ದೂರದ ಬ್ರಿಟನ್ನಿನಲ್ಲಿ ಹೀಗೊಂದು ಮೆಲುಕು ನಡೆದ ಹೊತ್ತಲ್ಲೇ ದೀರ್ಘ ಹೋರಾಟ ತ್ಯಾಗ ಬಲಿದಾನಗಳ ಫಲಶ್ರುತಿಯಾಗಿ ದೊರೆತ ಸ್ವಾತಂತ್ರ್ಯದ ಎಪ್ಪತ್ತೆರಡನೆಯ ಆಚರಣೆ ಭಾರತ ಪಾಕಿಸ್ತಾನಗಳಲ್ಲಿ ನಡೆದು ಹೋಗಿದೆ. ಸಂಭ್ರಮ ಸಡಗರ ಪತಾಕೆ, ಪಟಾಕಿ, ಭಾಷಣ, ಸಿಹಿ, ಕರತಾಡನ ಸೀಮೆಯ ಎರಡೂ ಕಡೆಗಳಲ್ಲಿ. ಈ ಎಲ್ಲ ಆಗುಹೋಗುಗಳ ಪ್ರಧಾನ ಪಾತ್ರಧಾರಿಯಾಗಿದ್ದ, ಸರಳವಾಗಿ ಒಂದು ರೇಖೆ ಎಳೆದು ಓಡಿಹೋದ ಬ್ರಿಟಿಷರು, ಹೊಸಯುಗದ ವಿದೇಶಾಂಗ ಸಂಬಂಧಗಳ ರೀತಿನೀತಿಗಳಿಗನುಗುಣವಾಗಿ ತಮ್ಮ ರಾಯಭಾರ ಕಚೇರಿಗಳನ್ನು ಗಡಿಯ ಎರಡೂ ಕಡೆಯ ದೇಶಗಳಲ್ಲಿ ಸ್ಥಾಪಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಯೋಗೀಂದ್ರ ಮರವಂತೆಯವರ “ಲಂಡನ್ ಡೈರಿ” ಪುಸ್ತಕದಿಂದ ಒಂದು ಅಧ್ಯಾಯ

 

೨೦೧೮ರ ಆಗಸ್ಟ್ ಹದಿನೈದರ ಆಸುಪಾಸಿಗೆ ದಕ್ಷಿಣ ಏಷಿಯಾದಲ್ಲಿ ಸ್ವಾತಂತ್ರ್ಯದ ಸಂಭ್ರಮ ತುಂಬಿದ ಹೊತ್ತಲ್ಲಿ, ಐದು ಸಾವಿರ ಮೈಲು ದೂರದ ಬ್ರಿಟನ್ನಿನಲ್ಲೂ ಅದೇ ಸ್ವಾತಂತ್ರ್ಯ ವೃಕ್ಷದ ಟೊಂಗೆ ಟಿಸಿಲುಗಳ ಬಗ್ಗೆ ವಿಮರ್ಶೆ ನಡೆದಿತ್ತು. ಬ್ರಿಟನ್ನಿನ ದೂರದರ್ಶನ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಅನಿತಾ ರಾಣಿ, ೧೯೪೭ರ ಅಖಂಡ ಭಾರತ ವಿಭಜನೆಗೆ ಬ್ರಿಟನ್ನಿನಲ್ಲಿ ರಾಷ್ಟ್ರೀಯ ಸ್ಮರಣೀಯ ದಿನವೊಂದರ ಸ್ಥಾನ ನೀಡಬೇಕೆನ್ನುವ ಬೇಡಿಕೆ ಹೊತ್ತು ಆಗಸ್ಟ್ ಮೊದಲ ವಾರದಲ್ಲಿ ಇಲ್ಲಿನ ಸಂಸತ್ತಿನ ಕೆಳಮನೆಗೆ ಹೋಗಿದ್ದರು. ಬ್ರಿಟನ್ ನ ಸಂಸತ್ತಿನಲ್ಲಿ ಇಂತಹ ಒಂದು ಬೇಡಿಕೆಗೆ ವಿಶೇಷ ಸ್ಪಂದನ ದೊರೆಯದಿದ್ದರೂ ವಿಭಜನೆಯ ಬಗೆಗಿನ ಚರ್ಚೆಯಂತೂ ಇಲ್ಲಿ ಮತ್ತೆ ಮರುಕಳಿಸುವಂತಾಯಿತು.

ಅನಿತಾ ರಾಣಿ ವಿಭಜನೆಯ ಎಪ್ಪತ್ತು ವರ್ಷಗಳ ಮೈಲಿಗಲ್ಲಿನ ನೆನಪಿಗೆ ನಿರ್ಮಿಸಿದ “ನನ್ನ ಕುಟುಂಬ, ವಿಭಜನೆ ಮತ್ತು ನಾನು” ಎನ್ನುವ ಸಾಕ್ಷ್ಯಚಿತ್ರದ ಮೂಲಕ ಬ್ರಿಟನ್ ಅಲ್ಲಿ ಪ್ರಸಿದ್ಧರಾದವರು. ಅನಿತಾ ರಾಣಿಯ ಅಜ್ಜ ಪಂಜಾಬಿನವರು, ಬ್ರಿಟಿಷ್ ಆಳ್ವಿಕೆಯ ಭಾರತದ ಸೇನೆಯ ಸಿಪಾಯಿಯಾಗಿದ್ದು ವಿಭಜನೆಯ ಹೊತ್ತಿಗೆ ಪೂನಾದಲ್ಲಿ ಕೆಲಸ ಮಾಡುತ್ತಿದ್ದರು. ವಿಭಜನೆ ಆಗುವಾಗ ಪಂಜಾಬಿನಲ್ಲಿಯೇ ಇದ್ದ ಅವರ ಮೊದಲ ಪತ್ನಿ ಮತ್ತು ಕೆಲವು ಕೌಟುಂಬಿಕರು ಅಲ್ಲಿಯೇ ಕತ್ತಿಯ ಇರಿತಕ್ಕೊ, ಬೆಂಕಿದಹನಕ್ಕೊ ಅಥವಾ ಆತ್ಮಹತ್ಯೆ ಮಾಡಿಕೊಂಡೋ ಜೀವತೆತ್ತಿದ್ದರಂತೆ. ತನ್ನ ಪೂರ್ವಜರ ನೆನಪು ಬಹಳ ಕಾಡಿತೆಂದು ೨೦೧೭ರ ಆರಂಭದಲ್ಲಿ ತಾಯಿಯನ್ನು ಕರೆದುಕೊಂಡು ಈಗ ಪಾಕಿಸ್ತಾನದ ಪಂಜಾಬಿನ ಭಾಗದಲ್ಲಿರುವ ಅಜ್ಜನ ಮನೆ ಊರು ಅಜ್ಜ ಅಜ್ಜಿಯರ ನೆರೆಹೊರೆಯ ಸಹಪಾಠಿಗಳ ನಡುವೆ ಅನಿತಾ ರಾಣಿ ಸುತ್ತಾಡಿದರು. ಅಲ್ಲಿನ ಅನುಭವಗಳನ್ನು ಆಧರಿಸಿ ಸಾಕ್ಷ್ಯ ಚಿತ್ರ ನಿರ್ಮಿಸಿದರು. ಸಾಕ್ಷ್ಯಚಿತ್ರದಲ್ಲಿ ಅನಿತಾ ರಾಣಿ ಕುಟುಂಬದವರ ಕಥೆ ಮಾತ್ರವಲ್ಲದೆ ವಿಭಜನೆಯನ್ನು ಹತ್ತಿರದಿಂದ ನೋಡಿದ ಡಾ. ಬಿನೀತಾ ಕಾಣೆ ಎನ್ನುವವರ ತಂದೆ ಭೀಮ್ ಅವರ ಕತೆಯೂ ಸೇರಿಕೊಂಡಿತ್ತು.

