ಲಂಡನ್ನಿನ ನ್ಯಾಯಾಲಯದಲ್ಲಿ ನಡೆದ ಅಪರೂಪದ ಕೇಸಿನಲ್ಲಿ ಯಾರಾದರೂ ಊಹಿಸುವಂತೆ ತಿಲಕರು ಸೋತಿದ್ದರು. ಆದರೆ ಸೋಲಿನಲ್ಲೂ ನಾಯಕನಾಗಿ ಹೊರಹೊಮ್ಮಿದ್ದರು. ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯ ಕೊನೆಯ ಕಂತಿನಲ್ಲಿ ಬಾಲಗಂಗಾಧರ ತಿಲಕ್‌ ಹಾಗೂ ವಿ.ಡಿ. ಸಾವರ್ಕರ್‌ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಬಾಲಗಂಗಾಧರ ತಿಲಕ್‌

1919 ಫೆಬ್ರವರಿ 20ರ “ದಿ ಹಿಂದೂ” ದಿನಪತ್ರಿಕೆಯ ಒಂದು ವಿಶೇಷ ವರದಿಯ ಸಾಲುಗಳು ಹೀಗಿದ್ದವು “ಸರ್ ಇ. ಕಾರ್ಸನ್ ಜ್ಯೂರಿಯನ್ನು ಉದ್ದೇಶಿಸಿ, ಪ್ರಸ್ತುತ ಮೊಕದ್ದಮೆ ಭಾರತದಲ್ಲಿ ನಡೆಯಬೇಕಾಗಿತ್ತು ಎಂದರು. ಶ್ರೀ ತಿಲಕ್ ಖಂಡಿತವಾಗಿ ತೀರ್ಪನ್ನು ಪಡೆಯಲು ಅರ್ಹರು, ಆದರೆ ತೀರ್ಪಿನ ಪರಿಣಾಮ ಭಾರತೀಯ ಸರಕಾರದ ಮತ್ತು ಅಲ್ಲಿನ ಬಿಳಿಯ ಅಧಿಕಾರ ಮೇಲೆ ಏನಿರಬಹುದು ಎಂದು ಒತ್ತುಕೊಡಬೇಕೆಂದರು. ತಿಲಕರಿಗೆ ಘನ ಬ್ರಿಟಿಷ್ ನ್ಯಾಯವ್ಯವಸ್ಥೆ ಲಭ್ಯ ಇದೆ ಮತ್ತೆ ತೀರ್ಪನ್ನು ನೀಡುವ ಮೊದಲು ಜ್ಯೂರಿ 1893ರಿಂದ ತಿಲಕರ ಎಲ್ಲ ನಡೆಗಳನ್ನು ಗಮನಿಸುತ್ತದೆ……. ಕೋರ್ಟಿನ ನಡೆವಳಿಯನ್ನು ಅಂದಿಗೆ ಮುಂದೂಡಲಾಯಿತು”.

ಸ್ವಾತಂತ್ಯ್ರ ಹೋರಾಟ ಕಾಲದ ವಿಶಿಷ್ಟ ಧೀರೋದ್ದಾತ ಮೊಕದ್ದಮೆಯೊಂದರ ನೇರ ಚಿತ್ರಣ ಅದಾಗಿತ್ತು. ಸರ್ ವಾಲೆಂಟೈನ್ ಚಿರೋಲ್‌ರ ಎಂಬ ಆಂಗ್ಲ ಪತ್ರಿಕೋದ್ಯಮಿಯ ವಿರುದ್ಧ ಮೊಕದ್ದಮೆ ಹೂಡಿದ್ದವರು ಬಾಲಗಂಗಾಧರ ತಿಲಕರು. ಲಂಡನ್ನಿನ ನ್ಯಾಯಾಲಯದಲ್ಲಿ ನಡೆದ ಅಪರೂಪದ ಕೇಸಿನಲ್ಲಿ ಯಾರಾದರೂ ಊಹಿಸುವಂತೆ ತಿಲಕರು ಸೋತಿದ್ದರು. ಆದರೆ ಸೋಲಿನಲ್ಲೂ ನಾಯಕನಾಗಿ ಹೊರಹೊಮ್ಮಿದ್ದರು. ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ತಿಲಕರನ್ನು ಮೆಚ್ಚುತ್ತಿದ್ದ ಟ್ಯಾಗೋರರು “ಆಹುತಿಯ ಬೆಂಕಿಯನ್ನು ಇನ್ನೂ ಶುದ್ಧಗೊಳಿಸಲು ಬರುವುದಿಲ್ಲ, ಪವಿತ್ರ ಗಂಗೆಯನ್ನೂ ಪುನೀತಗೊಳಿಸುವುದು ಸಾಧ್ಯವಿಲ್ಲ” ಎಂದಿದ್ದರು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.

ಮೊಕದ್ದಮೆಯ ಕೇಂದ್ರದಲ್ಲಿದ್ದ ಚಿರೋಲ್, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಸಮರ್ಥಕರು. ಭಾರತಕ್ಕೆ ಸ್ವರಾಜ್ಯದ ಹಕ್ಕನ್ನು ಎಂದೂ ನೀಡಬಾರದು ಎಂದು ವಾದಿಸಿದವರು. ತಮ್ಮ ಅಭಿಪ್ರಾಯಗಳ ಸಮರ್ಥನೆಗಾಗಿ ಸ್ವರಾಜ್ಯ ಹೋರಾಟದಲ್ಲಿ ತೊಡಗಿದ್ದ ಭಾರತೀಯ ನಾಯಕರನ್ನು ಖಳರನ್ನಾಗಿ ಚಿತ್ರಿಸುತ್ತಿದ್ದವರು. “ದಿ ಟೈಮ್ಸ್” ಪತ್ರಿಕೆಯ ವಿದೇಶಿ ಸಾಮ್ರಾಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ಅವರು, 1910ರಲ್ಲಿ ಪ್ರಕಟಿಸಿದ ಭಾರತೀಯ ರಾಜಕಾರಣದ ಬಗೆಗಿನ ಅಧ್ಯಯನದಲ್ಲಿ ತಿಲಕರನ್ನು “ಭಾರತೀಯ ಅಶಾಂತಿಯ ಪಿತಾಮಹ” ಎಂದು ಕರೆದಿದ್ದರು. ಚಿರೋಲ್ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ತಿಲಕರು ಲಂಡನ್‌ಗೆ ಪ್ರಯಾಣಿಸಿದರು. ಆ ಪ್ರಯಾಣಕ್ಕೆ ಕೆಲವು ಷರತ್ತುಗಳ ಮೇಲೆ ಅನುಮತಿ ಸಿಕ್ಕಿತ್ತು. ಸಾರ್ವಜನಿಕ ಭಾಷಣ ಮತ್ತು ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎನ್ನುವುದು ಕರಾರುಗಳಲ್ಲೊಂದಾಗಿತ್ತು. ಹಾಗಂತ ಅಧಿಕಾರಿಗಳ ಬಳಿ ಮಾತನಾಡುವುದು ಮತ್ತು ಸ್ವತಃ ಸಂಶೋಧನೆ ಮಾಡಿ ಮಾಹಿತಿ ಆಧಾರ ಕಲೆಹಾಕುವುದಕ್ಕೆ ಒಪ್ಪಿಗೆ ಇತ್ತು.

