊರಿಗೆ ಊರೇ ಕೊಳ್ಳೆಹೊಡೆದು ಜನರಿಗೆ ಬಹಳ ತೊಂದರೆ ಕೊಡುತ್ತಿದ್ದವು. ಅನೇಕರ ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚುತ್ತಿದ್ದರು. ಕೊಲೆ ಸುಲಿಗೆಗಳನ್ನು ಮಾಡಲು ಕೂಡ ಅವರು ಹೇಸುತ್ತಿರಲಿಲ್ಲ. ಹೀಗೆ ಡಕಾಯತರು ಬ್ರಿಟಿಷ್ ಸರ್ಕಾರಕ್ಕೆ ತಲೆನೋವಾಗಿದ್ದರು.

(ಬ್ರಿಟಿಷ್ ಸರ್ಕಾರ ಪ್ರದಾನ ಮಾಡಿದ ರಾವಸಾಹೇಬ್ ಬಿರುದಿನ ಪದಕ)

ಆ ಡಕಾಯತರ ಚಟುವಟಿಕೆಗಳ ಮೇಲೆ ನಿಗಾ ಇಟ್ಟ ಸಿದ್ರಾಮಪ್ಪನವರು ಚಾಣಾಕ್ಷತನದಿಂದ ಅನೇಕರನ್ನು ಬಂಧಿಸಿದರು. ಆದರೆ ಮುಂದೆ ಡಕಾಯತರ ಮನ ಪರಿವರ್ತನೆ ಮಾಡಿ ಸಮಾಜಮುಖಿಯಾಗಿಸಿದರು. ಅವರಲ್ಲಿನ ಅನೇಕರನ್ನು ವಿಜಾಪುರದಿಂದ ಹುಬ್ಬಳ್ಳಿಗೆ ಕರೆತಂದು ಅಲ್ಲಿಯ ಸೆಟ್ಲ್‍ಮೆಂಟ್‍ನಲ್ಲಿ ನೆಲೆ ನಿಲ್ಲುವಂತೆ ಮಾಡಿದರು. ಆ ಮೂಲಕ ಪೊಲೀಸ್ ಇಲಾಖೆಗೆ ಸಮಾಜಸೇವೆಯ ಪಾಠವನ್ನು ಕೃತಿಯ ಮೂಲಕ ತೋರಿಸಿಕೊಟ್ಟರು.

ಆ ಮನ ಪರಿವರ್ತನೆಗೊಂಡ ಡಕಾಯತರಲ್ಲಿ ಕೆಲವರು ಮುಂದೆ ತಮ್ಮ ಮಕ್ಕಳಿಗೆ ಸಿದ್ರಾಮಪ್ಪನವರ ಹೆಸರು ಇಟ್ಟರೆಂದು ತಿಳಿದು ಬರುತ್ತದೆ. ಅವರಿಗೆ ಬ್ರಿಟಿಷರಿಂದ ಹುಬ್ಬಳ್ಳಿಯಲ್ಲಿ ನೆಲೆಸಲು ಕೊಡಿಸಿರುವ ಜಾಗವು ಈಗಿರುವ ಹುಬ್ಬಳ್ಳಿಯ ಸೆಟಲ್‍ಮೆಂಟ್ ಏರಿಯಾ.

ರಾವಸಾಹೇಬ: ಪೊಲೀಸ್ ಅಧಿಕಾರಿಯಾಗಿ, ವಿಶೇಷ ಸೇವೆಯಲ್ಲಿ ಕರ್ತವ್ಯ ಪಾಲನೆ ಮಾಡುತ್ತ ಅಪರಾಧಿ ಬುಡಕಟ್ಟು ಜನರ ಬದುಕನ್ನು ಹಸನುಗೊಳಿಸುವಲ್ಲಿ ಸಮಾಜಮುಖಿಯಾಗಿ ಯಶಸ್ವಿಯಾಗಿದರು. (ನೆಹರೂ ಅವರು ಪ್ರಧಾನಿಯಾದಕೂಡಲೆ ‘ಅಪರಾಧಿ ಬುಟಕಟ್ಟು’ ಎಂಬ ಕಳಂಕವನ್ನು ತೆಗೆದು ಹಾಕಿದರು.) ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ ಆಗಿನ ಬಿಟಿಷ್ ಸರ್ಕಾರ ಇವರಿಗೆ 1912ರಲ್ಲಿ “ರಾವಸಾಹೇಬ” ಬಿರುದು ನೀಡಿ ಗೌರವಿಸಿತು.

(ಹೈಸ್ಕೂಲಿನ ಕೇಂದ್ರಭಾಗ)

ಧಾರವಾಡದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ವಿಜಾಪುರಕ್ಕೆ ವರ್ಗಾವಣೆ ಮಾಡಿತು. ಅವರ ದಕ್ಷತೆ ಮತ್ತು ಸಾಮಾಜಿಕ ಕಾಳಜಿಯ ಕಾರಣದಿಂದಲೇ ಈ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿತು. ಇದು ಅವರ ಜೀವನದ ಗತಿಯನ್ನೇ ಬದಲಿಸಿ ಅವರನ್ನು ಪುಣ್ಯಪುರುಷನನ್ನಾಗಿ ಮಾಡಿತು.

