“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ….. ನಾನು ಮೇಡಂ ಅಂತಾನೋ ಇಲ್ಲ ಲೇಡಿ ಅಂತಾನೋ ಕರೀತೀನಿ ಬಿಡಿ” ಅನ್ನುತಿದ್ದರು ಇವರು. ಹೀಗಾಗಿ ಮನೆ ಬಾಗಿಲಿಗೆ ಒಂದಲ್ಲಾ ಒಂದು ಕೆಲಸ ಮಾಡಿಕೊಡಲು ಬರುವ ಎದಿರು ಮನೆ ಸಾವಿತ್ರಮ್ಮ ಇವರ ಪಾಲಿಗೆ ತಾಯಿ ಆದರು. ”
ನಾಡಿನ ಹೆಸರಾಂತ ಕಥೆಗಾರ ನಾ.ಡಿಸೋಜಾ ಬರೆದ ವಾರದ ಕಥೆ ನಿಮ್ಮ ಈ ಭಾನುವಾರದ ಓದಿನ ಸುಖಕ್ಕೆ.

ಬದುಕಿನಲ್ಲಿ ಒಂದು ಹಂತಕ್ಕೆ ಬಂದೆ ಅನ್ನುವಾಗ ಹೀಗೆ ಆಯಿತೇ ಅನಿಸುತ್ತದೆ. ಮನೆ ಕಟ್ಟಿದೆ. ಮಗಳ ಮದುವೆ ಮಾಡಿಸಿದೆ. ಮಗನಿಗೊಂದು ಕೆಲಸ ಕೊಡಿಸಿ ಅವನಿಗೂ ಒಂದು ಮದುವೆ ಮಾಡಿಸಿದೆ. ಆತ ತಾನು ಇಲ್ಲಿ ಇರವುದಿಲ್ಲ ಎಂದಾಗ ಅವನಿಗೆ ಕೈ ತುಂಬ ಹಣ ಕೊಟ್ಟು ಅವನನ್ನ ಅಮೆರಿಕೆಗೂ ಕಳುಹಿಸಿದೆ. ಇನ್ನೊ ಎಲ್ಲ ತೀರ್ಮಾನವಾಯಿತು ಎಂದು ನಿಸೂರಾಗಿ ಕುಳಿತಾಗ ಇವಳು ಕೈ ಕೊಟ್ಟಳು. ಈಗ ಕೆಲ ವರ್ಷಗಳಿಂದ ಮೊಣಕಾಲು ನೋವು ಮಂಡಿ ನೋವು ಎದೆಯಲ್ಲಿ ಉರಿ ಅನ್ನುತ್ತಿದ್ದವಳು ಒಂದು ದಿನ ನನ್ನ ಕೈಲಿ ಏನೂ ಆಗುವುದಿಲ್ಲ ಎಂದು ಮಲಗಿಬಿಟ್ಟಳು. ಎದಿರು ಮನೆ ಸಾವಿತ್ರಮ್ಮನನ್ನ ಕರೆದು ಅವಳೇ ಅದು ಇದು ಕೆಲಸ ಮಾಡಿಕೊಂಡಳು.

“ಇವರಿಗೆ ಎಲ್ಲಾನು ನಾನೇ ಮಾಡಬೇಕು ಸಾವಿತ್ರಮ್ಮ. ಏನು ಮಾಡಲಿ ಮುದಿಗೂಬೆಯಾಗಿ ಮೂಲೇಲಿ ಕೂತಿದೀನಿ…. ಸ್ವಲ್ಪ ಸಹಾಯಮಾಡಿ….” ಎಂದು ಅಲವತ್ತುಕೊಂಡಳು. ಆಕೆಯಿಂದ ಕೆಲಸ ಮಾಡಿಸಿಕೊಂಡಳು. ಆಕೆ ಕೂಡ “ಇರಲಿ ಬಿಡಿ ಗಿರಿಜಮ್ಮ ಏನು ಮಾಡಬೇಕು ಹೇಳಿ ಮಾಡಿಕೊಡ್ತೀನಿ” ಎಂದು ಅವಳ ಸಹಾಯಕ್ಕೆ ನಿಂತರು. ಎದಿರು ಮನೆ ಸಾವಿತ್ರಮ್ಮ ಇಲ್ಲಿ ಒಂಟಿ ಹೆಂಗಸು. ಅವಳ ಮಗ ಅಮೇರಿಕಾ ಸೇರಿ ಎರಡು ವರ್ಷ. ಇಲ್ಲಿ ಸಾವಿತ್ರಮ್ಮ ಒಂಟಿ. ತನಗಾಗಿ ಅನ್ನ ಬೇಯಿಸಿಕೊಂಡು ಸಾರು ಹುಳಿ ಬೇಯಿಸಿಕೊಂಡು ಬದುಕಿದಾಕೆ. ಆಕೆಯ ಒಂಟಿ ಬದುಕಿನ ಬಗ್ಗೆ ಕೇರಿಯ ಎಲ್ಲರಿಗೂ ಅನುಕಂಪ. ಆಕೆ ಪಾಪ ಒಳ್ಳೆಯ ಹೆಂಗಸು. ಒಬ್ಬರ ಹತ್ತಿರ ಮಾತಿಲ್ಲ ಕತೆಯಿಲ್ಲ. ತಾನಾಯಿತು ತನ್ನ ಮನೆಯಾಯಿತು. ಯಾರಿಗಾದರೂ ಉಪಕಾರ ಮಾಡಬೇಕು ಅಂದರೆ ಆಕೆ ಮುಂದೆ. “ಸಾವಿತ್ರಮ್ಮ ಬೇಜಾರಾಗೋದಿಲ್ಲವೇನ್ರಿ” ಎಂದು ಯಾರಾದರೂ ಕೇಳಿದರೆ “ಎಲ್ಲ ನುಂಗಿಕೋಬೇಕಮ್ಮ, ಬೇಜಾರು ಮಾಡಿಕೊಂಡ್ರೆ ಏನು ಪ್ರಯೋಜನ?” ಎಂದು ಮರು ಪ್ರಶ್ನೆ ಕೇಳುವವರು ಸಾವಿತ್ರಮ್ಮ.

ಹಿಂದೆಲ್ಲ ಬಾಗಿಲಲ್ಲಿ ನಿಂತೇ “ಇದೀರಾ ಗಿರಿಜಮ್ಮ” ಎಂದು ಕೇಳಿ ಒಳಬರುತ್ತಿದ್ದ ಆಕೆ ಗಿರಿಜಮ್ಮ ಇಲ್ಲಿ ಈಗ ಹಾಸಿಗೆ ಹಿಡಿದ ಮೇಲೆ “ಗಿರಿಜಮ್ಮಾ” ಅಂದುಕೊಂಡೇ ಒಳಬರತೊಡಗಿದರು. ಅವಳು ಒಳಗಿನಿಂದ ಬನ್ನಿ ಸಾವಿತ್ರಮ್ಮ ಅನ್ನಬೇಕು. ಆಕೆಗೆ ನಿದ್ರೆಯೋ ಮಂಪರೋ ಬಂದಿದ್ದರೆ ಬನ್ನಿ ತಾಯಿ ಎಂದು ಹೇಳುವ ಸರದಿ ತನ್ನದು. ಹೆಣ್ಣು ಮಕ್ಕಳು ಅವರು ಯಾವುದೇ ವಯಸ್ಸಿನವರಾಗಲಿ ಅವರನ್ನು ತಾಯಿ ಎಂದೇ ಕರೆಯುವವ ತಾನು. ಇದನ್ನ ಮೆಚ್ಚಿಕೊಂಡ ಒಪ್ಪಿಕೊಂಡ ಹೆಂಗಸರೂ ಇದ್ದರು. ಆದರೆ ಆಫೀಸಿನಲ್ಲಿ ಕೆಲಸ ಮಾಡುವ ಕೆಲ ಹುಡುಗಿಯರು ಇದನ್ನು ಸಹಿಸುತ್ತಿರಲಿಲ್ಲ. “ಏನ್ಸಾರ್ ನೀವು ತಾಯಿ ಬಾಯಿ ಅಂತೀರಾ ?” ಎಂದು ಮರುಪ್ರಶ್ನೆ ಕೇಳುತ್ತಿದ್ದರು. ಈ ಎಳೆಯ ಹುಡುಗಿಯರಿಗೆ ತಮ್ಮನ್ನು ಇತರರು ಮೇಡಂ ಎಂದೋ ಇಲ್ಲ ಬೇರೊಂದು ರೀತಿಯಲ್ಲೋ ಕರೆಯಬೇಕು ಅನ್ನುವ ಚಟ. ತಾಯಿ ಅನ್ನಿಸಿಕೊಳ್ಳಲು ಅವರಿಗೆ ಏನೋ ಮುಜುಗುರ.