ವಿಭಜನೆಯ ಸಮಯದಲ್ಲಿನ ಸಣ್ಣ ಸಣ್ಣ ತಪ್ಪು ಅಭಿಪ್ರಾಯಗಳು ಸಂಶಯಗಳು ಗಾಳಿಸುದ್ದಿಗಳು ದೊಡ್ಡ ದೊಡ್ಡ ಹಲ್ಲೆ ದಾಳಿಗೆ ಕಾರಣ ಆಗಿದ್ದವು ಎಂದು ಭೀಮ್ ಸಾಕ್ಷ್ಯಚಿತ್ರದಲ್ಲಿ ಹೇಳುತ್ತಾರೆ. ದೇಶ ವಿಭಜನೆಯ ಕಾಲಕ್ಕೆ ಎಳೆಯ ಹುಡುಗನಾಗಿದ್ದ ಭೀಮ್ ಗೆ ಧಾಳಿಯಿಂದ ತಪ್ಪಿಸಿಕೊಂಡು ಓಡಿಹೋಗಲು ಸಹಾಯ ಮಾಡಿದವನು ಒಬ್ಬಮುಸ್ಲಿಂ ಹುಡುಗ. ದೋಣಿಯಲ್ಲಿ ಭೀಮ್ ರ ಕುಟುಂಬವನ್ನು ಕೂರಿಸಿಕೊಂಡು ನದಿಯ ಅಂಚಿನಲ್ಲಿ ಸಪ್ಪಳವಾಗದಂತೆ, ಯಾರ ಕಣ್ಣಿಗೂ ಬೀಳದಂತೆ ಮೆತ್ತಗೆ ದೋಣಿ ಚಲಾಯಿಸುತ್ತಾ ಆ ಬಾಲಕ ಭೀಮ್ ನನ್ನು ಪಾರು ಮಾಡಿಸಿದ್ದ. ಇದೀಗ ಬಾಂಗ್ಲಾದೇಶದಲ್ಲಿರುವ ತಮ್ಮ ಊರು ಮೂಲಮನೆಯ ಪರಿಸರವನ್ನು ಭೇಟಿ ಮಾಡಲು ಡಾ ಕಾಣೆ ಹೋಗಿದ್ದಾಗ ಅಂದು ತಂದೆಯನ್ನು ಉಳಿಸಿದಾತ ಭೇಟಿಯಾಗಿದ್ದಾನೆ, ತನ್ನ ತಂದೆಯನ್ನು ಉಳಿಸಿದ್ದಕ್ಕೆ ತಬ್ಬಿಕೊಂಡು ಕೃತಜ್ಞತೆ ಹೇಳಿ ಡಾ. ಕಾಣೆ ಮರಳಿದ್ದಾರೆ. ಅನಿತಾ ರಾಣಿಯವರ ಸಾಕ್ಷ್ಯಚಿತ್ರದಲ್ಲಿ ವಿಭಜನೆಯಯನ್ನು ಕಂಡ ಅನುಭವಿಸಿದ ಒಟ್ಟು ನಾಲ್ಕುಕತೆಗಳು ಚಿತ್ರಣಗೊಂಡಿವೆ. ಇವುಗಳಲ್ಲಿ ರಾಷ್ಟ್ರೀಯತೆಯ ಪರಾಕಾಷ್ಠೆಯಲ್ಲಿ, ಕೋಮುದ್ವೇಷದ ದಳ್ಳುರಿಯಲ್ಲಿ ಮನೆ ಮನ ಆಸ್ತಿಗಳು ಸುಟ್ಟುಬೂದಿಯಾದ ಕತೆಗಳೂ ಇವೆ, ಧರ್ಮ ಜಾತಿಗಳನ್ನು ಮೀರಿ ಮನುಷ್ಯತ್ವದ ಪ್ರೇಮದಲ್ಲಿ ಜೀವಗಳು ಮರುಹುಟ್ಟು ಪಡೆದ ಘಟನೆಗಳೂ ಇವೆ.

