ಶ್ರಮಿಕ ಋತುಗಾನ

ಬೆಳಗಿಗೆ ವಂದಿಸುತ್ತಾ ಮಾಲಿನ್ಯಗಳ ಹಾದಿಯನ್ನು ಸಂಸ್ಕರಿಸುತ್ತ
ದಿನಕ್ಕೊಂದು ಪ್ರದಕ್ಷಿಣೆ ಹಾಕುತ್ತಾರವರು
ಬೀದಿ ಅವರ ದೇವಾಲಯ
ಕರ್ಮಸಾಕ್ಷಿಯೊಂದಿಗೆ ಕೈ ಮಿಲಾಯಿಸಿ
ಎಚ್ಚರಗೊಳ್ಳುವ ನಗರಕ್ಕೆ ಸ್ವಚ್ಛತೆಯ ಗೀತೆಯನ್ನು ಹಾಡುತ್ತಾರೆ

ನೆನಪುಗಳನ್ನು ಹೊರುತ್ತ ಪ್ರತಿ ಋತು
ಅವರಿಗೊಂದು ವಿದಾಯ ಗೀತೆಯನ್ನು ಹಾಡುತ್ತದೆ
ಕಾರ್ತೀಕದೊಂದಿಗೆ ಸೇರಿ ಶರತ್ಕಾಲವು ನಿರ್ಗಮಿಸುವ ಮೊದಲು
ಹಾರೈಕೆಗಗಳ ಹಾರವನ್ನು ದಿಗಿಲಿನ ಹೂಗಳೊಂದಿಗೆ ಹೆಣೆಯುತ್ತಿದೆ
ವರುಷದ ಅಗಲಿಕೆಯನ್ನು ಚಡಪಡಿಕೆಯಿಂದ ಕೆತ್ತುತ್ತಿದೆ

ಹೇಮಂತದಲಿ ಮಂಜಿನಹೂಗಳಾಗಿ ಪರವಶಗೊಂಡರೆ
ಶಿಶಿರದಲ್ಲಿ ಉದುರಿದ ನೆನಪುಗಳನ್ನು ಅತ್ತಿತ್ತ ಸರಿಸುತ್ತಾರೆ
ವಸಂತದಲ್ಲಿ ಸಂತೋಷಗಳ ಮೊಳಕೆಯನ್ನು ನಾಟಿ
ಗ್ರೀಷ್ಮದಲ್ಲಿ ಬೆವರನ್ನು ಗೊಬ್ಬರವಾಗಿಸಿ ಮಳೆಗಾಲದೊಂದಿಗೆ ಚೈತನ್ಯ ನೀಡುತ್ತಾ
ಬೀದಿಯೊಂದಿಗೆ ಅವರು ಮಾಡುವ ನಿತ್ಯ ಸಂಭಾಷಣೆ ಒಂದು ಋತುಗಾನ
ಎದೆಯ ತಣಿಸುವ ಅಗಲಿಕೆಯ ಗಾನ!

ರೋಹಿಣಿಸತ್ಯ ಗೃಹಿಣಿ,
ತೆಲುಗಿನಲ್ಲಿ ಬರೆಯಲು ಆರಂಭಿಸಿದ್ದ ರೋಹಿಣಿಸತ್ಯ, ನಂತರ ಕನ್ನಡ ಭಾಷೆ ಕಲಿತು ಕನ್ನಡದಲ್ಲಿಯೂ ಕವನ, ಲೇಖನ, ಕಥೆಗಳನ್ನು ಬರೆಯಲಾರಂಭಿಸಿದವರು.
ಮೂರು ನಾಲ್ಕು ವರುಷಗಳಿಂದ ಎರಡು ಭಾಷೆಗಳಲ್ಲಿ ಬರವಣಿಗೆ ಮತ್ತು ಅನುವಾದ ಮಾಡುತ್ತಿದ್ದಾರೆ.