“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ….. ನಾನು ಮೇಡಂ ಅಂತಾನೋ ಇಲ್ಲ ಲೇಡಿ ಅಂತಾನೋ ಕರೀತೀನಿ ಬಿಡಿ” ಅನ್ನುತಿದ್ದರು ಇವರು. ಹೀಗಾಗಿ ಮನೆ ಬಾಗಿಲಿಗೆ ಒಂದಲ್ಲಾ ಒಂದು ಕೆಲಸ ಮಾಡಿಕೊಡಲು ಬರುವ ಎದಿರು ಮನೆ ಸಾವಿತ್ರಮ್ಮ ಇವರ ಪಾಲಿಗೆ ತಾಯಿ ಆದರು. ಈ ಸಾವಿತ್ರಮ್ಮನ ಬಗ್ಗೆ ಇವರಿಗೆ ಕೂಡ ಅನುಕಂಪವೇ. ಬಹಳ ವರ್ಷಗಳಿಂದ ಅವರನ್ನ ನೋಡಿ ಬಲ್ಲರು. ಸಾವಿತ್ರಮ್ಮನ ಗಂಡ ರಾಮರಾಯರು ಬಹಳ ವರ್ಷಗಳಿಂದ ತಮ್ಮ ಸ್ನೇಹಿತರಾಗಿದ್ದವರೇ, ಅವರೂ ಒಳ್ಳೆಯ ಜನ. ಒಂದು ಕೋಪವಿಲ್ಲ. ಒಂದು ಜಂಬವಿಲ್ಲ. ಸದಾ ಮೆದುನುಡಿ. ಮುಖದ ಮೇಲೆ ಸದಾ ಮಂದಹಾಸ. ಮಗ ಅಮೆರಿಕಕ್ಕೆ ಹೋಗುವ ತನಕ ಇವರದ್ದು ಕೇರಿಯಲ್ಲಿ ಒಂದು ಸುಖದ ಸುಂದರ ಕುಟುಂಬ. ನಂತರ ಕೂಡ ಗಂಡ ಹೆಂಡತಿ ಸುಖವಾಗಿದ್ದರು. ಇಬ್ಬರಿಗೂ ವಯಸ್ಸಾಗಿತ್ತು. ಆದರೂ ಪರಸ್ಪರ ಆಕರ್ಷಣೆ ಕಡಿಮೆ ಆಗಿರಲಿಲ್ಲ. ಒಬ್ಬರನ್ನು ಇನ್ನೊಬ್ಬರು ಅವಲಂಬಿಸಿಕೊಂಡೇ ಇದ್ದರು. ಇದು ಕೇರಿಗೆಲ್ಲ ಒಂದು ವಿಶೇಷವಾಗಿತ್ತು. ಕೇರಿಯಲ್ಲಿರುವ ಯಾವ ಯುವ ದಂಪತಿಗಳೂ ಈ ವೃದ್ಧ ದಂಪತಿಗಳನ್ನ ಕಂಡು ಮತ್ಸರ ಪಡುವಂತಿದ್ದರು.

ಈಗ ಎರಡು ವರ್ಷಗಳ ಹಿಂದೆ ಅವರ ಮಗ ತನ್ನ ಹೆಂಡತಿಯನ್ನ ಕರೆದುಕೊಂಡು ಮಗನ ಹಾಗೆಯೇ ಅಮೇರಿಕೆಗೆ ಹೋದಾಗ ಇಲ್ಲಿ ರಾಮರಾಯರು ಅವರ ಹೆಂಡತಿ ಸಾವಿತ್ರಮ್ಮ ಅನಾಥರಾದರು. “ಇಷ್ಟು ದಿನ ಮನೆ ತುಂಬ ಜನ ಇರೋರು. ಮಗ ಸೊಸೆ ಮೊಮ್ಮಗ ಇವಳು ಅಂತ ಮಾತು ಗಲಾಟೆ…. ಈಗ ಇವಳು ನಾನು ಇಬ್ಬರೇ” ಎಂದು ರಾಮರಾಯರು ತನ್ನ ಮುಂದೆ ಕೊರಗುತ್ತಿದ್ದರು.
