ಅಪ್ಪನೊಂದಿಗೆ ಸ್ವಗತ

ಸದಾ ಆಶಾವಾದ ಚಿಮ್ಮಿಸುತ್ತಿದ್ದ
ನಿನ್ನ ಬೆರಗುಕಂಗಳಲ್ಲಿ ಆ ಕ್ಷಣ ಕಂಡ
ಅಗಾಧ ದಿಗಿಲು
ಸಾವಿನ ಮುನ್ಸೂಚನೆಯೆಂದು
ಗೊತ್ತಾಗಲೇಯಿಲ್ಲ ನನಗೆ

ವ್ಹೀಲ್ ಚೇರ್ ಮೇಲೆ ಕುಳಿತುಕೊಂಡು
ಆಸ್ಪತ್ರೆಯ ಒಳಹೋದ ನೀನು
ಸ್ಟ್ರೇಚರ್ ಮೇಲೆ ಮಲಗಿಕೊಂಡು
ಹೊರಬಂದೆಯಲ್ಲ ನಿಶ್ಚಲವಾಗಿ
ಆವತ್ತೇ ನನ್ನ ಆಸೆಗಳು ಮಸಣದ ಕಡೆ
ಹೆಜ್ಜೆ ಬೆಳೆಸಿದ್ದು
ನಿನ್ನ ಜೊತೆ ಸಮಾಧಿ ಸೇರಲು

ನೀನು ಹೋದ ಮೇಲೆ
ನನ್ನ ಕನಸರೆಕ್ಕೆಗಳ ಮೇಲೆಲ್ಲಾ
ವಿಷಾದದ ಮಂಜು
ಸುಟ್ಟುಹೋದ ಚೈತನ್ಯದಲ್ಲಿ
ಹೆಣದ ಕಮಟು
ಬದುಕಿಗೆ ಕೊಕ್ಕೆ ಬಿದ್ದು
ಚೂರುಚೂರಾಗಿ ನೆತ್ತರು ಜಿನುಗಿ
ವಾಸಿಯಾಗದಷ್ಟು ಗಾಯ

ಚುಕ್ಕಿಗಳ ಒಟ್ಟುಗೂಡಿಸಿ
ಬಿಳುಪಿನ ಮಲ್ಲಿಗೆ ಮಾಲೆ ಕಟ್ಟಿ
ಬದುಕನ್ನು ಶೃಂಗಾರಗೊಳಿಸಲು
ಹಂಬಲಿಸುತ್ತಿದ್ದ ನೀನು
ಅದ್ಯಾವ ದಿವ್ಯಲೋಕ ಹುಡುಕಿಕೊಂಡು
ಹೊರಟುಹೋದೆ ಹೇಳದೇ ಕೇಳದೆ!
ನೀ ಹೋದ ಕಾರಣಕ್ಕೆ
ಹಗಲು ರಾತ್ರಿ ಪರಿತಪಿಸುತ್ತಿದ್ದೇನೆ
ಆವರಿಸಿ, ಕಂಗೆಡಿಸಿ, ಕೊಲ್ಲುತಿರುವ
ಖಿನ್ನತೆಗಳೆಂಬ
ಚಕ್ರಸುಳಿಗಳನ್ನು ದಾಟಿಕೊಂಡು
ಬದುಕಿನ ದಡ ಸೇರಲು

ನಿನ್ನಿಷ್ಟದ ಪುಸ್ತಕ, ನಿನ್ನಿಷ್ಟದ ಹಾಡು
ನಿನ್ನಿಷ್ಟದ ಮೌನ ನನಗೂ ಸಮ್ಮತವೀಗ
ನಿನ್ನ ನಿರೀಕ್ಷೆಯ ಪುಟ್ಟ ಪ್ರಣತಿ
ಎದೆಯಲ್ಲಿರಿಸಿಕೊಂಡು
ಪ್ರತಿ ಸಂಜೆ ನೀನು ಕೂರುತ್ತಿದ್ದ ಅಂಗಳದಲ್ಲಿ
ನೀನಿಲ್ಲದ ಅನಾಥ ಅಂಗಳದಲ್ಲಿ
ಅಂಗಾತ ಮಲಗಿಕೊಂಡಿರುವ ಏಕಾಂಗಿ ನಾನು
ದಿಟ್ಟಿಸುತ್ತಿದ್ದೇನೆ ಖಾಲಿ ಆಗಸವನ್ನು
ಹುಡುಕಲು ನಿನ್ನನ್ನು

ಚುಕ್ಕಿಗಳಿಗೂ ಚೈತನ್ಯ ಹಂಚುತ್ತಿರುವ
ನಿನಗೆಲ್ಲಿ ಬಿಡುವಿದೆ ನನ್ನ ನೋಡಲು

 

ಲಕ್ಷ್ಮಿಕಾಂತ ಮಿರಜಕರ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವದವರು.
ʼಚಿಲುಮೆʼ ಇವರ ಪ್ರಕಟಿತ ಕೃತಿ.. “ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಅಚ್ಚಿನಲ್ಲಿದೆ.
ಸದ್ಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.