ವಿಭಜನೆಯನ್ನು ಸ್ಮರಿಸುವುದು ಎಂದರೆ ಸಂತಸದಲ್ಲಿ ಸಂಭ್ರಮಿಸುವುದು ಎಂದಲ್ಲ, ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಭಜನೆ ಹಾಗು ವಲಸೆ ಎನ್ನುವ ಅಪಕೀರ್ತಿಯ ಭಾರ ಹೊತ್ತ ಘಟನೆಯನ್ನು ಬ್ರಿಟನ್ ರಾಷ್ಟ್ರ ಮಟ್ಟದಲ್ಲಿ ನೆನಪು ಮಾಡಿಕೊಳ್ಳಬೇಕು ಎನ್ನುತ್ತಾರೆ ಅನಿತಾ ರಾಣಿ. ಜೊತೆಗೆ, ದಕ್ಷಿಣ ಏಷಿಯಾದಿಂದ ದಶಕಗಳಿಂದ ವಲಸೆ ಬಂದವರು ಬ್ರಿಟಿಷ್ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ನೆನೆಯಲು ಕೂಡ “ವಿಭಜನೆಯ ಸಂಸ್ಮರಣಾ ದಿನ” ಕಾರಣವೂ ಆಗಬೇಕು ಎಂದು ವಾದಿಸುತ್ತಾರೆ. ಯುರೋಪ್ ಮತ್ತು ಆಂಗ್ಲ ಸಂಸ್ಕೃತಿಯನ್ನು ಬಲ್ಲವರಿಗೆ ಇಂತಹ ಯೋಚನೆಗಳು ಆಶ್ಚರ್ಯ ಹುಟ್ಟಿಸುವುದಿಲ್ಲ. ಇತಿಹಾಸವನ್ನು ಹೆಜ್ಜೆ ಹೆಜ್ಜೆಗೂ ಸ್ಮರಿಸುವ ಆಂಗ್ಲರಿಗೂ ಈ ತರಹದ ಒಂದು ಕೋರಿಕೆ ವಿಚಿತ್ರ ಎನಿಸಿರಲಿಕ್ಕಿಲ್ಲ. ಪ್ರತಿವರ್ಷದ ಆಗಸ್ಟ್ ೧೫ರ ಆಸುಪಾಸಿಗೆ “ದಿ ಗಾರ್ಡಿಯನ್” ಹಾಗು “ಬಿಬಿಸಿ”ಯಂತಹ ಸುದ್ದಿ ಮಾಧ್ಯಮಗಳಲ್ಲಿ ಭಾರತದ ವಿಭಜನೆಯ ಬಗ್ಗೆ ವಿಶೇಷ ಆಸಕ್ತಿ ಇರುವ ಆಂಗ್ಲ ಪತ್ರಕರ್ತರ ಮತ್ತು ತಮ್ಮ ಬಾಲ್ಯದಲ್ಲಿ ವಲಸೆಯ ಕರಾಳಘಟನೆಗಳನ್ನು ಹತ್ತಿರದಿಂದ ತಿಳಿದ, ಮತ್ತೆ ಬ್ರಿಟನ್ನಿಗೆ ವಲಸೆ ಬಂದು ಈಗ ವೃದ್ಧರಾಗಿರುವ ಭಾರತ ಪಾಕಿಸ್ತಾನ ಬಾಂಗ್ಲಾದೇಶದ ಮೂಲದವರು ಮತ್ತೆ ಅಂತವರ ಮಕ್ಕಳು-ಮೊಮ್ಮಕ್ಕಳು ತಮ್ಮ ಅನುಭವಗಳನ್ನು ಬರೆಯುತ್ತಾರೆ ಹಂಚುತ್ತಾರೆ. ಬ್ರಿಟನ್ನಿನ ಪತ್ರಿಕೆಗಳಲ್ಲಿ ಸಾಕ್ಷ್ಯಚಿತ್ರಗಳಲ್ಲಿ ಪ್ರತಿವರ್ಷ ಬಂದು ಹೋಗುವ, ಚರ್ಚಿಸಲ್ಪಡುವ ಭಾರತದ ವಿಭಜನೆಯ ನೆನಪುಗಳು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೌನ ಹೊದ್ದಿರುವುದೇಕೆ ಎನ್ನುವುದು ಕೂಡ ಬ್ರಿಟನ್ನಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಕೇಳಿಬರುತ್ತಿದ್ದ ಪ್ರಶ್ನೆ.

ದೂರದ ಬ್ರಿಟನ್ನಿನಲ್ಲಿ ಹೀಗೊಂದು ಮೆಲುಕು ನಡೆದ ಹೊತ್ತಲ್ಲೇ ದೀರ್ಘ ಹೋರಾಟ ತ್ಯಾಗ ಬಲಿದಾನಗಳ ಫಲಶ್ರುತಿಯಾಗಿ ದೊರೆತ ಸ್ವಾತಂತ್ರ್ಯದ ಎಪ್ಪತ್ತೆರಡನೆಯ ಆಚರಣೆ ಭಾರತ ಪಾಕಿಸ್ತಾನಗಳಲ್ಲಿ ನಡೆದು ಹೋಗಿದೆ. ಸಂಭ್ರಮ ಸಡಗರ ಪತಾಕೆ, ಪಟಾಕಿ, ಭಾಷಣ, ಸಿಹಿ, ಕರತಾಡನ ಸೀಮೆಯ ಎರಡೂ ಕಡೆಗಳಲ್ಲಿ. ಹೋರಾಟದ ನೆನಪುಗಳು ಅವೇ ಮಾತುಗಳು ಮತ್ತಿಷ್ಟು ಕನಸುಗಳು ಗಡಿಯ ಎರಡೂ ಬದಿಗಳಲ್ಲಿ. ಈ ಎಲ್ಲ ಆಗುಹೋಗುಗಳ ಪ್ರಧಾನ ಪಾತ್ರಧಾರಿಯಾಗಿದ್ದ, ಸರಳವಾಗಿ ಒಂದು ರೇಖೆ ಎಳೆದು ಓಡಿಹೋದ ಬ್ರಿಟಿಷರು, ಹೊಸಯುಗದ ವಿದೇಶಾಂಗ ಸಂಬಂಧಗಳ ರೀತಿನೀತಿಗಳಿಗನುಗುಣವಾಗಿ ತಮ್ಮ ರಾಯಭಾರ ಕಚೇರಿಗಳನ್ನು ಗಡಿಯ ಎರಡೂ ಕಡೆಯ ದೇಶಗಳಲ್ಲಿ ಸ್ಥಾಪಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದಾರೆ. ಆಗಸ್ಟ್ ಹದಿನಾಲ್ಕು, ಹದಿನೈದಕ್ಕೆ ಆ ಕಚೇರಿಗಳ ಬ್ರಿಟಿಷ್ ರಾಯಭಾರಿಗಳು ದೆಹಲಿ ಮತ್ತು ಇಸ್ಲಾಮಾಬಾದ್ ಗಳಲ್ಲಿ ಸಾಲಾಗಿ ನಿಂತು ಆಚೆಯ ಈಚೆಯ ಸ್ಥಳೀಯ ಅಧಿಕಾರಿಗಳ ಕೈಕುಲುಕಿ ಶುಭಾಶಯ ಹೇಳಿದ್ದಾರೆ.

ಒಂದು ಕಡೆ ಭಾರತ-ಪಾಕಿಸ್ತಾನಗಳೆರಡಕ್ಕೂ ಸಮಾನ ಶತ್ರುವಾಗುವ ಅರ್ಹತೆ ಇರುವ ಬ್ರಿಟನ್ ಅನ್ನು ಎರಡೂ ದೇಶಗಳು ವಾಣಿಜ್ಯ ವ್ಯಾಪಾರಗಳ ನೆಲೆಯಲ್ಲಿ ಜಾಗತೀಕರಣದ ಅನಿವಾರ್ಯತೆಯಲ್ಲಿ ಸ್ನೇಹಭಾವದಲ್ಲಿ ಅಪ್ಪಿಕೊಂಡಿವೆ. ಇನ್ನೊಂದು ಕಡೆ ಶತ ಶತಮಾನಗಳಿಂದ ಅಖಂಡವಾಗಿದ್ದ ಭೂಭಾಗವೇ ಇಬ್ಭಾಗವಾಗಿ ಆಯಾ ಭಾಗಗಳ ನಿವಾಸಿಗಳ ನಡುವೆ ಪರಸ್ಪರ ಸಂಶಯ ವೈರತ್ವಗಳನ್ನು ಎಪ್ಪತ್ತೊಂದು ವರ್ಷಗಳ ನಂತರವೂ ಹಸಿಯಾಗಿ ಜೀವಂತವಾಗಿ ಇಟ್ಟಿವೆ. ದೂರದ ಶತ್ರುಗಳು ಮಿತ್ರರಾಗಿದ್ದಾರೆ, ಹತ್ತಿರದ ಬಂಧುಗಳಾಗಬೇಕಿದ್ದವರು ಒಬ್ಬರಿನ್ನೊಬ್ಬರ ಮೇಲೆ ವಿಷಕಾರುತ್ತಿದ್ದಾರೆ. ಇದರರ್ಥ ಎರಡು ಶತಮಾನಗಳ ಕಾಲ ನಮ್ಮನ್ನು ಆಳಿದ ದೋಚಿದ ಹಿಂಸಿಸಿದ ಶೋಷಿಸಿದ ಆಂಗ್ಲರ ವಿರುದ್ಧ ದ್ವೇಷ ಸಾಧಿಸಬೇಕೆಂಬುದಲ್ಲ. ಆದರೆ ಸಹಜವಾಗಿ ಯಾರ ಮೇಲೆ ಸಿಟ್ಟು ಬರುವ ಸಾಧ್ಯತೆ ಇದೆಯೋ ಅವರೊಡನೆ ಹಳೆಯ ಕಹಿಗಳನ್ನು ಹಿಂದೆ ಬಿಟ್ಟು ಸ್ನೇಹ ಹಸ್ತಚಾಚುವುದು ಸಾಧ್ಯ ಆಗಿದೆ. ಆದರೆ ಒಂದೇ ಭೂಪ್ರದೇಶವಾಗಿದ್ದು, “ಬ್ರಿಟಿಷ್ ರಾಜ್” ಎಂದು ಕರೆಸಿಕೊಳ್ಳುವ ಕರಾಳ ಇತಿಹಾಸಕ್ಕಿಂತ ಕಡಿಮೆ ಆಯಸ್ಸಿನ ವಿಭಜನೆ ಮಾತ್ರ ಭಾರತ ಪಾಕಿಸ್ತಾನ ಬಾಂಗ್ಲಾದೇಶಗಳನ್ನು ಇನ್ನೂ ಕಾಡುತ್ತಲೇ ಇದೆ.