“ಪ್ರಾರಂಭದಲ್ಲಿ ನಾವಿಬ್ಬರೇ ಇದ್ದುದು. ಮದುವೆಯಾದ ಹೊಸದರಲ್ಲಿ ಈ ಏಕಾಂತ ಸುಖದ್ದೇ. ಈಗ ಹಾಗಲ್ಲ ಮೊಮ್ಮಗ ಸೊಸೆ ಎದಿರು ಓಡಾಡಬೇಕು ಅನಿಸುತ್ತೆ. ಅವರ ಮಾತು ಕೇಳಬೇಕು ಅನಿಸುತ್ತೆ. ಮೊಮ್ಮಗನ ಬೆಳವಣಿಗೆ ನೋಡಬೇಕು ಅಂತ ಮನಸ್ಸು ಬಯಸುತ್ತೆ. ಆದರೆ ಏನು ಮಾಡೋದು? ಈ ಅಮೇರಿಕ ನಮ್ಮ ಸುಖಾನ ಕಸಿದುಕೊಂಡು ಬಿಡ್ತು” ಎಂದು ಹೇಳಿದ್ದರು ತನ್ನ ಮುಂದೆ. ಆಗ ತಾನು ಅವರಿಗೆ ಸಮಾಧಾನ ಹೇಳಿದ್ದೆ.
“ಹಕ್ಕಿ ಮರಿಗಳಿಗೆ ಪುಕ್ಕ ರೆಕ್ಕೆ ಬರೋತನಕ ಮಾತ್ರ ಗೂಡು… ನಂತರ ಅವುಗಳಿಗೆ ಆಕಾಶವೇ ಗೂಡು…. ನಮಗೆ ಮಕ್ಕಳ ಮೇಲೆ ಅದೆಷ್ಟೇ ಮೋಹ ಇರಲಿ ಅವರ ಪ್ರಗತಿಗೆ ಅಡ್ಡ ಬರಲಿಕ್ಕೆ ನಾವು ಯಾರು?” ಎಂದು ರಾಮರಾಯರಿಗೆ ಸಮಾಧಾನ ಹೇಳಿದ್ದೆ. ಆದರೆ ಈ ಘಟನೆ ನಡೆದ ಕೆಲವೇ ದಿನಕ್ಕೆ ನನ್ನ ಮಗ ತಾನು ಅಮೇರಿಕಕ್ಕೆ ಹೋಗುವುದಾಗಿ ಎದ್ದ.

“ಕೆಟ್ಟು ಹೋಗಿರುವ ದೇಶ ಇದು. ಇಲ್ಲಿ ಜಾತಿ ಕೋಮು ಇನ್ನೊಂದು ಅಂತ ಎಲ್ಲ ಹೊಲಸು. ನಾನು ಇಲ್ಲಿ ಇರೋದಿಲ್ಲ. ನಾನು ಅಮೇರಿಕಾಕ್ಕೆ ಹೊರಟೆ” ಮಗ ಹಟ ಹಿಡಿದ. ಹೆಂಡತಿ ಮಗನ ಜೊತೆಯಲ್ಲಿ ಹೋಗುತ್ತೇನೆ ಎಂದ. ಹೌದು ಹಕ್ಕಿ ಮರಿಗೆ ರೆಕ್ಕೆ ಪುಕ್ಕ ಬಂದಿತ್ತು. ಮಗ ಸೊಸೆ ಮೊಮ್ಮಗನನ್ನ ವಿಮಾನ ಹತ್ತಿಸಿ ಮನೆಗೆ ಬಂದಾಗ ರಾಮರಾಯರು ಅವರ ಮನೆ ಅಂಗಳದಲ್ಲಿ ನಿಂತಿದ್ದರು.
“ಹೋಯ್ತೆ ಫ್ಲೈಟು” ಎಂದು ಕೇಳಿದರು. ತಾನು ಉತ್ತರಿಸಲಿಲ್ಲ. ನೇರ ಅವರ ಮನೆಗೇನೆ ಹೋಗಿ ಕುಳಿತೆ. ಮೌನದಿಂದ ಕಣ್ಣೊರೆಸಿಕೊಂಡೆ. ಅಂದಿನಿಂದ ತಮ್ಮೆರಡೂ ಕುಟುಂಬಗಳು ಹತ್ತಿರಹತ್ತಿರ ಆದವು. ತಾನು ರಾಮರಾಯರು ಒಟ್ಟಿಗೆ ಕುಳಿತು ಮಾತನಾಡುವುದು, ಸಂಜೆ ವಾಕಿಂಗ್ ಹೋಗುವುದು, ದೇವಸ್ಥಾನ ಮಾರ್ಕೆಟ್ ವಾಕಿಂಗ್ ಹೋಗುವುದು, ಬಿಡುವಾದಾಗ ಅವರ ಮನೆ ಅಂಗಳ ಇಲ್ಲ ಅವರು ನಮ್ಮ ಮನೆ ಅಂಗಳದಲ್ಲಿ ಕುಳಿತು ಮಾತು ಹರಟೆ. ನನ್ನ ಹೆಂಡತಿ ಮತ್ತು ರಾಮರಾಯರ ಹೆಂಡತಿ ಸಾವಿತ್ರಮ್ಮ ಕೂಡ ಸ್ನೇಹಿತೆಯರಾದರು. ಅವರಿಗೂ ಮಾತನಾಡಲು ಇಲ್ಲ ವಿನಿಮಯ ಮಾಡಿಕೊಳ್ಳುವ ವಿಷಯಗಳು ಇರುತ್ತಿದ್ದವಲ್ಲ. ಅಂತು ತನ್ನ ಮತ್ತು ರಾಮರಾಯರ ಕುಟುಂಬ ಎಂದಿನಂತೆ ಸಾಗಿತು.