ನಿವೃತ್ತಿ ಕಥೆ: ಸಿದ್ರಾಮಪ್ಪನವರು 1919ನೇ ಜೂನ್ 1 ರಂದು ನಿವೃತ್ತರಾದರೂ ಅವರ ನಿವೃತ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ತಡೆಹಿಡಿಯಲಾಯಿತು. ಹಾಗೆ ತಡೆಹಿಡಿಯುವುದರಲ್ಲಿ ಸದುದ್ದೇಶವಿತ್ತು. ಸ್ಟಾರ್ಟೇ ಎಂಬ ಅಧಿಕಾರಿ ವಿಜಾಪುರದ ಅಪರಾಧಿ (ಕ್ರಿಮಿನಲ್) ಬುಡಕಟ್ಟುಗಳ ಪುನರ್ವಸತಿ ಕಚೇರಿಯ ಅಧಿಕಾರಿಯಾಗಿದ್ದರು. ಸಿದ್ರಾಮಪ್ಪ ಅವರು ನಿವೃತ್ತಿಯಾಗುವ ಸಂದರ್ಭದಲ್ಲಿ ಅವರು ದೀರ್ಘ ರಜೆಯ ಮೇಲಿದ್ದರು. ಆಗ ಓ ಗೋರ್ಮನ್ ಅವರು ಹಂಗಾಮಿ ಅಧಿಕಾರಿಯಾಗಿದ್ದರು. ಸ್ಟಾರ್ಟೇ ಅವರು ರಜೆ ಮುಗಿಸಿ ವಾಪಸ್ ಬರುವವರೆಗೆ ಸಿದ್ರಾಮಪ್ಪ ಅವರ ನಿವೃತ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಬಾಂಬೆ ಸರ್ಕಾರಕ್ಕೆ ಕಳಿಸಿರಲಿಲ್ಲ. ಸಿದ್ರಾಮಪ್ಪ ಅವರ ಪ್ರಶಂಸನೀಯ ಸೇವೆಯನ್ನು ಸರ್ಕಾರದ ಗಮನಕ್ಕೆ ತಂದು ಅವರಿಗೆ ಇನಾಮು ಕೊಡಿಸುವ ಉದ್ದೇಶ ಅವರದಾಗಿತ್ತು.

ಸ್ಟಾರ್ಟೇ ಸಾಹೇಬರು ಈ ವಿಚಾರವನ್ನು 1920ನೇ ಆಗಸ್ಟ್ 6ರಂದು ಬಾಂಬೆ ಸರ್ಕಾರದ ಕಂದಾಯ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಜೊತೆ ಸಿದ್ರಾಮಪ್ಪಾ ಲಕ್ಷ್ಮೇಶ್ವರ 10 ವರ್ಷ ಸೇವೆ ಸಲ್ಲಿಸಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಕರ್ತವ್ಯನಿಷ್ಠೆ ಮತ್ತು ಸಮರ್ಪಣಾ ಭಾವದಿಂದಾಗಿ ಅಪರಾಧಿ ಬುಡಕಟ್ಟುಗಳ ಪುನರ್ವಸತಿ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು ಎಂದು ಬಾಂಬೆ ಸರ್ಕಾರಕ್ಕೆ ಬರೆದ ಆ ಪತ್ರದಲ್ಲಿ ತಿಳಿಸಿದ್ದಾರೆ. ಅಂದಿನ ವಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಂಬೆ ಸ್ಟೇಟ್ ಐ.ಜಿ.ಪಿ. ಮುಂತಾದ ಅಧಿಕಾರಿಗಳು ಬಹಳ ಹೆಮ್ಮೆಯಿಂದ ಸಿದ್ರಾಮಪ್ಪ ಕುರಿತ ಸ್ಟಾರ್ಟೇ ಅವರ ಮನವಿಯನ್ನು ಎತ್ತಿ ಹಿಡಿದಿದ್ದಾರೆ.

ಈ ಮೊದಲು ಕೂಡ ಅನೇಕ ಸಲ ಸಿದ್ರಾಮಪ್ಪ ಅವರ ಕಾರ್ಯಕ್ಷಮತೆಯನ್ನು ಸರ್ಕಾರಕ್ಕೆ ತಂದಿದ್ದನ್ನು ಸ್ಟಾರ್ಟೇ ಅವರು ಪತ್ರದಲ್ಲಿ ಜ್ಞಾಪಿಸಿದ್ದಾರೆ. ಅಪರಾಧಿ ಬುಡಕಟ್ಟುಗಳ ಪುನರ್ವಸತಿ ಕಾರ್ಯದಲ್ಲಿ ಸಿದ್ರಾಮಪ್ಪ ಅವರು ಅವಿಶ್ರಾಂತವಾಗಿ ತೊಡಗಿ ಯಶಸ್ಸು ಸಾಧಿಸಿದ್ದನ್ನು ಗುರುತಿಸಿದ ಸರ್ಕಾರ 1911ರಲ್ಲೇ ‘ದೆಹಲಿ ದರ್ಬಾರ’ ನಡೆದ ಸಂದರ್ಭದಲ್ಲಿ ಬಾಂಬೆ ಗವರ್ನರರ ಅರ್ಹತಾ ಪ್ರಮಾಣಪತ್ರವನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು. ಮಾನವೀಯ ನೆಲೆಯಿಂದ ಕೂಡಿದ ಅವರ ಕರ್ತವ್ಯನಿಷ್ಠೆಗಾಗಿ ಕಮೀಷನರ್ ಪ್ರಮಾಣಪತ್ರ ಕೂಡ ಲಭಿಸಿತ್ತು.

ಬ್ರಿಟಿಷ್ ಸರ್ಕಾರ ಸ್ಟಾರ್ಟೇ ಶಿಫಾರಸನ್ನು ಮನ್ನಿಸಿ ಸಿದ್ರಾಮಪ್ಪ ಅವರು ಮಾಡಿದ ಅನುಪಮ ಸೇವೆಗಾಗಿ ಸೋಲಾಪುರ ಬಳಿಯ ಸಿಂಗಡಗಾವ ಗ್ರಾಮದಲ್ಲಿ 36 ಎಕರೆ 35 ಗುಂಟೆ ಜಮೀನನ್ನು ಇನಾಮಾಗಿ ನೀಡಿತು.