ಅಖಂಡ ಭಾರತ ಎಂದು ಗುರುತಿಸಲ್ಪಡುತ್ತಿದ್ದ ದೇಶಗಳ ಮಟ್ಟಿಗಿನ ಸಧ್ಯದ ಅತಿ ದೊಡ್ಡ ವೈರುಧ್ಯ ಇದೇ ಇರಬೇಕು. ಈ ವೈರುಧ್ಯದ ಹೊತ್ತಲ್ಲೇ ಎಪ್ಪತ್ತೆರಡರ ಉತ್ಸವ ಸಮಾರಂಭ ಔಪಚಾರಿಕ ಶುಭಕೋರುವಿಕೆಗಳ ನಡುವೆಯೇ ವಿಭಜನೆಯ ಭೂತ ಅಲ್ಲೆಲ್ಲೋ ಪೆಟ್ಟಿಗೆಯಲ್ಲಿ ಬಂಧಿಯಾಗಿ ಯಾರ ನೆನಪಲ್ಲೂ ಬರದೇ ಮಾತಿಗೂ ಸಿಗದೇ ಸ್ಮರಣೆಯಲ್ಲೂ ಕಾಣದೆ ಮೋಕ್ಷ ಸಿಗದ ಪ್ರೇತದಂತೆ ಒದ್ದಾಡುತ್ತಿದೆ. ಒಂದೂವರೆ ಕೋಟಿಗಿಂತ ಹೆಚ್ಚು ಜನರು ವಲಸೆಹೋದ, ಸಾವಿರ ಅಲ್ಲ, ಲಕ್ಷ ಅಲ್ಲ, ಅಸಂಖ್ಯ ಜನರ ಜೀವ ಪ್ರಾಣ ಮಾನ ಆಸ್ತಿ ಬದುಕು ಹಾನಿಗೈದ, ತಲೆಮಾರುಗಳನ್ನು ಕಲಕುವ ಪಲ್ಲಟ ಸ್ಥಿತ್ಯಂತರಗಳಿಗೆ ಅಡಿಗಲ್ಲು ಹಾಕಿದ ಚಾರಿತ್ರಿಕ ಘಟನೆಯ ಬಗ್ಗೆ ಗಡಿಯ ಎರಡೂ ಬದಿಯ ದೇಶಗಳು ಎಷ್ಟು ತಿಳಿದುಕೊಂಡಿವೆ? ವಿಭಜನೆಯ ವಿಷಯ ಎಲ್ಲೂ ಮುಕ್ತವಾಗಿ ಚರ್ಚಿಸಲ್ಪಡದೆ ಯಾರಿಗೂ ನೆನಪಾಗದೆ ಮೂಲೆಗುಂಪಾಗಿರುವುದು ಮರವೆಯ ಸರಕಾಗಿರುವುದು ಅಕಸ್ಮಾತೋ ಅಥವಾ ಉದ್ದೇಶಪೂರ್ವಕವೋ? ವಿಭಜನೆ ಬರೇ ರಾಜಕೀಯ ರಣತಂತ್ರದ ದಾಳವಾಗಿಯಷ್ಟೇ ಬಳಸಲ್ಪಡುತ್ತಿರುವುದು ಯಾರ ಭಾಗ್ಯ? ಯಾರ ದೌರ್ಭಾಗ್ಯ?

ಚರಿತ್ರೆ ಎಂದರೆ ನಿಂತ ನೀರಲ್ಲ ಹರಿಯುವ ನದಿ ಎಂದು ಚರಿತ್ರಕಾರರು ಹೇಳುತ್ತಾರೆ. ಅದು ಯಾವುದೊ ಒಂದು ಕಾಲಘಟ್ಟದಲ್ಲಿ ಹೊಯ್ದು ಗಟ್ಟಿಗೊಳಿಸಿದ ಎರಕವೂ ಅಲ್ಲ. ಯಾವ ಸಮಯಕ್ಕೆ ಹಿಂದೆ ನೋಡಿದರೂ ಬಳುಕುತ್ತ ಜಿಗಿಯುತ್ತ ಹಾರುತ್ತ ಬದಲಾಗುತ್ತ ಸಾಗಿದ ತೊರೆ ಅದು. ಎಲ್ಲಿ ನಿಂತು ನೋಡಿದರೂ ಅದರ ಹಿಂದೆ ಇನ್ನಷ್ಟು ಇದೆ. ಚರಿತ್ರೆಯನ್ನು ಅತ್ಯಂತ ಪ್ರೀತಿಸುವ ಸಮಾಜಗಳು ದೇಶಗಳು ನಮ್ಮ ಕಣ್ಣೆದುರಿವೆ. ಅಂತಹವರಿಗೆ ಅವರವರ ನೆಲದ ಪ್ರಾಂತ್ಯದ ಕರಾಳ ಚರಿತ್ರೆಯೂ, ಭವ್ಯ ಇತಿಹಾಸವೂ, ಎರಡೂ ಕುತೂಹಲ ಹುಟ್ಟಿಸುತ್ತವೆ, ಪ್ರಿಯವಾಗುತ್ತವೆ.