ಆದರೆ ಈ ನಡುವೆ ನಡೆದದ್ದು ರಾಮರಾಯರ ಅಗಲುವಿಕೆ. ಅದೇನೋ ಎದೆ ನೋವೆಂದು ಮಲಗಿದ ಅವರು ಮತ್ತೆ ಏಳಲಿಲ್ಲ. ಸಾವಿತ್ರಮ್ಮ ಗಂಜಿ ಔಷಧಿ ಎಂದು ಆಸ್ಪತ್ರೆಗೆ ಓಡಾಡುವಾಗಲೇ ಅವರು ತೀರಿಕೊಂಡರು. ಅವರ ನೆಂಟರಿಷ್ಟರೆಲ್ಲ ಬಂದು ಮುಂದಿನ ಕೆಲಸ ನಡೆಸಿಕೊಟ್ಟರು. ಅಮೇರಿಕದಿಂದ ಮಗ ಬರಲಿಲ್ಲ. ತನಗೆ ರಜೆಯಿಲ್ಲ ಮುಂದಿನ ಡಿಸೆಂಬರಿಗೆ ಬರುವೆ ಎಂದು ತಿಳಿಸಿದ. ಡಿಸೆಂಬರ್ ಬಂದು ಹೋದರೂ ಮಗ ಬರಲಿಲ್ಲ. ಇಲ್ಲಿ ಸಾವಿತ್ರಮ್ಮ ಒಂಟಿಯಾಗಿ ಕಾಲ ಕಳೆಯತೊಡಗಿದರು. ಅವರಿಗೆ ಆಸರೆಯಾಗಿ ನಿಂತವಳು ಗಿರಿಜ. ನಿತ್ಯ ತನ್ನ ಮನೆಗೆ ಬರುತ್ತಿದ್ದರು ಆಕೆ. ಎದುರಾದಾಗ ಒಂದು ಮಾತು.

“ಮಗ ಫೋನು ಮಾಡಿದ್ನೇ?”
“ಹಿಂದೆಲ್ಲ ವಾರಕ್ಕೆ ಒಂದು ಸಾರಿ ಮಾತಾಡುತಿದ್ದ… ಈಗ ತಿಂಗಳಿಗೆ ಒಂದು ಎರಡು ಸಾರಿ”
“ಪಾಪ. ಆಫೀಸು ಮನೆ ಅಂತ ಓಡಾಡುವುದರಲ್ಲೇ ಸಮಯ ಕಳೆದುಹೋಗುತ್ತೇನೋ….” ಅನ್ನುತ್ತಾರೆ ಸಾವಿತ್ರಮ್ಮ.
“ಅಮೇರಿಕಾ ಅಂದರೆ ನಮ್ಮ ಊರಿನ ಹಾಗಲ್ಲ ತಾಯಿ… ಜನ ಯಾವಾಗಲೂ ಅವಸರದಲ್ಲೇ ಇರುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಲಿಲ್ಲ ಅಂದರೆ ಅಲ್ಲಿ ಬದುಕು ಮಾಡುವುದೇ ಕಷ್ಟ….” ತಾನು ಸಮಾಧಾನ ಹೇಳುತ್ತೇನೆ. ಆಕೆ ಹೌದೋ ಅಲ್ಲವೋ ಅನ್ನುವ ಹಾಗೆ ಮುಖದ ಮೇಲೆ ಮುಗುಳು ನಗೆ ಧರಿಸುತ್ತಾರೆ. ಹೆಂಗಸು ಹಾಗೆಯೇ. ತನ್ನಲ್ಲಿಯೇ ಎಲ್ಲ ನೋವನ್ನ ಹುದುಗಿಸಿ ಇರಿಸಿಕೊಂಡು ನಗುವ ಯತ್ನ ಮಾಡುತ್ತಾಳೆ.