ಮಾನವೀಯತೆಯ ಸಾಕಾರ ಮೂರ್ತಿ: ವಿಜಾಪುರ ಕೈದಿಗಳ ಸಹಾಯ ಸಂಘದ ಚಟುವಟಿಕೆಗಳಲ್ಲೂ ಅವರು ಹೆಚ್ಚಿನ ಆಸಕ್ತಿ ವಹಿಸಿದರು. ಬಿಡುಗಡೆ ಹೊಂದಿದ ಕೈದಿಗಳು ಸಹಜ ನಾಗರಿಕರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಬಯಕೆಯಿಂದ ಸಿದ್ರಾಮಪ್ಪನವರು ಮೂರು ವರ್ಷಗಳವರೆಗೆ ಅವರಿಗೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟು ಮಾನವೀಯತೆಯ ಸಾಕಾರ ಮೂರ್ತಿಯಾದರು.

ಕೇಂದ್ರ ಹಾಗೂ ದಕ್ಷಿಣ ವಿಭಾಗಗಳ ಅಪರಾಧಿ ಬುಡಕಟ್ಟುಗಳ ಸೆಟ್ಲ್‍ಮೆಂಟ್‍ಗಳಿಗೆ “ಗೌರವ ಸಂದರ್ಶಕ” ಆಗಿ ಸರ್ಕಾರ 1919ನೇ ಆಗಸ್ಟ್ 14ರಂದು ನೇಮಿಸಿತು. ಸಿದ್ರಾಮಪ್ಪ ಅವರು ನಿವೃತ್ತರಾದ ಮೇಲೂ ಅವಿಶ್ರಾಂತವಾಗಿ ನತದೃಷ್ಟರ ಸೇವೆಯಲ್ಲಿ ತೊಡಗಿದರು. ಎಲ್ಲ ಸೆಟ್ಲ್‍ಮೆಂಟ್‍ಗಳಿಗೆ ಭೇಟಿ ಕೊಡುತ್ತ, ಅಲ್ಲಿನ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತ ಅಪರಾಧಿ ಬುಡುಕಟ್ಟಿನ ಜನ ಆತ್ಮಗೌರವದಿಂದ ಬದುಕುವಂಥ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾದರು.

ಅವರ ಈ ಸೇವೆ ಬಹಳ ಮೌಲಿಕವಾದುದು ಎಂದು ಬ್ರಿಟಿಷ್ ಸರ್ಕಾರ ಗುಣಗಾನ ಮಾಡಿದೆ. ಹೀಗೆ ಹೇಳುವ ಸಂದರ್ಭದಲ್ಲಿ ಸ್ಟಾರ್ಟೇ ಅವರು ಒಂದು ಅವಿಸ್ಮರಣೀಯವಾದ ಉದಾಹರಣೆ ಕೊಡುತ್ತಾರೆ. ಬಿಜಾಪುರದ ಸೆಟ್ಲ್‍ಮೆಂಟ್ ನೋಡಿಕೊಳ್ಳಲು ಅನುಕೂಲವಾಗಲೆಂದು ಸಿದ್ರಾಮಪ್ಪ ಅವರು ಅದರ ಪಕ್ಕದಲ್ಲೇ ಮನೆ ಮಾಡುತ್ತಾರೆ. ಅಪರಾಧಿ ಬುಡಕಟ್ಟು ಎಂದು ಗುರುತಿಸಲಾಗಿದ್ದ ಹರಣಶಿಕಾರಿ ಬುಡಕಟ್ಟಿನ 30 ಯುವಕರನ್ನು ಮತ್ತು ಇತರ ಯುವಕರನ್ನು ಸಾಯಂಕಾಲದ ವೇಳೆ ತಮ್ಮ ಮನೆಯಲ್ಲಿ ಸೇರಿಸಿಕೊಂಡು ತಿಂಗಳುಗಟ್ಟಲೆ ಅವರಿಗೆ ನಾಗರಿಕ ಬದುಕಿನ ಪಾಠ ಹೇಳಿಕೊಡುವ ಮೂಲಕ ಯೋಗ್ಯ ಮನುಷ್ಯರಾಗಿ ಪರಿವರ್ತನೆ ಹೊಂದುವಂತೆ ಮಾಡಿದ್ದಾರೆ. ಅವರೆಲ್ಲ ಸಿದ್ರಾಮಪ್ಪ ಅವರ ಮನೆಯಲ್ಲೇ ಮಲಗುತ್ತಿದ್ದರು. ಸಿದ್ರಾಮಪ್ಪ ಅವರು ಸ್ವತಃ ಮುಂದೆ ನಿಂತು ಅವರಿಗೆ ಎಲ್ಲ ವ್ಯವಸ್ಥೆಯಾಗುವುದನ್ನು ನೋಡಿಕೊಳ್ಳುತ್ತಿದ್ದರು. ಪ್ರಾತರ್ವಿಧಿಗಾಗಿ ಕೂಡ ಎಲ್ಲ ವ್ಯವಸ್ಥೆ ಮಾಡುತ್ತಿದ್ದರು!