ಲಂಡನ್‌ನ ನಂಬರ್ 10 ಹೌಲಿ ಪ್ಲೇಸ್, ಮೈದಾವೆಲ್ ಪ್ರದೇಶದಲ್ಲಿ ಹನ್ನೊಂದು ತಿಂಗಳು ತಿಲಕರು ಉಳಿದರು. ಆ ಮನೆ ಬಹಳ ಬೇಗ ಲಂಡನ್‌ನ ಭಾರತೀಯರಲ್ಲಿ “ನಂಬರ್ 10 ಭಾರತೀಯ ಡೌವ್ನಿಂಗ್ ಸ್ಟ್ರೀಟ್” ಎನ್ನುವ ಹೆಸರು ಪಡೆಯಿತು. ಲಂಡನ್ ವಾಸದಲ್ಲಿ ತಿಲಕರು ಮತ್ತು ಸ್ನೇಹಿತರನ್ನು ಐರ್ಲೆಂಡ್ ಮೂಲದ ಮ್ಯಾಕ್ಲೆಂಟಿ ಫ್ಯಾಮಿಲಿ ನೋಡಿಕೊಳ್ಳುತ್ತಿದ್ದರು. ಮ್ಯಾಕ್ಲೆಂಟಿಯವರು ಅನ್ನ ಮತ್ತು ಭಾರತೀಯ ಅಡುಗೆ ಮಾಡುವುದನ್ನು ಕಲಿತಿದ್ದರು. ಮುಂದೆ ತಿಲಕರು ಭಾರತಕ್ಕೆ ಮರಳಿದ ಮೇಲೆ ಅದೇ ಬಾಣಸಿಗರು “ಮ್ಯಾಕ್ಲೆಂಟಿಸ್” ಎನ್ನುವ ಭಾರತೀಯ ರೆಸ್ಟೋರೆಂಟ್ ತೆರೆದರು. ಆ ರೆಸ್ಟೋರೆಂಟ್‌ನಲ್ಲಿ “ಭಾರತೀಯ ಅಶಾಂತಿಯ ಪಿತಾಮಹ ಲೋಕಮಾನ್ಯ ತಿಲಕರ ಆಶೀರ್ವಾದದೊಂದಿಗೆ” ಎನ್ನುವ ಬೋರ್ಡ್ ತೂಗುಬಿಟ್ಟಿದ್ದರು.

ಸುಮಾರು ಒಂದೂವರೆ ವರ್ಷದ ಇಂಗ್ಲೆಂಡ್ ಭೇಟಿಯಲ್ಲಿ ಮೊಕದ್ದಮೆ ಹೂಡುವುದರ ಜೊತೆಗೆ ಭಾರತದ ಸ್ವರಾಜ್ಯ ಹೋರಾಟವನ್ನು ಪಸರಿಸುವ ಉದ್ದೇಶವೂ ತಿಲಕರಿಗೆ ಇತ್ತು. ಲೋಕಮಾನ್ಯ ತಿಲಕರು ಇಂಗ್ಲೆಂಡ್‌ಗೆ ಬಂದ ಮೇಲೆ ಸರಕಾರದಲ್ಲಿರುವ ಬ್ರಿಟಿಷ್ ಅಧಿಕಾರಗಳ ಜೊತೆ ಸಂಪರ್ಕ ಬೆಳೆಸಿದರು. ತಮಗೆ ಸಾಧ್ಯವಾದ ಸಭೆಗಳಲ್ಲಿ ಮಾತನಾಡಿದರು. ಲೇಬರ್ ಪಕ್ಷದ ಜೊತೆ ಸ್ನೇಹ ಬೆಳೆಸಿದರು, ಭಾರತೀಯರ ಸಂಕಷ್ಟ ಹಾಗು ಆಶೋತ್ತರಗಳನ್ನು ತಿಳಿಸಿದರು. ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುವುದು ತಿಲಕರಿಗೆ ಸುಲಭ ಆಗಿರಲಿಲ್ಲ. ಪ್ರತಿಹಂತದಲ್ಲೂ ಪೂರ್ವಗ್ರಹ ಮತ್ತು ಪ್ರತಿರೋಧ ಎದುರಾಗುತ್ತಿದ್ದವು. ಅವರು ಲಂಡನ್‌ನಲ್ಲಿ ಇದ್ದುದು ಮೊದಲ ಮಹಾಯುದ್ಧ ಮುಗಿದ ನಂತರದ ಚುನಾವಣೆಯ ಕಾಲದಲ್ಲಿ. ಆ ಸಂದರ್ಭದ ಎಲ್ಲ ಅವಕಾಶಗಳನ್ನು ತಿಲಕರು ಬಳಸಿಕೊಂಡರು. ಲೇಬರ್ ಪಕ್ಷದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಿದರು.