“ಅಲ್ಲ ತಾಯಿ, ನೀವೂ ಅಲ್ಲಿಗೆ ಹೋಗಿಬಿಡಿ… ಇಲ್ಲಿ ಒಬ್ಬರೇ ಪರದಾಡುವುದರ ಬದಲು ಅಲ್ಲಿ, ಮಗ ಸೊಸೆ ಮೊಮ್ಮಗನ ಜತೆ ಇರಬಹುದಲ್ಲ….”
“ಅಯ್ಯೊ ಇಲ್ಲಿ ನೆಂಟರು ಅಂತ ಇದಾರೆ…. ನಿಲ್ಲಲಿಕ್ಕೆ ಒಂದು ನೆಲ ಅಂತ ಇದೆ…. ಅಲ್ಲಿ ಹೋಗಿ ಅತಂತ್ರ ಸ್ಥಿತಿ ಬಂದರೆ ಏನು ಅಂತ ಚಿಂತೆ…. ಮಗ ಸೊಸೆ ಎಲ್ಲ ಎರಡು ದಿನ, ನಂತರ ಯಾರಿಗೆ ಯಾರೋ ಬೇಡಿ. ಉಸಿರು ಇರೋ ತನಕ ಇಲ್ಲೇ ಇರೋದು….”
ಸಾವಿತ್ರಮ್ಮ ಅದೇ ಮುಗುಳು ನಗೆಯನ್ನ ಮುಖದ ಮೇಲೆ ಧರಿಸಿ ನಗುತ್ತಾರೆ. ರಾಮರಾಯರು ಹೋದ ಮೇಲೆ ಅವರು ನಮ್ಮ ಮನೆಯಲ್ಲಿಯೇ ಕಾಲ ಕಳೆಯುವುದು ಹೆಚ್ಚಾಯಿತು.

“ಅಯ್ಯೋ ಅವರು ಪದೇ ಪದೇ ಇಲ್ಲಿಗೆ ಬರಲಿಕ್ಕೆ ಮುಜುಗರ ಪಡತಾರೆ” ಎಂದಳು ಇವಳು ಒಂದು ದಿನ,
“ಯಾಕಂತೋ ?”
“ನೀವು ಏನಾದರೂ ತಿಳಕೋತೀರೋ ಅಂತ”
“ಹಾಗೇನಿಲ್ಲ ಬಿಡು.. ಒಂಟಿ ಹೆಂಗಸು ಬರಲಿ”
ಎಂದೆ ನಾನು. ಆನಂತರ ಸಾವಿತ್ರಮ್ಮ ಈ ಮನೆಯವರೇ ಆದರು. ಹೀಗೆ ಆದಾಗಲೇ ಇವಳು ಮಂಡಿ ನೋವು ಕೈಕಾಲು ನೋವು ಅನ್ನುತ್ತಿದ್ದವಳು ಹಾಸಿಗೆ ಹಿಡಿದಳು. ತಾನು ಸಾವಿತ್ರಮ್ಮ ಇವಳ ಸೇವೆಗೆ ನಿಂತೆವು.
“ತಾಯಿ ನಿಮಗೆ ಸುಮ್ಮನೆ ತೊಂದರೆ” ಅಂದರೆ ಸಾವಿತ್ರಮ್ಮ ಎಂದಿನ ನಗೆ ಸೂಸುತ್ತ,
“ತೊಂದರೆ ಏನಿಲ್ಲ ರಾಯರೆ. ನಾನು ಮತ್ತೆ ಯಾರ ಸೇವೆ ಮಾಡಬೇಕು ಹೇಳಿ” ಅನ್ನುತ್ತಿದ್ದರು.
ಸಾವಿತ್ರಮ್ಮನಿಂದ ಸೇವೆ ಮಾಡಿಸಿಕೊಂಡೇ ಒಂದು ದಿನ ಗಿರಿಜ ಹೊರಟು ಬಿಟ್ಟಳು. ಒಂದು ದಿನ ಬೆಳಿಗ್ಗೆ ಎದ್ದು ಗಿರಿಜಾ ಎಂದು ಕೂಗಿದಾಗ ಅವಳು ಇರಲಿಲ್ಲ. ಅವಳ ಮಂಜುಗೆಡ್ಡೆಯಂತಹಾ ಶವವನ್ನ ಮುಟ್ಟಿ ನೋಡಿ ಗಾಬರಿಯಾದ ತಾನು ಎದುರು ಮನೆಗೆ ಹೋಗಿ “ತಾಯೀ…..” ಎಂದಾಗ ಸಾವಿತ್ರಮ್ಮ ಓಡಿ ಬಂದರು. ಅವರು ಗಿರಿಜೆಯ ಶವ ಮುಟ್ಟಿ ನೋಡಿ ಸಣ್ಣಗೆ ಚೀರಿದರು.