ಈ ರೀತಿಯಾಗಿ ಅಪರಾಧಿ ಬುಡಕಟ್ಟು ಎಂದು ಅಪಮಾನಕ್ಕೀಡಾದ ಯುವಕರಿಗೆ ಸಂಸ್ಕಾರ ನೀಡಿ ಸಭ್ಯ ಗೃಹಸ್ಥರನ್ನಾಗಿ ಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಅಪರಿಮಿತವಾದ ತಾಳ್ಮೆ ಬೇಕು. ‘ಅವರಲ್ಲೂ ಮನುಷ್ಯತ್ವ ಇದೆ’ ಎಂಬ ಅಚಲವಾದ ನಂಬಿಕೆ ಬೇಕು. ದೈನಂದಿನ ಬದುಕಿನ ಎಲ್ಲ ಹಂತಗಳಲ್ಲಿ ಅವರನ್ನು ನಿರೀಕ್ಷಿಸುವ ಮೂಲಕ ಅವರನ್ನು ತಿದ್ದುವುದು. ಅವರಲ್ಲಿ ಹೊಸ ಕನಸುಗಳ ಸೃಷ್ಟಿ ಮಾಡುವುದು. ತಮಗೂ ಬೇರೆಯರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸುವುದು. ಆ ಮೂಲಕ ಆತ್ಮಗೌರದ ಪಾಠ ಕಲಿಸುವುದು ಮುಂತಾದವುಗಳನ್ನು ಸಮರ್ಪಣಾಭಾವದಿಂದ ಮಾಡಬೇಕಾಗುತ್ತದೆ. ಒಬ್ಬ ಮಹಾಪುರುಷ ಮಾತ್ರ ಹೀಗೆಲ್ಲ ಮಾಡಲು ಸಾಧ್ಯ.

ಸೆಟ್ಲಮೆಂಟ್ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯಾಗಿ ಬರುವ ಮೊದಲು ಪೊಲೀಸ್ ಇಲಾಖೆಯಲ್ಲಿ ಇದ್ದಾಗ ಕೂಡ ಅವರು ಗೌರವಾರ್ಹವಾದ ವೃತ್ತಿ ದಾಖಲೆ ಹೊಂದಿದ್ದಾರೆ. ಅವರ 34 ವರ್ಷಗಳ ಸೇವೆಯಲ್ಲಿ ಕೇವಲ 5 ತಿಂಗಳು ಮಾತ್ರ ರಜೆ ತೆಗೆದುಕೊಂಡಿದ್ದಾರೆ. ಅವರು ರಜೆಯಲ್ಲಿ ಯಾವುದೇ ಪ್ರತಿಫಲವಿಲ್ಲದೆ ಕಾರ್ಯನಿರ್ವಹಿಸಿದ ದಿನಗಳೇ 3 ವರ್ಷಗಳಷ್ಟಾಗುತ್ತದೆ!

ನಿವೃತ್ತಿ ನಂತರವೂ ವಿಜಾಪುರದಲ್ಲಿಯೆ ಉಳಿದ ರಾವಸಾಹೇಬ ಸಿದ್ರಾಮಪ್ಪ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳನ್ನು ಮುಂದುವರಿಸಿ ಇತಿಹಾಸ ಸೃಷ್ಟಿಸಿದರು.

ಫ.ಗು. ಹಳಕಟ್ಟಿ ಒಡನಾಟ: ಹಳಕಟ್ಟಿ ಅವರು 1904ರಲ್ಲಿ ಮುಂಬೈಯಲ್ಲಿ ಕಾನೂನು ಪದವಿ ಪಡೆದು ಧಾರವಾಡಕ್ಕೆ ಮರಳಿದರು. ಧಾರವಾಡ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಕೆಲ ತಿಂಗಳುಗಳ ನಂತರ ಅವರು ವರ್ಗವಾಗಿ ಬೆಳಗಾವಿಗೆ ಹೋಗಬೇಕಾಯಿತು. ಅಲ್ಲಿಂದ ಅದೇ ವರ್ಷ ವಿಜಾಪುರಕ್ಕೆ ವರ್ಗ ಮಾಡಿಸಿಕೊಂಡರು. ನಂತರ ವಿಜಾಪುರದಲ್ಲಿ ಸ್ವತಂತ್ರ ವಕೀಲಿ ವೃತ್ತಿ ಪ್ರಾರಂಭಿಸಿದರು. ಮುಂದೆ 6 ವರ್ಷಗಳಾದ ನಂತರ ಸಿದ್ರಾಮಪ್ಪ ಅವರು ವಿಜಾಪುರಕ್ಕೆ ವಿಶೇಷ ಕರ್ತವ್ಯದ ಮೇಲೆ ಬಂದ ಮೇಲೆ ವಚನಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಪರಿಚಯ ಒಡನಾಟಕ್ಕೆ ತಿರುಗಿತು. ಅವರು ಹಳಕಟ್ಟಿ ಅವರಿಗಿಂತ 17 ವರ್ಷ ಹಿರಿಯರಾಗಿದ್ದರು. ಸಿದ್ರಾಮಪ್ಪ ಅವರು ಜನಿಸಿದ್ದು 1863ರಲ್ಲಿ, ಹಳಕಟ್ಟಿಯವರು ಜನಿಸಿದ್ದು 1880.

