ಸಾಂಪ್ರದಾಯಿಕ ಸಾಂಸಾರಿಕ ಬದುಕಿನಿಂದ ಬೇರೆಯಾದ ಒಂದು ದಶಕದ ನಂತರ ಬೆಸಂಟ್, ಫ್ಯಾಬಿಯನ್ ಸಮಾಜ ಎನ್ನುವ ಸಮಾಜವಾದಿ ಸಂಘಟನೆಯ ಪ್ರಾಥಮಿಕ ಸದಸ್ಯೆ ಆದರು. ಬಿಯಾಟ್ರಿಸ್, ಸಿಡ್ನಿ ವೆಬ್ ಹಾಗು ಜಾರ್ಜ್ ಬರ್ನಾರ್ಡ್ ಷಾ ರಂತಹ ಪ್ರಸಿದ್ಧ ಚಿಂತಕರೂ ಆಗ ಸಂಘಟನೆಯ ಸಹಸದಸ್ಯರು. ಅವರೆಲ್ಲ ಐರಿಶ್ ಹೋಂ ರೂಲ್ ಚಳವಳಿಯನ್ನು ಬೆಂಬಲಿಸಿದವರು. ಬೆಸೆಂಟ್ “ಬ್ಲಡಿ ಸಂಡೆ” ಪ್ರದರ್ಶನದ ಭಾಗವಾದರು. 
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಅನ್ನಿ ಬೆಸೆಂಟ್‌ ಜೀವನ ವೃತ್ತಾಂತದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಎರಡು ಶತಮಾನಗಳ ಹಿಂದಿನ ಒಂದು ಸಂಜೆ ಲಂಡನ್‌ನ ಬೀದಿಯಲ್ಲಿ ನೀವು ತಿರುಗುತ್ತಿದ್ದವರಾದರೆ ಅಂಗಡಿ ಮನೆಗಳ ಕಿಟಕಿಗಳಿಂದ ಮಬ್ಬು ಬೆಳಕು ಬೀರುವ ತೈಲದ ಅಲ್ಲದಿದ್ದರೆ ಮೇಣದ ಬತ್ತಿಯ ದೀಪಗಳು ಕಾಣಿಸುತ್ತಿದ್ದವು. ಆ ದೀಪಗಳನ್ನು ಹೊತ್ತಿಸಲು ಗೀಚಿ ಕೀರಿ ದುಡಿಯುವ ಬೆಂಕಿಕಡ್ಡಿ ಮತ್ತು ಪೆಟ್ಟಿಗೆ ಪ್ರತಿ ಮನೆಯ ಅತಿಅಗತ್ಯದ ಪರಿಕರಗಳಾಗಿದ್ದವು. ಲಂಡನ್ನಿನಲ್ಲಿ ವಿದ್ಯುತ್ ಬೆಳಕು ಸಾರ್ವತ್ರಿಕವಾಗಿ ಲಭ್ಯ ಇಲ್ಲದ ಕಾಲದಲ್ಲಿ “ದಿ ಲಿಂಕ್” ಎನ್ನುವ ಸಮಾಜವಾದಿ ಚಿಂತನೆಯ ಪತ್ರಿಕೆಯಲ್ಲಿ ಒಂದು ಬರಹ ಪ್ರಕಟವಾಯಿತು. ಮತ್ತೆ ಬೆಂಕಿಕಡ್ಡಿಗಳ ಬಳಕೆ ಸಾಮಾನ್ಯವೂ ಅಗತ್ಯವೂ ಆಗಿದ್ದ ಕಾಲಕ್ಕೆ ಆ ಬರಹವೇ ಒಂದು ಕಿಡಿ ಹೊತ್ತಿಸಿತು. ಬೆಂಕಿಕಡ್ಡಿ ತಯಾರಿಸುವ ಕಾರ್ಖಾನೆಯ ನೌಕರರ ವಿದ್ರಾವಕ ಸ್ಥಿತಿಗತಿಯ ಅಕ್ಷರ ರೂಪದ ಅನಾವರಣ ಆ ಬರಹದ ಸಾರಾಂಶ ಮತ್ತು ಉದ್ದೇಶ.

