ಮೇ ೮ರ ಶುಕ್ರವಾರ ಸಂಜೆ ಬಹುತೇಕ  ಇಂಗ್ಲಂಡ್, ಪಬ್ಬಿನಲ್ಲಿ ಕುಳಿತು ಅಥವಾ  ಶಾಪಿಂಗ್ ಮಾಲಿನಲ್ಲಿ ವಾರಾಂತ್ಯದ ಆಚರಣೆಯನ್ನು ಮಾಡುವ ಸಮಯಕ್ಕೆ, ಲಂಡನ್  ಹೃದಯ ಭಾಗದಲ್ಲಿರುವ ‘ನೆಹರು ಸೆಂಟರ್’ನಲ್ಲಿ ಗಂಭೀರ ಸಂವಾದವೊಂದಕ್ಕೆ ವೇದಿಕೆ ಸಜ್ಜುಗೊಂಡಿತ್ತು. ಲಂಡನ್ ಪುಸ್ತಕ ಮೇಳಕ್ಕೆಂದು ಇಂಗ್ಲೆಂಡಿಗೆ ಬಂದಿದ್ದ  ಅನಂತಮೂರ್ತಿಯವರನ್ನು,  ಸಾಹಿತ್ಯ ಮತ್ತು ಸಿನೆಮಾದ ಕುರಿತು ಮಾತನಾಡಲು  ಆಹ್ವಾನಿಸಿದ್ದರು. ‘ದಕ್ಷಿಣ ಏಶಿಯಾ ಸಿನೆಮಾ’ ದ ಸಂಪಾದಕ ಲಲಿತ್ ಮೋಹನ್ ಜೋಷಿಯವರು, ‘ಸಾನ್ನಿಧ್ಯ ‘ ಮತ್ತು ‘ಸೌತ್ ಏಶಿಯ ಸಿನೆಮಾ ಫೌಂಡೇಶನ’  ಸಂಸ್ಥೆಗಳು ಸಂಯೋಜಿಸಿದ ಕಾರ್ಯಕ್ರಮ ಅದಾಗಿತ್ತು,  ಹಿಂದಿ ಭಾಷೆಯ ಖ್ಯಾತ ಕವಿ ಬರಹಗಾರ ಗೌತಮ ಸಚದೇವ , ‘BBC‘ ಯ ಹಿರಿಯ ಪ್ರತಿನಿಧಿಗಳು, ಸಾಹಿತ್ಯಾಸಕ್ತ  ಭಾರತೀಯ, ಇಂಗ್ಲಿಷ್  ಪ್ರೇಕ್ಷಕರು ಭಾಗವಹಿಸಲು ಬಂದಿದ್ದರು. ಕಿರುನಗೆ, ಮೆಲುಹೆಜ್ಜೆ, ಹೆಗಲುಚೀಲದೊಂದಿಗೆ ಕಾಣಿಸಿದ  ಅನಂತಮೂರ್ತಿಯವರು ವೇದಿಕೆಯನ್ನೇರಿ ಮಾತು ಆರಂಭಿಸಿದರು.

ಭಾರತೀಯ ಸಾಹಿತ್ಯವು  ಅಂಗ್ಲ ಬರವಣಿಗೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದೊಳಗೆ ವಿವಿಧ ಭಾಷೆಗಳಲ್ಲಿ ಹುಟ್ಟಿ ಸಶಕ್ತವಾಗಿ ಸುಂದರವಾಗಿ  ಬೆಳೆದಿದೆ. ಭಾರತೀಯ ಸಾಹಿತ್ಯ ಎಂದರೆ ಆಂಗ್ಲ ಸಾಹಿತ್ಯ ಮಾತ್ರ ಎಂದು ತಿಳಿಯುವ   ಪೂರ್ವ ಪಶ್ಚಿಮಗಳಿಗೆ ಇದು  ಮೊದಲ ಸಂದೇಶ. ಮಲೆನಾಡಿನ ಮೇಳಿಗೆ ಎನ್ನುವ ಊರಿನಲ್ಲಿ ಹುಟ್ಟಿ ಬೆಳೆಯುವಾಗ ಕೇಳಿಸುತ್ತಿದ್ದ  ಹುಲಿಯ ಕೂಗು ; ಹುಲಿಯ ಇರವನ್ನು  ದೂರದಿಂದಲೇ ತಿಳಿಯುವ ದನಕರುಗಳ ಚಡಪಡಿಕೆ  ಗಾಬರಿ, ಆ ಭಯದಲ್ಲಿ ಅಮ್ಮನ  ಅಪ್ಪುಗೆಯಲ್ಲಿ ಕಣ್ಮುಚ್ಚಿ ಅರ್ಜುನನ ನಾಮಾವಳಿಗಳನ್ನು ಪಠಿಸುತ್ತಿದ್ದ ಪುಟ್ಟ ಹುಡುಗ, ಅಗ್ರಹಾರದ ಕತೆಗಳು  ಮತ್ತೆ  ಮನೆಯ ಹಿಂದೆ  ಹಿತ್ತಿಲಿನಲ್ಲಿ ಕೇಳಸಿಗುವ ಹೆಂಗಸರ ಗುಸು ಗುಸುಗಳು. ತಾವು ದೊಡ್ಡವರಾಗುತ್ತಾ ಎದುರಿಸಿದ  ಪುರಾಣ ಇತಿಹಾಸ ಕಾವ್ಯಗಳ ನಡುವಿನ ಸಂಘರ್ಷ; ಆಧುನಿಕತೆ ಮತ್ತು ಪರಂಪರೆಗಳ  ಮುಖಾಮುಖಿ. ತನ್ನ ಮತ್ತು ಮನೆ ಕೆಲಸದವನೊಬ್ಬನ ಹೊರ ಬದುಕುಗಳಲ್ಲಿರುವ ಅಂತರ ಮತ್ತು ವ್ಯತ್ಯಾಸಗಳ ಜೊತೆಗೆ, ಒಳ ಜೀವನದಲ್ಲಿರುವ   ಸಾಮ್ಯತೆಗಳು, ಅವು ನೀಡಿದ  ಎಚ್ಚರದಲ್ಲಿ ಮೂಡಿದ   ರೂಪಕಗಳು, ಬರವಣಿಗೆಗಳು. ಇದು ಅನಂತಮೂರ್ತಿಯವರು ನೆನಪು ಮಾಡಿಕೊಂಡ  ಬದುಕಿನ ಒಂದು ಮುಖ್ಯ ಎಳೆ. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಮೈಲಿಗಲ್ಲಿನಂತೆ  ನಿಂತ ‘ಸಂಸ್ಕಾರ ‘ ‘ಘಟಶ್ರಾದ್ಧ’ ಗಳಂತಹ  ಸಿನೆಮಾಗಳ ಹಿಂದಿನ  ಕಾದಂಬರಿಗಳ ಹುಟ್ಟು.

ಕಾದಂಬರಿಯೊಂದು ಚಲನಚಿತ್ರದ ರೂಪ ಧರಿಸಿ ತೆರೆ ಏರುವಾಗ, ಕಥೆಯ ಹಂದರ (‘structure’) ಮತ್ತು ನೇಯ್ಗೆ  (‘texture’) ಎರಡಕ್ಕೂ  ಪೂರ್ಣ ನ್ಯಾಯ  ಸಿಗುವುದು ಕಷ್ಟ. ಕಥೆಯ ಹಂದರವನ್ನು ಸ್ವಲ್ಪ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ನಿರ್ದೇಶಕನಿಗಿದೆ ಆದರೆ  ಕಾದಂಬರಿಯ ಭಾವ ಆಶಯಗಳನ್ನು ಮಾತ್ರ ಮೂಲ ಸ್ವರೂಪದಲ್ಲೇ ಚಿತ್ರಿಸ ಬೇಕಾದ ಅಗತ್ಯವೂ ಇದೆ. ನಿರ್ದೇಶಕರ ಗ್ರಹಿಕೆಗೆ  ಕಥೆಯ ಹಂದರ ಎಟಕಿದಷ್ಟು  ಸುಲಭದಲ್ಲಿ, ಅದರ  ನೇಯ್ಗೆ ದೊರಕುವುದಿಲ್ಲ. ಕಾದಂಬರಿಯಲ್ಲಿ ಎದ್ದು ಕಾಣುವ, ಅರ್ಥಪೂರ್ಣವಾದ ವಿವರಗಳನ್ನು (‘significant details’)  ಆಯ್ದು ಕೊಳ್ಳಬೇಕು. ಈ ಆಯ್ಕೆಯನ್ನು  ನಿರ್ದೇಶಕ ಸರಿಯಾಗಿ ಮಾಡದೆ  ಹೋಗಬಹುದು. ಟಾಲ್ ಸ್ಟಾಯರ ‘ಅನ್ನಾ ಕರೆನಿನ’ ದಲ್ಲಿ, ಪೂರ್ತಿ ಒಂದು ಅಧ್ಯಾಯ ಕಳೆದು ಹೋಗುವ ಅಂಗಿಯ ವಿವರಣೆಯ ಮೇಲಿದೆ. ಇದನ್ನು  ಸಿನೆಮಾ ಮಾಡ ಹೊರಟವನಿಗೆ ಕಥೆಯ ಪ್ರತಿ ವಿವರವನ್ನು ತೋರಿಸುತ್ತೇನೆಂದು, ಅಂಗಿ ಕಳೆಯುವ ಭಾಗದ ವಿವರಗಳನ್ನು ಸೇರಿಸಿದರೆ, ಸಿನೆಮಾದ ಬಿಗಿ ತಪ್ಪ ಬಹುದು. ಚಲನಚಿತ್ರ ನಿರ್ಮಿಸುವವರಿಗೆ  ಕಾದಂಬರಿಯನ್ನು ಬರೆದವರೊಡನೆ ಅಥವಾ ಬಲ್ಲವರೊಡನೆ ನಿಕಟ ಮಾತುಕತೆ, ವಿಮರ್ಶೆ ಅನಿವಾರ್ಯ. ಈ ನಿಟ್ಟಿನಲ್ಲಿ  ಕಾಸರವಳ್ಳಿಯವರು  ಕನ್ನಡದ ಇಂದಿನ ಇತರ ನಿರ್ದೇಶಕರಿಗಿಂತ ಪ್ರಿಯರಾಗುತ್ತಾರೆ.

ಸಾಹಿತ್ಯ ಮತ್ತು ಸಿನೆಮಾದ ಮಾತುಕತೆಗಳ ನಡುವೆ, ಅನುವಾದಗಳು, ಸಾಹಿತ್ಯದ ಮೇಲೆ  ಇತರ ಮಾಧ್ಯಮಗಳ ಪ್ರಭಾವ ,ಮತಾಂತರ, ರಾಜಕಾರಣದ ಬಗ್ಗೆ ಧ್ವನಿ ಇರುವ ಪ್ರಶ್ನೆಗಳು ಇದ್ದವು. ಸಾವಿರ ವರ್ಷಗಳ ಹಿಂದೆ ಪಂಪ ಮಾಹಾಭಾರತವನ್ನು ಅನುವಾದಿಸಿದ. ವಾಕ್ ಮತ್ತು ಅರ್ಥವನ್ನು ಸಮಜೋಡಿಯಲ್ಲಿ ಅನುವಾದಿಸಿದ ಇಂತಹ ಕೃತಿಗಳು ಮುಖ್ಯ ಎನಿಸುತ್ತವೆ.  ಇಂಗ್ಲಿಷ್ ಓದು, ಐಟಿ, ದೂರದರ್ಶನಗಳು ಕನ್ನಡಕ್ಕೆ ಹೊಸ ಶಬ್ದಗಳನ್ನು ತಂದಿವೆ. ನಾವು  ಹೊಸ ಶಬ್ದಗಳನ್ನು ಬಹಳ ಬೇಗ ಸ್ವೀಕರಿಸುವವರು. ಆಕ್ಸ್ಫಾರ್ಡ್ ನಿಘಂಟನ್ನು ಒಂದು ಹೊಸ ಶಬ್ದ ಸೇರಲು ತೆಗೆದುಕೊಳ್ಳುವಷ್ಟು ಕಾಲ, ನಾವು ಹೊಸ ಶಬ್ದವನ್ನು ಒಪ್ಪಲು ತೆಗೆದುಕೊಳ್ಳುವುದಿಲ್ಲ. ದೇಶದ ಪ್ರಸ್ತುತ ರಾಜಕಾರಣದ  ನಿಲುವು ಅನಿಸಿಕೆಗಳನ್ನು ಹೇಳಿದರು. ತಪ್ಪು ದೋಷಗಳು ಎಲ್ಲ ನಾಯಕರಲ್ಲೂ ಕಂಡು ಬರುವಂತಹದ್ದು. ನೆಹರು ಅವರು ಇದಕ್ಕೆ ಹೊರತಾಗಿರಲಿಲ್ಲ. ಅವರನ್ನು ಟೀಕಿಸುವಾಗ ಅವರ  ದೋಷಗಳ ನಡುವೆಯೂ  ಒಬ್ಬ ಮಹಾನ್ ನಾಯಕನನ್ನು ಟೀಕಿಸಿದೆ ಅನಿಸುತ್ತಿತ್ತು. ಇಂದು  ರಾಜಕೀಯದಲ್ಲಿ ಯಾರನ್ನು ಟೀಕಿಸಿದರೂ ಅವರು ಭ್ರಷ್ಟರು, ಯೋಗ್ಯತೆ ಇಲ್ಲದವರು ಆಗಿರುತ್ತಾರೆ,  ಇದು ನಮ್ಮ ದೌರ್ಭಾಗ್ಯ.

