ಇದು ಖಿನ್ನತೆಯೋ ಆನಂದವೋ ದುಗುಡವೋ ನೀರವತೆಯೋ ಒಂದೂ ಅರಿವಾಗುತ್ತಿಲ್ಲ. ಹಿಮಾಲಯದ ತಪ್ಪಲಿನ ಸುರು ಮತ್ತು ಜಂಸ್ಕಾರ್ ಕಣಿವೆಗಳಲ್ಲಿ ಶರತ್ಕಾಲದಲ್ಲಿ ಹತ್ತು ದಿನ ಸುತ್ತು ಹಾಕಿ ವಾಪಾಸು ಬಂದು ಇಲ್ಲಿ ಮಡಿಕೇರಿಯಲ್ಲಿ ಸುಮ್ಮನೆ ಮೂಢನಂತೆ ಕುಳಿತಿರುವೆ.ಇಲ್ಲಿನ ಪರಿಚಿತ ಮುಖಗಳು ಅಪರಿಚಿವಾಗಿ ಕಾಣಿಸುತ್ತಿವೆ. ಗೊತ್ತಿರುವ ದಾರಿಗಳಲ್ಲೇ ದಾರಿತಪ್ಪಿ ಕಕ್ಕಾವಿಕ್ಕಿಯಾಗುತ್ತಿದ್ದೇನೆ.

ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲಡಾಕ್ ಪ್ರಾಂತ್ಯದ ನಡುವೆ ಕಾರ್ಗಿಲ್ ಎಂಬ ಯುದ್ದಭೂಮಿ ಬರುತ್ತದೆ. ಕಾರ್ಗಿಲ್ ಪಟ್ಟಣದ ಆಗ್ನೇಯ ದಿಕ್ಕಿನಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಈ ಹಿಮಬೆಟ್ಟಗಳ ನಡುವಿನ ಮರುಭೂಮಿಯಂತಿರುವ ಕಣಿವೆಯಲ್ಲಿ ಶರತ್ಕಾಲ ಶುರುವಾಗುವ ಮೊದಲು ಒಂದೆರೆಡು ಸುತ್ತು ಮಳೆ ಸುರಿಯುತ್ತದೆ.ಅದೇ ಇಲ್ಲಿನ ಮಳೆಗಾಲ!

ವಸಂತದಲ್ಲಿ ಅರಳಿದ ಹೂಗಳು, ಗ್ರೀಷ್ಮದ ಕುರುಚಲು ಹಸಿರು, ಮತ್ತು ಪರ್ವತಗಳ ಇಳಿಜಾರಿನಲ್ಲಿ ಶಿಲೆಗಳ ಮೇಲೆ ಹರಡಿರುವ ಹಳದಿ ಹುಲ್ಲು ಎಲ್ಲವೂ ಈ ಮಳೆಗೆ ಒಂದಿಷ್ಟು ಮುದುಡಿ, ಒಂದಿಷ್ಟು ಕೊಳೆತು ಕುಂಕುಮ ಮಿಶ್ರಿತ ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿರುತ್ತದೆ.

ಹಿಮಗಡ್ಡೆಗಳು ಕರಗಿ ಹರಿಯುವ ನೀರಿನ ಬಣ್ಣ ತಿಳಿಹಸಿರು.ತಣ್ಣಗೆ ಉರಿಯುವ ಬಿಸಿಲಿಗೆ ಹೊಳೆಯುವ ಬೆಟ್ಟಗಳ ಬಣ್ಣ ರಂಜಕ.ಆಕಾಶದ ಬಣ್ಣ ಕಡು ನೀಲಿ. ಹಿಮದ ಮುಖವಾಡ ತೊಟ್ಟಿರುವ ಮಲೆಶೃಂಗಗಳ ಕೋಡಿಗೆ ಸಿಕ್ಕಿಹಾಕಿಕೊಂಡಿರುವ ತೆಳುಮೋಡಗಳು ಬಿಳಿಗಿಂತ ಬೆಳ್ಳಗೆ.
ಶರತ್ಕಾಲದಲ್ಲಿ ಈ ಪರ್ವತಗಳ ಕೆಳಗೆ ಅಳ್ಳೆದೆಯ ಮನಸಿನವರು ಒಂಟಿಯಾಗಿ ಓಡಾಡಬಾರದೆಂದು ಯಾರೋ ಎಚ್ಚರಿಸಿದ್ದರು. ಆದರೂ ಎಲ್ಲವನ್ನೂ ಬಿಟ್ಟು ಒಬ್ಬನೇ ಬಂದಿದ್ದೆ.ಬಂದು ನೋಡಿದರೆ ಅದು ನಿಜವೆನ್ನಿಸಿತ್ತು.

ಹಳದಿ ಹಸಿರು ಮತ್ತು ಕೆಂಪಿನ ನಡುವಿರುವ ಅಸಂಖ್ಯಾತ ವರ್ಣಜಾಲಗಳು.ಸರಿದಷ್ಟೂ ಸರಿದಷ್ಟೂ ಮುಗಿಯದ ಹಿಮಪರ್ವತಗಳ ಸಾಲು. ಮನುಷ್ಯರೇ ಕಾಣದ ಉದ್ದನೆಯ ಹಾದಿ.

ಇನ್ನು ಒಂದು ತಿಂಗಳು ಕಳೆದರೆ ಇನ್ನು ಮುಂದಿನ ನಾಲ್ಕೈದು ಮಾಸಗಳ ಕಾಲ ಈ ಹಾದಿಯ ತುಂಬ ಆಳೆತ್ತರದ ಹಿಮರಾಶಿ ತುಂಬಿರುತ್ತದೆ.ಈ ಹಿಮಾವೃತ ಚಳಿಗಾಲಕ್ಕಾಗಿ ಇಲ್ಲಿನ ಜನ ಧಾನ್ಯವನ್ನೂ, ಮೇವನ್ನೂ, ಉರುವಲನ್ನೂ, ಉಡುಪನ್ನೂ ಸಂಗ್ರಹಿಸಿಡುತ್ತಿದ್ದಾರೆ.ಮುಂದಿನ ವಸಂತದ ತನಕ ಇಲ್ಲಿನವರು ಹಿಮ, ಪರ್ವತ ಮತ್ತು ದೇವರುಗಳ ಜೊತೆ ಏಕಾಂಗಿಯಾಗಿರುತ್ತಾರೆ. ಹಾಗಾಗಿಯೇ ಇವರು ಅಪರಿಚಿತರೊಡನೆ ಹೆಚ್ಚಾಗಿ ಮಾತನಾಡುವುದಿಲ್ಲ.

ಇವರ ಮಾತಿನಲ್ಲಿ ಅಹಂಕಾರವೋ, ಅಶ್ಲೀಲತೆಯೋ ಲವಲೇಶವೂ ಇರುವುದಿಲ್ಲ.ಒಬ್ಬನ ಒಂದು ನಗುವಿನಲ್ಲಿ ಎಷ್ಟೊಂದು ಚಹರೆಗಳ ಏರಿಳಿತ.
ಒಂದು ಸಣ್ಣಮಾತಿನಲ್ಲಿ ಎಷ್ಟೆಲ್ಲ ಧ್ವನಿವಿಸ್ತಾರ.

ಒಂದು ಇರುಳು ಎಚ್ಚರಾಗಿ ನೋಡಿದರೆ ಆಕಾಶ ಬೆಳ್ಳಗೆ ಹೊಳೆಯುತ್ತಿತ್ತು. ಕಿಟಕಿಯಿಂದ ಕಾಣುತ್ತಿರುವ ಹಿಮಶಿಖರದ ತುದಿಯಲ್ಲಿ ಹೆಸರು ಗೊತ್ತಿಲ್ಲದ ಒಂದು ನಕ್ಷತ್ರ ಒಂಟಿಯಾಗಿ ಮಿನುಗುತ್ತಿತ್ತು. ಅದಕ್ಕೂ ಮೇಲೆ ಬೆಳಗುತ್ತಿರುವ ತುಂಡುಚಂದ್ರ.ಅವೆರಡರ ನಡುವೆ ಸಿಲುಕಿಕೊಂಡಿರುವ ಚಾದರದ ಹಾಗಿರುವ ತುಂಡುಮೋಡ. ಯಾರೂ ಇಲ್ಲದ ಆ ತಾಣದಲ್ಲಿ ಆಕಾಶಕಾಯಗಳ ಜೊತೆ ಬೆಳಕ ಸಂಭಾಷಣೆ ನಡೆಸುತ್ತಿರುವ ಹಿಮಪರ್ವತ.ನಾನು ಯಾಕೋ ಕಾಣಬಾರದ್ದ ಕಂಡಹಾಗೆ ಭಯಬೀತನಾದೆ.

ಈ ಮನುಷ್ಯನೆಂಬವನು ಉಂಟಾಗುವುದಕ್ಕೂ ಮೊದಲು, ಈ ಪರ್ವತಗಳು ಉಂಟಾಗುವುದಕ್ಕೂ ಮೊದಲು ಇದ್ದದ್ದು ಬರೀ ಬೆಳಕು. ಅದು ಕೇವಲ ಬೆಳಕಲ್ಲ. ಅದೊಂದು ತರಹದ ಒಂಟಿತನ.

ಬೆಳಕಿನ ಈ ಒಂಟಿತನ ನೀಗಿಸಿಕೊಳ್ಳಲೋ ಎಂಬಂತೆ ಉಂಟಾದ ಹಿಮಶಿಖರಗಳು, ಮರುಭೂಮಿಗಳು, ಹಸಿರು ಹುಲ್ಲುಗಾವಲುಗಳು ಮತ್ತು ಕೊನೆಗೆ ಉಂಟಾದ ಮನುಷ್ಯ ಸಂತತಿ. ಒಂದು ಸಣ್ಣ ಸ್ವಪ್ನದಂತೆ ಕಳೆದು ಹೋಗುವ ಮನುಷ್ಯನ ಆಯಸ್ಸು. ಈ ಆಯಸ್ಸಿನ ನಡುಗಾಲದಲ್ಲಿ ತಿರುಗಾಡಿಕೊಂಡು ಹೋಗಲು ಬಂದವನು ಪರ್ವತವೊಂದರ ನಕ್ಷತ್ರ ಪ್ರಣಯವನ್ನು ಕದ್ದು ವೀಕ್ಷಿಸಿ ಹೆದರಿಕೊಂಡುಬಿಟ್ಟಿದ್ದೆ.ಹೆದರಿದ್ದಕ್ಕೆ ನಗುವೂ ಬರುತ್ತಿತ್ತು. ಸ್ವಲ್ಪಹೊತ್ತಲ್ಲೇ ಭೂಮಿಯೇ ಬಿರಿದುಹೋಗುವಂತೆ ಸದ್ದುಮಾಡುತ್ತಾ ಗಾಳಿಬೀಸತೊಡಗಿ ಆ ಪರ್ವತವೂ ಆ ನಕ್ಷತ್ರವೂ ಆ ಮೋಡವೂ ಆ ಚಂದ್ರನೂ ಕಾವಳದಲ್ಲಿ ಕಾಣೆಯಾದವು.

ನಂತರ ಜೋರಾಗಿ ಮಳೆ ಸುರಿಯಲು ತೊಡಗಿತು.ಬೆಳಗೆ ಎದ್ದುನೋಡಿದರೆ ಬಿಸಿಲು ಆಗಲೇ ಜೋರಾಗಿ ಹೊಳೆಯುತ್ತಿತ್ತು.
ಹುಲ್ಲುಗಾವಲಿನಲ್ಲಿ ಮಿನುಗುತ್ತಿರುವ ಮಳೆಯ ನೀರು.

ನಾನು ಉಳಕೊಂಡಿದ್ದ ಮನೆಯ ಯಜಮಾನನೂ, ಮಡದಿಯೂ, ಮಕ್ಕಳೂ ಒಗೆದು ಒಣಗಿಸಿ ಮಡಚಿಟ್ಟಿದ್ದ ಹಬ್ಬದ ದಿರಿಸುಗಳನ್ನು ದರಿಸಿ ಹೊರಡಲು ಅಣಿಯಾಗುತ್ತಿದ್ದರು. ಈ ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಸರೋವರವೊಂದರ ನಡುವೆ ಹೊಸದಾಗಿ ನಿರ್ಮಿಸಲಾಗಿದ್ದ ಬೌದ್ಧಗುರು ಪದ್ಮಸಂಭವನ ವಿಗ್ರಹದ ಉದ್ಘಾಟನೆಗೆ ಅವರೆಲ್ಲ ಅಣಿಯಾಗುತ್ತಿದ್ದರು. ಗುರು ಪದ್ಮಸಂಭವನನ್ನು ಇಲ್ಲಿನ ಬೌದ್ಧರು ಎರಡನೇ ಬುದ್ಧನೆಂದೇ ಪೂಜಿಸುವರು.

ಆಗಿನ ವಾಯುವ್ಯ ಭಾರತದ ಆದರೆ ಈಗ ಪಾಕಿಸ್ತಾನದಲ್ಲಿರುವ ಸ್ವಾತ್ ಕಣಿವೆಯಲ್ಲಿ ನೆಲೆಸಿದ್ದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪದ್ಮಸಂಭವನ ತೇಜಸ್ಸು ಕೊನೆಯತನಕವೂ ಎಂಟರ ಹರೆಯದ ಬಾಲಕನ ಮುಖದ ಹೊಳಪಿನಂತೆ ಇತ್ತು ಎಂದು ಗ್ರಂಥಗಳು ಹೇಳುತ್ತವೆ. ಈತ ಹಿಮಾಚಲದ ರಾಜಕುಮಾರಿ ಮಂದಾರಳಿಗೆ ತಂತ್ರವಿದ್ಯೆಯನ್ನು ಕಲಿಸಿದನೆಂದೂ ಇದರಿಂದ ರೊಚ್ಚಿಗೆದ್ದ ಮಂದಾರಳ ತಂದೆಯಾಗಿದ್ದ ರಾಜ ಅವರಿಬ್ಬರನ್ನು ಸುಡಲು ನೋಡಿದನೆಂದೂ ಆದರೆ ಅವರಿಬ್ಬರೂ ಸುಟ್ಟುಕರಕಲಾಗದೆ ಬೆಂಕಿಯೊಳಗಡೆ ಯೋಗಭಂಗಿಯಲ್ಲಿ ಹೊಳೆಯುತ್ತಾ ಕುಳಿತಿದ್ದರೆಂದೂ ಇದನ್ನು ಕಂಡು ಕಂಗಾಲಾದ ಆ ರಾಜ ಅವರಿಬ್ಬರಿಗೆ ಕೈಮುಗಿದು ರಾಜ್ಯವನ್ನೊಪ್ಪಿಸಲು ನೋಡಿದನೆಂದೂ ಆದರೆ ಅವರಿಬ್ಬರು ಅದನ್ನು ಒಪ್ಪದೆ ನೇಪಾಳದ ಗುಹೆಯೊಂದರಲ್ಲಿ ಇನ್ನಷ್ಟು ತಪಸ್ಸಿಗೆ ಕುಳಿತರೆಂದೂ ಗ್ರಂಥಗಳು ಹೇಳುತ್ತವೆ.