1888ರ ಜೂನ್ 23ರಲ್ಲಿ ಪ್ರಕಟಗೊಂಡ ಬರಹ, ಆ ಕಾಲದ ಬ್ರಿಟನ್ನಿನ ಪ್ರಮುಖ ಉದ್ಯಮವೊಂದರಲ್ಲಿ ದಿನಕ್ಕೆ ಹದಿನಾಲ್ಕು ಗಂಟೆ ಕೆಲಸ ಮಾಡಿಯೂ ಅತಿ ಕಡಿಮೆ ಸಂಬಳ ಪಡೆಯುವ ಹೆಣ್ಣುಮಕ್ಕಳ ವೃತ್ತಿಜೀವನದ ಶೋಷಣೆ ಸಂಕಷ್ಟಗಳ ವಿವರ ಕಣ್ಣೆದುರು ತಂದಿತು. ಕಾರ್ಖಾನೆಯ ಮಾಲಿಕರನ್ನು ಹೊಣೆಯಾಗಿಸಿದ ಪದಗಳು, ಸಾಲುಗಳು ಕಾರ್ಮಿಕ ಹುಡುಗಿಯರು ನಿರಂತರವಾಗಿ ಆರೋಗ್ಯಕ್ಕೆ ಹಾನಿಕಾರಕವಾದ ರಂಜಕದ ಸಂಪರ್ಕದಲ್ಲಿ ಇರಬೇಕಾದುದರ ಬಗೆಗೂ ಉಲ್ಲೇಖಿಸಿತ್ತು. ಅಸಮಪರ್ಕಕ ಅಮಾನುಷ ಎನಿಸುವಷ್ಟು ದೀರ್ಘ ವೇಳೆಯ ದುಡಿತ ಜೊತೆಗೆ ಸಣ್ಣಪುಟ್ಟ ತಪ್ಪಿಗೂ ಅಲ್ಪ ಸಂಬಳದಿಂದಲೇ ದಂಡ ತೆರಬೇಕಾದ ನೌಕರರ ದುರ್ದರ ಸ್ಥಿತಿ ಎಲ್ಲವೂ ನೇರ ಧೀರ ನುಡಿಗಳಲ್ಲಿ ಬರೆಯಲ್ಪಟ್ಟಿದ್ದವು. “ಮ್ಯಾಚ್ ಬಾಕ್ಸ್ ಫ್ಯಾಕ್ಟರಿ”ಯ ಯಜಮಾನರ ದೌರ್ಜನ್ಯ ದುರ್ವರ್ತನೆಗಳ ವಾಸ್ತವ ಚಿತ್ರಣವೊಂದು ಸುದ್ದಿಪತ್ರಿಕೆಯ ಬರಹದ ಮೂಲಕ ಅಚ್ಚಾಗಿ ಮನೆಮನಗಳನ್ನು ತಲುಪುವ ಮೊದಲೂ ಕೆಲವು ಕತೆ ದಂತಕತೆಗಳು ಆ ಮಾಲಿಕರ ಮತ್ತು ನೌಕರರ ಬಗೆಗೆ ಹರಿದಾಡಿಕೊಂಡಿದ್ದವು. ಅವುಗಳಲ್ಲೊಂದು ಎಳೆಯ ಕಾರ್ಮಿಕರಿಂದ ಒತ್ತಾಯದಲ್ಲಿ ದೇಣಿಗೆ ಸಂಗ್ರಹಿಸಿ ಬೆಂಕಿಕಡ್ಡಿ ಕಾರ್ಖಾನೆಯ ಮಾಲಿಕರು ಬ್ರಿಟನ್ನಿನ ಜನಪ್ರಿಯ ಪ್ರಧಾನಿ ವಿಲಿಯಂ ಗ್ಲ್ಯಾಡ್ಸ್ಟೋನ್‌ನ ಪ್ರತಿಮೆಯನ್ನು ಸ್ಥಾಪಿಸಿದ್ದರ ಕುರಿತು.

