ಇಷ್ಟಾಗಿದ್ದೇನು ಕಡಿಮೆಯೇ?

ಸುತ್ತಲೂ ನೂರು ಚೂರಿಗಳು
ಹಿರಿದು ಘರ್ಜಿಸುವಾಗ
ಅದರ ನಾಲಿಗೆಯ ತುದಿಯಲ್ಲಿ
ಒಂದೇ ಒಂದಾದರೂ
ಪೆಪ್ಪರಮೆಂಟ್ ಇಟ್ಟು
ಕದ್ದು ಸವಿದಿದ್ದು……

ಗವ್ವನೆ ಕತ್ತಲ
ಕಿವಿಗಡಚಿಕ್ಕುವ
ಗುಂಯ್ ಗುಂಯ್ ಸದ್ದಿನ
ಭೀಕರತೆಯ ಸೆರಗಿನಲ್ಲಿ
ಜೋಲಿ ಕಟ್ಟಿ ಆಡಿದ್ದು……

ಒಣಗಿ ಬಿರಿದು ನಿಂತ
ಭೂತಾಯಿ ಒಡಲ ಗೀರಿನಲಿ
ಕಾಪಿಟ್ಟ ಕುಂಬಳ ಬೀಜ ಊರಿ
ಎದೆ ಮೀರಿ
ಉದುರುವ ಕಣ್ಣೀರಲೇ
ಮಣ್ಣು ಹಸಿಯಾಗಿಸಿ
ಮೊಳಕೆಯೊಡೆಸಿದ್ದು……

ನೀರವ ಮೌನವ ಸಣ್ಣಗೆ
ಸೀಳಿ ಬತ್ತಿ ಹೊಸೆದು
ಬೊಗಸೆ ಹಣತೆಗೆ
ಕುದಿಯೆದೆಯ ನಿಟ್ಟುಸಿರುಗಳ
ಸುಟ್ಟು ಎಣ್ಣೆ ಕಾಯಿಸಿ ಸುರಿದು
ದೀಪ ಉರಿಸಿದ್ದು…..

ಇದೇನು ಸಣ್ಣ ಸಂಗತಿಯೇ?
ಇಷ್ಟಾಗಿದ್ದೇನು ಕಡಿಮೆಯೇ?
ಈ ದುರಿತ ಕಾಲದಲ್ಲಿ?

ಆಯ್ದು ತೆಪ್ಪಗೆ ಮಡಿಲು ತುಂಬಿಸಿಕೋ…
ಇಷ್ಟಾಗಿದ್ದೇನು ಕಡಿಮೆಯೇ?

ದಮ್ಮಯ್ಯ ಕಾಯಿಸಬೇಡವೋ ವೃತ್ತಗಳಲ್ಲಿ

ದಮ್ಮಯ್ಯ ಕಾಯಿಸಬೇಡವೋ ವೃತ್ತಗಳಲ್ಲಿ
ಈ ಹಾಳು ವೃತ್ತಗಳಲ್ಲಿ
ಕಾಯಿಸಬೇಡವೋ ದಮ್ಮಯ್ಯ
ಅದೆಷ್ಟು ಬಾರಿ ಬೇಡಿದ್ದೇನೆ.
ಯಾಚಿಸಿದ್ದೇನೆ ನಿನ್ನಲ್ಲಿ….
*
ಪ್ರತಿ ಬಾರಿ ಬರಿದೇ ಹೂಂಗುಟ್ಟುತ್ತಿ
ಕಾಯಿಸಲೇ ಪಣ ತೊಟ್ಟವನಂತೆ
ಪ್ರತಿ ಬಾರಿ ವೃತ್ತದಲಿ ನಿಲ್ಲಿಸಿ ಕಾಯಿಸುತ್ತಿ.
*
ತಮ್ಮಷ್ಟಕ್ಕೇ ಆಗಿಬಿಡುವುದಿಲ್ಲವಂತೆ
ಈ ವೃತ್ತಗಳು!
ನನ್ನಂತಹಾ ಲಕ್ಷೋಪಲಕ್ಷ
ಅಬ್ಬೇಪಾರಿಗಳು ದಿಕ್ತಪ್ಪಿ
ಹಲವು ಮುರುಕು ಹಾದಿಗಳಲ್ಲಿ
ಒಂದುಗೂಡಿ
ಹೈರಾಣಾಗಿ ಬಂದು ನಿಂತು
ಸೃಷ್ಟಿಯಾಗುತ್ತವಂತೆ ವೃತ್ತಗಳು.
*
ಈ ದೃಷ್ಟಾಂತ ಕೇಳಿಯೇ
ವೃತ್ತಗಳೆಂದರೆ ಎದೆ ನಡುಕ
ಮತ್ತೆ ದಿಕ್ಕು ತಪ್ಪೀತೆಂದು!
ಅಲ್ಲಿ ಕಾಯುವುದೆಂದರೆ
ವೃತ್ತವಾಗಿಬಿಡುವ ಭೀತಿ!
*
ಕರುಣಾಳು ಅಂತರಾತ್ಮವೇ
ದಮ್ಮಯ್ಯ ಕಾಯಿಸಬೇಡ ವೃತ್ತಗಳಲಿ.