ದೇಶ ವಿಭಜನೆಯ ಕಾಲಕ್ಕೆ ಎಳೆಯ ಹುಡುಗನಾಗಿದ್ದ ಭೀಮ್ ಗೆ ಧಾಳಿಯಿಂದ ತಪ್ಪಿಸಿಕೊಂಡು ಓಡಿಹೋಗಲು ಸಹಾಯ ಮಾಡಿದವನು ಒಬ್ಬಮುಸ್ಲಿಂ ಹುಡುಗ. ದೋಣಿಯಲ್ಲಿ ಭೀಮ್ ರ ಕುಟುಂಬವನ್ನು ಕೂರಿಸಿಕೊಂಡು ನದಿಯ ಅಂಚಿನಲ್ಲಿ ಸಪ್ಪಳವಾಗದಂತೆ, ಯಾರ ಕಣ್ಣಿಗೂ ಬೀಳದಂತೆ ಮೆತ್ತಗೆ ದೋಣಿ ಚಲಾಯಿಸುತ್ತಾ ಆ ಬಾಲಕ ಭೀಮ್ ನನ್ನು ಪಾರು ಮಾಡಿಸಿದ್ದ.

ಇತಿಹಾಸದ ನದಿಯಲ್ಲಿ ಉಪ್ಪು ನೀರೂ ಇದೆ, ಸಿಹಿ ನೀರೂ ಇದೆ, ಕಹಿ ರುಚಿಯೂ ಇದೆ ಮತ್ತು ಇತಿಹಾಸ ಪ್ರಿಯ ಆಂಗ್ಲರಂತವರು ಬಯಸುವುದು ಎಲ್ಲ ರುಚಿಗಳನ್ನೂ ಒಳಗೊಂಡ ನೀರನ್ನು. ಚರಿತ್ರೆಯನ್ನು ಆದರಿಸುವವರಿಗೆ ಆ ಚರಿತ್ರೆಯ ಎಲ್ಲ ಮುಖಗಳೂ ಸ್ಮರಣೀಯವೇ. ವಿಭಜನೆಯಂತಹ ದುರಂತ ಯುರೋಪಿಯನ್ ದೇಶಗಳಲ್ಲಿ ಆಗಿದ್ದರೆ ಇಂದಿಗೂ ಅದರ ಸ್ಮರಣೆ ಮಂಥನ ಚರ್ಚೆಗಳು ಎಷ್ಟು ಜೀವಂತವಾಗಿರುತ್ತಿದ್ದವು. ಅಂತಹ ದೇಶಗಳು ವಿಭಜನೆಯನ್ನೂ ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಿ, ಮೌನಾಚರಣೆ, ಕಥೆಗಳ ಮೆಲುಕು, ಊರೂರಲ್ಲಿ ಸ್ಮಾರಕ ಆಮೇಲೆ ಕೊನೆಯದಾಗಿ ತಮ್ಮ ಹೆಮ್ಮೆಯ ಪ್ರವಾಸೀ ಆಕರ್ಷಣೆಯೊಳಗೂ ಸೇರಿಸುತ್ತಿದ್ದರೇನೋ.

ಯೂರೋಪಿನ ಚರಿತ್ರೆಯ ಅಷ್ಟೇನೂ ಹಳತಲ್ಲದ ಪುಟಗಳನ್ನು ತಿರುವಿದರೆ ಬ್ರಿಟನ್ ಮತ್ತು ಜರ್ಮನಿಯ ನಡುವಿನ ದ್ವೇಷ ಎಷ್ಟಿತ್ತು ಎನ್ನುವುದು ನಿಚ್ಚಳ ಆಗುತ್ತದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಮುಗಿದ ಎರಡನೆಯ ಮಹಾಯುದ್ಧದ ತುಂಬೆಲ್ಲ ಇಂಗ್ಲಿಷ್-ಜರ್ಮನ್ ದ್ವೇಷ ಸೇಡಿನ ಕತೆಗಳೇ ಇವೆ. ಅವೆಲ್ಲ ಈಗ ಕತೆಗಳು ಅಷ್ಟೇ. ಬ್ರಿಟನ್ನಿನ ಮಕ್ಕಳೂ ಜರ್ಮನಿಯ ಮಕ್ಕಳು ಓದುವ ಕೇಳುವ ಕತೆಗಳು. ಆಂಗ್ಲ ಅಜ್ಜಂದಿರೂ ಜರ್ಮನ್ ತಾತಂದಿರೂ ಕಚೇರಿಗಳಲ್ಲಿ ಪಬ್ ಗಳಲ್ಲಿ ಒಬ್ಬರನ್ನೊಬ್ಬರು ಕಿಚಾಯಿಸುವುದಕ್ಕೆ ಬಳಸುವ ನುಡಿಬಾಣಗಳು. ಇವೆರಡೂ ದೇಶಗಳ ನಡುವೆ ವ್ಯಾಪಾರ ಸಹಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ, ಪ್ರಕ್ಷುಬ್ದ ನೀರು ತಿಳಿಗೊಂಡಿದೆ. ಈಗಲೂ ಕ್ರೀಡೆಯೊಂದರಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ಎದುರಾದರೆ ಆಯಾ ದೇಶದ ಅಭಿಮಾನಿಗಳು ವಿರುದ್ಧ ತಂಡಗಳ ಬಗ್ಗೆ ತಮಾಷೆ ಮಾಡುತ್ತಾ ಕಿಡಿಕಾರುತ್ತಾ ತಮ್ಮ ದೇಶವೇ ಗೆಲ್ಲಲಿ ಎಂದು ತೀವ್ರವಾಗಿ ಹಾರೈಸುತ್ತಾರೆ. ಹಾಗಂತ ಮನಸ್ಸಿನ ಮೂಲೆಯಲ್ಲಿ ಕಹಿ ಅನುಭವಗಳು ಇದ್ದರೂ ತಮ್ಮ ದೈನಂದಿನ ಬದುಕಿನಿಂದ ಹಿಡಿದು ದೇಶಗಳ ನಡುವಿನ ವಾಣಿಜ್ಯ ಸಂಬಂಧಗಳಿಗೆ ಹಳೆಯ ವೈಷಮ್ಯ ಅಡ್ಡಿ ಮಾಡುವುದಿಲ್ಲ. ಚಾರಿತ್ರಿಕ ನೆನಪುಗಳನ್ನು ಹಿಂದಿನ ವೈಷಮ್ಯಗಳನ್ನು ಮರೆಯದೆ ಹೊಂದಾಣಿಕೆಯ ಭವಿಷ್ಯಕ್ಕೆ ಒಗ್ಗಿಕೊಂಡಿದ್ದಾರೆ.