ಲಂಡನ್‌ನ ಕೇಂದ್ರ ಭಾಗದಲ್ಲಿ ಹೀಗೆ ಒತ್ತಾಯದ ಚಂದಾ ಹಣದಲ್ಲಿ ಗ್ಲ್ಯಾಡ್ಸ್ಟೋನ್‌ನ ಪ್ರತಿಮೆ ನಿಂತ ಮೇಲೆ ಸಿಟ್ಟಿನಲ್ಲಿದ್ದ ಫ್ಯಾಕ್ಟರಿ ನೌಕರರು ಪ್ರತಿಮೆಯ ಕೈಗೆ ಕೆಂಪು ಬಣ್ಣ ಬಳಿಯುವ ಮೂಲಕ ಪ್ರತಿಭಟನೆ ತೋರಿಸುತ್ತಿದ್ದರಂತೆ. ಮತ್ತೆ ಪ್ರತಿಮೆಯ ಕೈಯ ಕೆಂಪು ಮಾಸಿದಾಗಲೆಲ್ಲ ಮತ್ತೆ ಬಳಿದು ಹೋಗುತ್ತಿದ್ದರಂತೆ. ಈಗಲೂ ಲಂಡನ್‌ನಲ್ಲಿ ವಿರಾಜಮಾನವಾಗಿರುವ ಗ್ಲ್ಯಾಡ್ಸ್ಟೋನ್‌ನ ಪ್ರತಿಮೆಯ ಕೈ ಕೆಂಪಾಗಿಯೇ ಇದೆ. ಬೆಂಕಿ ಕಡ್ಡಿ ನೌಕರರ ಆಕ್ರೋಶ ಹತಾಶೆಯ ಸಂಕೇತವಾಗಿ. ಬೆಂಕಿಕಡ್ಡಿ ಕಾರ್ಖಾನೆಯ ಯಜಮಾನ ಮತ್ತು ನೌಕರರ ಕತೆ ದಂತಕತೆಗಳ ನಡುವೆ ಆ ಕಾಲಕ್ಕೆ ಲಂಡನ್‌ನಲ್ಲಿ ಸಂಚಲನ ಮೂಡಿಸಿದ್ದು “ದಿ ಲಿಂಕ್” ಪತ್ರಿಕೆಯ ಬರಹ.

ಬರಹ ಪ್ರಕಟವಾದ ಮೇಲೆ ಕಾರ್ಖಾನೆಯ ಮಾಲೀಕರು ನೌಕರರಿಂದ ಮುಚ್ಚಳಿಕೆ ಕಾಗದವೊಂದರ ಮೇಲೆ ಸಹಿ ಪಡೆಯಲು ಒತ್ತಾಯಿಸಿದ್ದರು. ನೌಕರರು ಒಪ್ಪದಿದ್ದಾಗ ಅವರಲ್ಲಿ ಒಬ್ಬಾಕೆಯನ್ನು ಕೆಲಸದಿಂದ ಅಮಾನತು ಮಾಡಿದ್ದರು. ಆ ನಡೆ, ಎಲ್ಲ 1400 ಮಹಿಳಾ ಕಾರ್ಮಿಕರನ್ನೂ ಮುಷ್ಕರ ಮಾಡುವಂತೆ ಪ್ರೇರೇಪಿಸಿತು. ಲಂಡನ್ನಿನ ಅತಿ ದೊಡ್ಡ ಬೆಂಕಿಕಡ್ಡಿ ಕಾರ್ಖಾನೆ ಮುಷ್ಕರದಿಂದಾಗಿ ಪೂರ್ತಿ ಹನ್ನೆರಡು ದಿನಗಳ ಕೆಲಸ ನಿಲ್ಲಿಸಬೇಕಾಯಿತು, ದೊಡ್ಡ ಮೌಲ್ಯದ ನಷ್ಟ ಆಯಿತು. ಪತ್ರಿಕೆಯಲ್ಲಿ ನಿರ್ಭೀತ ಲೇಖನ ಬರೆದಾಕೆಯ ಬಹಿರಂಗ ಬೆಂಬಲದಿಂದಾಗಿ ಸಾರ್ವಜನಿಕ ಸಹಯೋಗವೂ ಬೆಂಕಿಪೆಟ್ಟಿಗೆ ಆಂದೋಲನಕ್ಕೆ ಸಿಕ್ಕಿತು. ಕಾರ್ಮಿಕ ಮಹಿಳಾ ಸಂಘಟನೆ ಜೀವ ಪಡೆದು ಔಪಚಾರಿಕ ರೂಪಪಡೆಯಿತು. ಪ್ರತಿ ಮನೆಯಲ್ಲೂ ಬೆಳಕು ಹೊತ್ತಿಸುತ್ತಿದ್ದ ಬೆಂಕಿಕಡ್ಡಿಯ ಕೈಗಾರಿಕೆ ಆ ಕಾಲದಲ್ಲಿ ಸರಕಾರವನ್ನು ಪ್ರಭಾವಿಸುತ್ತಿದ್ದ ದೊಡ್ಡ ವ್ಯಾಪಾರ. ಬೆಂಕಿಕಡ್ಡಿ ಆಂದೋಲನ ಮೊದಲ ಬಾರಿಗೆ ಅದರ ಪ್ರಭಾವಿ ಮಾಲೀಕರನ್ನು ಸಶಕ್ತವಾಗಿ ಎದುರಿಸಿ ಬ್ರಿಟಿಷ್ ಸಮಾಜವಾದ ಚರಿತ್ರೆಯ ಮುಖ್ಯ ಮೈಲಿಗಲ್ಲಾಯಿತು. ಪತ್ರಿಕೆಯಲ್ಲಿ ಬರೆಯುವ, ಮಹಿಳಾ ಕಾರ್ಮಿಕರ ಸಂಘಟನೆಗೆ ಜೀವ ನೀಡುವ ಮೂಲಕ ಆಂದೋಲನದ ಕೇಂದ್ರದಲ್ಲಿದ್ದವರು ಆ ಕಾಲದಲ್ಲಿ ಗುರುತು ಪರಿಚಯ ಇಲ್ಲದ ಅನ್ನಿ ಬೆಸೆಂಟ್.