1918ರ ಸೆಪ್ಟೆಂಬರ್ 25ರಂದು ಅಂತರಾಷ್ಟ್ರೀಯ ಬಾಂಧವ್ಯ ಮತ್ತು ಯೋಗಕ್ಷೇಮ ಸಭೆಯಲ್ಲಿ ತಿಲಕರು “ಲೇಬರ್ ಮಾದರಿಯ ಚಳವಳಿ ಭಾರತದಲ್ಲಿನ್ನೂ ಪ್ರಾಥಮಿಕ ಹಂತದಲ್ಲಿದೆ. ಒಂದು ವೇಳೆ ಅದು ಬೆಳವಣಿಗೆ ಕಂಡರೂ ಬಲಿಷ್ಠವಾಗಿ ಮುಂದುವರಿಯುವುದು ಕಷ್ಟ. ಭಾರತೀಯ ಸಾಮಾಜಿಕ ನೇಯ್ಗೆಯ ಸೂಕ್ಷ್ಮಗಳನ್ನು ಗಮನದಲ್ಲಿಟ್ಟು ಅಲ್ಲಿನ ಸಂದರ್ಭಕ್ಕೆ ಹೊಂದುವಂತೆ ಚಳವಳಿಯನ್ನು ರೂಪಿಸಬೇಕಾಗುತ್ತದೆ” ಎಂದಿದ್ದರು. ಅಂದಿನ ಲಂಡನ್‌ನಲ್ಲಿ ಬದಲಾಗುತ್ತಿರುವ ಸ್ಥಿತಿಗಳನ್ನು ಕೆಲವೇ ಕೆಲವರು ಗ್ರಹಿಸಿದ್ದರು, ಅಂತಹವರಲ್ಲಿ ತಿಲಕರೂ ಒಬ್ಬರು. ಲೇಬರ್ ಪಕ್ಷ ಭಾರತದ ಬಗ್ಗೆ ಸಹಾನುಭೂತಿ ಹೊಂದಿದೆ ಎನ್ನುವುದನ್ನೂ ಬೇಗ ಗುರುತಿಸಿದರು. ಲೇಬರ್ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಸಹಕರಿಸಿದರು. 2000 ಪೌಂಡ್‌ಗಳನ್ನು ಒಟ್ಟುಗೂಡಿಸಿಕೊಟ್ಟರು. ಈ ಸಹೃದಯ ಹೆಜ್ಜೆ ಲೇಬರ್ ಪಕ್ಷದ ಸ್ನೇಹವನ್ನು ಗೆಲ್ಲಲು ಸಹಾಯ ಮಾಡಿತು, ಪಕ್ಷದ ಮುಖಂಡರು ಭಾರತೀಯ ಸ್ವರಾಜ್ಯ ಹೋರಾಟವನ್ನು ಬಲಿಷ್ಠಗೊಳಿಸುವಲ್ಲಿ ತಮ್ಮ ಸಂಘಟನೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು. ತಿಲಕರು ಲೇಬರ್ ಪಕ್ಷದ ವೇದಿಕೆಯನ್ನು ಬಳಸಿಕೊಂಡು ಸ್ಕಾಟ್ಲೆಂಡ್‌ನ ಗ್ಲಾಸ್ಗೋ ಎಡಿನ್ಬರ್ಗ್ ನಗರಗಳಲ್ಲಿ, ಇಂಗ್ಲೆಂಡ್ ನ ಪ್ಲೈಮೌತ್ \, ಸೌತಂಪ್ಟನ್‌ಗಳಲ್ಲಿ ಭಾಷಣ ಮಾಡಿದರು.

ಲೇಬರ್ ಪಕ್ಷ ನಡೆಸುತ್ತಿದ್ದ ಪತ್ರಿಕೆಗಳಲ್ಲಿ ತಿಲಕರು ಭಾರತೀಯ ಪರಿಸ್ಥಿತಿಗಳನ್ನು ವಿವರಿಸುವ ಲೇಖನಗಳನ್ನು ಬರೆದರು. ಭಾರತೀಯರ ಕನಸುಗಳ ಬಗ್ಗೆ ಬರೆದರು, ಸ್ವರಾಜ್ಯ ಚಳವಳಿಯ ಆರಂಭಿಕ ಬೀಜವನ್ನು ಬಿತ್ತಿದರು. ತಿಲಕರಿಗೆ ಅದ್ಭುತ ಸ್ಪಂದನೆ ಬೆಂಬಲ ಸಿಗಲಾರಂಭಿಸಿತು. “ದಿ ಹೆರಾಲ್ಡ್” ಪತ್ರಿಕೆ ತಿಲಕರ ಹಲವು ಲೇಖನಗಳನ್ನು, ಸ್ವರಾಜ್ಯದ ಬೇಡಿಕೆಯನ್ನು ಪ್ರಕಟಿಸಿತು. ಭಾರತದಿಂದ ಮರಳಿದ ಆಂಗ್ಲ ಅಧಿಕಾರಿಗಳಿಗೆ ತಿಲಕರ “ಕೇಸರಿ” ಪತ್ರಿಕೆಯ ಬರಹಗಳ ಕಾರಣಕ್ಕೆ ಉಂಟಾಗುತ್ತಿದ್ದ ಪ್ರತಿಭಟನೆಗಳ ಪರಿಚಯ ಇತ್ತು. ಅಂತಹ ಅಧಿಕಾರಿಗಳು ಲಂಡನ್‌ನಲ್ಲಿ ತಿಲಕರನ್ನು ನಿರ್ಬಂಧಿಸುವ ಯತ್ನ ಮಾಡಿದರು. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವುದರಿಂದ ಉದಾತ್ತ ಆಂಗ್ಲ ರಾಜಕಾರಣಿಗಳು ಪ್ರಭಾವಕ್ಕೆ ಒಳಗಾಗಬಹುದೆಂದು ಊಹಿಸಿದರು. ತಿಲಕರನ್ನು ರಾಜಕೀಯ ಸಭೆ ಸಮಾರಂಭಗಳಿಂದ ದೂರ ಇಡುವ ಪ್ರಯತ್ನ ಶುರು ಆಯಿತು. 1919ರ ನವೆಂಬರ್ 29ರಂದು ಜಂಟಿ ಸಂಸದೀಯ ಸಮಿತಿಯ ಕೆಲಸವನ್ನು ಮುಗಿಸಿ ತಿಲಕರು ಭಾರತಕ್ಕೆ ಮರಳಿದರು. ಮುಂಬೈಯಲ್ಲಿ ಸಾವಿರಾರು ಜನರು ಸೇರಿ ತಿಲಕರ ಆಗಮನವನ್ನು ಸ್ವಾಗತಿಸಿ ಸಂಭ್ರಮಿಸಿದರು. ಲಂಡನ್ ವಾಸ ತಿಲಕರ ಸಾಲದ ಹೊರೆಯನ್ನು ಹೆಚ್ಚಿಸಿತ್ತು. ವಿಷಯವನ್ನು ತಿಳಿದಿದ್ದ ಗಾಂಧೀಜಿ ಮತ್ತು ಅನೇಕ ಅಭಿಮಾನಿಗಳು ಚಂದಾ ಎತ್ತಿ ಮೂರು ಲಕ್ಷ ರೂಪಾಯಿಗಳನ್ನು ಒಟ್ಟುಮಾಡಿ ಕೊಟ್ಟಿದ್ದರು, ಅದು ಆ ಕಾಲಕ್ಕೆ ಬಹುದೊಡ್ಡ ಮೊತ್ತವಾಗಿತ್ತು. ಇಂಗ್ಲೆಂಡಿನಿಂದ ಮರಳುವಾಗಲೇ ತಿಲಕರು ಅಸ್ವಸ್ಥರಾಗಿದ್ದರು. ತಮ್ಮನ್ನು ಪ್ರೀತಿಸಿ ಬೆಂಬಲಿಸುತ್ತಿರುವ ಎಲ್ಲರನ್ನು ಅಭಿನಂದಿಸಿ “ನಿಮ್ಮೆಲ್ಲರ ಔದಾರ್ಯ ನನ್ನ ದೇಹ ಮನಸ್ಸುಗಳನ್ನು ಆವರಿಸಿದೆ. ನಿಮಗಾಗಿ ನಾನು ಇನ್ನೂ ದುಡಿಯಬೇಕಾಗಿದೆ, ನನ್ನ ಬಳಿ ಬೇರೆ ವಿಧಿ ಇಲ್ಲ” ಎಂದು ಗದ್ಗದಿತರಾಗಿ ಭಾವುಕ ಧ್ವನಿಯಲ್ಲಿ ಹೇಳಿದ್ದರು.