ಇತಿಹಾಸದ ಸಣ್ಣ ಸಣ್ಣ ಘಟನೆಗಳಿಗೂ ಸ್ಮರಣೆ ಮತ್ತು ಸ್ಮಾರಕಗಳನ್ನು ನಿರ್ಮಿಸಿದವರಲ್ಲವೇ ಯುರೋಪಿಯನ್ನರು? ಜರ್ಮನಿ ಇಬ್ಭಾಗವಾಗಿದ್ದ ಕಾಲದಲ್ಲಿ ನಡುವಿನ ಎತ್ತರದ ಗೋಡೆ ಹತ್ತಿ ದಾಟಲು ಯತ್ನಿಸಿ ಮಡಿದ ಪೂರ್ವಜರ್ಮನಿಗರಿಗೂ ಸ್ಮಾರಕಗಳಿವೆ, ಸ್ಮರಣೆ ನಡೆಯುತ್ತವೆ. ಬ್ರಿಟನ್ನಿನ ಊರೂರಿನಲ್ಲೂ ಕಲ್ಲು ಮಣ್ಣುಗಳು, ಸಣ್ಣ ದುರಂತದಲ್ಲಿ ಮಡಿದವರು, ಚಿಕ್ಕ ಕಾಳಗದಲ್ಲಿ ಹುತಾತ್ಮರಾದವರು, ದೊಡ್ಡ ದುರಂತದಲ್ಲಿ ಕರಗಿಹೋದವರು, ಸೇತುವೆ ಕಟ್ಟಿದವರು, ರೈಲುಹಳಿ ನಿರ್ಮಾತರು, ಸುರಂಗ ತೋಡಿದವರು… ಎಲ್ಲರೂ ಎಲ್ಲ ಕಾಲದಲ್ಲೂ ನೆನಪಿಸಲ್ಪಡುತ್ತಾರೆ. ಪ್ರತಿ ಊರಿನ ಚರಿತ್ರೆಯ ಬಗೆಗೂ ಯಾರೋ ಪುಸ್ತಕ ಬರೆದಿಟ್ಟಿದ್ದಾರೆ ಮತ್ತೆ ಅಂತಹ ಪುಸ್ತಕಗಳು ಆಯಾ ಊರಿನ ಗ್ರಂಥಾಲಯಗಳಲ್ಲಿ ಸಿಗುತ್ತವೆ. ಇಲ್ಲಿನ ಪುರೋಗಾಮಿಗಳು, ನಾಯಕರು, ಖಳರಾಯರು, ದುರ್ಘಟನೆಗಳು ಎಲ್ಲವೂ ಇತಿಹಾಸವಾಗಿ ನೆನಪಿಸಲ್ಪಡುತ್ತವೆ.

ನಾನು ಕೆಲಸ ಮಾಡುವ ಏರ್ಬಸ್ ವಿಮಾನ ಸಂಸ್ಥೆಯ ಆಂತರಿಕ ಜಾಲತಾಣದಲ್ಲಿ ಬ್ರಿಟನ್ನಿನ ಇತಿಹಾಸದ ಮೈಲಿಗಲ್ಲುಗಳ ನೆನಪು ಮಾಡಿಕೊಳ್ಳುವ ಸುದ್ದಿಗಳು ಸ್ಮರಣೆಗಳು ಪ್ರಕಟಗೊಳ್ಳುತ್ತಿರುತ್ತವೆ. ಬ್ರಿಟನ್ನಿನ ಸೇನಾ ವಿಮಾನಗಳ ಮೊದಲ ಮಹಿಳಾ ಪೈಲಟ್, ಮಹಾಯುಧ್ಧಗಳಲ್ಲಿ ಮುನ್ನೆಡಿಸಿದ ದಂಡನಾಯಕರು, ಯುದ್ಧಗಳಲ್ಲಿ ವಿರೋಚಿತವಾಗಿ ಹಾರಾಡಿದ ಹೋರಾಡಿದ ವಿಮಾನಗಳು, ಜೀವತೆತ್ತ ಸೈನಿಕರು, ದೇಶ ಕಟ್ಟಿದ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಬದುಕನ್ನು ಬದಲಿಸಿದ ಸಿಹಿ ಕಹಿ ಘಟನೆಗಳು ಎಲ್ಲವೂ ಕಾಲಕಾಲಕ್ಕೆ ಸ್ತುತಿಸಲ್ಪಡುತ್ತವೆ.

ಆಫ್ರಿಕಾದಿಂದ ಕಪ್ಪುಜನರನ್ನು ಹಡಗುಗಳಲ್ಲಿ ತುಂಬಿ ತಂದು ಅಮೆರಿಕಾಕ್ಕೆ ಸರಬರಾಜು ಮಾಡುವ ವ್ಯಾಪಾರ ಮಾಡುತ್ತಿದ್ದ ಇಂಗ್ಲೆಂಡ್ ನ ಬ್ರಿಸ್ಟಲ್ ಬಂದರು ನಗರದಲ್ಲಿ ಗುಲಾಮಗಿರಿಯ ಕಹಿನೆನಪುಗಳ ಸ್ಮರಣೆ ನಡೆಯುತ್ತದೆ. ಹಳೆಯ ಇತಿಹಾಸವೊಂದನ್ನು ನೆನಪು ಮಾಡಿಕೊಳ್ಳಲು ಆ ಬಗ್ಗೆ ಮುಕ್ತವಾಗಿ ಮಾತಾಡಲು ನೆನಪು ಸಿಹಿಯೋ ಕಹಿಯೋ ಇತಿಹಾಸ ಚಿನ್ನದ ಅಕ್ಷರದಲ್ಲಿ ಕೆತ್ತಿದ್ದೋ ರಕ್ತದಲ್ಲಿ ಗೀಚಿದ್ದೋ ಮುಖ್ಯ ಆಗುವುದಿಲ್ಲ. ಅಥವಾ ಕಹಿ ನೆನಪನ್ನು ಮತ್ತೆ ಮೆಲುಕು ಹಾಕುವುದು ಎಂದರೆ ಹಳೆಯ ಗಾಯವನ್ನು ಜೀವಂತವಾಗಿಸುವುದೂ ಅಲ್ಲ. ಅಥವಾ ನೆನಪಿಸಿದ ಮಾತ್ರಕ್ಕೆ ಪುರಾತನ ದ್ವೇಷಗಳು ಮರುಕಳಿಸುವುದೂ ಇಲ್ಲ; ಬದಲಾಗಿ ಮುಕ್ತ ಚರ್ಚೆಗಳಿಗೆ ಮನಸ್ಸನ್ನು ತಿಳಿಗೊಳಿಸುವವ ಸಾಮರ್ಥ್ಯ ಇದೆ, ಸಂಶಯಗಳನ್ನು ನಿವಾರಿಸುವ ಶಕ್ತಿ ಇದೆ ಎಂದು ಬ್ರಿಟನ್ನಿನ ಇತಿಹಾಸಪ್ರೇಮಿ ಜನರು ನಂಬುತ್ತಾರೆ.