ಐರಿಶ್ ಮೂಲದ ಅನ್ನಿ ವುಡ್ 1847ರ ಅಕ್ಟೋಬರ್ 1ರಂದು ಲಂಡನ್ನಿನಲ್ಲಿ ಹುಟ್ಟಿದ್ದು. ತಂದೆಯನ್ನು ಬೇಗ ಕಳೆದುಕೊಂಡ ಅವರ ಬಾಲ್ಯ ಹಿತವಾಗಿರಲಿಲ್ಲ. ಫ್ರಾಂಕ್ ಬೆಸೆಂಟ್ ಎನ್ನುವ ಪಾದ್ರಿಯ ಜೊತೆ 1867ರಲ್ಲಿ ಮದುವೆಯಾದ ನಂತರ ಅನ್ನಿ ಬೆಸೆಂಟ್ ಆದರು. ಧಾರ್ಮಿಕ ವಿಷಯಗಳನ್ನು ವಿರೋಧಿಸುವ ನಿಲುವು 1873ರಲ್ಲಿ ಗಂಡನಿಂದ ದೂರ ಮಾಡಿತು, ಅನ್ನಿ ಬೆಸೆಂಟ್ ಅನಾರೋಗ್ಯದಿಂದಿದ್ದ ತಾಯಿ ಮತ್ತು ಪುಟ್ಟ ಮಗಳೊಡನೆ ಲಂಡನ್ ಅಲ್ಲಿಯೇ ಬೇರೆ ವಾಸ್ತವ್ಯ ಹೂಡಿದರು. ಮಾಜಿ ಪತಿಯಿಂದ ಸಣ್ಣ ಜೀವನಧನವನ್ನು ಪಡೆಯುವುದರ ಜೊತೆಗೆ ಪತ್ರಿಕೆಗಳಿಗೆ ಬರಹಗಳನ್ನು ಬರೆದು ಬದುಕು ನಡೆಸಲಾರಂಭಿಸಿದರು. ಬೆಸೆಂಟ್ “ಮಹಿಳೆಯ ರಾಜಕೀಯ ನೆಲೆ” ಎನ್ನುವ ವಿಷಯದಲ್ಲಿ 1874ರಲ್ಲಿ ತಮ್ಮ ಮೊದಲ ಸಾರ್ವಜನಿಕ ಉಪನ್ಯಾಸ ನೀಡಿದ್ದರು.

ಬೆಂಕಿಕಡ್ಡಿ ಆಂದೋಲನ ಮೊದಲ ಬಾರಿಗೆ ಅದರ ಪ್ರಭಾವಿ ಮಾಲೀಕರನ್ನು ಸಶಕ್ತವಾಗಿ ಎದುರಿಸಿ ಬ್ರಿಟಿಷ್ ಸಮಾಜವಾದ ಚರಿತ್ರೆಯ ಮುಖ್ಯ ಮೈಲಿಗಲ್ಲಾಯಿತು. ಪತ್ರಿಕೆಯಲ್ಲಿ ಬರೆಯುವ, ಮಹಿಳಾ ಕಾರ್ಮಿಕರ ಸಂಘಟನೆಗೆ ಜೀವ ನೀಡುವ ಮೂಲಕ ಆಂದೋಲನದ ಕೇಂದ್ರದಲ್ಲಿದ್ದವರು ಆ ಕಾಲದಲ್ಲಿ ಗುರುತು ಪರಿಚಯ ಇಲ್ಲದ ಅನ್ನಿ ಬೆಸೆಂಟ್.