1885ರ ವರೆಗೆ ಕಲಾದಗಿ ಜಿಲ್ಲಾ ಕೇಂದ್ರವಾಗಿತ್ತು. 1885ರಲ್ಲಿ ವಿಜಾಪುರ ಜಿಲ್ಲಾ ಕೇಂದ್ರವಾಯಿತು. 1891ರಲ್ಲಿ ಪೂರ್ಣ ಪ್ರಮಾಣದ ಆಂಗ್ಲ ಮಾಧ್ಯಮಿಕ ಶಾಲೆ ಪ್ರಾರಂಭವಾದರೂ ಅದು ಶ್ರೀಮಂತ ಮಕ್ಕಳಿಗಾಗಿ ಮೀಸಲಿದ್ದಂಥ ವಾತಾವರಣ ಸೃಷ್ಟಿಯಾಗಿತ್ತು. ಬಡ ಮತ್ತು ಹಳ್ಳಿಯ ಮಕ್ಕಳು ಜಾಣರಿದ್ದರೂ ಅಲ್ಲಿ ಹೋಗುವ ಶಕ್ತಿ ಇರಲಿಲ್ಲ. ಉನ್ನತ ಶಿಕ್ಷಣಕ್ಕಾಗಿ ಮಹಾರಾಷ್ಟ್ರದ ಸೋಲಾಪುರ, ಕೊಲ್ಹಾಪುರ, ಪೂನಾ ಮತ್ತು ಮುಂಬೈ ನಗರಗಳ ಮೇಲೆ ಅವಲಂಬಿತವಾಗಬೇಕಿತ್ತು. ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಂತೆ ವಿಜಾಪರ ಕೂಡ ಮುಂಬೈ ಕರ್ನಾಟಕ ಎನಿಸಿಕೊಂಡು ಬಾಂಬೆ ಸ್ಟೇಟ್ ಭಾಗವಾಗಿದ್ದರಿಂದ ಹಳೆಮೈಸೂರು ರಾಜ್ಯಕ್ಕೂ ಮುಂಬೈ ಕರ್ನಾಟಕಕ್ಕೂ ಆಡಳಿತಾತ್ಮಕ ಸಂಬಂಧವಿರಲಿಲ್ಲ. ಅದು ಕಾರಣ ಈ ಭಾಗದ ಜನರು ಬಾಂಬೆ ಸ್ಟೇಟ್ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗಿತ್ತು. ಇಂಥ ಸಂದರ್ಭದಲ್ಲಿ ವಿಜಾಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಡವರಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಯೋಚನೆಯನ್ನು ಫ.ಗು. ಹಳಕಟ್ಟಿಯವರು ಮಾಡಿದರು.

ಬಿ.ಎಲ್.ಡಿ.ಇ. ಸ್ಥಾಪನೆ: ಆಲಮೇಲದ ಎಸ್.ಜೆ. ದೇಶಮುಖ, ರಕ್ಕಸಗಿಯ ಸಂಗಪ್ಪ ದೇಸಾಯಿ, ಹಲಗಲಿಯ ಎಸ್.ವಿ. ಸರನಾಯಕ, ಸೊನ್ನದ ಗಂಗಪ್ಪ ದೇಸಾಯಿ, ಜಂಬಗಿಯ ಶಂಕರರಾವ ದೇಸಾಯಿ ಮುಂತಾದವರು ಜಮ್ಮಾ ಅವರ ಅಂಗಡಿಯಲ್ಲಿ 1910ನೇ ಅಕ್ಟೋಬರ್ 23ರಂದು ಸಭೆ ಸೇರಿದರು. ಫ.ಗು. ಹಳಕಟ್ಟಿ ಅವರು ನೇತೃತ್ವ ವಹಿಸಿದರು. ಎಸ್.ವಿ. ಸರನಾಯಕರು ಅಧ್ಯಕ್ಷತೆ ವಹಿಸಿದರು. ಆ ಸಭೆಯಲ್ಲಿ ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ ಎಜ್ಯುಕೇಶನ್ ಸಂಸ್ಥೆಯ ಸ್ಥಾಪನೆಯಾಯಿತು. ಡೆಪ್ಯೂಟಿ ಕಲೆಕ್ಟರ್ ಹಿರೇಮಠ, ಮಾಮಲೇದಾರರಾದ ಆರ್.ಬಿ. ಕಿತ್ತೂರ ಮತ್ತು ಎಸ್.ಎಸ್. ಘಾಳಿ ಅವರು ಈ ಸಂಸ್ಥೆಯ ಸ್ಥಾಪನೆಗೆ ಬೆಂಬಲ ನೀಡಿದ್ದರು.

ಈ ಬಿ.ಎಲ್.ಡಿ.ಇ. ಸಂಸ್ಥೆಯ ಸಂಸ್ಥಾಪನೆಯ ಮೊದಲ ಕಾಲಘಟ್ಟದಲ್ಲೇ ಸಿದ್ರಾಮಪ್ಪನವರು ಕೂಡ ಸಂಸ್ಥೆಯ ಮೊದಲ ತಲೆಮಾರಿನ ಭಾಗವಾದರು. ಬಂಥನಾಳ ಸಂಗನಬಸವ ಸ್ವಾಮಿಗಳದ್ದು ಎರಡನೇ ತಲೆಮಾರು. ಬಿ.ಎಂ. ಪಾಟೀಲರದು ಮೂರನೇ ತಲೆಮಾರು. ಸದ್ಯ ಎಂ.ಬಿ. ಪಾಟೀಲರದು ನಾಲ್ಕನೆಯ ತಲೆಮಾರು.

ಜರ್ಮನಿಯ ಬಾಸೆಲ್ ಮಿಷನ್ ಸಂಸ್ಥೆಯ ನ್ಯೂ ಇಂಗ್ಲಿಷ್ ಸ್ಕೂಲನ್ನು 1917ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ ಸ್ವೀಕರಿಸಿತು. ಈ ಇಂಗ್ಲಿಷ್ ಸ್ಕೂಲ್‌ನಲ್ಲಿ ಆಗ 83 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಡಾ. ಎಂ.ಎಸ್. ಮದಭಾವಿ ಅವರು ‘ಬಿ.ಎಲ್.ಡಿ.ಇ. ಸಂಸ್ಥೆ ವಿಜಾಪುರ’ ಪುಸ್ತಕದಲ್ಲಿ ತಿಳಿಸಿದ್ದಾರೆ. ನಂತರ ಇದು ಶ್ರೀ ಸಿದ್ಧೇಶ್ವರ ಮಾಧ್ಯಮಿಕ ಶಾಲೆಯಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆಲ್ಲ ಈ ಮಾಧ್ಯಮಿಕ ಶಾಲೆಗೆ ತನ್ನದೇ ಆದ ಕಟ್ಟಡದ ಅವಶ್ಯಕತೆ ಇದೆ ಎಂಬುದನ್ನು ಹಳಕಟ್ಟಿಯವರು ಮನಗಂಡರು. ಸ್ವತಂತ್ರ ಕಟ್ಟಡದ ಯೋಜನೆಯೊಂದನ್ನು ರೂಪಿಸಿದರು. ಶಾಲೆಯ ಬೆಳವಣಿಗೆಯನ್ನು ಗಮನಿಸಿದ ಸರ್ಕಾರ ಯೋಜನೆಗೆ ಅನುಮತಿ ನೀಡಿತು. ಸರ್ಕಾರದಿಂದ 6 ಎಕರೆ ಭೂಮಿ ಪಡೆದು ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಬ್ರಿಟಿಷ್ ಸರ್ಕಾರದಿಂದ ಈ ಭೂಮಿ ಪಡೆಯುವಲ್ಲಿ ರಾವಸಾಹೇಬ ಸಿದ್ರಾಮಪ್ಪ ಲಕ್ಷ್ಮೇಶ್ವರರ ಶ್ರಮವೂ ಇದೆ. ಇದೇ ಸಂದರ್ಭದಲ್ಲಿ ಸಿದ್ರಾಮಪ್ಪನವರು ಸೇವಾ ನಿವೃತ್ತಿ ಹೊಂದಿದರು. ನಂತರ ಕಟ್ಟಡ ನಿರ್ಮಾಣದ ಮೇಲ್ವಿಚಾರಣಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ಸಿದ್ರಾಮಪ್ಪನವರು ನಿವೃತ್ತಿ ಹೊಂದಿದ್ದರೂ ಸಮಾಜ ಸೇವೆಯ ಉತ್ಸಾಹ ಕುಗ್ಗಿರಲಿಲ್ಲ. ಅವಿಶ್ರಾಂತವಾಗಿ ಕಟ್ಟಡ ನಿರ್ಮಾಣದ ಕೆಲಸ ಕಾರ್ಯಗಳ ಮೇಲ್ವಿಚಾರಣೆಯ ಹೊಣೆ ಹೊತ್ತು ಯಶಸ್ಸನ್ನು ಸಾಧಿಸಿದರು. ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಕಟ್ಟಡದ ಉಸ್ತುವಾರಿಯನ್ನು ಅವರು ಎಷ್ಟೊಂದು ಹಚ್ಚಿಕೊಂಡಿದ್ದರೆಂದರೆ ರಾತ್ರಿ ಕೂಡ ಅವರು ಕಟ್ಟಡ ನಿರ್ಮಾಣ ಸ್ಥಳದಲ್ಲೇ ಕಲ್‍ಬೆಂಚಿನ ಮೇಲೆ ಮಲಗುತ್ತಿದ್ದರು!

ಮನೆ ಮಾರಿ ರೂ. 3,500, ಸಿಂಗಡಗಾವ್ ಗ್ರಾಮದ ಹೊಲ ಮಾರಿ 4,250 ರೂಪಾಯಿ. ಸಿಂದಗಿ ತಾಲ್ಲೂಕು ದೇವಣಗಾವ ಗ್ರಾಮದ ಹೊಲಗಳನ್ನು ಮಾರಿ ಬಂದ 4,250 ರೂಪಾಯಿ, ಹೀಗೆ ಒಟ್ಟು 40 ಸಾವಿರ ರೂಪಾಯಿ ಮೌಲ್ಯದ ಸ್ವಂತ ಆಸ್ತಿಯಿಂದ ಬಂದ ಹಣ, ಉಳಿತಾಯದ ಹಣ ಮತ್ತು ನಿವೃತ್ತಿಯಿಂದ ಬಂದ ಹಣವನ್ನೂ ಸಂಸ್ಥೆಗೆ ನೀಡಿದರು. (ಇಂದು ಅದರ ಬೆಲೆ ಕನಿಷ್ಠ 20 ಕೋಟಿ ರೂಪಾಯಿ ಆಗುತ್ತದೆ.) ಈ ಪ್ರಕಾರವಾಗಿ ಅವರ ತ್ಯಾಗ ಮತ್ತು ಕರ್ತವ್ಯನಿಷ್ಠೆ ದಂತಕಥೆಯ ಹಾಗೆ ರೋಮಾಂಚನಕಾರಿಯಾಗಿದೆ.

ಬಲಭಾಗದ ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆಯಾದಾಗ ಸಮರ್ಪಣಾ ಭಾವದಿಂದ ಅತಿಹೆಚ್ಚು ಧನಸಹಾಯ ಮಾಡಿದವರೆಂದರೆ ಬಸಲಿಂಗಪ್ಪ ಮೋಟಗಿ ಅವರು. ಅಡತಿ ಅಂಗಡಿ ಮಾಲೀಕರು ಧರ್ಮದಾವ (ಚಾರಿಟಿ ಫಂಡ್) ಎಂದು ರೈತರಿಂದ ಹಣ ಸಂಗ್ರಹಿಸಿ ಕೊಟ್ಟಿದ್ದು ಕೂಡ ಈ ಕಟ್ಟಡದ ನಿರ್ಮಾಣಕ್ಕೆ ಬಹಳ ಸಹಾಯಕವಾಗಿದೆ.

