‘ಗೋದಾವರಿ ಪದಾ ಹೇಳೇ..’

ಬರೆದೇ ಇಲ್ಲದ ಕವಿತೆಗಳು
ಬರೆ
ಎಂದು ಬಾಯಿಮಾಡಿದಾಗಲೆಲ್ಲ
ವೇಳೆ ಸಾಧಿಸಿ ನಾನು
ರಥಬೀದಿಯ ಮೂಲಕ
ಸಮುದ್ರಕ್ಕೆ ಓಡಿಬಿಡುತ್ತೇನೆ

ನಿರ್ಜನ ಇಳಿಬಿಸಿಲು
ಬೇಲೆಯ ಬಣ್ಣಾಣೆ ಮಾಡುವುದು
ಈ ಸಾಂದರ್ಭಿಕ ರಜೆಯಲ್ಲಿ ಕಷ್ಟ
ಪಚನವಾಗದ ಹಲವು ಅವಘಡಗಳು
ಘಟಿಸಿದ ಮೇಲೆ
ಬಾಯಿ ಕಳಕೊಂಡವರ ಸನ್ನೆ
ಪುಸಲಾವಣೆಗೆ
ಮೂಗು ಕೆಂಪಗೆ ಮಾಡಿಕೊಂಡ
ರೇವೆ ಯಾಕೆ ಸಹಕರಿಸಬೇಕು?

ಊರ ಸುದ್ದಿ ಮಾತಾಡುತ್ತ
ಪೊಟ್ಟಣ ಕಟ್ಟುವ ಶೆಟ್ಟರು ಈಗಿಲ್ಲ
ಸರಿದಾಡುವ ಕಾಗದವೂ ಇಳಿದಾಡುವ ನೂಲೂ
ಕಾಣೆಯಾಗಿ
ಗರಿಮುರಿ ಹುನ್ನಾರದ ಭೂ ಕಬಳಿಕೆಯ
ಕೊಟ್ಟೆಗಳು ನಿರಂಬಳ ಕುಳಿತು
ಚಾಳಿಸುವ ಕಾಲ ಇದು
‘ಪ್ಲ್ಯಾಸ್ಟಿಕ್ ಬಳಸಬೇಡಿ’-
ಕಾಳಜಿ ಮಾಡುವ ಕನ್ನಡ ಶಾಲೆಯ
ಟೊಪ್ಪಿಗಿ ಮಾಸ್ತರ್ರು ಮಾತಾಡಿಸುತ್ತ
ಸೈಕಲ್ ದೂಡಿಕೊಂಡೇ ಹೋಗುತ್ತಿದ್ದರು
ದಮ್ಮು ಹತ್ತಿ.. ಕೆಮ್ಮುತ್ತ
ಒಂದುದಿನದ ಮಾತಿಗೆಂದು
ಹುಬ್ಬಳ್ಳಿ ದವಾಖಾನೆಗೆ
ತೋರಿಸಲು
ಹೋದವರು
ಬರದೇಹೋದರು

ಶಿವರಾತ್ರಿ ಮುಗಿದು
ತೇರು ಅವಿತುಕೊಂಡ ಮರುದಿನ
ಬಿದ್ದ ಬಾಳೆಹಣ್ಣಿನ ಮೇಲೆ
ಬಾರೀಕು ಹುಡುಗನ ಹೆಸರು
ಎಳೆ ಚಿಂಪುಳ್ಳಿ ಹುಡುಗಿಯೇ
ಇರಬೇಕು ಎಸೆದವಳು
ತಾರಿ ದೋಣಿ ಬೇಗ ಸಿಕ್ಕಿ ಮನೆಗೆ
ಹೋಗಿಬಿಟ್ಟಳಾ ಹೇಗೆ?
ಕೇಳುವಾ ನೋಡಿದರೆ
ಬೇರೊಬ್ಬಳು.
“ನಾನ್ರಾ ಹಾಲಕ್ಕಿ ನಾಗಮ್ಮ..
ಹಣ್ಣು ಸಿಕ್ಕಿದರೆ ಚಲೋದು.. ತಿಂದುಬಿಡಿ
ನಿಮಗೂ ಗನಾ ಹುಡುಗ ಸಿಗುತ್ತಾನೆ” ಎನ್ನುತ್ತಾಳೆ
ಶೆ..!ಶ್ಶೆ..! ಇರುವ ಹುಡುಗನ ಬಿಟ್ಟು
ಬೇರೊಬ್ಬನ ಹೇಗೆ
ಸಿಗಿಸಿಕೊಳ್ಳುವುದು ನಾಗಮ್ಮ? ಎಂದರೆ
ಕವಳದ ಬಾಯಲ್ಲಿ
ಖ್ಖೊ ಖ್ಖೊ ಖ್ಖೋ.. ನಗುತ್ತಾಳೆ

ನಾನು ಹೇಳಿದ್ದು ಅಂತ ಹೇಳಬೇಡಿ
ಗಂಗಾವಳಿ ತೇವದ ಕಾನಲ್ಲೀಗ
ಬೇಕು ಬೇಕೆಂದಾಗಲೆಲ್ಲ ಬಂದು
ಕುಣಿದುಹೋಗುವ
‘ಗೋದಾವರಿ ಪದಾ ಹೇಳೇ…’
ಸುಗ್ಗಿ ಗುಮಟೆಯ ಸದ್ದು
ಕಾಮಣ್ಣನ ಹೋಳಿ
ಮುಗಿದು
ಯುಗಾದಿ ಬಂದಾಯ್ತು
ಯಾವುದಕ್ಕೂ
ನೀವು ತಯಾರಿರಬೇಕಂತೆ
ಎಂಬ ಒಂದು ಮಾತು
ಅವರ ಕಿವಿಯ ಮೇಲೆ
ಹಾಕಿಡಿ

ಪ್ರತಿವರ್ಷದಂತೆ ಈ ಸಲವೂ
ಹೂ-ಗಂಧ, ಹಣ್ಣ್- ಕಾಯಿ
ನಿಮ್ಮದೇ ಹೆಸರಿನಲ್ಲಿ ಎಂಬುದನ್ನೂ
ನೆನಪು ಮಾಡಿಡಿ

(‘ಗೋದಾವರಿ ಪದಾ ಹೇಳೇ’ ಇದು ನಮ್ಮೂರಿನ ಯಶ್ವಂತ ಚಿತ್ತಾಲರ ಒಂದು ಕಥೆಯ ಹೆಸರು.)
ರೇಣುಕಾ ರಮಾನಂದ ಉತ್ತರಕನ್ನಡ ಜಿಲ್ಲೆಯ ಅಂಕೋಲೆಯವರು.
ಕವಯತ್ರಿ ಮತ್ತು ಕತೆಗಾರ್ತಿ.
‘ಮೀನುಪೇಟೆಯ ತಿರುವು’ ಕವನಸಂಕಲನಕ್ಕೆ ೨೦೧೮ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಇನ್ನೂ ಏಳು ರಾಜ್ಯಮಟ್ಟದ ಗಮನಾರ್ಹ ಪ್ರಶಸ್ತಿ ಪಡೆದಿದ್ದಾರೆ