ಸಾಂಪ್ರದಾಯಿಕ ಸಾಂಸಾರಿಕ ಬದುಕಿನಿಂದ ಬೇರೆಯಾದ ಒಂದು ದಶಕದ ನಂತರ ಬೆಸಂಟ್, ಫ್ಯಾಬಿಯನ್ ಸಮಾಜ ಎನ್ನುವ ಸಮಾಜವಾದಿ ಸಂಘಟನೆಯ ಪ್ರಾಥಮಿಕ ಸದಸ್ಯೆ ಆದರು. ಬಿಯಾಟ್ರಿಸ್, ಸಿಡ್ನಿ ವೆಬ್ ಹಾಗು ಜಾರ್ಜ್ ಬರ್ನಾರ್ಡ್ ಷಾ ರಂತಹ ಪ್ರಸಿದ್ಧ ಚಿಂತಕರೂ ಆಗ ಸಂಘಟನೆಯ ಸಹಸದಸ್ಯರು. ಅವರೆಲ್ಲ ಐರಿಶ್ ಹೋಂ ರೂಲ್ ಚಳವಳಿಯನ್ನು ಬೆಂಬಲಿಸಿದವರು. ಬೆಸೆಂಟ್ “ಬ್ಲಡಿ ಸಂಡೆ” ಪ್ರದರ್ಶನದ ಭಾಗವಾದರು. ಮಾರ್ಕ್ಸ್ ವಾದಿ ಸಂಘಟನೆ “ಎಸ್ ಡಿ ಎಫ್” ಅಲ್ಲಿಯೂ ಸೇರಿಕೊಂಡರು. ಲಂಡನ್ ಸ್ಕೂಲ್ ಬೋರ್ಡ್ ನ “ಎಸ್ ಡಿ ಎಫ್” ನ ಅಭ್ಯರ್ಥಿಯಾಗಿ ಆಯ್ಕೆಯಾದರು. ಸ್ಕೂಲ್ ಶುಲ್ಕ ರದ್ದಾಗಲು ಮತ್ತು ಉಚಿತ ಊಟ ಮತ್ತು ಆರೋಗ್ಯ ತಪಾಸಣೆಯನ್ನು ಒದಗಿಸಲು ಕಾರಣ ಆದರು. ಅಷ್ಟೊತ್ತಿಗೆ ಬೆಸೆಂಟ್‌ರಿಗೆ ಅದ್ಭುತ ಭಾಷಣಕಾರ್ತಿ, ಯಾರನ್ನೂ ಪ್ರೇರೇಪಿಸುವಂತಹ ವ್ಯಕ್ತಿ ಮತ್ತೆ ಪತ್ರಿಕೆಗಳ ಮಟ್ಟಿಗೆ ವಿವಾದ ಹುಟ್ಟಿಸುವ ಬರಹಗಾರ್ತಿ ಎನ್ನುವ ಖ್ಯಾತಿ ಅಪಖ್ಯಾತಿಗಳು ಜೊತೆಯಾಗಿದ್ದವು.

1877ರಲ್ಲಿ ಬೆಸೆಂಟ್ ಸಂಗಡಿಗರ ಜೊತೆ ಸ್ವತಂತ್ರ ವಿಚಾರಧಾರೆಯ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು.1835ರಲ್ಲಿ ಚಾರ್ಲ್ಸ್ ನೌಲ್ಟಾನ್ ಬರೆದಿದ್ದ ಸಂತಾನ ನಿಯಂತ್ರಣದ ಕುರಿತು ಹೇಳುವ ಗ್ರಂಥ “ದಿ ಫ್ರೂಟ್ಸ್ ಆಫ್ ಫಿಲಾಸಫಿ” ಯನ್ನು ಮರುಪ್ರಕಟಿಸಲಾಯಿತು; ಕರಪತ್ರ ಮುದ್ರಿಸಿ ಹಂಚಲಾಯಿತು. ರಾಜಕೀಯ ಕೋಲಾಹಲಕ್ಕೆ ಕಾರಣವಾದ ಮರುಮುದ್ರಣವನ್ನು “ಅಶ್ಲೀಲ ಪ್ರಕಟಣೆಯ ಕಾನೂನು” ಪ್ರಕಾರ ವಿಚಾರಣೆ ನಡೆಸಲಾಯಿತು. ವಿಚಾರಣೆಯ ತೀರ್ಪು ಬೆಸೆಂಟರ ಕರಪತ್ರದ ವಿರುದ್ಧವಾಗಿ ಬಂದರೂ ಅಪರಾಧದ ಪ್ರಕರಣವನ್ನು ಕೋರಿಕೆಯ ಮೇರೆಗೆ ಕೈಬಿಡಲಾಯಿತು.