ನೇಪಾಳದ ಆ ಗುಹೆಯಲ್ಲಿ ಕುಳಿತಿದ್ದ ಪದ್ಮಸಂಭವನನ್ನು ಈ ಊರಿನ ಆಗಿನ ಕಾಲದ ರಾಜ ಈ ಸರೋವರಕ್ಕೆ ಆಹ್ವಾನಿಸಿದ್ದನಂತೆ. ಯಾಕೆಂದರೆ ಈ ಸರೋವರದಲ್ಲಿ ರಕ್ಕಸರೂ ಡಾಕಿಣಿಯರೂ ತುಂಬಿಕೊಂಡು ಈ ಊರಿನವರಿಗೆ ಪಡಬಾರದ ಕಷ್ಟಗಳನ್ನು ಕೊಡುತ್ತಿದ್ದುವಂತೆ. ಅಲ್ಲಿಗೆ ಆಗಮಿಸಿದ ಪದ್ಮಸಂಭವ ತನ್ನ ಯೋಗನೃತ್ಯದಿಂದ ಈ ರಕ್ಕಸ ಡಾಕಿಣಿಯರ ಮನಪರಿವರ್ತಿಸಿ ಅವರನ್ನೂ ಒಳ್ಳೆಯವರನ್ನಾಗಿ ಮಾಡಿ ಈ ಸರೋವರದ ಸುತ್ತಮುತ್ತ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಿದನಂತೆ.

ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿ ನಡೆದ ಈ ಸಂಭವವನ್ನು ಇದೀಗ ನೆನ್ನೆತಾನೇ ಆಯಿತೇನೋ ಎನ್ನುವ ಹಾಗೆ ವಿವರಿಸುತ್ತಾ ಆ ಮನೆಯ ಯಜಮಾನ ಲಗುಬಗೆಯಿಂದ ಹೊರಡಲು ತಯಾರಾಗುತ್ತಿದ್ದ. ಇರುಳೆಲ್ಲ ನಕ್ಷತ್ರ ಹಿಮಪರ್ವತಗಳ ಕನಸು ಕಂಡಿದ್ದ ನಾನೂ ಹಾಗೇ ಭಾವಿಸಿಕೊಂಡು ಅವರೊಡನೆ ಹೊರಡಲು ಅಣಿಯಾಗುತ್ತಿದ್ದೆ. ಶರತ್ಕಾಲದ ಬಿಸಿಲಿನ ಉರಿಗೆ ಸುಟ್ಟು ಕೊಂಚ ಕರಕಲಾಗಿರುವ ಅವರ ಮುಖದ ನಸುಗೆಂಪು ಚರ್ಮ.ಇನ್ನು ಚಳಿಗಾಲದ ಹಿಮಪಾತ ಶುರುವಾಗುತ್ತಿದ್ದಂತೆ ಮುಖದ ಚರ್ಮ ಬಾಡಿಹೋಗಬಾರದೆಂದು ಇಲ್ಲಿನ ಸ್ತ್ರೀಯರು ಕುರಿಯ ತುಪ್ಪಳವನ್ನು ಮೂರು ತಿಂಗಳುಗಳ ಕಾಲ ಮುಖಕ್ಕೆ ಅಂಟಿಸಿಕೊಳ್ಳುತ್ತಾರಂತೆ.

‘ಆಗ ನೀವು ಬಂದು ನೋಡಬೇಕು. ಆಗ ಇಲ್ಲಿನ ಸ್ತ್ರೀಯರಿಗೆಲ್ಲ ಮುಖದ ಮೇಲೆ ನಿಮ್ಮ ಹಾಗೇ ಬೆಳ್ಳಗಿನ ಗಡ್ಡ ಬೆಳೆದಿರುತ್ತದೆ’ ಎಂದು ಯಜಮಾನ ಹಿಂದಿನ ಇರುಳು ಪಕಪಕ ನಕ್ಕಿದ್ದ.
ಹೆಂಗಸರು ನಾಚಿಕೊಂಡಿದ್ದರು.

ದಾರಿಯಲ್ಲಿ ಸಾಗುತ್ತಿದ್ದ ಪಿಕ್ ಅಪ್ ವ್ಯಾನೊಂದಕ್ಕೆ ಕೈ ಒಡ್ಡಿ ತಡೆದು ನಿಲ್ಲಿಸಿ ಅದರೊಳಕ್ಕೆ ಆಗಲೇ ತುಂಬಿಕೊಂಡಿದ್ದ ನೂರಾರು ಭಕ್ತಜನರ ಕಾಲಬುಡದಲ್ಲಿ ಕುಳಿತುಕೊಂಡು ನಾನೂ ಪದ್ಮಸಂಭವನ ಪ್ರತಿಮೆ ನೋಡಲು ಅವರೊಡನೆ ಹೊರಟಿದ್ದೆ. ಅವರೆಲ್ಲರ ದಿರಿಸುಗಳ ನಡುವಿಂದ ಕಾಣುತ್ತಿದ್ದ ನೀಲ ಆಕಾಶ ಮತ್ತು ಹಿಮಾವೃತ ಗಿರಿಶಿಖರಗಳು.ಸಾವಿರಾರು ವರ್ಷಗಳ ಹಿಂದೆ ರಕ್ಕಸರನ್ನು ಡಾಕಿಣಿಯರನ್ನೂ ಯೋಗನೃತ್ಯದಿಂದ ಮಣಿಸಿದ ಪದ್ಮಸಂಭವ ಈ ದಾರಿಯಲ್ಲಿ ಸಂಚರಿಸಿದಾಗ ಹೇಗೆ ಇತ್ತೋ ಹಾಗೇ ಈಗಲೂ ಇರುವ ಈ ಮುಖಗಳ ಸುಕ್ಕುಗಳು ಮತ್ತು ನಗು.

ಎಳೆಯ ಪ್ರಾಯದ ತರುಣ ತರುಣಿಯರು ಡಾಕಿಣಿಯರನ್ನೂ ರಕ್ಕಸರನ್ನೂ ದೇವತೆಯರನ್ನೂ ಮರೆತು ಆ ಪುಟ್ಟ ವ್ಯಾನಿನೊಳಗೆ ಸಿಕ್ಕಿದ ಆ ಸಣ್ಣ ಅವಕಾಶದಲ್ಲೇ ಕಣ್ಣಲ್ಲೇ ಪ್ರೇಮ ಸಂಭಾಷಣೆಯಲ್ಲಿ ತೊಡಗಿದ್ದರು.

ಬಹುಶಃ ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿ ಈ ಪ್ರದೇಶಕ್ಕೆ ಪದ್ಮಸಂಭವ ಬಂದ ಕಾಲದಲ್ಲೂ ಹಲವಷ್ಟು ತರುಣತರುಣಿಯರು ಯಾರಿಗೂ ಕ್ಯಾರೇ ಅನ್ನದೆ ಪ್ರೇಮಸಲ್ಲಾಪದಲ್ಲಿ ಮುಳುಗಿದ್ದಿರಬಹುದು ಅಂದುಕೊಳ್ಳುತ್ತಾ ನಿಂತುಕೊಂಡ ವ್ಯಾನಿನಿಂದ ಇಳಿದೆ. ನೋಡಿದರೆ ಪದ್ಮಸಂಭವನ ಹಿತ್ತಾಳೆಯ ಮೂರ್ತಿ ಅದಾಗಲೇ ಸರೋವರದ ನಡುವೆ ಬಿಸಿಲಿಗೆ ಹೊಳೆಯುತ್ತಿತ್ತು.

ಹಿಮಕಣಿವೆಯ ಧರ್ಮಕಾರಣಗಳು

ಕಾಶ್ಮೀರದ ಲಡಾಕ್ ಪ್ರಾಂತ್ಯದಲ್ಲಿರುವ ಕಾರ್ಗಿಲ್ ಪಟ್ಟಣದಿಂದ ಸುಮಾರು ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಜಂಸ್ಕಾರ್ ಕಣಿವೆಯ ಪದುಮ್ ಪಟ್ಟಣಕ್ಕೆ ತೆರಳಲು ಟ್ಯಾಕ್ಸಿಗೆ ಸುಮಾರು ಹತ್ತುಸಾವಿರ ರೂಪಾಯಿ ತೆರಬೇಕಾಗುತ್ತದೆ.ಇದು ಅಲ್ಲಿನ ಟ್ಯಾಕ್ಸಿ ಚಾಲಕರ ಯೂನಿಯನ್ ನಿಗದಿಪಡಿಸಿರುವ ಮೊತ್ತ.

ಭಾರತ ದೇಶದ ಅತ್ಯಂತ ದುರ್ಗಮವೂ ಶೀತಲವೂ ಕೆಲವೊಮ್ಮೆ ಮಾರಣಾಂತಿಕವೂ ಆಗಿರುವ ಈ ಸ್ವರ್ಗಸದೃಶ ಕಣಿವೆಯನ್ನು ಜೀವನದಲ್ಲಿ ಒಮ್ಮೆಯಾದರೂ ಕಾಣಲು ಎಷ್ಟು ಕಾಸು ಬೇಕಾದರೂ ಸುರಿಯಲು ತಯಾರಿರುವ ಪುಣ್ಯವಂತ ಸ್ತ್ರೀಪುರುಷರಿದ್ದಾರೆ.

ಸ್ವರ್ಗವನ್ನೂ ಕಾಣಬೇಕು ಆದರೆ ಹೆಚ್ಚು ಕಾಸೂ ಖರ್ಚಾಗಬಾರದು, ಅಂತಹ ಕಷ್ಟವನ್ನೂ ಪಡಬಾರದು ಎಂದು ಸುತ್ತಾಡುವ ನನ್ನಂತಹ ಸುಖಪುರುಷರೂ ಇರುತ್ತಾರೆ. ಹೇಗಾದರೂ ಸುತ್ತಿಬರಲಿ; ಬಂದ ನಂತರ ಎಲ್ಲರೂ ಒಂದು ತರಹದ ಹುಚ್ಚರಾಗಿ ಹೋಗುತ್ತಾರೆ. ಹಿಮಬೆಟ್ಟಗಳ ನಡುವಿನ ಈ ಹಳದಿ ಕಣಿವೆಯ ಮೋಹವೇ ಒಂದು ತರಹದ ಸರ್ಪಚುಂಬನದ ಹಾಗೆ.
ಮತ್ತೆ ಮತ್ತೆ ಬೇಕೆನಿಸುವ ಸಾವಿನಂತಹ ಸುಖ.

ನಾನು ಕಾರ್ಗಿಲ್ ನಗರದಿಂದ ಪದುಂ ಪಟ್ಟಣಕ್ಕೆ ಕಡಿಮೆ ಖರ್ಚಿನಲ್ಲಿ ಹೋಗುವ ಉಪಾಯವನ್ನು ಹುಡುಕುತ್ತಿದ್ದೆ.ಕಾರ್ಗಿಲ್ ನಲ್ಲಿ ಇರುವ ಬಹುತೇಕರು ಪುರ್ಕಿ ಎಂಬುದಾಗಿ ಕರೆಯಲ್ಪಡುವ ಭಾಷೆಯನ್ನಾಡುವ ಶಿಯಾ ಮುಸಲ್ಮಾನರು. ಇವರಲ್ಲಿ ಬಹುತೇಕರು ಒಂದುಕಾಲದಲ್ಲಿ ಟಿಬೆಟಿನ ಕಡೆಯಿಂದ ಬಂದ ಬೌದ್ಧ ಗುರುವೊಬ್ಬನ ಪ್ರಭಾವದಿಂದಾಗಿ ಬುದ್ಧ ಧರ್ಮವನ್ನು ಸ್ವೀಕರಿಸಿದವರು. ಆನಂತರ ಪರ್ಷಿಯಾದ ಕಡೆಯಿಂದ ಬಂದ ಶಿಯಾ ಸಂತನೊಬ್ಬ ಇವರನ್ನು ಮುಸಲ್ಮಾನರನ್ನಾಗಿ ಮಾಡಿದ.

ಒಂದು ಕಾಲದಲ್ಲಿ ಬೌದ್ಧರಾಗಿದ್ದ ತಾವು ಶಿಯಾಗಳಾದ ಕಥೆಯನ್ನು ಕಾರ್ಗಿಲ್ ಪಟ್ಟಣದಲ್ಲಿ ಮಾತಿಗೆ ಸಿಕ್ಕಿದ್ದ ನಿವೃತ್ತ ಸರಕಾರೀ ನೌಕರನೊಬ್ಬ ತಮಾಷೆಯಾಗಿ ಹೇಳಿದ್ದ. ಆ ಊರಲ್ಲಿ ದೇವರಂತೆ ನೆಲೆಸಿದ್ದ ಬೌದ್ಧ ಗುರುವಿಗೂ ಮತ್ತು ಅಲ್ಲಿಗೆ ಪರ್ಷಿಯಾದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಶಿಯಾ ಸಂತನಿಗೂ ತಮ್ಮಲ್ಲಿ ಯಾರು ಹೆಚ್ಚು ಶಕ್ತಿಶಾಲಿಗಳು ಎಂದು ತೋರಿಸಿಕೊಳ್ಳುವ ಹುಚ್ಚು ಹಠ ಬಂತಂತೆ. ಸರಿ. ಸೇರಿದ್ದ ಊರವರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದರಂತೆ. ಆದರೆ ಒಂದು ಶರತ್ತು!ಸೋತವನು ತನ್ನ ಧರ್ಮವನ್ನು ತ್ಯಜಿಸಿ ಗೆದ್ದವನ ಧರ್ಮಕ್ಕೆ ಸೇರಿಕೊಳ್ಳಬೇಕು. ಅದಕ್ಕೆ ಸರಿ ಎಂದು ಒಪ್ಪಿ ಇಬ್ಬರೂ ಶಕ್ತಿ ಪ್ರದರ್ಶನಕ್ಕೆ ಕೂತರಂತೆ.