1856ರಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಹುಟ್ಟಿದ ತಿಲಕರು ಕಾಲೇಜು ಓದಿನ ಬಳಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಕೇಸರಿ, ಮರಾಠ ಪತ್ರಿಕೆಗಳನ್ನು ಶುರು ಮಾಡಿದರು. ಮೊನಚಾದ ಬರಹಗಳ ಮೂಲಕ ಓದುಗರನ್ನು ಬಡಿದೆಬ್ಬಿಸಿದ್ದರು, ಬ್ರಿಟಿಷರ ವಿರುದ್ಧ ಪ್ರತಿರೋಧದ ಕಾವನ್ನು ಹೆಚ್ಚಿಸಿದ್ದರು.1897ರಲ್ಲಿ ಅವರ ಮೇಲೆ ಮೊದಲ ರಾಷ್ಟ್ರದ್ರೋಹದ ಆರೋಪ ಬಿದ್ದಿತು. ಜೈಲು ವಾಸ ಮತ್ತು ರಾಷ್ಟ್ರದ್ರೋಹದ ಆರೋಪ ಸ್ವಾತಂತ್ಯ್ರ ಹೋರಾಟದ ಹಾದಿಯಲ್ಲಿ ಮತ್ತೆ ಮತ್ತೆ ಎದುರಾಗಿ ಬರುತ್ತಿದ್ದವು.1918ರಲ್ಲಿ ಇಂಗ್ಲೆಂಡ್ ಪ್ರಯಾಣದ ಪೂರ್ವಭಾವಿಯಾಗಿ ಮುಂಬೈ ಮದ್ರಾಸ್ ಮೂಲಕ ಶ್ರೀಲಂಕಾವನ್ನು ತಲುಪಿದಾಗ ಪಾಸ್‌ಪೋರ್ಟ್ ಅನ್ನೂ ಹಿಂಪಡೆಯಲಾಗಿತ್ತು. ಮುಂದೆ ಚಿರೋಲ್ ವಿರುದ್ಧ ಮೊಕದ್ದಮೆ ಹೂಡುವ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರಯಾಣದ ಉದ್ದೇಶ ಸಾಕಾರವಾಯಿತು. ಲಂಡನ್‌ನಿಂದ ಭಾರತಕ್ಕೆ ಮರಳಿದ ಅಲ್ಪಕಾಲದಲ್ಲಿ, 1920ರಲ್ಲಿ ಅಸ್ವಸ್ಥರಾಗಿದ್ದ ತಿಲಕರು ನಿಧನರಾದರು. 1988ರಲ್ಲಿ ಬ್ರಿಟನ್ನಿನ “ಇಂಗ್ಲಿಷ್ ಹೆರಿಟೇಜ್” ಸಂಸ್ಥೆ ಲಂಡನ್‌ನ ತಿಲಕರ ವಸತಿಯ ಮೇಲೆ ನೀಲಿ ಫಲಕವನ್ನು ನೆಟ್ಟಿತು. ನೆನಪಿನ ಫಲಕ “ಭಾರತೀಯ ದೇಶಭಕ್ತ ತತ್ವಶಾಸ್ತ್ರಜ್ಞ ಲೋಕಮಾನ್ಯ ತಿಲಕ್ 1918-1919ರ ನಡುವೆ ಇಲ್ಲಿದ್ದರು” ಎಂದು ಓದಿ ಸ್ಮರಿಸುತ್ತದೆ.