ಬೆಸೆಂಟ್ ತನ್ನದೇ ಚಿಂತನೆಗಳ “ದಿ ಲಾ ಆಫ್ ಪಾಪ್ಯುಲೇಶನ್” ಅನ್ನು ಪ್ರಕಟಿಸಿದರು. ದೊಡ್ಡ ನಗರ ಮತ್ತು ಬೇಸಾಯದ ಜಿಲ್ಲೆಗಳ ಬಡವರಿಗೆ ಅರ್ಪಿತವಾದ ಪುಸ್ತಕದ ಹಿನ್ನೆಲೆಯಲ್ಲಿ ಬೆಸೆಂಟ್‌ರ ಮೇಲೆ ಪರಿಣಾಮ ಬೀರಿದ್ದ ಚಿಂತಕರ ವಿಚಾರಧಾರೆಗಳ ಪ್ರಭಾವ ಇತ್ತು. ಥಾಮಸ್ ಮಾಲ್ತಸ್‌ನ ಸಿದ್ಧಾಂತವಾದ “ಪ್ರಕೃತಿ ತನಗೆ ಸಲಹಲು ಆಗುವುದಕ್ಕಿಂತ ಹೆಚ್ಚಿನದನ್ನು ಹುಟ್ಟಿಸುತ್ತದೆ” ಎನ್ನುವುದನ್ನು ಬೆಸೆಂಟ್ ಕೂಡ ಒಪ್ಪಿದವರು. ಆದರೆ ಅದರ ಅಂತಹ ಮಿತಿಮೀರಿದ ಹುಟ್ಟಿನ ಪರಿಹಾರವಾಗಿ “ಬಡವರಿಗೆ ತಡವಾಗಿ ಮದುವೆ ಮಾಡಬೇಕು” ಎನ್ನುವುದನ್ನು ಬೆಸೆಂಟ್ ಒಪ್ಪುತ್ತಿರಲಿಲ್ಲ. ಬದಲಿಗೆ “ಮಾಡುವೆ ತಡವಾದಷ್ಟು ವೇಶ್ಯಾವಾಟಿಕೆ ಹೆಚ್ಚು ಹಬ್ಬುತ್ತದೆ” ಎಂದು ಆಕೆ ವಾದಿಸಿದ್ದರು. ಗರ್ಭಪಾತವನ್ನು ಬೆಸೆಂಟ್ ತೀವ್ರವಾಗಿ ವಿರೋಧಿಸಿದರು. ಸಂತಾನ ನಿಯಂತ್ರಣ ಮಾಡುವಂತೆ ದಂಪತಿಗಳಿಗೆ ಉಪದೇಶಿಸುತ್ತಿದ್ದರು. ಸರಿಯಾಗಿ ಊಟ, ಶಿಕ್ಷಣ, ಬಟ್ಟೆ ನೀಡಲಾಗದೆ ಇರುವವರು ಮಕ್ಕಳನ್ನು ಪಡೆಯುವುದು ಅನೈತಿಕ ಎಂದು ವಾದಿಸಿದರು. “ಇಡೀ ಬ್ರಿಟಿಷ್ ಜನಾಂಗ ಆರೋಗ್ಯ, ಆಯುಷ್ಯ ಮತ್ತು ಅಂದಗಳ ಲಾಭ ಪಡೆಯಬೇಕಿದ್ದರೆ ಆರೋಗ್ಯವಂತ ಜೋಡಿಗಳು ಮಾತ್ರ ಮಕ್ಕಳನ್ನು ಹೊಂದಬೇಕು” ಎಂದು ಬೆಸೆಂಟ್ ಹೇಳಿದ್ದು ಅಂದೂ ಇಂದೂ ಅವರ ವಿರುದ್ಧದ ಆಕ್ಷೇಪವಾಗಿ ವಿವಾದವಾಗಿ ಉಳಿದಿದೆ.