ಸಿದ್ದಾಂತಗಳನ್ನು ಬದಿಗಿಟ್ಟು ಪಕ್ಷಗಳು ಎಲ್ಲದರಲ್ಲೂ ಒಪ್ಪಂದ ಮಾಡಿಕೊಂಡಿವೆ; ಅಧಿಕಾರ ನಡೆಸುವುದೊಂದೇ ಸೂತ್ರ. ನೈತಿಕತೆಯನ್ನು ಕಳೆದುಕೊಂಡ ನಿಷ್ಕ್ರಿಯ ಸಂದರ್ಭದಲ್ಲಿ  ನಾವೆಲ್ಲಾ ಜೊತೆಯಾಗಿ  ರಾಜಕೀಯದಿಂದ ದೂರವಿರುವ ಚಳವಳಿಗಳತ್ತ ನೋಡುವುದು, ಆರಂಭಿಸುವುದು ಅನಿವಾರ್ಯ ಆಗುತ್ತಿದೆ. ಇಂಗ್ಲೆಂಡಿನಲ್ಲಿ ಗೂರ್ಖಾ ಜನಾಂಗಕ್ಕೆ ಅಂಗೀಕಾರ ಸಿಗುವ ಬಗೆಗಿನ, ನಮ್ಮದೇ ದೇಶದಲ್ಲಿ ನರ್ಮದಾ ಬಚಾವ್ ನಂತಹ ಆಂದೋಲನಗಳು ನಮಗೆ ಸ್ಫೂರ್ತಿ ಆಗಲಿ. ಎಲ್ಲ ಮಕ್ಕಳಿಗೂ ಸಮಾನ ಗುಣಮಟ್ಟದ ಉತ್ತಮ ಶಿಕ್ಷಣ ದೊರೆಯುವ, ಶಾಲೆಗಳಲ್ಲಿ  ಕನ್ನಡವನ್ನು ಸರಿಯಾಗಿ ಕಲಿಸುವ, ಪ್ರಗತಿಯ ಫಸಲುಗಳು  ಸಮಾಜದಲ್ಲಿ   ಹಿಂದುಳಿದ ವರ್ಗಗಳಿಗೂ ತಲುಪುವಂತೆ ಮಾಡುವಂತಹ ಕೆಲವು  ಚಿಂತನೆಗಳು ಚಳವಳಿಯ ರೂಪ ಪಡೆಯಬೇಕು. ಆಡಳಿತ ನೀಡುವವರು, ರಾಜಕೀಯ ಪಕ್ಷಗಳು  ಇಂತಹ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸುವ, ಕ್ರಿಯಾತ್ಮಕವಾಗಿ ಸ್ಪಂದಿಸುವ ಅನಿವಾರ್ಯತೆ ಎದುರಾಗುತ್ತದೆ… ಇಂತಹ ಮಾತುಗಳ  ನಡುವೆ ಬೆಚ್ಚಗೆನಿಸಿಕೊಂಡು ಎರಡು ಘಂಟೆಗಳ  ಸಮಯ  ಕಳೆದದ್ದೇ ತಿಳಿಯಲಿಲ್ಲ. ಹೆಗಲಲ್ಲಿ ಧರಿಸಿದ್ದ ನೀಲಿ ಬಣ್ಣದ ಚೀಲದೊಳಗಿಂದ  ತಮ್ಮ  ಅನುಭವ,  ಚಿಂತನೆಗಳನ್ನು ನಮ್ಮೆದುರು ಮೊಗೆದು ಮೊಗೆದು ಬಿತ್ತಿದರು ಅನಂತಮೂರ್ತಿ. ವಾರಾಂತ್ಯವನ್ನು ಇಷ್ಟು ವಿಭಿನ್ನವಾಗಿ  ಆಚರಿಸುವ ಅವಕಾಶಕೊಟ್ಟ ವರಿಗೆಲ್ಲ ಧನ್ಯವಾದ ಹೇಳಿ ಮನೆಗೆ ಮರಳಿದೆವು.