ಧರ್ಮದಲ್ಲೂ,ಜ್ಞಾನದಲ್ಲೂ, ವಾದದಲ್ಲೂ, ತರ್ಕದಲ್ಲೂ ಎಲ್ಲದರಲ್ಲೂ ಒಬ್ಬರಿಗೊಬ್ಬರು ಸರಿಸಮಾನರಾಗಿ ಯಾರು ಮೇಲು ಯಾರು ಕೀಳು ಎಂದು ಗೊತ್ತಾಗಲೇ ಇಲ್ಲವಂತೆ. ಕೊನೆಯಲ್ಲಿ ಬೌದ್ಧ ಗುರು ತನ್ನ ಅತೀಂಧ್ರಿಯ ಶಕ್ತಿಯನ್ನು ತೋರಿಸಲೋ ಎಂಬಂತೆ ತನ್ನ ಶಿರದ ಟೋಪಿಯನ್ನು ಆಕಾಶಕ್ಕೆ ಹಾರಿಸಿದನಂತೆ. ಅದು ಹಾರುತ್ತಾ ಹಾರುತ್ತಾ ಸ್ವರ್ಗವನ್ನು ತಲುಪಿತಂತೆ. ಅದನ್ನು ಕಂಡ ಭಕ್ತಜನ ಅವಕ್ಕಾದರಂತೆ. ‘ಓಹೋ ಹೀಗಾ ನಿನ್ನ ಶಕ್ತಿ. ಈಗ ನೋಡು ನನ್ನ ಶಕ್ತಿ’ ಎಂದು ಶಿಯಾ ಗುರು ತನ್ನ ಕೈಯಲ್ಲಿದ್ದ ಬಾರುಕೋಲನ್ನು ಆಕಾಶದ ಕಡೆ ಕಳಿಸಿದನಂತೆ.

ನೋಡುನೋಡುತ್ತಿದ್ದಂತೆ ಆ ಕೋಲೂ ಆಕಾಶದಲ್ಲಿ ಮಾಯವಾಗಿ ಸ್ವರ್ಗವನ್ನು ತಲುಪಿತಂತೆ. ಸ್ವರ್ಗವನ್ನು ತಲುಪಿ ಆ ಬೌದ್ಧ ಗುರುವಿನ ಟೋಪಿಯನ್ನು ಕಂಡು ಹುಡುಕಿ ಅದನ್ನು ಕೋಲಿನಿಂದ ಬಾರಿಸುತ್ತಾ ಕರಕೊಂಡು ಕೆಳಕ್ಕೆ ಬಂತಂತೆ. ಅದನ್ನು ಕಂಡ ಬೌದ್ಧ ಗುರುವೂ ಆತನ ಜನರೂ ಶಿಯಾಗಳಾದರಂತೆ.

‘ನೋಡಿ ಸಾಬ್ ಈ ಗುರುಗಳ ಟೋಪಿ ಮತ್ತು ಬಾರುಕೋಲಿನಿಂದಾಗಿ ನಾವು ಏನೇನೋ ಅವಸ್ಥೆಗಳನ್ನು ಎತ್ತಬೇಕಾಯಿತು. ಹಾಗೇ ದೇಶದೇಶಗಳ ನಡುವಿನ ಹಠಗಳಿಂದಾಗಿ ನಾವು ಸಾವುನೋವುಗಳನ್ನೂ ಅನುಭವಿಸಬೇಕಾಯಿತು. ಹಾಗೆ ನೋಡಿದರೆ ನಾವು ಯಾವ ಧರ್ಮಕ್ಕೂ ಸೇರಿರಲಿಲ್ಲ. ಯಾವ ದೇಶಕ್ಕೂ ಸೇರಿರಲಿಲ್ಲ. ಈಗ ನೋಡಿ ಎಲ್ಲರ ಕಣ್ಣೂ ನಮ್ಮ ಮೇಲೆ. ಹೆಂಡತಿ ನೋಡಲು ಚನ್ನಾಗಿದ್ದರೆ ಎಲ್ಲರೂ ಕಣ್ಣುಹಾಕುತ್ತಾರೆ. ಅದಕ್ಕೇ ನಾನು ಹೋತದಂತಹವಳನ್ನು ಮದುವೆಯಾಗಿರುವುದು’ ಎಂದು ಆತ ಕಣ್ಣು ಹೊಡೆದಿದ್ದ. ನಾನು ಈತ ಹೇಳಿದ್ದ ಕಥೆಯನ್ನೂ ಊರಲ್ಲಿರುವ ಹೆಂಡತಿ ಮಕ್ಕಳನ್ನೂ ಯೋಚಿಸುತ್ತಾ ಕಾರ್ಗಿಲ್ಲಿನ ಟ್ಯಾಕ್ಸಿ ಸ್ಟಾಂಡಿನಲ್ಲಿ ಪದುಂ ಪಟ್ಟಣಕ್ಕೆ ತೆರಳುವ ಕಡಿಮೆ ಖರ್ಚಿನ ವಾಹನಕ್ಕಾಗಿ ಚೌಕಾಶಿ ನಡೆಸುತ್ತಿದ್ದೆ.

‘ನೀವು ಏನು ಬೇಕಾದರೂ ಹೇಳಿ ಸಾಬ್. ಟ್ಯಾಕ್ಸಿ ಯೂನಿಯನ್ನಿಯನ್ನಿನವರು ನಿಗದಿಪಡಿಸಿದ ದರಕ್ಕಿಂತ ಕಡಿಮೆಗೆ ಎಲ್ಲಾದರೂ ನಿಮ್ಮನ್ನು ಕರೆದುಕೊಂಡು ಹೋದರೆ ನಮ್ಮನ್ನು ಒದ್ದು ಹೊರಗೆ ಹಾಕುತ್ತಾರೆ.ನೀವು ಒಂದು ಕೆಲಸ ಮಾಡಿ. ಇಲ್ಲಿಂದ ಹೊರಡುವ ಷೇರ್ ಟ್ಯಾಕ್ಸಿಯಲ್ಲಿ ಹೋಗಿ.ಕೇವಲ ಒಂದು ಸಾವಿರ.ಟ್ಯಾಕ್ಸಿಯಲ್ಲಿ ಏಳು ಜನ. ಹತ್ತು ಗಂಟೆಗಳ ಪಯಣ.ಹಣವಿಲ್ಲದವರು ಹೀಗೇ ಹೋಗುವುದು’ ಎಂದು ಅವರು ಉಪಾಯ ಸೂಚಿಸಿದರು.

‘ಹಾಗೆ ಆಗುವುದಿಲ್ಲ. ನನಗೆ ಬೇಕೆಂದಲ್ಲಿ ನಿಲ್ಲಬೇಕು. ಕಂಡಲ್ಲಿ ಇಳಿದು ಫೋಟೋ ತೆಗೆಯಬೇಕು. ಹಿಮಶಿಖರಗಳನ್ನೂ ಹೂ ಕಣಿವೆಗಳನ್ನೂ ನೋಡುತ್ತಾ ನಿದಾನಕ್ಕೆ ಸಾಗಬೇಕು. ಏಳು ಜನ ಅಪರಿಚಿತರ ಜೊತೆ ಹತ್ತು ಗಂಟೆಗಳ ಕಾಲ ಎಲ್ಲೂ ನಿಲ್ಲದೆ ಕಾರೊಂದರೊಳಗೆ ಕೂರಲು ನಾನು ಇಲ್ಲಿಗೇಕೆ ಬರಬೇಕಿತ್ತು’ ಎಂದು ನಾನು ಗೊಣಗುತ್ತಿದ್ದೆ.

ಅಷ್ಟು ಹೊತ್ತಿಗೆ ದೂರದಿಂದಲೇ ನನ್ನನ್ನು ಗಮನಿಸುತ್ತಿದ್ದ ಕಪ್ಪು ಕನ್ನಡಕದಾರಿ ಸುಂದರನೊಬ್ಬ ಹತ್ತಿರ ಬಂದು ನನ್ನನ್ನು ಮೂಲೆಯ ಕತ್ತಲೊಂದಕ್ಕೆ ಕರೆದುಕೊಂಡು ಹೋದ.

‘ನಿಮಗೆ ಎಷ್ಟು ಕೊಡಲಾಗುತ್ತದೆ?’ ಎಂದು ಕೇಳಿದ.
ಕಡಿಮೆ ಮೊತ್ತವೊಂದನ್ನು ಹೇಳಿದೆ.
‘ ಅದಕ್ಕಿಂತ ಹೆಚ್ಚು ಕೊಡಲಾಗುವುದಿಲ್ಲವೇ?’ ಎಂದು ಕೇಳಿದ.
‘ಸುತರಾಂ ಆಗುವುದಿಲ್ಲ’ ಎಂದು ಹೇಳಿದೆ.

‘ಸರಿ.ನಾಳೆ ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ನಿಮ್ಮ ಎಲ್ಲ ಸಾಮಾನುಗಳನ್ನು ಎತ್ತಿಕೊಂಡು ಈ ಪಟ್ಟಣದ ಸೆರಗಿನಲ್ಲಿ ಹರಿಯುವ ಸಿಂಧೂ ನದಿಯ ಮೇಲಿನ ಸೇತುವೆಯಲ್ಲಿ ನಿಂತುಕೊಳ್ಳಿ.ನಾನು ಒಪ್ಪಿಕೊಂಡ ದರದ ಕುರಿತು ಯಾರಿಗೂ ಹೇಳಬೇಡಿ’ ಎಂದು ತನ್ನ ಮೊಬೈಲ್ ನಂಬರನ್ನು ಕೈಗಿತ್ತು ಮಾಯವಾದ. ಆತ ಬರಲಾರ ಎಂದು ತಿಳಿದುಕೊಂಡೇ ಮಾರನೆಯ ಮುಂಜಾನೆ ಸಿಂಧೂ ನದಿಯ ಸೇತುವೆಯ ಮೇಲೆ ಕಾಯುತ್ತಿದ್ದೆ. ಹೇಳಿದ ಸಮಯಕ್ಕೆ ಸರಿಯಾಗಿ ಬಂದು ತನ್ನ ಸ್ಕಾರ್ಪಿಯೋದ ಗಾಜು ಇಳಿಸಿ `ಸಲಾಂ ಸಾಬ್. ಅದು ಹೇಗೆ ಇಷ್ಟು ಕಡಿಮೆ ಹಣಕ್ಕೆ ನಾನು ಒಪ್ಪಿಕೊಂಡೆ ಎಂದು ನಿಮಗೆ ನಂಬಲಾಗುತ್ತಿಲ್ಲ ಅಲ್ಲವೇ’ ಎಂದ.

‘ಹೌದು’ ಅಂದೆ.
‘ಈ ಪ್ರಪಂಚ ಬಹಳ ಕೆಟ್ಟದು ಸಾಬ್. ಅದಕ್ಕೆ ಎಲ್ಲರಿಗೂ ಪಾಠ ಕಲಿಸಬೇಕು.ನನಗೆ ಹಣ ಲಾಸಾದರೂ ಪರವಾಗಿಲ್ಲ. ಇದೇ ನನ್ನ ಜೀವನದ ಗುರಿ’ ಅಂದ.
ದಾರಿಯಲ್ಲಿ ಹೋಗುತ್ತಾ ಅವನ ಕಥೆ ಕೇಳಿದೆ. ಅದು ಚುಟುಕಾಗಿ ಇಲ್ಲಿದೆ. ಆತ ನಾನು ಹೋಗುತ್ತಿರುವ ಪದುಂ ಪಟ್ಟಣದ ನಿವಾಸಿ. ಪದುಂ ಪಟ್ಟಣದ ತೊಂಬತ್ತೈದು ಶೇಖಡಾ ನಿವಾಸಿಗಳು ಬೌದ್ಧ ಧರ್ಮೀಯರು. ಉಳಿದ ಐದು ಶೇಖಡಾ ಮಂದಿ ಸುನ್ನಿ ಮುಸಲ್ಮಾನರು. ಈತ ಈ ಸುನ್ನಿ ಪಂಗಡಕ್ಕೆ ಸೇರಿದವನು. ಒಂದು ಕಾಲದಲ್ಲಿ ಇವರೆಲ್ಲರೂ ಜೊತೆಗೆ ಚೆನ್ನಾಗಿ ಬಾಳುತ್ತಿದ್ದರು.

ಪದುಂ ಮತ್ತು ಲೇಹ್ ಪ್ರಾಂತ್ಯದ ಬೌದ್ಧರಲ್ಲೂ ಅಸ್ಪೃಶ್ಯರಿದ್ದಾರೆ. ಈ ಅಸ್ಪೃಶ್ಯರು ಚಮ್ಮಾರ ಕಮ್ಮಾರ ಇತ್ಯಾದಿ ಕಸುಬು ಮಾಡುವವರು.ಇವರೇ ಮದುವೆಗಳಲ್ಲೂ ಬೌದ್ಧ ಮೆರವಣಿಗೆಗಳಲ್ಲೂ ವಾಧ್ಯಗಳನ್ನೂ ಡೋಲುಗಳನ್ನೂ ಬಾರಿಸುವವರು.

ಮೇಲುಜಾತಿಯ ಬೌದ್ಧರು ಇವರನ್ನು ಜೊತೆಯಲ್ಲಿ ಊಟಕ್ಕೆ ಸೇರಿಸುವುದಿಲ್ಲ.ನೆಂಟಸ್ತಿಕೆ ಬೆಳೆಸುವುದಿಲ್ಲ. ಕೆಲವು ವರ್ಷಗಳ ಹಿಂದೆ ಪದುಂ ನಗರದಲ್ಲಿ ಕಾಲಚಕ್ರ ಹಬ್ಬ ನಡೆದಾಗ ದಲಾಯಿಲಾಮಾ ಬಂದಿದ್ದರಂತೆ. ಆಗ ಇಲ್ಲಿನ ಅಸ್ಪೃಶ್ಯ ಬೌದ್ಧರು ತಮ್ಮ ನೋವನ್ನು ಅವರಲ್ಲಿ ತೋಡಿಕೊಂಡರಂತೆ. ಅದನ್ನು ಕೇಳಿ ದಂಗಾದ ದಲಾಯಿಲಾಮಾ ಈ ಅಸ್ಪೃಶ್ಯತೆಯನ್ನು ನಿಲ್ಲಿಸುವಂತೆ ಅಲ್ಲಿನ ಬೌದ್ಧರಿಗೆ ಆಜ್ಞಾಪಿಸಿದರಂತೆ. ಆದರೆ ಅವರ ಮಾತಿಗೆ ಯಾರೂ ಕ್ಯಾರೇ ಅನ್ನಲಿಲ್ಲವಂತೆ. ಹಾಗಾಗಿ ಅಲ್ಲಿನ ಅಸ್ಪೃಶ್ಯರು ತಾವೂ ಸುನ್ನಿಗಳಾಗಲು ಹೊರಟರಂತೆ. ಹೀಗಾಗಿ ಈಗ ಪದುಂ ಪಟ್ಟಣದಲ್ಲಿ ಧರ್ಮಕಾರಣ.

