ಈ ಮಧ್ಯೆ ಮತ್ತೊಂದು ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳ ಅಭ್ಯಾಸವು ಮುಗಿದು ವಿದ್ಯಾರ್ಥಿಗಳು ಹಗುರವಾಗುತ್ತಾರೆ.
ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

 

ಒಳ್ಳೆ ಸುದ್ದಿಗಳೊಡನೆ ಈ ಬಾರಿಯ ಪತ್ರವನ್ನು ಆರಂಭಿಸುತ್ತಿದ್ದೀನಿ. ಹಾಗೆನ್ನುವುದು ನನ್ನ ಭಾವನೆಯಷ್ಟೇ. ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಕೊರೋನ ೧೯-ಸಂಬಂಧಿತ ಲಾಕ್ ಡೌನ್ ಅವಸ್ಥೆ ಮುಗಿದು ಜನರು ಕನಿಷ್ಟ ನಿರ್ಬಂಧಗಳೊಡನೆ ಮಾಮೂಲು ಜೀವನಕ್ಕೆ ಮರಳಿದ್ದಾರೆ. ಸಿಡ್ನಿ ನಗರನಿವಾಸಿಗಳ ಮುಖದಲ್ಲಿ ಹರ್ಷ, ಮೈಮನಗಳಲ್ಲಿ ಉಲ್ಲಾಸ ಕಾಣುತ್ತಿದೆ. ಭಾರತೀಯ ಹಿಂದೂ ಧರ್ಮದವರಿಗೆ ಅವರ ನವರಾತ್ರಿ ಹಬ್ಬದ ವಾರದಲ್ಲಿ ಬಂಧು-ಬಳಗದವರ ಮನೆಗಳಿಗೆ ಭೇಟಿ ಕೊಟ್ಟು ಉಭಯಕುಶಲೋಪರಿ ವಿಚಾರಿಸಿ ಆತಿಥ್ಯವನ್ನು ಆನಂದಿಸುವ ಸವಿ ಘಳಿಗೆ ಬಂದೇಬಿಟ್ಟಿದೆ. ಇತರರಿಗೆ ವಾರಾಂತ್ಯದ ಆಟಗಳಲ್ಲಿ ತೊಡಗುವುದು, ಬೀಚ್ ಭೇಟಿ, ವಸಂತಋತುವಿನ ಆಹ್ಲಾದವನ್ನು ಚಪ್ಪರಿಸುತ್ತ ವಿವಿಧ ಹಣ್ಣು ಹೂಗಳನ್ನು ಸವಿಯುವ ಮುಕ್ತ ಅವಕಾಶ. ಅವರ ನೆರೆ ರಾಜ್ಯ ವಿಕ್ಟೋರಿಯಾದ ರಾಜಧಾನಿ ಮೆಲ್ಬೋರ್ನ್ ನಗರವು ಲಾಕ್ ಡೌನಿನಿಂದ ಹೊರಬೀಳಲು ಶತಾಯಗತಾಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಮುಖ್ಯವಾಗಿ ಕೋವಿಡ್-೧೯ ಲಸಿಕೆ ಹಾಕುವ ಕಾರ್ಯಕ್ರಮ ಸಮರೋಪಾದಿಯಲ್ಲಿ ಸಾಗಿದೆ. ಸದ್ದಿಲ್ಲದಂತೆ ಸರಕಾರಗಳು ಕಡ್ಡಾಯ ಕೋವಿಡ್-೧೯ ಲಸಿಕೆ ಎಂಬ ಅಘೋಷಿತ ಮಂತ್ರವನ್ನು ಜಪಿಸುತ್ತಿವೆ. ಅನೇಕ ಉದ್ಯೋಗ ಸ್ಥಳಗಳಲ್ಲಿ ‘ನೋ ಜಾಬ್ ನೋ ಜಾಬ್’ (No jab, no job) ಎನ್ನುವ ತಂತ್ರ ಜಾರಿಗೆ ಬಂದಿದೆ. ಆದರೆ ಈ ದೇಶದಲ್ಲಿ ಅನೇಕರಿಗೆ ವ್ಯಾಕ್ಸಿನೇಷನ್ ಎನ್ನುವ ವಿಷಯ ಅಪ್ರಿಯವಾದದ್ದು. ಯಾವುದೇ ರೋಗದ ಲಸಿಕೆ ಅವರಿಗೆ ಸೇರುವುದಿಲ್ಲ. ಅಂಥದ್ದರಲ್ಲಿ ಕೋವಿಡ್-೧೯ ಲಸಿಕೆ ಇನ್ನೂ ಬಲವಾದ ಪ್ರತಿರೋಧವನ್ನು ಹುಟ್ಟಿಸಿದೆ. ಇಡೀ ಕೋವಿಡ್-೧೯ ಅನ್ನುವುದು ಒಂದು ರಾಜಕೀಯ ಹುನ್ನಾರ, ಅದರಲ್ಲಿ ಸಾಮಾನ್ಯ ಜನರು ಸಿಲುಕಿಕೊಂಡು ಅವರನ್ನು ಬಲಿಪಶುಗಳನ್ನಾಗಿಸಲಾಗಿದೆ ಎಂಬುದು ಆ ವಿರೋಧಿಗಳ ವಾದ. ಕೋವಿಡ್-೧೯ ಲಸಿಕೆಯನ್ನು ಕಡ್ಡಾಯ ಮಾಡುವುದು ತಮ್ಮ ಮಾನವಹಕ್ಕುಗಳಿಗೆ ಚ್ಯುತಿ ತರುತ್ತದೆ ಎಂದು ಆಗೀಗ ಅವರುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಒಮ್ಮೊಮ್ಮೆ, ಅಲ್ಲಲ್ಲಿ ಹಾಗೆ ಕಡ್ಡಾಯ ಮಾಡಿದರೆ ಅದು ಮಾನವರಾಗಿ ಹುಟ್ಟಿರುವ ನಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ, ಇದು ಬಹಳ ಗಂಭೀರವಾದ ವಿಷಯ, ಸರಕಾರಗಳು ಇದಕ್ಕೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ಮಾತುಗಳು ಹರಿದಾಡುತ್ತಿವೆ.

ಈ ಮಧ್ಯೆ ಮತ್ತೊಂದು ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತರರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳ ಅಭ್ಯಾಸವು ಮುಗಿದು ವಿದ್ಯಾರ್ಥಿಗಳು ಹಗುರವಾಗುತ್ತಾರೆ. ದೂರದ ಅಮೇರಿಕ, ಬ್ರಿಟನ್ ಮತ್ತು ಯುರೋಪ್ ದೇಶಗಳಲ್ಲಿರುವ ತಮ್ಮ ನೆಂಟರಿಷ್ಟರನ್ನು ಭೇಟಿಯಾಗಲು ಇವರುಗಳು ಹೋಗುವುದು, ಇಲ್ಲಾ ಅಲ್ಲಿಂದ ಅವರುಗಳು ಇಲ್ಲಿಗೆ ಬರುವುದು ನಡೆಯುತ್ತದೆ. ಕ್ರಿಸ್ಮಸ್ ಹಬ್ಬ ಆಚರಿಸದಿದ್ದರೂ ಇತರೆ ಧರ್ಮದವರು, ಮುಖ್ಯವಾಗಿ ವಲಸಿಗರು, ವರ್ಷದ ಕೊನೆಯ ಬೇಸಿಗೆ ರಜೆಯನ್ನು ಕಳೆಯಲು ಇಲ್ಲವೇ ತಮ್ಮ ಕುಟುಂಬಗಳನ್ನು ಸಂಧಿಸಲು ತಮ್ಮ ತವರಿಗೆ ಹೋಗುವುದು ಇರುತ್ತದೆ. ಹೀಗೆಲ್ಲ ಕಾರಣಗಳಿಗಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ವಿಮಾನ ಪ್ರಯಾಣ ಅಧಿಕವಾಗುತ್ತದೆ.