ಈ ಮಾಧ್ಯಮಿಕ ಶಾಲೆಗೆ 1937ರಲ್ಲಿ ಸರ್ಕಾರದಿಂದ ಕಾಯಂ ನೋಂದಣಿ ಮಂಜೂರಾಯಿತು. ಈ ಭವ್ಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತನು ಮನ ಧನದಿಂದ ಸಹಾಯ ಮಾಡಿದ ರಾವಸಾಹೇಬ ಸಿದ್ರಾಮಪ್ಪ ಲಕ್ಷ್ಮೇಶ್ವರ ಅವರ ಎದೆಮಟ್ಟದ ಮೂರ್ತಿಯನ್ನು ಸಂಸ್ಥೆಯವರು 1942ನೇ ಆಗಸ್ಟ್ 28ರಂದು ಸ್ಥಾಪಿಸಿ ಕೃತಾರ್ಥರಾಗಿದ್ದಾರೆ. ಆಗಿನ ಜಿಲ್ಲಾ ನ್ಯಾಯಾಧೀಶ ಟಿ.ಟಿ. ಕೋಥವಾಲ ಅವರು ಮೂರ್ತಿಯ ಅನಾವರಣ ಮಾಡಿದರು. “ಎಸ್.ಎಸ್. ಹೈಸ್ಕೂಲಿನ ವಾಸ್ತಿಶಿಲ್ಪಿ” ಎಂದು ಸಿದ್ರಾಮಪ್ಪ ಅವರನ್ನು ಸಂಸ್ಥೆಯವರು ಅಭಿಮಾನದಿಂದ ಕರೆಯುತ್ತಾರೆ.

(ಗ್ರಂಥಾಲಯ)

ಉಯಿಲು: ಸಿದ್ರಾಮಪ್ಪ ಅವರು 1923ರಲ್ಲಿ ಉಯಿಲು ಬರೆದಾಗ ಅವರಿಗೆ 60 ವರ್ಷ ವಯಸ್ಸಾಗಿತ್ತು. ಆ ಉಯಿಲು ಕೂಡ ಅವರ ಘನತೆಯ ಪ್ರತೀಕವಾಗಿದೆ. ಬಿ.ಎಲ್.ಡಿ.ಇ. ಸಂಸ್ಥೆಯ ಬಗ್ಗೆ ಅವರಿಗೆ ಎಷ್ಟೊಂದು ಕಾಳಜಿ ಇತ್ತೆಂದರೆ ಪದೆ ಪದೆ ಸಂಸ್ಥೆಯನ್ನು ಜ್ಞಾಪಿಸುತ್ತಾರೆ. ಮತ್ತೆ ಮತ್ತೆ ಸಂಸ್ಥೆಗೆ ಸಹಾಯ ಮಾಡುವಂಥ ವಿಚಾರಗಳನ್ನು ತಿಳಿಸುತ್ತಾರೆ. ಇನ್ನೂ ವಿಶೇಷವೆಂದರೆ ಬಡ ಲಿಂಗಾಯತ ಮಕ್ಕಳ ಶಿಕ್ಷಣಕ್ಕೆ ತೋರಿಸುವ ಕಾಳಜಿಯನ್ನು ಅಪರಾಧಿ ಬುಡಕಟ್ಟಿನ ಮಕ್ಕಳ ಬಗ್ಗೆಯೂ ತೋರಿಸುತ್ತಾರೆ. ಅವರೆಲ್ಲರ ಶಿಕ್ಷಣಕ್ಕೆ ಧನಸಹಾಯದ ವ್ಯವಸ್ಥೆಯನ್ನು ಉಯಿಲಿನಲ್ಲಿ ಕಲ್ಪಿಸಿದ್ದಾರೆ.

ಸಿದ್ರಾಮಪ್ಪನವರು ವಿಜಯಪುರದಲ್ಲಿ ನೆಲೆಸಿದಾಗ ಅಲ್ಲಿನ ಅನೇಕರೊಡಗೂಡಿ ಲಿಂಗಾಯತ ಸಮಾಜದ ಬಗ್ಗೆ ಅನೇಕ ಸತ್ಕಾರ್ಯಗಳನ್ನು ಮಾಡಿದ್ದು ಅವುಗಳಲ್ಲಿ ವಿಜಯಪುರದಲ್ಲಿ ಸಿದ್ಧೇಶ್ವರ ದೇವಸ್ಥಾನವನ್ನು ನಿರ್ಮಿಸಲು ಶ್ರಮಿಸಿದ್ದು ಮುಖ್ಯವಾಗಿವೆ. ಈಗ ವಿಜಯಪುರ ನಗರದಲ್ಲಿ ಶ್ರೀ ಸಿದ್ಧೇಶ್ವರರ ಭವ್ಯವಾದ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ.

ರಾವಸಾಹೇಬ ಸಿದ್ರಾಮಪ್ಪನವರು 1937ನೇ ಡಿಸೆಂಬರ್ 25 ರಂದು ತಮ್ಮ 74ನೇ ವರ್ಷದಲ್ಲಿ ವಿಜಾಪುರದಲ್ಲಿ ನಿಧನರಾದರು. ವಿಜಯಪುರ ಹತ್ತಿರದ ರಕ್ಕಸ ತಂಗಡಗಿಯ ಸ್ವಂತ ಹೊಲದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮಾದರಿ ಕಟ್ಟಡ: ವಿಜಾಪುರದ ಜಮೀನುದಾರರು, ರೈತರು, ವ್ಯಾಪಾರಿಗಳು, ಅಧಿಕಾರಿಗಳು, ಮಠಾಧೀಶರು ಮುಂತಾದವರು ಸೇರಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಕಟ್ಟಿ ವಿಜಾಪುರದ ಬಡ ಮತ್ತು ಮಧ್ಯಮ ವರ್ಗದವರಿಗೆ ಹಾಗೂ ದಲಿತರೂ ಸೇರಿದಂತೆ ಹಳ್ಳಿಯ ಮಕ್ಕಳಿಗೆ ಅದ್ವಿತೀಯವಾದ ಶೈಕ್ಷಣಿಕ ವ್ಯವಸ್ಥೆ ಮಾಡಿದ್ದು ಮಾದರಿಯಾಗಿದೆ. ಲಕ್ಷ್ಮೇಶ್ವರರ ಮೇಲ್ವಿಚಾರಣೆಯಲ್ಲಿ ವಿಜಾಪುರ ನಗರದ ಹೃದಯಭಾಗದಲ್ಲಿ ನಿರ್ಮಾಣವಾದ ಈ ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಕಟ್ಟಡ ಯಾವ ವಿಶ್ವವಿದ್ಯಾಲಯದ ಕಟ್ಟಡಕ್ಕಿಂತಲೂ ಕಡಿಮೆ ಇಲ್ಲ. ಇಂಥ ಬೃಹತ್ತಾದ ಹೈಸ್ಕೂಲ್ ಕಟ್ಟಡವನ್ನು ಎಲ್ಲಿಯೂ ನೋಡಿಲ್ಲ.