*****

ವಿ.ಡಿ. ಸಾವರ್ಕರ್

ಮುಂಬೈ ಪ್ರಾಂತ್ಯದ ನಾಸಿಕದಲ್ಲಿ ಹುಟ್ಟಿದ್ದ ಸಾವರ್ಕರರು ಯೌವ್ವನದ ಕಾಲದ ಮುಖ್ಯ ನಾಲ್ಕು ವರ್ಷಗಳನ್ನು ಲಂಡನ್‌ನಲ್ಲಿ ಕಳೆದರು. ಲಂಡನ್‌ನಲ್ಲಿ ಕಳೆದ ನಾಲ್ಕು ವರ್ಷಗಳು ಅವರು ಹಿಂದೂವಾದಿ ಮತ್ತು ಕ್ರಾಂತಿಕಾರಿ ನಾಯಕನಾಗಿ ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು “ಇಂಗ್ಲಿಷ್ ಹೆರಿಟೇಜ್ ಸಂಸ್ಥೆಯ ಮಾಹಿತಿ ಹೇಳುತ್ತದೆ. ರಾಷ್ಟ್ರವಾದಿ ಸ್ನೇಹಿತ ಶ್ಯಾಮಜಿ ಕೃಷ್ಣವರ್ಮ ಸಂಯೋಜಿಸಿಕೊಟ್ಟ ವಿದ್ಯಾರ್ಥಿ ವೇತನವನ್ನು ಪಡೆದು ಸಾವರ್ಕರ್ ಇಂಗ್ಲೆಂಡ್‌ಗೆ ಬಂದಿದ್ದರು. ಲೋಕಮಾನ್ಯ ತಿಲಕರ ಹೆಚ್ಚಿನ ಸಹಾಯದಿಂದ ಲಂಡನ್‌ನ ನ್ಯಾಯಾಂಗ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ “ಗ್ರೇ’ಸ್ ಇನ್” ಗೆ ಪ್ರವೇಶ ಪಡೆದರು. 1910ರಲ್ಲಿ ಅವರನ್ನು ಬಾರ್ ಕೌನ್ಸಿಲ್‌ಗೆ ಆಹ್ವಾನಿಸಲಾಗಿತ್ತು.

ಕೃಷ್ಣವರ್ಮ ಲಂಡನ್‌ನ ಕ್ರೋಮ್ ವೆಲ್ ರಸ್ತೆಯ 65 ನಂಬ್ರದ ಮನೆಯಲ್ಲಿ “ಇಂಡಿಯಾ ಹೌಸ್” ಸ್ಥಾಪಿಸಿದರು. 1905ರ ಜುಲೈ 1ರಂದು ಸಮಾಜವಾದಿ ನಾಯಕ ಹೆನ್ರಿ ಮೇಯೆರ್ಸ್ ಹಿಂಡ್‌ಮ್ಯಾನ್ ಭಾಷಣದ ಜೊತೆಗೆ ಮನೆಯ ಉದ್ಘಾಟನೆಯಾಯಿತು. ಇಂಡಿಯಾ ಹೌಸ್ ದೊಡ್ಡ ವಿಕ್ಟೋರಿಯನ್ ಮಾದರಿಯ ಬಂಗಲೆಯಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ದಾದಾಭಾಯಿ ನವರೋಜಿ ಕೂಡ ಭಾಗವಹಿಸಿದ್ದರು. ವಸತಿಯಾಗಿ ಆರಂಭಗೊಂಡಾಗ ಮೂವತ್ತು ಭಾರತೀಯ ವಿದ್ಯಾರ್ಥಿಗಳಿಗೆ ಇಂಡಿಯಾ ಹೌಸ್ ಆಶ್ರಯ ನೀಡಿತ್ತು. ಇಂಡಿಯಾ ಹೌಸ್‌ನ ಉದ್ದೇಶ ಭಾರತೀಯ ವಿದ್ಯಾರ್ಥಿಗಳಿಗೆ ವಸತಿ ಒದಗಿಸುವುದರ ಜೊತೆಗೆ ಹಲವು ರಾಜಕೀಯ ಸಂಘಟನೆಗಳಿಗೆ ಸಂಧಿಸುವ ತಾಣ ಒದಗಿಸುವುದೂ ಆಗಿತ್ತು. ಭಾರತೀಯ ಹೋಂ ರೂಲ್ ಚಳವಳಿಯ ಸಭೆಗಳು ಅಲ್ಲೇ ನಡೆಯುತ್ತಿದ್ದವು. ಅಲ್ಪಕಾಲದಲ್ಲಿಯೇ ಕ್ರಾಂತಿಕಾರಕ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಇಂಡಿಯಾ ಹೌಸ್ ಗುರುತು ಪಡೆಯಿತು. ಇದೇ ಮನೆಯಲ್ಲಿ 1906-09ರ ನಡುವೆ ಸಾವರ್ಕರ್ ವಾಸಿಸುತ್ತಿದ್ದಾಗಲೇ ಇನ್ನಿತರ ಚಳವಳಿಗಾರರ ಜೊತೆ ಸೇರಿ ಸಮಾಲೋಚಿಸುತ್ತಿದ್ದರು. 1906 ಅಕ್ಟೋಬರ್ 20ರಂದು ಗಾಂಧೀಜಿಯವರೂ ಒಂದು ರಾತ್ರಿಯನ್ನು ಇದೇ ವಸತಿಯಲ್ಲಿ ಕಳೆದಿದ್ದರು.

ಇಂಡಿಯಾ ಹೌಸ್‌ನ ಬೆಂಬಲಿಗರು ವಸಾಹತುಶಾಹಿ ವಿರೋಧಿ ಪತ್ರಿಕೆ “ದಿ ಇಂಡಿಯನ್ ಸೊಷಿಯೊಲೊಜಿಸ್ಟ್” ಅನ್ನು ಆರಂಭಿಸಿದ್ದರು. ಈ ಪತ್ರಿಕೆಯನ್ನು ಭಾರತದಲ್ಲಿ “ರಾಷ್ಟ್ರ ವಿರೋಧಿ” ಎಂದು ಹೆಸರಿಸಿ ನಿರ್ಬಂಧ ಹೇರಲಾಗಿತ್ತು. ಸಾವರ್ಕರರಂತೆಯೇ ಭಿಕಾಜಿ ಕಾಮ, ವಿ ಎನ್ ಚಟರ್ಜೀ, ಲಾಲಾ ಹರ್ ದಯಾಳ್, ವಿ ವಿ ಎಸ್ ಅಯ್ಯರ್, ಎಂ ಪಿ ಟಿ ಆಚಾರ್ಯ, ಪಿ ಎಂ ಬಾಪಟ್‌ರಂತಹ ಕ್ರಾಂತಿಕಾರಿಗಳು ಇಂಡಿಯಾ ಹೌಸ್‌ನ ಜೊತೆ ಸಂಬಂಧ ಇಟ್ಟುಕೊಂಡಿದ್ದರು. 1909ರಲ್ಲಿ ಇಂಡಿಯಾ ಹೌಸ್‌ನ ಕಾರ್ಯಕರ್ತ ಮದನ್ ಲಾಲ್ ಧಿಂಗ್ರಾ, ಕರ್ಜಾನ್ ವಯ್ಲಿಯ ಹತ್ಯೆ ಮಾಡಿದ್ದ. ಈ ಘಟನೆಯ ನಂತರ ಲಂಡನ್‌ನ ಪೊಲೀಸರು ಹಾಗು ಭಾರತೀಯ ಬ್ರಿಟಿಷ್ ಸರಕಾರದ ಗುಪ್ತಚರ ವಿಭಾಗ, ಇಂಡಿಯಾ ಹೌಸ್‌ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿತು. ನಂತರದ ಪೊಲೀಸ್ ದಾಳಿ ಇಂಡಿಯಾ ಹೌಸ್‌ನ ಸದಸ್ಯರು ತಪ್ಪಿಸಿಕೊಂಡು ಯೂರೋಪಿನ ದೇಶಗಳಿಗೆ ಹೋಗುವಂತೆ ಮಾಡಿತು. ಆ ಚಳವಳಿಗಾರರಲ್ಲಿ ಕೆಲವರು ಜರ್ಮನಿಯಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡರು. ಇಂಡಿಯಾ ಹೌಸ್‌ನ ಮಾಜಿ ಸದಸ್ಯರು ಮೊದಲ ಮಹಾಯುದ್ಧದ ನಂತರ ತಮ್ಮ ವೈಪ್ಚನೆ ಯೋಜನೆಗಳಿಗೆ ಭಾರತದಲ್ಲಿ ರಾಷ್ಟ್ರವಾದಿ ಹಿಂದೂ ಸಂಘಟನೆಯ ರೂಪ ನೀಡಿದರು.