“ಹೌದು ಗಿರಿಜಮ್ಮ ನಿಮ್ಮನ್ನ ಬಿಟ್ಟು ಹೋದರು” ಎಂದು ಬಿಕ್ಕಳಿಸಿದರು. ಮಗನಿಗೆ ಸುದ್ದಿ ತಿಳಿಸಿದೆ. ಆತ
“ಅಪ್ಪ ನಾನು ಈಗ ಬರಲಾರೆ, ಪಾಪುಗೆ ಒಂದು ಪರೀಕ್ಷೆ. ಇವಳು ಒಂದು ಇಂಟರ್ವ್ಯೂ ಅಟೆಂಡ್ ಮಾಡಬೇಕಾಗಿದೆ… ನಾನು ಇನ್ನು ಆರು ತಿಂಗಳು ಬಿಟ್ಟು ಬರುತೀನಿ….. ಹ್ಯಾಗೂ ಸುಧಾರಿಸಿಕೋ. ಅಕೌಂಟಿಗೆ ಹಣ ಕಳುಹಿಸಿದ್ದೇನೆ” ಎಂದ.
ಈ ಸುದ್ದಿ ಕೇಳಿ ಸಾವಿತ್ರಮ್ಮ ಕಣ್ಣೊರೆಸಿಕೊಂಡರು.

“ಇದೇ ಕಾರಣಕ್ಕೆ ನನ್ನ ಮಗನಿಗೆ ತಂದೆ ಬೇಕಾಗಲಿಲ್ಲ… ನಿಮ್ಮ ಮಗನಿಗೆ ತಾಯಿ… ಇಲ್ಲಿ ನಾವೇ ಸುಧಾರಿಸಿಕೊಂಡು ಹೋಗಬೇಕು…. ಅವನೇ ಹೇಳಿದ್ದಾನಲ್ಲ….” ಎಂದರು.
ಗಿರಿಜೆಯ ಅಂತ್ಯಕ್ರಿಯೆ ಮುಗಿಯಿತು. ಹತ್ತಿರದ ಜನ ನೆಂಟರು ಇಷ್ಟರು ಕೇರಿಯ ಜನ ಬಂದರು. ಮುಖ್ಯವಾಗಿ ಸಾವಿತ್ರಮ್ಮ ಮುಂದೆ ನಿಂತು ಎಲ್ಲ ಮುಗಿಸಿದರು. ಬದುಕು ತುಂಬಾ ಕಷ್ಟಕರ ಅನಿಸಿತು. ಇಡೀ ಮನೆಗೆ ತಾನೊಬ್ಬನೇ ಆದೆ. ಮಗ ಸೊಸೆ ಮೊಮ್ಮಗ ಅಮೇರಿಕಾಕ್ಕೆ ಹೋದಾಗಲೂ ಹೀಗೆ ಅನಿಸಿತ್ತು. ಆದರೆ ಆಗ ಗಿರಿಜೆ ಇದ್ದಳು. ಮಾತನಾಡುತ್ತಿದ್ದಳು. ಮನೆಯಲ್ಲಿ ಅವಳ ಓಡಾಟ ಇತ್ತು. ಅವಳ ಬಳೆಗಳ ಸದ್ದು, ಸೀರೆಯ ಸರಬರ, ಅಡಿಗೆ ಮನೆಯಲ್ಲಿ ಅವಳ ಚಟುವಟಿಕೆ. ಈಗ ಎಲ್ಲ ಬರಿದು. ಭೀಕರ ಮೌನ. ಆದರೂ ಇದರ ನಡುವೆ ಕಾಲಕಳೆಯತೊಡಗಿದೆ. ಎಲ್ಲ ಬರಿದಾಗಿಹೋದ ಅನುಭವ. ತನ್ನವರು ಅಂತ ಇದ್ದರೂ ಅವರು ದೂರ. ಅವರು ಬರುತ್ತಾರೋ ಇಲ್ಲವೋ ಅನ್ನುವ ಅನುಮಾನ.