ನಮ್ಮ ಚರಿತ್ರೆಯ ಸತ್ಯಗಳು ನಮಗೆ ತಿಳಿದಿರಬೇಕು. ಹಿಂದೆ ನಡೆದದ್ದು ಯಾಕೆ ನಡೆಯಿತು ಎನ್ನುವುದರಿಂದ ಹಿಡಿದು ಮುಂದೆ ಯಾಕೆ ಅಂತಹದೇ ನಡೆಯಬಾರದು ನಡೆಯಲು ಬಿಡಬಾರದು ಎನ್ನುವ ಪಾಠಗಳೂ ನಮ್ಮೊಳಗೇ ತಿಳಿಯಾಗುವುದು ಅಂತಹ ನೆನಕೆಗಳಿಂದಲೇ. ಊಹೆಗಳು ಸುಳ್ಳುಗಳು ಸಂಶಯಗಳೂ ದೂರಾಗಬೇಕು. ಅಖಂಡ ಭಾರದದಷ್ಟೇ ಯಾಕೆ ಇಡೀ ಜಗತ್ತಿನ ವಲಸೆಗಳ ವಿಭಜನೆಗಳ ಇತಿಹಾಸದ ಪುಸ್ತಕವೊಂದಿದ್ದರೆ ಅದರ ಮೊದಲ ಪುಟದಲ್ಲಿ ೧೯೪೭ರ ವಿಭಜನೆಯ ಉಲ್ಲೇಖ ಇದ್ದೀತು. ಇಷ್ಟು ಮಹತ್ವದ ಮೈಲಿಗಲ್ಲೊಂದು ದಕ್ಷಿಣ ಏಷಿಯಾದ ಪ್ರಾಂತ್ಯಗಳಲ್ಲಿ ಚರಿತ್ರೆಯ ಪರ್ವತವಾಗಿ ನಿಲ್ಲದಿರುವುದು ದಿವ್ಯ ನಿರ್ಲಕ್ಷ್ಯವೇ, ರಾಜಕೀಯ ಹುನ್ನಾರವೇ, ಬಲವಂತದ ಮೌನವೇ ಎನ್ನುವ ಪ್ರಶ್ನೆಗಳು ಇದೀಗ ಬ್ರಿಟನ್ನಿನಲ್ಲಿ ಮತ್ತೆ ಕೇಳಿಬರುತ್ತಿವೆ.

ಪ್ರಶ್ನೆಗಳನ್ನು ಕೇಳುವವರು ಕಾರಣಗಳನ್ನೂ ಊಹಿಸುತ್ತಿದ್ದರೆ, ತರ್ಕಿಸಿ ಪಟ್ಟಿ ಮಾಡುತ್ತಿದ್ದಾರೆ. ಅಖಂಡ ಭಾರತದ ವಿಭಜನೆಯ ಕಥೆಗಳ ಬಗ್ಗಿನ ಮೌನ ಗಡಿಯ ಎರಡೂ ಬದಿಯಲ್ಲಿಯೂ ಇದೆ. ಶಾಲೆ ಕಾಲೇಜುಗಳಲ್ಲಿ ವಿಭಜನೆಯ ಇತಿಹಾಸದ ಕಥೆ ಓದುವ ಅವಕಾಶ ಇಲ್ಲ. ಸಾಂಸ್ಕೃತಿಕ ಆಚರಣೆಗಳಿಂದ ಹಿಡಿದು ಸರಕಾರಿ ಸಂಸ್ಮರಣೆಗಳ ತನಕ ಎಲ್ಲಿಯೂ ಇಂತಹ ವಿಷಯಗಳಿಗೆ ವಿಶೇಷ ಜಾಗ ಇಲ್ಲ. ಸ್ವಾತಂತ್ರ್ಯ ದಿವಸದ ಸಂಭ್ರಮದ ಆಸುಪಾಸಿನ ದಿನಗಳ ದೂರದರ್ಶನ ಕಾರ್ಯಕ್ರಮಗಳ ಚರ್ಚೆಗಳಿಗೂ ಇದು ಬೇಕಾಗಿಲ್ಲ. ವಿಭಜನೆಯಲ್ಲಿ ಬದುಕಿ ಬಂದ ಅಜ್ಜಅಜ್ಜಿಯಂದಿರ ರೋಚಕ ಕಥೆಗಳನ್ನು ಸಾಕ್ಷ್ಯಚಿತ್ರವಾಗಿಸುವ ಆಸಕ್ತಿಯೂ ಇಲ್ಲ. ಚರಿತ್ರೆಯನ್ನು ತಪ್ಪಾಗಿ ಓದುವುದಕ್ಕಿಂತ ಓದದಿರುವುದೇ ಒಳ್ಳೆಯದು ಎಂದು ಕೆಲವರು ವಾದಿಸಬಹುದು. ವಿಷಯಗಳು ಪ್ರವಾಹೋಪಾದಿಯಲ್ಲಿ ನಮ್ಮನ್ನು ಸುತ್ತುವರಿಯುವ ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಯಾವುದು ಸರಿಯಾದ ಚರಿತ್ರೆ? ಯಾವುದು ಸುಳ್ಳು? ಯಾವುದು ಕಟ್ಟಿದ್ದು? ಯಾವುದು ಕಲ್ಪಿಸಿದ್ದು? ಅಂತ ಅಳೆಯುವುದು ತಿಳಿಯುವದು ಕಷ್ಟ ಕೂಡ ಹೌದು.

ಇಪ್ಪತ್ತನೆಯ ಶತಮಾನದ ಅತ್ಯಂತ ರಕ್ತಮಯ ಇತಿಹಾಸ ಎಂದು ಬಣ್ಣಿಸಲ್ಪಡುವ ವಿಭಜನೆಯನ್ನು ಭಯ ಸಂಶಯಗಳಿಂದ ನೋಡುವುದು, ಮರೆಯಲು ಯತ್ನಿಸವುದು, ಅಥವಾ ಇದು ಎಂದೋ ನಡೆದು ಹೋದ ಇಂದು ಮರೆಯಬಹುದಾದ ದುಃಸ್ವಪ್ನ ಎನ್ನುವ ಭಾವನೆಗಳು, ವಿಭಜನೆ ಎನ್ನುವ ಸಂಕೀರ್ಣ ಗೋಜಲು ಕಗ್ಗಂಟನ್ನು ಬಿಡಿಸಲು ಖಂಡಿತ ಸಹಾಯ ಮಾಡಲಿಕ್ಕಿಲ್ಲ. ವಿಭಜನೆಯ ಬಗ್ಗೆ ಗಡಿಯ ಎರಡೂ ದಿಕ್ಕುಗಳಲ್ಲಿ ಮಾತಾಡುವವರಿಲ್ಲದಿದ್ದರೂ ತಿಳಿದವರು ಬಹಳ ಕಡಿಮೆ ಇದ್ದರೂ ಪರಿಣಾಮಗಳು ಮಾತ್ರ ಬಂಧಿಸಿಟ್ಟ ಭೂತದಂತೆ ನಮ್ಮ ಆಸುಪಾಸಲ್ಲೆ ಬದುಕುತ್ತಿವೆ. ಆ ಕಾರಣಕ್ಕೆ ವಿಭಜನೆ ಮತ್ತೆ ಪ್ರಸ್ತುತವಾಗಬೇಕು. ಇದರಲ್ಲಿ ರಾಜಕೀಯ ಲಾಭ, ಅಸಡ್ಡೆ, ಪೂರ್ವಗ್ರಹಗಳನ್ನು ಬದಿಗಿಟ್ಟು ಮುಕ್ತ ಮಾತುಗಳು ಹರಿದಾಡಬೇಕು.