ಲಂಡನ್ ವಾಸದಲ್ಲಿ ಸಾವರ್ಕರರ ಸಾಹಿತ್ಯ ಅಭಿರುಚಿ ಬೆಳೆಯಿತು .1907ರಲ್ಲಿ ಇಟಾಲಿಯನ್ ಕ್ರಾಂತಿಕಾರಿ, ಐರೋಪ್ಯ ನಾಯಕ ನಾಯಕ ಗಿಸಿಸಿಪಿ ಮಝನಿಯ ಆತ್ಮಕತೆಯನ್ನು ಮರಾಠಿಗೆ ಭಾಷಾಂತರ ಮಾಡಿದರು. ತಮ್ಮ ಸಂಶೋಧನೆಯನ್ನು “ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಆಫ್ 1875” ಪುಸ್ತಕದಲ್ಲಿ ಬರೆದರು. ಆ ಪುಸ್ತಕ 1946ರ ತನಕವೂ ಭಾರತದಲ್ಲಿ ನಿರ್ಬಂಧಕ್ಕೆ ಒಳಗಾಗಿತ್ತು.

1910ರಲ್ಲಿ ಸಾವರ್ಕರರ ಮೇಲೆ ನಾಸಿಕದ ಬ್ರಿಟಿಷ್ ಅಧಿಕಾರಿಯ ಕೊಲೆಯ ಹಿನ್ನೆಲೆಯಲ್ಲಿ ಪಾಲ್ಗೊಂಡ ಆರೋಪ ಬಂತು. ಇದನ್ನು ಐದನೆಯ ಕಿಂಗ್ ಜಾರ್ಜ್‌ನ ವಿರುದ್ಧದ ಪಿತೂರಿಯಾಗಿ ಇದನ್ನು ಪರಿಗಣಿಸಲಾಯಿತು. ಸಾವರ್ಕರನ್ನು ಬ್ರಿಟಿಷ್ ಪೊಲೀಸರು ಹುಡಕಲಾರಂಭಿಸಿದರು, ನಾಟಕೀಯ ಹಿಂಬಾಲಿಸುವಿಕೆಯ ಕೊನೆಗೆ ಫ್ರಾನ್ಸ್‌ನಲ್ಲಿ ಬಂಧಿಸಿದರು. ಮತ್ತೆ ಸುದೀರ್ಘ ಅವಧಿಯ ಅಂಡಮಾನ್ ಜೈಲಿನ ಶಿಕ್ಷೆ ಅನುಭವಿಸಿದರು.

ಇಂಗ್ಲೆಂಡ್‌ನ “ಸಾವರ್ಕರ್ ಜನ್ಮಶತಾಬ್ದಿ ಸಮಿತಿ” ಯ ಸಲಹೆಯ ಮೇರೆಗೆ ಸಾವರ್ಕರ್ ಮೂರುವ ವರ್ಷಗಳ ಕಾಲ ವಾಸಿಸಿದ ಮನೆಯ ಗೋಡೆಯ ಮೇಲೆ 1985ರಲ್ಲಿ ನೀಲಿ ಫಲಕ ನೆಡಲಾಯಿತು. ಇದು ಕ್ರಾಂತಿಕಾರಿಗಳು ಲಂಡನ್‌ನಲ್ಲಿ ಕಳೆಯುತ್ತಿದ್ದ “ಇಂಡಿಯಾ ಹೌಸ್” ನ ಸಂಸ್ಮರಣೆಯೂ ಹೌದು. ತಿಲಕರ ಲಂಡನ್ ಮನೆಯ ನೆನಪಿನ ಫಲಕದ ಒಕ್ಕಣೆಯಂತೆ ಈ ಫಲಕವೂ “ಭಾರತೀಯ ದೇಶಭಕ್ತ ತಾತ್ವಿಕ ಇಲ್ಲಿದ್ದರು” ಎಂದು ವಿನಾಯಕ ದಾಮೋದರ ಸಾವರ್ಕರರನ್ನು ಸ್ಮರಿಸುತ್ತದೆ.