ಅವರ ಚಿಂತನೆ ಮತ್ತು ಬರಹಗಳು ವಿಚ್ಛೇದನದ ನಂತರದ ಕೌಟುಂಬಿಕ ಬದುಕಿನ ಮೇಲೆಯೂ ಪರಿಣಾಮ ಬೀರಿದವು. ಮಗಳಿಗೆ ಧಾರ್ಮಿಕ ಶಿಕ್ಷಣ ನೀಡಲು ನಿರಾಕರಿಸಿದ ಕಾರಣ 1878ರಲ್ಲಿ ಲಂಡನ್ ನ ನ್ಯಾಯಾಲಯ ಮಗಳ ಕಸ್ಟಡಿಯನ್ನು ನಿರಾಕರಿಸಿತು. ಮಗಳು ಕೂಡ ತಾಯಿಯಂತೆಯೇ ಧರ್ಮಬಾಹಿರ ವೈಚಾರಿಕ ಬರಹಗಳನ್ನು ಬರೆಯಬಹುದು ಎನ್ನುವುದೇ ಕೋರ್ಟ್‌ನ ತೀರ್ಪಿಗೆ ಕಾರಣವಾಗಿತ್ತು.

1880ರ ಕೊನೆಯಲ್ಲಿ ಬೆಸಂಟ್ ಥಿಯೊಸೊಫಿಸ್ಟ್ ಆದರು. ಜಾಗತಿಕ ಭ್ರಾತೃತ್ವ, ಜಗತ್ತಿನ ವಿವಿಧ ಧರ್ಮಗಳ ನಡುವಿನ ಹೋಲಿಕೆ, ಬದುಕಿನ ಮತ್ತು ವಸ್ತುಗಳ ನಿಗೂಢ ವಿಚಾರಗಳ ಅನ್ವೇಷಣೆ ಅವರ ಹೊಸ ಚಿಂತನೆ ಹಾಗು ಸಕ್ರಿಯತೆಗಳನ್ನು ತುಂಬಿದವು. ತಮ್ಮ ಹೊಸ ವಿಚಾರಧಾರೆಗಳಿಗೆ ಹೊಂದದ, ಸಂತಾನ ನಿಯಂತ್ರಣದ ಅಭಿಪ್ರಾಯಗಳಿಂದ 1891ರಲ್ಲಿ ದೂರ ಆದರು. ತಮ್ಮ “ದಿ ಲಾ ಆಫ್ ಪಾಪ್ಯುಲೇಶನ್” ಪುಸ್ತಕವನ್ನು ಹಿಂತೆಗೆದುಕೊಂಡರು. ಥಿಯೊಸಾಫಿಕಲ್ ಸಿದ್ಧಾಂತ, ಪೂರ್ವದ ದೇಶಗಳ ಧರ್ಮ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಅವರನ್ನು ಪ್ರೇರೇಪಿಸಿತು, ಮತ್ತೆ ಸಹಜವಾಗಿ ಭಾರತಕ್ಕೆ ಆಹ್ವಾನ ನೀಡಿತು. 1893ರಿಂದ ಬೆಸೆಂಟ್ ಬಹುತೇಕ ಭಾರತದಲ್ಲಿಯೇ ವಾಸಿಸಿದರು. ಬನಾರಸ್‌ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪಿಸಿದರು. ಐರಿಶ್ ಹೋಮ್ ರೂಲ್ ಚಳವಳಿಯ ಪ್ರೇರಣೆಯಿಂದ ಭಾರತೀಯ ಹೋಮ್ ರೂಲ್ ಚಳವಳಿಯನ್ನೂ ಅವರು ಹುಟ್ಟುಹಾಕಿದ್ದ ಕಾರಣ ಸರಕಾರ ಅವರನ್ನು ಸ್ವಲ್ಪಕಾಲ ಗೃಹಬಂಧನದಲ್ಲಿಯೂ ಇಟ್ಟಿತ್ತು. 1907 ಮತ್ತು 1917ರ ನಡುವೆ ಭಾರತೀಯ ಥಿಯೊಸಾಫಿಕಲ್ ಸಮಾಜದ ಅಧ್ಯಕ್ಷರಾಗಿದ್ದರು. ತಮ್ಮ 72ನೆಯ ವಯಸ್ಸಿನಲ್ಲಿ ಭಾರತೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷೆಯೂ ಆದರು. 1933ರಲ್ಲಿ, ನಲವತ್ತು ವರ್ಷಗಳ ಭಾರತ ವಾಸದ ನಂತರ ಚೆನ್ನೈನ ಅಡ್ಯಾರ್ ಅಲ್ಲಿ ಅಸುನೀಗಿದರು.

