ಶ್ರೀಮಂತರು ಭಿಕ್ಷೆ ಬೇಡುತ್ತಿದ್ದಾರೆ

ಕುರುಡು ಕಾಂಚಾಣಕ್ಕೆ
ಕಣ್ಣು ಬಂದಿದೆ
ಸಿರಿಗರ ಬಡಿದವರಿಗೆ
ಎಚ್ಚರವಾಗಿದೆ

ಮೈಮೇಲೆ ಕೋಟು ಸೂಟು
ಬೂಟು, ಮೇಲೊಂದಿಷ್ಟು ಸೇಂಟು
ಕೈಯಲಿ ಬೆಳ್ಳಿ ಬಂಗಾರದ ತಟ್ಟೆ
ಜೊತೆಗೆ ಹಸಿದ ಹೊಟ್ಟೆ

ಅಲೆಯುತ್ತಾರೆ ಬೀದಿ ಬೀದಿ
ತುತ್ತು ಅನ್ನಕ್ಕಾಗಿ, ಹನಿ ನೀರಿಗಾಗಿ
ಅನ್ನದಾತನ ಅಂಗಲಾಚುತ್ತ
ನೇಗಿಲಯೋಗಿಯ ಹುಡುಕುತ್ತ
ಭೂತಾಯಿಯ ಕ್ಷಮೆಯನು ಕೇಳುತ್ತ
ಕಂಗಾಲಾಗಿದೆ ಉಳ್ಳವರ ಚಿತ್ತ

ಸೋತ ರೈತ, ಜೀವವಿಲ್ಲದ ಭೂಮಿ
ಇವರಿಬ್ಬರ ನೋವ ಸಹಿಸದ ವರುಣ
ಎಲ್ಲರ ಮೌನಕ್ರಾಂತಿಯ ಹರತಾಳಕ್ಕೆ
ತಲ್ಲಣಗೊಂಡಿದೆ ಕಾಂಚಾಣ

ಇನ್ನೆಲ್ಲಿಯ ಅನ್ನ ನೀರು?
ಉಳುವ ಯೋಗಿಯ
ಬೆವರ ಬೆಲೆ ಅಳಸಿ
ದುಡ್ಡಿನ ಮದದಲಿ
ಮೆರೆದವರಲ್ಲವೆ?
ಇದೆಂತಹ ದುಃಸ್ಥಿತಿ
ಹಲುಬುವುದೇತಕೆ?

ಉಪ್ಪು ತಿಂದವರು
ನೀರು ಕುಡಿಯಲೇಬೇಕು
ಹದ್ದು ಮೀರಿದವರ ಬದುಕಿಗೆ
ಗುದ್ದು ಬೀಳಲೇ ಬೇಕು

ರೈತ ಕಾಣೆಯಾಗಿದ್ದಾನೆ
ಶ್ರೀಮಂತರು ಭಿಕ್ಷೆ ಬೇಡುತ್ತಿದ್ದಾರೆ

ಲತಾ ವಾಲಿ ಸವಣೂರಿನವರು
ಗೃಹಿಣಿಯಾಗಿದ್ದು ಓದು ಬರಹದ ಇವರ ಹವ್ಯಾಸಗಳು
“ಪರಿಮಳ” ಇವರ ಪ್ರಕಟಿತ ಕವನ ಸಂಕಲನ