*****

ಕೊನೆಯ ಟಿಪ್ಪಣಿ :

ಲಂಡನ್ನಿನ ನೀಲಿ ಫಲಕ ಯೋಜನೆ ಪ್ರಸ್ತುತ “ಇಂಗ್ಲಿಷ್ ಹೆರಿಟೇಜ್” ಸಂಸ್ಥೆಯ ನಿರ್ವಹಣೆಯಲ್ಲಿದೆ. ಗತಕಾಲದ ಹೆಸರಾಂತ ವ್ಯಕ್ತಿ ಮತ್ತು ವಾಸ್ತವ್ಯಗಳನ್ನು ಜೋಡಿಸುವ ಕೆಲಸ ಮಾಡುತ್ತದೆ. 1866ರಲ್ಲಿ ಆರಂಭವಾದ ಯೋಜನೆ ಯುನೈಟೆಡ್ ಕಿಂಗ್ಡಮ್‌ನ ಇತರ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೇ ಜಗತ್ತಿನ ಬೇರೆಬೇರೆ ಕಡೆ ಇದೇ ಮಾದರಿಯ ಸಂಸ್ಮರಣಾ ಯೋಜನೆಗಳಿಗೆ ಸ್ಫೂರ್ತಿ ನೀಡಿದೆ. ಲಂಡನ್‌ನಲ್ಲಿ ವಾಸಿಸಿದ್ದ ವ್ಯಕ್ತಿಯೊಬ್ಬರ ಮನೆಯ ಗೋಡೆಯ ಮೇಲೆ ನೀಲಿ ಫಲಕ ನೆಡಬೇಕಿದ್ದರೆ ಯಾರೂ ಅಂತಹ ವ್ಯಕ್ತಿಗಳನ್ನು “ನಾಮ ನಿರ್ದೇಶನ” ಮಾಡಬಹುದು. ಹಾಗಂತ ನಾಮನಿರ್ದೇಶನ ಮಾಡುವಾಗ ಆ ವ್ಯಕ್ತಿ ಮಡಿದು ಕನಿಷ್ಠ ಇಪ್ಪತ್ತು ವರ್ಷಗಳು ಆಗಿರಬೇಕು. ಈ ಸಮಯ ನಿರ್ದೇಶಿತ ಅಭ್ಯರ್ಥಿಯು ಸಾಮಾಜಿಕವಾಗಿ ರಾಜಕೀಯವಾಗಿ ಬೀರಿರುವ ದೂರಗಾಮಿ ಪರಿಣಾಮವನ್ನು ಅಳೆದು ಫಲಕ ನೆಡಬೇಕು ಎನ್ನುವ ಬೇಡಿಕೆಯನ್ನು ಮನ್ನಿಸಬೇಕೋ ಇಲ್ಲವೋ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು “ಇಂಗ್ಲಿಷ್ ಹೆರಿಟೇಜ್” ಸಂಸ್ಥೆ ತಿಳಿಸುತ್ತದೆ. ಒಂದು ವೇಳೆ ಇತಿಹಾಸ ಪ್ರಸಿದ್ಧರೊಬ್ಬರ ಮನೆ ಕಾಲಾನಂತರದಲ್ಲಿ ನಶಿಸಿಹೋಗಿದ್ದರೆ ಅಂತಹವರ ನೆನಪಿನ ಫಲಕ ನೆಡುವ ಸಾಧ್ಯತೆ ಇಲ್ಲ. ಮತ್ತೆ ಲಂಡನ್ನಿನಲ್ಲಿ ನಾಮನಿರ್ದೇಶಿತ ವ್ಯಕ್ತಿಯ ನೆನಪಿನ ಜೊತೆಗೆ ವ್ಯಕ್ತಿ ವಾಸಿಸಿದ ಮನೆ ಅಲ್ಲದಿದ್ದರೆ ವೃತ್ತಿ ಮಾಡಿದ ಸ್ಥಳ ಇರುವುದು ಅವಶ್ಯಕ. ಇಪ್ಪತ್ತು ವರ್ಷಗಳ ನಿಯಮ, ನೀಲಿ ಫಲಕ ಯೋಜನೆ ಪ್ರಾರಂಭವಾದ ಕಾಲದಲ್ಲಿ ಇರಲಿಲ್ಲ.

ಫ್ರಾನ್ಸ್‌ನ ಮೂರನೆಯ ನೆಪೋಲಿಯನ್‌ನ ನೀಲಿ ಫಲಕ ಆತ ಬದುಕಿರುವಾಗಲೇ ಅವನು ಲಂಡನ್‌ನಲ್ಲಿ ವಾಸಿದ ಮನೆಯ ಮೇಲೆ ಇಡಲಾಗಿತ್ತು. ಈ ಫಲಕ ಇಂದಿಗೂ ಉಳಿದಿರುವ ಫಲಕಗಳಲ್ಲಿ ಅತ್ಯಂತ ಹಳೆಯದು. ಲೋಯಿಸ್ ನೆಪೋಲಿಯನ್ ಕಿಂಗ್ ಸ್ಟ್ರೀಟ್ ಅಲ್ಲಿರುವ ತನ್ನ ಮನೆಯಿಂದ ಅತ್ಯಂತ ತರಾತುರಿಯಲ್ಲಿ ಓಡಿಹೋಗಿದ್ದನಂತೆ. ಆತ ಮನೆ ಬಿಟ್ಟಾಗ ಹಾಸಿಗೆ ಹೊದಿಕೆಗಳು ಅಸ್ತವ್ಯಸ್ತವಾಗಿ ಇದ್ದವಂತೆ, ಸ್ನಾನಗ್ರಹದಲ್ಲಿ ತುಂಬಿಸಿಟ್ಟ ನೀರು ಹಾಗೆಯೇ ಇತ್ತಂತೆ. ಫ್ರಾನ್ಸ್‌ನ ಆಗಿನ ರಾಜ ಲೂಯಿಸ್ ಫಿಲಿಪ್ ನನ್ನ 1848ರಲ್ಲಿ ಉಚ್ಚಾಟಿಸಲಾಗಿತ್ತು. ಆ ಸಮಯದಲ್ಲಿ ಲಂಡನ್‌ನಲ್ಲಿದ್ದ ನೆಪೋಲಿಯನ್ ಸುದ್ದಿ ಕೇಳಿದ ತಕ್ಷಣ ಮುಂದಿನ ತುರ್ತು ರಾಜಕೀಯ ನಡೆಗಾಗಿ ತಡಮಾಡದೆ ಮನೆ ಬಿಟ್ಟಿದ್ದ. ಮತ್ತೆ ಮುಂದೆ ಅದೇ ಮನೆಯ ಮೇಲೆ ನೆಪೋಲಿಯನ್ನನ ಜೀವಿತಕಾಲದಲ್ಲಿಯೇ ನೆನಪಿನ ಫಲಕ ನೀಡಲಾಗಿತ್ತು. ಇತಿಹಾಸವನ್ನು ಸ್ಮರಿಸುವ ಆದರಿಸುವ ಆಂಗ್ಲರಿಗೆ ಇದೊಂದು ಇತಿಹಾಸದೊಳಗಿನ ಇತಿಹಾಸ. ಮೊಟ್ಟಮೊದಲ ನೀಲಿಫಲಕವನ್ನು 1867ರಲ್ಲಿ ಕವಿ ಲಾರ್ಡ್ ಬೈರನ್‌ನ ಮನೆಯ ಮೇಲೆ ನೆಡಲಾಯಿತು. ಹೋಲ್ಸ್‌ ರಸ್ತೆಯ ಆಮ್ನಾಎಯನ್ನು 1889ರಲ್ಲಿ ಕೆಡವಲಾಯಿತು. ಆ ಜಾಗದಲ್ಲಿ ಇದೀಗ ಪ್ರಸಿದ್ಧ “ಜಾನ್ ಲೂಯಿಸ್” ಅಂಗಡಿ ವಹಿವಾಟು ನಡೆಸುತ್ತಿದೆ, ಮತ್ತೆ ಗೋಡೆಯ ಮೇಲೆ ಕವಿಯ ಫಲಕವನ್ನು ಹೊಂದಿದೆ. ಕೆಲವು ಮನೆಗಳ ಮೇಲೆ ಬೇರೆ ಬೇರೆ ವ್ಯಕ್ತಿಗಳ ಹೆಸರಿರುವ ಎರಡೆರಡು ನೀಲಿ ಫಲಕಗಳು ಇವೆ. ವ್ಯಕ್ತಿಗಳನ್ನು ಸ್ಥಳಗಳನ್ನು ನೆನಪಿಸುವುದರ ಜೊತೆಗೆ ನೀಲಿ ಫಲಕಗಳು ಕೆಲವೊಮ್ಮೆ ಯಾವುದೊ ಕಾರಣಕ್ಕೆ ಕೆಡವಬೇಕಾದ ಕಟ್ಟಡಗಳನ್ನು ಐತಿಹಾಸಿಕ ಕಾರಣಕ್ಕೆ ಕಾಯ್ದುಕೊಳ್ಳಲು ಸಹಕಾರಿಯಾಗಿವೆ, ಅಥವಾ ಅಂತಹ ಕಟ್ಟಡಗಳ ಬಗೆಗೆ ವಿಶೇಷ ಮುತುವರ್ಜಿಯ ನಿರ್ವಹಣೆಯನ್ನು ಒತ್ತಾಯದಿಂದಲಾದರೂ ಪಡೆದಿವೆ.