ಸುನ್ನಿಗಳಿಗೆ ಬಹಿಷ್ಕಾರ ಹಾಕಿರುವರಂತೆ. ಇವನನ್ನು ಅಲ್ಲಿನ ಟ್ಯಾಕ್ಸಿ ಯೂನಿಯನ್ನಿಂದ ಹೊರಹಾಕಲಾಗಿದೆಯಂತೆ. ಹಾಗಾಗಿ ಇವನ ಟ್ಯಾಕ್ಸಿಗೆ ಯಾರೂ ಹತ್ತುವುದಿಲ್ಲವಂತೆ. ‘ಸರಿ ಮಾರಾಯ. ಕಾರ್ಗಿಲ್ಲಿನಲ್ಲೇ ಟ್ಯಾಕ್ಸಿ ಓಡಿಸಬಹುದಲ್ಲಾ’ ಅಂದೆ.

ಅಯ್ಯೋ ಸಾಬ್ ಕಾರ್ಗಿಲ್ ಪದುಂಗಿಂತಲೂ ಖತರ್ನಾಕ್’ ಅಂದ. ‘ಯಾಕೆ?’ ಎಂದು ಕೇಳಿದೆ.

‘ಸಾರ್ ಅಲ್ಲಿ ಇರುವುದು ಎಲ್ಲರೂ ಶಿಯಾಗಳು.ಬುದ್ಧಿಷ್ಟುಗಳನ್ನಾದರೂ ನಂಬಬಹುದು ಶಿಯಾಗಳನ್ನಲ್ಲ’ ಅಂದ. ಆಮೇಲೆ ಕೊಂಚ ಆತಂಕದಲ್ಲಿ ‘ನೀವು ಶಿಯಾವೋ ಸುನ್ನಿಯೋ?’ ಎಂದು ಕೇಳಿದ. ‘ಗೊತ್ತಿಲ್ಲ ಮಾರಾಯ ಮುಖ ನೋಡಿದರೆ ಹೇಗೆ ಅನ್ನಿಸುತ್ತಿದೆ ? ಎಂದು ಕೇಳಿದೆ.

‘ಮುಖನೋಡಿದರೆ ಸಿಂಗಾಪೂರಿನವರ ಹಾಗೆ ಇದೀರಿ’ ಅಂದ
‘ಸಿಂಗಾಪೂರಲ್ಲ ಮಾರಾಯ, ಸಿಂಗಾನಲ್ಲೂರಿನವನು. ಡಾ.ರಾಜ್ ಕುಮಾರ್ ಗೊತ್ತಾ?’ ಎಂದು ಕೇಳಿದೆ.
‘ನಹೀ ಸಾಬ್’ ಎಂದು ಹಳೆಯ ಹಿಂದಿ ಹಾಡನ್ನು ಗುನುಗುತ್ತಾ ರಾಜೇಶ್ ಖನ್ನಾನ ಹಾಗೆ ಗಾಡಿ ಓಡಿಸಲು ತೊಡಗಿದ.

ಬೆಳ್ಳಿಬಟ್ಟಲಲ್ಲಿ ನಂಕೀನ್ ಚಹಾ

‘ಮಾನ್ಯ ಮಹಾರಾಜರೇ ನಿಮ್ಮ ಅರಮನೆಯ ಪಡಶಾಲೆಯಲ್ಲಿ ಈ ಒಂದು ಇರುಳನ್ನು ಕಳೆಯಬಹುದೇ?’ ಎಂದು ಕೇಳಬೇಕೆಂದಿದ್ದವನು ಬಾಯಿಕಟ್ಟಿಕೊಂಡು ಸುಮ್ಮನೆ ಕುಳಿತಿದ್ದೆ.

ಕುಸಿದ ತನ್ನ ಅರಮನೆಯ ಅಳಿದುಳಿದ ಪಾಗಾರದೊಳಗೇ ತಕ್ಕಮಟ್ಟಿನ ಕೋಣೆಯೊಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಅತಿಥಿಗಳನ್ನು ಸತ್ಕರಿಸುವ ನಡುಕೋಣೆಯನ್ನಾಯೂ, ಅದರ ಪಕ್ಕದ ಇನ್ನೊಂದು ಕೋಣೆಯನ್ನು ಶಯನಗೃಹವಾಗಿಯೂ, ಅದರ ಪಕ್ಕದನ್ನು ಅಡುಗೆ ಮನೆಯಾಗಿಯೂ, ಕೆಳಗಿನ ನೆಲಮಾಳಿಗೆಯನ್ನು ದನಕರುಗಳನ್ನು ಕಟ್ಟುವ ಕೊಟ್ಟಿಗೆಯನ್ನಾಗಿಯೂ ಪರಿವರ್ತಿಸಿಕೊಂಡು ಪದುಂ ಎಂಬ ಈ ಊರಿನ ಮಹಾರಾಜನ ಉತ್ತರಾಧಿಕಾರಿ ಬದುಕುತ್ತಿದ್ದರೆ ನಾನು ನಿಮ್ಮ ಈ ಇರುಳಿನ ಅತಿಥಿಯಾಗಿರಬಹುದೇ ಎಂದು ಕೇಳಿ ಅವರನ್ನು ಇನ್ನಷ್ಟು ರಾಜತಾಂತ್ರಿಕ ಬಿಕ್ಕಟ್ಟಿಗೆ ಸಿಕ್ಕಿಸಬಾರದಲ್ಲಾ ಎಂದು ಯೋಚಿಸುತ್ತಿದೆ. ಆ ಊರಿನ ಪಶ್ಚಿಮ ದಿಕ್ಕಿನ ಒಂದು ಗುಡ್ಡದ ಮೇಲಿರುವ ಆ ಅರಮನೆಯು ಸುತ್ತ ಬೇರೆ ಯಾವುದೇ ಜನವಸತಿಯಿಲ್ಲದೆ ಒಂಟಿಯಾಗಿತ್ತು.

ಒಂದು ಕಾಲದಲ್ಲಿ ಊಳಿಗದವರೂ, ರಾಜಭಟರೂ, ಸಖಿಯರೂ ನೆಲೆಸಿದ್ದಿರಬಹುದಾಗಿದ್ದ ಮನೆಗಳು ಪಾಳುಬಿದ್ದು ಅದರ ಓಣಿಗಳಲ್ಲಿ ಯಾವುದೋ ಕಾಲದಲ್ಲಿ ಜಾನುವಾರುಗಳು ಹಾಕಿದ್ದ ಸಗಣಿಯ ವಾಸನೆ ತೇಲಿ ಬರುತ್ತಿತ್ತು. ಕುಸಿದು ಹೋಗಿರುವ ಪ್ರಾಕಾರಗಳ ಮೇಲೆ ಬೆಳೆದಿರುವ ಮುಳ್ಳುಕಂಟಿಗಳು ಹೂಬಿಟ್ಟು ಕೆಲವು ಗಿಡಗಳಲ್ಲಿ ಪ್ರಖರ ಕಡುಕೆಂಪು ಬಣ್ಣದ ಹಣ್ಣುಗಳೂ ತೂಗುತ್ತಿದ್ದವು.

‘ ಒಂದು ಕಾಲದಲ್ಲಿ ಈ ಊರಿಗೆ ಒಬ್ಬ ರಾಜ ಇದ್ದಿರಲೇಬೇಕು. ಹಾಗಾಗಿ ಆತನ ಅರಮನೆಯೂ ಇದ್ದಿರಲೇಬೇಕು. ಅಕಸ್ಮಾತ್ ಅದೇನಾದರೂ ಇದ್ದಿದ್ದರೆ ಅಲ್ಲಿಗೆ ನನ್ನ ಕರಕೊಂಡು ಹೋಗು’ ಎಂಬುದಾಗಿ ಅದಾಗತಾನೇ ಗೆಳೆಯನಾಗಿದ್ದ ಒಬ್ಬ ಎಸ್ ಟಿ ಡಿ ಬೂತಿನ ಮಾಲಕನೊಬ್ಬನಲ್ಲಿ ನಾನು ವಿನಂತಿಸಿದ್ದೆ. ಈ ಊರಲ್ಲಿ ಇರುವ ಒಂದು ಸರಕಾರೀ ಮೊಬೈಲ್ ಟವರು ದಿನದ ಹೆಚ್ಚಿನ ಕಾಲ ಸ್ಥಗಿತವಾಗಿರುವುದರಿಂದ ಈತನ ಎಸ್ ಟಿ ಡಿ ಬೂತು ಸದಾ ತೆರೆದುಕೊಂಡಿರಬೇಕಿತ್ತು.
‘ಮೊಬೈಲ್ ಟವರು ಶುರುವಾದಾಗ ನನ್ನ ಬಳಿ ಯಾರೂ ಬರುವುದಿಲ್ಲ. ಆಗ ಇಲ್ಲಿನ ಅರಮನೆಗೆ ನಿನ್ನ ಕರೆದುಕೊಂಡು ಹೋಗುತ್ತೇನೆ’ ಎಂದಿದ್ದವನ ಮುಂದೆ ನಾನು ಕಾಯುತ್ತಿದ್ದೆ.

ಆತನ ಆ ಬೂತಿನಲ್ಲಿಯೂ ನೂರಾರು ಕಥೆಗಳು. ಜಾರ್ಖಂಡಿನ ಯಾವುದೇ ಹಳ್ಳಿಯಿಂದ ಸೇತುವೆಯ ಕೂಲಿ ಕೆಲಸಕ್ಕೆ ಬಂದಿದ್ದ ಯುವಕನೊಬ್ಬ ನಡು ಮದ್ಯಾಹ್ನವೇ ಕಂಠದವರೆಗೆ ಕುಡಿದು ಫೋನಿನಲ್ಲಿ ತನ್ನ ಹೆಂಡತಿಯೊಡನೆ ಜಗಳವಾಡುತ್ತಿದ್ದ. `ನಾನಿಲ್ಲಿ ಈ ಹಿಮರಾಶಿಯ ನಡುವಿನ ಚಳಿಯಲ್ಲಿ ಹಸಿವಲ್ಲಿ ಬಿಡಿಗಾಸಿಗಾಗಿ ದುಡಿಯುತ್ತಿದ್ದರೆ ನೀನು ಅಲ್ಲಿ ಏನೋ ನಡೆಸುತ್ತಿರುವೆಯಲ್ಲಾ ಇರು ನಾನು ಅಲ್ಲಿಗೆ ಬಂದು ನಿನ್ನ ಕುತ್ತಿಗೆ ಹಿಚುಕುತ್ತೇನೆ’ ಎಂದು ಆತ ಊರಿಡೀ ಕೇಳಿಸುವಂತೆ ಫೋನಿನಲ್ಲಿ ಕಿರುಚುತ್ತಿದ್ದ.
ಸರತಿಯಲ್ಲಿ ಅವನ ಹಾಗೇ ಕಿರುಚಲು ಕಾದಿರುವ ಇನ್ನಷ್ಟು ಕೂಲಿಯಾಳುಗಳು.

ನೇಪಾಳ, ಬಿಹಾರ, ಉತ್ತರಾಕಾಂಡದಿಂದ ಬಂದ ಅವರೆಲ್ಲ ತಮಗೆ ಸಂಬಳ ಕೊಡದೆ ಸತಾಯಿಸುತ್ತಿರುವ ಇಲ್ಲಿನ ಕಾಂಟ್ರಾಕ್ಟ್ ದಾರನಿಗಾಗಿ ಕಾಯುತ್ತಾ ಕಾಯುತ್ತಾ ಹತಾಶೆಯಲ್ಲಿ ಕುಡುಕರೇ ಆಗಿಹೋಗಿದ್ದರು.

ಶರತ್ಕಾಲ ಶುರುವಾಗಿರುವ ಈ ಕಾಲದಲ್ಲಿ ಇರುಳು ಮರಗಟ್ಟುವ ಚಳಿಯಿದ್ದರೆ ಹಗಲು ಸೂಜಿಯಂತೆ ಚುಚ್ಚುವ ಪ್ರಖರ ಸೂರ್ಯ. ನಡುವೆ ಇದ್ದಕ್ಕಿದ್ದಂತೆ ಸುರಿಯುವ ಮಳೆ. ಯಾವ ಹೊತ್ತಲ್ಲಿ ಹೇಗೆ ತಿರುಗುವುದೋ ಗೊತ್ತಾಗದ ಹವಾಮಾನ. ಇರುವ ಎಲ್ಲ ಶರಟುಗಳನ್ನೂ ಪ್ಯಾಂಟುಗಳನ್ನೂ ಒಂದರಮೇಲೊಂದರಂತೆ ಹಾಕಿಕೊಂಡು ತೆರೆದ ಕಟ್ಟಡದೊಳಗೆ ಮಲಗಿದ್ದ ಅವರೆಲ್ಲ ಹಾಗೆಯೇ ಎದ್ದುಬಂದು ಮದ್ಯಾಹ್ನದ ಉರಿಬಿಸಿಲಲ್ಲಿ ಬೆವರು ಮತ್ತು ಸಾರಾಯಿಯ ವಾಸನೆ ಸೂಸುತ್ತಾ ಈ ಬೂತಿನ ಮುಂದೆ ಫೋನಿಗಾಗಿ ಕಾಯುತ್ತಿದ್ದರು.