ಒಂದು ಸಾರು ಅನ್ನ ಮಾಡಿಕೊಂಡೆ. ಆಗಾಗ್ಗೆ ಸಾವಿತ್ರಮ್ಮ ಬರುತ್ತಿದ್ದರು. ಅವರು ಸಾರು, ಉಪ್ಪಿನಕಾಯಿ, ಒಂದೊಂದು ದಿನ ಚಿತ್ರಾನ್ನ, ಪಾಯಸ ತರುತ್ತಿದ್ದರು. ಹೊರಗಿನ ಹಾಲಿನ ಬಾಗಿಲಿಗೆ ಅವರು ಒರಗಿ ನಿಂತಾಗ ತಾನು ತನ್ನೆದೆಯನ್ನ ಬಚ್ಚಿ ಅವರ ಮುಂದೆ ಇಡುತ್ತಿದ್ದೆ.

“ತಾಯೀ, ಒಂಟಿ ಬದುಕು ತುಂಬಾ ಅಸಹನೀಯವಾದದ್ದು ಅಲ್ಲವೆ?”
“ಹೌದು ಪ್ರೀತಿಸುವ ಒಂದು ಜೀವ ಹತ್ತಿರ ಇಲ್ಲ ಅಂದರೆ ಬದುಕು ನರಕ…. ಹಗಲು ಇರುಳು ಇದು ನಮ್ಮನ್ನ ಕಾಡುತ್ತೆ”
ಅವರು ಬಹಳ ಹೊತ್ತು ಅಲ್ಲಿ ನಿಂತಿದ್ದರು. ನಂತರ ಏನೂ ಮಾತನಾಡದೆ ತಮ್ಮ ಮನೆಗೆ ಹೋದರು. ಅವರ ಮನೆಯ ಗೇಟು ತೆರೆದುಕೊಂಡು ನಂತರ ಮುಚ್ಚಿಕೊಂಡಿತು. ಆ ಗೇಟಿನ ಸದ್ದಿನಲ್ಲೂ ಒಂದು ಏನೋ ವೇದನೆ ಇತ್ತು.

ಮತ್ತೆ ಸಾವಿತ್ರಮ್ಮ ಬಂದದ್ದು ಮೂರು ದಿನಗಳ ನಂತರ. ಎಂದಿನಂತೆ ಅವರ ಕೈಲಿ ಒಂದು ಪಾತ್ರೆ.
“ಮನಸ್ಸಿಗೆ ಎಷ್ಟೇ ಬೇಸರವಾದರೂ ನಾಲಿಗೆ ಕೇಳೋದಿಲ್ಲ…. ಕೇಸರಿ ಬಾತ್ ಮಾಡಿದ್ದೆ…”
“ಅಯ್ಯೋ ಇದನ್ನೆಲ್ಲ ಏಕೆ ತಂದಿರಿ ತಾಯಿ…. ಎಷ್ಟೇ ಸಿಹಿ ತಿಂದರೂ ಮನಸ್ಸಿಗೆ ಆಗಿರುವ ಕಹಿ ಹೋಗೋದಿಲ್ಲ ಅಲ್ವಾ ?”
“ಕಹಿಯನ್ನ ಸಿಹಿ ಮಾಡಿಕೊಳ್ಳೋದೇ ಬದುಕು ಅಲ್ವಾ?”
ಬಾಗಿಲ ಬಳಿ ಹೋಗಿ ನಿಂತ ಆಕೆ ತನ್ನ ಮಾತನ್ನ ಮುಂದುವರೆಸಿದಳು.
“ನಿಮಗೊಂದು ಮಾತು ಹೇಳಬೇಕು ಅಂತಾ….”
“ಹೇಳಿ ತಾಯಿ”
“ಇನ್ನು ಈ ತಾಯಿ ಅನ್ನೋ ಶಬ್ದ ಬಳಸ ಬೇಡಿ…. ನನಗೆ ಹಿಡಿಸೋದಿಲ್ಲ…”
ಅಷ್ಟು ಹೇಳಿ ಸಾವಿತ್ರಮ್ಮ ಅಲ್ಲಿಂದ ಮರೆಯಾದರು. ಅವರ ಮನೆಯ ಕಬ್ಬಿಣದ ಗೇಟನ್ನ ತೆಗೆದು ಹಾಕಿದ ಸದ್ದು ಬೇರೆಯೇ ಆದ ಲಯದಲ್ಲಿ ಕೇಳಿಸಿ ಇವರ ಮೈ ಹುರಿಗಟ್ಟಿತು.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)