ಅನ್ನಿ ಬೆಸೆಂಟ್ ಬದುಕಿನ ಬೇರೆ ಬೇರೆ ಕಾಲದಲ್ಲಿ ವಿಭಿನ್ನ ಒಲವು ನಿಲುವು ಹೊಂದಿದ್ದವರು, ಹಲವು ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದು ಕ್ರಿಯಾತ್ಮಕವಾಗಿ ಬದುಕಿದವರು. ಮಹಿಳಾಪರ ಸುಧಾರಕಿ ಭಾರತೀಯ ರಾಷ್ಟ್ರೀಯವಾದಿ ಎಂದು ಇಡೀ ಬದುಕನ್ನು ಅವಲೋಕಿಸಿ ಸರಳೀಕರಿಸಿ ಸಂಕ್ಷಿಪ್ತವಾಗಿ ಕರೆಯಬಹುದಾದರೂ ಅವರು ನಡೆದು ಸಾಗಿದ ಹಾದಿ ಹಲವು ತಿರುವುಗಳಿಂದ ಕೂಡಿತ್ತು. ಸ್ವತಂತ್ರ ವಿಚಾರವಾದಿ, ಪತ್ರಕರ್ತೆ, ಪ್ರಕಾಶಕಿ, ಲೇಖಕಿ, ಸಂಪಾದಕಿ, ನಾಸ್ತಿಕವಾದಿ, ಸಂತಾನ ನಿಯಂತ್ರಣ ಪ್ರಚಾರಕಿ, ಸಮಾಜವಾದಿ, ಆಧ್ಯಾತ್ಮಿಕ ಮಹಿಳೆ, ಥಿಯೊಸೊಫಿಸ್ಟ್ ಮತ್ತು ರಾಜಕೀಯ ನಾಯಕಿ ಹೀಗೆ ಹಲವು ಆಯಾಮಗಳನ್ನೂ, ಒಂದಕ್ಕಿಂತ ಇನ್ನೊಂದು ಸಂಪೂರ್ಣ ಭಿನ್ನ ಎನಿಸುವ ವ್ಯಕ್ತಿತ್ವಗಳನ್ನೂ ಅವರು ಪ್ರದರ್ಶಿಸಿದವರು. ಮತ್ತೆ ಆ ಎಲ್ಲ ಆಯಾಮ ಮಜಲುಗಳಲ್ಲೂ ವಿವಾದಗಳನ್ನು ಸೆಳೆದವರು.

ಪತಿಯಿಂದ ಬೇರೆಯಾದ ಮೇಲೆ ಮೊದಲು ಉಳಿದ ಲಂಡನ್‌ನ ಜಿಪ್ಸಿ ಹಿಲ್ ಪ್ರಾಂತ್ಯದ ಕೊಲ್ಬಿ ರಸ್ತೆಯ 39 ನಂಬ್ರದ ಮನೆಯಲ್ಲಿ ಅವರ ಚಿಂತನೆ ಸುಧಾರಣೆ ಹೋರಾಟಗಳನ್ನು ಸ್ಮರಣೆಯಲ್ಲಿ ಬಂಧಿಸುವ ನೀಲಿ ಫಲಕವನ್ನು ನೆಡಲಾಗಿದೆ. “ಸಮಾಜ ಸುಧಾರಕಿ ಅನ್ನಿ ಬೆಸೆಂಟ್ 1874ರಲ್ಲಿ ಇಲ್ಲಿದ್ದರು” ಎಂದು ನೆನಪಿಸಲಾಗಿದೆ. ಬೆಂಕಿಕಡ್ಡಿಗಳ ಕಾಲದ ಬ್ರಿಟನ್ನಿನಿಂದ ಸ್ವರಾಜ್ಯದ ಸಮೀಪ ನಿಂತ ಭಾರತದ ನಡುವೆ ಐದು ಸಾವಿರ ಮೈಲು ದೂರದ ರಸ್ತೆ ಸೇತುವೆ ಕಟ್ಟಲಾಗಿದೆ.