ನಾಪತ್ತೆಯಾಗಿರುವ ಕಾಂಟ್ರಾಕ್ಟುದಾರ ವಾಪಾಸಾಗಿ ತಮ್ಮ ಪಗಾರವನ್ನು ವಿತರಿಸಿದ ಕೂಡಲೇ ವಾಪಾಸು ಬರುವುದಾಗಿ ಫೋನಿನಲ್ಲಿ ಕಿರುಚೀಕಿರುಚೀ ಅವರಿಗೆಲ್ಲ ಸಾಕಾಗಿಹೋಗಿತ್ತು.
ಅವರೆಲ್ಲರ ಮಾತುಗಳು ಮುಗಿದ ಮೇಲೆ ಆ ಬೂತಿನವನು ನನ್ನನ್ನು ಕರೆದುಕೊಂಡು ಗುಡ್ಡದಮೇಲಿರುವ ಪಾಳು ಅರಮನೆಯನ್ನು ತೋರಿಸಲು ಕರೆದೊಯ್ದ.

ಅವನಿಗೇನೂ ಆ ಅರಮನೆಯ ಮೇಲೆ ಆಸಕ್ತಿ ಇರಲಿಲ್ಲ. ಏಕೆಂದರೆ ಆ ಅರಮನೆಯಲ್ಲಿ ಈಗ ವಾಸಿಸುತ್ತಿರುವ ರಾಜವಂಶಸ್ಥ ಇದೇ ಊರಿನ ಸರಕಾರೀ ಶಾಲೆಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿ ನಿವೃತ್ತನಾಗಿ ತನ್ನ ಸೊಸೆ ಮತ್ತು ಮೊಮ್ಮಕ್ಕಳೊಡನೆ ಬದುಕುತ್ತಿದ್ದ. ಆತನ ಹೆಂಡತಿ ತೀರಿಹೋದಮೇಲೆ ಸ್ಥಳೀಕಳೇ ಆದ ಇನ್ನೊಬ್ಬಳು ಸಾಧಾರಣ ಹೆಂಗಸನ್ನು ಮದುವೆಯಾಗಿದ್ದ.

ಅದೂ ಅಲ್ಲದೆ ಈ ಊರಿಗೆ ವಸಂತಕಾಲದಲ್ಲಿ ಹಿಂಡುಗಟ್ಟಿ ಬರುವ ಯುರೋಪಿನ ಪ್ರವಾಸಿಗರಲ್ಲಿ ಯಾರೋ ಒಬ್ಬರು ಈ ರಾಜವಂಶಸ್ಥನನ್ನು ತುಂಬಾಬಡವನೆಂದು ತಪ್ಪಾಗಿ ತಿಳಿದುಕೊಂಡು ಆತನ ಮೊಮ್ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಂಡಿದ್ದು ಊರಲೆಲ್ಲಾ ಸುದ್ದಿಯಾಗಿತ್ತು. ರಾಜವಂಶಸ್ಥ ಹೀಗೆ ಮಾಡುವುದೇ ಎಂಬುದು ಆತನ ಬೇಸರವಾಗಿತ್ತು.

‘ನೋಡಿ ಸಾಬ್ ಸರಕಾರದ ಕಾಂಟ್ರಾಕ್ಟುಗಳನ್ನು ವಹಿಸಿಕೊಂಡು ದೂರದ ನೇಪಾಳ ಬಿಹಾರಗಳ ಕಾರ್ಮಿಕರಿಗೆ ಕಾಸು ಕೊಡದೆ ಮೋಸಮಾಡುವುದು, ಬಡವರು ಅಂತ ತೋರಿಸಿಕೊಂಡು ಬೇರೆ ದೇಶದ ಪ್ರವಾಸಿಗರು ಕೊಡುವ ಕಾಸಿಗಾಗಿ ಕಾಯುವುದು. ಇಲ್ಲಿನವರು ಯಾರೂ ಕಷ್ಟಪಟ್ಟು ಕೆಲಸ ಮಾಡುವುದೇ ಇಲ್ಲ’ ಎಂಬುದು ಆತನ ದೂರಾಗಿತ್ತು.

‘ಆದರೂ ಪರವಾಗಿಲ್ಲ ಮಾರಾಯಾ ಎಷ್ಟಾದರೂ ನಿಮ್ಮ ಮಹಾರಾಜರ ಕುಲದವರಲ್ಲವೇ’ ಎಂದು ಆತನನ್ನ ಕಾಡಿಬೇಡಿ ಗುಡ್ಡ ಹತ್ತುತ್ತಿದ್ದರೆ ಆತ ರಾಜನ ಅರಮನೆಯ ಕಡೆ ಹೋಗದೆ ಬೌದ್ಧ ದೇಗುಲವೊಂದರ ಮುಂದೆ ನನ್ನ ನಿಲ್ಲಿಸಿ, ‘ನೋಡಿ ಆ ಸ್ತೂಪಗಳು ಕಾಣಿಸುತ್ತಿದೆಯಲ್ಲಾ, ಅವುಗಳ ಅಡಿಯಲ್ಲಿ ಪದ್ಮಸಂಭವನ ಕಾಲದಲ್ಲಿ ಎರಡು ಕ್ಷುದ್ರ ದೇವತೆಗಳನ್ನು ಸಂಹರಿಸಿ ಹುಗಿದು ಇಟ್ಟಿದ್ದಾರೆ. ಆಮೇಲೆ ಆ ಇಬ್ಬರು ಕ್ಷುದ್ರ ದೇವತೆಗಳು ತಲೆ ಎತ್ತಿರಲೇ ಇಲ್ಲ. ಆದರೆ ಕಳೆದ ಕೆಲವರ್ಷಗಳ ಹಿಂದೆ ಮಿಡತೆಗಳ ಮಹಾ ಪ್ರವಾಹವೊಂದು ಇಲ್ಲಿಗೆ ಒಕ್ಕರಿಸಿ ನಮ್ಮ ವರ್ಷದ ಬೆಳೆಯೆಲ್ಲವನ್ನೂ ತಿಂದುಹಾಕಿತು. ಏನು ಮಾಡಿದರೂ ಅವುಗಳ ಪ್ರವಾಹ ನಿಲ್ಲಲೇ ಇಲ್ಲ. ಕೊನೆಗೆ ನಾವು ಈ ಸ್ತೂಪಗಳ ಕೆಳಗಡೆ ಇರುವ ದೇವತೆಗಳಿಗೆ ಪೂಜೆ ಸಲ್ಲಿಸಲೇ ಬೇಕಾಯಿತು. ಆಮೇಲೆ ಮಿಡತೆಗಳು ಬರಲೇ ಇಲ್ಲ’ ಎಂದು ವಿವರಿಸುತ್ತಿದ್ದ.

ಇಲ್ಲಿ ಎಲ್ಲ ಕಡೆಯೂ ಹುಗಿದಿಟ್ಟ ಸ್ಥಿತಿಯಲ್ಲಿರುವ ಶಾಖಿಣಿ, ಡಾಕಿಣಿಯರು, ಕ್ಷುದ್ರದೇವತೆಯರು, ಹಿಮಪರ್ವತ ಸಾಲುಗಳಲ್ಲಿ ಹುದುಗಿಕೊಂದಿರುವ ಮರಕತ ವಜ್ರದ ಗಣಿಗಳು,ಇಲ್ಲಿನ ಹಿಮಬೆಟ್ಟಗಳ ನಡುವಿನ ಶಿಲಾಶಿಖರಗಳಲ್ಲಿ ಅಂಟಂಟಾಗಿ ಸಿಗುವ ಶಿಲಾಜಿತ್ ಎಂಬ ಸಿದ್ಧ ಲೇಹ್ಯ. ಅದರ ಅಲೌಕಿಕ ಗುಣಗಳು.ಇವನ್ನೆಲ್ಲ ಕೇಳಿಕೇಳಿ ಒಂದು ತರಹದ ಪ್ಯಾಂಟಸಿಯಲ್ಲಿ ಸಿಲುಕಿ ನಲುಗಿಹೋಗಿರುವ ನಾನು ‘ಆಯ್ತು ಮಾರಾಯ ಈಗಲಾದರೂ ನಿಮ್ಮ ರಾಜವಂಶಸ್ಥನ ಮನೆಗೆ ಕರೆದೊಯ್ಯು’ ಎಂದು ಮತ್ತೆ ದುಂಬಾಲು ಬಿದ್ದಿದ್ದೆ.

ಕೊನೆಗೂ ಗುಡ್ಡದ ತುದಿಯನ್ನು ತಲುಪಿ ಪಾಳುಬಿದ್ದಿರುವ ಗೋಡೆಗಳ ನಡುವೆ ಒಂಟಿಯಾಗಿ ಉಸಿರಾಡುತ್ತಿರುವ ಈ ಅರಮನೆಯ ಬಾಗಿಲನ್ನು ಬಡಿದಿದ್ದೆವು. ಟಿಬೆಟಿನ ರಾಜರು, ಲಡಾಕಿನ ತುಂಡರಸರು, ಜಮ್ಮುವಿನ ಡೋಗ್ರಾ ಅರಸರು, ಪಾಕ್ ಸೈನಿಕರು ಹೀಗೆ ಎಲ್ಲರೂ ಕಾಲಾನುಕ್ರಮವಾಗಿ ಕೊಳ್ಳೆ ಹೊಡೆದ ಅರಮನೆ ಒಂದು ರೀತಿಯ ವೈರಾಗ್ಯದಿಂದಾಗಿ ಬಗ್ಗಿ ಹೋಗಿತ್ತು. ಬಾಗಿಲು ತೆಗೆದ ರಾಜವಂಶದ ಸೊಸೆ ಬಟ್ಟೆ ತೊಳೆಯುವ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿ ಬಂದಿದ್ದಳು. ರಾಜವಂಶಸ್ಥನ ತೀರಿಹೋದ ಹೆಂಡತಿಯ ಜಾಗಕ್ಕೆ ಬಂದಿರುವ ಹೊಸಬಿ ಹೆಂಡತಿ ನಮ್ಮನ್ನು ಕಂಡು ನಾಚುಕೆಯಲ್ಲಿ ನಿಂತಿದ್ದಳು.

ಅರಮನೆಯ ನೆಲಮಾಳಿಗೆಯನ್ನು ದನಕರುಗಳನ್ನು ಕಟ್ಟಲು ಬಳಸುತ್ತಿರುವ ಕಾರಣದಿಂದಾಗಿ ಒಂದು ತರಹದ ಸಗಣಿಗಂಜಲದ ಹಿತವಾದ ಪರಿಮಳ ಅಲ್ಲೆಲ್ಲ ಪಸರಿಸಿತ್ತು. ಪುರಾತನ ಬೆಳ್ಳಿಬಟ್ಟಲಿಗೆ ಯಾಕ್ಮೃ ಗದ ಬೆಣ್ಣೆ ಮತ್ತು ಉಪ್ಪು ಬೆರೆಸಿದ ನಂಕೀನ್ ಚಹಾವನ್ನು ಹತ್ತು ನಿಮಿಷಗಳಿಗೊಮ್ಮೆ ಸುರಿಯುತ್ತಿದ್ದರೆ ಯಾವ ಮುಲಾಜೂ ಇಲ್ಲದೆ ಸತತವಾಗಿ ನಾನು ಕುಡಿಯುತ್ತಿದ್ದೆ. ಕಾಲ ಮತ್ತು ಕಾಯಿಲೆಗಳ ಸತತ ದಾಳಿಗಳ ನಡುವೆ ಇವರನ್ನು ಉಳಿಸಿರುವುದು ಈ ನಂಕೀನ್ ಚಹಾ ಎಂಬುದು ಈ ರಾಜವಂಶಸ್ಥನ ನಂಬಿಕೆ. ಆತ ಹೇಳಿದ ಕಥೆಯನ್ನು ಕೇಳಿದರೆ ಅದು ನಿಜ ಎಂದು ನನಗೆ ಅನಿಸುತ್ತಿತ್ತು.

ರಾಜ ಕುಲದ ಆ ಹಿರಿಯ, ಕವಿಯಂತೆ ಆ ಕಥೆಯನ್ನು ಹೇಳುತ್ತಿದ್ದ. ಧರ್ಮ, ಕುಟಿಲತೆ ಮತ್ತು ಸ್ತ್ರೀಲೋಲುಪತೆಗಳಿಂದಾಗಿ ನರಳಿದ ಹಿಮರಾಜ್ಯದ ಅರಸು ಮನೆತನದ ಕಥೆ. ಇನ್ಯಾವತ್ತಾದರೂ ಸಮಯ ಸಿಕ್ಕರೆ ಹೇಳುವೆ.ಈಗ ಇಲ್ಲಿ ನಿಲ್ಲಿಸುವೆ.

ಗುರಿಯೇ ಇಲ್ಲದ ಹಗಲು ದಾರಿ

ಕಾರ್ಗಿಲ್ಲಿನಲ್ಲಿ ನಿಮಗೆ ಯಾರ ಜೊತೆಗಾದರೂ ಕನ್ನಡದಲ್ಲಿ ಮಾತನಾಡಬೇಕು ಅನಿಸಿದರೆ ಅಲ್ಲಿನ ಮುಖ್ಯಬೀದಿಯಲ್ಲಿರುವ ಟಿಬೆಟನ್ ಮಾರ್ಕೆಟ್ಟಿಗೆ ಹೋಗಬೇಕು. ಅಲ್ಲಿ ಸ್ವೆಟರು ಜರ್ಕಿನ್ನು ಬ್ಯಾಗು ಇತ್ಯಾದಿಗಳನ್ನು ಮಾರುವ ಟಿಬೆಟನ್ ಹೆಂಗಸರಲ್ಲಿ ನಾಲ್ಕೈದು ಮಂದಿಗಾದರೂ ಕನ್ನಡ ಬರುತ್ತದೆ. ಯಾಕೆಂದರೆ ಇವರು ಕರ್ನಾಟಕದ ಮುಂಡಗೋಡು, ಬೈಲುಕುಪ್ಪೆ ಅಥವಾ ಗುರುಪುರದ ಟಿಬೆಟನ್ ನಿರಾಶ್ರಿತರ ಶಿಬಿರಗಳಿಂದ ಬಂದು ಇಲ್ಲಿ ಚಳಿಗಾಲ ಶುರುವಾಗುವ ತನಕ ವ್ಯಾಪಾರ ಮಾಡಿಕೊಂಡು ಹಿಮಬೀಳಲು ತೊಡಗುವಾಗ ಇಲ್ಲಿಂದ ಬೇರೆಕಡೆಗೆ ಕಾಲು ಕೀಳುವವರು.