ಭಾರತೀಯ ಹಿಂದೂ ಧರ್ಮದವರಿಗೆ ಅವರ ನವರಾತ್ರಿ ಹಬ್ಬದ ವಾರದಲ್ಲಿ ಬಂಧು-ಬಳಗದವರ ಮನೆಗಳಿಗೆ ಭೇಟಿ ಕೊಟ್ಟು ಉಭಯಕುಶಲೋಪರಿ ವಿಚಾರಿಸಿ ಆತಿಥ್ಯವನ್ನು ಆನಂದಿಸುವ ಸವಿ ಘಳಿಗೆ ಬಂದೇಬಿಟ್ಟಿದೆ.

ಹೋದವರ್ಷ ಕೋವಿಡ್-೧೯ ರಾರಾಜಿಸುತ್ತಿದ್ದ ಸಮಯದಲ್ಲಿ ಅಂತರರಾಷ್ಟ್ರೀಯ ಗಡಿಗಳನ್ನು ತೆರೆದು ಒಳ-ಹೊರ ಪ್ರಯಾಣಗಳಿಗೆ ಅನುವು ಮಾಡಿಕೊಡಲು ಸರಕಾರಗಳ ಮೇಲೆ ಅಧಿಕ ಒತ್ತಡವಿತ್ತು. ಗಡಿಗಳನ್ನು ತೆರೆದಿದ್ದರು. ಈ ವರ್ಷ ಕೊರೋನದ ಎರಡನೇ ಅಲೆ ಎದ್ದಾಗ ದೇಶವಿಡೀ ಆತಂಕಗೊಂಡಿತ್ತು. ಲಸಿಕೆ ಹಾಕುವ, ಪಡೆಯುವ ಮಾತು ಇನ್ನೂ ಆರಂಭದ ದೆಸೆಯಲ್ಲಿತ್ತು. ಮುಂದಿನ ವರ್ಷದವರೆಗೆ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆಯುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೇಳಿದ್ದವು. ಇತ್ತೀಚಿನ ವಾರಗಳಲ್ಲಿ ದೇಶದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನರು ಕೊರೋನ ಲಸಿಕೆಯನ್ನು ಪೂರ್ತಿ ಪಡೆದಿದ್ದಾರೆಂದು ವರದಿಯಾಗಿದೆ. ಇದರಿಂದ ಧೈರ್ಯ ಪಡೆದ ಸರಕಾರಗಳು ಗಡಿತೆರವಿಗಾಗಿ ಸಜ್ಜಾಗಿವೆ. ಪ್ರಯಾಣಿಸಲು ಜನರು ಸಿದ್ಧತೆ ನಡೆಸುವ ಮಾತು ಕೇಳಿಬರುತ್ತಿದೆ. ಜೊತೆಗೆ ಹರುಷದ ಮುಖಗಳೂ ಕಾಣುತ್ತಿವೆ.