ದೇಶ ಭಾಷೆ ಗಡಿಗಳನ್ನು ಮೀರಿ ಬಹುಸಂಸ್ಕೃತಿಯ ಬಹುಜನರ ಲಂಡನ್‌ನಲ್ಲಿ ವಾಸಿಸಿದ ಗತಕಾಲದ ಪ್ರಸಿದ್ಧರನ್ನು ನೆನಪಿಸುವ ಯೋಜನೆಯಲ್ಲಿ ಈಗಾಗಲೇ 990 ನೀಲಿ ಫಲಕಗಳು ಆಯಾ ವ್ಯಕ್ತಿಗಳು ವಾಸಿಸಿದ ಕೆಲಸ ಮಾಡಿದ ಕಟ್ಟಡದ ಗೋಡೆಗಳಲ್ಲಿ ಹೊಳೆಯುತ್ತಿವೆ. ಇನ್ನೂ ಅನೇಕ…. ಪ್ರತೀಕ್ಷೆಯಲ್ಲಿವೆ. ಲಂಡನ್ನನ್ನು ಪ್ರೀತಿಸಿ ಬಂದವರು, ಸಾಮ್ರಾಜ್ಯ ಶಾಹಿಯ ವಿರುದ್ಧ ಹೊರಾಡಿ ಮಾಡಿದವರು, ಎಲ್ಲೋ ಹುಟ್ಟಿ ಇನ್ನೆಲ್ಲೋ ಅಳಿಯುವುದರ ನಡುವೆ ತುಸುಕಾಲಕ್ಕಾದರೂ ಲಂಡನ್ ಅನ್ನು ಸ್ಪರ್ಶಿಸಿ ಹೋದವರು, ಎಷ್ಟು ಸಣ್ಣ ಸಮಯಕ್ಕಾದರೂ ಲಂಡನ್‌ನಲ್ಲಿ ಉಳಿದು ಓಡಾಡಿದ್ದಾರೆ ಅಂಥವರೆಲ್ಲ ನೀಲಿ ಫಲಕಗಳ ಮಟ್ಟಿಗೆ ಖಾಯಂ ಲಂಡನ್ನಿಗರೇ. ಇತಿಹಾಸದಲ್ಲಿ ಕೆಲವೊಮ್ಮೆ ನಿರ್ಭೀತ ಅಧಿಕಾರದಾಹಿಯಾಗಿ ಮತ್ತೆ ಕೆಲವೊಮ್ಮೆ ಕುಟಿಲ ವ್ಯಾಪಾರೀ ಶಕ್ತಿಯಾಗಿ, ವಿಭಜಕ ತಂತಂತ್ರಗಾರನಾಗಿ, ಅಲ್ಲದಿದ್ದರೆ ಕ್ರೂರ ಆಡಳಿತಶಾಹಿಯಾಗಿ ಬದುಕಿದ ಲಂಡನ್‌ನ ಹಲವು ಮುಖಗಳಲ್ಲಿ ನೀಲಿ ಫಲಕ ಯೋಜನೆ ಸದಾ ಮಂದಹಾಸ ಬೀರುವ ಒಂದು ಮೃದು ಆತ್ಮೀಯತೆಯ ಔದಾರ್ಯದ ಮುಖ. ತನ್ನನ್ನು ಓದಲು ನೋಡಲು ಬರುವ ಎಲ್ಲರನ್ನೂ ಸ್ವಾಗತಿಸಿ ಇತಿಹಾಸದ ದಿಕ್ಕುದೆಸೆಗಳ ಕಡೆಗೆ ದೃಷ್ಟಿ ತಿರುಗಿಸಿ ಕುತೂಹಲ ಹುಟ್ಟಿಸಿ ಬೀಳ್ಕೊಡುವ ವಿನೀತ ಕಣ್ಣು.