ಬ್ರಿಟನ್ನಿನ ಸಂಸತ್ತಿನಲ್ಲಿ ಅಖಂಡ ಭಾರತದ ವಿಭಜನೆಗೆ ಮಹತ್ವ ಸಿಕ್ಕರೂ ಸಿಗದಿದ್ದರೂ ದಕ್ಷಿಣ ಏಷ್ಯಾದ ದೇಶಗಳ ರಾಜಕೀಯ ಸಂಬಂಧಗಳಿಗೆ ಅಥವಾ ಆಯಾ ದೇಶದೊಳಗಿನ ಸಾಮರಸ್ಯಕ್ಕೆಹೊಸ ಬದಲಾವಣೆ ಏನೂ ಆಗುವುದಿಲ್ಲ. ಎಪ್ಪತ್ತೊಂದರ ಆಚರಣೆ ನಡೆದ ಈ ಹೊತ್ತಲ್ಲಿ ಕೆಲವು ಆಯ್ದ ತುಣುಕುಗಳಲ್ಲಷ್ಟೇ ತಿಳಿಯಲ್ಪಟ್ಟ ಬರೆಯಲ್ಪಟ್ಟ ಅಥವಾ ತಿಳಿಸಲ್ಪಟ್ಟ ವಿಭಜನೆ ಹೆಚ್ಚು ಹೆಚ್ಚು ಚರ್ಚಿತವಾಗಬೇಕು. ಒಂದು ನಿಟ್ಟಿನಲ್ಲಿ ನಾವು ಪೂರ್ತಿ ಮರೆತ ಮತ್ತು ಇನ್ನೊಂದು ನಿಟ್ಟಿನಲ್ಲಿ ಹೆಕ್ಕಿ ಆರಿಸಲ್ಪಟ್ಟ ಸತ್ಯಗಳ ಅರೆತಿಳುವಳಿಕೆಯ ಮೌಢ್ಯ ದೂರಾಗಬೇಕು. ಇನ್ನಾದರೂ ವಿಭಜನೆಯ ಬಗ್ಗೆ ತೆರೆದ ಮನಸ್ಸಿನ ವಿಚಾರ ವಿನಿಮಯ ಆಗಬೇಕು.

ವಿಭಜನೆಯ ಕಾಲದ ಸ್ನೇಹ ಪ್ರೀತಿ ತ್ಯಾಗಗಳ ಕತೆಗಳೂ ಇರಲಿ ಸಂಶಯ ಸೇಡುಗಳು ಹೊತ್ತಿಸಿದ ಬೆಂಕಿಯಲ್ಲಿ ಸುಟ್ಟ ಬದುಕುಗಳ ವಿಷಯವೂ ಬರಲಿ. ವಿಭಜನೆಯ ನೆನಪಲ್ಲಿ ವಿಭಜನೆಯಲ್ಲಿ ಮಡಿದವರ ಮೆಲುಕಲ್ಲಿ ಸ್ಮಾರಕ, ಸ್ಮರಣೆಯ ದಿನವೂ ನಿಗದಿಯಾಗಲಿ. ಹೊಸ ಹೊಸ ಆಚರಣೆ, ಹಬ್ಬ, ಜಯಂತಿಗಳು ಅನಪೇಕ್ಷಿತವಾಗಿ ಹುಟ್ಟುವ ಕಾಲದಲ್ಲಿ ವಿಭಜನೆಯ ಕರಾಳ ನೆನಪುಗಳಿಗೂ ಒಂದೂ ಸ್ಥಾನ ಸಿಗಲಿ. ವಿಭಜನೆಯ ಸ್ಮರಣೆಗೆಂದು ಇನ್ನೊಂದು ಆಚರಣೆಯ ಹೊರೆ ಹೊರಿಸಿ ರಜೆ ಘೋಷಿಸುವುದು ಬೇಡ. ವಲಸೆ ವಿಭಜನೆಗಳ ಕತೆಗಳು ಪಾಠಗಳು ಶಾಲೆ ಕಾಲೇಜು ಶಿಕ್ಷಣದಲ್ಲೂ ಸೇರಲಿ, ಈ ವಿಷಯದ ಬಗ್ಗೆ ಸಂಶೋಧನೆ ಮಾಡುವವರಿಗೆ ಸರಕಾರದ ಅನುದಾನವೂ ಸಿಗಲಿ.

ಚಾರಿತ್ರಿಕ ಸಂಗ್ರಹಾಲಯಗಳೂ ನಿರ್ಮಾಣವಾಗಲಿ ಮತ್ತೆ ಸಂಶೋಧಕರಿಗೆ ಸಿಕ್ಕಿದ ವಸ್ತು, ಚಿತ್ರ, ಕಥೆಗಳು ಅಲ್ಲಿ ಆಶ್ರಯ ಪಡೆಯಲಿ. ವಿಭಜನೆಯ ಪ್ರತ್ಯಕ್ಷದರ್ಶಿಗಳು, ಅವರ ಕೌಟುಂಬಿಕರು, ಆಪ್ತರು ಅನುಭವಗಳನ್ನು ತೆರೆದಿಡುವ ಕಾರ್ಯಕ್ರಮಗಳು ವರ್ಷದಲ್ಲೊಮ್ಮೆಯಾದರೂ ದೂರದರ್ಶನಗಳಲ್ಲಿ ಬಿತ್ತರಗೊಳ್ಳಲಿ. ವಿಭಜನೆಯ ಹಲವು ಸತ್ಯಾಸತ್ಯತೆಗಳನ್ನು ತಿಳಿಸುವ ಸಾಕ್ಷ್ಯಚಿತ್ರಗಳ ನಿರ್ಮಾಣದ ಸ್ಪರ್ಧೆಯೂ ನಡೆಯಲಿ, ಮೆಚ್ಚುಗೆ ಪಡೆದವಕ್ಕೆ ಸರಕಾರದಿಂದ ಅಥವಾ ಚಲನಚಿತ್ರ ಸಂಘಟನೆಗಳಿಂದ ಬಹುಮಾನವೂ ಸಿಗಲಿ. ಎಪ್ಪತ್ತೊಂದು ವರ್ಷಗಳ ಮೌನ, ಮರೆವು, ರಾಜಕೀಯ ಹಾಗು ಅಸಡ್ಡೆಗಳಿಂದ ಬಿಡಿಸಿಕೊಂಡು ವಿಭಜನೆಗೂ ಒಂದು ಸ್ವಾತಂತ್ರ್ಯ ಸಿಗಲಿ; ನಮ್ಮ ಭೂಭಾಗದಲ್ಲಿ ಘಟಿಸಿದ ಜಗತ್ತಿನ ಮಹಾನ್ ಚಾರಿತ್ರಿಕ ವೃತ್ತಾಂತವೊಂದಕ್ಕೆ ನೆನಪಿನೊಳಗೊಂದು ಸ್ಥಿರ ಸ್ಮಾರಕ ಸಿಗಲಿ.