ಇಲ್ಲಿರುವ ಬೈಲುಕುಪ್ಪೆಯ ಟಿಬೆಟನ್ ಮಹಿಳಾ ವ್ಯಾಪಾರಿಯ ಜೊತೆ ನಾನು ಕನ್ನಡದಲ್ಲಿ ಮಾತನಾಡುತ್ತಾ ಕೈಗೆ ಹಾಕುವ ಗ್ಲೌಸುಕೊಳ್ಳಲು ಕನ್ನಡದಲ್ಲಿ ಚೌಕಾಶಿ ಮಾಡುತ್ತಿದ್ದೆ. ಅವಳು ಒಂದೇ ರೇಟು, ಚರ್ಚೆ ಇಲ್ಲ ಎಂದು ಅಚ್ಚಕನ್ನಡದಲ್ಲಿ ತಿರುಗೇಟು ನೀಡುತ್ತಿದ್ದಳು. ಏನು ತಾಯೀ ನೀನು ಹುಟ್ಟಿದ ಬೈಲುಕುಪ್ಪೆಯ ಬಳಿಯ ಸುಂಟಿಕೊಪ್ಪದಲ್ಲಿ ಹುಟ್ಟಿದವನು ನಾನು ಅದಕ್ಕಾದರೂ ಕರುಣೆ ಬೇಡವಾ ಎಂದು ಆ ಸಂಜೆಯ ಚಳಿಯಲ್ಲಿ ಚೌಕಾಶಿಯ ಸುಖವನ್ನು ಅನುಭವಿಸುತ್ತಿದ್ದೆ.

ಅವಳು ಮೂರು ಜನ ಟಿಬೆಟನ್ ಸಹೋದರರ ಒಬ್ಬಳೇ ಹೆಂಡತಿ. ಒಬ್ಬಾತ ಇಲ್ಲೇ ಹತ್ತಿರದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದಾನೆ. ಇನ್ನೊಬ್ಬಾತ ಹಿಮಾಚಲದ ಧರ್ಮಶಾಲಾದಲ್ಲಿ ನೌಕರಿಯಲ್ಲಿದ್ದಾನೆ. ದೊಡ್ಡ ಸಹೋದರ ಅಂದರೆ ಈಕೆಯ ದೊಡ್ಡ ಗಂಡ ಬೈಲುಕುಪ್ಪೆಯಲ್ಲಿ ಜೋಳದ ಹೊಲ ಮತ್ತು ವಯಸ್ಸಾದ ತಂದೆತಾಯಿಯರನ್ನು ನೋಡಿಕೊಂಡಿದ್ದಾನೆ. ಈಕೆ ಅವರಿಗೆ ಮೂವರಿಗೂ ಸೇರಿ ಒಬ್ಬಳೇ ಹೆಂಡತಿ. ಮೂರು ಕಡೆಯೂ ತಿರುಗಾಡಿಕೊಂಡು ತನ್ನ ಸಂಸಾರವನ್ನು ಸಂಬಾಳಿಸಿಕೊಂಡಿರುತ್ತಾಳೆ.

ನಮ್ಮ ಕಡೆಯ ಮಹಿಳೆಯರಿಗೆ ಇರುವ ಒಬ್ಬ ಗಂಡನ ಜೊತೆ ಏಗುವುದರಲ್ಲೇ ಜೀವನ ಸಾಕಾಗಿ ಹೋಗಿರುತ್ತದೆ. ಇನ್ನು ಮೂರು ಜನ ಗಂಡಂದಿರನ್ನು ಅದು ಹೇಗೆ ನಿಬಾಯಿಸುತ್ತೀಯೋ ತಾಯೀ ಎಂದು ಅರ್ದ ಕೀಟಲೆಯಲ್ಲೂ ಇನ್ನರ್ದ ಕುತೂಹಲದಲ್ಲೂ ಕೇಳಿದೆ. ಪಾಪ ಮೂರು ಜನರೂ ಒಳ್ಳೆಯವರು. ಮೂವರೂ ನನ್ನ ಮಾತು ಮೀರಿ ಹೋಗುವುದಿಲ್ಲ.ನಮ್ಮಲ್ಲಿ ಗಂಡಸರು ತುಂಬ ಪಾಪ.ನಿಮ್ಮ ಹಾಗಲ್ಲ ಎಂದು ಆಕೆಯೂ ತಮಾಷೆ ಮಾಡುತ್ತಿದ್ದಳು. ಕನ್ನಡ ಬಲ್ಲವನೊಬ್ಬ ಬೇರೆ ಏನೂ ಕಾರಣವಿಲ್ಲದೆ ಬರೀ ತಿರುಗಾಡಲು ಕಾರ್ಗಿಲ್ಲಿನಂತಹ ಆ ಮೂಲೆಗೆ ಹೋಗಿದ್ದೇ ಆಕೆಗೆ ನಗು ಬಂದಿತ್ತು. ಇನ್ನು ನಾನು ಅಲ್ಲಿಂದಲೂ ಮುಂದಕ್ಕೆ ಜಂಸ್ಕಾರ್ ಪ್ರಾಂತಕ್ಕೆ ಹೋಗುತ್ತಿರುವೆ ಅಂದಾಗ ಆಕೆ ಪಕಪಕ ನಕ್ಕಿದ್ದಳು.

ಏಕೆಂದರೆ ಅಲ್ಲಿನ ಜನ ಬೇರೇನೂ ಕೆಲಸವಿಲ್ಲದೆ ದಿನವಿಡೀ ಉಪ್ಪು ಮತ್ತು ಯಾಕ್ ಮೃಗದ ಹಾಲು ಬೆರೆಸಿದ ನಂಕೀನ್ ಚಹಾ ಕುಡಿಯುತ್ತಾ ಸೆತುವಿನ ಮುದ್ದೆ ಉಣ್ಣುತ್ತಾ ಕಾಲ ಕಳೆಯುವವರು ಎಂದು ಆಕೆಯ ಅಭಿಪ್ರಾಯವಾಗಿತ್ತು. `ಹೌದು. ನಾನೂ ಸೋಮಾರಿಯೇ. ಅದಕ್ಕಾಗಿಯೇ ಅಲ್ಲಿ ಇರಲು ಹೋಗುತ್ತಿದ್ದೇನೆ. ರಾಗಿಮುದ್ದೆಯ ಹಾಗಿರುವ ಸೆತು ಮತ್ತು ಯಾಕಿನ ಹಾಲಿನ ನಂಕೀನ್. ಜೀವನದಲ್ಲಿ ಇನ್ನೇನು ಬೇಕು ಎಂದು ಅವಳನ್ನು ನಗಿಸಿ ಹೊರಟಿದ್ದೆ.

ಹೊರಟು ಈ ಊರಿಗೆ ತಲುಪಿದ ಮೇಲೆ ಅದು ನಿಜವೆನ್ನಿಸಿತ್ತು. ಎಲ್ಲಿಯೂ ಚಲಿಸದೆ ಕೋಟಿಗಟ್ಟಲೆ ವರ್ಷಗಳಿಂದ ಹಾಗೇ ನಿಂತುಕೊಂಡಿರುವ ಹಿಮಭರಿತ ಗೋಡೆಗಳಂತಿರುವ ಪರ್ವತ ಸಾಲುಗಳು. ಅವುಗಳ ಮೇಲೆ ಚಲಿಸದೇ ನಿಂತಿರುವ ಶರತ್ಕಾಲದ ಬೆಳ್ಳನೆಯ ಮೋಡಗಳು. ಕೆಳಗೆ ಉತ್ತು ಹದಮಾಡಿ ತೇವಕ್ಕಾಗಿ ಹಿಮಪಾತವನ್ನು ಕಾಯುತ್ತಿರುವ ಕಪ್ಪು ಮಣ್ಣಿನ ಬಯಲು. ಅದರ ನಡುವೆ ಗೌಣವಾಗಿ ಚಲಿಸುತ್ತಿರುವ ಇಲ್ಲಿನ ನಿವಾಸಿಗಳು. ಪ್ರವಾಸಿಗಳು, ವ್ಯಾಪಾರಿಗಳು ಮತ್ತು ಕೂಲಿಯಾಳುಗಳನ್ನು ಬಿಟ್ಟರೆ ಉಳಿದ ಇಲ್ಲಿನ ನಿವಾಸಿಗಳಿಗೆ ಯಾವುದೇ ದಾವಂತಗಳಿರಲಿಲ್ಲ.

ಯಾರಿಗೂ ಅವಸರದಲ್ಲಿ ಏನೂ ಆಗಬೇಕಾಗಿರಲಿಲ್ಲ. ಬರಲಿರುವ ಉದ್ದನೆಯ ಹಿಮಭರಿತ ಚಳಿಗಾಲಕ್ಕಾಗಿ ಅವರು ಬೇಸಗೆಯ ಕೊನೆಯ ದಿನದಿಂದಲೇ ತಯಾರಿ ನಡೆಸಿದ್ದರು. ಹಣ್ಣು ತರಕಾರಿ ಸೊಪ್ಪುಗಳನ್ನು ಬಿಸಿಲಲ್ಲಿ ಒಣಗಿಸಿ ಜರಡಿಗಳಲ್ಲಿ ಚಳಿಗಾಲಕ್ಕಾಗಿ ತುಂಬಿಸಿಟ್ಟಿದ್ದರು.

ಶರತ್ಕಾಲದಲ್ಲಿ ಸಹಜವಾಗಿ ಮಾಗುತ್ತಿರುವ ಹುಲ್ಲುಗಳನ್ನೂ ಸೊಪ್ಪುಗಳನ್ನೂ ಕಂತೆಗಳನ್ನಾಗಿ ಮಾಡಿ ದನಕರುಗಳ ಮೇವಿಗೆ ಮನೆಯ ಚಾವಣಿಯಲ್ಲಿ ಪೇರಿಸಿಡುತ್ತಿದ್ದರು. ಇರುವೆಗಳ ಸಮೂಹ ಸುದೀರ್ಘ ಮಳೆಗಾಲಕ್ಕಾಗಿ ಯಾವುದೇ ದಾವಂತವಿಲ್ಲದೆ ಕಾಯುವ ಹಾಗೆ. ಆದರೆ ವ್ಯಾಪಾರಿಗಳೂ, ಪ್ರವಾಸಿಗರೂ, ಕೂಲಿಯಾಳುಗಳೂ ತಾವು ಬಂದಿರುವ ಕೆಲಸ ಮುಗಿಸಿ ಹಿಮಪಾತದ ಮೊದಲೇ ಇಲ್ಲಿಂದ ಕಾಲುಕೀಳುವ ಖುಷಿಯಲ್ಲಿ ಓಡಾಡುತ್ತಿದ್ದರು.

ನನಗೂ ಜೀವನದಲ್ಲಿ ದೊಡ್ಡ ಉದ್ದೇಶಗಳು ಯಾಕಿಲ್ಲ ಎಂದು ಯೋಚಿಸುತ್ತಾ ನಾನು ಪೋಲೀಸು ಶುಕೂರನ ಸಫಾರಿ ಜೀಪಿಗಾಗಿ ಕಾಯುತ್ತಿದ್ದೆ. ಈ ಶುಕೂರ್ ಸುನ್ನಿ ಮುಸಲ್ಮಾನ. ಹಾಗಾಗಿ ಈತನಿಗೆ ಶಿಯಾಗಳೇ ತುಂಬಿರುವ ಕಾರ್ಗಿಲ್ಲಿನ ಇತರ ಪಟ್ಟಣಗಳಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಇತರ ಪಟ್ಟಣಗಳ ಪೋಲೀಸರಿಗೆ ವರ್ಷದ ಐದು ತಿಂಗಳೂ ಹಿಮತುಂಬಿಕೊಂಡು ಎಲ್ಲಿಯೂ ಹೋಗಲಾಗದ ಈ ಪಟ್ಟಣದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಹಾಗಾಗಿ ಶುಕೂರ್ ಈ ಪಟ್ಟಣದ ಪೋಲೀಸು ಠಾಣೆಯಲ್ಲಿ ಕಳೆದ ಇಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೇದೆಯಾಗಿ ಕೆಲಸ ಮಾಡುತ್ತಿದ್ದಾನೆ.

ತನಗೆ ಭಡ್ತಿ ಸಿಕ್ಕಿದರೂ ಬೇಡ ಅನ್ನುತ್ತಾನೆ.ಎತ್ತರಕ್ಕೆ ಮೈಕೈ ತುಂಬಿಕೊಂಡು ಇರುವ ಶುಕೂರ್ ನೋಡಲಿಕ್ಕೂ ಸುಂದರವಾಗಿದ್ದಾನೆ. ತಾನು ಯಾರನ್ನು ನೋಡುತ್ತಿರುವೆ ಎಂಬುದು ಯಾರಿಗೂ ಗೊತ್ತಾಗದಿರಲಿ ಎಂದು ಸದಾ ಕಪ್ಪು ಕನ್ನಡಕವನ್ನು ಹಾಕಿಕೊಂಡಿರುತ್ತಾನೆ. ಈತ ಪೋಲೀಸನಾಗಿರುವುದರಿಂದ ಈ ಊರಿನ ಬೌದ್ಧ ಧರ್ಮೀಯರು ಮುಸಲ್ಮಾನರ ಮೇಲೆ ಹಾಕಿರುವ ಸಾಮಾಜಿಕ ಬಹಿಷ್ಕಾರ ಈತನಿಗೆ ಅನ್ವಯಿಸುವುದಿಲ್ಲ. ಅದೂ ಅಲ್ಲದೆ ಈತ ಪೋಲೀಸನಾಗಿರುವುದರಿಂದ ಇಲ್ಲಿನ ಟ್ಯಾಕ್ಸಿ ಯೂನಿಯನ್ನಿನ ನಿಯಮಗಳಿಗೂ ಈತ ಅತೀತನಾಗಿದ್ದಾನೆ. ಹಾಗಾಗಿ ಪೋಲೀಸು ಡ್ಯೂಟಿ ಮುಗಿಸಿ ಉಳಿದ ಸಮಯದಲ್ಲಿ ಈತ ತನ್ನ ಸಫಾರಿ ಜೀಪನ್ನು ಬಾಡಿಗೆಗೆ ಓಡಿಸುತ್ತಾನೆ. ಅದೂ ಜನರೇ ಕಾಣಿಸದ ಮನಾಲಿ ರಸ್ತೆಯಲ್ಲಿ.