ನಮ್ಮ ರಾಣಿರಾಜ್ಯದ ಬ್ರಿಸ್ಬೇನ್ ನಗರನಿವಾಸಿಗಳಿಗೆ ಈ ವಾರ ಬಲು ಖುಷಿಯಾಗಿದೆ. ಮರೆತೇಹೋಗಿದ್ದ ಮಳೆ ನಮ್ಮೆಲ್ಲರ ಜೀವನದಲ್ಲಿ ಇಣುಕಿದೆ. ಇದ್ದಕ್ಕಿದ್ದಂತೆ ಮೂರು-ನಾಲ್ಕು ದಿನಗಳ ಕಾಲ ಮಳೆ ಬಿದ್ದು ನೆಲವೆಲ್ಲ ತೋಯ್ದಿದೆ. ಡಿಸೆಂಬರಿನಲ್ಲಿ ಬರಲಿರುವ ಬೇಸಿಗೆಯನ್ನು ನೆನಪಿಸಲೋ ಎಂಬಂತೆ ಕ್ರಮೇಣ ಬಿಸಿಲೇರುತ್ತಾ ಇದ್ದ ಸ್ಥಿತಿಯಲ್ಲಿ ನಾವೆಲ್ಲ ಗೊಣಗುಟ್ಟುತ್ತಿದ್ದಾಗ ಮಳೆ ಅವತರಿಸಿ ವಾತಾವರಣವನ್ನು ತಂಪು ಮಾಡಿದೆ. ಬಿಸಿಲುಶಾಖಕ್ಕೆ ಒಣಗುತ್ತಿದ್ದ, ನೆಲದ ಮೇಲ್ಗಡೆಗೆ ಬರದೇ ಇನ್ನೂ ಭೂಮಿಯೊಳಗೇ ಅವಿತುಕೊಂಡಿದ್ದ ಬೀಜಗಳು ಮೊಳೆತಿವೆ. ಗಡ್ಡೆಗಳು ಚಿಗುರಿವೆ. ತೆಳ್ಳನೆ ಹಸಿರು ಪರದೆ ಮುದತಂದಿದೆ. ಮಳೆಯಿಂದ ತೊಯ್ದ ಪ್ರಕೃತಿಯನ್ನು ನೋಡುವುದು ಕಂಗಳಿಗೆ ಹಬ್ಬವೇ ಸರಿ!

ಆದರೆ ಹೆಚ್ಚುವರಿ ಮಳೆಯಿಂದ ಎಲ್ಲರಿಗೂ ಸಂತೋಷವಾಗಿಲ್ಲವೆಂದು ಗುರುವಾರದ ಸುದ್ದಿಸಮಾಚಾರ ಬಿತ್ತರದಿಂದ ತಿಳಿಯಿತು. ಈ ವಾರ ಪೂರ್ವತೀರದಲ್ಲಿ ಮಾತ್ರವಲ್ಲದೆ ಈ ರೀತಿಯ ಹೆಚ್ಚುವರಿ ಮಳೆ ದೇಶದ ಕೆಳಗಡೆ ಇರುವ ದ್ವೀಪ ರಾಜ್ಯ ಟಾಸ್ಮೆನಿಯದಲ್ಲಿ ಕೂಡ ಗಡಿಬಿಡಿ ಎಬ್ಬಿಸಿದೆ. ಆದರೆ ಸಿಡ್ನಿ ನಗರಕ್ಕೆ ಮಳೆಯ ಪರಿಣಾಮವು ತಲೆನೋವು ತಂದಿದೆ. ಗುರುವಾರ ಗುಡುಗು, ಸಿಡಿಲು, ಆಲಿಕಲ್ಲು ಸಮೇತ ದೊಡ್ಡ ಮಳೆಯಾಗಿದ್ದು ಮನೆಗಳ ಸೂರುಗಳು ಜಖಮ್ಮಾಗಿವೆ. ಮರಗಳು ಉರುಳಿ ಜನ, ವಾಹನಗಳ ಚಲನೆಗೆ ಅಡಚಣೆಯಾಗಿದೆ. ಅಲ್ಲಲ್ಲಿ ಪ್ರವಾಹವುಂಟಾಗಿ ಜನರ ಮತ್ತು ವಾಹನಗಳನ್ನು ರಕ್ಷಿಸುವುದರಲ್ಲಿ ತುರ್ತುಸೇವಾ ಸಿಬ್ಬಂದಿ ನಿರತರಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಟರ್ನೆಟ್ ಸಂಪರ್ಕ ಮತ್ತು ಸಂವಹನ ವ್ಯವಸ್ಥೆಗಳು ಏರುಪೇರಾಗಿವೆ. ಇವೆಲ್ಲ ದೊಡ್ಡ ಮಳೆಯಾಗುವ ಸಂದರ್ಭದಲ್ಲಿ ಕಾಣಿಸುವ ಚಿತ್ರಗಳೇ ಸರಿ. ಆದರೆ ಶಾಲೆ ಮತ್ತು ಕೆಲಸವೆಂಬ ಯಾಂತ್ರಿಕ ಬದುಕಿನ ದಿನನಿತ್ಯದ ಜನಜೀವನದಲ್ಲಿ ಇವೆಲ್ಲ ಭಾವೋದ್ವೇಗವನ್ನುಂಟುಮಾಡುವ ಮಾತಾಗಿವೆ.