ನಾನು ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜುಗಳಲ್ಲಿ ಓದಿದವನಾಗಿದ್ದೇನೆ. ಎರಡು ವರ್ಷ ಬಿಟ್ಟರೆ ಉಳಿದೆಲ್ಲ ಶೈಕ್ಷಣಿಕ ವರ್ಷಗಳನ್ನು ಇಲ್ಲೇ ಕಳೆದಿದ್ದೇನೆ. ನನ್ನಂಥವರಿಗೆ ಬೇರೆ ಎಲ್ಲೂ ಜಾಗವಿರಲಿಲ್ಲ. ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಹೋಗಿ ಕಲಿಯುವ ಧೈರ್ಯವಾಗಲಿ, ಆರ್ಥಿಕ ಸ್ಥಿತಿಯಾಗಲಿ ಇರಲಿಲ್ಲ. ಬೇರೆ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ತಮಾಷೆ ಮಾಡುತ್ತಿದ್ದರು. ‘ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರು, ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು’ ಎಂದು ಹೇಳುತ್ತಿದ್ದರು. ಬಡವರಿಗೂ ದಡ್ಡರಿಗೂ ಇಲ್ಲಿ ಮುಂದೆ ಬರುವ ಅವಕಾಶವಿತ್ತು. ಈ ಸಂಸ್ಥೆ ಇದ್ದಿರದಿದ್ದರೆ ನಾನು ದನ ಕಾಯುವವನಾಗುತ್ತಿದ್ದೆ ಎಂಬುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಳಕಟ್ಟಿ, ಲಕ್ಷ್ಮೇಶ್ವರ, ಬಂಥನಾಳ ಸ್ವಾಮಿಗಳು, ಬಿ.ಎಂ. ಪಾಟೀಲ ಮುಂತಾದ ನೂರಾರು ಜನರಿಗೆ ನನ್ನಂಥ ಲಕ್ಷಾಂತರ ಜನರು ಋಣಿಯಾಗಿದ್ದಾರೆ.

(ಶ್ರೀ ಸಿದ್ಧೇಶ್ವರ ಹೈಸ್ಕೂಲ್)

ನಾನು 1968ರಲ್ಲಿ ಎಸ್.ಎಸ್.ಎಲ್.ಸಿ. ಓದುವ ವರೆಗೆ ಎ.ಟಿ. ಪಾಟೀಲ ಎಂಬ ಹಿರಿಯರು ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರು. ಆ ಮಟ್ಟದ ಶಿಸ್ತಿನ ಮನುಷ್ಯರು ಬಹಳ ದುರ್ಲಭ. ಅವರ ಶಿಸ್ತು ಇಡೀ ಆವರಣದ ತುಂಬ ಪಸರಿಸಿತ್ತು. ಅವರು 24 ಗಂಟೆ ಹೆಡ್ ಮಾಸ್ತರರಾಗಿದ್ದರು. ಸಿ.ಸಿ. ಕ್ಯಾಮರಾದಂತೆ ಇದ್ದು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದರು!

ಎಸ್.ಎಸ್. ಹೈಸ್ಕೂಲ್ ಕಚೇರಿಯ ಮುಂದಿರುವ ಸಿದ್ರಾಮಪ್ಪ ಲಕ್ಷ್ಮೇಶ್ವರರ ಅಮೃತಶಿಲೆಯ ಮೂರ್ತಿಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಮೂರ್ತಿಯ ಕೆಳಗೆ ಇಂಗ್ಲಿಷ್‌ನಲ್ಲಿ ಕೆತ್ತಿದ ಲಕ್ಷ್ಮೇಶ್ವರ ಮಾತ್ರ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿದೆ. ನನ್ನಂಥವರ ಬಾಳಿಗೆ ಬೆಳಕಾದ ಅವರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಅವರ ಆ ಆಕರ್ಷಕ ಮೂರ್ತಿ ನನಗೆ ಸ್ಫೂರ್ತಿಯ ಸೆಲೆಯಾಗಿತ್ತು. ನಾನು 14 ವರ್ಷ ಬಿ.ಎಲ್.ಡಿ.ಇ. ಸಂಸ್ಥೆಯ ವಿದ್ಯಾರ್ಥಿಯಾಗಿದ್ದೆ. ಆ ಸಂಸ್ಥೆಯ ನೆನಪು ನನ್ನನ್ನು ಭಾವಪೂರ್ಣನಾಗಿಸುತ್ತದೆ. ವಿಜಾಪುರದ ಶೈಕ್ಷಣಿಕ ಲೋಕದ ಎರಡು ಕಣ್ಣುಗಳಾದ ಹಳಕಟ್ಟಿ ಮತ್ತು ಲಕ್ಷ್ಮೇಶ್ವರರು ಧಾರವಾಡದಿಂದ ಬಂದು ದಾರಿದೀಪವಾದರು.
ಪ್ರಾತಃಸ್ಮರಣೀಯರಾದ ಅವರ ನೆನಪೇ ಅಮೃತ.

(ಚಿತ್ರಗಳು: ಸುನೀಲಕುಮಾರ ಸುಧಾಕರ)