ಈ ರಸ್ತೆಯ ಕೆಲಸ ಶುರುವಾಗಿ ಹಲವು ವರ್ಷಗಳೇ ಕಳೆದಿದೆ. ಆದರೆ ನಲವತ್ತು ಕಿಲೋಮೀಟರಿನ ಕೆಲಸವೂ ಮುಗಿದಿಲ್ಲ.

ನೇಪಾಳದ ಕಡೆಯಿಂದ ಕೂಲಿಗೆ ಬಂದಿರುವ ನೇಪಾಳದ ಶೆರ್ಪಾಗಳು ಶುಕೂರನ ಜೀಪಿನಲ್ಲಿ ನಲವತ್ತು ಕಿಲೋಮೀಟರ್ ದೂರ ಸಾಗಿ ಅಲ್ಲಿಂದ ಎರಡು ರಾತ್ರಿ ಒಂದು ಹಗಲು ಪರ್ವತಗಳ ನಡುವೆ ನಡೆದು ಮನಾಲಿಯ ಬಳಿಯ ಹಳ್ಳಿಯೊಂದನ್ನು ತಲುಪಬೇಕಾಗಿತ್ತು.

ಅಲ್ಲಿಂದ ಬಸ್ಸು ಹತ್ತಿ ಮನಾಲಿ. ಅಲ್ಲಿಂದ ದೆಹಲಿ ಅಲ್ಲಿಂದ ಹರಿಧ್ವಾರ ಅಲ್ಲಿಂದ ಮುಂದೆ ನೇಪಾಳ ತಲುಪುವುದು ಅವರ ಆಲೋಚನೆಯಾಗಿತ್ತು.

ಹಾಗೇನಾದರೂ ಆ ದಾರಿಯಲ್ಲಿ ಹೋಗುವುದಿದ್ದರೆ ನನ್ನನ್ನೂ ಕರೆದುಕೊಂಡು ಹೋಗು ಎಂದು ನಾನು ಶುಕೂರನಲ್ಲಿ ಕೇಳಿಕೊಂಡಿದ್ದೆ.
ಅವನೂ ಒಪ್ಪಿಕೊಂಡಿದ್ದ.
ಶೆರ್ಪಾ ಕೂಲಿಯಾಳುಗಳೆಲ್ಲ ಹತ್ತಿ ಅವರ ತಲೆಹೊರೆಯನ್ನೆಲ್ಲ ಜೀಪಿನ ಮೇಲೆ ಎತ್ತಿಟ್ಟು.ಉಳಿದ ಜಾಗದಲ್ಲಿ ನನ್ನನ್ನೂ ಕೂರಿಸಿಕೊಂಡು ಆತ ಹೊರಟ.

ಇದುವರೆಗೆ ಈ ಐದುತಿಂಗಳುಗಳ ಕಾಲ ಕೂಲಿಯಾಳುಗಳಾಗಿ ದುಡಿದು ಈಗ ಊರಿಗೆ ಹೊರಟ ಅವರ ಕಲರವ ಚೇತೋಹಾರಿಯಾಗಿತ್ತು.
ಅವರು ನೇಪಾಳದ ಶೆರ್ಪಾ ಹಳ್ಳಿಯೊಂದರ ನಾಲ್ಕುಜನ ಯುವಕರು ಮತ್ತು ಒಬ್ಬಳು ಮಹಿಳೆ.

ಆಕೆ ಅವರಲ್ಲೊಬ್ಬನ ಹೆಂಡತಿಯಾಗಿದ್ದಳು ಮತ್ತು ಅವರೆಲ್ಲರಿಗೆ ಅಡುಗೆ ಮಾಡಿ ಬಡಿಸುವ ಕಾಯಕ ಅವಳದಾಗಿತ್ತು.
ಗಂಡಸರೆಲ್ಲರೂ ತೀಕ್ಷ್ಣ ಚಳಿ ಮತ್ತು ಸೂರ್ಯನ ಉರಿಯಲ್ಲಿ ಸಿಲುಕಿ ಗುರುತೇ ಸಿಗದ ಹಾಗೆ ಕಪ್ಪಾಗಿ ಹೋಗಿದ್ದರೆ ಆಕೆ ಮಾತ್ರ ಬಹುಶಃ ನೆರಳಲ್ಲೇ ಅಡುಗೆ ಮಾಡುತ್ತಿದ್ದುದರಿಂದ ಹಾಗೇ ಚೆಲುವೆಯಾಗಿ ಉಳಿದಿದ್ದಳು.

ಐದು ತಿಂಗಳ ಹಿಂದೆ ಹಿಮದ ಮೇಲೆ ಹೆಜ್ಜೆಯಿಕ್ಕುತ್ತಾ ನಡೆದುಬಂದ ಅವರೆಲ್ಲರೂ ಈಗ ಅದೇ ದಾರಿಯಲ್ಲಿ ತಿರುಗಿ ಹೋಗುತ್ತಿದ್ದರು.

ಆದರೆ ವಾಪಾಸು ಹೋಗುವಾಗ ಆಕೆ ಜೀಪಿನಲ್ಲೇ ವಾಂತಿಮಾಡಲು ತೊಡಗಿದುದರಿಂದ ಅವಳು ಇನ್ನು ಹೇಗೆ ಈ ಸುಸ್ತಿನಲ್ಲಿ ಎರಡು ಇರುಳು ಒಂದು ಹಗಲು ಪರ್ವತಗಳನ್ನು ಹತ್ತಿ ಇಳಿಯುತ್ತಾಳೋ ಎಂಬುದು ಅವರೆಲ್ಲರ ಆತಂಕಕ್ಕೆ ಕಾರಣವಾಗಿತ್ತು.

ಬರೀ ಜೀಪಿನಲ್ಲಿ ಕುಳಿತದ್ದಕ್ಕೆ ವಾಂತಿ ಬಂದಿದೆಯಾ ಅಥವಾ ಬೇರೇನಾದರೂ ಕಾರಣವಿದೆಯಾ? ಜೀಪು ಓಡಿಸುತ್ತಿದ್ದ ಶುಕೂರ್ ಪೋಲೀಸು ಧ್ವನಿಯಲ್ಲಿ ಗದರಿಸಿದ.
ಆತ ಕೇಳಿದ್ದು ನಿಜವಾಗಿತ್ತು.
ಆಕೆ ಬಸುರಿಯಾಗಿದ್ದಳು.
ಇಂಡಿಯಾಕ್ಕೆ ಬರುವಾಗ ಡಬಲ್ ವಾಪಾಸು ಹೋಗುವಾಗ ತ್ರಿಬಲ್ ಶುಕೂರ್ ಗಡಸು ದನಿಯಲ್ಲಿ ಹಾಸ್ಯ ಮಾಡುತ್ತಿದ್ದ.
ಆದರೆ ಅವರು ಯಾರೂ ಅದನ್ನು ಕೇಳಿಸಿಕೊಳ್ಳುವ ಮೂಡಿನಲ್ಲಿರಲಿಲ್ಲ.

ಅದಾಗ ತಾನೇ ಮುಸುಕುತ್ತಿದ್ದ ಕತ್ತಲು,ಬೀಸುತ್ತಿದ್ದ ಹಿಮದಂತಹ ಗಾಳಿ, ಜೊತೆಗೆ ಇನ್ನು ಈ ಬಸುರಿ ಹೆಂಗಸನ್ನೂ ಕರೆದುಕೊಂಡು ನಡೆಯಬೇಕಾದ ಎರಡು ಇರುಳು ಮತ್ತು ಒಂದು ಹಗಲಿನ ಪರ್ವತದಾರಿಯ ಕುರಿತೇ ಅವರೆಲ್ಲರು ಯೋಚಿಸುತ್ತಿದ್ದಂತಿತ್ತು.

ಸೌಂದರ್ಯ ಮತ್ತು ಸಕ್ಕರೆಬಾದಾಮಿಯ ಒಣಬೀಜ

ತಕ್ಕಮಟ್ಟಿಗೆ ಪರವಾಗಿಲ್ಲ ಎನ್ನಬಹುದಾದ ಕಾರ್ಗಿಲ್ಲಿನ ಹೋಟೆಲ್ಲೊಂದರಲ್ಲಿ ಮದ್ಯಾಹ್ನದ ಊಟಕ್ಕಾಗಿ ಕಾಯುತ್ತಿದ್ದೆ.

ಅದಕ್ಕೂ ಮೊದಲು ವಾಹನಗಳೇ ವಿರಳವಾಗಿರುವ ಟ್ರಾಫಿಕ್ ವೃತ್ತವೊಂದನ್ನು ಕಾಯುತ್ತಿದ್ದ ಪೋಲೀಸ್ ಅಧಿಕಾರಿಯೊಬ್ಬ ತನ್ನ ಕೆಲಸವನ್ನು ಅಲ್ಲೇ ನಿಲ್ಲಿಸಿ ನನ್ನ ಬಳಿ ಬಂದು ಬಹಳ ಹೊತ್ತು ಕೈಕುಲುಕುತ್ತಾ ಬೆನ್ನು ತಟ್ಟುತ್ತಾ ಮಾತನಾಡಿದ್ದ.

ಬೇರೇನೂ ಇಲ್ಲದ ಬರಿಯ ಯುದ್ದಗಳೇ ನಡೆದಿರುವ ಈ ಮರಳು ಮತ್ತು ಹಿಮಮಿಶ್ರಿತ ಬೆಂಗಾಡಿನಲ್ಲಿ ನಾನು ಒಬ್ಬನೇ ಏಕೆ ತಿರುಗಾಡುತ್ತಿರುವೆ ಎಂಬುದು ಆತನಿಗೆ ಅಚ್ಚರಿಯ ವಿಷಯವಾಗಿತ್ತು.
ನನಗೂ ಇದು ಒಂದು ಅಚ್ಚರಿಯ ವಿಷಯವೇ.
ಯಾಕೆ ಗೊತ್ತಿಲ್ಲ.
ಬಹುಶಃ ಹಿಮದ ಮರುಳು ಮತ್ತು ಪರ್ವತಗಳ ಹುಚ್ಚು ಇದಾಗಿರಬಹುದು ಎಂದು ನಾನು ಅವನನ್ನೇ ನೋಡುತ್ತ ಸುಮ್ಮನೆ ಮನಸಿನಲ್ಲೇ ಗುಣಗುಣಿಸುತ್ತಿದ್ದೆ ಮತ್ತು ಇಲ್ಲಿ ಒಳ್ಳೆಯ ಊಟದ ಹೋಟೆಲ್ಲು ಎಲ್ಲಿದೆ ಎಂದು ಕೇಳಿದ್ದೆ.

ಮುರುಕು ಮಹಡಿಯೊಂದರತ್ತ ಕೈತೋರಿಸಿ ‘ಹೊರಗಿಂದ ನೋಡಲು ಚೆನ್ನಾಗಿಲ್ಲ ಆದರೆ ಒಳಗೆ ಊಟ ಹೊಟ್ಟೆ ತುಂಬುವ ಹಾಗಿರುತ್ತದೆ’ ಎಂದು ಸೀಟಿ ಊದುತ್ತಾ ಆತ ಮತ್ತೆ ಟ್ರಾಫಿಕ್ ಕಾಯಲು ಹೋಗಿದ್ದ.
ಊಟಕ್ಕೆ ಕಾಯುತ್ತಾ ನಾನು ಮನುಷ್ಯರನ್ನು ನೋಡುತ್ತಿದ್ದೆ.


ಮಧ್ಯಾಹ್ನದ ಹೊತ್ತು ಮೇಜಿನ ಸುತ್ತು ಕೂತಿರುವ ಮನುಷ್ಯ ಮುಖಗಳು.
ಯಾರ ಮುಖದಲ್ಲೂ ದಾವಂತವಿಲ್ಲ.
ಯಾರಲ್ಲೂ ಅಸಹನೆ ಕಾಣಿಸುತ್ತಿಲ್ಲ.

ಬಹುಶಃ ಮನೆಯಲ್ಲಿ ಊಟಕ್ಕೆ ಕುಳಿತಿದ್ದರೂ ತಾವು ಹೀಗೇ ಕುಳಿತಿರುತ್ತಿದ್ದೆವೇನೋ ಎಂಬಂತೆ ಒಬ್ಬರ ತಟ್ಟೆಯಿಂದ ಇನ್ನೊಬ್ಬರು ಹಂಚಿಕೊಂಡು ಕೊಟ್ಟುಕೊಂಡು ತಿನ್ನುತ್ತ ಕುಳಿತಿರುವ ಸಂಪ್ರದಾಯಬದ್ಧ ಶಿಯಾ ಕುಟುಂಬಗಳು.

ನಡು ನಡುವೆ ನನ್ನಂತೆ ಕಾಯುತ್ತ ಕುಳಿತಿರುವ ಒಂಟಿ ಮನುಷ್ಯರು.
ಎದುರಿನ ಮೇಜಿನಲ್ಲಿ ಬಣ್ಣದ ಹೂವುಗಳನ್ನು ಪೋಣಿಸಿಕೊಂಡ ಹ್ಯಾಟೊಂದನ್ನು ತಲೆಯ ಮೇಲಿಟ್ಟು ಕುಳಿತಿರುವ ಒಬ್ಬ ಸುಂದರ ಪುರುಷ ನನ್ನ ನೋಡಿ ನಗುತ್ತಿದ್ದ.
ಈತನು ಯಾಕೆ ಹೀಗೆ ಸುಂದರವಾಗಿ ನನ್ನ ನೋಡಿ ನಗುತ್ತಿರುವ ಎಂದು ನಾನೂ ನಕ್ಕೆ.
ನೋಡಿದರೆ ಆತ ಎಲ್ಲರನ್ನೂ ನೋಡಿ ನಗುತ್ತಿದ್ದ.

ಇನ್ನೂ ನೋಡಿದರೆ ಆತನ ಮುಖವೇ ಸದಾ ನಗುತ್ತಿರುವಂತೆ ಕಾಣುತ್ತಿತ್ತು.
ಹೋಗಿ ಆತನ ಎದುರು ಕುಳಿತುಕೊಂಡು ನಾನೂ ನಕ್ಕೆ.
ನಾವು ನಗುವಿನಲ್ಲೇ ಮಾತನಾಡಿಕೊಂಡೆವು.
ಯಾಕೆಂದರೆ ನನಗೆ ಗೊತ್ತಿರುವ ಯಾವ ಭಾಷೆಯೂ ಆತನಿಗೆ ಬರುತ್ತಿರಲಿಲ್ಲ.ಮತ್ತು ಆತನ ಭಾಷೆ ಅಲ್ಲಿರುವ ಯಾರಿಗೂ ತಿಳಿದಿರಲಿಲ್ಲ.