ಬದುಕಿನಲ್ಲಿ ಒಂದು ಹಬ್ಬವಿರಬೇಕು, ದೊಡ್ಡ ಮಳೆ ಬರಬೇಕು, ಪರಸ್ಪರ ಮತ್ತು ಮುಖಾಮುಖಿ ಭೇಟಿಗಳಿರಬೇಕು ಎಂಬೆಲ್ಲ ಮಾತಿನ ಮಹತ್ವ ನಮ್ಮಂತಹ ಸಾಮಾನ್ಯ ವಲಸಿಗರಿಗೆ ಇನ್ನಷ್ಟು ಆಪ್ತವಾಗುವುದು ಬಹುಸಂಸ್ಕೃತಿಗಳ ಹಬ್ಬವನ್ನು ನೋಡಿ ಆನಂದಿಸಿದಾಗ. ಕೆಲವರ್ಷಗಳ ಹಿಂದೆ ನಾನು ನಮ್ಮ ನಗರದಲ್ಲಿ ನಡೆಯುವ ಮೊಸೈಕ್ ಮಲ್ಟಿ-ಕಲ್ಚರಲ್ ಹಬ್ಬಕ್ಕೆ ಹೋಗಿದ್ದೆವು. ನಗರಮಧ್ಯೆ ಇರುವ ಸುಂದರ ಉದ್ಯಾನವನದಲ್ಲಿ ಆಫ್ರಿಕನ್ ಖಂಡದ ಡೋಲುವಾದ್ಯ, ಮಧ್ಯಪ್ರಾಚ್ಯ ರಾಷ್ಟ್ರಗಳ ನೃತ್ಯ, ಭಾರತೀಯ ಸಂಗೀತ-ನೃತ್ಯ, ದಕ್ಷಿಣ ಅಮೆರಿಕೆಯ ಸಂಸ್ಕೃತಿಗಳ ಪ್ರದರ್ಶನ, ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ ಆಹಾರ, ಉಡುಪು, ನೇಯ್ಗೆ, ಕಲೆಗಳು, ಭಾಷೆಗಳ ಸಂಗಮ. ನಡುನಡುವೆ ಕವನ ವಾಚನ ಕೂಡ ಸೊಗಸಾಗಿತ್ತು. ಇಂತಹ ಬಹುಸಂಸ್ಕೃತಿಗಳ ಜನರ ನಡುವೆ ಇದ್ದಾಗ, ಅವರ ಭಾಷೆಗಳು ಕಿವಿಗೆ ಬೀಳುತ್ತಿರುವಾಗ ಇದ್ದಕ್ಕಿದ್ದಂತೆ ನಮ್ಮ ಅಸ್ಮಿತೆಗೆ ಬೇರೆಯದೇ ಅರ್ಥ ಸಿಕ್ಕಿಬಿಡುತ್ತದೆ. ಆಂಗ್ಲೋ-ಆಸ್ಟ್ರೇಲಿಯನ್ನರ ನಡುವೆ ಆಗೀಗ ನಮ್ಮ ದೇಶದ ಭಾಷಾಧಾರಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಅಲ್ಪ ತೃಪ್ತಿ ಪಟ್ಟುಕೊಳ್ಳುವವರಿಗೆ ದೊಡ್ಡ ಪ್ರಮಾಣದ ಬಹುದೇಶ-ಭಾಷೆ-ಸಂಸ್ಕೃತಿಗಳ ಹಬ್ಬಗಳು ಅದೇನೋ ಅಪ್ಯಾಯತೆ ತಂದುಕೊಡುತ್ತದೆ. ಈ ರೀತಿಯ ಬಹುತ್ವಕ್ಕೆ ಕೊಡುವ ಮಹತ್ವ ಹೆಚ್ಚಾಗಲಿ.