ಬಹುಶ: ಹಾಗಾಗಿಯೇ ಆತ ನಗು ಅನ್ನುವುದನ್ನು ತನ್ನ ಮುಖದ ಮೇಲೆ ಕೂಡಿಸಿಕೊಂಡು ತಾನೂ ಊಟಕ್ಕಾಗಿ ಕಾಯುತ್ತಿದ್ದ.
ಹೋಟೆಲ್ಲಿನಿಂದ ಹೊರಗೆ ಬಂದವನು ಟ್ರಾಫಿಕ್ ಕಾಯುತ್ತಿದ್ದ ಪೋಲೀಸ್ ಅಧಿಕಾರಿಯ ಬಳಿ ಹೋದೆ.
ಆತ ರಸ್ತೆ ಬದಿಯಲ್ಲಿ ಟೊಮೆಟೋ ಮಾರುವ ಹೆಂಗಸೊಬ್ಬಳ ಜೊತೆ ಸರಸವೋ ಜಗಳವೋ ಏನೋ ಒಂದನ್ನು ನಡೆಸುತ್ತಾ ಆದಷ್ಟು ಕಡಿಮೆ ಬೆಲೆಗೆ ಆದಷ್ಟು ಹೆಚ್ಚು ಟೊಮೇಟೋಗಳನ್ನು ತನ್ನ ಚೀಲದೊಳಗೆ ತುಂಬುವ ಹುನ್ನಾರ ಮಾಡುತ್ತಿದ್ದ.
ನನ್ನ ಕಂಡವನು ನಗುತ್ತಾ ಸುಭಗನಂತೆ ಹತ್ತಿರ ಬಂದ.

ಆತನೊಡನೆ ನಾನು ತಲೆಯ ಮೇಲಿನ ಹ್ಯಾಟಿಗೆ ಹೂ ಮುಡಿದುಕೊಂಡು ನಗುತ್ತ ಹೋಟೆಲ್ಲಿನಲ್ಲಿ ಕುಳಿತಿದ್ದ ಗಂಡಸಿನ ಕುಲದ ಕುರಿತು ಕೇಳಿದೆ.
ಆ ಪ್ರಶ್ನೆಗೆ ಆತನೂ ನಕ್ಕ.
ಆ ಫೋಲೀಸು ಅಧಿಕಾರಿಯು ಹೇಳಿದ ಕಥೆಯು ಮನೋಹರವೂ ನಂಬಲು ಅಸಾಧ್ಯವೂ ಆಗಿತ್ತು.

ಆ ಗಂಡಸು ಕಾರ್ಗಿಲ್ಲಿನಿಂದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿರುವ ಬತಾಲಿಕ್ ಪ್ರಾಂತ್ಯದವನು.

ಪ್ರಾಂತ್ಯದ ಸ್ತ್ರೀಯರು ಪುರುಷರಿಗಿಂತ ಸುಂದರಿಯರೋ ಅಥವಾ ಪುರುಷರು ಸ್ತ್ರೀಯರಿಗಿಂತ ಸುಂದರರೋ ಎಂದು ಹೇಳಲಾಗದ ಹಾಗೆ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವರಂತೆ.
ಅವರು ದನದ ಹಾಲೂ ಕುಡಿಯುವುದಿಲ್ಲ ದನದ ಮಾಂಸವನ್ನೂ ತಿನ್ನುವುದಿಲ್ಲವಂತೆ.

ಒಂದು ಕಾಲದಲ್ಲಿ ಅವರ ಯಕ್ಷ ಯಕ್ಷಿಯರನ್ನು ಪೂಜಿಸುತ್ತಿದ್ದರಂತೆ.
ಆದರೆ ಅವರು ಆನಂತರ ಬುದ್ಧನನ್ನು ದೇವರು ಎಂದು ಒಪ್ಪಿಕೊಂಡರಂತೆ.
ಬತಾಲಿಕ್ ಪ್ರಾಂತ್ಯದ ಮೂರುನಾಲ್ಕು ಹಳ್ಳಿಗಳಲ್ಲಿ ಮಾತ್ರ ಇರುವ ಇವರನ್ನು ದರ್ದ್ ಗಳೆಂದೂ ಬ್ರೋಗ್ಪಾಗಳೆಂದೂ ಕರೆಯುತ್ತಾರಂತೆ.

ಹೀಗೆ ಹೇಳುತ್ತಾ ಹೋದ ಆ ಪೋಲೀಸ್ ಅಧಿಕಾರಿಯು ಆದರೆ ನಿನಗೆ ಅವರ ಪ್ರಾಂತ್ಯಕ್ಕೆ ಹೋಗಬೇಕೆಂಬ ಆಸೆಯಿದ್ದರೂ ಅಷ್ಟು ಸುಲಭವಾಗಿ ಹೋಗಲಾಗುವುದಿಲ್ಲ.ಆ ಬೆಟ್ಟಗಳ ಆಚೆಕಡೆ ಪಾಕಿಸ್ತಾನದ ಬಾಲ್ತಿಸ್ತಾನ. ಈಚೆಕಡೆ ಇಂಡಿಯಾದ ಬತಾಲಿಕ್ ಬೆಟ್ಟಗಳು.ನಡುವೆ ಇಳಿಜಾರಿನಲ್ಲಿ ಈ ಹಳ್ಳಿಗಳು. ಹೋಗಲು ಸೇನೆಯ ಅನುಮತಿ ಬೇಕು. ಒಂದು ವೇಳೆ ಹೋದರೂ ಅವರೇನೂ ನಿನ್ನೊಡನೆ ಹೆಚ್ಚು ಮಾತನಾಡಲಾರರು.ಏಕೆಂದರೆ ಅವರಿಗೆ ನಿನ್ನಂತಹ ಕಂದು ಮುಖದ ಭಾರತೀಯರಿಗಿಂತ ಬೆಳ್ಳಗಿರುವ ಯುರೋಪಿಯನ್ನರೇ ಇಷ್ಟ. ಅವರ ಪೂರ್ವಜರು ಯುರೋಪಿನಿಂದ ದಂಡೆತ್ತಿ ಬಂದ ಅಲೆಕ್ಸಾಂಡರನ ಕುಲದವರು.ಅವರು ನಿಜವಾದ ಆರ್ಯನ್ನರು.ನಮ್ಮಂತವರತ್ತ ಕಣ್ಣೆತ್ತಿಯೂ ನೋಡಲಾರರು ಎಂದ.

ಆಮೇಲೆ ಇನ್ನೊಂದು ಗುಟ್ಟನ್ನೂ ಹೇಳಿದ.
ಅದು ಇನ್ನೂ ತಮಾಷೆಯಾಗಿತ್ತು.

ಅದೇನೆಂದರೆ ಕೆಲವು ವರ್ಷಗಳ ಹಿಂದೆ ಜರ್ಮನಿಯ ಕೆಲವು ಸುಂದರಿಯರು ಪ್ರವಾಸಿಗಳ ಹಾಗೆ ಬಂದು ಈ ಕಣಿವೆಗಳನ್ನು ಇಳಿದು ಈ ಹಳ್ಳಿಗಳಲ್ಲಿ ತಂಗಿ ಇಲ್ಲಿನ ಕೆಲವು ಮಕ್ಕಳಿರುವ ವಿವಾಹಿತ ಬ್ರೋಗ್ಪಾ ಪುರುಷರನ್ನು ತಾತ್ಕಾಲಿಕವಾಗಿ ವರಿಸಿ ಬಸುರಿಯರಾಗಿ ಹೋಗಿರುವರಂತೆ.

ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ನಿಜವಾದ ಆರ್ಯನ್ನರಾಗಿ ಅಲ್ಲಿ ಬೆಳೆಯುತ್ತಿರುವರಂತೆ.
ಬಹುಶಃ ನಾನು ಹೋಟೆಲ್ಲಿನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನೋಡಿದ ಗಂಡಸೂ ಹೀಗೇ ಜರ್ಮನಿಯಿಂದ ಬರಬಹುದಾದ ಬಿಳಿಯ ಸುಂದರಿಯೊಬ್ಬಳಿಗಾಗಿ ಕಾಯುತ್ತಿರಬಹುದು.

ಬಹುಶ: ಆತನು ತನ್ನ ಮುಖದಲ್ಲಿ ಶಾಶ್ವತವಾಗಿ ಇಟ್ಟುಕೊಂಡಿರಬಹುದಾದ ಆ ನಗು ಆಕೆಗಾಗಿಯೇ ಮೀಸಲಿರಬಹುದು.

ಬಹುಶಃ ಆತನ ಹ್ಯಾಟಿನ ಮೇಲೆ ಪೋಣಿಸಿರುವ ಕೃತಕ ಹೂಗಳೂ ಕೂಡಾ ಆಕೆಗಾಗಿಯೇ ಇರಬಹುದು ಎಂದೆಲ್ಲ ಎಣಿಸುತ್ತಾ ಅಲ್ಲಿಂದ ನಡೆದ ನಾನು ಮಗದೊಂದು ದಿನ ಅದು ಹೇಗೋ ಸಾದಿಸಿ ಅವರ ಹಳ್ಳಿಗಳಿಗೂ ಹೋಗಿ ನೋಡಿಯೇ ಬಂದೆ.

ಹೋಗಿ ನೋಡಿದರೆ ಹಿಮಪರ್ವತಗಳ ಅಡಿಯ ಶಿಲಾಬೆಟ್ಟಗಳನ್ನು ಸೀಳಿ ಹರಿಯುತ್ತಿರುವ ಸಿಂಧೂ ನದಿಯ ದಡದ ಈ ನಾಲ್ಕು ಹಳ್ಳಿಗಳು.

ಧರ್ಮ ಗ್ರಂಥಗಳಲ್ಲಿ ವರ್ಣಿಸಲಾಗಿರುವ ಸ್ವರ್ಗತೋಪುಗಳ ಹಾಗಿರುವ ಸಕ್ಕರೆಬಾದಾಮಿ ಮರಗಳ ನಡುವೆ ಅಡಗಿರುವ ಮನೆಗಳು.
ಸ್ವಲ್ಪ ಸೋಮಾರಿಗಳ ಹಾಗೆಯೂ ನನ್ನ ಹಾಗೆ ಬೇಜವಾಬ್ಧಾರಿಯಿಂದ ಕೂಡಿರುವ ಹಾಗೆಯೂ ಅಡ್ಡಾಡುತ್ತಿರುವ ಗಂಡಸರು.
ಮೂಗಿನಿಂದ ಸಿಂಬಳ ಸುರಿಸುತ್ತಾ ಜಾರುವ ಯೂನಿಪಾರ್ಮ್ ಲಂಗವನ್ನು ಮೇಲಕ್ಕೆಳೆದುಕೊಳ್ಳುತ್ತಿರುವ ಶಾಲೆಯ ಕಂದಮ್ಮಗಳು.
ಗಂಡಸರ ಕುರಿತು ಒಂದು ರೀತಿಯ ಹಗುರಭಾವನೆಯನ್ನು ಮುಖದಲ್ಲಿ ತುಂಬಿಕೊಂಡು ಮನೆವಾರ್ತೆಯಲ್ಲಿ ಮಗ್ನರಾಗಿರುವ ಸ್ತ್ರೀಯರು.

ರೂಪವೊಂದನ್ನು ಬಿಟ್ಟರೆ ಅವರೆಲ್ಲರೂ ಪ್ರವಾಸೀಧಾಮವಾಗಿರುವ ಉತ್ತರದ ಹಳ್ಳಿಯೊಂದರ ಮನುಷ್ಯರ ಹಾಗೆಯೇ ಇದ್ದರು.
ಜೊತೆಗೆ ಆಸೆಬುರುಕರೂ ಆಗಿದ್ದರು.

ಪ್ರವಾಸಿಗಳು ಫೋಟೋ ತೆಗೆಯುತ್ತಾರೆ. ತೆಗೆದ ಫೋಟೋಗಳನ್ನು ಹಣಕ್ಕಾಗಿ ಮಾರುತ್ತಾರೆ.ಹಾಗಾಗಿ ಫೋಟೋ ತೆಗೆಯುವ ಮೊದಲು ನೀವು ಅವರಿಂದ ಕಾಸು ವಸೂಲಿ ಮಾಡಿ ಎಂದು ಆ ನಾಲ್ಕೂ ಹಳ್ಳಿಯ ಮುಖಂಡರು ಫರ್ಮಾನು ಹೊರಡಿಸುತ್ತಿದ್ದರು.

ಹಾಗಾಗಿ ನಾನು ಕ್ಯಾಮರಾ ಕೈಗೆತ್ತಿದ ತಕ್ಷಣ ಅವರು ಕಾಸಿಗಾಗಿ ಧ್ವನಿ ಎತ್ತುತ್ತಿದ್ದರು.
ಅದೊಂದು ಥರಾ ತಮಾಷೆ ಎನಿಸಿ ಸುಸ್ತಾಗಿ ಹೋಗಿದ್ದೆ.
ಹಸಿದವನಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಿಗುತ್ತಿದ್ದುದು ಒಣಗಿಸಿಟ್ಟಿದ್ದ ಸಕ್ಕರೆಬಾದಾಮಿ ಬೀಜಗಳು.
ತುಂಬ ಹೊತ್ತು ಹೊಟ್ಟೆ ಹಸಿದವನಿಗೆ ಮನುಷ್ಯ ಸೌಂದರ್ಯಯನ್ನು ಹೆಚ್ಚುಹೊತ್ತು ನೋಡಲಾಗುವುದಿಲ್ಲವಂತೆ.
ಹಾಗಾಗಿ ಮುಂದಿನ ಹಳ್ಳಿಯಲ್ಲಾದರೂ ಸೌಂದರ್ಯ ಮತ್ತು ಸಕ್ಕರೆಬಾದಾಮಿಯ ಒಣಬೀಜದ ಬದಲು ತಿನ್ನಲು ಹೊಟ್ಟೆಗೆ ಅನ್ನ ಸಿಗಬಹುದೋ ಎಂದು ಯೋಚಿಸುತ್ತಿದ್ದೆ.

(ಫೋಟೋಗಳು: ಲೇಖಕರದು)

(ಮುಂದುವರಿಯುವುದು)